ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರಕಲ್

ವಿಕಿಸೋರ್ಸ್ದಿಂದ

ಆರಕಲ್

ಗ್ರೀಕ್ ಮತಧರ್ಮದ ಪ್ರಕಾರ ಮನುಷ್ಯ ಕೇಳುವ ಪ್ರಶ್ನೆಗೆ ದೇವರು ಕೊಡುವ ಉತ್ತರ. ಅಥವಾ ಅಂತ ಕಣಿ ಹೇಳುವ ಸ್ಥಳ. ಒಂದೊಂದು ಸ್ಥಳಕ್ಕೂ ಒಂದೊಂದು ದೇವತೆ ಇರುತ್ತಿತ್ತು. ವೀರ ಅಂಫಿಯಾರಸ್‍ನ ಡೊಡೋನ, ಅಪೊಲೊನ ಡೆಲ್ಫಿ, ಅಮನ್‍ನ ಸೀವ ಮುಂತಾದುವು ಅಂತಹ ಪ್ರಸಿದ್ಧ ಸ್ಥಳಗಳು. ಸಂದಿಗ್ಧ ಸಮಯಗಳಲ್ಲಿ ರಾಜವರ್ಗದವರೂ, ಜನರೂ ಕಣಿ ಕೇಳಿ ಅದರಂತೆ ನಡೆಯುತ್ತಿದ್ದರು. ಆ ಸಂದರ್ಭದಲ್ಲಿ ದೇವರು ಮೈಮೇಲೆ ಬಂದು ಮಾತನಾಡುತ್ತಿತ್ತು. ಬಹುಪಾಲು ಪೂಜಾರಿಯ ಮೈಮೇಲೆ ಬರುವುದೇ ರೂಢಿಯಲ್ಲಿತ್ತು. ದೇವವಾಣಿಯಲ್ಲದೆ ಗತಿಸಿದ ವೀರ, ಪಿತೃವಾಣಿಯನ್ನೂ ಕೇಳುತ್ತಿದ್ದುದುಂಟು. ಇದಲ್ಲದೆ ಒಮ್ಮೆ ದೈವವೊ, ಪ್ರೇತವೊ ಯಾರ ಮೈಮೇಲೊ ಬಂದು ಎಲೆಗಳ ಸಪ್ಪಳದಿಂದಲೊ ನೆಲದ ಮೇಲೆ ಮಲಗಿದವರ ಕನಸಿನಲ್ಲೊ ಸೂಚನೆ ನೀಡುತ್ತಿದ್ದುದುಂಟು.

ಒಗಟುಗಳಂತೆ ಸಂದಿಗ್ಧವಾಗಿದ್ದ ಆರಕಲ್‍ಗಳ ಅರ್ಥವನ್ನು ಅರ್ಚಕರೇ ವಿವರಿಸುತ್ತಿದ್ದರು. ಅವು ಅನೇಕ ವೇಳೆ ಗೂಡಾರ್ಥದಿಂದ ಕೂಡಿರುತ್ತಿದ್ದುವು. ದ್ವಂದ್ವಾರ್ಥದಿಂದ ಕೂಡಿದ ಡೆಲ್ಫಿಯ ವಚನ ನಂಬಿ ಯುದ್ಧಕ್ಕೆ ಹೋದ ಕ್ರೋಸಸ್‍ದೊರೆ ತನ್ನ ರಾಜ್ಯವನ್ನೇ ನಾಶಮಾಡಿಕೊಂಡ ಕಥೆ ಇತಿಹಾಸ ಪ್ರಸಿದ್ಧವಾಗಿದೆ. ಆಗಮೆಮ್ನಾನ್ ಕಣಿ ಕೇಳಿ ತನ್ನ ಮಗಳಾದ ಇಫಿಜೀನಿಯಳನ್ನು ವಾಯುದೇವತೆಗೆ ಬಲಿಕೊಡುತ್ತಾನೆ.

ಆರಕಲ್‍ಗಳನ್ನು ಕೇಳುವ ಆಚಾರ ಹಿಂದೆ ಎಲ್ಲ ಜನಾಂಗಗಳಲ್ಲೂ ಇತ್ತೆಂದು ತೋರುತ್ತದೆ.

(ಎಚ್.ಆರ್.ಆರ್.)