ವಿಷಯಕ್ಕೆ ಹೋಗು

ಕನ್ನಡಿಗರ ಕರ್ಮ ಕಥೆ/ಅಂಕುರಾಭಿವೃದ್ಧಿ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೨೨–೩೨

೩ನೆಯ ಪ್ರಕರಣ

ಅಂಕುರಾಭಿವೃದ್ದಿ

ಈ ಮೇರೆಗೆ ಮೆಹರ್ಜಾನಳ ಮನಸ್ಸಿನ ಸ್ಥಿತಿಯನ್ನು ನೋಡಿ ಮಾರ್ಜೀನೆಯು ಆಶ್ಚರ್ಯಪಟ್ಟರೂ, ಆ ತರುಣಿಯ ಮನಸ್ಸನ್ನು ತಿರುಗಿಸುವ ಗೊಡವಿಗೆ ಆ ಪ್ರೌಢವಯಸ್ತಿನ ಬಹುಶ್ರುತಳಾದ ಹೆಣ್ಣುಮಗಳು ಸರ್ವಥಾ ಹೋಗಲಿಲ್ಲ. ಅಲ್ಲಾನ ಸಂಕೇತವೇ ಹೀಗೆ ಇರಬಹುದೆಂದು ತಿಳಿದು ಆಕೆಯು ಮೆಹರ್ಜಾನಳ ಮನಸಿನ ಒಲವಿನಿಂದ ನಡೆಯುವದನ್ನು ನಿಶ್ಚಯಿಸಿದಳು. ಭವಿತವ್ಯತೆಯನ್ನು ತಪ್ಪಿಸುವದು ಯರಿಂದಲೂ ಆಗದು. ಮೆಹರ್ಜಾನಳ ಪ್ರಾಪ್ತಿಯ ವಿಷಯವಾಗಿ ರಾಮರಾಜನ ಮನಸಿನಲ್ಲಿ ಆತುರವು ಉತ್ಪನ್ನವಾದಂತೆ, ರಾಮರಾಜನ ವಿಷಯವಾಗಿಯೂ ಮೆಹರ್ಜಾನಳ ಮನಸ್ಸಿನಲ್ಲಿ ಆತುರವು ಉತ್ಪನ್ನವಾಗಹತ್ತಿತು. ಅಂದಬಳಿಕ ಅವರಿಬ್ಬರ ಪಾಣಿಗ್ರಹಣಕ್ಕೆ ಪತ್ರಿಬಂಧವೇಕೆ ಆಗಬೇಕು ? ರಾಮರಾಜನು ಪ್ರೇಮದ ಭರದಲ್ಲಿ ಹಿಂದುಮುಂದಿನ ವಿಚಾರವಿಲ್ಲದೆ ಮೆಹರ್ಜಾನಳಿಗೆ ಹಲವು ವಚನಗಳನ್ನು ಕೊಟ್ಟಿದ್ದನು. ಅವನ್ನೆಲ್ಲ ನಿಜವೆಂದು ನಂಬಿ ಆ ಸರಳ ಹೃದಯದ ತರುಣಿಯು ಮುಂದೆ ತನಗಾಗಬಹುದಾದ ಅಪಮಾನವನ್ನೆಲ್ಲ ಮರೆತಳು. ತನ್ನನ್ನು ಮುಖ್ಯ ಪತ್ನಿಯನ್ನಾಗಿ ಮಾಡಿಕೊಳ್ಳುತ್ತೇನೆಂದು ರಾಮರಾಜನು ಕೊಟ್ಟ ವಚನವನ್ನು ಆಕೆಯು ದೃಢವಾಗಿ ನಂಬಿ, ಅದೊಂದರ ಆಸೆಯಿಂದ ರಾಮರಾಜನ ಪ್ರಾಣಿಗ್ರಹಣಕ್ಕೆ ಆಕೆಯು ಒಪ್ಪಿಕೊಂಡಳು. ಕಣ್ವಾಶ್ರಮದಲ್ಲಿ ಶಕುಂತಲೆಯು ದುಷ್ಯಂತನ ಪಾಣಿಗ್ರಹಣ ಮಾಡಿದ ಕಥೆಯನ್ನು ಸವಿಮಾತಿನ ರಾಮರಾಜನು ಮೆಹರ್ಜಾನಳ ಮುಂದೆ ಹೇಳಿದನು. ಕಡೆಗೆ ಅವರಿಬ್ಬರ ಪಾಣಿಗ್ರಹಣವಾಗಿ ದಾಂಪತ್ಯ ಸುಖಾನುಭವಕ್ಕೆ ಆರಂಭವಾಯಿತು. ಆಗ ಆ ಕುಂಜವನವು ಸ್ವರ್ಗದೊಳಗಿನ ನಂದನವನದಂತೆ ಅವರಿಗಾಯಿತು. ರಾಮರಾಜನ ಐಶ್ವರ್ಯ ಸಂಪನ್ನತೆಗೆ ಕೊರತೆಯಿದ್ದಿಲ್ಲ. ವಿಜಯನಗರದ ರಾಜ್ಯಸ್ಥಾಪನೆಯಾಗಿ ಮುನ್ನೂರು ವರ್ಷಗಾಳಗಿದ್ದರಿಂದ, ಕನ್ನಡಿಗರಲ್ಲಿ ಸತ್ಯಕ್ಕಿಂತ ವಿಷಯ ಸುಖಲೋಲುಪತೆಯೂ, ಸೌಜನ್ಯಕ್ಕಿಂತ ಮದಾಂಧತೆಯೂ, ಪೌರುಷಕ್ಕಿಂತ ಡಾಂಭಿಕತೆಯೂ, ಸತ್ಯಕ್ಕಿಂತ ಮೋಸಗಾರಿಕೆಯೂ ವಿಶೇಷವಾಗಿದ್ದವು. ಈ ಸ್ಥಿತಿಯು ರಾಷ್ಟ್ರವನ್ನಂಟಿಕೊಂಡ ಕ್ಷಯರೋಗವೆಂತಲೇ ಹೇಳಬಹುದು. ರಾಮರಾಜನಲ್ಲಿ ಹಲವು ಸದ್ಗುಣಗಳಿದ್ದರೂ ಆತನು ಈ ರಾಷ್ಟ್ರೀಯ ರೋಗದಿಂದ ಮುಕ್ತನಾಗಿದ್ದಿಲ್ಲ. ಕೇವಲ ಗುಣಲುಬ್ಧಳಾಗಿ ಆತನ ಕೈಹಿಡಿದಿದ್ದ ಮೆಹರ್ಜಾನಳಿಗೆ ಆತನ ಈ ಗುಪ್ತರೋಗದ ಲಕ್ಷಣಗಳನ್ನು ಲಕ್ಷಿಸಲಿಕ್ಕೆ ಅವಸರವು ದೊರೆಯಲಿಲ್ಲ. ಒಂದು ವರ್ಷದವರೆಗೆ ಅವರಿಬ್ಬರು ನಿರಾತಂಕವಾಗಿ ವಿಷಯ ಸುಖವನ್ನು ಭೋಗಿಸಿದರು. ಈ ಅವಧಿಯಲ್ಲಿ ರಾಮರಾಜನು ಮೆಹರ್ಜಾನಳನ್ನು ಕಣವಾದರೂ ಅಗಲದೆ ಇರುತ್ತಿದ್ದನೆಂದು ಹೇಳಬಹುದು. ಕೃಷ್ಣದೇವರಾಯನ ಅಪ್ಪಣೆಯಿಂದ ಮೆಹರ್ಜಾನಳನ್ನು ಅಗಲಿ ಹೋಗುವ ಪ್ರಸಂಗ ಬಂದರೆ ರಾಮರಾಜನ ಜೀವಬೇಸುತ್ತ ಬಂದಂತಾಗುತ್ತಿತ್ತು. ಸರಳ ಹೃದಯದ ಮೆಹರ್ಜಾಳಾದರೂ ತನ್ನ ಹೃದಯವನ್ನು ಸಂಪೂರ್ಣವಾಗಿ ರಾಮರಾಜನಿಗೆ ಒಪ್ಪಿಸಿ, ಸರ್ವಸ್ವವೂ ಆತನೇ ಎಂದು ತಿಳಿದಿದ್ದಳು. ಅವರಿಬ್ಬರ ಈ ಅಕೃತ್ರಿಮ ಪ್ರೇಮಭೂಮಿಯಲಿ ನಿರ್ದುಷ್ಟವಾದ ದಾಂಪತ್ಯ ಸುಖವು ಉತ್ಪನ್ನವಾದದ್ದೇನು ಆಶ್ಚರ್ಯವಲ್ಲ.

ಈ ಪ್ರಕಾರ ತರುಣ-ತರುಣಿಯರಲ್ಲಿ ಅಕೃತ್ರಿಮ ಪ್ರೇಮವು ಇರುವವರೆಗೆ ಅವರ ಸುಖದಲ್ಲಿ ಕೊರತೆಯುಂಟಾಗಿದ್ದಿಲ್ಲ ; ಆದರೆ ರಾಮರಾಜನ ದುರ್ದೈವದಿಂದಲೋ, ಇವರೆಲ್ಲರ ದುರ್ದೈದಿಂದಲೊ, ತಿಳಿಯದು. ಆ ತರುಣರ ಅಕೃತ್ರಿಮ ಪ್ರೇಮವು ರಾಮರಾಜನ ಮಹತ್ವಾಕಾಂಕ್ಷೆಯಿಂದ ಕೃತ್ರಿಮ ಸ್ವರೂಪವನ್ನು ತಾಳಹತ್ತಿತು. ಮೇಲೆ ಹೇಳಿದ ರಾಷ್ಟ್ರೀಯ ಕ್ಷಯರೋಗದ ಎಲ್ಲ ಲಕ್ಷಣಗಳೂ ರಾಮರಾಜನಲ್ಲಿ ಇದ್ದವಲ್ಲದೆ, ಆ ರೋಗದ ಹೆಚ್ಚುವಿಕೆಗೆ ಕಾರಣವಾದ ಮಹತ್ವಾಕಾಂಕ್ಷೆಯು ಆತನಲ್ಲಿ ವಾಸಿಸುತ್ತಿತ್ತು. ಮನುಷ್ಯನು ನ್ಯಾಯವಾದ ಮಹತ್ವವನ್ನು ಅಪೇಕ್ಷಿಸಬಾರದೆಂತಲ್ಲ; ಗುಣೋತ್ಕರ್ಷವನ್ನು ಪಡೆದು, ಆತನು ನರನು ಹೋಗಿ ನಾರಾಯಣನೂ ಆಗಬಹುದು ! ಆದರೆ”ಯೇನಕೇನ ಪ್ರಕಾರೇಣ ಪ್ರಸಿದ್ದಪುರಷೋಭವ” ಎಂಬ ಹೀನವಾದ ಉಕ್ತಿಗೆ ಸಂಬಂಧಿಸುವಂಥ ನೀಚ ಮಹತ್ವಾಕಾಂಕ್ಷೆಯನ್ನು ಯಾವನೂ ತಾಳಲಾಗದು. ಅಂಥವನು ಕೆಲಕಾಲದವರೆಗೆ ಮಹತ್ವ ಪಡೆದಂತೆ ತೋರಿದರೂ, ಕಡೆಗೆ ಆತನ ಅಧಃಪತನವೇ ಆಗುವದು. ಇಂಥ ಉದಾಹರಣೆಗಳು ಇತಿಹಾಸಜ್ಞರಿಗೂ, ವ್ಯವಹಾರಜ್ಞರಿಗೂ ಹಲವು ದೊರೆಯಬಹುದು. ಅವುಗಳಲ್ಲಿ ರಾಮರಾಜನದೊಂದು ಐತಿಹಾಸಿಕ ಉದಾಹರಣವೆಂದು ಹೇಳಬಹುದು ರಾಮರಾಜನಲ್ಲಿ ಗುಣಗಳೀದ್ದಿಲ್ಲವೆಂತಲ್ಲ ; ಆದರೆ ಆ ಸುಗುಣವನ್ನು ಪ್ರಸಂಗ ವಶಾತ್ ಮಣ್ಣುಗೂಡಿಸುವಷ್ಟು ದುರ್ಗುಣಗಳೂ ಅವನಲ್ಲಿ ಇದ್ದದ್ದರಿಂದ, ಆತನ ಮಹತ್ವಾಕಾಂಕ್ಷೆಯು ನಿಷ್ಟುರವಾದದ್ದೆಂದು ಹೇಳಲಾಗುವುದಿಲ್ಲ. ಆತನು ವಿಜಯನಗರದ ಕೃಷ್ಣದೇವರಾಯನಂಥ ಪ್ರತಾಪಿಯ ದರ್ಬಾರದಲ್ಲಿ ದೊಡ್ಡ ಪದವಿಗೇರುವ ಮಹತ್ವಾಕಾಂಕ್ಷೆಗೆ ಬಲಿಬಿದ್ದು, ಕೃಷ್ಣದೇವರಾಯನ ಮನಸ್ಸನ್ನು ಒಲಿಸಿಕೊಳ್ಳುವ ಭರದಲ್ಲಿ ಮೆಹರ್ಜಾನಳನ್ನು ಮರೆಯ ಹತ್ತಿದನು. ರಾಮರಾಜನು ಹೀಗೆ ಮಾಡಿದ್ದು ತಪ್ಪೆಂತಲೂ ನಾವು ಹೇಳುವುದಿಲ್ಲ. ಆ ಮಹತ್ವಾಕಾಂಕ್ಷೆಗೆ ರಾಮರಾಜನು ಕೇವಲ ಅಪಾತ್ರನೆಂತಲೂ ನಾವು ಪ್ರತಿಪಾದಿಸುವುದಿಲ್ಲ; ಆದರೆ ಆ ಮಹತ್ವದ ಪದವಿಗೆ ತಕ್ಕ ಕೃತಿಗಳನ್ನು ಆತನು ಮಾಡದಿರುವದು ಮಾತ್ರ ಅನ್ಯಾಯವು. ತನ್ನ ವೈದಿಕ ಧರ್ಮಕ್ಕೆ ವಿರುದ್ಧವಾಗಿ ಆತನು ಮೆಹರ್ಜಾನಳ ಪಾಣಿಗ್ರಹಣವನ್ನೇ ಮಾಡತಕ್ಕದ್ದಿದ್ದಿಲ್ಲ ; ಒಂದು ಪಕ್ಷದಲ್ಲಿ ಮಾಡಿದರೂ ಮಾಡಲಿ ಮುಖ್ಯ ಪತ್ನಿಯನ್ನಾಗಿ ಮಾಡುವೆನೆಂದು ಆಕೆಗೆ ವಚನ ಕೊಡತಕ್ಕದ್ದಿದ್ದಿಲ್ಲ; ಒಮ್ಮೆ ವಚನ ಕೊಟ್ಟ ಬಳಿಕ ಅದರಂತೆ ನಡೆಯುವುದು ಪೌರುಷಕ್ಕೆ ಒಪ್ಪುವ ಮಾತಾಗಿತ್ತು ; ಆದರೆ ರಾಮರಾಜನು ಹಾಗೆ ಮಾಡದೆ ಮಹತ್ವಾಕಾಂಕ್ಷೆಯಿಂದ ವಚನಭಂಗದ ಹಾದಿಯನ್ನು ಹಿಡಿದನು, ರಾಮರಾಜನ ಧೈರ್ಯ, ಸಾಹಸ, ಪರಾಕ್ರಮ, ರಾಜಕಾರಣ ಕುಶಲತೆ ಮುಂತಾದ ಗುಣಗಳಿಗೆ ಮೆಚ್ಚಿ, ಕೃಷ್ಣದೇವರಾಯನು ಆತನನ್ನು ದೊಡ್ಡ ಪದವಿಗೇರಿಸುತ್ತ ನಡೆದನು. ಕಡೆಗೆ ಆತನು ತನ್ನ ಮಗಳನ್ನು ರಾಮರಾಜನಿಗೆ ಕೊಟ್ಟು ಅವನಿಗೆ ತನ್ನ ಮಂತ್ರಿ ಪದವಿಯನ್ನು ಕೊಡಬೇಕೆಂದು ಯೋಚಿಸಿದನು ಅದರಿಂದ ರಾಮರಾಜನ ಬಾಯಲ್ಲಿ ಜುಳು ಜುಳು ನೀರು ಬರಹತ್ತಿದವು ! ಇಂಥ ಪ್ರಸಂಗದಲ್ಲಿ ರಾಮರಾಜನು ಯವನ ಸುಂದರಿಯ ಪಾಣಿಗ್ರಹಣ ಮಾಡಿದ್ದು ಆತನ ಉತ್ಕರ್ಷಕ್ಕೆ ಅಡ್ಡಾಗಹತ್ತಿತು. ಕೃಷ್ಣದೇವರಾಯನಂಥ ವೈದಿಕ ಧರ್ಮಾಭಿಮಾನಿಯಾದ ರಾಜನಿಗೂ, ಆತನ ಪ್ರಜೆಗಳಿಗೂ ಈ ಧಾರ್ಮಿಕ ದ್ರೋಹವು ಹ್ಯಾಗೆ ಸೇರಬೇಕು ? ಆದ್ದರಿಂದ ರಾಮರಾಜನು ತನ್ನ ಮಂತ್ರಿ ಪದವಿಗೆ ತೊಂದರೆ ಬಂದೀತೆಂದು ಭಯಪಟ್ಟು, ಕುಂಜವನದಲ್ಲಿ ಗುಪ್ತವಾಗಿದ್ದ ಮೆಹರ್ಜಾನಳ ಬಳಿಗೆ ಜನರ ಸಂಶಯಕ್ಕೆ ಆಸ್ಪದವಾಗದಂತೆ ಕದ್ದುಮುಚ್ಚಿ ಕೂಡಿದಾಗೊಮ್ಮೆ ಹೋಗಹತ್ತಿದನು.

ಈ ಸ್ಥಿತಿಯು ಮೆಹರ್ಜಾನಳಿಗೆ ಸರಿಬರಲಿಲ್ಲ. ರಾಮರಾಜನು ತನ್ನನ್ನು ಉದಾಸೀನ ಮಾಡುವನೆಂದು ಅಕೆಯು ಭಾವಿಸಹತ್ತಿ, ಅದರ ಬಗ್ಗೆ ರಾಮರಾಜನನ್ನು ಸ್ಪಷ್ಟವಾಗಿ ಕೇಳಹತ್ತಿದಳು. ರಾಮರಾಜನು ಸುಳ್ಳೊಂದು ಸೊಟ್ಟೊಂದು ನೆವಹೇಳಿ ಮೆಹರ್ಜಾನಳನ್ನು ರಮಿಸಹತ್ತಿದನು. ಈ ಸ್ಥಿತಿಯು ಎಷ್ಟು ದಿವಸ ನಡೆಯಬೇಕು ? ಬರಬರುತ್ತ ರಾಮರಾಜನಿಗೆ ಮೆಹರ್ಜಾನಳು ಭಾರವಾಗಹತ್ತಿದಳು. ಮಂತ್ರಿ ಪದವಿಗೇರುವ ಉಬ್ಬಿನಲ್ಲಿ ಆತನು ಯಾವಾಗಾದರೊಮ್ಮೆ ಮೆಹರ್ಜಾನಳ ಬಳಿಗೆ ಹೋಗಹತ್ತಿದನು. ಒಂದು ದಿನ ಮೆಹರ್ಜಾನಳು ರಾಮರಾಜನನ್ನು ಈ ವಿಷಯವಾಗಿ ಕೇಳಲು, ಆತನು-ಪ್ರಿಯೇ ಮೆಹರ್ಜಾನ, ನನ್ನ ಮೇಲಿನ ನಿನ್ನ ವಿಶ್ವಾಸವು ಕಡಿಮೆಯಾಗಹತ್ತಿರುವುದನ್ನು ನೋಡಿ ನನಗೆ ಬಹಳ ದುಃಖವಾಗುತ್ತದೆ. ಹೀಗೆ ಮಾಡಬೇಡ. ನಿನ್ನ ಹಿತದ ಸಲುವಾಗಿಯೇ ನಾನು ಯತ್ನಿಸುತ್ತಿರುವೆನು. ಈಗ ಒಬ್ಬ ಸರದಾರನ ಹೆಂಡತಿಯೆನಿಸಿಕೊಳ್ಳುತ್ತಿರುವ ನೀನು ವಿಕಲ್ಪವೆಣಿಸಬಹುದೊ ? ಎಂದು ಕೇಳಲು ಆ ಸರಳಹೃದಯದ ಮೆಹರ್ಜಾನಳೂ ಅಷ್ಟಕ್ಕೆ ಸಂತೋಷಪಟ್ಟು ವಿಕಲ್ಪವಿಲ್ಲದೆ ಮೊದಲಿನಂತೆ ರಾಮರಾಜನನ್ನು ಪ್ರೀತಿಸಹತ್ತಿದಳು. ರಾಮರಾಜನ ಈ ಮೋಸದ ನಡೆಗೆಯು ಧೂರ್ತಳಾದ ಮಾರ್ಜೀನೆಗೆ ಗೊತ್ತಾಗದೆ ಇರಲಿಲ್ಲ ! ಆದರೂ ಆಕೆಯು ತನ್ನ ಮನಸ್ಸಿನಲ್ಲಿದ್ದದ್ದನ್ನು ಮೆಹರ್ಜಾನಳ ಮುಂದೆ ಆಡಲಿಲ್ಲ. ಹೀಗೆಯ ಕೆಲವು ದಿನಗಳು ಹೋದವು. ರಾಮರಾಜನು ತನ್ನ ಮನಸ್ಸಿನ ಸಂಶಯದಿಂದ ಮೆಹರ್ಜಾನಗಳನ್ನು ರಮಿಸುವದಕ್ಕಾಗಿ ಆಗಾಗ್ಗೆ ಬೆಲೆಯುಳ್ಳ ಅಲಂಕಾರಗಳನ್ನು ತಂದು ಕೊಡಹತ್ತಿದನು. ತನಗೆ ಬರುವುದಕ್ಕೆ ತಡವಾದ ಪ್ರಸಂಗದಲ್ಲಿ ಸವಿಯಾದ ಪತ್ರಗಳನ್ನು ಆಕೆಗೆ ಬರೆದು ಕಳಿಸಹತ್ತಿದನು. ಏನು ಮಾಡಿದರೂ ಮೆಹರ್ಜಾನಳ ಮನಸ್ಸಿನಲ್ಲಿ ರಾಮರಾಜನ ಪ್ರೇಮದ ವಿಷಯವಾಗಿ ಆಗಾಗ್ಗೆ ವಿಕಲ್ಪವು ಉತ್ಪನ್ನವಾಗುವದು ಹೋಗಲಿಲ್ಲ. ಮನಸ್ಸು ದೋಷೈಕ ದೃಷ್ಟಿಯಾಯಿತೆಂದರೆ, ಇಲ್ಲದ ಹುಳುಕುಗಳೂ ಅದಕ್ಕೆ ತೋರಹತ್ತುತ್ತವೆ. ಇತ್ತ ರಾಮರಾಜನು ತನಗೆ ಬೆಲೆಯುಳ್ಳ ವಸ್ತ್ರಾಲಂಕಾರಗಳನ್ನು ಕೊಡುತ್ತಿದ್ದದ್ದು, ತನ್ನನ್ನು ರಮಿಸುವದಕ್ಕಲ್ಲದೆ ಪ್ರೀತಿಗೋಸ್ಕರವಲ್ಲೆಂದು ಮೆಹರ್ಜಾನಳು ಎಣಿಸ ಹತ್ತಿದಳು. "ಮನೋಹಿ ಜನ್ಮಾಂತರ ಸಂಗತಿಜ್ಞಂ" ಅಂದರೆ ಮನಸ್ಸು (ಸಂಬಂಧಿಕರ) ಜನ್ಮಾಂತರದ ಸಂಗತಿಗಳನ್ನು ತಿಳಿಯುತ್ತದೆಂದು ಕಾಳಿದಾಸ ಕವಿಯು ಹೇಳಿರುವನೆಂದಬಳಿಕ, ಇದೇ ಜನ್ಮದಲ್ಲಿ ತನಗೆ ಸಂಬಂಧಪಟ್ಟಿದ್ದ ರಾಮರಾಜನ ಮನಸ್ಸಿನ ಸ್ಥಿತಿಯನ್ನು ಮೆಹರ್ಜಾನಳ ಮನಸ್ಸು ತಿಳಿಯದೆ ಹ್ಯಾಗೆ ಹೋಗಬೇಕು ? ಆದರೂ ಮೆಹರ್ಜಾನಳು ರಾಮರಾಜನಂತೆ ಮಹತ್ವಾಕಾಂಕ್ಷಿಯಿದ್ದಿಲ್ಲ. ತಾನಾಗಿ ಪ್ರಾಪ್ತವಾಗಿದ್ದ ರಾಮರಾಜನ ಅಕೃತ್ರಿಮ ಪ್ರೇಮವನ್ನು ಕಾಯ್ದುಕೊಳ್ಳುವದರ ಹೊರತು ಹೆಚ್ಚಿನ ಉಸಾಬರಿಯು ಆಕೆಗೆ ಬೇಕಾಗಿದ್ದಿಲ್ಲ. ಕಪಟಾಚರಣೆಯನ್ನಂತು ಆ ಸುಂದರಿಯು ಅರಿಯೇ ಅರಿಯಳು; ಆದ್ದರಿಂದ ಆ ನಿರ್ಮಲಾಂತಃಕರಣದ ತರುಣಿಯು ರಾಮರಾಜನ ವಿಯಷವಾಗಿ ಎಷ್ಟು ಶಂಕಿಸಿದರೂ, ಆತನು ಭೆಟ್ಟಿಯಾದಾಗೆಲ್ಲ ಆತನ ವಿಷಯದ ವಿಕಲ್ಪವನ್ನೆಲ್ಲ ಮರೆತು, ಅಕೃತ್ರಿಮ ಪ್ರೇಮದಿಂದ ಆತನನ್ನು ಆಲಂಗಿಸುವಳು. ಆತನ ಬಳಿಯಲ್ಲಿರುವತನಕ ಆಕೆಯು ಇಲ್ಲದ ವಿಕಲ್ಪಗಳನ್ನು ಒಡನುಡಿದಾಗ ಅವುಗಳಿಗೆಲ್ಲ ರಾಮರಾಜನು ಸಮಾಧಾನ ಹೇಳಲು, ಕೃತಜ್ಞತೆಯಿಂದ ಆತನನ್ನು ಪುನಃ ಕುಂಜವನದಿಂದ ಹೋಗಗೊಡುವಳು, ಮತ್ತೆ ಕೆಲವು ದಿನ ಆತನು ಬಾರದಾಗಲು ಮತ್ತೆ ಆಕೆಯ ವಿಕಲ್ಪಕ್ಕೆ ಆರಂಭವಾಗುತ್ತಿತ್ತು. ಈ ಕ್ರಮವು ಮೆಹರ್ಜಾನಳ ಬಹುರೂಢವಾದ ವೇಳಾಪತ್ರಕದಂತೆ ಆಗಿ ಹೋಗಿತ್ತು. ಭಿಢೆಭಾರಣಿಯ ಸರಳ ಮನಸ್ಸಿನವರ ಸ್ಥಿತಿಯು ಹೀಗೆಯೇ ಸರಿ.

ಹೀಗೆ ಕ್ರಮಿಸುತ್ತಿರಲು, ಒಂದು ದಿನ ಮೆಹರ್ಜಾನಳ ಮನಸ್ಸು ತೀರ ಖಿನ್ನವಾಯಿತು. ರಾಮರಾಜನು ಬಾರದೆ ಅಂದಿಗೆ ಎಂಟು ದಿನಗಳಾಗಿ ಹೋಗಿದ್ದವು. ಅಂದು ವಸಂತಕಾಲದ ಪೌರ್ಣಿಮೆಯಾದದ್ದರಿಂದ, ಚಂದ್ರಮನು ಷೋಡಶ ಕಲೆಗಳಿಂದ ಪೂರ್ಣವಾಗಿ ಉದಯ ಹೊಂದಿದನು. ಆ ನಿಶಾಂಕರನು ಮೇಲಕ್ಕೇರಿ ಹಿಟ್ಟು ಚೆಲ್ಲಿದ ಹಾಗೆ ಎಲ್ಲ ಕಡೆಗೆ ಬೆಳದಿಂಗಳು ಬೀರಲು, ನಾಲ್ಕು ತಾಸು ರಾತ್ರಿಯು ಮೀರಿ ಐದನೆಯು ಅಮಲು ಆಯಿತು. ಆಗ ಮೆಹರ್ಜಾನಳು ಒಬ್ಬಳೇ ಮಂದಿರದಿಂದ ಹೊರಟು ಕುಂಜವನದೊಳಗಿನ ಪುಷ್ಕರಣೆಯ ಕಡೆಗೆ ಸಾಗಿದಳು. ತನ್ನನ್ನು ಹಿಂಬಾಲಿಸಿ ಬಾರದಂತೆ ಆಕೆಯು ಎಲ್ಲರಿಗೆ ಕಟ್ಟಪ್ಪಣೆ ಮಾಡಿದ್ದಳು. ಮಾರ್ಜೀನೆಗೆ ಕೂಡ ಅವಳ ಸಂಗಡ ಹೋಗಲಿಕ್ಕೆ ಧೈರ್ಯ ಸಾಲಲಿಲ್ಲ. ಮೆಹರ್ಜಾನಳು ಪುಷ್ಕರಣಿಗೆ ಹೋದಾಗ ಆ ಮನೋಹರವಾದ ಸರೋವರದ ಶೋಭೆಯು ವರ್ಣಿಸುವ ಹಾಗಿತ್ತು. ಆ ವಿಸ್ತೀರ್ಣವಾದ ಪುಷ್ಕರಣಿಯ ನಟ್ಟನಡುವೆ ಒಂದು ಧ್ವಜಸ್ತಂಭವಿದ್ದು ಸುತ್ತುಮುತ್ತು ಸಣ್ಣ-ದೊಡ್ಡ ಗಿಡಗಳ ನೆರಳು ದಟ್ಟವಾಗಿ ಬಿದ್ದಿತ್ತು. ಪುಷ್ಕರಣಿಯಲ್ಲಿ ನೈದಿಲೆಗಳು ಅರಳಿ ಅವು ಅಲ್ಲಿಯ ಸ್ವಚ್ಛವಾದ ಉದಕದಲ್ಲಿ ಪ್ರತಿಬಿಂಬಿಸಿದ್ದವು. ಗಾಳಿ ಸುಳಿದಾಡದ್ದರಿಂದ ಸುತ್ತಲಿನ ಗಿಡಗಳು ಮಿಸುಕುತ್ತಿದ್ದಿಲ್ಲ. ಪುಷ್ಕರಣಿಯಲ್ಲಿ ತೆರೆಗಳೂ ಉತ್ಪನ್ನವಾಗುತ್ತಿದ್ದಿಲ್ಲ. ನಿರಭ್ರವಾದ ಆಕಾಶದಲ್ಲಿ ಚಂದ್ರಮನೂ, ನಕ್ಷತ್ರಗಳೂ ಸ್ಥಳಬಿಟ್ಟು ಕದಲದೆ ಸುಮ್ಮನೆ ನಿಂತಲ್ಲಿ ನಿಂತಿರುವಂತೆ ತೋರುತ್ತಿತ್ತು ! ಒತ್ತಟ್ಟಿಗೆ ಮೆಹರ್ಜಾನಳಂಥ ಲೋಕೋತ್ತರ ಸುಂದರಿಯು ತನ್ನ ಬಿರುಸ್ವಭಾವವನ್ನು ಬದಿಗಿಟ್ಟು ದಿಟ್ಟತನದಿಂದ ಏಕಾಕಿಯಾಗಿ ಮಧ್ಯರಾತ್ರಿಯಲ್ಲಿ ಇಲ್ಲಿಗೆ ಯಾಕೆ ಬಂದಿರಬಹುದೆಂಬುದನ್ನು ಬೆರಗಾಗಿ ನೋಡುತ್ತಿರುವಂತೆ, ಪುಷ್ಕರಣಿಯಲ್ಲಿಯೂ, ಅದರ ಸುತ್ತಲು ಅದರ ಮೇಲ್ಗಡೆಯಲ್ಲಿಯೂ ಇರುವ ಚಲನವಲನದ ವಸ್ತುಗಳೆಲ್ಲ ಸ್ತಬ್ದತೆಯನ್ನು ತಾಳಿದಂತೆ ಆಗಿತ್ತು. ಕುಂಜವನದೊಳಗಿನ ವಿವಿಧ ಪುಷ್ಪಗಳ ಸುಗಂಧವನ್ನು ಮಂದಮಾರುತನು ಹೊತ್ತೊಯ್ಯದ್ದದ್ದರಿಂದ ಆ ಪ್ರದೇಶವು ವಿವಿಧ ಪುಷ್ಪಗಳ ಮಿಶ್ರ ಸುಗಂಧದಿಂದ ತುಂಬಿ ಸೂಸುತ್ತಿತ್ತು. ಆಗ ಚಂದ್ರಮಂಡಲವು ಪುಷ್ಕರಣಿಯಲ್ಲಿ ಸ್ವಚ್ಛವಾಗಿ ಪ್ರತಿಫಲಿಸಿ ಅದರ ಮನೋಹರತ್ವಕ್ಕೆ ಕಳೆಯೇರಿತ್ತು. ಇಂಥ ಮನೋಹರ ಪ್ರಸಂಗಗಳಿಂದ ಉಲ್ಲಸಿತಳಾದ ಆ ತರುಣಿಯು ಪುಷ್ಕರಣಿಯ ದಂಡೆಯಲ್ಲಿ ಕಟ್ಟಿದ್ದ ಕ್ರೀಡಾ ನೌಕೆಯನ್ನೇರಿ ಬಿಚ್ಚಿ, ಬಡಬಡಹುಟ್ಟು ಹಾಕುತ್ತ ನೌಕೆಯನ್ನು ಮಧ್ಯದ ಕಡೆಗೆ ಸಾಗಿಸಿದಳು, ಕ್ಷಣಮಾತ್ರದಲ್ಲಿ ನೌಕೆಯು ಧ್ವಜಸ್ತಂಭವನ್ನು ಮುಟ್ಟಿತು. ಆಗ ಮೆಹರ್ಜಾನಳು ನೌಕೆಯನ್ನು ಸ್ತಂಭಕ್ಕೆ ಕಟ್ಟಿ, ಆಕಾಶದಲ್ಲಿ ಲಕಲಕಿಸುತ್ತಿದ್ದ ಚಂದ್ರಬಿಂಬವನ್ನು ಕೌತಕದಿಂದ ನೋಡಹತ್ತಿದಳು. ಆಗ ಆ ಸ್ವಚ್ಛಂದ ವೃತ್ತಿಯ ರಸಿಕ ತರುಣಿಯ ಹೃದಯವನ್ನು ರಾಮರಾಜನು ತಟ್ಟನೆ ಪ್ರವೇಶಿಸಲು, ಹಲವು ಕಲ್ಪನಾ ತರಂಗಗಳು ಆಕೆಯ ಹೃದಯದಲ್ಲಿ ಉತ್ಪನ್ನವಾಗಿ ಆಕೆಗೆ ವಿರಹದ ಭಾವನೆಯಾಗಹತ್ತಿತು. ಆಗ ಆಕೆಯು ಮಂಜುಳ ಸ್ವರದಿಂದ.

ರಾಗ (ಭಾವ ಕಲ್ಯಾಣ)
ಹೇರಿ ಆಜ ಸಖೀರಿ ಮೆ ಕ್ಯಾ ಕಹು ಆಪನೇ ಜೀಯಾಕೀ ಬಾತ |
ಹೇರಿ ಆಜ ||
ಮೇರೆ ಮನ ಸಖೀ ಪ್ಯಾರೇಕೀ ಮುರತ, ಘಡಿಫಲ ಛೀನದೀನ ರಾತ ||
ಹೇರಿ ಆಜ ||

ಎಂದು ಗಾಯನ ಮಾಡಿದ ಹಿಂದುಸ್ಥಾನಿ ಖ್ಯಾಲಿಯ ಸುಂದರ ತಾನು ಬೆಳದಿಂಗಳಂತೆ ದಶದಿಕ್ಕುಗಳಲ್ಲಿ ಪಸರಿಸಿ, ನಾದಬ್ರಹ್ಮದ ಆನಂದದಿಂದ ಯಾವತ್ತು ಸೃಷ್ಟಿಯು ಡೋಲಾಯಮಾನವಾಗಹತ್ತಿತ್ತು. ! ಈ ಮನೋಹರ ಪ್ರಸಂಗವನ್ನೆಲ್ಲ ಕಣ್ಮಟ್ಟ ನೋಡಿ ಮಧುರ ಗಾಯನವನ್ನು ಕಿವಿಮುಟ್ಟಿ ಕೇಳಿ ಧನ್ಯತೆಯನ್ನು ಪಡೆದಿದ್ದ ಒಬ್ಬ ತರುಣನು ಆ ಪುಷ್ಕರಣಿಯ ಪೂರ್ವದಂಡೆಯ ಮೇಲಿದ್ದ ಒಂದು ಅಶೋಕ ವೃಕ್ಷದ ಬುಡದಲ್ಲಿ ನಿಂತುಕೊಂಡು ಮೆಹರ್ಜಾನಳ ದಿವ್ಯಮೂರ್ತಿಯನ್ನು ಧ್ಯಾನಿಸಹತ್ತಿದನು. ಆನಂದದ ಭಯದಲ್ಲಿ ಆತನ ಶರೀರವು ಡೋಲಾಯಮಾನವಾಗಹತ್ತಿತು. ಬರುಬರುತ್ತ ಗಾನ ತಲ್ಲೀನತೆಯಲ್ಲಿ ಆತನು ಜಯದೇವ ಕವಿಯದೊಂದು ಅಷ್ಟಪದವಿಯನ್ನು ಸುಸ್ವರದಿಂದ ಗಾಯನಮಾಡಹತ್ತಿದನು.

ನಿಭೃತನಿಕುಂಜಗೃಹಂ ಗತಯಾ ನಿಶಿರಹಸಿ ನೀಲಿಯ ವಸಂತಂ ||
ಚಕಿತ ವಿಲೋಕಿತ ಸಕಲ ದಿಶಾರತಿ ರಭಸ ಭರೇಣ ಹಸಂತಂ ||
ಸಖಿ ಹೇಹಕೇಶೀ ಮಥನಮುದಾರಂ ರಮಯ ಮಯಾಸ ||
ಮದನ ಮನೋರಥ ಭಾವಿತಯಾ ಸವಿಕಾರಂ || ಧೃಂ ||

ಹೀಗೆ ಅಕಲ್ಪಿತವಾಗಿ ಕಿವಿಗೆ ಬಿದ್ದ ತರುಣನ ಗಾಯನವನ್ನು ಕೇಳಿದ ಕೂಡಲೇ ಮೆಹರ್ಜಾನಳು ಬೆದರಿದ ಚಿಗರಿಯಂತೆ ನಾಲ್ಕೂ ಕಡೆಗೆ ನೋಡಿದಳು. ಕೂಡಲೇ ಆಕೆಯು ಆನಂದದಿಂದ ಚಪ್ಪಾಳೆ ಬಾರಿಸಿ ಧ್ವಜಸ್ತಂಭಕ್ಕೆ ಕಟ್ಟಿದ್ದ ಕ್ರೀಡಾ ನೌಕೆಯನ್ನು ಬಿಚ್ಚಿ ಅದನ್ನು ಆ ತರುಣನ ಕಡೆಗೆ ಸಾಗಿಸಹತ್ತಿದಳು. ದಂಡೆಗೆ ಮುಟ್ಟುವ ವಿಷಯವಾಗಿ ಆಕೆಯು ಅತ್ಯಂತ ಆತುರಳಾಗಿದ್ದಳು. ನೌಕೆಯ ಹಂಗು ಇಲ್ಲದೆ ಭರ್‍ರನೆ ಹಾಗೂ ದಂಡೆಗೆ ಹೋಗಲಿಕ್ಕೆ ಬರುವ ಹಾಗೆ ಆಕೆಗೆ ರೆಕ್ಕೆಗಳಿರುತ್ತಿದ್ದರೆ, ಆಕೆಯು ಆಗಲೇ ಹಾರಿ ಹೋಗುತ್ತಿದ್ದಳು! ಆದರೆ ಹಾಗೆ ಮಾಡಲು ಶಕ್ಯವಿಲ್ಲದದ್ದರಿಂದ ಆಕೆಯು ಆದಷ್ಟು ಬೇಗನೆ ನೌಕೆಯನ್ನು ನಡೆಸಲೇಬೇಕಾಯಿತು. ಹುಟ್ಟು ಹಾಕುವಾಗ ಆಕೆಯು ತನ್ನ ದೇಹದ ಶ್ರಮವನ್ನು ಲೆಕ್ಕಿಸಲಿಲ್ಲ. ಜೋಲಿ ಹೋಗಿ ಪುಷ್ಕರಣಿಯಲ್ಲಿ ಬಿದ್ದೇನೆಂಬುದರ ಅರಿವು ಸಹ ಆಕೆಗೆ ಉಳಿಯಲಿಲ್ಲ. ಒಂದೆರಡು ಸಾರೆಯಂತೂ ನೌಕೆಯು ಹೊಯ್ದಾಡಲು., ಈ ಸುಂದರಿಯು ಜಲಸಮಾಧಿಯನ್ನು ಹೊಂದವಳೋ ಏನೋ ಎಂಬ ಭಯವು ತರುಣನ ಮನಸ್ಸಿನಲ್ಲಿ ಉತ್ಪನ್ನವಾಯಿತು; ಆದರೆ ಕ್ರೀಡಾ ನೌಕೆಯನ್ನು ನಡೆಸುವ ವಿಷಯದಲ್ಲಿ ಮೆಹರ್ಜಾನಳು ಅತ್ಯಂತ ಚತುರಳಾಗಿದ್ದರಿಂದು ಅಂಥ ಅಪಘಾತವೇನೂ ಆಗದೆ, ನೌಕೆಯು ದಂಡೆಗೆ ಮುಟ್ಟಿದ ಕೂಡಲೇ ಮೆಹರ್ಜಾನಳೂ ಕ್ರೀಡಾ ನೌಕೆಯಿಂದಲೇ ತರುಣನ ಕಡೆಗೆ ಸಾಗರಬಿದ್ದಳು. ಹೀಗೆ ಸಾಗರ ಬೀಳುವ ತರುಣಿಯನ್ನು ಎತ್ತಿಕೊಳ್ಳಲಿಕ್ಕೆ ತರುಣನು ಸಿದ್ದನೇ ಇದ್ದನು. ಆತನು ತರುಣಿಯನ್ನು ಆತುರದಿಂದ ಎತ್ತಿಕೊಂಡು ಪ್ರೇಮದಿಂದ ಚುಂಬಿಸಿದನು. ಅವರಿಬ್ಬರು ತರುಣರು ಒಬ್ಬರನ್ನೊಬ್ಬರು ಮಾತಾಡಿಸಲು ಅತುರಪಡುತ್ತಿದ್ದರೂ ಅವರ ಕೋರಿಕೆಯು ಸಫಲವಾಗಲಿಲ್ಲ. ಕಡೆಗೆ ಆ ತರುಣನು ಮೆಹರ್ಜಾನಲನ್ನು ಕುರಿತು-

ತರುಣ-ನೀನು ಮಂದಿರದಲಿಲ್ಲದಿದ್ದರಿಂದ ಕುಂಜವನದಲ್ಲಿ ಹುಡುಕ ಬೇಕೆಂದು ನಾನು ಹೊರಗೆ ಬರುತ್ತಿರಲು, ನೀನು ಯಾರನ್ನೂ ಸಂಗಡ ಬರಗೊಡದೆ ಒಬ್ಬಳೇ ಪುಷ್ಕರಣಿಗೆ ಹೋಗಿರುವೆಯೆಂದು ಮಾರ್ಜೀನೆಯು ನನ್ನ ಮುಂದೆ ಹೇಳಿದಳು ! ಪ್ರಿಯ ಮೆಹರ್ಜಾನ, ಹೀಗೆ ಅಪರಾತ್ರಿಯಲ್ಲಿ ನೀನು ಒಬ್ಬಳೇ ಪುಷ್ಕರಣಿಗೆ ಬಂದು ಧ್ವಜಸ್ತಂಭದವರಿಗೆ ನೌಕೆಯನ್ನು ಸಾಗಿಸಿಕೊಂಡು ಹೋಗಬಹುದೇ ? ಮಾರ್ಜೀನೆಯು ಕೂಡ ಸಂಗಡ ಬಾರದಷ್ಟು ಮನುಷ್ಯರ ಬೇಸರವು ನಿನಗೆ ಯಾಕೆ ಆಯಿತು ? ನಾನಂತು ಅಂಜುತ್ತಂಜುತ್ತಲೇ ಅಶೋಕವೃಕ್ಷದ ಬುಡದಲ್ಲಿ ಬಂದು ನಿಂತಿದ್ದೆನು ! ಮೊದಲು ನಿನ್ನನ್ನು ನೋಡಿದ ಕೂಡಲೇ ನಾನು ಆಶ್ಚರ್ಯಮಗ್ನನಾದೆನು. ಅಹಹ ! ಪ್ರಿಯೇ, ಮೆಹರ್ಜಾನ, ನಮ್ಮ ಕಾಳಿದಾಸಾದಿ ಕವಿಗಳು ಸ್ತ್ರೀಮುಖವನ್ನು ಕಮಲಕ್ಕೆ, ಹಾಗು ಚಂದ್ರನಿಗೆ ಹೋಲಿಸಿದ್ದೇನು ಆಟಕ್ಕಲ್ಲವೆಂಬುದನ್ನು ನಾನು ಇಂದು ಮನಗಂಡನು! ಪುಷ್ಕರಣಿಯಲ್ಲಿ ಒಮ್ಮೆಲೆ ಮೂರು ಚಂದ್ರಗಳು ಎಲ್ಲಿಂದ ಬಂದವೆಂಬುದು ನನಗೆ ತಿಳಿಯದಾಯಿತು. ಆಕಾಶದಲ್ಲಿಯೊಬ್ಬ, ಕ್ರೀಡಾ ನೌಕೆಯೊಲ್ಲೊಬ್ಬ, ಪುಷ್ಕರಣಿಯ ಜಲದಲ್ಲಿಯೊಬ್ಬ ಹೀಗೆ ಮೂವರು ಚಂದ್ರರು !! ಮುಂದೆ ನೀನು ಮಂಜುಳ ಗಾನದಿಂದ ನನ್ನ ಭ್ರಾಂತಿಯನ್ನು ದೂರಮಾಡದಿದ್ದರೆ, ನಾನು ಎಲ್ಲಿ ಭ್ರಮಿಷ್ಠನೇ ಆಗಿ ಹೋಗುತ್ತಿದ್ದೆನೋ ಏನೋ ?

ಮೆಹರ್ಜಾನ-ಸಾಕು, ಏನಾದರೂ ಬಣ್ಣದ ಮಾತು ಆಡಿ ನನ್ನನ್ನು ರಮಿಸಬೇಡಿರಿ. ಈಗ ಎಂಟು ದಿನ ನನ್ನನ್ನು ಮರೆತದ್ದನ್ನು ಮುಚ್ಚಿಕೊಳ್ಳಲಿಕ್ಕೆ ಯತ್ನಿಸುವ ಹಾಗೆ ತೋರುತ್ತದೆ ; ಆದರೆ ಇಂಥ ಯತ್ನಗಳಿಗೆ ನಾನು ಈಗ ಮೋಸಹೋಗುವ ಹಾಗಿಲ್ಲ.

ತರುಣ-ನಿನ್ನನ್ನು ಮೋಸಗೊಳಿಸಲಿಕ್ಕೆ ಯಾರು ಯತ್ನಿಸಿದರು ? ಪ್ರಿಯೆ, ಮೆಹರ್ಜಾನ, ನಿನ್ನನ್ನು ಮೋಸಗೊಳಿಸುವುದಕ್ಕಾಗಿ ನಾನು ಏನಾದರೂ ಮಾತಾಡುತ್ತೇನೆನ್ನುವ ಹಾಗೆ ನಿನಗೆ ತೋರುತ್ತದೇನು ? ಹೋದ ವರ್ಷ ನಿನ್ನ ಬಳಿಗೆ ಆಗಾಗ್ಗೆ ಬರುತ್ತಿರುವ ಹಾಗೆ, ಈ ವರ್ಷ ನಾನು ಬಾರದಿರುವದಕ್ಕೆ ಕಾರಣವುಂಟು. ಹಿರಿಯರು ಇರುವತನಕವರ ಸಂಗಡ ಬೇರೆ ಬೇರೆ ಮುಸಲ್ಮಾನ ಬಾದಶಹರ ಬಳಿಗೆ ಹೋಗಿ ಅವರೊಡನೆ ಮಾಡುವ ಆಲೋಚನೆಗಳನ್ನು ಕೇಳುವದಷ್ಟೇ ನನ್ನ ಕೆಲಸವಾಗಿತ್ತು. ಈಗ ಹಿರಿಯರು ಸ್ವರ್ಗಸ್ಥರಾಗಿರುವದರಿಂದ ಅವರ ಕೆಲಸಗಳನ್ನು ನಾನು ಜವಾಬ್ದಾರಿಯಿಂದ ಮಾಡಬೇಕಾಗಿದೆ. ಕೃಷ್ಣದೇವರಾಯರು ಚಿಟಿಗಿಗೊಮ್ಮೆ ಮುಟುಗಿಗೊಮ್ಮೆ ಕರಿಸಿ ಆಲೋಚನೆಗಳನ್ನು ಕೇಳುವರು. ಅವರು ನನಗೆ -ರಾಮರಾಜಾ, ನೀನು ತೀರ ತರುಣನಿರುವೆಯೆಂಬದೇನೋ ನಿಜ ; ಆದರೆ ನಿನ್ನ ಹಿರಿಯರ ಕೈಯಲ್ಲಿ ನೀನು ನುರಿತವನಿರುವದರಿಂದಾಗಿ, ಜಾತ್ಯಾ ನೀನು ಯೋಗ್ಯತೆಯವನೆಂಬ ಕಾರಣದಿಂದಾಗಲಿ ನಿನ್ನ ಹಿರಿಯರ ಮಂತ್ರಿಪದವನ್ನು ಕೊಡುವ ಬದಲು ಎರಡನೆಯದೇನನ್ನಾದರೂ ನಿನಗೆ ಕೊಡಬೇಕೆಂದು ಮಾಡಿರುವೆನು, ಎಂದು ಹೇಳಿದ್ದಾರೆ. ಹೀಗಿರಲು, ನಾನು ಎಂಟು ದಿನ ಬರಲಿಲ್ಲವೆಂಬದಿಷ್ಟೇ ಕಾರಣದಿಂದ ನೀನು ಹೀಗೆ ನಿಷ್ಠುರಳಾಗಬಹುದೋ ? ಮೆಹರ್ಜಾನ-(ನಕ್ಕು) ಇದರಲ್ಲಿ ನನ್ನ ನಿಷ್ಠುರತನವೇನು ? ಮನಸ್ಸಿನಲ್ಲಿ ಬಂದ ಮಾತನ್ನು ಸಥಿಯಿಂದ ಆಡಿ ತೋರಿಸಿದೆನು. ಅದಿರಲಿ, ಮಹಾರಾಜರು ನಿಮಗೆ ಎರಡನೆಯದೇನು ಕೊಡುವರು ?

ಈ ಪ್ರಶ್ನೆಗೆ ಉತ್ತರವನ್ನು ಕೊಡಲಿಕ್ಕೆ ರಾಮರಾಜನಿಗೆ ಪ್ರಶಸ್ತವಾಗಿ ತೋರಲಿಲ್ಲ; ಯಾಕೆಂದರೆ, ಕೃಷ್ಣದೇವರಾಯನು ತನ್ನ ಮಗಳನ್ನು ಕೊಡುತ್ತಾನೆಂದು ಹೇಳಿದರೆ, ಆಕೆಗೆ ಸಮಾಧಾನವಾಗುವಂತೆ ಇದ್ದಿಲ್ಲ; ಆದ್ದರಿಂದ ಆತನು ಆ ಮಾತನ್ನು ಮರೆಸುವದಕ್ಕಾಗಿ-

ರಾಮರಾಜ- ಮೆಹರ್ಜಾನ, ಹೀಗೆಯೇ ಅಶೋಕವೃಕ್ಷದ ಕೆಳಗೆ ಎಷ್ಟು ಹೊತ್ತು ನಿಂತುಕೊಳ್ಳಬೇಕು ? ಇನ್ನು ಮೇಲೆ ಮನೆಗೆ...........

ಮೆಹರ್ಜಾನ-(ಮುಂದೆ ಮಾತಿಗೆ ಅವಕಾಶ ಕೊಡದೆ) ಇಲ್ಲ, ಮನೆಗೆ ಹೋಗುವ ಹಾಗಿಲ್ಲ. ಇಂದಿನ ರಾತ್ರಿಯನ್ನೆಲ್ಲ ನಿಮ್ಮೊಡನೆ ಈ ಕ್ರೀಡಾ ನೌಕೆಯಲ್ಲಿ ಕುಳಿತು ಪುಷ್ಕರಣೆಯಲ್ಲಿಯೇ ವಿಷಹರಿಸಬೇಕೆಂಬ ಇಚ್ಛೆಯು ನನಗೆ ಆಗಿದೆ !

ರಾಮರಾಜ-ಬಹಳ ಸಂತೋಷ ಆಗಲಿ, ಅದಕ್ಕೆ ಯಾರು ಬೇಡವೆನ್ನುತ್ತಾರೆ.

ಕೂಡಲೇ ರಾಮರಾಜನು ಕ್ರೀಡಾ ನೌಕೆಯನ್ನು ಜಗ್ಗಿಕೊಂಡು ತಾನು ಹತ್ತಿ, ಆಮೇಲೆ ಮೆಹರ್ಜಾನಳಿಗೆ ಆಸರೆಕೊಟ್ಟು ಆಕೆಯನ್ನು ಎತ್ತಿಕೊಂಡನು. ಕೂಡಲೇ ನೌಕೆಯನ್ನು ನಡೆಸಿ ಸರೋವರದ ಮಧ್ಯದಲ್ಲಿದ್ದ ಧ್ವಜಸ್ತಂಭದ ಬಳಿಗೆ ಒಯ್ದನು. ಆತನು ಧ್ವಜಸ್ತಂಭಕ್ಕೆ ನೌಕೆಯನ್ನು ಕಟ್ಟಿ ಮೆಹರ್ಜಾನಳ ಹೆಗಲು ಮೇಲೆ ಎರಡೂ ಕೈಗಳನ್ನಿಟ್ಟು

ರಾಮರಾಜ-ನಿನ್ನ ಮನಸ್ಸಿನಂತೆ ಆಯಿತಷ್ಟೆ ? ಆದರೆ ಇಂದು ಸಂಗಡ ಯಾರನ್ನೂ ಕರಕೊಳ್ಳದೆ, ಮಾರ್ಜೀನೆಗೆ ಕೂಡ ನೀನು ಬರಬೇಡವೆಂದು ಬುದ್ಧಿಪೂರ್ವಕವಾಗಿ ಹೇಳಿ ಒಬ್ಬಳೇ ಪುಷ್ಕರಣಿಗೆ ಯಾಕೆ ಬಂದೆ ? ಹೊತ್ತು ವೇಳೆ ಒಂದೇಸಮನೆ ಇರುವದಿಲ್ಲ. ಏನಾದರೂ ಅಪಘಾತವಾದರೆ ಹ್ಯಾಗೆ ಮಾಡಬೇಕು ?

ಮೆಹರ್ಜಾನ-ಎಲ್ಲಿಯ ಘಾತ, ಎಲ್ಲಿಯ ಅಪಘಾತ ! ತಮ್ಮ ಕೃಪಾ ಛತ್ರವು ನನ್ನ ತಲೆಯ ಮೇಲೆ ಇರುವವರೆಗೆ ಆ ಘಾತಾಘಾತಗಳಿಂದ ಏನಾಗಬೇಕಾಗಿದೆ ? ತಾವು ವಿಜಯನಗರಕ್ಕೆ ಹೋಗಿ ಇಂದಿಗೆ ಎಂಟು ದಿವಸವಾಯಿತೆಂಬ ವಿಚಾರವು ಇಂದು ಮುಂಜಾನೆ ನನ್ನ ಮನಸಿನಲ್ಲಿ ಹೊಳೆದ ಕೂಡಲೇ ಜೀವಕ್ಕೆ ಹೇಗೆ ಹೇಗೊ ಆಯಿತು. ಸಮಾಧಾನವಾಗಲೊಲ್ಲದು! ಕಡೆಗೆ ಕುಂಜವನದಲ್ಲಿ ಒಬ್ಬಳೇ ಕುಳಿತುಕೊಳ್ಳಬೇಕೆಂದು ಹೋದೆನು. ಆದರೆ ಹಕ್ಕಿಗಳ ಕಿಲಿ ಬಲಿಯಿಂದ ಸಹ ನನ್ನ ಏಕಾಂತಕ್ಕೆ ಭಂಗವಾಯಿತು! ಅದರಿಂದ ಏಕಾಂತವನ್ನು ಬಯಸಿ, ಅಪರಾತ್ರಿಯ ಲಕ್ಷವಿಲ್ಲದೆ ಇಲ್ಲಿಗೆ ಬಂದುಬಿಟ್ಟೆನು.

ರಾಮರಾಜ-ಶಾಬಾಸ! ಮೆಹೆರ್, ನೀನು ಒಳ್ಳೆ ಮನಸ್ವಿಯು ಕಾಣುತ್ತೀ ನಿನ್ನ ಮನಸ್ಸಿಗೆ ಅಷ್ಟು ಅಸಮಾಧಾನವಾಗಲಿಕ್ಕೆ ಕಾರಣವೇನು ?

ಮೆಹರ್ಜಾನ-ಕಾರಣಗಳು ಒಂದೇ ಎರಡೇ ಎಷ್ಟೆಂತ ಹೇಳಲಿ ? ನೀವು ಬಳಿಯಲ್ಲಿ ಎಂಟು ದಿನ ಇಲ್ಲದ ಬಳಿಕ ದುಷ್ಟ ಕಲ್ಪನೆಗಳಿಗೇನು ಕೊರತೆಯು ಇನ್ನು ಮೇಲೆ ನಿಮ್ಮ ಭೆಟ್ಟಿಯೇ ಆಗುವದಿಲ್ಲವೆಂಬ ವಿಚಾರವು ಸಹ ನನ್ನ ಮನಸ್ಸಿನಲ್ಲಿ ಬಂದಿತ್ತು ಅದರಲ್ಲಿ ಈಗಂತು...........

ಈ ಮೇರೆಗೆ ಅರ್ಧ ಮಾತಾಡಿ, ಮೆಹರ್ಜಾನಳು ಲಜ್ಜೆಯಿಂದ ತಲೆ ಬಾಗಿಸಲು, ರಾಮರಾಜನು ಆಕೆಯನ್ನು ತಬ್ಬಿಕೊಂಡು ಆಲಂಗಿಸಿ ಗದ್ದ ಹಿಡಿದು ಮುಖವೆತ್ತಿ- "ಅದರಲ್ಲಿ ಈಗಂತು" ಎಂದು ಸುಮ್ಮನಾದೆಯಲ್ಲ ? ಮೆಹರ್‌. ಈಗೇನು ಆಯಿತು ಹೇಳು ಎಂದು ಕೇಳಲು, ಮೆಹರ್ಜಾನಳು, "ಏನೂ ಇಲ್ಲೆಂದು" ಹೇಳಿ ಆ ವಿಷಯವನ್ನು ಮರೆಸಲಿಕ್ಕೆ ಯತ್ನಿಸಿ-ನೀವು ಬೇಕಾದದ್ದು ಹೇಳೀರಿ ಇಂದು ನನ್ನ ಮನಸ್ಸಿನ ಸ್ಥಿತಿಯೇ ವಿಚಿತ್ರವಾಗಿದೆ, ನೌಕೆಯಲ್ಲಿ ನಾವಿಬ್ಬರೂ ಕುಳಿತು ನೌಕೆಯು ಮುಂದಕ್ಕೆ ಸಾಗಹತ್ತಿದ ಬಳಿಕ ನನ್ನ ಮನಸ್ಸಿನಲ್ಲಿ ಬಂದ ವಿಚಾರವನ್ನು ಹೇಳಿದರೆ ನಿಮಗೆ ನಗೆ ಬರಬಹುದು ; ಅಥವಾ ಯಾರಿಗೆ ಗೊತ್ತು ಸಿಟ್ಟೂ ಬರಬಹುದು.

ರಾಮರಾಜ-ಏನಂದಿ? ನಿನ್ನ ಮಾತಿಗೆ ನನಗೆ ಸಿಟ್ಟು ಬರಬಹುದೇ ? ಮೆಹರ್‌, ಈ ಜನ್ಮದಲ್ಲಿ ನಿನ್ನ ವಿಷಯವಾಗಿ ನನಗೆ ಎಂದೂ ಸಿಟ್ಟು ಬರಲಿಕ್ಕಿಲ್ಲ. ನೀನು ಮಾತ್ರ ನನ್ನ ಮೇಲೆ ಯಾವಾಗ ಸಿಟ್ಟಾದಿ, ಯಾವಾಗ ದ್ವೇಷ ಮಾಡ್ದೀ ಎಂಬುದನ್ನು ಹೇಳಲಾಗುವದಿಲ್ಲ ! ಈ ವಿಚಾರವು ಮೇಲಿಂದ ಮೇಲೆ ನನ್ನ ಮನಸ್ಸಿನಲ್ಲಿ ಬಂದು ನನಗೆ ಅಂಜಿಕೆ ಬರುತ್ತದೆ !

ಮೆಹರ್ಜಾನ-(ತಟ್ಟನೆ ಹಿಂದಕ್ಕೆ ಸರಿದು ರಾಮರಾಜನನ್ನು ದಿಟ್ಟಿಸಿ ನೋಡುತ್ತ) ಏನು? ನಿಮ್ಮ ಮೇಲೆ ನನ್ನ ಸಿಟ್ಟೇ, ದ್ವೇಷವೇ ಅವ್ವಯ್ಯಾ|ಮಹಾರಾಜ, ಇಂಥ ವಿಚಾರಗಳು ನಿಮ್ಮ ಮನಸ್ಸಿನಲ್ಲಿಯಾದರೂ ಹ್ಯಾಗೆ ಬಂದವು ? ನನ್ ನಡತೆಯಲ್ಲಿ ತಮಗೆ ಯಾವ ವ್ಯತ್ಯಾಸವು ತೋರಿತು !

ಹೀಗೆ ನುಡಿಯುವಾಗ ಮೆಹರ್ಜಾನಳ ಕಣ್ಣುಗಳು ಅಶ್ರುಪೂರ್ಣವಾದವು. ಆಕೆಯ ಕಂಠವು ಬಿಗಿದು ಮಾತುಗಳು ಹೊರಡದಾದವು. ಕಡೆಗೆ ಆ ತರಳೆಯು ಅಳುವ ಮೋರೆಯಿಂದ ರಾಮರಾಜನನ್ನು ಕುರಿತು ತಟ್ಟನೆ - ಮಹಾರಾಜರೇ, ಪರಸ್ಪರರ ವಿಷಯವಾಗಿ ಇಂಥ ಕುವಿಚಾರಗಳು ಉತ್ಪನ್ನವಾಗುವ ಲಕ್ಷಣವು ಒಳ್ಳೆಯದಲ್ಲ. ಈ ದುರ್ಲಕ್ಷಣದ ದುಷ್ಪರಿಣಾಮವು ಒದಗಬಾರದಾಗಿದ್ದರೆ, ಈಗ ನನ್ನ ಮನಸ್ಸಿನಲ್ಲಿ ಬಂದ ವಿಚಾರದಂತೆ ಕಾರ್ಯವಾಗಬೇಕು, ಅಂದರೆ ನಿಶ್ಚಿಂತೆಯು! ಎಂದು ನುಡಿದಳು. ಆಗ ರಾಮರಾಜನು ಕೃತ್ರಿಮ ನಗೆಯಿಂದ-ಪ್ರಿಯೇ, ಮೆಹರ್, ಹೇಳು ಹೇಳು : ಅದು ಹ್ಯಾಗೆ ನಿಶ್ಚಿಂತೆಯಾಗುವುದು ತಟ್ಟನೆ ಹೇಳು ಎಂದು ಆತುರಪಡಲು, ಮೆಹರ್ಜಾನಳು-ಮಹಾರಾಜ, ಹ್ಯಾಗೆಂಬುದನ್ನು ಹೇಳುತ್ತೇನೆ ಹೇಳುತ್ತೇನೆ ಕೇಳಿರಿ ; ನಾವು ಈಗ ನೌಕೆಯಲ್ಲಿ ಕುಳಿತು ದಂಡೆಗೆ ಹೋಗುವಾಗ ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿಕೊಳ್ಳಬೇಕು. ಹೀಗೆ ಅಪ್ಪಿಕೊಂಡಿರುವಾಗಲೇ ನೌಕೆಯು ಮುಳುಗಿ ಪುಷ್ಕರಣಿಯ ತಳವನ್ನು ಮುಟ್ಟಬೇಕು, ಅಂದರೆ ನಿಶ್ಚಿಂತೆಯಾಗುವುದು ! ಅನ್ನಲು, ರಾಮರಾಜನ ಮುಖವು ನಿಸ್ತೇಜವಾಗಿ ಆತನ ಸರ್ವಾಂಗದಲ್ಲಿ ಕಂಪನವು ಹುಟ್ಟಿತು ! ಪ್ರಿಯವಾಚಕರೇ ಆ ತರುಣ ದಂಪತಿಗಳ ಮನಸ್ಸಿನಲ್ಲಿ ಈ ಕುಭಾವನಗಳೇ ಅವರ ವಿನಾಶಾಂಕುರದ ಅಭಿವೃದ್ಧಿಗೆ ಕಾರಣವಾಗಿರಬಹುದೇನು ?

****