ಪುಟ:Rangammana Vathara.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

11

ಬದುಕಿನ ಅಪೂರ್ಣ ಆಸೆಗಳು ಎರಡೂ ಕಣ್ಣುಗಳಿಂದ ಇಳಿದು ಕೆನ್ನೆಗಳ ಮೇಲೆ ಆಳ
ವಾದ ಕಣಿವೆ ತೋಡಿದ್ದುವು.
ಆದರೂ ಆ ದೇಹಕ್ಕೆ ಅರಸಿನ ಲೇಪಿಸಿದರು. ಆಕೆಯ ಗಂಡನ ಅಪೇಕ್ಷೆಯಂತೆ
ಮದುವೆಯ ಕಾಲದಲ್ಲಿ ಆಕೆಯುಟ್ಟಿದ್ದ ಧರ್ಮಾವರದ ಸೀರೆಯನ್ನೇ ಉಡಿಸಿದರು; ಉಡಿ
ತುಂಬಿಸಿದರು; ಹಣೆಗೆ ಕುಂಕುಮವಿಟ್ಟರು.
ಆ ದೇಹ ನಾಲ್ವರ ಭುಜಗಳನ್ನು ಆವರಿಸಿದಾಗ ಮತ್ತೊಮ್ಮೆ ರೋದನದ ಅಲೆ
ಗಳು ವಠಾರದ ಇಕ್ಕಟ್ಟಾದ ಗೋಡೆಗಳಿಗೆ ಅಪ್ಪಳಿಸಿದುವು.
ಬಾಗಿಲ ಬಳಿ ನಡೆಗೋಲನ್ನೂರಿ ನಿಂತ ರಂಗಮ್ಮನ ಬಾಯಿಯಿಂದ ಅಸ್ಪಷ್ಟವಾಗಿ
ಮಾತುಗಳು ಹೊರಬಿದ್ದುವು:
"ಹೋಗ್ತೀಯಾ ನಾರಾಯಣೀ...ಹೋಗ್ತೀಯಾ..."
ನಾರಾಯಣಿ ರಂಗಮ್ಮನ ವಠಾರವನ್ನು ಬಿಟ್ಟು ಹೋದಳು. ಸೂರ್ಯ ಮರೆ
ಯಾಗಿ ಕತ್ತಲು ಕವಿಯಿತು. ಬೀದಿಯ ವಿದ್ಯುದ್ದೀಪಗಳು ಹತ್ತಿಕೊಂಡುವು.
ರಂಗಮ್ಮ ವಠಾರದ ಹಿತ್ತಿಲ ಗೋಡೆಗೊರಗಿ, ಆಳಕ್ಕೆ ಇಂಗಿದ್ದ ಕಣ್ಣುಗಳಿಂದ
ಆಕಾಶದತ್ತ ಶೂನ್ಯನೋಟ ಬೀರುತ್ತ ನಿಂತೇ ಇದ್ದರು.
ಬೇರೆ ದಿನವಾಗಿದ್ದರೆ ವಠಾರದ ಯಾರಾದರೂ ರಂಗಮ್ಮನ ಬಳಿಗೆ ಹೋಗಿ,
"ದೀಪ ಹಾಕ್ತೀರಾ?"ಎಂದು ಕೇಳುತ್ತಿದ್ದರು.
ಈ ದಿನ ಹಾಗೆ ಕೇಳಲು ಯಾರೂ ಬರಲಿಲ್ಲ.
"ಕತ್ತಲಾಯ್ತು" ಎಂದು ರಂಗಮ್ಮನೇ ತಮ್ಮಷ್ಟಕ್ಕೆ ಅಂದುಕೊಂಡರು. ಮೆಲ್ಲನೆ
ತಮ್ಮ ಮನೆಯತ್ತ ಸಾಗಿ 'ದೀಪ ಹಾಕಿ'ದರು. ಅಲ್ಲಿದ್ದುದು ಮಂದವಾದ ವಿದ್ಯು
ದ್ದೀಪ-ಮನೆಗೊಂದರಂತೆ. ಆಗಲೆ ಗುಂಡಿಯೊತ್ತಿಯೇ ಇದ್ದ ಮನೆ ಮನೆಗಳಲ್ಲೆಲ್ಲ ಒಮ್ಮೆಲೆ
ಬೆಳಕು ಮೂಡಿತು.
ಆದರೆ ವಠಾರದ ಹದಿನಾಲ್ಕನೆಯ ಮನೆಯಲ್ಲಿ ಯಾರೂ ಗುಂಡಿಯೊತ್ತಲಿಲ್ಲ,
ಅಲ್ಲಿ, ನಾರಾಯಣಿ ಮಲಗಿದ್ದ ಕಡೆ ತಲೆಯ ದಿಕ್ಕಿನಲ್ಲಿ, ಹಣತೆಯೊಂದು ತೂರಾಡಿತು.
ಮನೆ ಬೆಳಗುವ ಗೃಹಿಣಿ ಅಲ್ಲಿರಲಿಲ್ಲ.