ವಿಷಯಕ್ಕೆ ಹೋಗು

ಕನ್ನಡಿಗರ ಕರ್ಮ ಕಥೆ/ವಿನಾಶವೃಕ್ಷ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೬೯–೭೯

೮ನೆಯ ಪ್ರಕರಣ

ವಿನಾಶವೃಕ್ಷ

ರಾಮರಾಜನ ಚಿತ್ತವನ್ನು ಮೆಹರ್ಜಾನಳು ಸಂಪೂರ್ಣವಾಗಿ ಆಕರ್ಷಿಸಿ ಕೊಡದ್ದರಿಂದ, ಆ ತರುಣಸರದಾರನು ಮೇಲೆ ಹೇಳಿದಂತೆ ಕೃಷ್ಣದೇವರಾಯನ ಮುಂದೆ ಇಲ್ಲದ್ದೊಂದು ಹೇಳಿ ಕುಂಜವನಕ್ಕೆ ಬಂದಿದ್ದನು. ಕುಂಜವನದಲ್ಲಿ ಮೆಹರ್ಜಾನಳೊಬ್ಬಳು ಇಲ್ಲದ್ದರಿಂದ ಆ ಮನೋಹರ ವನವು ಈಗ ರಾಮರಾಜನಿಗೆ ದುಃಖದಾಯಕವಾಗಿ ತೋರಹತ್ತಿತು. ಮೆಹರ್ಜಾನಳೊಡನೆ ತಾನು ರಮಿಸಿದ ಪ್ರತಿ ಒಂದು ಸ್ಥಳವೂ, ಲತಾಮಂಟಪಗಳೂ, ವೃಕ್ಷಲತೆಗಳೂ ರಾಮರಾಜನ ದುಃಖವನ್ನು ಹೆಚ್ಚಿಸತೊಡಗಿದವು. ಅತನು ಮೆಹರ್ಜಾನಳ ಶಯನಗೃಹವನ್ನು ಪ್ರವೇಶಿಸಿದನು. ಅಲ್ಲಿ ಆತನ ಕಣ್ಣಿಗೆ ಮೆಹರ್ಜಾನಳ ವಸ್ತ್ರಾಭರಣಗಳ ಪೆಟ್ಟಿಗೆಯು ಬಿದ್ದಿತು. ಆಗ ರಾಮರಾಜನು, ಕೌತುಕದಿಂದ ಅದನ್ನು ತೆರೆಯಹೋಗಲು, ಅದಕ್ಕೆ ಕೀಲಿಯು ಹಾಕಿತ್ತು ; ಆದರೆ ಕೀಲಿಯ ಕೈಯು, ಪೆಟ್ಟಿಗೆಯ ಕೀಲಿಯಲ್ಲಿಯೇ ಇರುವದನ್ನು ನೋಡಿ ರಾಮರಾಜನು ಅಶ್ಚರ್ಯಪಟ್ಟು ಪೆಟ್ಟಿಗೆಯ ಕೀಲಿಯನ್ನು ತೆಗೆದನು. ಒಳಗೆ ವಸ್ತ್ರಾಭರಣಗಳು ಅಸ್ತವ್ಯಸ್ತವಾಗಿ ಬಿದ್ದಿದ್ದವು. ರಾಮರಾಜನು ಅವನ್ನೆಲ್ಲ ಒಂದೊಂದೇ ಹೊರಗೆ ತೆಗೆದುನೋಡಲು, ಅತನು ಕೊಟ್ಟಿದ್ದ ವಸ್ತ್ರಾಭರಣಗಳೆಲ್ಲ ಅಚ್ಚಳಿಯದೆ ಎಲ್ಲವೂ ಇದ್ದವು ! ರಾಮರಾಜನು ಕೊಟ್ಟಿದ್ದ ಒಂದು ರಿಂಬಿಯನ್ನು ಕೂಡ ಸಂಗಡ ಒಯ್ಯಲಿಕ್ಕಿಲ್ಲೆಂಬ ಪ್ರತಿಜ್ಞೆಯಿಂದ ಮೆಹರ್ಜಾನಳು ಕುಂಜವನದಿಂದ ಹೊರಟಿದ್ದನ್ನು ವಾಚಕರು ಮರೆತಿರಲಿಕ್ಕಿಲ್ಲ. ತಾನು ಮೊದಲು ಮೆಹರ್ಜಾನಳಿಗೆ "ನಿನ್ನನ್ನು ಪಟ್ಟದ ರಾಣಿಯನ್ನಾಗಿ ಮಾಡಿಕೊಳ್ಳುವೆ" ನೆಂದು ವಚನಕೊಟ್ಟು, ಈಗ ಮೋಸಮಾಡಿದ್ದರಿಂದ ಆಕೆಯು ಹೀಗೆ ತನ್ನ ಮೇಲೆ ಸಿಟ್ಟಾಗಿ ಅಭಿಮಾನ ತೊರೆದು ಹೋದಳೆಂದು ತಿಳಿದು, ಅತನು ತನ್ನನ್ನು ಬಹಳವಾಗಿ ಹಳಿದುಕೊಳ್ಳಹತ್ತಿದನು ; ಆದರೆ ರಾಮರಾಜನಂಥವರು ಬಹಳ ಹೊತ್ತು ತಮ್ಮನ್ನು ತಾವು ಹಳಿದುಕೊಳ್ಳುತ್ತ ಕೂಡ್ರುವ ಸಂಭವವು ಕಡಿಮೆ. ಅದರಂತೆ ರಾಮರಾಜನು ತನ್ನನು ಹಳಿದು ಕೊಳ್ಳುವದನ್ನು ಬಿಟ್ಟು, ಮೆಹರ್ಜಾನಳ ಮೇಲೆ ತಪ್ಪುಹೊರಿಸುವ ಉದ್ದೇಶದಿಂದ ತನ್ನೊಳಗೆ- “ಹೀಗೆ ಆಕೆಯು ಹೊರಟುಹೋಗುವಂಥ ಅಪರಾಧವನ್ನಾದರೂ ನಾನೇನು ಮಾಡಿದ್ದೇನು ? ಕಾರ್ಯ ನಿಮಿತ್ತದಿಂದ ಕೆಲವು ದಿನ ಕುಂಜವನಕ್ಕೆ ಬರುವುದಿಲ್ಲೆಂದು ನಾನು ಪತ್ರ ಬರೆದರೆ, ಕೊಟ್ಟ ವಚನಗಳನ್ನು ಮುರಿದ ಹಾಗಾಯಿತೇ ! ರಾಜಕಾರಣಗಳಲ್ಲಿ ಪ್ರಸಂಗಕ್ಕನುಸರಿಸಿ ಸೋಗು ಹಾಕಬೇಕಾಗುತ್ತದೆಂಬ ಮಾತು ಆಕೆಗೆ ತಿಳಿಯಬಾರದೇನು ? ಆಕೆಗೆ ಇಲ್ಲಿ ಯಾತರ ಕೊರತೆಯಿತ್ತು ? ಇನ್ನು ಮೇಲೆ ಇಷ್ಟು ಸುಖವನ್ನು ಆಕೆಯು ಬೇರೆ ಕಡೆಗೆ ಪಡೆಯಬಹುದೋ ? ಅಂದ ಬಳಿಕ ಆಕೆಯು ಸ್ವಲ್ಪ ಸಮಾಧಾನ ಮಾಡಿಕೊಳ್ಳತಕ್ಕದ್ದಿತ್ತು” ಎಂದು ತನ್ನೊಳಗೆ ಮಾತಾಡಿಕೊಂಡು ತನ್ನ ಸಮಾಧಾನ ಮಾಡಿಕೊಳ್ಳಹೋದನು ; ಆದರೆ ಅದರಿಂದ ಆತನಿಗೆ ಸಮಾಧಾನವಾಗಲಿಲ್ಲ. ಆ ಶಯನಗೃಹದಲ್ಲಿ ಆತನು ಬಹಳ ಹೊತ್ತು ಕುಳಿತುಕೊಳ್ಳಲಾರದೆ ಅಲ್ಲಿಂದ ಹೊರಟು ಪುಷ್ಕರಣಿಯ ತೀರಕ್ಕೆ ಹೋದನು. ಅಲ್ಲಿ ಆತನಿಗೆ ಅಂದಿನ ಮೆಹರ್ಜಾನಳ ನೌಕಾಕ್ರೀಡೆಯೂ, ಆಕೆಯ ಮನೋಹರವಾದ “ಹೇರಿ ಆಜ ಸಖೀಗೀ ಮೇ ಕ್ಯಾ ಕಹು” ಎಂಬ ಹಿಂದುಸ್ಥಾನಿಯ ಮಂಜುಳಗಾನವೂ, ತಾನು ಅದಕ್ಕೆ ಪ್ರತ್ಯುತ್ತರವಾಗಿ ಗಾನಮಾಡಿದ "ನಿಭೃತ ನಿಕೃಂಜಗೃಹಂ” ಎಂಬ ಸಂಸ್ಕೃತ ಪದ್ಯವೂ ನೆನಪಾಗಿ ಆತನ ಅಂತಃಕರಣವು ಮತ್ತಷ್ಟು ವ್ಯಥಿತವಾಗಹತ್ತಿತು. ಆತನು ಅಲ್ಲಿಯೂ ಬಹಳ ಹೊತ್ತು ನಿಲ್ಲದೆ ಭ್ರಮಿಷ್ಟನಂತೆ ಕುಂಜವನದ ಬೇರೆ ಬೇರೆ ಭಾಗಗಳಲ್ಲಿ ಸಂಚರಿಸಿ ಕಾಲಹರಣ ಮಾಡಿದನು. ಅಂದಿನ ರಾತ್ರಿಯೂ ಆತನಿಗೆ ಕಷ್ಟದಾಯಕವಾಯಿತು. ಆ ರಾತ್ರಿಯಲ್ಲಿ ಮೆಹರ್ಜಾನಳ ಸಂಬಂಧದ ಕನಸುಗಳು ಬಿದ್ದು ಆತನ ದುಃಖವು ಮತ್ತಷ್ಟು ಹೆಚ್ಚಾಯಿತು.

ಮೆಹರ್ಜಾನಳನ್ನು ಹುಡುಕಲಿಕ್ಕೆ ರಾಮರಾಜನಿಗೆ ಮನುಷ್ಯರ ಕೊರತೆ ಇದ್ದಿಲ್ಲ : ಆದರೆ ತಾನು ಧನಮಲ್ಲನಿಗೆ ಬಹಳ ಸಿಟ್ಟುಮಾಡಿ ಕಳಿಸಿರುವದರಿಂದ, ಆತನೇ ಇನ್ನು ಒಂದೆರಡು ದಿನಗಳಲ್ಲಿ ಮೆಹರ್ಜಾನಳ ಗೊತ್ತು ಹಚ್ಚಿಕೊಂಡು ಬರುವನೆಂಬ ನಂಬಿಗೆಯಿಂದ ರಾಮರಾಜನು ಯಾರನ್ನೂ ಹುಡುಕಲಿಕ್ಕೆ ಕಳಿಸಲಿಲ್ಲ. ಇದಲ್ಲದೆ. ಸಿಟ್ಟಿನ ಭರದಲ್ಲಿ ಹೋದ ಮೆಹರ್ಜಾನಳು ಸಿಟ್ಟು ಇಳಿದ ಬಳಿಕ ಆಕೆಯು ತಾನಾಗಿ ಬರಬಹುದೆಂಬ ಆಸೆಯೂ ಆತನನ್ನು ಕೆಲಮಟ್ಟಿಗೆ ಸಮಾಧಾನಗೊಳಿಸಿತ್ತು. ಹೀಗೆ ನಾಲ್ಕೆಂಟು ದಿನಗಳು ಕ್ರಮಿಸಿದವು. ರಾಮರಾಜನ ಎಲ್ಲ ಆಸೆ ದುರಾಸೆಗಳು ವ್ಯರ್ಥವಾದವು. ಆಗ ಆತನು ಧನಮಲ್ಲನನ್ನು ಹುಡುಕಿಕೊಂಡು ಬರುವದಕ್ಕಾಗಿ ನಾಲ್ಕೂ ಕಡೆಗೆ ಆಳುಗಳನ್ನು ಕಳಿಹಿಸಿದನು. ಮುಂದೆ ಆ ನಾಲ್ಕು ದಿನಗಳು ಕ್ರಮಿಸಿಹೋಗಹತ್ತಿದವು. ನಾಲ್ಕನೆಯ ದಿನ ರಾತ್ರಿ ಆರು ತಾಸಿನ ಸುಮಾರಕ್ಕೆ ಆತನಿಗೊಂದು ಸ್ವಪ್ನವು ಬಿದ್ದು, ಅದರಲ್ಲಿ ತಾನು ವಿದ್ಯಾನಗರಕ್ಕೆ ಹೊರಟುನಿಂತಂತೆಯೂ, ಮೆಹರ್ಜಾನಳು ದೀನವಾಣಿಯಿಂದ ತನ್ನನ್ನು ಕುರಿತು-ಬೇಡಿರಿ, ದಯಮಾಡಿ ಹೀಗೆ ನನ್ನ ವಿಶ್ವಾಸಘಾತ ಮಾಡಬೇಡಿರಿ” ಎಂದು ಪ್ರಾರ್ಥಿಸಿದಂತೆಯೂ ಆತನಿಗೆ ಆಯಿತು. ಕೂಡಲೆ ರಾಮರಾಜನು ಗಡಬಡಿಸಿ ಎದ್ದು ಕುಳಿತುಕೊಂಡು ನಾಲ್ಕೂ ಕಡೆಗೂ ಕಣ್ಣೆರೆದು ನೋಡಿದನು. ಆತನಿಗೆ ನೋಡಿದಕ್ಕೆಲ್ಲ ಕನಸಿನೊಳಗಿನ ಮೆಹರ್ಜಾನಳೇ ಕಾಣಹತ್ತಿದಳೂ. ಆಗ ರಾಮರಾಜನು-ಛೇ ಛೇ ! ಇನ್ನೆಲ್ಲಿಯ ಮೆಹರ್ಜಾನಳೂ ! ವಿಶ್ವಾಸಘಾತಕನಾದ ನನ್ನ ಮೇಲಿನ ಸಂತಾಪದಿಂದ ಇಲ್ಲಿಯದೊಂದು ರಿಂಬಿಯನ್ನು ಕೂಡ ತಕ್ಕೊಂಡು ಹೋಗದೆಯಿದ್ದ ಹಟಮಾರಿ ಸ್ವಭಾವದ ಆ ಮೆಹರ್ಜಾನಳು ತಿರುಗಿ ಬರಲಾರಳೆಂಬುದು ನನಗೆ ಇನ್ನೂ ತಿಳಿಯಬಾರದೇನು ? ಇನ್ನು ವ್ಯರ್ಥವಾದ ಆಸೆಯಿಂದ ಹೀಗೆಯೇ ಕುಂಜವನದಲ್ಲಿ ಕಾಲವನ್ನು ಕಳೆಯುತ್ತ ಕುಳಿತುಕೊಂಡರೆ, ಕೃಷ್ಣದೇವರಾಯನ ವಿಕಲ್ಪಕ್ಕೆ ಕಾರಣವಾಗಿ ಅಲ್ಲಿಯ ಕೆಲಸವೂ ಕೆಟ್ಟುಹೋದೀತು. ರಾಜಪುತ್ರಿಯಲ್ಲಿ ನನ್ನ ಪೂರ್ಣವಾದ ಅನುರಾಗವು ಇರುತ್ತದೆಂಬ ನಂಬಿಗೆಯು ಮಹಾರಾಜರಿಗೆ ಆಗುವದು ಅವಶ್ಯವಾಗಿರುತ್ತದೆ. ಹೀಗೆ ಮೂರು ಮೂರು ದಿನಕ್ಕೊಮ್ಮೆ ಏನಾದರೂ ನೆವಮಾಡಿ ವಿಜಯನಗರವನ್ನು ಬಿಟ್ಟುಬಂದು, ಹದಿನೈದು ದಿನಗಟ್ಟಲೆ ನಾನು ಹೊರಗೆ ಇರಹತ್ತಿದರೆ, ತರ್ಕವಿತರ್ಕಗಳು ಆರಂಭವಾಗಿ, ನನ್ನ ಹುಳುಕು ಹೊರಬಿದ್ದೀತು ; ಆದ್ದರಿಂದ ನಾಳೆ ಬೆಳಗಾದ ಕೂಡಲೆ ವಿಜಯನಗರಕ್ಕೆ ಹೋಗಬೇಕು, ಎಂದು ನಿಶ್ಚಯಿಸಿದನು. ಕೃಷ್ಣದೇವರಾಯನು ತಮ್ಮ ಮಗಳನ್ನು ತಮ್ಮ ಸಮಾನಸ್ಕಂದರಾದ ಉತ್ತರ ಹಿಂದುಸ್ತಾನದ ಯಾವನೊಬ್ಬ ರಾಜಪುತ್ರನಿಗೆ ಕೊಡಬಹುದಾಗಿತ್ತು ; ಆದರೆ ಮಗಳು ದೂರ ಹೋಗಬೇಕಾಗುವದರಿಂದ ಆಕೆಯ ಯೋಗಕ್ಷೇಮಕ್ಕೆ ಆಸ್ಪದವು ಉಳಿಯುವದಿಲ್ಲೆಂಬ ಕರ್ನಾಟಕರ ಸ್ವಾಭಾವಿಕವಾದ ಹೆಣ್ಣುಗಳಿಗನುಸರಿಸಿ, ಅವರು ತಮ್ಮ ದರ್ಬಾರದೊಳಗಿನ ಯಾವನೊಬ್ಬ ತರುಣ ಸರದಾರನಿಗೆ ಕೊಡಬೇಕೆಂದು ಯೋಚಿಸಿ ಆರಿಸಿ ರಾಮರಾಜನಿಗೆ ತಮ್ಮ ಮಗಳನ್ನು ಕೊಟ್ಟಿದ್ದರು ! ಅಳಿಯನನ್ನು ಅರಸನ ಯೋಗ್ಯತೆಯವರೆಗೆ ಏರಿಸುವದು ತಮ್ಮ ಕೈಯೊಳಗಿರುತ್ತದೆಂದು ಅವರು ತಿಳಿಕೊಂಡಿದ್ದರು. ಈ ಮಾತು ರಾಮರಾಜನಿಗೂ ಗೊತ್ತಿತ್ತು. ಆದ್ದರಿಂದ ಆತನು ಆತುರ ಪಟ್ಟು ಬೆಳಗಾಗುವ ಹಾದಿಯನ್ನು ನೋಡದೆ ಮೆಹರ್ಜಾನಳ ವಸ್ತ್ರಾಭರಣಗಳ ಪೆಟ್ಟಿಗೆಯನ್ನು ಮುಚ್ಚಿ, ಅದಕ್ಕೆ ಬೀಗಹಾಕಿ ಇಟ್ಟು, ತನ್ನ ಕುದುರೆಯನ್ನು ತರಿಸಿ ವೇಗದಿಂದ ವಿಜಯನಗರದ ಕಡೆಗೆ ಸಾಗಿದನು.

ಮುಂದೆ ರಾಮರಾಜನಿಗೆ ೩೦ ವರ್ಷಗಳವರೆಗೆ ಮೆಹರ್ಜಾನಳ ಶೋಧವಾಗಲಿಲ್ಲ ! ಆತನು ಈ ಮೂವತ್ತು ವರ್ಷ ಒಂದೇಸಮನೆ ಆಕೆಯನ್ನು ಹುಡುಕಿಸಿದನ್ನೆನ್ನುವ ಹಾಗಿಲ್ಲ. ಮೊದಮೊದಲು ಆತನು ಒಳ್ಳೆ ಆಸಕ್ತಿಯಿಂದ ಆಕೆಯನ್ನು ಹುಡುಕಿಸಿದನು. ಆಕೆಯ ಶೋಧಕ್ಕಾಗಿ ಅಲ್ಲಲ್ಲಿ ಗುಪ್ತಚಾರರನ್ನು ಇಟ್ಟಿದ್ದನು. ಎರಡು ತಿಂಗಳಾದರೂ ಮೆಹರ್ಜಾನಳ ಗೊತ್ತೂ ಹತ್ತಲಿಲ್ಲ, ಧನಮಲ್ಲನ ಗೊತ್ತೂ ಹತ್ತಲಿಲ್ಲ. ಆಗ ಆತನು-"ಹೋದರೆ ಹೋದಳೂ. ನಾನೇನು ಆಕೆಯನ್ನು ಬಿಟ್ಟಿದಿಲ್ಲ, ಸುಖವನ್ನು ಭೋಗಿಸಬೇಕೆಂದು ಆಕೆಯ ಹಣೆಬರಹದಲ್ಲಿಯೇ ಬರೆದಿಲ್ಲ, ನಾನು ಮಾಡುವದೇನು?” ಎಂದು ಮನಸ್ಸಿನಲ್ಲಿ ಅಂದುಕೊಂಡು. ಹುಡುಕಿಸುವದನ್ನು ಬಿಟ್ಟುಕೊಟ್ಟನು ; ಆದರೆ ಆಕೆಯ ಹಳವಂಡವು ಮಾತ್ರ ಆತನಿಗೆ ಹೋಗಲಿಲ್ಲ. ಇದು ಕಡೆತನಕ ಇರತಕ್ಕದ್ದೆ ಎಂದು ರಾಮರಾಜನು ಅಂದುಕೊಳ್ಳುತ್ತಿದ್ದನು. ಹತ್ತು ಹದಿನೈದು ದಿನಗಳಿಗೊಮ್ಮೆ ಆತನು ಕುಂಜವನಕ್ಕೆ ಹೋಗುತ್ತ ಬರುತ್ತಲಿದ್ದನು. ಕುಂಜವನದ ವ್ಯವಸ್ಥೆಯನ್ನು ಮೊದಲಿನಂತೆಯೇ ಇಡಬೇಕೆಂದು ರಾಮರಾಜನ ಕಟ್ಟಪ್ಪಣೆಯಿದ್ದದ್ದರಿಂದ, ಅದರ ವ್ಯವಸ್ಥೆಯಲ್ಲಿ ಹೆಚ್ಚುಕಡಿಮೆಯಾಗಿದ್ದಿಲ್ಲ. ರಾಮರಾಜನು ಮೇಲೆ ಮೇಲೆ ಬರುತ್ತಿರುವನೆಂಬ ಭಯವು ವ್ಯವಸ್ಥಾಪಕರಿಗೆ ಇತ್ತು ಮುಂದೆ ಬರುಬರುತ್ತ ರಾಮರಾಜನ ಆಸಕ್ತಿಯು ಕಡಿಮೆಯಾಯಿತು. ರಾಜಕಾರಣದ ಸಲುವಾಗಿ ಆ ಹಾದಿಯಿಂದ ಹೋದಾಗ ಆತನು ಕುಂಜವನದೊಳಗೆ ಹೋಗಿ, ವ್ಯವಸ್ಥೆಯಲ್ಲಿ ಕೊರತೆಯಾಗಿದ್ದ ಪಕ್ಷದಲ್ಲಿ ವ್ಯವಸ್ಥಾಪಕರಿಗೆ ಸಿಟ್ಟು ಮಾಡುತ್ತಿದ್ದನು. ಹೀಗೆ ಒಂದು ವರ್ಷವು ಕಳೆದುಹೋಯಿತು. ಮತ್ತೂ ಒಂದು ವರ್ಷವು ಕಳೆದುಹೋಯಿತು ಆ ವರ್ಷದಲ್ಲಿ ರಾಮರಾಜನಿಗೆ ಕುಂಜವನದ ಇಲ್ಲವೆ ಮೆಹರ್ಜಾನಳ ಅಥವಾ ಧನಮಲ್ಲನ ಸ್ಮರಣವಾದರೂ ಆಗಿತ್ತೋ, ಇಲ್ಲವೋ ಎಂಬುದನ್ನು ಹೇಳಲಾಗುವದಿಲ್ಲ. ಕುಂಜವನದ ವ್ಯವಸ್ಥಾಪಕನು ಹತ್ತು-ಹದಿನೈದು ದಿವಸಗಳಿಗೊಮ್ಮೆ ಮುಜುರೆ ಮಾಡಲಿಕ್ಕೆ ಬಂದಾಗ ರಾಮರಾಜನು ಆತನನ್ನು ಕುರಿತು-ಕುಂಜವನದ ವ್ಯವಸ್ಥೆಯು ನೆಟ್ಟಗಿರುತ್ತದಷ್ಟೇ? ನಾವು ಯಾವಾಗ ಬಂದೇವೆಂಬದರ ನಿಯಮವಿಲ್ಲ. ಜಾಗ್ರತೆಯಿಂದ ವ್ಯವಸ್ಥೆಯನ್ನು ಕಾಯ್ದುಕೊಳ್ಳತಕ್ಕದ್ದು, ಎಂದು ಹೇಳುವನಲ್ಲದೆ ಮೆಹರ್ಜಾನಳ ಅಥವಾ ಧನಮಲ್ಲನ ವಿಷಯವಾಗಿ ಚಕಾರ ಶಬ್ದವನ್ನು ತೆಗೆಯುತ್ತಿದ್ದಿಲ್ಲ.

ಹೀಗಾಗಲಿಕ್ಕೆ ತಕ್ಕ ಕಾರಣವೂ ಒದಗಿತು ಆ ಮಹತ್ವಾಕಾಂಕ್ಷೆಯಾದ ಸರದಾರನಿಗೆ ತನ್ನ ಮಹತ್ವಾಕಾಂಕ್ಷೆಯನ್ನು ಪೂರ್ಣಮಾಡಿಕೊಳ್ಳುವ ಸಮಯವೂ, ಸಾಮಗ್ರಿಗಳೂ ಅನುಕೂಲವಾದವು. ತಮ್ಮ ಮಗಳನ್ನು ರಾಮರಾಜನಿಗೆ ಲಗ್ನಮಾಡಿಕೊಟ್ಟ ಸ್ವಲ್ಪ ದಿನಗಳಲ್ಲಿಯೇ ಕೃಷ್ಣದೇವರಾಯರು ಅಕಸ್ಮಾತ್ತಾಗಿ ಬೇನೆಬಿದ್ದರು. ಅವರು ರಾಮರಾಜನನ್ನು ತಮ್ಮ ಬಳಿಯಲ್ಲಿ ಕುಳ್ಳಿರಿಸಿಕೊಂಡು ರಾಜ್ಯಕಾರಭಾರವನ್ನು ನಡಿಸಹತ್ತಿದರು. ಇಷ್ಟು ಆಸ್ಪದವು ದೊರೆತಕೂಡಲೆ ರಾಮರಾಜನು ತನ್ನ ಲಾಭವನ್ನು ಚೆನ್ನಾಗಿ ಮಾಡಿಕೊಳ್ಳಹತ್ತಿದನು. ಕೃಷ್ಣದೇವರಾಯರ ಮನಸ್ಸಿನ ಒಲವನ್ನರಿತು, ಹೀಗೆ ಹೀಗೆ ಅಪ್ಪಣೆಗಳನ್ನು ಬರದಿರುತ್ತೇನೆ, ಎಂದು ಹೇಳಿ ಕೂಡಲೆ ಆಜ್ಞಾಪತ್ರಗಳನ್ನು ಓದಿ ತೋರಿಸಿದನು. ಇದರಿಂದ ಕೃಷ್ಣದೇವರಾಯನು ರಾಮರಾಜನ ಧೈರ್ಯತನಕ್ಕೆ ಮೆಚ್ಚಿ ಆತನನ್ನು ಅಭಿನಂದಿಸ ಹತ್ತಿದನು. ಬೇನೆಯಲ್ಲಿ ಅವರಿಗೆ ಕೆಲಸ ಕಡಿಮೆಯಾಗಿ, ತಮ್ಮ ಮನಸಿನಂತೆ ಕೆಲಸವಾದರೆ ಸಾಕಾಗಿತ್ತು. ಮುಂದೆ ಬರಬರುತ್ತ ರಾಮರಾಜನು ಕೃಷ್ಣದೇವರಾಯರ ಒಲವನ್ನು ಲೆಕ್ಕಿಸದೆ, ತನ್ನ ಮನಸ್ಸಿಗೆ ಬಂದಂತೆ ಆಜ್ಞಾಪತ್ರಗಳನ್ನು ಬರೆದು ಹೀಗೆ ಹೀಗೆ ಎಂದು ರಾಯರ ಮುಂದೆ ನಿವೇದಿಸಹತ್ತಿದನು. ರಾಯರ ಪ್ರಕೃತಿಯು ದಿನದಿನಕ್ಕೆ ಅಶಕ್ತವಾಗುತ್ತ ನಡೆದದ್ದರಿಂದಲೂ, ರಾಮರಾಜನ ಮೇಲೆ ಅವರ ಪೂರ್ಣ ವಿಶ್ವಾಸವಿದ್ದದ್ದರಿಂದಲೂ ರಾಮರಾಜನ ಮಾತಿನ ವಿಷಯವಾಗಿ ಅವರಿಗೆ ವಿಕಲವು ಬಾರದಾಯಿತು. ಬರಬರುತ್ತ ರಾಮರಾಜನು ಸ್ವತಂತ್ರವಾಗಿ ರಾಜ್ಯಭಾರವನ್ನು ಸಾಗಿಸಿ, ದಿನಕ್ಕೊಮ್ಮೆ ರಾಯರ ದರ್ಶನಕ್ಕೆ ಬಂದು, ನಡೆದ ವಿಶೇಷ ಸಂಗತಿಗಳನ್ನು ಕುರಿತು ನಾಲ್ಕು ಮಾತುಗಳನ್ನು ಆಡಹತ್ತಿದನು. ರಾಯರಾದರೂ ಪ್ರಕೃತಿಗೆ ಸ್ವಸ್ಥವಿದ್ದರೆ ರಾಮರಾಜನ ಮಾತುಗಳನ್ನು ಕೇಳುತ್ತಿದ್ದರು, ಇಲ್ಲದಿದ್ದರೆ ಅದನ್ನೂ ಕೇಳುತ್ತಿದ್ದಿಲ್ಲ. ಆದ್ದರಿಂದ ರಾಮರಾಜನೇ ವಿಜಯನಗರದ ರಾಜ್ಯದ ಪ್ರತ್ಯಕ್ಷ ರಾಜನಾದನು.

ರಾಮರಾಜನಂಥ ಮಹತ್ವಾಕಾಂಕ್ಷಿಗೆ ಇಂಥ ಪ್ರಸಂಗವು ದೊರೆತ ಬಳಿಕ ಕೇಳುವದೇನು ? ರಾಮರಾಜನು ತನ್ನ ಹಿತವನ್ನು ಸಾಧಿಸಿಕೊಳ್ಳಲಿಕ್ಕೆ ಬರುವ ಹಾಗಿದ್ದಮಟ್ಟಿಗೆ, ಅದನ್ನು ಕಸರಿಲ್ಲದೆ ಸಾಧಿಸಿಕೊಂಡನೆಂದು ಹೇಳಬಹುದು. ಆತನು ತನ್ನ ಅಣ್ಣನಾದ ತಿರುಮಲನಿಗೆ ಸೇನಾಪತಿಯ ಅಧಿಕಾರವನ್ನು ಕೊಡಿಸಿದನು; ಮತ್ತು ಶಾರ್ಜದೇವನೆಂಬ ತನ್ನ ಮಿತ್ರನಿಗೆ ಕೃಷ್ಣದೇವರಾಯರ ಖಾಸಗಿ ಕಾರಭಾರಿಯನ್ನಾಗಿ ನಿಯಮಿಸಿದನು. ಒಟ್ಟಿಗೆ, ಅರಸರ ಮುಖ್ಯ ಕಾರಭಾರವು ತನ್ನ ಕೈಯಲ್ಲಿ, ಅರಸರ ಸೈನ್ಯವು ತನ್ನ ಅಣ್ಣನ ಕೈಯಲ್ಲಿ, ಅರಸರ ಖಾಸಗಿ ಕಾರಭಾರವು ತನ್ನ ಮಿತ್ರನ ಕೈಯಲ್ಲಿ ; ಹೀಗಾದ ಬಳಿಕ ಮತ್ತೆ ಬೇಕಾದದ್ದೇನು? ಎಲ್ಲಿಯೂ ಎರಡನೆಯವರ ಕೈಯನ್ನು ಸೇರಿಸಗೊಡಬಾರದೆಂದು ರಾಮರಾಜನು ನಿಶ್ಚಯಮಾಡಿಕೊಂಡಿದ್ದನು. ಕೃಷ್ಣದೇವರಾಯರಿಗೆ ಒಬ್ಬ ಮಗನಿದ್ದನು. ಮಗನನ್ನು ಪಟ್ಟಕ್ಕೆ ಕುಳ್ಳಿರಿಸಿ, ಆತನು ರಾಜ್ಯಕಾರಭಾರ ನಡಿಸುವದನ್ನು ಕಣ್ಣುತುಂಬ ನೋಡಿ, “ಹರಿ ಹರಿ” ಎಂದು ಸ್ವಚ್ಛವಾಗಿ ಇರಬೇಕೆಂದು ಅವರು ಇಚ್ಚಿಸುತ್ತಿದ್ದರು. ತಮ್ಮ ಮಗನು ಪಟ್ಟಕ್ಕೆ ಕುಳಿತುಕೊಳ್ಳಲು, ರಾಮರಾಜನು ಮುಖ್ಯ ಕಾರಭಾರಿಯಾಗಿ, ಯಾರ ಬೇಳೆಯನ್ನೂ ಬೇಯಗೊಡದೆ ರಾಜ್ಯವನ್ನು ಸ್ವಂತ್ರವಾಗಿ ನಡೆಸಿಯಾನೆಂದು ರಾಯರು ಭಾವಿಸಿದ್ದರು, ಆದರೆ ಏನಾಯಿತೋ ತಿಳಿಯದು. ಆ ರಾಜಪುತ್ರನು ವಿಷಪ್ರಯೋಗದಿಂದ ಅಕಸ್ಮಾತ್ತಾಗಿ ಸತ್ತನು. ವಿಷಯಪ್ರಯೋಗವನ್ನು ಯಾರು ಹ್ಯಾಗೆ ಮಾಡಿದರೆಂಬ ಬಗ್ಗೆ ಕೃಷ್ಣದೇವರಾಯರೂ ರಾಮರಾಜನೂ ಒಳ್ಳೆಯ ನಿಗ್ರಹದಿಂದ ಶೋಧಮಾಡಿದರು ; ಆದರೆ ಅವರ ಗೊತ್ತು ಹತ್ತಲಿಲ್ಲ. ಪುತ್ರಶೋಕದಿಂದ ಕೃಷ್ಣದೇವರಾಯರು ಬೇಗನೆ ಮರಣ ಹೊಂದಿದರು. ಅವರ ತರುವಾಯ ಅವರ ಅನುಮತಿಯಿಂದ ಕಾರಾಗೃಹದಲ್ಲಿದ್ದ ಅವರ ತಮ್ಮನೊಬ್ಬನು ಸಿಂಹಾಸನದ ಮೇಲೆ ಕುಳ್ಳಿರಿಸಲ್ಪಟ್ಟನು.

ಕೃಷ್ಣದೇವರಾಯರಿಗೆ ವಿಜಯನಗರದ ಸಿಂಹಾಸನವು ಅನಾಯಾಸವಾಗಿ ದೊರೆತಿದ್ದಿಲ್ಲ. ಅವರು ತಮಗಿಂತಲೂ ಗಾದಿಯ ಮೇಲೆ ವಿಶೇಷ ಹಕ್ಕು ಇರುವ ತಮ್ಮ ಮೂವರು ತಮ್ಮಂದಿರನ್ನೂ, ಒಬ್ಬ ಅಣ್ಣನ ಮಗನನ್ನೂ ಮಹತ್ವಾಕಾಂಕ್ಷೆಯಿಂದ ಸೆರೆಯಲ್ಲಿಟ್ಟು ವಿಜಯನಗರದ ಪಟ್ಟವೇರಿದ್ದರು. ತಮ್ಮ ಹೊಟ್ಟೆಯಲ್ಲಿ ಸಂತಾನವಾದದ್ದರಿಂದ, ತಮ್ಮ ತರುವಾಯ ತಮ್ಮ ವಂಶಕ್ಕೇ ಸಿಂಹಾಸನವು ಪ್ರಾಪ್ತವಾಗುವುದೆಂದು ಕೃಷ್ಣದೇವರಾಯರು ತಿಳಿದಿದ್ದರು ; ಆದರೆ ವಿಷಪ್ರಯೋಗದಿಂದ ಮಗನು ಅಕಸ್ಮಾತ್ ಮರಣ ಹೊಂದಿದ್ದರಿಂದ ಅವರ ಎಲ್ಲ ಆಸೆಗಳೂ ಬಯಲಾದವು. ರಾಮರಾಜನ ಮೇಲೆ ರಾಯರ ಪ್ರೀತಿಯು ವಿಶೇಷವಾಗಿತ್ತು. ಈತನು ತಮ್ಮ ಮಗನೊಡನೆ ಸ್ವಾಮಿನಿಷ್ಠೆಯಿಂದ ನಡಕೊಂಡು, ತಮ್ಮ ವೈರಿಗಳ, ಹಾಗು ತಮ್ಮ ಅಣ್ಣ-ತಮ್ಮಂದಿರ ಆಟವನ್ನು ಸಾಗಿಸಿಕೊಂಡು ಹೋಗುವನೆಂತಲೂ ಕೃಷ್ಣದೇವರಾಯರು ನಂಬಿದ್ದರು; ಆದರೆ ರಾಜಪುತ್ರನ ಆಕಸ್ಮಿಕ ಮರಣದಿಂದ ಅದೆಲ್ಲ ನಿರರ್ಥಕ ಕಲ್ಪನೆಯಾಗಿ ಹೋಯಿತು. ಕೃಷ್ಣದೇವರಾಜರ ಮರಣದಿಂದ ರಾಜ್ಯಕಾರಭಾರದಲ್ಲಿ ಬಹಳ ಹೆಚ್ಚುಕಡಿಮೆಯಾದವು. ಸೆರೆಮನೆಯಲ್ಲಿದ್ದ ಮೂವರು ರಾಜಬಂಧುಗಳಲ್ಲಿ ಅಚ್ಯುತರಾಯನೆಂಬವನ ಪಕ್ಷದ ಜನರು ಖಟಾಟೋಪಮಾಡಿ ಆತನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದರು ; ಆದ್ದರಿಂದ ರಾಮರಾಜನ ಪಕ್ಷವು ಹಿಂದಕ್ಕೆ ಬಿದ್ದು, ಆತನೂ ಆತನ ಅಣ್ಣನೂ, ಆತನ ಮಿತ್ರನೂ ಕೆಲವು ದಿನ ಅಜ್ಞಾತವಾಸ ಮಾಡಬೇಕಾಯಿತು. ಈ ಅಜ್ಞಾತವಾಸವು ರಾಮರಾಜನಿಗೆ ದುಃಸಹವಾಯಿತು; ಆದರೂ ಆತನು ಅದನ್ನು ಹ್ಯಾಗಾದರೂ ನೀಗಿದನು. ಆ ಅಜ್ಞಾತವಾಸದ ಕಾಲವನ್ನು ಆತನು ಸಕುಟುಂಬ ಕುಂಜವನದಲ್ಲಿ ವಾಸಮಾಡಿ ಕಳೆದನು. ಕುಂಜವನಕ್ಕೆ ಬಂದಬಳಿಕ ಆತನಿಗೆ ಮೆಹರ್ಜಾನಳ ನೆನಪು ಮೇಲೆ ಮೇಲೆ ಆಗಹತ್ತಿತು ; ಆತನು ಸಕುಟುಂಬ ಅಲ್ಲಿ ವಾಸಮಾಡ ಹತ್ತಿದ್ದರಿಂದ, ಮನುಷ್ಯ ಸ್ವಭಾವಕ್ಕನುಸರಿಸಿ ಬರಬರುತ್ತ ಮೆಹರ್ಜಾನಳ ನೆನಪು ಸಹ ಆತನಿಗೆ ಆಗದಹಾಗಾಯಿತು. ಮೆಹರ್ಜಾನಳ ಈ ನೆನಪಿನ ಜತೆಗೆ ರಾಮರಾಜನ ಮಹತ್ವಾಕಾಂಕ್ಷೆ ಮಾತ್ರ ಅಳಿದುಹೋಗಿದ್ದಿಲ್ಲ. ಆತನು ಅಚ್ಯುತರಾಯನ ಆಳಿಕೆಯಲ್ಲಿಯಾದರೂ ತನ್ನ ಕುದುರೆಯನ್ನು ಮುಂದಕ್ಕೆ ನೂಕಿ, ಅಚ್ಯುತರಾಯನನ್ನು ನಾಮಧಾರಿಯಾದ ಅರಸನನ್ನು ಮಾಡಬೇಕೆಂದು ಯತ್ನಿಸಹತ್ತಿದ್ದನು. ಅಚ್ಯುತರಾಯನ ಕಾಲದಲ್ಲಿ ವಿಜಯನಗರದ ಗೌರವವೂ, ದರ್ಪವೂ ತೀರ ಕಡಿಮೆಯಾದವು. ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರದ ರಾಯರ ಭಯವು ಯಾವತ್ತು ಮುಸಲ್ಮಾನ ಬಾದಶಹರಿಗೆ ಇತ್ತು. ವಿಜಾಪುರದ ಇಸ್ಮಾಯಿಲ್ ಆದಿಲಶಹನು ಕೃಷ್ಣದೇವರಾಯನ ಕೈಯಿಂದ ವಿಜಯನಗರದ ರಾಜ್ಯದ ಕೆಲವು ಭಾಗವನ್ನು ಕಸಕೊಳ್ಳಬೇಕೆಂದು ಒಂದೆರಡು ಸಾರೆ ಪ್ರಯತ್ನ ಮಾಡಿದ್ದನು ; ಆದರೆ ಕೃಷ್ಣದೇವರಾಯನು ಆತನ ಆಟವನ್ನು ನಡೆಯಗೊಡಲಿಲ್ಲ. ಈ ಪ್ರಸಂಗವು ಓದತಕ್ಕದ್ದಾದ್ದರಿಂದ ಅದನ್ನು ವಾಚಕರ ಸಲುವಾಗಿ ಕೊಡುವೆವು.

ಇಸ್ಮಾಯಿಲ್ ಆದಿಲ್‌ಶಹನು ರಾಯಚೂರು, ಮುದ್ದುಗಲ್ಲಗಿರಿ ಎಂಬ ಎರಡು ಸ್ಥಳಗಳನ್ನು ಕೃಷ್ಣದೇವರಾಯನ ಕೈಯೊಳಗಿಂದ ಕಸಕೊಂಡು ಮುಸಲ್ಮಾನರ ಸಾಮರ್ಥ್ಯವು ಯಥಾಸ್ಥಿತವಿದ್ದಂತೆ ಹಿಂದುಗಳಿಗೆ ತೋರಿಸಬೇಕೆಂದು ಮಾಡಿದನು. ಆತನ ಸೈನ್ಯವು ಆ ಸ್ಥಳಗಳ ಕಡೆಗೆ ಸಾಗಿಬರಹತ್ತಿತು. ಅವೆರಡು ಸ್ಥಳಗಳು ಮೊದಲು ಮುಸಲ್ಮಾನರವು. ಅವನ್ನು ವಿಜಯನಗರದ ರಾಯರು ಗೆದ್ದುಕೊಂಡಿದ್ದರು, ಆದಿಲ್‌ಶಹನ ಈ ದಂಡ ಯಾತ್ರೆಯನ್ನು, ಪೂರ್ಣ ಜಾಗರೂಕನಾಗಿದ್ದ ಕೃಷ್ಣದೇವರಾಯನು ಕೇಳಿ ತನ್ನ ಪ್ರಚಂಡ ಸೈನ್ಯವನ್ನು ಸಿದ್ಧಗೊಳಿಸಿದನು, ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರದ ಸಾಮ್ರಾಜ್ಯದ ಸಾಮರ್ಥ್ಯವು ಅಧಿಕವಾಗಿತ್ತು. ಅದಿಲಶಹನು ದಂಡು ಸಾಗಿಸಿಕೊಂಡು ಬಂದಬಂದಂತೆ, ಕೃಷ್ಣದೇವರಾಯನೂ ತನ್ನ ಪ್ರಚಂಡ ಸೈನ್ಯವನ್ನು ಅದಕ್ಕೆ ಎದುರಾಗಿ ಸಾಗಿಸಿಕೊಂಡು ನಡೆದನು ಆದಿಲಶಹನು ತೀರ ಸನಿಯಕ್ಕೆ ಬಂದನೆಂಬ ಸುದ್ದಿಯನ್ನು ಕೇಳಿ, ಕೃಷ್ಣದೇವರಾಯನು ಕೃಷ್ಣಯ ಈಚೆಯ ದಂಡೆಯಲ್ಲಿ ತನ್ನ ಸೈನ್ಯದ ಬೀಡು ಬಿಟ್ಟನು. ಆತನನ್ನು ಹಲವು ಜನ ಹಿಂದೂ ಮಾಂಡಲಿಕ ರಾಜರು ತಮ್ಮ ತಮ್ಮ ಸೈನ್ಯಗಳೊಡನೆ ಅಭಿಮಾನದಿಂದ ಬಂದು ಕೂಡಿಕೊಂಡಿದ್ದರು. ಕೃಷ್ಣದೇವರಾಜನ ಈ ಸಿದ್ಧತೆಯನ್ನು ನೋಡಿ ಆದಿಲಶಹನು ಬೆದರಿ, ಹಿಂದಿರುಗಿ ಹೋಗುವದು ಯುಕ್ತವಾಗಿತ್ತು ; ಹಾಗೆ ಮಾಡಬೇಕೆಂದು ಆತನ ಕಡೆಯ ತಿಳಿವಳಿಕೆಯ ಸರದಾರರೂ ಹೇಳಿದರು ; ಆದರೆ ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕಿಡುವದು ಆ ಅಭಿಮಾನಿ ಪುರುಷನ ಮಾನಕ್ಕೆ ಸಾಲಲ್ಲಿಲ್ಲ. ಆತನು ತಾನು ಹಿಂದಿರುಗಿ ಹೋಗಲಿಕ್ಕಿಲ್ಲೆಂದು ನಿಶ್ಚಯಿಸಿ ತನ್ನ ಏಳು ಸಾವಿರ ಮುಸಲ್ಮಾನ ಸೈನ್ಯಕ್ಕೆ, ತಾನು ಅಪ್ಪಣೆ ಕೊಟ್ಟ ಕೂಡಲೆ ಕೃಷ್ಣಾ ನದಿಯನ್ನು ದಾಟಿ ಶತ್ರುಗಳ ಮೇಲೆ ಬೀಳಬೇಕೆಂದು ಅಪ್ಪಣೆ ಮಾಡಿದನು. ನದಿಯನ್ನು ದಾಟುವದಕ್ಕಾಗಿ ಮುಸಲ್ಮಾನರು ತೆಪ್ಪಗಳನ್ನು ಕಟ್ಟಹತ್ತಿದರು. ಹೀಗಿರುವಾಗ ಒಂದು ದಿನ ಆದಿಲಶಹನು ತನ್ನ ಡೇರೆಯಲ್ಲಿ ಸಣ್ಣ ವಿಶ್ರಾಂತಿಯನ್ನು ಹೊಂದುತ್ತ ಕುಳಿತಿರಲು, ಯಾರೋ ಹೊರಗೆ- “ಏಳಪ್ಪಾ ನಿನ್ನ ಕೈಯೊಳಗಿನ ಸುವರ್ಣದ ಪಾತ್ರೆಯನ್ನು ಹಾರಿಸಿ ಮಣ್ಣುಗೂಡಿಸುವದರೊಳಗೆ ಅದರಲ್ಲಿ ಆನಂದರೂಪವಾದ ಮದ್ಯವನ್ನು ತುಂಬಿ ಪ್ರಾಶನ ಮಾಡು” ಎಂದು ಮಂಜುಲ ಸ್ವರದಿಂದ ಹಾಡುವದು ಆತನ ಕಿವಿಗೆ ಬಿದ್ದಿತು. ಅದನ್ನು ಕೇಳಿದ ಕೂಡಲೆ ಸುಲ್ತಾನನು ಅಕಸ್ಮಾತ್ ಸ್ಫೂರ್ತಿಗೊಂಡು- “ಅಲ್ಲಾನು ಈ ಗಾಯನದ ರೂಪದಿಂದ ನನಗೆ ನನ್ನ ಮನಸ್ಸಿನ ಕೋರಿಕೆಯನ್ನು ಪೂರ್ಣಮಾಡಿಕೊಳ್ಳಲಿಕ್ಕೆ ಇದು ಒಳ್ಳೆ ಸಮಯವೆಂದು ಸೂಚಿಸುತ್ತಾನೆಂದು ತಿಳಿದು, ತನ್ನ ಜತೆಗಾರರೊಡನೆ ರಾತ್ರಿ ಯಥೇಚ್ಛ ಮದ್ಯಪಾನ ಮಾಡಿ, ಅಮಲು ತಲೆಗೇರಿರಲು, ಹಿಂದುಮುಂದಿನ ವಿಚಾರ ಮಾಡದೆ ಒಮ್ಮೆಲೆ ತನ್ನ ಸೈನಿಕರಿಗೆ- “ನೀವು ಈಗಲೆ ನದಿಯನ್ನು ದಾಟಿ ಶತ್ರುಗಳ ಮೇಲೆ ಬೀಳಬೇಕೆಂದು” ಅಜ್ಞಾಪಿಸಿದನು. ಆಗ ವಿಚಾರವಂತ ಸರದಾರರು ಇದು ಯೋಗ್ಯವಲ್ಲೆಂದು ಸುಲ್ತಾನನಿಗೆ ಬಹಳವಾಗಿ ಹೇಳಿದರು ; ಮತ್ತು ಹೀಗೆ ಅವಿಚಾರದಿಂದ ಶತ್ರುಗಳ ಮೇಲೆ ಬಿದ್ದರೆ, ಒಬ್ಬರೂ ತಿರುಗಿ ಹೋಗಲಿಕ್ಕಿಲ್ಲೆಂತಲೂ ಅವರು ಸ್ಪಷ್ಟವಾಗಿ ಸುಲ್ತಾನನಿಗೆ ಆಗ ಎಚ್ಚರವು ಹುಟ್ಟಲಿಲ್ಲ. ಆತನು ಪುನಃ ತನ್ನ ಸೈನಿಕರಿಗೆ- “ಈಗ ಸಿದ್ದವಾಗಿದ್ದ ತೆಪ್ಪಗಳ ಮೇಲಿಂದ ಹೋಗಬಹುದಾದಷ್ಟು ಸೈನಿಕರು ಹೋಗಲಿ, ಉಳಿದವರು ಆನೆಯ ಮೇಲಿಂದ ಹೋಗಲಿ. ಇಂದು ಬೆಳಗಾಗುವುದರೊಳಗಾಗಿ ಶತ್ರುಗಳ ಮೇಲೆ ಬೀಳಲಿಕ್ಕೇ ಬೇಕು,” ಎಂದು ಆಜ್ಞಾಪಿಸಿದನು. ಹೀಗೆ ಮಾಡಿದರೆ ನಾಶವಾದೀತೆಂದು ಸರದಾರರು ಮತ್ತೆ ಹೇಳಿದರು ; ಆದರೆ ಸುಲ್ತಾನನು ಅದಕ್ಕೆ ಒಪ್ಪಲಿಲ್ಲ. ತಾನು ಮುಂದೆ ಹೋಗದಿದ್ದರೆ, ಸೈನಿಕರು ಹುರಿದುಂಬರೆಂದು ತಿಳಿದು, ಸುಲ್ತಾನನು ಇಬ್ಬರು ಸರದಾರರೊಡನೆ ಆನೆಯನ್ನು ಏರಿ ತಾನು ಸ್ವತಃ ಕೃಷ್ಣೆಯ ಪ್ರವಾಹದಲ್ಲಿ ದುಮುಕಿದನು. ಅದನ್ನು ನೋಡಿ ಉಳಿದ ಸರದಾರರೂ ಸುಲ್ತಾನನನ್ನು ಹಿಂಬಾಲಿಸಿದರು, ಎರಡು ಸಾರೆ ತೆಪ್ಪಗಳ ಮೇಲಿಂದ ಸೈನಿಕರು ಈಚೆಯ ದಂಡೆಯನ್ನು ಕಂಡರು. ಇನ್ನೂರಾ ಐವತ್ತು ಆನೆಗಳೂ ಸುದೈವದಿಂದ ಏನೂ ಅಪಾಯವನ್ನು ಹೊಂದದೆ ಸುರಕ್ಷಿತವಾಗಿ ಕೃಷ್ಠೆಯನ್ನು ದಾಟಿ ಆಚೆಯ ದಂಡೆಗೆ ಬಂದವು. ಅಷ್ಟರಲ್ಲಿ ಈ ಸುದ್ದಿಯು ಕೃಷ್ಣದೇವರಾಯನಿಗೆ ಹತ್ತಲು, ಆತನ ಆಜ್ಞೆಯಿಂದ ಹಿಂದೂ ಸೈನಿಕರು ಮುಸಲ್ಮಾನರ ಮೇಲೆ ಒಳ್ಳೇ ಕಸುವಿನಿಂದ ಬಿದ್ದರು. ಹಿಂದುಗಳ ಹೊಡೆತದಿಂದ ಮುಸಲ್ಮಾನರಿಗೆ ತಿರುಗಿ ಹೋಗಲಿಕ್ಕೂ ಆಸ್ಪದ ದೊರೆಯದಾಯಿತು, ಆಗ ಅವರು ಹಂಗುದೊರೆದು ಒಳ್ಳೆ ಶೌರ್ಯದಿಂದ ಕಾದಿದರು ; ಹಿಂದೂ ಜನರ ಪ್ರಚಂಡ ಸೈನ್ಯದ ಮುಂದೆ ಅವರ ಆಟ ನಡೆಯಲಿಲ್ಲ. ಸುಲ್ತಾನನಾದರೂ ಜೀವದಿಂದ ಪಾರಾಗುವನೋ ಇಲ್ಲವೋ ಎಂಬ ಭಯವು ಮುಸಲ್ಮಾನರ ಸೈನಿಕರಲ್ಲಿ ಉತ್ಪನ್ನ ವಾಯಿತು. ಆಗ ಬಾದಶಹನ ಆನೆಯನ್ನು, ಆವನ ಸರದಾರರು ಹಿಂದಕ್ಕೆ ತಿರುಗಿಸಿ ಕೃಷ್ಣೆಯಲ್ಲಿ ನೂಕಿದರು. ಪ್ರವಾಹದ ಎದುರಿಗೆ ಹೋಗುವ ಪ್ರಸಂಗ ಬಂದದ್ದರಿಂದ ಸುಲ್ತಾನನ ಆನೆಯು ಬಹು ಕಷ್ಟದಿಂದ ಈಜಿ ಪಾರಾಗಿ, ಆಚೆಯ ದಂಡೆಗೆ ಹೋಯಿತು. ಮುಸಲ್ಮಾನರ ದಂಡಿನಲ್ಲಿ ಏಳು ಜನರು ಮಾತ್ರ ಪಾರಾದರು ! ಉಳಿದವರೆಲ್ಲ ರಣಭೂಮಿಯಲ್ಲಿ ಬಿದ್ದರು.

ಹೀಗೆ ಬಡಿತವನ್ನು ತಿಂದು ಮಿತಿಯಿಲ್ಲದೆ ಸೈನ್ಯವನ್ನು ಹಾಳೂ ಮಾಡಿಕೊಂಡು ಓಡಿಹೋಗಬೇಕಾದದ್ದರಿಂದ, ಇಸ್ಮಾಯಿಲ್ ಆದಿಲಶಹನಿಗೆ ಬಹಳ ಪಶ್ಚಾತ್ತಾಪವಾಯಿತು. ಯೋಗ್ಯಜನರ ಹಿತದ ಮಾತನ್ನು ಮೀರಿ ಹೋದದ್ದರ ಪ್ರಾಯಶ್ಚಿತ್ತವು ಆತನಿಗೆ ಚೆನ್ನಾಗಿ ಆದಂತಾಯಿತು. ಈಗ ತನಗಾದ ಅಪಮಾನದ ಸೇಡು ತೀರಿಸಕೊಳ್ಳುವವರೆಗೆ ಸಾರಾಯಿಯನ್ನು ಮುಟ್ಟಲಿಕ್ಕಿಲ್ಲೆಂದು ಆತನು ಪ್ರತಿಜ್ಞೆ ಮಾಡಿದನು ; ಆದರೆ ಆಗ ಆತನ ಆಟವು ಏನೂ ನಡೆಯುವ ಹಾಗಿದ್ದಿಲ್ಲ. ಆತನು ಅಸದಖಾನನೆಂಬ ಹೆಸರಿನ ಸರದಾರನ ಯೋಗ್ಯವಾದ ಸೂಚನೆಯಂತೆ ವಿಜಾಪುರದ ಹಾದಿಯನ್ನು ಹಿಡಿದನು. ಈ ಜಯದಿಂದ ವಿಜಾಪುರದ ಇಸ್ಮಾಯಿಲ್ ಆದಿಲಶಹನಿಗಷ್ಟೇ ಅಲ್ಲ, ಯಾವತ್ತು ಬಾಮನಿಯ ಬಾದಶಹರಿಗೆ ವಿಜಯನಗರದ ರಾಯರ ಭಯವು ಚೆನ್ನಾಗಿ ಕುಳಿತಿತು. ಇನ್ನು ಕೆಲವು ವರ್ಷಗಳವರೆಗಾದರೂ ಹಿಂದೂ ಜನರ ಸಂಗಡ ಯುದ್ಧಮಾಡುವದು ಅಶಕ್ಯವೆಂದು ಅವರು ತಿಳಕೊಂಡರು. ಈ ಭಯದ ಸಂಗಡ ಆ ಬಾಮನಿ ಬಾದಶಹರಲ್ಲಿ ಒಂದು ಪ್ರಕಾರದ ಜಾಗೃತಿಯೂ ಉತ್ಪನ್ನವಾಯಿತೆಂದು ಹೇಳಬಹುದು, ಕೃಷ್ಣರಾಯನು, ಅಥವಾ ವಿಜಯನಗರದ ಬೇರೊಬ್ಬ ರಾಯನು ಪ್ರಬಲನಾಗಿ ಮಹಾ ಸಾಹಸದಿಂದ ಮುಸಲ್ಮಾನರ ನಾಶವನ್ನು ಮಾಡಬಹುದಾದ್ದರಿಂದ, ವಿಜಯನಗರದ ರಾಯರ ಸಮಾಚಾರ ತೆಗೆದುಕೊಳ್ಳುವ ಬಾಬಿನಲ್ಲಿಯಾದರೂ ತಾವೆಲ್ಲರೂ ಒಕ್ಕಟ್ಟಿನಿಂದ ನಡೆಯಬೇಕೆಂದು ಅವರು ತಮ್ಮೊಳಗೆ ಗೊತ್ತುಮಾಡಿಕೊಂಡರು. ಹೀಗೆ ಅವರು ಒಂದಾದದ್ದು ವಿಜಯನಗರದ ರಾಜ್ಯಕ್ಕೆ ಘಾತಕವಾದದ್ದಲ್ಲದೆ, ವಿಜಯನಗರದ ರಾಯರ ಮಿತಿಮೀರಿದ ಸೊಲ್ಲೂ ವಿಜಯನಗರದ ರಾಜ್ಯದ ನಾಶಕ್ಕೆ ಕಾರಣವಾಯಿತು. ಇರಲಿ, ಇತ್ತ ಜಯಶಾಲಿಯಾದ ಕೃಷ್ಣದೇವರಾಯನು, ಬಹು ಸಂತೋಷದಿಂದ ರಾಯಚೂರನ್ನು ಪ್ರವೇಶಿಸಿದನು. ಆತನು ಪಟ್ಟಣದೊಳಗಿನ ಜನರಿಗೆ ಬಹು ಪ್ರೇಮದಿಂದ ಅಭಯವನ್ನು ಕೊಟ್ಟು, ಜನರ ಮನಸ್ಸಿನಲ್ಲಿ ತನ್ನ ವಿಷಯವಾಗಿ ವಿಶ್ವಾಸವನ್ನುಂಟು ಮಾಡಿಕೊಂಡನು ; ಆದರೆ ಆದಿಲಶಹನು ಕಳಿಸಿದ ವಕೀಲನ ಸಂಗಡ ಮಾತ್ರ ಆತನು ಬಹಳ ಸೊಕ್ಕಿನಿಂದ ನಡೆದುಕೊಂಡನು ಒಂದು ತಿಂಗಳವರೆಗೆ ಆ ವಕೀಲನಿಗೆ ರಾಯನು ದರ್ಶನವನ್ನೇ ಕೊಡಲಿಲ್ಲ. ಆ ಮೇಲೆ ದರ್ಶನ ಕೊಟ್ಟರೂ, ಆ ವಕೀಲನನ್ನು ಬಹಳವಾಗಿ ಅವಮಾನಗೊಳಿಸಿದನು. ಇದರಿಂದ ಉರಿಯಲ್ಲಿ ಎಣ್ಣೆ ಸುರಿವಿದ ಹಾಗಾಯಿತು. ಆದಲಶಹನಂತೆ ಬೇರೆ ಮುಸಲ್ಮಾನ ಬಾದಶಹರೂ ಕೃಷ್ಣದೇವರಾಯನ ಕಡೆಗೆ ತಮ್ಮ ವಕೀಲರನ್ನು ಕಳಿಸಿದರು : ಆದರೆ ಅರಸನಾಗಲಿ, ಆತನ ಕೈ ಕೆಳಗಿನ ಜನರಾಗಲಿ ಆ ವಕೀಲರಿಗಾದ ರೀತಿಯೇ ಮಾಡಿದರು. ಹಾಗಾಗಿ ಎಲ್ಲ ಮುಸಲ್ಮಾನ ಬಾದಶಹರ ಮನಸ್ಸು ನೋಯಲಿಕ್ಕೆ ಇದೊಂದು ಕಾರಣವಾಯಿತು ; ಕೃಷ್ಣದೇವರಾಯನು ಇಸ್ಮಾಯಿಲ್ ಆದಿಲ್‌ಶಹನ ವಕೀಲನ ಸಂಗಡ ಆತನ ಒಡಯನಿಗೆ, “ನೀನು ನನ್ನ ದರ್ಶನಕ್ಕೆ ಬಂದು ಮುಜುರೆ ಮಾಡಿ ನನ್ನ ಚರಣವನ್ನು ಚುಂಬಿಸಿದರೆ ನಾನು ಗೆದ್ದು ಕೊಂಡಿದ್ದ ನಿನ್ನ ರಾಜ್ಯವನ್ನೆಲ್ಲ ನಿನಗೆ ತಿರುಗಿ ಕೊಡುವೆನು” ಎಂದು ಹೇಳಿಕಳಿಸಿದನು. ಇದಕ್ಕೆ ಆದಿಲಶಹನು ಒಪ್ಪಿಕೊಳ್ಳಲಿಲ್ಲೆಂಬುದಂತು ಸರಿಯೇ, ಇದರಿಂದ ಯಾವತ್ತು ಮುಸಲ್ಮಾನ ಬಾದಶಹರು ಅವಮಾನಿತರಾಗಿ ವಿಜಯನಗರದ ರಾಜ್ಯದ ಮೇಲೆ ಬೆಂಕಿಯನ್ನು ಮಾತ್ರ ಕಾರಹತ್ತಿದರು. ಆದಿಲಶಹನು ತನ್ನ ಮಾತು ನಡೆಸಲಿಲ್ಲೆಂದು ಕೃಷ್ಣದೇವರಾಯನು ಆತನ ರಾಜ್ಯದ ಮೇಲೆ ದಂಡೆತ್ತಿಹೋಗಿ, ಆತನನ್ನು ಹಿಂದಕ್ಕೆ ಸರಿಸುತ್ತ ಸರಿಸುತ್ತಾ ವಿಜಾಪುರವನ್ನು ಮುತ್ತಿ ಅದನ್ನು ಕೈವಶ ಮಾಡಿಕೊಂಡನು. ಕೆಲವು ದಿನಗಳವರೆಗೆ ರಾಯನು ವಿಜಾಪುರದಲ್ಲಿ ಇದ್ದು, ಆದಿಲಶಹನ ಸೆರೆಯಲ್ಲಿದ್ದ ಮೊದಲಿನ ದಕ್ಷಿಣದ ಸುಭೇದಾರರ ಮೂವರು ಮಕ್ಕಳ ಬಂಧವಿಮೋಚನ ಮಾಡಿದನು. ಅವರಲ್ಲಿ ಹಿರಿಯಮಗನನ್ನು ವಿಜಾಪುರದ ಪಟ್ಟದಮೇಲೆ ಕುಳ್ಳಿರಿಸಿ. ಆತನನ್ನೆ ದಕ್ಷಿಣದ ಶಹನನ್ನಾಗಿ ಮಾಡಬೇಕೆಂತಲೂ ರಾಯನು ಯೋಚಿಸಿದನು ; ಆದರೆ ಅದು ಸಾಧಿಸಲಿಲ್ಲ. ಇದರಿಂದ ಬಾಮನಿ ಬಾದಶಹರ ಮನಸ್ಸಿನೊಳಗಿದ್ದ ವಿಜಯನಗರದ ರಾಜ್ಯದ ಮೇಲಿನ ದ್ವೇಷವು ಮಾತ್ರ ಮತ್ತಷ್ಟು ಹೆಚ್ಚಾಯಿತು. ಹೀಗಿರುವಾಗ ಕೃಷ್ಣದೇವರಾಯನ ಮರಣವಾರ್ತೆಯು ಕಿವಿಗೆ ಬೀಳಲು ಯಾವತ್ತು ಮುಸಲ್ಮಾನ ಬಾದಶಹರಿಗೆ ಬಹಳ ಸಂತೋಷವಾದದ್ದರಲ್ಲಿ ಆಶ್ಚರ್ಯವಿಲ್ಲ. ಅದರಲ್ಲಿ ಅಚ್ಚುತರಾಯನಂಥ ಪುಕ್ಕರು ವಿಜಯನಗರದ ಸಿಂಹಾಸನವೇರಿದ್ದಂತು ಮುಸಲ್ಮಾನರ ಹಿತಸಾಧನಕ್ಕೆ ಮತ್ತಷ್ಟು ಅನುಕೂಲವಾದಂತಾಗಿ, ವಿಜಯನಗರದ ರಾಜ್ಯದ ವಿನಾಶಾಂಕುರವು ಬೆಳೆದು, ಅದು ವೃಕ್ಷದ ಸ್ವರೂಪವನ್ನು ಹೊಂದಿತು.

****