ಕನ್ನಡಿಗರ ಕರ್ಮ ಕಥೆ/ಸಂಬಂಧ ಸೂಚನೆ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೧೪೪-೧೫೨

೧೬ನೆಯ ಪ್ರಕರಣ

ಸಂಬಂಧ ಸೂಚನೆ

ಹಿಂದಿನ ೧೪ನೆಯ ಪ್ರಕರಣದಲ್ಲಿ ಹೇಳಿದಂತೆ ರಾಮರಾಜನು ಕುಂಜವನದಿಂದ ಹೊರಟವನು ವಿಜಯನಗರದ ಕಡೆಗೆ ಒತ್ತರದಿಂದ ಸಾಗಿದ್ದನು; ಆದರೆ ಆತನ ಚಿತ್ತಕ್ಕೆ ಸಮಾಧಾನವಿದ್ದಿಲ್ಲ. ಆತನು ಭ್ರಮಿಷ್ಠನಂತೆ ಆಗಿದ್ದನು. ತಾನು ಕುಂಜವನದಲ್ಲಿ ಮೆಹರ್ಜಾನಳನ್ನು ನೋಡಿದಂತೆ ಭಾಸವಾದಾಗಿನಿಂದ, ಆತನಿಗೆ ೩೫ ವರ್ಷದ ಹಿಂದಿನ ತನ್ನ ಕರ್ಮಕಥೆಯೆಲ್ಲ ನೆನಪಾಗಿತ್ತು. ಅದರಲ್ಲಿ ಧನಮಲ್ಲನು ಈಗ ೩೫ ವರ್ಷಗಳ ಮೇಲೆ ಅಕಸ್ಮಾತ್ತಾಗಿ ಕುಂಜವನದಲ್ಲಿ ಅಂದೇ ಕಣ್ಣಿಗೆ ಬಿದ್ದಿದ್ದನು. ರಾಮರಾಜನು ಕುದುರೆಯ ಮೇಲೆ ಕುಳಿತು ಸಾಗಿದ್ದರೂ, ಕುದುರೆಯ ನಡಿಗೆಯ ಕಡೆಗೆ ಆತನ ಲಕ್ಷ್ಯವಿದ್ದಿಲ್ಲ. ಸುಮ್ಮನೆ ಪರಾಧೀನನಂತೆ ಕುದುರೆ ಒಯ್ದತ್ತ ಸಾಗಿದ್ದನು. ಕುದುರೆ ಹಾದಿಯನ್ನು ಹಿಡಿದಿರುವದೋ, ಅಡವಿಯನ್ನು ಬಿದ್ದಿರುವದೊ ಎಂಬದನ್ನು ಆತನು ನೋಡುತ್ತಿದ್ದಿಲ್ಲ ! ಕುದುರೆಯು ಬಹು ಸೂಕ್ಷ್ಮ ಸ್ವಭಾವದ್ದಿದ್ದದ್ದರಿಂದ ಅದು ನೆಟ್ಟಗೆ ವಿಜಯನಗರದ ಹಾದಿಯನ್ನು ಹಿಡಿದು ಸಾವಕಾಶವಾಗಿ ನಡೆದಿತ್ತು. ಆತನು ಹಲವು ವಿಚಾರಗಳ ಗುಂಗಿನಲ್ಲಿರುವಾಗ, ವಿಜಯನಗರವನ್ನು ಮುಟ್ಟಿ ತನ್ನ ಮಂದಿರವನ್ನು ಪ್ರವೇಶಿಸಿದನು; ಆತನ ಊಟ ಉಪಚಾರಗಳು ಆದವು; ಆತನ ನಿತ್ಯದ ರಾಜಕಾರಣದ ಕಾರ್ಯಗಳೂ ನಡೆದವು; ಆತನು ಜನರ ದರ್ಶನ ತಕ್ಕೊಳ್ಳಹತ್ತಿದನು; ಆಜ್ಞಾಪತ್ರಗಳನ್ನು ಕಳಿಸಹತ್ತಿದನು. ಆದರೆ ಅವೆಲ್ಲ ವ್ಯಾಪಾರಗಳು ನಿದ್ದೆಯೊಳಗಿನ ವ್ಯಾಪಾರಗಳಂತೆ ಆದವು. ಹೀಗೆ ಭ್ರಮಿಷ್ಠನಂತೆ ಆಗಿದ್ದ ರಾಮರಾಜನ ವ್ಯವಹಾರಗಳು ಮನಃಪೂರ್ವಕವಾಗಿ ನಡೆಯದೆಯಿದ್ದಾಗ, ಕುಂಜವನದಿಂದ ಒಬ್ಬ ಗುಪ್ತಚಾರನು ಬಂದಿದ್ದಾನೆಂದು ದ್ವಾರರಕ್ಷನು ಆತನಿಗೆ ಹೇಳಿದನು. ಅದನ್ನು ಕೇಳಿದ ಕೂಡಲೆ ರಾಮರಾಜನು ಆ ಚಾರನನ್ನು ಕರಿಸಿಕೊಂಡು ಸುದ್ದಿಯೇನೆಂದು ಕೇಳಲು, ಆ ಚಾರನು “ನೂರಜಹಾನಳನ್ನು ಕಳಿಸುವದಕ್ಕಾಗಿ ರಣಮಸ್ತಖಾನನು ವಿಜಾಪುರಕ್ಕೆ ಹೋದನೆಂ"ದು ಹೇಳಿದನು.

ಈ ಸುದ್ದಿಯನ್ನು ಕೇಳಿದಕೂಡಲೆ ರಾಮರಾಜನ ಮನಸ್ಸಿಗೆ ಹ್ಯಾಗೆ ಹ್ಯಾಗೋ ಆಯಿತು. ಕೆಲಹೊತ್ತಿನವರೆಗೆ ಆತನು ಆ ಗುಪ್ತಚಾರನಿಗೆ ಏನೂ ಪ್ರಶ್ನೆಮಾಡದೆ ಸುಮ್ಮನೆ ಕುಳಿತುಕೊಂಡನು. ಆ ಮೇಲೆ ಆತನು ಚಾರನನ್ನು ಕುರಿತು ರಣಮಸ್ತಖಾನನ ಸಂಗಡ ಮತ್ತೆ ಯಾರು ಹೋದರು ? ಸಂಗಡ ಎಷ್ಟು ಜನರು ಹೋಗಿರುವರು ? ಆತನ ಮನೆಯ ಜನರೂ ಹೋದರೇನು ? ಎಂದು ಕೇಳಲು, ಚಾರನು-ಇಲ್ಲ, ಅವರ ತಾಯಿಯೇ ಮೊದಲಾದವರು, ರಣಮಸ್ತಖಾನನು, ಹಾಗೂ ಅವನ ಕೆಲವು ಪರಿವಾರವು ಇಷ್ಟೇ ಜನರು ವಿಜಾಪುರಕ್ಕೆ ಹೋಗಿರುವರು, ಉಳಿದವರೆಲ್ಲ ಇಲ್ಲಿಯೇ ಇರುವರು, ಎಂದು ಹೇಳಿದನು. ಪುನಃ ರಾಮರಾಜನು ಸುಮ್ಮನೆ ಕುಳಿತುಕೊಂಡನು. ಆಮೇಲೆ ಆತನು ಮತ್ತೆ ಚಾರನನ್ನು ಕುರಿತು- “ನೀನು ನಿನ್ನ ಕೆಲಸವನ್ನು ನೆಟ್ಟಗೆ ಮಾಡುವದಿಲ್ಲೆನ್ನುವ ಹಾಗೆ ಕಾಣುತ್ತದೆ. ನಿನ್ನೆ ಮುಂಜಾನೆ ನಾನು ಅಲ್ಲಿಗೆ ಬಂದಾಗ ಒಬ್ಬ ಬಲಭೀಮನಂಥ ಲಡ್ಡ ಕರಿಯ ಮನುಷ್ಯನನ್ನು ವಕೀಲನ ಜನರು ಮುತ್ತಿ, ಆತನನ್ನು ಏನೇನೋ ಕೇಳುತ್ತಿದ್ದದ್ದನ್ನು ನಾನು ನೋಡಿದೆನು;ಆದರೆ ಆ ಕರಿಯ ಮನುಷ್ಯನು ಯಾರು ? ಅಲ್ಲಿಗೆ ಯಾವಾಗ ಬಂದನು ? ಎಂಬುದನ್ನೇನೂ ನೀನು ನನ್ನ ಮುಂದೆ ಹೇಳಲಿಲ್ಲ ? ಆ ಸುದ್ದಿಯನ್ನು ಹೇಳುವದು ನಿನ್ನ ಕೆಲಸವಲ್ಲವೊ ?” ಎಂದು ಕೇಳಲು ಆ ಚಾರನು-ಸರಕಾರ, ತಾವು ಬರುವದಕ್ಕಿಂತ ಮೊದಲು ಗಳಿಗೆ ಎರಡು ಗಳಿಗೆಯ ಸುಮಾರಕ್ಕೆ ಆ ಮನುಷ್ಯನು ಅಲ್ಲಿಗೆ ಬಂದಿದ್ದನು. ವಕೀಲನ ಜನರು ಆತನಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು ; ಆದರೆ ಆ ಬಲಭೀಮನು ಕೇವಲ ಮೂಕನಂತೆ ಸುಮ್ಮನೆ ನಿಂತು ಬಿಟ್ಟಿದ್ದನು. ಜನರ ಮಾತು ಆತನಿಗೆ ಕೇಳುತ್ತಿರುವಂತೆ ತೋರಲಿಲ್ಲ. ಆಗಿನಿಂದ ಆತನ ವೃತ್ತಾಂತವನ್ನು ತಿಳಕೊಳ್ಳಬೇಕೆಂದು ನಾನು ಬಹಳವಾಗಿ ಯತ್ನಿಸುತ್ತಿರುವೆನು; ಆದರೆ ಒಂದು ಸುದ್ದಿಯೂ ಗೊತ್ತಾಗಲಿಲ್ಲ. ಅಲ್ಲಿಯ ಜನರಿಗೇ ಅವನ ವೃತ್ತಾಂತವು ಗೊತ್ತಾಗದ ಬಳಿಕ, ಅದು ನನಗೆ ಹ್ಯಾಗೆ ಗೊತ್ತಾಗಬೇಕು ? ನಾನು ಆತನ ಬಳಿಗೆ ಹೋಗಿ, ತಮಿಳು, ತೆಲಗು, ಕನ್ನಡ, ಅರವು ಈ ನಾಲ್ಕು ಭಾಷೆಗಳಲ್ಲಿಯೂ ಕೇಳಿ ನೋಡಿದೆನು; ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅಂದಬಳಿಕ ನಾನು ನಮ್ಮ ಮುಂದೆ ಬಂದು ಏನು ಹೇಳಲಿ ? ತಾವು ಸ್ವತಃ ಆ ಮನುಷ್ಯನನ್ನು ನೋಡಿದ್ದರಿಂದ ಇಂಥ ಮನುಷ್ಯನು ಬಂದಿದ್ದಾನೆ” ಎಂದು ಹೇಳುವ ಅವಶ್ಯವು ನನಗೆ ತೋರಲಿಲ್ಲ. ಆ ಮನುಷ್ಯನ ಸಂಬಂಧದಿಂದ ವಿಶೇಷ ಸಂಗತಿಗಳೇನಾದರೂ ತಿಳಿದರೆ, ಬಂದು ಹೇಳಬೇಕೆಂದು ಬಿಟ್ಟಿದ್ದೆನು. ಅಷ್ಟರಲ್ಲಿ ಆ ವಕೀಲಸಾಹೇಬರು ವಿಜಾಪುರಕ್ಕೆ ಹೋದ ಸಂಗತಿಯನ್ನು ಹೇಳಲವಶ್ಯವಾದದ್ದರಿಂದ, ಕೂಡಲೇ ಬಂದು ಹೇಳಿದನು. ಇನ್ನೊಂದು ವಿಶೇಷ ಸಂಗತಿಯನ್ನು ಹೇಳುವೆನು. ಆ ಮುನುಷ್ಯನು ಯಾರೆಂಬುದು ನನಗೆ ಗೊತ್ತಾಗದೆಯಿದ್ದರೂ, ಆ ಮನುಷ್ಯನಿಗೂ ಮಾಸಾಹೇಬರಿಗೂ ಭೆಟ್ಟಿಯಾದದನ್ನು ನಾನು ನೋಡಿದೆನು. ಅವರಿಬ್ಬರ ಭೆಟ್ಟಿಯಾಯಿತೆನ್ನುವದಕ್ಕಿಂತ, ಆ ಕರಿಯ ಮನುಷ್ಯನೇ ಮಾಸಾಹೇಬರ ಭೆಟ್ಟಿಯನ್ನು ಬುದ್ಧಿಪೂರ್ವಕವಾಗಿ ತೆಗೆದುಕೊಂಡನೆಂದು ಹೇಳಬಹುದು; ಯಾಕೆಂದರೆ ಮಾಸಾಹೇಬರು ತಮ್ಮ ಮನೆಯ ಪಾವಟಿಗೆಗಳನ್ನು ಹತ್ತಿಹೋಗುತ್ತಿರುವನದನ್ನು ನೋಡಿ, ಆ ಬಲಭೀಮನು ತನ್ನನ್ನು ಸುತ್ತುಹಾಕಿದ ಜನರೊಳಗಿಂದ ನುಸಿದು ನೆಟ್ಟಗೆ ಬಾಣಹೊಡೆದ ಹಾಗೆ ಮಾಸಾಹೇಬರ ಬಳಿಗೆ ಓಡಿ ಹೋದನು. ಅತ್ತ ವಾಸಾಹೇಬರ ವೃದ್ದ ದಾಸಿಯೂ, ಮಾಸಾಹೇಬರೂ ಏನೋ ಗುಜುಗುಟುತ್ತಿರುವಷ್ಟರಲ್ಲಿ, ಬಲಭೀಮನು ವಾಸಾಹೇಬರ ತೀರ ಹತ್ತಿರಕ್ಕೆ ಹೋದನು. ಆಗ ಅವರ ಕಾವಲುಗಾರರು ಓಡಿಹೋಗಿ ಅವನನ್ನು ಹಿಂದಕ್ಕೆ ಜಗಿಕೊಂಡರು. ಅದನ್ನು ನೋಡಿ ಮಾಸಾಹೇಬರು ತಮ್ಮ ಜನರಿಗೆ-ಅವನನ್ನು ಬಿಡಿರಿ. ಪಾಪ ! ನನ್ನಮುಂದೆ ಏನೋ ಹೇಳಲಿಕ್ಕೆ ಬಂದಿದ್ದಾನೆ, ಕೇಳಿಕೊಳ್ಳವನು, ಎಂದು ಹೇಳಿದ್ದರಿಂದ, ಅವನನ್ನು ಕಾವಲುಗಾರರು ಬಿಟ್ಟರು. ಆಮೇಲೆ ಮಾಸಾಹೇಬರ ವೃದ್ದದಾಸಿಯು ಆತನನ್ನು ಕರಕೊಂಡು ಮನೆಯೊಳಗೆ ಹೋದಳು. ಆಗಿನಿಂದ ಇಲ್ಲಿಗೆ ನಾನು ಬರುವದಕ್ಕಾಗಿ ಹೊರಡುವವರೆಗೆ ಯಾವ ಸುದ್ದಿಯೂ ನನಗೆ ಗೊತ್ತಾಗಲಿಲ್ಲ. ಮಾಸಾಹೇಬರ ಜನರು ತಮ್ಮೊಳಗೆ ಗುಜುಗುಟುತಿದ್ದರು, ಮಾಸಾಹೇಬರಿಗೂ, ಆ ಮನುಷ್ಯನಿಗೂ ಮೊದಲಿನ ಪರಿಚಯವಿರಬಹುದೆಂಬುದು ಅವರ ಗುಜುಗುಟ್ಟುತ್ತಿರುವದರ ತಾತ್ಪರ್ಯವಾಗಿರುವದು.

ಗುಪ್ತಚಾರನ ಈ ಮಾತುಗಳನ್ನು ರಾಮರಾಜನು ಲಕ್ಷ್ಯಪೂರ್ವಕವಾಗಿ ಕೇಳುತ್ತಿದ್ದನು. ಕೇಳಕೇಳುತ್ತ ಆತನು ನಡುವೆ ಚಾರನನ್ನು ನಿಲ್ಲಿಸಿ ರಣಮಸ್ತಖಾನನು ವಿಜಾಪುರಕ್ಕೆ ಯಾಕೆ ಹೋದನೆಂಬ ಸುದ್ದಿಯೇನಾದರೂ ನಿನಗೆ ಗೊತ್ತಿದೆಯೋ ? ನೂರಜಹಾನಳನ್ನು ಕಳಸಲಿಕ್ಕಷ್ಟೇ ಆತನು ಹೋಗಿರಲಿಕ್ಕಿಲ್ಲ ಎಂದು ನಿನ್ನನ್ನು ಕೇಳುತ್ತೇನೆ, ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಚಾರನು ಸರಕಾರ, ನನಗೆ ಬಹಳ ಲಾಂಛನದ ಮಾತು, ನನಗೆ ನಿಜವಾದ ಕಾರಣವು ನಂಬಿಗೆಯಾಗುವಂತೆ ತಿಳಿದಿರುವದಿಲ್ಲೆಂದು ಅಸಮಾಧಾನದಿಂದ ಹೇಳಿಕೊಳ್ಳುವನು. ಆ ಸಂಬಂಧದಿಂದ ಅಲ್ಲಿಯ ಜನರ ತರ್ಕವೇನಾಗಿರುತ್ತದೆಂಬದನ್ನು ಹೇಳುತ್ತೇನೆ. “ವಕೀಲರು ವಿಜಾಪುರಕ್ಕೆ ಹೋಗುವದರ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲ. ಬೇಗನೆ ಯುದ್ಧವು ಆರಂಭವಾಗಬಹುದಾಗಿ ತೋರುತ್ತದೆ” ಎಂದು ಅವರು ಮಾತಾಡುತ್ತಿರುವರು. ಹೀಗೆ ಆ ಜನರು ಆಡಿದ್ದನ್ನು ನಾನು ಕಿವಿಮುಟ್ಟಿ ಕೇಳಿದೆನಾದ್ದರಿಂದಲೇ ಇದಿಷ್ಟು ಸಂಗತಿಯನ್ನು ಮಹಾರಾಜರ ಕಿವಿಯ ಮೇಲೆ ಹಾಕಬೇಕೆಂದು ಬಂದೆನು.” ಎಂದು ಹೇಳಲು ರಾಮರಾಜನು ವಿಚಾರಮಗ್ನನಾದನು. ಕೆಲಹೊತ್ತಿನ ಮೇಲೆ ಅತನು ತನ್ನೊಳಗೆ- “ಅದರ ಹೊರತು ಎರಡನೆಯ ಮಾರ್ಗವಿಲ್ಲ” ಎಂದು ನುಡಿದು, ಚಾರನನ್ನು ಕುರಿತು “ನಾನು ನಿನ್ನ ಸಹಾಯಕ್ಕಾಗಿ ಏಳೆಂಟು ಜನರನ್ನು ಕೊಡುತ್ತೇನೆ. ಏನಾದರೂ ಹಂಚಿಕೆಮಾಡಿ ನೀವು ಅ ಬಲಭಿಮನನ್ನು ನನ್ನ ಕಡೆಗೆ ಕರಕೊಂಡು ಬರ‍್ರಿ. ನಾನು ಕರೆದಿರುತ್ತೇನೆಂದು ಮೊದಲು ಸಾಮೋಪಚಾರದಿಂದ ಆತನಿಗೆ ಹೇಳಿರಿ. ಅವನು ಬಂದರೆ ಒಳಿತಾಯಿತು. ಇಲ್ಲದಿದ್ದರೆ ಹ್ಯಾಗಾದರೂ ಮಾಡಿ ಅವನನ್ನು ಎಳಕೊಂಡು ಬರ‍್ರಿ. ಮುಖ್ಯ ಮಾತು. ಅವನನ್ನು ಕರಕೊಂಡು ಬರ‍್ರಿ, ಬಿಟ್ಟುಬರಬೇಡರಿ” ಎಂದು ನಿರ್ಧಾರದಿಂದ ಹೇಳಿ, ಸಹಾಯಕ್ಕೆ ಕೊಡತಕ್ಕ ಜನರನ್ನು ಕೊಟ್ಟನು. ಆ ಕರಿಯ ಮನುಷ್ಯನು ಧನಮಲ್ಲನೇ ಎಂದು ರಾಮರಾಜನು ನಿಶ್ಚಯವಾಗಿ ತಿಳಿದಿದ್ದನು. ಆತನನ್ನು ಹಿಡಿಕೊಂಡು ಬಂದರೆ; ಮೆಹೆರ್ಜಾನಳ ವೃತ್ತಾಂತವು ತಿಳಿಯುವದೆಂದು ಆತನು ನಂಬಿದ್ದನು. ರಣಮಸ್ತಖಾನನು ತನ್ನ ಮಗನೂ ಆತನ ತಾಯಿಯು ಮೆಹೆರ್ಜಾನಳೂ ಆಗಿರಬಹುದೆಂದು ರಾಮರಾಜನ ಸಂಶಯವು ಇಂದಿನ ಚಾರನ ಮಾತಿನಿಂದ ಮತ್ತಷ್ಟು ದೃಢವಾಯಿತು. ಈ ಸಂಶಯದ ದೃಢೀಕರಣದಿಂದ ಆತನಿಗೆ ಸಮಾಧಾನವಾಗಲಿಲ್ಲ. ಆ ಸ್ತ್ರೀಯು ಮೆಹೆರ್ಜಾನಳೇ ಎಂಬುದು ನಿಸ್ಸಂಶಯವಾಗಿ ತನಗೆ ಗೊತ್ತಾಗಬೇಕೆಂದು ಆತನು ಆತುರ ಪಡುತ್ತಿದ್ದನು. ಮೆಹೆರ್ಜಾನಳೇ ಎಂಬುದು ತನಗೆ ಗೊತ್ತಾದ ಬಳಿಕ, ತಾನು ಆಕೆಯನ್ನು ಕಂಡು ಯಾವತ್ತೂ ಸಂಗತಿಯನ್ನು ಕೇಳಿಕೊಳ್ಳಬೇಕೆಂದು ಆತನು ಮಾಡಿದ್ದನು. ತನ್ನನ್ನು ಬಿಟ್ಟುಹೋದ ಬಗ್ಗೆ ಆಕೆಗೆ ಪಶ್ಚಾತ್ತಾಪವಾಗಿರಬಹುದೋ ? ಹಾಗೆ ಪಶ್ಚಾತ್ತಾಪವಾಗಿರದಿದ್ದರೆ ಆಕೆಯು ಮಗನನ್ನು ಕಟ್ಟಿಕೊಂಡು ಇಲ್ಲಿಗೆ ಯಾಕೆ ಬಂದಳು ? ಪಶ್ಚಾತ್ತಾಪವೇ ಆಗಿದ್ದ ಪಕ್ಷದಲ್ಲಿ ನಮ್ಮಿಬ್ಬರ ಸಂಬಂಧವು ಮೊದಲಿನಂತೆ ಯಾಕೆ ಕೂಡಲಿಕ್ಕಿಲ್ಲ ? ಎಂಬಿವೇ ಮೊದಲಾದ ವಿಚಾರಗಳು ರಾಮರಾಜನ ಮನಸ್ಸಿನಲ್ಲಿ ಉತ್ಪನ್ನವಾದವು. ರಣಮಸ್ತಖಾನನನ್ನು ನೋಡಿ ಈವರೆಗೆ ರಾಮರಾಜನಿಗೆ ಕೌತುಕವಷ್ಟೇ ಆಗುತ್ತಿತ್ತು. ಇಂದು ಆ ಕೌತುಕವು ಪುತ್ರಪ್ರೇಮ, ಪುತ್ರವಾತ್ಸಲ್ಯಗಳ ರೂಪವನ್ನು ಧರಿಸಿತು. ಈವೊತ್ತಿಗೆ ನಮ್ಮ ರಾಜ್ಯದಲ್ಲಿ ಎಷ್ಟೋ ಜನ ಮುಸಲ್ಮಾನ ಸೈನಿಕರನ್ನು ಚಾಕರಿಗೆ ಇಟ್ಟುಕೊಂಡಿರುತ್ತೇವೆ ಅವರಲ್ಲಿ ಈತನೊಬ್ಬನನ್ನೂ ಇಟ್ಟುಕೊಳ್ಳೋಣ. ಪ್ರಸಂಗ ಬಂದರೆ, ಆ ಯಾವತ್ತು ಮುಸಲ್ಮಾನ ಸೈನಿಕರ ಮೇಲೆ ಈಗಿರುವ ಹಿಂದೂ ಮುಖ್ಯಸ್ಥನನ್ನು ತೆಗೆದು, ಅವರ ಮೇಲೆ ರಣಮಸ್ತಖಾನನನ್ನು ನಿಯಮಿಸಬಹುದು. ತರುಣ ರಣಮಸ್ತಖಾನನು ಈ ಕೆಲಸಕ್ಕೆ ಯೋಗ್ಯನೂ ಇದ್ದಾನೆ. ಒಂದು ವೇಳೆಯಲ್ಲಿ ಈತನನ್ನು ಸೇನಾಪತಿಯನ್ನಾಗಿಯಾದರೂ ಮಾಡಬಹುದು. ಈತನು ವಿಜಾಪುರದ ಬಾದಶಹನ ಚಾಕರಿಯನ್ನು ಯಾಕೆ ಮಾಡಬೇಕು ? ರಣಮಸ್ತಖಾನನಿಗೆ ನನ್ನ ಸಂಬಂಧವು ತಿಳಿದರೆ ಆತನ ಮನಸ್ಸಿಗೆ ಹ್ಯಾಗಾಗಬಹುದು ? ನನ್ನ ವಿಷಯವಾಗಿ ಆತನಲ್ಲಿ ಅಭಿಮಾನವು ಉತ್ಪನ್ನವಾಗಬಹುದೋ, ತಿರಸ್ಕಾರವು ಉತ್ಪನ್ನವಾಗಬಹುದೋ ? ಛೇ! ತಿರಸ್ಕಾರವು ಯಾಕೆ ಉತ್ಪನ್ನವಾದೀತು ? ಅಭಿಮಾನವೇ ಉತ್ಪನ್ನವಾಗುವದು. ಎಂದು ಯೋಚಿಸಿದನು. ಆದರೆ ಇದರ ವಿರುದ್ದ ಭಾವನೆಯು ರಣಮಸ್ತಖಾನನಲ್ಲಿ ಹ್ಯಾಗೆ ಉತ್ಪನ್ನವಾಗುತ್ತ ಹೋಯಿತೆಂಬದನ್ನು ನೋಡೋಣ.

ರಣಮಸ್ತಖಾನನ ಪ್ರೇಮವು ನೂರಜಹಾನಳಲ್ಲಿ ವಿಶೇಷವಾಗಿತ್ತು. ಆತನು ಆಕೆಯನ್ನು ವಿಜಾಪುರಕ್ಕೆ ಕರೆದುಕೊಂಡು ಹೋಗುವಾಗ ಆ ಪ್ರೇಮವು ಮತ್ತಷ್ಟು ದೃಢವಾಯಿತು. ಆದರೆ ಆಕೆಯು ತಾನು ಮಾಡಿದ ಪ್ರತಿಜ್ಞೆ ಏನು ಮಾಡಿದರೂ ಬಿಡಲೊಲ್ಲಳು. ಆಕೆಯು ಹಾದಿಯಲ್ಲಿ ಒಂದೆರಡುಸಾರೆ ರಣಮಸ್ತಖಾನನು ತನಗೆ ಭೆಟ್ಟಿಯಾದಾಗ ಆತನಿಗೆ- “ನವಾಬಸಾಹೇಬ, ನಾನು ಇನ್ನು ಸ್ವತಂತ್ರಳಾದೆನು, ನಿಮ್ಮ ಹೊರತು ನಾನು ಬೇರೆಯವರನ್ನು ಲಗ್ನವಾಗುವದಿಲ್ಲ; ಆದರೆ ಕೂಡಿದ ದರ್ಬಾರದಲ್ಲಿ ನನ್ನ ಲಜ್ಞಾಹರಣ ಮಾಡಿದ ಆ ದುಷ್ಟ ರಾಮರಾಜನ ನಾಶಮಾಡಿರಿ. ಅವನ ರಾಜ್ಯವನ್ನು ಮಣ್ಣುಗೂಡಿಸಿರಿ” ಎಂದು ಸ್ಪಷ್ಟವಾಗಿ ಹೇಳಿದಳು. ಅದನ್ನು ಕೇಳಿ ರಣಮಸ್ತಖಾನನು, ಈ ಕಠಿಣ ಕಾರ್ಯವನ್ನು ಹ್ಯಾಗೆ ಸಾಧಿಸಬೇಕೆಂಬ ವಿಚಾರದಲ್ಲಿ ತೊಡಗಿದ್ದನು. ಎಷ್ಟೋ ವರ್ಷಗಳಿಂದ ಯಾವತ್ತು ಬಾಮನಿ ಬಾದಶಹರು ವಿಶ್ವಪ್ರಯತ್ನದಿಂದ ಸಾಧಿಸದೆ ಇದ್ದ ಕಾರ್ಯವು ತನ್ನಂಥ ಅಲ್ಪನಿಂದ ಹ್ಯಾಗೆ ಸಾಧಿಸಬೇಕೆಂಬ ವಿಚಾರದಲ್ಲಿ ಆತನು ಮಗ್ನನಾದನು. ಈ ವಿಚಾರದ ಭರದಲ್ಲಿಯೇ ಆತನು ವಿಜಾಪುರವನ್ನು ಮುಟ್ಟಿದನು. ವಿಜಾಪುರವನ್ನು ಮುಟ್ಟಿದ ಕೂಡಲೆ, ಇನ್ನು ನೂರಜಹಾನಳ ವಿಯೋಗವಾಗುವದೆಂದು ತಿಳಿದು ಆತನು ಬಹಳ ವ್ಯಸನಪಟ್ಟನು. ನೂರಜಹಾನಳು ಕುಲೀನಳು, ಆಕೆಯು ತನ್ನಂಥವನಿಗೆ ಹ್ಯಾಗೆ ಲಭಿಸುವಳು ? ಆಕೆಯ ಆಪ್ತೇಷ್ಟರು ನನ್ನೊಡನೆ ಆಕೆಯ ಲಗ್ನವನ್ನು ಹ್ಯಾಗೆ ಆಗಗೊಟ್ಟಾರು ? ಎಂಬ ದುಃಖದಾಯಕವಾದ ವಿಚಾರಗಳು ಆತನ ಮನಸ್ಸನ್ನು ನೋಯಿಸಹತ್ತಿದವು. ತಾನು ಕುಲೀನನಲ್ಲೆಂಬ ವಿಚಾರವು ಆತನ ಮನಸ್ಸನ್ನು ನೋಯಿಸುತ್ತಿದ್ದಷ್ಟು ಬೇರೆ ಯಾವ ವಿಚಾರವು ಆತನ ಮನಸ್ಸನ್ನು ನೋಯಿಸುತ್ತಿದ್ದಿಲ್ಲ. ಆತನಿಗೆ ತನ್ನ ಕುಲದ ಇತಿಹಾಸವು. ಇವನು ಇಪ್ಪತ್ತುನಾಲ್ಕು ಇಪ್ಪತ್ತೈದು ವರ್ಷದವನಾಗುವತನಕ ಗೊತ್ತೇ ಆಗಿದ್ದಿಲ್ಲ. ಆಮೇಲೆ ಅದು ಆತನಿಗೆ ಸ್ವಲ್ಪ ಮಟ್ಟಿಗಾದರೂ ಗೊತ್ತಾಯಿತು. ಒಂದು ದಿನ ಆತನು ತನ್ನ ಕುಲವೃತ್ತಾಂತವೇನೆಂದು ತನ್ನ ತಾಯಿಯನ್ನು ಕೇಳಿದನು. ಅದಕ್ಕೆ ಆಕೆಯು ತನ್ನ ವೃದ್ದ ದಾಸಿಯಾದ ಲೈಲಿಯನ್ನು ಕೇಳೆಂದು ಹೇಳಲು, ರಣಮಸ್ತಖಾನನು ಲೈಲಿಯನ್ನು ಕೇಳಿದನು. ಲೈಲಿಯು ಮಹಾ ಚತುರಳೂ ಬಹುಶ್ರತಳೂ ಇದ್ದಳು. ಆಕೆಯು ರಣಮಸ್ತಖಾನನನ್ನು ಒತ್ತಟ್ಟಿಗೆ ಕರಕೊಂಡು ಹೋಗಿ ಆತನ ಮನಸ್ಸನ್ನು ನೋಯಿಸದಂತೆ ಆತನನ್ನು ಕುರಿತು- ಒಡೆಯರೇ. ಇಂದು ನಾನು ನಿಮಗೆ ಎಲ್ಲ ವೃತ್ತಾಂತವನ್ನು ಹೇಳುತ್ತೇನೆ. ಒಮ್ಮೆ ಅದನ್ನು ಕೇಳಿದ ಬಳಿಕ, ತಿರುಗಿ ಅದರ ಚಕಾರ ಶಬ್ದವನ್ನೂ ಮಾಸಾಹೇಬರ ಮುಂದೆ ನೀವು ತೆಗೆಯಬೇಡಿರಿ. ಅದನ್ನ ಕೇಳಿ ನಿಮ್ಮ ಮಾಸಾಹೇಬರಿಗೆ ಬಹಳ ವ್ಯಸನವಾಗುತ್ತದೆ. ಅವರು ನಿಮ್ಮ ಸಲುವಾಗಿ ಎಷ್ಟುಕಷ್ಟಪಟ್ಟರೆಂಬದನ್ನು ನೀವು ಬಲ್ಲಿರಿ. ಅದರ ಉಪಕಾರವನ್ನು ಸ್ವಲ್ಪವಾದರೂ ತೀರಿಸುವ ಇಚ್ಛೆ ನಿಮಗಿದ್ದರೆ. ತಿರುಗಿ ಈ ಮಾತನ್ನು ನೀವು ಅವರ ಮುಂದೆ ತೆಗೆಯಬೇಡಿರಿ. ಅವರಿಗೆ ಈ ಮಾತಿನ ನೆನಪಾಗುವಂತೆ ಸರ್ವಥಾ ನೀವು ಮಾಡಬಾರದು. ನಿಮ್ಮ ತಂದೆ-ತಾಯಿಗಳಿಬ್ಬರೂ ದೊಡ್ಡ ಕುಲದವರಿರುತ್ತಾರೆ. ನಿಮ್ಮ ಹಿರಿಯರು ನಿಮ್ಮ ತಾಯಂದಿರನ್ನು ಅವರು ಅವಿವಾಹಿತರಾಗಿರುವಾಗ ಹುಲಿಯ ಬಾಯೊಳಗಿಂದ ಬಿಡಿಸಿದರು. ಆಗಿನ ಕಾಲದ ನಿಮ್ಮ ಹಿರಿಯರ ಶೌರ್ಯವನ್ನು ನೋಡಿ, ನಿಮ್ಮ ತಾಯಿಯವರು ಅವರನ್ನು ಲಗ್ನವಾಗಬೇಕೆಂದು ಇಚ್ಛಿಸಿದರು. ಆದರೆ ಅವೆರಡೂ ಮನೆತನಗಳು ಪರಸ್ಪರ ದ್ವೇಷಿಸುತ್ತಿದ್ದರಿಂದ, ನಿಮ್ಮ ತಾಯಿಯವರ ಲಗ್ನಕ್ಕೆ ಅವರ ತಂದೆಯ, ಅಂದರೆ ನಿಮ್ಮ ಅಜ್ಜಂದಿರ ಒಪ್ಪಿಗೆಯು ದೊರಯುವ ಹಾಗಿದ್ದಿಲ್ಲ; ಆದ್ದರಿಂದ ನಿಮ್ಮ ತಾಯಂದಿರು ಗುಪ್ತರೀತಿಯಿಂದ ನಿಮ್ಮ ಹಿರಿಯರನ್ನು ಲಗ್ನಮಾಡಿಕೊಂಡರು. ಕಾರಣ ನಿಮ್ಮ ಅಜ್ಜಂದಿರಿಗೆ ಬಹಳ ಸಂತಾಪವಾಯಿತು. ಕಾರಣ ನಿಮ್ಮ ಹಿರಿಯರು, ತಮ್ಮ ಮನೆಯವರಿಗೆ ಈ ಲಗ್ನದ ಸಂಗತಿಯು ತಿಳಿದರೆ ತಮ್ಮನ್ನು ಮನೆ ಬಿಡಿಸಿ ಹೊರಗೆ ಹಾಕಿಯಾರೆಂಬ ಭಯದಿಂದ ಅವರೂ ತಮ್ಮ ಲಗ್ನದ ಸಂಗತಿಯನ್ನು ಗುಪ್ತವಾಗಿ ಇಟ್ಟರು. ಕೆಲವು ದಿನಗಳವರೆಗೆ ನಿಮ್ಮ ತಾಯಿ ತಂದೆಗಳಿಬ್ಬರೂ ಒಂದು ಗುಪ್ತ ಸ್ಥಳದಲ್ಲಿ ಪರಮಾನಂದದಿಂದ ಇದ್ದರು. ನಿಮ್ಮ ಹಿರಿಯರು ಕೆಲವು ದಿನ ದಿನಾಲೂ ಆ ಗುಪ್ತ ಸ್ಥಳಕ್ಕೆ ಬರುತ್ತಿದ್ದರು. ಮುಂದೆ ಬರಬರುತ್ತ ನಾಲ್ಕು ದಿನಗಳಿಗೊಮ್ಮೆ ಎಂಟು ದಿನಗಳಿಗೊಮ್ಮೆ ಬರ ಹತ್ತಿದರು. ಒಂದುದಿನ ಮಾಸಾಹೇಬರು ನಿದ್ದೆ ಹತ್ತಿ ಮಲಗಿರುವಾಗ, ಅವರ ಬಳಿಯಲ್ಲಿ ನಿಮ್ಮ ಹಿರಿಯರು ಒಂದು ಪತ್ರವನ್ನು ಬರೆದು ಇಟ್ಟು ಹೊರಟು ಹೋದರು. ಅಂದಿನಿಂದ ಇಲ್ಲಿಯವರೆಗೆ ನಿಮ್ಮ ಹಿರಿಯರು ಮಾಸಾಹೇಬರ ಯೋಗಕ್ಷೇಮವನ್ನು ವಿಚಾರಿಸುವದಿಲ್ಲ. ಮಾಸಾಹೇಬರು ಜೀವಿಸಿರುವರೋ, ಸತ್ತಿರುವರೋ ಎಂಬ ಸುದ್ದಿಯನ್ನು ಸಹ ಅವರು ಕೇಳಿಕೊಂಡಿರುವದಿಲ್ಲ. ಇದಕ್ಕೂ ಹೆಚ್ಚಿಗೆ ನಾನು ಹೇಳಲಾರೆನು, ನಿಮ್ಮ ತಂದೆಯ ಹೆಸರನ್ನು ಮಾತ್ರ ನೀವು ಕೇಳಬೇಡಿರಿ. ಈಸಂಗತಿಯು ಮಾಸಾಹೆಬರಿಗೇ ಮತ್ತು ನನಗೆ ಅಲ್ಲದೆ ಬೇರೆ ಮತ್ತೊಬ್ಬರಿಗೆ ಗೊತ್ತಿಲ್ಲ, ಅದನ್ನು ಇಂದೇ ನಿಮ್ಮ ಮುಂದೆ ಮಾತ್ರ ಹೇಳಿದ್ದೇನೆ. ನಾನು ನಿಮ್ಮ ತಂದೆಯ ಹೆಸರನ್ನು ಗುಪ್ತವಾಗಿಡುವದರಿಂದ ಅದರಲ್ಲೇನಾದರೂ ಮನಸ್ಸಿಗೆ ಹತ್ತುವ ಪ್ರಸಂಗವಿದ್ದೀತೆಂದು ನಿಮಗೆ ತೋರಬಹುದು; ಆದರೆ ಹಾಗೆ ತೋರಗೊಡಬೇಡಿರಿ. ಎಲ್ಲಿಯವರೆಗೆ ನಿಮ್ಮ ಹಿರಿಯರು ನಿಮ್ಮಬ್ಬರನ್ನು ತಾವಾಗಿ ಕರೆಸಿಕೊಳ್ಳುವದಿಲ್ಲವೋ, ಅಲ್ಲಿಯವರೆಗೆ ನಿಮ್ಮ ಹಿರಿಯರಿಗೆ ತಮ್ಮ ವೃತ್ತಾಂತವನ್ನು ತಿಳಿಸಬಾರದೆಂದು ಮಾಸಾಹೇಬರು ಈ ಮೊದಲೇ ನಿಶ್ಚಯಿಸಿದರು. ನಿಮ್ಮ ಶೌರ್ಯಪಭಾವವು ನಿಮ್ಮ ಹಿರಿಯರಿಗೆ ತಿಳಿಯಬಂದ ದಿವಸವೇ ಮಾಸಾಹೇಬರು ಅವರ ಪರಿಚಯವನ್ನು ನಿಮಗೆ ಮಾಡಿ ಕೊಡುವರು. ಬರೇ ಪರಿಚಯವಷ್ಟೇ ಏಕೆ, ಅವರನ್ನು ನಿಮಗೆ ಪ್ರತ್ಯಕ್ಷವಾಗಿ ತೋರಿಸುವರು. ಅಲ್ಲಿಯವರೆಗೆ ಸಂಪೂರ್ಣ ವೃತ್ತಾಂತವನ್ನು ಬೇರೆಯವರಿಗೂ ತಿಳಿಸಲಿಕ್ಕಿಲ್ಲೆಂದು ಹಿಂದಕ್ಕೆ ಮಾಸಾಹೇಬರು ಪ್ರತಿಜ್ಞೆ ಮಾಡಿರುವರು. ಅವರು ನಿಮ್ಮ ಸಲುವಾಗಿ ಎಷ್ಟು ಕಷ್ಟಪಟ್ಟಿರುವರೆಂಬುದನ್ನೂ, ಆವರು ತಮ್ಮ ಗೌರವಕ್ಕೆ ಬಾಧೆ ಬಾರದಂತೆ ಇಲ್ಲಿಯವರೆಗೆ ಕಷ್ಟದಿಂದ ಹ್ಯಾಗೆ ಕಾಲಹರಣ ಮಾಡಿದರೆಂಬದನ್ನೂ ನಾನು ಪೂರಾಬಲ್ಲೆನು. ನಿಮಗಾದರೂ ಬಹು ಮಟ್ಟಿಗೆ ಅದು ಗೊತ್ತಿರುತ್ತದೆ. ಅಂದಬಳಿಕ ಇದಕ್ಕೂ ಹೆಚ್ಚಿಗೆ ನಾನೇನು ಹೇಳಲಿ ? ಇಷ್ಟರಿಂದಲೇ ನೀವು ಸಮಾಧಾನಪಡತಕ್ಕದು” ಎಂದು ಹೇಳಿ ಆಕೆಯು ಕಣ್ಣೀರು ಸುರಿಸಹತ್ತಿದಳು.

ಲೈಲಿಯು ಹೇಳುವ ಈ ವೃತ್ತಾಂತವನ್ನು ರಣಮಸ್ತಖಾನನು ತಟಸ್ಥ ವೃತ್ತಿಯಿಂದ ಕೇಳುತ್ತ ಕುಳಿತಿದ್ದನು. ತನ್ನ ತಂದೆಯು ತನ್ನ ತಾಯಿಯನ್ನು ನಿಷ್ಕಾರಣವಾಗಿ ಬಿಟ್ಟ ರೀತಿಯನ್ನು ಕೇಳಿ, ನಡುವೆ ಒಂದೆರಡು ಸಾರೆ ರಣಮಸ್ತಖಾನನಿಗೆ ಸಂತಾಪವಾಗಿ “ಇಂಥವನು ಯಾವನವನು, ಹೆಸರು ಹೇಳಬಾರದೆ ಒಂದು ಕೈ ನೋಡಿಬಿಡುತ್ತೇನೆ” ಎಂದು ಗಟ್ಟಿಯಾಗಿ ನುಡಿಯಬೇಕೆಂದು ಆತನು ಮಾಡಿದ್ದನು. ಆದರೆ ಆತನು ಮಾಸಾಹೇಬರಂಥ ಆತ್ಮಸಂಯಮದ ಸ್ತ್ರೀಯ ಹೊಟ್ಟೆಯಲ್ಲಿ ಹುಟ್ಟಿದವನಾದ್ದರಿಂದ, ಅಷ್ಟಕ್ಕೆ ತಡಕೊಂಡು ಸುಮ್ಮನೆ ಎಲ್ಲ ವೃತ್ತಾಂತವನ್ನು ಕೇಳಿಕೊಂಡನು. ಲೈಲಿಯು ಅಳುವದನ್ನು ನೋಡಿ ಅತನ ಹೊಟ್ಟೆಯಲ್ಲಿ ಬಹಳ ಕಷ್ಟವಾಯಿತು. ಏನು ಮಾತಾಡಬೇಕೆಂಬುದು ಆತನಿಗೆ ತಿಳಿಯದಾಯಿತು. ಅಷ್ಟರಲ್ಲಿ ಲೈಲಿಯು ಮತ್ತೆ ಆತನಿಗೆ- “ಅಪ್ಪಾ, ನಿಮ್ಮ ಅವ್ವನು ಬಹು ದೊಡ್ಡ ಮನುಷ್ಯಳು, ಮಹಾಪತಿವ್ರತೆಯು, ಆಕೆಯ ಉಗುರಿನ ಯೋಗ್ಯತೆಯನ್ನು ಸಹ ಬೇರೆ ಪತಿವ್ರತಾ ಸ್ತ್ರೀಯರು ಹೋಲಲಾರರು” ಎಂದು ಹೇಳಿದಳು. ಅದನ್ನು ಕೇಳಿ ರಣಮಸ್ತಖಾನನಿಗೆ ಬಹು ಮಟ್ಟಿಗೆ ಸಮಾಧಾನವಾಯಿತು. ಆತನು ತನ್ನ ತಾಯಿಯ ಬಳಿಗೆ ಹೋಗಿ ಆಕೆಯ ಚರಣಗಳ ಮೇಲೆ ಮಸ್ತಕವನ್ನಿಟ್ಟು ತನ್ನನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದನು. ತಮ್ಮ ಮನಸ್ಸನ್ನು ನೋಯಿಸುವ ಇಂಥ ಪ್ರಸಂಗವನ್ನು ಇನ್ನು ಪುನಃ ಬರಗೊಡುವದಿಲ್ಲೆಂದು ಆತನು ನಿರ್ಧಾರದಿಂದ ಮಾಸಾಹೇಬರಿಗೆ ಹೇಳಿದನು, ಈ ಸಂಗತಿಯು ರಣಮಸ್ತಖಾನನು ವಿಜಯನಗರದ ವಕೀಲನಾಗಿ ಬರುವದಕ್ಕೆ ಮುಂಚೆ ಕೆಲವು ವರ್ಷಗಳ ಹಿಂದೆ ಒದಗಿತ್ತು. ಅದಕ್ಕೂ ಮೊದಲು ನಾಲ್ಕು ವರ್ಷಗಳ ಹಿಂದೆ ಮಾಸಾಹೇಬರೂ ಲೈಲಿಯೂ ರಣಮಸ್ತಖಾನನ್ನು ಕಟ್ಟಿಕೊಂಡು ಬಂದು ವಿಜಾಪುರದಲ್ಲಿ ಇರಹತ್ತಿದರು. ಮಾಸಾಹೇಬರ ಪರೋಪಕಾರ ಸ್ವಭಾವ, ಸಾಧುವೃತ್ತಿಗಳ ಮೂಲಕ ಅವರ ಕೀರ್ತಿಯು ನಾಲ್ಕೂ ಕಡೆಗೆ ಪಸರಿಸುತ್ತ ರಾಣಿಯ ಮುಖಾಂತರ ಸ್ವತಃ ಬಾದಶಹರವರ ಕಿವಿಯವರೆಗೆ ಹೋಯಿತು. ಮಾಸಾಹೇಬರ ಮೇಲೆ ರಾಣಿಯು ಆ ಪ್ರಸಂಗವನ್ನು ಒದಗಿಸಿಕೊಟ್ಟಳು. ಹೀಗೆ ದರ್ಶನವಾದ ದಿವಸದಿಂದ ಬಾದಶಹನು ದೃಢಭಕ್ತಿಯು ಮಾಸಾಹೇಬರಲ್ಲಿ ಉಂಟಾಗಿ, ಅವರ ಮಗನನ್ನು ತಾವು ಕೈಹಿಡಿದು ದೊಡ್ಡ ಪದವಿಗೇರಿಸಬೇಕೆಂದು ಅವರು ನಿಶ್ಚಯಿಸಿದರು. ಬಾದಶಹರ ಕೃಪೆಯಿಂದ ರಣಮಸ್ತಖಾನನು ದಿನದಿನಕ್ಕೆ ಉತ್ಕರ್ಷವನ್ನು ಪಡೆಯಹತ್ತಿದನು. ಆತನ ಉತ್ಕರ್ಷವನ್ನು ನೋಡಿ ಉಳಿದ ಮುಸಲ್ಮಾನ ಸರದಾರರು ಹೊಟ್ಟೆಕಿಚ್ಚು ಪಡಹತ್ತಿದರು. ಇದನ್ನು ನೋಡಿ ಮಾಸಾಹೇಬರು ಅಸಮಧಾನಪಟ್ಟರು. ಈ ಹೊಟ್ಟೆಕಿಚ್ಚಿನ ಜನರು “ಇವನು ಯಾರು, ಎಲ್ಲಿಯವನು ಯಾರ ಮಗನು” ಎಂದು ತಮ್ಮ ಮಗನನ್ನು ಕಟ್ಟಿಕೊಂಡು, ಇವರ ಉಪದ್ರವ ತಗಲದ ಸ್ಥಳದಲ್ಲಿ ಒತ್ತಟ್ಟಿಗೆ ಇರಬೇಕೆಂದು ಅವರು ನಿಶ್ಚಯಿಸಿದರು. ಇದಕ್ಕೆ ವಿಜಯನಗರವು ತಕ್ಕ ಸ್ಥಳವಾಗಿ ಅವರಿಗೆ ತೋರಿತು. ಆಗ ಮಾಸಾಹೇಬರು “ತನ್ನ ಮಗನನ್ನು ವಿಜಯನಗರದ ವಕೀಲನನ್ನಾಗಿ ನಿಯಮಿಸಬೇಕೆಂದು ಬಾದಶಹನನ್ನು ಪ್ರಾರ್ಥಿಸಲು, “ಬಹಳ ತರುಣ” ನೆಂದು ಬಾದಶಹರು ಮೊದಲು ಮಾಸಾಹೇಬರ ಮಾತನ್ನು ಅಲ್ಲಗಳೆದರು. ಆದರೆ ಕಡೆಗೆ ಮಾಸಾಹೇಬರ ಮನಸ್ಸನ್ನು ಮುರಿಯಲಾರದೆ, ಬಾದಶಹರು ರಣಮಸ್ತಖಾನನ್ನು ವಿಜಯನಗರದ ವಕೀಲನನ್ನಾಗಿ ನಿಯಮಿಸಿ ಕಳಿಸಿದರು. ಅದೇ ರಣಮಸ್ತಖಾನನು ಈಗ ಬಾದಶಹರ ದರ್ಶನಕ್ಕಾಗಿ ನೂರಜಹಾಳನ್ನು ಕಳಿಸುವ ನೆವದಿಂದ ವಿಜಾಪುರಕ್ಕೆ ಬಂದಿದ್ದನು. ಆಗ ವಿಜಾಪುರದ ದರ್ಬಾರದಲ್ಲಿ ಏನು ನಡಯಿತೆಂಬುದನ್ನು ಮುಂದಿನ ಪ್ರಕರಣದಲ್ಲಿ ಹೇಳುವೆವು.

****