ಮಂಕುತಿಮ್ಮನ ಕಗ್ಗ - ಇದೇನು ಒಣರಗಳೆ

ವಿಕಿಸೋರ್ಸ್ದಿಂದ

ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ


ಇದೇನು ಒಣರಗಳೆ

ಗಾಳಿ ಮಣ್ಣುಂಡೇಯೊಳಹೊಕ್ಕು ಹೊರಹರಳಲದು|
ಆಳನಿಪುದಂತಾಗದರೆ ಬರಿಯ ಹೆಂಟೆ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ|
ಕ್ಷ್ವೇಳವೇನಮೃತವೇಂ? - ಮಂಕುತಿಮ್ಮ|| ೧೯

(ಮಣ್ಣು+ಉಂಡೇ+ಒಳಹೊಕ್ಕು) (ಆಳು+ಎನಿಪುದು+ಅಂತು+ಆಗದಿರೆ) (ತಿಕ್ಕದ+ಉರಿಯ) (ಕ್ಷ್ವೇಳವೇನು+ಅಮೃತವೇಂ)

ಮಣ್ಣಿನ ಉಂಡೆಯ ಒಳಗಡೆ ಗಾಳಿ ಹೋದರೆ, ಅದು ಹೊರಗಡೆ ಬರುವುದಕ್ಕೆ ಆಗುವುದಿಲ್ಲ.
ಮನುಷ್ಯನಲ್ಲು(ಆಳ್) ಸಹ ಈ ಗಾಳಿ ಇರದಿದ್ದರೆ, ಅವನು ಕೇವಲ ಮಣ್ಣಿನ ಉಂಡೆಯೇ ಸರಿ.
ಈ ಬಾಳು ಬರಿ ಧೂಳು, ಸುಳಿ ಮತ್ತು ಮರ ತಿಕ್ಕಿದರೆ ಬರುವ ಉರಿಯ ಹೊಗೆ, ಹೀಗಿರುವಾಗ ವಿಷವೇನು? (ಕ್ಷ್ವೇಳ) ಅಮೃತವೇನು? ಎರಡು ಒಂದೆ.

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು?|
ಚಂಡಚತುರೋಪಾಯದಿಂದಲೇನಹುದು?||
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು|
ಅಂಡಲೆತವಿದೇಕೇನೋ? - ಮಂಕುತಿಮ್ಮ|| ೨೦

ಕೈ+ಮುಗಿದು+ಏನಹುದು) (ಚಂಡ+ಚತುರ+ಉಪಾಯದಿಂದಲಿ+ಏನು+ಅಹುದು) (ಹಿಡಿ+ಒಂದು) (ಅಂಡಲೆತವು+ಇದಕೆ+ಏನೋ)

ನಮ್ಮ ಮನೋಭಿಲಾಷೆಗಳನ್ನು ಈಡೇರಿಸಿಕೊಳ್ಳುವುದಕ್ಕೋಸ್ಕರ, ನಾವು ಕಂಡ ಕಂಡ ದೇವರಿಗೆಲ್ಲ ಕೈ ಮುಗಿಯುತ್ತೇವೆ.
ಇಷ್ಟಕ್ಕೆ ಸುಮನಾಗದೆ, ನಾಲ್ಕು ಉಪಯಗಳನು(ಸಾಮ, ದಾನ, ಬೇದ, ದಂಡ) ಅನುಸೈಸುತ್ತೇವೆ.
ನಮಗೆ ಬೇಕಾಗಿರುವುದು ತಿನ್ನುವುದಕ್ಕೆ ಒಂದು ಹಿಡಿ ಅಕ್ಕಿ(ತಂಡುಲ) ಮತ್ತು ಸುತ್ತಿಕೊಳ್ಳುವುದಕ್ಕೆ ಒಂದು ತುಂಡು
ಬಟ್ಟೆ ಮಾತ್ರ, ಈ ಪರದಾಟ(ಅಂಡಲೆತ)ಗಳೆಲ್ಲಾ, ಹೊಟ್ಟೆ ಮತ್ತು ಬಟ್ಟೆಗಾಗಿ ಮಾತ್ರ ಎಂದು ತಿಳಿದರೆ,
ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಹೊನ್ನೊಂದು ಜಗದಿ ನೀಂ ಕೈಗೆ ಕೋಂಡುದನು ವಿಧಿ |
ಮಣ್ಣೆನುವನ್; ಅವನ ವರ ಮಣ್ಣೆನುವೆ ನೀನು||
ಭಿನ್ನವಂತಿರೆ ವಸ್ತುಮೌಲ್ಯಗಳ ಗಣನೆಯೀ|
ಪಣ್ಯಕ್ಕೆ ಗತಿಯೆಂತೊ? - ಮಂಕುತಿಮ್ಮ|| ೨೧

(ಬಿನ್ನಂ+ಇಂತು+ಇರೆ)

ಹಲವಾರು ಸಲ, ನಾವು ಅಂದುಕೊಳ್ಳುವುದೊಂದು, ಆಗುವುದು ಇನ್ನೊಂದು.
ನಾವು ಚಿನ್ನವೆಂದು ಭಾವಿಸಿದ ವಸ್ತು ಮಣ್ಣಾಗಿ, ಏನು ಬೆಲೆ ಇಲ್ಲದ ವಸ್ತು ಆಗಿಹೋಗುತ್ತದೆ.
ಆದರೆ ವಿಧಿ ನಮಗೆ ಇತ್ತ ವರ ಚಿನ್ನವಾಗಿದ್ದರೂ ಕೂಡ, ನಮಗೆ ಮಣ್ಣಿನಂತೆ ಗೋಚರಿಸುತ್ತದೆ.
ವಸ್ತುಗಳ ಬೆಲೆ(ಮೌಲ್ಯ) ವ್ಯ್ತ್ಯಾಸವಾಗುತ್ತಿರುವ ಈ ವ್ಯಾಪರದ(ಪಣ್ಯ) ಗತಿಏನು?

ಕೃತ್ರಿಮವೊ ಜಗವೆಲ್ಲ| ಸತ್ಯತೆಯದೆಲ್ಲಿಹುದೋ?|
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು||
ಚತ್ರವೀ ಜಗವಿದರೊಳಾರ ಗುಣವೆಂತಹುದೊ!|
ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ|| ೨೨

(ಸತ್ಯತೆ+ಅದು+ಎಲ್ಲಿಹುದೋ) (ಜಗವು+ಇದರೊಳು+ಆರ) (ಗುಣ+ಎಂತಹುದೋ)

ಕಳೆದ ಐದು ಪದ್ಯಗಳಲಿ ನ ವೇದಂತವನ್ನು ಬಿಟ್ಟೂ, ಈ ಪದ್ಯದಲ್ಲಿ, ಜಗತ್ತಿನ ಬಗ್ಗೆ ಜಾಗರೂಕರಾಗಿರಿ ಎಂದು ಇಲ್ಲಿ ಎಚ್ಚರಿಸುತ್ತರೆ.
ಈ ಜಗತ್ತೆಲ್ಲ ಮೋಸದಿಂದ ತುಂಬಿಕೊಂಡಿದೆ. ಸತ್ಯವೆಂಬುದು ಎಲ್ಲಿಯು ಇಲ್ಲವೇ ಇಲ್ಲ.
ಈ ಸೃಷ್ಟಿಯ ಕಾರಣಕರ್ತ, ಕಾಣಿಸಿಕೊಳ್ಳದೆ ಅವಿತುಕೊಂಡಿದ್ದನೆ.
ಒಂದು ಚಿತ್ರದಂತಿರುವ ಜಗತ್ತಿನಲ್ಲಿ, ಯಾರ ಸ್ವಭಾವ ಹ್ಯಾಗಿದೆಯೊ ನೀನೇನು ಬಲ್ಲೆ!
ನಿನ್ನ ಜಾಗರೂಕತೆಯಲ್ಲಿ ನೀನಿರು. ಎಲ್ಲರನ್ನು ನಂಬಿದೆಯೊ, ಮೋಸ ಹೋಗುವುದು ಖಚಿತ.

ತಿರು ತಿರುಗಿ ತೊಳಲುವುದು ತಿರಿದನ್ನಣ್ಣುವುದು|
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು||
ಮರಲಿ ಕೊರಗಾಡುವುದು ಕೆರಳುವುದು ನರಳುವುದು|
ಇರವಿದೇನೊಣರಗಳೆ? - ಮಂಕುತಿಮ್ಮ|| ೨೩

(ತಿರಿದು+ಅನ್ನ+ಉಣ್ಣುವುದು) (ಇರವು+ಇದು+ಏನು+ಒಣರಗಳೆ)

ಎಲ್ಲೆಲ್ಲಿಯೋ ಓಡಾಡಿ ಸುಸ್ತಾಗುವುದು. ಭಿಕ್ಷೆಬೇಡೀ ಅನ್ನವನ್ನು ತಿನ್ನುವುದು.
ಇಷ್ಟೆಲ್ಲಾ ಮಾಡಿಯು, ವೈಭವದ ಪ್ರದರ್ಶನ ಮಾಡಿ ಮೈಮರ್ಯುವುದು.
ಇನ್ನೊಬ್ಬರ ಹತ್ತಿರ ಹಲ್ಲು ಗಿಂಜುವುದು. ಪುನಹ ವ್ಯಥೆ ಪಡುವುದು, ಕೋಪಿಸಿಕೊಳ್ಳುವುದು,
ಇನ್ನೊಬ್ಬರ ಮೇಲೆ ರೇಗಾಟ. ಮೇಲಿನದೆಲವನ್ನು ಮಾಡಿದರು, ನಾವು ಎಣಿಸಿದಂತಾಗದಾಗ
ಸಂಕಟ ಪಡುವುದು. ನಾವಿರುವುದು ಈ ರೀತಿಯ ಕೆಲಸಕ್ಕೆಬಾರದ ಸಮಸ್ಯೆಗಳ ಒಳಗೆ.

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ