ಪುಟ:Mysore-University-Encyclopaedia-Vol-1-Part-1.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಾನ್ಯ ವಾಚಕರಲ್ಲಿ ಸಾಹಿತ್ಯಾಭಿರುಚಿ ಹುಟ್ಟುವುದಕ್ಕೂ ಬೆಳೆಯುವುದಕ್ಕೂ ಅಡಿಸನ್ ಮಾಡಿದ ಪ್ರಯತ್ನ ಅವನಿಗೆ ಇಂಗ್ಲಿಷ್ ವಿಮರ್ಶೆಯ ಚರಿತ್ರೆಯಲ್ಲಿ ಒಂದು ಸ್ಥಾನವನ್ನು ತಂದುಕೊಟ್ಟಿದೆ. ವಿಮರ್ಶೆಯ ವಿಚಾರದಲ್ಲಿ ಅವನಿಗಿದ್ದ ಅಭಿಪ್ರಾಯವೂ ಅವನ ವಿಮರ್ಶನ ವಿಧಾನವೂ ಅವನು ದಿನವಹಿ ಪ್ರಕಟಿಸುತ್ತಿದ್ದ ಸ್ಪೆಕ್ಟೇಟರ್ ಪ್ರಬಂಧಗಳಲ್ಲಿ ಪ್ರಕಾಶಗೊಂಡವು. ಅದಕ್ಕೆ ಮೊದಲು ೧೬೯೩ ರಲ್ಲಿ ಅಕೌಂಟ್ ಆಫ್ ದಿ ಗ್ರೇಟ್ ಇಂಗ್ಲಿಷ್ ಪೊಯಟ್ಸ್ ಎಂಬ ಲೇಖನವನ್ನು ಅವನು ಬರೆದಿದ್ದರೂ ಅದನ್ನು ಮುಖ್ಯ ಪ್ರಬಂಧವೆನ್ನಲಾಗದು. ಏಕೆಂದರೆ, ಅದರಲ್ಲಿ ಹಿಂದಿನ ಕವಿಗಳಲ್ಲಿ ಚಾಸರ್ ಮತ್ತು ಸ್ಪೆನ್ಸರ್, ಅಂದಿನವರಲ್ಲಿ ಕೌಲಿ-ಇವರಿಗೆ ಮಾತ್ರವಲ್ಲದೆ ಮತ್ತಾವ ಹಿರಿಯ ಕವಿಗೂ ಪ್ರಾಶಸ್ತ್ಯ ಬಂದಿಲ್ಲ. ತುಂಬ ಜನಪ್ರಿಯವಾದ ಸ್ಪೆಕ್ಟೇಟರ್ ಪ್ರಬಂಧಗಳಲ್ಲಿ ಅಡಿಸನ್ನನ ವಿಮರ್ಶನ ಸಾಮಥ್ರ್ಯ ಎದ್ದು ತೋರುತ್ತದೆ. ಈತ ಇಂಗ್ಲಿಷ್ ಕವಿ ಮಿಲ್ಟನ್ನನ ಪ್ಯಾರಡೈಸ್‍ಲಾಸ್ಟ್ ಮಹಾ ಕಾವ್ಯವನ್ನು ಕುರಿತು ವಿಮರ್ಶಾತ್ಮಕ ಪ್ರಬಂಧಗಳನ್ನು ಬರೆದಿದ್ದಾನಲ್ಲದೆ ಅರಿಸ್ಟಾಟಲನ ಕಾವ್ಯಮೀಮಾಂಸಾ ಸೂತ್ರಗಳನ್ನು ಮಿಲ್ಟನ್ನನಿಗೆ ಅನ್ವಯಿಸಿ, ಅವನು ಹೋಮರ್ ಮತ್ತು ವರ್ಜಿಲ್ ರಂಥ ಭವ್ಯ ಕವಿಗಳಿಗೆ ಸರಿತೂಗತಕ್ಕ ವನು ಎಂದು ತೀರ್ಮಾನಿಸಿದ್ದಾನೆ. ಅಡಿಸನ್ನನ ಪ್ರಬಂಧಗಳು ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಿಗೆ ತರ್ಜುಮೆಯಾದುವು; ಅಲ್ಲದೆ ಅವು ಹಲವು ತಲೆಮಾರುಗಳವರೆಗೆ ಉಳಿದು ನಿಂತು ವಿಮರ್ಶೆಯ ತತ್ತ್ವ ಮತ್ತು ರೀತಿಗಳನ್ನು ಮುಂದಿನವರ ಅರಿಮೆಗೆ ತಂದುವು. ಅಡಿಸನ್ ಬರೆದ ದಿ ಪ್ಲೆಷರ್ಸ್ ಆಫ್ ದಿ ಇಮ್ಯಾಜಿನೇಷನ್ ಎಂಬ ಲೇಖನಮಾಲೆ ಓದುವುದಕ್ಕೆ ಸ್ವಾರಸ್ಯವಾಗಿದೆ. ಸುಲಭವೂ ತಿಳಿಯೂ ಗಂಭೀರವೂ ಆದ ಅವನ ಲೇಖನಶೈಲಿ ಇಂಗ್ಲಿಷ್ ಸಾಹಿತ್ಯದಲ್ಲಿ ವೈಶಿಷ್ಟ್ಯವನ್ನು ಹೊಂದಿದೆ. ರಿಚರ್ಡ್ ಸ್ಟೀಲ್‍ನೊಂದಿಗೆ ಸಂಪಾದಿಸುತ್ತಿದ್ದ ಸ್ಪೆಕ್ಟೇಟರ್ ಪತ್ರಿಕೆಯ ಲೇಖನಗಳಲ್ಲಿ ಅಡಿಸನ್ನನ ಸೌಂದರ್ಯಮೀಮಾಂಸೆ ವ್ಯಕ್ತಗೊಂಡಿದೆ. ವಿಭಾವನೆ ನೀಡುವ ಸಂತೋಷವನ್ನು ಎರಡು ರೀತಿಯಾಗಿ ಕಾಣಬಹುದು- ಮುಖ್ಯ ಮತ್ತು ಗೌಣ ಅಥವಾ ವಾಸ್ತವಿಕ ಮತ್ತು ಮಾನಸಿಕ. ಕಣ್ಣಿಗೆ ಕಾಣುವ ವಸ್ತುಗಳಿಂದ ಪ್ರಚೋದಿತವಾದ ಸಂತಸ ಮೊದಲನೆಯದು. ವಸ್ತುಗಳ ನೆನಪು ಮಾತ್ರದಿಂದ ಹುಟ್ಟುವ ಸಂತಸ ಮತ್ತೊಂದು. ಸೃಷ್ಟಿಯಲ್ಲಿ ಮಹತ್ತರವಾದ, ನೂತನವಾದ ಮತ್ತು ಚೇತನಯುಕ್ತ ಅಥವಾ ಜೀವಯುಕ್ತವಾದ ಘಟನೆಗಳಿವೆ. ವಿಸ್ತಾರವಾದ ಮರುಭೂಮಿ, ದಿಗಂತವ್ಯಾಪಕ ಸಮುದ್ರ. ಉನ್ನತ ಪರ್ವತಶ್ರೇಣಿ ಮತ್ತು ಶಿಖರಗಳು. ಇವು ಮಹಾನ್ ಅಥವಾ ಮಹತ್ತರ ಎನ್ನಬಹುದಾದ ದೃಶ್ಯಗಳು. ಸೃಷ್ಟಿಯಲ್ಲಿ ಸಾಮಾನ್ಯವಾಗಿ ನಮಗೆ ಕಾಣಸಿಗದ, ಆಕಸ್ಮಿಕವಾಗಿಯೇ ಲಭ್ಯವಾಗುವ ಹಲವು ಘಟನೆಗಳನ್ನು ನೂತನ ಎನ್ನಬಹುದು. ನಾವು ಕಲಾಕೃತಿಗಳೆಂದು ಸಾಮಾನ್ಯವಾಗಿ ಹೇಳುವ ಚಿತ್ರ, ಶಿಲ್ಪ, ಸಂಗೀತ ಮುಂತಾದುವು ನಿಸರ್ಗವನ್ನು ನೆನಪಿಗೆ ತಂದುಕೊಡುವ ಸಾಧನಗಳು. ಪ್ರಕೃತಿಯ ಸಾದೃಶ್ಯವನ್ನು ಅಥವಾ ಪ್ರಕೃತಿಯೊಂದಿಗೆ ಇರಬಹುದಾದ ಸಂಬಂಧವನ್ನು ತೋರಿಸುವ ಭಾವನೆಗಳನ್ನು ಪ್ರೇರೇಪಿಸುವುದರ ಮೂಲಕ ಈ ಕಲಾಕೃತಿಗಳು ನಮಗೆ ಸಂತೋಷವನ್ನು ತಂದುಕೊಡುತ್ತವೆ. ಇಲ್ಲಿಯ ಆನಂದದ ತಳಹದಿ ಮನಸ್ಸಿನ ಭಾವನೆ. ಈ ಕಾರಣದಿಂದಲೇ ರೌದ್ರ, ಭಯಾನಕ ಮತ್ತು ಕರುಣರಸ ಪ್ರಚೋದಕ ಕಲೆಗಳಿಂದ ನಮ್ಮ ನಿಜಸ್ಥಿತಿಯ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎಂದರೆ ಗಂಭೀರ ನಾಟಕ ನಮಗೆ ಆನಂದ ನೀಡುವುದು ಈ ರೀತಿಯಲ್ಲಿ. ಅಲ್ಲಿನ ಅನುಭವ ಕಾಲ್ಪನಿಕ, ಭಾವನಾಯುಕ್ತ ; ಆದರೂ ಸಹಜವಲ್ಲ, ನಿಜವಲ್ಲ. ನೈಸರ್ಗಿಕ ಅಥವಾ ದೃಶ್ಯಪ್ರಚೋದಿತ ಹರ್ಷವನ್ನು ಮೂಲಭೂತವೆಂದು ಆ್ಯಡಿಸನ್ನನು ಕರೆದಿದ್ದರೂ ಮಾನಸಿಕ ಅಥವಾ ವಿಭಾವನಾಪ್ರಚೋದಿತ ಆನಂದವನ್ನು ಉತ್ತಮವೆಂದು ಪರಿಗಣಿಸುತ್ತಾನೆ. ಇದಕ್ಕೆ ಕಾರಣ ಆ ಕಾಲದಲ್ಲಿ ಹರಡಿದ್ದ ತತ್ತ್ವದ ಪ್ರಭಾವ, ಅರ್ಥಾತ್ ಜಾನ್‍ಲಾಕ್ ಬರೆದಿದ್ದ ಎಸ್ಸೆ ಕನ್ಸರ್ನಿಂಗ್ ಹ್ಯೂಮನ್ ಅಂಡರ್‍ಸ್ಟ್ಯಾಂಡಿಂಗ್ ಎಂಬ ಗ್ರಂಥದ ಸಾರಾಭಿಪ್ರಾಯ. ಒಂದೆಡೆ ಆ್ಯಡಿಸನ್ ಈ ರೀತಿ ಬರೆಯುತ್ತಾನೆ : ವಸ್ತುಗಳಲ್ಲಿ ನಾವು ಕಾಣುವ ಬೆಳಕು, ಬಣ್ಣ, ವಸ್ತುಗಳಲ್ಲಿಲ್ಲ; ಅವು ಕೇವಲ ಮನಸ್ಸಿನ ಭಾವನೆಗಳು. ವಸ್ತುಗಳಿಂದ ಪ್ರತ್ಯೇಕವಾದ ಭಾವನೆಗಳನ್ನು ಮನಸ್ಸು ಸೃಷ್ಟಿಸುವುದರಿಂದಲೇ ನಾವು ಅಲೌಕಿಕ ಆನಂದವನ್ನು ಅನುಭವಿಸಲು ಸಾಧ್ಯ. ಸೌಂದರ್ಯಮೌಲ್ಯ ಕೇವಲ ನಿಸರ್ಗ ಅಥವಾ ಪ್ರಕೃತಿನಿಷ್ಠವಲ್ಲ. ಆನಂದದ ಅಂತಿಮ ಕಾರಣವನ್ನು ನಿಶ್ಚಯಿಸುವುದು ಅಸಾಧ್ಯ. ಆನಂದ ಅಥವಾ ಸುಖವನ್ನು ನೀಡುವ ಕೇವಲ ಬಾಹ್ಯಕಾರಣಗಳನ್ನು ಮಾತ್ರ ನಾವು ಗ್ರಹಿಸಿ ಗಣಿಸಬಹುದು. ಅಂತಿಮವಾದ ಸತ್ಯ ಅಥವಾ ಕಾರಣವೊಂದಿದೆ. ನಾವು ಊಹಿಸಬಹುದಾದರೆ ಅದು ನಮ್ಮನ್ನು ಸೃಷ್ಟಿಸಿದ ದೇವರೇ ಎನ್ನಬೇಕು. ನಾವು ಕಾಣುವ, ಅನುಭವಿಸುವ ಎಲ್ಲ ವಸ್ತುಗಳಲ್ಲೂ ಆತನನ್ನೇ ಕಾಣಬೇಕೆನ್ನುವ ಅನುಭವಿಸಬೇಕೆನ್ನುವ ನಿಯಮದಿಂದಲೇ ನಮ್ಮ ಆತ್ಮವನ್ನು ಸೃಷ್ಟಿಕರ್ತ ರಚಿಸಿದ್ದಾನೆಂದು ಕಾಣುತ್ತದೆ; ಅಥವಾ ನಿರುತ್ಸಾಹದಿಂದ ಔದಾಸೀನ್ಯದಿಂದ ಸೃಷ್ಟಿಯನ್ನು ನಾವು ನೋಡಲೇಬಾರದೆಂಬ ನಿಯಮದಿಂದ, ನಮ್ಮನ್ನು ದೇವರು ಸೃಷ್ಟಿಮಾಡಿರುವನೆಂದು ಕಾಣುತ್ತದೆ. ಆ್ಯಡಿಸನ್ನನ ಲೇಖನಗಳಲ್ಲಿ ಮೂರು ಹಂತಗಳು ನಮಗೆ ಕಾಣುತ್ತವೆ. ಮೊದಲನೆಯದು ದೃಶ್ಯವಸ್ತುಗಳಿಂದ, ಎರಡನೆಯದು ಮಾನಸಿಕ ಭಾವನೆಗಳಿಂದ, ಮೂರನೆಯದು ದೈಹಿಕ ಕಾರಣದಿಂದ ಉಂಟಾಗುವ ಆನಂದಾನುಭವ. ಜಗತ್ತಿನಿಂದ ಜಗತ್ಕರ್ತೃವಿನೆಡೆಗೆ ಕೊಂಡೊಯ್ಯುವ ಎಲ್ಲವನ್ನೂ ಆ ದೃಷ್ಟಿಯಿಂದಲೇ ನೋಡಬೇಕೆನ್ನುವ ವಾದ ಇಲ್ಲಿ ಕಂಡುಬರುತ್ತದೆ. (*) ಅಡಿಸನ್, ತಾಮಸ್ : ೧೭೯೩-೧೮೬೦. ಇಂಗ್ಲೆಂಡಿನ ವೈದ್ಯ ; ಅಡ್ರಿನಲ್ ಗ್ರಂಥಿಯ ರಗಟೆಯ (ಕಾರ್ಟೆಕ್ಸ್) ಅಡಿಸನ್ನನ ರೋಗವನ್ನೂ ಕೇಡಿನ ರಕ್ತಕೊರೆಯನ್ನೂ (ಪರ್ನಿಷಸ್ ಅನೀಮಿಯ) ಚೆನ್ನಾಗಿ ವಿವರಿಸಿ ಹೆಸರಾದವ. ಲಂಡನ್ನಿನ ಗೈಸ್ ಆಸ್ಪತ್ರೆಯಲ್ಲಿ ರಿಚರ್ಡ್ ಬ್ರೈಟ್‍ನೊಂದಿಗೆ ವೈದ್ಯವಿದ್ಯೆ ಕಲಿಸುವವನಾಗಿದ್ದ. ಅವನ ಹೆಸರಿನ ಎರಡು ರೋಗಗಳನ್ನೂ ಮೊದಲು (೧೮೪೯) ಸೂಚಿಸಿ, ಮುಂದೆ ವಿವರಗಳಿರುವ ಪುಸ್ತಕ ವನ್ನೂ (೧೮೫೫) ಪ್ರಕಟಿಸಿದ. ಅವನು ಕೊಟ್ಟಿರುವ ಅಂದಿನ ವಿವರಗಳು ಈಗಲೂ ನಿಜವೆನಿಸಿವೆ. ಒಳಸುರಿಕ ಗ್ರಂಥಿಗಳಲ್ಲಿ ಒಂದರ ರೋಗದ ಬದಲಾವಣೆಗಳನ್ನು ರೋಗಿಯ ಲಕ್ಷಣಗಳಿಗೆ ಸಂಬಂಧ ಮೊದಮೊದಲು ಕಲ್ಪಿಸಿದವ ಇವನೇ. ಇವನು ಮೊದಲು ಸೂಚಿಸಿದ ದಿನವನ್ನೇ (ಮಾರ್ಚಿ ೧೫, ೧೮೪೯) ಒಳಸುರಿಕ ಶಾಸ್ತ್ರ ಹುಟ್ಟಿದ ದಿನ ಎನ್ನುವುದು. ಜಾನ್ ಮಾರ್ಗನ್‍ನೊಂದಿಗೆ, ಮೈಮೇಲೆ ವಿಷಕಾರಕಗಳ ಪ್ರಭಾವವನ್ನು ಇಂಗ್ಲಿಷಿನಲ್ಲಿ ಮೊತ್ತಮೊದಲು (೧೮೨೯) ಪ್ರಕಟಿಸಿದ. ಬ್ರೈಟ್‍ನೊಂದಿಗೆ ಬರೆದ ವೈದ್ಯವಿದ್ಯೆಯ ಮೂಲಪಾಠಗಳ ಮೊದಲನೆಯ ಸಂಪುಟ ಮಾತ್ರ (೧೮೩೯) ಹೊರಬಿತ್ತು. ಪುಪ್ಪುಸುರಿತ (ನ್ಯುಮೋನಿಯ), ಕ್ಷಯ, ಚರ್ಮರೋಗಗಳ ಮೇಲಿನ ಇವನ ಮುಖ್ಯ ಬರೆಹಗಳು ಬಹುವಾಗಿ ಗೈಸ್ ವರದಿಗಳಲ್ಲಿ ಬಂದುವು. (ಡಿ.ಎಸ್.ಎಸ್.) ಅಡಿಸನ್ನನ ರೋಗ : ಮೂತ್ರಪಿಂಡಗಳ ಮೇಲಣ (ಅಡ್ರಿನಲ್) ನಾಳವಿರದ ಗ್ರಂಥಿಗಳ ರಗಟೆ (ಕಾರ್ಟೆಕ್ಸ್) ಕೆಟ್ಟಿರುವ ಈ ಅಪೂರ್ವ ರೋಗದ ಲಕ್ಷಣಗಳನ್ನು ಮೊದಲು (೧೮೫೫) ಥಾಮಸ್ ಅಡಿಸನ್ ವಿವರಿಸಿದ. ಈ ರೋಗವನ್ನು ಅಡ್ರಿನಲ್ ರಗಟೆಯ ನಿಜಕೆಲಸದಿಳಿತವೆಂದೂ ಕರೆಯಬಹುದು. ರಕ್ತಕೊರೆ, ಕಂದು ಬಣ್ಣಕ್ಕೇರಿದ ಚರ್ಮ, ಬಾಯೊಳಗೆ ಕಂದು ಕಲೆಗಳು, ಅತಿಯಾದ ಅಲಸಿಕೆ, ನಿತ್ರಾಣ, ಗುಂಡಿಗೆಯ ದುರ್ಬಲ ಬಡಿತ, ರಕ್ತ ಒತ್ತಡದ ಇಳಿವರಿ, ಮನೋದೌರ್ಬಲ್ಯ, ನಿಧಾನವಾಗಿ ಈ ರೋಗದಲ್ಲಿ ಕಾಣಿಸಿಕೊಳ್ಳುತ್ತವೆ. ಈ ರೋಗ ಹೆಂಗಸರಿಗಿಂತ ಗಂಡಸರಲ್ಲಿ ಹೆಚ್ಚು. ಎಳೆಯರಿಗಿಂತಲೂ ೩೦ ವರ್ಷ ದಾಟಿದವರಲ್ಲಿ ಬರುವುದು ಸಾಮಾನ್ಯ. ಅಡ್ರಿನಲ್ ಗ್ರಂಥಿಗಳಿಗೆ ಹತ್ತುವ ಕ್ಷಯ, ಕಾರಣವಿಲ್ಲದ ಅನುವಳಿಕೆ, ಗಂತಿ ಬೆಳೆತ ಇಲ್ಲವೇ ಅದರ ಒತ್ತಡ, ಮೈ ತನ್ನ ಅಂಗವನ್ನೇ ಹೊರದೂಡುವ ಕ್ರಿಯೆ-ಇವು ಈ ರೋಗದ ಕಾರಣಗಳು. ಈ ಗ್ರಂಥಿಗಳನ್ನು ತೆಗೆದು ಹಾಕಿದರೂ ಅಷ್ಟೇ. ಈ ರೋಗಕ್ಕೆ ಕ್ಷಯ ಕಾರಣವಾಗಿದ್ದರೆ, ಬೇರೆ ಅಂಗಗಳಲ್ಲೂ ಕ್ಷಯ ಇರುವುದು ಸಾಮಾನ್ಯ. ಮೈಯಲ್ಲಿನ ಸೋಡಿಯಂ, ಪೊಟ್ಯಾಸಿಯಂ, ಕ್ಲೋರೈಡುಗಳ ಹತೋಟಿ, ಮೈಯಲ್ಲಿನ ನೀರಿನ ಸಮತೋಲ, ಹಿಟ್ಟು, ಕೊಬ್ಬು, ಪ್ರೋಟೀನುಗಳ ಜೀವವಸ್ತುಕರಣದ (ಮೆಟಬಾಲಿಸಮ್)