ಕರ್ಣಪರ್ವ: ೧೦. ಹತ್ತನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಕರ್ಣ ಪರ್ವ-ಹತ್ತನೆಯ ಸಂಧಿ[ಸಂಪಾದಿಸಿ]

ಸೂ. ರಾಯದಳ ಹಳಚಿದುದು ಕಲಿರಾ
ಧೇಯನಲಿ ಸಂಕುಳದೊಳೊದಗಿದ
ವಾಯುಸುತ ಸಮರದಲಿ ಕೊಂದನು ಕರ್ಣನಂದನನ

ಕೇಳು ಧೃತರಾಷ್ಟ್ರಾವನಿಪ ತ
ಮ್ಮಾಳ ಮೇಳಾಪದಲಿ ಪಾಂಡು ನೃ
ಪಾಲಕರ ದಳ ನಡೆದು ಬಂದುದು ಭೂರಿ ರಭಸದಲಿ
ಆಳೊಳಗ್ಗಳೆಯರಿಗೆ ಕೊಟ್ಟನು
ವೀಳೆಯವನಾ ಕರ್ಣನತಿರಥ
ಜಾಳವನು ಪರುಠವಿಸಿ ನಿಲಿಸಿದನೆರಡು ಪಕ್ಕದಲಿ ೧

ರಾಯ ಥಟ್ಟಿನ ಬಲದ ಬಾಹೆಯ
ನಾಯಕರು ಸಂಶಪ್ತಕರು ವಿವಿ
ಧಾಯುಧದ ಕಾಂಭೋಜ ಬರ್ಬರ ಚೀನ ಭೋಟಕರು
ಸಾಯಕದ ಕಿವಿವರೆಯ ತೆಗಹಿನ
ಘಾಯ ತವಕಿಗರೆಡಬಲದ ಕುರು
ರಾಯನನುಜರು ರಂಜಿಸಿತು ದುಶ್ಶಾಸನಾದಿಗಳು ೨

ಗುರುಸುತನ ಕೂಡೆಂಟುಸಾವಿರ
ವರ ಮಹಾರಥರೈದುಸಾವಿರ
ಕರಿಘಟೆಗಳಿಪ್ಪತ್ತು ಸಾವಿರರಾವ್ತರೊಗ್ಗಿನಲಿ
ಧರಣಿಪತಿ ಕೃತವರ್ಮ ಕೃಪ ಹ
ನ್ನೆರಡು ಸಾವಿರ ರಥಸಹಿತ ಮೋ
ಹರಿಸಿದರು ಬಲವಂಕದಲಿ ದಳಪತಿಯ ನೇಮದಲಿ ೩

ಥಟ್ಟಿನೆಡವಂಕದಲಿ ಹಗೆಗೊರೆ
ಗಟ್ಟಿ ನಿಂದರು ಕುರುಬಲದ ಜಗ
ಜಟ್ಟಿ ವೃಷಸೇನನು ಸುಷೇಣನು ಶಕುನಿ ಬಲಸಹಿತ
ಬೆಟ್ಟ ಬೀಳಲುವರಿದವೆನೆ ಕೈ
ಮುಟ್ಟಿ ಮಹಿಯನು ದಂತಿಘಟೆ ಸಾ
ಲಿಟ್ಟುದೆತ್ತಣ ಸೇನೆಯೋ ನಾವರಿಯೆವಿದನೆಂದ ೪

ಆ ನದೀನಂದನನ ಸಮರದಿ
ಸೇನೆ ಸವೆದುದನಂತ ಬಳಿಕಿನ
ಸೇನೆ ಗರಿ ಸೋಂಕಿಲ್ಲ ಕಂಡೆನು ದ್ರೋಣ ಪರ್ವದಲಿ
ಏನನೆಂಬೆನು ಜೀಯ ಮತ್ತೀ
ಭಾನುತನಯನ ಕದನಕೊದಗಿದ
ಸೇನೆ ಸಂಖ್ಯಾತೀತವೆಂದನು ಸಂಜಯನು ನೃಪಗೆ ೫

ಒಡ್ಡಿತೀ ಬಲ ರಿಪುಭಟರು ಮಾ
ರೊಡ್ಡ ಮೆರೆದರು ತಮ್ಮ ನೆರತೆಯೊ
ಳೊಡ್ಡಿಗೊಬ್ಬರ ಕರೆದು ಪರುಠವಿಸಿದನು ಮುರವೈರಿ
ಒಡ್ಡಿನೆಡದಲಿ ಭೀಮನಾ ಬಲ
ದೊಡ್ಡಿನಲಿ ಕಲಿಪಾರ್ಥ ದಳಪತಿ
ಯೊಡ್ಡಿನಲಿ ನಿಂದನು ಯುಧಿಷ್ಠಿರರಾಯ ದಳ ಸಹಿತ ೬

ಈ ಮಹಾ ಮೋಹರವನತಿ ನಿ
ಸ್ಸೀಮರಾಂತರು ಮೂವರೇ ಬಳಿ
ಕಾಮಹಾರಥ ರಾಜಿಯಡಗಿದುದವರ ರಶ್ಮಿಯಲಿ
ಸೋಮಸೂರ‍್ಯಾಗ್ನಿಗಳಿದಿರೊಳು
ದ್ದಾಮ ತೇಜಸ್ವಿಗಳೆ ದಿಟ ಕುರು
ಭೂಮಿಪತಿ ಹೇಳೆಂದು ನುಡಿದನು ಸಂಜಯನು ನಗುತ ೭
ಎರಡು ಬಲವುಬ್ಬೆದ್ದುದಿದರೊಳು
ಮೊರೆವ ಭೇರಿಯ ಭಟರ ಬೊಬ್ಬೆಯ
ಕರಿಯ ಗಜರಿನ ಹಯದ ಹೇಷಾರವದ ಹಲ್ಲಣೆಯ
ಜರಿವ ಕಹಳೆಯ ಝಾಡಿಸುವ ಜ
ಝ್ಜರದ ಡಿಂಡಿಮ ಡಮರು ಪಟಹದ
ಧರಧುರದ ದನಿ ಧೈರ‍್ಯಗೆಡಿಸಿತು ಸಕಲ ಸಾಗರವ ೮

ಬೆರಸಿದವು ಬಲವೆರಡು ಹೊಕ್ಕವು
ಕರಿಘಟೆಗಳೇರಿದವು ಕುದುರೆಗ
ಳುರವಣಿಸಿದವು ತೇರ ತಿವಿದರು ಹೊಂತಕಾರಿಗಳು
ಉರುಳ್ವ ತಲೆಗಳ ಬಸಿವ ಮಿದುಳಿನ
ಸುರಿವ ಕರುಳಿನ ಸೂಸುವೆಲುವಿನ (೯
ಹೊರಳ್ವ ಮುಂಡದ ರೌದ್ರರಣ ರಂಜಿಸಿತು ಚೂಣಿಯಲಿ

ಜೋಡನೊಡೆದವಯವದ ರಕುತವ
ತೋಡಿದವು ಕೂರಂಬು ಸಬಳದ
ನೀಡುಮೊನೆ ನಿರಿಗರುಳನೆಂಜಲಿಸಿದವು ಪಟುಭಟರ
ಖೇಡರಸು ಬೆನ್ನೀಯೆ ನೆತ್ತಿಯ
ಬೀಡೆ ಬಿರಿಯಲು ಬಿದ್ದ ಲೌಡೆಗ
ಳೀಡಿರಿದವರಿ ಚಾತುರಂಗದ ಚಪಳ ಚೂಣಿಯಲಿ ೧೦

ತೆಗೆಯ ಹೇಳೋ ಚೂಣಿಯಲಿ ಕಾ
ಳೆಗದ ಕೌತುಕವೆತ್ತ ದೊರೆಗಳು
ಹೊಗಲಿ ದಳನಾಯಕರು ನುಗ್ಗಿನ ಬೀಯಕಳುಕರಲ
ವಿಗಡ ಭೀಮಾರ್ಜುನರ ಬಸುರ
ಲ್ಲುಗಿ ಕರುಳನೆನುತಬ್ಬತರದ ಬೊ
ಬ್ಬೆಗಳ ಬಿರುದರು ಕೆಣಕಿದರು ಸಮಸಪ್ತಕರು ನರನ ೧೧

ರಾಯನಾವೆಡೆ ಕೌರವೇಂದ್ರನ
ದಾಯಿಗನ ಬರಹೇಳು ಹಿಂದಣು
ಪಾಯ ಕೊಳ್ಳದು ನಿಮ್ಮ ಭೀಷ್ಮದ್ರೋಣರಾವಲ್ಲ
ಕಾಯಿದೆವು ಕೈ ಮುಗಿದನಾದರೆ
ಸಾಯಬಲ್ಲರೆ ತಿರುವನೊದೆಯಲಿ
ಸಾಯಕದ ಹಿಳುಕೆನುತ ಬಿಟ್ಟನು ಸೂಠಿಯಲಿ ರಥವ ೧೨

ಬಿಟ್ಟ ಸೂಠಿಯೊಳುಗಿವ ಕರ್ಣನ
ಥಟ್ಟಣೆಯ ಕಂಡನಿಲಸುತನಡ
ಗಟ್ಟಿದನು ಹದಿನೆಂಟು ಸಾವಿರ ರಥಿಕರೊಗ್ಗಿನಲಿ
ಇಟ್ಟಣಿಸಿ ಬರೆ ರವಿಸುತನ ಕೈ
ಮುಟ್ಟಲೀಯದೆ ಕೌರವೇಂದ್ರನ
ಥಟ್ಟಿನಲಿ ಮೂವತ್ತು ಸಾವಿರ ಕರಿಗಳೌಕಿದವು ೧೩

ಕರಿಘಟೆಯಲಾ ನಮ್ಮ ಪುಣ್ಯದ
ಪರಿಣತೆಯಲಾ ನಮ್ಮ ರಥಿಕರು
ಸರಳ ತೊಡದಿರಿ ಸೈರಿಸುವುದರೆಗಳಿಗೆ ಮಾತ್ರದಲಿ
ಅರಿ ಹಿರಣ್ಯಕಬಲಕೆ ನರಕೇ
ಸರಿಯ ಪಾಡೆನಿಸುವೆನು ಕಣ್ಣೆವೆ
ಮರೆಗೆ ಮುಂಚುವೆನೆನುತ ಹೊಕ್ಕನು ಭೀಮ ಗಜಬಲವ ೧೪

ಬಿರಿದುವೀತನ ಸಿಂಹ ನಾದಕೆ
ಕರಿಗಳೆದೆಮಣಿ ಗದೆಯ ಹೊಯ್ಲಲಿ
ತಿರುಗಿ ಕೋಡಡಿಯಾಗಿ ಕೆಡೆದವು ಮಡಿದವಾಕ್ಷಣಕೆ
ಉರುಳಿದವು ಪರ್ವತದ ವಜ್ರದ
ಸರಿಸ ಹೋರಟೆ ಕಾಣಲಾದುದು
ಕರಿಘಟೆಯ ಪವನಜನ ರಣದಲಿ ರಾಯ ಕೇಳೆಂದ ೧೫

ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವು ಮಳೆಯನೆನೆ ಶರ
ಜಾಳ ಕವಿದುದು ಗಜದ ಜೋಧರ ಝಾಡಿಯೆಸುಗೆಯಲಿ
ಕೋಲ ಕೊಂಬನೆ ಭೀಮ ಸಿಡಿಲುರಿ
ನೌಲಗೆಗೆ ನೀರೇಗುವುದು ಮೇ
ಲಾಳ ಮುರಿದನು ವಿವಿಧ ಶಸ್ತ್ರಾಸ್ತ್ರ ಪ್ರಹಾರದಲಿ ೧೬

ಕರಿಯ ಬರಿಕೈಯೆಸುವ ಜೋಧರ
ಕರ ಮಹಾಂಕುಶದವನ ಕೈ ಕ
ತ್ತರಿಸಲೊಂದೇ ಶರದಲೆಚ್ಚನು ಮತ್ತೆ ಗದೆಗೊಂಡು
ತಿರುಗಿ ಹೊಯ್ದನು ಜೋಡು ಜೋಧರು
ಕರಿಯೊಡಲು ಸಮಸೀಳ ಸೀಳಲು
ಅರಸ ಬಣ್ಣಿಸಲಾರು ಬಲ್ಲರು ಬೀಮ ಸಾಹಸವ ೧೭

ಹಿಂಡೊಡೆದು ಗಜಸೇನೆ ಮುಮ್ಮುಳಿ
ಗೊಂಡು ಮುರಿದುದು ಮುಳಿದು ಭೀಮನ
ಗಂಡುಗೆಡಿಸುವರಿಲ್ಲ ಕೌರವ ದಳದ ಸುಭಟರಲಿ
ಅಂಡುಗೊಂಡುದು ಬಿರುದುಗಿರುದಿನ
ಗಂಡರಕಟಕಟೆನುತ ನಿಜ ಕೋ
ದಂಡವನು ದನಿಮಾಡುತಶ್ವತ್ಥಾಮನಿದಿರಾದ ೧೮

ಎಲೆಲೆ ರಾಯನ ತಮ್ಮನೋ ಗಜ
ಬಲದೊಡನೆ ಬಳಲಿದನು ಗುರುಸುತ
ನಳವು ಕಿರಿದೇ ಸ್ವಾಮಿದ್ರೋಹರ ನೂಕು ನೂಕೆನುತ
ಉಲಿದು ಧೃಷ್ಟದ್ಯುಮ್ನ ಬಲವಿ
ಟ್ಟಳಿಸಿ ನೂಕಿತು ಭೀಮಸೇನನ
ನೆಲನ ಕೊಂಡರು ಕಡುಹಿನಲಿ ಪಾಂಚಾಲ ನಾಯಕರು ೧೯

ಮರುಗದಿರಿ ಪಾಂಚಾಲರಾಯನ
ಮರಿಗಳಿರ ಭೀಮಂಗೆ ತಪ್ಪೇ
ನುರುವ ದೊರೆ ಸೊಪ್ಪಾಗದಂತಿರೆ ನೀವು ಕಾದುವಿರೆ
ಅರಿವೆನಾದರೆಯೆನುತ ಬಾಣವ
ತಿರುಹಲಾ ನಿಮಿಷದಲಿ ನಿಂದನು
ಗುರುಸುತನ ಹಿಂದಿಕ್ಕಿ ಪಾಂಚಾಲರಿಗೆ ಕಲಿಕರ್ಣ ೨೦

ಕ್ಷಮಿಸುವುದು ಗುರುಸೂನು ರಣವನು
ನಿಮಿಷ ಚಿತ್ತೈಸುವುದು ಶೌರ‍್ಯ
ಭ್ರಮಿತರೀ ಪಾಂಚಾಲರನು ಬರಿಕೈದು ತೋರುವೆನು
ದ್ಯುಮಣಿ ಪರಿಯಂತೇಕೆ ರಶ್ಮಿಗೆ
ತಿಮಿರವಿದಿರೇ ನೀವು ನೋಟಕ
ರೆಮಗೆ ರಣ ದೆಖ್ಖಾಳವೆಂದನು ಕರ್ಣ ಗುರುಸುತಗೆ ೨೧

ಬಳಿಕ ಹೇಳುವುದೇನು ರಣದ
ಗ್ಗಳೆಯರವದಿರು ಮುತ್ತಿದರು ಕೈ
ಚಳಕಿಗರು ಕವಿದೆಚ್ಚರೀತನನೆಂಟು ದೆಸೆಗಳಲಿ
ಲುಳಿತ ಜಲಧರಪಟಲ ಜಠರದೊ
ಳಿಳಿದ ರವಿಮಂಡಲದವೋಲರೆ
ಘಳಿಗೆ ಕರ್ಣನ ಕಾಣೆನೈ ನರನಾಥ ಕೇಳೆಂದ ೨೨

ಗಾಳಿಯೆತ್ತಲು ಘಾಡಿಸುವ ಮೇ
ಘಾಳಿಯೆತ್ತಲು ವೈರಿ ಸೇನೆಯ
ನಾಳೆಗಡಿತದ ನೊರೆಯ ರಕುತದ ನೂಕುಧಾರೆಗಳ
ಏಳಿಗೆಯಲಾ ಛತ್ರ ಚಮರೀ
ಜಾಳ ನನೆದವು ಕರ್ಣನಂಬಿನ (೨೩
ಕೋಲ ಕಡಿದೊಡನೊಡನೆ ಕೊಂದನು ಕೋಟಿಸಂಖ್ಯೆಗಳ ಮೇಲೆ

ಬಿದ್ದುದು ಮತ್ತೆ ರಿಪು ಪಾಂ
ಚಾಲ ಬಲ ಸಾವುದಕೆ ಕಡೆಯಿ
ಲ್ಲಾಳ ಬರವಿಂಗರಿಯೆ ನಾನವಸಾನವನು ಮರಳಿ
ಕೋಲುಗಳ ತೆಗೆದೆಸುವನೋ ಶರ
ಜಾಳವನು ವಿರಚಿಸುವನೋ ಹಗೆ
ಯಾಳಿ ಮುರಿದುದ ಕಾಬೆನೆಸುಗೆಯ ಕಾಣೆ ನಾನೆಂದ ೨೪

ವೈರಿ ಪಾಂಚಾಲಕರೊಳೈವರು
ಧಾರುಣೀಶ್ವರರಸುವ ಬಿಟ್ಟರು
ಚಾರು ಚಾಪಳ ಚಾತುರಂಗದ ನಿಧನ ನಿರ್ಣಯವ
ಆರು ಬಲ್ಲರು ಖಾತಿಯಲಿ ಜ
ಝ್ಜಾರರೆದ್ದುದು ಮತ್ತೆ ಸಕಲ ಮ
ಹಾರಥರು ನೂಕಿದರು ಲಗ್ಗೆಯ ಲಳಿಯ ಲಹರಿಯಲಿ ೨೫

ನಕುಲ ಧೃಷ್ಟದ್ಯುಮ್ನ ಸುತಸೋ
ಮಕ ಶಿಖಂಡಿ ಯುಯುತ್ಸು ವರಸಾ
ತ್ಯಕಿ ಶತಾನೀಕಾಖ್ಯ ಪ್ರತಿವಿಂಧ್ಯಕರು ಶ್ರುತಕೀರ್ತಿ
ಸಕಲ ಕೈಕೆಯ ಪಾಂಡ್ಯ ಶಿಶುಪಾ
ಲಕಸುತ ಯುಧಾಮನ್ಯು ಸಹದೇ
ವಕರು ಸನ್ನಾಹದಲಿ ಕವಿದುದು ವರ ಮಹಾರಥರು ೨೬

ಭೀಮ ಫಲುಗುಣ ಕೃಷ್ಣ ಧರ್ಮಜ
ರೀ ಮಹಾರಥರಲ್ಲದಿತರ
ಸ್ತೋಮವಳವಿಯ ಮೀರಿ ಕವಿದುದು ಕರ್ಣನಿದಿರಿನಲಿ
ಹಾ ಮಹಾದೇವಾ ಸಮಸ್ತ ಸ
ನಾಮರಥಿಕರು ಕರ್ಣನೊಬ್ಬನ
ಕಾಮಿಸಿದರೈ ಕದನಕವನೀಪಾಲ ಕೇಳೆಂದ ೨೭

ಉರಿಯ ಪೇಟೆಗಳಲಿ ಪತಂಗದ
ಸರಕು ಮಾರದೆ ಮರಳುವುದೆ ನಿ
ಬ್ಬರದ ಬಿರುದಿನೊಳೀ ಮಹಾರಥರಾಜಿ ರವಿಸುತನ
ಕೆರಳಿಚಿದರೈ ಕೇಣವಿಲ್ಲದೆ
ಬೆರಸಿದರು ಬೇಸರಿಸಿದರು ಹೊಡ
ಕರಿಸಿದರು ಹೊಯ್ದರು ವಿಭಾಡಿಸಿದರು ವಿಘಾತಿಯಲಿ ೨೮

ತಮ್ಮ ಸತ್ವೋದಧಿಯ ತೋರಿದ
ರೊಮ್ಮೆ ಮೊಗೆದನು ಬಳಿಕ ರಾಯನ
ಸೊಮ್ಮಿನವರಲಿ ಸೀಳಿದನು ಹದಿನೆಂಟುಸಾವಿರವ
ಹಮ್ಮುಗೆಯ ಕೈಮನದ ಹೊಣಕೆಯ
ಹಮ್ಮಿನುಬ್ಬಟೆಯವರ ಪಾರ್ಥನ
ತಮ್ಮದಿರ ಸಾಹಸಕೆ ಸೇರಿಸಿದನು ಪಲಾಯನವ ೨೯

ರಥ ಮುರಿದು ಬಲು ಘಾಯದಲಿ ಸು
ವ್ಯಥಿತ ಸಾತ್ಯಕಿ ಹಿಂಗಿದನು ಸಾ
ರಥಿಗಳಳಿವಿನಲೋಡಿದರು ಸುತಸೋಮಕಾದಿಗಳು
ಪೃಥುವಿಗೊರಗಿತು ನಾಲ್ಕುಸಾವಿರ
ರಥಿಗಳುಳಿದ ಪದಾತಿ ಗಜ ಹಯ
ರಥವ ಕೆಡಹಿದನೆನಿತನೆಂಬುದನರಿಯೆ ನಾನೆಂದ ೩೦

ಮುರಿದು ಮತ್ತೆ ಮಹಾರಥರು ಸಂ
ವರಿಸಿಕೊಂಡು ಶಿಖಂಡಿ ಸಾತ್ಯಕಿ
ವರ ನಕುಲ ಸಹದೇವ ಧೃಷ್ಟದ್ಯುಮ್ನ ಶೃಂಜಯರು
ಸರಳ ಬಿರುಬಿನ ಬಾಯ ಬೈಗುಳ
ಬಿರುದುಗಹಳೆಯ ಬಿಂಕದವರು
ಬ್ಬರಿಸಿ ಕವಿದರು ಕರ್ಣನಾವೆಡೆ ತೋರು ತೋರೆನುತ ೩೧

ನುಸಿಗಳಿರ ನಿಮಗೇಕೆ ಕರ್ಣನ
ಘಸಣಿ ನಾವೇ ನಿಮ್ಮ ನೆತ್ತಿಯ
ಮುಸಲವಲ್ಲಾ ಫಡ ನಕುಲ ಸಹದೇವ ನಿಲ್ಲೆನುತ
ಮುಸುಡ ಹೊಗರಿನ ಕಣ್ಣ ಕೆಂಪಿನ
ವಿಷಮರಗ್ಗದ ಕರ್ಣತನುಜರು (೩೨
ಮಸಗಿ ಮುಂಚುವ ಮೋಹರವನಡಹಾಯ್ದು ತರುಬಿದರು

ಏನ ಹೇಳುವೆನವರ ಶರ ಸಂ
ಧಾನ ಸೌರಂಭವನು ಕಲಿ ವೃಷ
ಸೇನ ವೀರಸುಷೇಣರೇರಿದರೆಚ್ಚರತಿಬಳರ
ಭಾನುಸುತನಿಂದೆಂಟುಮಡಿಯ ಸ
ಘಾನರಹಿರೋ ಪೂತು ಮಝ ಎನು
ತಾ ನಿಖಿಳ ರಥನಿಕರ ಕವಿದುದು ಮತ್ತೆ ಸಂದಣಿಸಿ ೩೩

ಕಡಿದು ಬಿಸುಟರು ತೇರುಗಳನಡ
ಗೆಡಹಿದರು ಹೆರಾನೆಗಳ ಕೆಲ
ಕಡೆಯಲೌಕುವ ಕುದುರೆ ನನೆದವು ಬಸಿವ ನೆತ್ತರಲಿ
ತುಡುಕಿದರೆ ಕಾಲಾಳನಟ್ಟೆಯ
ನುಡಿಯಲರಿಯೆನು ಕರ್ಣತನುಜರ
ಕಡುಹು ನಕುಲಾದಿಗಳ ಬೆದರಿಸಿತರಸ ಕೇಳೆಂದ ೩೪

ತಿರುಗಿ ಕಂಡನು ಭೀಮನೆಲೆ ತರು
ವಲಿಗಳಿರ ಕೊಂಡಾಡಿ ಕಾದುವ
ದೊರೆಗಳೇ ನಕುಲಾಂಕ ತೆಗೆ ಸಹದೇವ ಸಾರೆನುತ
ಸರಳ ಕೆನ್ನೆಯ ಬಿಗಿದ ಹುಬ್ಬಿನ
ಮುರಿದ ಮೀಸೆಯಲೌಡುಗಚ್ಚಿನ
ಕರುರುಕುಲಾಂತಕ ಭೀಮ ಬಿಟ್ಟನು ಸೂಠಿಯಲಿ ರಥವ ೩೫

ರಾಯ ದಳದಲಿ ಸೆಣಸಲಿದು ಕ
ಜ್ಜಾಯವೇ ಮಕ್ಕಳಿರ ಮನ್ನಿಸಿ
ಕಾಯಿದೆನು ಬಳಿಕೇನು ನಿಮ್ಮಂಘವಣೆ ಲೇಸಾಯ್ತು
ಸಾಯಲೇತಕೆ ಹಿಂಗಿ ನಿಮ್ಮನು
ನೋಯಿಸುವುದನುಚಿತವು ಸೇನಾ
ನಾಯಕನು ನಿಮ್ಮಯ್ಯನಾತನ ಕಳುಹಿ ನೀವೆಂದ ೩೬

ಮರುಳಲಾ ಪವಮಾನಸುತ ನಿ
ನ್ನೊರೆಗೆ ಪಡಿಯೊರೆ ತೂಕ ತೂಕಕೆ
ಸರಿಸರಾವಿರೆ ಕನಕಗಿರಿಪರಿಯಂತ ಮಾತೇಕೆ
ತರಣಿಬಿಂಬದ ತತ್ತಿಗಳನು
ತ್ತರಿಸಿ ತೋರುವ ತಿಮಿರವುಂಟೇ
ತರಹರಿಸಿ ತೋರಾ ಎನುತ ಕವಿದೆಚ್ಚರನಿಲಜನ ೩೭

ಗಳಹತನವಿದು ನಿಮ್ಮ ತಂದೆಯು
ಗಳಿಸಿದರ್ಥವು ನಿಮ್ಮ ಬೀಯಕೆ
ಬಳಸುವಿರಿ ತಪ್ಪಾವುದೆನುತೆಚ್ಚಂಬ ಹರೆಗಡಿದು
ಹಿಳುಕ ಕವಿಸಿದನೀತನೀತನ
ಹಿಳುಕ ಮುರಿದೊಡನೆಚ್ಚು ಭೀಮನ
ಕೆಳರಿಚಿದರೈ ಕರ್ಣನಂದನರರಸ ಕೇಳೆಂದ ೩೮

ಬಾಲರೆಂದೇ ಮನ್ನಿಸಿದರೆ ಛ
ಡಾಳಿಸಿತೆ ಚಪಳತ್ವವಾಗಲಿ
ಖೂಳರಾವೈ ಸಲೆಯೆನುತ ನಾರಾಚ ಶತಕದಲಿ
ಬೀಳಲೆಚ್ಚನು ರಥವ ಗಜ ಹಯ
ಜಾಳವನು ಸಾರಥಿಗಳನು ಬಲು
ಗೋಲೊಳಿಬ್ಬರೊಳೊಬ್ಬನನು ಕೆಡೆಯೆಚ್ಚು ಬೊಬ್ಬಿರಿದ ೩೯
ಶಿವಶಿವಾ ಕರ್ಣಾತ್ಮಜನೆ ಮಡಿ
ದವನು ದಳಪತಿ ಮಡಿದನೋ ಕೌ
ರವನ ಕೇಡೋ ಹಾಯೆನುತ ಕುರುಸೇನೆ ಕಳವಳಿಸೆ
ಕವಿದರಶ್ವತ್ಥಾಮ ಕೃಪ ಕೌ
ರವ ಶಕುನಿ ದುಶ್ಶಾಸನಾದಿಗ
ಳವಗಡಿಸಲನಿಬರನು ತೊಲಗಿಸಿ ಕರ್ಣನಿದಿರಾದ ೪೦

ಆತುಕೊಳ್ಳೈ ಭ್ರೂಣಹತ್ಯಾ
ಪಾತಕಿಯೆ ಪಡಿತಳಿಸು ವಿಶಿಖ
ವ್ರಾತವಿವೆಯೆನುತೆಚ್ಚನಿನಸುತನನಿಲನಂದನನ
ಆತುಕೊಂಬರೆ ಸರಿಸನಲ್ಲ ವಿ
ಜಾತಿಯಲಿ ಸಂಭವಿಸಿದನೆ ಫಡ
ಸೂತನಂದನ ಎನುತ ಕರ್ಣನನೆಚ್ಚನಾ ಭೀಮ ೪೧

ಎಚ್ಚರೊಡನೊಡನೆಚ್ಚ ಬಾಣವ
ಕೊಚ್ಚಿದನು ಕಲಿ ಕರ್ಣನಾತನ
ನೆಚ್ಚನಂಬಿನ ಮೇಲೆ ನೂಕಿದವಂಬು ವಹಿಲದಲಿ
ಎಚ್ಚು ಕವಿಸಿದಡವನು ಪವನಜ
ನೆಚ್ಚಡವ ಪರಿಹರಿಸಿ ರವಿಸುತ
ನೆಚ್ಚಡಿಬ್ಬರು ಕಾದಿದರು ಕೈಮೈಯ ಮನ್ನಿಸದೆ ೪೨

ಭಾರಿಯಂಕವು ದಳಪತಿಗೆ ಪಡಿ
ಸಾರಿಕೆಯ ಭಟರಿಲ್ಲಲಾ ಪರಿ
ವಾರಕಿದು ಪಂಥವೆ ಎನುತ ಕುರುರಾಯ ಮೂದಲಿಸೆ
ಕೂರಲಗಿನಂಬುಗಿದು ಬಳಿಯ ಮ
ಹಾರಥರ ಕೈವೀಸಿ ರವಿಸುತ
ಸಾರೆನುತ ಕೆಣಕಿದನು ದುಶ್ಶಾಸನನು ಪವನಜನ ೪೩

ಎಲವೊ ಕರ್ಣಾತ್ಮಜನ ಹೊಯ್ದ
ಗ್ಗಳಿಕೆಯಲಿ ಹೊರೆಯೇರದಿರು ಪಡಿ
ಬಲಕೆ ಕರಸಾ ಕೃಷ್ಣ ಪಾರ್ಥರ ನಿನ್ನಲೇನಹುದು
ಬಳಿಯ ಬಿಗುಹಿನ ಬಿಂಕ ನಿನ್ನಯ
ತಲೆಗೆ ಬಹುದಾವರಿಯೆವೆನುತತಿ
ಬಳನನೆಚ್ಚನು ನಿನ್ನ ನಂದನನರಸ ಕೇಳೆಂದ ೪೪

ತಗರು ಮುಳಿದಾರಿದರೆ ತೋಳನು
ತೆಗೆದು ಜೀವಿಸಲರಿವುದೇ ನಾ
ಲಗೆಯ ವೀರರು ನೀವು ಮೂಢರು ನಾವು ನುಡಿಗಳಲಿ
ಉಗಿದಡಾಯ್ದದ ಮೊನೆಯ ತುದಿ ನಾ
ಲಗೆಗಳಲಿ ಮಾತಾಡಬಲ್ಲರೆ
ಸೊಗಸುವೆವು ನಾವೆನುತ ಪವನಜನೆಚ್ಚನರಿಭಟನ ೪೫

ಪವನಸುತನೆಚ್ಚಂಬ ಹರೆಗಡಿ
ದವಿರಳಾಸ್ತ್ರವನೀತ ಕವಿಸಿದ
ನಿವನ ಬಳಿಯ ಮಹಾರಥರು ಸೂಸಿದರು ಶರವಳೆಯ
ರವಿಯ ಕೈಕತ್ತಲೆಯ ಹೊರಳಿಯ
ತಿವಿಗುಳಿಗೆ ತೆರಳುವುದೆ ರಿಪು ಶರ
ನಿವಹವನು ಕಡಿಯೆಚ್ಚು ಕೆಡಹಿದನಾ ಮಹಾರಥರ ೪೬

ಸಿಕ್ಕಿದರೆ ಬಳಿಕೇನು ತಾಯಿಗೆ
ಮಕ್ಕಳಾಗರು ನಿನ್ನ ತನಯನ
ನಿಕ್ಕಿ ಹಾಯ್ದರು ಹಿಂಡೊಡೆದು ನೀ ಸಾಕಿದವರೆಲ್ಲ
ಹೊಕ್ಕು ಬಳಿಕೊಂದೆರಡು ಪಸರದ
ಲುಕ್ಕುಡಿಯಲೊದಗಿದನು ನಿನ್ನವ
ನೆಕ್ಕತುಳದಲಿ ಸರಿಮಿಗಿಲ ಕಾದಿದನು ಹಗೆಯೊಡನೆ ೪೭

ತೇರು ಹುಡಿಹುಡಿಯಾಗಿ ರಣದಲಿ
ಸಾರಥಿಯ ತಲೆ ಹೋಗಿ ಕಾಲಿನ
ಲಾರುಭಟೆಯಲಿ ನಿನ್ನ ಮಗನೆಸುತಿರ್ದನನಿಲಜನ
ಸಾರು ನೀ ಸಾರೆನುತ ಕರ್ಣಕು
ಮಾರನಡಹಾಯಿದನು ಭೀಮನ
ಭೂರಿ ಬಾಣದ ಪಂಜರವ ಭಂಜಿಸುತ ವಹಿಲದಲಿ ೪೮

ಎಲೆಲೆ ಕರ್ಣ ಕುಮಾರನೋ ಪಡಿ
ಬಲವ ಕರೆಯೋ ಬಾಲನೊಬ್ಬನೆ
ನಿಲುವುದರಿದೋ ಸ್ವಾಮಿದ್ರೋಹರ ಹಿಡಿದು ನೂಕೆನುತ
ಉಲಿಯೆ ಕೌರವ ರಾಯನುಬ್ಬಿದ
ಕಳಕಳದ ಬಹುವಿಧದ ವಾದ್ಯದ
ದಳದ ದೆಖ್ಯಾದೆಖ್ಖಿಯಲಿ ಕಲಿಕರ್ಣ ನಡೆತಂದ ೪೯

[೧]

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಕರ್ಣಪರ್ವ: ಸಂಧಿಗಳು>: ೧೦ ೧೧ ೧೨ ೧೩ ೧೪
-ಸಂಧಿಗಳು- ೧೫ ೧೬ ೧೭ ೧೮ ೧೯ ೨೦ ೨೦ ೨೨ ೨೩ ೨೪ ೨೫ ೨೬ ೨೭ -೦೦-

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.