ಪುಟ:Banashankari.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

92 ಬನಶಂಕರಿ ನಾಲ್ಕು ಹೆಜ್ಜೆ ಅವರಿಬ್ಬರೂ ಮೌನವಾಗಿಯೇ ನಡೆದರು. ಎದುರುಗಡೆಯಿಂದ ದೂರದಿಂದ ಯಾರೋ ಬರುತ್ತಿದ್ದ ಹಾಗೆ ತೋರಿತು. ಅಮ್ಮಿಯನ್ನು ಹಿಂದೆ ಉಳಿಸಿ ರಾಯರು ಬೇಗ ಬೇಗನೆ ಹೆಜ್ಜೆ ಇಟ್ಟರು. ಹಾಗೆ ಹೊರಡುತ್ತ ಅವರೆಂದರು:

   " ಮಠದವನು ಮಾತನಾಡ್ತಾ ಇದ್ನಲ್ವೆ ಮೊನ್ನೆ ? ಅವರ ತಲೆ ಹರಟೆ ಜಾಸ್ತಿಯಾಯ್ತೂಂತ ತೋರುತ್ತೆ, ನೀನೇನೂ ಹೆದರ್ಕೋಬೇಡ ಬನಶಂಕರಿ. ಏನೂ ಯೋಚ್ನೆ ಮಾಡ್ಬೇಡ...."
    ಹೆದರಬಾರದು, ಯೋಚನೆ ಮಾಡಬಾರದು.... 
   ಮನೆಯಲ್ಲಿ ಸುಂದರಮ್ಮ ತಾಯ್ತನವನ್ನು ಇದಿರು ನೋಡುತ್ತಿದ್ದಳು. ಇನ್ನು ಕೆಲವೇ ದಿನಗಳ ಮಾತು. ಆ ಬಳಿಕ ಸುಂದರಮ್ಮ ಮತ್ತೊಮ್ಮೆ ತಾಯಿಯಾಗುವಳು.

ರಾಮಶಾಸ್ತ್ರಿ ಸೂಲಗಿತ್ತಿಗೆ ಹೇಳಿಬಂದ.

    "ನನಗೆ ಏನೋ ಆಗುತ್ತಮ್ಮ...ಮನಸ್ನಲ್ಲಿ ಅಳುಕು..ಯಾಕೆ ಹೀಗಾಗುತ್ತೋ?"
  –ಹೀಗೆಂದು ಸುಂದರಮ್ಮ ಹೇಳಿದರೆ ಬನಶಂಕರಿ ಉತ್ತರವೀಯುತ್ತಿದ್ದಳು:
  " ಹೆದರ್ಬೇಡ ಅಕ್ಕಾ, ಯೋಚ್ನೆ ಮಾಡ್ಬೇಡ....ನಾನಿದೀನಿ."
  ಅವೆರಡು ಎಷ್ಟು ಒಳ್ಳೆಯ ಪದಗಳು! ಅಂತಹ ಮಾತುಗಳಿಂದ ತನಗೆ ಧೈರ್ಯ ನೀಡಿದ ನಾರಾಯಣರಾಯರನ್ನು ಆಕೆ ಆಗಾಗ್ಗೆ ನೆನೆಸಿಕೊಂಡಳು. ದೇವಸ್ಥಾನದ ಪಾರುಪತ್ಯಗಾರರು ಅಷ್ಟು ಒಳ್ಳೆಯವರಾಗಿದ್ದಾಗ ತಾನು ಯಾಕೆ ಹೆದರಬೇಕು? ಯೋಚನೆ ಮಾಡಬೇಕು?
 ಸುಂದರಮ್ಮನೆನ್ನುತ್ತಿದ್ದಳು:
   "ಆದರೂ ಯಾಕೋ ಭಯವಾಗುತ್ತಮ್ಮ ನನಗೆ...." 
  "ನಾನೇ ಹೆದರದೆ ಇರುವಾಗ ನೀನು ಯಾಕೆ ಭಯ ಪಡಬೇಕು?" ಎಂದು ಕೇಳಬೇಕೆನ್ನಿಸಿತು ಬನಶಂಕರಿಗೆ. ಆದರೆ ಮಾತು ಹೊರಡದೆ ಮುಗುಳುನಗೆ ತುಟಿಯ ಮೇಲೆಯೇ ನಿ೦ತಿತು. 
   "ಖುಷಿಯಾಗಿದಿಯಲ್ಲೇ ಬನೂ! " 
  ನಾಚಿಕೆಯಾಯಿತು ಅಮ್ಮಿಗೆ ತನ್ನ ಮನಸ್ಸಿನ ಆಳದ ಯೋಚನೆಗಳನ್ನೆಲ್ಲಿ ಸುಂದರಮ್ಮ ಕಂಡುಹಿಡಿದಳೋ ಎಂದು ಗಾಬರಿಯೂ ಆಯಿತು. ಏನಾದರೂ ಉತ್ತರ ಕೊಡದಿರುವುದು ಸಾಧ್ಯವಿರಲಿಲ್ಲ.
  "ಹೀಗೇ ಅಕ್ಕಾ...ಪುಟಾಣಿ ಗಂಡು ಮಗು ಮನೆಗೆ ಇನ್ನೇನು ಬಂದ್ದಿಡುತ್ತೇಂತ—"
   ಸುಂದರಮ್ಮ ನಾಚಿದಳು. ಅವಳ ಮುಖ ರಂಗೇರಿತು. ಆದರೆ ಮರುಕ್ಷಣದಲ್ಲೇ ಸುಂದರಮ್ಮನಿಗೆ ಬನಶಂಕರಿಯ ಇರುವಿಕೆಯ ನೆನಪಾಗಿ ಮುಖ ಕಪ್ಪಿಟ್ಟಿತು.

" ಮಗು ಎಲ್ಲಿ ಹೋಯ್ತೋ ಏನೋ....ಒಂದಿಷ್ಟು ಹೊರಗೆ ಇಣಿಕಿನೋಡೇ " ಎಂದು ಬನಶಂಕರಿಯನ್ನು ಕಳುಹಿಸಿಕೊಟ್ಟು ಸುಂದರಮ್ಮ, ಮಲಗಿದ್ದಲ್ಲಿಂದಲೆ ಪಕ್ಕಕ್ಕೆ ಹೊರಳಿ, ಗೋಡೆಗೆ ಮುಖ ಮಾಡಿದಳು. ನಿಧಾನವಾಗಿ ಯೋಚನೆಗಳು ದೂರಸರಿದುವು. ನಿದ್ದೆ ಅವಳ ಬಳಿಸಾರಿತು. -