ಆದಿಪರ್ವ: ೦೪. ನಾಲ್ಕನೆಯ ಸಂಧಿ

ವಿಕಿಸೋರ್ಸ್ದಿಂದ
Jump to navigation Jump to search

ಕುಮಾರವ್ಯಾಸ ಭಾರತ

  • ~ ॐ ~

ಆದಿಪರ್ವ ನಾಲ್ಕನೇ ಸಂಧಿ[ಸಂಪಾದಿಸಿ]

ಸೂ. ಭರತ ವೊಂಶದೊಳೈದು ಮಿಗೆ ನೂ
ರ್ವರು ಕುಮಾರರು ಪಾಂಡು ಧೃತ ರಾ
ಷ್ಟ್ರರಿಗೆ ಜನಿಸಿದರಮಲ ಮುನಿ ಮಂತ್ರೋಪದೇಶದಲಿ||
♠♠♠
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀಭೋಜ ಭೂಪತಿ
ಯಾಲಯದೊಳೀ ಕುಂತಿ ಮೆರೆದಳು ವಿವಿಧ ವಿಭವದಲಿ||
ಕೇಳಿದನು ಗಾಂಗೇಯನಾ ನೀ
ಲಾಳಕಿಯ ಕುಲರೂಪು ಲಕ್ಷಣ
ಶೀಲವನು ಪಾಂಡು ವಿಗೆ ಪಾಸಟಿಯೆಂದು ರಾಗದಲಿ|| (೧)

ಕರೆಸಿ ಕುಂತೀಭೋಜನನು ಸ
ತ್ಕರಿಸಿ ಕುಂತಿಯ ಪಾಂಡುವಿಗೆ ಭೂ
ಸುರರ ಮತದಿಂದಗ್ನಿ ಸಾಕ್ಷಿಕ ವರವಿವಾಹವನು||
ಪರಮ ವಿಭವದಲೆಸಗಿ ಮುದ್ರೇ
ಶ್ಯರನನುಜೆ ಮಾದ್ರಿಯನು ಪಾಂಡುವಿ
ಗರಸಿಯನು ಮಾಡಿದನು ವೈವಾಹಿಕ ಮುಹೂರ್ತದಲಿ|| (೨)ಪಾಂಡುವಿಗೆ ಅರಸಿಯನು)

ವರ ವಿವಾಹ ಮುಹೂರ್ತ ಸಮನಂ
ತರ ಸುಲಗ್ನ ದೊಳಖಿಳ ರಾಜ್ಯದ
ಧುರದ ನಿರ್ವಾಹಕ ಮಹಾಪಟ್ಟಾಭಿಷೇಚನವ||
ಸುರನದೀಸುತ ಪಾಂಡುವಿಗೆ ವಿ
ಸ್ತರಿಸಿದನು ಧೃತರಾಷ್ಟ ವಿದುರರ
ಪರಮ ಪರಿತೋಷಾನುಮತದಲಿ ಮೆರೆದುದಾ ವಿಭವ|| (೩)

ಸೋಮ ಕುಲದವರಲಿ ಭವತ್ ಪ್ರಪಿ
ತಾಮಹನವೋಲ್ ಧರ್ಮದಲಿ ಸಂ
ಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ||
ಸಾಮದಲಿ ಶೌರ್ಯದಲಿ ಸುಜನ
ಪ್ರೇಮದಲಿ ನೀತಿಯಲಿ ದೃಢದಲಿ
ಭೂಮಿಯಲಿ ನಾ ಕಾಣಿನವನೀಪಾಲ ಕೇಳೆಂದ ||(೪)

ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜಗ ನಿ
ಪ್ಪರಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ||
ಮಸುಗಿತಗ್ಗದ ಕೆಂಪು ಪರಬಲ
ವಿಸರದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ|| (೫)

ಓಲಗಿಸುವುದು ಮಿತ್ರ ರಾಯರ
ಮೌಳಿಮಣಿ ಪಾಂಡುವಿನ ಚರಣ ನ
ಖಾಳಿಯನು ಸೆಣಸುವ ಮಹೀಶರ್ವ ಮೌಳಿಮಣಿ ಕಿರಣ ||
ಒಲಗಿಸಿತು ಪ್ರಣಯದಮರೀ
ಬಾಲೆಯರ ಪದನಖವನದನೇ
ವೇಳುವೇನು ಪಾಂಡುವಿನ ಖಂಡೆಯ ಸಿರಿಯ ಸಡಗರವ || (೬)

ಓಲಗಿಸಿ ಕೊಂಬಾತನಂಧನೃ
ಪಾಲನುಳಿದಂತಖಿಳ ಧರಣೀ
ಪಾಲಕತ್ಪವ ಪಾಂಡುಭೂಪತಗೀ ಕುಮಾರಕರ||
ಲಾಲಿಸುವ ಕುಲನೀತಿ ವಿಧದಲಿ
ಪಾಲಿಸುವ ಭರ ಭೀಷ್ಮನದು ಸಂ
ಬಾಳಿಸಿತುನಳ ನಹುಷಚರಿತವನಿವರ ಪರಿಪಾಟಿ|| (೭)

ನೃಪ ಪರಂಪರೆಯಿಂದ ಬಂದೀ
ವಿಪುಳ ವಂಶಸ್ಥಿತಿ ವಿಸರ್ಗವ
ನಪಹರಿಸಿದನು ಹಿಂದೆ ವೇದವ್ಯಾಸ ಮುನಿ ಬಂದು||
ಕೃಪೆಯ ಮಾಡೆನೆ ತನ್ನ ಸಂತತಿ
ಕೃಪಣವಾಯ್ತೆಂದನವರತ ಕುರು
ನೃಪತಿ ಚಿಂತಾಭಾರದಲಿ ಬಳಲುವನು ಧೃತರಾಷ್ಟ್ರ || (೮)

ಅರಸ ಚಿತ್ತೈಸೊಂದು ದಿನ ಮುನಿ
ವರನು ಬಿಜಯಂಗೈದು ಹಸ್ತಿನ
ಪುರವ ಹೊಕ್ಕನು ರಾಜಭವನಕೆ ಬಂದು ಹರ್ಷದಲಿ||
ಸುರನದೀತನುಜಾದಿಗಳ ಸ
ತ್ಕರಣಿಯನು ಕೈಕೊಂಡು ಮಕ್ಕಳ
ಮುರಿದ ವಿಭವಕೆ ಮೈಯನಾಂತು ಮುನೀಂದ್ರನಿಂತೆಂದ || (೯)

ಭರತ ಕುಲದಲಿ ಮಕ್ಕಳಿಲ್ಲದ
ಕೊರತೆ ಕೋಮಲ ಸೌಖ್ಯಲತೆಗಿದು
ಕರಗಸವಲಾ ತಂದೆ ಬಾ ದೃತರಾಷ್ಟ್ರ ಬಾಯೆನುತ||
ಕರೆದು ಕಟ್ಟೇಕಾಂತದಲಿ ನಿ
ನ್ನರಸಿಗನುಪಮ ಪುತ್ರ ಶತವವ
ತರಿಸುವುದು ಕೊಳ್ಳೆಂ ದು ಮಂತ್ರ ಪಿಂಡಕವ (೧೦)

ಧರಿಸಿದಳು ಗಾಂಧಾರಿ ಗರ್ಬೋ
ತ್ಯರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ||
ಅರಸ ಕೇಳೈ ಬೇಂಟೆಗಾರರು
ಕರೆಯ ಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡು ನೃಪಾಲನೋಲಗಕೆ || (೧೧)
  
ಕೇಳಿದನು ಮೃಗದಿಕ್ಕೆ ಹಕ್ಕೆಯ
ಗಾಳಿಯನು ಕೊಂಬುಗಳನಾಗಳೆ
ಬೀಳು ಕೊಟ್ಟನು ರಾಜಸಭೆಯನು ರಾಯನುಚಿತದಲಿ||
ಬೋಳೆ ಕವಲಂಬುಗಳ ಹದವಿಲು
ತಾಳಿಕೆಯ ಕುಪ್ಪಸದ ಬೇಂಟೆಯ
ಮೇಳದಲಿ ಭೂಪಾಲ ಹೊರಹೊರಟನು ನಿಜಾಲಯವ|| (೧೨)

ಏನನೆಂಬೆನು ನಿಮ್ಮನು ಪಿಶಾ
ಚೋನ್ನೃಪಾಲಕರೆಂಬವೋಲ್ ವ್ಯಸ
ನಾನುಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ||
ಕಾನನದೊಳಾಯತದ ಶರ ಸಂ
ಧಾನ ಕಲಿತ ಶರಾಸನನು ಮೃಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ ||(೧೩)

ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪ್ಪತ್ತಿನಂದದ
ಲೊಂದು ಠಾವಿನಲೊಬ್ಬ ಮುನಿ ಮೃಗ ವಿಥುನ ರೂಪಿನಲಿ||
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೂಡಿದನಂಬನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ ||(೧೪)

ಹಾ ಮಹಾದೇವಾಯೆನುತ್ತೆ ಸ
ನಾಮಮುನಿ ತೆತ್ತಿಸಿದ ಬೆನ್ನಿನ
ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ||
ಕಾಮಿನಿಯೆ ಕಡುನೊಂದೆಲಾ ಮುಖ
ತಾಮರಸವನು ತೋರು ತೋರೆನು
ತಾ ಮುನೀಶ್ವರನಪ್ಪಿ ಮುಂಡಾಡಿದನು ನಿಜಸತಿಯ|| (೧೫)

ಕಾತರಿಪ ಮುನಿಮಿಥುನವನು ನಿ
ನ್ನಾತ ಕಂಡನು ಬಿಲ್ಲ ಕೊಪ್ಪಿನ
ಲಾತ ಕದಪಿನ ಮುಕುಟದೊಲವಿನ ಬೆರಳ ಬಿರುದನಿಯ|
ಬೀತಸೊಂಪಿನ ತಳಿತ ಬೆರಗಿನ
ಪಾತಕದ ಪರುಠವದ ಮುಖದ ಮ
ಪೀತಳಾಧಿಪ ಸುಯ್ದು ನೊಂದನು ಶಿವ ಶಿವಾಯೆನುತ ||(೧೬)

ಅರಿಯೆ ನಾವಿವರೆಂದು ಮೃಗವೆಂ
ದಿರಿದೊಡಿದು ಮೊತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ|
ಸರವಿಯೇ ಹಾವಾದುದೇನೆಂ
ದರಿಯನೀ ಕೌತುಕವನುರೆ ಮೈ
ಮರೆಸಿಕೊಂದುದೆ ವಿಧಿಯೆನುತ ಹರಿತಂದನಾ ಸ್ಥಳಕೆ ||(೧೭)

ಉಗಿದು ಬಿಸುಟನು ಸರಳ ಮಗ್ಗುಲ
ಮಗುಚಿ ನೆತ್ತರ ಹೊನಲಿನೀಚೆಗೆ
ತೆಗೆದು ತೊಳೆತೊಳೆದೊರಸಿದನು ಸಗ್ಗಳೆಯ ನೀರಿನಲಿ|
ಮೃಗವಹರೆ ಮಾನಿಸರಕಟ ಪಾ
ಪಿಗಳಿಗೆತ್ತಣತಪವಿದೆತ್ತಣ
ಮೃಗ ವಿನೋದಕ್ರೀಡೆ ಕೊಂದಿರೆನುತ್ತ ಬಿಸುಸುಯ್ದ ||(೧೮)

ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕೀದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿಸುವ ಮೇಲುಸುರ|
ಎತ್ತಿ ಹಾಯ್ಕುವ ಕೊರಳ ಬಿಕ್ಕಳ
ತೆತ್ತುವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ ||(೧೯)

ಎಲವೂ ರಾಜಬ್ರುವನೆ ತನ್ನಯ
ಲಲನೆಯೊಡನಿರೆ ಕೊಂದೆ ನಿನ್ನೆಯ
ಲಲನೆಯನು ನೀ ಕೂಡಿದಾಗಲೇ ಮರಣ ನಿನಗಹುದು|
ಹಲವು ಮಾತೇಕೆನುತ ಹರಣವ
ಕಳೆದುದಾ ಮುನಿ ಮಿಥುನವವನಿಪ
ತಿಲಕ ದುಮ್ಮಾನದಲಿ ಬಂದನು ಹಸ್ತಿನಾಪುರಕೆ|| (೨೦)

ಆದ ಹದನನು ಭೀಷ್ಮ ಧೃತರಾ
ಷ್ಟ್ರಾದಿಗಳಿಗರುಹಿದರೆ ಹಯ ಮೇ
ಧಾದಿ ಯಜ್ಞದಲೀ ಮಹಾ ಪಾತಕ ವಿಘಾತಕವ||
ವೈದಿಕೋಕ್ತಿಯ ಮಂತ್ರದಲಿ ಸಂ
ಪಾದಿಸುವೆವೆನೆ ಶಿರವ ಬಿದುರಿ ಮ
ಹಾದುರಾಗ್ರಹ ಬುದ್ಧಿಯಲಿ ಹೊರವಂಟನರಮನೆಯ ||(೨೧)

ಸಕಲ ಭಂಡಾರವನು ಭೂಸುರ
ಸಿಕರದಲಿ ಚಲ್ಲಿದನು ಸುಜನ
ಪ್ರಕಾರವನು ಗಾಂಗೇಯ ಧೃತರಾಷ್ಟ್ರರಿಗೆ ಕೈಗೊಳಿಸಿ||
ಚಕಿತ ಚಿತ್ತನು ಮುನಿಹತಿಯ ಪಾ
ತಕದ ನೆತ್ತಿಯ ಸಬಳವಾವುದೊ
ಸಕಲ ಯೋಗಾವಳಿಯೊಳನುತೈದಿದನು ಕಾನನವ ||(೨೨)

ಅರಸ ಕೇಳ್ ಶತಶೃಂಗ ಶೈಲದ
ವರತಪೋಧನಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮಮುನಿವರರ||
ಹರುಷದಲಿ ಜಾಬಾಲಿ ಗಾರ್ಗ್ಯಾಂ
ಗಿರಸ ಗಾಲವ ಗೌತಮಾಧ್ಯರು
ಧರಣಿಪನ ಸಂಭಾವಿಸಿದರರ್ಘ್ಯಾಸನಾದಿಯಲಿ ||(೨೩)

ಈತನಮಲಾಷ್ಟಾಂಗಯೋಗ ವಿ
ಧೂತ ಕಿಲ್ಬಿಷನಾಗಿ ಬಳಿಕ ಮ
ಹಾ ತಪಸ್ವಿಗಳೊಳಗೆ ಸಂದನು ತೀವ್ರ ತೇಜದಲಿ||
ಆ ತಪೊನಿಷ್ಠಂಗೆ ತಾವತಿ
ಭೀತಿ ಭಕ್ತಿಯೊಳಧಿಕಶುಶ್ರೂ
ಷಾತಿಶಯದಲಿ ಮನವ ಹಿಡಿದರು ಕುಂತಿ ಮಾದ್ರಿಯರು ||(೨೪)

ಪರಮ ವ್ಯರಾಗ್ಯದಿ ನಿರಂತಃ
ಕರಣ ನಿರುಪಮ ಭಾವ ಶುದ್ಧಿಯ
ಮುರಹರ ಧ್ಯಾನೈಕ ಪೀಯೂಷಾಭಿಷೇಕದಲಿ||
ಹೊರೆದು ಹೊಂಗಿದ ನಿಷ್ಪ್ರಪಂಚೋ
ತ್ಯರದ ಸುಖದುನ್ನತಿಯಲಿದ್ದನು
ಧರಣಿಪತಿ ಮುನಿಪನ ಮಹಾಪಾತಕವ ಕೆಡೆಯೊದೆದು ||(೨೫)

ನಾರಿಯರು ಮರುಗಿದರಕಟ ಮುದಿ
ಹಾರುವನ ತನಿಬೇಂಟೆ ನಮ್ಮಯ
ಬೇರುಗೊಲೆಯಾಗಿರ್ದುದೇ ಹಾಯೆನುತ ಬುಸುಸುಯ್ದು||
ವಾರಿಜಾನನೆ ಕುಂತಿ ಮೆಲ್ಲನೆ
ಸಾರಿದಳು ನಯದಲಿ ರಹಸ್ಯದ
ಲಾರುವರಿಯದವೋಲ್ ಬಿನ್ನಹ ಮಾಡಿದಳು ಪತಿಗೆ ||(೨೬)

ಭರತ ವಂಶಕೆ ಪುತ್ರ ಶತವವ
ತರಿಸುವುದು ಗಾಂಧಾರಿ ದೇವಿಗೆ
ಮರ ಮುನೀಶ್ವರನಿತ್ತ ವರವದು ನಿಮ್ಮಡಿಗಳರಿಯೆ||
ದುರುಳ ಮುನಿಪನ ಶಾಪವೇ ಸ್ತ್ರೀ
ಪುರುಷ ಸಂಗ ವಿರೋಧ ನಮಗಿ
ನ್ನರಸ ನಾಪುತ್ರಸ್ಯಗತಿಯೆಂದಿರದೆಶ್ರುತಿವಚನ ||(೨೭)

ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು||
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮದಿಗೆ ದರ್ಭಾ
ಸರಣ ಸಮಿಧಾಧಾನವೇ ಕದೆಗೆಂದಳಾ ಕುಂತಿ ||(೨೮)

ವಜನಮುಖಿ ಕೇಳ್ ಪುತ್ರಮುಖ ದ
ರ್ಶನವು ಸುಲಭವೆ ಪುಣ್ಯಹೀನರಿ
ಗೆನಿತು ಹಲುಬಿದರೇನು ಹಂಗಿಗರಾವು ದುಷ್ಕೃತಿಗೆ||
ಮುನಿಯ ಬೇಟದ ಬೇಳುವೆಯ ಮಾ
ತಿನ ಹವಣ ನೀ ಬಲ್ಲೆ ಹೇಳಿ
ನೆನ್ನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ ||(೨೯)

ನಾರಿಯರು ಮತ್ತಲ್ಲಿ ರಾಜ ಕು
ಮಾರಿಯರು ಛಲವಾದಿಗಳು ಗಾಂ
ಧಾರಿಗಾದುದು ಪುತ್ರ ಸಂತತಿಯೆಂಬ ಭೇದದಲಿ||
ಧೀರ ಬಿನ್ನವಿಸಿದೆನು ಕಾರ್ಯದ
ಭಾರವನು ನೀ ಬಲ್ಲೆಯಿವಳು ವಿ
ಕಾರಿಯೆನ್ನದಿರೆಂದುರಾಯನ ಚರಣಕೆರೆಗಿದಳು ||(೩೦)

ಲೋಲಲೋಚನೆ ದೃಢ ಪತಿವ್ರತೆ
ಯೇಳು ದುಃಖಿಸಬೇಡ ಭೃಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ||
ಓಲಗಿಸುವುದು ದುಷ್ಕೃತಿಗೆ ನಿ
ಷ್ಪಾಳೆಯವು ಬಲಿಕಹುದು ಮಂತ್ರ ವಿ
ಶಾಲ ಬೀಜದಿಯಹುದು ಸಂತತಿ ಕಾಂತೆ ಕೇಳೆಂದ ||(೩೧)

ಭವದನುಗ್ರಹದಿಂದ ಸುತರು
ದ್ಭವಿಸಿದರೆ ಲೇಸನ್ಯಥಾ ಸಂ
ಭವಿಸಿದರೆ ದುಷ್ಕೀರ್ತಿವಧುವೆಂಜಳಿಸಲೇ ಕುಲವ||
ಅವನಿಪತಿ ಕೇಳ್ ನಹುಷ ನಳ ಪೌ
ರವ ಸುಹೋತ್ರಾದ್ಯರ ನಿಜಾತ್ಮೋ
ದ್ಭ ವರ ಪಾರಂಪರೆಗೆ ಗತಿಯೇನೆಂದಳಾ ಕುಂತಿ ||(೩೨)

ಅರಸಿ ಕೇಳ್ ತದ್ಬೀಜ ಪಾರಂ
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ||
ಪರಮ ವೈದಿಕ ಸಿದ್ಧವಿದು ಸುರ
ಸಿರುಹಮುಖಿ ನಿಶ್ಯಂಕೆಯಲಿ ನೀ
ಧರಿಸು ಮುನಿ ಮಂತ್ರೋಪದೇಶವನಿದುವೆ ನಿರ್ಧೋಷ ||(೩೩)

ಆದಡವನಿಪ ಬಿನ್ನಹವು ತನ
ಗಾದಿಯಲಿ ದೂರ್ವಾಸಮುನಿ ಕರು
ಣೋದಯಲಿತ್ತೈದು ಮಂತ್ರಾಕ್ಷರದ ವರವುಂಟು||
ನೀ ದಯಾಂಬುಧಿ ನಿನ್ನುಗ್ರಹ
ವಾದುದಾದರೆ ತದ್ವಿಧಾನದ
ಲಾದರಿಸುವೆನು ಪುತ್ರ ಕಾಮ್ಯವನೆಂದಳಾ ಕುಂತಿ ||(೩೪)

ಲೇಸನಾಡಿದೆ ಕುಂತಿ ಮುನಿಯುಪ
ದೇಶಿಸಿದನೇ ನಮ್ಮ ಭಾಗ್ಯವಿ
ದೈಸಲೇ ನೀ ದೃಢಪತಿವ್ರತೆಯನ್ನನುಜ್ಞೆಯಲಿ
ಭಾಸುರರ ನೀ ಭರತವಂಶ ವಿ
ಲಾಸರನು ಕೃತ ಶತ್ರು ಪಕ್ಷವಿ
ನಾಶರನು ಬೆಸಲಾಗು ಹೊಗೆನ್ನಾಣೆ ಹೋಗೆಂದ ||(೩೫)


ತರುಣಿ ಪಾಂಡುವಿನಾಜ್ಞೆಯನು ನಿಜ
ಶಿರದೊಳಾಂತು ಸಮಸ್ತ ಮುನಿ ಮು
ಖ್ಯರಿಗೆ ವಂದಿಸಿ ಹರಿಹರಬ್ರಹ್ಮಾದಿಗಳಿಗೆರೆಗಿ||
ಸರಸಿಯಲಿ ಮಿಂದಳು ಮುನೀಂದ್ರನ
ಪರಮ ಮಂತ್ರಾಕ್ಷರವ ತಾನು
ಚ್ಚರಿಸಿ ನೆನೆದಳು ಯಮನನಾಕ್ಷಣವಾತನೈತಂದ ||(೩೬)

ಸತಿಯ ಸಮ್ಮುಖವಾಗಿ ವೈವ
ಸ್ವತನು ನುಡಿದನಿದೇಕೆ ನಮ್ಮ
ಕ್ಷಿತಿಗೆ ಬರಿಸಿದೆಯೆನಲು ಲಜ್ಜಾವನತಮುಖಿಯಾಗಿ||
ಸುತನ ಕರುಣಿಪುದೆನಲು ಭಯ ಪರಿ
ವಿತತ ವಿಮಲಸ್ವೇದಜಲ ಕಂ
ಪಿತೆಯ ಮುಟ್ಟಿ ತಥಾಸ್ತುವೆನುತ ಕೃತಾಂತ ಬೀಳ್ಕೊಂಡ ||(೩೭)

ಧಾರುಣೀ ಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವ ಪುರ್ಣಮಾಸದಲಿ||
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದುಕುಲ ವಿ
ಸ್ತಾರಕನು ಸುಕುಮಾರನವತರಿಸಿದನು ಧರಣಿಯಲಿ ||(೩೮)

ನಿರ್ಮಲಿನವಾಯ್ತು ಖಿಲ ದಸೆ ದು
ಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್
ಧರ್ಮವೇ ಧರಣಿಯಲಿ ನೃಪ ರೂಪಾಗಿ ಜನಿಸಿತಲ||
ದುರ್ಮಹೀಶರ ಹೊತ್ತ ಭಾರದ
ಕರ್ಮ ವೇದನೆ ಧಾತ್ರಿಗಿಳಿದುದು
ಧರ್ಮವಿನ್ನೆಮಗಹುದೆನುತ ಹೆಚ್ಚಿದುದು ಮುನಿನಿಕರ ||(೩೯)

ಧರಣಿಪತಿ ಧರ್ಮಜನ ಮುಖ ಸಂ
ದರುಶನವ ಮಾಡಿದನು ಹೆಚ್ಚಿದ
ಹರುಷ ಭಾರಕೆ ಚಿತ್ತ ತಗ್ಗಿತು ಮುಗ್ಗಿ ತಡಿಗಡಿಗೆ||
ಹರಿದು ಪುತ್ರೋತ್ಸವದ ನುಡಿ ಗಜ
ಪುರದೊಳಬ್ಬರವಾಯ್ತು ಪಾಂಡು ವಿ
ನರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ ||(೪೦)

ಕೇಳಿದಳು ಗಾಂಧಾರಿ ಕುಂತಿಗೆ
ಬಾಲ ಕೇಳಿ ವಿನೋದವೇ ಕೈ
ಮೇಳವಿಸಿತೇ, ಮುನ್ನ ಹಾ ತಪ್ಪೇನು ತಪ್ಪೇನು||
ಕಾಳು ಮಾಡಿದನೆನಗೆ ಮುನಿಪತಿ
ಠೌಳಿಕಾರನಲಾ ಸುಡೀಗ
ರ್ಭಾಳಿಗಳನೆಂದಬಲೆ ಹೊಸೆದಳು ಬಸುರನೋದೆ ಮುರಿದು ||(೪೧)

ಉದುರಿದವು ಧರಣಿಯಲಿ ಬಲು ಮಾಂ
ಸದ ಸುರಕ್ತದ ಘಟ್ಟಿಗಳು ಖಂ
ಡದ ಸೂಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು||
ಕೆದರಿದಳು ವಾಮಾಂಘ್ರಿಯಲಿ ನೂ
ಕಿದಳು ಹಾಯ್ಕಿವ ಹೊರಗೆನುತ ನೋ
ಡಿದಳು ಕರೆ ಕೈನೆಯರನೆನುತ ಕಠೋರ ಕೋಪದಲಿ || (೪೨)

ತನ ತನಗೆ ನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವ ನೂರ ಹೊರಗೆಂದಾ ಮುಹೂರ್ತದಲಿ||
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಾಹಲವಿದೇನೇನೆಂದು ಬೆಸಗೊಂಡ ||(೪೩)

ಭರತ ಸಂತಾನಕೆ ಕುಮಾರರ
ಹೆರವೆ ನಾ ಮುನ್ನೆಂದು ಗರ್ಭವ
ಧರಿಸಿದೆನು ನಿಮ್ಮಡಿಯ ಕೃಪೆಯಲಿ ಮಂತ್ರಭಾವಿತವ||
ವರುಷದೆರಡಾಯ್ತಿದರ ಭಾರವ
ಧರಿಸಿದೆನು ದಾಯಾದ್ಯರೊಳಗವ
ತರಿಸಿದನು ಮಗನೆನುತ ಮುಖದಿರುಹಿದಳು ಗಾಂಧಾರಿ ||(೪೪)

ಮರುಳು ಹೆಂಗುಸಲಾ ಮಹಾತ್ಮರ
ಪರಿಯ ನೀನೆಂತರಿವೆ ಗರ್ಭೋ
ತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ ಮುನಿ ಮುಳಿದು||
ತರಿಸಿದನು ಘೃತಪೂರಿತದ ಕೊ
ಪ್ಪರಿಗೆಗಳ ನೊಂದೊಂದನೊಂದರೊ
ಳಿರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ||(೪೫)

ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡೆಂದು||
ಕುಂತುಪಿತ ಸಂನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ ||(೪೬)

ನಿಯಮದಲಿ ಕಾಮಿನಿ ಸರೋವಾ
ರಿಯಲಿ ಬಿಂದಲೂ ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈ ಮುಗಿದು||
ಬಯಸಿದಳು ವಾಯುವನು ನಿಜ ಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುದಿಸಿದನೆಮ್ಮ ಬರಿಸಿದ ಹದನದೇನೆಂದು ||(೪೭)

ಬರಿಸಿದುದು ಬೇರೇನು ಸುತನನು
ಕರುಣಿಸುವುದೈಸಲೆಯೆನಲು ಸಂ
ಸ್ಪರುಶನದಿ ಭವದಿಷ್ವಮಸ್ತು ಯೆನುತ್ತಲಂಬರಕೆ||
ಮರಳಿದನು ಪವಮಾನನೀ ಪಂ
ಕರುಹಮುಖಿ ಬೆಸಲಾದಳೊಂದೇ
ವರುಷ ಗರ್ಭವ ಧರಿಸಿ ಪರಬಲ ಕಾಲ ಭೈರವನ ||(೪೮)

ಅವನಿಸುತವಾರ ತ್ರಯೋದಶಿ
ದಿವದ ಮಧ್ಯದೊಳರ್ಕ ನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ||
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭಿಮಸೇನನ ಜನನದದ್ಭುತವ ||(೪೯)

ಭೀಮನುದಯಿಸಿದಿರುಳು ರಾಯ ಪಿ
ತಾಮಹನು ಜನಿಸಿದನೆಲೈ ನಿ
ಮ್ಮಾ ಮಹಾತ್ಮನ ಹುಟ್ಟು ಬೆದರಿಸಿತಖಿಳಜನಮನವ||
ಭೂಮಿ ನಡುಗಿತು ದೆಸೆಗೆ ಹರಿದವು
ಧೂಮಕೇತುಗಳೊದರಿದವು ಬಳಿ
ಕಾ ಮಹಾನಗರದಲಿ ಭರದಲಿ ಭೂರಿ ಗೋಮಾಯು ||(೫೦)

ಕರೆಸಿದನು ಧೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸುಮನಂತರದಲುತ್ಪಾತ ಫಲಗತಿಯ||
ಭರತ ವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು ||(೫೧)

ಕುಲಕೆ ಕಂಟಕನಾದಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು||
ಇಳೆಯನಖಿಳವ ಬಿಸುಡುವುದು ತ
ನ್ನುಳಿವ ಮಾಡುವುದೆಂಬ ವಚನವ
ತಿಳಿವುದೀತನ ಬಿಸುಟು ಕಳೆ ನೀನೆಂದನಾ ವಿದುರ ||(೫೨)

ಸುತನ ಮೋಹದ ತಿಮಿರವಾ ದು
ಸ್ಥಿತಿಯನೀಕ್ಷಿಸಲೀ ವುದೇ ದು
ರ್ಮತಿಯೊಳೀತನ ಬಿಸುಡಲೀಸಿದುದಿಲ್ಲ ಗಾಂಧಾರಿ||
ಸುತನಿರೀಕ್ಷಣ ಜಾತಕರ್ಮೋ
ಚಿತದ ದಾನಂಗಳಲಿ ಭೂಸುರ
ತತಿಯ ದಣಿಸಿದನನಿಬರಿಗೆ ಗುಣನಾಮಕರಣಲಿ ||(೫೩)

ಜನಪ ದುರ್ಯೋಧನನು ದುಶ್ಯಾ
ಸನ ವಿಕರ್ಣ ಸುಬಾಹು ದುಸ್ಸಹ
ಕನಕವರ್ಣ ಸುಷೇಣ ದೀರ್ಘೋದರ ಮಹೋದರನು||
ಜನವಿಜಯ ಜಲಸಂಧ ದೃಢವಾ
ಹನ ವಿವಂ(ವಿಂ)ಶತಿ ಕುಂಡಧಾರಕ
ನೆನಲು ನೂರ್ವರ ನಾಮಕರಣವನರಸ ಮಾಡಿಸಿದ ||(೫೪)

ಜನಪತಿಗೆ ಬಳಿಕೊಬ್ಬ ವೇಶ್ಯಾಂ
ಗನೆಯ ಸುತನು ಯುಯುತ್ಸು ನೂರೊಂ
ದೆನಿಸಿತರಸು ಕುಮಾರಕರು ಗಾಂಧಾರಿಯುದರದಲಿ||
ಜನಿಸಿದರು ನೂರೊಂದು ನೂರ್ವರಿ
ಗನುಜೆ ದುಸ್ಸಳೆಯಾದಳಾ ವರ
ಮಾನಿನಿ ಜಯದ್ರಥನರಸಿಯಾದಳು ರಾಯ ಕೇಳೆಂದ ||(೫೫)

ಅತ್ತಲಾ ಹದನಾಯ್ತು ಬಳಿಕಿನ
ಲಿತ್ತ ಧರ್ಮಜ ಭೀಮಸೇನರ
ಹೆತ್ತ ಹರುಷದೊಳಿವರು ಮೆರೆದರು ಪಾಂಡು ಕುಂತಿಯರು||
ಮತ್ತೆ ಕೇಳದ್ಭುತವನುರೆ ಮೊರೆ
ವುತ್ತ ಹೆಬ್ಬುಲಿ ವರ ತಪೋಧನ
ರತ್ತ ಲೈತರೆ ಪಾಂಡು ಕೆಡಹಿದನಾ ಮೃಗಾಂತಕನ ||(೫೬)

ಆ ಮಹಾ ರಭಸಕ್ಕೆ ಮುನಿಪ
ಸ್ತೋಮವಂಜಿತು ಪರ್ವತಾಗ್ರದ
ಲಾ ಮಹೀಪತಿಯರಸಿ ನಡುಗಿದಳಹಹ ಶಿವಯೆನುತ||
ಭೀಮ ಬಿದ್ದನು ತೊಡೆಯ ಮೇಲಿಂ
ದೀ ಮಹಿಗೆ ತಚ್ಚೈಲ ಶಿಲೆ ನಿ
ರ್ನಾಮವಾದುದು ಹಸುಳೆ ಹೊರಳಿದು ಬಿದ್ದ ಭಾರದಲಿ ||(೫೭)

ಶಿಶುವ ತೂಪಿರಿದಳು ನಿವಾಳಿಸಿ
ಬಿಸುಟು ರಜವನು ಮಂತ್ರ ರಕ್ಷಾ
ಪ್ರಸರವನು ಮುನಿಗಳಲಿ ಮಾಡಿಸಿದಳು ಕುಮಾರಂಗೆ||
ವಸುಧೆಗತಿ ಬಲನೊಬ್ಬ ಕಂದನ
ಬೆಸಲಹೆನುಯೆಂದೆನುತ ಸಾರಸ
ಲಸಿತ ಕಮಲಾಕರದ ತೀರಕೆ ಬಂದಳಾ ಕುಂತಿ ||(೫೮)

ಮಿಂದು ಕಡು ಸುಚಿಯಾಗಿ ಸುಮನೋ
ವೃಂದದೊಳಗಾರೈದು ನೋಡಿ ಪು
ರಂದರನ ನೆನೆದಳು ಮುನೀಂದ್ರನ ಮಂತ್ರ ಶಕ್ತಿಯಲಿ||
ಬಂದನಲ್ಲಿಗೆ ಬಯಕೆಯೇನರ
ವಿಂದಲೋಚನೆ ಹೇಳೆನಲು ಪೂ
ರ್ಣೀಂದುಮುಖಿ ತಲೆವಾಗಿದಳು ಲಜ್ಜಾನುಭಾವದಲಿ ||(೫೯)

ಸುತನ ನಿತ್ತೆನು ನಿನಗೆ ಲೋಕ
ತ್ರಿತಯದಲಿ ಬಲುಗೈ ಕಣಾ ಪಶು
ಪತಿಗೆ ಪುರುಷೋತ್ತ ಮಗೆ ಸರಿಮಿಗಿಲೆಂಬ ಸಂದೇಹ||
ಶತಭವಾಂತರ ಪುಣ್ಯತರು ಕಾ
ಮಿತವ ಫಲಿಸಿತು ಹೋಗೆನುತ ಸುರ
ಪತಿ ಲತಾಂಗಿಗೆ ವರವನಿತ್ತಡರಿದನು ಗಗನವನು ||(೬೦)

ತೀವಿದವು ನವಮಾಸ ವಿಮಲ ವಿ
ಭಾವಿಸುವಿನುದಯದಲಿ ಶುಭ ಲ
ಗ್ನಾ ವಲಂಬನ ತಾರೆಯುತ್ತರೆ ಫಲುಗುಣೌAಹ್ವಯದ|
ಜೀವಕೆಂದ್ರ ಸ್ಥಿತಿ ದಶಾ ದಿ
ಗ್ಭಾವಿತ ಗ್ರಹರಾಶಿಯಿರೆ ಗಾಂ
ಡೀವಿ ಜನಿಸಿದನೊಡನೆ ಜನಿಸಿತು ಜನದ ಸುಮ್ಮಾನ ||(೬೧)

ದೇವ ದುಂದುಭಿ ಮೊಳಗಿದವು ಕುಸು
ಮಾವಳಿಯ ಮಳೆ ಸುರಿದುದಾಡುವ
ದೇವ ವಧುಗಳ ಹೊಳೆವ ಕಂಗಳ ಢಾಳ ಮಿಂಚಿದವು|
ತೀವಿದುತ್ಸಹವುಬ್ಬರಿಸೆ ಭುವ
ನಾವಳಿಯೊಳಿಂದ್ರಾದಿ ನಿಖಿಳ ಸು
ರಾವಳಿಗಳುರೆ ಕೊ*ಡೆ ಕೊಂಡಾಡಿತು ಧನಂಜಯನ || (೬೨)

ರಣಭಯಂಕರನರ್ಜುನನು ಧಾ
ರುಣಿಯೊಳುದಿಸದ ಮುನ್ನ ತಿಂಗಳ
ನೆಣಿಸಿದರೆ ಮುUರಾಯ್ತು ಮಧುರೆಯ ರಾಜಭವನದಲಿ|
ಗುಣರಹಿತನಚ್ಯುತನು ವರ ಶ್ರಾ
ವಣ ಬಹುಳದಷ್ಟಮಿಯಿರುಳು ರೋ
ಹಿಣಿಯಲವತರಿಸಿದನಲೈ ದೇವಕಿಯ ಜಠದಲಿ || (೬೩)

ಈತ ನರಋಷಿ ನಿಖಿಳ ಭುವನ
ಖ್ಯಾತ ನಾರಾಯಣನಲೈ ಬಳಿ
ಕಾತನುರ್ವೀಭಾರ ಸಂಹರಂದ ವಿನೋದದಲಿ|
ಭೂತಪತಿ ಮೊದಲಾದ ದಿವಿಜ
ವ್ರಾತವೇ ನರ ರೂಪದಲಿ ಸಂ
ಭೂತವಾದುದು ಕೇಳುನೃಪ ಕೃಷ್ಣಾವತಾರದಲಿ || (೬೪)

ಸಾಕು ಮೂವರು ಸುತರು ತನಗೆಂ
ದೀಕೆ ಮಾದ್ರೀ ದೇವಿಗಗ್ಗದ
ಶೋಕಿತೆಗೆ ಮಂತ್ರೋಪದೇಶ ವಿಧಾನವನು ಕಲಿಸಿ|
ನಾಕ ನಿಲಯರ ವೊಲಿಸೆನಲು ಬಂ
ದಾಕೆ ಕೃತನಿಯಮದಲಿ ನೆನೆದಳು
ಲೋಕ ವಿಶ್ರುತ ರಾಶ್ವಿನೀ ದೇವರನು ಹರ್ಷದಲಿ || (೬೫)

ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ|
ಒಂದು ವರುಷಕೆ ಕಿರಿಯರರ್ಜುನ
ಗಿಂದ ಬಲಿಕವತರಿಸಿದರು ಮುನಿ
ವೃಂದ ನೆರೆಪತಿಕರಿಸಿ ಕೊಂಡಾಡಿತು ಕುಮಾರಕರ ||(೬೬)

 ಕರಿ ತುರಗ ನಿಕರವನು ಕುಲ ಭೃ
ತ್ಯರ ವಿಲಾಸಿನಿಯರನು ರತ್ನಾ
ಭರಣ ವಸನ ಹಿರಣ್ಯ ಗೋ ಮಹಿಷಾದಿ ವಸ್ತುಗಳ |
ತರಿಸಿದನು ಕಶ್ಯಪನು ಯದು ರಾ
ಯರ ಪುರೋಹಿತನಲ್ಲಿ ಗಾತನ
ಪರುಠವಿಸಿ ಕಳುಹಿದನು ಪಾಂಡುನೃಪಂಗೆ ವಸುದೇವ || (೬೭)

ಬಂದನಾ ಕಶ್ಯಪನು ಕುಂತೀ
ನಂದನರ ಕಂಡಖಿಳ ವಸ್ತು ವ
ನಂದು ಕಾಣಿಕೆಯಿತ್ತು ಕಂಡನು ಪಾಂಡುಭೂಪತಿಯ
ಅಂದು ವಸುದೇವಾದಿ ಯಾದವ
ವೃಂದ ರೋಹಿಣಿ ದೇವಕಿಯರಾ
ನಂದ ಸುಕ್ಷೇಮವನು ಕುಶಲವನರಸ ಬೆಸಗೊಂಡ || (೬೮)

 ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಷ್ಯಪನೊಳಾಲೋಚಿಸಿ ಮಹೀಪಾಲ ||
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲ ಕ್ರಿಯೆಗಳನು ಗಾ
ರ್ಗ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ || (೬೯)

ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ |
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಬೇಧರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ||(೭೦)

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು[ಸಂಪಾದಿಸಿ]

ಪರ್ವಗಳು: ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ