ಪುಟ:Rangammana Vathara.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

30

ಸೇತುವೆ

'ಹೂಂ' ಎನ್ನಲು ಯತ್ನಿಸಿದ ಪುಟ್ಟು. ಆದರೆ ಆ ಸ್ವರ ರಂಗಮ್ಮನಿಗೆ
ಕೇಳಿಸಲಿಲ್ಲ.
ಹಾದಿಹೋಕರೂ ಒಂದು ಕ್ಷಣ ನಿಂತು ಬಿಡಾರ ಬದಲಾಯಿಸುತ್ತಿದ್ದ ಸಂಸಾರ
ವನ್ನು ನೋಡಿದರು. ಅಕ್ಕಪಕ್ಕದಿಂದಲೂ ಎದುರುಗಡೆಯಿಂದಲೂ ನಾಲ್ಕಾರು
ಹೆಂಗಸರು ಹೊರ ಬಂದು ನಿಂತರು. ಅಲ್ಲೇ ಬೀದಿಯ ಮೂಲೆಯಲ್ಲಿ ಅಂತಸ್ತಿನ
ಮನೆಯಿತ್ತು. ಅಂತಸ್ತಿನ ಮನೆಯವರ ದೊಡ್ಡ ಮಗಳು ಪಾಠ ಪ್ರವಚನಗಳಿಲ್ಲದ ಆ
ದಿನ ಕಾಲೇಜಿಗೆ ಹೋಗಿರಲಿಲ್ಲ. 'ಕಥೆಪುಸ್ತಕ' ಹಿಡಿದು 'ಬಾಲ್ಕನಿ'ಯಲ್ಲಿ ಕುಳಿತಿದ್ದ
ಆಕೆ ಎದ್ದು ನಿಂತು, ಮೊದಲು ಜಯರಾಮುವನ್ನೂ ಬಳಿಕ ಕೆಳಗಿನ ದೃಶ್ಯವನ್ನೂ
ನೋಡಿದಳು.
"ಬರ್ತೀವಿ ರಂಗಮ್ನೋರೆ," ಎಂದ ನಾರಾಯಣಿಯ ಗಂಡ.
"ಆಗಲಿ, ಹೋಗ್ಬನ್ನೀಪ್ಪಾ."
"ಆಮೇಲೆ ಬಂದು ನೋಡ್ತೀನಿ...."
"ಆಗಲಿ. ಆಗಲಿ."
ಎರಡು ಸಾರೆ ಬಾರುಕೋಲಿನ ರುಚಿ ತಾಗಿ ಕುಪ್ಪಳಿಸಿದ ಮೇಲೆ ಗಾಡಿಯನ್ನು
ಕುದುರೆ ಮುಂದಕ್ಕೆಳೆಯಿತು. ಗುಂಪು ಕೂಡಿದ ಬೀದಿ ಹುಡುಗರು ಕುದುರೆ ಕುಪ್ಪಳಿಸಿ
ದಾಗ 'ಹೊಹ್ಹೋ' ಎಂದು ನಕ್ಕರು.
ಜಟಕಾ ಸಾಗಿತು. ವಠಾರದವರೆಲ್ಲ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.
'ಹೋಗ್ರೋ' ಎಂದು ಗುಂಡಣ್ಣ ಕೈ ಬೀಸಿದೊಡನೆ ಬೀದಿಯ ಹುಡುಗರು ಚೆದರಿ
ಹೋದರು.
ಕಮಲಮ್ಮನೊಬ್ಬಳೇ,ಬಹಳ ಹೊತ್ತು, ಗಾಡಿ ಹೋದ ದಿಕ್ಕನ್ನು ನೋಡುತ್ತ
ನಿಂತಳು.
ರಂಗಮ್ಮ ಒಳಗಿನಿಂದ ರಟ್ಟಿನ ತುಂಡೊಂದನ್ನು ತಂದು, ಬೀದಿಗೆ ಕಾಣಿಸುವ
ಹಾಗೆ, ಹೊರಗೋಡೆಯ ಮೇಲಿದ್ದ ಮೊಳೆಗೆ ತಗಲ ಹಾಕಿದರು. ಆ ರಟ್ಟಿನ ಮೇಲೆ
ಸುಣ್ಣದ ಕಡ್ಡಿಯಲ್ಲಿ ಬರೆದಿತ್ತು:
ಮನೆ ಬಾಡಿಗೆಗೆ ಇದೆ
ಕೆಳ ಭಾಗದ ಮೊದಲ ಮನೆಯ ಪೋಲೀಸನ ಹುಡುಗ ಅಕ್ಷರಕ್ಕೆ ಅಕ್ಷರ
ಜೋಡಿಸಿ ಅದನ್ನೋದಿದ. ಕೈತಟ್ಟಿ ಕುಣಿಯುತ್ತ ಅದನ್ನೇ ಆತ ಕಂಠಪಾಠ ಮಾಡಿದ:
" ಮನೆ ಬಾಡಿಗೆಗೆ ಇದೆ....
...ಮನೆ ಬಾಡಿಗೆಗೆ ಇದೆ."