ಪುಟ:Duurada Nakshhatra.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ನಮಸ್ಕಾರ ಸಾರ್!”

ತಾನು ಬಂದ ದಿನ ತನ್ನನ್ನು ನೀವು ಮೇಷ್ಟ್ರಲ್ವೆ ಸಾರ್, ಎಂದು ಕೇಳಿದ್ದ ಹುಡುಗ.

“ನಮಸ್ಕಾರವಪ್ಪ, ಚೆನಾಗಿದೀಯಾ?”

“ಹೂಂ ಸಾರ್. ನೀವು ಆ ಮೇಲೆ ಈ ಹೋಟ್ಲಿಗೆ ಬರ್ಲೇ ಇಲ್ಲ.”

“ಊರಲ್ಗೆ ಇರೋವರಿಗೆ ಊರಿನ ಹೋಟ್ಲು, ಬಸ್ ಪ್ರಯಾಣ ಮಾಡೋ ಜನಕ್ಕೆ ಮಾತ್ರ ಬಸ್ ಸ್ಟ್ಯಾಂಡ್ ಹೋಟ್ಲು, ಅಲ್ವಾ?

“ಹಾಗಾದ್ರೆ ಇವತ್ತು ಬಂದಿದೀರಲ್ಲ? ಊರಿಗೆ ಹೋಗ್ತೀರಾ ಸಾರ್?”

“ನಾನಲ್ಲ, ನಮ್ಮ ಸ್ನೇಹಿತರು ಹೋಗ್ತಾರೆ.”

ಒಡನೆಯೇ, ಯಾರು ಹೋಗುವರೆಂದು ಹೇಳುವ ಮನಸಾಯಿತು ಜಯದೇವನಿಗೆ... ರಂಗರಾಯರು ಹೊರಟು ಹೋಗುವ ವಾರ್ತೆ ಆ ಹುಡುಗನ ಮೇಲೇನು ಪರಿಣಾಮ ಮಾಡುವುದೋ ಎಂಬುದನ್ನು ತಿಳಿಯುವ ಕುತೂಹಲವಾಯಿತು.

“ನಿನಗೆ ಗೊತ್ತೇನಪ್ಪ? ಹೆಡ್ ಮೇಷ್ಟ್ರು ರಂಗರಾಯರಿಗೆ ವರ್ಗವಾಯ್ತು, ಈಗ ಹೋಗ್ತಾರೆ.”

“ಓ! ಅವರು ತುಂಬಾ ಒಳ್ಳೆಯವರು...”

“ನಿನಗೆ ಹ್ಯಾಗ್ಗೊತ್ತು?”

“ಮನುಷ್ಕರ್ನ ನೋಡಿದ್ರೆ ತಿಳಿಯೋಲ್ವೆ ಸಾರ್?”

“ಹೊಂ ?”

“ನಾನು ಸ್ಕೂಲ್ಗೆ ಹೋಗಿದ್ದಿದ್ರೆ ಅವರು ನನಗೂ ಹೆಡ್ಮೇಷ್ಟ್ರು ಆಗ್ತಿದ್ದ್ರು...." .

ಅಲ್ಲಿಗೇ ಮಾತು ನಿಲ್ಲಿಸಿ ಜಯದೇವ ಉಪ್ಪಿಟ್ಟು ತಿಂದು ಕಾಫಿ ಕುಡಿದ.

ಸ್ವಲ್ಪ ಹೊತ್ತಿನಲ್ಲೆ ಸಾಮಾನುಗಳನ್ನು ಹೊರಿಸಿಕೊಂಡು ರಂಗರಾಯರು ಸಪತ್ನಿಕರಾಗಿ ಬಂದರು. ಅವರನ್ನು ಕಾಫಿಗೆ ಕರೆಯುವುದಕ್ಕೂ ಬಿಡುವಿಲ್ಲದ ಹಾಗೆ ಚೆಂದೂರು ಬಸು ಬಂತು.

ರಂಗರಾಯರು ಮಾತನಾಡಲೇ ಇಲ್ಲ, ಸಾವಿತ್ರಮ್ಮ ಮಾತ್ರ “ಹೋಗಿ ಬರ್ತೀವಪ್ಪಾ” ಎಂದರು.