ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಕ್ಕತನ

ವಿಕಿಸೋರ್ಸ್ದಿಂದ

ಬಕ್ಕತನ

ತಲೆಬುರುಡೆಯ ಕೂದಲು ಉದುರಿಹೋಗಿ ಬೋಳಾಗಿರುವಿಕೆ. ಮಚ್ಚೆಯಾಗಿ ಅಥವಾ ಪೂರ್ಣವಾಗಿ ವ್ಯಕ್ತವಾಗಬಹುದು. ಇಂಥ ಬೋಳುತನ ತಾತ್ಕಾಲಿಕ ಇಲ್ಲವೇ ಕೆಲವು ಸಲ ಖಾಯಂ ಆಗಿ ಪರಿಣಮಿಸಬಹುದು. ಬೋಳುತನಕ್ಕೆ ಅನೇಕ ಕಾರಣಗಳಿವೆ. ಅವನ್ನು ವಿಮರ್ಶಿಸುವಾಗ ಕೂದಲು ದಟ್ಟತನ, ಸಂಖ್ಯೆ, ಬಣ್ಣ ಮೊದಲಾದ ಗುಣಗಳು ಅನುವಂಶಿಕವಾಗಿ ಜೀನುಗಳಿಂದಲೇ ನಿರ್ಧರಿತವಾಗಿರುತ್ತವೆಂದು ನೆನಪಿನಲ್ಲಿಡಬೇಕು. ಇದರಿಂದಲೇ ಕೆಲವು ಮಕ್ಕಳಲ್ಲಿ ಹುಟ್ಟುತ್ತಲೇ ಕೂದಲು ಇಲ್ಲದೆಯೂ ಮತ್ತೆ ಕೆಲವಲ್ಲಿ ತೆಳುವಾಗಿಯೂ ಇನ್ನೂ ಕೆಲವಲ್ಲಿ ದಟ್ಟವಾಗಿಯೂ ಬೆಳೆಯುವುದು ಕಂಡುಬರುವುದು, ಜೀನ್ ನಿರ್ಧರಿತವಾದ ಪೂರ್ಣ ಹುಟ್ಟು ಬೋಳುತನಕ್ಕೂ ಅನುವಂಶಿಕರಾಗಿ ಮಧ್ಯವಯಸ್ಸಿಗೆ ಮೊದಲೆ ಬರುವ ಬೋಳುತನಕ್ಕೂ ಏನೂ ಮಾಡಲಾಗದು.

ವಿಷಮಶೀತಜ್ವರವೇ ಮೊದಲಾದ ತೀವ್ರರೋಗಗಳಲ್ಲಿ ಕೂದಲಿಗೆ ಪೋಷಕಗಳು ಕಡಿಮೆಯಾಗಿ ತಲೆಕೂದಲು ಬೀಳುವುದೂ ಆರೋಗ್ಯಗಳಿಕೆ ಆದಬಳಿಕ ತಾನಾಗಿ ದಿನೇ ದಿನೇ ಪುನಃ ಬೆಳೆಯುವುದೂ ಸಾಮಾನ್ಯ ತಿಳಿವಳಿಕೆ. ಇದು ತಾತ್ಕಾಲಿಕ ಬೋಳುತನದ ನಿದರ್ಶನ. ಹಾಗಲ್ಲದೇ ಚರ್ಮ ಯಾವ ಕಾರಣದಿಂದಾಗಲೀ ಹುಣ್ಣಾಗಿ ಅದರಿಂದ ಕೂದಲುಕೋಶವೇ ನಾಶವಾದರೆ ಅಂಥ ಕಡೆ ಮತ್ತೆ ಕೂದಲು ಬೆಳೆಯಲಾಗದೇ ಖಾಯಂ ಬೋಳುತನ ಪ್ರಾಪ್ತಿಯಾಗುತ್ತದೆ. ಕ್ರಿಮಿಗಳೂ ಶಿಲೀಂಧ್ರಗಳೂ ಕೆಲವು ವೇಳೆ ಕೂದಲ ಕೋಶಗಳನ್ನು ಆವರಿಸಿ, ಅದನ್ನು ನಾಶಪಡಿಸುವುದರಿಂದ ಕೂದಲು ಬೆಳೆಯದಂತೆ ಮಾಡಿ ಖಾಯಂ ಬೋಳುತನಕ್ಕೆ ಕಾರಣವಾಗಬಲ್ಲವು. ಇಂಥ ಬೋಳುತನಕ್ಕೆ ಯುಕ್ತ ಕ್ರಿಮಿನಿರೋಧಕ ಇಲ್ಲವೇ ಶಿಲೀಂಧ್ರ ನಿರೋಧಕ ಔಷಧಿಗಳಿಂದ ಯಶಸ್ವಿಯಾದ ಚಿಕಿತ್ಸೆಗೆ ಅವಕಾಶವಿದೆ. ಕೆಲವು ವೇಳೆ ತೀವ್ರತರ ಮನೋವ್ಯಥೆಯಿಂದ ಕೂದಲು ಮಚ್ಚೆ ಮಚ್ಚೆಯಾಗಿ ಹಠಾತ್ತನೆ ಬೀಳುವುದುಂಟು. ಇಂಥ ಸಂದರ್ಭಗಳಲ್ಲಿ ಮನೋಸ್ಥಿತಿ ಉತ್ತಮಗೊಂಡಂತೆ ಪುನಃ ಕೂದಲು ಬೆಳೆಯುವ ನಿರೀಕ್ಷೆ ಇದೆ. ಬೋಳುತನದಿಂದ ಮನಸ್ಸಿನಲ್ಲಾಗುವ ಕಳವಳವೇ ಪುನಃ ಕೂದಲಿನ ಬೆಳೆವಣಿಗೆಗೆ ಅಡ್ಡಿಯಾಗಬಹುದು. ನಡುವಯಸ್ಸು ಕಳೆದಂತೆ ತಲೆಬೋಳಾಗುವುದು ಪುರುಷರಲ್ಲಿ (ಸುಮಾರು 40%) ಸಾಮಾನ್ಯ. ತಲೆಯ ಹಿಂಬದಿ ಅಥವಾ ಮುಂಬದಿ ಬೋಳಾಗಿ ಮಿಕ್ಕೆಡೆ ತೆಳ್ಳಗಾಗಿಯಾದರೂ ತಲೆಕೂದಲಿರುತ್ತದೆ. ಅಪರೂಪವಾಗಿ ತಲೆ ಪೂರ್ಣವಾಗಿ ಬೋಳಾಗಬಹುದು. ಯಾವ ರೀತಿ ಬೋಳುತನ ವ್ಯಕ್ತಿಯಲ್ಲಿ ಕಂಡು ಬರುತ್ತದೆನ್ನುವುದು ಆಯಾ ಮನೆತನದ ರೂಢಿಯನ್ನು ಅವಲಂಬಿಸಿದೆ. ಗಂಡಸರಂತಲ್ಲದೇ ಹೆಂಗಸರಲ್ಲಿ ವಯಸ್ಸಾದ ಮೇಲೆ ಕೂದಲು ಉದುರಿ ತಲೆಬೋಳಾಗುವುದು ಅಪರೂಪ. ಬಹುಶಃ ಇದಕ್ಕೆ ಹೆಂಗಸರಲ್ಲಿ ಅಂಡಕೋಶಗಳಿಂದ ತಯಾರಾಗುವ ಈಸ್ಟ್ರೋಜೆನ್ ಪ್ರ್ರೊಜೆಸ್ಟಿರೋನುಗಳು ಕಾರಣವಾಗಿರಬಹುದು ಇವುಗಳಿಂದ ತಲೆಕೂದಲು ವಾರ್ಧಕ್ಯದಲ್ಲೂ ಉದುರದ ಸ್ಥಿರವಾಗಿರುವಂತೆ ಏರ್ಪಡುತ್ತದೆ ಎಂದು ಒಂದು ಭಾವನೆ. ಬೋಳಾದ ಗಂಡಸರಲ್ಲಿ ಈಸ್ಟ್ರೋಜೆನ್ ಪ್ರ್ರೊಜೆಸ್ಟಿರೋನುಗಳನ್ನು ಸೂಜಿಮದ್ದಾಗಿ ಆಗಲಿ ತಲೆಬುರುಡೆಯ ಲೇಪನವಾಗಿ ಆಗಲಿ ಬಳಸಿದರೆ ತಲೆಕೂದಲು ಪುನಃ ಬೆಳೆಯುತ್ತೇನೋ ಎಂದು ಈ ಕ್ರಮಗಳನ್ನು ಅನುಸರಿಸುವುದು ಉಂಟು. ಆದರೆ ಬಹುಶಃ ಯಾರಿಗೂ ಇದರಿಂದ ಪ್ರಯೋಜನವಾಗಿಲ್ಲ. (ಡಿ.ಪಿ.ಜೆ.)