ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಮಾರ ಗುಪ್ತ

ವಿಕಿಸೋರ್ಸ್ದಿಂದ

ಕುಮಾರ ಗುಪ್ತ

 ಭಾರತವನ್ನಾಳಿದ ಗುಪ್ತ ಸಂತತಿಯ ಅರಸರಲ್ಲಿ ಈ ಹೆಸರಿನವರು ನಾಲ್ವರಿದ್ದಾರೆ.

 ಕುಮಾರಗುಪ್ತ I : ಗುಪ್ತ ಸಾರ್ವಭೌಮರಲ್ಲಿ ಪ್ರಸಿದ್ಧನಾದ ಎರಡನೆಯ ಚಂದ್ರಗುಪ್ತ ಮತ್ತು ಆತನ ಪಟ್ಟದ ರಾಣಿ ಧೃವಾ ದೇವಿಯ ಮಗ. ಇವನಿಗೆ ಮಹೇಂದ್ರಾದಿತ್ಯನೆಂಬ ಬಿರುದಿತ್ತು. ತನ್ನ ತಂದೆಯ ತರುವಾಯ ಈತ ಸಿಂಹಾಸನವನ್ನೇರಿ 415 ರಿಂದ 455 ವರೆಗೆ 40 ವರ್ಷಕಾಲ ರಾಜ್ಯವಾಳಿದ. ಈತ ಸ್ಕಂಧ ಕಾರ್ತಿಕೇಯನ ಭಕ್ತ. ಆ ದೇವತೆಯ ಚಿತ್ರವಿದ್ದ ನಾಣ್ಯಗಳನ್ನು ಹೊರಡಿಸಿದ. ಕಾಳಿದಾಸ ಮಹಾಕವಿಯ ಕುಮಾರಸಂಭವ ಕಾವ್ಯದ ನಾಯಕ ಕುಮಾರಗುಪ್ತನೆಂಬುದು ವಿದ್ವಾಂಸರ ಅಭಿಪ್ರಾಯ. ಇವನು ಅನೇಕ ಜೈತ್ರಯಾತ್ರೆಗಳನ್ನು ಕೈಗೊಂಡು ಅಶ್ವಮೇಧ ಯಾಗ ಮಾಡಿದ. ಕುಮಾರಗುಪ್ತನ ಆಡಳಿತ ಕಾಲದಲ್ಲಿ ಶಾಂತಿ ಸುಭದ್ರತೆಗಳು ನೆಲಸಿದ್ದುವು. ಆದರೆ ಇವನ ಆಳ್ವಿಕೆಯ ಕೊನೆಯ ಭಾಗದಲ್ಲಿ ಹೂಣರ ದಾಳಿ ಆರಂಭವಾಯಿತು. ಇವನೂ ಇವರ ಮಗ ಸ್ಕಂಧಗುಪ್ತನೂ ಪರಾಕ್ರಮದಿಂದ ಹೋರಾಡಿ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿದರು. ಕುಮಾರ ಗುಪ್ತನ ಮರಣಾನಂತರ ಸ್ಕಂಧಗುಪ್ತ ಪಟ್ಟಕ್ಕೆ ಬಂದ.           (ಜಿ.ಆರ್.ಆರ್.)

 ಕುಮಾರಗುಪ್ತ II ; ಗುಪ್ತ ಸಾಮ್ರಾಜ್ಯದ ಒಬ್ಬ ಚಕ್ರವರ್ತಿ. ಸ್ಕಂಧಗುಪ್ತನ ಮೊಮ್ಮಗ. 473-474ರಲ್ಲಿ ಆಳುತ್ತಿದ್ದ. ಆ ಸಾಮ್ರಾಜ್ಯದ ಅವನತಿಯ ಕಾಲದಲ್ಲಿ ಪೂರ್ವದ ಕೆಲವು ಭಾಗಗಳು ಮಾತ್ರ ಈತನ ಆಳ್ವಿಕೆಗೆ ಸೇರಿದ್ದವು.

 ಉತ್ತರಕಾಲೀನ ಗುಪ್ತಸಂತತಿಗೆ ಸೇರಿದ ಇನ್ನಿಬ್ಬರು ಕುಮಾರಗುಪ್ತರ ಹೆಸರುಗಳು ಉಲ್ಲೇಖವಾಗಿದ್ದರೂ ಅವರ ವಿಷಯವಾಗಿ ಏನೂ ತಿಳಿದುಬಂದಿಲ್ಲ.