ಕುಮಾರವ್ಯಾಸ ಭಾರತ/ಸಟೀಕಾ (೫-ಉದ್ಯೋಗಪರ್ವ::ಸಂಧಿ-೦೨)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಉದ್ಯೋಗಪರ್ವ:೨ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಬಂದು ಕಂಡನು ಸಂಜಯನು ಯಮ
ನಂದನನಲ್ಲಿಂದ ಮರಳಿದು
ಬಂದು ಕೌರವ ನೃಪತಿಗರುಹಿದನವರ ಮಾತುಗಳ ||ಸೂ||

ಪದವಿಭಾಗ-ಅರ್ಥ:ಬಂದು ಕಂಡನು ಸಂಜಯನು ಯಮನಂದನನು+ ಅಲ್ಲಿಂದ ಮರಳಿದು ಬಂದು ಕೌರವ ನೃಪತಿಗೆ ಅರುಹಿದನು+ ಅವರ ಮಾತುಗಳ
ಅರ್ಥ:ಕೌರವನ ಮಂತ್ರಿ ಸಂಜಯನು ಪಾಂಡವರು ಬೀಡು ಬಿಟ್ಟಿದ್ದ ವಿರಾಟನಗರದ ಹೊರವಲಯದ ಉಪಪ್ಲಾವ್ಯ ನಗರಕ್ಕೆ ಬಂದು ಯಮನಂದನನನ್ನು ಕಂಡನು. ಕೌರವನು ಹೇಳಿ ಕಳಸಿದ ಮಾತುಗಳನ್ನು ಹೇಳಿ, ಅಲ್ಲಿಂದ ಮರಳಿ ಬಂದು ಪಾಂಡವರು ಹೇಳಿದ ಮಾತುಗಳನ್ನು ಕೌರವ ನೃಪತಿಗೆ ಹೇಳಿದನು.[೧][೨] [೩] [೪]

ಧರ್ಮಜನ ಪಾಳಯಕ್ಕೆ ಕೃಷ್ಣನ ಆಗಮನ[ಸಂಪಾದಿಸಿ]

ಎಲೆ ಪರೀಕ್ಷಿತ ತನಯ ಕೇಳು
ಮ್ಮುಳಿಸಿದನು ಯಮಸೂನು ಮುರರಿಪು
ಫಲುಗುಣಗೆ ಮೈಗೊಡುವನೋ ಕೌರವರಿಗೊಳಗಹನೊ |
ತಿಳಿಯದಿರಲೆನುತಿರಲು ಬಲಗ
ಣ್ಣಲುಗಿತದಿರೊಳು ಕೈಯ್ಯ ಗುಡಿಯಲಿ
ಸುಳಿದನೊಬ್ಬನು ಬಹಳ ಮಾರ್ಗಶ್ರಮದ ಭಾರದಲಿ || ೧ ||
ಪದವಿಭಾಗ-ಅರ್ಥ:ಎಲೆ ಪರೀಕ್ಷಿತ ತನಯ(ಜನಮೇಜಯ) ಕೇಳು+ ಉಮ್ಮುಳಿಸಿದನು ಯಮಸೂನು ಮುರರಿಪು(ಕೃಷ್ಣ) ಫಲುಗುಣಗೆ ಮೈಗೊಡುವನೋ(ಸಹಾಯಮಾಡುವನೋ, ಒಲಿಯುವನೋ) ಕೌರವರಿಗೊಳಗಹನೊ ತಿಳಿಯದಿರಲು+ ಎನುತಿರಲು ಬಲಗಣ್ಣು+ ಅಲುಗಿತು+ ಇದಿರೊಳು ಕೈಯ್ಯಗುಡಿಯಲಿ(ಹತ್ತಿರದಲ್ಲಿ) ಸುಳಿದನು+ ಒಬ್ಬನು ಬಹಳ ಮಾರ್ಗಶ್ರಮದ ಭಾರದಲಿ.
ಅರ್ಥ:ವೈಶಂಪಾಯನ ಮುನಿ ಹೇಳಿದನು,'ಎಲೆ ಪರೀಕ್ಷಿತತನಯ ಜನಮೇಜಯನೇ ಕೇಳು, ಯಮಸೂನು ಯುಧಷ್ಠಿರನು ಸಂಕಟದಿಂದ ಉಸಿರುಬಿಡುತ್ತಿದ್ದನು; ಕೃಷ್ಣನು ಫಲ್ಗುಣನಿಗೆ ಒಲಿಯುವನೋ/ಅವನ ಜೊತೆಗೆ ಇರುವನೋ ಅಥವಾ ಕೌರವರಿಗೆ ಒಳಗಾಗುವನೋ ಎಂದು ಚಿಂತೆಯಿಂದ ಹೇಳುತ್ತಿರಲು, ಶುಭಸೂಚಕವಾಗಿ ಅವನ ಬಲಗಣ್ಣು ಅಲುಗಿತು. ಆಗ ಎದುರಿನಲ್ಲಿ ಹತ್ತಿರದಲ್ಲಿ ಒಬ್ಬನು ಬಹಳ ಮಾರ್ಗಶ್ರಮದ ಬಳಲಿದ ಸ್ಥತಿಯಲ್ಲಿ ಸುಳಿದನು.
ಇದಿರುಗೊಳ್ಳೇರಸ ಕಟ್ಟಿಸು
ಮುದದಿ ಗುಡಿಯನು ರಣದೊಳಹಿತರ
ಸದೆದೆ ಹೋಗಿನ್ನೇನು ಸರಿಯೇ ಸುರರು ಗಿರರುಗಳು |
ಪದವನರಿಸಿದರಾಳಿಗೊಂಡನು
ಸದಮಲ ಶೃತಿ ತತಿಯನೆಂಬ
ಗ್ಗದ ಮಹಾ ಪರದೈವ ಬಿಜಯಂಗೈವುತಿದೆಯೆಂದ || ೨ ||
ಪದವಿಭಾಗ-ಅರ್ಥ:ಇದಿರುಗೊಳ್ಳು+ ಏಳು+ ಅರಸ ಕಟ್ಟಿಸು ಮುದದಿ(ಸಂತಸದಿಂದ) ಗುಡಿಯನು(ಬಾವುಟ ತೋರಣಗಳನ್ನು) ರಣದೊಳು+ ಅಹಿತರ (ಯುದ್ಧದಲ್ಲಿ ಶತ್ರುಗಳನ್ನು) ಸದೆದೆ (ಕೊಂದೆ) ಹೋಗು+ ಇನ್ನೇನು, ಸರಿಯೇ ಸುರರು- ಗಿರರುಗಳು, ಪದವನು(ಪಾದಗಳನ್ನು)+ ಅರಿಸಿದರ (ಹುಡುಕಿದವರ)+ ಆಳಿಗೊಂಡನು(ಸುತ್ತಿಕೊಂಡನು, ಸೇರಿಕೊಂಡನು) ಸದಮಲ(ಉತ್ತಮ) ಶೃತಿ ತತಿಯನು (ವೇದಸಮೂಹವು)+ ಎಂಬ (ಹೊಗಳುವ)+ ಅಗ್ಗದ(ಶ್ರೇಷ್ಠ) ಮಹಾ ಪರದೈವ ಬಿಜಯಂಗೈವುತಿದೆ (ಬರುತ್ತಿದೆ)+ ಯೆ+ ಎಂದ.
ಅರ್ಥ:ಧರ್ಮಜನ ಸಮೀಪಕ್ಕೆ ಬಂದ ದೂತನು, ಧರ್ಮಜನಿಗೆ, 'ರಾಜನೇ, ಏಳು ಇದಿರುಗೊಳ್ಳು; ಅರಸನೇ ಸಂತಸದಿಂದ ಬಾವುಟ ತೋರಣಗಳನ್ನು ಕಟ್ಟಿಸು. ಯುದ್ಧದಲ್ಲಿ ಶತ್ರುಗಳನ್ನು ಕೊಂದೆ. ಹೋಗು ಇನ್ನೇನು, ನಿನಗೆ ಸುರರು- ಗಿರರುಗಳು ಸರಿಸಮಾನರೇ! ಬಂದ ಅತಿಥಿಯು, ತನ್ನ ಪಾದಗಳನ್ನು ಹುಡುಕಿದವರನ್ನು ತನ್ನ ಸೆರಗಿನಲ್ಲಿ ಸುತ್ತಿಕೊಂಡನು, ಉತ್ತಮ ವೇದಸಮೂಹವು ಹೊಗಳುವ ಶ್ರೇಷ್ಠ ಮಹಾ ಪರದೈವ ಆಗಮಿಸುತ್ತಿದೆ,' ಎಂದ.
ಕಥೆಯೆ ನಿನ್ನೊಡಹುಟ್ಟಿದನ ಸಾ
ರಥಿತನವ ಕೈಕೊಂಡನಿನ್ನೀ
ಪೃಥಿವಿ ನಿನ್ನಯ ರಾಣಿವಾಸವು ಚಿಂತೆ ಬೇಡಿದಕೆ |
ವ್ಯತಿಥವಾಯಿತು ವೈರಿಬಲ ಸಂ
ಪ್ರತಿಥ ಸಾಹಸನಾದೆ ನೀನೆನೆ
ತಿಥಿಲ ಸಂಶನಂಗಚಿತ್ತವನಿತ್ತನಾತಂಗೆ || ೩ ||
ಪದವಿಭಾಗ-ಅರ್ಥ:ಕಥೆಯೆ(ಹೇಳುವುದಾದರೆ) ನಿನ್ನ+ ಒಡಹುಟ್ಟಿದನ ಸಾರಥಿತನವ ಕೈಕೊಂಡನು (ಹಿದಿದನು)+ ಇನ್ನು+ ಈ ಪೃಥಿವಿ ನಿನ್ನಯ ರಾಣಿವಾಸವು; ಚಿಂತೆ ಬೇಡ+ ಇದಕೆ ವ್ಯತಿಥವಾಯಿತು(ದುಃಖಪಟ್ಟಿತು) ವೈರಿಬಲ ಸಂಪ್ರತಿಥ ಸಾಹಸನಾದೆ ನೀನು+ ಎನೆ ತಿಥಿಲ ಸಂಶನು+ ಅಂಗಚಿತ್ತವನು+ ಇತ್ತನು+ ಆತಂಗೆ
ಅರ್ಥ:ಆ ದೂತನು ದರ್ಮಜನಿಗೆ,'ಹೇಳುವೆನು, ನಿನ್ನ ಒಡಹುಟ್ಟಿದವನ- ಅರ್ಜುನನ ಸಾರಥಿತನವನ್ನು ಕೃಷ್ಣನು ಕೈಕೊಂಡನು. ಇನ್ನು ಈ ಪೃಥ್ಯುವಿ ನಿನ್ನಯ ರಾಣಿವಾಸವು- ನನ್ನಅಧೀನವು; ಚಿಂತೆ ಬೇಡ; ಇದಕ್ಕೆ ವೈರಿಬಲ ದುಃಖಪಟ್ಟಿತು; ನೀನು ಸಂಪ್ರತಿಥ ಸಾಹಸನಾದೆ + ಎನೆ ತಿಥಿಲ ಸಂಶನು+ ಅಂಗಚಿತ್ತವನು+ ಇತ್ತನು+ ಆತಂಗೆ.
ಉಕ್ಕಿ ವಿಸಟಂಬರಿವ ಹರುಷದ
ತೆಕ್ಕೆಯಲಿ ಕೈಗೂಡುವ ನೃಪತಿಗ
ಳಿಕ್ಕಲಿಸೆ ಹೊರವಂಟನರಸನು ಸಕಲದಳ ಸಹಿತ |
ಮಿಕ್ಕು ಬರೆ ಬರೆ ಕೃಷ್ಣನನು ಕ್ಂ
ಡೊಕ್ಕನೊಡಲನು ಚರಣದಲಿ
ಕಕ್ಕಜನಿದೇನೆನುತ ನೆಗಹಿದನಂದು ಧರ್ಮಜನ || ೪ ||
ಪದವಿಭಾಗ-ಅರ್ಥ:ಉಕ್ಕಿ ವಿಸಟಂಬರಿವ (ಹರಡುವ/ಉಬ್ಬುವ; ಗ.ಭಾರತ ಅರ್ಥಕೋಶ) ಹರುಷದ ತೆಕ್ಕೆಯಲಿ(ಆಲಿಂಗನದಲ್ಲಿ) ಕೈಗೂಡುವ ನೃಪತಿಗಳು+ ಇಕ್ಕಲಿಸೆ (ಒಟ್ಟಾಗಿ ಬರಲು) ಹೊರವಂಟನು+ ಅರಸನು ಸಕಲದಳ ಸಹಿತ ಮಿಕ್ಕು ಬರೆ- ಬರೆ-(ಬರುತ್ತಿರುವ) ಕೃಷ್ಣನನು ಕಂಡು+ ಒಕ್ಕನು ಒಕ್ಕನು (ನೆಲಕ್ಕೆ ಹಾಕಿದನು, ನಮಿಸಿದನು )+ ಒಡಲನು ಚರಣದಲಿ(ದೇಹವನ್ನು ಪಾದದಲ್ಲಿ) ಕಕ್ಕಜನು (ಗಾಬರಿಗೊಂಡ)+ ಇದೇನು+ ಎನುತ, ನೆಗಹಿದನು(ಎತ್ತಿದನು)+ ಅಂದು ಧರ್ಮಜನ.
ಅರ್ಥ:ಧರ್ಮಜನು ಮನದಲ್ಲಿ ಸಂತಸದಿಂದ ಉಬ್ಬಿ ಉಕ್ಕುವ ಹರುಷದ ತೆಕ್ಕೆಯಲ್ಲಿ ಇದ್ದು, ಹತ್ತಿರದಲ್ಲಿದ್ದ ನೃಪತಿಗಳನ್ನು ಒಟ್ಟುಗೂಡಿಕೊಂಡು, ಅರಸನು ಸಕಲದಳ ಸಹಿತ ಕೃಷ್ನನನ್ನು ಎದುರುಗೊಳ್ಳಲು ಹೊರಹೊರಟನು. ಮುಂದೆ ಮುಂದೆ ಬರುತ್ತಿರುವ ಕೃಷ್ಣನನ್ನು ಕಂಡು, ನೆಲದ ಮೇಲೆ ಅಡ್ಡಬಿದ್ದು ನಮಿಸಿದನು, ಕೃಷ್ಣನ ಪಾದಕ್ಕೆ ಬಿದ್ದ ಧರ್ಮಜನನ್ನು ಕಂಡು ಗಾಬರಿಗೊಂಡ ಕೃಷ್ಣನು ಇದೇನು ಎನ್ನುತ್ತಾ, ಅಂದು ಧರ್ಮಜನನ್ನು ಎತ್ತಿದನು. (ಕೃಷ್ಣನ ಸೋದರತ್ತೆಯ ಮಗ ಧರ್ಮಜನು ಕೃಷ್ಣನಿಗಿಂತ ಹಿರಿಯನು)
ಪರಕೆ ಪರತರ ವಸ್ತುವನು ಗೋ
ಚರಿಸಿದೆವಲೈ ಮುನಿಜನಂಗಳ
ವರಸಮಾಧಿಗೆ ಸಮಯವಿಲ್ಲದ ದೇವ ನಮಗೊಲಿದೈ |
ಕರುಣಿ ಬಿಜಯಂಗೈದೆಯೆನೆಮುರ
ಹರನು ನಗುತಿಂತೆಂದ ನಾನೀ
ನರನ ಸಾರಥಿಯಲ್ಲದೆಲ್ಲಿಯ ವಸ್ತು ತಾನೆಂದ || ೫ ||
ಪದವಿಭಾಗ-ಅರ್ಥ:ಪರಕೆ ಪರತರ ವಸ್ತುವನು ಗೋಚರಿಸಿದೆವಲೈ, ಮುನಿಜನಂಗಳ ವರ (ಉನ್ನತ) ಸಮಾಧಿಗೆ ಸಮಯವಿಲ್ಲದ ದೇವ ನಮಗೊಲಿದೈ; ಕರುಣಿ ಬಿಜಯಂಗೈದೆ (ಬಂದೆ)+ ಯೆ+ ಎನೆ,(ಎನ್ನಲು)+ ಮುರಹರನು ನಗುತ+ ಇಂತು+ ಎಂದ; ನಾನು+ ಈ ನರನ(ಪಾರ್ಥನ) ಸಾರಥಿಯು+ ಅಲ್ಲದೆ+ ಎಲ್ಲಿಯ ವಸ್ತು(ಪರವಸ್ತು, ಪರಮಾತ್ಮ) ತಾನೆಂದ.
ಅರ್ಥ:ಧರ್ಮಜನು ಕೃಷ್ಣನಿಗೆ,'ಪರ- ಸದ್ಗತಿಗೆ ಪರತತ್ತ್ವ ವಸ್ತುವನ್ನು ನಮಗೆ ಗೋಚರಿಸಿದೆವಯಲ್ಲವೇ!, ಮುನಿಜನಗಳ ಉನ್ನತ ಮಟ್ಟದ ಸಮಾಧಿಗೆ ಗೋಚರಿಸಲು ಸಮಯವಿಲ್ಲದ ದೇವನು ನೀನು ನಮಗೆ ಒಲಿದೆ; ಕರುಣಿ ಕೃಷ್ಣಾ ನೀನು ನಮ್ಮ ಬಳಿಗೆ ಬಿಜಯಂಗೈದೆ; ಎನ್ನಲು ಮುರಹರ ಕೃಷ್ಣನು ನಗುತ್ತಾ ಹೀಗೆ ಹೇಳಿದನು; ನಾನು ಈ ಪಾರ್ಥನ ಸಾರಥಿಯು ಅಷ್ಟೆ; ಅದಲ್ಲದೆ ತಾನು ಎಲ್ಲಿಯ ಪರವಸ್ತು,' ಎಂದ.
ಬಯಲಿಗೆಮ್ಮನೆ ನಾಚಿಸದೆ ಪಾ
ಳೆಯಕೆ ನಡೆಯೆಂದಸುರರಿಪು ಸೇ
ನೆಯನು ಕೈವೀಸಿದನು ಬಂದನು ರಾಜಮಂದಿರಕೆ |
ನಿಯತವಿತ್ತಲು ಕೇಳು ಜನಮೇ
ಜಯ ಮಹೀಪತಿ ಧರ್ಮಸುತನೋ
ಲೆಯ ಹದವನರಿದಂತೆ ಶಲ್ಯ ನೃಪ ಹೊರವಂಟ || ೬ ||
ಪದವಿಭಾಗ-ಅರ್ಥ:ಬಯಲಿಗೆ(ಹೊರಗೆ ಎಲ್ಲರ ಎದುರು)+ ಎಮ್ಮನೆ ನಾಚಿಸದೆ ಪಾಳೆಯಕೆ ನಡೆಯೆಂದು+ ಅಸುರರಿಪು ಸೇನೆಯನು ಕೈವೀಸಿದನು; ಬಂದನು ರಾಜಮಂದಿರಕೆ; ನಿಯತವು (ಯಥಾವಿಧಿ ಕಾರ್ಯಕ್ರಮ)+ ಇತ್ತಲು ಕೇಳು ಜನಮೇಜಯ ಮಹೀಪತಿ ಧರ್ಮಸುತನ+ ಓಲೆಯ ಹದವನು (ವಿಚಾರ)+ ಅರಿದಂತೆ ಶಲ್ಯ ನೃಪ ಹೊರವಂಟ.
ಅರ್ಥ:ಕೃಷ್ಣನು ಧರ್ಮಜನಿಗೆ,ಎಲ್ಲರ ಎದುರು ಸುಮ್ಮನೆ ಹೊಗಳಿ ನಮ್ಮನ್ನು ನಾಚುವಂತೆ ಮಾಡದೆ, ಪಾಳೆಯಕ್ಕೆ ನಡೆಯೆಂದು ಅಸುರರಿಪು ಕರಷ್ನನು ಹೇಳಿ ಸೇನೆಯನ್ನು ನೋಡಿ ಸಂತಸ ತೋರಿ ಅವರಿಗೆ ಕೈಬೀಸಿದನು; ನಂತರ ರಾಜಮಂದಿರಕ್ಕೆ ಬಂದನು; ನಂತರ ನಿಯತ ಕಾರ್ಯಕ್ರಮದಂತೆ ಕೃಷ್ನನನ್ನು ಉಪಚರಿಸಿದನು. ಇತ್ತಕಡೆ ಕೇಳು ಜನಮೇಜಯ ಮಹೀಪತಿಯಾದ ಧರ್ಮಜನ ಓಲೆಯ ವಿಚಾರವನ್ನು ತಿಳದಕೂಡಲೆ ಶಲ್ಯ ನೃಪನು ತನ್ನ ರಾಜ್ಯದಿಂದ ಧರ್ಮಜನ ಪಾಳಯವನ್ನು ಸೇರಲು ಹೊರಹೊರಟನು.

ಶಲ್ಯನು ಕೌರವನ ತಂತ್ರಕ್ಕೆ ಬಲಿಯಾದನು[ಸಂಪಾದಿಸಿ]

ಮೇಳವಿಸಿ ಹೊರವಂಟನಗಣಿತ
ದಾಳು ಕುದುರೆಯ ಕೂಡಿಬರುತಿರೆ
ಕೇಳಿದನು ಕುರುರಾಯ ಮಾದ್ರಾಧಿಪನ ಬರವ |
ಆಳೊಳಗ್ಗಳವಟ್ಟ ಶಲ್ಯ ನೃ
ಪಾಲಕನ ತಿರುಹಿದೊಡೆ ಗೆಲುವುದು
ಕಾಳಗವು ನಮಗೆಂದು ನಿಶ್ಚೈಸಿದನು ಮಂತ್ರದಲಿ || ೭ ||
ಪದವಿಭಾಗ-ಅರ್ಥ:ಮೇಳವಿಸಿ(ಒಟ್ಟು ಸೇರಿಸಿಕೊಂಡು.) ಹೊರವಂಟನು+ ಅಗಣಿತದ(ಬಹಳ, ಲೆಕ್ಕ ಹಾಕಲು ಸಾಧ್ಯವಿಲ್ಲದಷ್ಟು)+ ಅಳು(ಸೈನಿಕರು,ಭಟರು) ಕುದುರೆಯ ಕೂಡಿ ಬರುತಿರೆ ಕೇಳಿದನು ಕುರುರಾಯ ಮಾದ್ರಾಧಿಪನ ಬರವ(ಬರುವುದನ್ನು), ಆಳು+ ಅಗ್ಗಳವಟ್ಟ (ಬಲಶಾಲಿ ಶ್ರೇಷ್ಠ) ಶಲ್ಯ ನೃಪಾಲಕನ ತಿರುಹಿದೊಡೆ(ಧರ್ಮರಾಯನ ಕಡೆಯಿಂದ ತನ್ನ ಕಡೆಗೆ ಅವನ ಬೆಂಬಲ ತಿರುಗಿಸಿಕೊಂಡರೆ) ಗೆಲುವುದು ಕಾಳಗವು ನಮಗೆ+ ಎಂದು ನಿಶ್ಚೈಸಿದನು ಮಂತ್ರದಲಿ(ತನ್ನವರೊಡನೆ ರಾಜನೀತಿಯ ಮಂತ್ರಾಲೋಚನೆಯಲ್ಲಿ).
ಅರ್ಥ:ಮಾದ್ರ ದೇಶದ ರಾಜ ಶಲ್ಯನು ಸೇನೆಯನ್ನು ಒಟ್ಟು ಸೇರಿಸಿಕೊಂಡು ತನ್ನ ರಾಜ್ಯದಿಂದ ಹೊರಹೊರಟನು. ಲೆಕ್ಕ ಹಾಕಲು ಸಾಧ್ಯವಿಲ್ಲದಷ್ಟು ಸೈನಿಕರು- ಭಟರು, ಕುದುರೆಯನ್ನು ಕೂಡಿಕೊಂಡು ಬರುತ್ತಿರಲು, ಈ ಕಡೆ ಕುರುರಾಯ ಕೌರವನು ಈ ಮಾದ್ರಾಧಿಪನು ಬರುವ ವಿಚಾರವನ್ನು ಕೇಳಿ ತಿಳಿದನು. ಶ್ರೇಷ್ಠ ಯೋಧ ನೃಪಾಲಕ ಶಲ್ಯನನ್ನು ಧರ್ಮರಾಯನ ಕಡೆಯಿಂದ ತನ್ನ ಕಡೆಗೆ ಅವನ ಬೆಂಬಲವನ್ನು ತಿರುಗಿಸಿಕೊಂಡರೆ ಈ ಕಾಳಗವನ್ನು ನಮಗೆ ಗೆಲ್ಲುವುದು ಸುಲಭ ಎಂದು ತನ್ನವರೊಡನೆ ರಾಜನೀತಿಯ ಮಂತ್ರಾಲೋಚನೆಯಲ್ಲಿ ನಿಶ್ಚೈಸಿದನು.
ಎಂದಖಿಳ ವಸ್ತುಗಳ ಜೋಡಿಸಿ
ಮುಂದೆ ಪಾಳೆಯ ಬಿಡುವ ಠಾವಿನೊ
ಳಿಂದ ಮಿಗೆ ಮಾಡಿದನು ಗುಡಿ ಗೂಡಾರ ಚೌಕಿಗೆಯ |
ಒಂದು ಯೋಜನದಗಲದಲಿ ಹಯ
ವೃಂದ ಗಜಶಾಲೆಗಳ ಪರುಠವ
ದಿಂದ ರಚಿಸಿದ ಕೂಳು ಖಾಣವನಖಿಳ ಮೋಹರಕೆ || ೮ ||
ಪದವಿಭಾಗ-ಅರ್ಥ:ಎಂದು+ ಅಖಿಳ(ಎಲ್ಲಾ) ವಸ್ತುಗಳ ಜೋಡಿಸಿ, ಮುಂದೆ ಪಾಳೆಯ ಬಿಡುವ ಠಾವಿನೊಳಿಂದ(ಶಲ್ಯನು ಪಾಳಯಬಿಡುವ ಸ್ಥಳದಿಂದ) ಮಿಗೆ (ಬಹಳ) ಮಾಡಿದನು ಗುಡಿ ಗೂಡಾರ ಚೌಕಿಗೆಯ (ಬಿಡಾರ, ವಸತಿ ವ್ಯವಸ್ಥೆ) ಒಂದು ಯೋಜನದ+ ಅಗಲದಲಿ, ಹಯ ವೃಂದ(ಕುದುರೆಗಳ ಸಮೂಹ) ಗಜಶಾಲೆಗಳ, ಪರುಠವದಿಂದ(ಆಧಿಕ್ಯ, ಶ್ರೇಷ್ಠತೆ) ರಚಿಸಿದ, ಕೂಳು ಖಾಣವನು(ಕೂಳು, ಖಾಣ= ಖಾನ- ಊಟದ ವ್ಯವಸ್ಥೆ)+ ಅಖಿಳ ಮೋಹರಕೆ (ಸೇನೆಗೆ).
ಅರ್ಥ:ಕೌರವನು ಶಲ್ಯನನ್ನು ತನ್ನ ಕಡೆ ಸೆಳೆಯಬೇಕೆಂದು, ಅವನ ಸೇನೆಯ ಉಪಚಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಜೋಡಿಸಿಕೊಂಡು, ಶಲ್ಯನು ಮುಂದೆ ಪಾಳೆಯ ಬಿಡುವ ಸ್ಥಳದಿಂದ ಹಿಡಿದು ಉದ್ದಕ್ಕೂ ಗುಡಿ ಗೂಡಾರ ಚೌಕಿಗೆಯ ಬಿಡಾರ- ವಸತಿ ವ್ಯವಸ್ಥೆಯನ್ನು ಬಹಳಚೆನ್ನಾಗಿ ಮಾಡಿದನು. ಒಂದು ಯೋಜನದ ಅಗಲದಲ್ಲಿ, ಕುದುರೆಗಳ ಸಮೂಹಕ್ಕೆ ಗಜಶಾಲೆಗಳನ್ನು, ಶ್ರೇಷ್ಠವಾಗಿ ರಚಿಸಿದನು. ಅವರೆಲ್ಲ ಸೇನೆಯವರಿಗೆ ಊಟದ ವ್ಯವಸ್ಥೆನ್ನು ಮಾಡಿದನು.
ಬಂದು ಬಿಡುವನ್ನೆಬರ ಮುನ್ನಿನ
ಮಂದಿರಕೆ ಹೊಗುವಂತೆ ಶಲ್ಯನ
ಮಂದಿ ಸಂತೋಷದ ಸಮುದ್ರದಿ ಮೂಡಿ ಮುಳಗಾಡಿ |
ಮುಂದೆ ನಡೆಯಲು ಮತ್ತೆ ಮುನ್ನಿನ
ಚಂದದಿಂಮನೆಮನೆಗಳನು ಸುಖ
ದಿಂದಿರಲು ರಚಿಸಿದನು ಕುರುಪತಿ ಪಯಣ ಪಯಣದಲಿ || ೯ ||
ಪದವಿಭಾಗ-ಅರ್ಥ:ಬಂದು ಬಿಡುವ+ ಅನ್ನೆಬರ(416.ಅದುವರೆಗೆ, ಅವರೆಲ್ಲರ) ಮುನ್ನಿನ(ಮುಂಚಿನ? ಮುಂದಿನ?) ಮಂದಿರಕೆ ಹೊಗುವಂತೆ ಶಲ್ಯನ ಮಂದಿ (ಜನ) ಸಂತೋಷದ ಸಮುದ್ರದಿ ಮೂಡಿ ಮುಳಗಾಡಿ ಮುಂದೆ ನಡೆಯಲು ಮತ್ತೆ ಮುನ್ನಿನ(ಮೊದಲಿನ,) ಚಂದದಿಂ (ರೀತಿಯಲ್ಲಿ) ಮನೆಮನೆಗಳನು ಸುಖದಿಂದಿರಲು ರಚಿಸಿದನು ಕುರುಪತಿ ಪಯಣ ಪಯಣದಲಿ.
ಅರ್ಥ:ಶಲ್ಯನ ಸೇನೆ ಬಂದು ಸಲ್ಲಲ್ಲಿ ಬೀಡು ಬಿಡಲು ಮತ್ತು ಮುಂದಿನ ಮಂದಿರಕೆ ಹೊಗುವಂತೆ ಶಲ್ಯನ ಸೇನೆಯಮಂದಿ ಸಂತೋಷದ ಸಮುದ್ರದಲ್ಲಿ ಮೂಡಿ -ಉದಯಿಸಿ ಮುಳಗಾಡಿ, ಮುಂದೆ ನಡೆಯಲು ಮತ್ತೆ ಬಿಡಾರ ಮಾಡುವಲ್ಲಿ ಮೊದಲಿನ ಚಂದದಿಂದ ಮನೆಮನೆಗಳನು ರಚಿಸಿ ಸುಖದಿಂದ ಇರುವಂತೆ ಪಯಣ-ಪಯಣದಲ್ಲಿ ಬಿಡಾರಗಳನ್ನು ಕುರುಪತಿ ಕೌರವನು ರಚಿಸಿದನು.
ಆರು ನಯದಲಿ ನಮ್ಮಖಿಳ ದಳ
ಭಾರವನು ಸಲೆ ತಡೆದವನು ಕುರು
ವೀರನೋ ಯಮನಂದನನೋ ಮಿಗಿಲಾಗಿ ಮೆಚ್ಚಿದೆನು |
ಆರು ಮಾಡಲಿಯವರು ಬಂದರೆ
ಹಾರಲೇಕೆನ್ನೋಡಲ ತೆರುವೆನು
ವೀರ ಮೈದೋರಲಿಯೆನುತ ಹೊಯಿಸಿದನು ಡಂಗುರವ || ೧೦ ||
ಪದವಿಭಾಗ-ಅರ್ಥ:ಆರು (ಯಾರು) ನಯದಲಿ (ವಿನಯ ಮತ್ತು ಪ್ರೀತಿಯಿಂದ) ನಮ್ಮಖಿಳ(ನಮ್ಮ ಎಲ್ಲಾ) ದಳಭಾರವನು ಸಲೆ(ಚೆನ್ನಾಗಿ) ತಡೆದವನು(ಅಲ್ಲಲ್ಲಿ ನಿಲ್ಲಿಸಿದವನು) ಕುರುವೀರನೋ ಯಮನಂದನನೋ ಮಿಗಿಲಾಗಿ ಮೆಚ್ಚಿದೆನು, ಆರು ಮಾಡಲಿ,ಯ+ ಅವರು ಬಂದರೆ ಹಾರಲೇಕೆ+ ಎನ್ನೋಡಲ(ನನ್ನ ದೇಹವನ್ನು) ತೆರುವೆನು(ಕೊಡುವೆನು), ವೀರ ಮೈದೋರಲಿ+ ಯೆ+ ಎನುತ ಹೊಯಿಸಿದನು (ಹೊಡೆಸಿದನು) ಡಂಗುರವ.
ಅರ್ಥ:ಶಲ್ಯನು ತನಗೆ ತನ್ನ ಸೈನ್ಯಕ್ಕೆ ವಿನಯ ಮತ್ತು ಪ್ರೀತಿಯಿಂದ ನೀಡಿದ ಆಥಿತ್ಯವನ್ನು ಕಂಡು,'ನಮ್ಮ ಎಲ್ಲಾ ಸೇನೆಯ ಭಾರವನ್ನು ಚೆನ್ನಾಗಿ ಅಲ್ಲಲ್ಲಿ ನಿಲ್ಲಿಸಿ ಉಪಚರಿಸಿದವನು ಕುರುವೀರ ಕೌರವನೋ, ಯಮನಂದನ ಯುಧಿಷ್ಠಿರನೋ, ನಾನು ಅವರ ಉಪಚಾರವನ್ನು ಬಹಳ ಮೆಚ್ಚಿದೆನು. ಯಾರಾದರೂ ಮಾಡಲಿ, ಅವರು ಬಂದರೆ ಸಂತಸದಿಂದ ಕುನಿಯುವುದು ಏಕೆ, ನನ್ನ ದೇಹವನ್ನೇ ಅವನಿಗೆ ಕೊಡುವೆನು; ಆ ವೀರನು ನನ್ನ ಮುಂದೆ ಮೈದೋರಲಿ ಪ್ರತ್ಯಕ್ಷನಾಗಲಿ,' ಎಂದು ಡಂಗುರವನ್ನು ಹೊಡೆಸಿದನು.
ನಗುತ ಕೌರವರಾಯನಿವರೋ
ಲಗಕೆ ಬರಲಿದಿರೆದ್ದು ಮುದದಲಿ
ತೆಗೆದು ಬಿಗಿಯಪ್ಪಿದನು ಕುಶಲವನೈಯ್ದೆ ಬೆಸಗೊಂಡ |
ಮಗನೆ ನೀನೀ ರಚಿಸಿದಾತನು
ಬಗೆ ದಣಿಯೆ ಬೇಡುವುದು ತಾ ಹಂ
ಗಿಗನು ನಿನಗೆನೆ ಆವ ಬಿನ್ನಹ ಮರಳಿ ನೀವೆಂದ || ೧೧ ||
ಪದವಿಭಾಗ-ಅರ್ಥ:ನಗುತ ಕೌರವರಾಯನು+ಇವರ(ಶಲ್ಯನ)+ ಓಲಗಕೆ ಬರಲು+ ಇದಿರೆದ್ದು(ಅವನ ಎದುರು ಗೌರವದಿಂದ ಎದ್ದು) ಮುದದಲಿ (ಸಂತಸದಿಂದ) ತೆಗೆದು ಬಿಗಿಯಪ್ಪಿದನು ಕುಶಲವನು+ ಐಯ್ದೆ (ಬರಲು) ಬೆಸಗೊಂಡ(ಕೇಳಿದ) ಮಗನೆ ನೀನು+ ಈ ರಚಿಸಿದಾತನು, ಬಗೆ(ಮನಸ್ಸು) ದಣಿಯೆ ಬೇಡುವುದು ತಾ ಹಂಗಿಗನು ನಿನಗೆ+ ಎನೆ (ಎನ್ನಲು) ಆವ ಬಿನ್ನಹ (ಬೇಡಿಕೆ) ಮರಳಿ (ಹಿಂತಿರುಗಿ) ನೀವು+ ಎಂದ.
ಅರ್ಥ:ಶಲ್ಯನು ಡಂಗುರ ಸಾರಿಸಲು, ನಗುತ್ತಾ ಕೌರವರಾಯನು ಶಲ್ಯನ ಸಭೆಗೆ ಬರಲು,ಶಲ್ಯನು ಅವನ ಎದುರು ಗೌರವದಿಂದ ಎದ್ದು ಸಂತೋಷದಿಂದ ಅವನನ್ನು ತೆಗೆದು ಬಿಗಿಯಪ್ಪಿದನು.ಅವನ ಕುಶಲವನ್ನು ಕೇಳಿದನು. ಅವನು ಬರಲು ಮಗನೆ, ಈ ವ್ಯವಸ್ಥೆ ಮಾಡಿದಾತನು ನೀನು; ಹಾಗಾದರೆ ನೀನು ನಿನ್ನ ಮನಸ್ಸು ತುಂಬುವಷ್ಟು ಬೇಡುವುದು; ತಾನು ನಿನಗೆ ಈ ಅತ್ಯುತ್ತಮ ಸತ್ಕಾರ ಪಡೆದ ಹಂಗಿಗನಾಗಿದ್ದೇನೆ', ಎನ್ನಲು, ಆವನು,'ನನ್ನ ಬಿನ್ನಹವು ನೀವು ಹಿಂತಿರುಗಿ,' ಎಂದ. (ನನ್ನ ಪಾಳಯಕ್ಕೆ, ವಿರಾನಗರದ ದಾರಿಯಿಂದ ಹಿಂತಿರುಗಿ ಬನ್ನಿ)
ಎನಗೆ ಬೆಂಬಲವಾಗಿ ಕುಂತೀ
ತನಯರನು ಬಿಡಿ ಮರಳಿ ನೀವ್ ಹ
ಸ್ತಿನಪುರಿಗೆ ತನಗಿತ್ತ ವರವೆನೆ ಶಲ್ಯ ಮನವಳುಕಿ |
ತನಯ ಕೈಕೊಂಡೆನು ಯುಧಿಷ್ಟಿರ
ಜನಪನಳಿಯನು ನೀನು ಲೋಗನೆ
ಯೆನಗೆ ನೀವಿತ್ತಂಡ ಸರಿ ನಿಮ್ಮತ್ತ ಬಹೆನೆಂದ || ೧೨ ||
ಪದವಿಭಾಗ-ಅರ್ಥ:ಎನಗೆ ಬೆಂಬಲವಾಗಿ ಕುಂತೀತನಯರನು ಬಿಡಿ, ಮರಳಿ ನೀವ್ ಹಸ್ತಿನಪುರಿಗೆ ತನಗೆ+ ಇತ್ತ(ಕೊಟ್ಟ) ವರವು+ ಎನೆ (ಎನ್ನಲು) ಶಲ್ಯ ಮನವ+ ಅಳುಕಿ (ದುಃಖಿಸಿ, ಸಂಕಟಪಟ್ಟು), ತನಯ(ಮಗನೇ) ಕೈಕೊಂಡೆನು ಯುಧಿಷ್ಟಿರ ಜನಪನು+ ಅಳಿಯನು ನೀನು ಲೋಗನೆ+ ಯೆನಗೆ ನೀವು+ ಇತ್ತಂಡ(ಎರಡು ಬದಿ) ಸರಿ ನಿಮ್ಮತ್ತ ಬಹೆನೆಂದ (ಬರುವೆನು ಎಂದ).
ಅರ್ಥ:ಕೌರವನು ಶಲ್ಯನಿಗೆ,'ನೀವು ನನಗೆ ಬೆಂಬಲವಾಗಿರಬೇಕು; ಕುಂತೀತನಯರೊಡನೆ ಸೇರುವುದನ್ನು ಬಿಟ್ಟುಬಿಡಿ. ಹಿಂತಿರುಗಿ ನೀವು ಹಸ್ತಿನಾಪುರಕ್ಕೆ ಬನ್ನಿ; ಇದು ನೀವು ತನಗೆ ಕೊಟ್ಟ ವರವು ಎನ್ನಲು, ಶಲ್ಯನು ಮನದಲ್ಲಿ ಅಳುಕಿ, ಎದುರಲ್ಲಿ ಮಗನೇ ಕೈಕೊಂಡೆನು- ನಿನ್ನ ಕೋರಿಕೆಯನ್ನು ಸ್ವೀಕರಿಸಿದೆನು. ಯುಧಿಷ್ಟಿರ ಜನಪನು ನನಗೆ ಅಳಿಯನು; ಹಾಗಾಗಿ ನೀನೂ ಬಂಧುವು, ಅದಲ್ಲದೆ ಲೋಗನೆ- ಸಂಬಂಧವಿಲ್ಲದವನೇ? ನನಗೆ ನೀವು ಇತ್ತಂಡ ಸರಿಸಮಾನರು. ಆಗಲಿ ನಿಮ್ಮ ಕಡೆ ಬರುತ್ತೇನೆ ಎಂದನು.
ಅಗಲಿದೆನು ಹಲಕಾಲದೈವರ
ಮೊಗವನೀಕ್ಷಿಸಿ ಮರಳುವೆನು ಬಂ
ಧುಗಳ ದರುಶನ ಫಲವಾ ಸಂಸಾರ ತರುವಿಂಗೆ |
ಮಗನೆ ಸೇನೆಯ ಕೊಂಡು ವಾರಣ
ನಗರಿಗೈದುವುದೆಂದು ಭೂಪನ
ಮಗುಳಿಚಿದನಾ ಶಲ್ಯ ಬಂದನು ಪಾಂಡವರ ಹೊರೆಗೆ || ೧೩ ||
ಪದವಿಭಾಗ-ಅರ್ಥ:ಅಗಲಿದೆನು ಹಲಕಾಲದಿ (ಬಹಳ ಕಾಲದಿಂದ)+ ಐವರ (ಪಾಂಡವರ) ಮೊಗವನು+ ಈಕ್ಷಿಸಿ ಮರಳುವೆನು, ಬಂಧುಗಳ ದರುಶನ ಫಲವು+ ಆ ಸಂಸಾರ ತರುವಿಂಗೆ (ಮರಕ್ಕೆ), ಮಗನೆ ಸೇನೆಯ ಕೊಂಡು ವಾರಣನಗರಿಗೆ (ಹಸ್ತಿನಾವತಿಗೆ)+ ಐದುವುದು(ಹೋಗುವುದು)+ ಎಂದು ಭೂಪನ(ಕೌರವನನ್ನು) ಮಗುಳಿಚಿದನು(ಹಿಂತಿರುಗಿಸಿ ಕಳಿಸಿದನು)+ ಆ ಶಲ್ಯ, ಬಂದನು ಪಾಂಡವರ ಹೊರೆಗೆ (ಬಳಿಗೆ);
ಅರ್ಥ:ಶಲ್ಯನು ಕೌರವನಿಗೆ,'ಪಾಂಡವರನ್ನು ಬಹಳ ಕಾಲದಿಂದ ನೋಡದೆ ಅಗಲಿರುವೆನು. ಆ ಐವರು ಪಾಂಡವರ ಮುಖವನ್ನು ನೋಡಿದನಮತರ ಹಿಂತಿರುಗಿ ಬರುವೆನು. ಬಂಧುಗಳ ದರ್ಶನವು ಆ ಸಂಸಾರವೆಂಬ ಮರಕ್ಕೆ ಫಲವಲ್ಲವೇ! , ಮಗನೆ ಕೌರವಾ ನೀನು ನನ್ನ ಸೇನೆಯನ್ನು ಕರೆದುಕೊಂಡು ಹಸ್ತಿನಾವತಿಗೆ ಹೋಗುವುದು,' ಎಂದು ಹೇಳಿ ಕೌರವನನ್ನು ಹಿಂತಿರುಗಿಸಿ ಕಳಿಸಿದನು. ಆ ಶಲ್ಯನು ಪಾಂಡವರ ಬಳಿಗೆ ಬಂದನು.
ಇದಿರುಗೊಂಡರು ಕಾಣಿಕೆಯನಿ
ಕ್ಕಿದರು ತೆಗೆದಪ್ಪಿದರು ಹಲ ಕಾ
ಲದಲಿ ಹೂಳಿದ ಹರುಷವನು ಕೈಗೊಳಗು ಮಾಡಿದರು |
ಮುದದಲ್ಲೆಲ್ಲವರ ಕುಶಲವನು ಕೇ
ಳಿದನು ದುರಿಯೋಧನನಿಗೆ ಸಿಲುಕಿದ
ಹದನನೆಲ್ಲವ ಹೇಳಿದನು ನಿರ್ವಿಣ್ಣ ಮನನಾಗಿ || ೧೪ ||
ಪದವಿಭಾಗ-ಅರ್ಥ:ಇದಿರುಗೊಂಡರು ಕಾಣಿಕೆಯನು+ ಇಕ್ಕಿದರು (ಕೊಟ್ಟರು) ತೆಗೆದು (ಬರಸೆಳೆದು)+ ಅಪ್ಪಿದರು ಹಲ(ಹಲವು, ಬಹಳ) ಕಾಲದಲಿ ಹೂಳಿದ (ಅಡಗಿಸಿದ) ಹರುಷವನು ಕೈಗೊಳಗು(ಅಭಿವ್ಯಕ್ತಿ ?) ಮಾಡಿದರು; ಮುದದಲಿ (ಸಂತಸದಿಂದ)+ ಎಲ್ಲವರ ಕುಶಲವನು ಕೇಳಿದನು; ದುರಿಯೋಧನನಿಗೆ ಸಿಲುಕಿದ ಹದನನು+ ಎಲ್ಲವ ಹೇಳಿದನು ನಿರ್ವಿಣ್ಣ (ನಿರಾಶೆಗೊಂಡ) ಮನನಾಗಿ.
ಅರ್ಥ:ಪಾಂಡವರ ಮಾವನಾದ ಶಲ್ಯನು ಬರಲು, ಪಾಂಡವರು ಅವನನ್ನು ಇದಿರುಗೊಂಡು ಸ್ವಾಗತಿಸಿದರು. ಅವನಿಗೆ ಗೌರವದ ಕಾಣಿಕೆಯನ್ನು ಕೊಟ್ಟರು. ಪರಸ್ಪರ ಬರಸೆಳೆದು ಅಪ್ಪಿದರು. ಬಹಳ ಕಾಲದಿಂದ ಅಡಗಿಸಿದ್ದ ಹರ್ಷವನ್ನು ಸಂತಸದಿಂದ ಅಭಿವ್ಯಕ್ತಿ ಮಾಡಿದರು; ಶಲ್ಯನು ಪಾಂಡವರೆಲ್ಲರ ಕುಶಲವನ್ನು ಕೇಳಿದನು; ತಾನು ದುರ್ಯೋಧನನ ತಂತ್ರಕ್ಕೆ ಸಿಕ್ಕಿದ ವಿಚಾರವನ್ನೂ ಉಳಿದ ಎಲ್ಲವನ್ನೂ ನಿರ್ವಿಣ್ಣ ಮನಸ್ಸಿನಿಂದ ಹೇಳಿದನು.
ಆದರೇನಲೆ ಕಂದ ತಪ್ಪದು
ಮೇದಿನಿಯ ಸಿರಿ ನಿನಗೆ ಸತ್ಯವ
ಕಾದು ಹದಿಮೂರಬುದ ನವೆದಿರಿ ಮುಂದೆ ಲೇಸಹುದು |
ಕಾದು ವೃತ್ರಾಸುರನ ಮುರಿದಪ
ವಾದದಲಿ ಸಿರಿ ಹೋಗಿ ದು:ಖಿತನಾದ
ನಿಂದ್ರನು ಮತ್ತೆ ಬದುಕಿದ ಶಚಿಯ ದೆಸೆಯಿಂದ || ೧೫ ||
ಪದವಿಭಾಗ-ಅರ್ಥ:ಆದರೇನು+ ಎಲೆ ಕಂದ ತಪ್ಪದು ಮೇದಿನಿಯ ಸಿರಿ ನಿನಗೆ; ಸತ್ಯವಕಾದು ಹದಿಮೂರು+ ಅಬುದ(ವರ್ಷ) ನವೆದಿರಿ (ಕಷ್ಟ ಅನುಭವಿಸಿದಿರಿ) ಮುಂದೆ ಲೇಸಹುದು (ಒಳಿತಾಗುವುದು), ಕಾದು (ಯುದ್ಧಮಾಡಿ) ವೃತ್ರಾಸುರನ ಮುರಿದ (ಕೊಂದ)+ ಅಪವಾದದಲಿ ಸಿರಿ ಹೋಗಿ, ದು:ಖಿತನಾದನು+ ಇಂದ್ರನು, ಮತ್ತೆ ಬದುಕಿದ ಶಚಿಯ ದೆಸೆಯಿಂದ.
ಅರ್ಥ:ಶಲ್ಯನು ಧರ್ಮಜ ಮತ್ತ ಅವನ ಸೋದರರಿಗೆ ತಾನು ಕೌರವನ ಕಡೆ ಸೇರಿದೆ; ಆದರೇನು, ಎಲೆ ಕಂದ ಧರ್ಮಜ ನಿನಗೆ ಭೂಮಿಯ ಸಂಪತ್ತು ತಪ್ದುವುದಿಲ್ಲ, ಸಿಕ್ಕೇ ಸಿಗುವುದು. ಸತ್ಯವನ್ನು ಕಾದು-ಕಾಪಾಡಿ ಹದಿಮೂರು ವರ್ಷ ಕಷ್ಟ ಅನುಭವಿಸಿದಿರಿ. ಮುಂದೆ ಲೇಸಹುದು, ವೃತ್ರಾಸುರನನ್ನು ಯುದ್ಧಮಾಡಿ ಕೊಂದ ಅಪವಾದದಲ್ಲಿ ಇಂದ್ರನ ಸಿರಿ ಸಂಪತ್ತು ಹೋಗಿ ಇಂದ್ರನು ದು:ಖಿತನಾದನು, ಆದರೆ ಅವನ ಪತ್ನಿ ಶಚಿಯ ದೆಸೆಯಿಂದ ಮತ್ತೆ ಬದುಕಿದನು- ಸಂಪತ್ತು ಪಡೆದನು, ಎಂದನು.
ನಹುಷನನು ಕಡೆನೂಕಿ ಋಶಿಗಳ
ಮಹಿಮೆಯಲಿ ಸಾರಾಜ್ಯದಲಿ ಸ
ನ್ನಿಹಿತನಾದನು ಮತ್ತೆ ದಿವಿಜರ ರಾಯನೊಳಗಾಗಿ |
ಅಹಿತರವಗಡಿಸಿದೊಡೆ ಕುಸಿದನು
ಬಹಳ ಲೇಸನು ಬಳಿಕ ಕಂಡನು
ಮಹಿ ನಿನಗೆ ಬೆಸಕೈದು ಬದುಕುವಿರೆಂದನಾ ಶಲ್ಯ || ೧೬ ||
ಪದವಿಭಾಗ-ಅರ್ಥ:ನಹುಷನನು ಕಡೆನೂಕಿ (ಇಂದ್ರನ ಸ್ಥಾನದಲ್ಲಿದ್ದ ನಹುಷನನ್ನು ಭೂಮಿಗೆ ತಳ್ಲಿ) ಋಷಿಗಳ ಮಹಿಮೆಯಲಿ ಸಾರಾಜ್ಯದಲಿ (ಸಾ- ಉತ್ತಮ, ಸ್ವರ್ಗದರಾಜ್ಯದಲ್ಲಿ) ಸನ್ನಿಹಿತನಾದನು, ( ಹತ್ತಿರವಾದನು,ಸೇರಿಕೊಂಡನು) ಮತ್ತೆ ದಿವಿಜರ (ದೇವತೆಗಳ) ರಾಯನು+ ಒಳಗಾಗಿ ಅಹಿತರ (ಶತ್ರುಗಳ)+ ಅವಗಡಿಸಿದೊಡೆ(ಎದುರಿಸಿದಾಗ) ಕುಸಿದನು(ಸೋತನು), ಬಹಳ ಲೇಸನು (ಒಳ್ಳೆಯಕಾಲವನ್ನು) ಬಳಿಕ ಕಂಡನು, ಮಹಿ(ಭೂಮಿ.ರಾಜ್ಯ.) ನಿನಗೆ ಬೆಸಕೈದು (ಬೆಸಗೈದು, ಭೂಮಿಯು- ಭೂದೇವಿಯು ನಿನಗೆ- ಸೇವೆ ಮಾಡಿ) ಬದುಕುವಿರೆಂದನು+ ಆ ಶಲ್ಯ.
ಅರ್ಥ:ಇಂದ್ರನ ಸ್ಥಾನದಲ್ಲಿದ್ದ ನಹುಷನನ್ನು ಭೂಮಿಗೆ ತಳ್ಳಿ, ಋಷಿಗಳ ಮಹಿಮೆಯಿಂದ ಉತ್ತಮ, ಸ್ವರ್ಗದರಾಜ್ಯದಲ್ಲಿ ಅಧಿಪತಿಯಾದನು, ಮತ್ತೆ ದೇವತೆಗಳರಾಜ ಇಂದ್ರನು ಯುದ್ಧದಲ್ಲಿ ಶತ್ರುಗಳನ್ನು ಎದುರಿಸಿದಾಗ ಸೋತನು. ಆ ಬಳಿಕ ಬಹಳ ಒಳ್ಳೆಯಕಾಲವನ್ನು ಕಂಡನು. ಆ ಶಲ್ಯನು ಧರ್ಮಜನಿಗೆ,'ನಿನಗೆ ಭೂದೇವಿಯು ಒಲಿದು ಬದುಕುವಿರಿ,(ಪುನಃ ರಾಜ್ಯವನ್ನು ಪಡೆಯುವಿರಿ.)' ಎಂದನು.
  • ಟಿಪ್ಪಣಿ: ಇಂದ್ರನು ವೃತ್ರಾಸುನನ್ನು ಕೊಂದಾಗ ಬ್ರಹ್ಮಹತ್ಯಾದೋಷ ಬಂದು ಸಿಂಹಾಸನ ಚ್ಯುತನಾಗಿ ಸಮುದ್ರದಲ್ಲಿ ಅಡಗಿದ್ದನು. ಆಗ ಹಸ್ತಿನಾವತಿ ರಾಜ ನಹುಷನಿಗೆ ಇಂದ್ರ ಪದವಿಯನ್ನು ಕೊಟ್ಟರು. ಅವನು ತಾನು ಇಂದ್ರನಾದ್ದರಿಂದ ಅರಮನೆಯಲ್ಲಿ ಇದ್ದ ಇಂದ್ರನ ಪತ್ನಿ ಶಚೀದೇವಿ ತನ್ನ ಸೇವೆ ಮಾಡಬೇಕೆಂದು ಬಯಸಿದನು. ಅವಳು ಸಪ್ತೃಷಿಗಳು ಪಲ್ಲಕ್ಕಿಯಲ್ಲಿ ಅವನನ್ನು ಹೊತ್ತುತಂದರೆ ಸೇವೆಮಾಡುವುದಾಗಿ ಷರತ್ತುಹಾಕಿದಳು. ಅವನ ಆಜ್ಞೆಯಂತೆ ಸಪ್ತ ಋಷಿಗಳು ಹೊತ್ತು ತರುವಾಗ ಪಲ್ಲಕ್ಕಿ ಕುಲಕಾಡಿದ್ದಕ್ಕೆ ಅವನು ಋಷಿ ಅಗಸ್ತ್ಯ? ನನ್ನು ಒದ್ದನು. ಆಗ ಅಗಸ್ತ್ಯನು ಅವನನ್ನು ಅಜಗರ- ಹಾವಾಗಿ ಭೂಮಿಗೆ ಬೀಳು ಎಂದು ಶಾಪಕೊಟ್ಟನು. ದೇವತೆಗಳು ಇಂದ್ರನನ್ನು ಹುಡುಕಿ ತಂದು ಸಿಂಹಾಸನದಲ್ಲಿ ಕೂರಿಸಿದರು. (ಅರಣ್ಯಪರ್ವ-ಸಂಧಿ ಹದಿಮೂರು. ಅದನ್ನೇ ಇಲ್ಲಿ ಕವಿ ಹೇಳಿರಬಹುದು.)
ಆದೊಡಾ ಕರ್ಣಂಗೆ ಸಾರಥಿ
ಯಾದಿರಾದೊಡೆ ಸಮರ ಮುಖದಲಿ
ವಾದ ತೇಜೋವಧೆಯ ಮಾಡುವುದವನನವಗಡಿಸಿ |
ಕಾದಿ ಕೊಡುವುದು ನಾವು ಗೆಲುವವೊ
ಲಾದರಿಸುವುದು ನಮ್ಮನೆಂದಾ
ಮೇದಿನೀಪತಿ ಶಲ್ಯನನು ಸತ್ಕರಿಸಿ ಕಳುಹಿದನು || ೧೭ ||
ಪದವಿಭಾಗ-ಅರ್ಥ:ಆದೊಡೆ (ಹಾಗಾದರೆ)+ ಆ ಕರ್ಣಂಗೆ ಸಾರಥಿಯಾದಿರಾದೊಡೆ (ಸಾರಥಿಯಾದರೆ), ಸಮರ ಮುಖದಲಿ ವಾದ ತೇಜೋವಧೆಯ(ವಾದದಲ್ಲಿ ಭಂಗಿಸಿ ಅವಮಾನಿಸುವುದು) ಮಾಡುವುದು+ ಅವನನು+ ಅವಗಡಿಸಿ(ವಿರೋಧಿಸಿ, ಪ್ರತಿಭಟಿಸಿ) ಕಾದಿ(ಹೋರಾಡಿ) ಕೊಡುವುದು ನಾವು ಗೆಲುವವೊಲು+ ಆದರಿಸುವುದು (ಉಪಚರಿಸುವುದು, ಉಪಕಾರಮಾಡುವುದು) ನಮ್ಮನು+ ಎಂದು+ ಆ ಮೇದಿನೀಪತಿ(ರಾಜ ಘರ್ಮಜನು) ಶಲ್ಯನನು ಸತ್ಕರಿಸಿ ಕಳುಹಿದನು.
ಅರ್ಥ:ಆಗ ಧರ್ಮಜನು,ಕೃಷ್ಣಾರ್ಜುನರಿಗೆ ಎದುರಾಗಿ ಕರ್ಣನು ಬಂದಾಗ, ಅಶ್ವಹೃದಯ ವಿದ್ಯೆಯನ್ನು ಬಲ್ಲ ಶಲ್ಯನು ಸಾರಥಿಯಾಗಿ ಬರಬಹುದೆಂದು ಯೋಚಿಸಿದನು. ಧರ್ಮಜನು ಶಲ್ಯನನ್ನು ಕುರಿತು,'ನೀವು ಮಾತಿಗೆ ಕಟ್ಟುಬಿದ್ದು ಕೌರವನ ಬಳಿಗೆ ಹೋಗುವಿರಲ್ಲವೇ? ಹಾಗಾದರೆ ಕರ್ಣನಿಗೆ ಸಾರಥಿಯಾದರೆ, ಸಮರ- ಯುಧ್ಧ ಮುಖದಲ್ಲಿ ಅವನೊಡನೆ ಜಗಳತೆಗೆದು ವಾದದಲ್ಲಿ ಭಂಗಿಸಿ ತೇಜೋವಧೆಯನ್ನು ಮಾಡುವುದು. ಅವನನ್ನು ವಿರೋಧಿಸಿ ಹೋರಾಡಿ ನಾವು ಗೆಲ್ಲುವಂತೆ ಮಾಡಿ ಉಪಕಾರಮಾಡುವುದು,'ಎಂದು ಪ್ರಾರ್ಥಿಸಿ, ಆ ರಾಜ ಧರ್ಮಜನು ಶಲ್ಯನನ್ನು ಸತ್ಕರಿಸಿ ಕಳುಹಿದನು.
ಬೀಳುಗೊಂಡನು ಶಲ್ಯನಿತ್ತಲು
ಹೇಳುವರೆ ಮತಿ ಮುರಿಯೆ ನೋಟಕ
ರಾಲಿ ಝೊಮ್ಮಿಡೆ ಕಾದುವರ ಮನ ಮೂರು ಕವಲಾಗೆ |
ಜಾಳಿಗೆಯ ಹೊಗರ+ ಅಲಗಿನುರಿಯ ಚ
ಡಾಳ ನಭದಲಿ ಝಗಝಗಿಸೆ ಹೇ
ರಾಳದೊಡ್ಡವಣಿಯಲಿ ಬರುತಿರ್ದುದಾ ನೃಪವ್ರಾತ || ೧೮ ||
ಪದವಿಭಾಗ-ಅರ್ಥ:ಬೀಳುಗೊಂಡನು ಶಲ್ಯನ+ ಇತ್ತಲು ಹೇಳುವರೆ(ಈ ಕಡೆಯ ವಿಚಾರ ಹೇಳುವುದಾದರೆ) ಮತಿ (ಬುದ್ಧಿಗೆ, ಮನಸ್ಸು) ಮುರಿಯೆ(ಗೋಚರಿಸದಷ್ಟು) ನೋಟಕರ+ ಆಲಿ(ಕಣ್ಣು) ಝೊಮ್ಮಿಡೆ, ಕಾದುವರ(ಯುದ್ಧ ಮಾಡುವವರ) ಮನ ಮೂರು ಕವಲಾಗೆ, ಜಾಳಿಗೆಯ( ಜಾಳಂದ್ರ, ಗುಂಪು, ಸಮೂಹ, ಚಾಟಿ, ಹುರಿ) ಹೊಗರು(ಕಾಂತಿ, ಪ್ರಕಾಶ, ಹೆಚ್ಚಳ, ಆಧಿಕ್ಯ, ಮಂಕು)+ ಅಲಗಿನ+ ಉರಿಯ ಚಡಾಳ(ಹೆಚ್ಚಳ, ಆಧಿಕ್ಯ) ನಭದಲಿ (ಆಕಾಶದಲ್ಲಿ) ಝಗಝಗಿಸೆ ಹೇರಾಳ(ಬಹಳ) ದೊಡ್ಡವಣಿಯಲಿ (ದೊಡ್ಡಮೆರವಣಿಗೆಯಲ್ಲಿ) ಬರುತಿರ್ದುದಾ ನೃಪವ್ರಾತ (ರಾಜರ ಸಮೂಹ)
ಅರ್ಥ:ಧರ್ಮಜನು ಶಲ್ಯನನ್ನು ಬೀಳ್ಕೊಟ್ಟನು; ಇತ್ತ- ಈಕಡೆಯ ವಿಚಾರ ಹೇಳುವುದಾದರೆ ಬುದ್ಧಿಗೆ ಗೋಚರಿಸದಷ್ಟು ನೋಡುವವರ ಕಣ್ಣು ಕೋರೈಸುವಂತೆ, ಯುದ್ಧ ಮಾಡುವವರ ಮನಸ್ಸು ಮೂರು ಕವಲಾಗಿರಲು- ದಿಕ್ಕುಕಾಣದಂತೆ ಆಗಲು, ಸೇನಾ ಸಮೂಹದ, ಪ್ರಕಾಶ ಹೆಚ್ಚಲು, ಕತ್ತಿಗಳ ಅಲಗಿನ ಉರಿಯ- ಬೆಳಕಿನ ಹೆಚ್ಚಳವು ಆಕಾಶದಲ್ಲಿ ಝಗಝಗಿಸಲು ಬಹಳದೊಡ್ಡ ಮೆರವಣಿಗೆಯಲ್ಲಿ ರಾಜರ ಸಮೂಹ ಬರುತ್ತಿತ್ತು.
ದೆಸೆಗಳೆಂಟರ ಮೂಲೆ ಬಿರಿಯಲು
ಪಸರಿಸಿತುಹಳೆ ಬೊಮ್ಮಗಹುದೇ
ಹೊಸ ವಿಧಾತ್ರನ ಸೃಷ್ಟಿಯಿದು ಹೆಸರೇನು ಹೊಗಳುವರೆ |
ಕುಸಿಯನೇ ಕೂರುಮನು ಭಾರಕೆ
ಸಸಿಯನೇ ನಾಗೇಂದ್ರನಾನೆಗ
ಳುಸುರು ಹದುಳವೆ ನೋಡೆನಲು ಬಂದುದು ನೃಪವ್ರಾತ || ೧೯ ||
ಪದವಿಭಾಗ-ಅರ್ಥ: ದೆಸೆಗಳು(ದಿಕ್ಕುಗಳು)+ ಎಂಟರ ಮೂಲೆ ಬಿರಿಯಲು ಪಸರಿಸಿತು(ಹರಡಿತು) ಹಳೆ ಬೊಮ್ಮಗೆ (ಬ್ರಹ್ಮನಿಗೆ) ಅಹುದೇ(ನಿಜವೇ, ಆಗುವುದೇ ಸಾಧ್ಯವೇ) ಹೊಸ ವಿಧಾತ್ರನ ಸೃಷ್ಟಿಯಿದು, ಹೆಸರೇನು ಹೊಗಳುವರೆ (ಹೊಗಳುವುದಾದರೆ), ಕುಸಿಯನೇ ಕೂರುಮನು (ಕೂರ್ಮನು) ಭಾರಕೆ ಸಸಿಯನೇ(ಕಡಿ, ಹಿಂಜು) ನಾಗೇಂದ್ರನು+ ಆನೆಗಳ (ದಿಗ್ಗಜಗಳು)+ ಉಸುರು ಹದುಳವೆ ( ಸೌಖ್ಯ, ಕ್ಷೇಮ) ನೋಡು+ ಎನಲು ಬಂದುದು ನೃಪವ್ರಾತ(ರಾಜರ ಸಮೂಹ).
ಅರ್ಥ:ಧರ್ಮಜನ ಪರವಾಗಿರುವ ರಾಜರುಗಳ ಸಮೂಹ ಸೇನೆಗಳೊಡನೆ ಬಂದಾಗ, ಎಂಟು ದಿಕ್ಕುಗಳ ಮೂಲೆ ಬಿರಿಯಯಿತು- ಒಡೆಯುವಂತೆ ಸದ್ದು ಹರಡಿತು. ಇದು ಹಳೆಯ ಬ್ರಹ್ಮನಿಗೆ ಈ ಸೃಷ್ಟಿ ಸಾಧ್ಯವೇ? ಇದು ಹೊಸ ವಿಧಾತ್ರನ ಸೃಷ್ಟಿಯು; ಹೊಗಳುವುದಾದರೆ ಅವನ ಹೆಸರೇನು; ಈ ಸೇನೆಗಳ ಭಾರಕ್ಕೆ ಭೂಮಿಯನ್ನು ಹೊತ್ತ ಕೂರ್ಮನು ಕುಸಿಯನೇ? ಭೂಮಿಯನ್ನು ಹೊತ್ತ ನಾಗೇಂದ್ರನು ಬಳಲಿಹೋಗನೇ? ಭೂಮಿಯನ್ನು ಹೊತ್ತ ಅಷ್ಟ ದಿಗ್ಗಜಗಳು ಬಳಲಿ ಕ್ಷೇಮವಾಗಿ ಉಸುರು ಬಿಡುವದೇ ನೋಡು, ಎನ್ನುವಂತೆ ರಾಜರ ಸಮೂಹ ಸೇನೆಯೊಡನೆ ಬಂದಿತು.
ಚೋಳ ಪಾಂಡ್ಯರು ಕೇರಳರು ಶಿ
ಶುಪಾಲ ನಂದನ ದೃಷ್ಟಕೇತು ಕ
ರಾಳ ಮಾಗಧ ಚೀನ ಭೋರ ಕರ್ಪರಾದಿಗಳು |
ಮೇಲೆ ಮೇಲೈತಂದು ಭೀಮಂ
ಗಾಳು ತೋರಿದರಿತ್ತ ಕುರು ಭೂ
ಪಾಲಕನ ಕೂಡಿದರು ಭಗದತ್ತಾದಿ ಭೂಭುಜರು || ೨೦ ||
ಪದವಿಭಾಗ-ಅರ್ಥ:ಚೋಳ, ಪಾಂಡ್ಯರು ಕೇರಳರು ಶಿಶುಪಾಲ ನಂದನ ದೃಷ್ಟಕೇತು ಕರಾಳ ಮಾಗಧ ಚೀನ ಭೋರ ಕರ್ಪರಾದಿಗಳು ಮೇಲೆ ಮೇಲೆ+ ಐತಂದು(ಬಂದು) ಭೀಮಂಗೆ+ ಆಳು (ತಮ್ಮ ಸೇನೆಯ ಭಟರನ್ನು) ತೋರಿದರು+ ಇತ್ತ ಕುರು ಭೂಪಾಲಕನ ಕೂಡಿದರು ಭಗದತ್ತ+ ಆದಿ ಭೂಭುಜರು(ರಾಜರು)
ಅರ್ಥ:ಚೋಳರು, ಪಾಂಡ್ಯರು, ಕೇರಳರು, ಶಿಶುಪಾಲ ಮತ್ತು ಅವನ ಸೇನೆ, ನಂದನ, ದೃಷ್ಟಕೇತು, ಕರಾಳ, ಮಾಗಧ, ಚೀನ ಭೋರ, ಕರ್ಪರರು+ ಮೊದಲಾದವರು, ಮೇಲಿಂದ ಮೇಲೆ ಬಂದು ಪಾಂಡವರ ಪಾಳಯಕ್ಕೆ ಸೇರಿ, ಭೀಮನಿಗೆ ತಮ್ಮ ಸೇನೆಯ ಭಟರನ್ನು ತೋರಿಸಿದರು. ಇತ್ತ ಹಸ್ತಿನಾವತಿಯಲ್ಲಿ ಕುರು ಭೂಪಾಲಕ ಕೌರವನನ್ನು ಭಗದತ್ತ ಮೊದಲಾದ ರಾಜರು ಬಂದು ಕೂಡಿಕೊಂಡರು.

ದ್ರುಪದನ ರಾಜ ಪುರೋಹಿತನ ದೌತ್ಯ[ಸಂಪಾದಿಸಿ]

ದ್ರುಪದ ರಾಜ ಪುರೋಹಿತನು ಕುರು
ನೃಪನನಿತ್ತಲು ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ |
ಕೃಪಣತನದಲಿ ಕೌರವನು ಗುರು
ಕೃಪನ ಭೀಷ್ಮನ ಮತವನೊಲ್ಲದೆ
ಚಪಳ ಕರ್ಣನ ಕೂಡಿ ನಿಶ್ಚೈಸಿದನ ಕಾಳಗವ || ೨೧ ||
ಪದವಿಭಾಗ-ಅರ್ಥ:ದ್ರುಪದ ರಾಜ ಪುರೋಹಿತನು ಕುರುನೃಪನನು+ ಇತ್ತಲು(ಈ ಕಡೆ) ಬಂದು ಕಂಡನು; ವಿಪುಳಮತಿ (ಬಹಳ ವಿವೇಕಿಯಾದ ಆತನು) ಮಾತಾಡಿದನು ನಿಜ ರಾಜಕಾರಿಯವ; ಕೃಪಣತನದಲಿ (ಆಸೆಬುರುಕ ಜಿಪುಣತನ) ಕೌರವನು ಗುರು ಕೃಪನ ಭೀಷ್ಮನ ಮತವನು+ ಒಲ್ಲದೆ (ಒಪ್ಪದೆ) ಚಪಳ ಕರ್ಣನ ಕೂಡಿ ನಿಶ್ಚೈಸಿದನು ಕಾಳಗವ (ಯುದ್ಧ).
ಅರ್ಥ:ಹಿಂದೆ ನಿಶ್ಚಯಿಸಿದಂತೆ, ಇತ್ತ ದ್ರುಪದ ರಾಜನ ಪುರೋಹಿತನು ಪಾಂಡವರು ವನವಾಸ ಅಜ್ಞಾತ ವಾಸವನ್ನು ಪಗಡೆಪಂದ್ಯದ ನಿಯಮದಂತೆ ಮುಗಿಸಿದ್ದು ಅವರಿಗೆಗೆ ಅವರ ರಾಜ್ಯದ ಭಾಗವನ್ನು ಹಿಂತಿರುಗಿಸಲು ಕೇಳುವುದಕ್ಕೋಸ್ಕರ ರಾಜದೂತನಾಗಿ ಕುರುನೃಪ ಕೌರವನನ್ನು ಬಂದು ಕಂಡನು; ಬಹಳ ವಿವೇಕಿಯಾದ ಆತನು ತಾನು ಬಂದ ರಾಜಕಾರ್ಯದ ವಿಷಯವಾಗಿ ಮಾತನಾಡಿದನು; (ಪಾಂಡವರು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತ ವಾಸವನ್ನು ಪಗಡೆಪಂದ್ಯದ ನಿಯಮದಂತೆ ಮುಗಿಸಿದ್ದು ಅವರ ರಾಜ್ಯವನ್ನ ಅವರು ಪಡೆಯಲು ಬಾದ್ಯರು. ರಾಜ ದೃತರಾಷ್ಟ್ರನು ಮೊದಲಿನ ಪಂದ್ಯದಲ್ಲಿ ಸೋತಿದ್ದ ರಾಜ್ಯ ಮತ್ತು ಸಂಪತ್ತನ್ನು ಅವರಿಗೆ ಹಿಂದಿರುಗಿಸಿರುವನು; ಕೊನೆಯ ಪಂದ್ಯದಲ್ಲಿ ಅವರು ರಾಜ್ಯವನ್ನು ಪಂದ್ಯದಲ್ಲಿಟ್ಟು ಸೋತಿಲ್ಲ. ಆದ್ದರಿಂದ ಅವರಿಗೆ ಅವರ ರಾಜ್ಯದ ಭಾಗವನ್ನು ಹಿಂತಿರುಗಿಸಬೇಕೆಂದು ಕೇಳಲು ತಾನು ಅವರ ದೂತನಾಗಿ ಬಂದುದನ್ನು ಹೇಳಿದನು.) ಆದರೆ ಕೌರವನು ಕೃಪಣತನವನ್ನು ತೋರಿ ಪಾಂಡವರು ಹಿಂದೆ ಪಡೆದಿದ್ದ ರಾಜ್ಯವನ್ನು ಕೊಡಲು ಒಪ್ಪದೆ, ಗುರು ದ್ರೋಣ, ಕೃಪ, ಭೀಷ್ಮ ಇವರ ಅಬಿಪ್ರಾಯವನ್ನು ಒಪ್ಪದೆ, ಚಪಲ ಕರ್ಣ ಮೊದಲಾದವರನ್ನು ಕೂಡಿಕೊಂಡು ಕಾಳಗವನ್ನು ನಿಶ್ಚೈಸಿದನು. (ಪಾಂಡವರಿಗೆ ರಾಜ್ಯ ಬೇಕಾದರೆ ಕ್ಷಾತ್ರಧರ್ಮದಂತೆ ಯುದ್ಧದ ಮೂಲಕ ಗೆದ್ದು ಪಡೆಯಲಿ.- ಎಂದು ಉತ್ತರಿಸಿ, ಕಳುಹಿಸಿದನು.)
ನೆನೆದ ಮತವನು ತನ್ನ ತಂದೆಯ
ಮನದ ಮಚ್ಚದೊಳೊರೆದು ಕರ್ಣನ
ನೆನಹಿನಲಿ ಪುಟವಿಟ್ಟು ಶಕುನಿಯ ನೀತಿಯಲಿ ನಿಗುಚಿ |
ಅನುಜ ಮತದಲಿ ವಿಸ್ತರಿಸಿ ಮೈ
ದುನನ ನುಡಿಯಲಿ ಬಣ್ಣವಿಟ್ಟನು
ಜನಪನಪಕೀರ್ತ್ಯಂಗನೆಗೆ ತೊಡಿಸಿದನು ಭೂಷಣವ || ೨೨ ||
ಪದವಿಭಾಗ-ಅರ್ಥ:ನೆನೆದ ಮತವನು(ಅಭಿಪ್ರಾಯವನ್ನು) ತನ್ನ ತಂದೆಯ ಮನದ ಮಚ್ಚದೊಳು (ಒರೆಗಲ್ಲು)+ ಒರೆದು ಕರ್ಣನ ನೆನಹಿನಲಿ (ನೆನಪಿನ) ಪುಟವಿಟ್ಟು ಶಕುನಿಯ ನೀತಿಯಲಿ ನಿಗುಚಿ(ನೆಟ್ಟಗೆ ಮಾಡು, ನೇರವಾಗಿಸು) ಅನುಜ (ತಮ್ಮ- ದುಶ್ಶಾಸನ) ಮತದಲಿ ವಿಸ್ತರಿಸಿ ಮೈದುನನ ನುಡಿಯಲಿ(ಮಾತು) ಬಣ್ಣವಿಟ್ಟನು ಜನಪನ+ ಅಪಕೀರ್ತಿಯ+ ಅಂಗನೆಗೆ(ವನಿತೆ) ತೊಡಿಸಿದನು ಭೂಷಣವ (ಅಲಂಕಾರವಾಗಿ).
ಅರ್ಥ:ಕೌರವನು ತಾನು ನೆನೆದ ಪಾಂಡವರಿಗೆ ರಾಜ್ಯವನ್ನು ಕೊಡಬಾರದು ಎಂಬ ಮತವನ್ನು (ಮತವೆಂಬ- ಚಿನ್ನವನ್ನು), ತನ್ನ ತಂದೆಯ ಮನಸ್ಸಿನ ಒರೆಗಲ್ಲಿ ಒರೆದು- ತಿಕ್ಕಿ, ಕರ್ಣನ ಆಲೋಚನೆಯಲ್ಲಿ ಪುಟವಿಟ್ಟು, ಶಕುನಿಯ ನೀತಿಯಲ್ಲಿ ಬಡಿದು ನೆಟ್ಟಗೆ ಮಾಡಿ ಅನುಜ ದುಶ್ಶಾಸನನ ಆಬಿಪ್ರಾಯದಲ್ಲಿ ವಿಸ್ತರಿಸಿ, ಮೈದುನ ಶಕುನಿಯ ನುಡಿಯಲ್ಲಿ ಬಣ್ಣವಿಟ್ಟನು. ಅದನ್ನು ಜನಪನ-ರಾಜನ ಅಪಕೀರ್ತಿಯೆಂಬ ವನಿತೆಗೆ ಭೂಷಣವಾಗಿ ತೊಡಿಸಿದನು.

ಪಾಂಡವರ ಬಳಿಗೆ ಸಂಜಯನ ರಾಯಭಾರ[ಸಂಪಾದಿಸಿ]

ಹರುಷದಲಿ ಸಂಜಯನಾಗಳೆ
ಕರಿಸಿ ಕುರುಪತಿ ಬುದ್ಧಿಗಲಿಸಿದ
ನರಿನೃಪರ ಪಾಳಯಕೆ ಹೋಹುದು ನುಡಿವುದುರವಣಿಸಿ |
ಧರೆಯ ಬೇಡಿಸಿ ಕಳುಹಿದರಿ ಸಂ
ಗರದೊಳಸಿ ಧಾರೆಯಲಿ ಕೊಡುವೆವು
ಬರಿದೆ ಕೊಟ್ಟೊಡಧರ್ಮವೆಂಬುದು ಧರ್ಮಪುತ್ರಂಗೆ || ೨೩ ||
ಪದವಿಭಾಗ-ಅರ್ಥ:ಹರುಷದಲಿ ಸಂಜಯನ+ ಆಗಳೆ(ಆ ಕೂಡಲೆ) ಕರಿಸಿ ಕುರುಪತಿ ಬುದ್ಧಿಗಲಿಸಿದನು (ಬೋಧಿಸಿದನು)+ ಅರಿನೃಪರ (ಪಾಂಡವರ) ಪಾಳಯಕೆ ಹೋಹುದು(ಶತ್ರುಗಳ ಬಳಿ ಹೋಗುವುದು) ನುಡಿವುದು (ಹೇಳುವುದು)+ ಉರವಣಿಸಿ (ಉತ್ಸಾಹದಿಂದಿರು, ಆತುರಿಸು) ಧರೆಯ (ರಾಜ್ಯವ) ಬೇಡಿಸಿ (ಕೇಳಲು) ಕಳುಹಿದಿರಿ, ಸಂಗರದೊಳು+ ಅಸಿಧಾರೆಯಲಿ (ಯುದ್ಧದಲ್ಲಿ ಕತ್ತಿಯ ಅಲುಗಿನಲ್ಲಿ) ಕೊಡುವೆವು; ಬರಿದೆ ಕೊಟ್ಟೊಡೆ+ ಅಧರ್ಮವು+ ಎಂಬುದು ಧರ್ಮಪುತ್ರಂಗೆ (ಧರ್ಜನಿಗೆ)
ಅರ್ಥ:ಕುರುಪತಿ ಕೌರವನು ಆ ಕೂಡಲೆ ಹರ್ಷದಿಂದ ಮಂತ್ರಿ ಸಂಜಯನನ್ನು ಕರಿಸಿ ಮುಂದಿನ ಕಾರ್ಯವನ್ನು ಬೋಧಿಸಿದನು. ಸಂಜಯನು ಶತ್ರುಗಳಾದ ಪಾಂಡವರ ಪಾಳಯಕ್ಕೆ ಹೋಗುವುದು; ಅಲ್ಲಿ, ಧರ್ಮಪುತ್ರನಿಗೆ,'ಉತ್ಸಾಹದಿಂದ ಆತುರಪಟ್ಟು ರಾಜ್ಯವನ್ನು ಕೊಡಿ ಎಂದು ಬೇಡಿ ದೂತರನ್ನು ಕಳಿಸಿದಿರಿ. ನಿಮಗೆ ರಾಜ್ಯ ಬೇಕಿದ್ದರೆ ಅದನ್ನು ನಾವು ಯುದ್ಧದಲ್ಲಿ ಕತ್ತಿಯ ಅಲುಗಿನಲ್ಲಿ ಕೊಡುವೆವು; ಬರಿದೆ ಕೊಟ್ಟರೆ ಅದು ಕ್ಷಾತ್ರ ನೀತಿಗೆ ಅಧರ್ಮವಾಗುವುದು,' ಎಂದು ಹೇಳುವುದು ಎಂದನು.
ಬೀಳುಕೊಂಡನು ಮಂತ್ರಿ ಪಯಣದ
ಮೇಲೆ ಪಯಣವನೆಯ್ದಿ ಪಾಂಡು ನೃ
ಪಾಲಕರ ಪಾಳೆಯಕೆ ಬಂದನು ರಾಯಗರುಹಿಸಲು |
ಕೇಳಿ ಬೀಡಾರವನು ಬೀಯವ
ಹೇಳಿಸಿದನಾ ಮರುದಿವಸದೊ
ಡ್ಡೋಲಗವ ರಚಿಸಿದನು ಕುಂತೀಸುತನು ಠೀವಿಯಲಿ ೨೪
ಪದವಿಭಾಗ-ಅರ್ಥ:ಬೀಳುಕೊಂಡನು ಮಂತ್ರಿ ಪಯಣದಮೇಲೆ ಪಯಣವನು+ ಎಯ್ದಿ(ಮಾಡಿ) ಪಾಂಡು ನೃಪಾಲಕರ(ರಾಜರ) ಪಾಳೆಯಕೆ ಬಂದನು, ರಾಯಗೆ+ ಅರುಹಿಸಲು (ಅರುಹು ಹೇಳು) ಕೇಳಿ ಬೀಡಾರವನು ಬೀಯವ (ಉಣಿಸು, ಆಹಾರ) ಹೇಳಿಸಿದನು+ ಆ ಮರುದಿವಸದ+ ಒಡ್ಡೋಲಗವ ರಚಿಸಿದನು ಕುಂತೀಸುತನು ಠೀವಿಯಲಿ.
ಅರ್ಥ:ಕೌರವನನ್ನು ಬೀಳ್ಕೊಂಡು, ಮಂತ್ರಿ ಸಂಜಯನು ಪಯಣದಮೇಲೆ ಪಯಣವನ್ನು ಮಾಡಿ ಪಾಂಡು ನೃಪಾಲಕರ ಪಾಳೆಯಕ್ಕೆ ಬಂದನು. ಅವನು ಧರ್ಮರಾಯನಿಗೆ ತಾನು ಕೌರವನ ದೂತನಾಗಿ ಬಂದ ವಿಚಾರವನ್ನು ಹೇಳಿಕಳುಹಿಸಿದನು. ಅದನ್ನು ಧರ್ಮಜನು ಕೇಳಿ ಅವನಿಗೆ ಸೂಕ್ತ ಬೀಡಾರವನ್ನೂ ಆಹಾರವನ್ನೂ ಕೊಡಲು ಹೇಳಿದನು. ಆ ಮರುದಿವಸ ಕುಂತೀಸುತ ಧರ್ಮಜನು ಠೀವಿಯಲ್ಲಿ ಒಡ್ಡೋಲಗವನ್ನು ರಚಿಸಿದನು.
ಹರಿ ವಿರಾಟ ದ್ರುಪದ ಕೈಕೆಯ
ರಿರವು ಬಲವಂಕದಲಿ ವಾಮದ
ಲಿರೆ ವೃಕೋದರ ಫಲುಗುಣಾದಿಗಳಖಿಳ ಮಂತ್ರಿಗಳು |
ತರುಣಿಯರು ಪರಿಮಳದ ಜಂಗಮ
ಭರಣಿಯರು ಮನುಮಥ ವಿರಿಂಚನ
ತರುಣಿಯರು ಕುಳ್ಳಿರ್ದರಸನ ಹಿಂದೆ ಮೋಹರಿಸಿ || ೨೫ ||
ಪದವಿಭಾಗ-ಅರ್ಥ:ಹರಿ(ಕೃಷ್ಣ) ವಿರಾಟ ದ್ರುಪದ ಕೈಕೆಯರ+ ಇರವು(ಇರುವಿಕೆ) ಬಲವಂಕದಲಿ ವಾಮದಲಿ (ಎಡ)+ ಇರೆ ವೃಕೋದರ ಫಲುಗುಣಾದಿಗಳು+ ಅಖಿಳ ಮಂತ್ರಿಗಳು ತರುಣಿಯರು ಪರಿಮಳದ ಜಂಗಮ ಭರಣಿಯರು ಮನುಮಥ ವಿರಿಂಚನತರುಣಿಯರು ಕುಳ್ಳಿರ್ದರಸನ ಹಿಂದೆ ಮೋಹರಿಸಿ (ಗುಂಪಾಗಿ).
ಅರ್ಥ:ಆ ಒಡ್ಡೋಲಗದಲ್ಲಿ, ಕೃಷ್ಣ, ವಿರಾಟ, ದ್ರುಪದ, ಕೈಕೆಯರ ಇರುವಿಕೆಯು ಬಲವಂಕದಲಿ- ಬಲಭಾಗದಲ್ಲಿ; ವೃಕೋದರ ಫಲ್ಗುಣಾದಿಗಳು ಅಖಿಲ ಮಂತ್ರಿಗಳು ಎಡದಲ್ಲಿ ಇರಲು, ತರುಣಿಯರು ಪರಿಮಳದ ಜಂಗಮ ಭರಣಿಯರು ಮನ್ಮಥ ವಿರಿಂಚನ ತರುಣಿಯರು ಗುಂಪಾಗಿ ಅರಸ ಧರ್ಮಜನ ಹಿಂದೆ ಕುಳಿತಿದ್ದರು.
ಕರಣಿಕರು ಮಾಂತ್ರಿಕರು ವೈದ್ಯರು
ಸರಸ ಕವಿಗಳು ತಾರ್ಕಿಕರು ವರ
ಭರತ ನಿಪುಣರು ಗಾಯಕರು ಪಾಠಕರು ವಾಗ್ಮಿಗಳು |
ಕರಿತುರಗ ಶಿಕ್ಷಕರು ಲಕ್ಷಣ
ಪರಿಣತರು ಕೋವಿದರು ಸಾವಂ
ತರರು ಪರಿಹಾಸಕರು ವೈತಾಳಿಕರು ರಂಜಿಸಿತು || ೨೬ ||
ಪದವಿಭಾಗ-ಅರ್ಥ:ಕರಣಿಕರು (ಲೆಕ್ಕಬರೆಯುವವರು), ಮಾಂತ್ರಿಕರು, ವೈದ್ಯರು, ಸರಸ ಕವಿಗಳು, ತಾರ್ಕಿಕರು, ವರಭರತ ನಿಪುಣರು (ನೃತ್ಯನಿಪುಣರು), ಗಾಯಕರು, ಪಾಠಕರು(ವೇದ ಪಾಥಕರು) ವಾಗ್ಮಿಗಳು, ಕರಿತುರಗ (ಆನೆ, ಕುದುರೆ) ಶಿಕ್ಷಕರು, ಲಕ್ಷಣ ಪರಿಣತರು, ಕೋವಿದರು (ವಿದ್ವಾಂಸರು), ಸಾವಂತರರು (ಸಾಮಂತ ರಾಜರು), ಪರಿಹಾಸಕರು ವೈತಾಳಿಕರು (ಪ್ರಾತಃಕಾಲದಲ್ಲಿ ರಾಜನನ್ನು ನಿದ್ರೆಯಿಂದ ಎಚ್ಚರಿಸುವವನು,ಮಂಗಳಪಾಠಕ,ಹೊಗಳು ಭಟ್ಟ) ರಂಜಿಸಿತು (ಶೋಭಿಸಿತು).
ಅರ್ಥ:ಧರ್ಮಜನ ಒಡ್ಡೋಲಗವು ಕರಣಿಕರು, ಮಾಂತ್ರಿಕರು, ವೈದ್ಯರು, ಸರಸ ಕವಿಗಳು, ತಾರ್ಕಿಕರು, ನೃತ್ಯನಿಪುಣರು, ಗಾಯಕರು, ವೇದ ಪಾಥಕರು ವಾಗ್ಮಿಗಳು, ಕರಿತುರಗ ಶಿಕ್ಷಕರು, ಲಕ್ಷಣ ಪರಿಣತರು, ವಿದ್ವಾಂಸರು, ಸಾಮಂತ ರಾಜರು, ಪರಿಹಾಸಕರು ವೈತಾಳಿಕರು ಇವರುಗಳಿಂದ ತುಂಬಿ ರಂಜನೀಯವಾಗಿತ್ತು.
ಮಾವುತರು ಚಿತ್ರಕರು ಮಲ್ಲರು
ರಾವುತರು ಶಿಲ್ಪಿಗರು ಮಾಯಾ
ಕೋವಿದರು ಕರ್ಣಾಂಘ್ರಿವಿಕಳರು ಮೂಕ ವಾಮನರು |
ದ್ರಾವಕರು ಜೂಜಾಳಗಳು ವರ
ದಾವಣಿಯರು ವಿದೇಶಿಗಳು ಮೃಗ
ಜೀವಿಗಳು ಶಾಕುನಿಕರೆಸೆದರು ರಾಜಸಭೆಯೊಳಗೆ || ೨೭ ||
ಪದವಿಭಾಗ-ಅರ್ಥ:ಮಾವುತರು ಚಿತ್ರಕರು ಮಲ್ಲರು ರಾವುತರು ಶಿಲ್ಪಿಗರು ಮಾಯಾ ಕೋವಿದರು(ವಿದ್ಯೆಯ ನಿಪುಣರು) ಕರ್ಣಾಂಘ್ರಿ ವಿಕಳರು(ವಿಕಲ ಅಂಗದವರು) ಮೂಕ ವಾಮನರು(ಕುಳ್ಳರು) ದ್ರಾವಕರು(ಹೆಣ್ಣನ್ನು ಆಕರ್ಶಿಸುವವರು, ಬಟ್ಟಿ ಇಳಿಸಿ ಔಷಧಿ ತಯಾರಿಸುವವರು) ಜೂಜಾಳಗಳು ವರದಾವಣಿಯರು (ಪ್ರಾಣಿಗಳ ಮೂಗಿಗೆ ದಾರ ಹಾಕುವವರು ) ವಿದೇಶಿಗಳು ಮೃಗಜೀವಿಗಳು ಶಾಕುನಿಕರು(ಶಕುನಿ ಹಕ್ಕಿ ಹಿಡಿಯುವವರು, ಮೋಸಗಾರ,)+ ಎಸೆದರು ರಾಜಸಭೆಯೊಳಗೆ.
ಅರ್ಥ:ಧರ್ಮಜನ ರಾಜಸಬೆಯಲ್ಲಿ, 'ಮಾವುತರು, ಚಿತ್ರಕರು, ಮಲ್ಲರು, ರಾವುತರು, ಶಿಲ್ಪಿಗರು, ಮಾಯಾ ವಿದ್ಯೆಯ ನಿಪುಣರು, ಕರ್ಣಾಂಘ್ರಿ ವಿಕಲರು, ಮೂಕರು, ವಾಮನರು, ದ್ರಾವಕರು, ಜೂಜಾಳಗಳು, ಉತ್ತಮ ದಾವಣಿಯರು, ವಿದೇಶಿಗಳು, ಮೃಗಜೀವಿಗಳು, ಶಕುನಿ ಹಕ್ಕಿ ಹಿಡಿಯುವವರು,' ಇದ್ದು ಶೋಭಿಸಿದರು.
ಸಾಲಮಕುಟದ ರತ್ನ ರಶ್ಮಿಯ
ದಾಳಗೊಂಡುದು ತಮವನಿನ್ನಾ
ಮೇಲುಪೋಗಿನ ಕಿತ್ತ ಖದ್ಗಕೆ ಪ್ರಭೆಯ ಹಂಗೇಕೆ |
ಮೇಲೆ ಕೈದೀವಿಗೆಗಳಧಿಕ
ಜ್ವಾಲೆಯದು ಪುನರುಕ್ತವೆನೆ ಭೂ
ಪಾಲನೋಲಗವೆಸೆದುದಿಂದ್ರನ ಸಭೆಗೆ ವೆಗ್ಗಳಿಸಿ ೨೮
ಪದವಿಭಾಗ-ಅರ್ಥ:ಸಾಲಮಕುಟದ ರತ್ನ ರಶ್ಮಿಯದು+ ಆಳಗೊಂಡುದು(ತುಂಬಿತ್ತು) ತಮವನು(ಕತ್ತಲೆ)+ ಇನ್ನು+ ಆ ಮೇಲುಪೋಗಿನ(ಉಬ್ಬು, ಹೆಚ್ಚು,) ಕಿತ್ತ ಖದ್ಗಕೆ ಪ್ರಭೆಯ ಹಂಗೇಕೆ; ಮೇಲೆ ಕೈದೀವಿಗೆಗಳ+ ಅಧಿಕ ಜ್ವಾಲೆಯದು ಪುನರುಕ್ತವೆನೆ (ಅನಗತ್ಯ ಎನ್ನುವಂತೆ) ಭೂಪಾಲನ+ ಒಲಗವು+ ಎಸೆದುದು+ ಇಂದ್ರನ ಸಭೆಗೆ ವೆಗ್ಗಳಿಸಿ(ಮಿಗಿಲಾಗಿ)
ಅರ್ಥ:ಧರ್ಮಜನ ರಾಜಸಬೆಯು ಸಾಮಂತರಾಜರು ಧರಿಸಿದ ಸಾಲು ಸಾಲು ಮಕುಟದ ರತ್ನ ರಶ್ಮಿಯ- ಬೆಳಕು ತುಂಬಿತ್ತು. ಕತ್ತಲೆಯ ದಟ್ಟತೆ ಕಿತ್ತ ಖಡ್ಗಕ್ಕೆ ಬೆಳಕಿನ ಪ್ರಭೆಯ ಹಂಗೇಕೆ ಬೇಕು (ಎನ್ನುವಂತೆ); ಸಭೆಯ ಮೇಲುಗಡೆ ಕೈದೀವಿಗೆಗಳ ಅಧಿಕ ಜ್ವಾಲೆಯು ತಾನು ಅನಗತ್ಯ ಎನ್ನುವಂತೆ ಭೂಪಾಲನ ಒಡ್ಡೋಲಗವು ಇಂದ್ರನ ಸಭೆಗೆ ಮಿಗಿಲಾಗಿ ಶೋಭಿಸಿತು.
ಕಡಕಡೆಗೆ ಫಡ ಮಾಣು ಮಾಣೆಂ
ದುಲಿಯೆ ಕಂಚುಕಿ ನಿಕರವಂಗೈ
ತಳದ ಬಾಯಲಿ ರಾಯರಿರ್ದರು ಮಣಿದ ಮಕುಟದಲಿ |
ನಳಿನನಾಥನು ನಗುತ ಪರ ಮಂ
ಡಲದ ಶಿಷ್ಟನು ಬರಲಿಯೆನೆ ಬಾ
ಗಿಲಲಿ ಕೈದುವ ಕೊಂಡೊ ಹೊಗಿಸಿದರಂದು ಸಂಜಯನ || ೨೯ ||
ಪದವಿಭಾಗ-ಅರ್ಥ:ಕಡಕಡೆಗೆ ಫಡ ಮಾಣು ಮಾಣು+ ಎಂದು+ ಉಲಿಯೆ (ಹೇಳಲು) ಕಂಚುಕಿ (ದ್ವಾರಪಾಲಕ) ನಿಕರವ (ಸಮೂಹವನ್ನು)+ ಅಂಗೈತಳದ ಬಾಯಲಿ(ಬಾಯಿಯ ಮೇಲೆ ಅಂಗಯ ಇಟ್ಟು ಮೌನವನ್ನು ಸೂಚಿಸಲು) ರಾಯರು+ ಇರ್ದರು ಮಣಿದ ಮಕುಟದಲಿ ನಳಿನನಾಥನು ನಗುತ ಪರ ಮಂಡಲದ ಶಿಷ್ಟನು (ಪ್ರತಿಷ್ಠೆಯುಳ್ಳ ದೂತನು) ಬರಲಿ+ ಯೆ+ ಎನೆ ಬಾಗಿಲಲಿ ಕೈದುವ (ಆಯುಧ, ಶಸ್ತ್ರ) ಕೊಂಡು (ಪಡೆದು) ಹೊಗಿಸಿದರು+ ಅದು ಸಂಜಯನ.
ಅರ್ಥ:ಧರ್ಮಜನ ಒಡ್ಡೋಲಗದಲ್ಲಿ ಆ ಕಡೆ ಈ ಕಡೆಗೆ ಫಡ, ಮಾಣು ಮಾಣು- ಸದ್ದು ಮಾಡಬೇಡಿ ಎಂದು ಹೇಳಲು ದ್ವಾರಪಾಲಕನು ಸಮೂಹವನ್ನು ತನ್ನ ಬಾಯಿಯ ಮೇಲೆ ಅಂಗಯ ಇಟ್ಟು ಮೌನವಾಗಿರಲು ಸೂಚಿಸಲು, ಮಣಿಯ ಮಕುಟದ ರಾಯರು- ರಾಜರು ಮೌನವಾಗಿ ಇದ್ದರು. ಆಗ ಕೃಷ್ಣನು ನಗುತ್ತಾ ಪರ ಮಂಡಲದ- ಪರ ರಾಜ್ಯದ ಪ್ರತಿಷ್ಠೆಯುಳ್ಳ ದೂತನು- ರಾಯಭಾರಿ ಬರಲಿ, ಎನ್ನಲು, ಬಾಗಿಲಲ್ಲಿದ್ದ ದೂತರು ರಾಯಭಾರಿ ಸಂಜಯನಲ್ಲಿದ್ದ ಆಯುಧವನ್ನು ಪಡೆದುಕೊಂಡು ಅವನನ್ನು ಸಭೆಗೆ ಹೊಗಿಸಿದರು.
ಬಂದು ಕಾಣಿಕೆಗೊಟ್ಟು ಹರುಷದ
ಲಂದು ಮೈಯಿಕ್ಕಿದನು ಭಯದಲಿ
ನಿಂದು ನೋಡಿದನೆಡಬಲದ ಮಹಾಮಹೀಶ್ವರರ |
ಸಂದ ಯಮನೋ ನಿರುತಿಯೋ ಪೌ
ರಂದರನೋ ಪಾವಕನೊ ವರುಣನೊ
ಮಂದಿಯಿದು ಮಾನಸಗೆ ಮಾಮಾಯೆನುತ ಬೆರಗಾದ || ೩೦ ||
ಪದವಿಭಾಗ-ಅರ್ಥ:ಬಂದು ಕಾಣಿಕೆ+ ಗೊ+ ಕೊಟ್ಟು ಹರುಷದಲಿ+ ಅಂದು ಮೈಯಿಕ್ಕಿದನು (ನಮಿಸಿದನು), ಭಯದಲಿ ನಿಂದು ನೋಡಿದನು+ ಎಡಬಲದ ಮಹಾಮಹೀಶ್ವರರ, ಸಂದ (ಹಿಂದೆ ಆಗಿಹೊದ, ಯಮನೋ, ನಿರುತಿಯೋ, ಪೌರಂದರನೋ (ಇಂದ್ರನೋ), ಪಾವಕನೊ(ಅಗ್ನಿಯೋ), ವರುಣನೊ, ಮಂದಿಯಿದು (ಈ ಜನರು), ಮಾನಸಗೆ(ಮನುಷ್ಯರೇ) ಮಾಮಾ (ಅಮಮಾ- ಅಭ್ಭಾ ಯೆನುತ ಬೆರಗಾದ.
ಅರ್ಥ:ಸಂಜಯನು ಧರ್ಮಜನ ಸಭೆಗೆ ಬಂದು ಅವನಿಗೆ ಕಾಣಿಕೆಯನ್ನು ಕೊಟ್ಟು, ಹರ್ಷದಿಂದ ಅಂದು ಅಡ್ಡಬಿದ್ದು ನಮಿಸಿದನು. ಭಯದಿಂದ ನಿಂತು ಎಡಬಲದ ಮಹಾಮಹೀಶ್ವರರನ್ನು, ನೋಡಿದನು; ಇವರು ಹಿಂದಿನ ಯಮನೋ, ನಿರುತಿಯೋ, ಇಂದ್ರನೋ, ಅಗ್ನಿಯೋ, ವರುಣನೊ ಇವರು ಮನುಷ್ಯರೇ! ದೇವಸಭೆಯಂತಿದೆ ಎಂದು, ಅಮಮಾ- ಅಬ್ಬಾ! ಎನ್ನುತ್ತಾ ಬೆರಗಾದ.(ಮಂದಿಯಿದು ಮಾನಸಗೆ ಮಾಮಾಯೆನುತ ಬೆರಗಾದ).
ಸುಳಿದಲೆಯ ಕೆಮ್ಮೀಸೆಗಳ ಮಿಗೆ
ಬೆಳೆದ ಮುಡುಹುಗಳೊಡ್ಡಿದುರದು
ಚ್ಚಳಿತ ರೋಮದ ನೊಸಲ ಡೋರಿಯ ತಲೆಯ ಕಲಿಮುಖದ |
ಬಲಿದ ಹುಬ್ಬಿನ ತೋರ ತೋಳಿನ
ಹೊಳೆವಡಾಯುಧ ಮೊಗದ ಹೊಗರಿನ
ಕಲಿಮನದ ಕದನ ಪ್ರಚಂಡರ ಕಂಡು ಬೆರಗಾದ || ೩೧ ||
ಪದವಿಭಾಗ-ಅರ್ಥ:ಸುಳಿ+ ದ+ ತಲೆಯ ಕೆಮ್ಮೀಸೆಗಳ (ಕೆಂಪು ಮೀಸೆಯುಳ್ಳವರ) ಮಿಗೆ ಬೆಳೆದ ಮುಡುಹುಗಳ (ಹೆಗಲು)+ ಒಡ್ಡಿದ+ ಉರದ (ಎದೆ, ವಕ್ಷಸ್ಥಳ)+ ಉಚ್ಚಳಿತ (ಎದ್ದ) ರೋಮದ, ನೊಸಲ ಡೋರಿಯ(ತಗ್ಗಿನ), ತಲೆಯ ಕಲಿಮುಖದ, ದಪ್ಪ ತೋಳಿನ, ಬಲಿದ ಹುಬ್ಬಿನ, ತೋರ (ದಪ್ಪ) ತೋಳಿನ, ಹೊಳೆವ+ ಅಡಾಯುಧ, ಮೊಗದ ಹೊಗರಿನ, ಮೊಗದ ಹೊಗರುನ(ಕಾಂತಿಯ) ಕಲಿಮನದ(ಗಟ್ಟಿ ಶೂರ ಮನಸ್ಸಿನ) ಕದನ ಪ್ರಚಂಡರ(ಯುದ್ಧದಲ್ಲಿ ಮಹಾವೀರರ) ಕಂಡು ಬೆರಗಾದ.
ಅರ್ಥ:ಕೌರವನ ರಾಯಭಾರಿ ಸಂಜಯನು ಧರ್ಮಜನ ಸಭೆಯ ಒಳಗೆ ಬಂದಾಗ, ಸುಳಿಯ ತಲೆಯ, ಕೆಂಪು ಮೀಸೆಯುಳ್ಳವರ, ಮಿಗೆ ಬೆಳೆದ ಅಗಲವಾದ ಹೆಗಲಿನ, ಮುಂದೆಒಡ್ಡಿದ ಎದೆಯ, ಎದ್ದ ರೋಮದ, ತಗ್ಗಿನ ಹಣೆಯ, ಶೌರ್ಯದ ಮುಖದ ತಲೆಯ, ಬಲಿದ ಹುಬ್ಬಿನ, ಬಲಿದ-ಗಂಟಿಕ್ಕಿದ ಹುಬ್ಬಿನ, ಹೊಳೆವ ಅಡಾಯುಧವೆಂಬ ಕತ್ತಿಯ, ಕಾಂತಿಯುತ ಮುಖದ, ಗಟ್ಟಿ ಶೂರ ಮನಸ್ಸಿನ ಯುದ್ಧದಲ್ಲಿ ಮಹಾವೀರರಾದವರನ್ನು ಕಂಡು ಬೆರಗಾದನು.
ಹಳುವದಲಿ ಹನ್ನೆರಡು ವರುಷವು
ತೊಳಲಿದರುಸಿರಿ ಹೋಗಿ ನಿಮಿಷಕೆ
ನೆಲದ ರಾಯರು ನೆರೆದು ಜೀಯೆನುತಿದೆ ಮಹಾದೇವ |
ನಳಿನನಾಭನ ಕರುಣದಳತೆಗೆ
ನಿಲುಕದಿಹುದೇನುಂಟು ಮುರರಿಪು
ಮುನಿದೊಡಾವನ ಮುರಿಯನೆಂದನು ತನ್ನ ಮನದೊಳಗೆ || ೩೨ ||
ಪದವಿಭಾಗ-ಅರ್ಥ:ಹಳುವದಲಿ(ಕಾಡಿನಲ್ಲಿ) ಹನ್ನೆರಡು ವರುಷವು ತೊಳಲಿದರು(ಕಷ್ಟಪಟ್ಟರು) ಸಿರಿ ಹೋಗಿ, ನಿಮಿಷಕೆ ನೆಲದ ರಾಯರು ನೆರೆದು (ಒಟ್ಟು ಸೇರಿ) ಜೀ+ ಯೆನುತಿದೆ ಮಹಾದೇವ; ನಳಿನನಾಭನ ಕರುಣದ+ ಅಳತೆಗೆ ನಿಲುಕದಿಹುದು (ನಿಲುಕದೆ- ಸಿಗದೆ ಇರುವುದು) + ಏನುಂಟು ಮುರರಿಪು ಮುನಿದೊಡೆ (ಸಿಟ್ಟಾದರೆ)+ ಆವನ(ಯಾವನನ್ನೂ) ಮುರಿಯನೆ+ ಎಂದನು ತನ್ನ ಮನದೊಳಗೆ.
ಅರ್ಥ:ದೊಡ್ಡ ರಾಜಸಬೆಯಲ್ಲಿ ಠೀವಿಯಿಂದ ಕುಳಿತ ಪಾಂಡವರನ್ನೂ, ಅಲ್ಲಿ ಸೇರಿದ ರಾಜರನ್ನೂ, ಕೃಷ್ಣನನ್ನೂ, ನೋಡಿ ಸಂಜಯನು ಈ ಪಾಂಡವರು ಕಾಡಿನಲ್ಲಿ ಹನ್ನೆರಡು ವರುಷವೂ ರಾಜ್ಯ ಸಂಪತ್ತು ಹೋಗಿ ತೊಳಲಿ ಕಷ್ಟಪಟ್ಟರು. ಆದರೆ ಪುನಃ ಬಂದ ಅವರು ನಿಮಿಷದಲ್ಲಿ ನೆಲದ ರಾಯರು- ಭುಮಿಯ ಒಡೆಯರಾದ ಅನೇಕ ರಾಜರು ನೆರೆದು ಧರ್ಮಜನಿಗೆ 'ಜೀ' ಎನ್ನತ್ತಿದೆ ಮಹಾದೇವ! ನಳಿನನಾಭ ಕೃಷ್ನನ ಕರುಣೆಯ ಅಳತೆಗೆ ನಿಲುಕದೆ ಇರುವುದು ಏನಿದೆ! ಮುರರಿಪು ಕೃಷ್ನನು ಮುನಿದರೆ ಯಾರನ್ನದರೂ ನಾಶಮಾಡದೆ ಬಿಡುವನೆ, ಎಂದು ತನ್ನ ಮನಸ್ಸಿನಲ್ಲಿ ಯೋಚಿಸಿದನು.
ಇಳುಹಿದನು ಮಹಿಯಲಿ ಮಹೀಪತಿ
ಕಳುಹಿದುಡುಗೊರೆಗಳನು ಭೂಪತಿ
ತಿಲಕ ಧರ್ಮಜನೊಪ್ಪ್ಪುಗೊಂಡನು ನೃಪನ ಪಾವುಡವ |
ಒಲವು ಬೊಪ್ಪನಲುಂಟಲಾ ಮ
ಕ್ಕಳನು ಮರೆಯನು ಲೇಸು ಸಂಜಯ
ತಿಳುಹು ತಾತನ ಕುಶಲವನು ಗಾಂಧಾರಿ ದೇವಿಯರ || ೩೩ ||
ಪದವಿಭಾಗ-ಅರ್ಥ:ಇಳುಹಿದನು ಮಹಿಯಲಿ (ಭೂಮಿಯಲ್ಲಿ) ಮಹೀಪತಿ (ಕೌರವನು ತಂದೆಯ ಹೆಸರಲ್ಲಿ ರಾಜ್ಯವಾಳುತ್ತಿದ್ದನು ಅವನು ಅನಭಿಷಕ್ತದೊರೆ- ಧೃತರಾಷ್ಟ್ರ ರಾಜ)ಕಳುಹಿದ+ ಉಡುಗೊರೆಗಳನ್ನು, ಭೂಪತಿತಿಲಕ ಧರ್ಮಜನು+ ಒಪ್ಪ್ಪುಗೊಂಡನು(ಸ್ವೀಕರಿಸಿದನು) ನೃಪನ ಪಾವುಡವ (ಬಟ್ಟೆ, ವಸ್ತ್ರ, ತಲೆಗೆ ಸುತ್ತುವ ವಸ್ತ್ರ, ಪೇಟ) ಒಲವು (ಪ್ರೀತಿ) ಬೊಪ್ಪನಲಿ (ತಂದೆ)+ ಉಂಟಲಾ ಮಕ್ಕಳನು ಮರೆಯನು ಲೇಸು, ಸಂಜಯ ತಿಳುಹು ತಾತನ ಕುಶಲವನು ಗಾಂಧಾರಿ ದೇವಿಯರ.
ಅರ್ಥ:ಸಂಜಯನು ರಾಜ ಧೃತರಾಷ್ಟ್ರ (ಕೌರವ)ನು ಕಳುಹಿಸಿದ ಉಡುಗೊರೆಗಳನ್ನು ನೆಲಕ್ಕೆ ಇಳುಹಿದನು. ಮಹೀಪತಿ ಧೃತರಾಷ್ಟ್ರನು ಕಳುಹಿಸಿದ+ ಉಡುಗೊರೆಗಳನ್ನು, ಭೂಪತಿತಿಲಕ ಧರ್ಮಜನು ನೃಪನುಡುವ ಬಟ್ಟೆ,ತಲೆಗೆ ಸುತ್ತುವ ವಸ್ತ್ರ, ಪೇಟಗಳನ್ನು ಸ್ವೀಕರಿಸಿದನು. ಧರ್ಮಜನು ನಮ್ಮ ದೊಡ್ಡಪ್ಪನಿಗೆ ನಮ್ಮಲ್ಲಿ ಪ್ರೀತಿಯು ಉಂಟಲಾ! ಅವನು ಮಕ್ಕಳನ್ನು ಮರೆಯುವುದಿಲ್ಲ; ಲೇಸು, ಸಂಜಯ ತಾತನ ಮತ್ತು ಗಾಂಧಾರಿ ದೇವಿಯರ ಕುಶಲವನ್ನು ತಿಳುಹಿಸು,'ಎಂದನು.
ಗುರು ಪಿತಾಮಹ ಗೌತಮರ ಸ
ಚ್ಚರಣಕಮಲಂಗಳಿಗೆ ಕುಶಲವೆ
ಗುರುಸುತನು ಸುಕ್ಷೇಮಿಯೇ ಕುರುರಾಯನಿರವೆಂತು |
ಕುರುಪತಿಯ ಸೋದರರು ಮಕ್ಕಳು
ಸರಸಿಜಾನನೆ ಭಾನುಮತಿ ಮಿ
ಕ್ಕರಸಿಯರು ಕರ್ಣಾದಿಗಳು ನಿರ್ವೃತರೆ ಹೇಳೆಂದ || ೩೪ ||
ಪದವಿಭಾಗ-ಅರ್ಥ:ಗುರು ಪಿತಾಮಹ ಗೌತಮರ ಸಚ್ಚರಣಕಮಲಂಗಳಿಗೆ(ಪಾದಗಳಿಗೆ) ಕುಶಲವೆ? ಗುರುಸುತನು ಸುಕ್ಷೇಮಿಯೇ? ಕುರುರಾಯನ+ ಇರವು+ ಎಂತು? ಕುರುಪತಿಯ ಸೋದರರು ಮಕ್ಕಳು ಸರಸಿಜಾನನೆ ಭಾನುಮತಿ, ಮಿಕ್ಕ+ ಅರಸಿಯರು, ಕರ್ಣಾದಿಗಳು ನಿರ್ವೃತರೆ ಹೇಳೆಂದ.
ಅರ್ಥ:ಧರ್ಮಜನು ಸಂಜಯನನ್ನು ಕುರಿತು ಎಲ್ಲರ ಕುಶಲವನ್ನು ಕೇಳಿದನು,'ಗುರುದ್ರೋಣ, ಪಿತಾಮಹ ಭೀಷ್ಮ, ಗೌತಮ- ಕೃಪರ, ಸತ್ ಪಾದಗಳಿಗೆ ಕುಶಲವೆ? ಗುರುಸುತ ಅಶ್ವತ್ಥಾಮನು ಸುಕ್ಷೇಮಿಯೇ? ಕುರುರಾಯನ ಇರವಿಕೆ ಹೇಗಿದೆ? ಕುರುಪತಿಯ ೯೯ ಸೋದರರು, ಮಕ್ಕಳು, ಕೌರವನ ಪತ್ನಿ ಸರಸಿಜಾನನೆ ಭಾನುಮತಿ, ಮಿಕ್ಕ ಅರಸಿಯರು, ಕ್ಷೇಮವೇ? ಕರ್ಣಾದಿಗಳು ನಿರ್ವೃತ- ತೃಪ್ತರೆ ಹೇಳು,'ಎಂದ.
ಸುಖಿಗಳನಿಬರು ಜೀಯ ನಿಮ್ಮಯ
ನಿಖಿಳ ಭಾಂಧವರನು ಸಹೋದರ
ಸಖ ಸುತಾದಿಗಳನು ಪುರೋಹಿತ ಪೌರ ಪುರಜನದ |
ಮಖ ಸಮುದ್ಭವೆ ಮೊದಲು ಪಂಕಜ
ಮುಖಿಯರನು ಬೆಸಗೊಂಡು ಕಳುಹಿದ
ಖಿಳ ಕುರುನಂದನರು ಭೀಷ್ಮ ದ್ರೋಣ ಕೃಪರೆಂದ || ೩೫ ||
ಪದವಿಭಾಗ-ಅರ್ಥ:ಸುಖಿಗಳು+ ಅನಿಬರು ಜೀಯ, ನಿಮ್ಮಯ ನಿಖಿಳ ಭಾಂಧವರನು ಸಹೋದರ ಸಖ ಸುತಾದಿಗಳನು, ಪುರೋಹಿತ ಪೌರ ಪುರಜನದ ಮಖ-ಸಮುದ್ಭವೆ (ಯಜ್ಞಕುಂಡದಿಂದ ಹುಟ್ಟಿದವಳು) ಮೊದಲು ಪಂಕಜಮುಖಿಯರನು ಬೆಸಗೊಂಡು (ಕೇಳಿ) ಕಳುಹಿದ+ ಅಖಿಳ ಕುರುನಂದನರು ಭೀಷ್ಮ ದ್ರೋಣ ಕೃಪರು+ ಎಂದ
ಅರ್ಥ:ಸಂಜಯನು,' ಅವರೆಲ್ಲರೂ ಸುಖವಾಗಿದ್ದಾರೆ, ಜೀಯ; ನಿಮ್ಮ ಅಖಿಲ ಭಾಂಧವರನ್ನೂ ಸಹೋದರರು, ಸಖರು, ಸುತಾದಿಗಳನ್ನೂ, ಪುರೋಹಿತ, ಪೌರ, ಪುರಜನದ, ಮತ್ತುದ್ರೌಪದಿ ಮೊದಲುಗೊಂಡು ಉಳಿದ ಪಂಕಜಮುಖಿಯರಾದ ವನಿತೆಯರ ಕ್ಷೇಮವನ್ನು ವಿಚಾರಿಸಲು, ಅಖಿಳ ಕುರುನಂದನರು, ಭೀಷ್ಮ ,ದ್ರೋಣ, ಕೃಪರು, ನನ್ನನ್ನು ಕಳುಹಿದರು,'ಎಂದ.
ಮುನ್ನ ಭೀಷ್ಮ ದ್ರೋಣ ಗೌತಮ
ರುನ್ನತದ ಕಾರುಣ್ಯದಲಿ ಸಂ
ಪನ್ನ ಸಾಹಸರಾದೆವಾಚರಿಸಿದೆವು ಧರ್ಮವನು
ಇನ್ನು ಧೃತರಾಷ್ಟ್ರಾವನೀಶನು
ತನ್ನ ಮಕ್ಕಳ ಬಾಂಧವ ಪ್ರತಿ
ಪನ್ನತೆಯ ನೆರೆ ಕಾಬನೆಂದನು ಧರ್ಮಸುತನು ನಗುತ ೩೬
ಪದವಿಭಾಗ-ಅರ್ಥ:ಮುನ್ನ ಭೀಷ್ಮ ದ್ರೋಣ ಗೌತಮರು+ ಉನ್ನತದ ಕಾರುಣ್ಯದಲಿ ಸಂಪನ್ನ ಸಾಹಸರಾದೆವು+ ಆಚರಿಸಿದೆವು ಧರ್ಮವನು, ಇನ್ನು ಧೃತರಾಷ್ಟ್ರಾವನೀಶನು(ರಾಜನು) ತನ್ನ ಮಕ್ಕಳ ಬಾಂಧವ ಪ್ರತಿಪನ್ನತೆಯ (ಒಪ್ಪಿಗೆಯಾದುದು, ಸ್ವೀಕೃತವಾದುದು) ನೆರೆ ಕಾಬನೆಂದನು(ಕಾಯುವನು) ಧರ್ಮಸುತನು ನಗುತ
ಅರ್ಥ:ಧರ್ಮಸುತನು ನಗುತ್ತಾ,'ನಾವು ಮೊದಲು ಭೀಷ್ಮ ದ್ರೋಣ ಗುರು ಕೃಪರ ಉನ್ನತವಾದ ಕರುಣೆಯಲ್ಲಿ ಸಂಪನ್ನರೂ ಸಾಹಸಿಗಳೂ ಆದೆವು; ನಾವು ಮಾತಿನಂತೆ ವನವಾಸಮಾಡಿ ಧರ್ಮವನ್ನು ಆಚರಿಸಿದೆವು. ಇನ್ನು ಧೃತರಾಷ್ಟ್ರ ರಾಜನು, ತನ್ನ ಮಕ್ಕಳ, ಬಾಂಧವರ ಸ್ವೀಕೃತವಾದ ಹಿತವನ್ನು ಕಾಯುವನು ಎಂದು ನನ್ನ ಅಭಿಲಾಷೆ,' ಎಂದನು

ಕೌರವನ ವಿಗ್ರಹದ ಮಾತುಗಳು - ಸಂಜಯನ ವರದಿ[ಸಂಪಾದಿಸಿ]

ಏನು ಬಂದಿಹ ಹದನು ನಿಮ್ಮವ
ರೇನನೆಂದರು ಕುರುಕುಲೇಶ್ವರ
ನೇನೆಕ್ಕಟಿ ಬುದ್ಧಿಗಲಿಸಿದನವರ ಮಾತುಗಳ |
ಏನುವನು ನೀನುಳುಹದಿರು ವಿನ
ಯಾನುಗತವಾಗಿರಲಿ ಮೇಣ್ ಶೌ
ರ್ಯಾನುಗತವಾಗಿರಲಿ ಬಿನ್ನವಿಸೆಂದನಸುರಾರಿ || ೩೭ ||
ಪದವಿಭಾಗ-ಅರ್ಥ:ಏನು ಬಂದಿಹ ಹದನು(ವಿಚಾರ) ನಿಮ್ಮವರು+ ಏನನೆಂದರು ಕುರುಕುಲೇಶ್ವರನು+ ಏನುನು+ ಎಕ್ಕಟಿ (ರಹಸ್ಯವಾಗಿ) ಬುದ್ಧಿಕಲಿಸಿದನು+, ಅವರ ಮಾತುಗಳ ಏನುವನು(ಏನನ್ನೂ) ನೀನು+ ಉಳುಹದಿರು ವಿನಯ+ ಅನುಗತವಾಗಿರಲಿ (ವಿನಯದ ಮಾತಾಗಿರಲಿ) ಮೇಣ್ ಶೌರ್ಯ+ ಅನುಗತವಾಗಿರಲಿ(ಕೂಡಿದ) (ಶೌರ್ಯದ- ಕೋಪದ ಮಾತಾಗಿರಲಿ), ಬಿನ್ನವಿಸು(ಹೇಳು)+ ಎಂದನು+ ಅಸುರಾರಿ(ಕೃಷ್ಣ)
ಅರ್ಥ:ಆಗ ಕೃಷ್ನನು, ಸಂಜಯನಿಗೆ,'ನೀನು ಬಂದಿರುವ ವಿಚಾರವೇನು? ನಿಮ್ಮವರು ನಮಗೆ ಏನನ್ನು ಹೇಳಲು ಹೇಳಿದರು. ಕುರುಕುಲೇಶ್ವರ ಕೌರವನು ಏನನ್ನು ರಹಸ್ಯವಾಗಿ ಬುದ್ಧಿಯ ಮಾತನ್ನು ಹೇಳಿದನೋ ಅವರ ಮಾತುಗಳನ್ನು ಏನನ್ನೂ ನೀನು ಉಳಿಸಿಕೊಳ್ಳದೆ ಹೇಳು; ಅದು ವಿನಯದ್ದಾಗಿರಲಿ, ಅಥವಾ ಶೌರ್ಯದ, ಕೋಪದಿಂದ ಕೂಡಿದ ಮಾತಾಗಿರಲಿ, ಹೇಳು ಎಂದನು.
ನಾಡ ಬೇಡುವರೆಮ್ಮೊಡನೆ ಹೊ
ಯ್ದಾಡುವುದು ಸಂಪ್ರತಿಗೆ ಚಿತ್ತವ
ಮಾಡಲಾಗುದು ಸಂಧಿ ವೀರ ಕ್ಷತ್ರಿಯರ ಮತವೆ |
ಬೇಡುವರೆ ಪಾರ್ಥಿವರು ತಾವದ
ನಾಡಬಾರದು ತಮ್ಮ ಜನನವ
ನೋಡಿ ನುಡಿವರು ಪಾಂಡುಸುತರಲ್ಲೆಂದು ಹೇಳೆಂದ|| ೩೮ ||
ಪದವಿಭಾಗ-ಅರ್ಥ:ನಾಡ(ರಾಜ್ಯ) ಬೇಡುವರೆ (ಬೇಡುವುದಾದರೆ, ಬೇಕಾದರೆ, )+ ಎಮ್ಮೊಡನೆ ಹೊಯ್ದಾಡುವುದು (ಯುದ್ಧ ಮಾಡುವುದು) ಸಂಪ್ರತಿಗೆ(ಸಂಧಾನ. ಸದ್ಯದಲ್ಲಿ,) ಚಿತ್ತವ ಮಾಡಲಾಗುದು, ಸಂಧಿ ವೀರ ಕ್ಷತ್ರಿಯರ ಮತವೆ? ಬೇಡುವರೆ ಪಾರ್ಥಿವರು; ತಾವು+ ಅದನು+ ಆಡಬಾರದು; ತಮ್ಮ ಜನನವ ನೋಡಿ ನುಡಿವರು ಪಾಂಡುಸುತರು+ ಅಲ್ಲೆಂದು ಹೇಳೆಂದ.
ಅರ್ಥ:ಸಂಜಯನು ಹೇಳಿದ,'ಕೌರವನು,ರಾಜ್ಯವು ಬೇಕೆಂದು ಬಯಸಿದರೆ ನಮ್ಮೊಡನೆ ಅವರು ಯುದ್ಧ ಮಾಡುವುದು; ಸಂಧಾನಕ್ಕೆ ಮನಸ್ಸುಮಾಡಬಾರದು; ಸಂಧಿಯು ವೀರ ಕ್ಷತ್ರಿಯರ ಮತವೆ? ಕ್ಷತ್ರಿಯರಿಗೆ ಉಚಿತವಲ್ಲ. ಬೇಡುವವರು ಬ್ರಾಹ್ಮಣರು; ತಾವು ಅದನ್ನು- ಬೇಡುವ ಮಾತನ್ನು ಆಡಬಾರದು; ತಮ್ಮ(ಪಾಂಡವರ) ಜನನವನ್ನು ನೋಡಿ ಜನರು ಇವರು ಪಾಂಡುವಿನ ಮಕ್ಕಳು ಅಲ್ಲ ಎಂದು ನುಡಿಯುವರು, ಹಾಗಾಗಿ ಅವರಿಗೆ ರಾಜ್ಯದ ಹಕ್ಕು ಇಲ್ಲ, ಎಂದು ಹೇಳು ಎಂದ'.
ಮೊದಲಲಮಳ ಬ್ರಹ್ಮಚರ್ಯವು
ಮದುವೆಯಾದುದು ಬಳಿಕ ವನವಾ
ಸದಲಿ ವಾನಪ್ರಸ್ಥವೆಂದಾಶ್ರಮನಲವಡಿಸಿ |
ತುದಿಗೆ ತಾ ಸನ್ಯಾಸವನು ಮಾ
ಡಿದನು ಮಗಳಳುಪಿದೊಡೆ ರಾಜ್ಯದ
ಪದವಿಗನುಚಿತವಾಯ್ತು ಯಮಜಂಗೆಂದು ಹೇಳೆಂದ || ೩೯ ||
ಪದವಿಭಾಗ-ಅರ್ಥ:ಮೊದಲಲಿ+ ಅಮಳ(ಅಮಲ- ಶ್ರೇಷ್ಠ) ಬ್ರಹ್ಮಚರ್ಯವು, ಮದುವೆಯಾದುದು ಬಳಿಕ ವನವಾಸದಲಿ ವಾನಪ್ರಸ್ಥವೆಂದು+ ಆಶ್ರಮನು+ ಅಳವಡಿಸಿ, ತುದಿಗೆ (ಕೊನೆಗೆ) ತಾ ಸನ್ಯಾಸವನು ಮಾಡಿದನು, ಮಗುಳು(ಮತ್ತೆ)+ ಅಳುಪಿದೊಡೆ (ಅಳುಪು- ಬಯಸು, ಆಶಿಸು) ರಾಜ್ಯದ ಪದವಿಗೆ+ ಅನುಚಿತವಾಯ್ತು ಯಮಜಂಗೆ+ ಎಂದು ಹೇಳು+ ಎಂದ.
ಅರ್ಥ:ಸಂಜಯನು ಹೇಳಿದ,'ಪಾಂಡುವು ಮೊದಲಲ್ಲಿ ಶ್ರೇಷ್ಠ ಬ್ರಹ್ಮಚರ್ಯವನ್ನು ಪಾಲಿಸಿದನು; ನಂತರ ಅವನು ಮದುವೆಯಾದನು, ಬಳಿಕ ವನವಾಸದಲ್ಲಿ ವಾನಪ್ರಸ್ಥವೆಂದು ಆ ಆಶ್ರಮದಲ್ಲಿ ಪ್ರಾಯ ಕಳೆದನು; ಕೊನೆಗೆ ತಾನು ಸನ್ಯಾಸವನ್ನು ಅಳವಡಿಸಿ ಜೀವನ ಮಾಡಿದನು (ಸಂನ್ಯಾಸ- ಇದನ್ನು ಕೌರವನು ಕಲ್ಪಿಸಿ ಹೇಳಿದ್ದು); ಮತ್ತೆ ರಾಜ್ಯದ ಪದವಿಗೆ ಆಸಿಸಿದರೆ ಅದು ಅನುಚಿತವಾಗುವುದು ಎಂದು. ಕೌರವನು ಇದನ್ನು ಧರ್ಮಜನಿಗೆ ಹೇಳು ಎಂದನು.
ತಳಿತ ಜವ್ವನದುಬ್ಬುಗಳ ಕಳ
ವಳಿಗರರ್ಜುನ ಭೀಮರೆಂಬವ
ರೊಳಗೆ ವೈರವ ಬಿತ್ತಿ ಬೆಳಸ್ವ ಕೃಷ್ಣ ಹಗೆ ತಮಗೆ |
ಉಳಿದ ದ್ರುಪದ ವಿರಾಟರೆಂಬೀ
ಹುಳುಗಳವರಂತೋರೆಗೆಡೆದರು
ತಿಳಿಯೆ ತನೇ ಕಡೆಗೆ ಕೆಡದಿರನೆಂದು ಹೇಳೆಂದ || ೪೦ ||
ಪದವಿಭಾಗ-ಅರ್ಥ:ತಳಿತ(ಚಿಗುರಿದ) ಜವ್ವನದುಬ್ಬುಗಳ (ಉಬ್ಬುಗಳ- ಸೊಕ್ಕಿನ, ಅಹಂಕಾರದ), ಕಳವಳಿಗರು (ಗೊಂದಲ, ಭ್ರಾಂತಿ)+ ಅರ್ಜುನ ಭೀಮರೆಂಬವರೊಳಗೆ ವೈರವ ಬಿತ್ತಿ, ಬೆಳಸುವ ಕೃಷ್ಣ ಹಗೆ ತಮಗೆ, ಉಳಿದ ದ್ರುಪದ ವಿರಾಟರೆಂಬ+ ಈ ಹುಳುಗಳವರು+ ಎಂತ+ ಓರೆಗೆಡೆದರು (ಒರಟುತನ ಮಾಡಿದರು) ತಿಳಿಯೆ ತಾನೇ ಕಡೆಗೆ ಕೆಡದಿರನು+ ಎಂದು ಹೇಳು+ ಎಂದ.
ಅರ್ಥ:ಸಂಜಯನು ಹೇಳಿದ, ಕೌರವವನು, ' ಭೀಮ, ಅರ್ಜುನ ಇವರು ಬಲಿತ ಯವ್ವನದ ಸೊಕ್ಕಿನ ಭ್ರಾಂತಿಯುಳ್ಳವರು ಇವರಲ್ಲಿ ಕೌರವನ ಮೇಲೆ ವೈರವನ್ನು ಬಿತ್ತಿ, ಬೆಳಸುವವನು ಕೃಷ್ಣ. ಅವನು ನಮಗೆ (ಕೌರವನಿಗೆ), ಪಾಂಡವರಿಗೆ ನಿಜವಾದ ಹಗೆ- ಶತ್ರು. ಉಳಿದ ದ್ರುಪದ ವಿರಾಟರೆಂಬ ಈ ಹುಳುಗಳು; ಅವರ ಒರಟುತನ ನಂಬಿ ಯುದ್ಧಮಾಡಿದರೆ ಧರ್ಮಜನು ತಿಳಿಯಲಿ, ತಾನೇ ಕಡೆಗೆ ಕೆಡದೆ ಇರುವುದಿಲ್ಲ, ಎಂದು ಹೇಳು ಎಂದ.
ಸಾಕು ಕೌರವ ನಾಯ ಮಾತನ
ದೇಕೆ ಚಿತ್ತೈಸುವಿರಿ ದೂತನ
ನೂಕು ನೂಕು ಕುಠಾರ ದುರ್ಯೋಧನನೊಡೆ ಹೊಯಿದು|
ಶಾಕಿನಿಯರನು ರಕುತ ವಾರಿಯೊ
ಳೋಕುಳಿಯನಾಡಿಸುವೆ ನಿಲು ತಡ
ವೇಕೆನುತ ಘುಢುಘುಡಿಸಿ ಕಿಡಿಕಿಡಿಯಾದನಾ ಭೀಮ || ೪೧ ||
ಪದವಿಭಾಗ-ಅರ್ಥ:ಸಾಕು ಕೌರವ ನಾಯ ಮಾತನು+ ಅದೇಕೆ ಚಿತ್ತೈಸುವಿರಿ(ಕೇಳುವಿರಿ), ದೂತನ ನೂಕು ನೂಕು, ಕುಠಾರ(ಒರಟು ವ್ಯಕ್ತಿ, ಕ್ರೂರಿ, ದುಷ್ಠ) ದುರ್ಯೋಧನನ+ ಒಡೆಹೊಯಿದು (ದೇಹವೊಡೆಯುವಂತೆ ಬಲವಾಗಿ ಹೊಡೆದು) ಶಾಕಿನಿಯರನು ರಕುತ ವಾರಿಯೊಳು(ನದಿಯಲ್ಲಿ)+ ಓಕುಳಿಯನಾಡಿಸುವೆ, ನಿಲು ತಡವೇಕೆ+ ಎನುತ ಘುಢುಘುಡಿಸಿ ಕಿಡಿಕಿಡಿಯಾದನು+ ಆ ಭೀಮ.
ಅರ್ಥ:ಸಂಜಯನ ಮಾತು ಕೇಳಿ ಭೀಮನು ಕೋಪದಿಂದ,'ಸಾಕು ಕೌರವ ನಾಯಿಯ ಮಾತನ್ನು ಅದೇಕೆ ಕೇಳುವಿರಿ? ಈ ದೂತನನ್ನು ನೂಕು ನೂಕಿ ಹೊರತಳ್ಳಿ; ದುಷ್ಠ ದುರ್ಯೋಧನನನ್ನು ಮೈವೊಡೆಯುವಂತೆ ಬಲವಾಗಿ ಹೊಡೆದು ಶಾಕಿನಿಯರಿಗೆ ರಕ್ತದ ಮಡುವಿನಲ್ಲಿ ಓಕುಳಿಯನ್ನಾಡಿಸುವೆ. ನಿಲ್ಲು ತಡವೇಕೆ?' ಎನ್ನುತ್ತಾ ಘುಢುಘುಡಿಸಿ ಕೋಪದಿಂದ ಕಿಡಿಕಿಡಿಯಾದನು.
ಬೆಸಸುವುದು ಹಿಂದಾದ ಜೂಜಿನೊ
ಳೆಸೆವ ಜಾಡ್ಯವೆ ಸಾಕು ಧರ್ಮದ
ದೆಸೆಗೆ ನೀನಿನ್ನುತ್ತದಾಯಿ ಸುಯೋಧನನ ಕುಲವ |
ದೆಸೆದೆಸಯ ದೈವಂಗಳಿಗೆ ಹೆಸ
ರಿಸುವರೆಮ್ಮನುಕಳುಹೆನುತ ಗ
ರ್ಜಿಸಿದರಂದಭಿಮನ್ಯು ಸಾತ್ಯಕಿ ಭೀಮ ನಂದನರು || ೪೨ ||
ಪದವಿಭಾಗ-ಅರ್ಥ:ಬೆಸಸುವುದು(ಹೇಳುವುದು) ಹಿಂದಾದ ಜೂಜಿನೊಳು+ ಎಸೆವ (ತೋರಿದ) ಜಾಡ್ಯವೆ (ತೊಂದರೆ, ರೋಗ) ಸಾಕು, ಧರ್ಮದ ದೆಸೆಗೆ ನೀನಿನ್ನು+ ಉತ್ತರಾಯಿ(ಉತ್ತರಾಧಿಕಾರಿ) ಸುಯೋಧನನ ಕುಲವ ದೆಸೆದೆಸಯ ದೈವಂಗಳಿಗೆ ಹೆಸರಿಸುವರೆ+ ಎಮ್ಮನು ಕಳುಹೆನುತ ಗರ್ಜಿಸಿದರು+ ಅಂದು+ ಅಭಿಮನ್ನು ಸಾತ್ಯಕಿ ಭೀಮನಂದನರು (ಘಟೋತ್ಕಜ).
ಅರ್ಥ:ಆ ಸಮಯದಲ್ಲಿ ಅಲ್ಲಿದ್ದ ಅಭಿಮನ್ಯು, ಸಾತ್ಯಕಿ, ಭೀಮನ ಮಗ ಘಟೋತ್ಕಜರು, ಹಿಂದಾದ ಜೂಜಿನಲ್ಲಿ ತೋರಿರುವ ತೊಂದರೆಯೆ ಸಾಕು; ಧರ್ಮದ ದೆಸೆಗೆ ನೀನಿನ್ನು ಉತ್ತರಾಧಿಕಾರಿ; ನೀನು ಹೇಳಿದ್ದೇ ಧರ್ಮವು. ನಮಗೆ ಹೇಳಿ- ಆಜ್ಞೆಕೊಡಿ; ಸುಯೋಧನನ ಕುಲವನ್ನು ದೆಸೆದೆಸಯ ದೈವಗಳಿಗೆ ಹೆಸರಿಸಿ ಬಲಿಕೊಡುವುದಾದರೆ ನಮ್ಮನು ಕುರಿತು ಹೇಳುವುದು. ಆಜ್ಞೆಕೊಟ್ಟು ಕಳುಹಿಸಿ ಎನ್ನುತ್ತ ಅಂದು ಅವರು ಗರ್ಜಿಸಿದರು.
ಕದಡಿತಾಯಾಸ್ಥಾನ ಕಲ್ಪಾಂ
ತದ ಮಹಸಿಡಿಲಂತೆ ವೀರರು
ಕೆದರಿ ತಮತಮಗೆದ್ದುನುಡಿದರು ಕಂಡೆಯವ ಜಡಿದು |
ಉದಿರಹೊಯ್ವೆವು ಹಲುಗಳನು ಕಿ
ಬ್ಬದಿಯಲುಗಿವೆವು ಕರುಳನಹಿತರ
ತಿಥಿಯ ಸುಲಿವೆವು ಬೆಸಸು ನೇಮವನೆಂದರತಿರಥರು || ೪೩||
ಪದವಿಭಾಗ-ಅರ್ಥ:ಕದಡಿತು+ ಆಯಾಸ್ಥಾನ ಕಲ್ಪಾಂತದ ಮಹಸಿಡಿಲಂತೆ ವೀರರು ಕೆದರಿ(ಸಿಟ್ಟಾಗಿ) ತಮತಮಗೆ+ ಎದ್ದು ನುಡಿದರು ಕಂಡೆಯವ(ಕತ್ತಿಯ) ಜಡಿದು, ಉದಿರಹೊಯ್ವೆವು(ಹಲ್ಲುಗಳು ಉದುರುವಂತೆ ಹೊಡೆಯುವೆವು) ಹಲುಗಳನು ಕಿಬ್ಬದಿಯಲಿ+ ಉಗಿವೆವು ಕರುಳನು+ ಅಹಿತರ(ಶತ್ರುಗಳ)ತಿದಿಯ (ಗಾಳಿ ಊದುವ ಚರ್ಮದ ಪದರಗಳ ಚೀಲ) ಸುಲಿವೆವು ಬೆಸಸು(ಹೇಳು) ನೇಮವನೆಂದರು(ಆಜ್ಞೆಯನ್ನು ಕೊಡು)+ ಅತಿರಥರು.
ಅರ್ಥ:ಸಂಜಯನ ಮಾತುಗಳನ್ನು ಕೇಳಿ ಆ ಆಸ್ಥಾನ ಸಭೆ ಕಲ್ಲೋಲವಾಯಿತು. ಪ್ರಳಯಕಾಲದ ಕಲ್ಪಾಂತದ ಮಹಾ ಸಿಡಿಲಂತೆ ವೀರರು ಸಿಟ್ಟಾಗಿ ತಾವು ತಾವೇ ಎದ್ದು ಕತ್ತಿಯನ್ನು ಜಡಿದು ನುಡಿದರು ಶತ್ರುಗಳ ಹಲ್ಲುಗಳು ಉದುರುವಂತೆ ಹೊಡೆಯುವೆವು, ಕಿಬ್ಬದಿಯನ್ನು ಬಗೆದು ಕರುಳನ್ನು ಉಗಿಯುವೆವು; ಚರ್ಮವನ್ನು ಸುಲಿವೆವು, ಅತಿರಥರು ಹೇಳು- ಆಜ್ಞೆಮಾಡು ಎಂದರು.
ಆತನಿಂದೇನಹುದು ಹೊಲ್ಲೆಹ
ವಾತನಿಂದೇನಹುದು ಲೇಸುಗ
ಳಾತನಿಂದೇ ಬರಲಿ ಹಿಂದಣ ಕಾನನಾಯಸದ |
ಯಾತನೆಯ ಸೈರಿಸಿದ ನಮಗಿ
ನ್ನಾತ ನುಡಿದೊಡೆ ಹಾನಿಯೇ ನೀವ್
ಕಾತರಿಸದಿರಿಯೆಂದು ಸಂತೈಸಿದನು ಯಮಸೂನು || ೪೪ ||
ಪದವಿಭಾಗ-ಅರ್ಥ:ಆತನಿಂದ+ ಏನಹುದು(ಏನಾಗುವುದು) ಹೊಲ್ಲೆಹವು (ಕೆಡುಕು)+ ಆತನಿಂದ+ ಏನಹುದು ಲೇಸುಗಳು(ಒಳಿತು),+ ಆತನಿಂದೇ ಬರಲಿ, ಹಿಂದಣ ಕಾನನ+ ಆಯಸದ(ಕಾಡಿನಲ್ಲಿ ಬಳಲಿದ) ಯಾತನೆಯ ಸೈರಿಸಿದ ನಮಗೆ+ ಇನ್ನು+ ಆತ ನುಡಿದೊಡೆ ಹಾನಿಯೇ(ತೊಂದರೆಯೇ?), ನೀವ್+ ಕಾತರಿಸದಿರಿಯೆಂದು(ಚಿಂತಿಸಬೇಡಿ ಎಂದು) ಸಂತೈಸಿದನು ಯಮಸೂನು(ಧರ್ಮಜನು).
ಅರ್ಥ:ರಾಜ ಸಭೆಯಲ್ಲಿದ್ದ ವೀರರು ಕೋಪೋದ್ರಿಕ್ತರಾಗಲು, ಧರ್ಮಜನು ಸಭಿಕರಿಗೆ ಸಮಾಧಾನ ಮಾಡುತ್ತಾ,'ದುರ್ಯೋಧನನಿಂದ ನಮಗೆ ಇನ್ನೂ ಏನು ಕೆಡುಕಾಗುವುದು? ಆತನಿಂದ ಒಳಿತು ಏನಾಗುವುದು? ಆತನು ಇಂದೇ ಯುದ್ಧಕ್ಕೆ ಬರಲಿ- ಚಿಂತೆಯಿಲ್ಲ. ಹಿಂದೆ ಕಾಡಿನಲ್ಲಿ ಬಳಲಿದ ಯಾತನೆಯನ್ನು ಸೈರಿಸಿದ ನಮಗೆ, ಆತನು ಕೆಟ್ಟದ್ದನ್ನು ಇನ್ನೂ ನುಡಿದರೆ ಹಾನಿಯೇ? ನೀವು ಚಿಂತಿಸಬೇಡಿ ಎಂದು ಸಂತೈಸಿದನು.'
ಕಳುಹಿದನು ಬೀಡಾರಕವನಿಪ
ತಿಲಕನಾ ಸಂಜಯನಲ್ಲಿಂ
ಬಳಿಕ ಮರುದಿನ ಕೃಷ್ಣ ಪಾರ್ಥರು ಸಂಜಯನ ಕರೆಸಿ |
ಬಲುಹು ಮೆಲುಹಿನ ನುಡಿಗಳಿಂದವೆ
ತಿಳುಹಿದರು ಬಳಿಕಿತ್ತಲೋಲಗ
ದೊಳಗೆ ದೂತನ ಕರೆಸಿ ಬೀಳ್ಕೊಟ್ಟನು ಯುಧಿಷ್ಟಿರನು || ೪೫ ||
ಪದವಿಭಾಗ-ಅರ್ಥ:ಕಳುಹಿದನು ಬೀಡಾರಕೆ+ ಅವನಿಪತಿಲಕನು (ಶ್ರೇಷ್ಠ ರಾಜನು, ಧರ್ಮಜನು)+ ಆ ಸಂಜಯನ+ ಅಲ್ಲಿಂ ಬಳಿಕ(ಆ ನಂತರ) ಮರುದಿನ ಕೃಷ್ಣ ಪಾರ್ಥರು, ಸಂಜಯನ ಕರೆಸಿ, ಬಲುಹು ಮೆಲುಹಿನ (ಗಟ್ಟಿತನದ ಮತ್ತು ವಿನಯದ) ನುಡಿಗಳಿಂದವೆ, ತಿಳುಹಿದರು, ಬಳಿಕಿತ್ತಲು+ ಓಲಗದೊಳಗೆ ದೂತನ ಕರೆಸಿ ಬೀಳ್ಕೊಟ್ಟನು(ಹಿಂದಕ್ಕೆ ಕಳಿಸಿಕೊಟ್ಟನು) ಯುಧಿಷ್ಟಿರನು.
ಅರ್ಥ:ಶ್ರೇಷ್ಠ ರಾಜನಾದ ಧರ್ಮಜನು ಆ ಸಂಜಯನನ್ನು ಬಿಡಾರಕ್ಕೆ ಕಳುಹಿದನು. ಆ ನಂತರ ಮರುದಿನ ಕೃಷ್ಣ ಮತ್ತು ಪಾರ್ಥರು ಸಂಜಯನನ್ನು ಕರೆಸಿ, ಗಟ್ಟಿತನದ ಮತ್ತು ವಿನಯದ ನುಡಿಗಳಿಂದ ಸೂಕ್ತ ಉತ್ತರವನ್ನು ಅವನಿಗೆ ತಿಳುಹಿಸಿದರು. ಬಳಿಕ ಇತ್ತ ಓಲಗದಲ್ಲಿ ಯುಧಿಷ್ಟಿರನು ದೂತನನ್ನು ಕರೆಸಿ ಬೀಳ್ಕೊಟ್ಟನು.
ಜನಕನನು ಗಾಂಧಾರಿ ದುರಿಯೋ
ಧನನವರೊಡಹುಟ್ಟಿದರನಂ
ಗನೆಯರನು ದುಸ್ಸಳೆಯ ಸೈಂಧವ ಕರ್ಣ ಶಕುನಿಗಳ |
ವಿನುತ ಬಾಹ್ಲಿಕ ಶಲ್ಯ ಭಗದ
ತ್ತನ ನದೀಸುತ ಗುರು ಕೃಪರ ಗುರು
ತನುಜರನು ವಂದಿಸಿದರುಚಿತದಲೆಂದು ಹೇಳೆಂದ || ೪೬ ||
ಪದವಿಭಾಗ-ಅರ್ಥ:ಜನಕನನು(ಧೃತರಾಷ್ಟ್ರ) ಗಾಂಧಾರಿ ದುರಿಯೋಧನನ+ ಅವರ+ ಒಡಹುಟ್ಟಿದರನು+ ಅಂಗನೆಯರನು, ದುಸ್ಸಳೆಯ, ಸೈಂಧವ, ಕರ್ಣ, ಶಕುನಿಗಳ ವಿನುತ(ಉತ್ತಮ) ಬಾಹ್ಲಿಕ, ಶಲ್ಯ, ಭಗದತ್ತನ, ನದೀಸುತ (ಭೀಷ್ಮ), ಗುರು (ದ್ರೋಣ) ಕೃಪರ ಗುರುತನುಜರನು(ಅಶ್ವತ್ಥಾಮ) ವಂದಿಸಿದರು+ ಉಚಿತದಲಿ+ ಎಂದು ಹೇಳೆಂದ.
ಅರ್ಥ:ಧರ್ಮಜನು ಸಂಜಯನನ್ನು ಹಸ್ತಿನಾವತಿಗೆ ಬೀಳ್ಕೊಡುವಾಗ, 'ದೊಡ್ಡಪ್ಪ ಧೃತರಾಷ್ಟ್ರ, ಅವನ ಪತ್ನಿ ಗಾಂಧಾರಿ ಇವರಿಗೆ ನಮಿಸಿದ್ದಾಗಿಯೂ, ದುರ್ಯೋಧನನನ್ನೂ, ಅವನ ಒಡಹುಟ್ಟಿದವರನ್ನೂ, ಅವರ ಹೆಂಡಿರನ್ನೂ, ತಂಗಿ ದುಸ್ಸಳೆ ಸೈಂಧವ, ಇವರ ಕ್ಷೇಮವನ್ನು ಕೇಳಿದ್ದಾಗಿ ತಿಳಿಸಲೂ, ಕರ್ಣ, ಶಕುನಿಗಳನ್ನೂ ವಿನುತ ಬಾಹ್ಲಿಕನನ್ನೂ, ಮಾವ ಶಲ್ಯನನ್ನೂ, ಭಗದತ್ತನನ್ನೂ, ಅಜ್ಜ ನದೀಸುತ ಭೀಷ್ಮನನ್ನೂ, ಗುರುಗಳಾದ ದ್ರೋಣ ಕೃಪರನ್ನೂ ಗುರುತನುಜ ಅಶ್ವತ್ಥಾಮನನ್ನೂ ಉಚಿತದಲಿ ವಂದಿಸಿದರು ಎಂದು ಹೇಳು,' ಎಂದ.
ವರ ಪುರೋಹಿತರನು ಸುಸಾವಂ
ತರನು ವೈದ್ಯರ ವಿದುರನನು ಮ
ತ್ತರಮನೆಯ ವಿಶ್ವಾಸಿಗಳನೋಲಗದ ಗಣಿಕೆಯರ |
ಕರಿ ಹಯಾಧ್ಯಕ್ಷರನು ಪಡಿಹಾ
ರರನು ಬಾಹತ್ತರ ನಿಯೋಗದ
ಪರಿಜನರ ಕುಶಲವನು ಕೇಳಿದನೆಂದು ಹೇಳೆಂದ || ೪೭ ||
ಪದವಿಭಾಗ-ಅರ್ಥ:ವರ ಪುರೋಹಿತರನು, ಸು-ಸಾವಂತರನು(ಸಾಮಂತರನ್ನು) ವೈದ್ಯರ ವಿದುರನನು ಮತ್ತೆ+ ಅರಮನೆಯ ವಿಶ್ವಾಸಿಗಳನು+ ಓಲಗದ ಗಣಿಕೆಯರ, ಕರಿ ಹಯಾಧ್ಯಕ್ಷರನು (ಆನೆ ಕುದುರೆಕ್ಷೇಮದ ಅಧ್ಯಕ್ಷರನ್ನೂ ), ಪಡಿಹಾರರನು, ಬಾಹತ್ತರ ನಿಯೋಗದ ಪರಿಜನರ (ಎಪ್ಪತ್ತೆರಡು ಬಗೆಯ ಸೇವೆ ಮಾಡುವವರ ಸಮೂಹ), ಕುಶಲವನು ಕೇಳಿದನೆಂದು ಹೇಳೆಂದ.
ಅರ್ಥ:ಅಷ್ಟಲ್ಲದೆ ಧರ್ಮಜನು, ಶ್ರೇಷ್ಠರಾದ ಪುರೋಹಿತರನ್ನೂ, ಸಾಮಂತರನ್ನೂ, ಅರಮನೆಯ ವೈದ್ಯರನ್ನೂ, ವಿದುರನನ್ನೂ, ಮತ್ತೆ ಅರಮನೆಯ ವಿಶ್ವಾಸಿಗಳನ್ನೂ, ಓಲಗದ ಗಣಿಕೆಯರನ್ನೂ, ಕರಿ ಹಯಾಧ್ಯಕ್ಷರನ್ನೂ, ಪಡಿಹಾರರನ್ನೂ, ಎಪ್ಪತ್ತೆರಡು ನಿಯೋಗದ ಪರಿಜನರು- ಇವರೆಲ್ಲರ ಕುಶಲವನ್ನು ತಾನು ಕೇಳಿದನೆಂದು ಹೇಳು, ಎಂದ.

೪೮[ಸಂಪಾದಿಸಿ]

ಹೊನ್ನಿನಲಿ ಮಧುರೋಕ್ತಿಯಲಿ ವಿವಿ
ಧಾನ್ನವುಡುಗೊರೆಗಳಲಿ ದೂತನ
ಮನ್ನಿಸಿದವನೀಶನುಚಿತದಲವನ ಬೀಳ್ಕೊಟ್ಟು |
ಪನ್ನಗನ ಸಿರಿಮಂಚದಾತನು
ಬೆನ್ನಲಿರಲೀ ಪಾಂಡುತನಯರಿ
ಗಿನ್ನು ಮಂಗಳವೆನುತ ಸಂಜಯ ಬಂದನಿಭಪುರಿಗೆ || ೪೮ ||

ಪದವಿಭಾಗ-ಅರ್ಥ: ಹೊನ್ನಿನಲಿ(ಚನ್ನದ ಒಡವೆ ನಾಣ್ಯ) ಮಧುರ+ ಉಕ್ತಿಯಲಿ ವಿವಿಧ+ ಅನ್ನ+ ವು+ ಉಡುಗೊರೆಗಳಲಿ, ದೂತನ ಮನ್ನಿಸಿದ(ಗೌರವಿಸಿದನು)+ ಅವನೀಶನು (ರಾಜ ಧರ್ಮಜ)+ ಉಚಿತದಲಿ (ಯೋಗ್ಯವಾಗಿ)+ ಅವನ ಬೀಳ್ಕೊಟ್ಟು, ಪನ್ನಗನ (ಪನ್ನಗ- ಹಾವು, ವಾಸುಕಿಯನ್ನು) ಸಿರಿಮಂಚದಾತನು(ಮಂಚಮಾಡಿಕೊಂಡು, ಅದರ ಮೇಲೆ ಮಲಗಿದವನು- ನಾರಾಯಣನು) ಬೆನ್ನಲಿ+ ಇರಲು (ಕಾಪಾಡಲು+ ಇರಲು)+ ಈ ಪಾಂಡುತನಯರಿಗೆ+ ಇನ್ನು ಮಂಗಳವು+ ಎನುತ ಸಂಜಯ ಬಂದನು+ ಇಭಪುರಿಗೆ(ಇಭ- ಆನೆ+ ಪುರ, ಹಸ್ತಿನಾಪುರಕ್ಕೆ)
ಅರ್ಥ:ಅವನೀಶ ಧರ್ಮಜನು ಸಂಜಯನಿಗೆ ಚಿನ್ನದ ಒಡವೆ, ನಾಣ್ಯಗಳನ್ನು ಕೊಟ್ಟು ಮಧುರವಾದ ಮಾತನಿಂದ ಉಪಚರಿಸಿ ವಿವಿಧ ಖಾದ್ಯ ಮತ್ತ ಉಡುಗೊರೆಗಳನ್ನು ಕೊಟ್ಟು,ಸಂಜಯ ದೂತನನ್ನು ಯೋಗ್ಯವಾಗಿ ಮನ್ನಿಸಿ ಅವನನ್ನು ಬೀಳ್ಕೊಟ್ಟನು. ವಾಸುಕಿಯನ್ನು ಸಿರಿಮಂಚಮಾಡಿಕೊಂಡು, ಅದರ ಮೇಲೆ ಮಲಗಿದ ವಿಷ್ಣುವು- ನಾರಾಯಣನು ಪಾಂಡವರ ಹಿಂದೆಯೇ ಕಾಪಾಡಲು ಇರುವಾಗ, ಈ ಪಾಂಡುತನಯರಿಗೆ ಇನ್ನು ಮಂಗಳವು- ಶುಭವಾಗುವುದು ಎಂದುಕೊಂಡು ಸಂಜಯನು ಹಸ್ತಿನಾಪುರಕ್ಕೆ ಬಂದನು.

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು