ಚಂದ್ರಮತಿ
ಚಂದ್ರಮತಿ
Published by
(Rao Bahadur K. V PANTLU'S WORK)
ಆಸ್ಠಾನ ವಿದ್ವಾನ್
ನಂಜನಗೂಡು ಶ್ರೀಕಂಠಶಾಸ್ತ್ರಿ
ಗಳವರಿಂದ ಬರೆಯಲ್ಪಟ್ಟುದು
ಎ೦. ಎಸ್. ರಾವ್ ಕ೦ಪೆನಿ
ಪುಸ್ತಕ ವ್ಯಾಪಾರಿಗಳು, ಬೆಂಗಳೂರು ಸಿಟಿ
ಅವರಿಂದ ಪ್ರಕಟಿಸಲ್ಪಟ್ಟಿತು.
PRINTED BY BANGALORE PRESS, MYSORE ROAD
BANGALORE CITY
1918
ಪ್ರಾರ್ಥನೆ
ಪಾಠಕಮಹಾಶಯರೆ,
ರಾಜಮಹೇಂದ್ರದಲ್ಲಿರುವ ರಾವ್ ಬಹದ್ದೂರ್ ಶ್ರೀರ್ಮಾ ಕಂದು ಕೂರಿ ವೀರೇಶಲಿಂಗಂ ವಂತುಲುರವರು ಪ್ರಸಿದ್ಧಲೇಖಕರೆಂಬುದು ತಮಗೆ ಲ್ಲರಿಗೂ ತಿಳಿದೇ ಇರುವುದಷ್ಟೆ? ಈ ಲೋಕೋಪಕಾರಕರು ನನ್ನಲ್ಲಿ ಅನು ಗ್ರಹವಿಟ್ಟು ತಾವು ಆಂಧ್ರ ಭಾಷೆಯಲ್ಲಿ ವಿರಚಿಸಿರುವ ಗ್ರಂಥಗಳನ್ನೆಲ್ಲ ಕನ್ನ ಡಿಸಲು ಅನುಜ್ಞೆಯಿತ್ತರು. ಶ್ರೀಮನ್ಮಹಾರಾಜಾ ಕರ್ನಲ್ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಬಹದ್ದೂರ್, ಜಿ. ಸಿ. ಎಸ್. ಐ., ಅವರ ಪ್ರೋತ್ಸಾಹಬಲದಿಂದ ಕರ್ಣಾಟಕ ಗ್ರಂಥರಚನೆಯಲ್ಲಿ ತತ್ಪರನಾಗಿ ರುವ ನಾನು ಇದನ್ನು ಕನ್ನಡಿಸಿ ನನ್ನಿಂದ ರಚಿಸಲ್ಪಟ್ಟಿರುವ ಇಪ್ಪತ್ತು ಮೂವತ್ತು ಪುಸ್ತಕಗಳೊಂದಿಗೆ ತಮ್ಮ ಸನ್ನಿಧಿಯಲ್ಲಿ ಸಮರ್ಪಿಸಿರುವೆನು. ಇದರಲ್ಲಿ ಉಕ್ತವಾಗಿರುವ ಗುಣಾತಿಶಯಗಳನ್ನು ನಾಠಕಮಹಾಶಯರು ಪರಿಗ್ರಹಿಸಬೇಕೆಂದು ಬೇಡುವೆನು.
ಪ್ರತಿಮಾನದಲ್ಲಿಯೂ ಪ್ರಕಟವಾಗುತ್ತಿರುವ " ಕರ್ಣಾಟಕ ಗ್ರಂಧ ಮಾಲೆಯಲ್ಲಿ ಇದನ್ನು ಮುದ್ರಿಸಿಕೊಟ್ಟುದಕ್ಕೋಸುಗ ಆ ಪತ್ರಿಕಾಸಂಸಾ ದಕರಾದ ಶ್ರೀಯುತ ಬಿ. ಸುಬ್ಬರಾವ್, ಬಿ. ಎ.. ಅವರ ಉಪಕಾರವು ಚಿರಸ್ಮ ರಣೀಯವಾಗಿರುವುದೆಂಬುದನ್ನು ಅತ್ಯಾನಂದದಿಂದ ತಿಳಿಸಲು ಕುತೂಹಲ ವಡುತ್ತಿರುವ,
ಬಿಕರಿಗೆ ಸಿದ್ಧವಾಗಿದೆ.
ವಿಳಾಸ:- ಎಂ. ಎಸ್. ರಾನ್ ಕಂಪೆನಿ,
ಪುಸ್ತಕ ವ್ಯಾಪಾರಿಗಳು,
ಅವೆನ್ಯೂ ರೋಡಕ್, ಬೆಂಗಳೂರು ಸಿಟ.
ಶ್ರೀ
ಚಂದ್ರಮತಿ
ಮೊದಲನೆಯ ಪ್ರಕರಣ
ಪೂರ್ವಕಾಲದಲ್ಲಿ ಚೇದಿದೇಶಕ್ಕೆ ಪ್ರತಿಷ್ಠಾನವೆಂಬ ನಗರವು ರಾಜ ಧಾನಿಯಾಗಿದ್ದಿತ್ತು. ಅದನ್ನು ಉಶೀನರನೆಂಬ ರಾಜನು ಪರಿಪಾಲಿಸುತ್ತಿದನು. ಈತನಿಗೆ ಸುನಂದೆಯೆಂಬ ನಾರೀಮಣಿಯು ಪತ್ನಿಯಾಗಿದಳು. ಈ ದಂಪತಿಗಳಿಗೆ ಬಹುಕಾಲ ಮಕ್ಕಳೇ ಇಲ್ಲದೆ ಕಡೆಗೆ ಒಂದು ಹೆಣ್ಣು ಮಗುವು ಹುಟ್ಟಿತು. ಉಶೀನರನು ಆ ಮಗುವಿಗೆ ಚಂದ್ರಮತಿಯೆಂದು ನಾಮಕರಣ ಮಾಡಿ, ಲೋಕೈಕಸುಂದರಿಯಾಗಿ ಆ ಮಗುವನ್ನು ಬಹು ಪ್ರೀತಿಯಿಂದ ಪೋಷಿಸುತ್ತಿದನು. ಆ ಮಗುವಿನ ಕಾಲಾದರೂ ನೆಲಕ್ಕೆ ಸೋಕದಂತೆ ಮಾತಾಪಿತೃಗಳಿಬ್ಬರೂ ತಮ್ಮ ತೊಡೆಯಮೇಲೆಯೇ ನಿರಂತರವೂ ಅದನ್ನೆತ್ತಿ ಕೊಂಡು ಸಾಕುತ್ತೆ, ತಮ್ಮಮುಂದೆ ಮೆಲ್ಲಮೆಲ್ಲನೆ ದಟ್ಟಡಿಗಳನ್ನಿಟ್ಟು ನಡೆದಾಡುವ ಮಗುವನ್ನು ಮನದಣಿಯೆ ನೋಡಿ ನೇತ್ರೋತ್ಸವವನ್ನು ಹೊಂದಿ ಪರಮಾನಂದಭರಿತರಾಗುತ್ತಿದ್ದರು. ಅವಳ ಅಸ್ಪಷ್ಟವಾದ ಮುದ್ದುಮಾತಾದರೋ ತಾಯ್ತಂದೆಗಳ ಕಿವಿಗಳಿಗೆ ಸುಶ್ರಾವ್ಯವಾದ ಸಂಗೀತನಾದಕ್ಕಿಂತ ಇ೦ಪಾಗಿದ್ದಿತು. ರೂಪದಲ್ಲಿ ರಂಭೆಗಿ೦ತ ಸು೦ದರಿಯರಾದ ಸ್ತ್ರೀಯರೂ ಆ ಚ೦ದ್ರಮತಿಯ ಸೊಬಗನ್ನು ಕಂಡು ತಲೆಬಾಗಿಸುತ್ತಿದ್ದರು. ಸುನಂದೆಯು ತಾನು ವಿದ್ಯಾವತಿಯಾಗಿದ್ದುದರಿಂದ, ವಿದ್ಯೆಯಿಂದುಂಟಾ ಗುವ ಪ್ರಯೋಜನಗಳನ್ನರಿತು, ಚಂದ್ರಮತಿಗೆ ಗ್ರಹಣಶಕ್ತಿಯುಂಟಾದಕಾಲ ಮೊದಲ್ಗೊಂಡು ಸಣ್ಣ ಸಣ್ಣ ನೀತಿವದ್ಯಗಳನ್ನು ಕಲಿಸತೊಡಗಿದಳು; ಸುಗುಣಗಳನ್ನು ಸ್ತನ್ಯದೊಡನೆಯೇ ಅರೆದು ಕುಡಿಸತೊಡಗಿದಳು. ಆದುದರಿಂದ ಚಂದ್ರಮತಿಯು ತನ್ನ ಆರನೆಯ ವರ್ಷದಲ್ಲಿಯೇ ಒಡನಾಡಿಯರಿಗಿಂತ ವಿವೇಕವತಿಯೂ, ಗುಣವತಿಯೂ ಆದಳು ಮೃದುವಲ್ಲದ ವಾತಾವುದೂ ಅವಳ ಬಾಯಿಂದ ಹೊರಡುತ್ತಿರಲಿಲ್ಲ. ಜನನೀಜನಕರು ಪ್ರೇಮಪೂರ್ವಕವಾಗಿ ಆವುದನ್ನು ಕೊಟ್ಟರೆ ಅದನ್ನು ತೆಗೆದುಕೊಂಡು ಸಂತೋಷಪಡುತ್ರಿದ್ದಳಲ್ಲದೆ, ಇಲ್ಲದ ಪದಾರ್ಥಗಳನ್ನವೀಕ್ಷಿಸಿ ಅದೇ ಬೇಕೆಂದು ಯಾವಾಗಲೂ ಚಲಹಿಡಿಯುತ್ತಿರಲಿಲ್ಲ, ತನ್ನೊಡನಾಡುವ ಬಾಲೆಯರನ್ನು ಎಂದಾದರೂ ಬಯ್ಯುತ್ತಿರಲಿಲ್ಲ, ತನ್ನ ಬಳಿಯಲ್ಲಿರುವ ಹಣ್ಣು ಹಂಪಲುಗಳನ್ನೇ ಆದರೂ ಮೊದಲು ಅವರಿಗೆ ಕೊಟ್ಟು ಉಳಿದುದನ್ನು ತಾನು ತಿನ್ನುತ್ತಿದ್ದುದಲ್ಲದೆ ಅವರನ್ನು ತನ್ನ ಸೋದರಿಯರಂತೆ ಭಾವಿಸಿ ನಿರಂತರವೂ ಪ್ರೀತಿಸು ತ್ರಿದ್ದಳು ಎಂದಾದರೂ ತಾನು ಪ್ರಮಾದವಶದಿಂದ ಒಂದು ತಪ್ಪನ್ನು ಮಾಡಿದಪಕ್ಷದಲ್ಲಿ, ಮರುಮಾತಾಡದೆ ಆ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನು ಬೇಡುತ್ತಿದ್ದಳು. ತನ್ನ ತಪ್ಪನ್ನು ಮರೆಮಾಡುವುದಕ್ಕೋಸುಗ ಇಲ್ಲದುದನ್ನೆಲ್ಲ ಕಲ್ಪಿಸಿ ಬೋಂಕುವುದಕ್ಕೆ ಸ್ವಲ್ಪವಾದರೂ ಪ್ರಯತ್ನಿಸುತ್ತಿರಲಿಲ್ಲ.
ಒಂದಾನೊಂದು ದಿವಸ ಉಶೀನರಮಹಾರಾಜನು ವಿದ್ವಾಂಸರ ಮಧ್ಯದಲ್ಲಿ ಕುಳಿತು ವಿದ್ಯಾವ್ಯಾಸಂಗದಲ್ಲಿ ಕಾಲಹರಣ ಮಾಡುತ್ತಿದ್ದಾಗ ಆತನ ಆಸ್ಥಾನ ವಿದ್ವಾಂಸರಲ್ಲಿ ಅಗ್ರಗಣ್ಯನಾದ ವಿದ್ಯಾಸಮುದ್ರನೆಂಬ ಬ್ರಾಹ್ಮಣನು ರಾಜನ ಅಪ್ಪಣೆಯಪ್ರಕಾರವಾಗಿ ಈ ಕೆಳಗೆ ವಿವರಿಸುವ ರೀತಿಯಲ್ಲಿ ವಿದ್ಯಾ ವಿಷಯಿಕವಾದ ಒಂದು ಉಪನ್ಯಾಸವನ್ನು ಮಾಡಿದನು
" ಲೋಕದಲ್ಲಿ ಸ್ಥೂಲದೇಹವನ್ನು ಬಳೆಯಿಸುವುದಕ್ಕೆ ಆಹಾರವು ಹೇಗೆ ಆವಶ್ಯಕವೋ ಹಾಗೆಯೇ ಜ್ಞಾನವೆಂಬ ದೇಹವನ್ನು ಬಳೆಯಿಸುವುದಕ್ಕೆ ವಿದ್ಯೆಯೆಂಬ ಆಹಾರವು ಆವಶ್ಯಕವು. ವಿದ್ಯೆಯಿಂದ ವಿನಯವಿವೇಕಾದಿಗಳುಂಟಾಗುವುವು: ಅದರಿಂದ ಸಮಸ್ತ ಸದ್ಗುಣಗಳೂ ಉಂಟಾಗುವುವು. ಓದಿರತಕ್ಕವರು ಸಾಧಾರಣವಾಗಿ ತಮ್ಮ ವಿದ್ಯೆಗೆ ತಕ್ಕ ಬುದ್ಧಿಯನ್ನೂ ಸತ್ತ್ರವರ್ತನವನ್ನೂ ಹೊಂದಿ ಆವುದೋ ಒಂದು ಬಗೆಯಲ್ಲಿ ಗೌರವದಿಂದ ಜೀವನಮಾಡುತ್ತಿರುವುದನ್ನೂ, ಓದದೆ ಇರುವವರು ಬುದ್ಧಿಶಕ್ತಿಯು ಸಾಲದೆ ಒಳ್ಳೆಯ ನಡೆನುಡಿಗಳನ್ನರಿಯದೆ ಕಟ್ಟಿಗೆಯೊಡೆದು ಮಾರುವುದೇ ಮೊದಲಾದ ಕಾರ್ಯಗಳಲ್ಲಿ ನೀಚನಾಗಿ ಜೀವನ ಮಾಡುತ್ತಿರುವುದನ್ನೂ, ನಾವು ಸಮಸ್ತ ದೇಶಗಳಲ್ಲಿಯೂ ನೋಡುತ್ತಿರುವವಲ್ಲವೆ? ಕಳ್ಳತನ, ಕೊಲೆ ಮೊದಲಾದ ದೊಡ್ಡ ತಪ್ಪುಗಳನ್ನು ಮಾಡತಕ್ಕವರು ಸಂಪೂರ್ಣವಾಗಿ ವಿದ್ಯಾಹೀನರಾದ ಹೀನಜಾತಿಯವರೇ ಎಂಬುದು ಸಕಲರಿಗೂ ತಿಳಿದಿರುವುದು. ಸಭೆಗಳಿಗೆ ಹೊಗಿ ಉದ್ಯೋಗಗಳನ್ನು ಮಾಡಲಾರರಾದುದರಿಂದ, ಸ್ತ್ರೀಯರಿಗೆ ವಿದ್ಯೆಯು ಅನಾವಶ್ಯಕನೆಂದೂ, ಅನರ್ಥದಾಯಕವೆಂದೂ ಕೆಲವರು ಅಭಿಪ್ರಾಯಪಡುವರಲ್ಲದೆ ಅದನ್ನು ವಿವೇಕಿಗಳಾದವರು ಮೆಚ್ಚರು. ನಿದ್ದೆಯನ್ನು ಜ್ಞಾನಾಭಿವೃದ್ಧಿಗೋಸುಗ ಅಭ್ಯಾಸಮಾಡಬೇಕಲ್ಲದೆ ಉದ್ಯೋಗಳನ್ನು ಮಾಡುವುದಕ್ಕೋಸುಗವಲ್ಲ. ಫಲಾಪೇಕ್ಷೆಯಿಂದ ನಟ್ಟ ಹಲಸು ಮೊದಲಾದ ಗಿಡಗಳು ನೆಳಲನ್ನು ಕೊಡುವುದು ಮೊದಲಾದ ಅನೇಕ ಕಾರ್ಯಗಳಿಗೆ ಉಪಯೋಗವಾಗವಂತೆಯೇ ತಿಳಿವಿಗೋಸುಗ ಏರ್ಪಟ್ಟ ವಿದ್ಯೆಯು ಇನ್ನೂ ಇತರ ಕಾರ್ಯಗಳಿಗೆ ಉಪಯೋಗವಾಗುವುದು. ವಶುವಿಗಿಂತ ಮನುಷ್ಯನು ಉತ್ತಮನಾಗುವುದಕ್ಕೆ ಜ್ಞಾನವೇ ಮುಖ್ಯವಾದ ಕಾರಣನಾದುದರಿಂದಲೂ, ಸಾಧನವಾದುದರಿಂದಲೂ, ನಮ್ಮ ಹಿರಿಯರು ವಿದ್ಯಾಹೀನನನ್ನು ಎರಡು ಕಾಲಿನ ಪಶುವೆಂದೆಣಿಸುತ್ತಿದ್ದುದು ಯುಕ್ತವೇಸರಿ. ಮಾನುಷ ಧರ್ಮವನ್ನು ಬಿಟ್ಟು ವಶುವೃತ್ತಿಯಲ್ಲಿರಬೇಕೆಂದು ಬಯಸುವವನೊಬ್ಬನಲ್ಲದೆ ಮತ್ತಾವನೂ ಜ್ಞಾನೈಕನಾಧನವಾದ ವಿದ್ಯೆಯನ್ನು ಅನಾವಶ್ಯಕವಾದುದೆಂದು ಅಲೆಗಳೆಯನು. ಹೊರಗೆ ಬೇರೆಬೇರೆಯಾಗಿ ಕಾಣಿಸುತ್ತಿದರೂ ಭಾರ್ಯಾಭರ್ತರಿಬ್ಬರ ಶರೀರವೂ ಒಂದೇ ಎಂದು ಎಲ್ಲಾದೇಶದವರೂ ಹೇಳುವರು. ಹಾಗಾದಪಕ್ಷದಲ್ಲಿ, ಗಂಡನು ವಿದ್ಯಾವಂತನಾಗಿ ನಲಿಯಬೇಕೆಂದೂ, ಹೆಂಡತಿಯು ಅವಿದ್ಯಾವತಿಯಾಗಿ ನರಲಬೇಕೆಂದೂ ಹೇಳುವವರು. ಅರ್ಧಶರೀರವು ಮನುಷ್ಯನಾಗಿಯೂ, ಉಳಿದ ಅರ್ಧಶರೀರವು ಪಶುವಾಗಿಯೂ ಇರಬೇಕೆಂದು ಹೇಳಿದಂತಾಯಿತು. ವಿದ್ಯಾಗಂಧವೇ ಇಲ್ಲದ ವಶುಪ್ರಾಯನೊಡನೆ ವಿದ್ಯಾವಂತನಾದವ ನಾವನೂ ನಿಮಿಷಮಾತ್ರವಾದರೂ ಸೇರಲೊಲ್ಲನು. ಹೀಗಿರುವಾಗ ಸ್ತ್ರೀ ಯರಿಗೆ ವಿದ್ಯೆಯನ್ನು ಕಲಿಸದೆ, ಪಶುಗಳೊಡನೆ ಸಹವಾಸಮಾಡುವಂತೆ ತ್ರಿಕಾಲದಲ್ಲಿಯೂ ಅವಿದ್ಯಾವತಿಯರಾದ ಅಂಥವರೊಡನೆ ಸಹವಾಸಮಾಡ ಬೇಕೆಂದು ಉಪದೇಶಿಸುವವನು ಎಂತಹ ಬುದ್ದಿವಂತನೆನಿಸುವನೋ ಅದನ್ನು ನಾನು ತಿಳಿಸತಕ್ಕ ಅವಶ್ಯಕವಿಲ್ಲ. ನಿಷ್ಪಕ್ಷಪಾತವಾಗಿ ಆಲೋಚಿಸಿದರೆ, ವಿದ್ಯೆಯಿಲ್ಲದವರಿಗೂ ವಿದ್ಯೆಯನ್ನು ಕಲಿತವರಿಗೂ ಕತ್ತಲೆಗೂ ಬೆಳಕಿಗೂ ಇರುವಷ್ಟು ಭೇದವಿರುವುದು. ಐಕ್ಯಮತ್ಯದಿಂದ ಇಬ್ಬರಿಗೂ ಶುಭ ಉಂಟಾಗು ವಂತೆ ರಹಸ್ಯವಾಗಿ ಸಂಸಾರವನ್ನು ನಡೆಯಿಸಿಕೊಳ್ಳಬೇಕಾದವರಾದ ಭಾರ್ಯಾಭರ್ತರಲ್ಲಿ ವಿದ್ಯಾವ್ಯತ್ಯಾಸದಿಂದ ಒಬ್ಬರ ಮಾರ್ಗವು ಮತ್ತೊಬ್ಬರಿಗೆ ಸರಿಬೀಳದೆ ಒಬ್ಬರು ಊರಿಗೆಳೆದರೆ ಒಬ್ಬರು ನೀರಿಗೆಳೆಯುವಂತಹರಾದರೆ ಪ್ರಪಂಚದಲ್ಲಿ ಅವರು ಹೇಗೆ ಸುಖಿಸುವರೋ ನಾನರಿಯೆನು. ಸ್ತ್ರೀ ಪುರುಷರು ಕೆಲವಿಷಯಗಳಲ್ಲಿ ಮಾತ್ರ ಭಿನ್ನರಾಗಿದ್ದರೂ, ಜ್ಞಾನ, ಬುದ್ಧಿ, ಮೊದಲಾ ದುವುಗಳು ಮಾತ್ರ ಇಬ್ಬರಿಗೂ ಸಮಾನಗಳಾಗಿಯೇ ಇರುವುವು. ಆದುದ ರಿಂದ ಜ್ಞಾನಾಭಿವೃದ್ಧಿಗೆ ಕಾರಣಭೂತವಾದ ವಿದ್ಯೆಯು ಪುರುಷರಿಗೆ ಹೇಗೋ ಸ್ತ್ರೀಯರಿಗೂ ಹಾಗೆಯೇ ಪರಮ ಪ್ರಯೋಜನಕರವಾಗಿರುವುದರಲ್ಲಿ ಸಂದೇಹವಿಲ್ಲ. ಜ್ಞಾನನೇತ್ರಕ್ಕೆ ಸಹಾಯಕಾರಿಯಾದ ವಿದ್ಯೆಯಿಂದ ಪುರುಷರಿಗೆ ಶುಭವೂ ಸ್ತ್ರೀಯರಿಗೆ ಅಶುಭವೂ ಉಂಟಾಗುವುದೆಂದು ವಾದಿಸುವುದು, ಬಾಹ್ಯನೇತ್ರಕ್ಕೆ ಸಹಾಯಕಾರಿಯಾದ ಬೆಳಕನ್ನು ಪುರುಷರಿಗೆ ಪ್ರಯೋಜನಕಾರಿಯಾದುದಾಗಿಯೂ ಸ್ತ್ರೀಯರಿಗೆ ಅನರ್ಥಕಾರಿಯಾದು ದನ್ನಾಗಿಯೂ ಭಾವಿಸಿ ವಾದಿಸುವಂತೆ ಹಾಸ್ಯಾಸ್ಪದವಾದುದಲ್ಲವೆ? ಸಸಿಗಳಿ ಗೆರೆದ ನೀರು ಕಳೆಗಳು ಬೆಳೆಯುವುದಕ್ಕೂ ಉಪಯೋಗಕರವಾಗುವಂತೆ, ಸನ್ಮಾರ್ಗ ಪ್ರವರ್ತನೆಗೋಸುಗ ವಿನಿಯೋಗಿಸಲ್ಪಡಬೇಕಾದ ವಿದ್ಯೆಯು ಒಂದೊಂದುವೇಳೆ ಸ್ತ್ರೀ ಪುರುಷರ ದುರ್ಮಾಗಪ್ರವರ್ತನೆಗೂ ಸಹಾಯಕಾರಿ ಯಾಗಬಹುದು. ಕಳೆಯು ಬೆಳೆದೀತೆಂಬ ಶಂಕೆಯಿಂದ ನೀರೆರೆಯದೆಯೇ ಬೆಳೆಯನ್ನು ಒಣಗಿಸಿ ಹಾಳುಮಾಡುವುದು ಹೊಲದ ಯಜಮಾನನಿಗೆ ಹೇಗೆ ಧರ್ಮವಲ್ಲವೋ ಹಾಗೆಯೇ ಯಾವಾಗಲೋ ದುಷ್ಕಾರ್ಯಗಳಿಗೆ ಸಹಾಯ ಕಾರಿಯಾಗುವುದೆಂಬ ಶಂಕೆಯಿಂದ ಜ್ಞಾನಮೂಲವಾದ ವಿದ್ಯೆಯನ್ನು ತಾಯ್ತಂದೆಗಳು ತಮ್ಮ ಮಕ್ಕಳಿಗೆ ಕಲಿಸದೆ ಬಿಡುವುದು ಧರ್ಮವಲ್ಲವು. ಕಳೆಗಳನ್ನು ಬೆಳೆಯಗೊಡಿಸಿದರೆ ಸಸ್ಯಗಳಿಗೇ ಅವಾಯವುಂಟಾಗಿ ಫಲವು ಲಭಿಸಲಾರದೆಂಬುದನ್ನರಿತು ಹೊಲದ ಯಜಮಾನನು ಯುಕ್ತಕಾಲಗಳಲ್ಲಿ ಕಳೆಯನ್ನು ಕಿತ್ತು ಹಾಕಿ ಸಸ್ಯಗಳನ್ನು ಕಾಪಾಡುವಂತೆಯೇ, ಮಕ್ಕಳಿಗೆ ಕಲಿಸುವ ವಿದ್ಯೆಯು ದುಷ್ಕಾರ್ಯಗಳಿಗೆ ಉಪಯೋಗಕರವಾಗದಂತೆ ಅವರ ನ್ನು ಜಾಗರೂಕತೆಯಿಂದ ನೋಡಿಕೊಂಡು ಯುಕ್ತಕಾಲಗಳಲ್ಲಿ ಶಿಕ್ಷೆರಕ್ಷೆ ಗಳನ್ನು ಮಾಡುತ್ತೆ ಅದರ ಫಲವನ್ನನುಭವಿಸುವುದಕ್ಕೆ ಪ್ರಯತ್ನಿಸಬೇಕು. “ಸಸಿಯಾಗಿಬಾಗದುದು ಮರವಾಗಿ ಬಾಗೀತೇ?” ಎಂಬ ನಾಣ್ಣುಡಿಯನ್ನು ಜ್ಞಾಪಕದಲ್ಲಿರಿಸಿ, ದುರ್ಮಾರ್ಗದಲ್ಲಿರುವ ಮನಸ್ಸನ್ನು ಸನ್ಮಾರ್ಗಕ್ಕೆ ತಿರುಗಿಸಬೇಕಾದರೆ ಬಾಲ್ಯದಶೆಯೇ ಉತ್ತಮವಾದ ಕಾಲವೆಂದರಿತು ಹಾಗೆಮಾ ಡುವುದಕ್ಕೆ ಪ್ರಯತ್ನಿಸಬೇಕು. ಬಾಲ್ಯದಲ್ಲಿ ಕಲಿತ ದುರ್ಗುಣವೇ ಆಗಲಿ ಸುಗುಣನೇ ಆಗಲಿ ವಯಸ್ಸಾದ ಬಳಿಕ ಮಾರ್ಪಡಲಾರದು. ಒಂದುವೇಳೆ ಮಾರ್ಪಟ್ಟರೂ ಎಷ್ಟೊಶ್ರಮದಿಂದ ಸಾಧ್ಯವಾದಿತು. ಆದುದರಿಂದ ಬಲಕ ರನ್ನಾಗಲಿ ಬಾಲಿಕೆಯರನ್ನಾಗಲಿ ಚಿಕ್ಕಂದಿನಲ್ಲಿಯೇ ಯುಕ್ತ ಪ್ರವರ್ತನವುಳ್ಳವರನ್ನಾಗಿ ತಿದ್ದುವುದಕ್ಕೆ ಮಾತಾಪಿತೃಗಳು ಶಕ್ತಿವಂಚನೆಯಿಲ್ಲದೆ ಶ್ರಮಪಡುವುದು ಅತ್ಯವಶ್ಯಕವಾದ ಕರ್ತವ್ಯವಾಗಿರುವುದು. ಅದರಲ್ಲಿಯೂ ಬಾಲರ ವಿಷಯಕ್ಕಿಂತ ಬಾಲೆಯರ ವಿಷಯದಲ್ಲಿ ಹೆಚ್ಚಾದಶ್ರಮವನ್ನು ವಹಿಸಬೇಕು. ನಿರಂತರವೂ ಗಂಡುಮಕ್ಕಳು ತಾಯ್ತಂದೆಗಳ ಮನೆಯಲ್ಲಿಯೇ ಇರತಕ್ಕವರು. ಹೆಣ್ಣು ಮಕ್ಕಳಾದರೋ ಎಂದಾದರೂ ಮತ್ತೊ ಬೃರ ಮನೆಗೆ ಹೋಗಿ ಸೇರತಕ್ಕವರಾಗಿರುವರಲ್ಲದೆ ನಿರಂತರವೂ ತವರ್ಮನೆಯಲ್ಲಿ ಇರತಕ್ಕವರಲ್ಲ. ಆದುದರಿಂದ ಸಾಕಿದವರು ತಮಗೆ ಅಪಖ್ಯಾತಿಯು ಬಾರದಂತೆ, ಹೆಣ್ಣು ಮಕ್ಕಳು ಅತ್ತೆಯಮನೆಗೆ ಹೋಗುವ ಕಾಲವು ಸಮೀಪಿಸುವುದಕ್ಕೆ ಮೊದಲೇ ಅವರನ್ನು ಉತ್ತಮಗುಣವುಳ್ಳವರನ್ನಾಗಿಯೂ, ತಿಳಿವುಳ್ಳವರನ್ನಾಗಿಯೂ ಮಾಡಿರಬೇಕು. ತಮ್ಮ ಪುತ್ರಿ ಯರಿಗೆ ಮೊದಲು ಸುಗುಣಗಳನ್ನು ಕಲಿಸಿ ಜ್ಞಾನವತಿಯರನ್ನಾಗಿ ಮಾಡದೆ ಸಂಸಾರಸಾಗರದಲ್ಲಿ ಈಜುವುದಕ್ಕೋಸುಗ ಅವರನ್ನು ಪುರುಷರ ಮನೆ ಗಳಿಗೆ ಕಳುಹಿಸುವಂತಹ ತಾಯ್ತಂದೆಗಳು, ಈಜುಕಲಿಯದವರನ್ನು ಸಮು ದ್ರಕ್ಕೆ ತಳ್ಳಿ ಅವರು ಮುಳುಮುಳುಗಿ ಎದ್ದು ಗೋಳಾಡುತ್ತಿರುವಾಗ ಕಣ್ಣಾರೆ ಕಂಡು ಪಶ್ಚಾತ್ತಾಪವಟ್ಟು ಆಗ ಏನನ್ನೂ ಮಾಡಲಾರದೆ ನಿಂದೆಗೆ ಗುರಿಯಾಗಿ ವ್ಯಸನಪಡುವಂತಹ ಮೂಢರಂತೆ ಅಪಕೀರ್ತಿಯನ್ನು ಹೊಂದಿ ಪಶ್ಚಾತ್ತಾಪಪಡುವರು."
ಎರಡನೆಯ ಪ್ರಕರಣ.
ವಿದ್ಯಾಸಮುದ್ರನು ಈಯುವನ್ಯಾಸವನ್ನು ಪ್ರಾರಂಭಿಸಿದ ಸ್ವಲ್ಪ ಕಾಲದೊಳಗಾಗಿ ಚಂದ್ರಮತಿಯು ಅಲ್ಲಿಗೆ ಬಂದು ತಂದೆಯ ತೊಡೆಯಮೇಲೆ ಕುಳಿತುಕೊಂಡು ಅದು ಮುಗಿಯುವವರೆಗೂ ತದೇಕಧ್ಯಾನದಿಂದ ಕಿವಿಗೊಟ್ಟು ಕೇಳುತ್ತಿದಳು. ಉಶೀನರನು ತನ್ನ ಮುದುಗುವರಿಯ ಈ ಬಗೆಯ ಉತ್ಸಾಹವನ್ನು ಕಂಡು, ಉಪನ್ಯಾಸವೆಲ್ಲ ಮುಗಿದೊಡನೆಯೇ ಅವಳನ್ನು ಮುದ್ದಿಸಿ ಬೆನ್ನನ್ನು ನೇವರಿಸುತ್ತೆ " ಮಗೂ! ನೀನೇನೋ ಬಲು ತಿಳಿದವಳಂತೆ ಇಷ್ಟು ಹೊತ್ತೂ ಅತ್ತಿತ್ತ ತಿರುಗಿನೋಡದೆ ಬಹು ಶ್ರದ್ದೆಯಿಂದ ಉಪನ್ಯಾಸವನ್ನೆಲ್ಲ ಕೇಳುತ್ತಿದ್ದೆಯಲ್ಲವೆ? ಅದರಲ್ಲಿ ನಿನಗೇನಾದರೂ ತಿಳಿಯಿತೋ? " ಎಂದು ಕೇಳಿದನು.
ಚಂದ್ರ-ನಾನು ಕೇಳಿ ದುದರಲ್ಲಿ ಬಾಲೆಯರಿಗೂ ವಿದ್ಯೆಯನ್ನು ಕಲಿ ಸುವುದು ಉಪಯೋಗಕರವಾದುದೆಂದು ಅವರು ತಿಳಿಸಿದಂತೆ ತೋರುವುದು. ಅವರು ಹೇಳಿದುದರ ಮುಖ್ಯತಾತ್ಪರ್ಯವು ಅಷ್ಟೇ ಅಲ್ಲವೆ?
ಉಶೀನರ-ಅಹುದು. ಅವರು ಈಗ ವಿವರಿಸಿದುದು ಅಷ್ಟು ವಿಷಯ ನನ್ನೇ, ನೀನು ಎವೆಯಿಕ್ಕದೆ ಜಾಗರೂಕತೆಯಿಂದ ಕಡೆಯವರೆಗೂ ಕೇಳುತ್ತಿದ್ದುದನ್ನು ನೋಡಿದಾಗಲೇ, ಅದರ ಅರ್ಥವನ್ನೆಲ್ಲ ಗ್ರಹಿಸಿ, ವಿದ್ಯೆಯನ್ನು ಕಲಿಯಬೇಕೆಂಬ ಅಭಿಲಾಷೆಯುಳ್ಳವಳಾದೆಯೆಂದು ನನ್ನ ಮನಸ್ಸಿಗೆ ತೋರಿ ಬಹು ಸಂತೋಷವುಂಟಾಯಿತು. ನೀನು ವಿದ್ಯೆಯನ್ನು ಕಲಿಯುವುದಕ್ಕೆ ಮೊದಲುಮಾಡಿ ನನಗೂ ನಿಮ್ಮ ತಾಯಿಗೂ ಎಂದು ಸಂತೋಷವನ್ನುಂಟುಮಾಡುವೆಯೋ!
ಚಂದ್ರ—ಅವರು ಹೇಳಿದುದನ್ನು ಕೇಳಿದ ಬಳಿಕ ನನಗೆ ನೀವು ಯಾವಾಗ ವಿದ್ಯೆಯನ್ನು ಕಲಿಸತೊಡಗುವಿರೋ ಎಂಬ ಬುದ್ದಿಯು ಹುಟ್ಟಲು, ನಿಮ್ಮನ್ನು ಆ ವಿಷಯವಾಗಿಯೇ ಕೇಳಬೇಕೆಂದು ನಿಶ್ಚಯಿಸಿದೆನು. ಇಷ್ಟರೊಳಗಾಗಿ ನೀವು ನನ್ನ ಮನಸ್ಸಿನಲ್ಲಿದ್ದುದನ್ನೇ ಕೇಳಿದಿರಿ. ನೀವು ನನ್ನನ್ನು ಎಷ್ಟು ಜಾಗ್ರತೆಯಾಗಿ ವಿದ್ಯಾಭ್ಯಾಸಕ್ಕೆ ಬಿಡುವಿರೋ ಅಷ್ಟು ಸಂತೋಷದಿಂದ ನಾನೂ ವಿದ್ಯೆಯನ್ನು ಕಲಿಯುವುದಕ್ಕೆ ಸಿದ್ಧಳಾಗಿರುವೆನು. ಇದುವರೆಗೆ ನಮ್ಮ ತಾಯಿಯು ಕೆಲವಕ್ಷರಗಳನ್ನೂ ಬರೆಯುವ ಕ್ರಮವನ್ನೂ ಸ್ವಲ್ಪ ಸ್ವಲ್ಪವಾಗಿ ಕಲಿಸಿರುವಳು.
ಎಂದು ಚಂದ್ರಮತಿಯು ಪ್ರತ್ಯುತ್ತರವನ್ನು ಕೊಡಲು ರಾಜನು ಅಪರಿಮಿತಾನಂದವನ್ನು ಹೊಂದಿ, ತತ್ಕ್ಷಣದ ವಿದ್ಯಾಸಮುದ್ರನಿಗೆ ಆಕೆಯನ್ನು ತೋರಿಸಿ, "ನಿಮ್ಮ ಶಿಷ್ಯಳಾದ ಇವಳಿಗೆ ವಿದ್ಯಾ ಬುದ್ದಿಗಳನ್ನು ಕಲಿಸಿ ಸನ್ಮಾರ್ಗದಲ್ಲಿರುವಂತೆ ತಿದ್ದುವ ಭಾರವು ನಿಮಗೇ ಸೇರಿರುವುದು" ಎಂದು ಹೇಳಿ ಚಂದ್ರಮತಿಯನ್ನೊಪ್ಪಿಸಿ, ಧನಕನಕವಾದಿಗಳಿಂದ ಆತನನ್ನು ಸತ್ತರಿಸಿ ಕಳುಹಿಸಿದನು. ಬಳಿಕ ವಿದ್ಯಾಸಮುದ್ರನು ಒಂದು ಒಳ್ಳೆಯ ಮುಹೂರ್ತವನ್ನು ನೋಡಿ ಅಂದಿನಿಂದ ಚಂದ್ರಮತಿಗೆ ವಿದ್ಯೆಯನ್ನು ಕಲಿಸುವುದಕ್ಕೆ ಮೊದಲುಮಾಡಿ, ಎರಡು ವರ್ಷಗಳೊಳಗಾಗಿ ಹೇಳಿದುದನ್ನೆಲ್ಲ ತಪ್ಪಿಲ್ಲದೆ ಬರೆಯುವುದನ್ನೂ, ಕೊಟ್ಟ ಪುಸ್ತಕವನ್ನು ಚೆನ್ನಾಗಿ ಓದುವುದನ್ನೂ, ಸುಲಭವಾದ ಪದ್ಯಗಳನ್ನು ಇತರರ ಸಹಾಯವಿಲ್ಲದೆಯೇ ಅರ್ಥಮಾಡಿಕೊಳ್ಳುವುದನ್ನೂ, ಸಾಮಾನ್ಯವಾಗಿ ಕುಶಲಪತ್ರಿಕೆಗಳನ್ನು ಬರೆಯುವುದನ್ನೂ, ನಿರಾಯಾಸವಾಗಿ ಕಲಿಸಿದನು. ಮಕ್ಕಳನ್ನು ಆಟಪಾಟಗಳಿಗೆ ಸ್ವಲ್ಪ ಕಾಲವಾದರೂ ಬಿಡದೆ ನಿರ್ಬಂಧಪಡಿಸಿ ಓದಿಸಿದಪಕ್ಷದಲ್ಲಿ ಮನಸ್ಸಿಗೆ ಹಿಡಿಯದೆ ಅದರಿಂದ ಅವರಿಗೆ ಲಾಭವುಂಟಾಗಲಾರದೆಂದೂ, ಪ್ರತಿದಿನವೂ ಸ್ವಲ್ಪ ಕಾಲ ಆಟಪಾಟಗಳನ್ನಾಡುವುದು ದೇಹಾರೋಗ್ಯಕ್ಕೆ ಆವಶ್ಯಕವಾದುದೆಂದೂ ವಿದ್ಯಾ ಸಮುದ್ರನು ಚೆನ್ನಾಗಿ ತಿಳಿದವನಾಗಿದ್ದುದರಿಂದ, ಚಂದ್ರಮತಿಗೆ ಯಾವಾಗಲೂ ಶ್ರಮೆಯೆಂದು ತೋರದಂತೆ ಒಳ್ಳೆಯ ಮಾತುಗಳನ್ನಾಡಿ ಪ್ರೋತ್ಸಾಹಪಡಿಸಿ ಉಪಾಯವಾಗಿ ಓದಿಸುತ್ತೆ, ಸ್ವಲ್ಪ ಕಾಲ ಆಡುವುದಕ್ಕೆ ಬಿಟ್ಟು ಆ ಆಟದಲ್ಲಿಯೂ ಆವುದೋ ಒಂದು ಉಪಯುಕ್ತವಾದ ವಿಷಯವನ್ನೇ ಕಲಿಸುತ್ತಿದ್ದನು; ಮಕ್ಕಳಿಗೆ ಗೊಂಬೆಗಳನ್ನು ನೋಡುವುದರಲ್ಲಿ ಅತ್ಯುತ್ಸಾಹ ವೆಂಬುದನ್ನರಿತು, ಗೋಡೆಯಲ್ಲಿ ಚಿತ್ರಪಟಗಳ ಬಳಿಗೆ ಅವಳನ್ನು ಆಗಾಗ ಕರೆದುಕೊಂಡುಹೋಗಿ, ಅಲ್ಲಿಯ ಕಲ್ಲುಕಂಭಗಳ ಮೇಲೆಯೂ ಕೆತ್ತಲ್ಪಟಿದ್ದ ವಿಗ್ರಹಗಳನ್ನು ತೋರಿಸಿ ಅವುಗಳ ವಿಷಯದಲ್ಲಿ ವಿನೋದಕರಗಳಾದ ಕೆಲವು ಕಥೆಗಳನ್ನು ಹೇಳಿ ತನ್ಮೂಲವಾಗಿಯೂ ನೀತಿಯನ್ನು ಕಲಿಸುತ್ತಿದ್ದನು. ಆ ಬಾಲೆಯು ಗ್ರಹಿಸಲಾರದಂತಹ ವಿಷಯವನ್ನೆಂದೂ ಆತನು ಹೇಳುತ್ತಿರಲಿಲ್ಲ; ಹೇಳಿದುದರ ಅರ್ಧವೇ ತಿಳಿಯದಂತೆ ಕುರುಡು ಪಾಠವಾಗಿ ಒಂದು ಪದ್ಯವನ್ನಾಗಲಿ ಹಾಡನ್ನಾಗಲಿ ಹೇಳಿಕೊಡಲಿಲ್ಲ. ಓದಿಸಿದ ವ್ಯಾಕರಣಾದಿಲಕ್ಷಣಗಳೊಡನೆ ಭಾಷಾಭಿವೃದ್ಧಿಗೋಸುಗ ಲಕ್ಷಗಳನ್ನೂ ಕಲಿಸಿ ಓದಿದುದೆಲ್ಲವೂ ಪ್ರಯೋಜನಕರವಾಗುವಂತೆ ಮಾಡಿದನು. ಬುದ್ಧಿವಿಕಾಸವೂ, ವಿಭಾಗಜ್ಞಾನವೂ ಉಂಟಾಗಲೆಂಬ ಅಭಿಪ್ರಾಯದಿಂದ, ಸಾಧಾರಣವಾಗಿ ಗೃಹಕೃತ್ಯವನ್ನು ನಿರ್ವಹಿಸುವುದಕ್ಕೆ ಬೇಕಾಗುವುದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಗಣಿತಶಾಸ್ತ್ರವನ್ನು ಕಲಿಸಿದನು. ಮುಂದೆ ಸಂಸಾರ ಭಾರವೆಲ್ಲ ಮೇಲೆ ಬಿದ್ದು ಅನೇಕ ಕಷ್ಟಗಳು ಸಂಭವಿಸಿ ಶರೀರವನ್ನು ಧರಿಸಿರುವುದೇ ದುಸ್ಸಹವಾಗಿ ತೋರುವಂತಹ ಕಾಲದಲ್ಲಿ ಮನಸ್ಸಿಗೆ ಉಲ್ಲಾಸವನ್ನೂ, ವಿಶ್ರಾಂತಿಯನ್ನೂ ಉಂಟುಮಾಡುವುದಕ್ಕೋಸುಗ ಗಾನವಿದ್ಯಾಭ್ಯಾಸವನ್ನು ಮಾಡಿಸಿ ಭಕ್ತಿರಸಪುಷ್ಟಗಳಾದ ಹಾಡುಗಳನ್ನೂ, ಪದ್ಯಗಳನ್ನೂ ಬಗೆಬಗೆಯ ರಾಗಗಳಿಂದ ಕಿವಿಗಿಂಪಾಗಿರುವಂತೆ ಹಾಡುವುದಕ್ಕೂ ಸಾಮರ್ಥ್ಯವನ್ನುಂಟುಮಾಡಿದನು. ಲೋಕದಲ್ಲಿ ಸಾಧಾರಣವಾಗಿ ಬಾಲಕರಾಗಲಿ ಬಾಲಕಿಯರಾಗಲಿ ತಾವು ಕಲಿತುದನ್ನು ಇತರರಿಗೆ ಕಲಿಸತಕ್ಕ ಆಶ್ಚರಕರವಾದ ಸ್ವಭಾವವುಳ್ಳವರಾಗಿರುವರಾದುದರಿಂದ, ಈಗ ಚಂದ್ರಮತಿಯೂ ತಾನು ಗುರುವೆಂದೆಣಿಸಿ ತನ್ನ ಒಡನಾಡಿಯರನ್ನಾಗಲಿ, ಅವರಿಲ್ಲದಿದ್ದರೆ ಗೊಂಬೆ ಮೊದಲಾದುವುಗಳನ್ನಾಗಲಿ ಶಿಷ್ಯರಂತೆ ಏರ್ಪಡಿಸಿಕೊಂಡು, ತಾನು ಗುರುವಿನ ಬಳಿಯಲ್ಲಿ ಓದಿದುದನ್ನೆಲ್ಲಾ ಬೋಧಿಸಿ ಆಡಿಕೊಳ್ಳುತ್ತೆ ಮತ್ತಷ್ಟು ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಳು. ಹಿರಿಯರೂ ಮತ್ತು ತಿಳಿದವರೂ ಹೇಗೆ ಪ್ರವರ್ತಿಸುವರೋ ಮಕ್ಕಳೂ ಮತ್ತೂ ತಿಳಿಯದವರೂ ಹಾಗೆಯೇ ನೋಡಿ ನಡೆಯುವುದು ಲೋಕಸ್ವಭಾವವಾದುದರಿಂದ, ಮನೆಯಲ್ಲಿ ತಾಯ್ತಂದೆಗಳ ಸತ್ಪ್ರವರ್ತನವನ್ನೂ ಹೊರಗೆ ಗುರುವಾದ ವಿದ್ಯಾಸಮುದ್ರನ ಒಳ್ಳೆಯ ನಡೆನುಡಿಗಳನ್ನೂ ಕಂಡು ಚಂದ್ರಮತಿಗೆ ಉಂಟಾದ ಸುಗುಣ ಸಂಪತ್ತುಗಳಷ್ಟಿಷ್ಟೆಂದು ಹೇಳಲು ಶಕ್ಯವಲ್ಲ. ಬಾಯಿಂದ ಆಡುವ ಬರಿಮಾತುಗಳಿಗಿಂತ ಕೈಯಿಂದ ಮಾಡಿ ತೋರಿಸುವ ಕಾರ್ಯಗಳೇ ಮನಸ್ಸಿಗೆ ಚೆನ್ನಾಗಿ ನಾಟತಕ್ಕುವುಗಳಾದುದರಿಂದ, ಗುರುವು ಬೋಧಿಸಿದ ಉಪದೇಶಗಳಿಗಿಂತ ಆತನ ಸದ್ವರ್ತನವೇ ಚಂದ್ರಮತಿಯನ್ನು ವಿಶೇಷ ನೀತಿಯುಕ್ತೆಯನ್ನಾಗಿ ಮಾಡಿತು.
ಆತನು ಚಂದ್ರಮತಿಗೆ ಇಹಲೋಕಾನುಕೂಲಗಳಾದ ಸಂಗತಿಗಳನ್ನು ಹೆಚ್ಚಾಗಿ ಬೋಧಿಸುತ್ತಿದನಾದರೂ, ಪರಲೋಕಸಾಧಕನಾದ ಭಗವದ್ವಿಷಯಕಜ್ಞಾನವನ್ನೂ ಉಂಟುಮಾಡಿಸದಿರಲಿಲ್ಲ. ಒಂದುದಿವಸ ಚಂದ್ರಮತಿಯು ಒಂದು ಚಿತ್ರಪಟವನ್ನು ಕೈಯಲ್ಲಿ ಹಿಡಿದುಕೊಂಡು, ಅದರ ಸೊಗಸನ್ನು ಕಂಡು ಅಚ್ಚರಿಗೊಂಡು ತಲೆದೂಗುತ್ತಿರುವಾಗ ಅವಳ ಗುರುವು ಅಲ್ಲಿಗೆ ಬಂದನು.
ಗುರು - ಮಗೂ! ನಾನು ಬಂದಿರುವ ಸಂಗತಿಯನ್ನೇ ಅರಿಯದೆ ನೀನು ಆ ಪಟವನ್ನು ಬಹುಶ್ರದ್ದೆಯಿಂದ ನೋಡುತ್ತಿರುವೆಯಲ್ಲವೆ? ಅದರಲ್ಲಿ ನಿನ್ನ ಮನಸ್ಸನ್ನು ಆಕರ್ಷಿಸುವಷ್ಟು ವಿಚಿತ್ರವಾದುದಾವುದಿರುವುದು?
ಚ೦ದ್ರ-ಈ ಪಟದಲ್ಲಿರುವ ಸರಸ್ವತೀ ವಿಗ್ರಹವು ಬಲು ಸೊಗಸಾಗಿರುವುದಾದರೂ, ಈ ವಿಗ್ರಹದ ಕೈಯಲ್ಲಿರುವ ತಾವರೆಯ ಪುಷ್ಪವನ್ನು ಕಂಡ ಬಳಿಕ ನನ್ನ ಮನಸ್ಸು ಮತ್ತೆಲ್ಲಿಯೂ ಚಲಿಸದೆ ಎಷ್ಟು ಹೊತ್ತು ನೋಡಿದರೂ ತೃಪ್ತಿಯೊಂದದಿರುವುದು.
ಗುರು-ಇದುವರೆಗೆ ನೀನು ಎಂದೂ ನೋಡದಿರುವ ಸುಂದರತರವಾದ ಆ ಸರಸ್ವತೀ ವಿಗ್ರಹಕ್ಕಿಂತ ಪ್ರತಿದಿನವೂ ನೀನು ಕೈಯಲ್ಲಿ ಹಿಡಿದು ಕೊಂಡೇ ಇರುವಂತಹ ಆ ತಾವರೆಯ ಹೂವು ನಿನಗಿಷ್ಟು ವಿಚಿತ್ರವಾಗಿ ತೋರುವುದಕ್ಕೆ ಕಾರಣವೇನು?
ಚಂದ್ರ-ಇದು ಬಟ್ಟೆಯಮೇಲೆ ಬರೆಯಲ್ಪಟ್ಟಿರುವುದಾದರೂ, ನಿಶ್ಚಯವಾದ ತಾವರೆಯ ಹೂವಿನಂತೆಯೇ ಕಾಣಿಸುತ್ತಿರುವುದು. ಇದೊ, ನನಗೆ ಆಟಕ್ಕೋಸುಗ ನಮ್ಮ ದಾಸಿಯು ಸರೋವರದಿಂದ ಕೊಯ್ದು ತಂದಿ ರುವಂತಹ ಈ ತಾವರೆಯಂತೆಯೇ, ಎಸಳುಗಳೂ, ನಾಳವೂ, ಬಣ್ಣವೂ ಸ್ವಲ್ಪವಾದರೂ ವ್ಯತ್ಯಾಸವಿಲ್ಲದಿರುವುವು. ಇಷ್ಟು ಚಮತ್ಕಾರವಾಗಿ ಬರೆದಿರುವ ಆ ಚಿತ್ರಕಾರನ ಬುದ್ದಿ ವಿಶೇಷವನ್ನು ಮೆಚ್ಚದಿರುವುದಕ್ಕಾದೀತೇ?
ಗುರು-ಇದರಲ್ಲಿ ನಿನಗಿಷ್ಟು ಸಂತೋಷವುಂಟಾಗುವುದಕ್ಕೆ ಇದು ನಿಶ್ಚಯವಾದ ತಾವರೆಯ ಹೂವಿನ೦ತಿರುವುದೇ ಕಾರಣವೆಂದು ನೀನೇ ಹೇಳುತ್ತಿರುವೆಯಲ್ಲವೆ? ಇದು ಮತ್ತೊಂದು ತಾವರೆಯನ್ನು ಸ್ವಲ್ಪವಾದರೂ ವ್ಯತ್ಯಾಸವಿಲ್ಲದೆ ಹೋಲುತ್ತಿರುವ ಮಾತ್ರಕ್ಕೆ ಇಷ್ಟು ಸಂತೋಷ ಪಡಬೇಕಾಗಿರುವಾಗ, ಆ ಮತ್ತೊಂದು ತಾವರೆಯನ್ನು ನೋಡಿ ಸಂತೋಷ ಪಡದೆಯೂ, ಅದನ್ನು ಮಾಡಿದ ದಿವ್ಯಚಿತ್ರಕಾರನ ಶಕ್ತಿಯನ್ನು ಪರ್ಯಾ ಲೋಚಿಸಿ ಆಶ್ಚರ್ಯಪಡದೆಯೂ ಇರುವುದು ಬಹು ವಿಸ್ಮಯಕರವಾಗಿರುವುದಲ್ಲವೇ?
ಚಂದ್ರ-ಈಗ ನಾನು ಮುಡಿಯಲ್ಲಿಟ್ಟುಕೊಂಡಿರುವ ಈ ತಾವರೆಯ ಹೂವೂ ಒಬ್ಬರಿಂದ ಮಾಡಲ್ಪಟ್ಟುದೇ?
ಗುರು- ಈ ಪಟದಲ್ಲಿರುವ ತಾವರೆಯ ಹೂವನ್ನು ಯಾರಾದರೂ ಬರೆದಿರುವರೋ ಇಲ್ಲದೆ ತಾನಾಗಿಯೇ ಹುಟ್ಟಿತೋ?
ಚಂದ್ರ-ಇದನ್ನು ಬರೆದವರಾರೋ ನಾನರಿಯೆನಾದರೂ, ಇದು, ಆವನೋ ಒಬ್ಬನಿಂದ ಬರೆಯಲ್ಪಟ್ಟುದೆಂದು ಮಾತ್ರ ನಾನು ಬಲ್ಲೆ, ಯಾರೂ ಬರೆಯದಿದ್ದ ಪಕ್ಷದಲ್ಲಿ, ಈ ಹೂವು ಇಲ್ಲಿ ಹೇಗೆ ಇರುತ್ತಿದ್ದಿತು?
ಗುರು-ನೀನು ಹೇಳಿದ ಪ್ರತ್ಯುತ್ತರವು ಬಲು ಚೆನ್ನಾಗಿರುವುದು. ಒಬ್ಬರು ಮಾಡಿದಲ್ಲದೆ ಒಂದು ವಸ್ತುವಾಗುವುದಿಲ್ಲವೆಂದು ನೀನು ತಿಳಿದು ಕೊಂಡಿರುವೆಯೆಂಬುದು ನಿನ್ನ ಮಾತಿನಿಂದಲೇ ಸ್ಪಷ್ಟವಾಯಿತು. ಆದ ಕಾರಣದಿಂದಲೇ ಈಗ ನೀನು ಮುಡಿಯಲ್ಲಿಟ್ಟುಕೊಂಡಿರುವ ತಾವರೆಯ ಹೂವನ್ನೂ ಒಬ್ಬರು ಮಾಡದಿದ್ದ ಪಕ್ಷದಲ್ಲಿ, ಇದೂ ಇರುತ್ತಿರಲಿಲ್ಲ.
ಚಂದ್ರ-ಹಾಗಾದರೆ ಇದನ್ನು ಮಾಡಿದವರಾರೋ ಆವರನ್ನು ನನಗೆ ತೋರಿಸುವಿರಾ?
ಗುರು—ಆ ಮಹಾನುಭಾವನು ನಮ್ಮ ಕಣ್ಣುಗಳಿಗೆ ಕಾಣಿಸತಕ್ಕವನಲ್ಲ. ಅವನು ಕಾಣಿಸದಿದ್ದರೂ ಈಗ ಇಲ್ಲಿಯೇ ಇದ್ದು ನಾವಾಡುತ್ತಿರುವ ಮಾತುಗಳನ್ನೆಲ್ಲ ಕೇಳುತ್ತಲೇ ಇರುವನು. ಆತನಿಲ್ಲದ ಸ್ಥಳವಾವುದೂ ಇಲ್ಲ. ಆತನು ಮಾಡಿರುವ ವಸ್ತುಗಳೆಲ್ಲವೂ ಸರ್ವೋತ್ತಮಗಳಾಗಿಯೇ ಇರುವುವು. ಆತನೇ ಎಲ್ಲಕ್ಕೂ ಅಧಿಪತಿಯಾಗಿರುವನು. ನಾವು ಮಾಡಿದ ವಸ್ತುಗಳು ಎಷ್ಟು ಸೊಗಸಾದುವುಗಳಾಗಿದ್ದರೂ, ಆತನು ಮಾಡಿರುವ ವಸ್ತುಗಳೊಡನೆ ಹೋಲಿಸಿನೋಡಿದರೆ ಕೋಟ್ಯಂಶದಲ್ಲಿ ಒಂದಂಶಕ್ಕೂ ಸರಿಬಾರವು. ಈ ವಟದಲ್ಲಿ ಬರೆಯಲ್ಪಟ್ಟಿರುವ ಕಮಲವು ಎಷ್ಟು ಮನೋಹರವಾಗಿರುವುದಾದರೂ, ಈಶ್ವರನಿರ್ಮಿತವಾದ ಆ ಕಮಲದೊಡನೆ ಹೋಲಿಸಿದರೆ ಸ್ವಲ್ಪವೂ ಸರಿಬಾರದು. ಬಣ್ಣದಲ್ಲಿಯೂ, ರೂಪದಲ್ಲಿಯೂ ಸ್ವಲ್ಪ ಮಾತ್ರ ಸರಿಬರಬಹುದಾದರೂ, ಅದರಲ್ಲಿರುವ ತಂಪೂ, ಮಾರ್ದವವೂ, ಪರಿಮಳವೂ, ಮಕರಂದವೂ, ಇದರಲ್ಲೆಲ್ಲಿರುವುವು? ಅದನ್ನು ನಾವು ಸುಮ್ಮನೆ ನೋಡಿ ಸಂತೋಷಪಡಬೇಕಾಗಿರುವುದಲ್ಲದೆ, ಅದರಂತೆ ಇದನ್ನು ಮುಡಿಯಲ್ಲಿಟ್ಟುಕೊಳ್ಳುವುದಕ್ಕೂ, ಔಷಧಾದಿಗಳೊಡನೆ ಉಪಯೋಗಿಸುವುದಕ್ಕೂ ಹೇಗೆ ತಾನೆ ಆದೀತು? ಹೀಗೆ ನಮಗೆ ಮಹೋಪಯೋಗಿಗಳಾಗುವಂತೆ ಸಮಸ್ತ ಪದಾರ್ಥಗಳನ್ನೂ ಸೃಷ್ಟಿಸಿರುವ ಸರ್ವೆಶ್ವರನ ವಿಚಿತ್ರ ಸೃಷ್ಟಿಗೆ ಆಶ್ಚರ್ಯಪಡುತ್ತೆ ನಾವು ಆತನ ವಿಷಯದಲ್ಲಿ ಭಕ್ತಿ ಕೃತಜ್ಞತೆಗಳುಳ್ಳವರಾಗಿರಬೇಕು.
ಚ೦ದ್ರ-ತಾವು ಹೇಳಿದ ಆ ಸರ್ವೆಶ್ವರನೆಂಬ ಚಿತ್ರಕಾರನು ಮಾಡಿದ ಪದಾರ್ಥಗಳು ಮತ್ತಾವುವಿರುವುವು? ಗುರು- ಆತನು ಮಾಡದಿರುವ ಪದಾರ್ಥವಾವುದೂ ಇಲ್ಲ. ನೀನು ಭೂಮಿಯಲ್ಲಿ ನೋಡಿದರೂ, ಅಂತರಿಕ್ಷದಲ್ಲಿ ನೋಡಿದರೂ, ಮತ್ತೆಲ್ಲಿ ನೋಡಿದರೂ, ಆತನು ಮಾಡಿರುವ ಅನೇಕ ಸುಂದರಪದಾರ್ಥಗಳು ಕಣ್ಣುಗಳಿಗೆ ಆನಂದವನ್ನುಂಟುಮಾಡುತ್ತಿರುವುವು. ನಮಗೆ ಕಾಣಿಸುತ್ತಿರುವ ಪದಾರ್ಥಗಳನ್ನೆಲ್ಲ ಸೃಷ್ಟಿಸಿದವನಾತನೇ.
ಚಂದ್ರ-ನೀವು ಹೇಳುವುದನ್ನು ಕೇಳಿದರೆ, ಈ ವೃಕ್ಷರಾಜಿಯನ್ನೂ, ಸೂರ್ಯಚಂದ್ರರನ್ನೂ ಆತನೇ ಸೃಷ್ಟಿಸಿದವನೆಂದು ತೋರುವುದು.
ಗುರು-ಸೂರ್ಯಚಂದ್ರಾದಿ ಜಡಪದಾರ್ಥಗಳನ್ನು ಮಾತ್ರವಲ್ಲದೆ, ಪಶುಪಕ್ಷ್ಯಾದಿ ಸಮಸ್ತ ಜೀವರಾಶಿಗಳನ್ನೂ, ನಿನ್ನನ್ನೂ, ನನ್ನನ್ನೂ, ಸಮಸ್ತ ಮನುಷ್ಯಕೋಟಿಯನ್ನೂ ಸೃಷ್ಟಿಸಿ ಕಾಪಾಡುತ್ತಿರುವವನಾಮಹಾತ್ಮನೇ ಚರಾಚರಗಳಾದ ಸಮಸ್ತ ಪದಾರ್ಥಗಳೂ ಆತನಿಂದಲೇ ಸೃಷ್ಟಿಸಲ್ಪಟ್ಟುವು ಗಳಾಗಿವೆ. ಇವುಗಳಲ್ಲದೆ ನಮ್ಮ ಕಣ್ಣುಗಳಿಗೆ ಕಾಣಿಸದಿರುವಂತಹ ವಸ್ತುಗಳನ್ನೂ ಅಸಂಖ್ಯಾಕವಾಗಿ ಸೃಷ್ಟಿಸಿರುವನು.
ಚಂದ್ರ-ಇಂತಹ ಅದ್ಭುತಶಕ್ತಿಯನ್ನುಳ್ಳ ಆ ಸರ್ವೆಶ್ವರನ ಮಹತ್ವಾದಿಗಳನ್ನು ಸಂಪೂರ್ಣವಾಗಿ ಹೇಳಬೇಕೆಂದು ನನಗೆ ಆಸೆಯುಂಟಾಗಿರುವುದು. ತಾವು ಅದನ್ನು ನನಗೆ ವಿವರಿಸಬೇಕು.
ಗುರು-ಆತನ ದಿವ್ಯಗುಣಗಳಲ್ಲಿ ಸಹಸ್ರಾಂಶಗಳಲ್ಲೊಂದನ್ನಾದರೂ ನಾನು ವರ್ಣಿಸುವುದಕ್ಕೆ ಸಮರ್ಥನಲ್ಲ. ಈಗ ಇಷ್ಟೇ ಸಾಕು. ನಿನಗೆ ಜ್ಞಾನಾಭಿವೃದ್ಧಿಯುಂಟಾದಹಾಗೆಲ್ಲ, ನೀನೇ ಆತನ ಗುಣಗಳನ್ನು ತಿಳಿದುಕೊಂಡು ಸಂತೋಷಪಡವೆ.
ಮತ್ತೊಂದುದಿನ ಚಂದ್ರಮತಿಯು ಗುರುವಿನ ಬಳಿಯಲ್ಲಿ ಓದಿಕೊಳ್ಳುತ್ತಿರುವಾಗ, ಅಲ್ಲಿಗೆ ಒಬ್ಬ ಇಂದ್ರಜಾಲಿಕನು ಬಂದು ತನ್ನ ಚೀಲವನ್ನು ತೆರೆದು ತನ್ನ ವಿದ್ಯಾತಿಶಯವನ್ನು ನೋಡಬೇಕೆಂದು ಪ್ರಾರ್ಥಿಸಿದನು. ಅವನನ್ನು ಕಂಡು ಅಲ್ಲಿ ಓದಿಕೊಳ್ಳುತ್ತಿದ್ದ ಬಾಲೆಯರೆಲ್ಲರೂ ಓದಿನ ಮೇಲಣ ಆಸೆಯನ್ನುಳಿದು ಅವನ ಕಡೆಯೇ ನೋಡತೊಡಗಿದರು. ವಿದ್ಯಾಸಮುದ್ರನು ಅವರ ಅಭಿಪ್ರಾಯವನ್ನು ಗ್ರಹಿಸಿ, ಬುದ್ಧಿಯು ಮತ್ತೊಂದು ವಿಷಯದಲ್ಲಿ ಪ್ರವರ್ತಿಸಿರುವಾಗ ಓದಿಸುವುದರಿಂದ ಪ್ರಯೋ ಜನವಿಲ್ಲವೆಂಬುದನ್ನು ತಿಳಿದವನಾದುದರಿಂದ, ತತ್‌ಕ್ಷಣವೇ ಓದುಗಲಿಸುವುದನ್ನು ನಿಲ್ಲಿಸಿ, ಮಕ್ಕಳನ್ನೆಲ್ಲ ತನ್ನ ಮುಂದೆ ಒಟ್ಟುಗೂಡಿಸಿಕೊಂಡು, ಕೆಲವು ವಿನೋದಗಳನ್ನು ತೋರಿಸುವಂತೆ ಐಂದ್ರಜಾಲಿಕನಿಗಾಜ್ಞಾಪಿಸಿ, ಆ ಇಂದ್ರಜಾಲಿಕನು ತಾನು ಕಲಿತಿದ್ದ ವಿಷಯಗಳಲ್ಲಿ ಕೆಲವನ್ನು ತೋರಿಸಿದ ತರುವಾಯ ಅವನಿಗೆ ತಕ್ಕ ಬಹುಮಾನವನ್ನು ಮಾಡಿ ಸಂತೋಷಗೋಳಿಸಿ ಕಳುಹಿಸಿದನು. ಆಗಳಾಬಾಲೆಯರೆಲ್ಲರೂ ಅವನು ಮಾಡಿದ ಅದ್ಭುತಕಾರ್ಯಗಳನ್ನು ಪರಸ್ಪರವಾಗಿ ಹೇಳಿಕೊಂಡು ಆಶ್ಚರ್ಯಪಡತೊಡಗಿದರು. ಐಂದ್ರಜಾಲಿಕನು ಎಲ್ಲರಿದಿರಾಗಿ ಮಾವಿನ ಓಟೆಯನ್ನು ನೆಲದಲ್ಲಿ ಹೂತು ನಿಮಿಷಮಾತ್ರದಲ್ಲಿ ಅದು ಮೊಳೆತು ಹೂಗಚ್ಚಿ ಫಲಿಸುವಂತೆ ಮಾಡಿದುದನ್ನೂ, ಒಂದು ಕಾಸನ್ನು ಚೀಲದೊಳಕ್ಕೆ ಹಾಕಿ ಅದೇ ಚೀಲದಿಂದ ಹೊರಕ್ಕೆ ಹಲವು ಕಾಸುಗಳನ್ನು ತೆಗೆದು ತೋರಿಸಿದುದನ್ನೂ, ಅವನು ಮಾಡಿದ ಕಾರ್ಯಗಳೊಳಗೆಲ್ಲ ಬಹು ಶ್ಲಾಘ್ಯವಾದುವುಗಳೆಂದು ಚಂದ್ರಮತಿಯು ಮೆಚ್ಚಿ ಗುರುವಿನೊಡನೆ ಪ್ರಸ್ತಾಪಿಸಿದಳು. ಆತನಾದರೋ ಅದನ್ನೇ ನೆವವನ್ನಾಗಿಟ್ಟುಕೊಂಡು ಚಂದ್ರಮತಿಗೆ ತನ್ಮೂಲವಾಗಿ ಕೆಲವುಪಯುಕ್ತ ವಿಷಯಗಳನ್ನು ಬೋಧಿಸಲೆಳಸಿ ಇಂತೆಂದನು: ಗುರು-ಎಲೌ ವತ್ಸೇ! ಹಿಂದೆ ನಾನು ನಿನ್ನೊಡನೆ ಹೇಳಿರುವ ಆ
ಸೃಷ್ಟಿಕರ್ತನೊಬ್ಬನಿಗಲ್ಲದೆ ಮತ್ತಾರಿಗೂ ಹೊಸಬಗೆಯ ಸೃಷ್ಟಿಯನ್ನು ಮಾಡುವುದಕ್ಕೆ ಶಕ್ತಿಯಿಲ್ಲ. ಈಗ ಬಂದಿದ್ದ ಐಂದ್ರಜಾಲಿಕನು ಮಾಡಿದುದೆಲ್ಲವೂ ಮೋಸವೇ ಅಲ್ಲದೆ ಮತ್ತೆ ಬೇರೆಯಲ್ಲ. ಅವನು ತನ್ನ ಬಳಿಯಲ್ಲಿಟ್ಟು ಕೊಂಡಿದ್ದ ನಾಲ್ಕು ಕಾಲಿನ ದೊಡ್ಡ ಬಿದಿರುಬುಟ್ಟಿಯನ್ನೂ ಅದರಮೇಲೆ ಹೊದೆಯಿಸಿದ್ದ ಬಟ್ಟೆಯನ್ನೂ ತೆಗೆದುಬಿಟ್ಟರೆ, ಮಾವಿನ ಓಟೆಯನ್ನು ನೆಲದಲ್ಲಿ ಬಹಿರಂಗವಾಗಿ ಹೂತಿಟ್ಟು ಮೊಳೆತು ನಲಿಸುವಂತೆ ಮಾಡಲಾರನು. ಅವನು ಇಲ್ಲಿಗೆ ಬರುವಾಗಲೇ ಚಿಗುತಿದ್ದ ಮಾವಿನಕೊನೆಯೊಂದನ್ನೂ, ಹೂಗಚ್ಚಿದ್ದ ಕೊನೆಯೊಂದನ್ನೂ, ಹೀಚುಗಳಿಂದ ತುಂಬಿದ ಕೊನೆಯೊ೦ದನ್ನೂ ರಹಸ್ಯವಾಗಿ ತನ್ನೊಡನೆ ತಂದು ಬಹು ಜಾಗರೂಕತೆಯಿಂದ ಅವುಗಳನ್ನು ತನ್ನ ಬಳಿಯಲ್ಲಿ ಬಚ್ಚಿಟ್ಟು ಕೊಂಡಿದ್ದನಾದುದರಿಂದ, ಮಧ್ಯೆ ಮಧ್ಯೆ ಮೇಲೆ ಬಟ್ಟೆಯನ್ನು ತೆರೆಹಾಕಿ ನಾವು ನೋಡುತ್ತಿರುವಂತೆಯೇ ಮೊದಲು ನೆಲದಲ್ಲಿ ಹೂತಿದ್ದ ಓಟೆಯನ್ನು ತೆಗೆದುಹಾಕಿ ಬಟ್ಟೆಯಲ್ಲಿ ಬಚ್ಚಿಟ್ಟು ಕೊಂಡಿದ್ದ ಚಿಗುತಮಾವಿನಕೊನೆಯನ್ನೂ ತರುವಾಯ ಕಾಯಿಗಳಿಂದ ತುಂಬಿದ ಕೊನೆಯನ್ನೂ ಅಲ್ಲಿ ನಾಟಿ ತೋರಿಸಿದನು. ಅವನು ಬುಟ್ಟಿಯ ಮೇಲೆ ತೆರೆಯನ್ನು ಹಾಕಿ ಮಧ್ಯೆ ಮಧ್ಯೆ ಒಳಗೆ ಕೈಯಿಟ್ಟು ಮಾಡುತ್ತಿದ್ದುದು ಇದೇ ಕೌಶಲವು. ಅವನು ಕಾಸುಗಳನ್ನು ಮಾಡಿ ತೋರಿಸಿದುದೂ ಇಂತಹ ಮೋಸದಿಂದಲೇ, ಅವನು ತನ್ನ ಹಸ್ತಲಾಘವದಿಂದ ನಮಗೆ ಕಾಣಿಸದಿರುವಂತೆ ಕೆಲವು ಕಾಸುಗಳನ್ನು ಕೈಯಲ್ಲಿ ಮುಚ್ಚಿಟ್ಟು ಕೊಂಡಿದ್ದು, ಅವುಗಳಲ್ಲಿ ಒಂದನ್ನು ಮಾತ್ರ ಮೊದಲು ನನಗೆ ತೋರಿಸಿ, ಉಳಿದುವನ್ನೆಲ್ಲ ಆ ಒಂದೇ ಕಾಸಿನಿಂದಲೇ ಮಾಡಿದಂತೆ ನಮಗೆ ಭ್ರಮೆಯನ್ನುಂಟುಮಾಡಿದನು. ಅವನು ಮತ್ತೆಲ್ಲಿ ಹೋಗಿ ಈ ವಿನೋದವನ್ನು ಮಾಡಿದರೂ ತನ್ನ ಬಳಿಯಲ್ಲಿ ಹತ್ತು ಕಾಸುಗಳನ್ನು ಮಾತ್ರ ತೋರಿಸಬಲ್ಲನಲ್ಲದೆ ಅದಕ್ಕಿಂತ ಹೆಚ್ಚಾಗಿ ತೋರಿಸಲಾರನು. ಅವನಿಗೆ ಕಾಸುಗಳನ್ನು ಮಾಡುವಂತಹ ಶಕ್ತಿಯಿರುವ ಪಕ್ಷದಲ್ಲಿ, ಈ ವಿಧವಾಗಿ ಅವನು ಮನೆಮನೆಗೂ ತಿರುಗಿ ಯಾಚಿಸುವ ಅವಶ್ಯಕವಿಲ್ಲದೆ, ತನ್ನ ಮನೆಗೆ ಚಿನ್ನದ ಗೋಡೆಗಳನ್ನು ಹಾಕಿಸಿ ನಮ್ಮಂತಹರಿಗೂ ಅಪೇಕ್ಷಿಸಿದಷ್ಟು ಧನವನ್ನು ಕೊಡುವುದಕ್ಕೆ ಸಮರ್ಥನಾಗಿರುತ್ತಿದ್ದನು. ನಡುಹಗಲಲ್ಲಿ ಅವನು ನಮ್ಮೆಲ್ಲರ ಕಣ್ಣನ್ನೂ ಮುಚ್ಚಿ ಭ್ರಮಿಸುವಂತೆ ಮಾಡಿದುದರಿಂದ ಅವನ ಸಾಮರ್ಥ್ಯಕ್ಕೆ ಮೆಚ್ಚಬೇಕಾದರೂ, ನಾವು ಪ್ರತಿದಿನವೂ ನೋಡುತ್ತಲೇ ಇರುವ ಈಶ್ವರನ ಪರಮಾದ್ಭುತ ಮಹಿಮೆಯ ಮುಂದೆ ಇದು ಪರಮಾಣುಪರ್ವತನ್ಯಾಯವಾಗಿರುವುದು. ನಮಗೆ ಕಣ್ಣುಗಳಿದ್ದೂ ನಾವು ಪರಮೇಶ್ವರನ ವಿಚಿತ್ರಗಳನ್ನು ಕಂಡು ಆನಂದಿಸಲಾರದಿರುವೆವು. ಅತಿ ತುಚ್ಛಗಳಾದ ಇಂತಹ ಕೃತ್ಯಗಳನ್ನು ಕಂಡು ಮೆಚ್ಚುತಿರುವೆನಲ್ಲದೆ, ಈಶ್ವರನೆಂಬ ಐಂದ್ರಜಾಲಿಕನು ಮಾಡುವ ನಿಶ್ಚಯವಾದ ಅದ್ಭುತ ಕಾರ್ಯಗಳನ್ನು ನೋಡಿ ಆಶ್ಚರ್ಯಪಡದಿರುವೆವು ಈಗ ನಾವು ಅದ್ಭುತಗಳೆಂದು ಭಾವಿಸಿದ ಈ ಕಾರ್ಯಗಳನ್ನೇ ಭಗವಂತನು ಪ್ರತಿದಿನವೂ ನಿನ್ನಿಂದಲೂ, ನನ್ನಿಂದಲೂ, ಪ್ರಪಂಚದಲ್ಲಿರುವ ಸಕಲರಿಂದಲೂ ಮಾಡಿಸುತ್ತಿರುವನು. ಇಂದಿಗೆ ನಾಲ್ಕು ತಿಂಗಳಲ್ಲಿ ನಿನ್ನ ಕಿರುಮನೆಯ ಮುಂದೆ ನಿನ್ನ ಕೈಗಳಿಂದಲೇ ನೀನು ನಾಟಿದ ನೀರುಕಾಯಿಯ ಮರವು ಈಗಾಗಲೇ ಹೂಕಾಯಿಗಳಿಂದ ತುಂಬಿ ಕಣ್ಗೊಳಿಸುತ್ತಿರುವುದಿಲ್ಲವೆ? ಭಗವಂತನು ಈ ಇಂದ್ರಜಾಲವನ್ನು ನಿನ್ನ ಕೈಯಿಂದಲೂ ಮಾಡಿಸಿರುವನಲ್ಲ! ನೀನು ಇದಕ್ಕೇಕೆ ಆಶ್ಚರ್ಯಪಡದಿರುವೆ? ನೆಲದಲ್ಲಿ ಬಿತ್ತಿದ ಹೆಸರಕಾಳಿನ ಗಾತ್ರದ ಕಪ್ಪಾದ ಬೀಜದಿಂದ ಹಸುರಾಗಿಯೂ, ಸುಂದರವಾಗಿಯೂ ಇರುವ ಎಲೆಗಳೂ, ಮೃದುವಾದ ಕೊನೆಗಳೂ, ಚಿತ್ರವರ್ಣವುಳ್ಳ ಪುಷ್ಪಗಳೂ ಮತ್ತೆ ಅನೇಕ ವೃಕ್ಷಗಳೂ ಹುಟ್ಟುವುದಕ್ಕೆ ಆಧಾರಗಳಾದ ಬೀಜಗಳನ್ನೊಳಗೊ೦ಡ ಕಾಯಿಗಳೂ ಉಂಟಾಗುವುದು ಆಶ್ಚರ್ಯವಲ್ಲವೆ? ಇದಕ್ಕಿಂತ ಆಶ್ಚರ್ಯಕರವಾದುದು ಮತ್ತಾವುದಿರುವುದು? ಕೆಲವರ್ಷಗಳ ಹಿಂದೆ ನಮ್ಮ ತೋಟದಲ್ಲಿ ನನ್ನ ಕೈಯಿಂದ ನಾನೇ ಒಂದು ಮಾವಿನ ಬೀಜವನ್ನು ನೆಟ್ಟೆನು; ಈಗ ಅದು ದೊಡ್ಡ ಗಿಡವಾಗಿ ಪ್ರತಿ ಸಂವತ್ಸರವೂ ಮಿತಿಯಿಲ್ಲದಷ್ಟು ಫಲಗಳನ್ನು ಕೊಡುತ್ತಿರುವುದು. ಸರ್ವೆಶ್ವರನಾದ ಇಂದ್ರಜಾಲಿಕನು ತಾನು ಸ್ವಲ್ಪವಾದರೂ ಮುಟ್ಟದೆ ನಮ್ಮ ಕೈಯಿಂದಲೇ ಈ ಅದ್ಭುತವನ್ನು ಮಾಡಿಸಿರುವುದಕ್ಕೆ ಎಷ್ಟು ಆಶ್ಚರ್ಯಪಟ್ಟರೂ ಸಾಲದು. ಪ್ರಪಂಚದಲ್ಲಿ ಕೆಲವು ಭತ್ತದ ಕಾಳುಗಳನ್ನು ಗದ್ದೆಯಲ್ಲಿ ನಾಟಿ, ಕೆಲ ತಿಂಗಳೊಳಗಾಗಿ ಕೋಟ್ಯ೦ಶದಷ್ಟು ಹೆಚ್ಚಾದ ಫಲವನ್ನು ಹೊಂದುತ್ತಿರುವರು. ಎತ್ತೆತ್ತ ನೋಡಿದರೂ ನಮಗೆ ನೇತ್ರೋತ್ಸವವನ್ನುಂಟುಮಾಡು ತ್ತಿರುವ ವೃಕ್ಷಗಳು, ಸಸ್ಯಗಳು ಮೊದಲಾದುವೆಲ್ಲವೂ ಹೀಗೆಯೇ ಅತ್ಯದ್ಭುತಜನಕಗಳಾಗಿರುವುವು. ಈಗ ನಮ್ಮಿಂದ ಧನವನ್ನು ತೆಗೆದುಕೊಂಡು ಹೋದ ಐಂದ್ರಜಾಲಿಕನಂತೆ ಧನಲಾಭವನ್ನಪೇಕ್ಷಿಸದೆಯೇ ಭಗವಂತನೆಂಬ ಐಂದ್ರಜಾಲಿಕನು ತಾನು ಮಾಡಿರುವ ವಸ್ತುಗಳನ್ನೆಲ್ಲ ಸ್ಟೇಚ್ಛೆಯಾಗಿ ಅನುಭವಿಸಲೆಂಬ ಅಭಿಪ್ರಾಯದಿಂದ ನಮಗೆ ಕೊಟ್ಟು ಬಿಟ್ಟಿರುವನು. ಇಂತಹ ದಯಾಪರನ ವಿಷಯದಲ್ಲಿ ನಾವು ಎಷ್ಟು ಕೃತಜ್ಞತೆಯೂ ಭಕ್ತಿಯೂ ಉಳ್ಳವರಾಗಿರಬೇಕು!
ಚಂದ್ರ-ತಾವು ಭಗವಂತನ ದಿವ್ಯ ಮಹಿಮೆಯನ್ನು ವಿವರಿಸಿ ಹೇಳಿದ ಹಾಗೆಲ್ಲ ನನ್ನ ಮನಸ್ಸಿಗೆ ಆಶ್ಚರ್ಯವುಂಟಾಗಿ ಸಂತೋಷವನ್ನು ತಡೆಯಲಾರದವಳಾಗಿರುವೆನು. ನಾನು ಪ್ರತಿದಿನವೂ ನಿದ್ರೆಯಿಂದೆಚ್ಚೆತ್ತುದು ಮೊದಲ್ಗೊಂಡು ನಿದ್ರಿಸುವವರೆಗೂ ಭಗವಂತನ ಸೃಷ್ಟಿಯನ್ನೇ ನೋಡುತ್ತಿದ್ದರೂ ಕುರುಡಿಯಂತೆ ಅವುಗಳಲ್ಲಿರುವ ವಿಚಿತ್ರವನ್ನು ಕಂಡುಹಿಡಿಯಲಾರದವಳಾಗಿರುವೆನು. ನಿಮ್ಮ ಮಾತುಗಳನ್ನು ಕೇಳಿದುದರಿಂದ ಪರಮೇಶ್ವರನ ದಿವ್ಯಗುಣಾದಿಗಳನ್ನು ತಿಳಿದು ಸಂತೋಷಪಡಬೇಕೆಂಬ ಕುತೂಹಲವು ಅಷ್ಟಷ್ಟಕ್ಕೆ ಹೆಚ್ಚುತ್ತಿರುವುದು. ತಾವು ನನ್ನಲ್ಲಿ ಅನುಗ್ರಹವಿಟ್ಟು ನನ್ನ ಬಯಕೆಯನ್ನು ಸಫಲಮಾಡಿ ನನ್ನನ್ನು ಧನ್ಯಳನ್ನಾಗಿ ಮಾಡಬೇಕು.
ಗುರು-ಆತನ ಗುಣಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದಕ್ಕೆ ಮನುಷ್ಯಮಾತ್ರನಾದವನಿಗಾವನಿಗೂ ಸಾಧ್ಯವಲ್ಲ. ಆದರೆ ಕೆಲವು ಮಂದಿ ಮಹನೀಯರಿಗೆ ಮಾತ್ರ ಹೆಚ್ಚಾಗಿ ತಿಳಿದಿರುವುದು. ನೀನು ನನ್ನನ್ನು ಬಹಳವಾಗಿ ಬೇಡಿಕೊಳ್ಳುವೆಯಾದುದರಿಂದ, ನನಗೆ ತಿಳಿದಿರುವಷ್ಟರಲ್ಲಿ ಸ್ವಲ್ಪ ಭಾಗವನ್ನು ನಿನ್ನ ಮನಸ್ಸಿಗೆ ಹಿಡಿಯುವಂತೆ ವಿವರಿಸುವೆನು. ಆತನ ದಿವ್ಯಗುಣಗಳಲ್ಲಿ ನಾವು ತಿಳಿದುಕೊಳ್ಳಬಹುದಾಗಿರುವ ಸ್ವಲ್ಪ ಭಾಗದಿಂದಲೇ ನಮಗುಂಟಾಗುವ ಆನಂದವು ಅಪರಿಮಿತವಾಗಿರುವುದು. ಭೂಮಿಯನ್ನೊಂದನ್ನೇ ಅಲ್ಲದೆ ಸೂರ್ಯಚಂದ್ರಾದ್ಯನೇಕಗಳಾದ ಗೋಳಗಳನ್ನೂ ನಿರ್ಮಿಸಿರುವ ಆ ಮಹಾಪುರುಷನಿಗೆ ಶರೀರವೇ ಇದ್ದಪಕ್ಷದಲ್ಲಿ ಆ ರೂಪವು ಬ್ರಹ್ಮಾಂಡವಾಗಿ ನಮ್ಮ ಕಣ್ಣುಗಳಿಗೆ ಕಾಣಿಸುತ್ತಲೇ ಇದ್ದಿತು. ಹಾಗೆ ಕಾಣಿಸುತ್ತಿಲ್ಲವಾದುದರಿಂದ ಆತನು ರೂಪವಿಲ್ಲದವನೆಂದೇ ನಾವು ಊಹಿಸಬೇಕು. ಅಣುಮೊದಲ್ಗೊಂಡು ಬ್ರಹ್ಮಾಂಡದವರೆಗಿರುವ ಸಮಸ್ತ ಪದಾರ್ಥಗಳೂ, ಅನೇಕಗಳಾದ ಸೂರ್ಯಚಂದ್ರಾದಿಗೊಳಗಳೂ ಪರಸ್ಪರ ಸಂಬಂಧವನ್ನು ಹೊಂದಿರುವುದರಿಂದಲೂ, ಪ್ರತಿ ಒಂದು ವಸ್ತುವೂ ಆವುದೋ ಒಂದು ಪ್ರಯೋಜನವನ್ನು ಉದ್ದೇಶಿಸಿಯೇ ಆಲೋಚನೆಮಾಡಿ ನಿರ್ಮಿತವಾಗಿರುವಂತೆ ತೋರುತ್ತಿರುವುದರಿಂದಲೂ, ಸಮಸ್ತ ಸೃಷ್ಟಿಯನ್ನೂ ಮಾಡಿದವನೊಬ್ಬನೇ ಎಂಬುದೂ, ಆತನು ಆತ್ಮಸ್ವರೂಪನೆಂಬುದೂ ಸ್ಪಷ್ಟವಾಗುವುದು. ರೂಪವಿಲ್ಲದ ವಸ್ತುವು ಆವಾಗಲೂ ನಾಶವನ್ನು ಹೊಂದದಾದುದರಿಂದ ಆತನು ನಾಶರಹಿತನು; ಆದುದರಿಂದಲೇ ಶಾಶ್ವತನೆನಿಸಿಕೊಂಡನು. ಸೃಷ್ಟಿಯ ಧರ್ಮಗಳು ಸೃಷ್ಟಿಕರ್ತನಿಗೆ ತಿಳಿಯದಿರವಾದುದರಿಂದ ಆತನು ಸತ್ವಜ್ಞನೆಂದೂ, ಎಲ್ಲೆಡೆಯಲ್ಲಿಯೂ ಒಬ್ಬನೇ ಇದ್ದು ನಡೆಯಿಸುವಂತೆ ಸೃಷ್ಟಿಯೆಲ್ಲವೂ ಎಲ್ಲೆಲ್ಲಿಯೂ ಕ್ರಮವಾಗಿ ನಡೆಯುತ್ತಿರುವುದರಿಂದ ಸರ್ವಶಕ್ತನೆಂದೂ, ಸುಲಭವಾಗಿ ತಿಳಿದುಕೊಳ್ಳಬಹುದು. ಸೃಷ್ಟಿಯಲ್ಲಿರುವ ಆವ ವಸ್ತುವನ್ನು ನೋಡಿದರೂ, ಸೃಷ್ಟಿಕರ್ತನ ಬುದ್ದಿಯೂ ತಿಳಿವೂ ಪ್ರಕಾಶಿಸುತ್ತಿರುವುವಾದುದರಿಂದ, ಆತನು ಅಪರಿಮಿತಬುದ್ದಿಯುಳ್ಳವನೆಂದೂ, ಜ್ಞಾನ ಸ್ವರೂಪನೆಂದೂ, ತಿಳಿದುಕೊಳ್ಳಬಹುದು. ಸೃಷ್ಟಿಯಲ್ಲಿರುವ ಸಮಸ್ತ ಜೀವ ರಾಶಿಗಳೂ ಸಾಧಾರಣವಾಗಿ ಸೌಖ್ಯವನ್ನೇ ಅನುಭವಿಸುತ್ತಿರುವುದರಿಂದಲೂ, ಎಂದಾದರೂ ದುಃಖವುಂಟಾದಪಕ್ಷದಲ್ಲಿ ಅದು ನಮ್ಮ ಲೋಪದಿಂದಲೋ ಇತರರ ದೋಷದಿಂದ ಉಂಟಾಗುವುದಾದುದರಿಂದಲೂ, ಸೃಷ್ಟಿಕರ್ತನು ಜೀವಕಾರುಣ್ಯವುಳ್ಳವನೆಂದೂ, ದಯಾಸ್ವರೂಪನೆಂದೂ ವಿಶದವಾಗಿ ತಿಳಿಯುವುದು. ಸ್ವಭಾವವಾಗಿ ಒಂದು ಜಂತುವಿಗೆ ದುಃಖವೂ, ಒ೦ದು ಜಂತುವಿಗೆ ಸಂತೋಷವೂ ಉಂಟಾಗಲಾರದಾದುದರಿಂದ ಪರಮೇಶ್ವರನು ಪಕ್ಷಪಾತವಿಲ್ಲದವನೆಂದೂ ವ್ಯಕ್ತವಾಗುವುದು. ಲೋಕದಲ್ಲಿ ಆರಾದರೂ ದುಷ್ಕಾರ್ಯಗಳನ್ನು ಮಾಡಿದರೆ ಅದಕ್ಕೆ ಭೀತಿಯೋ, ಶಕ್ತಿಹೀನತೆಯೋ, ಭ್ರಮೆಯೋ, ಪ್ರಮಾದವೋ, ಆವುದೋ ಕಾರಣವಾಗಿರುವುದು. ಭಗವಂತನಲ್ಲಿ ಅಂತಹ ಲೋಪವಾವುದೂ ಇಲ್ಲವಾದುದರಿಂದ, ಆತನಲ್ಲಿ ನೀಚಗುಣಗಳಾವುವೂ ಇಲ್ಲ. ಆದುದರಿಂದ ಆತನು ಪರಿಶುದ್ದನೆಂದೂ, ಸಮಸ್ತಸದ್ಗುಣ ಪರಿಪೂರ್ಣನೆಂದೂ ಕರತಲಾಮಲಕದಂತೆ ವಿಶದವಾಗುವುದು. ನಮ್ಮ ಸಮಸ್ತಾಂಗಗಳೂ ಅವುಗಳ ವ್ಯಾಪಾರವೂ, ನಮ್ಮ ಸುತ್ತಲಿರುವ ಸಕಲ ವಸ್ತುಗಳೂ ನಮ್ಮ ಸೌಖ್ಯಕ್ಕೆ ಸಹಾಯಕಗಳಾಗಿರುವುವು. ಈಶ್ವರನು ನಮಗಿಷ್ಟು ಮೇಲ್ಕೆಯನ್ನುಂಟುಮಾಡುವುದಕ್ಕೆ ಆತನಿಗೆ ನಮ್ಮ ಮೇಲಿರುವ ಪ್ರೇಮವೇ ಕಾರಣವಲ್ಲದೆ ಮತ್ತೆ ಬೇರೆಯಲ್ಲವೆಂದು ಸ್ಪಷ್ಟವಾಗಿ ತೋರುವುದು. ಹೀಗೆ ನಮ್ಮಮೇಲೆ ಅವ್ಯಾಜವಾಗಿರುವ ಪ್ರೀತಿಯಿಂದಲೇ ನಮಗಿಷ್ಟು ಮಹೋಪಕಾರಗಳನ್ನು ಮಾಡುತ್ತಿರುವ ಆ ಪರಮೇಶ್ವರನನ್ನು ನಾವು ಯಾವಾಗಲೂ ನಿರ್ಮಲಹೃದಯದಿಂದ ಆರಾಧಿಸುತ್ತಿರಬೇಕು.
ಚಂದ್ರ-ಸಾಧಾರಣವಾಗಿ ಸಮಸ್ತ ಜೀವರಾಶಿಗಳೂ ಸೌಖ್ಯವನ್ನೇ ಹೊಂದುತ್ತಿರುವುವೆಂದು ಈಗ ತಾವು ಹೇಳಿದಿರಲ್ಲವೆ? ಕೆಲವರು ಸಾಧಾರಣವಾಗಿ ನಿರಂತರವೂ ರೋಗಕ್ಕೆಡೆಯಾಗಿ ದುಃಖವನ್ನೇ ಹೊಂದುತ್ತಿಲ್ಲವೆ?
ಗುರು-ರೋಗಗಳೂ ಸ್ವಾಭಾವಿಕವಾಗಿ ಬರತಕ್ಕುವುಗಳಲ್ಲ. ನಾವು ತಿನ್ನುವ ಆಹಾರಪದಾರ್ಥಗಳು ಒಳ್ಳೆಯವಾಗಿಲ್ಲದುದರಿಂದಲೋ, ಬಚ್ಚಲು ಮೊದಲಾದುವುಗಳ ದುರ್ಗ೦ಧದಿಂದ ಗಾಳಿಯು ಕೆಟ್ಟು ಹೋಗಿರು ವದರಿಂದಲೋ ಇಂತಹ ಮತ್ತೆ ಬೇರೆ ಕಾರಣಗಳಿಂದಲೋ ರೋಗಗಳು ಸಾಧಾರಣವಾಗಿ ಸಂಭವಿಸುವುವು. ಅವು ಯಾವಾಗಲೂ ಸ್ವದೋಷದಿಂದಲೆಯೋ, ಅನ್ಯರ ದೋಷದಿಂದಲೆಯೋ ನಮ್ಮನ್ನು ಆಶ್ರಯಿಸುವವು. ಈ ವಿಷಯದಲ್ಲಿ ಮುಂದೆ ಸ್ವಲ್ಪ ಸ್ವಲ್ಪವಾಗಿ ನಿನಗೆ ವಿವರಿಸಿ ತಿಳಿಸುವೆನು.
ಚ೦ದ್ರ-ತಮ್ಮ ಅನುಗ್ರಹದಿಂದ ಭಗವಂತನ ದಿವ್ಯ ಚರಿತ್ರೆಯನ್ನು ಸ್ವಲ್ಪ ಮಾತ್ರ ತಿಳಿದುಕೊಂಡರೂ ನನ್ನ ಮನಸ್ಸಿಗಿನ್ನೂ ತೃಪ್ತಿಯುಂಟಾಗದಿರುವುದು, ಆತನ ವಿಷಯದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕೋ ಆ ಕ್ರಮವನ್ನೂ ತಿಳಿಸಿ ನನ್ನನ್ನು ಕೃತಾರ್ಥೆಯನ್ನಾಗಿ ಮಾಡಬೇಕು.
ಗುರು-ಈಗ ನಾನು ಹೇಳಿದುದೆಲ್ಲವೂ ನಿನ್ನ ಮನಸ್ಸಿನಲ್ಲಿ ಚೆನ್ನಾಗಿ ನಾಟಿದ್ದರೆ ಇಂದಿಗೆ ಇಷ್ಟೇ ಸಾಕು. ಮತ್ತೊಂದು ಬಾರಿ ಈಗ ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡುವುದಕ್ಕೆ ಪ್ರಯತ್ನಿಸುವೆನು. ಒಂದುದಿನ ಚಂದ್ರಮತಿಯು ಪಾಠಶಾಲೆಗೆ ಹೊತ್ತುಮೀರಿ ಬಂದು, ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವುದಕ್ಕೆ ತೋರದೆ ಖಿನ್ನಳಾಗಿ ನೆಲವನ್ನು ನಿಟ್ಟಿಸುತ್ತೆ ಕುಳಿತಿದ್ದಳು. ವಿದ್ಯಾಸಮುದ್ರನು ಅದನ್ನು ಕಂಡು ಮಕ್ಕಳಿಗೆ ಮನಸ್ಥೈರ್ಯವಿಲ್ಲದಿರುವಾಗ ಓದಿಸುವುದರಿಂದ ಪ್ರಯೋಜನವಿಲ್ಲವೆಂದು ಅರಿತವನಾದುದರಿಂದ ಅವಳನ್ನು ನಿರ್ಬಂಧಪಡಿಸದೆ, ಅವಳ ಮನೋವ್ಯಥೆಯ ಕಾರಣವನ್ನರಿತವನಾಗಿದ್ದರೂ ಆ ವಿಷಯವನ್ನವಳ ಬಾಯಿಂದಲೇ ಹೊರಡಿಸಿ ಸಂದರ್ಭಾನುಸಾರವಾಗಿ ಮತ್ತೆ ಕೆಲ ನೂತನವಿಷಯಗಳನ್ನು ತಿಳಿಸಬೇಕೆಂಬ ಅಭಿಲಾಷೆಯಿಂದ ಇಂತೆಂದನು —
ಗುರು- ಚಂದ್ರಮತೀ! ನೀನು ಯಾವಾಗಲೂ ಕಾಲಕ್ಕೆ ಸರಿಯಾಗಿ ತಪ್ಪದೆ ಬರುತ್ತಿದ್ದೆ. ಎಷ್ಟು ಕೆಲಸವಿದ್ದರೂ ನೀನು ಇಂದಿನವರೆಗೂ, ಯಾವಾಗಲೂ ಕಾಲವನ್ನತಿಕ್ರಮಿಸಿ ಬಂದವಳಲ್ಲ. ಇಂತಹ ನೀನು ಈದಿನ ಕಾಲವನ್ನು ಮೀರಿ ಆಲಸ್ಯವಾಗಿ ಬರುವುದಕ್ಕೆ ಕಾರಣವೇನು?
ಚಂದ್ರ-ನನ್ನನ್ನು ಬಾಲ್ಯದಿಂದಲೂ ಮೊನ್ನೆ ಮೊನ್ನೆಯವರೆಗೂ ಎತ್ತಿಕೊಂಡು ಆಡಿಸುತ್ತಿದ್ದ ವೃದ್ಧಳಾದ ಒಬ್ಬ ಪರಿಚಾರಿಣಿಯು ರಾತ್ರಿ ಆಕಸ್ಮಿಕವಾಗಿ ಮೃತಳಾದಳು. ಅವಳನ್ನು ಹಾವು ಕಚ್ಚಿತ೦ತೆ. ನಮ್ಮ ತಾಯಿಯು ಅತ್ತೆಯಮನೆಗೆ ಬಂದಾಗ ಅವಳ ತವರ್ಮನೆಯವರು ಆ ದಾಸಿಯನ್ನು ಬಳುವಳಿಯೊಡನೆ ಇಲ್ಲಿಗೆ ಕಳುಹಿಸಿದರಂತೆ. ಅವಳು ನನ್ನನ್ನು ತನ್ನ ಪಂಚಪ್ರಾಣಗಳೊಳಗೆ ಒಂದು ಪ್ರಾಣವೆಂದೆಣಿಸಿ ನೋಡಿಕೊಳ್ಳುತ್ತಿದ್ದಳು. ಇಷ್ಟು ಪ್ರೇಮವುಳ್ಳ ಸೇವಕಿಯು ಮೃತಳಾದಳೆಂಬ ವ್ಯಥೆಯಿಂದ ನಾನು ಕಾಲಕ್ಕೆ ಸರಿಯಾಗಿ ಬಾರದೆ ತಪ್ಪಬೇಕಾಯಿತು. ಈ ಅಪರಾಧವನ್ನು ದಯವಿಟ್ಟು ಮನ್ನಿಸಿರಿ. ಈಗಲೂ ನನ್ನ ಮನಸ್ಸು ಅಲ್ಲಿಯೇ ನಾಟಿರುವುದು. ಗುರು-ಈಗ ನೀನು ಮಾಡಿದುದರಲ್ಲಿ ಯಾವದೋಷವೂ ಇಲ್ಲ. ನಂಬುಗೆಯಾಗಿ ಕೆಲಸಮಾಡುತ್ತಿದ್ದ ದಾಸಿಯ ವಿಷಯದಲ್ಲಿ ನಿನಗಿಷ್ಟು ಕನಿಕರವುಂಟಾಗಿರುವುದನ್ನು ಕಂಡು ನನಗೂ ಬಹು ಸಂತೋಷವಾಯಿತು. ಅವಳು ನೆನ್ನೆಯರಾತ್ರಿ ಮೃತಳಾದಳೆಂದು ಹೇಳುವೆಯಲ್ಲವೆ? ಸ್ವಲ್ಪ ಹೊತ್ತಿಗೆ ಮೊದಲು ನಾನು ನಿಮ್ಮ ತಂದೆಯವರ ದರ್ಶನವನ್ನು ಮಾಡಿಕೊಂಡು ಇಲ್ಲಿಗೆ ಬರುತ್ತಿರುವಾಗ ಮಾರ್ಗದಲ್ಲಿ ಹಸುವಿನ ಕೊಟ್ಟಿಗೆಯ ಬಳಿಯಲ್ಲಿ ಅವಳನ್ನು ನೋಡಿದ್ದೆನು. ನಾನು ಕ್ಷಣಕಾಲಕ್ಕೆ ಮೊದಲು ನೋಡಿದ್ದುದು, ಮೊದಲು ನಿನ್ನೊಡನೆ ಪ್ರತಿದಿನವೂ ಬರುತ್ತಿದ್ದಾಗ ನೋಡುತ್ತಿದ್ದ ಕಣ್ಣು, ಮುಖ, ತಲೆ ಮೊದಲಾದ ಸಕಲಾಂಗಗಳೂ ಇದ್ದ ದೇಹವೇ ಅಹುದೆನ್ನುವುದಕ್ಕೆ ಸಂದೇಹವಿಲ್ಲ. ಈಗ ನೀನು ಅವಳು ಮೃತಳಾದಳೆಂದು ಹೇಗೆ ಹೇಳುವೆ?
ಚಂದ್ರ-ಈಗ ಅವಳ ಶರೀರವು ಮಾತ್ರ ಈ ಲೋಕದಲ್ಲಿರುವುದು ಅದೂ ಇನ್ನೆರಡು ಗಳಿಗೆಯೊಳಗಾಗಿ ಕಾಣಿಸದೆ ಹೋಗುವುದು. ಅದರೊಳಗಿದ್ದ ಜೀವಾತ್ಮವು ಹಾರಿಹೋಯಿತು.
ಗುರು-ಈ ವಿಷಯವು ನಿನಗೆ ತಿಳಿದಿರುವುದೋ ಇಲ್ಲವೋ ಎಂಬುದನ್ನರಿಯಬೇಕೆಂದೇ ಈ ಪ್ರಶ್ನೆಯನ್ನು ಹಾಕಿದೆನು. ನಮ್ಮ ದೇಹವೂ ಜೀವಾತ್ಮವೂ ಬೇರೆಬೇರೆಂಬುದನ್ನೂ, ದೇಹವು ಯಾವ ಕ್ಷಣದಲ್ಲಿಯೋ ನಶಿಸಿಹೋಗುತಕ್ಕುದೆಂಬುದನ್ನೂ, ನೀನು ತಿಳಿದುಕೊಂಡಿರುವುದರಿಂದ ನನಗೆ ಬಹುಸಂತೋಷವುಂಟಾಯಿತು. ನಮ್ಮ ಆತ್ಮವು ಶರೀರದೊಡನೆಯೇ ನಾಶವನ್ನು ಹೊಂದದೆ ಪರಲೋಕಕ್ಕೆ ಹೋಗುವುದೆಂದು ನಿನಗೆ ತಿಳಿದಿರುವುದಾದುದರಿಂದ ಈ ವಿಷಯವನ್ನು ನಿರ್ಧರಿಸುವುದಕ್ಕೋಸುಗ ನಾನು ಶ್ರಮಪಟ್ಟು ನಿದರ್ಶನಗಳನ್ನು ತೋರಿಸಬೇಕಾದವಶ್ಯಕತೆಯಿಲ್ಲವಷ್ಟೆ? ಸಕಲ ಚರಾಚರಕರ್ತನಾದ ಪರಮೇಶ್ವರನೊಬ್ಬನೇ ಶಾಶ್ವತನಾದವನೆಂದು ಮೊದಲು ನಾನು ತಿಳಿಸಿರುವೆನಲ್ಲವೆ? ಈ ಎರಡು ವಿಷಯಗಳೂ ತಿಳಿದ ತರುವಾಯ ನಿನಗೆ ತಿಳಿಸಬೇಕಾದ ವಿಷಯಗಳು ಇನ್ನೂ ಹಲವಿರುವುವು. ನಾವು ಈ ಲೋಕದಲ್ಲಿ ನೂರುವರ್ಷಗಳು ಬದುಕಿದರೂ ಅದು ಬಹುಸ್ವಲ್ಪಕಾಲವೇ ಸರಿ. ನಾವು ಪರಲೋಕದಲ್ಲಿರಬೇಕಾದ ಕಾಲವಾದರೋ ಪರಿಮಿತಿಯಿಲ್ಲದುದಾಗಿರುವುದು. ನಾವು ಇರುವಂತೆಯೇ ಇದ್ದು ಯಾವಾಗಲೋ ಈ ಲೋಕವನ್ನು ಬಿಟ್ಟು ಪರಲೋಕವನ್ನು ಸೇರತಕ್ಕವರಾಗಿರುವೆವು. ಪರಲೋಕದಲ್ಲಿ ನಿತ್ಯಸುಖವನ್ನನುಭವಿಸಬೇಕಾದರೆ ಧರ್ಮವೊಂದೇ ನಮಗೆ ಸಾಧಕವಾದುದಲ್ಲದೆ ಮತ್ತೊಂದಿಲ್ಲವು. ನಾವು ಶಾಶ್ವತವಾದ ಪರಲೋಕಸುಖವನ್ನು ಅಪೇಕ್ಷಿಸುವೆವಾದರೆ ಈ ಲೋಕದಲ್ಲಿರುವ ತುಚ್ಛಗಳಾದ ನಿಮಿಷ ಸೌಖ್ಯಗಳಿಗೆ ಆಶೆಪಡದೆ ಎಂತಹ ಕಷ್ಟಗಳು ಸಂಭವಿಸಿದರೂ ಸೈರಿಸಿಕೊಂಡು ಧರ್ಮಮಾರ್ಗವನ್ನನುಸರಿಸಿ ನಡೆಯಬೇಕು.
ಚಂದ್ರ-ನಮಗೆ ಶಾಶ್ವತಸುಖವುಂಟಾಗುವಂತೆ ಸಹಾಯಕಗಳಾಗುವ ಧರ್ಮಗಳಾವುವೋ ಅವುಗಳನ್ನಾಚರಿಸುವ ಬಗೆಹೇಗೋ ಇವುಗಳನ್ನೆಲ್ಲಾ ನನ್ನಲ್ಲಿ ಅನುಗ್ರಹವಿಟ್ಟು ತಿಳಿಸಬೇಕು.
ಗುರು-ಧರ್ಮಸ್ವರೂಪನಾದ ಭಗವಂತನು ನಮಗೆ ಹೀಗೆಯೇ ನಡೆದುಕೊಳ್ಳಬೇಕೆಂದು ಉದ್ದೇಶಿಸಿ ವಿಧಿಸಿರುವ ಆಜ್ಞೆಗಳೇ ಧರ್ಮಗಳು. ಅಂತಹ ಧರ್ಮಗಳನ್ನು ಅನುಸರಿಸುವುದರಿಂದ ಸೌಖ್ಯವೂ, ಸೊರುವುದರಿಂದ ದುಃಖವೂ ಸಂಭವಿಸುವುವು. ನಾವು ಅನುಸರಿಸಬೇಕಾದ ಧರ್ಮಗಳೆಲ್ಲವೂ ನಾಲ್ಕು ಬಗೆಯಾಗಿರುವುದೆಂದು ಹೇಳಬಹುದು. ಮೊದಲನೆಯ ಬಗೆಯವು-ಸೃಷ್ಟಿಕರ್ತನಾದ ಪರಮೇಶ್ವರನ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳು, ಎರಡನೆಯಬಗೆಯವು-ನಮ್ಮ ದೇಹರಕ್ಷಣಾದಿಗಳಿಗೋಸುಗ ಸ್ವವಿಷಯವಾಗಿ ನಡೆದುಕೊಳ್ಳಬೇಕಾದ ಕ್ರಮಗಳು. ಮೂರನೆಯಬಗೆಯವು- ಭಗವತ್ಕುಟುಂಬದಲ್ಲಿ ನಮಗೆ ಸಹಜಾತಸಮಾನರಾಗಿರುವ ಮನುಜರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳು. ನಾಲ್ಕನೆಯಬಗೆಯವು-ಜೀವದಯಾಪರನಾದ ಈಶ್ವರನಿಂದ ನಿರ್ಮಿತಗಳಾದ ಇತರ ಜಂತುಗಳ ವಿಷಯದಲ್ಲಿ ನಾವು ನಡೆದುಕೊಳ್ಳಬೇಕಾದ ಕ್ರಮಗಳು.
ಚಂದ್ರ-ಮೊದಲು ಭಗವಂತನ ವಿಷಯದಲ್ಲಿ ನಾವು ನಡೆದುಕೊಳ್ಳ ಬೇಕಾದ ಕ್ರಮಗಳನ್ನು ತಿಳಿಸಿ, ತರುವಾಯ ಉಳಿದ ಧರ್ಮಗಳನ್ನೂ ನನಗೆ ಕ್ರಮವಾಗಿ ತಿಳಿಸಬೇಕು.
ಗುರು- ಪರಮದಯಾಪರನಾದ ಈಶ್ವರನು ತನ್ನ ಕುಟುಂಬವಾದ ಮನುಷ್ಯಕೋಟಿಯು ವಾಸಮಾಡಲೋಸುಗ ಭೂಮಿಯೆಂಬ ದಿವ್ಯವಾದ ಮನೆಯನ್ನು ನಿರ್ಮಿಸಿ ಅವರ ಸುಖಕ್ಕೆ ಬೇಕಾಗುವ ಸಕಲಪದಾರ್ಧಗಳನ್ನೂ ಅಣಿಮಾಡಿರುವನು. ಅಂಗಡಿಯಲ್ಲಿರುವುವುಗಳನ್ನು ಕೊಂಡುಕೊಳ್ಳುವಂತೆಯೇ, ನಾವು ಸಸ್ಯಗಳಿಂದಲೂ, ಫಲವೃಕ್ಷಗಳಿಂದಲೂ ಭೋಜನ ಪದಾರ್ಥಗಳನ್ನು ಪಡೆಯುತ್ತಿರುವೆವು; ನಮಗೆ ಸೂರ್ಯಬಿಂಬವು ಎಣ್ಣೆಯಿಲ್ಲದೆಯೇ ಉರಿಯತಕ್ಕ ದೊಡ್ಡ ಬೆಳಕಾಗಿರುವುದು; ನದಿಯೇ ಮೊದಲಾದುವುಗಳು ನೀರನ್ನು ತುಂಬಿ ಇಟ್ಟು ಕೊಳ್ಳುವಂತಹ ದೊಡ್ಡ ಹರವಿಗಳಾಗಿರುವುವು. ನಮ್ಮ ಸುತ್ತಲಿರುವ ಸಮಸ್ತ ಜಂತುಗಳೂ, ಲತಾವೃಕ್ಷಾದಿಗಳೂ, ಲೋಹಗಳೂ ಸರ್ವಪ್ರಕಾರದಲ್ಲಿಯೂ ನಮಗೆ ಉಪಯುಕಗಳಾಗಿರುವುವು. ವಾಯುವು, ಬೆವರೇರಿರುವಾಗ ನಮಗೆ ತಣ್ಣಗಾಗುವಂತೆ ಬೀಸುತ್ತೆ ಸಂಬಳವಿಲ್ಲದ ಪರಿಚಾರಕನಾಗಿರುವುದು. ಮಧುರಧ್ವನಿಗಳನ್ನು ಮಾಡುವ ಕೋಗಿಲೆ ಮೊದಲಾದ ಪಕ್ಷಿಗಳು ಸಂಗೀತಪಾಠಕರಂತೆ ಕಿವಿಗಳಿಗೆ ಸಂತೋಷವನ್ನುಂಟುಮಾಡುತ್ತಿರುವುವು. ಇವೆಲ್ಲವೂ ಭಗವಂತನ ಅನುಗ್ರಹದಿಂದಲೇ ಲಭಿಸಿರುವುವಲ್ಲದೆ ಮತ್ತೆ ಬೇರೆಯಲ್ಲ. ಆದುದರಿಂದ ಇಷ್ಟು ಮಹೋಪಕಾರವನ್ನು ಮಾಡಿರುವ ಆ ಮಹಾನುಭಾವನ ವಿಷಯದಲ್ಲಿ ನಾವೆಷ್ಟು ಕೃತಜ್ಞರಾಗಿ ಆತನನ್ನು ಸ್ಮರಿಸಿದರೂ ಸಾಲದಿರುವುದು. ಸದ್ಗುಣ ವುಳ್ಳವರನ್ನು ಪ್ರೀತಿಸುವುದೂ ದುರ್ಗುಣವುಳ್ಳವರನ್ನು ದ್ವೇಷಿಸುವುದೂ ಲೋಕದಲ್ಲಿರುವ ಸಕಲರಿಗೂ ಸಹಜಗುಣಗಳಾಗಿರುವುವು. ಸಮಸ್ತ ಸದ್ಗುಣಗಳಿಗೂ ನೆಲೆಯಾಗಿದ್ದು ನಮ್ಮನ್ನು ನಿತ್ಯವೂ ಪುತ್ರವಾತ್ಸಲ್ಯದಿಂದ ಕಾಪಾಡುತ್ತಿರುವ ಆ ಕರುಣಾಕರನನ್ನು ನಾವು ಪ್ರೀತಿಸಬೇಕೆಂದು ಮತ್ತೆ ಹೇಳತಕ್ಕ ಆವಶ್ಯಕವಿಲ್ಲ. ನಮ್ಮ ಜನನಕ್ಕೆ ಕಾರಣಭೂತರಾದ ತಾಯ್ತಂದೆಗಳ ಆಜ್ಞೆಗೂ ನಮ್ಮನ್ನು ಪರಿಪಾಲಿಸುತ್ತೆ ನ್ಯಾಯವನ್ನು ತೀರಿಸುವ ರಾಜನ ಆಜ್ಞೆಗೂ ಅಧೀನರಾಗಿ ನಡೆದುಕೊಳ್ಳಬೇಕೆಂಬುದನ್ನು ನೀನೇ ಬಲ್ಲೆ ಯಲ್ಲವೆ ? ಹೀಗಿರುವಾಗ ನಮ್ಮೆಲ್ಲರ ಜನನಕ್ಕೂ ಆದಿ ಕಾರಣನಾಗಿ ನಮ್ಮ ಪುಣ್ಯಪಾಪಗಳನ್ನು ಪರಿಶೀಲಿಸಿ ನ್ಯಾಯವನ್ನು ನಿರ್ಣಯಿಸಿ ಸುಖವನ್ನುಂಟು ಮಾಡತಕ್ಕ ಆ ಮೋಕ್ಷದಾತನಿಗೆ ನಾವು ಪರಮವಿಧೇಯರಾಗಿ ನಡೆದುಕೊಳ್ಳಬೇಕೆಂದು ಮತ್ತೊಂದು ಬಾರಿ ಹೇಳಬೇಕೆ? ನಾವು ಯಾವಾಗಲೂ ನಿರ್ದೋಷವಾಗಿ ನಡೆದುಕೊಳ್ಳಲಾರೆವಾದುದರಿಂದ ನಮ್ಮ ಅಪರಾಧಗಳನ್ನು ಕ್ಷಮಿಸುವುದಕ್ಕೋಸುಗವೂ, ನಮಗೆ ಬೇಕಾದುವುಗಳನ್ನು ದಯೆಪಾಲಿಸುವ ದಕ್ಕೋಸುಗವೂ, ನಮ್ಮ ಆಪದಗಳನ್ನು ಪರಿಹರಿಸುವುದಕ್ಕೋಸುಗವೂ ಸರ್ವಶಕ್ತನಾದ ಆ ಈಶ್ವರನನ್ನು ಗೌರವಪೂರ್ವಕವಾಗಿಯೂ, ನಿಶ್ಚಲಭಕ್ತಿಯೊಡನೆಯೂ ಪ್ರತಿದಿನವೂ ಪ್ರಾರ್ಥಿಸುತ್ತಿರಬೇಕು. ಇದೇ ನಾವು ಭಗವಂತನ ವಿಷಯದಲ್ಲಿ ನಡೆದುಕೊಳ್ಳಬೇಕಾದ ಮುಖ್ಯಧರ್ಮಗಳು
ಚಂದ್ರ-ಈರೀತಿಯಾಗಿ ನಾವು ಭಗವಂತನ ವಿಷಯದಲ್ಲಿ ನಡೆದುಕೊಳ್ಳದಿರುವ ಪಕ್ಷದಲ್ಲಿ ನಮ್ಮನ್ನು ಆತನು ಶಿಕ್ಷಿಸುವನೆ?
ಗುರು—ಭಗವಂತನು ಆತ್ಮಸ್ತುತಿಗೆ ಸಂತೋಷಪಡತಕ್ಕವನಲ್ಲ. ದೂಷಣೆಗೆ ಕೋಪಿಸತಕ್ಕವನೂ ಅಲ್ಲ; ಆದುದರಿಂದ ನಾವು ಈ ವಿಷಯದಲ್ಲಿ ಪ್ರತ್ಯೇಕವಾದ ಶಿಕ್ಷೆಯನ್ನು ಹೊಂದದಿದ್ದರೂ, ನಮಗಿಷ್ಟು ಉಪಕಾರಗಳನ್ನು ಮಾಡಿರುವ ಪ್ರೇಮನಿಧಿಯ ವಿಷಯದಲ್ಲಿ ಕೃತಘ್ನರಾಗಿ ವಿಧಾಯಕ ಕೃತ್ಯಗಳನ್ನು ಬಿಟ್ಟು ಉವಕಾರಸ್ಮತಿಯಿಲ್ಲದ ಕಠಿನಾತ್ಮರಾಗುವೆವಾದುದರಿಂದ ಸಾಮಾನ್ಯ ಜನರ ವಿಷಯದಲ್ಲಿಯೂ ಸಂಪೂರ್ಣವಾದ ದುಷ್ಟ್ರವರ್ತನವುಳ್ಳವರಾಗುವೆವಾದುದರಿಂದ ಹಾಳಾಗುವೆವು. ಅದುಕಾರಣ ಶಿಕ್ಷೆಯನ್ನು ಹೊಂದುವೆವು.
ಚಂದ್ರ-ದುಮಾರ್ಗದಲ್ಲಿ ಪ್ರವರ್ತಿಸದೆ ಸೂಕ್ತವಾದ ಮಾರ್ಗದಲ್ಲಿ ಪ್ರವರ್ತಿಸುವವರಿಗೆ ಭಗವದ್ಧ್ಯಾನಾದಿಗಳಿಂದ ಪ್ರಯೋಜನವಿಲ್ಲವೆ?
ಗುರು-ಬೇಕಾದಷ್ಟು ಪ್ರಯೋಜನವಿರುವುದು. ಈಶ್ವರಧ್ಯಾನದಿಂದ ನಮ್ಮ ಮನಸ್ಸಿಗೆ ಆನಂದವುಂಟಾಗುವುದು ಮಾತ್ರವಲ್ಲದೆ, ಸತ್ಕಾರ್ಯಾ ಚರಣೆಯಲ್ಲಿ ಪ್ರೋತ್ಸಾಹವೂ ದುಷ್ಕಾರಗಳಲ್ಲಿ ವಿರಕ್ತಿಯೂ ಉಂಟಾಗುವುವು. ಆದುದರಿಂದ ಸಕಲವಿಧವಾದ ಶ್ರೇಯಸ್ಕೂ ನಮಗೆ ಕರಗತವಾಗುವುದು, ಅದುಕಾರಣ ನಾವು ಪ್ರತಿದಿನವೂ ತ್ರಿಕಾಲದಲ್ಲಿಯೂ ಭಕ್ತಿಯಿಂದ ಈಶ್ವರಾರಾಧನೆಯನ್ನು ಮಾಡುತ್ತಿರಬೇಕು.
ಚಂದ್ರ-ನಿಮ್ಮ ಹಿತಬೋಧೆಗಳಿಂದ ನನ್ನ ಅಜ್ಞಾನಾಂಧಕಾರವು ಪರಿಕೃತವಾಗಿ ಮುಕ್ತಿಮಾರ್ಗದ ಲಕ್ಷಣವನ್ನು ಸ್ವಲ್ಪಮಾತ್ರ ತಿಳಿದುಕೊಳ್ಳುವಂತಾಯಿತು. ಇನ್ನುಮೇಲೆ ಪ್ರತಿದಿನವೂ ತಮ್ಮ ಉಪದೇಶಾನುಸಾರವಾಗಿ ತ್ರಿಕರಣಶುದ್ಧಿಯಾಗಿಯೂ ಈಶ್ವರನನ್ನು ಉಪಾಸಿಸುತ್ತಿರುವೆನು.
ಐದನೆಯ ಪ್ರಕರಣ.
ಮರುದಿನ ಚಂದ್ರಮತಿಯು ಪಾಠವನ್ನೊಪ್ಪಿಸುತ್ತಿದ್ದಾಗ ನಡುನಡುವೆ ಎಡಗೈಯನ್ನು ಕೆರೆದುಕೊಳ್ಳುತ್ತೆ ಬೆರಲನ್ನು ಮುರಿದುಕೊಳ್ಳುತ್ತಿದ್ದಳು. ವಿದ್ಯಾಸಮುದ್ರನು ಅದನ್ನು ಕಂಡು ಪಾಠವೆಲ್ಲ ಮುಗಿಯುವವರೆಗೂ ಸುಮ್ಮನಿದ್ದು ತರುವಾಯ ಈ ಪ್ರಕಾರವಾಗಿ ಸಂಭಾಷಿಸುವುದಕ್ಕೆ ಮೊದಲು ಮಾಡಿದನು.
ಗುರು-ಮಗೂ! ಈದಿನ ನೀನೇಕೋ ಹಲವುಬಾರಿ ಕೈಬೆರಲುಗಳನ್ನು ಹಿಸುಕಿಕೊಳ್ಳುತ್ತಿದ್ದೆ. ಹೀಗೆಮಾಡಲು ಕಾರಣವೇನು?
ಚಂದ್ರ-ನನ್ನ ಬೆರಲಸಂದಿಯಲ್ಲಿ ಸಣ್ಣ ಸಣ್ಣ ಕಜ್ಜಿಗುಳ್ಳೆಗಳು ಎದ್ದು ಕೈಯೆಲ್ಲ ಬಲುನವೆಯಾಗಿರುವುದಾದುದರಿಂದ ಕೆರೆದುಕೊಳ್ಳುತ್ತಿದ್ದೆನು. ಅದರಲ್ಲಿಯೂ ನಡುಬೆರಲಸಂದಿನಲ್ಲಿ ಎದ್ದಿರುವ ಈ ಸಣ್ಣ ಗುಳ್ಳೆಯು ನನ್ನನ್ನು ಅತಿಯಾಗಿ ಬಾಧಿಸುತ್ತಿರುವುದು.
ಗುರು-ನಮಗೆ ವಿಧಾಯಕಗಳಾಗಿರುವ ಧರ್ಮಗಳನ್ನು ನೀನು ಮಾರಿರುವೆಯಾದುದರಿಂದ ನಿನಗೆ ಈ ಬಗೆಯ ಶಿಕ್ಷೆಯುಂಟಾಗಿರುವುದು, ನೀನು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿದ್ದುದರಿಂದಲೇ ಈಗ ನಿನ್ನ ಬೆರಲಮೇಲೆ ಕಜ್ಜಿಯೆದ್ದಿರುವುದು. ಭಗವಂತನ ಆಜ್ಞಾರೂಪಗಳಾದ ಯಾವ ಧರ್ಮಗಳನ್ನು ಮಾರಿದರೂ, ಅದಕ್ಕೆ ಅನುಸಾರವಾಗಿ ತಕ್ಕ ಶಿಕ್ಷೆಗಳುoಟಾಗದಿರವು.
ಚಂದ್ರ-ಓದುವುದರಲ್ಲಿಯೇ ಆಸಕ್ತೆಯಾಗಿ ನಾನು ಇಂದಿನ ದಿನಗಳಲ್ಲಿ ನನ್ನ ದೇಹಸೌಖ್ಯವನ್ನು ಕುರಿತು ಅಷ್ಟುಶ್ರದ್ಧೆಯನ್ನು ವಹಿಸಲಿಲ್ಲ. ಆದರೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿರುವುದೂ ಧರ್ಮಾತಿಕ್ರಮಣವೆನಿಸಿಕೊಳ್ಳುವುದೇ?
ಗುರು-ನಾವು ಶುಚಿಯಾಗಿರಬೇಕಾದುದೂ ನಮಗೆ ವಿಧಾಯಕವಾದ ಕೃತ್ಯವೇ ಅಹುದು, ಇದರಲ್ಲಿ ಸಂಶಯವಿಲ್ಲ. ನೆನ್ನೆಯದಿನ ನಾನು ನಿನ್ನೊಡನೆ ಎರಡನೆಯ ಧರ್ಮವೆಂದು ತಿಳಿಸಿದ ಸ್ವವಿಷಯಿಕವಾದ ಧರ್ಮಗಳಲ್ಲಿ ಇದೊಂದಾಗಿರುವುದು. ಓದುವುದರಲ್ಲಿ ಶ್ರದ್ಧೆಯನ್ನು ವಹಿಸುವುದು ಮುಖ್ಯವೇ ಆದರೂ, ಅದಕ್ಕೋಸುಗ ದೇಹಾರೋಗ್ಯವನ್ನು ಕೆಡಿಸಿಕೊಳ್ಳಬಾರದು.
ಚಂದ್ರ-ಹಾಗಾದರೆ ಸ್ವವಿಷಯದಲ್ಲಿ ಪ್ರವರ್ತಿಸಬೇಕಾದ ಧರ್ಮಗಳಾವುವೋ ಅವುಗಳನ್ನತಿಕ್ರಮಿಸುವುದರಿ೦ದ ಆವಕೇಡುಗಳುಂಟಾಗುವುವೋ, ಅದನ್ನೆಲ್ಲ ನನ್ನಲ್ಲಿ ಅನುಗ್ರಹವಿಟ್ಟು ವಿವರಿಸಿರಿ
ಗುರು- ಶರೀರಸಂರಕ್ಷಣೆಗೋಸುಗ ನಾವು ಆಚರಿಸಬೇಕಾಗಿರುವ ಕೃತ್ಯವೆಲ್ಲ ಸ್ವವಿಷಯಕವಾದ ಧರ್ಮವೇ, ಅವುಗಳನ್ನು ಮಾರಿ ನಡೆಯುವುದರಿಂದ ಹಲವುಬಗೆಯ ವ್ಯಾಧಿಗಳು ಸಂಭವಿಸಿ ಬಹುಬಾಧೆಯುಂಟಾಗುವುದು. ದೇಹವು ಆರೋಗ್ಯದಶೆಯಲ್ಲಿರುವವರೆಗೆ ಮಾತ್ರವೇ ನಾವು ಆವ ಧರ್ಮ ಕಾರ್ಯವನ್ನಾದರೂ ಮಾಡುವುದಕ್ಕೆ ಸಮರ್ಥರಾಗಿರುವೆವು. ಅದಕ್ಕೆ ಸ್ವಲ್ಪ ವಿಘಾತವುಂಟಾಗುವ ಪಕ್ಷದಲ್ಲಿ, ಸಮಸ್ತಧರ್ಮಗಳೂ ತ್ಯಜಿಸಲ್ಪಡುವುವು. ಆದುದರಿಂದ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸೌಖ್ಯವನ್ನು ನೋಡಿಕೊಂಡು ದೇಹವನ್ನು ಕಾಪಾಡಿಕೊಳ್ಳುತ್ತಿರಬೇಕು. ದೇಹಾರೋಗ್ಯಕ್ಕೆ ಶುದ್ದವಾಯುವೂ, ನಿರ್ಮಲೋದಕವೂ, ಯುಕ್ತಾಹಾರವೂ, ಶುಭ್ರವಸ್ತ್ರ ಧಾರಣೆಯೂ, ನಿತ್ಯಸ್ನಾನವೂ, ಸುಖನಿದ್ರೆಯೂ, ಮುಖ್ಯಾಂಗಗಳಾಗಿರುವುವು.
ಚಂದ್ರ-ನಮ್ಮ ದೇಹಾರೋಗ್ಯಕ್ಕೆ ವಾಯುವೂ ಅಷ್ಟು ಆವಶ್ಯಕವಾದುದೇ?
ಗುರು-ನಾವು ಆಹಾರವಿಲ್ಲದೆಯೇ ಕೆಲದಿನಗಳು ಜೀವಿಸಬಲ್ಲೆವಾದರೂ, ವಾಯುವಿಲ್ಲದೆ ಒಂದು ನಿಮಿಷವಾದರೂ ಜೀವಿಸಲಾರೆವು. ನಾವು ಆಘ್ರಾಣಿಸುವ ವಾಯುವಿನಲ್ಲಿ ಒಂದುಭಾಗವೆಲ್ಲ ಪ್ರಾಣವಾಯುವು ಸೇರಿರುವುದು. ನಮ್ಮ ಉಚ್ಛಾಸ ನಿಶ್ವಾಸಗಳಿಂದ ಪ್ರಾಣವಾಯುವು ಒಳಕ್ಕೆ ಪ್ರವೇಶಿಸಿ, ರಕ್ತವನ್ನು ಶುದ್ಧಿಗೊಳಿಸುವುದರಿಂದ ಒಳಗಿರುವ ಕೆಟ್ಟ ಗಾಳಿಯು ಹೊರಕ್ಕೆ ಬರುವುದು. ಅಂತಹ ಗಾಳಿಯು ವಿಷಸ್ವಭಾವವನ್ನುಳ್ಳುದಾದುದರಿಂದ, ಜೀವಜಂತುಗಳು ಹೊರಕ್ಕೆ ಬಿಡುವ ನಿಶ್ವಾಸವಾಯುವನ್ನೇ ಆರಾದರೂ ಪ್ರತ್ಯೇಕವಾಗಿ ಸೇವಿಸುವಪಕ್ಷದಲ್ಲಿ, ಅಂತಹರು ಕೆಲನಿಮಿಷಗಳೊಳಗಾಗಿ ಮರಣವನ್ನು ಹೊಂದುವರು. ಆದುದರಿಂದ ಪ್ರತಿಮನುಷ್ಯನೂ ತಾನು ವಾಸಮಾಡುವಮನೆಗೂ, ಮಲಗುವಮನೆಗೂ ತಕ್ಕಷ್ಟು ಶುದ್ದವಾಯುವು ಪ್ರವೇಶಿಸುವಂತೆ ಅವಕಾಶವನ್ನುಂಟುಮಾಡಿರಬೇಕು. ಹೊಸವಾಯುವು ಹೆಚ್ಚಾಗಿಬರುವುದಕ್ಕೆ ಅವಕಾಶವಿಲ್ಲದಂತಹ ಒಂದು ಕಿರುಮನೆಯಲ್ಲಿ ಹಲವುಮಂದಿ ಮಲಗಿದಪಕ್ಷದಲ್ಲಿ, ಸ್ವಲ್ಪ ನಿಮಿಷಗಳೊಳಗಾಗಿ ಪ್ರಾಣವಾಯುವೆಲ್ಲ ಕಡಿಮೆಯಾಗಿ ಕಡೆಗೆ ಕೆಟ್ಟಗಾಳಿಯನ್ನೇ ಸೇವಿಸಬೇಕಾಗುವುದಾದುದರಿಂದ, ಬಹುರೋಗಗಳು ಸಂಭವಿಸುವುದಲ್ಲದೆ ಒ೦ದೊ೦ದುವೇಳೆ ಮರಣವೂ ಸಂಭವಿಸಬಹುದು. ಸಾಧಾರಣವಾಗಿ ನಮ್ಮವರಲ್ಲಿ ಕೆಲವರು ಹೆರಿಗೆಯ ಮನೆಗಳಿಗೆ ಒಳ್ಳೆಯ ಗಾಳಿಯನ್ನು ಬರಗೊಡದೆ ಬಾಗಿಲುಗಳನ್ನು ಮುಚ್ಚಿ ಬಿಡುವರಾದುದರಿಂದಲೇ ಹೆತ್ತ ಹತ್ತು ದಿನಗಳೊಳಗಾಗಿ ಮಗುವೋ ಬಾಣಂತಿಯೋ ಮರಣಕ್ಕೆ ಗುರಿಯಾಗುವರು.
ಚಂದ್ರ -ಮೊನ್ನೆ ನಾನಿಲ್ಲಿಗೆ ಹೊರಟುಬರುವಾಗ ಎಲ್ಲಿಯಾದರೂ ಹಾರಿಹೋದೀತೆಂಬ ಶಂಕೆಯಿಂದ ನನ್ನ ಗಿಳಿಯನುರಿಯನ್ನು ಪೆಟ್ಟಿಗೆಯಲ್ಲಿಟ್ಟು ಭದ್ರವಾಗಿ ಮುಚ್ಚಳವನ್ನು ಹಾಕಿಬಂದೆನು. ಒಳ್ಳೆಯ ಗಾಳಿಯು ಬಾರದಿದ್ದುದರಿ೦ದಲೆಯೋ ಏನೋ, ಆ ಮರಿಯು ನಾನು ಪೆಟ್ಟಿಗೆಯನ್ನು ತೆರೆದು ನೋಡಿದಾಗ ಸತ್ತುಬಿದ್ದಿದ್ದಿತು. ಆಗ ನನಗೆ ಅದರಕಾರಣವೇನೆಂಬುದು ತಿಳಿಯಲಿಲ್ಲ. ಇದೂ ಅಲ್ಲದೆ ನೆನ್ನೆ ನಾನು ಕಣ್ಣುಮುಚ್ಚಾಟವನ್ನು ಆಡುವಾಗ ಹೊಸಗಾಳಿಯು ಬರುವುದಕ್ಕೆ ಸಂಪೂರ್ಣವಾಗಿ ಆವ ಕಾಶವೇ ಇಲ್ಲದಿರುವ ನಮ್ಮ ನಡುಮನೆಯಲ್ಲಿ ಒಂದು ಗಳಿಗೆಯಹೊತ್ತು ಅವಿತುಕೊಂಡಿದ್ದು ತರುವಾಯ ಹೊರಕ್ಕೆ ಬರಲು ದೇಹವೆಲ್ಲಾ ಬೆವರೇರಿ ಉಸಿರಾಡುವುದಕ್ಕೂ ಆಗದಂತೆ ಕಷ್ಟವಾದುದಕ್ಕೆ ಇದೇಕಾರಣವಾಗಿರಬಹು ದಲ್ಲವೇ?
ಗುರು ಅಹುದು. ಶುದ್ದವಾಯುವು ಇಲ್ಲವಾದರೆ ಜೀವಜಂತುಗಳ ಆರೋಗ್ಯಕ್ಕೆ ಹಾನಿಯುಂಟಾಗುವುದು ಮಾತ್ರವೇ ಅಲ್ಲದೆ, ಬೆಂಕಿಯೂ ಉರಿಯಲಾರದು.
ಚಂದ್ರ-ನಾಲ್ಕು ತಿಂಗಳ ಕೆಳಗೆ ಒಂದಾನೊಂದುದಿನ ನಮ್ಮದೇವತಾರ್ಚನೆಯ ಪೆಟ್ಟಿಗೆಯಲ್ಲಿ ದೀಪವನ್ನು ಉರಿಯುತ್ತಿದ್ದಂತೆಯೇ ಬಿಟ್ಟು ಬಾಗಿಲನ್ನೆಳೆದು ಚಿಲುಕವನ್ನು ಹಾಕಿದೆವು. ಅಷ್ಟರೊಳಗಾಗಿ ಅದರಲ್ಲಿದ್ದ ಗಂದದ ಬಟ್ಟಲು ಬೇಕಾಗಲು ಬಾಗಿಲನ್ನು ತೆರೆದು ನೋಡಿದಾಗ ಹಣತೆಯಲ್ಲಿ ಎಣ್ಣೆಯೂ ಬತ್ತಿಯೂ ವಿಶೇಷವಾಗಿದ್ದರೂ, ದೀಪವು ಆರಿಹೋಗಿದ್ದುದನ್ನು ಕಂಡು ನನಗೆ ಎಷ್ಟೋ ಆಶ್ಚರ್ಯವಾಯಿತು. ನಾವು ಉಸಿರಾಡುವುದರಿಂದ ಮಾತ್ರವೇ ಅಲ್ಲದೆ ಮತ್ತಾವುದರಿಂದಲಾದರೂ ಗಾಳಿಯು ಕೆಟ್ಟುಹೋಗಿ ವಿಷಸ್ವಭಾವವುಳ್ಳುದಾಗುವುದುಂಟೇ?
ಗುರು—ಬಚ್ಚಲ ನೀರಿಂದ ಹೊರಕ್ಕೆಬರುವ ದುರ್ಗಂಧವೂ, ಸತ್ತ ಜಂತುಗಳ ಶರೀರವು ಕೊಳೆತು ನಾರುವಾಗ ಉಂಟಾಗುವ ದುರ್ವಾಸನೆಯೂ, ಹಸುಗಳನ್ನು ಕಟ್ಟುವಸ್ಥಳದಲ್ಲಿ ಹುಟ್ಟುವ ರೊಚ್ಚಿನ ದುರ್ವಾಸನೆಯೂ, ಕಾಯಿಪಲ್ಲೆಯ ಸೆಗಣಿಯಕುಪ್ಪೆ ಮೊದಲಾದುವು ಕೊಳೆಯುವುದರಿಂದ ಹುಟ್ಟುವ ಕೆಟ್ಟ ಗಂಧವೂ, ಗಾಳಿಯನ್ನು ವಿಷಯುಕ್ತವನ್ನಾಗಿಮಾಡಿ, ನಮ್ಮ ದೇಹಾರೋಗ್ಯಕ್ಕೆ ಭಂಗವನ್ನುಂಟುಮಾಡುವುವು. ಬೆಂಕಿಯುರಿಯುವದರಿಂದಲೂ, ವಾಸಸ್ಥಳವನ್ನು ತೇವವಾಗಿಟ್ಟುಕೊಂಡಿರುವುದರಿಂದಲೂ, ಮನೆಯ ಸಮಿಪದಲ್ಲಿಯೇ ಮಲಮೂತ್ರಾದಿಗಳನ್ನು ವಿಸರ್ಜಿಸುವುದ ರಿಂದಲೂ, ಹೊಗೆಮೊದಲಾದುವುಗಳಿಂದಲೂ, ಗಾಳಿಯು ಕೆಟ್ಟುಹೋಗಿ ಬಹುವಿಧಗಳಾದ ವ್ಯಾಧಿಗಳನ್ನು ಹುಟ್ಟಿಸುವುದಾದುದರಿಂದ, ವಾಸಗೃಹಗಳ ಸಮಾಸದಲ್ಲಿ ಇಂತಹ ಪದಾರ್ಥಗಳನ್ನಾವುದನ್ನೂ ಇರಗೊಡದೆ ಜಾಗರೂಕರಾಗಿ ವಾಸಸ್ಥಾನಗಳನ್ನು ನಿರಂತರವೂ ಶುಚಿಯಾಗಿಟ್ಟಿರಬೇಕು.
ಚಂದ್ರ- ಇಷ್ಟುಬಗೆಯಲ್ಲಿ ಪ್ರತಿದಿನವೂ ಗಾಳಿಯು ಕೆಟ್ಟುಹೋಗಿ ಹಾನಿಕರವಾಗುತ್ತಿದ್ದರೂ ಭಗವಂತನು ಈ ಭಾದೆಯನ್ನು ಪರಿಹರಿಸುವುದಕ್ಕೆ ಆವ ಸಾಧನವನ್ನೂ ಕಲ್ಪಿಸಿಲ್ಲವೇ?
ಗುರು-ನಾವು ಹೊರಕ್ಕೆ ಬಿಡುವ ಕೆಟ್ಟ ಗಾಳಿಯನ್ನು ವೃಕ್ಷಾದಿಗಳು ಗ್ರಹಿಸಿ ನಮಗೆ ಆವಶ್ಯಕವಾದ ಪ್ರಾಣವಾಯುವನ್ನು ಹಗಲ ಹೊತ್ತಿನಲ್ಲಿ ಕೊಡುವುವು. ಹೀಗೆ ವೃಕ್ಷಾದಿಗಳು ಶುದ್ಧಿಗೊಳಿಸುತ್ತಿರುವುದರಿಂದಲೂ, ಗಾಳಿಯು ಬಹುದೂರ ವ್ಯಾಪಿಸಿರುವುದರಿಂದಲೂ, ಹೊಸ ಗಾಳಿಯು ಹಳೆಯದುದನ್ನು ಹೊರಕ್ಕೆ ಎತ್ತಿಕೊಂಡು ಹೋಗುವುದರಿಂದಲೂ, ವಿಷವಾಯುವಿನಿಂದ ನಮಗುಂಟಾಗುವ ಹಾನಿಯು ಪರಿಹಾರವಾಗುವುದು. ಉಸಿರಾಡುವುದೇ ಮೊದಲಾದ ಅನಿವಾರ್ಯಕಾರ್ಯಗಳನ್ನುಳಿದು ಇತರ ದುಷ್ಕಾರ್ಯಗಳಿಂದ ನಾವು ಗಾಳಿಯನ್ನು ಕೆಡಿಸದಿರುವ ಪಕ್ಷದಲ್ಲಿ, ನಮ್ಮ ಆರೋಗ್ಯಕ್ಕೆ ಭಗವಂತನು ಕಲ್ಪಿಸಿರುವ ಸಾಧನಗಳೇ ಸಾಕಾಗಿರುವುವು. ಆದುದರಿಂದ ಮೇಲೆ ತಿಳಿಸಿದ ಲೋಪಗಳನ್ನು ಕುರಿತು ನಾವು ಶ್ರದ್ಧೆಯನ್ನು ವಹಿಸಬೇಕು.
ಚಂದ್ರ-ನಾವು ಶ್ರದ್ಧೆಯನ್ನು ವಹಿಸಿ ಮಾಡಬೇಕಾಗಿರುವ ಕಾರ್ಯಗಳಾವುವು?
ಗುರು-ಗೃಹಾದಿಗಳನ್ನು ನಿರಂತರವೂ ಶುಚಿಯಾಗಿಟ್ಟುಕೊಂಡು, ಗಾಳಿಯ ದುರ್ಗಂಧ ಮೊದಲಾದುವುಗಳೆಲ್ಲಾ ಹೋಗುವಂತೆ ಗೋಡೆಗಳಿಗೆ ಆಗಾಗ ಸುಣ್ಣವನ್ನು ತೊಡೆಯಿಸುತ್ತೆ, ಶುದ್ದ ವಾಯುವು ಧಾರಾಳವಾಗಿ ಒಳಕ್ಕೆ ಪ್ರವೇಶಿಸುವುದಕ್ಕೆ ಅವಕಾಶವಿರುವಂತೆ ಗೋಡೆಗಳ ಮೇಲ್ಬಾಗದಲ್ಲಿ ದೊಡ್ಡ ಕಿಟಕಿಗಳನ್ನಿಡಿಸಿ, ಹೊಗೆ ಮೊದಲಾದುವುಗಳು ಹೊರಕ್ಕೆ ಹೋಗುವುದಕ್ಕೆ ತಕ್ಕ ಮಾರ್ಗಗಳನ್ನೇರ್ಪಡಿಸಿ, ನಮ್ಮ ದೇಹ ಸಂರಕ್ಷಣೆ ಗೋಸುಗ ತಕ್ಕಷ್ಟು ಶ್ರದ್ದೆಯನ್ನು ವಹಿಸಬೇಕು. ಚಂದ್ರ-ಇನ್ನು ನೀರನ್ನುಪಯೋಗಿಸಬೇಕಾದ ಕ್ರಮವನ್ನೂ ದಯೆಯಿಟ್ಟು ತಿಳಿಸುವಿರಾ?
ಗುರು-ದೇಹಾರೋಗ್ಯವನ್ನು ಕಾಪಾಡಿಕೊಳ್ಳಬೇಕಾದಪಕ್ಷದಲ್ಲಿ ನಿರ್ಮಲವಾಯುವು ಹೇಗೆ ಆವಶ್ಯಕವೋ ಪಾನಮಾಡುವುದಕ್ಕೆ ನಿರ್ಮಲವಾದ ನೀರೂ ಹಾಗೆಯೇ ಆವಶ್ಯಕವು. ಆದುದರಿಂದ ನದಿಗಳಲ್ಲಿಯಾಗಲಿ, ಕೆರೆಗಳಲ್ಲಿಯಾಗಲಿ ಕೊಳೆಯಿಂದ ಕೂಡಿರುವ ನೀರನ್ನು ಯಾವಾಗಲೂ ಕುಡಿಯದೆ ಚೆನ್ನಾಗಿ ಶೋಧಿಸಲ್ಪಟ್ಟ ತಿಳಿನೀರನ್ನೇ ಪಾನಮಾಡಬೇಕು. ನಾವು ಕುಡಿಯುವನೀರನ್ನು ತೆಗೆದುಕೊಂಡು ಬರುವಂತಹ ಜಲಾಶಯಗಳಲ್ಲಿ ಸ್ನಾನಮಾಡುವುದು ಮುಸುರೆಯ ಪಾತ್ರೆಗಳನ್ನು ತೊಳೆಯುವುದು ಬಟ್ಟೆಗಳನ್ನೊಗೆಯುವುದು, ಇವೇ ಮೊದಲಾದ ಕೆಲಸಗಳನ್ನು ಮಾಡಬಾರದು. ಹೀಗೆ ಮಾಡುವುದರಿಂದ ನೀರು ಕೆಟ್ಟುಹೋಗಿ ಅದನ್ನು ಕುಡಿಯುವವರಿಗೆ ರೋಗಾದಿಗಳು ಉಂಟಾಗುವುವು.
ಚಂದ್ರ-ನಾವು ತೆಗೆದುಕೊಳ್ಳಬೇಕಾದ ಆಹಾರವೆಂತಹುದೋ, ಆವಾವಕಾಲದಲ್ಲಿ ಭೋಜನವನ್ನು ಮಾಡಬೇಕೋ ಅದನ್ನೂ ನನ್ನಲ್ಲಿ ಅನುಗ್ರಹವಿಟ್ಟು ತಿಳಿಸಬೇಕು.
ಗುರು-ಆರೋಗ್ಯಕರವೂ, ಪುಷ್ಟಿಕರವೂ ಆದ ಪದಾರ್ಥವನ್ನು ಮಾತ್ರವೇ ಭುಂಜಿಸುತ್ತೆ, ದೇಹಕ್ಕೆ ಆಲಸ್ಯವನ್ನುಂಟುಮಾಡುವಂತಹ ಅಜೀರ್ಣಕರಗಳಾದ ಪದಾರ್ಥಗಳನ್ನಾವಾಗಲೂ ತಿನ್ನದಿರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸೊಪ್ಪಿನ ತರಕಾರಿಗಳನ್ನು ತಿನ್ನಕೂಡದು. ಒಳ್ಳೆಯಪದಾರ್ಥವೆಂದೆಣಿಸಿ ನಾವು ಮಿತಿಮಿಾರಿ ತಿಂದುಬಿಟ್ಟರೆ ಅಜೀರ್ಣಾದಿ ವ್ಯಾಧಿಗಳು ಸಂಪ್ರಾಪ್ತವಾಗುವುವು. ಎಳೆಮಕ್ಕಳು ದಿನಕ್ಕೆ ಮೂರುನಾಲ್ಕು ಬಾರಿ ಊಟಮಾಡಬೇಕು. ದೊಡ್ಡವರು ಪ್ರತಿದಿನವೂ ಎರಡುಬಾರಿ ಕ್ರಮಕಾಲದಲ್ಲಿ ಊಟಮಾಡುತ್ತೆ ಯಾವಾಗಲೂ ಒಂದೇಪದಾರ್ಥವನ್ನೇ ತಿನ್ನುತ್ತಿರದೆ ಬೇರೆಬೇರೆ ಬಗೆಯ ಕಾಯಿಪಲ್ಲೆಯಗಳನ್ನೂ ರಸವರ್ಗಗಳನ್ನೂ ತಿನ್ನಬೇಕು. ವ್ರತನಿಯಮಗಳೆಂಬ ವ್ಯಾಜದಿಂದ ಕ್ರಮತಪ್ಪಿ ಊಟಮಾಡುವುದೂ, ಒಂದುಹೊತ್ತು ಮಾತ್ರ ಭುಜಿಸುವುದೂ, ಉಪವಾಸಗಳನ್ನು ಮಾಡುವುದೂ, ಇವೇ ಮೊದಲಾದ ಆಚಾರಗಳನ್ನು ಬಿಡಬೇಕು. ಇಲ್ಲದಪಕ್ಷದಲ್ಲಿ ಅಂಥವರು ರೋಗಾದಿಗಳಿಗೆ ನೆಲೆಯಾಗಿ ಶರೀರವನ್ನು ಹಾಳುಮಾಡಿಕೊಳ್ಳುವರು.
ಚಂದ್ರ-ನಾವು ಧರಿಸಬೇಕಾದ ವಸ್ತ್ರಗಳನ್ನು ಕುರಿತು ಹೇಳತಕ್ಕುದೇನಾದರೂ ಇರುವುದೇ?
ಗುರು - ನಾವು ಧರಿಸಿಕೊಳ್ಳುವ ವಸ್ತ್ರಗಳು ಬೆವರು ಮೊದಲಾದುವುಗಳಿಂದ ಬಹು ಜಾಗ್ರತೆಯಾಗಿ ಮಾಸಿಹೋಗುವುವು. ಮಾಸಿದ ಬಟ್ಟೆಯನ್ನೇ ಮತ್ತೆ ಧರಿಸುವುದರಿಂದ ಕಜ್ಜಿಯೇ ಮೊದಲಾದ ಚರ್ಮರೋಗಗಳು ಹುಟ್ಟುವುವು. ಆದುದರಿಂದ ಬಟ್ಟೆಯು ಸ್ವಲ್ಪ ಮಾಸಿದೊಡನೆಯೇ ಅದನ್ನು ತೆಗೆದುಹಾಕಿ ಒಗೆದು ತಂದಿರುವ ಬೇರೆ ಬಟ್ಟೆಯನ್ನು ಉಡಬೇಕು. ದೇಹಾರೋಗ್ಯಕ್ಕೆ ಶುಭ್ರವಾದ ವಸ್ತ್ರಗಳು ಆವಶ್ಯಕಗಳಲ್ಲದೆ ಹೆಚ್ಚು ಬೆಲೆಯ ವಸ್ತ್ರಗಳಲ್ಲ. ಆದುದರಿಂದ ಬಡವರ ಹೆಂಗಸರು ಧನಿಕರ ಹೆಂಗಸರನ್ನು ನೋಡಿ, ತನಗೂ ಅವರಿಗಿರುವಂತೆ ಬೆಲೆ ಬಾಳುವ ವಸ್ತ್ರಗಳೇಬೇಕೆಂದು ಹಟಹಿಡಿಯದೆ ಬುದ್ದಿಹೀನತೆಯನ್ನು ಬಿಡಬೇಕು.
ಚ೦ದ್ರ-ಪ್ರತಿದಿನವೂ ಸ್ನಾನಮಾಡುವುದರಿಂದ ಪ್ರಯೋಜನವೇನು?
ಗುರು-ಕುಡಿಯುವ ನೀರಿನಂತೆಯೇ ಸ್ನಾನಮಾಡುವ ನೀರೂ ನಿರ್ಮಲವಾಗಿರಬೇಕು. ಪುಣ್ಯವು ಬರುವುದೆಂದು ನದಿಗಳಲ್ಲಿರುವ ಕೆಸರು ನೀರಿನಲ್ಲಿ ಮುಳುಗಿ ಆಚಾರವೆಂದು ಒದ್ದೆಯ ಬಟ್ಟೆಯನ್ನುಟ್ಟು ಕುಳಿತುಕೊಂಡರೆ ರೋಗಾದಿಗಳು ಉಂಟಾಗುವುವು. ಮೈಮೇಲೆಲ್ಲ ಇರುವ ಸೂಕ್ಷ್ಮಗಳಾದ ರಂಧ್ರಗಳಿಂದ ಬೆವರು, ಮಣ್ಣು ಇವೇ ಮೊದಲಾದ ಕಲ್ಮಷ ಪದಾರ್ಥಗಳು ಯಾವಾಗಲೂ ಹೊರಕ್ಕೆ ಬರುತ್ತಿರುವುವು. ಮೈಯನ್ನು ಚೆನ್ನಾಗಿ ಉಜ್ಜಿಕೊಂಡು ಸ್ನಾನಮಾಡದಿರುವಪಕ್ಷದಲ್ಲಿ, ಆ ರಂಧ್ರಗಳು ಮುಚ್ಚಿ ಹೋಗಿ ಬೆವರು ಮೊದಲಾದವುಗಳು ಹೊರಕ್ಕೆ ಸರಿಯಾಗಿ ಬಾರದೆ ಕಜ್ಜಿ ಮುಂತಾದುವಕ್ಕೆ ಆಸ್ಪದವುಂಟಾಗುವುದು. ಆದುದರಿಂದ ಸ್ನಾನಮಾಡುವಾಗ ಕೊಳೆ ಹೋಗುವಂತೆ ಚೆನ್ನಾಗಿ ಮೈಯನ್ನುಜ್ಜಿಕೊಂಡು, ದಿನಕ್ಕೊಂದು ಬಾರಿಯಾದರೂ ತಪ್ಪದೆ ಸ್ನಾನಮಾಡುತ್ತಿರಬೇಕು. ಮೈಮೇಲೆ ಸುಮ್ಮನೆ ನೀರನ್ನು ಸುರಿದುಕೊಳ್ಳುವುದರಿಂದ ಆವ ಪ್ರಯೋಜನವೂ ಉಂಟಾಗಲಾರದು. ಪ್ರತಿದಿನವೂ ಬಾಲಕರೂ, ದೇಹದಾರ್ಡ್ಯವುಳ್ಳವರೂ ಪ್ರಾತಃಕಾಲಗಳಲ್ಲಿ ತಣ್ಣೀರಿನ ಸ್ನಾನವನ್ನು ಮಾಡಬೇಕು; ಬಲಹೀನರೂ ವ್ಯಾಧಿಗ್ರಸ್ತರೂ ಉಗುರುಬಿಸಿಯಾದ ನೀರಿನಲ್ಲಿ ಸ್ನಾನಮಾಡಬೇಕು; ಬಲುಬಿಸಿಯಾದ ನೀರಿನಲ್ಲಿ ಸ್ನಾನಮಾಡುವುದು ಮೈಗೆ ಒಳ್ಳೆಯದಲ್ಲ; ಆದುದರಿಂದ ಮಕ್ಕಳು ನಿದ್ರೆಹೋಗುವರೆಂದು ಭ್ರಮಿಸಿ ಬಲುಬಿಸಿಯಾದ ನೀರನ್ನೆರೆಯುವ ದುರಾಚಾರವನ್ನು ತಿಳಿವುಳ್ಳವರೆಲ್ಲರೂ ಬಿಡಬೇಕು.
ಚಂದ್ರ - ಇನ್ನು ನಿದ್ರೆಯ ವಿಚಾರವೊಂದುಳಿಯಿತು. ಅದನ್ನೂ ಅಪ್ಪಣೆಕೊಡಿಸುವಿರಾ?
ಗುರು- ಪ್ರತಿದಿನವೂ ರಾತ್ರಿ ಹತ್ತು ಗಂಟೆಗೆ ಮಲಗಿ ಪ್ರಾತಃಕಾಲದಲ್ಲಿ ಸೂರ್ಯೋದಯವಾಗುವುದಕ್ಕೆ ಮೊದಲೆ ಏಳಬೇಕು. ಸಾಧಾರಣವಾಗಿ ದಿನವೊಂದಕ್ಕೆ ಎರಡುಜಾವ ನಿದ್ರಿಸಬೇಕು. ಹಗಲುಹೊತ್ತಿನಲ್ಲಿ ನಿದ್ರಿಸುವುದು ಒಳ್ಳೆಯ ಪದ್ಧತಿಯಲ್ಲ. ಸಣ್ಣ ಮಕ್ಕಳಿಗೆ ಹೆಚ್ಚಾದನಿದ್ರೆಯು ಆವಶ್ಯಕವಾದುದರಿಂದ ಅವರನ್ನು ಹಗಲಲ್ಲಿ ನಿದ್ರಿಸುವಂತೆ ಮಾಡಬೇಕು. ನಿದ್ರಾಭಂಗದಿಂದ ಆಲಸ್ಯವುಂಟಾಗುವುದಾದುದರಿಂದ ಜಾಗರಣೆ ಮಾಡಲಾಗದು.
ಚಂದ್ರ - ಈಗ ತಿಳಿಸಿದುವುಗಳಲ್ಲದೆ ದೇಹಾರೋಗ್ಯದ ವಿಷಯವಾಗಿ ಹೇಳಬೇಕಾದುದು ಮತ್ತೇನಾದರೂ ಇರುವುದೇ ?
ಗುರು -ಮುಖ್ಯವಾದುದು ಇನ್ನೊಂದಿರುವುದು. ಪ್ರತಿದಿನವೂ ಸ್ವಲ್ಪ ಕಾಲ ದೇಹಪರಿಶ್ರಮವನ್ನು ಮಾಡುವುದು ಅತ್ಯಾವಶ್ಯಕವು. ಆವಕಾರ್ಯವನ್ನೂ ಮಾಡದೆ ಸುಮ್ಮನೆ ಕುಳಿತಿದ್ದ ಪಕ್ಷದಲ್ಲಿ, ದೇಹವು ಬಲಹೀನವಾಗಿ ವ್ಯಾಧಿಗಳುಂಟಾಗುವುವು. ಈ ಕಾರಣದಿಂದಲೇ, ಕಷ್ಟ ಪಡದೆ ತಿಂದು ತಿಂದು ಕುಳಿತುಕೊಳ್ಳುವ ಧನಿಕರ ಸ್ತ್ರೀಯರಿಗಿಂತ ಕಷ್ಟ ಪಟ್ಟು ಕೆಲಸಮಾಡುವ ಬಡವರ ಸ್ತ್ರೀಯರು ಬಲಶಾಲಿನಿಯರಾಗಿರುವರು. ಆದುದರಿಂದ ದಾಸದಾಸೀ ಜನರಿರುವ ಧನಿಕರಾದವರೂಕೂಡ ಮನೆಗಳಲ್ಲಿ ಕೆಲಸಕಾರ್ಯಗಳನ್ನು ಮಾಡಿಕೊಂಡು ಚಿರಕಾಲಾಯುರಾರೋಗ್ಯಗಳನ್ನು ಅನುಭವಿಸಬೇಕು.
ಮತ್ತೆ ಕೆಲದಿನಗಳು ಕಳೆದಬಳಿಕ ಚಂದ್ರಮತಿಯೊಂದುದಿನ ಪದ್ಧತಿಯ ಪ್ರಕಾರ ಓದಬೇಕಾದ ಪಾಠಗಳನ್ನೋದಿ ಲೆಕ್ಕಗಳನ್ನುಮಾಡಿ, ಅಕ್ಷರಗಳು ಲಕ್ಷಣಯುಕ್ತವಾಗುವುದಕ್ಕೋಸುಗ ಗುರುವು ಬರೆದ ಮೇಲ್ಪಙ್ತಿಯನ್ನನುಸರಿಸಿ ಬರೆಯುತ್ತಿದ್ದಳು. ಅವಳು ಬರೆಯುತ್ತಿದ್ದಾಗ ವಿದ್ಯಾಸಮುದ್ರನು ಶಿಷ್ಯೆಯನ್ನು ಚೆನ್ನಾಗಿ ದೃಷ್ಟಿಸಿ, ಆಕೆಯ ಮುಖದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಂಡು, ಅವಳು ಬರೆದುಮುಗಿಸುವವರೆಗೂ ಸುಮ್ಮನಿದ್ದು “ಮಗೂ, ನಿನ್ನ ಮುಖವನ್ನು ನೋಡಿದರೆ, ನೀನೇನೋ ಬಹು ವಿಚಾರಗ್ರಸ್ತಳಾಗಿರುವಂತೆ ತೋರುವುದು. ಇಷ್ಟೇ ಅಲ್ಲದೆ ನಿನ್ನ ಶರೀರವೂ ಮೊದಲಿನಂತೆ ಇಲ್ಲದೆ ಸ್ವಲ್ಪ ಬಡವಾಗಿರುವುದು, ಇದಕ್ಕೆ ಕಾರಣವೇನು?” ಎಂದು ಕೇಳಿದನು.
ಚಂದ್ರ-ನೆನ್ನೆಯದಿನ ನಮ್ಮ ತಾಯಿಯೂ ನೀವು ಕೇಳಿದಂತೆಯೇ ಕೇಳಿದಳು. ಶರೀರಾರೋಗ್ಯವನ್ನು ಕುರಿತ ಧರ್ಮಗಳನ್ನು ಮೊನ್ನೆ ನೀವು ತಿಳಿಸಿದಾಗಳಿಂದಲೂ ನಾನು ಅನ್ನಪಾನಾದಿಗಳ ವಿಷಯದಲ್ಲಿಯೂ ದೇಹ ಪರಿಶುದ್ದತೆಯ ವಿಷಯದಲ್ಲಿಯೂ ಹೆಚ್ಚಾದ ಶ್ರದ್ಧೆಯನ್ನು ವಹಿಸಿರುವೆನು. ಈಗ ನನ್ನ ಕೈ ಮೇಲಿದ್ದ ಕಜ್ಜಿಯೆಲ್ಲ ಹೋಯಿತು. ಹೀಗಿದ್ದರೂ ಈಗ ನಾನು ಬಡವಾಗಿರುವುದಕ್ಕೆ ಕಾರಣವೇನೆಂಬುದನ್ನು ನಾನೂ ಕಾಣೆನು.
ಗುರು-ನೀನಾವುದಾದರೂ ಮನೋವ್ಯಾಧಿಯಿಂದ ಬಡವಾಗಿರುವೆಯೇನೋ?
ಚಂದ್ರ-ಈಗ ನೀವು ಆಡಿದ ಮಾತಿಗೆ ಅರ್ಥವೇನೋ ನನಗೆ ತಿಳಿಯದು. ಹೊಟ್ಟೆ ತುಂಬುವುದಕ್ಕೆ ಸಾಕಾದಷ್ಟು ಯುಕ್ತವಾದ ಭೋಜನವಿಲ್ಲದಿದ್ದರೂ ಕೆಟ್ಟ ಪದಾರ್ಥಗಳನ್ನು ತಿಂದರೂ ದೇಹಕ್ಕೆ ವ್ಯಾಧಿಯುಂಟಾಗುವುದೆಂದು ನಿಮ್ಮಿಂದಲೇ ಕೇಳಿಬಲ್ಲೆನು; ಆದರೆ ಮನಸ್ಸಿಗೆ ವ್ಯಾಧಿಯು ಏತರಿಂದುಂಟಾಗುವುದೋ ಅದು ಹೇಗಿರುವುದೋ ಈ ವಿಷಯವು ಮಾತ್ರ ನನಗೆ ತಿಳಿಯದಿರುವುದು. ನೀವು ಆ ವಿಷಯವನ್ನು ಕುರಿತು ಸ್ವಲ್ಪ ಮಟ್ಟಿಗೆ ತಿಳಿಸಬೇಕು. ಗುರು-ಯುಕ್ತವಾದ ಆಹಾರವಾಗಲಿ, ಪರಿಶುದ್ಧತೆಯಾಗಲಿ ಇಲ್ಲದಿದ್ದರೆ ಶರೀರಕ್ಕೆ ಹೇಗೆ ವ್ಯಾಧಿಯು ಸಂಭವಿಸುವುದೋ, ಆತ್ಮಕ್ಕೂ ಹಾಗೆಯೇ. ಅದಕ್ಕೆ ತಕ್ಕ ಆಹಾರವೂ ಪರಿಶುದ್ದತೆಯೂ ಇಲ್ಲದಿದ್ದರೆ ವ್ಯಾಧಿಯು ಸಂಭವಿಸುವುದು. ಆತ್ಮಕ್ಕೂ ಶರೀರಕ್ಕೂ ಪರಸ್ಪರಸ೦ಬ೦ಧವಿರುವುದರಿಂದ ಆತ್ಮಕ್ಕೆ ಆವುದಾದರೂ ಬಾಧೆಯುಂಟಾದಾಗ ಶರೀರವು ಬಡವಾಗುವುದು.
ಚ೦ದ್ರ ಸ್ವಲ್ಪ ದಿನಗಳಿಗೆ ಮೊದಲು ಕಾಲಾಧೀನಳಾದ ನಮ್ಮ ದಾಸಿಯ ವಿಷಯವಾಗಿ ನನ್ನ ಮನಸ್ಸಿಗೆ ವ್ಯಥೆಯುಂಟಾಗಿರುವುದು. ಬಾಲ್ಯದಿಂದಲೂ ನನ್ನನ್ನೆತ್ತಿಕೊಂಡು ಆಡಿಸಿದ ಆ ದಾಸಿಯವಿಷಯವಾಗಿ ಹೇಗೆ ತಾನೆ ವ್ಯಸನಪಡದೆ ಇರಲಾದೀತು? ಈಗ ನೀವು ಕೇಳಿದಂತೆ ನಾನು ಬಡವಾಗಿರುವುದಕ್ಕೆ ಅದೇ ಕಾರಣವಾಗಿರಬಹುದು. ಇದುವರೆಗೂ ನೀವು ತಿಳಿಸಿದ ಧರ್ಮಗಳೆಲ್ಲ ಶರೀರವನ್ನು ಕುರಿತವುಗಳೇ ಆಗಿರುವುದರಿಂದ, ಆತ್ಮಕ್ಕೆ ಸಂಬಂಧಿಸಿದ ಧರ್ಮಗಳನ್ನೂ ಸ್ವಲ್ಪ ವಿವರಿಸಬೇಕೆಂದು ಬೇಡುವೆನು.
ಗುರು-ಆತ್ಮವೆಂಬ ನಮ್ಮ ಜ್ಞಾನದೇಹವು ವೃದ್ಧಿ ಹೊಂದುವುದಕ್ಕೆ ವಿದ್ಯೆಯೇ ಆಹಾರವು. ನಮ್ಮ ಜ್ಞಾನಕ್ಕೆ ಸಾಧನವಾದ ಗ್ರಂಥಾವಲೋಕನೆಗೆ ವಿದ್ಯೆಯೆಂದು ಹೆಸರು. ಜ್ಞಾನಸಂಪಾದನೆಯನ್ನು ಸಂಪೂರ್ಣವಾಗಿ ಮಾಡದವರು ಯಾವವಿಷಯದಲ್ಲಿ ಹೇಗೆ ಪ್ರವರ್ತಿಸಬೇಕೆಂಬುದನ್ನರಿಯದೆ, ಕಷ್ಟಕ್ಕೊಳಗಾಗಿ ಸುಖವಿಲ್ಲದಿರುವರಾಗುವರು. ದೇಹಶುದ್ದಿಯಂತೆಯೇ ಆತ್ಮಶುದ್ಧಿಯೂ ನಮ್ಮ ಸೌಖ್ಯಕ್ಕೆ ಅತ್ಯಂತಾವಶ್ಯಕವಾದುದು. ನಾವು ಆತ್ಮಾನಂದವನ್ನು ಅನುಭವಿಸಬೇಕಾದರೆ, ಸಾಧ್ಯವಾದಷ್ಟುಮಟ್ಟಿಗೆ, ಜ್ಞಾನಾಭಿವೃದ್ಧಿಯನ್ನುಂಟುಮಾಡಿಕೊಂಡು, ಚಿತ್ತಶುದ್ಧಿಯನ್ನು ಹೊಂದಿರಬೇಕು.
ಚಂದ್ರ-ಜ್ಞಾನಾಭಿವೃದ್ಧಿಯುಂಟಾಗುವುದಕ್ಕೆ ವಿದ್ಯೆಯು ಆವಶ್ಯಕವಾದುದೆಂದು ಹೇಳಿದಿರಲ್ಲವೇ! ಸ್ತ್ರೀಯರು ಕಲಿಯಬೇಕಾದ ವಿದ್ಯೆಯು ಎಷ್ಟು ಮಟ್ಟಿಗಿರಬೇಕು?
ಗುರು-ಪುರುಷರಿಗೆ ಹೇಗೋ ಹಾಗೆಯೇ ನಿಮಗೂ ಈಗ ನಾನು ಪ್ರತಿದಿನವೂ ಹೇಳುತ್ತಿರುವಂತೆ ಭಾಷಾವಿಷಯಿಕವಾದ ಜ್ಞಾನವನ್ನು ವೃದ್ಧಿಗೊಳಿಸುವ ವ್ಯಾಕರಣಸಾಹಿತ್ಯಗಳೂ, ವಸ್ತು ವಿವೇಚನಶಕ್ತಿಯನ್ನುಂಟು ಮಾಡತಕ್ಕ ಗಣಿತಶಾಸ್ತ್ರವೂ, ದೇಶಕಾಲವರ್ತಮಾನಗಳನ್ನು ತಿಳಿಸತಕ್ಕ ಚರಿತ್ರೆಗಳೂ ಆವಶ್ಯಕಗಳಾಗಿರುವುವು. ನಿಮ್ಮ ನಡೆನುಡಿಗಳು ಕ್ರಮವಾಗಿರುವುದಕ್ಕೋಸುಗ ಎಲ್ಲವುಗಳಿಗಿಂತ ಮುಖ್ಯವಾಗಿ ನೀತಿಗ್ರಂಥಗಳನ್ನೋದಬೇಕು. ಭಗವಂತನ ಮಹಿಮೆಯನ್ನು ತಿಳಿಸತಕ್ಕ ಗ್ರಂಥಗಳನ್ನೂ, ಪಾತಿವ್ರತ್ಯಧರ್ಮ, ಗೃಹಕೃತ್ಯಗಳ ಕ್ರಮ ಮುಂತಾದುವುಗಳನ್ನು ಬೋಧಿಸತಕ್ಕ ಗ್ರಂಥಗಳನ್ನೂ ಆವಶ್ಯಕವಾಗಿ ಓದಬೇಕು. ಇದಲ್ಲದೆ ಸ್ತ್ರೀಯರೇ ಪ್ರತ್ಯಕ್ಷವಾಗಿ ಕಲಿತುಕೊಳ್ಳಬೇಕಾದ ವಿಷಯಗಳು ಕೆಲವಿರುವುವು. ಅವುಗಳಲ್ಲಿ ಹೊಲಿಗೆಯ ಕೆಲಸ, ಅಡಿಗೆ ಮಾಡುವ ವಿಧಾನ, ಶಿಶುಪೋಷಣಕ್ರಮ ಮುಂತಾದುವುಗಳನ್ನು ಅತ್ಯವಶ್ಯವಾಗಿ ಅಭ್ಯಾಸಮಾಡಬೇಕು. ಭಗವಂತನು ಸಾಧಾರಣವಾಗಿ ಪುರುಷಕಂಠಕ್ಕಿಂತ ಸ್ತ್ರೀಯರ ಕಂಠದಲ್ಲಿ ಹೆಚ್ಚಾದ ಮಾಧುರ್ಯವನ್ನಿಟ್ಟಿರುವನಾದುದರಿಂದ, ಸಂಗೀತಶಾಸ್ತ್ರವನ್ನು ಅಭ್ಯಾಸ ಮಾಡಿ, ಪತಿಯು ಕಷ್ಟ ಪಟ್ಟು ಮನೆಗೆ ಬಂದಾಗ ಇಂಪಾದ ಹಾಡುಗಳನ್ನು ಹಾಡಿ, ಆತನ ಮನಸ್ಸಿಗೆ ಆಯಾಸವು ತೋರದಂತೆ ಮಾಡುವ ಭಾರವು ಸ್ತ್ರೀಯರನ್ನೇ ಸೇರಿರುವುದು. ಪುರುಷರು ಹೊರಗೆ ಹೊರಟು ಕಷ್ಟಪಟ್ಟು ಕೆಲಸಮಾಡತಕ್ಕವರು; ಸ್ತ್ರೀಯರಾದರೋ ಸಾಧಾರಣವಾಗಿ ಮನೆಯಲ್ಲಿಯೇ ಇದ್ದುಕೊಂಡು ಮಕ್ಕಳು ಮೊದಲಾದವರ ಯೋಗಕ್ಷೇಮವನ್ನು ವಿಚಾರಿಸತಕ್ಕವರು; ಆದುದರಿಂದ ಮಕ್ಕಳಿಗೆ ಬರುವ ಸಾಧಾರಣ ವ್ಯಾಧಿಗಳಿಗೆ ಮಾಡಬೇಕಾದ ಚಿಕಿತ್ಸೆಗಳನ್ನೂ, ದೇಹಾರೋಗ್ಯವು ಕೆಡದಂತೆ ಕಾಪಾಡುವುದಕ್ಕೋಸುಗ ಮಾಡಬೇಕಾದ ಕಾರ್ಯಗಳನ್ನೂ, ಮನೆಯಲ್ಲಿ ಆರಾದರೂ ಗರ್ಭಿಣಿಯರಾದರೆ ಅವರು ಪ್ರಸವಿಸುವಾಗ ಮಾಡಬೇಕಾದ ಕಾರ್ಯಗಳನ್ನೂ ಚೆನ್ನಾಗಿ ಕಲಿತಿರಬೇಕು. ಅಷ್ಟು ಮಟ್ಟಿಗಾದರೂ ವೈದ್ಯವನ್ನು ಕಲಿಯದ ಪಕ್ಷದಲ್ಲಿ, ಪುರುಷರು ಮನೆಯಲ್ಲಿಲ್ಲದಿರುವಾಗ ಮನೆಯವರಿಗಾರಿಗಾದರೂ ಆಕಸ್ಮಿಕವಾಗಿ ರೋಗವೋ ಬಾಧೆಯೋ ಉಂಟಾದರೆ ಅದಕ್ಕೆ ಪ್ರತಿಕ್ರಿಯೆಯನ್ನು ಮಾಡುವುದಕ್ಕೆ ಸ್ತ್ರೀಯರು ಅಸಮರ್ಥೆಯರಾದಾರು!
ಚ೦ದ್ರ- ಈಗ ಹೇಳಿದುದು ಸ್ವಲ್ಪ ಮಟ್ಟಿಗೆ ತಿಳಿಯಿತು. ನೀವು ಹೇಳಿದುದರಲ್ಲಿ ಕೆಲವು ನಮ್ಮ ನಡೆಗಳನ್ನು ಕ್ರಮಪಡಿಸಿಕೊಳ್ಳುವುದಕ್ಕೂ, ಸಂಸಾರಸ೦ಬ೦ಧಗಳಾದ ಕೆಲವು ವಿಷಯಗಳನ್ನು ನಿರ್ವಹಿಸುವುದಕ್ಕೂ ಯುಕ್ತಗಳಾಗಿರುವುವು. ಇನ್ನು ಆತ್ಮಶುದ್ದಿಯೆಂದರೇನೋ ಅದನ್ನೂ ದಯೆಯಿಟ್ಟು ತಿಳಿಸಿರಿ.
ಗುರು-ಆತ್ಮಕ್ಕೆ ದುಃಖವನ್ನುಂಟುಮಾಡತಕ್ಕ ದುರ್ಗುಣಗಳಾವುವೂ ಇಲ್ಲದಿರುವ ಕಾಲದಲ್ಲಿ ಅದು ಪರಿಶುದ್ದವಾದ ದಶೆಯಲ್ಲಿರುವುದು. ಶರೀರಕ್ಕೆ ರೋಗಕಾರಣಗಳಾದ ಅಪಥ್ಯಪದಾರ್ಥಗಳು ಹೇಗೋ ಆತ್ಮಕ್ಕೆ ಈ ದುರ್ಗುಣಗಳೂ ಹಾಗೆಯೇ. ಆರೋಗ್ಯಕರಗಳಾದ ಪಥ್ಯಪದಾರ್ಥಗಳಂತೆಯೇ ಸುಗುಣಗಳು ಆತ್ಮಕ್ಕೆ ಆವಶ್ಯಕವಾದುವುಗಳು. ಯಾವಾಗಲೂ ಸುಗುಣಗಳು ಸಂತೋಷವನ್ನೂ ದುರ್ಗುಣಗಳು ದುಃಖವನ್ನೂ ಉಂಟು ಮಾಡುವುವು. ಸತ್ಯ, ಶಾಂತತ್ವ, ಧೈರ್ಯ, ವಿನಯ, ದಯೆ, ತೃಪ್ತಿ ಮೊದಲಾದುವು ಆತ್ಮಾನಂದವನ್ನುಂಟುಮಾಡತಕ್ಕ ಸುಗುಣಗಳು. ಇವುಗಳಿಗೆ ವ್ಯತಿರಿಕ್ತಗಳಾಗಿರುವ, ಅನೃತ, ಕೋಪ, ಅಹಂಕಾರ, ಕ್ರೂರತ್ವ, ಆಶೆ ಮೊದಲಾದುವುಗಳು ಆತ್ಮಕ್ಕೆ ಆಯಾಸವನ್ನುಂಟುಮಾಡತಕ್ಕ ದುರ್ಗುಣಗಳು.
ಚ೦ದ್ರ-ಈಗ ನೀವು ತಿಳಿಸಿದ ಸುಗುಣದುರ್ಗುಣಗಳ ವಿಷಯದಲ್ಲಿ ಮತ್ತೇನಾದರೂ ಹೇಳತಕ್ಕುದಿರುವುದೇ!
ಗುರು-ಇವೆಲ್ಲವೂ ಇತರರ ವಿಷಯವಾಗಿ ನಾವು ನಡೆದುಕೊಳ್ಳಬೇಕಾದ ಧರ್ಮಗಳಲ್ಲಿ ಸೇರುವುವು. ಈಗ ಅವುಗಳ ವಿಷಯದಲ್ಲಿ ಸ್ವಲ್ಪ ತಿಳಿಸುವೆನು. ಸಮಸ್ತ ಶುಭಗಳಿಗೂ ಸತ್ಯವೇ ಮೂಲವಾದುದು; ನಾವು ಪ್ರಾಣಾಂತಕರವಾದ ವಿಪತ್ತು ಸಂಭವಿಸಿದಾಗಲೂ ಸತ್ಯವನ್ನು ತಪ್ಪಬಾರದು; ಸರ್ವಧನವೂ ನಾಶವಾಗಿ ಹೋಗುವಂತಹ ಕಾಲದಲ್ಲಿಯಾದರೂ ನಿಶ್ಚಯವನ್ನೇ ಹೇಳಬೇಕು. ಸುಳ್ಳಾಡಿದರೆ ಪರಲೋಕಹಾನಿಯುಂಟಾಗುವುದೊಂದಲ್ಲದೆ, ನಾವು ಅಸತ್ಯವನ್ನಾಡಿದೆವೆಂದು ಇಹಲೋಕದಲ್ಲಿರುವವರೂ ನಮ್ಮಲ್ಲಿ ವಿಶ್ವಾಸವನ್ನಿಡದಿರುವರು.
ಚಂದ್ರ-ನಾವು ಯಾವ ವಿಷಯದಲ್ಲಿಯೂ ಅನೃತವನ್ನಾಡಲೇ ಬಾರದೇ? ಗುರು--ಆಡಲೇಬಾರದು. ಅಸತ್ಯಕ್ಕೆ ನಾವು ಒಂದುವಿಷಯದಲ್ಲಿ ಅವಕಾಶವನ್ನು ಕೊಟ್ಟರೆ, ಮತ್ತೊಂದು ವಿಷಯದಲ್ಲಿಯೂ ಹಾಗೆಯೇ ಅಸತ್ಯವನ್ನಾಡಬೇಕೆಂಬ ಬುದ್ದಿಯು ಹುಟ್ಟಿ ಕ್ರಮಕ್ರಮವಾಗಿ ನಾವು ಅಸತ್ಯಕ್ಕೆ ತವರ್ಮನೆಯಾಗಿ ದುರ್ಗತಿಯನ್ನು ಹೊಂದುವೆವು.
ಚ೦ದ್ರ- ಈಗ ನೀವು ಸತ್ಯದ ವಿಷಯದಲ್ಲಿ ಹೇಳಿದುದನ್ನು ಪರಿಶೀಲಿಸಿದರೆ, ನಾವು ಯಾವಾಗಲೂ ಶಾಂತತ್ವ ಮೊದಲಾದ ಗುಣಗಳನ್ನೇ ಹೊ೦ದಿರಬೇಕೆಂದೂ, ಕೋಪಾದಿಗಳಿಗೆ ಯಾವಾಗಲೂ ಅವಕಾಶವನ್ನು ಕೊಡಲಾಗದೆಂದೂ ತೋರುವುದು
ಗುರು-ಅನೃತ, ಅಹಂಕಾರ, ಕ್ರೂರತ್ವ ಮೊದಲಾದುವುಗಳನ್ನು ಕೈಲಾದಷ್ಟು ಮಟ್ಟಿಗೆ ಯಾವಾಗಲೂ ನಾವು ದೂರೀಕರಿಸಿರಬೇಕಾದರೂ ಆಗಾಗ ಒ೦ದೊ೦ದುಬಾರಿ ಯುಕ್ತರೀತಿಯಲ್ಲಿ ಕೋಪ ಮೊದಲಾದ ಕೆಲವನ್ನು ತೋರಿಸುತ್ತಿರಬೇಕು. ಒಬ್ಬ ಸೇವಕನಾಗಲಿ, ಬಾಲಕನಾಗಲಿ, ತಪ್ಪು ಮಾಡಿದಾಗ ಅವನಮೇಲೆ ನಾವು ಕೋಪವನ್ನು ತೋರಿಸದಿದ್ದರೆ ಅವನ ನಡೆಯು ಕೆಟ್ಟು ಹೋಗಿ ಅವನು ದುರ್ಮಾರ್ಗಪ್ರವರ್ತಕನಾಗುವನು ಆದುದರಿಂದ ಕ್ರೂರೋದ್ದೇಶವಾವುದೂ ಇಲ್ಲದೆ ಪರರಿಗೆ ಮೇಲ್ಮೆಯುoಟಾಗುವುದಕ್ಕೋಸುಗ ತಕ್ಕಮಟ್ಟಿಗೆ ಯುಕ್ತ ಕಾಲಗಳಲ್ಲಿ ನಾವು ಕೋಪವನ್ನು ಮಾಡಬೇಕು. ಅದರಂತೆಯೇ ನಾವು ನ್ಯಾಯವಾದ ಸಕಲ ಮನೋರಥಗಳನ್ನೂ ಅಪೇಕ್ಷಿಸಬಹುದು. ಅತ್ಯಾಶೆಯನ್ನು ಮಾತ್ರ ತ್ಯಜಿಸಬೇಕು.
ಚ೦ದ್ರ-ಉಳಿದ ಸುಗುಣಗಳನ್ನು ಕುರಿತು ತಿಳಿಸಬೇಕಾದುದೇನಾದರೂ ಇರುವ ಪಕ್ಷದಲ್ಲಿ ನನ್ನಲ್ಲಿ ಅನುಗ್ರಹವಿಟ್ಟು ಅದನ್ನೂ ತಿಳಿಸಬೇಕು.
ಗುರು-ವಿಸ್ತಾರವಾಗಿ ತಿಳಿಸಬೇಕಾದುದಾವುದೂ ಇಲ್ಲ. ಶಾಂತತೆಯೊಂದಿದ್ದರೆ ನಮ್ಮ ಇತರ ಸುಗುಣಗಳೆಲ್ಲ ಮತ್ತಷ್ಟು ಪ್ರಕಾಶವನ್ನು ಹೊಂದುವುವು. ಭೃತ್ಯರೂ, ನೆರೆಹೊರೆಯವರೂ, ಮನೆಯವರೂ ನಮ್ಮ ವಿಷಯದಲ್ಲಿ ಅಧಿಕಾನುರಾಗವುಳ್ಳವರಾಗುವರು. ಆಪತ್ಕಾಲಗಳಲ್ಲಿ ನಾವು ಮುಖ್ಯವಾಗಿ ಧೈರ್ಯವನ್ನವಲಂಬಿಸಿರಬೇಕು. ಅಂತಹ ಧೈರ್ಯವನ್ನು ಕಳೆದುಕೊಂಡರೆ, ಅದರಿಂದ ನಮಗೆ ಯಾವಲಾಭವೂ ಉಂಟಾಗದಿದ್ದರೂ, ವಿಪತ್ತುಗಳು ಇಮ್ಮಡಿಯಾಗಿ ತೋರಿ ಅಧಿಕ ದುಃಖವನ್ನುಂಟುಮಾಡುವುವು; ಧೈರ್ಯವನ್ನವಲಂಬಿಸುವುದರಿಂದ, ಸಂಭವಿಸಿದ ವಿಪತ್ತಿನಲ್ಲಿ ಅರ್ಧಪಾಲು ಕಡಿಮೆಯಾಗಿ ಹೋಗುವುದು; ವಿನಯವನ್ನು ಕೈಗೊಂಡು ನಡೆದುಕೊ೦ಡರೆ ಸಕಲರೂ ನಮ್ಮ ವಿಷಯದಲ್ಲಿ ಒಳ್ಳೆಯ ಅಭಿಪ್ರಾಯವುಳ್ಳವರಾಗುವರು. ನಾವು ತಗ್ಗಿ ನಡೆದರೆ ಇತರರು ನಮ್ಮ ದುರ್ಗುಣಗಳನ್ನೂ ಲಕ್ಷಿಸದೆ ಅವುಗಳನ್ನೆಲ್ಲ ಸುಗುಣಗಳನ್ನಾಗಿಯೇ ಭಾವಿಸುವರು; ಗರ್ವವನು, ಹೊಂದಿ ಬೆರತು ಬೀಗಿದರೆ ನಮ್ಮ ಸುಗುಣಗಳೂ ದುರ್ಗುಣಗಳಾಗಿಯೇ ತೋರುವುವು. ಸದ್ಗುಣಗಳೊಳಗೆಲ್ಲ ದಯೆಯೇ ಅತ್ಯುತ್ಕೃಷ್ಟವಾದುದು; ಅದನ್ನು ಮಾರಿದ ಧರ್ಮವು ಮತ್ತೊಂದಿಲ್ಲ. ನಾವು ತೃಪ್ತರಾಗದೆಯಿದ್ದರೆ ನಮ್ಮ ಮನಸ್ಸಿಗೆ ಯಾವಾಗಲೂ ಸುಖವುಂಟಾಗುವುದೇ ಇಲ್ಲ. ಆದುದರಿಂದ ನಾವು ಧರ್ಮ ಕಾರ್ಯಗಳನ್ನು ಮಾಡುವುದರಲ್ಲಿಯೂ ವಿದ್ಯೆಯನ್ನು ಸಂಪಾದಿಸುವದರಲ್ಲಿಯೂ ಮಾತ್ರ ಅಲ್ಪತೃಪ್ತರಾಗದೆ ಉಳಿದ ಸಮಸ್ತ ವಿಷಯಗಳಲ್ಲಿಯೂ ಭಗವಂತನು ನಮಗೆ ಎಷ್ಟು ಕೊಟ್ಟಿರುವನೋ ಅಷ್ಟರಿಂದಲೇ ತೃಪ್ತರಾಗಿರಬೇಕು.
ಏಳನೆಯ ಪ್ರಕರಣ.
ಮತ್ತೆರಡು ದಿನಗಳು ಕಳೆದಬಳಿಕ ಒಂದುದಿನ ಸಾಯಂಕಾಲ ಚಂದ್ರಮತಿಯು ತನ್ನ ಒಡನಾಡಿಯರೊಡನೆ ಓದಿಕೊಳ್ಳುವುದಕ್ಕೋಸುಗ ಬ೦ದಳು. ಆಗ ವಿದ್ಯಾ ಸಮುದ್ರನು ಯಾರೊಡನೆಯೋ ಅಂತರಂಗದಲ್ಲಿ ಮಾತನಾಡುತ್ತಿರಲು, ಆತನು ಹೊರಕ್ಕೆ ಬರುವವರೆಗೂ ಬಾಗಿಲ ಬಳಿಯಲ್ಲಿದ್ದ ಕಾಲು ಮಣೆಯ ಮೇಲೆ ಕುಳಿತುಕೊಂಡು ತಂಗಾಳಿಯನ್ನು ಸೇವಿಸುತ್ತ ಬೇಸಗೆಯ ಸೆಗೆಯನ್ನು ಪರಿಹರಿಸಿಕೊಂಡು, ಕೈಯಲ್ಲಿದ್ದ ಪುಸ್ತಕವನ್ನು ತೆರೆದು ಹಿ೦ದಣ ಪಾಠಗಳನ್ನು ಓದಿಕೊಳ್ಳುತ್ತಿದ್ದಳು. ಆಗ ಕೆಲವು ವೈಷ್ಣವರು ಶಂಖಚಕ್ರಗದಾಂಕಿತವಾದ ಮೈಯುಳ್ಳವರಾಗಿ ಅಲ್ಲಿಗೆ ಬಂದು ವಿಷ್ಣುಗೀತಗಳನ್ನು ಹಾಡುತ್ತ ತಮಗೇನಾದರೂ ದಾನಮಾಡಬೇಕೆಂದು ಚಂದ್ರಮತಿಯನ್ನು ಬಹು ದೈನ್ಯದಿಂದ ಬೇಡಿಕೊಂಡರು. ಇಷ್ಟರಲ್ಲಿ ವಿದ್ಯಾಸಮುದ್ರನು ಒಳಗಣಿಂದ ಬಂದು, ಚಂದ್ರಮತಿಯು ಏನುಮಾಡುವಳೋ ನೋಡಬೇಕೆಂದು ಮರೆಯಲ್ಲಿ ನಿಂತು ನೋಡುತಲಿದ್ದನು. ಚಂದ್ರಮತಿಯು ಸ್ವಲ್ಪ ಕಾಲ ಆಲೋಚಿಸಿ, ತಾನು ಹಣ್ಣುಗಳನ್ನು ಕೊಂಡುಕೊಳ್ಳಬೇಕೆಂದು ತಂದಿದ್ದ ದುಡ್ಡನ್ನು ಸೆರಗಿನಿಂದ ಬಿಚ್ಚಿ ತೆಗೆದು, ಅವರಲ್ಲಿ ತರುಣರಾಗಿದ್ದವರಿಗಾರಿಗೂ ಕೊಡದೆ ಒಬ್ಬ ಮುದುಕನಿಗೆ ಕೊಟ್ಟು ಕಳುಹಿಸಿಬಿಟ್ಟಳು. ಅನಂತರ ವಿದ್ಯಾಸಮುದ್ರನು ಹೊರಕ್ಕೆ ಬಂದು, ಚಂದ್ರಮತಿಯನ್ನು ನೋಡಿ “ಎಲೌ! ಇಲ್ಲಿ ನಿಂತಿದ್ದ ಆ ಜನರೊಡನೆ ಏನು ಮಾತಾಡುತ್ತಿದ್ದೆ?” ಎಂದು ಕೇಳಿದನು.
ಚಂದ್ರ ಅವರು ಇಲ್ಲಿಗೆಬಂದು ತಮಗೇನಾದರೂ ಕೊಡಬೇಕೆಂದು ನನ್ನನ್ನು ಬಹುವಾಗಿ ಪೀಡಿಸಿದರು. ಎಲ್ಲರೂ ಕಷ್ಟಪಟ್ಟು ಕೆಲಸಮಾಡಬೇಕೆಂದು, ಜೀವನೋಪಾಯಕ್ಕೋಸುಗ ಕಷ್ಟಪಡಲು ಸಮರ್ಥರಾಗಿರಲೆಂದೇ ಭಗವಂತನು ಎಲ್ಲರಿಗೂ ಕೈ ಕಾಲು ಮೊದಲಾದ ಅವಯವಗಳನ್ನು ದಯೆಪಾಲಿಸಿರುವನೆಂದೂ ಮೊನ್ನೆಯದಿನ ತಾವು ಅಪ್ಪಣೆಕೊಡಿಸಿರಲಿಲ್ಲವೆ? ಆದುದರಿಂದ ಒಬ್ಬರಿಗೊಬ್ಬರು ಕೊಡಬೇಕಾದ ಆವಶ್ಯಕವಿಲ್ಲವೆಂದು ನನಗೆ ತೋರಿತು. ಆದರೂ ಅವರ ಸಮೂಹದಲ್ಲಿದ್ದ ಒಬ್ಬ ವೃದ್ದನನ್ನು ನೋಡಿದಾಗ ಅವನನ್ನು ಸುಮ್ಮನೆ ಕಳುಹಿಸಿ ಬಿಡುವುದಕ್ಕೆ ಮನಸ್ಸು ಬಾರದೆ ತಿಂಡಿ ಗೋಸುಗ ತಂದಿದ್ದ ದುಡ್ಡನ್ನು ಅವನಿಗೆ ಕೊಟ್ಟುಬಿಟ್ಟೆನು.
ಗುರು--ನೀನು ತಿಳಿಯದೇ ಮಾಡಿರುವದಾದರೂ ಆ ಮುದುಕನಿಗೆ ಕೊಟ್ಟುದು ಬಲು ಒಳ್ಳೆಯದಾಯಿತು. ಅನ್ಯರನೇ ನಂಬಿಕೊಂಡಿರದೆ ತನ್ನ ಜೀವನಕ್ಕೋಸುಗ ತಾನೇ ಪಾಡುಪಡಬೇಕಾದುದು ಪ್ರತಿಮನುಷ್ಯನಿಗೂ ಆವಶ್ಯಕವೇ ಆಗಿದ್ದರೂ, ಮಹಾರಾಜನು ಮೊದಲ್ಗೊಂಡು ಗರ್ಭದರಿದ್ರನವರೆಗೂ ಅನ್ಯೋನ್ಯಸಾಹಾಯ್ಯವು ಆವಶ್ಯಕವಾಗಿ ಬೇಕಾಗಿರುವುದು. ನೀವು ಪ್ರತಿದಿನವೂ ಭುಂಜಿಸುವ ಪಂಚಭಕ್ಷ್ಯಪರಮಾನ್ನಗಳಿಗೆ ಬೇಕಾಗುವ ಪದಾರ್ಥಗಳು ಹೇಗೋ, ಬಡವರು ಕುಡಿಯುವ ಗಂಜಿಗೆ ಬೇಕಾಗುವ ಅಕ್ಕಿಯೂ ಹಾಗಯೇ ಹಲವರು ಶ್ರಮಪಟ್ಟಲ್ಲದೆ ಲಭಿಸದು ಒಬ್ಬ ಭಗವಂತನಿಂದಲೇ ಸಕಲರೂ ಸೃಜಿಸಲ್ಪಟ್ಟು ರಕ್ಷಿತರಾಗಿರುವುದರಿಂದ ಜನರೆಲ್ಲರೂ ಏಕಕುಟುಂಬದವರಂತೆ ಇರಬೇಕಾದುದು ಪರಮಾವ ಶ್ಯಕವು. ಒಂದು ಕುಟುಂಬದಲ್ಲಿ ಸಂಪಾದಿಸಲಾರದವನಾದ ಒಬ್ಬ ಅಶಕ್ತನಿದ್ದ ಪಕ್ಷದಲ್ಲಿ ಅವನನ್ನು ಪೋಷಿಸಬೇಕಾದುದು ಸಮರ್ಥನಾದವನಿಗೆ ಹೇಗೆ ಆವಶ್ಯಕವೋ, ಹಾಗೆಯೇ ಭಗವತ್ಕುಟುಂಬವಾದ ಈ ಪ್ರಪಂಚದಲ್ಲಿ ಶಕ್ತಿವಂತರು ಅಶಕ್ತರನ್ನು ಕಾಪಾಡುವುದು ಮುಖ್ಯ ಕರ್ತವ್ಯವಾಗಿರುವುದು. ಆದುದರಿಂದ ಅಂಗವೈಕಲ್ಯದಿಂದಾಗಲೀ, ವೃದ್ಧಾಪ್ಯದಿಂದಾಗಲೀ, ರೋಗದಿಂದಾಗಲೀ, ಶ್ರಮಪಟ್ಟು ಗಳಿಸಲಾರದಂತಹ ಬಡವರಿಗೆಲ್ಲ ನಮ್ಮ ಕೈಲಾದ ಸಾಹಾಯವನ್ನು ಮಾಡಬೇಕು. ಶಕ್ತಿಯಿದ್ದರೂ ಶ್ರಮಪಡುವುದಕ್ಕೆ ಮನಸಿಲ್ಲದೆ ಮೈಗಳ್ಳರಾಗಿ ಯಾಚನೆಯನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡು ತಿರುಗುವ ದೃಢಗಾತ್ರರಿಗೆ ಮಾತ್ರ ನಾವೇನನ್ನೂ ಕೊಡಲಾಗದು. ದೇಶಕ್ಕೆ ಕ್ಷಾಮಪ್ರಾಪ್ತಿಯಾದಕಾಲದಲ್ಲಾಗಲೀ, ಪರದೇಶದಿಂದ ಮಾರ್ಗಾಯಾಸವನ್ನು ಹೊಂದಿಬಂದಿರುವಾಗಲಾಗಲೀ, ದೈವವಶದಿಂದ ಯಾವುದಾದರೂ ವಿಪತ್ತು ಸಂಭವಿಸಿದಾಗಲಾಗಲೀ, ದೃಢಕಾಯರಾಗಿರುವಂತಹರಿಗೂ ಕೊಡಬೇಕು. ಪಾತ್ರವನ್ನರಿತು ಈಪ್ರಕಾರವಾಗಿ ಮಾಡುವ ದಾನದಿಂದಲೇ ಫಲವಾಗುವುದು. ಸಾಧ್ಯವಾದಷ್ಟು ಮಟ್ಟಿಗೆ ಎರಡನೆಯವರಿಗೆ ತಿಳಿಯದಂತೆ ರಹಸ್ಯವಾಗಿ ದಾನಮಾಡಬೇಕು. ಪುಷ್ಪವು ಮರೆಯಲ್ಲಿದ್ದರೂ ಅದರ ಪರಿಮಳವು ಎಲ್ಲರಿಗೂ ತಿಳಿಯುವಂತೆ, ಯೋಗ್ಯನಾದವನು ಎಲ್ಲಿದ್ದರೂ ಅವನ ಸುಗುಣಗಳು ಬಹಿರಂಗಕ್ಕೆ ಬಾರದಿರವು. ಪ್ರಸಿದ್ದಿಯನ್ನು ಪಡೆಯುವುದಕ್ಕೋಸುಗ, ಮುಖಸ್ತುತಿಯನ್ನು ಮಾಡುವವರಿಗೂ ಮೋಸಗಾರರಿಗೂ ಮಾಡತಕ್ಕ ದಾನಗಳು ನಿರರ್ಥಕಗಳು.
ಚಂದ್ರ-ನಾವು ಇತರಜನರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಧರ್ಮಗಳನ್ನು ಕುರಿತು ತಿಳಿಸುವೆನೆಂದು ಕೆಲವು ದಿನಗಳ ಹಿಂದೆ ವಾಗ್ದಾನ ಮಾಡಿದ್ದರಲ್ಲವೆ? ಈಗ ದಯೆಯಿಟ್ಟು ಅವುಗಳನ್ನೆಲ್ಲಾ ಸಮಗ್ರವಾಗಿ ತಿಳಿಸಬೇಕು.
ಗುರು-ಹಿಂದೆ ನಾನು ತಿಳಿಸಿದ ಸತ್ಯ ಮೊದಲಾದುವೂ, ಈಗ ತಿಳಿಸಿದ ದಾನವಿಷಯವೂ, ಜನರ ವಿಷಯಿಕಗಳಾದ ಧರ್ಮಗಳಲ್ಲಿಯೇ ಸೇರುವುವು. ಅಂತಹ ಧರ್ಮಗಳನ್ನೆಲ್ಲ ಸಂಪೂರ್ಣವಾಗಿ ಹೇಳಬೇಕಾದರೆ ಬಹುದಿನಗಳು ಬೇಕಾಗುವುವು. ಸಾಮಾನ್ಯವಾಗಿ ಜನರ ವಿಷಯದಲ್ಲಿ ನಡೆದು ಕೊಳ್ಳಬೇಕಾದ ಧರ್ಮಗಳೊಳಗೆ ಕೆಲವನ್ನು ಮಾತ್ರ ಈಗ ಸಂಗ್ರಹಿಸಿ ಹೇಳಿ, ಬಂಧುಗಳ ವಿಷಯದಲ್ಲಿ ಆಚರಿಸಬೇಕಾದ ಧರ್ಮಗಳನ್ನು ಮತ್ತೊಂದು ಬಾರಿ ತಿಳಿಸುವೆನು. ಮಳೆಗೂ ಬಿಸಲಿಗೂ ತಾನು ಗುರಿಯಾಗಿದ್ದರೂ ಇತರರಿಗೆ ನೆಳಲನ್ನೂ ಹಣ್ಣುಗಳನ್ನೂ ಕೊಡುವ ವೃಕ್ಷಗಳ೦ತೆಯೇ ಸಕಲರೂ ತಾವು ಕಷ್ಟ ಪಡುತ್ತಿದ್ದರೂ ಸೈರಿಸಿಕೊಂಡು ಪರೋಪಕಾರವನ್ನು ಮಾಡುವುದಕ್ಕೆ ಪ್ರಯತ್ನಿಸಬೇಕು.
ಚಂದ್ರ-ಯೋಗ್ಯಾಯೋಗ್ಯ ವಿಚಾರವನ್ನು ಮಾಡದೆ ಸಕಲರಿಗೂ ಉಪಕಾರವನ್ನು ಮಾಡುತ್ತಿರಬೇಕೇ?
ಗುರು-ಸಜ್ಜನರಿಗೆ ಮಾಡುವ ನ್ಯಾಯವಾದ ಸಾಹಾಯ್ಯವೇ ಉಪಕಾರವೆನಿಸಿಕೊಳ್ಳುವುದಲ್ಲದೆ ಶಿಷ್ಟ ದುಷ್ಟರೆಂಬ ವಿಚಕ್ಷಣೆಯಿಲ್ಲದೆ ಮಾಡುವ ಸಾಹಾಯ್ಯವು ಉಪಕಾರವೆನಿಸಿಕೊಳ್ಳುವುದಿಲ್ಲ. ಆದುದರಿಂದಲೇ ಕಳ್ಳರು ಮೊದಲಾದವರಿಗೆ ನಾವು ಸಾಹಾಯ್ಯವನ್ನು ಮಾಡಿದರೆ, ಉಪಕಾರ ಮಾಡಿದವರಾಗದಿರುವುದೊಂದಲ್ಲದೆ ಶಿಕ್ಷಾರ್ಹರೂ ಆಗುವೆವು.
ಚಂದ್ರ-ಉಳಿದ ಧರ್ಮಗಳನ್ನು ತಿಳಿಸುವಿರಾ?
ಗುರು-ನಾವೆಷ್ಟು ಬಡತನದಲ್ಲಿದ್ದರೂ ಕಂಡವರ ಪದಾರ್ಥವನ್ನು ಮುಟ್ಟಬಾರದು. ಕಳ್ಳತನ ಮಾಡಿದವರನ್ನು ಇಹಲೋಕದಲ್ಲಿ ರಾಜನು ಶಿಕ್ಷಿಸುವನು; ನಾವು ಕದ್ದಾಗ ಯಾರೂ ನೋಡಲಿಲ್ಲವೆಂದು ತಿಳಿದುಕೊಂಡರೂ ಕಳ್ಳತನವು ಮಾತ್ರ ಯಾವಾಗಲೋ ಬಯಲಾಗದಿರದು. ಒಂದು ವೇಳೆ ರಹಸ್ಯವಾಗಿದ್ದರೂ ಸರ್ವಜ್ಞನಾದ ಭಗವಂತನನ್ನು ಮೋಸಗೊಳಿಸುವುದಕ್ಕಾಗುವುದಿಲ್ಲ. ಆದುದರಿಂದ ಪರಲೋಕದಲ್ಲಿಯಾದರೂ ಶಿಕ್ಷೆಯಾಗ ದಿರದು. ಅದುಕಾರಣ ಎಷ್ಟು ಕಷ್ಟಗಳು ಸಂಭವಿಸಿದರೂ, ಪ್ರಾಣಾಪಾಯವೇ ಉ೦ಟಾದರೂ ಕಳ್ಳತನವನ್ನು ಮಾತ್ರ ಮಾಡಬಾರದು. ನಮಗೆ ಯಾರಾದರೂ ಹೆಚ್ಚಾದ ಉಪಕಾರವನ್ನು ಮಾಡಿದ್ದರೆ ಅದನ್ನು ನಾವು ಮರೆಯದೆ ಸಾಧ್ಯವಾಗುವ ಪಕ್ಷದಲ್ಲಿ ಪ್ರತ್ಯುಪಕಾರವನ್ನು ಮಾಡಬೇಕು ; ಕೃತಘ್ನನಾದವನನ್ನು ಸಕಲರೂ ದ್ವೇಷಿಸಿ ಅವನಿಗೆ ಕೇಡನ್ನೇ ಬಗೆಯುವರು. ಪರರ ಸಂಪತ್ತನ್ನು ಕಂಡು ನಾವು ಯಾವಾಗಲೂ ಕರುಬಬಾರದು ; ಈ ಅಸೂಯಾಗುಣವು ತಾನು ಸೇರಿದ ಸ್ಥಳವನ್ನೆಲ್ಲ ನಿರಂತರವೂ ಬೆಂಕಿಯಂತೆ ನಾಶಗೊಳಿಸುವುದು. ನೆರೆಯವರ ಸಂತೋಷವನ್ನು ಕಂಡು ಸೈರಿಸದವರು ರೋಗವಿಲ್ಲದೆಯೇ ಬಾಧೆಪಡುವರು. ನಾವು ಆರನೇಯಾದರೂ ಆವನಿಷಯದಲ್ಲಿಯೂ ಮೋಸಗೊಳಿಸಬಾರದು. ಸಕಲ ವಿಷಯಗಳಲ್ಲಿಯೂ ನ್ಯಾಯವಾಗಿ ಪ್ರವರ್ತಿಸಬೇಕು. ನಾವು ಆರಿಗಾದರೂ ಆವುದಾದರೊಂದು ನ್ಯಾಯ್ಯಯುಕ್ತವಾದ ವಿಚಾರದಲ್ಲಿ ವಾಗ್ದಾನಮಾಡಿದ ಪಕ್ಷದಲ್ಲಿ, ಎಷ್ಟು ಶ್ರಮಪಟ್ಟಾದರೂ ನಾವಾಡಿದಂತೆ ನಡೆದುಕೊಳ್ಳಬೇಕು. ಎಲ್ಲಕ್ಕೂ ವಾಗ್ದಾನಮಾಡದೆ ನಮ್ಮ ಸಾಮರ್ಥ್ಯವನ್ನು ನೋಡಿಕೊಂಡು ಜಾಗರೂಕತೆಯಿಂದ ಮಾತನಾಡಬೇಕು. ವೈರವೂ ಮೈತ್ರಿಯ ಮಾತುಗಳಿಂದಲೇ ಹುಟ್ಟುವುವಾದುದರಿಂದ, ಯಾವಾಗಲೂ ಬಿರುನುಡಿಗಳನ್ನಾಡದೆ, ಮೃದುವಾದ ಮಾತುಗಳನ್ನಾಡುತ್ತಿರಬೇಕು. ತಿಳಿವಿಲ್ಲದವರು ದುಡುಕಿ ನಮ್ಮನ್ನೇನಾದರೂ ನಿಂದಿಸಿದರೂ ಸೈರಿಸಿಕೊಂಡು ಸುಮ್ಮನಿರಬೇಕು. ಯಾವಾಗಲೂ ಯಾರನ್ನೂ ಅವರಿಲ್ಲದ ಕಾಲದಲ್ಲಿ ದೂಷಿಸಲಾಗದು; ಇವರಾಡಿದ ಮಾತನ್ನು ಅವರಬಳಿಯಲ್ಲಿಯೂ ಅವರಾಡಿದಮಾತನ್ನು ಇವರಬಳಿಯಲ್ಲಿಯೂ ಹೇಳದೆ ಆಯಾ ಮಾತುಗಳನ್ನು ಅಲ್ಲಲ್ಲಿಯೇ ಮರೆತಂತಿರಬೇಕು; ಸಕಲರನ್ನೂ ಗೌರವಿಸಬೇಕು; ನಮಗಿಂತ ಹೆಚ್ಚಾದವರ ವಿಷಯದಲ್ಲಿ ಭಕ್ತಿಯುಳ್ಳವರಾಗಿ, ಅವರು ಹೇಳುವ ನ್ಯಾಯ್ಯವಾದ ವಿಷಯಗಳಿಗೆ ಅಧೀನರಾಗಿ ನಡೆದುಕೊಳ್ಳಬೇಕು; ನಮ್ಮ ಸೇವಕರು ಮೊದಲಾದವರ ಮೇಲೆ ನಿಷ್ಕಾರಣವಾಗಿ ಕೋಪಿಸದೆ ಒಳ್ಳೆಯ ಮಾತುಗಳನ್ನಾಡಿಯೇ ಅವರಿಂದ ಕೆಲಸಗಳನ್ನು ಮಾಡಿಸಬೇಕು. ಆವ ವಿಷಯದಲ್ಲಿಯೇ ಆದರೂ ದುಡುಕಲಾಗದು; ಎಲ್ಲ ಕೆಲಸಗಳನ್ನೂ ಚೆನ್ನಾಗಿ ಆಲೋಚಿಸಿ ಯುಕ್ತವೆಂದು ತೋರಿದಬಳಿಕ ಮಾಡಬೇಕು. ಎಲ್ಲರ ವಿಷಯದಲ್ಲಿಯೂ ಸಮಬುದ್ದಿಯುಳ್ಳವರಾಗಿ, ಇತರರು ಆವುದಾದರೊಂದು ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ಕೇಳಿದರೆ, ಅವರೊಡನೆ ನಿಷ್ಪಕ್ಷಪಾತವಾಗಿ ನಮಗೆ ತೋರಿದ ವಿಷಯವನ್ನು ಕಪಟವಿಲ್ಲದೆ ಹೇಳಬೇಕು. ನಿಷ್ಕಾರಣವಾಗಿ ಇತರರಿಗೆ ನೋವನ್ನುಂಟುಮಾಡದಂತೆ ಜಾಗರೂಕರಾಗಿರಬೇಕು. ದೈವಾಜ್ಞೆಯಿಂದ ಇತರರಿಗಾರಿಗಾದರೂ ಸಂಘಟಿಸಿರಬಹುದಾದ ಅಂಗವಿಕಾರಗಳನ್ನು ನೋಡಿ ಯಾವಾಗಲೂ ಪರಿಹಾಸಮಾಡಲಾಗದು. ಆರಾದರೂ ನಮಗೆ ಕೇಡನ್ನೇ ಮಾಡಿದರೂ ಮಾತಿನಿಂದಾಗಲೀ ಮುಖಭಾವದಿಂದಾಗಲಿ ಆವ ವಿಕಾರವನ್ನೂ ತೋರಿಸಲಾಗದು. ಅಹಂಕಾರವೇ ಮೊದಲಾದ ಇತರ ದುರ್ಗುಣಗಳನ್ನು ಬಿಟ್ಟು ಸರ್ವರಿಗೂ ನಮ್ಮ ಮೇಲೆ ಪ್ರೀತಿಯುಂಟಾಗುವಂತೆ ನಡೆದುಕೊಳ್ಳಬೇಕು. ನಾವು ಸುಗುಣವುಳ್ಳವರೇ ಆಗಿದ್ದರೂ, ನಾವು ಮಾಡುವ ಸಹವಾಸಗಳನ್ನು ನೋಡಿಯೇ ಜನರು ನಮ್ಮ ಗುಣಗಳಿಂತಹುದೆಂದು ನಿರ್ಣಯಿಸುವರು; ದುಸ್ಸಹವಾಸಗಳಿಂದ ಸಜ್ಜನರು ಕೆಟ್ಟುಹೋಗಿರು ವುದನ್ನೂ, ಒಳ್ಳೆಯವರ ಬೋಧನೆಯಿಂದ ದುಷ್ಟರು ಸುಜನರಾಗಿರುವುದನ್ನೂ ಎಷ್ಟೊಸ್ಥಳಗಳಲ್ಲಿ ನಾವೇ ನೋಡಿರುವೆವು. ಆದುದರಿಂದ ಆವಾಗಲೂ ದುಸ್ಸಹವಾಸವನ್ನು ಬಿಟ್ಟು ಸತ್ಸಾಂಗತ್ಯವನ್ನು ಹೊಂದಿ ಬಾಳುವುದೇ ಯುಕ್ತವಲ್ಲವೆ?
ಚಂದ್ರ-ಸಮಸ್ತ ಕಾರ್ಯಗಳಲ್ಲಿಯೂ ನಾವು ಹೀಗೆಯೇ ಪ್ರವರ್ತಿಸಬೇಕೆಂದು ತಿಳಿಸುವಂತಹ ವಿಧಿಯು ಆವುದಾದರಿರುವುದೇ?
ಗುರು-ನಿರಂತರವೂ ಸತ್ಯವನ್ನು ಹೇಳಬೇಕೆಂದು ನಾನು ತಿಳಿಸುವುದಕ್ಕೆ ಮೊದಲೇ ನಿನಗಾವಿಷಯವು ತಿಳಿದಿದ್ದಿತಲ್ಲವೆ? ನಾನು ಅಸತ್ಯವನ್ನು ಹೇಳೆಂದು ನಿನಗೆ ಬೋಧಿಸಿದರೂ ನೀನು ನನ್ನ ಮಾತುಗಳನ್ನು ನಂಬಲಾರೆ. ಯುಕ್ತಾಯುಕ್ತತೆಗಳನ್ನು ಬೋಧಿಸುವ ಅಂತರಾತ್ಮನು ಹೃದಯದೋಳಗಿರುವುದು. ಅದು ನಮಗೆ ಧರ್ಮಾಧರ್ಮಗಳನ್ನು ಬೋಧಿಸುವುದು ಮಾತ್ರವೇ ಅಲ್ಲದೆ, ಪಾಪಕಾರ್ಯಗಳನ್ನು ಮಾಡಿದಾಗ ಸಂತಾಪ ಯವನ್ನೂ, ಪುಣ್ಯಕಾರ್ಯಗಳನ್ನು ಮಾಡಿದಾಗ ಸಂತೋಷವನ್ನೂ ಉಂಟು ಮಾಡುವುದು. ಸ್ವವಿಷಯದಲ್ಲಿ ಆವಾವುದನ್ನು ನಮಗಿತರರು ಮಾಡ ಬೇಕೆಂದು ಬಯಸುವೆವೋ ಆಯಾ ಫಲಗಳನ್ನು ನಾವೂ ಇತರರಿಗೆ ಮಾಡಬೇಕು; ಆವಾವುದನ್ನು ನಮಗೆ ಇತರರು ಮಾಡಬಾರದೆಂದು ಅಪೇಕ್ಷಿಸುವೆವೋ ಆಯಾಕಾರ್ಯಗಳನ್ನು ನಾವೂ ಇತರರಿಗೆ ಮಾಡಲಾಗದು. ಇದೊಂದೇ ಸರ್ವನೀತಿಗಳ ಸಾರವು. ಸಾಧಾರಣವಾಗಿ ಸಂತೋಷಸಮಯಗಳಲ್ಲಿ ಎಲ್ಲರೂ ಸನ್ಮಾರ್ಗಿಗಳಾಗಿಯೇ ಇರಬಹುದು. ಆಪತ್ಸಮಯಗಳಲ್ಲಿಯೂ ಕಷ್ಟಗಳನ್ನೆಲ್ಲ ಸೈರಿಸಿಕೊಂಡು, ಧರ್ಮಚ್ಯುತರಾಗದೆ ಇರುವಂತಹ ಮಹನೀಯರು ಮಾತ್ರ ಸಾಣೆ ಹಿಡಿದಷ್ಟೂ ಬೆಳಗುವ ವಜ್ರದಂತೆ ಪ್ರಕಾಶಮಾನರಾಗಿ ಕೀರ್ತಿವಂತರಾಗುವರಲ್ಲದೆ ಉಳಿದವರು ಕೇಡಿಗೀಡಾಗುವರು.
ಒಂದುದಿನ ಚಂದ್ರಮತಿಯ ಒಡನಾಡಿಯೊಬ್ಬಳು ಗೊಂಬೆಯಾಟಕ್ಕೋಸುಗ ತಂದಿದ್ದ ಕಡಲೆಯು ನೆಲದಮೇಲೆ ಚೆಲ್ಲಿಹೋಯಿತು. ಆಗ ಸಮೀಪದಲ್ಲಿಯೇ ಒಂದು ಗಿಡದಮೇಲೆ ಕುಳಿತುಕೊಂಡು ನೋಡುತ್ತಿದ್ದ ಒಂದು ಕಾಗೆಯು ಕೆಳಗಿಳಿದುಬಂದು, ಆಹಾರಪದಾರ್ಥವು ದೊರೆತಿರುವುದೆಂದು ತನ್ನ ಜೊತೆಕಾಗೆಗಳಿಗೆ ತಿಳಿಸುವುದಕ್ಕೋಸುಗ ಕಾ, ಕಾ, ಎಂದು ಕೂಗಲಾರಂಭಿಸಿತು. ತತ್‌ಕ್ಷಣವೇ ಅದರ ಅಭಿಪ್ರಾಯವನ್ನರಿತು ದೂರದಲ್ಲಿದ್ದ ಅದರ ಬಂಧುವರ್ಗವೆಲ್ಲ ನಿಮಿಷಮಾತ್ರದಲ್ಲಿ ಅಲ್ಲಿಗೆಬಂದು ಕಾಳು ಗಳನ್ನೆಲ್ಲಾ ತೆಗೆದುಕೊಂಡು ಹೋದುವು. ಅವುಗಳಲ್ಲಿ ಒಂದು ಕಾಗೆಯು ಕೆಲಕಾಳುಗಳನ್ನು ಎತ್ತಿಕೊಂಡುಹೋಗಿ, ಆಹಾರಕಕ್ಕೋಸುಗ ಬಾಯ್ದೆರೆದುಕೊಂಡು ತಾಯಿಯ ಆಗಮನವನ್ನೇ ಇದಿರುನೋಡುತ್ತೆ ಬಾರಿ ಬಾರಿಗೂ ಕೂಗುತ್ತೆ ಗೂಡಿನಿಂದ ಹೊರಗೆ ಬರುವುದಕ್ಕೆ ಪ್ರಯತ್ನಿಸುತ್ತಿ ರುವ, ತನ್ನ ಮರಿಯ ಬಾಯಲ್ಲಿ ಇಟ್ಟು ತಾನು ಮತ್ತೆ ಹಿಂತಿರುಗಿಬಂದು ಕಾಳುಗಳನ್ನಾಯ್ದು ತೆಗೆದುಕೊಂಡಿತು. ಇಷ್ಟು ಹೊತ್ತೂ ಚಂದ್ರಮತಿಯು ಆ ಕಾಗೆಗೆ ತನ್ನ ಮರಿಯಮೇಲಿರುವ ಆದರಾತಿಶಯಕ್ಕೂ ಸ್ವಜಾತಿ ಪಕ್ಷಿ ಗಳಿಗೆಲ್ಲ ಸಾಹಾಯ್ಯವನ್ನು ಮಾಡಬೇಕೆಂದು ಕೂಗಿದ ಮೊದಲನೆಯ ಕಾಗೆಯ ಉಪಕಾರಚಿಂತೆಗೂ ಆಶ್ಚರ್ಯಪಟ್ಟುಕೊಂಡು ನೋಡುತ್ತಿದ್ದಳು ತರುವಾಯ ವಿದ್ಯಾಸಮುದ್ರನು ಇದನ್ನೆಲ್ಲ ಮರೆಯಲ್ಲಿ ನಿಂತು ನೋಡಿ, ನಂಟರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮವನ್ನು ಬೋಧಿಸುವುದಕ್ಕೆ ಇದೇ ತಕ್ಕ ಸಮಯವೆಂದೆಣಿಸಿ ಚಂದ್ರಮತಿಯ ಬಳಿಗೆಬಂದು ಇಂತೆಂದನು:
ಗುರು—ಮಗೂ! ನೀನು ಆ ಕಾಗೆಗಳನ್ನು ಇಷ್ಟು ಆಶ್ಚರ್ಯದಿಂದ ನೋಡುತ್ತಿರುವೆಯೇಕೆ?
ಚಂದ್ರ-ಆ ಕಾಗೆಯು ತನ್ನ ಮರಿಗೆ ಅಷ್ಟು ಪ್ರೇಮದಿಂದ ಗುಟುಕು ಕೊಡುವುದನ್ನೂ ಆ ಮತ್ತೊಂದು ಕಾಗೆಯು ಕಡಲೆಯ ಕಾಳನ್ನು ತಿನ್ನು ವುದಕ್ಕೋಸುಗ ತನ್ನ ಜೊತೆಕಾಗೆಗಳನ್ನು ಕೂಗಿದುದನ್ನೂ ಕಂಡು ನನಗೆ ಆಶ್ಚರ್ಯವುಂಟಾಯಿತಾದುದರಿಂದ ನೋಡುತ್ತಿರುವೆನು.
ಗುರು-ಆ ಕಾಗೆಯು ಬಂಧುಗಳ ವಿಷಯದಲ್ಲಿ ಮನುಷ್ಯರೂ ಹೀಗೆಯೇ ನಡೆದುಕೊಳ್ಳಬೇಕೆಂದು ಬುದ್ದಿಗಲಿಸುವುದು. ಬುದ್ದಿವಂತರಾದವರಿಗೆ ಭಗವತ್ಸ್ರಷ್ಟಿಯಲ್ಲಿರುವ ಪ್ರತ್ಯಲ್ಪವಸ್ತುವಿನಿಂದಲೂ ತಿಳಿದುಕೊಳ್ಳತಕ್ಕ ವಿಷಯಗಳೆಷ್ಟೊ ಕಾಣಿಸುವುವು.
ಚಂದ್ರ-ಹಿಂದೆ ನೀವು ನಂಟರವಿಷಯದಲ್ಲಿ ನಡೆದುಕೊಳ್ಳಬೇಕಾದ ಧರ್ಮಗಳನ್ನು ಕುರಿತು ತಿಳಿಸುವೆನೆಂದು ಅಪ್ಪಣೆ ಕೊಡಿಸಿದ್ದಿರಲ್ಲವೇ? ಈಗ ನನಗಾವಿಷಯವನ್ನು ಚೆನ್ನಾಗಿ ಬೋಧಿಸಬೇಕೆಂದು ಬೇಡಿಕೊಳ್ಳುವೆನು.
ಗುರು-ನಾವು ಸಾಧಾರಣವಾಗಿ ನಂಟರೆಲ್ಲರ ವಿಷಯದಲ್ಲಿಯೂ ಪ್ರೀತಿಯುಳ್ಳವರಾಗಿ ಸಾಧ್ಯವಾದಷ್ಟು ಮಟ್ಟಿಗೂ ಅವರಿಗೆ ನಮ್ಮ ಕೈಲಾದ ಸಾಹಾಯ್ಯನನ್ನು ಯುಕ್ತ ಸಮಯಗಳಲ್ಲಿ ಮಾಡುತ್ತಿರಬೇಕು. ಅಶಕ್ತರಾಗಿ ಹುಟ್ಟ, ನಮಗಿಂತಹುದು ಬೇಕೆಂಬುದನ್ನಾದರೂ ಹೇಳಲಾರದೆ, ಅಳುವುದೊಂದನ್ನುಳಿದು ಮತ್ತಾವುದನ್ನೂ ಮಾಡಲಾರದಿರುವಂತಹ ಬಾಲ್ಯದಶೆಮೊದಲ್ಗೊಂಡು, ನಮ್ಮನ್ನು ಹಲವುಬಗೆಯಾಗಿ ಪೋಷಿಸಿ, ನಮ್ಮ ಇಂಗಿತವನ್ನರಿತು ಹಸಿವಾದಕಾಲದಲ್ಲಿ ಆಹಾರವನ್ನುಣಿಸಿ ನಮ್ಮ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೂ ತಾವು ನಿದ್ರಾಹಾರಗಳಿಲ್ಲದೆ ಪರಿತಪಿಸುತ್ತೆ ಚಿಕಿತ್ಸೆಮಾಡಿಸಿ, ನಮಗೆ ವಿದ್ಯಾಬುದ್ದಿಗಳನ್ನು ಕಲಿಸಿ, ಬೆಳಸಿ, ದೊಡ್ಡವರನ್ನಾಗಿ ಮಾಡಿದ ತಾಯ್ತಂದೆಗಳ ವಿಷಯದಲ್ಲಿ ನಾವು ಬಹು ಕೃತಜ್ಞತೆಯುಳ್ಳವರಾಗಿ, ಅವರಲ್ಲಿ ಅತಿಶಯವಾದ ಪ್ರೇಮವನ್ನೂ ಭಕ್ತಿಯನ್ನೂ ಇಟ್ಟು ನ್ಯಾಯ್ಯವಾದ ಅವರ ಆಜ್ಞೆಗಳನ್ನೆಲ್ಲಾ ಶಿರಸಾವಹಿಸಿ ನಡೆಯಿಸಬೇಕು. ಅವರು ವೃದ್ಧರಾದಾಗಲೂ, ಅಶಕ್ತರಾದಾಗಲೂ ಅವರಿಗೆ ಸಮಸ್ತೋಪಚಾರಗಳನ್ನೂ ಮಾಡುತ್ತೆ ಅವರನ್ನು ಪೋಷಿಸಬೇಕು. ಒಡಹುಟ್ಟಿ, ಒಡನುಂಡು, ಒಡನಾಡಿ, ಒಡವೆಳದು, ಒಡನೆನಿದ್ರಿಸುವ ಅಣ್ಣಂದಿರು, ತಮ್ಮoದಿರು, ಅಕ್ಕ ತಂಗಿಯರು ಮೊದಲಾದವರನ್ನು ಅತಿಶಯವಾದ ಅನುರಾಗದಿಂದ ಗೌರವಿಸಿ ಕನಸಿನಲ್ಲಾದರೂ ಕಲಹವಾಡದೆ ಬಾಳಬೇಕು. ಅತ್ತೆ, ಮಾವ, ಚಿಕ್ಕಪ್ಪ, ದೊಡ್ಡಪ್ಪ ಮೊದಲಾದ ನಂಟರನ್ನು ಪ್ರೀತಿಯಿಂದ ಕಾಣುತ್ತೆ ಅವರ ಮನಸ್ಸಿಗೆ ನೋವನ್ನುಂಟುಮಾಡದಿರಬೇಕು. ದೂರ ಬಂಧುಗಳಾದವರಿಗೂ ಆಕಸ್ಮಿಕವಾಗಿ ಆವುದಾದರೊಂದು ಆವದವೋದವಿದಾಗ ನಾವು ಅವರಿಗೆ ಒಳ್ಳೆಯ ಮಾತುಗಳಿಂದಲೂ ಧನದಿಂದಲೂ ಕೈಲಾದ ಸಾಹಾಯ್ಯವನ್ನೂ ಮಾಡುತ್ತಿರಬೇಕು; ಹಾಗೆ ಮಾಡದ ಪಕ್ಷದಲ್ಲಿ ನಮಗೆ ಆವದವೊದವಿದಾಗ ಅವರೂ ತಕ್ಕಸಾಹಾಯ್ಯವನ್ನು ಮಾಡದಿದ್ದಾರು.
ಚಂದ್ರ - ಈಗ ನೀವು ತಿಳಿಸಿದವರು ಮಾತ್ರವಲ್ಲದೆ ಮತ್ತಾರಾದರೂ ಮುಖ್ಯ ಬಂಧುಗಳಿರುವರೇ?
ಗುರು - ಸತಿಪತಿಯರಿರುವರಾದರೂ ಅವರನ್ನು ಬಂಧುಗಳೆಂದು ಹೇಳುವುದಕ್ಕಿಂತ ಬೇರೆಬೇರೆದೇಹಗಳಾಗಿದ್ದರೂ ಅವರಿಬ್ಬರೂ ಒಂದೇ ಎಂದು ಹೇಳಬೇಕು. ಸತಿಯು ಪತಿಯ ಅರ್ಧಶರೀರವೆಂದು ಸಕಲಮತದವರೂ ಸಮ್ಮತಿಸುವರು. ಅವರು ತಂತಮ್ಮಲ್ಲಿ ಭೇದವನ್ನೆಣಿಸದೆ ಸಮಸ್ತ ಕಾರ್ಯಗಳಲ್ಲಿಯೂ ಒಂದಾಗಿ ಪ್ರವರ್ತಿಸಬೇಕು. ಒಂದು ಕುಟುಂಬಕ್ಕೆ ಇಬ್ಬರು ಯಜಮಾನರಾದರೆ ಸರಿಬಾರದಾದುದರಿಂದ, ಭಗವಂತನು ಪತಿಯನ್ನು ಯಜಮಾನನನ್ನಾಗಿಯೂ ಪತ್ನಿಯನ್ನು ಅವನಾಜ್ಞೆಗಧೀನಳಾಗಿರುವಂತೆಯೂ ಸೃಷ್ಟಿಸಿರುವನು. ಅರಸನಿಗಿಂತ ಪ್ರಜೆಗಳು ಒಂದುವೇಳೆ ಬುದ್ಧಿವಂತರಾಗಿದ್ದರೂ, ಆತನಿಗೆ ಅಧೀನರಾಗಿಯೇ ನಡೆದುಕೊಳ್ಳಬೇಕೆಂಬುದು ಹೇಗೆ ವಿಧಾಯಕವಾದುದೋ, ಹಾಗೆಯೇ ಪತ್ನಿಯು ಒಂದುವೇಳೆ ಪತಿಗಿ೦ತ ಬುದ್ದಿ ಶಾಲಿನಿಯಾಗಿಯೂ, ರೂಪವತಿಯಾಗಿಯೂ, ವಿದ್ಯಾಸಂಪನ್ನೆಯಾಗಿಯೂ ಇರುವಂತಹ ಸಂದರ್ಭದಲ್ಲಿಯೂ, ತನ್ನ ಪತಿಗೆ ಅಧೀನಳಾಗಿಯೇ ನಡೆದುಕೊಳ್ಳಬೇಕು. ಒಂದು ವೇಳೆ ಪುರುಷನು ಕೋಪಶೀಲನಾಗಿ ಅಕ್ರಮವಾಗಿ ಹೊಡೆದು ಬಯ್ದರೂ ಆತನಿಗಿದಿರಾಡದೆ ಸೈರಣೆಯನ್ನು ವಹಿಸಿ ಆತನನ್ನು ಯುಕ್ತರೀತಿಯಲ್ಲಿ ಅನುವರ್ತಿಸಬೇಕು. ಪತಿಯು ದುಡುಕಿ ಆವುದಾದರೊಂದು ಅಯುಕ್ತವಾದ ಕಾರ್ಯವನ್ನು ಮಾಡುತ್ತಿದ್ದರೂ ಕೋಪವು ಶಾಂತವಾದ ಬಳಿಕ ಒಳ್ಳೆಯ ಸಮಯದಲ್ಲಿ ಆತನಿಗೆ ಮೆಲ್ಲನೆ ಹಿತಬೋಧನೆಯನ್ನು ಮಾಡಿ ಒಳ್ಳೆಯ ಮಾರ್ಗಕ್ಕೆ ತಿರುಗುವಂತೆ ಮಾಡಬೇಕು. ಪತಿಯು ಹೊರಗೆ ಶ್ರಮಪಟ್ಟು ತಿರುಗಿ ಮನೆಗೆ ಬರುವ ವೇಳೆಗೆ ತಲೆಯನ್ನು ಬಾಚಿಕೊಂಡು ಒಳ್ಳೆಯಸೀರೆಯನ್ನುಟ್ಟು ಶುಚಿಯಾಗಿದ್ದು, ಆತನಿಗೆಬೇಕಾದ ಪದಾರ್ಥಗಳನ್ನು ಅಣಿಮಾಡಿಕೊಟ್ಟು ಉಪಚರಿಸಬೇಕಲ್ಲದೆ, ನೆರೆ ಹೊರೆಯವರೊಡನೆ ನಡೆದ ಜಗಳಗಳನ್ನೂ ಮನೆಯಲ್ಲಿರುವ ದುಃಖಗಳನ್ನೂ ಹೇಳಬಾರದು; ಮನೆಯನ್ನು ಶುಚಿಯಾಗಿಟ್ಟುಕೊಂಡು, ನಾಲಗೆಗಿಂಪಾಗಿರುವಂತೆ ಅಡಿಗೆಮಾಡಿ ಬಡಿಸಿ ಪತಿಯನ್ನು ಮೆಚ್ಚಿಸಬೇಕು. ಒಡವೆಗಳನ್ನಾಗಲೀ ಅನರ್ಘಗಳಾದ ವಸ್ತ್ರಗಳನ್ನಾಗಲಿ ತರಬೇಕೆಂದು ಪೀಡಿಸಬಾರದು. ಸ್ತ್ರೀಯರಿಗೆ ಯಾವಾಗಲೂ ಸುಗುಣಗಳೇ ಅಲಂಕಾರಗಳೆನಿಸುವುದಾದುದರಿಂದ ರತ್ನಭೂಷಣಗಳೂ ಹೆಚ್ಚುಬೆಲೆಯ ವಸ್ತ್ರಗಳೂ ಅಲಂಕಾರಗಳಲ್ಲ. ಸಾಧಾರಣವಾಗಿ ಹತ್ತುಹದಿನೈದು ರೂಪಾಯಿಗಳಿಂದ ಒಬ್ಬ ಬಡವನ ಕುಟುಂಬವು ಒ೦ದುತಿ೦ಗಳವರಿಗೆ ಸುಖವಾಗಿ ಜೀವಿಸಬಹುದು; ಸಹಸ್ರ ಸಹಸ್ರ ಕುಟುಂಬಗಳು ಸುಖವಾಗಿ ಜೀವಿಸುವುದಕ್ಕೆ ಉಪಯೋಗಿಸಬಹುದಾದ ಧನವನ್ನು ನಿಷ್ಪ್ರಯೋಜನವಾಗಿ ಒಬ್ಬ ಅಬಲೆಯು ದೇಹದಮೇಲೆ ಧರಿಸಿಕೊಂಡು ತಿರುಗುವುದು ಯಾವನ್ಯಾಯ? ಮನೆಗೆ ಬೇಕಾದುದನ್ನು ಗಳಿಸಿ ತರುವುದು ಪುರುಷರ ಕಾರ್ಯ. ತಂದುದನ್ನು ಮಿತವಾಗಿಬಳಸುತ್ತೆ ಹುಲ್ಲುಕಡ್ಡಿಯಾದರೂ ವ್ಯರ್ಥವಾಗದಂತೆ ಜಾಗರೂಕತೆಯಿಂದ ನೋಡಿಕೊಳ್ಳುವುದು ಸ್ತ್ರೀಯರಕಾರ್ಯ. ಆದುದರಿಂದ ಸ್ತ್ರೀಯರು ಮಿತಿಮೀರಿ ವ್ಯಯಮಾಡದೆ ಉಚಿತರೀತಿಯಿಂದ ನಡೆದುಕೊಳ್ಳಬೇಕು. ಅತಿ ಭೋಜನದಿಂದ ಅಜೀರ್ಣಾದಿರೋಗಗಳು ಹುಟ್ಟುವ೦ತೆಯೇ ಅತಿನಿದ್ರೆಯಿಂದಲೂ ಮಾಂದ್ಯ ಬಲಹೀನತೆ ಮೊದಲಾದುವು ಉಂಟಾಗಿ ದೇಹದಾರ್ಡ್ಯವು ತಪ್ಪಿ ಹೋಗುವುದು. ಸೋಮಾರಿತನವನ್ನು ಬಿಟ್ಟು ಮನೆಗೆಲಸಗಳನ್ನೆಲ್ಲ ತಾವೇ ಮಾಡಿಕೊಳ್ಳುವಂತಹ ಸ್ತ್ರೀಯರಿಗೆ ಇಂತಹ ಕೇಡುಗಳಾವುವೂ ಉಂಟಾಗಲಾರವು. ಕಬ್ಬುಣವನ್ನು ಮಣ್ಣು ತಿನ್ನುವಂತೆಯೇ ಸೋಮಾರಿತನವು ನಮ್ಮ ದೇಹದ ಸಾರವನ್ನೆಲ್ಲ ತಿಂದು ಬಿಡುವುದು. ತಾನು ಮಹಾರಾಜನ ಕುಮಾರಿಯಾಗಿದ್ದರೂ ಗಂಡನಿಗೆ ದಾಸಿಯೇ ಆಗುವಳಾದುದರಿಂದ, ಎಷ್ಟು ಮಂದಿ ಪರಿಚಾರಿಣಿಯರಿದ್ದರೂ ಪತಿಗೆ ಬೇಕಾದ ಉಪಚಾರಗಳನ್ನೆಲ್ಲ ಸ್ತ್ರೀಯು ತಾನೇ ಮಾಡಬೇಕು. ಸ್ತ್ರೀಯು ಪುರುಷನನ್ನು ವಶಗೊಳಿಸಿಕೊಳ್ಳುವುದಕ್ಕೆ ಮಾಡಬೇಕಾದ ಪ್ರಯತ್ನಗಳಲ್ಲಿ ಯೋಗ್ಯವಾದ ನಡೆನುಡಿಯೂ, ಪತಿಯನ್ನು ಅನುಸರಿಸುವುದೂ ಇವುಗಳೇ ಮುಖ್ಯವಲ್ಲದೆ ವಶ್ಯೌಧಗಳೆಂಬ ಕಂಡಕಂಡ ಕಸಗಳಲ್ಲ. ಈ ಕೆಟ್ಟ ಕಸಗಳಿಂದ ಮಾಡುವ ಔಷಧಗಳಿಂದ ಪತಿಗೆ ಪೂರ್ವದಲ್ಲಿದ್ದ ಪ್ರೇಮವೂ ಹೋಗುವುದಲ್ಲದೆ ಒಂದೊಂದು ವೇಳೆ ಆತನಿಗೆ ಅಪರಿಹಾರ್ಯಗಳಾದ ರೋಗಗಳೂ ಸಂಭವಿಸಬಹುದು. ಆದುದರಿಂದ ಸ್ತ್ರೀಯರು ಯಾವಾಗಲೂ ತಮ್ಮ ಪತಿಗೆ ಮರುಳುಮದ್ದುಗಳನ್ನಿಟ್ಟು ಆತನನ್ನೇ ವಶಪಡಿಸಿಕೊಳ್ಳುವುದಕ್ಕೆ ಕನಸಿನಲ್ಲಾದರೂ ಪ್ರಯತ್ನಿಸಲಾಗದು. ತವರ್ಮನೆಯವರು ಎಷ್ಟು ಧನಿಕರಾಗಿದ್ದರೂ, ಉತ್ತಮಳಾದ ಸ್ತ್ರೀಯು ಪತಿಯನ್ನು ಬಡವನೆಂದು ಅಲ್ಲಗಳೆದು ತನ್ನ ತಂದೆಯ ಮನೆಗೆ ಹೋಗಿರುವುದಕ್ಕೆ ಸಮ್ಮತಿಸಳು. ಸ್ತ್ರೀಗೆ ತವರ್ಮನೆಯಲ್ಲಿಡುವ ಪಂಚಭಕ್ಷ್ಯಗಳಿಗಿಂತ ಗಂಡನ ಮನೆಯಲ್ಲಿ ಕೊಡುವ ತಿಳಿಗಂಜಿಯೇ ಮೇಲಾದುದು. ಸ್ತ್ರೀಯು ತನ್ನ ಮನೆಯ ರಹಸ್ಯವನ್ನಾವಾಗಲೂ ಬಹಿರಂಗಗೊಳಿಸದೆ, ತನ್ನ ಪತಿಯು ಅನುರಾಗಾತಿಶಯದಿಂದ ಹೇಳಿದ ಸಂಗತಿಯನ್ನಾವುದನ್ನೂ ತನ್ನ ಆಪ್ತರೊಡನೆಯಾದರೂ ತಿಳಿಸದೆ ಬಹುರಹಸ್ಯವಾಗಿಡಬೇಕು. ಸಾವಿರವೇಕೆ? ಸಾಧ್ವಿಯಾದ ಸ್ತ್ರೀಯು ಆಲೋಚನೆಗಳನ್ನು ಹೇಳುವಾಗ ಮಂತ್ರಿಯಂತೆಯೂ ಉಪಚರಿಸುವಾಗ ದಾಸಿಯಂತೆಯೂ ಕಷ್ಟಕಾಲಗಳಲ್ಲಿ ಮಿತ್ರನಂತೆಯೂ ಇದ್ದು, ಪತಿಗೆ ಹಿತವಾಗುವಂತೆ ಸಮಸ್ತ ವಿಷಯಗಳಲ್ಲಿಯೂ ಪ್ರವರ್ತಿಸುತ್ತೆ, ಆತನ ವಿಷಯದಲ್ಲಿ ಪ್ರೇಮವೂ ಭಕ್ತಿಯೂ ಉಳ್ಳವಳಾಗಿ ಕುಸುಮದಲ್ಲಿರುವ ಕೇಸರದಂತೆ ಆತನನ್ನು ಬಿಟ್ಟಗಲದಿರಬೇಕು. ಈಗ ತಿಳಿಸಿದ ಸದ್ಗುಣಗಳನ್ನೆಲ್ಲಹೊಂದಿ ಪರಪುರುಷನನ್ನು ಕನಸಿನಲ್ಲಾದರೂ ಸ್ಮರಿಸದೆ ಇರುವಂತಹ ಸ್ತ್ರೀಯೇ ಪತಿವ್ರತೆಯೆನಿಸುವಳು. “ಸಾವಿರ ಚಿತ್ತರವನ್ನೊಂದುಮಸಿ ಮುಟ್ಟಿತು” ಎಂಬಂತೆ ಪುಣ್ಯ ಕಾರ್ಯಗಳನ್ನೆಲ್ಲಾ ಜಾರತ್ವವೊಂದೇ ಕೆಡಿಸಿ ಪಾಪಹೇತುವಾಗುವುದು. ಸ್ತ್ರೀಯರಿಗೆ ವ್ಯಭಿಚಾರಕ್ಕಿಂತ ಪ್ರಬಲವಾದ ದೋಷವು ಮತ್ತೊಂದಿಲ್ಲ. ಆದುದರಿಂದ ಪರಪುರುಷರು ಎಷ್ಟು ಸುಂದರರಾಗಿದ್ದರೂ ಅವರನ್ನು ತೃಣವನ್ನಾಗಿ ಭಾವಿಸಿ ಅವರಮೇಲೆ ಬೀಸುವ ಗಾಳಿಯಾದರೂ ತಮ್ಮಮೇಲೆ ಸೋಕದಂತೆ ಪ್ರವರ್ತಿಸಬೇಕು. ವ್ಯಭಿಚಾರ ಮಾಡುವುದ ರಿಂದ ಪರಲೋಕಹಾನಿಯುಂಟಾಗುವುದು ಮಾತ್ರವೇ ಅಲ್ಲದೆ ಜನರ ಆಡಿ ಕೆಗೂ ಗುರಿಯಾಗಿ ಮಾನಪ್ರಾಣಗಳೂ ನಷ್ಟವಾಗುವುವು. ಮಾನವಂತ ನಾದವನು ತನ್ನ ಪತ್ನಿಯು ಆವ ಅವರಾಧವನ್ನು ಮಾಡಿದರೂ ಸೈರಿಸಬಲ್ಲ ನಲ್ಲದೆ ಅವಳು ವ್ಯಭಿಚರಿಸಿದಾಗ ಮಾತ್ರ ತಿಳಿದು ಸೈರಿಸಿಕೊಂಡಿರಲಾರನು. ಆದುದರಿಂದ ಸ್ತ್ರೀಯು ಸಕಲ ವಿಧಗಳಲ್ಲಿಯೂ ಪಾತಿವ್ರತ್ಯಕ್ಕೆ ಹಾನಿ ಯುಂಟಾಗದಂತೆ ಜಾಗರೂಕಳಾಗಿರಬೇಕು.
ಒಂಭತ್ತನೆಯ ಪ್ರಕರಣ.
ವಿದ್ಯಾಸಮುದ್ರನು ಚಂದ್ರಮತಿಗೆ ಹೇಳಿದ ವಿದ್ಯೆಯಲ್ಲ ಪುಸ್ತಕ ಮಾತ್ರದಿಂದಲೇ ಅಲ್ಲ ಆತನು ಸಾಯಂಕಾಲದ ವೇಳೆಗಳಲ್ಲಿ ಪ್ರತಿದಿನವೂ ಚಂದ್ರಮತಿಯನ್ನು ಕರೆದುಕೊಂಡು ಹೋಗಿ, ಜಗದೀಶ್ವರನ ದಿವ್ಯ ಹಸ್ತ ರಚಿತಗಳಾದ ವಸ್ತುಸಮೂಹಗಳಿಂದ ಪ್ರಕಾಶಿಸುವ ಉದ್ಯಾನಗಳಲ್ಲಿ ನೇತ್ರೋ ತ್ಸವವನ್ನುಂಟುಮಾಡುವ ಫಲವೃಕ್ಷಗಳನ್ನೂ ಹೂವಿನ ಗಿಡಗಳನ್ನೂ ಕಿವಿಗಿಂಪಾಗಿರುವಂತೆ ಮಧುರಧ್ವನಿಯನ್ನು ಮಾಡುವ ಕೋಗಿಲೆ ಗಿಳಿ ಮೊದಲಾದ ಪಕ್ಷಿಗಳನ್ನೂ ತೋರಿಸಿ, ಅವುಗಳ ಮೂಲವಾಗಿ ಭಗವಂತನ ಸಮಸ್ತ ನಿರ್ಮಾಣಕೌಶಲವನ್ನೂ ನೀತಿಗಳನ್ನೂ ಅವಳ ಮನಸ್ಸಿಗೆ ನಾಟು ವಂತೆ ಸಮಯೋಚಿತವಾಗಿ ಬೋಧಿಸುತ್ತಿದ್ದನು. ತಂಗಾಳಿಗಳಲ್ಲಿ ತಿರುಗು ವುದರಿಂದಲೂ ದೇಹಪರಿಶ್ರಮವನ್ನು ಚೆನ್ನಾಗಿ ಮಾಡುವುದರಿಂದಲೂ ಉಂಟಾಗುವ ಸಂತೋಷವನ್ನು ಚಂದ್ರಮತಿಯು ಚೆನ್ನಾಗಿ ಅರಿತವಳಾಗಿ, ನೂರಾರುಮಂದಿ ದಾಸಿಯರಿದ್ದರೂ ತನ್ನ ಕೈತೋಟದಲ್ಲಿರುವ ಪುಷ್ಪಲತೆ ಗಳಿಗೆ ತಾನೇ ನೀರೆರೆಯುತ್ತೆ, ತಾನು ಬೆಳೆಯಿಸಿದ ಮಲ್ಲಿಗೆಯಲ್ಲಿ ಒಂದು ಹೂವು ಅರಳಿದರೂ, ದಾಳಿಂಬೆಯ ಗಿಡದಲ್ಲಿ ಒಂದು ಕಾಯಿ ಕಂಡರೂ, ಹೊರಗಣ ತೋಟಗಳಿಂದ ಗೂಡೆಯತುಂಬ ಹೂಗಳೂ ಕಾಯಿಗಳೂ ಬಂದುದಕ್ಕಿಂತ ಅತಿಶಯವಾದ ಆನಂದವನ್ನು ಹೊಂದುತ್ತಿದ್ದಳು. ಒಂದು ದಿನ ಸಾಯಂಕಾಲ ಚಂದ್ರಮತಿಯು ಗುರುವಿನೊಡನೆ ಹೂದೋಟದಲ್ಲಿ ವಿನೋದವಾಗಿ ಸಂಚರಿಸುತ್ತಿರುವಾಗ ಉದ್ಯಾನಪಾಲಕನು ಎತ್ತುಗಳನ್ನು ಹೂಡಿ ಏತದಿಂದ ನೀರನ್ನೆತ್ತಿ ಗಿಡಗಳಿಗೆ ತಿರುಗಿಸುತ್ತೆ, ಜಾಗ್ರತೆಯಾಗಿ ಏತವನ್ನೆಳೆಯದಿದ್ದಾಗ ಆ ಎತ್ತುಗಳನ್ನು ತನ್ನ ಕೈಯಲ್ಲಿದ್ದ ಬಿದಿರುಕಡ್ಡಿಯಿಂದ ರಕ್ತಬರುವಂತೆ ಗಟ್ಟಿಯಾಗಿ ಹೊಡೆದನು. ಆಗ ಸಮೀಪದಲ್ಲಿಯೇ ಸಂಚ ರಿಸುತ್ತಿದ್ದ ಚಂದ್ರಮತಿಯು ಅವನ ಕ್ರೂರ ಕೃತ್ಯವನ್ನು ಕಂಡು ಬಹುಕೋ ಪಿಸಿ, ಇನ್ನೊಂದು ಬಾರಿ ಆ ಎತ್ತುಗಳನ್ನು ಅಷ್ಟು ಕ್ರೂರವಾಗಿ ಹೊಡೆದ ಪಕ್ಷದಲ್ಲಿ ತನ್ನ ತಂದೆಯೊಡನೆ ಹೇಳಿ ಅವನ ಕೆಲಸವನ್ನು ತೆಗೆಯಿಸಿಹಾಕು ವೆನೆಂದು ಹೆದರಿಸಿದಳು. ಚ೦ದ್ರಮತಿಗೆ ಆವುದಾದರೂ ನೂತನ ವಿಷಯ ವನ್ನು ಬೋಧಿಸಬೇಕೆಂದಾಲೋಚಿಸುತ್ತೆ ಸಮೀಪದಲ್ಲಿಯೇ ಇದ್ದ ವಿದ್ಯಾ ನಮುದ್ರನು, 'ಇದನ್ನೊಂದು ಲಕ್ಷ್ಯವನ್ನಾಗಿ ಮಾಡಿಕೊಂಡು ಚಂದ್ರಮತಿ ಯನ್ನು “ ಅವನ ಮೇಲೆ ನೀನಿಷ್ಟು ಕೋಪಮಾಡುವುದಕ್ಕೆ ಕಾರಣವೇನು? : ಎಂದು ಕೇಳಿದನು
ಚಂದ್ರ - ನನಗೆ ಇದುವರೆಗೂ ಯಾರೂ ಹೇಳದಿದ್ದರೂ,ನಿಷ್ಕಾರಣವಾಗಿ ಪಶುವನ್ನು ಹೊಡೆಯುವುದು ನನ್ನ ಮನಸ್ಸಿಗೆ ಬಲುತಪ್ಪಾಗಿ ತೋರಿ ದುದರಿಂದ ಅವನ ಮೇಲೆ ಕೋಪಿಸಿಕೊಂಡೆನು. ಮನುಷ್ಯನಲ್ಲದ ಇತರ ಜಂತುಗಳ ವಿಷಯದಲ್ಲಿ ನಾವು ನಡೆದುಕೊಳ್ಳ ಬೇಕಾದ ಧರ್ಮಗಳನ್ನು ಕುರಿತು ತಿಳಿಸುವುದಾಗಿ ತಾವು ಮೊದಲೇ ಅಪ್ಪಣೆ ಕೊಡಿಸಿರಿ. ಈಗ ಅದನ್ನು ನನ್ನ ವಿಷಯದಲ್ಲಿ ಅನುಗ್ರಹಿಸಿ ಅಪ್ಪಣೆ ಕೊಡಿಸುವಿರಾ?
ಗುರು- - ಪಶು ಮೊದಲಾದ ಪ್ರಾಣಿಗಳು ನಮ್ಮ ಉಪಯೋಗಕ್ಕೋ ಸುಗವೇ ನಿರ್ಮಿತವಾದುವುಗಳಾದರೂ, ಅವುಗಳು ನಮ್ಮ ಒಳಿಯಲ್ಲಿ ವಷ್ಟು ಕಾಲವೂ ಹೊಟ್ಟೆಯ ತುಂಬ ಆಹಾರವನ್ನು ಕೊಟ್ಟು ನೀರನ್ನು ಕುಡಿಯಿಸಿ, ಅವುಗಳ ಪೋಷಣೆಯನ್ನು ಕ್ರಮವಾಗಿ ವಿಚಾರಿಸಿಕೊಳ್ಳುತ್ತೆ ಪ್ರೇಮದಿಂದಾದರಿಸುವುದು ನಮಗೆ ಧರ್ಮವಾಗಿರುವುದು. ಯಾವಾಗಲೂ ಅವುಗಳಿ೦ದ ಶಕ್ತಿಗೆ ಮಾರಿದ ಕಾರ್ಯವನ್ನು ಮಾಡಿಸಲಾಗದು; ಪ್ರಾಣಿಗಳ ಮುದಿತನದಿಂದಾಗಲಿ, ಆಯಾಸದಿಂದಾಗಲಿ, ರೋಗದಿಂದಾಗಲಿ, ಆಹಾರಾದಿ ಗಳ ಲೋಪದಿಂದಾಗಲಿ, ಚೆನ್ನಾಗಿ ಕೆಲಸಮಾಡಲಾರದಂತಹಕಾಲದಲ್ಲಿ ವೇಗ ವಾಗಿ ನಡೆಯಲಿಲ್ಲವೆಂದೂ, ಕೆಲಸಮಾಡಲಿಲ್ಲವೆಂದೂ ಅವುಗಳನ್ನು ಹೊಡೆ
4
ಗುರು- ನಾನು ಹೇಳಿದರೀತಿಯಲ್ಲಿ ನಡೆದುಕೊಳ್ಳುತ್ತೆ ಮುಂದೆ ನೀನು ಹೆಸರನ್ನು ಹೊಂದುವುದೇ ನನ್ನ ಸಾಲಕ್ಕೆ ಪರಿಹಾರ. ಧರ್ಮವನ್ನು ಸುಮ್ಮನೆ ಕೇಳುವುದರಿಂದ ಪ್ರಯೋಜನವೇನೂ ಇಲ್ಲ; ಕೇಳಿದುವುಗಳನ್ನು ಮರೆಯದೆ ಅದರಂತೆ ನಡೆದುಕೊಳ್ಳುವುದರಿಂದ ಇಹಪರಗಳೆರಡರಲ್ಲಿಯೂ ಸಕಲ ಶ್ರೇಯಸ್ಸೂ ಉಂಟಾಗುವುದು. ಕೆಲವರು ಸತ್ಪೃವರ್ತನವುಳ್ಳವರಾಗಿ ಬಾಳುವುದು ಬಹು ಕಷ್ಟಕರವಾದುದೆಂದು ಭಾವಿಸಿರುವರು. ಅಭ್ಯಾಸವಾದ ಬಳಿಕ ಅದರಷ್ಟು ಸುಲಭವಾದ ಕಾರ್ಯವು ಮತ್ತಾವುದೂ ಇಲ್ಲ. ಗೇಣುದ್ದದ ಹೊಟ್ಟೆಗೋಸುಗ ಮಹಾಸಮುದ್ರಗಳನ್ನು ದಾಟಿಯೂ, ಹೊರಲಾರದಷ್ಟು ಭಾರವನ್ನು ಹೊತ್ತೂ, ಪ್ರಾಣದಾಸೆಯನ್ನು ಬಿಟ್ಟು ಯುದ್ದಗಳಲ್ಲಿ ಕಾದಾಡಿಯೂ, ಕಷ್ಟಪಡುವಂಥವರಿಗೆ ಸತ್ಯ, ಶಾಂತತೆ, ಭೂತ ದಯೆ ಇವುಗಳನ್ನು ಹೊಂದಿ ಬಾಳುವುದಸಾಧ್ಯವೆಂದರೆ ಯಾರಾದರೂ ನಗದಿರುವರೆ? ಮನಸ್ಸಿಗೆ ಆಯಾಸವನ್ನುಂಟುಮಾಡಿ ಇಲ್ಲದುದನ್ನು ಹೊಸವಾಗಿ ಕಲ್ಪಿಸಿಕೊಂಡು ಹೇಳುವುದಕ್ಕಿಂತ ನಾಲಗೆಯ ಕೊನೆಯಲ್ಲಿದ್ದು ತನ್ನಷ್ಟಕ್ಕೆ ತಾನೇ ಅಪ್ರಯತ್ನವಾಗಿ ಹೊರಕ್ಕೆ ಬರುವುದಕ್ಕೆ ಸಿದ್ದವಾಗಿರುವ ಸತ್ಯವನ್ನು ಆಡುವುದು ಕಷ್ಟವೆಂದರೆ ಯಾರು ನಂಬಬಲ್ಲರು? ಲೋಕದಲ್ಲಿ ಎಲ್ಲರಿಗೂ ಸಾಧುಗಳನ್ನು ಪ್ರೀತಿಸುವುದೂ ದುಷ್ಟರನ್ನು ದ್ವೇಷಿಸುವದೂ ಸಹಜಗುಣಗಳಾಗಿರುವುವು. ಈಗ ನಾವು ನೋಡುತ್ತಿರುವವರನ್ನು ಮಾತ್ರವೇ ಅಲ್ಲದೆ ಯಾವಾಗಲೋ ಇದ್ದು ಕಧೆಗಳಲ್ಲಿ ಉಕ್ತರಾದ ಯೋಗ್ಯರನ್ನು ಭೂಷಿಸುತ್ತೆ ಅಯೋಗ್ಯರನ್ನು ದೂಷಿಸುತ್ತಿರುವೆವು. ನಮಗೆ ಅಂತಹ ಅಭಿಪ್ರಾಯವುಂಟಾಗುವುದಕ್ಕೆ ಯೋಗ್ಯರು ನಮಗೆ ಮಾಡಿದ ಅಪಕಾರವಾವುದು? ಅಯೋಗ್ಯರು ಮಾಡಿದ ಅಪಕಾರವಾವುದು? ಜನರು ಆಯಾ ಜನರನ್ನು ಪ್ರೀತಿಸುವುದಕ್ಕೂ ದ್ವೇಷಿಸುವುದಕ್ಕೂ ಅವರವರ ಸುಗುಣ ದುರ್ಗುಣಗಳೇ ಕಾರಣಗಳಾಗಿರುವುವು. ಲೋಕದಲ್ಲಿ ನಮ್ಮ ಶರೀರಗಳು ಸ್ಥಿರವಲ್ಲವಾದುದರಿಂದ ಬದುಕಿರುವ ನಾಲ್ಕು ದಿನಗಳಾದರೂ ನ್ಯಾಯಮಾರ್ಗದಲ್ಲಿ ಪ್ರವರ್ತಿಸುತ್ತೆ ಈ ಲೋಕದಲ್ಲಿ ಕೀರ್ತಿಯನ್ನೂ ಪರಲೋಕದಲ್ಲಿ ಶಾಶ್ವತವಾದ ಆನಂದವನ್ನೂ ಹೊಂದುವುದಕ್ಕೆ ಪ್ರಯತ್ನಿಸಬೇಕು.
ಚಂದ್ರ-ನೀವು ನನಗೆ ಮಾಡಿದ ಉಪದೇಶವು ಶಿಲಾಕ್ಷರಗಳಂತೆ ನನ್ನ ಮನಸ್ಸಿನಲ್ಲಿ ನಾಟಿರುವುದು. ನಾನಿದನ್ನೆಂದೂ ಮರೆಯದೆ ಯಾವಜ್ಜೀವವೂ ತಮ್ಮ ವಿಷಯದಲ್ಲಿ ಕೃತಜ್ಞತೆಯುಳ್ಳವಳಾಗಿ ಯುಕ್ತ ಮಾರ್ಗದಲ್ಲಿ ಪ್ರವರ್ತಿಸುವುದಕ್ಕೆ ಪ್ರಯತ್ನಿಸುವೆನು.
ಈ ಸಂಭಾಷಣೆಯು ಮುಗಿದ ಬಳಿಕ ಗುರುವೂ ಶಿಷ್ಯೆಯೂ ತೋಟದಿಂದ ಮನೆಗೆ ಹೊರಟುಹೋದರು. ಹೀಗೆಯೇ ವಿದ್ಯಾಸಮುದ್ರನು ಎರಡು ಮೂರು ವರ್ಷಗಳಲ್ಲಿ ಚಂದ್ರಮತಿಯನ್ನು ಸಮಸ್ತ ವಿದ್ಯೆಗಳಲ್ಲಿಯೂ ಪಾರಂಗತೆಯನ್ನಾಗಿ ಮಾಡಿದನು. ಈ ಕಾಲದಲ್ಲಿಯೇ ಚಂದ್ರಮತಿಯು ಪ್ರವೀಣರಾದ ಇತರ ಗುರುಗಳ ಬಳಿಯಲ್ಲಿ ಸಂಗೀತ ಮೊದಲಾದ ಸ್ತ್ರೀ ಜನೋಪ ಯುಕ್ತಗಳಾದ ವಿದ್ಯೆಯನ್ನೆಲ್ಲವನ್ನೂ ಕಲಿತುಕೊಂಡಳು.
ಹತ್ರನೆಯ ಪ್ರಕರಣ
ಉಶೀನರ ಮಹಾರಾಜನೊಂದಾನೊಂದುದಿನ ತನ್ನ ಮಗಳೊಡನೆ ಆಸ್ಥಾನಕ್ಕೆ ಬಂದು ಸಿಂಹಾಸನಾಸೀನನಾಗಿ, ವಿದ್ಯಾಸಮುದ್ರನನ್ನು ಕರೆಯಿಸಿ ಉಚಿತಾಸನದಲ್ಲಿ ಕುಳ್ಳಿರಿಸಿ, ಸಕಲವಿದ್ವಜ್ಜನರ ಇದಿರಾಗಿ ಚಂದ್ರಮತಿಯ ಸದ್ವಿದ್ಯೆಯನ್ನೆಲ್ಲ ಪರೀಕ್ಷಿಸುವುದಕ್ಕಾರಂಭಿಸಿದನು. ಅವಳು ಎಲ್ಲ ಪ್ರಶ್ನೆಗಳಿಗೂ ಸದುತ್ತರಗಳನ್ನು ಕೊಟ್ಟು ತನ್ನ ಬುದ್ಧಿಶಕ್ತಿಯನ್ನು ತೋರಿಸಲು, ಅವಳಾ ವಿದ್ಯಾ ವಿವೇಕಾದಿಗಳಿಗೂ ಗುರುವಿನ ಬೋಧನಾಶಕ್ತಿಗೂ ಸಭೆಯವರೆಲ್ಲರೂ ಆನಂದಾಶ್ಚರ್ಯಭರಿತರಾದರು. ತನ್ನ ಮಗಳಿಗೆ ವಿದ್ಯೋಪದೇಶವನ್ನು ಮಾಡಿ ನೀತಿವಂತೆಯನ್ನಾಗಿ ಮಾಡಿದುದಕ್ಕೋಸುಗ ಆಗ ರಾಜನು ವಿದ್ಯಾಸಮುದ್ರನನ್ನು ಹಲವುಬಗೆಯಾಗಿ ಸ್ತೋತ್ರಮಾಡಿ ಆತನಾವಾಗಲೂ ನೋಡಲಾರದಷ್ಟು ಧನವನ್ನೂ ಅಮೂಲ್ಯ ವಸ್ತುಗಳನ್ನೂ ಪಾರಿತೋಷಕವಾಗಿ ಇತ್ತು ಒಂದು ಅಗ್ರಹಾರವನ್ನು ಧಾರಾಪೂರ್ವಕವಾಗಿ ಕೊಟ್ಟನು. ಅರಸನ ಗುಣಗ್ರಹಣಶಕ್ತಿಗೂ ಔದಾರ್ಯ ವಿಶೇಷಕ್ಕೂ ವಿದ್ಯಾಸಮುದ್ರನು ವರ ಮಾನಂದಭರಿತನಾಗಿ ಯೋಗ್ಯವಾದ ರೀತಿಯಲ್ಲಿ ತನ್ನ ಕೃತಜ್ಞತೆಯನ್ನು ಸೂಚಿಸತಕ್ಕ ಕೆಲಮಾತುಗಳನ್ನಾಡಿದನು. ಅಷ್ಟರಲ್ಲಿ ಅರಸನು ಸಭೆಯನ್ನು ಬೀಳ್ಕೊಟ್ಟು ಸಮುಚಿತ ಪರಿವಾರದೊಡನೆ ಅಂತಃಪುರಕ್ಕೆ ಹೊರಟುಹೋದನು. ಮಂತ್ರಿ ಮೊದಲಾದ ಸಭಾಸದರೂ ತಂತಮ್ಮ ಮನೆಗಳಿಗೆ ಹಿ೦ತಿರುಗಿ ಹೊರಟುಹೋದರು.
ತರುವಾಯ ಚಂದ್ರಮತಿಯು ತಾನು ಕಲಿತ ವಿದ್ಯೆಯನ್ನು ದಿನಕ್ರಮವಾಗಿ ಅಭಿವೃದ್ಧಿ ಮಾಡಿಕೊಂಡು, ಪುಸ್ತಕದಲ್ಲಿ ಓದಿ ಕಲಿತುದಕ್ಕಿಂತ ಬುದ್ಧಿ ಬಲದಿಂದ ಹತ್ತರಷ್ಟು ಜ್ಞಾನವನ್ನು ಪಡೆದು ಎಂತಹ ಕಠಿನ ಪುಸ್ತಕವನ್ನಾದರೂ ಓದಿ ಅರ್ಥಮಾಡಿಕೊಳ್ಳುತ್ತೆ, ಎಂತಹ ತೊಡಕಾದ ಲೆಕ್ಕವನ್ನಾದರೂ ಆಲೋಚಿಸಿ ಸರಿಯಾದ ಉತ್ತರವನ್ನು ಕಂಡುಹಿಡಿಯುತ್ತೆ, ಮನೋಹರವಾದ ಲಲಿತ ಶೈಲಿಯ ಪದ್ಯಗಳನ್ನೂ ಹಾಡುಗಳನ್ನೂ ರಚಿಸುತ್ತೆ ಆವ ರಾಗವನ್ನಾದರೂ ಆಲಾಪನಮಾಡಿ ಕೇಳುವವರ ಮನಸ್ಸು ಕರಗುವಂತೆ ಮಾಡುತ್ತೆ, ಆವುದಾದರೂ ನೂತನವಿಷಯವನ್ನು ತೆಗೆದುಕೊಂಡು ಇಂಪಾಗಿ ಉಪನ್ಯಾಸ ಮಾಡುತ್ತೆ ಬಹುಸಮರ್ಥೆಯೆಂದು ಪ್ರಸಿದ್ಧಳಾದಳು. ಆಕೆಗಿದ್ದ ವಿದ್ಯಾ ವಿವೇಕಾದಿಗಳಿಗೆ ಪ್ರಕಾಶವನ್ನುಂಟುಮಾಡತಕ್ಕ ವಿನಯಾದಿ ಸದ್ಗುಣಗಳು ಆಕೆಯನ್ನು ಲೋಕದಲ್ಲಿರುವ ಸಮಸ್ತನಾರೀಮಣಿಗಳಲ್ಲಿಯೂ ಉತ್ತಮಳನ್ನಾಗಿ ಮಾಡಿದುವು. ಆದುದರಿಂದ ಎಲ್ಲಾ ಕಡೆಗಳಲ್ಲಿಯೂ ಈಕೆಯ ಗುಣ ಸಂಪತ್ತನ್ನೂ ವಿದ್ಯಾವಿಶೇಷವನ್ನೂ ಜನರೆಲ್ಲರೂ ಮನವಾರೆ ವರ್ಣಿಸಿ ವರ್ಣಿಸಿ ಹೇಳಿಕೊಳ್ಳುತ್ತಿದ್ದರು. ಆಕೆಯ ಕೀರ್ತಿಯು ಕ್ರಮಕ್ರಮವಾಗಿ ದೂರದೇಶಗಳಲ್ಲಿಯೂ ವ್ಯಾಪಿಸಿ ಎಲ್ಲರಿಂದಲೂ ಶ್ಲಾಘನೀಯವಾಯಿತು. ಇವಳಂತೆಯೇ ಕೋಸಲದೇಶಾಧೀಶನಾದ ತ್ರಿಶಂಕುಮಹಾರಾಜನ ಮಗನಾದ ಹರಿಶ್ಚಂದ್ರನ ಕೀರ್ತಿಯೂ ಸಮಸ್ತ ದೇಶಗಳನ್ನೂ ವ್ಯಾಪಿಸಿದ್ದಿತು. ಆಸೇತು ಹಿಮಾಚಲದವರೆಗಣ ದೇಶಗಳಲ್ಲೆಲ್ಲ ಅವನ ಧೈರ್ಯಶೌರ್ಯಾದಿಗಳೂ, ವಿನಯ ವಿವೇಕಾದಿಗಳೂ, ವಿದ್ಯಾ ಕೌಶಲವೂ ಜನಜನಿತವಾಯಿತು. ಚಂದ್ರಮತಿಯು ಪಾಠಶಾಲೆಯಲ್ಲಿ ಓದಿಕೊಳ್ಳುತ್ತಿದ್ದಾಗಲೇ ಆತನ ಸುಗುಣಸಂಪತ್ತನ್ನು ಹಲವು ಬಾರಿ ತನ್ನ ಗುರುವಿನ ಬಾಯಿಂದಲೂ, ಇತರರ ಬಾಯಿಂದಲೂ ಕೇಳಿದ್ದಳಾದುದರಿಂದ ತಾನು ಆತನನ್ನೇ ವರಯಿಸಬೇಕೆಂದು ಮನಸ್ಸಿನಲ್ಲಿ ನಿಷ್ಕರ್ಷೆಮಾಡಿಕೊಂಡಿದ್ದಳು. ವಯಸ್ಸು ಬಂದಹಾಗೆಲ್ಲ ಆತನ ಸುಚರಿತ್ರೆಯನ್ನು ಶ್ರವಣಾನಂದವಾಗುವಂತೆ ಒಡನಾಡಿಯರಿಂದ ಕೇಳಿಕೇಳಿ ಅವಳ ಆಸೆಯು ಅಷ್ಟಷ್ಟಕ್ಕೆ ಪ್ರಬಲವಾಗುತ್ತೆ ಬಂದಿತು. ಹರಿಶ್ಚಂದ್ರನೂ ಚಂದ್ರಮತಿಯ ಸದ್ಗುಣಸಮೃದ್ಧಿಯನ್ನು ಕೇಳಿ ಅವಳನ್ನೇ ಮದುವೆಮಾಡಿ ಕೊಳ್ಳಬೇಕೆಂದು ದೃಢಸಂಕಲ್ಪನಾಗಿದ್ದನು. ಹೀಗೆ ಸ್ವಲ್ಪ ಕಾಲ ಕಳೆದ ಬಳಿಕ ಚಂದ್ರಮತಿಯೊಂದುದಿನ ತನ್ನ ಅಭಿಪ್ರಾಯವನ್ನು ತಾಯಿಯೊಡನೆ ಮೆಲ್ಲನೆ ಉಸಿರಿದಳು. ಆಕೆಯು ಮಗಳ ಅಭಿಪ್ರಾಯವನ್ನು ತಿಳಿದುಕೊಂಡು ಒಂದಾನೊಂದು ದಿನ ರಹಸ್ಯವಾಗಿ ಗಂಡನಿಗೆ ತಿಳಿಸಲು, ಆತನು ತನ್ನ ಮಗಳ ಮನಸ್ಸು ಯೋಗ್ಯನಾದ ವರನನ್ನು ಸೇರಿದುದರಿಂದ ಪರಮಾನಂದಭರಿತನಾಗಿ, ಯೌವನವತಿಯಾಗಿದ್ದ ಚಂದ್ರಮತಿಯನ್ನು ಜಾಗ್ರತೆಯಾಗಿ ಆತನಿಗೆ ಕೊಟ್ಟು ಮದುವೆಮಾಡುವುದು ಯುಕ್ತವೆಂದು ನಿಶ್ಚಯಿಸಿ, ತಕ್ಷಣವೇ ದೃಢವ್ರತನೆಂಬ ಬ್ರಾಹ್ಮಣನನ್ನು ಕರೆಯಿಸಿ ಹೇಳಬೇಕಾದ ಸಂಗತಿಗಳನ್ನೆಲ್ಲ ಹೇಳಿ ತನ್ನ ಮಗಳನ್ನು ಹರಿಶ್ಚಂದ್ರನಿಗೆ ಕೊಡಬೇಕೆಂದು ಉದ್ದೇಶಿಸಿರುವ ವಿಷಯವನ್ನು ಬರೆದು ತ್ರಿಶಂಕುಮಹಾರಾಜನಿಗೆ ಚಿನ್ನದ ತಲೆಯನ್ನು ಕಳುಹಿಸಿದನು. ತ್ರಿಶಂಕುಮಹಾರಾಜನಾದರೋ ತನ್ನ ಮಗನಿಗೆ ಚಂದ್ರಮತಿಯಲ್ಲಿ ಮನಸ್ಸು ಅನುರಕ್ತನಾಗಿರುವುದೆಂಬ ವಿಷಯವನ್ನು ಮೊದಲೇ ಅರಿತಿದ್ದನಾದುದರಿಂದ, ಮರುಮಾತಾಡದೆ ಅದಕ್ಕೆ ಸಮ್ಮತಿಸಿ, ದೃಢವ್ರತನಿಗೆ ಉಡುಗೊರೆಯನ್ನು ಕೊಟ್ಟು ಮದವಣಗಿತ್ತಿಯನ್ನು ನೋಡಿಕೊಂಡು ಬರಲೋಸುಗ ಮತ್ತೊಬ್ಬ ಬ್ರಾಹ್ಮಣನನ್ನು ಆತನೊಡನೆ ಉಶೀನರಮಹಾರಾಜನ ಬಳಿಗೆ ಕಳುಹಿಸಿದನು. ಮುಹೂರ್ತ ನಿಶ್ಚಯವಾದ ಬಳಿಕ ಚಂದ್ರಮತಿ ಹರಿಶ್ಚಂದ್ರರಿಗೆ ಮಹಾ ವೈಭವದಿಂದ ವಿವಾಹವು ನಡೆಯಿತು. ಸುಗುಣ ಸಂಪತ್ತುಗಳನ್ನು ಕೇಳಿಯೇ ಮೋಹಿಸಿದ್ದವರಾದರೂ ರೂಪಸಂಪತ್ತುಗಳು ಆಯೀರ್ವರನ್ನೂ ಅತ್ಯಧಿಕವಾಗಿ ಒಲಿದಿದ್ದುದರಿಂದ ಅವರಾಪ್ರೀತಿಯು ದೃಢ ಮೂಲವಾಯಿತು. ಆ ದಂಪತಿಗಳ ಸೌಂದರ್ಯವನ್ನು ಕಣ್ಣಾರೆ ನೋಡಿದವರೆಲ್ಲರೂ ಕಥೆಗಳಲ್ಲಿ ಕೇಳುತ್ತಿರುವ ರತಿ ಮನ್ಮಥರು ಇವರಷ್ಟು ಸೌ೦ದರ್ಯಶಾಲಿಗಳಾಗಿದ್ದರೇ ಎಂದು ಸಂಶಯವಡುತ್ತಿದ್ದರು. ಲೋಕದಲ್ಲಿ ಆರಿಗಾದರೂ ಸುಗುಣಾಲಂಕಾರವೇ ನಿಶ್ಚಯವಾದ ಅಲಂಕಾರವಲ್ಲದೆ ಅದನ್ನುಳಿದು ಕೇವಲ ವಿದ್ಯೆಯ ರೂಪವೂ ಭೂಷಣವೂ ಅಲಂಕಾರಗಳು ಮದುವೆಯಲ್ಲಿ ನಡೆದಬಳಿಕ ಚಂದ್ರಮತಿಯ ತಾಯ್ತಂದೆಗಳು ಅವಳಿಗೆ ಹೇಳಬೇಕಾದ ಬುದ್ಧಿವಾದಗಳನ್ನು ಹೇಳಿ, ಹುಟ್ಟಿದಮನೆಗೂ ಸೇರಿದಮನೆಗೂ ಕೀರ್ತಿಯನ್ನು ತರಬೇಕೆಂದು ಬೋಧಿಸಿ, ಆಕೆ ಯಾವುದಾದರೊಂದು ತಪ್ಪನ್ನು ತಿಳಿಯದೇ ಮಾಡಿದರೂ ಅದನ್ನು ತಿದ್ದಿ ಅವಳನ್ನು ಆದರಿಸಬೇಕೆಂದು ಅಳಿಯನಿಗೆ ಹೇಳಿ ಮಗಳನ್ನು ಅತ್ತೆಯಮನೆಗೆ ಕಳುಹಿಸಿಕೊಟ್ಟರು. ಅವರಿಬ್ಬರೂ ಓದಿದವರಾದುದರಿಂದಲೂ ಸುಗುಣಸ೦ವತ್ತುಗಳುಳ್ಳವರಾದುದರಿಂದಲೂ ಆ ದಂಪತಿಗಳ ಇಂತಹ ಐಕ್ಯಮತ್ಯವೂ ಪರಸ್ಪರಾನುರಾಗವೂ ಎಲ್ಲಿಯೂ ಆರಿಗೂ ಉಂಟಾಗುವುದೆಂದು ಹೇಳುವುದಕ್ಕಾಗುವುದಿಲ್ಲ. ಹೀಗೆ ಕೆಲದಿನಗಳು ಕಳೆದಬಳಿಕ ತ್ರಿಶಂಕುಮಹಾರಾಜನು ರಾಜ್ಯಭಾರವನ್ನೆಲ್ಲ ಸಮರ್ಥನಾದ ಮಗನಿಗೆ ವಹಿಸಿ ತಾನು ತಪಸ್ಸು ಮಾಡುವುದಕ್ಕೋಸುಗ ಸತಿಯೊಡನೆ ಋಷ್ಯಾಶ್ರಮಕ್ಕೆ ಹೊರಟುಹೋದನು. ಹರಿಶ್ಚಂದ್ರನಾದರೋ ಪ್ರಜೆಗಳನ್ನೆಲ್ಲ ತನ್ನ ಕುಟುಂಬವೆಂದು ಭಾವಿಸಿ ನೋಡಿಕೊಳ್ಳುತ್ತೆ, ಅವರ ಕ್ಷೇಮಕ್ಕೋಸುಗವೇ ತನ್ನ ಶಕ್ತಿಯನ್ನೆಲ್ಲ ಉಪಯೋಗಿಸುತ್ತೆ ತಪ್ಪ ಮಾಡಿದವರಲ್ಲಿ ದ್ವೇಷವನ್ನಿಡದೆ ಅವರಮೇಲ್ಮೆಗೋಸುಗವೇ ಮಕ್ಕಳನ್ನು ಶಿಕ್ಷಿಸುವ ತಂದೆಯಂತೆ ದಂಡಿಸುತ್ತೆ, ಪ್ರಜೆಗಳನ್ನು ನೋಯಿಸದೆ, ನೀತಿವಂತನಾಗಿ ರಾಜ್ಯದಲ್ಲಿ ಚೋರಭಯವಿಲ್ಲದಂತೆ ಕಾಪಾಡಿಕೊಳ್ಳುತ್ತೆ ಬಹು ಪ್ರಜಾರಂಜಕನೆನಿಸಿದನು. ಚಂದ್ರಮತಿಯೂ ವಿದ್ಯಾವತಿಯಾದುದರಿಂದ ತಿಳಿವುಳ್ಳವಳಾಗಿ ಗೃಹಕೃತ್ಯನಿರ್ವಹಣಭಾರವನ್ನು ತನ್ನ ಪತಿಗೆ ವಹಿಸದೆ ಸಮರ್ಥೆಯಾಗಿ ತಾನೇ ನಿರ್ವಹಿಸಿಕೊಳ್ಳುತ್ತೆ, ನಿಷ್ಕಾರಣವಾಗಿ ಯಾರಿಗೂ ಯಾವವಿಧವಾದ ಬಾಧೆಯನ್ನೂ ಉಂಟುಮಾಡದೆ ಎಲ್ಲರನ್ನೂ ಸಮದೃಷ್ಟಿಯಿಂದ ನೋಡುತ್ತೆ ಸದ್ಗುಣವತಿಯಾಗಿದ್ದಳು. ದಾಸದಾಸೀಜನರಲ್ಲಿ ಅವಳು ಬಹುದಯೆಯುಳ್ಳವಳಾಗಿ ಅನ್ನಪಾನಾದಿಗಳಲ್ಲಿ ಲೋಪವಿಲ್ಲದೆ ಅವರ ನ್ನೆಲ್ಲ ಸಂರಕ್ಷಿಸುತ್ತಿದ್ದುದರಿಂದ ಭೃತ್ಯವರ್ಗವೆಲ್ಲವೂ ಆಕೆಯ ವಿಷಯದಲ್ಲಿ ತಮ್ಮ ಪ್ರಾಣವನ್ನಾದರೂ ಕೊಡುವುದಕ್ಕೆ ಸಿದ್ಧರಾಗಿದ್ದರು. ಅಷ್ಟು ಕನಿಕರವುಳ್ಳವಳಾದರೂ ಆಕೆ ಯಾವಾಗಲೂ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ಮಾಡದೆ ಬಿಡುತ್ತಿರಲಿಲ್ಲ. ಅವಳಿಗೆ ವಿದ್ಯಾಗರ್ವವಾಗಲೀ ಧನಗರ್ವವಾಗಲೀ ಲೇಶಮಾತ್ರವಾದರೂ ಇರಲಿಲ್ಲ. ನಂಟರ ವಿಷಯದಲ್ಲಿಯೂ ಹಿರಿಯರ ವಿಷಯದಲ್ಲಿಯೂ ಗೌರವವುಳ್ಳವಳಾಗಿ ಅವರು ಮೆಚ್ಚುವಂತೆ ನಡೆದು ಕೊಳ್ಳುತ್ತಿದ್ದಳು. ಕನಿಸಿನಲ್ಲಾದರೂ ಸುಳ್ಳನ್ನಾಡಳು. ಪರಪುರುಷರನ್ನು ಸೋದರರೆಂದೂ ಸ್ತ್ರೀಯರನ್ನು ಒಡಹುಟ್ಟಿದ ಅಕ್ಕತಂಗಿಯರೆಂದೂ ಭಾವಿಸುತ್ತಿದ್ದಳು. ಪರರು ಎಷ್ಟು ಉತ್ತಮ ಸ್ಥಿತಿಯಲ್ಲಿದ್ದರೂ ಅವರನ್ನು ನೋಡಿ ಸಂತೋಷಪಡುತ್ತಿದ್ದಳಲ್ಲದೆ ಅಸೂಯೆಪಡುತ್ತಿರಲಿಲ್ಲ. ಸಮಸ್ತ ಜಂತುಗಳ ವಿಷಯದಲ್ಲಿಯೂ ಕೃಪಾಶೀಲೆಯಾಗಿದ್ದಳು. ಬಡಬಗ್ಗರಿಗೆ ಯಾವಾಗಲೂ ಸಾಹಾಯ್ಯವನ್ನೇ ಮಾಡುತ್ತಿದ್ದಳು. ನಿರಂತರವೂ ತನ್ನನ್ನು ಸನ್ಮಾರ್ಗದಲ್ಲಿಯೇ ಪ್ರವರ್ತಿಸುವಂತೆ ಮಾಡಬೇಕೆಂದು ಭಗವಂತನನ್ನು ಧ್ಯಾನಿಸುತ್ತಿದ್ದಳು. ಅವಕಾಶವೊದವಿದಾಗ ವ್ಯರ್ಥವಾಗಿ ಕಾಲಹರಣೆ ಮಾಡದೆ ಸದ್ರ್ಗಂಥಗಳನ್ನು ಓದುವುದರಲ್ಲಿಯೇ ಕಾಲಕಳೆಯುತ್ತಿದ್ದಳು. ಹೀಗೆ ಕೆಲದಿನಗಳು ಕಳೆದ ಬಳಿಕ ಚಂದ್ರಮತಿಯು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆತ್ತಳು. ಸುಂದರವಾಗಿದ್ದಾ ಮಗುವಿಗೆ ತಾಯ್ತಂದೆಗಳು ಲೋಹಿತಾಸ್ಯನೆಂದು ನಾಮಕರಣ ಮಾಡಿದರು. ಪುತ್ರಜನನದಿಂದ ಆ ದಂಪತಿಗಳಿಗುಂಟಾದ ಸಂತೋಷವು ಅಷ್ಟಿಷ್ಟೆಂದು ಹೇಳಲಳವಲ್ಲ. ಹೀಗೆ ಚ೦ದ್ರಮತಿಯೂ ಹರಿಶ್ಚಂದ್ರನೂ ಸಕಲ ಸುಖಸಾಮ್ರಾಜ್ಯವನ್ನು ಹೊಂದಿ ಸ್ವಲ್ಪ ಕಾಲ ಸುಖವಾಗಿ ಸಂಸಾರಮಾಡಿಕೊಂಡಿದ್ದರು.
ಹನ್ನೊಂದನೆಯ ಪ್ರಕರಣ.
ಮಹರ್ಷಿಗಳೆಲ್ಲರೂ ಒಂದುದಿನ ಸಭೆ ಸೇರಲು ಯಾವಾಗಲೂ ಸತ್ಯಕ್ಕೆ ತಪ್ಪದ ಮಹಾನುಭಾವನಾವನಾದರೂ ಇರುವನೇ ಎಂದು ಅವರವರಲ್ಲಿಯೇ ವಿವಾದವುಂಟಾಯಿತು. ಆಗ ವಸಿಷ್ಠನು ಮಾನವಕೋಟಿಯ ಲೆಲ್ಲ ಆಡಿದಮಾತಿಗೆ ತಪ್ಪದವನು ಹರಿಶ್ಚಂದ್ರನೊಬ್ಬನೇ ಎಂದು ಆತನ ಯೋಗ್ಯತೆಯನ್ನು ಶ್ಲಾಘಿಸಿದನು. ಆತನ ಪ್ರತಿ ಕಕ್ಷಿಯಾದ ವಿಶ್ವಾಮಿತ್ರನು ಈ ಮಾತುಗಳನ್ನು ಕೇಳಿ ಸೈರಿಸಲಾರದೆ, “ಆಃ! ವಿವಿಧ ಮಾಯೋವಾಯಗಳಿಂದ ಶತ್ರುಗಳನ್ನು ವಂಚಿಸಿ ರಾಜ್ಯ ತಂತ್ರವನ್ನು ನಿರ್ವಹಿಸಿಕೊಳ್ಳಬೇಕಾಗಿರುವ ರಾಜರಲ್ಲಿ ಸತ್ಯಸಂಧರೂ ಇರುವರಂತೆ! ಸೂರ್ಯವಂಶಜರಾದ ಅರಸರಮನೆಗೆ ಪುರೋಹಿತನಾದ ನೀನು ಅಕ್ಕಿಬೇಳೆಯ ಆಸೆಗೋಸುಗ ಹೀಗೆ ಹೇಳುತ್ತಿರಬಹುದು! ಹರಿಶ್ಚಂದ್ರನಿಂದ ಸುಳ್ಳಾಡಿಸುವುದೆಷ್ಟರ ಕಾರ್ಯ? ಸಾಕುಸಾಕು, ಸುಮ್ಮನಿರು” ಎಂದು ವಸಿಷ್ಠನನ್ನು ನಿಂದಿಸಿದನು. ಆಗ ವಸಿಷನು ಕೋಪಾಕ್ರಾಂತನಾಗಿ “ಎಲೈ, ವಿಶ್ವಾಮಿತ್ರನೇ! ನೀನು ಸಾವಿರವರ್ಷ ತಲೆಕೆಳಗಾಗಿ ನಿಂತು ತಪಸ್ಸು ಮಾಡಿದರೂ ಹರಿಶ್ಚಂದ್ರನಿಂದ ಅಸತ್ಯವನ್ನಾಡಿಸಲಾರೆ. ಸುಮ್ಮನೇಕೆ ಕೂಗುವೆ?” ಎಂದನು. ವಿಶ್ವಾಮಿತ್ರನು “ನಿಮಿಷಮಾತ್ರದಲ್ಲಿ ನಾನು ಅಸತ್ಯವನ್ನಾಡಿಸದೆ ಬಿಡುವೆನೇ?" ಎಂದನು. ಹೀಗೆ ಈರ್ವರೂ ಪಂತಗಟ್ಟಿ ತಮ್ಮಲ್ಲಿ ಗೆದ್ದವರಿಗೆ ಸೋತವರು ತಾವು ಅದುವರೆಗೂ ಮಾಡಿದ ತಪಸ್ಸನ್ನೆಲ್ಲ ಧಾರಾಪೂರ್ವಕವಾಗಿ ಕೊಟ್ಟು ಹೊರಟುಹೋಗುವುದೆಂದು ನಿಷ್ಕರ್ಷಿಸಿ, ತಂತಮ್ಮ ಆಶ್ರಮಗಳಿಗೆ ಹೊರಟುಹೋದರು.
ಕೆಲದಿನಗಳು ಕಳೆದಬಳಿಕ ಹರಿಶ್ಚಂದ್ರನು ಒಂದು ಯಾಗವನ್ನು ಮಾಡಿ ಭೂರಿದಕ್ಷಿಣೆಗಳನ್ನು ಕೊಡುವನೆಂದು ಕೇಳಿ ವಿಶ್ವಾಮಿತ್ರನು ಅಯೋಧ್ಯೆಗೆ ಬಂದು, ಸಭಾಮಂಟಪದಲ್ಲಿ ಸುಖಾಸೀನನಾಗಿದ್ದ ಹರಿಶ್ಚಂದ್ರನನ್ನು ಕಂಡನು. ಆಗ ಹರಿಶ್ಚಂದ್ರನು ಈ ಮಹರ್ಷಿಯನ್ನು ದೂರದಿಂದಲೇ ಕಂಡು ಮಹಾತ್ಮನು ಬರುತ್ತಿರುವನೆಂದು ಸಿಂಹಾಸನವನ್ನು ಬಿಟ್ಟು ಕೆಳಗೆ ಬಂದು ಆತನಿಗೆ ಅರ್ಘ್ಯವಾದ್ಯಾದಿಗಳನ್ನು ಕೊಟ್ಟು ಕರೆತಂದು ಯೋಗ್ಯವಾದ ಪೀಠದಲ್ಲಿ ಕುಳ್ಳಿರಿಸಿ ಕುಶಲಪ್ರಶ್ನೆಯನ್ನು ಮಾಡಿದನು. ವಿಶ್ವಾಮಿತ್ರನೂ ಆತನೊಡನೆ ಸ್ವಲ್ಪ ಕಾಲ ಸಂಭಾಷಿಸಿ, ತಾನೊಂದು ಯಜ್ಞವನ್ನು ಮಾಡಬೇಕಾಗಿರುವುದೆಂದೂ, ಅದಕ್ಕೆ ಬೇಕಾಗುವಷ್ಟು ಧನವನ್ನು ಕೊಟ್ಟು ಯಜ್ಞಫಲವನ್ನು ಹೊಂದಬೇಕೆಂದೂ ಹರಿಶ್ಚಂದ್ರನೊಡನೆ ಹೇಳಿದನು. ರಾಜನು ಅದಕ್ಕೆ ಮರುಮಾತಾಡದೆ ಯಜ್ಞಕ್ಕೆ ಬೇಕಾಗುವಷ್ಟು ಧನವನ್ನೆಲ್ಲ ತಾನು ಕೊಡುವೆನೆಂದು ವಾಗ್ದಾನವನ್ನು ಮಾಡಲು, ಅಪರಿಮಿತವಾದ ಧನವನ್ನು ಆತನಿಂದ ತೆಗೆದುಕೊಂಡು, ತಾನು ತಿರುಗಿ ಬಂದು ಕೇಳುವವರೆಗೂ ಅವನ್ನೆಲ್ಲ ರಕ್ಷಿಸಿಕೊಂಡಿರಬೇಕೆಂದು ಹೇಳಿ ಆ ಹಣವನ್ನೆಲ್ಲ ಅಲ್ಲಿಯೇ ಇಟ್ಟು ಹರಿಶ್ಚಂದ್ರನನ್ನೊಪ್ಪಿಸಿ ಹೊರಟುಹೋದನು.
ಒಂದೆರಡು ದಿನಗಳಾದ ಬಳಿಕ ಅರಣ್ಯ ಪ್ರಾಂತಗಳಲ್ಲಿರುವ ಗ್ರಾಮಸ್ದರೆಲ್ಲರೂ ಒಟ್ಟಾಗಿ ಬಂದು ಒಡ್ಡೋಲಗದಲ್ಲಿರುವ ಹರಿಶ್ಚಂದ್ರನನ್ನು ಕಂಡು "ಎಲೈ, ಮಹಾಪ್ರಭುವೇ! ನಮ್ಮ ಗ್ರಾಮಗಳಲ್ಲಿ ದುಷ್ಟ ಮೃಗಗಳ ಬಾಧೆಯು ಸಹಿಸಲಸಾಧ್ಯವಾಗಿರುವುದು. ಅವುಗಳನ್ನು ಸಂಹರಿಸಿ, ನಮ್ಮನ್ನೂ ನಮ್ಮ ಬೆಳೆಗಳನ್ನೂ ಸಂರಕ್ಷಿಸಬೇಕು” ಎ೦ದು ಮೊರೆಯಿಟ್ಟರು. ಹರಿಶ್ಚಂದ್ರನು ಅವರ ಮೊರೆಯನ್ನು ಕೇಳಿ ಅಭಯವನ್ನು ಕೊಟ್ಟು ಎಲ್ಲರನ್ನೂ ಕಳುಹಿಸಿ, ಬಲೆ ಬೋನು ಮೊದಲಾದ ಸಾಧನಗಳೊಡನೆ ಬೇಟೆಯ ನಾಯಿಗಳನ್ನು ಸಂಗಡ ಬಿಟ್ಟುಕೊಂಡು ಬರಬೇಕೆಂದು ಬೇಟೆಗಾರರಿಗಾಜ್ಞಾಪಿಸಿ, ವಿನೋದವನ್ನು ನೋಡಲೋಸುಗ ಪತ್ನಿಯನ್ನೂ ಪುತ್ರನನ್ನೂ ಕರೆದುಕೊಂಡು ತಾನೂ ಬೇಟೆಗೆ ಹೊರಟನು.
ಹೀಗೆ ಮೃಗಯಾವಿಹಾರಾರ್ಥಿಯಾಗಿ ಹೋಗಿ ಹರಿಶ್ಚಂದ್ರನು ಹುಲಿಗಳನ್ನೂ ಕಾಡುಹಂದಿಗಳನ್ನೂ ಚಿರತೆಗಳನ್ನೂ ಕೊಂದು, ನಾನಾವಿಧ ಮೃಗಗಳನ್ನು ಆ ಬೇಟೆಗಾರರಿಗೆ ಬಹುಮಾನವನ್ನಾಗಿ ಕೊಟ್ಟು ಕಳುಹಿಸಿ ಸಮುಚಿತಪರಿವಾರದೊಡನೆ ಹೊರಟು ಒಂದು ದೊಡ್ಡ ಗುಡಾರವನ್ನು ಹಾಕಿಸಿ, ವನಸಂಚಾರದಿಂದ ಬಳಲಿದ್ದವನಾದುದರಿಂದ ಆ ಹೊತ್ತು ಅಲ್ಲಿಯೇ ನಿಂತು ಪತ್ನಿ ಪುತ್ರರೊಡನೆ ಸುಖಿಸುತ್ತಿದ್ದನು. ಪತ್ನಿಯು ಯೋಗ್ಯಳಾದರೆ ಪತಿಗೆ ಮಹಾರಣ್ಯವಾದರೂ ದಿವ್ಯಭವನವಾಗಿ ತೋರುವುದೂ, ಪತ್ನಿಯು ಅಯೋಗ್ಯಳಾಗಿದರೆ ಪತಿಗೆ ಸುಂದರವಾದ ಭವನವೂ ಮಹಾರಣ್ಯವಾಗಿ ತೋರುವುದೂ ಸಹಜವೇ ಅಲ್ಲವೇ? ಹರಿಶ್ಚಂದ್ರನು ಪತ್ನಿಯೊಡನೆ ವಿನೋದವಾಗಿ ಸಲ್ಲಾಸಮಾಡುತ್ತಿರುವಾಗ, ಲೋಹಿತಾಸ್ಯನು ಸಮಾಜದಲ್ಲಿ ಆಡಿಕೊಳ್ಳುತ್ತೆ ದೂರದಲ್ಲಿದ್ದ ಒಂದು ಹುಲ್ಲೆಯಮರಿಯನ್ನು ಕಂಡು ಅದನ್ನು ತಂದುಕೊಡೆಂದು ತಂದೆಯನ್ನು ಕೇಳಿದನು. ಹರಿಶ್ಚಂದ್ರನು ತತ್ ಕ್ಷಣವೇ ಎದ್ದು ಹುಲ್ಲೆಯ ಮರಿಯನ್ನು ಸಜೀವವಾಗಿಯೇ ತಂದುಕೊಡ ಬೇಕೆಂಬ ಅಭಿಪ್ರಾಯದಿಂದ ಬಿಲ್ಲನ್ನೂ ಬಾಣಗಳನ್ನೂ ಧರಿಸಿ ಅದನ್ನು ಬೆನ್ನಟ್ಟಿದನು. ಅದು ಬೆದರಿ ಮಹಾವೇಗದಿಂದ ಓಡುತ್ತೆ ಆತನನ್ನು ಬಹುದೂರಕ್ಕೆ ಕರೆದುಕೊಂಡು ಹೋಗಿ ಕಡೆಗೆ ವಿಶ್ವಾಮಿತ್ರನ ಆಶ್ರಮಕ್ಕೆ ನುಗ್ಗಲು ಹರಿಶ್ಚಂದ್ರನು ಬೇಸರಗೊಂಡು ಬಿಲ್ಲಿಗೆ ಬಾಣವನ್ನು ಹೂಡಿ ಅದನ್ನು ಪ್ರಯೋಗಿಸಿದನು. ಆದರೆ ಹುಲ್ಲೆಯಮರಿಯು ಅದನ್ನು ತಪ್ಪಿಸಿಕೊಂಡು ಅದೃಶ್ಯವಾಯಿತು. ಹರಿಶ್ಚಂದ್ರನು ಬಿಸಿಲಿನಲ್ಲಿ ಓಡಿ ಬಲುಬಳಲಿದ್ದುದರಿಂದ ದಾಹಗೊಂಡು ಸಮೀಪದಲ್ಲಿದ್ದ ಒಂದು ಸರೋವರದಲ್ಲಿ ಜಲವಾನಮಾಡಿ ತೀರದಲ್ಲಿದ್ದ ಒಂದು ವಟವೃಕ್ಷದ ನೆಳಲಿನಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಿದನು. ಇಷ್ಟರಲ್ಲಿ ಮಂತ್ರಿಯಾದ ಸತ್ಯಕೀರ್ತಿಯೂ ಚಂದ್ರಮತಿಯ ಸಪರಿವಾರರಾಗಿ ಲೋಹಿತಾಸ್ಯನನ್ನು ಕರೆದುಕೊಂಡು ಅಲ್ಲಿಗೆ ಬಂದರು.
ಹರಿಶ್ಚಂದ್ರನು ವಿಶ್ರಮಿಸಿಕೊಳ್ಳುತ್ತಿರುವುದನ್ನು ವಿಶ್ವಾಮಿತ್ರನ ವನ ಬಾಲಕಿಯರಾದ ಇಬ್ಬರು ಮಾತಂಗತರುಣಿಯರು ಕಂಡು ಆತನಿಂದ ಏನಾದರೂ ವಸ್ತ್ರಾಭರಣಗಳನ್ನು ಉಚಿತವಾಗಿ ತೆಗೆದುಕೊಂಡು ಬರಬೇಕೆಂದು ಹರಿಶ್ಚಂದ್ರನ ಬಳಿಗೆ ಬಂದು ತಮ್ಮ ಸಾಮರ್ಥ್ಯವನ್ನೆಲ್ಲ ತೋರಿಸಿ ಇಂಪಾಗಿ ಹಾಡತೊಡಗಿದರು. ಅವರ ಗಾನವು ಆಹ್ಲಾದಕರವಾಗಿದುದರಿಂದ ಅರಸನು ಸ್ವಲ್ಪ ಕಾಲ ಅದನ್ನು ಕೇಳುತ್ತಿದ್ದು ಅವರಿಗೆ ತಕ್ಕ ಬಹು ಮಾನವನ್ನು ಕೊಟ್ಟು ಹೋಗಿರೆಂದು ಹೇಳಿದನು. ಆ ತರುಣಿಯರಾದರೋ ಅರಸನ ದಿವ್ಯಸುಂದರವಾದ ರೂಪವನ್ನು ಕಂಡು ಕಾಮ ಪರವಶೆಯರಾಗಿ ಮೈ ಮರೆತು ಉಚಿತಾನುಚಿತವಿವೇಕವಿಲ್ಲದೆ ಆ ಹಣವನ್ನು ತೆಗೆದುಕೊಳ್ಳದೆ ಆತನ ಸಂಗವನ್ನು ಹೊಂದುವ ಇಚ್ಛೆಯಲ್ಲದೆ ಮತ್ತೆ ಬೇರೆ ಯಾವ ಇಚ್ಛೆಯೂ ಇಲ್ಲವೆಂದೂ, ತಮ್ಮ ಮನೋರಥವನ್ನು ಪೂರ್ತಿಗೊಳಿಸಿ ತಮ್ಮನ್ನು ಕಾಪಾಡಬೇಕೆಂದೂ ಲಜ್ಜೆಯಿಲ್ಲದೆ ಕೇಳಿಕೊಂಡರು. ಇಂತಹ ಅನುಚಿತವಾದ ಪ್ರಾರ್ಥನೆಯನ್ನು ಕೇಳಿ ಅರಸನಿಗೆ ಅವರಮೇಲೆ ಆಗ್ರಹವುಂಟಾಗಲು ಆತನು ಅವರನ್ನು ಕೋಪದೃಷ್ಟಿಯಿಂದ ನೋಡುತ್ತೆ ತತ್‌ಕ್ಷಣವೇ ಅಲ್ಲಿಂದ ಹೊರಟುಹೋಗಿರೆಂದು ಗರ್ಜಿಸಿದನು. ಆ ಸ್ತ್ರೀಯರು ಆಗಲೂ ತಮ್ಮ ಚಲವನ್ನು ಬಿಡದೆ ತಮ್ಮ ಮನೋರಥವನ್ನು ಪೂರ್ತಿಮಾಡಿದಲ್ಲದೆ ಅಲ್ಲಿಂದ ಹೊರಡುವುದಿಲ್ಲವೆಂದು ಹೇಳಿದರು. ಆಗ ಅರಸನು ಕೋಪವನ್ನು ಸೈರಿಸಲಾರದವನಾಗಿ ತುಚ್ಛ ರಾದ ಆ ಯುವತಿಯರನ್ನು ಹೊಡೆದು ನೂಕುವಂತೆ ಭಟರಿಗಾಜ್ಞಾಪಿಸಿ ದನು. ಸೇವಕರು ತತ್‌ಕ್ಷಣವೇ ಸ್ವಾಮಿಯಾಜ್ಞೆಯನ್ನು ಶಿರಸಾವಹಿಸಿ ಆ ಸ್ತ್ರೀಯರನ್ನು ಚಮ್ಮಟಗೆಗಳಿಂದ ಹೊಡೆಯಲು, ಕರುಣಾಶೀಲೆಯಾದ ಚಂದ್ರಮತಿಯು ಒಳ್ಳೆಯ ಮಾತುಗಳಿಂದ ಹರಿಶ್ಚಂದ್ರನ ಕೋಪವನ್ನು ಶಾಂತಗೊಳಿಸಿ ಆ ಸ್ತ್ರೀಯರನ್ನು ಬಿಡಿಸಿ ಕಳುಹಿಸಿದಳು. ಆ ಮಾತಂಗ ಕನ್ಯೆಯರು ಕಣ್ಣೀರುಸುರಿಸುತ್ತೆ ತಲೆಯನ್ನು ಕೆದರಿಕೊಂಡು ಸೆರಗನ್ನು ಜಾರಿಸಿ ಗಟ್ಟಿಯಾಗಿ ಅಳುತ್ತೆ ವಿಶ್ವಾಮಿತ್ರನ ಆಶ್ರಮಕ್ಕೆ ಹೋದರು. ಹರಿಶ್ಚಂದ್ರನು ದುಡುಕಿ ಅವರನ್ನು ಹೊಡೆಯಿಸಿದುದಕ್ಕೋಸುಗ ಪಶ್ಚಾತ್ತಾಪ ಪಡುತ್ತೆ, ಪತ್ನಿಯ ಹಿತವಚನಗಳಿಂದ ಸಂತುಷ್ಟನಾಗಿ ಪುತ್ರಾದಿಗಳೊ ಡನೆ ವಿನೋದವಾಗಿದ್ದನು.
ಹನ್ನೆರಡನೆಯ ಪ್ರಕರಣ.
ಅನಂತರ ಮಾತಂಗಯುವತಿಯರು ವಿಶ್ವಾಮಿತ್ರನ ಆಶ್ರಮವನ್ನು ಪ್ರವೇಶಿಸಿ ಶೀತಲವಾದ ಮಂದಮಾರುತಕ್ಕೆ ಮೈಯೊಡ್ಡಿ ಕುಳಿತಿದ್ದ ವಿಶ್ವಾಮಿತ್ರನಿಗೆ ನಮಸ್ಕರಿಸಿ, ತಮಗೆ ಹರಿಶ್ಚಂದ್ರನು ಮಾಡಿದ ಅಪಮಾನವನ್ನು ಅತಿ ದೈನ್ಯದಿಂದ ವಿಜ್ಞಾಪಿಸಿ ಸೊರಸೊರನೆ ಅಳತೊಡಗಿದರು. ಆತನಾ ಸ್ತ್ರೀಯರ ಪ್ರಲಾಪವನ್ನು ಕೇಳಿ ಸಿರಿದ ಹಾವಿನಂತೆ ಎದ್ದು ನಿಂತು, ತತ್‌ಕ್ಷಣವೇ ತನ್ನ ಶಿಷ್ಯರನ್ನೆಲ್ಲ ಕರೆದುಕೊಂಡು ದಾರಿಯುದ್ದಕ್ಕೂ ಪರುಷೋಕ್ತಿಗಳನ್ನೇ ಆಡುತ್ತೆ ಹರಿಶ್ಚಂದ್ರನ ಬಳಿಗೆ ಹೋದನು. ಹರಿಶ್ಚಂದ್ರನು ಈ ಮಹರ್ಷಿಯನ್ನು ದೂರದಿಂದಲೇ ನೋಡಿ ತನ್ನ ಹೆಂಡತಿಯೊಡನೆ ಸಮಾಸಕ್ಕೆ ಬಂದು ನಮಸ್ಕರಿಸಲು, ವಿಶ್ವಾಮಿತ್ರನು ಆತನ ನಮಸ್ಕಾರವನ್ನು ಪರಿಗ್ರಹಿಸದೆ ಕೆಂಡವನ್ನು ಗುಳುತ್ತಿರುವ ದೃಷ್ಟಿಯಿಂದ ನೋಡಿ ಇಂತೆಂದನು:ವಿಶ್ವಾ-ಎಲಾ! ನೃಪಾಧಾಮನೇ! ಪೂರ್ವದಲ್ಲಿ ರಾಜರು ಬೇಟೆಯಾಡುವುದಕ್ಕೆ ಎಂದೂ ಬಂದಿರಲಿಲ್ಲವೆ? ಅವರೆಂದಾದರೂ ನಿನ್ನಂತ ಋಷ್ಯಾಶ್ರಮಗಳಿಗೆ ಬಾಧೆಯನ್ನುಂಟುಮಾಡಿರುವರೇ? ಹೀಗೆ ನೀನು ನನ್ನ ತಪೋವನಗಳನ್ನು ಪ್ರವೇಶಿಸಿ ಆಶ್ರಮಮೃಗಗಳಿಗೆ ನಿಷ್ಕಾರಣವಾಗಿ ಬಾಧೆಯನ್ನುಂಟುಮಾಡಿದುದಲ್ಲದೆ ನನ್ನ ವಿಷಯದಲ್ಲಿ ಮಹಾಪರಾಧವನ್ನೇ ಮಾಡಿರುವೆ. ಇದೂ ಅಲ್ಲದೆ ಹೆತ್ತ ಮಕ್ಕಳಂತೆ ನಾವು ನೋಡುತ್ತಿರುವ ಈವುದ್ಯಾನವಾಲಕಿಯರು ನೀನೇನೋ ಮಹೋದಾರಿಯೆಂದು ತಿಳಿದು ನಿನ್ನನ್ನು ಯಾಚಿಸುವುದಕ್ಕೆ ಬಂದಾಗ ಅವರನ್ನು ನಿಷ್ಕಾರಣವಾಗಿ ಹೊಡೆಯಿಸಿ ಘೋರಪಾತಕವನ್ನು ಸ೦ಗಳಿಸಿಕೊಂಡೆ. ಇಂತಹ ನಿನ್ನನ್ನೇನು ಮಾಡಿದರೂ ಪಾಪಬಾರದು!
ಹರಿ--ಸ್ವಾಮಿಾ! ತಿಳಿದೋ ತಿಳಿಯದೆಯೋ ನಾನು ತಮ್ಮ ವಿಷಯದಲ್ಲಿ ಅಪರಾಧವನ್ನು ಮಾಡಿ ತಮ್ಮ ಆಗ್ರಹಕ್ಕೆ ಪಾತ್ರನಾದೆನು. ಹಾಗಿದ್ದರೂ ಶರಣಾಗತರಕ್ಷಕರಾದ ತಾವು ಮರೆಹೊಕ್ಕಿರುವ ನನ್ನನ್ನು ಕಾಪಾಡಬೇಕೆಂದು ಬೇಡಿಕೊಳ್ಳುವೆನು. ಹಾಲಿನಲ್ಲಿ ಮುಳುಗಿಸಿದರೂ ನೀರಿನಲ್ಲಿ ಮುಳುಗಿಸಿದರೂ ಅನುಗ್ರಹಾಗ್ರಹಗಳು ತಮಗೇ ಸೇರಿದುದಾಗಿರುವುವು.
ವಿಶ್ವಾ-ನಿಶ್ಚಯವಾದ ಅನುತಾಪವುಳ್ಳವನಾಗಿ ನೀನು ಬಹುದೀನತ್ವದಿಂದ ಬೇಡಿಕೊಳ್ಳುತ್ತಿರುವೆಯಾದಕಾರಣ ನೀನು ಮಾಡಿರುವ ಆ ಕ್ರೂರ ಕಾರ್ಯವನ್ನು ಕ್ಷಮಿಸಿರುವೆವು. ಇನ್ನು ನೀನು ನಮ್ಮ ಮಾತನ್ನು ಕೇಳಿ ನಮಗೆ ಪುತ್ರಿಕಾಪ್ರಾಯರಾದೀ ಈರ್ವರನ್ನೂ ಪಾಣಿಗ್ರಹಣ ಮಾಡಿಕೋ.
ಹರಿ-ನನಗಿರುವ ರಾಜ್ಯ ಸಂಪತ್ತುಗಳನ್ನೆಲ್ಲ ಕೊಡೆಂದರೂ ಕೊಡುವೆನಲ್ಲದೆ ಅಗ್ನಿಸಾಕ್ಷಿಕವಾಗಿ ಮದುವೆಯಾದ ಧರ್ಮಪತ್ನಿಯನ್ನು ಅಧರ್ಮ ಮಾರ್ಗಾವಲಂಬನೆಯಿಂದ ತ್ಯಜಿಸಿ ಚಂಡಾಲಸ್ತ್ರೀಯರನ್ನು ವರಯಿಸಲಾರೆನು.
ವಿಶ್ವಾ-ಹಾಗಾದರೆ ನೀನು ಆಡಿದ ಮಾತಿಗೆ ತಪ್ಪದವನಾದುದರಿಂದ ನಿನ್ನ ರಾಜ್ಯವನ್ನೂ ಐಶ್ವರ್ಯವನ್ನೂ ನನಗೆ ಕೊಟ್ಟು ಉಟ್ಟ ಬಟ್ಟೆಯೊಂದರೊಡನೆ ಪತ್ನೀ ಪುತ್ರಸಮೇತನಾಗಿ ಹೊರಟುಹೋಗು:ಎಂದು ವಿಶ್ವಾಮಿತ್ರನು ನುಡಿದ ತತ್‌ಕ್ಷಣವೇ ಹರಿಶ್ಚಂದ್ರನು ತನ್ನ ಹೆಂಡತಿಯೇನೆನ್ನುವಳೋ ಎಂಬ ಅಭಿಪ್ರಾಯದಿಂದ ಆಕೆಯ ಕಡೆಗೆ ತಿರುಗಲು, ಚಂದ್ರಮತಿಯು ಆಡಿದಮಾತಿಗೆ ತಪ್ಪಿ ಅಪಕೀರ್ತಿಯನ್ನು ಹೊಂದುವುದಕ್ಕಿಂತ ಸಮಸ್ತ ರಾಜ್ಯವನ್ನೂ ವಿಶ್ವಾಮಿತ್ರನಿಗೆ ಧಾರೆಯೆರೆದುಕೊಟ್ಟು ಹೊರಟು ಹೋಗುವುದೇ ಯುಕ್ತವೆಂದೆಣಿಸಿ ಪತಿಯ ಅಭಿಪ್ರಾಯಕ್ಕೆ ಅನುಗುಣವಾಗಿ ಪ್ರೋತ್ಸಾಹವಚನಗಳನ್ನಾಡಿದಳು. ಒಡನೆಯೇ ರಾಜನು ಸರ್ವಧನವನ್ನೂ ಸರ್ವರಾಜ್ಯವನ್ನೂ ವಿಶ್ವಾಮಿತ್ರನಿಗೆ ಧಾರಾಪೂರ್ವಕವಾಗಿ ದಾನಮಾಡಿ, ತರುವಾಯ ರಾಜಧಾನಿಗೆ ಬಂದು ನಡೆದ ವರ್ತಮಾನವನ್ನೆಲ್ಲ ಮಂತ್ರಿಗಳಿಗೆ ತಿಳಿಸಿ, ವಿಶ್ವಾಮಿತ್ರನ ಆಜ್ಞೆಗಧೀನರಾಗಿರತಕ್ಕುದೆಂದು ಅವರಿಗೆಲ್ಲ ಹೇಳಿ, ಪೌರರೆಲ್ಲರೂ ಒಟ್ಟುಗೂಡಿ ಬ೦ದು ಈ ವೃತ್ತಾಂತದಿಂದ ದುಃಖಿತರಾಗಿ "ನಮ್ಮನ್ನೆಲ್ಲ ಯಾರಿಗೆ ಒಪ್ಪಿಸಿ ಹೋಗುವೆ?" ಎಂದು ಕೇಳುತ್ತಿರಲು ಅವರನ್ನೆಲ್ಲ ಸಂತನಿಸಿ ಹಿಂದಕ್ಕೆ ಕಳುಹಿ, ಪತ್ನೀಪುತ್ರರಿಂದೊಡಗೂಡಿ ಉಟ್ಟಬಟ್ಟೆಯೊಂದರೊಡನೆ ಹೊರಟನು. ಇಷ್ಟರಲ್ಲಿ ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಕರೆತರುವಂತೆ ಶಿಷ್ಯರಿಗಾಜ್ಞಾಪಿಸಲು ಅವರು ಅವನನ್ನು ಕರೆದುಕೊಂಡು ಹೋದರು. ವಿಶ್ವಾಮಿತ್ರನು ಆಗಳಾ ಹರಿಶ್ಚಂದ್ರನನ್ನು ಕುರಿತು "ಎಲೈ! ಯಜ್ಞಕ್ಕೋಸುಗ ನಾನು ಪೂರ್ವದಲ್ಲಿ ನಿನ್ನನ್ನು ಯಾಚಿಸಿ ಪಡೆದು ನಿನ್ನ ಬಳಿಯಲ್ಲಿಯೇ ಇಟ್ಟಿದ್ದ ಧನವನ್ನೂ ಕೊಟ್ಟು ಹೋಗು" ಎಂದು ನಿರ್ಬ೦ಧಪಡಿಸಿದನು. ಹರಿಶ್ಚಂದ್ರನಾ ವಿಶ್ವಾಮಿತ್ರನನ್ನು ಕುರಿತು "ಎಲೈ, ಮುನಿಶ್ರೇಷ್ಠನೇ! ಮೂವತ್ತು ದಿನಗಳ ಅವಕಾಶವನ್ನಿತ್ತರೆ ಅದನ್ನೂ ಸಮರ್ಪಿಸುವೆನು" ಎಂದು ಹೇಳಲು, ಆ ಋಷಿಯು ಅದಕ್ಕೆ ಸಮ್ಮತಿಸಿ, ಪರಮ ಧೂರ್ತಾಗ್ರಗಣ್ಯನಾದ ನಕ್ಷತ್ರಕನೆಂಬ ಶಿಷ್ಯನೊಬ್ಬನನ್ನು ಕರೆದು" ಎಲಾ, ನಕ್ಷತ್ರಕಾ! ನಮ್ಮ ಗಡುಬದೊಳಗಾಗಿ ಹಣವನ್ನು ಕೊಡುವವರೆಗೂ ನೀನೀ ಕ್ಷತ್ರಿಯನೊಡನಿದ್ದು ನಿನ್ನ ಬಹುಮಾನದೊಡನೆ ನಮ್ಮ ಹಣವನ್ನು ಭದ್ರವಾಗಿ ತೆಗೆದುಕೊಂಡು ಬಾ" ಎಂದು ಹೇಳಿ ಚಂದ್ರಮತೀಹರಿಶ್ಚಂದ್ರರೊಡನೆ ಕಳುಹಿಸಿದನು.
ಹರಿಶ್ಚಂದ್ರನು ಕಾಶೀಪಟ್ಟಣಕ್ಕೆ ಹೋಗಬೇಕೆಂದು ಭಾರ್ಯಾಪುತ್ರರೊಡನೆ ಹೊರಟು, ಅರಣ್ಯ ಮಾರ್ಗದಲ್ಲಿ ಪ್ರಯಾಣಮಾಡುತ್ತಿರಲು, ನಕ್ಷತ್ರಕನು ಕಪಟಸಂಕಟವನ್ನು ಸೂಚಿಸಿ ನರಲುತ್ತೆ ನಡುನಡುವೆ ಕುಳಿತುಕೊಳ್ಳುತ್ತೆ ತನ್ನ ಕಾಲು ನೋಯುತ್ತಿರುವುದೆಂದೂ, ನಾಲಗೆಯೊಣಗಿ ಹೋಗುತ್ತಿರುವುದೆಂದೂ ಹೇಳಿಕೊಂಡು ಹಲವು ಬಗೆಯಾಗಿ ಅವರನ್ನು ನಿಂದಿಸುತ್ತೆ, ಕಾಲುಗಳನ್ನೊತ್ತಬೇಕೆಂದೂ, ಒಳ್ಳೆಯ ನೀರನ್ನು ತಂದುಕೊಡಬೇಕೆಂದೂ, ಬಹುವಾಗಿ ಪೀಡಿಸತೊಡಗಿದನು. ಆದ೦ಪತಿಗಳಾತನ ಹಿಂಸೆಯನ್ನು ಸೈರಿಸಿಕೊಂಡಿದು ತಮ್ಮ ಕಷ್ಟವನ್ನು ಪರಿಗಣಿಸದೆ ಅವನನ್ನು ಉಪಚರಿಸತೊಡಗಿದರು. ಹೀಗೆಯೇ ಮುಂದೆಹೋಗುತ್ತೆ ಭೇತಾಳವಟವೆಂಬ ಒಂದು ಆಲದಮರದಬಳಿಗೆ ಹೋಗಿ ಆ ರಾತ್ರಿ ಅಲ್ಲಿಯೇ ವಿಶ್ರಮಿಸಿಕೊಳ್ಳಬೇಕೆಂದು ನಿಶ್ಚಯಿಸಿ, ನಕ್ಷತ್ರಕನಿಗೆ ಚಿಗುರಿನಲ್ಲಿ ಒಂದು ಹಾಸಿಗೆಯನ್ನು ಕಲ್ಪಿಸಿಕೊಟ್ಟು ತಾವು ಆ ಕಲ್ಲುನೆಲದಮೇಲೆಯೇ ಒಂದು ಬಟ್ಟೆಯನ್ನು ಹಾಸಿ ಮಲಗಿದರು. ಅತ್ಯಾಯಾಸಗೊಂಡಿದ್ದರಾದುದರಿಂದ ಚಂದ್ರಮತಿಯೂ ನಕ್ಷತ್ರಕನೂ ಜಾಗ್ರತೆಯಾಗಿ ನಿದ್ರೆಗೊಳಗಾದರು. ಹರಿಶ್ಚಂದ್ರನಾದರೋ ಮನಸ್ತಾಪದಿಂದ ನಿದ್ರೆಯಿಲ್ಲದೆ, ಕತ್ತಲೆಯಾಗಿದ್ದುದರಿಂದ ಖಡ್ಗವನ್ನು ಹಿಡಿದುಕೊಂಡು ಅವರಿಗೆ ಕಾವಲಾಗಿದನು. ಸುತ್ತಮುತ್ತ ವಾಸವಾಗಿದ್ದ ಕಳ್ಳರಲ್ಲೊಬ್ಬನು ಅವರನ್ನು ಕಂಡು, ಆಲದಮರದ ಅಡಿಯಲ್ಲಿ ಮಾರ್ಗಸ್ಥರಾರೋ ಮಲಗಿರುವರೆಂದು ತನ್ನ ಸಮೂಹಕ್ಕೆ ತಿಳಿಸಲು ಅವರೆಲ್ಲರೂ ಒಂದುಗೂಡಿ ಬಂದು ಬಟ್ಟೆ ಬರೆಗಳನ್ನು ಅಪಹರಿಸಬೇಕೆಂದು ಪ್ರಯತ್ನಿಸಿದರು. ಹರಿಶ್ಚಂದ್ರನು ಆ ದಾರಿಹೋಕರನ್ನು ದೂರದಲ್ಲಿಯೇ ನೋಡಿ, ಅವರ ಉದ್ದೇಶವನ್ನೂಹಿಸಿ, ಅವರನ್ನಿದಿರಿಸಿ ಹೋರಾಡಿ ಅವರಲ್ಲಿ ಕೆಲವರನ್ನು ಸಂಹರಿಸಿಯೂ, ಕೆಲವರನ್ನು ಗಾಯವಡೆಯಿಸಿಯೂ ಓಡಿಸಿಬಿಟ್ಟನು. ಸ್ವಲ್ಪ ಹೊತ್ತಿನೊಳಗಾಗಿ ಮೇಘಗಳೆಲ್ಲ ಒಟ್ಟುಗೂಡಿ ಕೊಪ್ಪರಿಗೆಗಳಿ೦ದ ಸುರಿದಂತೆ ದೊಡ್ಡ ಮಳೆಯನ್ನು ಕರೆಯಲು ನಕ್ಷತ್ರಕನು ಕಟಕ್ಕನೆ ಬೆಚ್ಚಿ ಎದ್ದನು. ಹರಿಶ್ಚಂದ್ರನೂ ಚಂದ್ರಮತಿಯೂ ಆತನನ್ನು ಧೈರ್ಯಗೊಳಿಸಿ, ಗಿಡದ ಬುಡದಲ್ಲಿ ಮಲಗಿಸಿ ತಮ್ಮ ಬಟ್ಟೆಗಳನ್ನು ಆತನಿಗೆ ಹೊದೆಯಿಸಿ, ಒಬ್ಬೊಬ್ಬರು ಸ್ವಲ್ಪ ಸ್ವಲ್ಪ ಕಾಲ ಲೋಹಿತಾಸ್ಯನನ್ನು ನನೆಯದಂತೆ ಎತ್ತಿ ಕೊಳ್ಳುತ್ತೆ ಮಳೆಯಲ್ಲಿ ನೆನೆಯುತ್ತೆ ಬೆಳಕು ಹರಿಯುವವರೆಗೂ ಬಹು ಶ್ರಮಪಟ್ಟರು. ಮತ್ತೊಂದುದಿನ ಪ್ರಯಾಣವು ಅರ್ಧಕಳೆದಿರುವಾಗ ನಕ್ಷತ್ರಕನು ಮಾರ್ಗದಲ್ಲಿ ಮಲಗಿಬಿಟ್ಟು, ತಾನು ಇನ್ನು ಮುಂದೆ ಬರಲಾರೆನೆಂದೂ, ಬಲು ಬಾಯಾರಿಕೆಯುಂಟಾಗಿರುವುದೆಂದೂ ಚಲವಿಡಿದು ಕುಳಿತನು. ಆ ರಾಜದಂಪತಿಗಳು ತಮ್ಮ ಪುತ್ರನನ್ನು ಕೆಳಗಿಳಿಸಿ ನಡೆಯಿಸುತ್ತ ಈ ನಕ್ಷತ್ರಕನನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ಮುಂದೆ ಹೊರಟು ತಣ್ಣೆಳಲಿಂದ ಮನೋಹರವಾದ ಒಂದು ಆಲದ ಮರದ ಕೆಳಗೆ ಮಲಗಿಸಿದರು. ಆಗ ಚಂದ್ರಮತಿಯು ತನ್ನ ಸೆರಗಿನಿಂದ ನಕ್ಷತ್ರಕನಿಗೆ ಗಾಳಿಹಾಕುತ್ತ ಉಪಚರಿಸುತ್ತಿರಲು, ಹರಿಶ್ಚಂದ್ರನು ನಕ್ಷತ್ರಕನಿಗೋಸುಗ ಸಿಹಿನೀರನ್ನು ತರಬೇಕೆಂದು ಎಲ್ಲಿಯೋ ಹೊರಟುಹೋದನು. ಬಳಿಕ ನಕ್ಷತ್ರಕನು ಎದ್ದು ಕುಳಿತುಕೊಂಡು ಚಂದ್ರಮತಿಯೊಡನೆ ಪ್ರಸಂಗಿಸಲಾರಂಭಿಸಿದನು.
ನಕ್ಷ-ಅಮ್ಮ! ನೀನು ಆಗರ್ಭ ಶ್ರೀಮಂತರಾದ ಮಾತಾಪಿತೃಗಳ ಹೊಟ್ಟೆಯಲ್ಲಿ ಜನಿಯಿಸಿದೆ. ಬಾಲ್ಯದಲ್ಲಿ ಬಹುಮಂದಿ ಪರಿಚಾರಿಣಿಯರಿಂದ ಸೇವಿತಳಾಗಿ ಕಷ್ಟವೆಂತಹುದೆಂಬುದನ್ನರಿಯದೆ ಬೆಳದೆ. ಇಂತಹ ನಿನಗೆ ಈತನನ್ನು ಮದುವೆಯಾದುದರಿಂದ ಘೋರಾರಣ್ಯಗಳಲ್ಲಿ ಹಲವು ಬಗೆಯ ಕಷ್ಟಗಳನ್ನನುಭವಿಸಬೇಕಾದ ಗತಿಯು ಸಂಭವಿಸಿತಲ್ಲಾ!
ಚ೦ದ್ರ-ಎಲಾ! ಹುಚ್ಚನೇ! ಪತಿಯಸಾನ್ನಿಧ್ಯದಲ್ಲಿರುವ ನನಗೆ ಇದಾವುದೂ ಕಷ್ಟವಲ್ಲ. ಮಹಾರಾಜನ ಪುತ್ರಿಯೇ ಆಗಿದ್ದರೂ ಪತ್ನಿಯು ಪತಿಗೆ ಪರಿಚಾರಿಣಿಯೇ ಅಲ್ಲವೆ? ರಾಜ್ಯವನ್ನು ಕಳೆದುಕೊಂಡು ಅಡವಿಗಳಲ್ಲಿ ಅಲೆಯುತ್ತಿರುವುದರಿಂದಲೇ ಈಗ ನನ್ನ ಪತಿಯ ಸೇವೆಯನ್ನು ನಾನೇ ಮಾಡುವಂತಹ ಭಾಗ್ಯವುಲಭಿಸಿರುವುದು. ಎಂತಹ ಕಷ್ಟವನ್ನಾದರೂ ಸಹಿಸಿಕೊಂಡು ನೀತಿ ಬಾಹಿರನಾಗದೆ ಇರುವಂತಹ ಪತಿಯನ್ನು ಹೊಂದಿರುವುದರಿಂದ ಲೋಕದಲ್ಲಿ ನನಗಿಂತ ಧನ್ಯಳಾದ ಸ್ತ್ರೀಯು ಮತ್ತಾವಳಿರುವಳು?
ನಕ್ಷ-ಅಮ್ಮಾ! ನೀನು ನನಗೋಸುಗ ಪಡುತ್ತಿರುವ ಭ್ರಮೆಯನ್ನು ಕಂಡು ನಾನು ಮೆಚ್ಚಿದೆನು. ನನ್ನ ಮಾತನ್ನು ಕೇಳಿ ನೀನೂ ನಿನ್ನ ಮಗನೂ ಅಯೋಧ್ಯೆಗೆ ಬನ್ನಿರಿ. ನಾನು ವಿಶ್ವಾಮಿತ್ರರಿಗೆ ತಿಳಿಸಿ ನಿನ್ನ ಮಗನಿಗೇ ಪಟ್ಟಾಭಿಷೇಕವನ್ನು ಮಾಡಿಸುವೆನು. ಚಂದ್ರ-ನನಗೆ ಪತಿಯ ಸಾನ್ನಿಧ್ಯವೇ ಸರ್ವಸೌಖ್ಯಪ್ರದವು. ಆತನೆಲ್ಲಿರುವನೋ ನಾನೂ ಅಲ್ಲಿಯೇ ಇರತಕ್ಕವಳು. ಪತಿಯನ್ನಗಲಿದ್ದಪಕ್ಷದಲ್ಲಿ ದಿವ್ಯಮಂದಿರಗಳೆಲ್ಲವೂ ನನಗೆ ಮಹಾರಣ್ಯಗಳಾಗುವುವು. ಈಗ ನೀನಾಡಿದುದು ಅಂತಿರಲಿ, ಇನ್ನು ಮುಂದೆ ನೀನೆಂದೂ ನನ್ನೊಡನೆ ಇಂತಹ ಮಾತುಗಳನ್ನಾಡಬೇಡ.
ಚಂದ್ರಮತಿಯ ಮಾತು ಮುಗಿದೊಡನೆಯೇ ಹರಿಶ್ಚಂದ್ರನು ಸಿಹಿ ನೀರನ್ನು ತೆಗೆದುಕೊಂಡುಬಂದು ನಕ್ಷತ್ರಕನಿಗೆ ಕೊಟ್ಟನು. ಇಷ್ಟರಲ್ಲಿ ಕಾಳ್ಗಿಚ್ಚು ನಾಲ್ಕುದಿಕ್ಕನ್ನೂ ವ್ಯಾಪಿಸಿ ಅಂತರಿಕ್ಷವನ್ನು ಸೋ೦ಕುತ್ತಿರುವ ಜ್ವಾಲೆಗಳಿಂದ ಅವರಿದ್ದ ಪ್ರದೇಶವನ್ನೂ ಸುಡತೊಡಗಿತು. ಹರಿಶ್ಚಂದ್ರನು ಆವದಿಕ್ಕಿಗೆ ಹೋಗುವುದಕ್ಕೂ ಏನುಮಾಡುವುದಕ್ಕೂ ತಿಳಿಯದೆ ಕಳವಳಿಸುತಿದ್ದನು. ಅಷ್ಟರಲ್ಲಿ ಚಂದ್ರಮತಿಯು ಪತಿಯ ಸಮೀಸಕ್ಕೆ ಬಂದು" ನೀವು ನನಗೋಸುಗ ಚಿ೦ತಿಸದೆ ಮೊದಲು ಈ ಬ್ರಾಹ್ಮಣಕುಮಾರನನ್ನು ಹೊರಕ್ಕೆ ಬಿಟ್ಟು ಪ್ರಾಣರಕ್ಷಣೋಪಾಯವನ್ನು ಮಾಡಿರಿ, ಸಾಧ್ಯವಾದರೆ ಲೋಹಿತಾಸ್ಯನನ್ನೂ ರಕ್ಷಿಸಿ, ನನಗೆ ಆಯುಷ್ಯವಿದ್ದು ನಿಮ್ಮ ಸೇವೆಯನ್ನು ಮಾಡುವ ಭಾಗ್ಯವು ಸ್ಥಿರವಾಗಿರುವುದಾದರೆ ಹಿಂದೆಯೇ ನಾನೂ ಬಂದು ನಿಮ್ಮನ್ನು ಸೇರುವೆನು. ಹಾಗಿಲ್ಲದಿದ್ದರೆ ಈ ಯಜ್ಞೇಶ್ವರನಿಗೆ ಆಹಾರವಾಗಿ ಪುಣ್ಯ ಲೋಕವನ್ನು ಸೇರುವೆನು" ಎಂದು ನುಡಿಯಲು ಹರಿಶ್ಚಂದ್ರನಿಗೆ ದುಃಖವು ಮಿತಿಮೀರಿತು. ಮುಳ್ಳು ಚುಚ್ಚಿಕೊಂಡು ಬಾಧೆಪಡುತ್ತಿರುವ ಹೆಂಡತಿಯನ್ನು ಅಗಲಲಾರದೆ ಆಗಳಾತನು ಅತ್ಯಂತ ಶೋಕಾಕ್ರಾಂತನಾದನು. ಇಷ್ಟರಲ್ಲಿ ದೈವಾನುಗ್ರಹದಿಂದ ಗಾಳಿಯು ಮತ್ತೊಂದು ದಿಕ್ಕಿಗೆ ಬೀಸಿದುದರಿಂದ ಉರಿಯು ಬೇರೆ ದಿಕ್ಕಿಗೆ ತಿರುಗಿ ಇವರಿದ್ದ ಪ್ರದೇಶವನ್ನು ಬಿಟ್ಟು ಬಿಟ್ಟಿತು. ಹೀಗೆ ಬಹು ಕಷ್ಟಗಳನ್ನನುಭವಿಸುತ್ತೆ ನಿತ್ಯ ಪ್ರಯಾಣಗಳನ್ನು ಮಾಡಿ ಅವರೆಲ್ಲರೂ ಹತ್ತು ದಿನಗಳಲ್ಲಿ ಕಾಶೀಪಟ್ಟಣವನ್ನು ಸೇರಿದರು.
ಹರಿಶ್ಚಂದ್ರನು ಕಾಶೀಪಟ್ಟಣವನ್ನು ಸೇರಿದ ತರುವಾಯ ಕೆಲದಿನಗಳು ಪ್ರತಿದಿನವೂ ಮಣಿಕರ್ಣಿಕಾದಿ ಘಟ್ಟಗಳಲ್ಲಿ ಗಂಗಾಸ್ನಾನವನ್ನು ಮಾಡುತ್ತೆ, ವಿಶ್ವೇಶ್ವರನನ್ನು ಭಜಿಸುತ್ತೆ, ಇತರ ಮಹಾಸ್ಥಳಗಳನ್ನು ಸೇವಿಸಿ ಕಾಲಯಾಪನೆ ಮಾಡುತ್ತಿದ್ದನು. ಅತ್ತ ವಿಶ್ವಾಮಿತ್ರನೂ ರಾಜ್ಯವನ್ನು ಪೂರ್ವದ ಮಂತ್ರಿಗಳ ವಶದಲ್ಲಿಯೇ ಬಿಟ್ಟು, ಪ್ರಜೆಗಳನ್ನು ನ್ಯಾಯವಾಗಿ ಪರಿಪಾಲನ ಮಾಡುವಂತೆ ನಿಯಮಿಸಿ, ತಾನು ವೇಷಾಂತರದಿಂದ ಹರಿಶ್ಚಂದ್ರನ ಚರ್ಯೆಗಳನ್ನು ಪರೀಕ್ಷಿಸುತ್ತೆ ಆತನ ಹಿಂದೆಯೇ ಇದ್ದು, ಸಮಯ ದೊರೆತಾಗಲೆಲ್ಲ ರಹಸ್ಯವಾಗಿ ಶಿಷ್ಯನಿಗೆ ಕರ್ತವ್ಯವನ್ನು ಬೋಧಿಸುತ್ತೆ, ಬಗೆಬಗೆಯ ಮಾಯೋಪಾಯಗಳನ್ನು ಮಾಡಿ ಹೇಗಾದರೂ ಹರಿಶ್ಚಂದ್ರನಿಂದ ಅಸತ್ಯವನ್ನಾಡಿಸಬೇಕೆಂದು ನಿಶ್ಚಯಿಸಿಕೊಂಡು ಕಾಶೀಪಟ್ಟಣದಲ್ಲಿಯೇ ರಹಸ್ಯವಾಗಿ ಅಡಗಿದ್ದನು. ಹೀಗಿರುವಾಗ ಒಂದುದಿನ ನಕ್ಷತ್ರಕನು ಹರಿಶ್ಚಂದ್ರನನ್ನು ನೋಡಿ "ಎಲೈ, ಅರಸೇ! ನೀನು ಹೇಳಿದ ಒಂದು ತಿಂಗಳು ಗಡುಬದಲ್ಲಿ ಒಂದೆರಡು ದಿನಗಳು ಮಾತ್ರ ಉಳಿದಿರುವುದು, ನೀನಿದುವರೆಗೂ ನಮಗೆ ಒಂದು ಹಣವನ್ನಾದರೂ ಕೊಡಲಿಲ್ಲ. ಹಣವನ್ನು ಕೊಡಲಾರೆನೆಂದು ನೀನು ಮೊದಲೇ ಹೇಳಿದ್ದಪಕ್ಷದಲ್ಲಿ ನಾನಿದುವರೆಗೂ ತಪಸ್ಸಂಧ್ಯಾದ್ಯನುಷ್ಠನಗಳನ್ನು ಬಿಟ್ಟು ನಿನ್ನ ಹಿಂದೆ ಕಾಡುಮೇಡುಗಳಲ್ಲಲೆದು ಆಯಾಸ ಪಡುತ್ತೆ ವ್ಯರ್ಥಕಾಲಕ್ಷೇಪವನ್ನು ಮಾಡುತ್ತಿರಲಿಲ್ಲ. ಈಗಲಾದರೂ ನಾನು ಹಣವನ್ನು ಕೊಡಲೊಪ್ಪಲಿಲ್ಲ ಎಂದು ಹೇಳಿಬಿಡು. ಇನ್ನು ನಾನು ನಿನ್ನನ್ನು ನಿಂದಿಸಿ ಕಠಿನೋಕ್ತಿಗಳನ್ನಾಡದಿದ್ದರೆ ಮಹಾನುಭಾವರಾದ ನಮ್ಮ ಗುರುಗಳ ಕೋಪಕ್ಕೆ ಪಾತ್ರನಾಗಬೇಕಾದೀತು! ಪತ್ನಿಯನ್ನೋ ಪುತ್ರನನ್ನೋ ಮಾರಿ ಜಾಗ್ರತೆಯಾಗಿ ನಮ್ಮ ಧನವನ್ನು ಕೊಟ್ಟು ಕಳುಹಿಸಿಬಿಡು" ಎಂದು ಮುಂತಾಗಿ ಬಹು ವಿಧಗಳಿಂದ ಬಿರುಮಾತುಗಳನ್ನಾಡಿದನು. ಹರಿಶ್ಚಂದ್ರನಿಗೆ ದಿಕ್ಕೇ ತೋರದಂತಾಗಲು ಅವನು ಮರುಮಾತನ್ನಾಡದೆ ನೆಲವನ್ನು ನೋಡುತ್ತೆ ತಲೆಬಾಗಿಸಿಕೊಂಡು ಆತನ ಪರುಷವಾಕ್ಯಗಳನ್ನೆಲ್ಲ ಕೇಳುತ್ತೆ ಸುಮ್ಮನಿದ್ದನು. ಆಗ ಚಂದ್ರಮತಿಯು ಪತಿಗೆ ಧೈರ್ಯವನ್ನು ಹೇಳುತ್ತೆ ಮೃದುವಚನಗಳಿಂದ ಇಂತೆಂದಳು:
ಚಂದ್ರ-ಎಲೈ, ಪ್ರಾಣವಲ್ಲಭನೇ! ನಿಮ್ಮ ಧನನಾದ ನಾನು ಬದುಕಿರುವಾಗ ನೀವು ಋಣವನ್ನು ತೀರಿಸಲಾರದೆ ಹೀಗೆ ಚಿಂತಿಸುವುದೇಕೆ? ನನ್ನನ್ನು ಆರಿಗಾದರೂ ವಿಕ್ರಯಿಸಿ ಬಂದ ಹಣದಿಂದ ಋಣವಿಮುಕ್ತರಾಗಿ ಸತ್ಯವನ್ನುಳಿಸಿ ಶಾಶ್ವತವಾದ ಕೀರ್ತಿಯನ್ನು ಹೊಂದಿರಿ.
ಹರಿಶ್ಚದ್ರ-ಎಲೆ ಮನೋವಲ್ಲಭೇ! ಇಂತಹ ಶಲ್ಯಸಮವಾದ ಮಾತನ್ನು ನನ್ನ ಕಿವಿಗೆ ಸೋಕಿಸಿ ಸಂಕಟಗೊಳಿಸುವುದು ನಿನಗೆ ಧರ್ಮವೇ? ಎಷ್ಟು ಕ್ರೂರಾತ್ಮನಾದರೂ ಸಮಸ್ತ ಕಷ್ಟಗಳನ್ನೂ ಸೈರಿಸಿ ಪತ್ನಿಯನ್ನು ಸಂರಕ್ಷಿಸುವುದಕ್ಕೆ ಪ್ರತಿಯಾಗಿ, ಸ್ವಪ್ರಯೋಜನವನ್ನು ಗಮನಿಸಿ ಧರ್ಮಪತ್ನಿಯನ್ನು ಮಾರಿಕೊಳ್ಳಲೆಳಸುವನೇ? ಸಾಲವನ್ನು ಪರಿಹರಿಸಿಕೊಳ್ಳುವುದಕ್ಕೆ ತಕ್ಕ ಉಪಾಯವಾವುದೂ ತೋರದೆ ಸಂಕಟಪಡುತ್ತಿದ್ದ ನನ್ನ ಮನಸ್ಸನ್ನು ನೀನು ಮತ್ತಷ್ಟು ನೋಯಿಸುವೆಯಲ್ಲ!
ಚಂದ್ರ-ಪ್ರಾಣಕಾಂತನೇ! ನಿಮ್ಮ ಪಾದದಾಣೆ! ನನ್ನ ಮಾತಿಗೆ ನೀವು ಪ್ರತಿಯಾಡದೆ ನಡೆಯಿಸಬೇಕು. ಸಮಯವೊದವಿದಾಗ ಪತಿಗೆ ಸಾಹಾಯ್ಯವನ್ನು ಮಾಡದ ಪತ್ನಿಯು ಇದ್ದರೇನು? ಸತ್ತರೇನು? ನೀವು ಹೇಳದಿದ್ದರೂ ನಾನೇ ಮನಃಪೂರ್ವಕವಾಗಿ ದಾಸಿಯಂತೆ ವಿಕ್ರಯಿಸಲ್ಪಟ್ಟು ಬಂದ ಹಣದಿಂದ ನಿಮ್ಮ ಸಾಲವನ್ನು ತೀರಿಸಬೇಕೆಂದಿರುವೆನಾದುದರಿಂದ ನೀವು ಸ್ವಲ್ಪವೂ ಸಂಕೋಚ ಪಡಬೇಕಾದುದಿಲ್ಲ. ಸಾಧನಗಳಾವುವೂ ಇಲ್ಲದಿರುವಾಗ ನಿಮಗೆ ಅಸತ್ಯದೋಷವನ್ನು ಉಂಟುಮಾಡಿಸಿ ಸುಖಪಡುವುದಕ್ಕಿಂತ ದಾಸಿಯಾಗಿದ್ದಾದರೂ ನಿಮ್ಮ ಸತ್ಯವನ್ನುಳಿಸುವುದೇ ನನಗೆ ಪರಮಸಮ್ಮತವು.
ಹೀಗೆ ಚಂದ್ರಮತಿಯು ಪಲತೆರನಾಗಿ ಒತ್ತಿ ಹೇಳಲು ಹರಿಶ್ಚಂದ್ರನು ಕಟ್ಟ ಕಡೆಗೆ ಹೆಂಡತಿಯ ನಿರ್ಬಂಧವನ್ನು ಸಮ್ಮತಿಸಿ, ಅವಳನ್ನು ಆರಿಗಾದರೂ ದಾಸಿಯನ್ನಾಗಿ ಮಾರುವುದಕ್ಕೊಪ್ಪಿಕೊಂಡು "ನಿಮಗೆ ದಾಸಿಬೇಕೇ? ದಾಸಿ?" ಎಂದು ಕಾಶೀಪಟ್ಟಣದ ಕೇರಿಕೇರಿಗಳಲ್ಲಿಯೂ ಸಾರತೊಡಗಿದನು. ಕೆಲವರು ನಮಗೆ ಬೇಡವೆಂದೂ, ಕೆಲವರು ಅಷ್ಟು ಹಣವನ್ನು ಕೊಡಲಾರೆವೆಂದೂ, ಹೇಳಿ ಒಬ್ಬರಾದರೂಕೊಳ್ಳದಿದ್ದರು. ಹೀಗೆ ಹಲವರನ್ನು ಕೇಳಿ ಬೇಸತ್ತು ಹಿಂತ್ತಿರುಗಿರಲು ಕಾಲಕೌಶಿಕನೆಂಬ ಬ್ರಾಹ್ಮಣನೊಬ್ಬನು ಇದಿರಾಗಿ ಬಂದನು. ಆತನಾ ಪಟ್ಟಣದ ಪುರೋಹಿತನು; ಲುಬ್ಬಾಗ್ರೇಸರ ಚಕ್ರವರ್ತಿ; ಹೆಚ್ಚು ಬಡ್ಡಿಗೆ ಹಣವನ್ನು ಕೊಟ್ಟು ನಿಷ್ಕರುಣನಾಗಿ ಮನೆ ಬಾಗಿಲುಗಳನ್ನು ಮಾರಿಸಿ ಹಣವನ್ನು ತೆಗೆದುಕೊಳ್ಳುತ್ತಿದ್ದನು. ಆತನಿಗೆ ಕಲಹಕಂಟಕಿಯೆಂಬ ಭಾರ್ಯೆಯಿದ್ದಳು; ಲೋಕದಲ್ಲಿರುವ ಸ್ತ್ರೀಯ ರಲ್ಲೆಲ್ಲಿಯೂ ಇಂತಹ ಗಯ್ಯಾಳಿಯು ಹುಟ್ಟಿಯೂ ಇಲ್ಲ, ಹುಟ್ಟುವುದೂ ಅಸಂಭವ. ಕೆಲಸಕಾರ್ಯಗಳಿಲ್ಲದೆ ಮನೆಯಲ್ಲಿ ತಿಂದು ಕುಳಿತು ಗಂಡನನ್ನು ಬಯ್ಯುತ್ತಿದ್ದಳು. ಆತನು ಯಾವ ದಾಸಿಯನ್ನು ಕರೆತಂದರೂ ಅವಳವರನ್ನು ನಿಮಿಷದಲ್ಲಿ ಹೋರಾಡಿ ಓಡಿಸಿಬಿಡುತ್ತಿದ್ದಳಾದುದರಿಂದ ಹೆಂಡತಿಗೆ ಗಂಡನೇ ನಿಕೃಷ್ಟ ಪರಿಚಾರಕನಾಗಿದ್ದನು. ಈಗ ಹರಿಶ್ಚಂದ್ರನು ಹೆಂಡತಿಯನ್ನು ಮಾರುವೆನೆಂದು ಸಾರಲು ಕಾಲಕೌಶಿಕನು ಸಂತೋಷಿಸಿ ಹಣವನ್ನು ಕೊಟ್ಟು ಕೊಂಡಬಳಿಕ ಅವಳು ತನ್ನ ಹೆಂಡತಿಯ ಹಿಂಸೆಯನ್ನೆಲ್ಲ ಸೈರಿಸಿಕೊಂಡು ಕೆಲಸಕಾರ್ಯಗಳನ್ನು ಮಾಡುವಳೆಂದು ನಿಶ್ಚಯಿಸಿ, ಹರಿಶ್ಚಂದ್ರನು ಕೇಳಿದಷ್ಟು ಹಣವನ್ನು ಕೊಟ್ಟು ಚಂದ್ರಮತಿಯನ್ನು ದಾಸಿಯನ್ನಾಗಿ ಕೊಂಡನು. ಹಣವನ್ನು ಕೊಟ್ಟ ಬಳಿಕ ಆ ಬ್ರಾಹ್ಮಣನು ಚಂದ್ರಮತಿಯನ್ನು ಕರೆದು ಕೊಂಡು ಹೋಗಲೆಳಸಲು ಹರಿಶ್ಚಂದ್ರನಾಕೆಯನ್ನು ನೋಡಿ ಕಣ್ಣೀರು ತುಂಬಿದನು. ಆ ಬ್ರಾಹ್ಮಣನು ತಾನು ತಿರುಪೆಯೆತ್ತಿ ತಂದಿದ್ದ ಮೂಟೆಗಳನ್ನು ಚಂದ್ರಮತಿಯಿಂದ ಹೊರಿಸಿಕೊಂಡು ತನ್ನ ಮನೆಗೆ ಹೋದನು. ಚಂದ್ರಮತಿಯೂ ಗಂಡನನ್ನಗಲಿ ಹೋಗಬೇಕಾಯಿತಲ್ಲಾ! ಎಂದು ಕಣ್ಣೀರ್ಮಳೆಯನ್ನು ಕರೆಯುತ್ತೆ, ಪತಿಯನ್ನು ಸತ್ಯಸಂಧನನ್ನಾಗಿಯೇ ಇಟ್ಟಿರಬೇಕೆಂದೂ, ಜಾಗ್ರತೆಯಾಗಿಯೇ ತನಗೆ ಮತ್ತೆ ಪತಿಪಾದಸೇವಾಭಾಗ್ಯವು ಲಭಿಸುವಂತೆ ಮಾಡಬೇಕೆಂದೂ, ಪರಮೇಶ್ವರನನ್ನು ಕುರಿತು ಪ್ರಾರ್ಥಿಸುತ್ತೆ ಆ ಬ್ರಾಹ್ಮಣನ ಹಿಂದೆ ಹೊರಟು ಹೋದಳು. ಪರಸ್ಪರ ಅಗಲಿದುದರಿಂದ ಆ ದಂಪತಿಗಳಿಗೀರ್ವರಿಗೂ ಅಂದಿನಿಂದ ನಿಶ್ಚಯವಾದ ದುಃಖವು ಮೊದಲಾಯಿತು.
ಹೀಗೆ ಹೆಂಡತಿಯನ್ನು ಮಾರಿ ಸಂಪಾದಿಸಿದ ಹಣವನ್ನು ಕೈಯಲ್ಲಿಟ್ಟೊಡನೆಯೇ ನಕ್ಷತ್ರಕನು ಆ ಹಣವೆಲ್ಲ ತನ್ನ ಕೂಲಿಗೂ ಸಾಲದಲ್ಲಿ ಸ್ವಲ್ಪ ಭಾಗಕ್ಕೂ ಸಮನಾಯಿತೆಂದೂ, ಉಳಿದ ಹಣವನ್ನೂ ಹೇಗಾದರೂ ಮಾಡಿ ಈಗಲೇ ಕೊಡಬೇಕೆಂದೂ, ನಿರ್ಬಂಧಗೊಳಿಸಿದನು. ಹರಿಶ್ಚಂದ್ರನು ತನಗೆ ಮತ್ತಾವ ಯುಕ್ತಿಯೂ ತೋರದಿರಲು ತನ್ನನ್ನು ಕರೆದುಕೊಂಡು ಹೋಗಿ ಮಾರಿ ಸಾಲವನ್ನು ತೀರಿಸಿಕೊಳ್ಳೆಂದು ಆ ಧೂರ್ತ ಬ್ರಹ್ಮಚಾರಿಗೆ ಹೇಳಿದನು. ನಕ್ಷತ್ರಕನು ಒಳ್ಳೆಯದೆಂದೊಪ್ಪಿಕೊಂಡು ಆ ರಾಜ ಶ್ರೇಷ್ಠನನ್ನು ತನ್ನ ಹಿಂದೆ ಕರೆದುಕೊಂಡು ಹೋಗಿ ಬೀದಿಬೀದಿಗಳಲ್ಲಿಯೂ ಅಲೆಯಿಸಿ ವಿಕ್ರಯಿಸುವೆನೆಂದು ಎಲ್ಲರಿಗೂ ತೋರಿಸಿ ಎಲ್ಲಿಯೂ ಬೆಲೆಯನ್ನು ಸರಿಗೊಳಿಸದೆ ಕಡೆಗೆ ವೀರಬಾಹುವೆಂಬ ಒಬ್ಬ ಚಂಡಾಲನ ಬಳಿಯಲ್ಲಿ ಬಹು ಧನವನ್ನು ತೆಗೆದುಕೊಂಡು ಅವನಿಗೆ ಸೇವಕನನ್ನಾಗಿ ಮಾರಿದನು. ವೀರಬಾಹುವು ಹಣವನ್ನು ಕೊಡುವುದಕ್ಕೆ ಮೊದಲು “ನಾನಿಷ್ಟು ಹಣವನ್ನು ಕೊಟ್ಟು ಕೊಂಡಪಕ್ಷದಲ್ಲಿ ಈತನೊ೦ದುವೇಳೆ ರಾತ್ರಿ ಕಾಲದಲ್ಲಿ ಹೇಳದೆ ಕೇಳದೆ ನನ್ನನ್ನು ವಂಚಿಸಿ ಓಡಿಹೋಗುವನೇನೋ? ನನ್ನ ಹಣಕ್ಕೆ ಯಾರು ಗುರಿಯಾಗುವರು?” ಎಂದು ಕೇಳಿದನು. ಹರಿಶ್ಚಂದ್ರನು ಸತ್ಯವನ್ನು ಪರಿಪಾಲಿಸುವುದಕ್ಕೋಸುಗವೇ ಇಂತಹ ಕಷ್ಟಗಳಿಗೆಲ್ಲ ನೆಲೆಯಾಗಿರುವನೆಂದೂ, ಆತನು ಪರರನ್ನು ಯಾವಾಗಲೂ ವಂಚಿಸತಕ್ಕವನಲ್ಲವೆಂದೂ, ನಕ್ಷತ್ರಕನು ಆತನ ಚರಿತ್ರೆಯನ್ನೆಲ್ಲ ವೀರಬಾಹುವಿಗೆ ನಂಬುಗೆಯುಂಟಾಗುವಂತೆ ಮೊದಲಿಂದ ತಿಳಿಸಿದನು. ಹರಿಶ್ಚಂದ್ರನೂ ತಾನಾಡಿದ ಮಾತಿಗೆ ತಪ್ಪದೆ ಎಂತಹ ಕಷ್ಟಗಳು ಸಂಭವಿಸಿದರೂ ಎಲ್ಲವನ್ನೂ ಸೈರಿಸಿ ಅವನನ್ನು ಸೇವಿಸುವನೆಂದು ಮಾತು ಕೊಟ್ಟನು. ಆಗಳಾ ಚಂಡಾಲನಿಗೂ ಹರಿಶ್ಚಂದ್ರನ ವಿಷಯದಲ್ಲಿ ಸ್ವಲ್ಪ ಮರುಕವುಂಟಾಗಿ, ಆ ಬ್ರಾಹ್ಮಣನು ಕೇಳಿದಷ್ಟು ಹಣವನ್ನು ಕೊಟ್ಟು ಆತನು ಯಾವಾಗ ಬೇಕಾದರೂ ತಾನು ಕೊಟ್ಟ ಹಣವನ್ನು ಹಿಂದಕ್ಕೆ ಕೊಡುವಪಕ್ಷದಲ್ಲಿ ತತ್ ಕ್ಷಣವೆ ದಾಸ್ಯದಿಂದ ಬಿಡುತೆ ಮಾಡುವೆನೆಂದು ವಾಗ್ದಾನ ಮಾಡಿದನು. ನಕ್ಷತ್ರಕನು ಆ ಧನವನ್ನೆಲ್ಲ ತೆಗೆದುಕೊಂಡು, ಸಾಲವೂ ತನ್ನ ಕೂಲಿಯೂ ಎರಡೂ ಪೂರ್ತಿಯಾಗಿ ಸಂದಿತೆಂದು ಹೇಳಿ ಚಂದ್ರಮತೀ ಹರಿಶ್ಚಂದ್ರರನ್ನು ಆಶೀರ್ವದಿಸಿ ಹೊರಟುಹೋದನು.
ಹೀಗೆ ನಕ್ಷತ್ರಕನು ಹೊರಟುಹೋದ ತರುವಾಯ ವೀರಬಾಹುವು ಹರಿಶ್ಚಂದ್ರನನ್ನು ತನ್ನೊಡನೆ ಕರೆದುಕೊಂಡು ಹೋಗಿ, ಆ ಪಟ್ಟಣದಲ್ಲಿರುವ ಸ್ಮಶಾನಕ್ಕೆ ತಾನು ಅಧಿಕಾರಿಯೆಂದೂ, ಅಲ್ಲಿ ಶವಗಳನ್ನು ದಹನಮಾಡುವವರೆಲ್ಲರೂ ಒಂದು ಹಣ ತೆರಿಗೆಯನ್ನು ಕೊಟ್ಟು ಅಪ್ಪಣೆಯನ್ನು ಪಡೆದ ಬಳಿಕ ತಮ್ಮ ಕಾರ್ಯವನ್ನು ನೆರವೇರಿಸಬೇಕೆಂದೂ ತಿಳಿಸಿ, ಆತನಿಗೆ ವೀರದಾಸನೆಂಬ ಹೊಸ ಹೆಸರನ್ನಿಟ್ಟು, ತನಗೆ ಪ್ರತಿಯಾಗಿ ಹಗಲಿರುಳೂ ಅಲ್ಲಿದ್ದು ಕಾರ್ಯವನ್ನು ನಿರ್ವಹಿಸಬೇಕೆಂದು ನಿಯಮಿಸಿ ಪ್ರತಿದಿನದ ಊಟಕ್ಕೆ ಬೇಕಾಗುವ ಧಾನ್ಯವನ್ನು ಅಳೆದುಕೊಡುತ್ತಿದ್ದನು. ಹರಿಶ್ಚಂದ್ರನು ರುದ್ರಭೂಮಿಯಲ್ಲಿಯೇ ಒಂದು ಗುಡಿಸಲನ್ನು ಹಾಕಿಕೊಂಡು ವಾಸಮಾಡುತ್ತೆ, ತನ್ನ ಯಜಮಾನನು ಕೊಟ್ಟ ಅಕ್ಕಿಯನ್ನು ತಾನೇ ಅಡಿಗೆಮಾಡಿಕೊಂಡು ಊಟಮಾಡುತ್ತೆ, ದಿವಾರಾತ್ರಿಯಲ್ಲಿಯೂ ಸ್ವಾಮಿಭಕ್ತಿಯುಳ್ಳವನಾಗಿ ಅಲ್ಲಿಯೇ ಕಾದಿದ್ದು, ಶಕ್ತಿವಂಚನೆಯಿಲ್ಲದೆ ಸ್ವಕೃತ್ಯವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದನು.
ಅತ್ತ ಚಂದ್ರಮತಿಯೂ ಹಂಸನಾರಿಯೆಂಬ ಹೆಸರಿನಿಂದ ಬ್ರಾಹ್ಮಣನ ಮನೆಯಲ್ಲಿ ವಾಸಮಾಡುತ್ತ, ಆತನ ಪತ್ನಿಯು ನಿಯಮಿಸುವ ಕಾರ್ಯಗಳನ್ನೆಲ್ಲ ಮಾಡುತ್ತೆ, ಹೊಟ್ಟೆತುಂಬ ಅನ್ನವಿಡದಿದ್ದರೂ, ಬಟ್ಟೆಯನ್ನು ಕೊಡದಿದರೂ, ಅದನ್ನು ಕುರಿತು ಇತರರೊಡನೆ ಪ್ರಸ್ತಾಪಿಸದೆ, ಆ ಬ್ರಾಹ್ಮಣ ದಂಪತಿಗಳು ಎಂತಹ ಕೆಟ್ಟ ಮಾತುಗಳನ್ನಾಡಿದರೂ ಸೈರಿಸಿಕೊಂಡು ಭಯ ಭಕ್ತಿಯುಳ್ಳವಳಾಗಿ ನಡೆದುಕೊಳ್ಳುತ್ತಿದ್ದಳು. ಬ್ರಾಹ್ಮಣನು ಲೇಶವಾದರೂ ದಯೆಯಿಲ್ಲದವನಾಗಿ ಲೋಹಿತಾಸ್ಯನನ್ನೊಬ್ಬನನ್ನೇ ಫಲಪುಷ್ಪಾದಿಗಳನ್ನು ತರಲೋಸುಗ ಮಳೆಬಿಸಿಲುಗಳೆನ್ನದೆ ಕಾಡಿಗೆ ಕಳುಹಿಸುತ್ತಿದ್ದನು. ಹೀಗೆ ಆ ರಾಜಕುಮಾರನೊ೦ದು ದಿನ ಕೆಲಮಂದಿ ಬ್ರಾಹ್ಮಣಕುಮಾರರೊಡನೆ ಕಾಡಿಗೆ ಹೋಗಿ, ಹುತ್ತದಮೇಲೆ ಬೆಳೆದು ಹೂಬಿಟ್ಟಿದ್ದ ಒಂದು ಆಲದಮರದ ಕೊಂಬೆಯನ್ನು ಮೆಲ್ಲಗೆ ಬಾಗಿಸಿ ಅದರೆಲೆಗಳನ್ನು ಕೊಯ್ಯುತ್ತಿರಲು, ಹುತ್ತದೊಳಗಣಿಂದ ಒಂದು ನಾಗರಹಾವು ಹೊರಕ್ಕೆ ಬಂದು ಆ ರಾಜಕುಮಾರನ ಕಾಲನ್ನು ಕಚ್ಚಿತು. ತತ್‌ಕ್ಷಣವೇ ಲೋಹಿತಾಸ್ಯನು " ಹಾ! ಮಾತೆಯೇ! " ಎಂದು ಕೂಗುತ್ತ, ಬಾಯಿಂದ ನೊರೆಸುರಿಯುತ್ತಿರಲು ನೆಲದಮೇಲೆ ಬಿದ್ದು ಮೂರ್ಛಗೊಂಡನು. ಆ ಬ್ರಾಹ್ಮಣ ಬಾಲಕರದನ್ನು ಕಂಡು ಭಯವಟ್ಟು ಒಡನೆಯೇ ಓಡಿಹೋಗಿ ಅಳುತ್ತ ಚಂದ್ರಮತಿಗೆ ಈ ಸಂಗತಿಯನ್ನು ತಿಳಿಸಿದರು. ಎಂದಿನಂತೆ ಮಗನು ಕಾಲಕ್ಕೆ ಸರಿಯಾಗಿ ಮನೆಗೆ ಬಾರದಿದ್ದುದರಿಂದಲೇ ಕಳವಳಗೊಂಡಿದ್ದ ಚಂದ್ರಮತಿಯು ಸಿಡಿಲಂತಹ ಈ ದುರ್ವಾರ್ತೆಯನ್ನು ಕೇಳಿ ಮೂರ್ಛಿತೆಯಾಗಿ, ಬಳಿಕ ಎಚ್ಚತ್ತು ಗಟ್ಟಿಯಾಗಿ ಅಳುತ್ತೆ, ಕಲಹಕಂಟಕಿಯಬಳಿಗೆ ಹೋಗಿ ಮಗನ ವಿಷಯವನ್ನು ತಿಳಿಸಿ, ಹೋಗಿ ನೋಡಿಕೊಂಡು ಬರುವುದಕ್ಕೆ ಅನುಜ್ಞೆಯನ್ನು ಕೇಳಲು ಕಠಿನ ಚಿತ್ತೆಯಾದ ಆ ಮದವತಿಯು ಕೆಲಕಾಲ ಏನೇನೋ ಹೇಳಿ ಮನೆಗೆಲಸಗ ಳೆಲ್ಲವೂ ಮುಗಿಯುವವರೆಗೂ ಹೋಗಕೂಡದೆಂದು ನಿರ್ಬಂಧಗೊಳಿಸಿದಳು. ಆ ಉತ್ತಮಾಂಗನೆಯು ಉಕ್ಕಿ ಉಕ್ಕಿ ಬರುತ್ತಿದ್ದ ದುಃಖವನ್ನು ತಡೆದುಕೊ೦ಡು ತಾಳ್ಮೆಯಿಂದ ರಾತ್ರಿ ಹತ್ತು ಗಂಟೆಯವರೆಗೂ ಮನೆಗೆಲಸಗಳನ್ನು ಮಾಡಿ, ತರುವಾಯ ಕಲಹಕಂಟಕಿಯಿಂದ ಅಪ್ಪಣೆಯನ್ನು ಪಡೆದು, ಗಾಡಾಂಧಕಾರದಲ್ಲಿ ಒಬ್ಬಳೇ ಹೊರಟು ಬ್ರಾಹ್ಮಣ ಬಾಲಕರು ತಿಳಿಸಿದ ಕುರುಹಿನಿಂದ ಹುಡುಕುತ್ತ ಆಲದಮರದಬಳಿಗೆ ಹೋಗಿ, ಅಲ್ಲಿ ನಿದ್ರಿಸುತ್ತಿರುವವ ನ೦ತೆ ನೆಲದಮೇಲೆ ಮಲಗಿದ್ದ ಲೋಹಿತಾಸ್ಯನನ್ನು ಕಂಡು ಎದೆಯನ್ನು ಬಡಿದುಕೊಳ್ಳುತ್ತೆ ಸ್ವಲ್ಪ ಕಾಲ ಅಳುತ್ತಿದ್ದು, ಅಷ್ಟರಲ್ಲಿ ಸ್ವಲ್ಪ ಧೈರ್ಯವನ್ನು ತಂದುಕೊಂಡು, ಮುಂದೆ ಮಾಡಬೇಕಾದ ಕಾರ್ಯವನ್ನಾಲೋಚಿಸುತ್ತ, ಲೋಹಿತಾಸ್ಯನು ಮೃತನಾದನೆಂದು ನಿಷ್ಕರ್ಷಿಸಿ ಆ ರಾತ್ರಿಯೇ ದಹನ ಸಂಸ್ಕಾರವು ನಡೆಯಬೇಕಾದುದರಿಂದ, ಸುತ್ತಮುತ್ತಲೂ ಇದ್ದ ತೋಪಿನಲ್ಲಿ ಕಾಷ್ಟಗಳನ್ನು ಆಯ್ದು ಹೊರೆಕಟ್ಟಿ ತಲೆಯಮೇಲೆ ಹೊತ್ತುಕೊಂಡು, ಮಗನನ್ನು ಹೆಗಲಮೇಲೆ ಹೊತ್ತುಕೊಂಡು ಪ್ರೇತಭೂಮಿಗೆ ಹೊರಟಳು. ನಡುಹಗಲಲ್ಲಿಯಾದರೂ ಮನೆಯನ್ನು ಬಿಟ್ಟು ಎಂದೂ ಹೊರಕ್ಕೆ ಹೊರಡಲರಿಯದಿದ್ದ ಈ ಸುಕುಮಾರಿಯು ನಿಶಾಸಮಯದಲ್ಲಿ ಒಂಟಿಯಾಗಿ ಅರಣ್ಯ ಮಾರ್ಗದಲ್ಲಿ ಮಿತಿಮೀರಿದ ದುಃಖದಿಂದ ನಡೆಯುತ್ತ, ಪಿತೃಭೂಮಿಯನ್ನು ಸೇರಿ, ತಂದಿದ್ದ ಕಟ್ಟಿಗೆಯಿಂದ ಚಿತೆಯನ್ನೇರ್ಪಡಿಸಿ ಪುತ್ರನನ್ನು ಅದರಮೇಲೆ ಮಲಗಿಸಿ ದುಃಖವನ್ನು ಸೈರಿಸಲಾರದೆ ಅಳತೊಡಗಿದಳು. ಆ ರೋದನವನ್ನು ಕೇಳಿ ಹರಿಶ್ಚಂದ್ರನು ಗುಡಿಸಿಲಿಂದ ಹೊರಕ್ಕೆ ಬಂದು ಶವವನ್ನು ತಂದಿರುವರಾರೆಂದು ಕೇಳಿದನು. ತನ್ನ ಹೆಸರು ಹಂಸನಾರಿಯೆಂದೂ, ತನ್ನ ಮಗನು ಸರ್ಪದಷ್ಟನಾಗಿ ಮೃತಿಯನ್ನಿದಿರುನೋಡುತ್ತಿರುವನೆಂದೂ ವಿಷವೈದ್ಯವು ತಿಳಿದಿದ್ದಪಕ್ಷದಲ್ಲಿ ಬಾಲಕನಿಗೆ ಪ್ರಾಣದಾನವನ್ನು ಮಾಡಬೇಕೆಂದೂ, ಚಂದ್ರಮತಿಯು ಆರ್ತಸ್ವರದಿಂದ ಹೇಳಿಕೊಂಡಳು.ಗದ್ಗದಸ್ವರದಿoದ ಆಡಿದ ಮಾತುಗಳಾದುದರಿಂದ ಹರಿಶ್ಚಂದ್ರನು ಪತ್ನಿಯ ಕಂಠವನ್ನು ಗುರುತಿಸಲಾರದೆ, ತಾನು ವೀರದಾಸನೆಂಬುವನೆಂದೂ, ಸ್ಮಶಾನಾಧಿಕಾರಿಯ ಸೇವಕನೆಂದೂ, ವಿಷವೈದ್ಯವನ್ನರಿಯೆನೆಂದೂ, ಹಣವನ್ನು ಕೊಟ್ಟಿಲ್ಲದೆ ಶವವನ್ನು ಅಲ್ಲಿ ದಹನಮಾಡಲಾಗದೆಂದೂ ಗಂಭೀರವಾಗಿ ನುಡಿದನು. ಆತನಾ ಅವಸ್ತೆಯಲ್ಲಿರುವ ವಿಷಯವನ್ನು ಅದುವರೆಗೂ ಅವಳು ಕೇಳಿ ತಿಳಿಯಳಾದುದರಿಂದ, ದೂರದಲ್ಲಿದ್ದು ಮಾತನಾಡಿದುದರಿಂದ, ತನ್ನ ಗಂಡನೆಂದು ಗುರುತಿಸಿಲಾರದೆಯೂ ಹೋಗಿ "ಸಮಸ್ತಭೂಮಂಡಲವನ್ನೂ ಏಕಛತ್ರಾಧಿಪತ್ಯ ದಿ೦ದಾಳುತ್ತಿದ ಸಾರ್ವಭೌಮನ ಮಗನಿಗೆ ದಹನಕ್ರಿಯೆಗೋಸುಗ ಒಂದು ಹಣವನ್ನು ತರುವ ಶಕ್ತಿಯೂ ಇಲ್ಲದೇಹೋಯಿತಲ್ಲಾ! " ಎಂದು ಅತ್ತಳು. ಆ ರೋದನವನ್ನು ಕೇಳಿದ ತತ್‌ಕ್ಷಣವೇ ಅವಳು ತನ್ನ ಪತ್ನಿಯೇನೋ ಎಂದು ಹರಿಶ್ಚಂದ್ರನು ಸಂಶಯಪಟ್ಟು ಕಳವಳಗೊಂಡು ತಿರುಗಿ ಧೈರ್ಯವನ್ನು ತಾಳಿ, ಮತ್ತಷ್ಟು ಸಮೀಪಕ್ಕೆ ಬಂದು " ನೀನು ಅಂತಹ ಮಹಾರಾಜನಿಗೆ ಧರ್ಮಪತ್ನಿಯಾಗಿದ್ದರೆ ನಿನಗೀ ದಾರಿದ್ಯ್ರವು ಸಂಘಟಿಸುವುದಕ್ಕೆ ಕಾರಣವಿಲ್ಲವಲ್ಲಾ! ನಿನ್ನ ಕೊರಳಲ್ಲಿ ಪ್ರಕಾಶಿಸುತ್ತಿರುವ ತಾಳಿಯನ್ನಾದರೂ ಮಾರಿ ಹಣವನ್ನು ಕೊಡು" ಎಂದು ನುಡಿದನು. ಅಷ್ಟರಲ್ಲಿ ಚಂದ್ರಮತಿಯು ಆತನನ್ನು ಗುರ್ತಿಸಿ ಅವನಿಗೆ ಸಂಭವಿಸಿದ ದುರವಸ್ಥೆಯನ್ನೂ ಲೋಹಿತಾಸ್ಯನು ಮೃತನಾದುದನ್ನೂ ಕುರಿತು ಪ್ರಲಾಪಿಸಿ * ಮೊದಲು ನಿಮ್ಮ ತೊಡೆಯಮೇಲೆ ಮಲಗಿ ನಿದ್ರಿಸುತ್ತಿದ್ದ ಮುದ್ದು ಮೊಗದ ಲೋಹಿತಾಸನನ್ನು ನೋಡಿ " ಎಂದಾತನ ಕಾಲಮೇಲೆ ಕೆಡಹಿ ಅಳತೊಡಗಿದಳು. ಆಮಾತು ಕಿವಿಗೆ ಬಿದ್ದೊಡನೆಯೇ ಎದೆಯೊಡೆದು ಪುತ್ರಶೋಕದಿಂದ ಮೂರ್ಛೆಗೊಂಡು ನೆಲದಮೇಲೆ ಬಿದ್ದನು. ಚ೦ದ್ರಮತಿಯು ತನ್ನ ದುಃಖವನ್ನು ಮರೆತು ಗಂಡನನ್ನು ಎಚ್ಚರಗೊಳಿಸಿ ಉಪಚಾರ ಮಾಡಿ, ಧೈರ್ಯವನ್ನು ಹೇಳಿ, ಸ್ವಾಮಿಕಾರ್ಯದಲ್ಲಿ ಹಿಂತೆಗೆಯುವುದು ಉಚಿತವಲ್ಲವೆಂದೂ ಆಪತ್ಕಾಲಗಳಲ್ಲಿ ಧೈರ್ಯವನ್ನು ಬಿಟ್ಟು ಶೋಕಿಸುವುದು ವಿವೇಕಿಗಳ ಧರ್ಮವಲ್ಲವೆಂದೂ, ಬೋಧಿಸಿ, ಹಣವನ್ನು ಸಂವಾದಿಸಿಕೊಂಡು ಬರುವುದಕ್ಕೆ ತಕ್ಕ ಉಪಾಯವನ್ನು ತಿಳಿಸಬೇಕೆಂದೂ ಪತಿಯನ್ನು ಪ್ರಾರ್ಥಿಸಿದಳು. ಪತ್ನಿಯ ಹಿತಬೋಧನೆಯಿಂದ ಹರಿಶ್ಚಂದ್ರನು ದುಃಖವನ್ನು ತ್ಯಜಿಸಿ ಧೈರ್ಯವನ್ನು ಹೊಂದಿ, ಸ್ವಲ್ಪ ಕಾಲದವರೆಗೂ ಆಲೋಚಿಸಿ "ನೀನು ಹೇಗಾದರೂ ಮಾಡಿ ನಿನ್ನ ದಾಸ್ಯಕ್ಕೆ ಅಧಿಪತಿಯಾಗಿರುವ ಆ ಬ್ರಾಹ್ಮಣನಿಗೆ ಕರುಣೆಯುಂಟಾಗುವಂತೆ ಪ್ರಾರ್ಥಿಸಿ ಒಂದು ಹಣವನ್ನು ಆತನಿ೦ದ ತೆಗೆದುಕೊಂಡು ಬಂದು ಈ ಬಾಲಕನ ದಹನಕಾರ್ಯವನ್ನು ಮಾಡು" ಎಂದು ಹೇಳಿ ಹೆಂಡತಿಯನ್ನು ಕಳುಹಿಸಿದನು. ಆಕೆಯೊಬ್ಬಳೇ ಕತ್ತಲೆಯಲ್ಲಿ ಅಳುತ್ತೆ ಪಟ್ಟಣದ ಬೀದಿಗಳನ್ನು ಹಾದು ಬರುತ್ತಿರುವಾಗ ಒಬ್ಬ ಬ್ರಾಹ್ಮಣನು ಇದಿರಾಗಿ ಬಂದು, ಆಕೆಯ ದುಃಖಕ್ಕೆ ಕಾರಣವನ್ನು ವಿಚಾರಿಸಿ ತಿಳಿದುಕೊಂಡು, ಮರುಕಗೊಂಡವನಂತೆ ನಟಿಸಿ ಆಭರಣದ ಒಂದು ಗಂಟನ್ನು ಆಕೆಯ ಕೈಗೆ ಕೊಟ್ಟು, ಚಂದ್ರಮತಿಯು ಬೇಡವೆನ್ನುತಿದರೂ ಕೇಳದೆ ಹೊರಟುಹೋದನು. ಸ್ವಲ್ಪ ಕಾಲದೊಳಗಾಗಿ ಅದೇ ಬ್ರಾಹ್ಮಣನೇ ಮತ್ತೆ ಬಂದು "ರಾಜಕುಮಾರನನ್ನು ಸಂಹರಿಸಿ, ಅವನ ಆಭರಣಗಳನ್ನು ಅಪಹರಿಸಿಕೊಂಡುಬಂದ ಪಾಪಾತ್ಮಳು ಇವಳೇ. ಇದೊ, ಓಡಿ ಹೋಗುತ್ತಿರುವಳು" ಎಂದು ರಾಜಭಟ್ಟರಿಗೆ ತಿಳಿಸಿ ಹೊರಟುಹೋದನು. ಆ ರಾಜಭಟರಾಕೆಯಾಡುವ ಮಾತುಗಳನ್ನು ಆಲಿಸದೆ, ಆಭರಣಸಹಿತಳಾದ ಆ ಚಂದ್ರಮತಿಯನ್ನು ಕರೆದುಕೊಂಡುಹೋಗಿ, ಅರಸನಿದಿರಾಗಿ "ಇವಳೇ ಶಿಶುಹತ್ಯೆ ಮಾಡಿದ ರಾಕ್ಷಸಿ" ಎಂದು ಹೇಳಿ ನಿಲ್ಲಿಸಿದರು. ಮಗನನ್ನು ಕೊಂದಳೆಂಬ ಕೋಪದಿಂದ ಅರಸು ಆವುದನ್ನೂ ವಿಮರ್ಶಿಸದೆ, ರಾಜಸಭೆಯಲ್ಲಿ ಮಾತಾಡಲುಸಿರಿಲ್ಲದೆ ಮೌನವಾಗಿದ್ದ ನಿರಪರಾಧಿನಿಯಾದಾ ಚಂದ್ರಮತಿಗೆ ಶಿರಶ್ಛೇದನವನ್ನು ಮಾಡುವಂತೆ ಆಜ್ಞಾಪಿಸಿ, ರಾಜಭಟರೊಂದಿಗೆ ಅವಳನ್ನು ಕಳುಹಿಸಿಬಿಟ್ಟನು. ಅವರಾಕೆಯನ್ನು ಕರೆದುಕೊಂಡು ಹೋಗಿ ರಾಜಾಜ್ಞೆಯನ್ನು ತಿಳಿಸಿ ತಲೆಗಡಿಯುವುದಕ್ಕೆ ವೀರಬಾಹುವಿಗೊಪ್ಪಿಸಿದರು.
ರಾಜಭಟರು ಚಂದ್ರಮತಿಯನ್ನು ಕರೆದುಕೊಂಡು ಹೋಗಿ ವೀರಬಾಹುವಿಗೊಪ್ಪಿಸಿ, ರಾಜಾಜ್ಞೆಯನ್ನು ತಿಳಿಸಲು, ಆತನವಳನ್ನು ತನ್ನ ಸೇವಕರೊಡನೆ ಹರಿಶ್ಚಂದ್ರನ ಬಳಿಗೆ ಕಳುಹಿಸಿ ಶಿರಚ್ಛೇದನವನ್ನು ಮಾಡಿಸುವಂತೆ ಆಜ್ಞಾಪಿಸಿದನು. ಆ ಪಟ್ಟಣದಲ್ಲಿಯೇ ರಹಸ್ಯವಾಗಿದ್ದು ಅಲ್ಲಿ ನಡೆಯುತ್ತಿದ್ದ ವಿಷಯಗಳನ್ನೆಲ್ಲ ನೋಡುತ್ತಿದ್ದ ವಿಶ್ವಾಮಿತ್ರನು, ಮುಂದೇನು ನಡೆಯುವುದೋ ನೋಡಬೇಕೆಂದು ಚಂದ್ರಮತಿಯ ಹಿಂದೆಯೇ ಸ್ಮಶಾನವಾಟಿಗೆ ಹೊರಟನು. ವೀರಬಾಹುವಿನ ಸೇವಕರು ಚಂದ್ರಮತಿಯನ್ನು ಕರೆದುಕೊಂಡು ಹೋಗಿ ತಮ್ಮ ಸ್ವಾಮಿಯ ಆಜ್ಞೆಯನ್ನು ಹರಿಶ್ಚಂದ್ರನಿಗೆ ತಿಳಿಸಿ ತಾವು ದೂರವಾಗಿ ನಿಂತುಕೊಂಡರು. ಆ ಮಾತುಗಳನ್ನು ಕೇಳಿದೆ ತತ್ ಕ್ಷಣವೇ ಹರಿಶ್ಚಂದ್ರನು ಧೈರ್ಯಹೀನನಾಗಿ ಸ್ವಲ್ಪಕಾಲ ಮುಂದುಗಾಣದವನಾಗಿದ್ದು ಏನುಮಾಡುವುದಕ್ಕೂ ತೋರದೆ ಕಣ್ಣೀರು ಸುರಿಸುತ್ತೆ ತಲೆಬಾಗಿ ನಿಂತಿದ್ದನು. ಆ ಸಮಯದಲ್ಲಿ ಚಂದ್ರಮತಿಯು ಗಂಡನಿಗೆ ಧೈರ್ಯವನ್ನು ಹೇಳಿ, ಸ್ವಾಮಿಕಾರ್ಯವನ್ನು ನಿರ್ವಹಿಸುವುದು ಅವಶ್ಯ ಕರ್ತವ್ಯವೆಂದೂ, ಮನುಷ್ಯರೂ ದೇವತೆಗಳೂ ಮೆಚ್ಚುವಂತೆ ಸ್ವಕೃತ್ಯವನ್ನು ಕ್ರಮವಾಗಿ ನೆರವೇರಿಸಬೇಕೆಂದೂ, ತನ್ನಮೇಲಣ ಪ್ರೇಮಾನುಬಂಧವನ್ನು ಮರೆತು ಧರ್ಮದಲ್ಲಿಯೇ ಬುದ್ದಿಯನ್ನು ನಿಲ್ಲಿಸಬೇಕೆಂದೂ, ಹಲವುಬಗೆಯಾಗಿ ಬೋಧಿಸಿ, ಆತನನ್ನೊಪ್ಪಿಸಿ, ತನ್ನ ಪ್ರಾಣಕಾಂತನು ಯಾವಾಗಲೂ ಸತ್ಯಚ್ಯುತನಾಗದೆ ಇಹಲೋಕದಲ್ಲಿ ನಿತ್ಯಸುಖವನ್ನು ಹೊಂದುವಂತೆ ಅನುಗ್ರಹಿಸಬೇಕೆಂದು ಜಗದೀಶ್ವರನನ್ನು ಪ್ರಾರ್ಥಿಸಿ, ತನ್ನ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸಿ, ನಿಶ್ಚಲಳಾಗಿ ಕತ್ತಿಯಪೆಟ್ಟಿಗೆ ಹೆದರದೆ ತಲೆಬಾಗಿಸಿ, ವಧ್ಯಶಿಲೆಯಲ್ಲಿ ಕುಳಿತುಕೊಂಡಳು. ಹರಿಶ್ಚಂದ್ರನೂ ಒಳಗಣಿಂದ ಉಕ್ಕಿ ಬರುತ್ತಿದ್ದ ದುಃಖವನ್ನು ಅಡಗಿಸಿಕೊಂಡು, ಸ್ವಾಮಿಕಾರ್ಯವನ್ನು ಮಾಡದಿರಲಾಗದೆಂದು ನಿರ್ಧರಿಸಿ ಖಡ್ಗವನ್ನು ಹಿರಿದು ಆಕೆಯ ತಲೆಯನ್ನು ಕಡಿಯುವುದಕ್ಕೆ ಗುರಿನೋಡುತ್ತೆ ಕೈಯನ್ನು ಮೇಲಕ್ಕೆತ್ತಿದನು.
ಆಗ ನೋಡುವುದಕ್ಕೆ ಬಂದಿದ್ದ ಜನಸಂದಣಿಯೊಳಗಣಿಂದ ವಿಶ್ವಾ ಮಿತ್ರನು ಓಡಿಬಂದು ಹರಿಶ್ಚಂದ್ರನ ಕೈಯನ್ನು ಹಿಡಿದು ನಿಲ್ಲಿಸಿ ಹೀಗೆಂದನು.
ವಿಶ್ವಾ- ಎಲೈ, ರಾಜೋತ್ತಮನೇ! ಇದುವರೆಗೂ ನೀನು ಭೂತದಯಾಪರನೆಂದೂ, ಪುಣ್ಯಚರಿತ್ರನೆಂದೂ ಪ್ರಸಿದ್ದಿಯನ್ನು ಹೊಂದಿ, ಕಟ್ಟಕಡೆಗೆ ಇಂತಹ ಕ್ರೂರ ಕೃತ್ಯವನ್ನು ಮಾಡುವುದಕ್ಕೆ ಸನ್ನದ್ಧನಾಗಿ ಸ್ತ್ರೀಹತ್ಯೆಯನ್ನು ಮಾಡುವುದು ನಿನ್ನಂತಹ ಧರ್ಮಶೀಲನಿಗೆ ಉಚಿತವಲ್ಲ. ಉತ್ತಮಳಾದ ಕುಲಾಂಗನೆಯನ್ನು ಕೊಂದು ಮುಂದೆ ಆವ ಸುಖವನ್ನು ಹೊಂದೀಯೆ? ಈಗಲಾದರೂ ನನ್ನ ಮಾತನ್ನು ಕೇಳಿ ನೀನೊಂದು ಸುಳ್ಳನ್ನು ಹೇಳು. ತತ್‌ಕ್ಷಣವೇ ನಾನು ನಿನ್ನ ಮಗನನ್ನು ಜೀವಿಸುವಂತೆ ಮಾಡಿ, ನಿನ್ನ ಪತ್ನಿಯನ್ನು ಕ್ಷಮಿಸುವಂತೆ ಅರಸನನ್ನು ಪ್ರಾರ್ಥಿಸಿ, ನಿನ್ನನ್ನು ಪತ್ನಿ ಸಮೇತನನ್ನಾಗಿ ನಿನ್ನ ರಾಜ್ಯಕ್ಕೆ ಮತ್ತೆ ಕಳುಹಿಸುವೆನು. ಇನ್ನು ಮರುಮಾತಾಡದೆ ನಾನು ಹೇಳಿದಂತೆ ಮಾಡು.
ಹರಿ-ಎಲೈ, ಮುನಿವರ್ಯನೆ! ನನ್ನನ್ನು ಅಧರ್ಮಕ್ಕೆ ಸೆಳೆಯಬೇಕೆಂದು ಪ್ರಯತ್ನಿಸುವುದು ನಿನ್ನಂತಹ ಸಮಸ್ತ ಧರ್ಮವೇನಿಗೆ ನ್ಯಾಯವೇ? ಧರ್ಮಮಾರ್ಗವನ್ನು ತ್ಯಜಿಸುವುದರಿಂದ ಲಭಿಸಬಹುದಾಗಿದ್ದರೆ ಆ ಸ್ವರ್ಗ ಲೋಕವೂ ನನಗೆ ಬೇಡ. ಮನಸ್ಥೈರ್ಯವಿಲ್ಲದೆ ವಿಪತ್ತು ಸಂಭವಿಸಿದ ಕಾಲದಲ್ಲಿ ಹರಿಶ್ಚಂದ್ರನು ಧರ್ಮಚ್ಯುತನಾದನೆಂದು ನಿಂದೆಯನ್ನು ಹೊಂದಿ ಅತಿತುಚ್ಛವಾದ ಸುಖವನ್ನು ಹೊಂದುವುದಕ್ಕಿಂತ ಸಾಯುವುದೇ ಲೇಸು. ತಾವು ನನ್ನಲ್ಲಿ ಅನುಗ್ರಹವಿಟ್ಟು ಇನ್ನು ಮುಂದೆ ಇಂತಹ ಮಾತುಗಳನ್ನು ಅಪ್ಪಣೆಕೊಡಿಸಲಾಗದು. ಈಗ ನನ್ನ ಕೈಯಲ್ಲಿರುವ ಖಡ್ಗವನ್ನು ತಡೆಯದೆ ತಾವು ಸ್ವಲ್ಪ ಕಾಲ ಹೊರಕ್ಕೆ ದಯಮಾಡಿಸಿರಿ. ಸ್ತ್ರೀವಧೆಯು ನಡೆಯುತ್ತಿರುವಾಗ ಇದಿರಾಗಿನಿಂತು ನೋಡುವುದು ಸರ್ವಸಂಗಪರಿತ್ಯಾಗವನ್ನು ಮಾಡಿ ತಪಸ್ವಿಗಳಾಗಿರುವ ತಮ್ಮಂತಹರಿಗೆ ಸಲ್ಲದು.
ಎಂದು ನಿಶ್ಚಂಕೆಯಾಗಿ ನುಡಿವ ಹರಿಶ್ಚಂದ್ರನ ಸತ್ಯತೆಯನ್ನೂ ಧರ್ಮ ಚಿಂತೆಯನ್ನೂ ಕಂಡು ವಿಶ್ವಾಮಿತ್ರನು ಆಶ್ಚರ್ಯಪಟ್ಟು, ಇನ್ನು ಆತನಿಂದ ಅಸತ್ಯವನ್ನಾಡಿಸುವೆನೆಂಬ ದುರ್ಭಾವನೆಯನ್ನು ಬಿಟ್ಟು, ಇಂತಹ ಆಪತ್ಸಮಯದಲ್ಲಿ ಉಪೇಕ್ಷಿಸುವುದು ಕ್ರೂರಕಿರಾತಕೃತ್ಯವಾಗುವುದಲ್ಲದೆ ಮಾನುಷ ಕೃತ್ಯವಲ್ಲವೆಂದು ನಿಶ್ಚಯಿಸಿ, ಹರಿಶ್ಚಂದ್ರನ ಕೈಯನ್ನು ಹಿಡಿದುಕೊಂಡು, ತನ್ನ ಶಿಷ್ಯರಲ್ಲಿ ಒಬ್ಬನನ್ನು ಕರೆದು ತತ್‌ಕ್ಷಣವೇ ಆ ಪಟ್ಟಣದ ರಾಜನ ಬಳಿಗೆ ಕಳುಹಿಸಿದನು. ಕೆಲಹೊತ್ತಿನೊಳಗಾಗಿ ಅರಸನು ಮಂತ್ರಿಗಳೇ ಮೊದಲಾದ ಸಮಸ್ತ ಪ್ರಕೃತಿವರ್ಗದೊಡನೆ ರುದ್ರಭೂಮಿಗೆ ಬಂದನು. ಆಗ ಸಮಸ್ತ ಜನರೂ ಕೇಳುತ್ತಿರಲು ವಿಶ್ವಾಮಿತ್ರನು ಆ ದಂಪತಿಗಳೇ ಚಂದ್ರಮತೀ ಹರಿಶ್ಚಂದ್ರರೆಂದೂ, ತನಗೂ ವಸಿಷ್ಠನಿಗೂ ಪಂತವುಂಟಾಗಿ ಅವರಿಂದ ಅಸತ್ಯವನ್ನಾಡಿಸಬೇಕೆಂದು ತಾನು ಅವರನ್ನು ಹಲವುಬಗೆಯಾಗಿ ಶ್ರಮಗೊಳಿಸಿ ಕಡೆಗೆ ತಾನೇ ಪರಾಜಿತನಾದೆನೆಂದೂ, ಚಂದ್ರಮತಿಯು ನಿರಪರಾಧಿನಿಯೆಂದೂ, ಅರ್ಧರಾತ್ರೆ ಸಮಯದಲ್ಲಿ ತಾನೇ ತನ್ನ ಶಿಷ್ಯರಿಂದ ರಾಜಾಂತಃಪುರಕ್ಕೆ ಕನ್ನವನ್ನು ಹಾಕಿಸಿ ರಾಜಪುತ್ರನನ್ನು ತರಿಸಿದೆನೆಂದೂ, ಆ ಮಗುವಿನ ಆಭರಣಗಳನ್ನು ಆಕೆಯುಡಿಯಲ್ಲಿ ಹಾಕಿ ಬಳಿಕ ರಾಜಭಟರನ್ನು ಕರೆತಂದು ಅವಳನ್ನವರ ಅಧೀನೆಯನ್ನಾಗಿ ಮಾಡಿದವನು ತನ್ನ ಶಿಷ್ಯನೇ ಎಂದೂ, ನಂಬುಗೆಯುಂಟಾಗುವಂತೆ ಹೇಳಿ, ಆ ಕುಮಾರನನ್ನು ಕರೆಯಿಸಿ ಅರಸನಿಗೆ ಸಮರ್ಪಿಸಿದನು. ರಾಜನೂ ವಿಸ್ಮಿತನಾಗಿ ಆ ದಂಪತಿಗಳನ್ನೂ ವಿಶ್ವಾಮಿತ್ರನನ್ನೂ ಬಹುವಿಧವಾಗಿ ಶ್ಲಾಘಿಸಿ ಹರಿಶ್ಚಂದ್ರನನ್ನಾಲಿಂಗಿಸಿದನು. ಆಗ ಅಲ್ಲಿ ನೋಡುವುದಕ್ಕೋಸುಗ ಬಂದಿದ್ದವರಲ್ಲಿ ಕಾಲಕೌಶಿಕನೂ, ವೀರಬಾಹುವೂ ಇದ್ದರು. ವಿಶ್ವಾಮಿತ್ರನು ಅವರಿಬ್ಬರನ್ನೂ ಅರಸನ ಸಮ್ಮುಖಕ್ಕೆ ಕರೆತಂದು, ಅವರಿಂದ ತೆಗೆದುಕೊಂಡಿದ್ದ ಹಣವನ್ನು ಅವರಿಗೆ ಹಿಂತಿರುಗಿಸಿ, ಚಂದ್ರಮತೀ ಹರಿಶ್ಚಂದ್ರರನ್ನು ದಾಸ್ಯದಿಂದ ವಿಮುಕ್ತರನ್ನಾಗಿ ಮಾಡಿದನು. ತರುವಾಯ ಸರ್ಪದಷ್ಟನಾಗಿ ಮೂಛೆ೯ಯನ್ನು ಹೊಂದಿ ಮೃತನಾದಂತೆ ಮಲಗಿದ್ದ ಲೋಹಿತಾಸ್ಯನ ಬಳಿಗೆ ಹೋಗಿ ತನ್ನ ಸಮಾಪದಲ್ಲಿದ್ದ ದಿವ್ಯೌಷದಗಳನ್ನು ಪ್ರಯೋಗಿಸಿ ಆತನನ್ನು ಸಜೀವನನ್ನಾಗಿ ಮಾಡಿ ಚಂದ್ರಮತಿ ಹರಿಶ್ಚಂದ್ರರಿಗೆ ಅಪರಿಮಿತಾನಂದವನ್ನುಂಟುಮಾಡಿಸಿದನು. ಆಗಳಲ್ಲಿಗೆ ಬಂದಿದ್ದವರೆಲ್ಲರೂ ಚಂದ್ರಮತೀ ಹರಿಶ್ಚಂದ್ರರ ಧೈರ್ಯಸ್ಫೈರ್ಯಗಳಿಗೂ, ಧರ್ಮಪರಾಯಣತೆಗೂ ಮೆಚ್ಚಿ ಬಗೆಬಗೆಯಾಗಿ ಕೊಂಡಾಡಿದರು. ಕೆಲದಿನಗಳಲ್ಲಿ ಅವರ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸಿತು. ಅಷ್ಟರಲ್ಲಿ ಆ ಕಾಶೀದೇಶದ ರಾಜನು ಚಂದ್ರಮತೀ ಹರಿಶ್ಚಂದ್ರರನ್ನು ತನ್ನ ಹಿಂದೆ ಕರೆದು ಕೊಂಡುಹೋಗಿ ಕೆಲದಿನಗಳವರೆಗೂ ತನ್ನ ಮನೆಯಲ್ಲಿಟ್ಟುಕೊಂಡಿದ್ದು, ಸರ್ವವಿಧಗಳಲ್ಲಿಯೂ ಅವರನ್ನು ಸತ್ಕರಿಸಿ, ಅವರಿಗೆ ತನ್ನ ಸೈನ್ಯವನ್ನು ಬೆಂಗಾವಲನ್ನಾಗಿ ಕೊಟ್ಟು ವಿಶ್ವಾಮಿತ್ರನೊಡನೆ ಅವರನ್ನು ಅಯೋಧ್ಯಾಪುರಕ್ಕೆ ಕಳುಹಿಸಿದನು. ನಾಲ್ಕಾರುದಿನಗಳು ಪ್ರಯಾಣಮಾಡಿ ಅವರೆಲ್ಲರೂ ಅಯೋಧ್ಯಾಪುರವನ್ನು ಸುಖವಾಗಿ ಸೇರಿದರು. ಚಂದ್ರಮತಿ ಹರಿಶ್ಚಂದ್ರರು ಬರುತ್ತಿರುವರೆಂಬ ಮಾತನ್ನು ಪೌರರೆಲ್ಲರೂ ಮೊದಲೇ ಕೇಳಿ, ಮೃತರಾದ ತಮ್ಮ ಮುಖ್ಯ ಬಂಧುಗಳು ಮತ್ತೆ ಬದುಕಿಬಂದಂತೆಣಿಸಿ ಸಂತೋಷಿಸುತ್ತೆ ಪಟ್ಟಣವನ್ನೆಲ್ಲ ಅಲಂಕರಿಸಿದರು; ಮಂತ್ರಿಗಳು ಮೊದಲಾದವರೆಲ್ಲರೂ ಪರಮಸಂತೋಷದಿಂದ ಇದಿರ್ಗೊಂಡರು. ವಿಶ್ವಾಮಿತ್ರನು ಆ ರಾಜದಂಪತಿಗಳನ್ನು ರಾಜಭವನಕ್ಕೆ ಕರೆದುಕೊಂಡು ಹೋಗಿ, ಅಲಂಕೃತವಾಗಿದ್ದಾ ಅರಮನೆಯಲ್ಲಿ ಮಂಗಳವಾದ್ಯಗಳು ಭೋರ್ಗರೆಯುತ್ತಿರಲು, ಸಮಸ್ತ ಮಂತ್ರಿ ಬಾಂಧವನಿಯೋಗಿಜನಗಳಿದಿರಾಗಿ ಹರಿಶ್ಚಂದ್ರನನ್ನು ಮತ್ತೆ ಸಕಲರಾಜ್ಯಕ್ಕೂ ಪಟ್ಟಾಭಿಷಿಕ್ತನನ್ನಾಗಿ ಮಾಡಿದನು. ಈ ಮಹೋತ್ಸವವನ್ನು ಕೇಳಿ ವಸಿಷ್ಠನೂ ಅಲ್ಲಿಗೆ ಬಂದಿದ್ದನು.
ವಿಶ್ವಾ– ನಿನ್ನ ಸತ್ಯಶೀಲತೆಯನ್ನು ಪರೀಕ್ಷಿಸಲೋಸುಗ ನಿನ್ನನ್ನೂ, ನಿನ್ನ ಹೆಂಡತಿಯನ್ನೂ ನಾನು ಅನೇಕ ಕಷ್ಟಗಳಿಗೆ ಗುರಿಮಾಡಿದೆನು. ನಿಮ್ಮ ವಿಷಯದಲ್ಲಿ ನಾನು ಮಾಡಿರುವ ಅಪರಾಧಗಳನ್ನೆಲ್ಲ ಮರೆತುಹೋಗಿ ನೀವೀರ್ವರೂ ನನ್ನನ್ನು ಕ್ಷಮಿಸಬೇಕು.
ಹರಿ-ನೀವು ನನಗೆ ಮಹೋಪಕಾರವನ್ನೇ ಮಾಡಿರುವಿರಿ. ನಿಮ್ಮಿಂದಲೇ ನನಗೆ ಈ ಲೋಕದಲ್ಲಿ ಸತ್ಯಸಂಧನೆಂಬ ಖ್ಯಾತಿಯುಂಟಾಯಿತು. ನೀವು ಮಾಡಿರುವ ಉಪಕಾರವನ್ನು ನಾನೆಂದಿಗೂ ಮರೆಯೆನು. ನನಗೆ ಬಾಧೆಯನ್ನುಂಟುಮಾಡಿದೆನೆಂದು ನೀವು ಮನಸ್ಸಿನಲ್ಲಿ ಸ್ವಲ್ಪವಾದರೂ ಕಿಂಕೃತಿಯನ್ನು ಹೊಂದಲಾಗದು.
ಎಂದು ಈ ರೀತಿಯಾಗಿ ಈರ್ವರಿಗೂ ಸ್ವಲ್ಪ ಕಾಲ ಉಚಿತಪ್ರಶ್ನೊತ್ತರಗಳು ನಡೆದ ಬಳಿಕ ವಿಶ್ವಾಮಿತ್ರನು ಮನಸ್ಸಿನಲ್ಲಿ ಸಂಕೋಚವನ್ನುಳಿದು ಸಂತೋಷದಿಂದ ಸಮಸ್ತರ ಇದಿರಾಗಿ, ತನ್ನ ತಪಸ್ಸಿನಲ್ಲಿ ಅರ್ಧಭಾಗವನ್ನು ವಸಿಷ್ಠನಿಗೆ ಧಾರೆಯೆರದುಕೊಟ್ಟು ಶಿಷ್ಯರೊಡನೆ ತನ್ನ ಆಶ್ರಮಕ್ಕೆ ಹೊರಟು ಹೋದನು. ತನ್ನ ಮಾತು ಅಸತ್ಯವಾಗದೆ ಗೆದ್ದುದಕ್ಕೋಸುಗ ವಸಿಷ್ಠನು ಪರಮಾನಂದಭರಿತನಾಗಿ ತನ್ನ ತಪೋವನಕ್ಕೆ ಹೊರಟುಹೋದನು. ಹರಿಶ್ಚಂದ್ರನು ತನ್ನ ಪ್ರಜೆಗಳೆಲ್ಲರೂ ಅತ್ಯಾನಂದದಿಂದಿರಲು ಬಹುಕಾಲ ರಾಜ್ಯ ವಾಳುತ್ತಿದ್ದು, ಕೆಲಕಾಲವಾದ ಬಳಿಕ ರಾಜಸೂಯಯಾಗವನ್ನು ಮಾಡಿ ದೇಶಾಂತರಗಳಲ್ಲಿಯೂ ತನ್ನ ಕೀರ್ತಿಯನ್ನು ಸ್ಥಾಪಿಸಿದನು. ಚ೦ದ್ರಮತಿಯೂ ಹರಿಶ್ಚಂದ್ರನೂ ಪುಷ್ಪವರಾಗನ್ಯಾಯದಿಂದ ಅತ್ಯಂತವಾಗಿ ಅನ್ಯೋನ್ಯತೆಯನ್ನು ಹೊಂದಿ, ಅನುರಾಗದಲ್ಲಿ ಸ್ವಲ್ಪವಾದರೂ ಕುಂದಿಲ್ಲದೆ, ವಿವಾದವೆಂಬ ಮಾತನ್ನು ಕನಸಿನಲ್ಲಾದರೂ ಕಾಣದೆ, ಅವಕಾಶ ಸಿಕ್ಕಿದಾಗಲೆಲ್ಲಾ, ಸದ್ಗ್ರಂಥಶ್ರವಣದಲ್ಲಿಯೂ ಲೋಕೋಪಕಾರಕರಳಾದ ವಿಷಯಗಳಲ್ಲಿಯೂ ನಿರತರಾದರು. ಲೋಕದಲ್ಲಿ ಯಾರಾದರೂ ದಂಪತಿಗಳು ಐಕ್ಯಮತ್ಯವನ್ನೂ, ಸನ್ಮಾರ್ಗಪ್ರವರ್ತನವನ್ನೂ ಕಲಿಯಬೇಕೆಂದಪೇಕ್ಷಿಸುವರಾದರೆ ಈ ದಂಪತಿಗಳು ಕಂಡು ಕಲಿಯಬೇಕು. ಚಂದ್ರಮತಿಯು ವಿದ್ಯಾವತಿಯಾಗಿದ್ದುದರಿಂದ ವಿದ್ಯೆಯ ಪ್ರಯೋಜನವನ್ನು ಚೆನ್ನಾಗಿ ಅರಿತವಳಾಗಿ ತನ್ನ ಸಹಚಾರಿಣಿಯರಾದ ಸ್ತ್ರೀಯರಿಗೆಲ್ಲ ವಿದ್ಯೋಪದೇಶವನ್ನು ಮಾಡಿ ಹಿತಧರ್ಮಬೋಧನೆಯನ್ನು ಮಾಡುತ್ತಿದ್ದುದಲ್ಲದೆ ಆ ರಾಜ್ಯದಲ್ಲಿ ಬಾಲಿಕಾ ಪಾಠಶಾಲೆಗಳನ್ನು ಸ್ಥಾಪಿಸಿ ಸ್ತ್ರೀಯರನ್ನೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ವಿದ್ಯಾವತಿಯರನ್ನಾಗಿ ಮಾಡಿದರು. ಆದಕಾರಣ ಆ ಕಾಲದಲ್ಲಿ ಸ್ತ್ರೀಯರೂ ವಿದ್ಯಾವತಿಯಾಗಿ, ತಂತಮ್ಮ ಪತಿಗಳು ಮಾಡುವ ಸತ್ಕಾರ್ಯಗಳಿಗೆ ಅಡ್ಡಿ ಮಾಡದೆ ಮೌಢ್ಯವನ್ನು ತ್ಯಜಿಸಿ, ಸಮಸ್ತ ವಿಷಯಗಳಲ್ಲಿಯೂ ಅವರಿಗೆ ಅನುಕೂಲರಾಗುತ್ತೆ, ಒಡವೆ ಮೊದಲಾದುವೆಲ್ಲ ವ್ಯರ್ಥದಂಭಗಳೆ೦ದೂ ವಿಫಲಕಾರಿಗಳೆಂದೂ ವಿದ್ಯಾಮಹಿಮೆಯಿಂದ ತಿಳಿದುಕೊಂಡು, ಅವುಗಳಿಗೋಸುಗ ಗಂಡಂದಿರನ್ನು ಬಾಧಿಸದೆ ಪತಿವ್ರತೆಯರಾಗಿ ಲೋಕವೆಲ್ಲ ಮೆಚ್ಚುವಂತೆ ನಡೆದುಕೊಳ್ಳುತ್ತಿದ್ದರು. ಪುರುಷರೂ ಗೃಹಕೃತ್ಯ ನಿರ್ವಹಣಭಾರವನ್ನು ಆಷ್ಟಾಗಿ ವಹಿಸದೆ ಸುಖಿಗಳಾಗಿದ್ದರು. ಚಂದ್ರಮತೀ ಹರಿಶ್ಚಂದ್ರರ ಕಾಲದಲ್ಲಿ ಉಂಟಾಗಿದ್ದ ದಾಂವತ್ಯಾನುಕೂಲ್ಯವು ಮತ್ತಾವಕಾಲದಲ್ಲಿಯೂ ಉಂಟಾಗಲಿಲ್ಲ. ರೂಪವತಿಯೂ ಗುಣವತಿಯೂ ಆದ ಚಂದ್ರಮತಿಯ ದೆಸೆಯಿಂದಲ್ಲವೆ ಲೋಕಕ್ಕೆಲ್ಲ ಮೇಲುಂಟಾದುದು! ಎಲೌ ನಾರೀಮಣಿಯರಿರಾ! ಎಲೈ ಪುರುಷಶ್ರೇಷ್ಠರಿರಾ! ನೀವೂ ಚಂದ್ರಮತೀ ಹರಿಶ್ಚಂದ್ರರಂತೆ ಸೌಶೀಲ್ಯ ಸದ್ಗುಣಗಳಿಂದ ಅಲಂಕೃತರಾದರೆ ನಮ್ಮ ಈ ಗ್ರಂಧರಚನೆಯು ಗೌರವಿಸಲ್ಪಟ್ಟೀತೆಂದೆಣಿಸುವೆವು.
ಸಂಪೂರ್ಣ೦.
| ಪುಟ. | ಪಙ್ತಿ. | ಅಶುದ್ಧ. | ಶುದ್ಧ. |
|---|---|---|---|
| ಪ್ರಾರ್ಥನೆಯಲ್ಲಿ | ೫ | ಆಂದ್ರ | ಆಂಧರ |
| ೩ | ೮ | ಉದ್ಯೊಗ | ಉದ್ಯೋಗ |
| ೪ | ೭ | ಐಕ್ಯಮತ್ಯ | ಐಕಮತ್ಯ |
| ಶುಭುಉಂಟಾಗು | ಶುಭವುಂಟಾಗು | ||
| ೧೩ | ೩ | ಇಂದ್ರಜಾಲಿಕ | ಐಂದ್ರಜಾಲಿಕ |
| ೧೪ | ೨೦ | ಭಮೆ | ಭ್ರಮೆ |
| ೧೯ | ೨೦ | ಮತ | ಮಲೆ |
| ೨೮ | ೬ | ಭಾದೆ | ಬಾದೆ |
| ೩೭ | ೫ | ಗರ್ವವನು | ಗರ್ವವನ್ನು |
| ೩೮ | ೧೦ | ಬೇಕಿಂದು | ಬೇಕೆಂದೂ |
| ೨೪ | ಹಾಗಯೇ | ಹಾಗೆಯೇ | |
| ೩೯ | ೨೨ | ಮಾಡಿದ್ದರಲ್ಲವೆ | ಮಾಡಿದ್ದಿರಲ್ಲವೆ |
| ೪೦ | ೨ | ಬಿಸಲಿಗೂ | ಬಿಸಿಲಿಗೂ |
| ೪೧ | ೨೨ | ನಮ | ನಮ್ಮ |
| ೪೫ | ೧೪ | ಇಬರು | ಇಬ್ಬರು |
| ೪೬ | ೨ | ಪದಾರ್ಥಗಳನು | ಪದಾರ್ಥಗಳನ್ನು |
| ೧೦ | ತಿಂಗಳವರಿಗೆ | ತಿಂಗಳವರೆಗೆ | |
| ೬೭ | ೭ | ಹರಿಂಶ್ಚದ್ರ | ಹರಿಶ್ಚಂದ್ರ |
| ೭೧ | ೧೬ | ಗಾಡಾಂಧಕಾರ | ಗಾಢಾಂಧಕಾರ |
| ೭೬ | ೮ | ಅರ್ದರಾತ್ರೆ | ಅರ್ಧರಾತ್ರ |
| ೭೭ | ೨೫ | ದಾರೆಯೆರೆದು | ಧಾರೆಯೆರೆದು |
IV
| ಶ್ರೀ ತಿರುಮಲಮ್ಮನವರಿಂದ | ರೂ. ಆ. | ಶ್ರೀಯುತ ಎಂ ವಿ ಶಾಸ್ತ್ರಿಗಳವರಿಂದ | ರೂ. ಆ. |
|---|---|---|---|
| ಭದ್ರಗೀತಾವಳಿ | 0-4 | ಸನ್ಯಾಸಿ | 0-2 |
| ವಿಕ್ರಮ-ಕಾದಂಬರಿ | 1-2 | ಸುಷಮ | 0-2 |
| ಚಂದ್ರವದನಾ ನಾಟಕ | 0-10 | ದಾಮಿನಿ | 0-2 |
| ಸುಮುಖೀವಿಜಯ | 0-6 | ವಿಷ ವಿವಾಹ | 0-4 |
| ಪೂರ್ಣಕಲಾ-ಕಾದ೦ಬರಿ | 1-4 | ನಿರ್ಮಲೆ | 0-4 |
| ಬಂಗಾಳಿ ನಾವಲ್ಸ್ | ಸರಳ | 0-2 | |
| ಸೌದಾಮಿನಿ ಎಂ ವಿ ಶಾಸ್ತ್ರಿ | 0-8 | ಹೇಮಮಿತ್ರ | 0-1 |
| ಅನಾಥಪ್ರೇತ | 0-1 | ವಿಷವಲ್ಲರಿ | 0-6 |
| ಸಂತಾಪಕ | 0-6 | ಪದ್ಯಸಾರ II | 0-6 |
| ಚಂದ್ರಮತಿ | 0-8 | ವ್ಯಾಕರಣಸಾರ | 0-8 |
| ಕಮಲಕುಮಾರಿ | 0-12 | ಬಾಲವ್ಯಾಕರಣ | 0-6½ |
| ಸುವ್ರತ | 0-13 | ನೀತಿಚಿಂತಾಮಣಿ I | 0-3¾ |
| ಇಂದ್ರಕೀಲ ವಿಜಯನಾ | 1-4 | ಕಥಾವಳಿ ಭಾಗ I | 0-4 |
| ಪದ್ಯಸಾರ I | 0-8 | ಕಥಾವಳಿ ಭಾಗ II | 0-4 |
| ಪ್ರಿಯಂವದಾ | 0-4 | ಸುನಂದಿನಿ | 0-6 |
| ಲಜ್ಜಾವತಿ | 0-5 | ಧರ್ಮ ಸಾಮ್ರಾಜ್ಯ | 1-4 |
| ವಿಲಾಸಿನಿ | 0-10 | ನಿರ್ಮಲೆ | 0-12 |
| ಗೃಹಿಣೀಧರ್ಮದೀಪಿಕೆ | 0-8 | ವಿವೇಕದೀಪಿಕೆ I-II | 0-4 |
| ಸತೀಹಿತಬೋಧಿನಿ III-II | 0-6 | ಸಂಗೀತಪಾರಿಜಾತಹಾಡು | 0-5 |