ಆದಿಪರ್ವ: ೧೬. ಹದಿನಾರನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಆದಿಪರ್ವ – ಹದಿನಾರನೆಯ ಸಂಧಿ[ಸಂಪಾದಿಸಿ]

ಸೂ. ವಿಮಲಮುನಿ ಪಾಂಚಾಲ ಚಿತ್ರ
ಭ್ರಮೆಯನಪಹರಿಸಿದನು ದ್ರೌಪದಿ
ರಮಣಿಯಾದಳು ಹರನ ವರದಲಿ ಪಾಂಡು ತನಯರಿಗೆ

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವನೃಪತಿ ಪಯಣದ
ಮೇಲೆ ಪಯಣದಲೈದಿ ಹೊಕ್ಕನು ಹಸ್ತಿನಾಪುರವ
ಹೇಳಲೇನುಳಿದಖಿಳ ಧರಣೀ
ಪಾಲಕರ ದುಮ್ಮಾನವನು ಪಾಂ
ಚಾಲ ದೇಶವ ಕಳೆದು ಹೊಕ್ಕರು ತಮ್ಮ ನಗರಿಗಳ ೧

ಭೀತಿ ಹರಿದುದು ರಾಯದಳ ಸಂ
ಘಾತ ಸರಿದುದು ಮತ್ತೆ ಸುಜನ
ವ್ರಾತ ನೆರೆದುದು ಮೆರೆದುದವನೀ ದೇವರಗ್ಗಳಿಕೆ
ವಾತಜನು ಮರಗೊಂಬಿನಲಿ ಮಾ
ರಾತನನು ಮನ್ನಿಸಿ ಕುಲಾಲ ನಿ
ಕೇತನಕೆ ಬಂದೆರಗಿದನು ಧರ್ಮಜನ ಚರಣದಲಿ ೨

ಇತ್ತಲರ್ಜುನನಿನಸುತನ ಬೆಂ
ಬತ್ತಿ ಮರಳಿದನವನಿಪಾಲರ
ಮುತ್ತಿಗೆಯ ತೆಗೆಸಿದನು ಜಯಲಕ್ಷ್ಮಿಯ ಕಟಾಕ್ಷದಲಿ
ಮತ್ತ ರಾಯರ ಬೆನ್ನಕಪ್ಪವ
ನೆತ್ತಿದುತ್ಸಹ ವದನದಲಿ ಹೊಗ
ರೆತ್ತಿದಕ್ಷಿಯ ಹೊಳಹಿನಲಿ ಹೊಕ್ಕನು ನೃಪಾಲಯವ ೩

ಈತನುದಯದೊಳಿಂದು ಭೂಸುರ
ಜಾತಿಗಾಯ್ತಗ್ಗಳಿಕೆ ಪಾರ್ಥಿವ
ರಾತರಿಂದುಬ್ಬಟೆಯ ಧನುವಿಂದಿವನ ವಶವಾಯ್ತು
ಸೋತು ತೆಗೆದ ಮಹೀಶ್ವರರ ಮಾ
ತೇತಕದು ಮಝ ಪೂತೆನುತ ಜನ
ವೀತನನು ಕೊಂಡಾಡುತಿರ್ದದು ನೆರವಿ ನೆರವಿಯಲಿ ೪

ಬಂದನೀತನು ಗತಿಯ ಗರುವಿಕೆ
ಯಿಂದ ತರುಣಿಯ ಹೊರೆಗೆ ಬಾ ನೀ
ನೆಂದು ಕರೆದನು ಸತಿಸಹಿತ ತಿರುಗಿದನು ವಹಿಲದಲಿ
ಇಂದುಮುಖಿಯನು ಕುಂಭಕಾರನ
ಮಂದಿರದ ಹೊರಗಿರಿಸಿ ಫಲುಗುಣ
ಬಂದು ಮೈಯಿಕ್ಕಿದನು ಕುಂತಿಯ ಚರಣಕಮಲದಲಿ ೫

ತಾಯೆ ಬಿನ್ನಹವಿಂದು ಧರಣೀ
ರಾಯರೆಲ್ಲರ ಗೆಲಿದು ತಂದೆನು
ನಾಯಕವನನುಪಮಿತ ಮೌಲ್ಯವನಮಲ ಮೌಕ್ತಿಕವ
ತಾಯೆ ಚಿತ್ತೈಸಿದಿರೆಯೆನೆ ಕಡೆ
ವಾಯಿದಳು ತನಿ ಹರುಷದಲಿ ಲೇ
ಸಾಯಿತೈವರು ಕೂಡಿ ಭೋಗಿಪುದೆಂದಳಾ ಕುಂತಿ ೬

ಎನೆ ಹಸಾದವೆನುತ್ತ ಕಮಲಾ
ನನೆಯ ಹೊಡವಂಡಿಸಿದನವ್ವೆಗೆ
ತನುಜ ನೀ ತಂದಮಲಮೌಕ್ತಿಕವಿದೆಯೊ ಶಿವಯೆನುತ
ತನಗೆ ನುಡಿ ತೊದಲಿಸಿತಲಾ ನೀ
ವಿನಿಬರುಪಭೋಗಿಸುವುದೆಂದೆನು
ವನಿತೆಯೈವರಿಗರಸಿಯೇ ಲೇಸೆಂದಳಾ ಕುಂತಿ ೭

ಜನನಿ ತಪ್ಪದು ನಿಮ್ಮ ನುಡಿಯಿ
ವನಜಮುಖಿಯೆಮ್ಮೈವರಿಗೆ ಸತಿ
ವಿನುತಗುರುವಚನಾಂಬುನಿಧಿ ಮಕ್ಕಳಿಗಲಂಘ್ಯವಲೆ
ಎನೆ ಯುಧಿಷ್ಠಿರ ನೃಪತಿ ಪಾರ್ಥನ
ಕನಲಿದನು ಕಲಿ ಭೀಮನಲ್ಲೆಂ
ದನು ನಕುಲ ಸಹದೇವರನುಚಿತವೆಂದರರ್ಜುನಗೆ ೮

ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರೈ ಸಲೆ ಹೇಳ್ಪುದಾವುದು
ನಿಲ್ಲಿ ನೀವ್ ಸಹದೇವ ನಕುಲರು ನಿಮಗೆ ಮಾತೇಕೆ
ಬಲ್ಲಿರಖಿಳಾಮ್ನಾಯ ಭಾಷಿತ
ದಲ್ಲಿ ನೋಡಲು ಧರ್ಮಶಾಸ್ತ್ರದೊ
ಳೆಲ್ಲ ತಾಯಿಂದಧಿಕ ಗುರುವಿಲ್ಲೆಂದನಾ ಪಾರ್ಥ ೯

ಮಾತೃವಚನವಲಂಘ್ಯವಿದು ವಿ
ಖ್ಯಾತ ಪದ್ಧತಿ ಲೋಕ ಯಾತ್ರಾ
ಭೀತಿಯಲಿ ಭಯವೇಕೆ ಧರ‍್ಮ ರಹಸ್ಯನಿಷ್ಠರಿಗೆ
ಏತಕೀ ಲೋಕಾನುಸರಣೆ ವಿ
ಧೂತ ಕಿಲ್ಬಿಷವಾವುದದು ಧ
ರ್ಮಾತಿಶಯವಿಹಪರಕೆ ಕಡುಹಿತವೆಂದನಾ ಪಾರ್ಥ ೧೦

ರಾಗ ಲೋಭವ್ಯಾಪ್ತಿಯಲಿ ನೀ
ವೀ ಗುರುವಿಗಳುಪುವರೆ ಸಲೆಧ
ರ‍್ಮಾಗಮವನಾಚರಿಸುವದಲೇ ನಮ್ಮ ನುಷ್ಠಾನ
ಈಗಳೀ ಗುರುವಚನ ಧರ್ಮ
ತ್ಯಾಗವೇನಿದು ಧರ್ಮವೇ ಉಪ
ಭೋಗವೈವರಿಗೆಂದು ತಿಳುಹಿದನವರನಾ ಪಾರ್ಥ ೧೧

ಮಾಡದಿರಿ ಸಂದೇಹಗಳ ಖಯ
ಖೋಡಿಯಿದರೊಳಗಿಲ್ಲ ಧರ್ಮದ
ಮೂಡಿಗೆಯೊಳಂಬಿರಲಿ ಬಹಿರಂಗದಲಿ ಬಳಸದಿರಿ
ಗೂಡು ಹಲವಿಹ ಪಕ್ಷಿಯೊಂದಿದ
ನಾಡಬಾರದು ಸಾಕು ಚಿಂತಿಸ
ಬೇಡಿ ನೀವೆಂದನಿಬರನು ತಿಳುಹಿದನು ಕಲಿಪಾರ್ಥ ೧೨

ಅದುದನುಮತ ತಮ್ಮೊಳಗೆ ತ
ತ್ಸೋದರರು ಸೌಹಾರ್ದದಿಂದ ತ
ಳೋದರಿಯನೊಲಿದೈವರಂಗೀಕರಿಸಿದರು ಬಳಿಕ
ಆದರಣೆಯಲಿ ಕುಂತಿ ಸೊಸೆಗೆ ವೃ
ಕೋದರನ ಭಿಕ್ಷಾನ್ನ ಭಾಗದ
ಭೇದವನು ತಿಳುಹಿದಳು ತೊಡೆಯಲಿ ತೆಗೆದು ಕುಳ್ಳಿರಿಸಿ ೧೩

ಇಳಿದನಸ್ತಾಚಲಕೆ ರವಿ ನೃಪ
ತಿಲಕರೈವರು ವಿಹಿತಕೃತ್ಯಾ
ವಳಿಗಳನು ವಿಸ್ತರಿಸಿ ಕುಂತಿಯ ಚರಣಕಭಿನಮಿಸಿ
ಜಲರುಹಾಕ್ಷನ ನಾಮಕೀರ್ತನ
ಲುಳಿತ ಪರಮಾನಂದರಸದಲಿ
ಮುಳುಗಿ ಮೂಡುತ್ತಿರ್ದರಂದು ಕುಲಾಲ ಭವನದಲಿ ೧೪

ಸಿಲುಕಿದುದು ಜನದೃಷ್ಟಿ ಬಲುಗ
ತ್ತಲೆಯ ಬಂಧದೊಳಂಧಕಾರದ
ಜಲಧಿಯಲಿ ಜಗವದ್ದುದೇನೆಂಬೆನು ಮಹಾದ್ಭುತವ
ನಳಿನಮಿತ್ರನ ಬೇಹುಕಾರರ
ಸುಳಿವೊ ತಿಮಿರದ ಪಾಳೆಯದೊಳೆನೆ
ನಿಳಯದ ಸೊಡರು ತಳಿತುದು ಕೂಡೆ ನಗರಿಯಲಿ ೧೫

ಇವರಿಗುಂಟೇ ದೀಪ ತೈಲ
ದ್ರವಿಣವಿಲ್ಲ ಕುಲಾಲ ಭವನಕೆ
ಕವಿವ ಕಗ್ಗತ್ತಲೆಯ ನುಗ್ಗೊತ್ತಿದುದು ಬೇರೊಂದು
ನವ ಯುವತಿಯಾಭರಣ ಮಣಿರುಚಿ
ನಿವಹವಾಕೆಯ ನಯನಕಾಂತಿಗ
ಳವನಿಪತಿ ಕೇಳ್ ನಿನ್ನ ಪಿತನ ಪಿತಾಮಹರ ಪರಿಯ ೧೬

ಜನಪ ನಂದನೆಗೊಂದು ಕೃಷ್ಣಾ
ಜಿನವನಿತ್ತರು ಶಯನ ಭಾಗಕೆ
ಜನನಿಯಂಘ್ರಿಯ ಬಳಿಯಲೊರಗಿದರೈವರೊಂದಾಗಿ
ವನಿತೆಯವರಂಘ್ರಿಗಳ ತಲೆಗಿಂ
ಬಿನಲಿ ಮಲಗಿದಳಂದಿನಾಹವ
ಜನಿತ ಕೃತಿಯನು ನುಡಿವುತಿರ್ದನು ಪಾರ್ಥನರಸಂಗೆ ೧೭

ಗೆಲಿದ ಪರಿಯನು ಕೌರವೇಂದ್ರನ
ದಳವ ಮುರಿದಂದವನು ಕರ್ಣನ
ನಳುಕದೆಚ್ಚ ಶರಪ್ರಯೋಗದ ಚಾಪ ಕೌಶಲವ
ಬಲಜಲಧಿ ಮುಕ್ಕುರಿಕಿದರೆ ಮಂ
ಡಲಿಸಿ ಮೊಗದಂದವನು ಶಸ್ತ್ರಾ
ವಳಿಯ ಸಂಹರಣವನು ವಿವರಿಸಿದನು ಮಹೀಪತಿಗೆ ೧೮

ಕುದುರೆಯೇರಾಟವನು ಮಾತಂ
ಗದ ಸುಶಿಕ್ಷಾಭೇದವನು ರಥ
ವಿದಿತ ಕೌಶಲವನು ಶರಾಸನವೇದಸಂಗತಿಯ
ಮದವದರಿ ಭಂಜನವ ದಿವ್ಯಾ
ಸ್ತ್ರದಲಿ ಮುಕ್ತಾಮುಕ್ತ ಸಮರಂ
ಗದ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ ೧೯

ಆಯುಧದ ಲಕ್ಷಣವನಾ ದಿ
ವ್ಯಾಯುಧದ ಮಂತ್ರಪ್ರಭಾವವ
ನಾಯುಧದ ವಿವಿಧ ಪ್ರಯೋಗವನದರ ಪರಿವಿಡಿಯ
ರಾಯರಂಗದ ಶಕ್ತಿವರ್ಗದು
ಪಾಯಗುಣ ವಿಕ್ರಮ ಪರಾಕ್ರಮ
ನಾಯಕರ ಗುಣಕಥನದಲಿ ನೂಕಿದರು ಯಾಮಿನಿಯ ೨೦

ಮುನಿವಳೀ ಸತಿಯೆಂದು ನಿದ್ರಾಂ
ಗನೆಯ ನೂಕಿದರವನಿಪರು ಭಾ
ಮಿನಿ ಸಹಿತಲಿರಲಿತ್ತಲೀ ಪಾಂಚಾಲ ಭೂಪತಿಯ
ತನುಜನಿವರ ಪರೀಕ್ಷೆಗೋಸುಗ
ಮುನಿಪ ಕಾಶ್ಯಪಗೂಡಿ ಕೇಳಿದ
ನನಿತು ಮಾತೆಲ್ಲವನು ಮರೆಯಲಿ ನಿಂದು ರಜನಿಯಲಿ ೨೧

ಬಂದು ಧೃಷ್ಟದ್ಯುಮ್ನನಯ್ಯಂ
ಗೆಂದನಿನನಸ್ತಮಯ ಸಂಧ್ಯಾ
ವಂದನೆಯ ತರುವಾಯ ಶಸ್ತ್ರಾಸ್ತ್ರಪ್ರಸಂಗದಲಿ
ಸಂದ ಗಜ ಹಯ ರಥದ ಪರಿವಿಡಿ
ಯಿಂದವರು ನೃಪನೀತಿ ಸಂಗತಿ
ಯಿಂದ ರಾತ್ರಿಯ ಕಳೆದರಾರೆಂದರಿಯೆ ನಾನೆಂದ ೨೨

ಧರಣಿಪತಿ ಕೇಳ್ ವಿಪ್ರರಾದರೆ
ಸರಸನವ ಭೋಜನದ ಕಥೆ ಮೇಣ್
ನಿರತಿಶಯವೇದಾಂಗವೇದ ತದರ್ಥ ತರ್ಕಗಳು
ಅರಸುಗಳಿಗಾಯುಧದ ಗಜ ರಥ
ತುರಗದೇರಾಟದ ಮಹಾಸ್ತ್ರದ
ವಿರಚನೆಗಳಿವು ಜಾತಿವಿದ್ಯಗಳೆಂದನಾ ಮುನಿಪ ೨೩

ಭೂರಿ ಧನವರ್ಧನ ಸದಾವ್ಯವ
ಹಾರ ಲಾಭಾಲಾಭ ಚಿಂತೆಗೆ
ಳೂರುಜನಿತರಿಗಂತ್ಯವರ್ಣಕೆ ಕೃಷಿಯ ಮಾತುಗಳು
ಆರನಾದರು ಜಾತಿಧರ್ಮದ
ಸೇರುವೆಗಳೇ ಹೇಳುವುವು ನ
ಮ್ಮಾರಯಿಕೆಗಿವರಿಂದು ಕ್ಷತ್ರಿಯರೆಂದು ಮುನಿ ನುಡಿದ ೨೪

ಇವರು ಪಾರ್ಥಿವರೊಳಗೆ ಕೇಳ್ ಪಾಂ
ಡವರು ನಿಸ್ಸಂದೇಹವೆಂದೇ
ನಿವಗೆ ನಾವೆನ್ನೆವೆ ವಿವಾಹದ ಪೂರ್ವಕಾಲದಲಿ
ಅವರನುಪಚರಿಸೇಳು ರಚಿಸು
ತ್ಸವವನಾಯ್ತಿದೆ ಪೂರ್ವಗಿರಿಯಲಿ
ರವಿಯುದಯವೆಂದಾ ಪುರೋಹಿತ ತಿಳುಹಿದನು ನೃಪನ ೨೫

ಒಸಗೆಯಾಯಿತು ಮತ್ತೆ ಗುಡಿಯೆ
ತ್ತಿಸಿತು ನಗರಿಯೊಳಧಿಕ ಹರುಷ
ಪ್ರಸರದಲಿ ರೋಮಾಳಿ ಪಲ್ಲವಿಸಿದುದು ನರಪತಿಯ
ಬಿಸಜಬಂಧುವಿನುದಯದಲಿ ನೃಪ
ವಿಸರಸಹಿತ ಕುಲಾಲಭವನದ
ವಸುಮತೀವಲ್ಲಭರ ಕಂಡನು ಬಂದು ಪಾಂಚಾಲ ೨೬

ಏಳಿ ಬಿಜಯಂಗೈವುದೆಂದು ನೃ
ಪಾಲಕರನುಚಿತದಲಿ ನಿಜ ರಾ
ಜಾಲಯಕೆ ತಂದನು ನಿರೀಕ್ಷಿಸುತನಿಬರಿಂಗಿತವ
ಮೇಲು ಮೊಗದ ಗಭೀರಗತಿಯ ಛ
ಡಾಳವನು ಕಂಡಿವರು ರಾಯರ
ಪೀಳಿಗೆಗಳಹುದೆಂದು ನಿಶ್ಬೈಸಿದನು ಮನದೊಳಗೆ ೨೭

ಮುದದಿ ಮಂಗಳ ಮಜ್ಜನವ ಮಾ
ಡಿದರು ದಿವ್ಯಾಂಬರವನುಟ್ಟರು
ಸುದತಿಯರ ಹರಿವಾಣದಾರತಿಗಳನು ಕೈಗೊಳುತ
ಪದಕ ಕರ್ಣಾಭರಣ ಹಾರಾಂ
ಗದದಿನೊಪ್ಪಂಬಡೆದಿವರು ಪೂ
ಸಿದರು ಸಾದು ಜವಾಜಿ ಕತ್ತುರಿ ಯಕ್ಷಕರ್ದಮವ

ಬಾಸಿಗದ ನೊಸಲಿನಲಿ ಮೆರೆವ ಮ
ಹೀಶರೈವರು ಮಂಟಪದ ನೆಲ
ವಾಸಿನಲಿ ಕುಳ್ಳಿರ್ದರನುಪಮ ರಾಜತೇಜದಲಿ
ಆ ಸೊಸೆಯ ಸಂಗಾತ ಕುಂತಿ ವಿ
ಲಾಸದಲಿ ಕುಳ್ಳಿರ್ದಳಾ ವಿ
ನ್ಯಾಸವನು ಜನ ನೋಡುತಿರ್ದುದು ಬಿಗಿದ ಬೆರಗಿನಲಿ ೨೯

ಜಲವನಂಜುಳಿಯಿಂದ ದ್ರುಪದನು
ಸೆಳೆದು ಮೆರೆದವ ಬರಲಿ ಯಂತ್ರವ
ಗೆಲಿದ ಗರುವನು ನಿಮ್ಮ ಪಂಚಕರೊಳಗೆಯೆನೆ ನಗುತ
ಇಳಿದನವನಿಪ ಭೀಮನೊಯ್ಯನೆ
ಸುಳಿದನರ್ಜುನ ಹಿಂದೆ ಯಮಳರು
ನಳಿನವದನೆಯ ಹೊರೆಗೆ ಬಂದರು ಭೂಪ ಕೇಳೆಂದ ೩೦

ಬಿಸುಟನಂಜುಳಿಯುದಕವನು ನಿ
ಪ್ಪಸರದಲಿ ಬೆರಗಾಗಿ ಭೂಪರ
ಮುಸುಡನೆವೆಯಿಕ್ಕದೆ ನಿರೀಕ್ಷಿಸುತೆಂದನಾ ದ್ರುಪದ
ಅಸುರರೋ ಸುರರೋ ಭುಜಂಗರೊ
ವಸುಮತೀಶರೊ ನೀವು ದಿಟ ಮಾ
ನಿಸರ ಪರುಠವವಲ್ಲ ನೀವಾರೆಂದು ಬೆಸಗೊಂಡ ೩೧

ಈತನಗ್ಗದ ಭೀಮನರ್ಜುನ
ನೀತನಿವರೈ ಯಮಳರೆಂಬವ
ರೀತಗಳು ನಮ್ಮಿಂದ ಕಿರಿಯರು ನಾವು ಪಾಂಡವರು
ಮಾತೆಯೆಮ್ಮೈವರಿಗೆ ಜಗ ವಿ
ಖ್ಯಾತೆ ಕುಂತೀದೇವಿ ತಾನಿಂ
ದೀ ತಳೋದರಿಯಾದಳೆಮ್ಮೈವರಿಗೆ ವಧುವೆಂದ ೩೨

ಕೊಂಡು ಹರಿದುದು ಹರುಷವಾ ಬ್ರ
ಹ್ಮಾಂಡದಗ್ರಕೆ ಮಗಳಿಗೈವರು
ಗಂಡರೆನೆ ಮಗುಳದ್ದು ದಾತನ ಮನ ರಸಾತಳಕೆ
ಕಂಡು ಬಲ್ಲರೆ ಕಂಗಳಲಿ ಕಿವಿ
ಕೊಂಡು ಕೇಳ್ದಿರೆ ಮುನ್ನ ನಮಗೀ
ಭಂಡತನವನು ಮಾಡುವರೆ ನೀವೆಂದನಾದ್ರುಪದ ೩೩

ಲೋಕಸಂಮತವಲ್ಲ ಶಾಸ್ತ್ರ
ನೀಕದಭಿಮತವಲ್ಲ ಕಾಪಥ
ವೇಕೆ ನಿಮಗಿದು ಪಾಂಡುಪುತ್ರರು ನೀವು ಧಾರ್ಮಿಕರು
ಪ್ರಾಕೃತರೆ ನೀವಕಟ ನಿಮ್ಮ ವಿ
ವೇಕವೇನಾಯ್ತಿಲ್ಲಿ ಇಹ ಪರ
ಲೋಕಕಿದು ಸಾಧನವೆಯೆಂದನು ದ್ರುಪದ ಭೂಪಾಲ ೩೪

ಕಾಮ ಮೋಹಿತರಲ್ಲ ವಿಷಯ
ಸ್ತೋಮ ಭಂಗಿತರಲ್ಲ ಧರ್ಮದ
ಸೀಮೆಯೊಳಗಳ್ಳೆನಿತನವಮಾನಿಸುವರಾವಲ್ಲ
ಈ ಮಹಾಸತಿಯೆಮಗೆ ಜನನಿಯ
ನೇಮದಲಿ ವಧುವಾದಳಿಂದು ವಿ
ರಾಮವೇಕೆ ವಿವೇಕಕೆಂದನು ಧರ್ಮಸುತ ನಗುತ ೩೫

ಏಕಪತಿ ಬಹುಸತಿಯರೆಂಬುದು
ಲೋಕಪದ್ಧತಿ ಕಂಡೆವಾವಿಂ
ದೇಕ ಪತ್ನಿಗೆ ಪುರುಷಪಂಚಕವನು ಮಹಾದೇವ
ಲೋಕಶಾಸ್ತ್ರ ವಿರುದ್ಧವನು ಕಿವಿ
ಯೋಕರಿಸುತಿವೆ ಕಣ್ಮನಕೆ ಸು
ವ್ಯಾಕುಲತೆ ಹಿರಿದಾದುದೆಂದನು ದ್ರುಪದ ಭೂಪಾಲ ೩೬

ಆ ಸಮಯದಲಿ ದೇವ ವೇದ
ವ್ಯಾಸಮುನಿಯೈತಂದನಲ್ಲಿ ಮ
ಹೀಶಸಭೆಯಿದಿರೆದ್ದು ಕಂಡುದು ಕಾಣಿಕೆಯ ನೀಡಿ
ದೋಷಗರ್ಭಿತಧರ್ಮವನು ನಿ
ರ್ಣೈಸಲರಿಯದ ಮೂಢಮತಿಗೆ ಮು
ನೀಶ ಕೃಪೆ ಮಾಡೆಂದು ಮೈಯಿಕ್ಕಿದನು ಪಾಂಚಾಲ ೩೭

ನೆಗಹಿದನು ದ್ರುಪದನನು ಯಮಜಾ
ದಿಗಳನೆತ್ತಿದನೊಬ್ಬರೊಬ್ಬರ
ತೆಗೆದು ತಕ್ಕೈಸಿದನು ಮುದದಲಿ ಪಾಂಡುನಂದನರ
ದುಗುಡವೇಕೈ ದ್ರುಪದ ನಿನ್ನಯ
ಮಗಳ ಸೌಭಾಗ್ಯದಲರುಂಧತಿ
ಸೊಗಸಿ ರಂಜಿಸಲರಿಯಳೆಂದನು ಕೃಷ್ಣ ಮುನಿ ನಗುತ ೩೮

ಅಹುದಲೇ ಬಳಿಕೇನು ತಂಗಿಯ
ಬಹಳ ಸುಕೃತೋದಯದಲರಗಿನ
ಗೃಹದ ಗಂಟಲನೊದೆದು ಸುಳಿದರು ಪಾಂಡುನಂದನರು
ಗಹನ ಯಂತ್ರವನೆಚ್ಚ ಪಾರ್ಥನ
ಮಹಿಳೆಗೆನ್ನ ಕುಮಾರಿಗೀಗಲು
ಬಹುಪತಿಗಳಾಯ್ತಿದನು ನೀವ್ ನಿರ್ಣೈಸಬೇಕೆಂದ ೩೯

ದ್ರುಪದ ಧೃಷ್ಟದ್ಯುಮ್ನ ಪಾಂಡವ
ನೃಪರು ಕಾಶ್ಯಪಗೂಡಿ ಹೊಕ್ಕರು
ವಿಪುಳತರ ಕಾರುಣ್ಯದಿಂದೇಕಾಂತ ಮಂದಿರವ
ನೃಪತಿ ಸಂಶಯವೇಕೆ ನಾವಿದ
ನಪಹರಿಸುವೆವು ಪಾಂಡುಪುತ್ರರ
ನುಪಚರಿಸು ವೈವಾಹವನು ವಿಸ್ತರಿಸು ಸಾಕೆಂದ ೪೦

ವಿಧಿವಿಹಿತ ಲೋಕಾಪವಾದವ
ನಧಿಕರಿಸಿ ವರ್ಣಾಶ್ರಮಕೆ ಸು
ವ್ಯಧಿಕರಣ ಹುಗದಂತೆ ಸದ್ವ್ಯವಹಾರ ಮಾರ್ಗದಲಿ
ವಿಧಿಸಿದರೆ ನಿಮ್ಮಂಘ್ರಿಗಳ ಸಂ
ನಿಧಿಯಲೇ ಪಾಣಿಗ್ರಹಣವನು
ವಿಧುಮುಖಿಗೆ ಮುದದಿಂದ ಮಾಡುವೆನೆಂದನಾ ದ್ರುಪದ ೪೧

ಧರಣಿಪತಿ ಕೆಳಿವರ ತಾಯ್ಮುಂ
ದರಿಯದಾಡಿದಳಾ ನುಡಿಯನು
ತ್ತರಿಸಬಾರದು ಧರ್ಮವಿದು ವರಮಾತೃಭಕ್ತರಿಗೆ
ಗುರುವಚನದ ನಿಮಿತ್ತವರ ಪತಿ
ಕರಿಸಿ ಚರಿಸಿದ ಪೂರ್ವ ಜನ್ಮದ
ಸರಸಿಜಾಕ್ಷಿಯ ಕಥೆಯನರುಪುವೆನಿನ್ನು ಕೇಳೆಂದ ೪೨

ಮುನ್ನ ನಾರಾಯಣಿಯೆನಿಪುದೀ
ಕನ್ನಿಕೆಯ ಪೆಸರೊಬ್ಬ ಗುಣ ಸಂ
ಪನ್ನ ಮುನಿಪನ ವಧು ಪತಿವ್ರತೆಯರಿಗೆ ಗುರುವೆನಿಸಿ
ಉನ್ನತೋನ್ನತ ಭಕ್ತಿ ಭಯದಲಿ
ತನ್ನ ಪತಿ ಪರದೈವವೆಂದು ವಿ
ಪನ್ನನನು ಕೊಂಡಾಡುತಿರ್ದಳು ರಾಯ ಕೇಳೆಂದ ೪೩

ಆ ತಪೋ ನಿಧಿ ಕುಷ್ಠರೋಗ ಪ
ರೀತ ಬೀಭತ್ಸೆಯಲಿ ಹುದುಗಿರ
ಲೀತಳೋದರಿ ಭಜಿಸುತಿರ್ದಳು ಭಾವಶುದ್ಧಿಯಲಿ
ಆತನೀಕೆಯ ಕೃತ್ಯದಲಿ ಭಾ
ವಾತಿಶಯದಲಿ ಖೋಡಿಯನು ಹಿಡಿ
ವಾತನಾಗಿರಲೊಂದು ದಿನವಿಂತಾಯ್ತು ಕೇಳೆಂದ ೪೪

ಕೊಳೆತ ಬೆರಳನು ಭುಕ್ತ ಶೇಷದೊ
ಳಿಳುಹಿದರೆ ಕಂಡೀಕೆ ಚಿತ್ತದೊ
ಳಳುಕದುಪಭೋಗಿಸೆ ಮುನೀಶ್ವರನದಕೆ ಹರುಷದಲಿ
ಎಲೆಗೆ ಮೆಚ್ಚಿದೆನಿನ್ನು ನೀ ಮನ
ವೊಲಿದುದನು ಬೇಡೆನಲು ಬಳಿಕಾ
ಲಲನೆ ನುಡಿದಳು ದಿವ್ಯರೂಪಿನೊಳೆನ್ನ ನೆರೆಯೆಂದು ೪೫

ದ್ರುಪದ ಕೇಳಾ ಕುಷ್ಠ ದೇಹವ
ನಪಹರಿಸಿ ಕಂದರ್ಪರೂಪಿನೊ
ಳುಪಚರಿಸಿ ಕಾಮಿನಿಯನವನತಿ ಕಾಮಕೇಳಿಯಲಿ
ತಪಸಿ ದಣಿದನು ತನ್ನ ಮುನ್ನಿನ
ತಪವ ನೆನೆದನು ದಣಿಯದಿರೆಯಿ
ಚಪಲಲೋಚನೆ ಸೆರಗ ಹಿಡಿದಳು ಹೋಗದಿರಿಯೆನುತ ೪೬

ದಿಟ್ಟ ಹೆಂಗುಸೆ ನೃಪರ ಬಸುರಲಿ
ಹುಟ್ಟು ನೀ ಹೋಗೆಂದು ಶಾಪವ
ಕೊಟ್ಟ ನೀಕೆಗೆ ಹಾಯ್ದ ನಾ ಮುನಿಪತಿ ತಪೋವನಕೆ
ನಟ್ಟಡವಿಯಲಿ ನಳಿನಮುಖಿ ಕಂ
ಗೆಟ್ಟು ಭಜಿಸಿದಳಖಿಳದುರಿತಘ
ರಟ್ಟನನು ದಿವಿಜೇಂದ್ರವಂದ್ಯನನಿಂದು ಶೇಖರನ ೪೭

ಹಲವು ಕಾಲದಿ ತಪದೊಳಕಟಾ
ಬಳಲಿದಳಲಾ ಮುನಿಯ ವಧುವೆಂ
ದಿಳಿದನೀಶ್ವರನಾ ತಪೋವನಕಾಕೆಯೆದುರಿನಲಿ
ಸುಳಿಯೆ ಕಂದೆರೆದಬಲೆ ಕಂಡಳು
ಸುಲಭನನು ಭಕ್ತರಿಗೆ ತರ್ಕಾ ೪೮

ವಳಿಗೆ ದುರ್ಲಭನನು ದುರಾಸದ ಮಹಿಮ ಧೂರ್ಜಟಿಯ
ತರುಣಿ ಮೈಯಿಕ್ಕಿದಳು ಕರದಲಿ
ಶಿರವ ನೆಗಹಿದಳಬುಜಲೋಚನೆ
ವರವ ಕೊಟ್ಟೆನು ಬೇಡಿಕೊಳ್ಳೆನೆ ತರುಣಿ ತಲೆವಾಗಿ
ಹರಪತಿಂದೇಹಿ ಪ್ರಭೋ ಶಂ
ಕರ ಪತಿಂ ದೇಹಿ ಪ್ರಭೋ ಯೆಂ
ದರಸಿ ಬೇಡಿದಳೈದು ಬಾರಿ ಮಹೇಶನಲಿ ವರವ ೪೯

ಆದಡೈವರು ಪತಿಗಳಹರುತ
ಳೋದರಿಯೆ ನಿನಗೆನಲು ಬೆಚ್ಚಿದ
ಳೀ ದುರಿತ ತನಗೇಕೆನುತ ಸತಿ ಮುಚ್ಚಿದಳು ಕಿವಿಯ
ಆದಡಂಜದಿರಂಜದಿರು ವರ
ವೇದಬಾಹಿರವಲ್ಲ ಸತಿಯರೊ
ಳಾದಿ ಪಾತಿವ್ರತ್ಯ ನಿನಗೆಂದನು ಮಖಧ್ವಂಸಿ ೫೦

ಶ್ರುತಿಗಳೆಂಬುದೆಯೆಮ್ಮ ನುಡಿ ಸಂ
ಸೃತಿಗಳೆಮ್ಮಯ ಚೇಷ್ಟೆ ಧರ್ಮದ
ಗತಿ ವಿಚಾರಿಸಲೆಮ್ಮ ನೇಮವು ವಿಹಿತ ವಿಧಿಯೆಂದು
ಕ್ರತುಗಳೀ ಮನ್ವಾದಿಗಳು ಸುರ
ತತಿಗಳಬುಜಭವಾದಿ ದೇವ
ಪ್ರತತಿಯೆನ್ನಾಜ್ಞೆಯೊಳಗೆಂದಾ ಸತಿಗೆ ಶಿವ ನುಡಿದ ೫೧

ನಿನ್ನ ಕಥನವೆ ಪುಣ್ಯ ಕಥನವು
ನಿನ್ನ ಚರಿತವೆ ಪುಣ್ಯ ಚರಿತವು
ನಿನ್ನ ನೆನೆದಂಗನೆಗೆ ಬಹುದು ಪತಿವ್ರತಾಭಾವ
ಎನ್ನನುಜ್ಞೆಗೆ ಧರ್ಮಚಿಂತಾ
ಪನ್ನೆಯಾಗದಿರೆಂದು ಕೃಪೆಯಲಿ
ತನ್ನ ಸಿರಿ ಕರತಳವನಿರಿಸಿದನುತ್ತ ಮಾಂಗದಲಿ ೫೨

ಹರನ ನುಡಿಯೇ ವೇದ ಹರನಾ
ಚರಣೆಯೇ ಸನ್ಮಾರ್ಗ ಹರ ಪತಿ
ಕರಿಸಿ ನುಡಿದುದೆ ಪರಮ ಪಾವನ ಧರ್ಮ ತತ್ವವದು
ಬರಹ ಸಹಿತಾ ವಿಧಿಯನೊರಸಲು
ಹರ ಸಮರ್ಥನು ಹರನ ಬರಹವ
ನೊರಸಲಾಪರ ತೋರಿಸಾ ಬ್ರಹ್ಮಾದಿ ದೇವರಲಿ ೫೩

ಅದರಿನೈವರಿಗೇಕೆ ವಧುವೆಂ
ಬುದು ಮಹೇಶ್ವರನಾಜ್ಜ್ಞೇನೀನಿಂ
ದಿದಕೆ ಚಿಂತಿಸಬೇಡ ಬಳಿಕಾ ಪಾಂಡುನಂದನರ
ಹದನನರುಹುವೆ ಕೇಳು ನೃಪ ಪೂ
ರ್ವದಲಿ ಸುರಪತಿ ಶಂಕರನ ಶಾ
ಪದಲಿ ನವೆದನು ಹಲವು ಯುಗ ಕೈಲಾಸ ಕುಹರದಲಿ ೫೪

ಬಳಿಕಲಿಂದ್ರನು ಮರವೆಯಲಿ ಕಳ
ವಳಿಸಲಾತಂಗೀತನಂದದಿ
ಹಲವು ಯುಗ ಸೆರೆಯಾಯ್ತು ರಜತಾಚಲದ ಕುಹರದಲಿ
ಬಿಲದಲೀ ಪರಿಯೈವರಿಂದ್ರರು
ಸಿಲುಕಿದರು ಶಂಕರನ ಖತಿಯಲಿ
ಬಳಿಕ ಬಿಡುಗಡೆಯಾಯ್ತು ಕಾತ್ಯಾಯನಿಯ ದೆಸೆಯಿಂದ ೫೫

ಎನಿಸುವುದು ನೀವೈವರಿಂದ್ರರು
ಮನುಜಲೋಕದೊಳರಸು ಕುಲದಲಿ
ವನಿತೆ ನಿಮ್ವೈರಿಗೆಯಹಳೊಬ್ಬಳೆ ನಿಧಾನವಿದು
ಎನಲು ನಡುಗಿದರಕಟ ಮೊದಲಲಿ
ಮನುಜ ಜನ್ಮವೆ ಕಷ್ಟವದರೊಳು
ವನಿತೆಯೊಡಹುಟ್ಟಿದರಿಗೊಬ್ಬಳೆ ಶಿವಶಿವಾಯೆಂದ ೫೬

ಹರಹರ ತ್ರಾಯಸ್ವ ಕರುಣಾ
ಕರ ಮಹಾದೇವೀ ದುರಂತದ
ನರಕಭಾಜನಮುಚಿತವೇ ನಿಮ್ಮಂಘ್ರಿದರ್ಶನಕೆ
ಕರುಣಿಸೈ ಮತ್ತೊಂದು ಪರಿಯಲಿ
ವರವನೆನೆ ನಸುನಗುತ ಗೌರೀ
ವರನು ತಿಳುಹಿದನೈವರಿಂದ್ರರಿಗರಸ ಕೇಳೆಂದ ೫೭

ಖೇಡತನವೇಕೆಳ್ಳನಿತು ಖಯ
ಖೋಡಿಯಿದರೊಳಗಿಲ್ಲ ಮುನಿವಧು
ಬೇಡಿದಳು ಪೂರ್ವದಲಿ ವರವನು ಪಂಚವಾಕ್ಯದಲಿ
ಜೋಡೆನಿಸಿದಳು ನಾರಿ ಧರ್ಮಕೆ
ಕೇಡುಬಾರದು ನಿಮ್ಮ ನೆರೆ ಕೆ
ಟ್ಟಾಡಿದರ ಬಾಯ್ ಹುಳುವುದೆಂದನು ಬಾಲಶಶಿಮೌಳಿ ೫೮

ಎನೆ ಹಸಾದದಲಿಂದುಶೇಖರ
ನನು ಸುರೇಂದ್ರರು ಬೀಳುಕೊಂಡರು
ಜನಿಸಿದರು ಬಳಿಕಿವರು ಮಹಿಯಲಿ ಮರ್ತ್ಯರೂಪಾಗಿ
ನಿನಗೆ ಮಗಳೀವನಿತೆ ಕುಂತಿಯ
ತನುಜರಿವರಳಿಯಂದಿರೇ ನೀ
ನೆನಿತು ಧನ್ಯನೊ ಶಿವಯೆನುತ ತಲೆದೂಗಿದನು ಮುನಿಪ ೫೯

ಎಲೆ ಮರುಳೆ ಪೂರ್ವದಲಿ ತಾವ್ ತ
ಮ್ಮೊಳಗೆಯೈವರು ಜನಿಸೆ ನಿನ್ನೀ
ನಳಿನಮುಖಿಗಿವರೆಲ್ಲ ವರಗಳು ಪಾಂಡುನಂದನರು
ತಿಳಿಯದಿರೆ ನೋಡಾದೊಡೆನುತ
ಗ್ಗಳೆಯ ಮುನಿಪತಿ ದಿವ್ಯದೃಷ್ಟಿಯ
ಸಲಿಸಿದಡೆ ನೋಡಿದನು ದ್ರುಪದನು ಪಾಂಡುನಂದನರ ೬೦

ಮೆರೆವ ದೇಹಪ್ರಭೆಗಳಲಿ ಮಿರು
ಮಿರುಪ ದಿವ್ಯಾಭರಣ ಕಿರಣದ
ತುರುಗಿನಲಿ ತನಿ ಹೊಳೆವ ದಿವ್ಯಾಂಬರದ ಕಾಂತಿಯಲಿ
ಅರಿವಡಾಯ್ತೆಲ್ಲವಯವದ ಕಂ
ದರೆವ ತೇಜಃಪುಂಜ ರಸಮಯ
ದೆರಕವೆನಲಿವರೈವರೊಪ್ಪಿದರಿಂದ್ರ ತೇಜದಲಿ ೬೧

ಮನದ ಝೊಮ್ಮಿನ ಝಡಿವ ರೋಮಾಂ
ಚನದ ಹುದುಗುವ ಹೊದರುಗಂಗಳ
ಜಿನುಗುವಾತಿನ ಹೂತ ಹರುಷದ ಹೊಂಗಿದುತ್ಸವದ
ಕೊನರೊ ಬೆವರಿನ ಕಳಿದ ಚಿಂತೆಯ
ಮನದ ಭಾವದ ರಾಗರಸದು
ಬ್ಬಿನಲಿ ಹೊಂಪುಳಿ ಹೋದನವರನು ಕಂಡು ಪಾಂಚಾಲ ೬೨

ಅರಸ ಕಂಡೈ ನರಪತಿಗಳೊ
ಸುರಪತಿಗಳೋ ಮನದ ಸಂಶಯ
ಹರಿದುದೇ ಹಳಿವಿಲ್ಲಲೇ ಲೇಸಾಗಿ ನೋಡೆನಲು
ಪರಮಋಷಿ ನೀ ಪುಣ್ಯದಲಿ ಗೋಚ
ಚರಿಸಿದೈ ನಿಮ್ಮಡಿಯ ನೇಮವ
ಶಿರದೊಳಾಂತೆನು ಧನ್ಯ ತಾನೆಂದರಸ ಕೈ ಮುಗಿದ ೬೩

ನಂಬಿದೈ ಲೇಸಾಗಿ ಲಗ್ನ ವಿ
ಲಂಬವಾಗದೆ ಧಾರೆಯೆರೆ ಕಲ
ಶಾಂಬುವಿದೆ ನೀ ಹೋಗು ಕಾಶ್ಯಪ ಹೋಮ ಸಾಧನವ
ತುಂಬು ವಹಿಲದಲವನಿಯಮರ ಕ
ದಂಬ ನೆರೆಯಲಿಯೆನಲು ದ್ರುಪದನ ೬೪
ಹೊಂಬೆಳೆಯ ತನಿ ಹರುಷ ಹೊಡೆದೋರಿದುದು ಪುಳಕದಲಿ

ಸಾರಿದರು ಮೆಟ್ಟಕ್ಕಿಗಳ ಗುಡ
ಜೀರಿಗೆಗಳೊದಗಿದವು ಲಗ್ನ ವಿ
ಹಾರದಾಶೀರ್ವಾದದಾಯತರವದ ರಭಸದಲಿ
ಧಾರೆಯೆರೆದನು ದ್ರುಪದ ಪಾಂಡು ಕು
ಮಾರರಿಗೆ ನಿಜಸುತೆಯನತಿ ವಿ
ಸ್ತಾರಿಸಿತು ವೈವಾಹರಚನೆ ವಿಶಾಲವಿಭವದಲಿ ೬೫

ಹೋಮ ಸಮನಂತರದಲಖಿಳ ಧ
ರಾಮರರ ಪೂಜೆಯಲಿ ಭೂತ
ಸ್ತೋಮ ತುಷ್ಟಿಯ ಮಾಡಿದುದು ಸನ್ಮಾನ ದಾನದಲಿ
ಆ ಮುನೀಂದ್ರಂಗೆರಗಿದರು ನೃಪ
ರೀ ಮಹಾಸತಿಸಹಿತ ವಿಮಲ
ಪ್ರೇಮದಲಿ ಮೈ ಮುಳುಗಿ ತೆಗೆದಪ್ಪಿದನು ಪಾಂಡವರ ೬೬

ಪರಮ ವೈಭವದಲಿ ಚತುರ್ಥಿಯ
ಮರುದಿವಸದೋಕುಳಿಯ ಪುರಜನ
ಪರಿಜನದ ಸುಮ್ಮಾನ ಶರಧಿಯ ಸಾರ ಸಂಪದವ
ವರ ಮುನಿಪನೀಕ್ಷಿಸಿದನನಿಬರ
ಹರಸಿ ನಯನೀತಿಗಳ ಹೇಳಿದು
ಮರಳಿ ಬಿಜಯಂಗೈದು ಹೊಕ್ಕನು ಬದರಿಕಾಶ್ರಮವ ೬೭

ನೋಡಿ[ಸಂಪಾದಿಸಿ]

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು[ಸಂಪಾದಿಸಿ]

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ