ಕನ್ನಡಿಗರ ಕರ್ಮ ಕಥೆ/ಸ್ರೀ ಸಾಹಸ
೫ನೆಯ ಪ್ರಕರಣ
ಸ್ರೀ ಸಾಹಸ
ರಾಮರಾಜನು ಬರೆದಿದ್ದ ಪತ್ರವು ತೀರ ದೊಡ್ಡದೂ ಇದ್ದಿಲ್ಲ, ತೀರ ಸಣ್ಣದೂ ಇದ್ದಿಲ್ಲ. ಮೆಹರ್ಜಾನಳು ಆ ಪತ್ರದ ಮೊದಲನೆಯ ವಾಕ್ಯವನ್ನು ಓದಿದ ಕೂಡಲೆ ಆಕೆಯ ಮೋರೆಯ ಲಕ್ಷಣವು ಹ್ಯಾಗೆ ಹ್ಯಾಗೋ ಆಯಿತು. ಆಕೆಯ ನೇತ್ರಗಳು ವಿಸ್ತರಿಸಿದವು, ಆಕೆಗೆ ಉಸುರು ಕಟ್ಟಿದ ಹಾಗೆ ಆಗಹತ್ತಿತು. ಆಕೆಯ ಕೈಗಳು ಗದಗದ ನಡುಗಹತ್ತಿದವು, ಮೈ ಬೆವತಿತ್ತು, ತುಟಿಗಳು ಕಂಪಿಸಹತ್ತಿದವು, ಅರೆಕ್ಷಣದಲ್ಲಿ ಆಕೆಯ ಗಲ್ಲಗಳು ನಿಸ್ತೇಜವಾಗಿ ಅವುಗಳಲ್ಲಿಯ ಗುಲಾಬಿ ಬಣ್ಣದ ಹೊಳಪು ಅಡಗಿತು. ಇನ್ನೊಂದು ಕಣದಲ್ಲಿ ಆಕೆಯ ಕಣ್ಣುಗಳೂ ನೀರಿನಿಂದ ತುಂಬಿದವು. ಮತ್ತೊಂದು ಕ್ಷಣದಲ್ಲಿ ಆಕೆಯ ಗಲ್ಲಗಳೂ ಕಿವಿಗಳೂ ಕೆಂಪಾದವು, ಮುಖದಲ್ಲಿ ಸಂತಾಪವು ವ್ಯಕ್ತವಾಗಹತ್ತಿತು, ಹುಬ್ಬುಗಳು ಅಕುಂಚಿತವಾದವು. ಆಕೆಯು ಅವಡುಗಚ್ಚಿ ಮನಸ್ಸಿನಲ್ಲಿ ಯಾವದೋ ಒಂದು ಮಾತಿನ ನಿಶ್ಚಯವನ್ನು ಮಾಡಿದ ಹಾಗೆ ತೋರಿತು. ಮುಖದಿಂದ ಹೊರಬೀಳಬೇಕೆಂದಿರುವ ಕೆಲವು ಉದ್ಗಾರಗಳನ್ನು ಆಕೆಯು ನಿಶ್ಚಯಪೂರ್ವಕವಾಗಿ ಬಿಗಿಹಿಡಿದಿರುವಳೆಂಬಂತೆ ಸ್ಪಷ್ಟವಾಗಿ ಕಾಣುತ್ತಿತ್ತು. ಹೊರಬೀಳುವ ಅಶ್ರುಗಳನ್ನು ನಿಲ್ಲಿಸಲಿಕ್ಕೂ ದುಃಖದ ವೇಗವನ್ನು ತಡೆಯಲಿಕ್ಕೂ ಆಕೆಯು ಯತ್ನಿಸುತ್ತಿರುವ ಹಾಗೆ ಕಂಡಿತು. ಇದನ್ನೆಲ್ಲ ಮಾರ್ಜೀನೆಯು ನೋಡುತ್ತಿದ್ದಳು. ಮೊದಲು ಮೆಹರ್ಜಾನಳ ಮುಖ ಲಕ್ಷಣವನ್ನು ನೋಡಿದಾಗ ಆಕೆಯನ್ನು ಏನೂ ಕೇಳಬಾರದೆಂದು ಮಾರ್ಜೀನೆಯು ನಿಶ್ಚಯಿಸಿದಳು. ಮುಂದೆ ಸ್ವಲ್ಪ ಹೊತ್ತಿನ ಮೇಲೆ ಆಕೆಯು ಧೈರ್ಯಮಾಡಿ ಏನೋ ಕೇಳಬೇಕೆಂದು ಹವಣಿಸಲು, ಮೆಹರ್ಜಾನಳು ಮೂಗಿನ ಮೇಲೆ ಬೊಟ್ಟಿಟ್ಟು ಸುಮ್ಮನಿರೆಂದು ನಿಬಂಧಿಸಿದಳು. ಆ ಮೇಲಂತೂ ಮೆಹರ್ಜಾನಳನ್ನು ಕೇಳಲಿಕ್ಕೆ ಮಾರ್ಜೀನೆಗೆ ಧೈರ್ಯವೇ ಆಗಲಿಲ್ಲ; ಈ ಮೊದಲೇ ಮೆಹರ್ಜಾನಳನ್ನು ನೋಡಿದವರು ಆಕೆಯ ಈಗಿನ ಉಗ್ರ ಮೂರ್ತಿಯನ್ನು ನೋಡಿದ್ದರೆ, ಈಕೆಯು ಮೆಹೆರ್ಜಾನಳೇ ಆಗಿರಬಹುದೇನೆಂಬ ಬಗ್ಗೆ ಅವರಿಗೆ ನಿಶ್ಚಯವಾಗಿ ಸಂಶಯ ಬರಬಹುದಾಗಿತ್ತು ! ಆಕೆಯ ಸೌಮ್ಯಮುದ್ರೆಯು ಅಷ್ಟು ನಷ್ಟವಾಗಿ ಅದರ ಸ್ಥಳವನ್ನು ಉಗ್ರತೆಯು ವ್ಯಾಪಿಸಿತ್ತು, ರಾಮರಾಜನ ಪತ್ರವನ್ನು ಓದುವದಾದ ಮೇಲೆ ಮೆಹರ್ಜಾನಳು ಬಹಳ ಹೊತ್ತಿನವರೆಗೆ ಅದನ್ನು ಎವೆಯಿಕ್ಕದೆ ನೋಡುತ್ತ ಸುಮ್ಮನೆ ಕುಳಿತುಕೊಂಡಳು. ಬಳಿಕ ಮತ್ತೊಂದು ಥೈಲಿಯಲ್ಲಿದ್ದ ಉಂಗುರವನ್ನು ದಿಟ್ಟಿಸಿ ನೋಡಿದಳು. ಆಮೇಲೆ ಮತ್ತೆ ಸ್ವಲ್ಪ ಹೊತ್ತು ವಿಚಾರ ಮಾಡಿ ಆಕೆಯು ತನ್ನ ಬಲಗೈಯ ಅನಾಮಿಕೆಯ ಬೆರಳಿನಲ್ಲಿ ಆ ಉಂಗುರವನ್ನು ಇಟ್ಟುಕೊಂಡು, ಸ್ವಲ್ಪ ತೀವ್ರವಾದ ಸ್ವರದಿಂದ ಮಾರ್ಜೀನೆಯನ್ನು ಕುರಿತು-ಮಾರ್ಜೀನೆ, ನೀನಾದರೂ ನನ್ನ ಮೇಲೆ ತಿರುಗಿ ಬೀಳದೆ ನನ್ನ ಸಂಗಡ ಬರುವೆಯಾ ? ಎಂದು ಕೇಳಲು, ಆಶ್ಚಯ್ಯಮಗ್ನಳಾದ ಮಾರ್ಜೀನೆಯು "ಎಲ್ಲಿಗೆ" ಎಂದು ಪ್ರಶ್ನೆ ಮಾಡಿದಳು. ಅದಕ್ಕೆ ಮೆಹರ್ಜಾನಳ ಮುಖದಿಂದ "ಎಲ್ಲಿಯಾದರೂ ಜಗತ್ತಿನಲ್ಲಿ ; ನಾನು ಹೋದತ್ತ" ಎಂಬ ಉತ್ತರವು ತಟ್ಟನೆ ಹೊರಟಿತು.
ಈ ಮೇರೆಗೆ ನುಡಿದು ಮೆಹರ್ಜಾನಳು ನಿಟ್ಟುಸಿರುಬಿಡಲು ಮಾರ್ಜೀನೆಯು ಏನೂ ತೋಚದೆ ಮೆಹರ್ಜಾನಳನ್ನು ನೋಡುತ್ತ ಸುಮ್ಮನೆ ಕುಳಿತುಕೊಂಡಳು. ಇಂದು ತನ್ನ ಮೆಹರ್ಜಾನಳು ಹೀಗೆ ಯಾಕೆ ಮಾಡುವಳು, ಹೀಗೆ ಯಾಕೆ ಮಾತಾಡುವಳು ಎಂಬುದರ ಗೂಢವೇ ಆಕೆಗೆ ತಿಳಿಯದಾಯಿತು. ಮಾರ್ಜೀನೆಯು ಮೆಹರ್ಜಾನಳ ಸ್ವಭಾವವನ್ನು ಚಿಕ್ಕಂದಿನಿಂದ ಬಲ್ಲವಳು. ಸಣ್ಣವಳಿರುವಾಗ ಮೆಹರ್ಜಾನಳು ಬಹು ಹಟಮಾರಿಯೂ, ತಾಮಸಿಯೂ ಇದ್ದಳು. ಆಕೆಯು ಹನ್ನೆರೆಡು ವರ್ಷಗಳಾದ ಬಳಿಕ ಆಕೆಯ ಹಟಮಾರಿತನವು ಮೇಲೆ ಮೇಲೆ ವ್ಯಕ್ತವಾಗದೆ, ಯಾವಾಗಾದರೊಮ್ಮೆ ವ್ಯಕ್ತವಾಗುತ್ತಿತ್ತು. ಮುಂದೆ ಸ್ವಲ್ಪ ದಿನಗಳಲ್ಲಿ ಮೆಹರ್ಜಾನಳ ತಾಯಿಯು ತೀರಿಕೊಳ್ಳಲು, ಆ ಹಟಮಾರಿತನವೂ, ತಾಮಸ ಸ್ವಭಾವವೂ ತೀರ ಕಡಿಮೆಯಾದವು. ಚಿಕ್ಕಂದಿನಿಂದ ಮೆಹರ್ಜಾನಳು ಮಾರ್ಜೀನೆಯ ಬಳಿಯಲ್ಲಿಯೇ ಇಪ್ಪತ್ತುನಾಲ್ಕು ತಾಸು ಇರುತ್ತಿದ್ದದ್ದರಿಂದ ಆಕೆಯ ಹಟಮಾರಿತನವನ್ನು ಮಾರ್ಜೀನೆಯು ಚೆನ್ನಾಗಿ ಅರಿತ್ತಿದ್ದಳು. ಮೆಹರ್ಜಾನಳ ತಂದೆಯಾದ ಖಾನ್‌ಜಮಾನ್ ಮಹಬೂಬಖಾನನೆಂಬುವನು ಗೋವಳ ಕೊಂಡದ ದರ್ಬಾರದಲ್ಲಿ ಒಬ್ಬ ಸರದಾರನಾಗಿದ್ದನು. ಮೆಹರ್ಜಾನಳು ಬಹು ಲಾವಣ್ಯವತಿಯೂ, ಸದ್ಗುಣಿಯೂ ಆದದ್ದರಿಂದ, ಬಹುಜನ ತರುಣ ಸರದಾರರು ಆಕೆಯನ್ನು ಲಗ್ನವಾಗಲಿಚ್ಛಿಸಿ ಖಾನನನ್ನು ಕೇಳಿದ್ದರು ; ಆದರೆ ಆತನು ಅಹಮ್ಮದನಗರದ ಬಾದಶಹನ ಮನೆತನದೊಡನೆ ಸಂಬಂಧ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಮೆಹರ್ಜಾನಳನ್ನು ಇಷ್ಟು ದಿನ ಲಗ್ನಮಾಡದೆ ಹಾಗೆ ಬಿಟ್ಟಿದ್ದನು. ಈ ಮಹತ್ವಾಕಂಕ್ಷೆಯ ಪರಿಣಾಮವು ಅನರ್ಥಕ್ಕೆ ಹ್ಯಾಗೆ ಕಾರಣವಾಯಿತೆಂಬದನ್ನು ವಾಚಕರಿಗೆ ಈಗ ಬರೆದು ತಿಳಿಸುವ ಕಾರಣವಿಲ್ಲ. ರಾಮರಾಜನು ಬೇಟೆಯಾಡಲಿಕ್ಕೆ ಹೋದಾಗ ಮೆಹರ್ಜಾನಳನ್ನು ಅಪಹರಿಸಿದ ಸಂಗತಿಯು ಅವರಿಗೆ ಈ ಮೊದಲೇ ಗೊತ್ತಾಗಿರುತ್ತದೆ. ಹೀಗೆ ಮಾರ್ಜೀನೆಯು ಮೆಹರ್ಜಾನಳ ಸ್ವಭಾವವನ್ನು ಪೂರಾ ಬಲ್ಲವಳಾದ್ದರಿಂದಲೇ ಆ ಸರದಾರ ಕುವರಿಯು ಸಂತಾಪ ಗೊಂಡಿರಲು, ಆಕೆಯ ವಿರುದ್ದ ಮಾತಾಡುವ ಗೊಡವೆಗೆ ಆ ಜಾಣೆಯು ಹೋಗಲಿಲ್ಲ. ನಿನಗೆ ಇಷ್ಟು ಸಿಟ್ಟು ಯಾಕೆ ಬಂದಿತು ? ಪತ್ರದಲ್ಲಿ ಅಂಥ ಸಂಗತಿಯನ್ನೇನು ಬರೆದಿದೆ ? ಎಂದು ಕೇಳುವ ಉಸಾಬರಿಗೂ ಆಕೆಯು ಹೋಗಲಿಲ್ಲ. ಈಗ ಮೆಹರ್ಜಾನಳ ಮಾತಿಗೆ ಒಡಂಬಡುತ್ತ ಹೋಗಿ ಆಕೆಯು ಸ್ವಲ್ಪ ಶಾಂತಳಾದ ಮೇಲೆ ಹೇಳೂಕೇಳುವದನ್ನು ಮಾಡೋಣವೆಂದು ತಿಳಿದು, ಆ ದೂರದರ್ಶಿಯಾದ ಹೆಣ್ಣುಮಗಳು ಮೆಹರ್ಜಾನಳನ್ನು ಕುರಿತು-ಮೆಹರ್ಜಾನ, ನಿನ್ನ ಮಾತಿಗೆ ನಾನು ಹೊರಗಾದವಳೇ ? ನಿಶ್ಚಯವಾಗಿ ನಿನ್ನ ಸಂಗಡ ಬರುವೆನು, ನೀನಿದ್ದಲ್ಲಿ ನಾನು, ಎಂದು ಹೇಳಿದಳು.
ಮಾರ್ಜೀನೆಯು ಹೀಗೆ ಒಡಂಬಟ್ಟದ್ದರಿಂದ ಮೆಹೆರ್ಜಾನಳಿಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಆಕೆಯ ನಿಶ್ಚಯವು ಮಾತ್ರ ಸ್ವಲ್ಪವೂ ಕಡಿಮೆಯಾಗಿದ್ದಿಲ್ಲ. ಆಕೆಯು ಮಾರ್ಜೀನೆಯನ್ನು ಕುರಿತು-ಮಾರ್ಜೀನೆ. ಹಿಂದುವಾದ ರಾಮರಾಜರನ್ನು ನಂಬಿ, ಅವಸರದಿಂದ ಲಗ್ನವಾಗಬೇಡೆಂದು ನೀನು ನನಗೆ ಹೇಳಿದ್ದರ ಅನುಭವವು ಈಗ ಬಂದಂತಾಯಿತು. ರಾಮರಾಜನ ಕೃತಘ್ನತೆಗೆ ಮೇರೆಯಿಲ್ಲದಾಯಿತು. ಮಾರ್ಜೀನೆ, ಈ ಪತ್ರದೊಳಗಿನ ಸಂಗತಿಯನ್ನು ನೆನಸಿದ ಕೂಡಲೆ ನನ್ನ ಸಂತಾಪವು ಹೆಚ್ಚಿ, ಮೈಮೇಲಿನ ಎಚ್ಚರವು ತಪ್ಪುತ್ತದೆ. ರಾಮರಾಜರು ವಿಜಯನಗರದ ಮಂತ್ರಿಪದವನ್ನು ಹೊಂದುವದಕ್ಕಾಗಿ ಕೃಷ್ಣದೇವರಾಜನ ಮಗಳನ್ನು ಲಗ್ನವಾಗುವರಂತೆ ! ಅಂದಬಳಿಕ ಪಟ್ಟ ರಾಣಿಯ ಮಾನವು ನನ್ನ ಪಾಲಿಗೆ ಎಲ್ಲಿ ಉಳಿಯಿತು ? ಯವನಳಾದ ನನ್ನ ಪಾಣಿಗ್ರಹಣ ಮಾಡಿದ್ದರಿಂದ ರಾಮರಾಜನ ಉತ್ಕರ್ಷಕ್ಕೆ ತೊಂದರೆಯಾಗಿದೆಯಂತೆ ! ತಮ್ಮ ವಿವಾಹವಾಗುವವರೆಗೆ ನಾನು ಏಕಾಂತವಾಗಿ ಇರಬೇಕಂತೆ ! ಅಲ್ಲಿಯವರೆಗೆ ತಾವು ಕುಂಜವನಕ್ಕೆ ಬಾರದಿದ್ದರೂ ನಾನು ವಿಕಲ್ಪವನ್ನು ಎಣಿಸಬಾರದಂತೆ ! ಸರಿ ಸರಿ ! ಮಾರ್ಜೀನೆ, ಕಾಫರನಾದ ಈ ಹಿಂದುವಿನ ಕೃತಘ್ನತೆಯು ಆಗ ನನಗೆ ತಿಳಿಯಲಿಲ್ಲ. ನಿನ್ನ ಮಾತುಗಳನ್ನು ಮೀರಿ ನಾನು ರಾಮರಾಜನ ಕೈಹಿಡಿದದ್ದು ಮಹಾಪರಾಧವಾಯಿತು. ಈ ಅಪರಾಧದ ಪ್ರಾಯಶ್ಚಿತ್ತಕ್ಕಾಗಿಯೇ ಇಂದಿನಿಂದ ನಾನು ವಿಷಯಸುಖದ ಆಸೆಯನ್ನು ಬಿಟ್ಟುಬಿಡುವೆನು. ಇನ್ನು ಮೇಲೆ ನಾನು ರಾಮರಾಜರ ಮುಖಾವಲೋಕನವನ್ನು ಮಾಡಲಿಕ್ಕಿಲ್ಲ : ಈ ಕುಂಜವನದಲ್ಲಿ ನಿಂತು ನೀರು ಕುಡಿಯಲಿಕ್ಕಿಲ್ಲ. ಪ್ರಸಂಗ ಒದಗಿದಾಗ ಇದರ ಸೇಡು ತೀರಿಸಿಕೊಂಡರೇ, ನಾನು ಪಠಾಣಜಾತಿಯಲ್ಲಿ ಹುಟ್ಟಿದವಳು. ಹೀಗನ್ನಲು, ಮಾರ್ಜೀನೆಯು-ಮೆಹರ್ಜಾನ, “ಕೆಟ್ಟದನ್ನು ಅಟ್ಟವಳೇ ಜಾಣಳೆಂಬಂತೆ, ಈಗ ಕೆಟ್ಟು ಹೋಗಿರುವ ಕೆಲಸವನ್ನು ತಿದ್ದಿಕೊಳ್ಳುವದರಲ್ಲಿಯೇ ಜಾಣತನವುಂಟು. ಮೊದಲೇ ಅಡ್ಡಹಾದಿಗೆ ಹೋಗತಕ್ಕದಿದ್ದಿಲ್ಲ. ಹೋದಬಳಿಕ ಅದೇ ಹಾದಿಯ ಸಹಾಯದಿಂದ ಒಳ್ಳೆಯ ಹಾದಿಯನ್ನು ಹುಡುಕಿ ಇದ್ದದ್ದರಲ್ಲಿ ಹಿತಮಾಡಿಕೊಳ್ಳತಕ್ಕದ್ದು. ನೀನು ಪತಿಯೆಂದು ರಾಮರಾಜನ ಪಾಣಿಗ್ರಹಣ ಮಾಡಿರುತ್ತೀ. ಅಂದ ಬಳಿಕ ಪತಿದ್ರೋಹಕ್ಕೆ ಗುರಿಯಾಗುವದು ಪಾತಕವೇ ಸರಿ. ಯಾವದಾದರೂ ಒಂದು ದಂಡೆಯನ್ನು ಹೊಂದತಕ್ಕದ್ದು. ಆದ್ದರಿಂದ ಹ್ಯಾಗಿದ್ದರೂ ನೀನು ರಾಮರಾಜನನ್ನು ಹೊಂದಿಕೊಂಡಿರುವದೇ ನೆಟ್ಟಗೆ ಕಾಣುತ್ತದೆ. ಇಲ್ಲದಿದ್ದರೆ ಇಬ್ಬರ ಅನರ್ಥಕ್ಕೂ ಕಾರಣವಾಗಬಹುದು, ಮಹಾರಾಜರು ಮಂತ್ರಿಪದವಿಯ ಮಹತ್ವಾಕಾಂಕ್ಷೆಯಿಂದ ಕೆಲವು ದಿನ ಕುಂಜವನಕ್ಕೆ ಬಾರಿದಿದ್ದರೆ ತಪ್ಪೇನು ? ಆಮೇಲೆ ಅವರು ನಿನ್ನನ್ನು ಪಟ್ಟರಾಣಿಯಾಗಿ ಮಾಡಿಕೊಳ್ಳಲಿಕ್ಕಿಲ್ಲೆಂದು ನೀನು ಯಾಕೆ ತಿಳಕೊಳ್ಳತ್ತೀ ? ಮೆಹರ್, ಸ್ವಲ್ಪ ಶಾಂತಳಾಗು. ಯಾವದಕ್ಕಾದರೂ ಸ್ವಲ್ಪ ಕೂತು ಮಲಗಬೇಕು. ಮನಸ್ಸಿನಲ್ಲಿ ಏನಾದರೂ ಬಂದ ಕೂಡಲೆ ಹುರ್‍ರೆನ್ನುವದು ನೆಟ್ಟಗಲ್ಲ. ಅದರಿಂದ ಮುಂದೆ ಪಶ್ಚಾತ್ತಾಪಕ್ಕೆ ಗುರಿಯಾಗಬೇಕಾದೀತು. ನಿನ್ನ ಸಂಗಡ ಬರಲಾರದ್ದಕ್ಕೆ ನಾನು ಇಷ್ಟು ಮಾತಾಡುತ್ತೇನೆಂದು ನೀನು ತಿಳಿಯಬೇಡ. ಮೆಹರ್, ನನ್ನದೇನು ಆಳುತ್ತದೆ ಹೇಳು ; ಆದರೆ ಹಿಂದುಮುಂದುಯಿಲ್ಲದೆ ಅತಂತ್ರವಾಗಿರುವ ನಿನಗೆ, ಹಿತದ ಮಾತನ್ನು ಹೇಳುತ್ತೇನೆ. ಸ್ವಚ್ಛಂದ ವೃತ್ತಿಯಿಂದ ಕುಂಜವನದಿಂದ ಹೊರಟು ಹೋಗುವುದು ನಿನ್ನ ಶೀಲಕ್ಕೂ ಮರ್ಯಾದೆಗೂ ಒಪ್ಪುವದಿಲ್ಲ. ಅತ್ತ ಮುಸಲ್ಮಾನರೂ ನಮ್ಮನ್ನು ನಿರಾಕರಿಸಬಹುದು ; ಇತ್ತ ರಾಮರಾಜನ ಆಸರವೂ ತಪ್ಪುವದು. ಆದ್ದರಿಂದ ಈಗ ನೀನು ಸಂತಾಪದಲ್ಲಿ ಮಾಡಿರುವ ನಿಶ್ಚಯಕ್ಕೆ ಮಹತ್ವ ಕೊಡಬೇಡ. ಮುಂದೆ ಅಂಥ ಪ್ರಸಂಗ ಬಂದರೆ, ಈಗಿನ ನಿಶ್ಚಯದಂತೆ ಆಗ ನಡೆಯಲಿಕ್ಕೆ ಬಂದೀತು. ಇದರ ಮೇಲೆಯೂ ನಿನ್ನ ಆಗ್ರಹವು ಇದ್ದರೆ, ನಿನ್ನ ಬೆನ್ನುಹತ್ತಿ ಬರಲಿಕ್ಕೆ ನಾನು ಸಿದ್ಧಳೇ ಇದ್ದೇನೆ, ಮೆಹರ್ ಇನ್ನು ನನ್ನದೇನಾಗಬೇಕಾಗಿದೆ ? ನಿನ್ನ ಸಲುವಾಗಿ ನಾನು ಪ್ರಾಣವನ್ನಾದರೂ ಕೊಡಲಿಕ್ಕೆ ಸಿದ್ಧಳಿರುವೆನು.
ಮಾರ್ಜೀನೆಯ ಈ ಮಾತುಗಳನ್ನು ಕೇಳಿ ಮೆಹರ್ಜಾನಳಿಗೆ ಸ್ವಲ್ಪ ಸಮಾಧಾನವಾಯಿತು ; ಆದರೆ ತಾನು ಗರ್ಭಿಣಿಯಿದ್ದೇನೆಂಬ ಸುದ್ದಿಯನ್ನು ಕೇಳಿ ರಾಮರಾಜನು ತನ್ನನ್ನು ಭೆಟ್ಟಿಯಾಗದೆ ಹಾಗೆ ಹೋದದ್ದನ್ನೂ, ಪತ್ರದಲ್ಲಿ ತನ್ನ ಸಲುವಾಗಿ ತೋರಿಸಿದ ಅನಾದರವನ್ನೂ ಸ್ಮರಿಸಿ, ಪುನಃ ಆಕೆಯು ಸಂತಾಪಗೊಂಡು ಮಾರ್ಜೀನೆಯನ್ನು ಕುರಿತು ಮಾರ್ಜೀನೆ, ನೀನು ಹೇಳುವದೆಲ್ಲ ನಿಜವು ; ಆದರ ಅಪಮಾನಕ್ಕಿಂತ ಮರಣವೇ ಶ್ರೇಯಸ್ಕರವೆಂದು ತಿಳಿಯುವ ಅಭಿಮಾನಿಗಳಿಗೆ ; ನಿನ್ನ ಬೋಧದಿಂದ ಏನು ಪ್ರಯೋಜನವಾಗುವದು ಹೇಳು? ಈಗ ಒಂದು ತಾಸಿನ ಹಿಂದಿದ್ದ ಮೆಹರ್ಜಾನಳು ಈಗ ಇರುತ್ತಾಳೆಂದು ತಿಳಿಯಬೇಡ. ಆಗ ಆಕೆಯು ಹಿಂದುವಿದ್ದಳು. ಈಗ ಆಕೆಯು ಸುಟ್ಟು ಬೂದಿಯಾಗಿ ಹೋದಳು. ಈಗಿನ ಮೆಹರ್ಜಾನಳು ಮುಸಲ್ಮಾನಳಿರುತ್ತಾಳೆ. ಆಕೆಯು ತನ್ನ ಜಾತಿಗಳಾದ ಮುಸಲ್ಮಾನರಂತೆ ರಾಮರಾಜನ ಸಂಗಡ ದ್ವೇಷ ಮಾಡುವವಳೇ ಸರಿ, ಆಕೆಯು ತಾನು ಬದುಕುವವರೆಗೆ ರಾಮರಾಜನ ಸೇಡು ತೀರಿಸಿಕೊಳ್ಳಲಿಕ್ಕೆ ಯತ್ನಿಸುವವಳೇ ಸರಿ. ಮೆಹರ್ಜಾನಳು. ತನ್ನ ತನುಮನಧನಗಳನ್ನು ರಾಮರಾಜನಿಗೆ ನಿರ್ವಂಚನೆಯಿಂದ ಒಪ್ಪಿಸಿದ್ದಳು ; ಆದರೆ ಆತನು ಈಗ ಅವನ್ನು ನಿರಾಕರಿಸಿ ಚಲ್ಲಿಕೂಡುವುದರಿಂದ ಅವು ಕೊಳೆತು ವಿಕಾರವನ್ನು ಹೊಂದಿ, ರಾಮರಾಜನಿಗೆ ಬಾಧಕವಾದರೆ ಯಾರೇನು ಮಾಡಬೇಕು ? ಮಾರ್ಜೀನೆ, ಬಹಳ ಮಾತುಗಳಿಂದೇನು ? ಖಾನ್‌ಜಮಾನ್ ಮಹಬೂಬಖಾನನ ಮಗಳಾದ ಈ ಮೆಹರ್ಜಾನಳಿಗೆ ಅಪಮಾನವು ಸಹನವಾಗದು. ಆಕೆಯು ಇಂದಿನಿಂದ ಎಲ್ಲ ಆಸೆಗಳನ್ನು ತೊರೆದಿರುವಳು. ರಾಮರಾಜನ ಸೇಡು ತೀರಿಸಿಕೊಳ್ಳುವದೊಂದು ಆಸೆಯು ಮಾತ್ರ ಆಕೆಗಿರುತ್ತದೆ. ರಾಮರಾಜನ ಹಂಗು ನನಗೆ ಇನ್ನು ಬೇಡ. ಆತನದೊಂದು ರಿಂಬಿಯನ್ನಾದರೂ ನಾನು ಮುಟ್ಟುವದಿಲ್ಲ. ಆತನ ವಸ್ತ್ರಗಳು ಬೇಡ ; ದುಡ್ಡು ಬೇಡ, ಧೂಪ ಬೇಡ, ನಡೆ. ಇಲ್ಲಿಂದ ಹೊರಟು ಎಲ್ಲಿಗಾದರೂ ಹೋಗೋಣ. ನನ್ನ ತಂದೆ ಕೊಟ್ಟಿರುವ ಕೆಲವು ಆಭರಣಗಳು ನಮ್ಮ ಬಳಿಯಲ್ಲಿರುವವಷ್ಟೆ ? ಅವನ್ನು ಮುರಿಸಿ ಹ್ಯಾಗಾದರೂ ಕಾಲಹರಣ ಮಾಡೋಣ. ರಾಮರಾಜನು ಈಗ ನನ್ನ ಉದರದಲ್ಲಿ ಬಿತ್ತಿರುವ ವಿಷದ ಬೀಜವು ದೊಡ್ಡ ವೃಕ್ಷವಾಗಿ, ಅದರ ಫಲಗಳ ಸೇವನದಿಂದ ಆ ರಾಮರಾಜನು ಸಮೂಲ ನಾಶಹೊಂದುವ ಹಾದಿಯನ್ನು ನೋಡೋಣ. ಇದರ ಮೇಲೆಯೂ ನೀನು ವ್ಯರ್ಥವಾಗಿ ನನ್ನನ್ನು ಬೋಧಿಸಿ ಕಾಲಹರಣ ಮಾಡಿದರೆ, ನನ್ನ ಜೀವವು ನನ್ನ ಕೈಯೊಳಗಿರುತ್ತದೆ, ಆಮೇಲೆ ನಿನ್ನ ಹಂಗಾದರೂ ಏನು ? ಮೆಹರ್ಜಾನಳ ನಿಶ್ಚಯದಲ್ಲಿ ಇನ್ನು ಅಂತರವಾಗಲಾರದು. ನಿನ್ನ ಹಳೆಯ ಬಟ್ಟೆಬರೆಗಳನ್ನೂ, ಬುರುಕೆಯನ್ನೂ ನನಗೆ ಕೊಡು. ಅವನ್ನು ಹಾಕಿಕೊಂಡು ಇಲ್ಲಿಂದ ಹ್ಯಾಗಾದರೂ ಮಾಡಿ ಪಾರಾಗಿ ಹೋಗೋಣ ; ಹ್ಯಾಗೂ ನನ್ನ ಸುಖವು ಮಣ್ಣುಗೂಡಿ ಹೋಯಿತು. ಇನ್ನು ಮೇಲೆ ದುಷ್ಪ ಹಿಂದುಗಳಿಂದ ನನ್ನಂಥ ಯವನ ತರುಣಿಯರ ಸುಖವು ಮಣ್ಣುಗೂಡದಂತೆ ಯತ್ನಿಸುವಾಗ ನನ್ನ ದೇಹವೂ ಮಣ್ಣಾದರೆ, ಒಂದು ಬಗೆಯ ಪರೋಪಕಾರವಾದರೂ ಘಟಿಸಿದಂತಾಗುವವು.
ಮಾರ್ಜೀನೆಗಾದರೂ ಮೆಹರ್ಜಾನಳ ಮಾತು ತೀರ ಅಯೋಗ್ಯವಾಗಿ ತೋರಲಿಲ್ಲ. ರಾಮರಾಜನು ತನ್ನ ಯೋಗ್ಯಬೋಧಕ್ಕೆ ಕಿವಿಗೊಡದೆ ವಿಷಯಲಂಪಟನಾಗಿ ಸಿಕ್ಕಹಾಗೆ ವಚನಕೊಟ್ಟು, ಲಗ್ನವಾಗಿ ಈಗ ಮೆಹರ್ಜಾನಳನ್ನು ಉದಾಸೀನ ಮಾಡಿದ್ದಕ್ಕಾಗಿ ಮಾರ್ಜೀನೆಗೂ ಸಂತಾಪವಾಗಿತ್ತು. ಅಯೋಗ್ಯ ನಡತೆಗಾಗಿ ಸರಳ ಮನಸ್ಸಿನವರಿಗಾಗುವ ಸಂತಾಪ ಬರವು ಕುಹಕರಿಗೆ ಗೊತ್ತಾಗದು. ಮೆಹರ್ಜಾನಳು ಸಂಸಾರ ಕೇಡಾಗ ಬಾರದೆಂದು ಮಾರ್ಜೀನೆಯು ಮೊದಮೊದಲು ಸೌಮ್ಯ ಮಾರ್ಗವನ್ನು ಹಿಡಿಯುವದಕ್ಕಾಗಿ ಆಕೆಯನ್ನು ಬೋಧಿಸಿದಳು ; ಆದರೆ ಮಹಾ ಅಭಿಮಾನಿಯಾದ ಮೆಹರ್ಜಾನಳು ತನ್ನ ಸುಖಸರ್ವಸ್ವದ ಮೇಲೆ ಪ್ರತಿಜ್ಞೆಯ ಭಾಷೆಯಿಂದ ಎಳ್ಳು ನೀರು ಬಿಟ್ಟದ್ದನ್ನು ನೋಡಿ ಗತ್ಯಂತರ ಕಾಣದೆ, ಮಾರ್ಜೀನೆಯೂ ಸ್ವಕುಲಾಭಿಮಾನವನ್ನು ತಾಳಿದಳು. ಹಿಂದೂ ಜನರಿಂದ ಮುಸಲ್ಮಾನರಿಗಾಗುತ್ತಿದ್ದ ತ್ರಾಸವನ್ನು ನೆನೆಸಲು ರಾಮರಾಜನಂಥ ಅಯೋಗ್ಯ ಹಿಂದುಗಳ ಶಾಸನವಾಗುವದು ಅನ್ಯಾಯವಲ್ಲೆಂಬ ಭಾವನೆಯು ಆಕೆಯಲ್ಲಿ ಉತ್ಪನ್ನವಾಯಿತು. ಆದರೂ ಆಕೆಯು ಮೆಹರ್ಜಾನಳನ್ನು ಕುರಿತು-ಮೆಹರ್, ನಿನ್ನ ಮಾತು ಅಯೋಗ್ಯವೆಂದು ನಾನು ಹೇಳುವುದಿಲ್ಲ, ಆದರೆ ದಂಪತಿಗಳೆನಿಸಿಕೊಳ್ಳುವವರಿಗೆ ಈ ನಡತೆಯು ಒಪ್ಪದು. ಅವರು ಪರಸ್ಪರರ ಅಪರಾಧಗಳನ್ನು ಕ್ಷಮಿಸಿ ಪ್ರೇಮಕ್ಕೆ ಭಂಗಬಾರದಂತೆ ನಡೆದುಕೊಳ್ಳುವದೇ ಯೋಗ್ಯವು, ನಿನ್ನ ಈಗಿನ ಪ್ರತಿಜ್ಞೆಯ ಪರಿಣಾಮವು ಯಾರಿಗೂ ಸುಖಪ್ರದವಾಗುವದಿಲ್ಲ. ಹೀಗಿದ್ದು ರಾಮರಾಜನನ್ನು ನೀನು ಶತ್ರುವೆಂದು ತಿಳಿದು ಆತನ ಸೇಡು ತೀರಿಸಿಕೊಳ್ಳುವದಕ್ಕಾಗಿ “ಪ್ರತಿಜ್ಞೆ ಮಾಡುತ್ತೀ ! ನಿನ್ನ ಪ್ರತಿಜ್ಞೆಯು ಅಯೋಗ್ಯವಾದರೂ ನಿನ್ನ ಮೇಲಿನ ಪ್ರೇಮಾತಿಶಯದಿಂದ ನಾನು ನಿನ್ನನ್ನು ಅನುಸರಿಸಬೇಕಾಗುತ್ತದೆ. ಇದು ದಂಪತಿಗಳ, ವಿಶೇಷವಾಗಿ ಅರ್ಧಾಂಗಿಯೆನಿಸುವವಳ ಧರ್ಮವಲ್ಲೆಂದು ನಾನು ನಿನಗೆ ಸ್ಪಷ್ಟವಾಗಿ ಕಡೆಯ ಸಾರೆ ಹೇಳುತ್ತೇನೆ. ರಾಮರಾಜನ ವಚನಭ್ರಷ್ಟತೆಗಾಗಿ ನನಗೂ ಸಂತಾಪವಾಗಿದೆ. ರಾಮರಾಜನಂಥ ಅಯೋಗ್ಯ ನಡತೆಯ ಹಿಂದುಗಳ ಸಂಬಂಧದ ತಿರಸ್ಕಾರವು ನನ್ನಲ್ಲಿಯೂ ಉತ್ಪನ್ನವಾಗುತ್ತದೆ ; ಅಂಥವರ ಶಾಸನವಾದರೆ ನನಗೆ ಅನ್ಯಾಯವಾಗಿಯೂ ತೋರುವುದಿಲ್ಲ ; ಆದರೂ ಮೆಹರ್, ನೀನು ಹೀಗೆ ಕೃತಘ್ನಳಾಗುವದು ನನಗೆ ಸರಿದೋರುವದಿಲ್ಲ, ಎಂದು ಹೇಳಿದಳು. ಆಕೆಯ ಮಾತಿನಿಂದ ಮೆಹರ್ಜಾನಳ ಮನಸ್ಸು ತಿರುಗಲಿಲ್ಲ. ಆ ಅಭಿಮಾನಸ್ವಭಾವದ ತರುಣಿಯು ಒಂದೇ ಹಟವನ್ನು ಹಿಡಿದಳು. ಆಗ ಮಾರ್ಜೀನೆಯು - ಮೆಹೆರ್, ನೀನು ಹೀಗೆ ಹಟಮಾಡಿದರೆ ಉಪಾಯವಿಲ್ಲ. ನಿನ್ನ ಮಾತಿಗೆ ವಿರುದ್ದವಾಗಿ ನಾನು ನಡೆಯಲಾರೆನು, ಇನ್ನು ಕುಂಜವನದಿಂದ ಹೊರಟುಹೋಗುವ ಉಪಾಯವನ್ನು ಮಾಡುವೆನು. ಈ ಪ್ರಸಂಗದಲ್ಲಿ ನೀನು ನನ್ನ ಮಾತನ್ನು ಕೇಳದಿದ್ದರೆ ಕೆಲಸವಾಗುವದಿಲ್ಲ. ಧನಮಲ್ಲನ ಮನಸ್ಸನ್ನು ಒಲಿಸಿಕೊಂಡ ಹೊರತು ನಾವು ಇಲ್ಲಿಂದ ಪಾರಾಗಿ ಹೋಗಲಾರೆವು. ಧನಮಲ್ಲನನ್ನು ಕಂಡರೆ ನೀನು ಸೇರುವದಿಲ್ಲ. ಆತನು ಕಣ್ಣಿಗೆ ಬಿದ್ದ ಕೂಡಲೆ ಕವಕ್ಕನೆ ಆತನ ಮೈಮೇಲೆ ಹೋಗುತ್ತಿ ? ಅಂದಬಳಿಕ ನಾವು ಇಲ್ಲಿಂದ ಹ್ಯಾಗೆ ಪಾರಾಗಿ ಹೋಗಬೇಕು ? ಧನಮಲ್ಲನ ಕಾವಲು, ಕೃಷ್ಣಸರ್ಪದ ಕಾವಲು ಇದ್ದ ಹಾಗೆ ಇರುತ್ತದೆ.
ಮಾರ್ಜೀನೆಯ ಈ ಮಾತುಗಳನ್ನು ಕೇಳಿ, ಮೆಹರ್ಜಾನಳು - ಮಾರ್ಜೀನೆ, ಧನಮಲ್ಲನನ್ನು ಕಂಡರೆ ನನಗೆ ಬಹಳ ತ್ರಾಸವಾಗುತ್ತದೆ. ಆತನು ಕೃಷ್ಣಸರ್ಪದಂತೆ ನನಗೆ ಕಾಣುವದರಿಂದ, ಆತನನ್ನು ನೋಡಿದರೆ ನನಗೆ ಅಂಜಿಕೆಯೂ ಬರುತ್ತದೆ; ಆದರೆ ಈಗ ನಾನು ಆತನ ಉಸಾಬರಿಗೆ ಬರುವದಿಲ್ಲ. ನಾನು ಆತನ ಸಂಗಡ ಮಾತಾಡುವ ಪ್ರಸಂಗವನ್ನೇ ನೀನು ತರಬೇಡ. ನೀನು ಬೇಕಾದದ್ದು ಮಾಡು, ಇಂದು ಸಂಜೆಯೊಳಗಾಗಿ ನಾವು ಕುಂಜವನವನ್ನು ಬಿಟ್ಟು ಹೋಗತಕ್ಕದ್ದು, ಎಂದು ಹೇಳಿದಳು. ಆಗ ಮಾರ್ಜೀನೆಯು ಧನಮಲ್ಲನ ಬಳಿಗೆ ಹೋಗಿ - ಧನಮಲ್ಲ, ಅವ್ವನವರು ಈಗಲೇ ಸಂಗವಪಲ್ಲಿಯೊಳಗಿನ ಪೀರನ ಗೋರಿಯ ದರ್ಶನಕ್ಕಾಗಿ ಹೋಗಬೇಕೆನ್ನುತ್ತಾರೆ ; ಶಹಾನವಾಜಪೀರರ ದರ್ಶನವಾಗುವವರೆಗೆ ಅವರು ಬಾಯಲ್ಲಿ ನೀರು ಹಾಕುವದಿಲ್ಲವಂತೆ. ನಿನ್ನೆ ರಾತ್ರಿ ಒದಗಿದ ಅನರ್ಥವನ್ನು ನೀನು ಕಣ್ಣಮುಟ್ಟಿ ನೋಡಿರುವಿಯಷ್ಟೇ ? ನಿನ್ನೆ ಬೆಳಗು ಮುಂಜಾನೆ ಪೀರಸಾಹೇಬರು ಅವ್ವನವರ ಕನಸಿನಲ್ಲಿ ಬಂದು-ನೀನು ನನ್ನ ದರ್ಶನಕ್ಕೆ ಬಾ, ಅಂದರೆ ಎಲ್ಲ ಅರಿಷ್ಟಗಳ ನಿವಾರಣವಾಗುವದು, ಎಂದು ಹೇಳಿದರಂತೆ ! ಪೀರಸಾಹೇಬರ ಮೇಲೆ ಅವ್ವನವರ ಭಕ್ತಿಯು ಬಹಳ. ಅವರು ಈಗ ದರ್ಶನಕ್ಕೆ ಹೋಗಿಯೇ ತೀರಬೇಕೆಂದು ಹಟ ಹಿಡಿದಿರುವರು, ಹೋಗು ರಥವನ್ನು ಹೂಡಿಕೊಂಡು ಬಾ, ಎಂದು ಹೇಳಲು, ಧನಮಲ್ಲನು ಬೆರಗಾಗಿ ಮಾರ್ಜೀನೆಯ ಮೋರೆಯನ್ನು ನೋಡುತ್ತ ನಿಂತುಕೊಂಡನು. ಆಗ ಮಾರ್ಜೀನೆಯು ಪುನಃ ಆತನನ್ನು ಕುರಿತು-ಎಲಾ ಹೀಗೆ ಹುಚ್ಚನ ಹಾಗೆ ಸುಮ್ಮನೆ ನೋಡುತ್ತ ಯಾಕೆ ನಿಂತುಕೊಂಡೇ ? ನಿನಗೆ ಅವ್ವನವರ ಹಟಮಾರಿ ಸ್ವಭಾವವು ಗೊತ್ತಿಲ್ಲವೆ ? ಅವರ ಬಾಯಿಂದ ಬಂದದ್ದು ಆಗಲೇ ಬೇಕು. ಅದರಲ್ಲಿ ಇದು ಪೀರನ ದರ್ಶನದ ಕೆಲಸವು, ದರ್ಶನವಾದ ಹೊರತು ಅವರು ನಿಶ್ಚಯವಾಗಿ ಬಾಯಲ್ಲಿ ನೀರು ಹಾಕುವುದಿಲ್ಲ. ಹೋಗು ಸುಮ್ಮನೆ ರಥಕ್ಕೆ ಎತ್ತುಗಳನ್ನು ಹೂಡಿ ಸಿದ್ಧಮಾಡಿಕೊಂಡು ಬಾ, ನೀನೇ ರಥವನ್ನು ಹೊಡೆಯುವೆಯಂತೆ, ಎಂದು ಹೇಳಿದಳು.
"ನೀನೇ ರಥವನ್ನು ಹೊಡೆಯುವೆಯಂತೆ" ಎಂಬ ವಾಕ್ಯವು ಕಿವಿಗೆ ಬಿದ್ದ ಕೂಡಲೆ ಧನಮಲ್ಲನು ಗೋಣುಹಾಕಿ ಸಮ್ಮತಿಯನ್ನಿತ್ತು ರಥವನ್ನು ಕೂಡಿಕೊಂಡು ಬರುವದಕ್ಕಾಗಿ ಹೋದನು. ಸ್ವಲ್ಪ ಹೊತ್ತಿನಲ್ಲಿಯೇ ರಥವು ಸಂಗನಪಲ್ಲಿಗೆ ಹೊರಟಿತು, ಹಾದಿಯಲ್ಲಿ ಹೋಗುವಾಗ ಮೆಹರ್ಜಾನಳಾಗಲಿ, ಮಾರ್ಜೀನೆಯಾಗಲಿ, ಚಕಾರ ಶಬ್ದವನ್ನು ಮಾತಾಡಲಿಲ್ಲ. ಇಬ್ಬರೂ ವಿಚಾರಮಗ್ನರಾಗಿದ್ದರು. ಮೇಲಾಗಿ ಧನಮಲ್ಲನಿದ್ದದ್ದರಿಂದ ಅವರು ಯಾವ ಮಾತೂ ಆಡುವಹಾಗಿದ್ದಿಲ್ಲ. ಮೆಹರ್ಜಾನಳು ಸಂಸಾರಗೇಡಾದದ್ದಕ್ಕಾಗಿ ಮಾರ್ಜೀನೆಯು ಬಗೆ ಬಗೆಯಾಗಿ ಆಲೋಚಿಸುತ್ತ ಕುಳಿತುಕೊಂಡಿದ್ದಳು. ಮೆಹರ್ಜಾನಳು ತಾನು ಕುಂಜವನದಿಂದ ಆದಷ್ಟು ಬೇಗನೆ ದೂರ ಯಾವಾಗ ಹೋದೇನೆಂಬ ಒಂದೇ ವಿಚಾರದಲ್ಲಿ ಮಗ್ನಳಾಗಿದ್ದಳು. ಕುಂಜವನದಿಂದ ಸಂಗನಪಲ್ಲಿಯು ಆರು ಹರಿದಾರಿಯಿತ್ತು. ಅಲ್ಲಿಯ ದರ್ಗಾದ ಪೀರನು ಬಹು ಜಾಗ್ರತನೆಂಬ ಖ್ಯಾತಿಯಿದ್ದದ್ದರಿಂದ, ಬಹುಜನ ಮುಸಲ್ಮಾನರು ದಿನಾಲು ದರ್ಶನಕ್ಕೆ ಬರುತ್ತಿದ್ದರು, ಅಲ್ಲಿಯ ಉತ್ಪನ್ನವು ವಿಶೇಷವಾಗಿದ್ದರಿಂದಲೂ, ಪ್ರತಿ ಗುರುವಾರ, ಶುಕ್ರವಾರ ಫಕೀರರಿಗೂ, ಬಡಬಗ್ಗರಿಗೂ ವಿಶೇಷವಾಗಿ ದಕ್ಷಿಣೆ ದಾನಗಳು ಸಿಗುತ್ತಿದ್ದದ್ದರಿಂದಲೂ, ದೊಡ್ಡ ಜಾತ್ರೆ ಕೂಡಿದಂತೆ ಅಲ್ಲಿ ಜನರು ನೆರೆಯುತ್ತಿದ್ದರು. ಸಂಗನಪಲ್ಲಿಯು ವಿಜಯನಗರದ,ಹಾಗೂ ಮುಸಲ್ಮಾನ ರಾಜ್ಯಗಳ ಮೇರೆಯಲ್ಲಿದ್ದು, ಅದು ವಿಜಯನಗರದ ಅರಸರ ಸ್ವಾಧೀನದಲ್ಲಿತ್ತು. ಆ ಊರಲ್ಲಿ ಹಿಂದೂ ಜನರ ವಸ್ತಿಯೇ ವಿಶೇಷವಾಗಿತ್ತು. ಜನವಾಡಿಕೆಯಂತೆ ಪೀರಸಾಹೇಬರ ಮೇಲೆ ಮೆಹರ್ಜಾನಳ ಭಕ್ತಿಯಾದರೂ ಇತ್ತು. ಆಕೆಯು ಆಗಾಗ್ಗೆ ಪೀರನ ದರ್ಶನಕ್ಕಾಗಿ ದರ್ಗೆಗೆ ಬರುತ್ತಿದ್ದಳು. ಮನಸ್ಸಿಗೆ ಬಹಳ ಅಸಮಾಧಾನವಾದಾಗ, ಪೀರನದರ್ಶನಕ್ಕೆ ಹೋಗುವದು ಆಕೆಯ ವಾಡಿಕೆಯ ಕ್ರಮವಾಗಿತ್ತು. ಎತ್ತುಗಳು ಅತ್ಯುತ್ಕೃಷ್ಟವಾಗಿದ್ದುದರಿಂದ ಅವುಗಳಿಗೆ ಆರು ಹರದಾರಿಯ ಲಕ್ಷ್ಯವಿದ್ದಿಲ್ಲ ಅವು ಹಾ ಹಾ ಅನ್ನುವದರೊಳಗಾಗಿ ದರ್ಗೆಯ ಬಾಗಿಲಿಗೆ ಹೋದವು. ದರ್ಗೆಯು ಆ ವಾರವು ಬಹು ಪ್ರಶಸ್ತವಾಗಿತು ; ಆದರೆ ಅದರೊಳಗೆ ಪಶುಗಳನ್ನು ಹೂಡಿದ ರಥ ಮೊದಲಾದವುಗಳನ್ನು ಒಯ್ಯುವ ಪ್ರಚಾರವಿದ್ದಿಲ್ಲ. ಹಾಗೆ ಮಾಡುವದರಿಂದ ಪೀರಸಾಹೇಬರ ಉಪಮರ್ದ ಮಾಡಿದ ಹಾಗಾಗುತ್ತದೆಂದು ಸರ್ವಾನುಮತದಿಂದ ಗೊತ್ತಾಗಿತ್ತು. ಅಶಕ್ತರೂ, ವೃದ್ಧರೂ, ಹೆಳವರೂ ಇದ್ದರೆ ಅವರು ಮೇಣೆ, ಪಲ್ಲಕ್ಕಿ, ಡೋಲಿ ಮೊದಲಾದ ಮನುಷ್ಯ ವಾಹನಗಳಲ್ಲಿ ಕುಳಿತು ಪೀರಸಾಹೇಬರ ಗೋರಿಯ ದರ್ಶನಕ್ಕೆ ಹೋಗಬಹುದಾಗಿತ್ತು ; ಆದರೆ ದಷ್ಟಪುಷ್ಟರಿದ್ದವರು ಎಂಥ ಶ್ರೀಮಂತರಿದ್ದರೂ, ನಡದೇ ದರ್ಶನಕ್ಕೆ ಹೋಗಬೇಕಾಗಿತ್ತು.
ರಥವು ದರ್ಗೆಯ ಬಾಗಿಲಲ್ಲಿ ನಿಂತ ಕೂಡಲೆ, ಮೆಹರ್ಜಾನಳು ನಿಟ್ಟುಸಿರುಬಿಟ್ಟು ರಥದಿಂದ ಕೆಳಗೆ ಧುಮುಕಿದಳು. ಆಕೆಯು ಮಾರ್ಜೀನೆಗೆ ಹೂ, ಲಗು ಇಳಿ, ಜನರ ದಟ್ಟಣೆಯಾದ ಮೇಲೆ ದರ್ಶನಕ್ಕೆ ತೊಂದರೆಯಾದೀತು, ಎಂದು ಹೇಳುತ್ತಿರಲು, ಮಾರ್ಜೀನೆಯೂ ರಥದಿಂದ ಇಳಿದಳು. ಆಗ ಮಾರ್ಜೀನೆಯು ಧನಮಲ್ಲನಿಗೆ – “ನೀನು ಆ ಗಿಡದ ಬುಡದಲ್ಲಿ ರಥವನ್ನು ಬಿಟ್ಟುಕೊಂಡು ಸ್ವಲ್ಪ ವಿಶ್ರಮಿಸು ಎಂದಿನಂತೆ ಈಗ ನಾವು ದರ್ಶನ ತಕ್ಕೊಂಡು ಬಂದಕೂಡಲೆ.....” ಎಂದು ನುಡಿಯುತ್ತಿರಲು, ಧನಮಲ್ಲನು ಆ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೆ, ಗಿಡದ ಕಡೆಗೆ ರಥವನ್ನು ಸಾಗಿಸಿಕೊಂಡು ನಡೆದನು. ಅದನ್ನು ನೋಡಿ ಮಾರ್ಜೀನೆಯು-ಏನು ಟೊಣಪನಿದ್ದನು, ಎಂದು ತಿರಸ್ಕರಿಸುತ್ತ, ಮೆಹರ್ಜಾನಳನ್ನು ಕರಕ್ಕೊಂಡು ದರ್ಗೆಯನ್ನು ಪ್ರವೇಶಿಸಿದಳು, ಇತ್ತ ಧನಮಲ್ಲನು ಗಿಡದ ಬುಡದಲ್ಲಿ ರಥವನ್ನು ಬಿಟ್ಟು, ಗಿಡದ ಬೊಡ್ಡೆಗೆ ಎತ್ತುಗಳನ್ನು ಕಟ್ಟಿ ಮೇವು ಚಲ್ಲಿ, ತನ್ನ ಕರಿಯ ಕಂಬಳಿಯನ್ನು ಚೆಲ್ಲಿಕೊಂಡು ಸ್ವಲ್ಪ ಅಡ್ಡಾದನು. ಮಧ್ಯಾಹ್ನದ ಬಿಸಿಲಿನಲ್ಲಿ ಗಿಡದ ತಣ್ಣೆಳಲ ಸುಖಸ್ಪರ್ಶದಿಂದ ಆ ನಿಶ್ಚಿಂತ ಪುರುಷನಿಗೆ ಗಾಢವಾದ ನಿದ್ರೆಯು ಹತ್ತಿತು ತಾಸಾಯಿತು ಎರಡು ತಾಸಾಯಿತು, ಮೂರು ತಾಸಾಯಿತು ; ಅದರೂ ಆತನನ್ನು ಎಬ್ಬಿಸಲಿಕ್ಕೆ ಯಾರೂ ಬರಲಿಲ್ಲ. ಆ ಲಠ್ಠ ಧನಮಲ್ಲನಿಗೂ ಎಚ್ಚರವಾಗಲಿಲ್ಲ. ಮುಂದೆ ಒಂಭತ್ತು ತಾಸಿನ ಸುಮಾರಕ್ಕೆ ಆತನಿಗೆ ಪಕ್ಕನೆ ಎಚ್ಚರಿಕೆಯಾಯಿತು. ಇಷ್ಟು ಹೊತ್ತಾದರೂ ಮೆಹರ್ಜಾನಳೂ, ಮಾರ್ಜೀನೆಯೂ ಬಾರದಿರುವದನ್ನು ನೋಡಿ ಅವನು ಗಾಬರಿಯಾದನು. ಬೆಪ್ಪನಂತೆ ದಗೆಯ ಆವಾರದಲ್ಲಿ ನಾಲ್ಕೂ ಕಡೆಯಲ್ಲಿ ಅವರನ್ನು ಹುಡುಕಹತ್ತಿದನು. ಹೋಗ ಬರುವವರನ್ನು ಸನ್ನೆಮಾಡಿ ಕೇಳಲು. ಈ ವಿಲಕ್ಷಣ ಭವ್ಯಮೂರ್ತಿಯನ್ನು ನೋಡಿ ಜನರು ನಗುತ್ತಿದ್ದರಲ್ಲದೆ, ಧನಮಲ್ಲನಿಗೆ ಆತನ ಜನರ ಗೊತ್ತೇನೂ ಹತ್ತಲಿಲ್ಲ. ಧನಮಲ್ಲನು ದರ್ಗೆಯ ಹಿಂದೆ ಹೋಗಿ ನೋಡಿದನು ದರ್ಗೆಯಿಂದ ಬೇರೆ ಬೇರೆ ಕಡೆಗೆ ಹೋಗುವ ಮಾರ್ಗಗಳನ್ನು ಹಿಡಿದುಹೋಗಿ ಅಲ್ಲಿ ಬರುವ ಜನರನ್ನು ಏನೇನೋ ಸನ್ನೆ ಮಾಡಿ ಕೇಳಿದನು, ಆದರೆ ಅವರಿಂದ ಪ್ರಯೋಜನವೇನೂ ಆಗಲಿಲ್ಲ. ದರ್ಗೆಯೊಳಗಿನ ಮುಖ್ಯ ಮನುಷ್ಯನನ್ನು ಕೇಳಲು, ಆತನು ಮಧ್ಯಾಹ್ನದಲ್ಲಿ ದರ್ಶನಕ್ಕೆ ಬಂದರು ಆಗಲೇ ಹೋದರೆಂದು ಹೇಳಿದನು, ಹಲವು ಸಾರೆ ದರ್ಶನಕ್ಕೆ ಬಂದವರಾದ್ದರಿಂದ ಧನಮಲ್ಲನ ಗುರುತೂ, ಮಾರ್ಜೀನೆ ಮೆಹರ್ಜಾನರ ಗುರುತೂ ಆ ಮುಖ್ಯ ಮನುಷ್ಯನಿಗೆ ಇತ್ತು. ಆತನೂ ಧನಮಲ್ಲನ ಶೋಧಕ್ಕೆ ಸಹಾಯ ಮಾಡಿದಂತೆ ತೋರಿಸಿದನು. ಕಡೆಗೆ ಹೊತ್ತು ಮುಳುಗಲಿಕ್ಕೆ ಅರ್ಧ ತಾಸು ಉಳಿಯಿತು. ಆಗ ಧನಮಲ್ಲನು ಮಾರ್ಜೀನೆ ಮೆಹರ್ಜಾನರನ್ನು ಹುಡುಕಬೇಕೋ, ಅವರು ಎಲ್ಲಿ ಹೋದರೆಂಬ ಸುದ್ದಿಯನ್ನು ರಾಮರಾಜನಿಗೆ ಹೇಳಲಿಕ್ಕೆ ವಿಜಯನಗರಕ್ಕೆ ಹೋಗಬೇಕೋ, ಎಂದು ಆಲೋಚಿಸಹತ್ತಿದನು. ಕಡೆಗೆ ವಿಜಯನಗರಕ್ಕೆ ಹೋಗಬೇಕೆಂದು ನಿರ್ಧರಿಸಿ, ಅವನು ರಥಕ್ಕೆ ಎತ್ತುಗಳನ್ನು ಹೂಡಿ ವಿಜಯನಗರದ ಹಾದಿಯನ್ನು ಹಿಡಿದನು.
****