ಪುಟ:Chirasmarane-Niranjana.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೧೧

1945 ರಲ್ಲಿ ಬೆಂಗಳೂರಿಗೆ ಬಂದು 'ಪ್ರಜಾಮತ' ದ ಸಹಾಯಕ ಸಂಪಾದಕನಾದೆ. 1946ರಲ್ಲಿ ಹುಬ್ಬಳ್ಳಿ ಸೇರಿದೆ. ಕನ್ನಡ ಮುಖಪತ್ರ ಆರಂಭಿಸಲು ಪಕ್ಷ ಯೋಚಿಸಿತ್ತು. ಹಣವಿರಲಿಲ್ಲವೆಂದು ಯೋಜನೆ ಮುಂದೆ ಬಿತ್ತು. ಇದ್ದುದರಲ್ಲೇ ಜನತಾ ಸಾಹಿತ್ಯ ಎಂಬ ಪ್ರಕಾಶನ ಸಂಸ್ಥೆ ರೂಪಿಸಿ ಸಾಮಯಿಕವೆನಿಸುವ ಇಪ್ಪತ್ತೇಳು ಪುಸ್ತಿಕೆಗಳನ್ನು ಹೊರತಂದವು. 1947ರ ಮೇ ದಿನದಿಂದ 'ಜನಶಕ್ತಿ' ಸಾಪ್ತಾಹಿಕದ ಪ್ರಸಾರ ಸಂಭ್ರಮ. (ಅದರಲ್ಲಿದ್ದ ಒಂದು ಅಂಕಣ 'ಸಂಗಾತಿ ಸಂಚಯ.' ಅದರಲ್ಲಿನ ಮೂರು ಅಂಕಣಗಳ ಬರವಣಿಗೆ ಆಕ್ಷೇಪಾರ್ಹವೆಂದು ಮೊರಾರ್ಜಿ ಗೃಹಮಂತ್ರಿಯಾಗಿದ್ದ ಮುಂಬಯಿ ಸರಕಾರ ನನ್ನನ್ನು ಮುಂಬಯಿಗೆ ಕರೆಯಿತು. 'ಪರಿಣಾಮ ಅನುಭವಿಸಲು ಸಿದ್ಧನಾಗು' ಎಂದಿತು) ದಮನಕಾಂಡ ಆರಂಭವಾದಾಗ ಭೂಗತನಾಗಿ ಪತ್ರಿಕೆ ನಡೆಸಿದೆ. ಸರಕಾರ ಪತ್ರಿಕೆಯನ್ನು ನಿಷೇಧಿಸಿತು. ಭೂಗತ ಬದುಕನ್ನು ಮುಂದುವರಿಸಿ, ಪಕ್ಷ ನಿರ್ಧರಿಸಿದ್ದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತನಾದೆ. ಐದು ವರ್ಷ ಸಾಮಾನ್ಯ ಸದಸ್ಯತ್ವ, ಮೂರು ವರ್ಷಗಳ ಭೂಗತ ಜೀವನವೂ ಸೇರಿ ಐದು ವರ್ಷ ಸಕ್ರಿಯ ಸದಸ್ಯತ್ವ- ಹೀಗೆ ಹತ್ತು ವರ್ಷ ಉರುಳಿದ್ದುವು.
ಕಮ್ಯೂನಿಸ್ಟ್ ಪಕ್ಷ ತನ್ನ ಧೋರಣೆಯನ್ನು ಮತ್ತೊಮ್ಮೆ ಬದಲಿಸಿ, ಸರಕಾರದೊಡನೆ ಹೊಸ ಆಟ ಆಡಲು ಒಪ್ಪಿತು. ಅದಕ್ಕೆ ಹಿನ್ನೆಲೆಯಾಗಿ ನಡೆದಿತ್ತು ಒಂದು ಸೈದ್ಧಾಂತಿಕ ತಾಕಲಾಟ. ಇದರಲ್ಲಿ ಉರಿದು ಹೋಗುತ್ತಿದ್ದೇನೆ ಎನಿಸಿದಾಗ, ನಾನು ಪಕ್ಷದಿಂದ ಬೇರೆಯಾದೆ. ಮಾಜಿ ಸಂಗಾತಿಗಳು ಸಾರ್ವತ್ರಿಕ ಚುನಾವಣೆಗೆ ಅಣಿಯಾಗುತ್ತಿದ್ದಂತೆ, ನಾನು ಒಂಟಿ ಜೀವನದ ಹೊಸ ಅಧ್ಯಾಯ ಬರೆಯತೊಡಗಿದೆ. (ಹಳೆಯ ದಾಖಲೆಗಳೊಡನೆ ಪೊಲೀಸರು ಬಂದರು. ಬಂಧಿಸಿ 'ಹಾತ್ ಬೇಡಿ' ತೊಡಿಸಿದರು. ಇಲ್ಲಿ ಅಲ್ಲಿ ಲಾಕಪ್ಪುಗಳಲ್ಲಿರಿಸಿ, ನ್ಯಾಯಸ್ಥಾನದ ಕಟ್ಟೆ ಹತ್ತಿಸಿದರು. ವಿಚಾರಣೆಯನ್ನು ಸುದೀರ್ಘಗೊಳಿಸಿ ಸಾಕಷ್ಟು ಹಿಂಸೆ ನೀಡಿದ ಬಳಿಕ, ಒಂದಿಷ್ಟು ದಂಡ ವಸೂಲಿ ಮಾಡಿ ನನ್ನ ರಟ್ಟೆಯನ್ನು ಬಿಟ್ಟರು.)
ಅಂತೂ ಕೊನೆಗೊಮ್ಮೆ, ಹಲವು ಚಟುವಟಿಕೆಗಳ ಕುಂಳಕುಂದ ಶಿವರಾಯ ಸಾಹಿತಿ ನಿರಂಜನನಾದ.
ಕನ್ನಡ ಸಾಹಿತ್ಯದ ದೊಡ್ಡಕೆರೆಯಲ್ಲಿ ಕಾದಂಬರಿಯ ತೆಪ್ಪೋತ್ಸವ ನಡೆದಿತ್ತು. ಬರಿಗೈಯವನು ಆ ಸಂತೆಗೆ ಹೋದೆ. ನನ್ನಲ್ಲಿದ್ದುದು ವಿಶಿಷ್ಟವೆನ್ನಬಹುದಾದ ದಟ್ಟ ಅನುಭವದ ಬಂಡವಾಳ ಮಾತ್ರ. ಕಾದಂಬರಿಯ ಕಾಣಿಕೆಯೊಡನೆ ವಾಚಕಲೋಕದ ಬಳಿಸಾರಲು ಮುಂದಾದೆ.