ಚೆಲುವು
ಚೆಲುವು
ಶ್ರೀನಿವಾಸ
ಬೆಲೆ ೧೪ ಆಣೆ
ಬೆಂಗಳೂರು ಪ್ರೆಸ್, ಮೈಸೂರು ರೋಡ್
ಬೆಂಗಳೂರು ಸಿಟಿ
೧೯೩೧
All Rights Reserved
_____
ಈ ಕವಿತೆಗಳ ಗುಚ್ಚದಲ್ಲಿ ಸೇರಿರುವ ಅಂಗಾಮಿಪ್ರೇಮ ಗೀತವು ಅಸ್ಸಾಮ್‌ದೇಶದ ಅಂಗಾಮಿನಾಗರೆಂಬ ಕಾಡು ಜನರ ಒಂದು ಗೀತದ ಅನುವಾದ. ಈಗ ಇಂಡಿಯಾದೇಶದ ಸೆನ್‌ಸಸ್ ಕಮಿಷನರಾಗಿರುವ ಡಾಕ್ಟರ್ ಹಟನ್‌ರವರು ಈ ಜನರ ವಿಚಾರವಾಗಿ ತಾವು ಬರೆದಿರುವ ಒಂದು ಗ್ರಂಥದಲ್ಲಿ ಆ ಗೀತವನ್ನು ಇಂಗ್ಲೀಷಿಗೆ ಭಾಷಾಂತರಮಾಡಿದಾರೆ. ಅದನ್ನು ಓದಿದಾಗ ನನಗೆ ಕಾಡಿನವರೆಂಬ ಜನರ ಮನಸ್ಸು ಎಷ್ಟು ಸಂಸ್ಕೃತವಾಗಿರಬಹುದೆಂದು ತೋರಿ ಅನುವಾದದಲ್ಲಿ ಅರ್ಥ ವನ್ನು ಕೆಡಿಸಿಯೇನೆಂಬ ಭೀತಿಯಿದ್ದರೂ ಅದು ನಮ್ಮ ಜನಕ್ಕೆ ತಿಳಿದಿರಬೇಕೆಂಬ ಉದ್ದೇಶದಿಂದ ಅದನ್ನು ಕನ್ನಡದಲ್ಲಿ ಬರೆದಿದ್ದೇನೆ. ಗೀತದಲ್ಲಿ ಬರುವ ಸೊರೊಳು ಎನ್ನುವುದು ಒಂದು ಸ್ವಳ; ಕೆಸ್ತೂರು ಎನ್ನುವುದು ಮೂಲದ ಕೆಟ್ಷೋರು ಎನ್ನುವುದಕ್ಕೆ ಭಾಷಾಂತರದಲ್ಲಿ ಸಂಭವಿಸಿದ ರೂಪಾಂತರ.
| ಬೆಂಗಳೂರು, ಪ್ರಜೋತ್ಪತ್ತಿ ಸಂ‖ | ಶ್ರೀನಿವಾಸ | |
| ಕಾರ್ತೀಕ ಬಹುಳ ತ್ರಯೋದಶಿ. |
| ಕೆಲವು ಸಣ್ಣ ಕತೆಗಳು | ಉಷಾ (ಸಣ್ಣ ದೃಶ್ಯ) |
|---|---|
| ಬಿನ್ನಹ (ಗೀತೆಗಳು) | ಸುಬ್ಬಣ್ಣ (ಕತೆ) |
| ಶಾಂತಾ (ಸಣ್ಣ ದೃಶ್ಯ) | ತಾಳಿಕೋಟೆ (ಐತಿಹಾಸಿಕ ದೃಶ್ಯ) |
| ಸಾವಿತ್ರಿ (,,) | ವಿಮರ್ಶೆ ೨ (ಲೇಖನಗಳು) |
| ಸಣ್ಣ ಕತೆಗಳು | ಕನ್ನಡದ ಸೇವೆ (ಭಾಷಣ) |
| ಸಾಹಿತ್ಯ(ಉಪನ್ಯಾಸ) | ಉದಾಕನ್ನಡದ ಸೇವೆ (ಭಾಷಣ)ರಣೆ |
| ಅರುಣ (ಪದ್ಯಗಳು) | ಮಂಜುಳಾ (ಸಾಮಾಜಿಕ ದೃಶ್ಯ) |
| ವಿಮರ್ಶೆ ೧ (ಲೇಖನಗಳು) | ತಾವರೆ (ಪದ್ಯಗಳು) |
| ಉದಾಹರಣೆ | ಉದಾಹರಣೆ |
ಕರ್ಣಾಟಕದ ಜನತೆಯ ಸಂಸ್ಕೃತಿ
ಈ ಪುಸ್ತಕಗಳು ದೊರೆಯುವ ಸ್ಥಳಗಳು :-
ಕರ್ಣಾಟಕ ಸಾಹಿತ್ಯ ಪ್ರಕಟನ ಮಂದಿರ, ಬೆಂಗಳೂರು
ಎಂ. ಎಸ್. ರಾವ್ ಕಂಪೆನಿ, ದೊಡ್ಡಪೇಟೆ, ಬೆಂಗಳೂರು
ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜು, ಬೆಂಗಳೂರು
ದಿ ಪ್ರೋಗ್ರೆಸ್ ಬುಕ್ ಸ್ಟಾಲ್, ಮೈಸೂರು
ಶ್ರೀ ಶಂಕರ ಕರ್ನಾಟಕ ಪುಸ್ತಕ ಭಾಂಡಾರ, ಧಾರವಾಡ
| ಮುನ್ನುಡಿ | ಪುಟ | |||
|---|---|---|---|---|
| ೧ | ಚೆಲುವ ದೇವಿ | .. | .. | ೧ |
| ೨ | ಕಾಡುಹೂಗಳು | .. | .. | ೫ |
| ೩ | ಬೆಳವನ ಹಕ್ಕಿ | .. | .. | ೯ |
| ೪ | ಮುರಿದುಬಿದ್ದ ವೀರಕಲ್ಲು | .. | .. | ೧೨ |
| ೫ | ಸಾತ್ವಿಕ | .. | .. | ೨೦ |
| ೬ | ಅಂಗಾಮಿಾ ಪ್ರೇಮ ಗೀತ | .. | .. | ೨೭ |
| ೭ | ಕೆನ್ನೆ ದಿಲೆ | .. | .. | ೨೯ |
| ೮ | ಕರಿ | .. | .. | ೩೨ |
| ೯ | ನೀಲಗಾರ ಮಾದ | .. | .. | ೩೬ |
| ೧೦ | ಚಿಕ್ಕಮಲ್ಲಮ್ಮ | .. | .. | ೪೨ |
| ೧೧ | ಕೊಂಬು | .. | .. | ೫೪ |
| ೧೨ | ಒಂದು ಸಂಜೆ | .. | .. | ೫೮ |
| ೧೩ | ಉದ್ಯಾನದಲ್ಲಿ | .. | .. | ೫೯ |
| ೧೪ | ಅರಿಕೆ | .. | .. | ೬೨ |
-
ಚೆಲುವು
ವಿಂಧ್ಯಪರ್ವತದ ಮಲೆಗಳ ಮಾಲೆ ಸುತ್ತ
ಸಾಗರದ ಅಲೆಯ ಮಾಲೆಯ ತೆರದೆ ಬಳೆದು,
ಚೆಂದದಲಿ ನೋಟವೋಡುವವರೆಗೆ ಹರಿದು,
ಆಗಸದ ಅಂಚನೆಲ್ಲೆಡೆಯ ಮುಟ್ಟಿಹುದು;
ಬಣ್ಣ ಬಣ್ಣದ ಎಲೆಯ ಸೊಗಸಿನಲಿ ವನವು
ಕಣ್ಣ ತಣಿಸುತಲಿಹುದು; ಸೋಲುತಿದೆ ಮನವು.
ನೇಸರಿಳಿದಿಹನು ಬಾಂದಳದ ಪಡುಗಡೆಗೆ,
ಪುಟವಿಡಿದ ಹೊಂದಟ್ಟೆವೊಲು ತೊಳಗುತಿಹನು;
ಮಾಸಲಾಯ್ತೆಲ್ಲ ಜಸವಿಲ್ಲೆಂದು ಕಣ್ಣ
ಮಿಟಿಕಿಸದೆ ನಭವು ಅವನನೆ ನೋಡುತಿಹುದು;
ಕಟ್ಟಕಡೆಯಾ ಗಿರಿಯ ಆಡುಮದ ಕೂಗು
ಮುಟ್ಟಿತನನನು; ಅದನು ಸೇರುವನು ಬೇಗ
ಸೇರುವನು; ಸೇರಿ ಮರೆಯುವನು ಇನಿತರೊಳೆ;
ಆಮುನ್ನ ಜಗವ ಬೆಳಕಿಂದ ತುಂಬಿಹನು;
ನೂರು ವರ್ಣದ ಎಲೆಯ ಸೊಬಗೆಸೆವ ವನಕೆ
ಪ್ರೇಮಪೂರಿತ ಹಾಸವನು ಸೂಸುತಿಹನು.
ಕಣ್ಣಿನಾಸೆಯ ತೀವಿ ಬಗೆಯ ಮಗನುಗಿಸಿ
ಎನ್ನೊಳಗ ಸೋಕಿಹುದು ಸಂಜೆಯೀ ಸೊಗಸು.
ಇಲ್ಲಿ ಮಲೆಗಳ ನಡುವೆ ನಡುಗಳನು ಕೊರೆದು
ತಿಳಿಯ ನೀಲದ ನೀರ ಹಿರಿದು ಹೊಳೆಯೊಂದು,
ಕಲ್ಲು ಮಣ್ಣಿನ ಹಾಸಿನಗಲಗಲಿ ಹರಹಿ,
ಚಲಿಸುವುದೆ ತಿಳಿಯದೊಲು ಮೆಲುಮೆಲನೆ ಉರುಳಿ
ಹಿಂದಾದುದನು ನೆನೆವ ಮನ ನಿಂದು ನೆನೆದು
ಮುಂದರಿವ ತೆರದೆ ಮುಂದರಿಯುತಿದೆ ಜನಿದು.
ಮೆಲುಗಾಳಿ, ಪೂರುವದ ಗಿರಿಗಳೆಡೆಯಿಂದ
ಹರಿತಂದು, ಎದುರಿನಲ್ಲಿ ಹರಿದು ಮುಂಬರಿದ
ತಿಳಿವೆಳಗ ಕಿರಣ ಸರಣಿಯ ಭರದೊಳಪ್ಪಿ,
ಸರಸದಲಿ ಅದರೊಡನೆ ನಲಿದಾಡುತಿಹುದು.
ಹಿರ್ವ ದೇವಿಯ ಅವಳಿಮಕ್ಕಳಿವರೊಲವ
ಸರ್ವವನ ನೋಡಿ ಮೆಚ್ಚಿತು ತಳೆದು ನಲವ.
ನೀರು ನೆಲ ಮಲೆಸಾಲು ಹೊಂಬಿಸಿಲು ಗಾಳಿ
ವನ ನಭಗಳನುಸರಣೆಯಲ್ಲಿ ಸೇರಿ ಒಂದು
ಧೋರಣಿಯೊಳೀ ಸಂಜೆಗಿತ್ತ ಮೆರುಗಿದಕೆ
ಧನದ ಕನಕದ ಹೊರೆಯ ಚೆಂದ ಎಣೆಯಹುದೆ?
ತಾಯಿ ಪ್ರಕೃತಿಯ ಮೊಗದವೀಕಾಂತಿ ಶಾಂತಿ ;
ಈಯಂದ ಚಂದ; ಈ ಪ್ರೇಮವಿಭ್ರಾಂತಿ.
ಕಣ್ಣೀಗ ಕಾಣುತಿಹ ಚೆಲುವ ನೋಟಕ್ಕೆ
ಮಿಗಿಲಾದ ಚೆಲುವು ಇರಬಹುದೆ ಲೋಕದಲಿ?
ಇನ್ನಿದಕೆ ಮೆರುಗಿಡುವ ಕಲೆ ಒಂದು ಉಂಟೆ?
ಸೊಗಸು ಇನ್ನಿನಿಸಾದರೂ ಮುಂಚಬಹುದೆ?
ಎಂದು ಮನ ಆನಂದದಲಿ ಕೇಳುತಿರಲು
ಮುಂದೆ ಕಂಡುದು ಎಲ್ಲ ಚೆಲುವಿಕೆಯ ಹುರುಳು.
ನಗೆ ಮೊಗದ ತಿಳಿಗಣ್ಣ ನಳಿದೋಳ ಚೆಲುವೆ-
ಬಳಿಯರ ಬಾಳ ಬೆಳಕಾಗಿರ್ಪಳಹುದು-
ಚಿಗರಿಯಂದದ ಹಗುರವಾದ ನಡೆಯಿಂದ
ಹೊಳೆಗೆ ಕೊಡ ಹಿಡಿದು ತಾನಿಳಿತಂದಳಾಗ;
ಮುಟ್ಟಿದುದು ಮುಗಿಲನಾಕ್ಷಣ ಚೆಲುವ ಶಿಖರ;
ಸೃಷ್ಟಿಯಂದಕೆ ಹೆಣ್ಣಿನಂದ ಮಣಿಮುಕುರ.
ಮಗುವಾಗಿ ತಾಯ್ತಂದೆವಿರ ಮನವ ನಲಿಸಿ,
ಸತಿಯಾಗಿ ಪತಿಯ ಹೃದಯದ ಸುಖವ ಸಲಿಸಿ,
ಜಗದಂಬೆಯವತಾರದಂತೆ ಕಳಕಳಿಸಿ
ಸುತರ ಹಡೆದೆ ಮುದ್ದಾಡಿ ಸಲೆ ಬೆಳೆಸಿ,
ಲಲನೆ ಅಂದುದ್ದೇಶಿಸದೆ ಕಣ್ಣ ತಣಿಸಿ
ಸುಳಿದಳೆದುರಿಗೆ ನನ್ನ ಆತುಮವ ಮಣಿಸಿ,
ಹೊರಗದಾವುದೊ ಚೆಲುವ ಮುಗುಳರಳುತಿಹುದು ;
ಒಳಗರಳುತಿಹುದಂತೆ ಅದನರಿವ ಶಕ್ತಿ;
ನಿರುತವೂ ನಡೆವವೀ ಎರಡು ವಿನ್ಯಾಸ,
ಬೆಳೆವುದಿಂತನವರತ ಚೆಲುವಿನ ವಿಕಾಸ;
ಅಂದಂದು ಕಾಂಬ ಚೆಲು ಹಿರಿದೆನಲು ಒಪ್ಪು;
ಮುಂದುವರಿಯದು ಇನ್ನಿ ದೆನಲು ಅದು ತಪ್ಪು.
ಅದುಮೊದಲು ಆಗಾಗ ಒಮ್ಮೊಮ್ಮೆ ನಾನು
ಅಂದಿನಿಂದವನು ನೆನೆವೆನು ಮನದಿ ಮರಳಿ ;
ಕದಲದಿಹುದಾ ಚೆಲುವೆ ಹೊಳೆಗಿಳಿದು ಬಂದ
ಒಂದು ನಿಮಿಷದ ಚಿತ್ರ ಎಲ್ಲವನು ಮರೆಸಿ,
ಕೊಳೆ ಸೋಕದೊಂದು ಮೆಚ್ಚುಗೆ ಉಕ್ಕಿ ಹರಿದು
ಒಳಗ ಬೆಳಗುವುದು ಬಣ್ಣಿಪ ನುಡಿಯ ಜರೆದು.
ಮನದ ಬಾಂದಳಕಿಂಥ ನೆನವು ನಕ್ಷತ್ರ;
ತಾನೊಂದು ಬೆಳಗುವುದು ದೆಸೆಯೊಂದನೆಲ್ಲ.
ಮನುಜನನು ಗೆಲುವ ಚೆಲುವಿನ ತತ್ತ್ವ, ಜಗದ
ಮಾನವತೆಯೆಂದೆನಗೆ ಕಲಿಸಿತಾ ಸಂಜೆ;
ಮರೆಯ ಪರಮಾತುಮದ ಲೀಲೆಯೊಳಸಂಚು
ತೆರೆಯ ಮುಂದೆಸೆವೆಲ್ಲ ಚೆಲುವ ಸೆಳೆಮಿಂಚು.
೧
ಕಲ್ಲು ಮಣ್ಣು ಹೆಂಟೆ ಮುಳ್ಳು-
ಅವುಗಳ ನಡುವೆ ಇದೆಕೊ ರತ್ನ ;
ಮುಳ್ಳು ಮಣ್ಣು ನೊರಜಿನ ನಡುವೆ
ಇಕೊ ಹೊಚ್ಚ ಹೊಸ ಹೊನ್ನಕ್ಷತ್ರ.
ಇದೆಕೊ ದಾರಿಯ ಬದಿಯಲ್ಲಿ ಹುಲ್ಲಲಿ
ವಿಷ್ಟು ಕ್ರಾಂತಿಯ ಪರಿಮಿತ ನೀಲ;
ಇಲ್ಲಿ ಬೇರೆ ಯಾವುದೊ ಬಹು ನೀಲದ
ಮಡಲಲಿ ಹಳದಿಯ ಕುಸುರಿಯ ಲೋಲ.
ರಾಗಿಯ ಪೈರಿನ ಮಧ್ಯದಿ ಮುಳ್ಳಲಿ
ಕೊಂಬಿನ ಸುಂದರ ಇಕೊ ಗುಬ್ಬಚ್ಚಿ ;
ಬದುವಿನ ಗಿಡದಲಿ ಊದಾ ಬಣ್ಣದ
ಚಳತುಂಬಿನ ಚೆಲುಹೂವಿನ ಕುಚ್ಚು,
ಹೊಲದಲಿ ಹೊಂಬಣ್ಣದ ಹೊಳೆ ಹರಿಸಿ
ದತ್ತೂರಿ; ಆರಂಬದ ಕರೆ ಕರೆ;
ನನ್ನ ವೊಲಲೆಯುವ ಸೋಂಬರ ಮೆಚ್ಚು;
ಇಲ್ಲೆ ಇದರ ಸೋದರ ನೇಸರಮರಿ;
ಹತ್ತೋ ನೂರೋ ದಳಗಳ ನಡುವೆ
ಮಿನು ಮಿನುಗುವ ಈ ಬಟ್ಟನೆ ಪೀಠ,
ಅಲೆವೆಲರಿಗೆ ತಲೆಯೊಲೆಯದ ನಿಲುವು,
ಚೆಂದ ಇದೆಸಗುವ ಸೂರ್ಯನ ಬೂಟ.
ಇಲ್ಲಿದೊ ಬೊಂತೆಯ ಕಳ್ಳಿ ಪಿಂಗಳ
ವರ್ಣದ ಹೂವಲಿ ತೋರಿದೆ ನಚ್ಚ ;
ಎಲ್ಲರ ಜೊತೆಯಲಿ ರೋಜಿಯ ಹೂತು
ಹರಡಿದೆ ತನ್ನ ಬಣ್ಣದ ಹುಚ್ಚ.
ಏನಿದು ಚುಕ್ಕಿ ? ಅದೆ? ಕಣ್ಣಿಕ್ಕಿ
ನೋಡು ; ಅದು ದಳ ನಾಲ್ಕರ ಮೋಸ;
ಹೂಮನೆತನದಲಿ ಮರಿಮಗ; ಇದ್ದೂ
ಕಾಣದ ತಾರೆಯ ಕೂಸಿನ ಕೂಸು.
ಹೂದಳವಿಂತು ವಿಗಡಿಸೆ ನಿಂತು
ಹಂಬಿನೇಣಿಯಲಿ ಮರವನು ಏರಿ,
ಕಾಡಿನ ಹೂಗಳು ಜಗವನು ಗೆಲಿದೆವು,
ಎಂದು ಕೂಗುತಿದೆ ಇಲ್ಲಿ ತುತೂರಿ,
೨
ತಿರೆಯಲಿ ಮನುಜರು ನೋಡುವ ನೋಡದ
ಎಲ್ಲೆಡೆ ಅರಳಿದೆ ಯಾವುದೊ ಚಂದ;
ಬರಿ ನಗೆಯಾಟದಿ ಸಂತಸವಾಂತು
ಅದು ಯಾವುದೋ ನಲವಿನ ಚಕ್ಕಂದ
ಮರೆಯಲಿ ಅಡಗಿಹ ಹೂಗಳೆ ನೀವು
ಕಣ್ಮುಚ್ಚಾಲೆಯನಾಡುತಲಿಹಿರೊ ?
ಎದುರಿಗಿದ್ದು ಕಾಣದ ಕಿರಿಚುಕ್ಕಿಯೆ
ಇಂದ್ರಜಾಲವನ್ನು ಮಾಡುತಲಿಹೆಯೊ?
ನಿಮ್ಮಾನಂದದಿ ಆಡುತ ಕೂಗುತ
ನೀವಿರೆ ನೋಡದೆ ನಡೆವೆವು ನಾವು;
ನೋಡರು ಎಂದು ಮುನಿಯುತೆ ಮರೆದಿರೊ
ಉಳಿವುದೇನು? ಕೊಳೆ ಕಸಗಳ ರೇವು.
ನೀವಿರೆ ನೆಲ ಚೆಲುವಿನ ಆಟದ ಹೊಲ;
ಮರೆದಿರೊ ಚೆಲುವಿಗೆ ಅದೆ ಹಿರಿಮಸಣ.
ನಗುತಿರೆ ನೀವು ನಗುತಿಹೆವಾವು;
ಮರೆದರೆ ಮಸಗದೆ ಲೋಕದ ವ್ಯಸನ?
ನೋಡಲಿ ಬಿಡಲಿ ಮುನಿಯದೆ ಇಂತೇ
ಬಾಳಿರಿ ಬೆಳೆಯಿರಿ ಬಹು ಬಹು ಕಾಲ ;
ಎಂದಿಗು ಅರಿಯದೆ ಇರಿ ಜನ ನಿಮ್ಮನು
ನೋಡರು ಎಂಬ ಅತೃಪ್ತಿಯ ಸೋಲ.
ಬಾಳ್ವಿರಿ ಬಲ್ಲೆನು ವಿಶ್ವ ವಿಧಾತನು
ನಿಮಗೀಯದ ಐಸಿರಿ ಒಂದಿಲ್ಲ;
ಗಾತ್ರವು ಹರಕೆಯ ನುಡಿಸಿತು ಮನ್ನಿಸಿ;
ಇದರಿಂದ ನಿಮಗೆ ಕುಂದಿನಿಸಿಲ್ಲ.
ಕಾಣುವ ಸೃಷ್ಟಿಯ ಕಾಣದೆ ಸುತ್ತಿಹ
ಆನಂದಾಬ್ಧಿಯ ಅಮೃತದ ತುಂತುರು
ನೆಲ ಮೊಗ ನಭದಲಿ ಹೂ ನಗೆ ತಾರೆಯ
ರೂಪಾಂತಿಹವು, ಅನಂತ ನಿರಂತರ.
ಆ ಅಬ್ಧಿಯೊಳಾಳ್ವಾತ್ಮದ ಪುಣ್ಯ
ಎಂದಿಗೆ ಬಹುದೋ ಬಾರದೊ ಕಾಣೆನು ;
ಬೆಳೆಯಲಿ ನಿಮ್ಮನು ನೋಡುತೆ ನಲಿವೀ
ಕಣ್ಣ ಪುಣ್ಯ, ಇದನೆಂದಿಗು ಮಾಣೆನು.
ತೋಪಿನ ಮರದಲಿ ಮೊಳಗಲು ತೊಡಗಿವೆ
ಬೆಳವನ ಹಕ್ಕಿ ಸಖಿ.
ಓಪನ ಓಪಳ ಕೂಗಿದು ಜಗದಲಿ
ಹಳೆ ಕಾಲದ ಕೂಗು.
ಕೂಯೆನ್ನು ವುದಿದು ಕೂಯೆನ್ನು ವುದದು
ಅರೆ ಅರೆ ಚಣ ಬಿಟ್ಟು ;
ಆಯವರಿತು ಬರಬರುತ ಅಂತರವ
ಮರೆಯಿಸಿ ಮೊರೆಯುವುವು.
ಕೂ ಕೂ ಕೂ ಕೂ ಕೂ ಎನ್ನುತಲಿಹ
ಸ್ವರವಿದು ಇನಿತರೊಳೆ
ನೂಕುತ ನುಗ್ಗುತ ಕು ಕು ಕು ಕು ಎನ್ನುತ
ಹರಿವುದು ಎಡೆಡದೆ.
ಹೃದಯವ ತುಂಬಿದ ಪ್ರೇಮವು ಕಂಠವ
ಹಿಗ್ಗಿಸಿ ಹೊರಹರಿದು
ಎದುರಾಳಿಯ ಮುಳುಗಿಸುವೆನು ಎನ್ನುತ
ನುಗ್ಗಿ ನುಗ್ಗಿ ಬಹುದು,
ಪ್ರಿಯ ಪ್ರಿಯೆಯರ ಒಸಗೆಯ ಚೆಂಡಾಟವೊ ?
ಮುಗಿಲು ಮುಗಿಲಿನೊಲವ
ಪಯಣಕೆ ಪಥವಹ ಮಿಂಚಿನ ಹೊಳೆಯೋ ?
ರಿ ಗ ಮ ಪ ಧ ನಿ ಎಂಬ
ಗಾಯಕರಿಬ್ಬರ ಸ್ವರವಿನ್ಯಾಸದ
ಮೇಲಾಟವೊ ? ಎನಿಪ
ನ್ಯಾಯದಿ ಹಕ್ಕಿ ಇದೆರಡರ ಮೊಳಗು
ಗಾಳಿಯ ತೀವಿಹುದು.
ಲೋಹದ ತಂತಿಗೆ ತೊಗಲಿನ ನಾರಿಗೆ
ಈ ಸ್ವನ ಬಹುದುಂಟೆ ?
ಮೋಹವು ಮಿಡಿಯಲು ಜೀವವು ನುಡಿಯುವ
ಭಾಸ್ವರ ನಿನದವಿದು.
ಅವಳಿಜವಳಿಯಲಿ ಒಮ್ಮೆ ಹುಟ್ಟುವುವು
ಎಂಬರು ಹಕ್ಕಿ ಇದ;
ಬುವಿಯಲಿ ಬಾಳುವನಿತು ದಿನ ಬೆಳೆವುವು
ಸಂಬಂಧವ ಬಿಡದೆ ;
ಜೊತೆಯಲಿ ಹುಟ್ಟಿದ ಹೆಣ್ಣೂ ಗಂಡೂ
ಜೊತೆಯಲೆ ಬೆಳೆಯುವುವು;
ಜೊತೆಯಲೆ ಸುಳಿಯುತ ಜೊತೆಯಲಿ ಹಾಡುತ
ಜೊತೆಯಲಿ ಬಾಳುವುವು ;
ಜೊತೆಯಲೆ ಮಡಿವುವ ; ಎಂಬರು ಜನರು :
ಒಂದು ಜೀವ ಸೋತು
ಗತಿಸಿ ನೆಲಕೆ ಬೀಳ್ವಂದಿನ್ನೊಂದೂ
ನೊಂದು ಬೀಳ್ವುದಂತೆ.
ಭಾವ ಭಾವ ಮನಮನ ಒಂದಾಗುತೆ
ತನುವೆರಡಾಗಿರಲು
ಜೀವವೊಂದ ಎರಡೂಡಲಿಗೆ ಹಂಚಿದೆ
ಎನಲೇನಚ್ಚರಿಯೆ ?
ತೋಪಿನ ಮರದಲಿ ಮೊಳಗನು ನಿಲಿಸುತೆ
ಬೆಳವನ ಜೊತೆ ಒಲವ
ಔಪಾಸನವನು ಮುಗಿಸಿವೆ; ಬಾ, ಸಖಿ,
ಕೆಳೆ ಬೆಳೆಸುವ ಇಂತು.
ನಿನ್ನ ಹೆಸರು ಏನು ವೀರ?
ಮುನ್ನ ಯಾವ ಕಾಲದಲ್ಲಿ
ಇನ್ನು ಯಾವ ಸಾಹಸದಲಿ,
ಜೀವ ನನ್ನದಲ್ಲವೆಂದು
ನೋವು ನನಗೆ ಸದರವೆಂದು
ಸಾವದಾಡೆಯನ್ನು ಹೊಕ್ಕು,
ಊರಜನದ ಮನವನುಲಿಸಿ
ವೀರನಹುದು ಇವನು ಎನಿಸಿ
ಯಾರ ಕಣ್ಣ ನೀರುಹರಿಸಿ
ಅಮರನಾದೆನೀ ?
ಹಳ್ಳಿಯನ್ನು ದೋಚಬಂದ
ಕಳ್ಳ ಪಡೆಯ ನುಗ್ಗಿ, ತರಗ
ದಳ್ಳುರಿ ಗೆಲುವಂತೆ ಗೆಲಿದೊ;
ಮೇವ ಮುಗಿಸಿ ಮನೆಗೆ ಬರುವ
ಗೋವ ಹಿಡಿದ ಹುಲಿಯ ಸಂಜೆ
ಜಾವದಲ್ಲಿ ಕಾದಿ ತಡೆದೊ ;
ನಾಡಿನೊಡೆಯನಾಣತಿಯನು
ಮಾಡಹೋಗಿ ಹಗೆಗೆ ಸಿಕ್ಕಿ
ಹೇಡಿಯಾಗೆನೆಂದು ನುಡಿದೊ;
ಎಂತು ಮಡಿದೆನೀ ?
ಗಾಯವಡೆದು ಬಂದ ನಿನ್ನ
ತಾಯಿ ಓಡಿ ಬಂದು ನೋಡಿ
ಸಾಯನೇಕೆ ನಾನು ಎಂದು ;
ದೇವರೇ ಇವನನುಳಿಸು
ಸಾವೆ ನಾನು ನನ್ನ ಕೊಳ್ಳು
ದೇವ ದೇವ ಎಂದು ಕೂಗಿ;
ಹೆತ್ತ ಹೊಟ್ಟೆಯಳಲಿನಲ್ಲಿ
ಅತ್ತು ಮೊರೆದು, ನನ್ನ ಕಂದ
ಸತ್ತೆಯಾ ನನ್ನ ಬಿಟ್ಟು,
ಎಂದಳಲ್ದಳು.
ಮುದುಕನೊಬ್ಬ, ನನ್ನ ಮಗನು
ಎದವಿ ಬಂದ, ಇನ್ನು ಮೇಲೆ
ಬದುಕನವನು ನೋಡಿಕೊಂಬ,
ಎಂದು ಕನಸಲಿರುತ, ನಡುವೆ
ತಂದ ನಿನ್ನ ನೋಡಿ ಆಸೆ
ನಂದಿ ಜೀವ ಬೆಂದು ಮುದುಡಿ,
ಆಸೆ ತೋರಿ ನನಗೆ ಮೊದಲು
ಮೋಸಮಾಡಿ ಹೊರಟುಹೋದ,
ಈಶ್ವರಾಜ್ಞೆ ನನ್ನ ಕರ್ಮ,
ಎಂದನಪ್ಪುದು.
ಮದುವೆಯಾದ ಹೆಣ್ಣು, ಸುಖದಿ
ಬದುಕುವಂದು ಬೇರೆ ಜನದ
ಎದುರು ಬಳಿಗೆ ಬಾರದವಳು,
ನಿನಗದೇನೊ ಆಯಿತೆಂಬ
ಜನದ ನುಡಿಯ ಕೇಳಿ, ತನ್ನ
ಮನದಿ ನಡುಗಿ ಹೆದರಿ ಕರಗಿ,
ದೇವ ಇವನನಿಂದು ಸಲಹು
ಜೀವವುಳಿಯೆ ಒಂದು ವರುಷ
ದೀವಟಿಗೆಯ ಹಿಡಿವ ನಿನಗೆ,
ಎಂದು ಬೇಡುತ;
ಜಾಣೆ ಮಗುವನೆತ್ತಿಕೊಂಡು
ನಾಣ ಮರೆತು ಓಡಿಬಂದು,
ಪ್ರಾಣ ಹೋಹ ಸಮಯದಲ್ಲಿ
ನಿನ್ನ ತಲೆಯ ಮಡಿಲೊಳಿಟ್ಟು,
ಕಣ್ಣ ನೀರನೊರಸಿಕೊಳುತ,
ನನ್ನ ಬಿಟ್ಟು ಹೋಹರುಂಟೆ ?
ನನ್ನ ಮಾತು ಇರಲಿ, ಇಕೊ,
ನಿನ್ನ ಮಗನ ನೋಡಿ ಬದುಕು,
ಕುನ್ನಿ ಕರೆಯುತ್ತಾನೆ, ನೋಡು,
ಎಂದುಸಿರ್ದಳು.
ಊರ ಜನರು ಬಂದು, ಎಂಥ
ಶೂರ ಇವನು, ಎಂಥ ಧೀರ,
ನೂರು ಜನರು ಇವಗೆ ಸಮನೆ,
ಗಂಡು ಕಾಣೊ, ಇವಗೆ ಒಂದು
ದಂಡು ಸಮನೆ, ಏನು ಇವನ
ಗುಂಡಿಗೆ? ಎನೆ ಅದನು ಕೇಳಿ
ಮನದೆ ಸ್ವಲ್ಪ ಸುಖವನಾಂತು,
ಕನಿಕರದಲಿ ತಾಯಿತಂದೆ
ತನುಜ ವನಿತೆಯರನ್ನು ನೋಡಿ
ಸ್ವಲ್ಪ ಕುದಿದೆಯಾ?
ಇನಿಸು ಕುದಿದು ಮತ್ತೆ ಮನದಿ,
ಜನುಮ ಇಂದು ಸಫಲವಾಯ್ತು,
ಕೊನೆಗೆ ಬರಿಯ ಚಿಂತೆಯೇಕೆ ?
ಬದುಕ ಕೊಟ್ಟ ದೈವ ಬಂದು
ಇದಿರು ನಿಂದು, ಇಂದು ನಿನ್ನ
ಎದೆಯ ರಕುತ ಬೇಕು, ಎನಲು
ಕೊಟ್ಟ ಸಾಲ ಕೊಡೆನು ಎನಲು
ಹುಟ್ಟು ಹೇಡಿಯೇ ನಾನು ?
ದಿಟ್ಟತನದಿ ಸುರಿದೆನದನು
ಎಂದು ನೆನೆದೆಯಾ?
ಜೀವಗಳ್ಳನೆನಿಸಿ ಬಾಳ್ವ
ಹೇವ ಬಾಳೆ ? ದಿಟ್ಟತನದ
ಸಾವು ಸಾವೆ? ಎಂದಿಗಹುದು ?
ಇಷ್ಟರಿವರು ಇವರ ಪಾಡು
ಕಷ್ಟವಪ್ಪುದೆಂದು ಓಡಿ
ಎಷ್ಟು ಕಾಲ ಬಾಳಬಹುದು ?
ಅವನೆ ಬಾಳ ಕೊಟ್ಟ, ಕೊಂಡ ;
ಇವರನವನೆ ಪೊರೆವ; ನನಗೆ
ಬವಣೆಯೇಕೆ ಎಂದು ತಿಳಿದು
ಶಾಂತನಾದೆಯಾ?
ನೋವು ಹೆಚ್ಚಿ , ಕಣ್ಣ ಮಿಂಚ
ಸಾವ ಮುಗಿಲು ಮರೆಸಿ ಮುಂಚಿ
ಕಾವಳವನು ಕಟ್ಟುತಿರಲು;
ನೊಂದ ತಾಯಿ, ಬೇವ ತಂದೆ,
ಕಂದ, ಮಡದಿ, ಬಳಸಿನಿಂದ
ಮಂದಿ, ಇವರನೊಮ್ಮೆ ನೋಡಿ;
ತೆರೆಯ ಮುಂದೆ ನಿನಗೆ ತಿಳಿದ
ಸರುವರೊಪ್ಪುವಂತೆ ಆಡಿ
ಗುರುವಿನಡಿಯ ನೆನೆದು, ಕಣ್ಣ
ಮುಚ್ಚಿ ಮರೆದೆಯಾ?
ಊರಿಗಾಗಿ ಜೀವವಿತ್ತ
ವೀರನೆಂದು ಗ್ರಾಮವೆಲ್ಲ
ಸೇರಿ ಮೆಚ್ಚಿ ಅತ್ತು ಮರುಗಿ;
ಶೂರನೆಂದು ಹಾತಿ, ಹೂವ
ಹಾರಗಳನ್ನು ಹೇರಿ, ಬಳಿಯ
ಊರುಗಳಲಿ ಹೊಗಳಿ ಮೆರೆಸಿ ;
ಇಲ್ಲಿ ಮಣ್ಣು ಮಾಡಿ, ಹೆಸರು
ನಿಲ್ಲಲೆಂದು ಕತೆಯ ಕೆತ್ತಿ,
ಕಲ್ಲ ನೆಲಸಿ, ಒಲವಗುಡಿಯ
ಅಂದೆ ಸಮೆದರು.
ಒಡಲ ಮುರುಕು ಮನೆಯೊಳಸುವ
ಸೊಡರು ಗಾಳಿ ಮಳೆಯೊಳೆಂದೊ
ಕೆಡುವುದೆಂದು ಅರಿವೆವೆಲ್ಲ ;
ನಡುವೆ ಒಮ್ಮೆ ಅದನು ಜಗದ
ಒಡೆಯಗಾರತಿಯನು ಬೆಳಗೆ
ಕೊಡುವ ಸಮಯ ಬಹುದು ಪುಣ್ಯ ;
ಇಂಥ ವೇಳೆ ಬಹಳ ಜೀವ
ಹಿಂತೆಗೆವುದು ; ಭೀತಿಯುಳಿದು
ನಿಂತು ಕೊಡುವ ಧೃತಿ ಒದಗುವ
ಪುಣ್ಯಮಿಕ್ಕುದು.
ಇನಿತು ಪುಣ್ಯ ನಿನ್ನ ದಾಯ್ತು;
ಜನುಮ ಇ೦ತು ಸಫಲವಾಯ್ತು;
ನೆನವು ನಾಡ ದೀಪವಾಯ್ತು;
ನಿನ್ನ ಕೃತಿಗೆ ಮೆರುಗಕೊಟ್ಟು,
ನಿನ್ನ ಹೊಗಳಿ ಹಾಡ ಕಟ್ಟಿ,
ನಿನ್ನ ವರನು ಸಂತವಿಟ್ಟು,
ಬಹಳ ಕಾಲ ಸೀಮೆ ನಿನ್ನ
ಮಹಿಮೆಯನ್ನು ನುಡಿಯುತಿತ್ತು;
ಗಹನವಾದ ನಡೆಯು ನೆನೆದು
ಪೂಜೆ ಮಾಡಿತು.
ಅಂದು ನಿನ್ನ ಸೇವೆ ಕೊಂಡು
ಬಂಧುವೆಂದು ಪೂಜೆಗೆಯ್ದು
ಚೆಂದದೂರು ಮುದುಗಿ,ಈಗ
ಇಲ್ಲಿ ನಿನ್ನ ಹೆಸರು ಕತೆಯ
ಬಲ್ಲ ಜನತೆಯಿಲ್ಲ; ನೆನವ
ಕಲ್ಲು ಮುರಿದು ಕೆಡೆದಿರುವುದು ;
ಒಡಲು ಅಂದು ಅಳಿದ ತೆರದೆ
ಮಡಿದಿರುವುದು ಕೀರ್ತಿ ಇಂದು
ಕೆಡಕಿ ಕಾಲ ನಿನ್ನ ಗುಡಿಯ
ಉರುಳಿಸಿರುವನು.
ಲೋಕ ಮರೆಯೆ ನಿನಗೆ ಕೊರೆಯೆ?
ತಾಕು ಸೋಕದುರುವ ಕೀರ್ತಿ
ನಾಕದಲ್ಲಿ ಬೆಳೆಯುತಿಹುದು;
ನರರ ನೆನವು ಮುಗಿಲ ಬರಹ;
ಬರೆದರಂದೆ ನಿನ್ನ ಹೆಸರ
ಸುರರು ಸ್ವರ್ಗ ಭಿತ್ತಿಗಳಲ್ಲಿ;
ಬಾಳ ನೀನು ಬಿಟ್ಟ ಕ್ಷಣವೆ
ನಾಳೆಯೊಂದಿ ಬಾಡದೊಂದು
ವೀಳ್ಯ ಕೊಡಿಸಿ ದೇವ ನಿನ್ನ
ಮೆಚ್ಚುತಿರುವನು.
____
ಸಾತ್ವಿಕನು ಕುಳಿತು ಮೆಲ್ಲನೆ ಮಾತನಾಡುತ್ತಿದಾನೆ.
ಮುಂದೆ ಬರುವ ಮಾತೆಲ್ಲ ಸಾತ್ವಿಕನು ಆಡತಕ್ಕದ್ದೇ.
ಕೋಪವೆನಗಿಲ್ಲ, ತಾಪವೆನಗಿಲ್ಲ.
ಭ್ರಾಂತಿಯಿಲ್ಲ;
ಆಸೆ ಎನಗಿಲ್ಲ, ಮೋಸವಿನಿಸಿಲ್ಲ;
ಶಾಂತ ನಾನು.
ಜಗದ ಅಗಲದಲಿ ಹಗೆಯೆಂಬದೊಂದು
ಇಲ್ಲ ನನಗೆ ;
ಸೃಷ್ಟಿಯಲ್ಲಿ ಎಲ್ಲ ಇಷ್ಟವೇ ಎನಗೆ
ಎಲ್ಲ ಇಷ್ಟ.
ಅರೆಮರೆಯಲ್ಲಿ ಆಯುಧವನ್ನೂ ಒ೦ದು ಕರಿಯ
ಹೂವನ್ನೂ ಹಿಡಿದು ಯೋಧನು ಕಾಣುತ್ತಾನೆ.
ಯಾರು ಮರೆಯಲ್ಲಿ ? ದೂರ ಇಹೆಯೇಕೆ ?
ಕೈಯೊಳೇನು ?
ಕತ್ತಿಯೇ ಸಾವಿನ ಬುತ್ತಿಯೇ ? ಬಾ ತಾ
ಅಯ್ಯ ಬಾರ.
ಹೊಡೆವೆನೆನ್ನು ವೆಯ? ಕೊಡು ನಿನ್ನ ಕೈಯ,
ಅಣ್ಣ ತಮ್ಮ;
ಕಡಿವೆನೆನು, ನಾನು ತಡೆಯೆ; ಕಡಿಬಾರೋ
ನನ್ನ ಮೈಯ.
ನೀನಿರಿವ ಅಟ್ಟೆ ನಾನಲ್ಲ, ನೀನು
ನನ್ನ ಮುಟ್ಟೆ;
ಇರಿದರೂ ಇರಿಯೆ, ಅರಿಯ ಇದು ಒಂದು
ಕಣ್ಣ ಕಟ್ಟು.
ಜೀವನವು ಅಮೃತ, ಬೇವಯ್ಯ ಹಿಂಸೆ;
ಇದಕೆ ಅದನು
ಎರೆಯುವುದು ಮರುಳು; ಅರಿತಿದರ ಹುರುಳು
ಬದುಕು ತಮ್ಮ.
ನಿನ್ನ ವರ ಕೊಲಿಸಿ ನನ್ನ ವರನುಳಿಸಿ
ಭೇಷಜದಲಿ
ಋಷಿಯಂತೆ ತೋರಿ ವಿಷ ರಸವ ಕಾರಿ
ಮೋಸಮಾಳ್ಪ,
ಪಾಪಿ ನಾನೆಂದು ಕೋಪ ಮಾಡದಿರು;
ಜನತೆಯೆಲ್ಲ
ನನ್ನ ಜನ ನನಗೆ; ಭಿನ್ನ ವೆಂದೆಣಿಕೆ
ಮನದೊಳಿಲ್ಲ.
ಯಾವೊಂದು ಜೀವ ನೋವಿನಲಿ ಸಿಲುಕೆ,
ಸಿಲುಕಿ ನಾನೂ
ನೋವಿನಲಿ ನೋವೆ, ಸಾವಿನಲಿ ಸಾವೆ,
ಅಳಲೆ ಅಳುವೆ.
ನಿಮ್ಮವರ ಕಯ್ಯ ಅನ್ನವನು ಕಿತ್ತು
ನನ್ನ ಜನಕೆ
ಕೊಟ್ಟೆನೆಂದೆಣಿಸಿ ಸಿಟ್ಟು ಮಾಡದಿರು
ಅಣ್ಣ ಕೇಳು;
ಹಾಲಿಲ್ಲವೆಂದು ಗೋಳು ಮಾಡುವರು
ತಿರುಗಿ ನೋಡಿ;
ಅಂಬಲಿಯ ಬಯಸಿ ಹಂಬಲಲಿ ಮಡಿವ
ನರಕ್ರಿಮಿಗಳ.
ಆರ್ಯ ಋಷಿ ದೇಶ ಭಾರತದ ಭೂಮಿ
ಎಂತೋ ಎನಗೆ
ಆಂಗಲರ ಕೆಲವು ಮಂಗಲ ಗ್ರಹವು
ಅಂತೇ ತೌರು.
ವಿಶ್ವವಿದು ಒಂದು ಅಶ್ವತ್ಥವೆಂದ
ಮಾತನರಿಯಾ?
ಆವೊಂದು ಮರದಿ ನಾವು ಎಲೆಯೆನಲು
ನೀತಿ, ರೀತಿ.
ನನ್ನಲಿಹ ತತ್ತ್ವ ನಿನ್ನಲಿಹ ತತ್ತ್ವ
ಎಲ್ಲ ಜಗದ
ಜೀವನದ ತತ್ತ್ವ ದೇವನೆಂದರಿಯೈ
ಇಲ್ಲ ಬೇರೆ.
ಎನ್ನ ನೀನೆಂತು ಅನ್ಯನೆನಬಹುದು?
ಹೊಕ್ಕು ನೋಡು;
ಇಡಿಲೋಕನಂಟು; ಬಿಡಿಸಿದರು ಬಿಡದ
ಸಿಕ್ಕು, ಗಂಟು.
ನನ್ನ ಜನ ನಿಮ್ಮ ಬನ್ನ ಬಡಿಸಿದೊಡೆ,
ಆಗ ಇಂತೆ
ಮೊರೆದು ಹೇಳುವೆನು ಕರೆದು ಬೇಡುವೆನು,
ಕೂಗಿ, ಕರೆದು.
ನಿನ್ನಲ್ಲಿ ನಾನು, ನನ್ನಲ್ಲಿ ನೀನು,
ಗುರುವ ಕಂಡು
ನಡೆಯುವುದೆ ಚೆಂದ; ನಡೆಯದಿರೆ ಬಾಳು
ಬರಿದು, ಭಂಡು.
ಮಾನವನ ಬಾಳು ಕಾಣುವನ ಮನಕೆ
ತಾಳೆ ಹೂವು;
ಅರಿತು ಮುಡಿ ಗಂಧ, ಮರೆತು ಹಿಡಿ ಮುಳ್ಳು;
ಬಾಳು ಇಂತೆ.
ಕುತ್ತೆ ನೀನೆನ್ನ, ಸತ್ಯ ಸಾಯುವುದೆ?
ನಿನ್ನ ಕೃತಿಯ
ಗೊಬ್ಬರವನುಂಡು ಹಬ್ಬದೇ ಮುಂದೆ
ನನ್ನಿ ಬಳ್ಳಿ.
ಎನ್ನ ನುಡಿ ಕೇಳು, ಚೆನ್ನಹುದು ಬಾಳು,
ಮೋಡಿ ಬೇಡ;
ಏನೋ ಎನಬೇಡ, ಕಾಣುವುದು ನೋಡು;
ನೋಡು; ಕಾಣು.
ಯೋಧನು ಕಣ್ಣಿಂದ ನೀರನ್ನು ಕೊಡಹುವನು.
ನೀರೆ ಕಣ್ಣಿನಲಿ? ಆರಿತೇ ಕೋಪ?
ಛಲ ಹೋಯಿತೆ?
ಕರಗಿತೇ ಕರುಳು? ಮರೆಯಿತೇ ಮರುಳು?
ತಳ ಅರಿಯಿತೆ?
ಯೋಧನು ಆಯುಧವನ್ನು ದೂರ ಎಸೆಯುವನು.
ಬೇಡವೇ ಕತ್ತಿ? ನೋಡು ಈ ಹೊತ್ತು
ಮಲ್ಲ ನೀನು;
ಅರಿದಗಾತುಮವೇ ಸುರಗಿ; ಅದರೆಣೆಗೆ
ಇಲ್ಲ ಅಲಗು.
ಕರುಣ ಬಂದಣ್ಣ, ಒರಸಿಕೋ ಕಣ್ಣ;
ಅಪ್ಪು ನನ್ನ;
ಬಾರಣ್ಣ ಬಾರೋ ಕಾರುಣ್ಯ ಮೂರ್ತಿ
ಬೊಪ್ಪ ಬಾರೊ
ಯೋಧನು ಬಂದು ಸಾತ್ವಿಕನ ಕಾಲನ್ನು ಹಿಡಿಯುವನು.
ಸಾತ್ವಿಕನು ತಡೆದು ಅವನನ್ನು ಎದೆಗೆ ಅಪ್ಪಿಕೊಳ್ಳುವನು.
ಅಪ್ಪಿ ಇರು ಇಂತೆ; ತಪ್ಪ ಬೇಡಿನ್ನು ;
ಎಷ್ಟು ಜನ್ಮ
ಸುತ್ತಾಡಿ ತಿರುಗಿ ಹತ್ತಿರಕೆ ಬಂದೆ,
ಇಷ್ಟ, ಮಿತ್ರ.
ಯೋಧನು ಮೆಲ್ಲನೆ ಏನೋ ಹೇಳುವನು.
ಗುರುವೆ ನಾ ನಿನಗೆ ? ಗುರು ನನಗೆ ನೀನು ;
ಒಳಗೆ ನಾನು
ಅರಿತಿರ್ದ ತತ್ತ್ವ ಸರಿಯೆಂದು ತೋರ್ದ
ಗೆಳೆಯ, ದೈವ.
ಎಳೆಯ ದಿನ ಕಳೆದರೂ ಕೆಳೆ ಎಂದಿನಂತಿರಲಿ;
ನಿನಗಾಗಿ ದಾರಿಯಲಿ ಕಾಯ್ವೆ, ನಾನು;
ಚೆಲುವ ಹೆಣ್ಗಳೊಳೆಲ್ಲ ಗೆಳತಿ ನೀ ಚೆಲುವಾದೆ;
ಅನುಮಾನವಿಲ್ಲ ಇದಕಿಲ್ಲ ಇನಿಸೂ.
ಜಡೆ ನೀಳವಾಗಿ ಹಿಮ್ಮಡಿಯ ಮುಟ್ಟಿದ್ದರೂ,
ಹೆರಳು ಹಿರಿದೆಂದೆತ್ತಿ ಮುಡಿದಿದ್ದರೂ,
ಬಿಡಬೇಡ ಎನ್ನ ನೀ; ಒಡನೆ ತೋಟಕೆ ಬಾರ;
ಮರೆಯದಿರು ಎಳೆತನದ ಒಲುಮೆಗಳನು.
ಬೆಳಕು ಹರಿಯುತಲಿರಲು ಕಾಯುವೆನು ನಿನಗಾಗಿ;
ಉಳಿದ ಜನ ಸುಳಿವ ಹೊಲಮಾಳಗಳನು
ಕಳೆದು ನಿನ್ನನು ದೂರ ಒಯ್ಯುವೆನು; ಬರುವಂದು
ಅಳಲುತೊಬ್ಬನೆ ಸೊರೊಳ ದಾರಿ ಹಿಡಿವೆ.
ಬೇಸರುತ ನಾ ಬರುವೆ; ಏಕಾಕಿಯಾಗಿರುವೆ;
ನನ್ನ ಮನಸಿನ ನೋವ ನಿನಗೆ ಒರೆವೆ;
ನೇಸರಿಳಿದಿಹನಿತ್ತ, ಇತ್ತ ಏರಿದ ಚಂದ್ರ;
ಜೊನ್ನ ಮಳೆಕರೆಯುತಿದೆ ನನ್ನ ಮೇಲೆ;
ನೆಲದ ಮೇಲಿರುವಂದು ಜೊತೆಯಾಗಿ ನಡೆಯಬಹ
ಸೊಗದ ನಮ್ಮೂರ ನಡುದಾರಿಮೇಲೆ;
ಅಳಿದ ಮೇಲೆ ನಾವು ನಡೆಯಲಾಗದ ನಮ್ಮ
ಬಗೆಗೊಂಡ ಚೆಲುವಾದ ಬೀದಿಮೇಲೆ.
ಕೆಸ್ತೂರ ಕಲ್ಲ ಬಳಿ ಸೇರಿ ಹುಲ್ಲನು ಕೊಯ್ವ;
ಕೊಯ್ಯುತ್ತ ಅಂತೆ ಮುದ್ದಿಸುವ ನಲಿವ;
ಶಿಸ್ತಾಗಿ ನಾ ನಿನ್ನ ಪಡೆಯುವೆನೆ ಆವೇಳೆ
ಹೊಯ್ವ ನಮ್ಮೊಲವ ಒಂದೇ ಪಾತ್ರಕೆ.
ಹೊಟ್ಟೆಯುರಿಯುವ ಮಂದಿ ಏನಹೇಳಿದರು ಸರಿ
ಮರೆಮಾಜದಿರುವ ನಮ್ಮೊಲವ ನಾವು ;
ದಿಟ್ಟತನದಲಿ ನಮ್ಮ ದಾರಿ ನಡೆಯುವ ನಾವು ;
ಮರಿಯಾದೆಗೆಂದು ನಾವಗಲಿದ್ದರೂ,
ದೂರ ದೂರದೊಳಿರುತ ನಡೆದರೂ, ಜನ ನಮ್ಮ
ಹಂಗಿಪುದು; ಇನ್ನು ಜೊತೆ ಬಿಡುವುದೇಕೆ?
ಧೀರರಾಗಿರುವ ಬಾ ಗೆಳತಿ ; ಸಾವಡಿಸಿದರು
ಹಿಂಗದೊಲುಮೆಯನಿಲ್ಲಿ ನೋಡು ಮೆಚ್ಚು.
ಜೋಗವನು ನೋಳ್ಪುದಕೆ ಹೋಗುತಿರೆ ನಾನಂದು
ಮಲೆಯ ನಡುವಣ ಕರಿಯ ನೀರಹರಹ
ದೂರದ ಉಪಾಂತದಿಂ ಸಾರಿ ನಿನ್ನಯ ಕಾಂತಿ
ಹೊಳೆ ಹರಿದು ನನ್ನ ಕಣ್ಣನು ತುಂಬಿತು.
ನೀಲ ಜಲದಿಂದೆದ್ದು ನಭದೆದೆಯ ತಿವಿದು
ಅಲಗಂತೆ ನಿಂತೆ ನೈದಿಲೆ ಜಯವ ಸವಿದು.
ಎಂಥ ಕೆಂಪಿದು, ಎತ್ತ, ಇಂತುಂಟೆ ಲೋಕದಲಿ,
ಎಂದು ಮೋಹಿಸಿ ಕಣ್ಣು ಸಿಟ್ಟಿಸಿರಲು,
ಮಲೆಯಿಲ್ಲ, ಮರವಿಲ್ಲ, ಜಲವಿಲ್ಲ, ವನವಿಲ್ಲ,
ನಾನಿಲ್ಲ; ಉಳಿದೆ ನೈದಿಲೆಯೊರ್ವ ನೀ.
ಎನ್ನಾತ್ಮವಾಕ್ಷಣದಿ ನಿನ್ನಲ್ಲಿ ಕೆತ್ತು
ತನ್ನ ಮರೆದುದು ; ಶೂನ್ಯವಾಯಿತಾ ಸುತ್ತು.
ಇಲ್ಲ; ಶೂನ್ಯವಲ್ಲ; ಎಲ್ಲವನ ನನ್ನಂತೆ
ತಾ ಬಗೆದ ಸೊಗಸು ರೂಪಾಂತುದೆಂದು
ನಿನ್ನ ನೋಡುವ ಭರದಿ ತನ್ನ ಮರೆದುದು ತಾನು
ಕೆನ್ನ ದೀಧಿತಿಯ ಹೊಳೆಯಲ್ಲಿ ಮಿಂದು ;
ಮನೆ ಮಾತ ಮರೆಯಿಸುವ ಸತಿಯ ನಗೆಯಂತೆ,
ಬಾನ ಮರೆಯಿಸುವ ರವಿಯಂತೆ ನೀನಿಂತೆ.
ನೋಡಿದೆನು ಮುಂದೆ ಮಲೆನಾಡ ನದಿಗಳ ದೇವಿ
ಗಂಭೀರ ಹಾಸದಲಿ ನಭವ ತೊರೆದು,
ನಡುಗೆ ಜಗ, ಪಾತಾಳದೆಡೆಗೆ ಹಾರುವ ಝಳವ;
ನೋಡಿ ಮರೆದೆನು ಮರಳಿ ನನ್ನ ನಾನು.
ನರಕುರಿಯ ಪದವಿ ಪದವಿಯೆ ಇದರ ಮುಂದೆ?
ಅಣು ತೃಣಕೆ ಜಲಕಣಕೆ ಕಡಿಮೆ ಅವನೆಂದೆ.
ನಿನ್ನ ಆಕೃತಿ ಎನಿತು ಚೆನ್ನ ವಾದರು ಕಿರಿದು;
ಭೀಮ ಸುಂದರ ಬೃಹದ್ರೂಪ ಪಾತ,
ಮೂರು ದಿನದಲಿ ನಿನ್ನ ತೌರ ಮರುಗಿಸಿ ಬಾಡಿ
ಕಾಡಿನಭಿಮನ್ಯು ನೀ ಮರೆವೆ ನೋಡೆ;
ಯುಗ ಯುಗದ ಹರಿವನರಿಯದೆ ತನ್ನ ಯೋಗ
ಕಲಕದಿರುವುದಲೇ ಶರಾವತಿಯ ಜೋಗ,
ಆದರಂದಿನ ಮೊದಲು ಸೋದರ್ಯದಲಿ ನೀವು
ಜೊತೆಯಲ್ಲಿ ಸುಳಿಯುವಿರಿ ನನ್ನ ಮನಕೆ;
ನೆನೆಯುವೆನೆ ಜಲಪಾತವನ್ನು ತರುವುದದು ನಿನ್ನ;
ನಿನ್ನ ನೆನೆವೆನೆ ಅದನು ತರುವೆ ನೀನು;
ನೀನದರೊಳದುನಿನ್ನೊಳೊಂದಾಗಿ ಬೆರೆದು
ಒಳಗಣ್ಣ ಮುಂದೆ ನಿಲುವಿರಿ ಭೇದ ತೊರೆದು.
ಶ್ರುತಿಯಾಗಿ ನೆರೆದೇಕ ಮತದಿಂದ ನುಡಿಯುವಿರಿ
" ಹಿರಿದು ಕಿರಿದಿಲ್ಲ ಫಲಿಸಿದ ಬಾಳಿಗೆ ;
ಇಂದಿಲ್ಲ, ಅಂದಿಲ್ಲ, ಕುಂದಿಲ್ಲ, ಕೊರೆಯಿಲ್ಲ ;
ವಿಶ್ವಮಾನಸನ ನಿಜ ನಿತ್ಯಸುತರ
ದಿನ ಯುಗದ ಹಿರಿ ಕಿರಿಯರೆಂಬ ನುಡಿ ಜಲ್ಪ ;
ಫಲಿಸೆ ಕಣವೇ ವಿಶ್ವ, ಕ್ಷಣ ಬ್ರಹ್ಮಕಲ್ಪ."
_____
ಅಣ್ಣ ಮಾಂಬಿಯನ್ನು ಕುರಿತು
ಅಂದು ಕವಿತೆ ಬರೆದ ತೆರದೆ
ನನ್ನ ಕುರಿತು ಒಂದ ಬರಿ
ಎಂದು ಹೇಳುತಿಹೆಯ ಕರಿ?
ಟೊಳ್ಳು ಳೊಳೊಳ್ಳೆಂದು ಹಾಡಿ
ಹಾರಿ ಕುಣಿದು ನಲಿವೆ ಕೆಲೆವೆ;
ಕಳ್ಳ ನಾಯಿ, ಹೋಗು ಅತ್ತ,
ಬೇರೆ ಕೆಲಸ ಇಹುದು ನನಗೆ.
ಅಣ್ಣ ಮಾಂಬಿ ಏನು ಹೆಚ್ಚು,
ನಾನು ನಿನಗೆ ಕಡಿಮೆಯೆನು,
ನನ್ನ ಆಟ ಚೆನ್ನ ವಿಲ್ಲೆ?
ಮೌನವೇಕೆ? ಎಂಬೆಯಲ್ಲೆ?
ಆಳು ಲಕ್ಷ್ಮಿ ತಂದ ಹುಗ್ಗಿ
ಹಪ್ಪಳಗಳ ತಿಂದೆಯೆಂದು,
ಹೋಳಿಗೆ ಆಂಬೊಡೆಯ ಮೊರವ
ಕಪ್ಪವಾಗಿ ಕೊಂಡೆಯೆಂದು,
ಬೀದಿ ನಡೆವ ಜನರನೆಲ್ಲ
ಹೆದರಿಸಿ ಗೊರೆಂದು ಹೋಗಿ
ಹೈದ ಅಳಲು ಗೆಲವಿಗುಬ್ಬಿ,
ಎದುರು ಬೀಳಲೋಡಿಬಂದು,
ನಿಮ್ಮ ಕುಲದ ಎಳೆಯರಾಟ
ಎಲ್ಲವನ್ನೂ ತೋರ್ದೆಯೆಂದು
ನಮ್ಮ ಮಕ್ಕಳಿಂದ ಕೇಳಿ
ಬಲ್ಲೆ ನಾನು; ಮೆಚ್ಚಿರುವೆನು.
ಆದರೂ ನಿನ್ನ ಚರಿತೆ
ಕವಿತೆಗರ್ಹವಲ್ಲ ಈಗ;
ಮೇದಿನಿಯಲಿ ಮಾನವರಲಿ
ಸವನಿಸಿರುವುದೊಂದು ನೀತಿ.
ಸತ್ಯ ಅಥವ ದೂರ ಇರುವ
ಕಿರಿಯ ಬಾಳ ಹೊಗಳಬಹುದು;
ಹರಿಹುದು ಜೀವಿಸಿಹುದ
ಹಿರಿದು ಎನಲು ಸುಲಭವಲ್ಲ.
ಅಲ್ಲದೆ ಆ ಮೊದಲ ಕೃತಿಯ
ನೋಡಿ ಕೋಪದಿಂದ ಕೆಲರು,
ಬಲ್ಲ ಮಂದಿ, ಏತರದಿದು
ಕಾಡು ಕಏತೆಯೆಂದರಹುದು.
ಇಷ್ಟು ಬೇಗ ಮರಳಿ ನಿನ್ನ
ಚರಿತೆಯೊರೆದು, ನಾಯಿಮರಿ,
ಶಿಷ್ಯರನ್ನು ನೋಯಿಸುವುದು
ತರವೆ ನಮಗೆ ಹೇಳು, ಕರಿ?
ಕೆಲವು ಕಾಲ ತಾಳು ಬಾಳು;
ಪಾರಿವಾಳ ಕೋಳಿ, ಬೇಡ,
ಅಳಿಲು ಒಂದ ಹಿಡಿದೊ ತಿಂದೊ,
ವೀರನೆಂದು ಹೆಸರಪಡೆ;
ವರುಷವೆರಡೊ ಮೂರೊ ಹರಿದು
ಹುಡುಗುತನ ಸ್ವಲ್ಪ ಬಿಡಲಿ;
ಕರುಮವಿನಿತು ಸವೆದು ನಿನ್ನ
ನಡೆಗೆ ಸ್ವಲ್ಪ ನೀತಿ ಬರಲಿ.
ಆಗ ನಿನ್ನ ಕತೆಯ ನುಡಿವ;
ಪದ್ಯ ಬರೆಯ ಕೊಡದೆನಲು
ಹೋಗಲೊಂದು ಗದ್ಯ ಬರೆವ;
ವಿದ್ಯೆಯುಳ್ಳ ಜನವ ಗೆಲುವ.
ಪದ್ಯಕೆಂದು ಮರುಗಬೇಡ;
ಬಣ್ಣವಾದ ಬಾಳ ಹೊಗಳೆ
ಗದ್ಯ ಕೂಡ ಹೃದ್ಯವಹುದು;
ಕುನ್ನಿ ಇದನ್ನು ನೆನೆದು ಬದುಕು,
ಕಟ್ಟೆಮಳಲವಾಡಿ ನೀಲಗಾರ ಮಾದಣ್ಣ
ಕತೆಯ ಹೇಳ್ತಿನಿ ಕೇಳಣ್ಣ;
ಶಿಟ್ಟಾದ ಸುಲ್ತಾನು ಅವನ ನಡತೀ ನೋಡಿ
ಸುತರಾಮು ಮೆಚ್ಚಿಕೊಂಡದನ.
ಹೈದ್ರಾಲಿ ಸುಲ್ತಾನು ಕಟ್ಟೆಮಳಲ್ವಾಡೀಗೆ
ಬಂದರಣ್ಣ ಒಂದು ಕಾಲ್ದಾಗ;
ಆ ದಿನಕೆ ಬಂದೀತು ಬಾಬಯ್ಯಗಳ ಹಬ್ಬ
ಚಂದಾಗಿ ಚಂದು ಮಡ್ಡಾಗಿ,
ಯಲ್ಲಾರು ಬಂದಾರು ಯಾಸಗಳು ಹಾಕ್ಕಾರು
ಕಟ್ಟಾಳು ಮಾದ ಬರನಿಲ್ಲ;
ಮುಲ್ಲಾನ ಸಾಹೇಬ್ರು ಹೇಳಿಕಳಿಶಿದರವಗೆ ;
ನೆಟ್ಟನೇ ಬಂದ ಮಾದಣ್ಣ.
ಯಾತಕ್ಕೆ ನೀ ಯಾಸ ಹಾಕೋಲ್ಲ ಅಂದರೆ
ಮಾದ ಅಂದ, ನಾ ನೀಲಗಾರ,
ಜಾತೀಯ ಜನವೆಲ್ಲ ಬಂದೈತೆ, ಕಳಿಶಿನ್ನಿ,
ನಾ ದೇವರಿಗೆ ಮೀಸಲಂದ.
ಏನೇನ ಹೇಳಿದರು ಮಾದಣ್ಣ ಒಪ್ಪನಿಲ್ಲ ;
ಚಾಡಿ ಹೇಳಿದರು ಸುಲ್ತಾನಗೆ.
ಆ ನೀಲಗಾರನ್ನ ಕರಸಂತ ಅಪ್ಪಣೆ
ಮಾಡಿದನೋ ದೊಡ್ಡ ಸುಲ್ತಾನ
ಏನು ನೀ ಹೇಳೋದು ಕಟ್ಟುಮಸ್ತಾದಾಳು
ಯಾಸಹಾಕಿದರೆ ಚಂದನಲು,
ಮಾನ ಮರುವಾದಿ ಬಿಡದಂಗೆ ಮಾದಣ ಅಂದ,
ಮಾಸೋಮಿ ನಾ ನೀಲಗಾರ.
ಬುದ್ದಿ ನನ್ನ ನ ನಮ್ಮ ಅವ್ವ ಮಾರಮ್ಮನಿಗೆ
ಮೀಸಲುಮಾಡಿ ಕೊಟ್ಟವಳೆ ;
ಸಿದ್ಯೋರ ದೇವರಿಗೆ ನಾ ಯಾಸಹಾಕಿದ್ರೆ
ಗಾಶಿಮಾಡ್ಯಾಳು ಮಾರ್ಯಮ್ಮ;
ನೀಲಗಾರನ ನೇಮ ಬಹಳೈತೆ ಮಾಸೋಮಿ,
ಖಂಡಿತದ ಬದುಕು ನನ್ನೊಡೆಯ ;
ಸೂಲಕ್ಕೆ ಯಿಕ್ಕಿದರು ಪೂಜೇಲಿ ಒಪ್ಪಿಸದ
ಹೆಂಡ ಕುಡಿಯೋಲ್ಲ ನೀಲಗಾರ.
ಇನ್ನು ಬೇರೆ ಏನಾರ ಮಾಡನ್ರಿ ಮಾಡ್ತೀನಿ,
ಈ ಯಾಸ್ದ ಮಾತು ಮಾಪ್‌ಮಾಡಿ;
ನನ್ನವ್ವನಾಣೀಗೆ ತಲೆಕೊಟ್ಟು ಮಾಡ್ತೀನಿ,
ಸಾಯಬೇಕಂದ್ರೆ ಸಾಯ್ತೀನಿ,
ಹೈದರಲ್ಲಿ ನವಾಬ್ರು ಇದಕೇಳಿ ಹೇಳ್ತಾರೆ:
ಈ ಮಾತು ಎಲ್ಲಿ ಕೇಳಲಿಲ್ಲ;
ವಾದ ಯಾತರದು ಇದು? ನಮ್ಮ ದೇವರ ಮುಂದೆ
ಬ್ರಾಮಣರು ಕೂಡ ನಿಲುತಾರೆ.
ಮಾದಣ್ಣ ಇದಕಂದ ಬುದ್ಧಿ ಬ್ರಾಮರ ಮಾತು
ನಮ್ಮಾತು ಒಂದು ಆದಾತ?
ಸಾದು ಬ್ರಾಮರ ದೇವ್ರು, ನಮ್ಮ ದೇವ್ರು ಮಾರ್ಯಮ್ಮ
ಸುಮ್ಮನೆ ಬಿಡುವ ದೇವ್ರಲ್ಲಾ.
ಬ್ರಾಮರ ದೇವರು ಬರಿ ಬೋನ ಉಣತಾರೆ;
ಕೋಪಮಾಡಿದಾಗ ಐನೋರು
ಆ ಮಂತ್ರ ಈ ಮಂತ್ರ ಹೇಳಿ ತೆಂಕಾಯೊಡೆದು
ದೂಪ ಹಾಕಿದರೆ ಮುರಿತಾರೆ.
ನಮ್ದೇವ್ರು ಮಾರ್ಯಮ್ಮ ಕುರಿಕೋಣ ತಿಂಬೋಳು ;
ಬಾಬೈಗೆ ನಾನು ನಡಕೊಂಡ್ರೆ
ಒಂದೆ ಮಾತಂತಾಳೆ, ತಾ ನಿನ್ನ ತಲಕಾಯಿ
ತಾ ಬೋಳಿಮಗನೆ ಅಂತಾಳೆ.
ಹಂಗಾದ್ರೆ ನಿನ್ನ ದೇವ್ರು ಬ್ರಾಮ್ರ ದೇವರಕಿಂತ
ದೊಡ್ಡ ದೇವ್ರೆ? ನಿನ್ನ ಮಾರ್ಯಮ್ಮ
ರಂಗಪ್ಪಗಿಂತ ದೊಡ್ಡೋಳೆ ಎಂದು ನವಾಬ್ರು
ಗಡ್ಡ ನೀವ್ಕೋಳ್ತ ಕೇಳಿದರು.
ಸುಲ್ತಾನ್ರೆ ಕೇಳಿರಿ, ಪಟ್ಟಣದ ಆರಸರು
ನಿಮಗೆ ದೊಡ್ಡೋರು ಅಂತಾರೆ;
ಬಲ್ತು ಯಾರಾದರೂ ಮಾತಾಡಿದರೆ ನಗುತ
ಸುಮಕೆ ಇರುತಾರೆ ಅಂತಾರೆ.
ನಿಮ್ಮ ಹತ್ತರ ನಾನು ಬಲ್ತು ಮಾತಾಡಿದರೆ
ನನ್ನ ಬಿಟ್ಟೀರ ನನ್ನೊಡೆಯ ?
ಬಿಮ್ಮಗೆ ಬಿಗಿಶೀರಿ, ಗಲ್ತಾಗ್ಳು ಕೊಡಿಶೀರಿ,
ಚೆನ್ನಾಗಿ ಬುದ್ಧಿ ಕಲಿಶೀರಿ.
ಅರಸರು ನಗಬಹುದು; ಅರಸಾಗಿ ಇರಬಹುದು;
ಸುತ್ತುಕಡೆ ನಿಂತ ಪರಿವಾರ
ಕುರಿ ಕೋಳಿ ತಿಂಬೋದು ಸುಮ್ಮನಿದ್ದರಾದಾತೆ
ಕತ್ತಿ ಮುಚ್ಚಿದರೆ ನಡದಾತೆ?
ರಂಗಪ್ಪನ್ಹಂಗೆ ಮಾರ್ಯಮ್ಮ ನಗನಗುತಿದ್ರೆ
ಜನ ಅವಳ ನೋಡಿ ನಕ್ಕಾತು;
ಹಂಗೀಶಿ ನುಡಿದಾತು, ಕೊಂಕ್ಳಲೆತ್ಕೊಂಡುಹೋಗಿ
ಮನೆ ಮುಂದೆ ಮೆಟ್ಲು ಮಾಡ್ಯಾತು.
ಮಾದ ಹೇಳಿದ ಮಾತು ಕೇಳಿದರು ಸುಲ್ತಾನ್ರು;
ಅರೆ ಅಲ್ಲ ಎಂತ ನಕ್ಕಾರು;
ಹೈದರಲ್ಲಿ ನವಾಬ್ರು ಗಡ್ಡಾವ ನೀವ್ಕೋಳ್ತ
ಸರಿ ನಿನ್ನ ಮಾತು ಅಂದಾರು.
ಭೇಷ್ ಮಾತು ಮಾದಣ್ಣ, ಭೇಷ್ ಭೇಷು ನೀಲ್ಗಾರ;
ಸರಿಯಾದ ಮಾತು; ನೀ ಹೋಗು;
ಯಾಸಹಾಕೋದು ಬೇಡ ಎಂತ ಅಡಿಕೆಲೆ ಕೊಟ್ಟು
ಮರುವಾದಿ ಮಾಡಿ ಕಳಿಶಿದರು.
ಅವರವರ ದೇವರಿಗೆ ಅವರವರು ನಡೆಯೋದೆ
ಒಪ್ಪ; ಇದಬಿಟ್ಟು ನಡಕೊಂಡ್ರೆ
ಗವುಳಿಗರ ಹೆಣ್ಮಗಳು ಗಾಣಿಗರ ನೆರೆದಂತೆ,
ತುಪ್ಪದಲಿ ಎಣ್ಣೆ ಬೆರೆತಂತೆ.
ಕಟ್ಟೇಮಳಲವಾಡಿ ಮಾದಣ್ನ ಮಾತನ್ನ
ನಾ ನಿಮಗೆ ಈಗ ಹೇಳಿವ್ನಿ;
ಗಟ್ಯಾಗಿ ನೀವೆಲ್ಲ ನಿಮ್ಮ ದೇವ್ರ ನಂಬಿರ್ರ
ನಾ ನಮ್ಮ ದೇವ್ರ ನಂಬತೀನಿ.
ಅಣ್ಣ ಒಂದು ಕತೆ ಹೇಳುವೆ ಕೇಳು
ಕನ್ನಡ ನಾಡಿನ ಪೂರ್ವದ ಕತೆಯ;
ಚಿನ್ನದ ನಾಡೀ ಕನ್ನಡ ನಾಡು,
ಮನ್ನಣೆಯೆಂಬರ ಮನೆ ನೆಲೆಬೀಡು;
ಚಿನ್ನ ದೊಳಪರಂಜಿಯೊ ಮಿಡಿಗೇಶಿ
ನನ್ನವರೆಲ್ಲಾ ಬಾಳಿದ ದೇಶ;
ವೆಂಕಟರಮಣ ಸಿರಿಮಲ್ಲೇಶ
ಅಂಕದಲಿಟ್ಟು ಸಲಹಿದ ಸೀಮೆ;
ಇಲ್ಲಿ ಪೂರ್ವದಲ್ಲಿ ಇದ್ದಳೊ ಅಣ್ಣ
ಮಲ್ಲಮ್ಮನೆಂಬ ಹೆಸರಿನ ಹೆಣ್ಣು;
ಅಕ್ಕರೆಗಾಗಿ ಅವಳನ್ನು ಎಲ್ಲಾ
ಚಿಕ್ಕ ಮಲ್ಲಮ್ಮ ಎನ್ನುವರಯ್ಯಾ
ಮಲ್ಲಮ್ಮಾ ಮಲ್ಲಮ್ಮಾ
ಎಲ್ಲಿ ಹೋದೆಯೇ ಮಲ್ಲಮ್ಮಾ,
ಅಣ್ಣ ನಮ್ಮ ಮಲ್ಲಮ್ಮನ ಚೆಲುವ
ಬಣ್ಣಿಸಬಲ್ಲ ಮಾತುಗಳಿಲ್ಲ;
ಚಿನ್ನದ ಪುತ್ಥಳಿ ಗಂಧದ ಗೊಂಬೆ
ರನ್ನದ ಕನ್ನಡಿ ಇನ್ನೇನೆಂಬೆ,
ಚೆಲ್ಲಗಂಗಳು ಹುಲ್ಲೆಯ ನಡಿಗೆ
ಮಲ್ಲಿಗೆಯಂಥಾ ಸುದ್ಧದ ಮನಸು;
ಮಾತನಾಡಿದಳೊ ಮುತ್ತಿನ ಮಳೆಯೊ
ಪ್ರೀತಿಸಿ ನಕ್ಕಳೊ ಬೆಳಕಿನ ಬೆಳೆಯೊ;
ಸತ್ಯವಂತರೂ ಒಮ್ಮೆ ನೋಡಿದರೆ
ಮತ್ತೆ ನೋಡುವರೊ ದೇವಿಯೊ ಎಂದು;
ಹೊಗಳೆನ ತಾಯೀ ಚೆಲುವನು, ನಿನ್ನ
ಹಗೆಯನು, ಇನ್ನು ಹೊಗಳೆನೆ ಅಮ್ಮಾ
ಮಲ್ಲಮ್ಮಾ ಮಲ್ಲಮ್ಮಾ
ಮೊಲ್ಲೆಯ ಹೂ ನೀ ಮಲ್ಲಮ್ಮಾ.
ಅಣ್ಣ ನಮ್ಮ ಮಲ್ಲಮ್ಮನ ಗುಣವ
ಇನ್ನು ಹೇಳುವೆನು ನಡತೆಯ ಚೆಲುವ;
ತಂದೆ ತಾಯಿಗೆ ಬಂಧು ಬಳಗಕೆ
ಮಂದಿಗೆ ಎಲ್ಲಾ ಮೆಚ್ಚಾಗಿರುವಳು;
ಕೈಹಿಡಿದಾತನ ಮನವನು ಒಲಿಸಿ
ಮೋಹದ ಮಂಗಳಮೂರುತಿ ಎನಿಸಿ
ಅಣ್ಣ ಗೆಳತಿಯರು ಎತ್ತಿ ಮುದ್ದಿಸಲು
ಚಿಣ್ಣನೊಬ್ಬನನ್ನು ಹಡೆದಿಹಳವಳು;
ಒಳ್ಳೆಯ ಮಗಳು ಒಳ್ಳೆಯ ಗೆಳತಿ
ಒಳ್ಳೆಯ ಸೊಸೆ ಬಹು ಒಳ್ಳೆಯ ಹೆಂಡತಿ
ಚೆಲುವು ಹೆಚ್ಚೊ ಗುಣ ಹೆಚ್ಚೋ ಎಂಬುದು
ತಿಳೆಯದೊ ಅವಳನು ನೋಡಿದ ಜನಕೆ.
ಮಲ್ಲಮ್ಮಾ ಮಲ್ಲಮ್ಮಾ
ಇಲ್ಲವಾದೆಯಾ ಮಲ್ಲಮ್ಮಾ.
ಅಂಗಳದೊಳಗಣ ಮಲ್ಲಿಗೆಯಂತೆ
ಮಂಗಳವಾಗಿ ಬೆಳೆಯಲು ಬಾಳು,
ಮಲ್ಲಮ್ಮ ಇಂತು ಸುಖದೊಳಗಿರಲು
ಕ್ಷುಲ್ಲರು ಬದುಕನ್ನು ಕೆಡಿಸಿದರಣ್ಣ;
ಗಿಳಿಯನು ಬೆಕ್ಕು ಕಳುವವೊಲವಳ
ಕಳವು ಮಾಡಿದರು ಘಾತಕ ಮಂದಿ ;
ಪುಂಡರು ಬಹು ಪಾಷಂಡರು ಘಾತಕಿ
ಭಂಡರು ರತ್ನವ ಕೆಡಿಸಿದರಣ್ಣ;
ಗಂಡ ತಂದೆ ಮಾವ ಮೈದುನ
ಅಂಡಲೆದೆಲ್ಲೆಡೆ ಹುಡುಕಿದರವಳ;
ಸಿಕ್ಕದಿರಲು ಎಲ್ಲಿಯು ಮಲ್ಲಮ್ಮ
ದುಕ್ಕದ ಮಡುವಿನೊಳಾಳಿದರಣ್ಣಾ.
ಮಲ್ಲಮ್ಮಾ ಮಲ್ಲಮ್ಮಾ
ಎಲ್ಲಿ ಹೋದೆಯೇ ಮಲ್ಲಮ್ಮಾ.
ಕೊನೆಯೊಳೊಂದು ದಿನ ಉದಯದ ವೇಳೆಗೆ
ಮನೆಯ ಮುಂದೆ ಬಿದ್ದಿರುವಳು ಅವಳು ;
ಕಳೆಯಳಿದು ಕಂದಿ ಕುಂದಿದ ಮುಖವೊ,
ಬೆಳಕಳಿದು ಬಂದು ನಿಂದಿಹ ಕಣ್ಣು;
ಬೇರು ಕಿತ್ತೊಗೆದ ಮಲ್ಲಿಗೆ ಬಳ್ಳಿ
ಕ್ರೂರ ರಾಕ್ಷಸನು ನುಂಗಿದ ಚಂದ್ರ;
ಬಾಳು ಸಾಕು ಸಾಕೆನುತಿಹ ರೀತಿ
ಗೋಳೇ ಹೆಣ್ಣಾಯಿತೊ ಎನೆ ರೂಪು;
ಮಂದಿ ಬಂದು ಇವಳನು ನೋಡಿದರು;
ಹಿಂದಕೆ ಬಂದಳು ಎಂದಾನಂದಿಸಿ
ಒಳಗೆ ಬಾರ ಎನೆ ಬಾರೆನು ಎಂದಳು,
ಹೊಲಸಾಗಿದೆ ನನ್ನೊಡಲಿದು ಎಂದಳು.
ಮಲ್ಲಮ್ಮಾ ಮಲ್ಲಮ್ಮಾ
ಹೊಲ್ಲೆ ಹವಾಯಿತೆ ಮಲ್ಲಮ್ಮಾ.
ಮತ್ತೆ ಹೇಳಿದಳು ನಮ್ಮ ಮಲ್ಲಮ್ಮ
ಸತ್ಯದ ಮಾತನು ಗಂಡಗೆ ಮಂದಿಗೆ ;
ಕೆಟ್ಟು ಹೋದೆ ನಾ ಎನ್ನಾಸೆಯನು
ಬಿಟ್ಟುಬಿಡಿರಿ ನಾ ಬಾಳೆನು ಎಂದಳು ;
ಕೊಂಡುಹೋದ ಪಾಷಂಡರ ಹೆಸರ
ಭಂಡ ಮಕ್ಕಳ ಗುರುತನು ಹೇಳಿ
ಎಂಜಲಾದ ಈ ಮೆಯ್ಯನು ನಾನು
ಸಂಜೆಯ ಮೊದಲೇ ಸುಡಬೇಕೆಂದಳು ;
ಕೆಡಕರ ಚಾತಿಯ ಕೇಳುವೆಯಣ್ಣ;
ಬಿಡು ಬಿಡು ಕೆಡಕಿಗೆ ಜಾತಿಯೆ ಮತವೆ?
ಹುಟ್ಟಿದ ಜಾತಿ ಮತಗಳ ಹೆಸರು
ಕೆಟ್ಟ ಚೇತನಕೆ ಸಲ್ಲವು ಅಣ್ಣಾ.
ಮಲ್ಲಮ್ಮಾ ಮಲ್ಲಮ್ಮಾ
ಇಲ್ಲವಾದೆಯಾ ಮಲ್ಲಮ್ಮಾ,
ಎಂಜಲಾದ ಈ ಮೆಯ್ಯನು ನಾನು
ಸಂಜೆಯು ಮೊದಲೇ ಸುಡಬೇಕೆಂದು
ಚಿಕ್ಕ ಮಲ್ಲಮ್ಮ ಹೇಳಿದ ಮಾತ
ದುಕ್ಕದ ಮಾತೆಂದೆಣಿಸಿತು ಮಂದಿ;
ಒಂದು ಗಳಿಗೆ ಬಿಟ್ಟವಳು ದೇಗುಲದ
ಮುಂದೆ ಹೊಂಡವನು ಮಾಡಿರಿ ಎಂದು
ತಮ್ಮ ಮೈದುನರ ಕರೆದು ಹೇಳಿದೊಡೆ
ಬಿಮ್ಮನೆ ಭಯದಲಿ ಬೀಗಿತು ಮಂದಿ;
ಅಯ್ಯೋ ಅಯ್ಯೋ ಇಂತಹ ಮಾತುಂಟೆ
ಮೆಯ್ಯ ಸುಡುವುದೆಂದೊಡೆ ಏನೆಂದು
ಎಲ್ಲ ಬಂದು ದಮ್ಮಯ್ಯ ಎಂದು
ಮಲ್ಲಮ್ಮನ ಬೇಡಿದರೋ ಅಣ್ಣಾ.
ಮಲ್ಲಮ್ಮಾ ಮಲ್ಲಮ್ಮಾ
ಕಲ್ಲಾಯಿತೆ ಮನ ಮಲ್ಲಮ್ಮಾ.
ಹಡೆದ ತಾಯಿ ಬಂದವಳಿಗೆ, ಅಮ್ಮಾ
ಮಡಿವ ತಪ್ಪ ನೀನೇನನು ಮಾಡಿದೆ?
ಭಂಡ ಬಾಳ ನೀ ಬಾಳಿದುದೇನು?
ಪುಂಡರು ಕದ್ದೊಡೆ ಮಾಡುವುದೇನು?
ಎಂದು ಕೈಗಳನು ಹಿಡಿದು ಬೇಡಿದಳು;
ತಂದೆ ಬಂದು ಬಿಡು ಈ ಹಠಯೆಂದನು;
ಅತ್ತೆ ಮಾವನು ಮೈದುನ ಭಾವ
ಮತ್ತೆಲ್ಲ ಬಳಗ ಬಂದಿತು ಬೇಡಿತು;
ಗಂಡ ಬಂದು ಬಳಿಯಲಿ ಕುಳ್ಳಿರುತ
ಭಂಡರ ಕೊಲುವೆನು ಸುಮ್ಮನಿರೆಂದನು;
ಕೆಳದಿಯೊಬ್ಬಳು ಒಳಗಡೆ ಹೋಗಿ
ಎಳೆಯನ ತಂದು ಎದುರಲಿ ಬಿಟ್ಟಳು.
ಮಲ್ಲಮ್ಮಾ ಮಲ್ಲಮ್ಮಾ
ಕಲ್ಲಿನ ಜೀವ ಮಲ್ಲಮ್ಮಾ.
ಬೇಡಾ ಬೇಡಾ ಬೇಡಾ ಎಂಬ
ಹಾಡಿನ ಪಲ್ಲವಿ ಎಲ್ಲವ ಕೇಳಿ
ಮಲ್ಲಮ್ಮ ಒಂದು ಮಾತನು ಅಂದಳು :
ಬಲ್ಲ ನಿಮಗೆ ನಾ ಹೇಳುವಳಲ್ಲ;
ಭಂಡರೆಂಜಲಿನ ಒಡಲನು ನನ್ನ
ಗಂಡಗೆ ಬಡಿಸಲು ಒಲ್ಲದ ನನಗೆ;
ಹೆಂಡ ಸೋಕಿದ ಭಾಂಡದಿ ದೇವರು
ದಿಂಡರ ಹಾಲನು ಇರಿಸೆನು ನಾನು;
ಅಂಬಲಿ ಉಂಡು ಎಸೆದ ಹಾಳೆಯಲಿ
ರಂಬಿಟ್ಟಿಡುವೆನೆ ದೇವರ ಮುಂದೆ;
ಭಂಡ ಬಾಳ ಬಾಳೆನು, ಈ ಒಡಲನು
ಕೊಂಡದಿ ಬೆಂಕಿಗೆ ಕೊಡುವೆನು ಎಂದಳು.
ಮಲ್ಲಮ್ಮಾ ಮಲ್ಲಮ್ಮಾ
ಬಲ್ಲ ಹೆಣ್ಣು ನೀ ಮಲ್ಲಮ್ಮಾ.
ಯಾರು ಹೇಳಿದರು ಏನು ಹೇಳಿದರು
ಘೋರ ಪಂಥವನ್ನು ಬಿಡದಿರೆ ಧೀರೆ
ಹೆದರಿತು ಅದುರಿತು ಮೆಚ್ಚಿತು ಮಂದಿ;
ಬದುಕನ್ನು ಬಲ್ಲವಳಹ ಮಲ್ಲಮ್ಮ
ಎಂಥ ಸತ್ಯವಿದು ಎಂಥಾ ಮಹಿಮೆ
ಇಂಥವರುಂಟೆ ಲೋಕದಲಿನ್ನು
ಚೆಂದ ಬಾಳಿದಳು ಚೆಂದದೆ ಸಾವಳು
ಎಂದು ಎಲ್ಲರೂ ಹೊಗಳಿದರವಳ;
ತಮ್ಮ ಮೈದುನರು ಎಲ್ಲವ ನೋಡಿ
ಸುಮ್ಮನೆ ಹೋಗಿ ಗುಡಿಗಳ ಮುಂದೆ
ಕೊಂಡವ ಮಾಡಿ ಝಗಿ ಝಗಿ ಹೊಳೆಯುವ
ಕೆಂಡದ ಹೊಂಡವ ಮಾಡಿದರಣ್ಣ.
ಮಲ್ಲಮ್ಮಾ ಮಲ್ಲಮ್ಮಾ
ಇಲ್ಲವಾದೆಯೇ ಮಲ್ಲಮ್ಮಾ.
ದಾರಿ ತೋರದೆ ಎಲ್ಲರು ತನ್ನ
ಕ್ರೂರ ಪಂಥಕೆ ಒಪ್ಪಿರಲಾಗಿ
ಮಲ್ಲಮ್ಮ ಎಲ್ಲ ಹಿರಿಯರ ಮುಂದೆ
ಮೆಲ್ಲನೆ ಮಾತನು ಬೆನ್ನಯಿಸಿದಳು.
ಹೇಸಿಕೆಯಾಗಿಹ ಮೆಯ್ಯನು ಬಿಟ್ಟು
ಮಾಸದ ಹೊಸದೊಂದೊಡಲನು ತೊಟ್ಟು
ಮರಳಿ ನಾ ಬರುವೆ ಅಪ್ಪಾ ಅಮ್ಮಾ,
ತಿರುಗಿ ಬದುಕುವೆನು ಅತ್ತೆ ಮಾವ,
ನೂರು ಜನ್ಮಕೂ ಈ ಗಂಡನನೇ
ಸೇರಿ ಸಿಂಗರದಿ ಬಾಳುವೆನೆಂದಳು;
ಮದುವೆಗೆ ಹೋಗುವ ಹುಡುಗಿಯ ತೆರದೆ
ಹದುಳವ ನುಡಿದಳು ಸಂತಯಿಸಿದಳು
ಮಲ್ಲಮ್ಮಾ ಮಲ್ಲಮ್ಮಾ
ಬಲ್ಲವಳಹುದೇ ಮಲ್ಲಮ್ಮಾ.
ಅಲ್ಲಿ ಕೊಂಡ ಸಜ್ಜಾಗುವ ಹೊತ್ತಿಗೆ
ಮಲ್ಲಮ್ಮ ಇಲ್ಲಿ ಜಳಕವ ಮಾಡಿ
ಒಪ್ಪುವದೊಂದು ಸೇಲೆಯನುಟ್ಟು
ಕುಪ್ಪಸ ಒಂದನು ಚೆಂದದಿ ತೊಟ್ಟು
ಕುಂಕುಮ ಬಟ್ಟನು ಹಣೆಯೊಳಗಿಟ್ಟು
ವಂಕಿ ಜಿಮಕಿ ನಾಗರ ಜಡೆಬಿಲ್ಲೆ
ಕಂಕಣ ಪಿಲ್ಲಿ ಉಂಗುರವಿಟ್ಟು
ಶಂಕೆಯನುಳಿದು ತಂದೆ ತಾಯಿ
ಅತ್ತೆ ಮಾವ ಮೊದಲಾದ ಹಿರಿಯರ
ಹತ್ತಿರ ಬಂದು ಕಾಲಿಗೆ ಎರಗಿ.
ಮುಂದಿನ ಜನ್ಮ ಚೆನ್ನಪ್ಪಂತೆ
ಚಂದದಿ ಹರಸಿ ಎಂದು ಬೇಡಿದಳು.
ಮಲ್ಲಮ್ಮಾ ಮಲ್ಲಮ್ಮಾ
ಇಲ್ಲವಾದೆಯೇ ಮಲ್ಲಮ್ಮಾ.
ಬಳಿಕ ಗಂಡ ತಲೆ ಬಗ್ಗಿಸಿ ಕುಳಿತ
ಸ್ಥಳಕೆ ಬಂದು ಅವನಡಿಗಳಿಗೆರಗಿ,
ನಾನು ಕೇಳಿಬಂದಷ್ಟೂ ದಿವಸ
ಮಾನದಿಂದ ಬಾಳಿಸಿದಿರಿ ನನ್ನ ;
ನನ್ನ ಪುಣ್ಯ ಇಲ್ಲಿಗೆ ಕೊನೆಯಾಯ್ತು
ಅನ್ನೆಯವಾಯಿತು ನನ್ನದು ಬಾಳು ;
ಒಬ್ಬರನುಳಿದು ಹೋಗಲು ನನಗೆ
ನಿಬ್ಬರವಾಗಿದೆ ಮನದಲಿ ದುಃಖ ;
ಒಂಟಿಯಾಗಿ ಇರಬೇಡಿರಿ ಹರೆಯದಿ,
ನಂಟರಲ್ಲಿ ತಕ್ಕವಳನು ತಂದು
ಬಾಳಿರಿ;ಅಳಬೇಡಿರಿ; ನನ್ನಾಣೆ;
ಕೇಳಿರಿ ಮಾತನು, ಹೋಗುವೆನೆಂದಳು.
ಮಲ್ಲಮ್ಮಾ ಮಲ್ಲಮ್ಮಾ
ಕಲ್ಲೋ ಹೂವೋ ಮಲ್ಲಮ್ಮಾ.
ಕೇಳು ಅಣ್ಣ ಮಧ್ಯಾಹ್ನದ ವೇಳೆಗೆ
ಮೇಲೆ ಸೂರ್ಯದೇವರು ಸುಡುತಿರಲು,
ದೇಶವೆಲ್ಲ ಮಿಡಿಗೇಶಿಗೈದಿತೆನೆ
ಸಾಸಿರ ಸಾಸಿರ ಜನ ನೆರೆದಿರಲು,
ದೇಗುಲದೆದುರಲಿ ಮಾಡಿದ ಕೊಂಡದ
ಬೇಗೆಗೆ ಜನ ಸರಿಯುತಲಿರೆ ದೂರ,
ಕೊಂಡದ ಕಾವಿನ ಝಳದಲಿ ಅಡಿಯ
ಬಂಡೆ ಚಿಟ ಚಿಟನೆ ಸಿಡಿದಿರೆ ಒಮ್ಮೆ,
ಮಲ್ಲಮ್ಮ ಹೊರಟು ಗುಡಿಗಳ ಹೊಕ್ಕು
ಬಲ್ಲ ರೀತಿಯಲಿ ದೇವರ ಪೂಜಿಸಿ
ಶಂಕೆಯೆಂಬುದೇ ಇಲ್ಲದೆ ಒಂದು
ಬೆಂಕಿಯ ಬಾವಿಯ ಬದಿಯಲಿ ನಿಂದಳು.
ಮಲ್ಲಮ್ಮಾ ಮಲ್ಲಮ್ಮಾ
ಇಲ್ಲವಾದೆಯೇ ಮಲ್ಲಮ್ಮಾ.
ಸೊಮಕಿಗೆ ಹೇಸುವ ದೈವಭಕ್ತರ
ಕಿಂಕರ ನಾನು ಎನುತಿಹನಗ್ನಿ ;
ಬೆಂಕಿ ನಾನೆ ನಿಮ್ಮೆಲ್ಲರೊಳಿಹೆನು
ಬಂಕೆಯ ಮಣ್ಣಿನ ಗೂಡಲಿ ಮರೆದು ;
ಕೆಂಡ ಬಂದು ಕೆಂಡದಲಿ ಸೇರುವಳು
ಕಂಡ ಮಾತು ಇದು ಅಂಜಿಕೆ ಬೇಡ ;
ಸಂಕಟಪಡಿಸೆನು ಮಲ್ಲಮ್ಮನನು
ಶಂಕೆಯ ಬಿಡಿರಿ ಎನುತಿಹ ರೀತಿ
ಝಗಿ ಝಗಿ ಹೊಳೆವಾಳದ ತನ್ನೆದೆಯ
ಬಗೆದು ತೋರಿದನು ಬೆಂಕಿಯ ದೈವ;
ತಳಮಳ ಹೊಳೆಯುತ ಮಲಮಲ ಮೊರೆಯುತ
ಬೆಳಕಿನ ಹೂವಿನ ಮಾಲೆಯ ತೋರುತ.
ಮಲ್ಲಮ್ಮಾ ಮಲ್ಲಮ್ಮಾ
ಮಲ್ಲಿಗೆ ಮೊಲ್ಲೆ ಮಲ್ಲಮ್ಮಾ,
ಆಗ ಮಲ್ಲಮ್ಮ ಹಿರಿಯರೆಲ್ಲರಿಗು
ಕೈಗಳ ಮುಗಿದು ಅಪ್ಪಣೆ ಕೇಳಿ,
ಬರುವೆನೆಂದು ಗೆಳತಿಯರಿಗೆ ಹೇಳಿ
ಮರುಗಬಾರದೆಂದೆಲ್ಲರ ಬೇಡಿ,
ಗಂಡ ಬಳಿಯೊಳಿರೆ ಅವನ ಕಾಲಿಗೆ
ಮಂಡೆಯನಿಟ್ಟು ಮುತ್ತು ಕೊಟ್ಟು,
ಅಳುತಿಹ ಕಂದನ ಸನಿಯಕೆ ಹೋಗಿ
ಒಲವಿನಿಂದವನ ಮುದ್ದಿಸಿ ಬಂದು,
ವೆಂಕಟರಮಣಾ ಸಿರಿಮಲ್ಲೇಶಾ
ಬಿಂಕದ ದೇವರೆ ಸಲಹಿರಿ ಎಂದು,
ಕೊಕ್ಕರೆ ನೀರನು ಹೊಗುವಂದದಲಿ
ಹೊಕ್ಕಳು ಬೆಂಕಿಯ ಹೊಕ್ಕರಣೆಯನು.
ಮಲ್ಲಮ್ಮಾ ಮಲ್ಲಮ್ಮಾ
ಮಲ್ಲಿಗೆ ಬೆಂದೆಯ ಮಲ್ಲಮ್ಮಾ.
ಅಣ್ಣ ಇನ್ನು ನಾನೇನ ಹೇಳಲಿ
ಅನ್ನೆಯವಾಯಿತು ಎನಿಸುವುದೊಮ್ಮೆ ;
ಅಂಕೆಯ ಬಾಳನು ನೆನೆವೆನೆ ಮರಳಿ
ಬೆಂಕಿ ಬೆಂಕಿಯನ್ನು ಸೇರಿತು ಎಂಬೆನು ;
ಹೇಳುತ ನಾನು ನಡುಗುವೆನಿಂದು ;
ಕೇಳಣ್ಣ ಅವಳು ನಡುಗಳು ಅಂದು ;
ನೊಂದು ಹೋಯಿತು ನಂಟು ಎಲ್ಲವೂ
ಮಂದಿ ಎಲ್ಲವೂ ಮಮ್ಮಲ ಮರುಗಿತು;
ಬೆಂದು ಹೋಯ್ತವಳು ಹೇಸಿದ ಮೆಯ್ಯಿ
ನಿಂದುದೆಂದಿಗೂ ಮಾಸದ ಕೀರ್ತಿ;
ಹೆಸರ ನಿಲ್ಲಿಸಲು ಪ್ರತಿಮೆ ಕೆತ್ತಿದರು
ಉಸುರುವೆಸೀಗಳು ಕತೆಯನು ನಾನು.
ಮಲ್ಲಮ್ಮಾ ಮಲ್ಲಮ್ಮಾ
ಇಲ್ಲೇ ಇರುವೆಯ ಮಲ್ಲಮ್ಮಾ.
ಕನ್ನಡ ನಾಡಿನ ಹಿರಿಮೆಯ ಕತೆಯ
ಅಣ್ಣ ಇಂದು ನಾ ಹೇಳಿದೆ ನಿನಗೆ;
ಇನ್ನು ಮೇಲೆ ಬಹ ಎಳೆಯರಿಗಿದನು
ನಿನ್ನ ಮಾತಿನಲಿ ಹೇಳೈ ನೀನು;
ಕನ್ನಡ ನಾಡಿನ ಮಕ್ಕಳು ಎಂದಿಗು
ಮನ್ನಣೆ ಎಂದರೆ ಇಂತೇ ನಡೆಯಲಿ;
ಚಿನ್ನದ ನಾಡಿದು ಲೋಕಕೆ ನಡತೆಯ
ಕನ್ನಡಿಯಾಗಲಿ, ಉನ್ನತಿ ಪಡೆಯಲಿ;
ಸತ್ಯವುಳ್ಳವರು ಬನ್ನಕೆ ಸಿಲುಕದೆ
ಎತ್ತ ಎತ್ತಲೂ ಸುಖದಲಿ ಬೆಳೆಯಲಿ;
ವೆಂಕಟರಮಣನು ಸಿರಿಮಲ್ಲೇಶನು
ಶಂಕೆಯು ಹರಿಸಿ ಸಲಹಲಿ ಜಗವ;
ಮಲ್ಲಮ್ಮಾ ಮಲ್ಲಮ್ಮಾ
ಇಲ್ಲೇ ನಿಂದಿರು ಮಲ್ಲಮ್ಮಾ.
ಅರಳುಮಲ್ಲಿಗೆ, ಮಲ್ಲಿಗೆವಾಳು,
ಮಲ್ಲಿಗೇನಹಳ್ಳಿ ;
ಸಿರಸಿ, ಸಂಪಿಗೆ, ಕೂಡುಮಲ್ಲಿಗೆ,
ಹುಲ್ಲೆ ಹಳ್ಳಿ, ಹರವು.
ಮೇಲು ಹುಲುವತಿ, ಕೀಳು ಹುಲುವತಿ
ಮಾದಲ,ಮುತ್ತೋಣಿ;
ತಾಳಕುಂಟೆ, ತಾವರೆಕೆರೆ, ಹಿಪ್ಪಲ,
ಕೂದವಳ್ಳಿ, ಕೊಪ್ಪ.
ಸಿರಿಯೂರು, ಸಿರಿಯಂಗಳ, ಬೆಳವಲ,
ಸೊಗದವಾಣಿ, ತೆರವಿ;
ಮರಳವಾಡಿ, ಮಧುಗಿರಿ, ಬನವಾಸಿ,
ಅಗಳಿ, ಅಮೃತೂರು ;
ಬೆಳಧರ, ಬೆಳ್ಳಿಯಬಟ್ಟಲು, ಬೆಳವಿ,
ನೆಲಮಾವು, ಹಗರಿ;
ತಳಕು, ಬೆಳುಗೊಳ, ಪಿರಿಚಾಜಿಯೂರು,
ಬಿಳಿಗೆರೆ, ಹೆಬ್ಬಾಲೆ ;
ಪೂನಾಡು, ಸಿರಿವಾಸಿ, ಸಕ್ಕರೆ,
ಸಿಶನ, ತಿಂಗಳೂರು ;
ಮಾಣಿಕಧರ, ಮಂಜೇಶ್ವರ, ಕೋಗಿಲೆ,
ಎಸಳೂರು, ಕಳಸ,
ಏನು ಹೆಸರು ಇವು,
ನಮ್ಮ ತಾತದಿರು
ನಾಡೊಳಿಟ್ಟ ಹೆಸರು ;
ಜೇನಸರಿಯವೊಲು ಇನಿದು, ಬಲ್ಲವರ
ಹಾಡಿನವೊಲು ಮೆಲಿತು.
ಕೇಳುವ ಕಿವಿ ನಲಿಯುತಲಿದೆ, ನುಡಿಯುವ
ನಾಲಗೆ ನಲಿಯುತಿದೆ;
ಬಾಳೆಂತಿರೆ ಹೆಸರಿತಾಯ್ತೆಂಬೆನೆ
ಸೋಲುತಲಿದೆ ನೆನಸು.
ನಾಡೊಳಂದೊಗೆದ ಸೊಗದರವಿಂದದ
ಮಾಧುರ ಮಕರಂದ
ಕೋಡಿಯಿಂದುದುರಿ ಹನಿ ಹರಳಾಯಿತು
ವಮೋದವೀಯಲಿಂದು.
ಅಣ್ಣತಮ್ಮದಿರೆ, ಅಕ್ಕತಂಗಿಯರೆ,
ಹೇಳುವಿರೀ ಹೆಸರ;
ಚೆನ್ನ ವಾಗಿಹುದು ಈಗಳು ಹೆಸರು;
ಬಾಳು ಅಂತೆ ಇಹುದೇ?
ಚೆಲುವ ಹೆಸರುಗಳ ನುಡಿವ ನಾಲಗೆಯ
ಬಾಳುವೆ ಬರಿದಾಯ್ತೇ,
ಕಳೆದುಕೊಂಡೆವೇ ಹಿರಿಮೆಯ ಚಂದ್ರನ,
ಮೂಳವಾಯ್ತೆ ಬದುಕು.
ಬನ್ನಿ ಅಣ್ಣದಿರೆ ಬನ್ನಿ ತಮ್ಮದಿರೆ
ಬನ್ನಿ ಸೋದರಿಯರೆ;
ಬನ್ನಿರಿ ಎಲ್ಲರು ಆಣೆ ಇಟ್ಟುಕೊಳಿ
ಚೆನ್ನ ಮಾಡಿ ಬಾಳ.
ಹೆಸರಿನ ಚೆಲುವನು ನಾಡಿನ ಬದುಕ
ಮರಳಿ ಮೊಳೆಯುಸಿರಿ;
ಒಸಗೆಯ ತನ್ನಿರಿ ತಾಯ್ನಾಡಿರವಿಗೆ,
ತರಿಸಿ ನಗೆಯ ಮೊಗಕೆ.
ದುಡಿಯುವೆವೆನ್ನಿರಿ ದುಡಿಯಿರಿ ಬನ್ನಿರಿ
ನಾಡಿಗೆ ನುಡಿಗಾಗಿ;
ತೊಡಿರಿ ಹಟವನು ಕೊಡಿ ಕೈಯಾಣೆಯ;
ಆಡುವ ನುಡಿ ನಡೆಸಿ,
ಕತ್ತಲು ಮುಚ್ಚಿಹ ಬಾಳಿರುಳಾಳಕೆ
ಆಸೆಯ ಚಂದ್ರನನು
ಮತ್ತೆ ತನ್ನಿರಿ, ಬೆಳಕಲಿ ನಡೆಯಿರಿ;
ಹೇಸಿ ಸೋಂಬತನವ.
ಮುತ್ತು ಮಾಣಿಕನ ಜೋಳದ ತೆರದಲಿ
ಹರಿಯಿಸಿ ನಾಡಿನಲಿ;
ಉತ್ತಮ ಚರಿತೆಯ ಚಿತ್ರ ಪತಾಕೆಯ
ಮೆರೆಯಿಸಿ ಬಾನಿನಲಿ.
ಸಂಜೆಯಾಗಸದಾಳವನು ಚೆಲ್ವ, ಲೇಪದೊಲು
ತಿಳಿಯ ನೀಲದ ವರ್ಣ ಸವರಿರುವುದು ;
ರಂಜಿಸುತಲಿಹುದು ನೀಲದ ಪಟದಿ ಚಿತ್ರವೆನೆ
ಎಲೆಯಲುಗದೊಲು ನಿಂತ ಮರದ ಸಾಲು,
ಜೇಯೆಂದು ಚಿಟ್ಟೆ ಬೇಲಿಯಲಿ ಮೊರೆಯುತಲಿಹುದು ;
ಮಳೆರಾಯ ಬಾರೆಂಬ ಊರ ಕೂಗು
ಗಾಯನದಿ ಕಳವಳವ ಮರೆಸಿ ಕೇಳುತಲಿಹುದು ;
ಇಳಿಯುತಿಹುದಿಳೆಗೆ ಹುಣ್ಣಿಮೆಯ ಇರುಳು.
ದೇವಾಲಯದ ಓಲಗದ ಮಂಜುಳಾರಾವ
ತೇಲುತಿಹುದೆರಿನಲಿ; ನಭವ ನೀಲ,
ಆವೇಶ ಕವಿಯ ಗೆಲುವಂತೆ ಗೆಲುತಿರೆ ಇನಿಸು
ನೀಲಿಮೆಯನಾಂತುದು ಶರಚ್ಚಂದ್ರಿಕೆ.
_____
ಏನು ಚೆಲುವಿದು ಏನು ಸೊಗಸಿದು
ಈವುದಯದಣಿಯರವಿದು ?
ನ್ಯೂನತೆಯ ಧಿಕ್ಕರಿಸಿ ತೊಳಗುವ
ದೇವಲೋಕದ ಬೆಳಕಿದು ?
ದೇವನಂದನವೆಂದು ಮನುಜನು
ಕನಸೋಳೆಣಿಸಿದ ವನದಲಿ
ಹೂವ ಮೋಹರವಿನಿತು ನೆರೆಯದು
ಇನಿತು ಬಣ್ಣದಿ ಮೆರೆಯದು.
ಏನು ಚೆಲುವಿದು ಜಗದಲಿ !
ಹಾಸವೆನಿತೀ ಮೊಗದಲಿ !
ಮೊಗದೆ ನಗೆಯಿರೆ ಅರಿವೆ ಮರೆಯಲಿ
ನಲಿದ ಬಗೆಯಿದೆ ಎಂಬುದ;
ಜಗದೆ ಹೂವಿಂತರಳೆ ಸೃಷ್ಟಿಯ
ಒಳಗು ನಲಿದುದು ಕಾಂಬುದು.
ಯಾವುದೋ ಬಗೆ ಯಾವುದೋ ಸೊಗ
ಅಲ್ಲಿ ಇರುವುದರಿಂದಲೆ
ಹೂವೆನಗೆ ಸೊಗಯಿಸುವ ನಗೆಯನು
ಇಲ್ಲಿ ಚೆಲ್ಲುತ ಬಂದಿದೆ;
ಬಗೆಯ ತಣಿಸುವುದೆಲ್ಲವೂ
ಬಗೆಯೊಳೊಗೆವುದು ಒಲ್ಲೆವು.
ಎನ್ನ ಬಗೆಯೋಳಗಿರುವ ಸೊಗವೇ
ಕಾಣುವುದು ಹೊರಗೆಂಬೆನೆ,
ಕಣ್ಣ ಹಿಂದಣ ನೋಳ್ಪ ಪೀಠವ
ನಾನುಳಿಯ ಚೆಲುವಳಿವುದೆ?
ನಾನು ನನ್ನದು ಎಂಬ ಬದುಕನು
ಮೀರಿದಾವುದೊ ಬದುಕಿದೆ ;
ಮಾನವನ ಕುಲವಳಿಯಲಳಿಯದ
ಬೇರೆ ಯಾವುದೋ ಉಳಿವಿದೆ.
ನನ್ನ ಸೋಲಲಿ ಸೋಲದೆ
ಮುನ್ನ ಹರಿಯುವ ಬಾಳಿದೆ.
ಜಗದ ಮೊದಲಲಿ ಒಂದು ಬಗೆಯಿದೆ;
ಮನ್ನೆ ಯಾತುಮವೊಂದಿದೆ;
ಒಗೆದು ಅದರಿಂದೆನ್ನುಸಿರು ಬಗೆ
ಎನ್ನ ಆತುಮ ಬಂದಿದೆ;
ಶರಧಿ ಗಾಳಿಯ ತೀವಿ ಘಸಿಸುತ
ಹಿಮಕಣದ ಗಣವಹವೊಲು
ಪರದ ಆತುಮ ತೀವಿ ಸೃಷ್ಟಿಯ
ನಮಗೆ ಜೀವವನಿತ್ತಿದೆ.
ಅಲ್ಲಿ ಇರುವುದು ಇಲ್ಲಿದೆ;
ಇಲ್ಲದುದು ಬರಬಲ್ಲುದೆ ?
ಮನುಜನಿಗೆ ಮನುಜತೆಯ ತೋರುತ,
ಮಾನವನ ಮನ ಕಾಣದ
ಎನಿತು ಗುಣವನೊ ಇನ್ನು ಬೇರೆಯ
ಏನಏನನೊ ಕೊಳ್ಳುತ,
ಇಲ್ಲಿ ಹೂವಿನ ಇಲ್ಲಿ ಜೀವನ
ರೂಪನಾಗುತ ನಲಿಯುತ
ಬಲ್ಲತನ ಬೆಕ್ಕಸದಿ ಭಾಪುರೆ
ಭಾಪು ಎಂಬವೊಲಾಡುತ
ಹಬ್ಬ ಮಾಡುತ ಎತ್ತಲು
ಒಬ್ಬನಿರುವನು ನಿತ್ಯನು.
_____
ಏನ ನೋಡಿದೆನೋ ನೋಡಲಿಲ್ಲವೋ-
ಏನ ಕಂಡೆನೋ ಕಾಣಲಿಲ್ಲವೋ-
ಏನ ಕಂಡು ಇನ್ನೇನಗೆತ್ತೆನೋ-
ಕಾಣದಾವುದನ್ನು ಕಂಡೆನೆಂಬೆನೋ-
ನಾನು ಅರಿಯೆನಿದ ನೋಡಬಂದವನು;
ನೀನೆ ಬಲ್ಲೆಯೈ ತೋರತಂದವನು;
ಕಾಣಲೆಂದು ಕಣ್ಮನವ ಕೊಟ್ಟವನು ;
ಜ್ಞಾನ ಸಾಧನವನೆನ್ನೊಳಿಟ್ಟವನು.
ಹೈದನೊಬ್ಬನನು ಕರೆದು ಕೈಯಲ್ಲಿ
ಕೈದನಿಟ್ಟು ಗೆಲುಹೋಗು ಎಂದೊಡೆ
ಕಾದಿ ಶತ್ರುವನು ಕೊಂದು ಬರ್ಪನೋ ?
ಕೊಯ್ದು ಕೊಂಬನೋ ತಾನೆ ತನ್ನನು ?
ಕೊಟ್ಟ ಓಜಸಿದ ನೋಡದಿರ್ದೊಡೆ
ಕೆಟ್ಟದಾಗದೆಂತಿಹುದು ಬಾಲಗೆ?
ನೆಟ್ಟಿನೊಳ್ಳಿದಕೆ ನಡೆವೆನೆಂತುಟು ?
ಹುಟ್ಟು ಬಣ್ಣವೇ ಸತ್ಯ ಮನುಜಗೆ ?
ಹಗಲು ಇರುಳಲಿ ಗಳಿಗೆ ಚಣದಲಿ
ಜಗವು ಸಂತತ ಚಲಿಸುತಿರ್ಪುದು ;
ಬಗೆಯೊಳೆನ್ನಲಿ ಅಂತೆ ಸಂತತ
ಒಗೆಯುತಿರ್ಪುದು ದೃಷ್ಟಿ ಭೇದವು.
ಓಡುತಿರ್ಪ ತೇರಿಂದ ನೋಡುತ
ಓಡುತಿರ್ಪ ಮುಗಿಲೊಡ್ಡ ನಭವನು
ನೋಡಿದಾವುದನು ನಿಚ್ಚವೆಂಬೆನು ?
ನೋಡದಾವುದನ್ನು ಇಲ್ಲವೆಂಬೆನು ?
ಬಾಲ ನಿದ್ರಿಸುತಲಿರಲು ತಾಯ್ ಅವನ
ಕೇಳಿಕೆಯನು ನೋಡೆಂದು ತಂದಳು ;
ಎದ್ದು ನೋಡುತಿಹನಿನಿತ ಮಧ್ಯದಲಿ;
ನಿದ್ದೆಯಾಳದಲಿ ಮರಳಿ ಇಳಿವನು.
ಆಟ ಎಂತು ಮೊದಲಾಯಿತೆಂಬುದನು,
ನೋಟ ಎಂತು ಕೊನೆಯಪ್ಪುದೆಂಬುದನು,
ಎಳೆಯನರಿವನೇ ತಾನೆ ಊಹಿಸಿ?
ತಿಳಿವೆನೆಂತು ನಾ ನಿನ್ನ ಲೀಲೆಯ ?
ನನ್ನ ತಂದು ಈ ಜಗದೊಳಿಟ್ಟವನೆ
ನನ್ನಿ ಯಾವುದೆಂಬುದನು ತೋರಿಸು ;
ನಿನ್ನ ದಾರಿಯಲಿ ಬಾಳ ನಿಲ್ಲಿಸು ;
ಚೆನ್ನ ವಪ್ಪವೊಲು ಅದನು ಬೆಳೆಯಿಸು.
_____