ಜಾಗರ/ಅರ್ಥಗಾರಿಕೆ - ೧
ಅರ್ಥಗಾರಿಕೆ – ೧
ಅರ್ಥಗಾರಿಕೆಯ ಬಗೆಗಿನ ಒಂದು ವ್ಯವಸ್ಥಿತವಾದ, ಚರ್ಚೆಗೆ ಸೂಕ್ತವಾದ,
ಸಂಯೋಜಿತವಾದ ತಳಹದಿಯನ್ನು ಒದಗಿಸುವಲ್ಲಿ ಶ್ರೀ ನಂಬಿಯಾರರ ಪ್ರಬಂಧ
ಯಶಸ್ವಿಯಾಗಿದೆ. ಅರ್ಥಗಾರಿಕೆ, ಅದರ ಕಲಾತ್ಮಕತೆ, ಅಪೇಕ್ಷೆಗಳು,
ಉದ್ಧರಣಗಳು, ಆಕರ-ಆಧಾರಗಳ ಪ್ರಶ್ನೆ, ಸಂವಾದ-ವಿವಾದಗಳು ಮಾತು-ಹಾಡು
ಗಳ ಸಂಬಂಧ, ಪ್ರಸಂಗಗಳು ಪ್ರತಿಪಾದಿಸುವ ಮೌಲ್ಯ, ಪದಯೋಗ ಮತ್ತು
ಪೌರಾಣಿಕ ಚಿತ್ರಣ -ಮುಂತಾದ ವಿಚಾರಗಳನ್ನೆಲ್ಲ ಸಮರ್ಥವಾಗಿ, ವಿಶ್ಲೇಷಿಸಿದ್ದಾರೆ
ಪ್ರಬಂಧಕಾರರು.
'ಬಯಲಾಟದಲ್ಲಿ ಮಾತುಗಾರಿಕೆಯ ಕೆಲಸ ಅಭಿವ್ಯಕ್ತಿಯ ನಾಲ್ಕನೆ ಒಂದಂಶ
ಮಾತ್ರ (ನೃತ್ಯ, ವೇಷ, ಅಭಿನಯಗಳು ಇರುವುದರಿಂದ) ಆದರೆ, ತಾಳ ಮದ್ದಳೆ
ಯಲ್ಲಿ ಹಾಗಲ್ಲ' - ಎಂಬರ್ಥದ ನಂಬಿಯಾರರ ವಾದಕ್ಕೆ, ಕೇಶವ ಉಚ್ಚಿಲ್, ಪೆರ್ಲ,
ಶಂಭು ಹೆಗ್ಡೆ ಈ ಮೂವರೂ ಆಕ್ಷೇಪ ಎತ್ತಿದ್ದಾರೆ. ಅವೆರಡೂ ಬೇರೆ ಬೇರೆ
ಮಾಧ್ಯಮಗಳಾದುದರಿಂದ ಇಂತಹ ಸರಳೀಕೃತ ಸಿದ್ದಾಂತ ಸರಿಯಲ್ಲ ಎಂಬುದು
ಅವರೆಲ್ಲರ ಆಕ್ಷೇಪ, ಈ ಆಕ್ಷೇಪ ಅರ್ಥಪೂರ್ಣವಾದುದು, ತನ್ನ ಅಭಿಪ್ರಾಯ
ವನ್ನು ಇಲ್ಲಿ ಪ್ರಬಂಧಕಾರರು ಹೆಚ್ಚು ಸ್ಪಷ್ಟ ಪಡಿಸಬಹುದಿತ್ತು. ಸನ್ನಿವೇಶ, ಚಿತ್ರಣ.
ಪ್ರವೇಶ, ನಿರ್ಗಮನ, ಯುದ್ದ - ಇತ್ಯಾದಿಗಳ ಚಿತ್ರಣಕ್ಕೆ ಇಲ್ಲಿ ಮಾತು ಮಾಧ್ಯಮ
ರಂಗ ಪರಿಕರಗಳ ನೆರವಿಲ್ಲ ಎಂಬುದನ್ನು, ಅವರು ಬೇರೆಡೆ ಹೇಳಿದ್ದರಾದರೂ,
ಇದು, 'ನಾಲ್ಕನೇ ಒಂದಂಶ' - ಎಂಬ ಮಾತಿಗೆ ಪೂರಕವಾಗಿ ಅಲ್ಲ, ಆಟದಲ್ಲಿರುವ
ಬಹು ಮಾಧ್ಯಮಗಳ ಕೆಲಸವನ್ನು ತಾಳಮದ್ದಳೆಯಲ್ಲಿ ಮಾತೊಂದೇ ಪೂರೈಸುತ್ತದೆ,
ಎಂಬುದು ಸರಳವಾದ ಒಂದು ಅರ್ಥದಲ್ಲಿ ಸರಿಯಾದರೂ, ಆ ಎರಡು ನಾಟಕ
ಪ್ರಕಾರಗಳ ಸಮಗ್ರ ತುಲನೆಯ ಮಟ್ಟದಲ್ಲಿ ಪರಮ ಸತ್ಯವಾಗಲಾರದು.ಈ
ಒಂದು ವಿಷಯವೇ ಆಳವಾದ ವಿವೇಚನೆಗೆ ಅರ್ಹವಾದದ್ದು.
ಸಾಮ್ಯ, ಅನುವರ್ತಿತ್ವ ಇರಬೇಕೆಂಬ ಪ್ರಬಂಧಕಾರರ ಮಾತು, ಕಲಾದೃಷ್ಟಿಯಿಂದ
ನಿಜ, ಮತ್ತು ಅಪೇಕ್ಷಣೀಯ. ಆದರೆ, ಇಲ್ಲಿ ಬರುವ ದೊಡ್ಡ ತೊಡಕೆಂದರೆ, ಭಾಗವತನ
ಧೋರಣೆಯ ಮಿತ್ರಿ, ಉದಾಹರಣೆಗೆ : “ರಾಮ ಹರೇ ಪಾಹಿ ರಾಮ” ಎಂಬ
ಸುಗ್ರೀವನ ಪದ್ಯಗಳನ್ನು (ವಾಲಿವಧೆ) ಕ್ಷಿಪ್ರಲಯದಿಂದ ಒಬ್ಬ ಭಾಗವತ ಹಾಡಿದಾಗ
ಅರ್ಥಧಾರಿ, ಅದಕ್ಕನುವರ್ತಿಯಾದ ಮಾತಿನ ಸರಣಿಯನ್ನು ಅ೦ಗೀಕರಿಸಿದರೆ,
ಸನ್ನಿವೇಶ ಕೆಡುತ್ತದೆ. ಹಾಗೆಯೇ ಅಣ್ಣನವರಿಗೆ ನೀತಿಯಾದರೆ' (ಭೀಮ ಕೃಷ್ಣ
ಸಂಧಾನ) 'ಹನುಮ ನೀನೆಂದೆಂಬೆ' (ಅರ್ಜುನ - ಶರಸೇತು ಬಂಧನ) 'ಸೃಷ್ಟಿಗರ್ಜುನ
ಎಂಬವನೆ' (ಸುಧನ್ವ - ಅರ್ಜುನ ಸಂವಾದ - ಸುಧನ್ವ ಕಾಳಗ) ಇವನ್ನೆಲ್ಲ ವೀರ,
ರೌದ್ರದ ಕ್ರಮದಲ್ಲಿ ಹಾಡುವವರಿದ್ದಾರೆ. ಈ ಸಂದರ್ಭಗಳಲ್ಲಿ ಅರ್ಥಧಾರಿಗೆ
ದೊಡ್ಡ ಗೊಂದಲ ಉಂಟಾಗುತ್ತದೆ. ಏಕೆಂದರೆ ಈ ಪದ್ಯಗಳಲ್ಲಿ ಅಣಕದ, ನಿಧಾನ
ವಾದ “ಪಚಾರಿಕೆ'ಯ ಧೋರಣೆ ಇದೆ. ಹಾಡನ್ನು ಕಲಾದೃಷ್ಟಿಯಿಂದ 'ಅರ್ಥೈಸಿ
ಕೊಂಡು' ಹಾಡುವ ಭಾಗವತನ ಹೊಣೆ ದೊಡ್ಡದು.
ಇನ್ನು ಅರ್ಥದಲ್ಲಿ ಉದ್ಧರಣ (Quatations) ಗಳ ಪ್ರಶ್ನೆ, ಅತಿ
ಯಾದ ಉದ್ದರಣ ಆಸ್ವಾದನೆಗೆ, ಕಲಾಸೃಷ್ಟಿಗೆ ತೊಡಕೇನೋ ಹೌದು. ಶಂಭು
ಹೆಡ್ಡೆ ಇದನ್ನೇ ಹೇಳಿದ್ದಾರೆ. ಆದರೂ ಉದ್ದರಣವೊಂದನ್ನು ಹೇಳುವ ರೀತಿ
ಒಟ್ಟು ಅರ್ಥಗಾರಿಕೆಯ ಶಿಲ್ಪಕ್ಕೆ ಎರಕವಾಗಿದ್ದಾಗ, ಉದ್ದರಣೆಯು ಸಾಕಷ್ಟು
ಪ್ರಮಾಣದಲ್ಲಿದ್ದರೂ ಅದು ಆಕ್ಷೇಪಾರ್ಹವಾಗಲಾರದು. ಇಲ್ಲಿ ಹೇಳುವ ಓಘ,
ರೀತಿ, ಲಯ, ಹೊಂದಾಣಿಕೆ, ಅದಕ್ಕೆ ನೀಡುವ ಅರ್ಥಧಾರಿಯ ಸ್ವಭಾವ ಇವೆಲ್ಲ
ಮುಖ್ಯ ಅನಿಸುತ್ತದೆ. ಕುಮಾರವ್ಯಾಸನ ಕೆಲವು ಪದ್ಯಗಳು, ಹಾಗೆ ಇತರ ಕಾವ್ಯ
ಗಳ ಭಾಗಗಳು ಇಡೀ ಇಡಿಯಾಗಿ 'ಅರ್ಥ'ಕ್ಕೆ ಬಲು ಚೆನ್ನಾಗಿ ಒದಗಿ ಬರುತ್ತವೆ
ಎಂಬುದು ಅನುಭವಸಿದ್ದ. ಬಳಸುವ ರೀತಿ ಅರ್ಥರಚನೆ'ಗೆ ಹೊಂದಬೇಕು, ಅಷ್ಟೆ.
ಅರ್ಥಗಾರಿಕೆಯಲ್ಲಿ ಪೌರಾಣಿಕ ವ್ಯಕ್ತಿಗಳ ಘಟನೆಗಳ ಮಂಥನ, ವಿಮರ್ಶೆ, ವಿಚಾರ
ವಾಗಿ, ನಂಬಿಯಾರರ ಮತಕ್ಕೂ, ಪೆರ್ಲ ಕೃಷ್ಣ ಭಟ್ಟರ ಮತಕ್ಕೂ ಸ್ಪಷ್ಟ ಭಿನ್ನತೆ
ಇದೆ. (ಇಬ್ಬನಿಯಲ್ಲಿ ಮೂಡಿದ ಆಕಾಶದ ಚಿತ್ರ - ಎಂದು ಪದ್ಯ ಅರ್ಥಗಳ
ಸಂಬಂಧವಾಗಿ ನಂಬಿಯಾರರ ಹೋಲಿಕೆ ತುಂಬ ಮಾರ್ಮಿಕವಾಗಿದೆ.) “ಅರ್ಥಗಾರಿಕೆಯ
ಹಿಂದೆ ವಿಮರ್ಶೆ ಇರಬೇಕು, ಆದರೆ ಅರ್ಥಗಾರಿಕೆ ಎಂದರೆ ವಿಮರ್ಶೆ ಅಲ್ಲ”
ಎಂಬ ಮಾತಿಗೆ ಬಹುಶಃ ತತ್ವತಃ ಪೆರ್ಲರದೂ ಆಕ್ಷೇಪವಿಲ್ಲ . ವ್ಯಕ್ತಿ ಸಂದರ್ಭಗಳ
ವಿಸ್ತ್ರತ ವಿಮರ್ಶೆಯಿಂದ ಅರ್ಥದ ಕಲಾರೂಪ ಔಚಿತ್ಯಗಳಿಗೆ ಬಾಧಕ ಇಲ್ಲ ಎಂಬುದು
ಪೆರ್ಲರ ನಿಲುವು. ವಾದವು ಪಾತ್ರದೊಳಗಿನ ಸಂಬಂಧವನ್ನು ಮೀರಿ ಔಚಿತ್ಯದ
ಎಲ್ಲೆಯನ್ನು ದಾಟುವ ಅಪಾಯ, ಅರ್ಥಗಾರಿಕೆಯಲ್ಲಿ ಅಪರಿಹಾರ್ಯ ಎಂಬಷ್ಟು
ಕಾಣಿಸಲು ಕಾರಣ ಅದರ ಆಶುಭಾಷಣ ಪದ್ಧತಿ. (ಅಂದರೆ ಅದರ ರೂಪದಲ್ಲೇ
ಇದೆ) ಇಂತಹ ವಾದದ ಬಗ್ಗೆ ಎಲ್ಲ ಐದು ಭಾಷೆಗಳಲ್ಲಿ ವ್ಯಕ್ತವಾದ ಆಕ್ಷೇಪ
೧೧೪ | ಜಾಗರ
ಮಹತ್ವದ ಒಂದು ಅಂಶ.
ಅರ್ಥಕ್ಕೆ ಆಕರ, ಆಧಾರಗಳ ಪ್ರಶ್ನೆ ಸಾಕಷ್ಟು ಗೊಂದಲಕ್ಕೆ ಎಡೆಮಾಡ
ಬಹುದಾದ ಪ್ರಶ್ನೆ. ಯಾವುದು ಆಧಾರ ಯಾವುದು ಮುಖ್ಯ? ಮೂಲ ಸಂಸ್ಕೃತ
ಕಾವ್ಯವೇ ಪ್ರಮಾಣವೇ? ಪರಸ್ಪರ ವಿರೋಧವಾಗಿರುವ, ಕತೆಯ ನೂರು ಬಗೆಯ
ರೂಪಗಳು, ಪ್ರಸಂಗದ ಕತೆ, ಕೆಲವೊಂದು ಪಾರಂಪರಿಕ ಕಥಾ ಸರಣಿ - ಇವನ್ನೆಲ್ಲ
ಹೇಗೆ ಹೊಂದಿಸೋಣ? ಆಕರ, ಆಧಾರದ ಬಗೆಗೆ ಒಂದು ರೀತಿಯ ಒಪ್ಪಂದ
ಬೇಕೆಂದು ನಂಬಿಯಾರ್, ಉಚ್ಚಿಲ್, ಪೆರ್ಲ - ಈ ಮೂವರೂ ಪ್ರತಿಪಾದಿಸಿದ್ದಾರೆ.
ನಿಜವಾದ ಕಲಾದೃಷ್ಟಿ ಇರುವಾಗ, ಇಂತಹ ಒಂದು ಒಪ್ಪಂದ ಮನ:ಸ್ಥಿತಿ, ಕಲಾ
ವಿದರೊಳಗೆ ತಾನಾಗಿ ಏರ್ಪಡುತ್ತದೆ. ಕತೆಯ ಪರಸ್ಪರ ವಿರೋಧಿ ರೂಪಗಳು
ಸಮನ್ವಯ ಹೊಂದುತ್ತವೆ. ನಮಗೆ ಪ್ರಸಂಗ ಮುಖ್ಯ ಪ್ರಮಾಣ, ಅದನ್ನು
ಪ್ರಾಮಾಣಿಕವಾಗಿ ಅನುಸರಿಸಬೇಕು. ಅದಕ್ಕೆ ವಿರೋಧವಾಗದಂತೆ ಜಾಣ್ಮೆಯಿಂದ
ಇತರ ಕಾವ್ಯ, ಘಟನೆ, ಕಥಾ ಸಂಪ್ರದಾಯದ ಅಂಶವನ್ನು ತರಬೇಕು. ಮೂಲ
ಸಂಸ್ಕೃತ ಕಾವ್ಯವನ್ನು ಹೊಂದಿಸುವಾಗಲೂ ಈ ಎಚ್ಚರ ಮುಖ್ಯ. ಒಂದು ಕಡೆ
ಮೂಲವನ್ನು ತಂದೊಡನೆ, ಬೇರೆ ಸನ್ನಿವೇಶಕ್ಕೆ ತರಲೇಬೇಕೆಂದೂ ಇಲ್ಲ. ಇಲ್ಲಿ ಕಲಾ
ತ್ಮಕ ಸೌಂದರ್ಯದ ಪ್ರಶ್ನೆ ಮುಖ್ಯ ಹೊರತು, ಪೌರಾಣಿಕ ಆಧಾರದ ಗುರು - ಲಘು
ವಾದ ಮುಖ್ಯವಲ್ಲ.
ಇದ ಕ್ಕಿಂತ ಮುಖ್ಯವಾದ ಒಂದು ಅಂಶವೆಂದರೆ, ಅರ್ಥಗಾರಿಕೆಯಲ್ಲಿ
ಒಬ್ಬನು ಒಂದು ಘಟನೆ, ಆಧಾರವನ್ನು ಎತ್ತಿದರೆ, ಅದು ಯಾವುದೇ ಆಕರದಿಂದ
ಇರಬಹುದು - ಅದೇ ಪ್ರಮಾಣ ಅ೦ದರೆ ಅದನ್ನು ತಪ್ಪೆಂದು ವಾದಿಸುವಂತಿಲ್ಲ.
ಅದರ ಬಗ್ಗೆ ಯುಕ್ತಿ, ತರ್ಕಗಳನ್ನು ಹೂಡಬಹುದೇ ಹೊರತು, ನೀನು ಹೇಳಿದ
ಕತೆ ಆಧಾರವೇ ಅಲ್ಲ ಎಂದು ವಾದಿಸುವಂತಿಲ್ಲ. ಆದುದರಿಂದ ಮೊದಲು ಎತ್ತಿದ್ದೇ
ಅದರ ಮಟ್ಟಕ್ಕೆ ಪ್ರಮಾಣ - ಅದು ಯಾವ ಆಕರದಲ್ಲಾದರೂ ಸರಿಯೆ. ಹಾಗೆಂದು
ಆ ರಿ ಸಿಕೊ೦ಡ ಕತೆಗೆ, ಪ್ರಸಂಗಕ್ಕೆ ಅದು ತೀರ ಭಿನ್ನವಾಗಬಾರದು.
ಉದಾ:- ರಾವಣನನ್ನು ಕೊಂದವನು ಲಕ್ಷ್ಮಣನೆಂದು ಯಾವುದೋ ಒಂದು ಸಂಪ್ರದಾಯದಲ್ಲಿ
ಇರಬಹುದಾದರೂ, ಅಂತಹದನ್ನು ಪ್ರಮಾಣ ಎಂದು ಸ್ವೀಕರಿಸಿದರೆ ಈ ಅರ್ಥ
ಗಾರಿಕೆಯಲ್ಲಿ ಕೊನೆ ಮೊದಲಿಲ್ಲದ ಗೊಂದಲಕ್ಕೆ ಕಾರಣವಾಗಬಹುದು. ಇಲ್ಲಿ ನಂಬಿ
ಯಾ ರರು ಹೇಳಿ ದಂತೆ ಪ್ರಸಂಗದ “ಅಂಗ ಭಂಗ' ಆಗಬಾರದು. ಪ್ರಸಂಗಕ್ಕೆ
ಹೊ೦ದುವ೦ತೆ ವಿಭಿನ್ನ ಆಕರಗಳ ಅಂಶಗಳನ್ನು ಸಮನ್ವಯಿಸುವುದೇ ಕಲಾತ್ಮಕ
ಅರ್ಥಗಾರಿಕೆಯ ಮುಖ್ಯ ಅಂಶ. ಈ ವಿಚಾರದಲ್ಲಿ ಶೇಣಿ ಅವರೂ, ದೇರಾಜೆ
ಅವರೂ ಸಾಧಿಸುವ ಕಲಾತ್ಮಕತೆ ಮಾದರಿ ಆಗಬಲ್ಲದು.
ಒಂದು ಕಥಾ ಸಂದರ್ಭಕ್ಕೆ ಹಿಂದಿನ ಹಿನ್ನೆಲೆಯ ಕಥೆ ಎಲ್ಲ ಪಾತ್ರಗಳಿಗೆ ಗೊತ್ತಿರು
ವುದು ಸಾಧ್ಯವೆ? ಈ ವಿಚಾರವಾಗಿ, ಈಗಾಗಲೇ ಒಂದು ರೀತಿಯ ನಿಯಮ ಜಾರಿ
ಯಲ್ಲಿದೆ ಎನ್ನಬಹುದು. ಅದೆಂದರೆ - ಇಂತಹ ಒಂದು ಕಥಾ ಸಂದರ್ಭ, ಘಟನೆ,
ಒಂದು ಪಾತ್ರಕ್ಕೆ ಗೊತ್ತಿಲ್ಲ ಎಂಬುದೇ ಪ್ರಸಂಗದ ಸಂದರ್ಭಕ್ಕೆ ಅವಶ್ಯವಾದರೆ ಯಾ
ಗೊತ್ತಿಲ್ಲದಿರುವುದು ಅಲ್ಲಿ ಸ್ಪಷ್ಟವಿದ್ದರೆ - ಆಗ ಗೊತ್ತಿಲ್ಲವೆಂದೇ ಪಾತ್ರ ನಿರ್ವಹಿಸ
ಬೇಕು. ಉಳಿದ ಸಂದರ್ಭಗಳಲ್ಲಿ ಹಿಂದಿನ ಕತೆ, ಪ್ರತಿಯೊಂದು ಪಾತ್ರಕ್ಕೂ ಗೊತ್ತಿದೆ
ಯೆಂದೇ ಭಾವಿಸಬೇಕು. ಉದಾ: 'ವಾಲಿಸುಗ್ರೀವರು ಆಕೃತಿಯಲ್ಲಿ ಒಂದೇ ರೀತಿ
ಇದ್ದಾರೆ' ಎಂಬುದು ರಾಮನಿಗೆ ಗೊತ್ತಿಲ್ಲದಿರುವುದೇ ವಾಲಿವಧೆ ಪ್ರಸಂಗದ ಒಂದು
ಮುಖ್ಯ ಅಂಶ,
ಇಂಥಲ್ಲಿ ಗೊತ್ತಿರುವವನಂತೆ ರಾಮನ ಪಾತ್ರಧಾರಿ ಮಾತಾಡ
ಬಾರದು.
ಅರ್ಥಗಾರಿಕೆಯ ಸಂದರ್ಭಕ್ಕೂ, ನಮ್ಮ ಎಲ್ಲ ಕಲೆಗಳಿಗೂ ಒಟ್ಟಾಗಿ
ಸಂಬಂಧಿಸಿದ ಒಂದು ಗಂಭೀರ ಪ್ರಶ್ನೆಯನ್ನು ಶ್ರೀ ನಂಬಿಯಾರ್ ಎತ್ತಿದ್ದಾರೆ.
ಅದು, ಅರ್ಥದಲ್ಲಿ ನಾವು ಪ್ರತಿಪಾದಿಸಬೇಕಾದ ಮೌಲ್ಯ ವ್ಯವಸ್ಥೆಯನ್ನು ಕುರಿತಾ
ದದ್ದು. ಈ ಕಾಲಕ್ಕೆ ತಿರಸ್ಕರಣೀಯವಾದ, ಮಧ್ಯಕಾಲೀನವಾದ, ಊಳಿಗ
ಮಾನ್ಯ ಪದ್ಧತಿ, ಜಾತಿ ಪದ್ಧತಿ - ಇವನ್ನೆಲ್ಲ ಸಮರ್ಥಿಸಬೇಕೆ, ಚಿತ್ರಿಸಬೇಕೆ
ಎಂಬುದು. ಅವರಿಗೂ ಈ ವಿಷಯದಲ್ಲಿ ಗೊಂದಲ ಇದ್ದುದರಿಂದಲೇ ಅದನ್ನು
ಸಾಕಷ್ಟು ವಿವೇಚನೆ ಮಾಡಿಲ್ಲ. ಪ್ರಶ್ನೆ ಪರಿಶೀಲನಾರ್ಹವಾದದ್ದು.
ಆದರೆ,
ಆಧುನಿಕ ಕಲೆಗಳಿಗೆ ಇರುವ ಸ್ವಾತಂತ್ರ್ಯ, ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಗೆ
ಇಲ್ಲ.
ಪ್ರಸಂಗಗಳು ಚಿತ್ರಿಸುವ 'ಧರ್ಮ' ನಮಗೆ ಎಲ್ಲ ವಿಚಾರಗಳಲ್ಲಿ ಅನು
ಸರಣೀಯವೆನ್ನಲಾಗದು. 'ಧರ್ಮ'ದ ಹಲವು ಅಂಶಗಳು ಕಾಲಕಾಲಕ್ಕೆ ಪರಿವರ್ತಿ
ತವಾಗುತ್ತದೆ. (ಧರ್ಮವು ಶಾಶ್ವತ, ಸನಾತನ, ತ್ರಿಕಾಲಾಬಾಧಿತ ಎಂದೆಲ್ಲ ಮುಗ್ಧ
ವಾಗಿ ವಾದಿಸುವರಿವದ್ದಾರೆ, ಅದಿರಲಿ, ಆದರೆ ನಾವು ಆರಿಸಿಕೊಂಡಿರುವ ಕತೆಯಲ್ಲಿ
ಜಾತಿ, ಮೌಲ್ಯ, ವ್ಯವಸ್ಥೆಯನ್ನು ನಾವು ಚಿತ್ರಿಸಲೇ ಬೇಕು. ಅದು 'ನಾಟ್ಯಧರ್ಮ'
ಯಕ್ಷಗಾನವು ಸಾಂಪ್ರದಾಯಿಕ ಕಲೆಯಾದದ್ದರಿಂದ ಇದು ಅವಶ್ಯ. ಯಕ್ಷಗಾನವು
ಆ ಕಾಲವನ್ನು ಚಿತ್ರಿಸುವ ಕಲೆ, ಅದಕ್ಕೊಂದು ರೂಪ ಮೌಲ್ಯ ಪ್ರಪಂಚ ಇದೆ.
ಆದರೂ, ಪ್ರಶ್ನೆ ಬರುತ್ತದೆ. ಪ್ರಸಂಗಗಳ ಮೌಲ್ಯ ಮಿತಿಯನ ನಾವು ಒಪ್ಪ
ಬೇಕೇ? ಮತ್ತು ಮಾತುಗಾರನಿಗೆ ವೈಯಕ್ತಿಕವಾದ ನಿಲುವು ಅರ್ಥಗಾರಿಕೆಯಲ್ಲಿ
ಬಂದೇ ಬರುತ್ತದಲ್ಲವೇ ? (Involvement) ಪೌರಾಣಿಕ ಮೌಲ್ಯಗಳ ಕುರಿತು ನಾವು
ಆವೇಶದಿಂದ ಅನಾವಶ್ಯಕ ಸಂದರ್ಭಗಳ ಕುರಿತು ಸಮರ್ಥಿಸಿ ಒತ್ತುವುದು ಬೇಡ
ವಾದರೂ, ಅವನ್ನು ನಿರ್ಮಮ ಕಲಾದೃಷ್ಟಿಯಿಂದ ಚಿತ್ರಿಸುವುದು ಅವಶ್ಯ.
'ಪೌರಾಣಿಕ ಮೌಲ್ಯಗಳನ್ನು ಪ್ರಶ್ನಿಸುವ ಸಂಬಂಧವೂ ಕೆಲವು ಪಾತ್ರಗಳಲ್ಲಿ ನಮಗೆ
ಸಿಗುತ್ತದೆ. ೧೧೬ | ಜಾಗರ
ಹೆಚ್ಚು ಕಡಿಮೆ ಇಡಿಯ ಪ್ರಸಂಗ ಸಾಹಿತ್ಯ ಮಧ್ಯಯುಗೀನ, ಭಕ್ತಿಯುಗದ
ತೀರ ಸರಳವಾದ ಮೌಲ್ಯ ಪ್ರಪಂಚವನ್ನು ಪ್ರತಿನಿಧಿಸುವುದರಿಂದ, ಉಪನಿಷತ್ತು,
ಷಡ್‌ದರ್ಶನಗಳ ಯುಗದ, ಮೂಲ ರಾಮಾಯಣ ಭಾರತಗಳ, ಚಿಂತನದ ಪ್ರೌಢತೆ
ಸಂಕೀರ್ಣತೆಗಳು ನಮ್ಮ ಪ್ರಸಂಗಗಳಲ್ಲಿ ಇಲ್ಲ. ಮನುಷ್ಯ ಜೀವನದ ಸಂಕೀರ್ಣ
ಸಂದರ್ಭಗಳನ್ನು, ಹೆಚ್ಚು ವಿಸ್ತಾರವಾದ ಜೀವನ ದೃಷ್ಟಿಯನ್ನು ಚಿತ್ರಿಸಬಲ್ಲ ಪ್ರಸಂಗ
ಸಾಹಿತ್ಯದ ಸೃಷ್ಟಿ ಯಕ್ಷಗಾನ ರಂಗದ ತುರ್ತಿನ ಅವಶ್ಯಕತೆಗಳಲ್ಲಿ ಒಂದು.
ಶ್ರೀ
ನಂಬಿಯಾರರೂ ಸೇರಿದಂತೆ, ಕೆಲವರು ಇಂತಹ ಯತ್ನ ಆರಂಭಿಸಿದ್ದಾರೆ.
ಗೋಷ್ಠಿಯಲ್ಲಿ ಮಂಡಿತವಾದ ಮೂರು ಪ್ರತಿಕ್ರಿಯೆಗಳು, ಅರ್ಥಗಾರಿಕೆ
ಯನ್ನು ಮೂರು ಸ್ತರಗಳಲ್ಲಿ ವಿವೇಚಿಸುವ ಯತ್ನ ಮಾಡುತ್ತವೆ. ಇದರಿಂದ
ಗೋಷ್ಠಿಯ ಒಟ್ಟು ಸ್ವರೂಪಕ್ಕೆ ವಿಭಿನ್ನ ಮುಖಗಳು ಒದಗಿ ಚರ್ಚೆ ಉಪಯುಕ್ತ
ವಾಗಿದೆ. ಮೂರು ಪ್ರತಿಕ್ರಿಯೆಗಳಲ್ಲಿ ಶ್ರೀ ಉಚ್ಚಿಲರದು ನೇರವಾಗಿ ಪ್ರಬಂಧದ
ಅಂಶಗಳಿಗೆ ಪ್ರತಿಕ್ರಿಯೆಯಾದರೆ, ಪೆರ್ಲ ಮತ್ತು ತೋಳ್ಪಾಡಿ ಅವರದು. ಪ್ರಬಂಧ
ವನ್ನು ಓದಿದಾಗ, ಅರ್ಥಗಾರಿಕೆಯ ಬಗ್ಗೆ ಹೊಳೆದ ಸ್ವತಂತ್ರ ವಿಚಾರಗಳ ಮಂಡನೆ.
ಪೆರ್ಲ ಕೃಷ್ಣ ಭಟ್ಟರು ತಮ್ಮ ಸುವ್ಯವಸ್ಥಿತವಾದ ಬರಹದಲ್ಲಿ ಅರ್ಥದ
ಅಷ್ಟಾಂಗಗಳ ಒಂದು ಪರಿಕಲ್ಪನೆಯನ್ನು ರಚಿಸಿ, ಅರ್ಥವನ್ನು ಅದರ ವ್ಯಾಪ್ತಿಯಲ್ಲಿ
ವಿವೇಚಿಸಿದ್ದಾರೆ. ಆಟ ಮತ್ತು ತಾಳಮದ್ದಳೆಗಳ ಅರ್ಥಗಾರಿಕೆಯ ರೀತಿಗಳ ಬಗ್ಗೆ
ಪೆರ್ಲರು ಒಂದು ಮಹತ್ವದ ಮೂಲಭೂತ ಅಂಶದತ್ತ ಬೆಟ್ಟು ಮಾಡಿದ್ದಾರೆ.
ಆಟದ ಅರ್ಥ ಗಿಡ್ಡ ತಾಳಮದ್ದಳೆಯದು ಉದ್ದ ಎಂಬಷ್ಟೇ ಸರಳ ವಿವೇಚನೆ ಸಲ್ಲ,
ಅದು ಸಣ್ಣ ಕತೆ ಮತ್ತು ಕಾದಂಬರಿಗಳು ಹೇಗೆ ಬರಿಯ ಪ್ರಮಾಣದಿಂದ ಮಾತ್ರ
ಭಿನ್ನ ವಲ್ಲವೊ, ಹಾಗೆ ಎಂದು ಹೇಳಿರುವುದು, ತುಂಬ ಯುಕ್ತವಾದ ವಿವೇಚನೆ. ಆಟ
ಕೂಟಗಳಲ್ಲಿನ ಮಾತುಗಾರಿಕೆಯಲ್ಲಿ ಮೂಲಭೂತವಾದ ಅಂತರವಿದೆ.
ಕಲೆಯಲ್ಲಿ ಬೋಧನಾಂಶ ಇದ್ದೇ ಇರುತ್ತದೆ ಎಂಬ ಪೆರ್ಲರ ಮತಕ್ಕೆ
ಒಟ್ಟು ಸಾಹಿತ್ಯ ವಿಮರ್ಶೆಯ ಬಲ ಇದೆ. (ಬೋಧನಾಂಶ ಹೇಗೆ ಬರಬೇಕು
ಎಂಬುದೇ ಪ್ರಶ್ನೆ) ಯಾವುದೇ ಸಾಹಿತ್ಯ, ಕಲೆ - ಕೆಲವೊಂದು ಮೌಲ್ಯ, ಚಿಂತನ,
ಪ್ರಚೋದನೆಗಳನ್ನು ಕೊಡುತ್ತದೆ. ಆದರೆ ರಾಮಾದಿವತ್' ನ ತು ರಾವಣಾದಿ
ವತ್ ಎಂಬಷ್ಟು ಸರಳವಾದ ಒಂದು ಪ್ರಚೋದನೆ ಸಾಕೆ, ಅಲ್ಲ ಆಳವಾದ ವೈಚಾರಿಕ
ನೆಲೆಯ ಸ್ಫೂರ್ತಿಗಳನ್ನು ಕಲೆ ಒದಗಿಸಬೇಕೆ ಎಂಬುದನ್ನು ಯೋಚಿಸಬೇಕು.
ಪೆರ್ಲರು ಸೂಚಿಸಿರುವ ಮಾತಿನ ಅಷ್ಟಾಂಗಗಳಲ್ಲಿ ಅಭಿನಯವೂ ಇರು
ವುದು ಗ ಮ ನಾ ರ್ಹ ಅಂಶ ( ಈ ಅಂಶವನ್ನು ಉಳಿದ ಯಾರೂ ಪ್ರಸ್ತಾವಿಸಿಲ್ಲ)
ಬೇಕೇ ಬೇಕು. ಪೆರ್ಲರು ನಿರ್ಮಿಸಿದ 'ಅಷ್ಟಾಂಗವ್ಯೂಹ' ವಿವೇಚನೆಯಲ್ಲಿ ನಿರೀಕ್ಷಿತ
ಮಟ್ಟಕ್ಕೆ ಬೆಳೆದಿಲ್ಲ. (ಬಹುಶಃ ವಿಸ್ತಾರ ಭಯವೂ ಒಂದು ಕಾರಣವಿರಬೇಕು. ಅರ್ಥ
ಗಾರಿಕೆಯಲ್ಲಿರುವ, ಹಲವು ಅಸಂಬದ್ಧತೆಗಳನ್ನೂ, ದುಷ್ಕೃವೃತ್ತಿಗಳನ್ನೂ ಪೆರ್ಲರು
ಬಲವಾಗಿ ಖಂಡಿಸಿದ್ದಾರೆ - ರಂಗದ ಹಿರಿಯ ಕಲಾವಿದರಾಗಿ ಅವರು ಮಾಡಿದ ಈ
ಖಂಡನೆಮಹತ್ವದ್ದೆನಿಸುತ್ತದೆ. )
ಅರ್ಥಗಾರಿಕೆಯ ಭಾಷೆ - ಮತ್ತು ಅದರಲ್ಲಿನ ಆಡುಮಾತಿನ ಸ್ಥಾನದ ಬಗ್ಗೆ
ವಿವೇಚಿಸುವಾಗ - ಯಕ್ಷಗಾನವು ಪೌರಾಣಿಕ ರಂಗವಾದುದರಿಂದ ಗ್ರಾಂಥಿಕವಾದ
ಭಾಷೆ ಅವಶ್ಯ, ಆಡುಮಾತು ಸಲ್ಲ - ಎಂಬ ಧೋರಣೆ ತೀರ ಸರಳವಾದ ದೃಷ್ಟಿ
ಎಂದು ನನಗನಿಸುತ್ತದೆ. ಭಾಷೆ ಪ್ರೌಢವೂ ಒಂದಷ್ಟು ಹಳತೂ' ಇರಬೇಕಾದುದು
ಅವಶ್ಯ ನಿಜ, ಆದರೆ ಯಕ್ಷಗಾನದ ಮಾತಿನ ಲಯ, ಕ್ರಿಯಾಪದಗಳ ರೂಪಗಳು,
ಪ್ರತ್ಯಯಗಳು, ಆಡುಮಾತಿನವು ಎಂಬುದು ಗಮನಾರ್ಹ, ಅಲ್ಲದೆ ಸಮರ್ಥನಾದ
ಕಲಾವಿದ 'ದೇಸಿಯ ಬಳಕೆಯಿಂದ ಅಭಿವ್ಯಕ್ತಿಗೆ ಶಕ್ತಿ, ಸೊಗಸು ತರಬಲ್ಲ ಎಂಬು
ದಕ್ಕೆ ದಿ| ಪೊಳಲಿ ಶಾಸ್ತ್ರಿಗಳ ಹಾಗೂ ಶೇಣಿಯವರ ಕೆಲವು ಆಡುಮಾತಿನ ಪ್ರಯೋಗ
ಗಳು ಸಾಕ್ಷಿ. ಕೆಲವೊಮ್ಮೆ ಮಾತು. ಅದರ ಸಾಹಿತ್ಯಾಂಶವನ್ನು ಆಧರಿಸದೆ, ಕೇವಲ
ಅಭಿವ್ಯಕ್ತಿ ವಿಧಾನದಿಂದಲೇ ಸಫಲವಾಗುತ್ತದೆ. (ತೋಳ್ಪಾಡಿಯವರು ಪ್ರಸ್ತಾವಿ
ಸಿದ ಮಾತಿನ ವಿಶಿಷ್ಟತೆಯನ್ನು ಇಲ್ಲಿ ನೆನಪಿಸಬಹುದು) ಆಡುಮಾತನ್ನು ಹೊಂದಿ
ಸುವ ರೀತಿಯ ಕಲಾತ್ಮಕತೆಯೇ ಇಲ್ಲಿನ ಮಾನದಂಡ.
ವಾದದ ಮಿತಿ, ಆಕರ, ಆಧಾರಗಳ ಬಗೆಗೆ ಕೃಷ್ಣ ಭಟ್ಟರು ಇನ್ನಷ್ಟು
ಆಳವಾಗಿ ವಿವೇಚಿಸಬಹುದಾಗಿತ್ತು ಅನಿಸುತ್ತದೆ. ವೈಚಾರಿಕವಾದ ಅರ್ಥಗಾರಿಕೆ,
ಆಟಕ್ಕೆ ಅವಶ್ಯವಲ್ಲ. ತಾಳಮದ್ದಳೆಗೆ ಬೇಕು ಎಂಬರ್ಥದ ಮಾತುಒಪ್ಪಬಹುದಾದು
ದಲ್ಲ, ಬೇಕಾದರೆ, ಅದು ಎರಡೂ ಪ್ರಕಾರಗಳಲ್ಲಿ ಬೇಕು.
ಆಗಲೇ ಪ್ರಸ್ತಾವಿಸಿದಂತೆ, ಶ್ರೀ ನಂಬಿಯಾರರ ಪ್ರಬಂಧಕ್ಕೆ ನೇರ ಪ್ರತಿ
ಕ್ರಿಯೆ ಕೇಶವ ಉಚ್ಚಿಲರದು. ಅರ್ಥಗಾರಿಕೆಯ ಸ್ವರೂಪ ಸಮೀಕ್ಷೆಯೇ ತೊಡಕಿನ
ದೆಂದು ಉಚ್ಚಿಲರು ಹೇಳಿದ್ದಾರೆ. ಆದರೆ ಅಂತಹ ಭಯಕ್ಕೇನೂ ಆಸ್ಪದವಿಲ್ಲ,
ಸಾಕಷ್ಟು ಪ್ರಮಾಣದಲ್ಲಿ ವಿಮರ್ಶೆ ಬೆಳೆದಾಗ, ಈ ತೊಡತು ಪರಿಹಾರವಾಗುತ್ತದೆ.
ಆಟದಲ್ಲಿ ಮಾತು ನಾಲ್ಕನೇ ಒಂದಂಶ. ತಾಳಮದ್ದಳೆಯಲ್ಲಿ ವೇಷ
ನೃತ್ಯಾಭಿನಯಗಳ ಜಾಗದಲ್ಲಿ ಮಾತೇ ಇರುತ್ತದೆ ಎಂಬುದನ್ನು ಆಕ್ಷೇಪಿಸಿ ಅಂಕ
ಗಣಿತದ ಸರಳ ಸೂತ್ರ ಸರಿಯಿಲ್ಲ ಎಂದು ಹೇಳಿ ಉಚ್ಚಿಲ್ ಮುಖ್ಯ ಅಂಶ ಒಂದನ್ನು
ತೋರಿಸಿದ್ದಾರೆ. ಆದರೂ, ನಂಬಿಯಾರರ ಮುಖ್ಯ ನಿಲುವಿಗೆ ಇದರಿಂದ ಬಾಧಕ
ವಿಲ್ಲ ಎಂದೆನಿಸುತ್ತದೆ.
ಏಕೆಂದರೆ ಆಟದ ಅಭಿವ್ಯಕ್ತಿ ಹೆಚ್ಚು ನಾಟಕೀಯ ೧೧೮ | ಜಾಗರ
ಸಮಗ್ರತೆಯನ್ನು ಹೊಂದಿರುವುದರಿಂದ, ಮಾತಿನ ಒಟ್ಟು ಹೊಣೆ ಅಲ್ಲಿ ಕಡಿಮೆ
ಎಂಬುದು ಅಲ್ಲಿ ವಿವಕ್ಷಿತ.
ಅರ್ಥಗಾರಿಕೆಯಲ್ಲಿ ಧರ್ಮ ನೀತಿಗಳ ಅಂಶವು ಹೇಗೆ ಬರಬೇಕು ಎಂಬಲ್ಲಿ
ಯೂ ಪೆರ್ಲ, ಉಚ್ಚಿಲ್ ಇಬ್ಬರೂ ನಂಬಿಯಾರರ ನಿಲುವಿಗೆ ಆಕ್ಷೇಪ ಎತ್ತಿದ್ದಾರೆ.
ಪೌರಾಣಿಕ ನಾಟಕ ಮಾಧ್ಯಮವೊಂದರಲ್ಲಿ ಧರ್ಮ, ನೀತಿ ಬೋಧನೆಗಳ ಅಂಶಕ್ಕೆ
ಆಸ್ಪದ ಹೆಚ್ಚು. ಆದರೆ, ವಿಚಾರ ಮಂಥನ, ಬೋಧನೆಗಳೇ ಮುಖ್ಯ ಉದ್ದೇಶ
ವಲ್ಲ ಎಂಬುದು ನಂಬಿಯಾರರ ನಿಲುವು. ಕೆಲವು ಸಲ ವಿವಾದ ಬರುವುದು ಒಂದು
ಕಲ್ಪನೆಯನ್ನು ವಿಭಿನ್ನ ವ್ಯಾಪ್ತಿಯಲ್ಲಿ ಇಬ್ಬರು ಬಳಸಿದಾಗ, ಪದ್ಯದ ಅರ್ಥ
ವನ್ನಷ್ಟೇ ಅರ್ಥಧಾರಿ ವಿಸ್ತರಿಸಬೇಕೆಂಬ ಪ್ರಬಂಧಕಾರರ ನಿಲುವಿಗೆ ಪೆರ್ಲ, ಉಚ್ಚಿಲರು
ಎತ್ತಿದ ಆಕ್ಷೇಪವೂ ಇದೇ ರೀತಿಯದ್ದು, ಬರಿಯ ಪದ್ಯದ ಅರ್ಥಕ್ಕಾಗಿ, ಕತೆಗಾಗಿ
ಕಲಾರಸಿಕರು ಕುತೂಹಲಿಗಳಲ್ಲ ನಿಜ, ಆದರೆ ಪದ್ಯ ವಿಧಿಸುವ ಮಿತಿಯನ್ನು ದಾಟಿ
ಸಂದರ್ಭದ ಔಚಿತ್ಯವನ್ನು ಮೀರಿದ ಮಾತು ಅನುಚಿತ. ಮಾತುಗಾರಿಕೆ ಪದ್ಯದ
ಚೌಕಟ್ಟಿಗೆ ನಿಷ್ಠವಾಗಿರಬೇಕೆಂಬುದು ಪ್ರಬಂಧಕಾರರ ನಿಲುವು. ಅರ್ಥ, ವಾದಗಳು
ದೀರ್ಘವಾಗುವುದೇ ಈ ಮಾಧ್ಯಮದ ಒಂದು ಲಕ್ಷಣ. ಅದು ದೀರ್ಘವಾದರೂ
ರುಚಿಕರವಾಗಿ, ವಿಷಯಕ್ಕೆ ಅಂಟಿಕೊಂಡು ಇದ್ದಾಗ ಅಪೇಕ್ಷಣೀಯವೇ ಆಗಿದೆ,
ಎಂದು ಉಚ್ಚಿಲ್, ಪೆರ್ಲ ಇವರಿಬ್ಬರ ನಿಲುವೆಂದು ನನಗೆನಿಸುತ್ತದೆ.
ಮಾತಿನ ಪ್ರತಿ ಅಂಶವೂ ರಸಾತ್ಮಕವಾಗಿರಬೇಕು - ಎಂಬ ನಂಬಿಯಾರರ
ವಾದಕ್ಕೆ ಉಚ್ಚಿಲರ ಆಕ್ಷೇಪ ವಾಸ್ತವವಾದಿಯಾದುದು. ಮಾತಿನ ಅದರಲ್ಲೂ
ಆಶುಭಾಷಣದ ರಸ - ಧ್ವನಿ ಔಚಿತ್ಯಗಳ ಸೀಮೆ ತುಸು ಸಡಿಲವಾದದ್ದು.
ಬರಹದ ನಿಖರತೆಯನ್ನು ಅಲ್ಲಿ ಅಪೇಕ್ಷಿಸಲಾಗದು, ರಸ ಮತ್ತು ಚಿಂತನದ
ಕುರಿತು ನಂಬಿಯಾರ್ ಮತ್ತು ತೋಳ್ಪಾಡಿ ಅವರು ಕಲಾವಿದನಿಂದ ಅತಿಯಾದ
ನಿರೀಕ್ಷೆ, ಪ್ರತೀಕ್ಷೆ ಮಾಡುತ್ತಿದ್ದಾರೆಂದು ನನ್ನೆಣಿಕೆ.
ಯಕ್ಷಗಾನದ ಮಾತು, ಘಟನಾವಳಿಗಳಲ್ಲಿ ಬರುವ ಚರ್ವಿತ ಚರ್ವಣ, ಈ
ಕಲೆಗೆ ಅಂಟಿದ ಒಂದು ರೋಗ.
ಪ್ರಸಂಗದಲ್ಲಿ ಬರುವ ಪುನರುಕ್ತಿ ಸಾಲದ್ದಕ್ಕೆ,
ಅರ್ಥಧಾರಿಗಳು ಮತ್ತಷ್ಟು ಬೆಳೆಯುತ್ತಾರೆ. (ವಾಲಿವಧೆಯಲ್ಲಿ ರಾಮನ ಪೂರ್ವ
ವೃತ್ತಾಂತ ಐದಾರು ಸಲ ಬರುತ್ತದೆ.) ಇದಕ್ಕೆ ಬಲವಾದ ಪ್ರತಿಭಟನೆ ಸಲ್ಲಿಸಿ
ನಂಬಿಯಾರರೂ, ಉಚ್ಚಿಲರೂ ಒಂದು ಉಪಯುಕ್ತ ಚರ್ಚೆಯನ್ನು ಆರಂಭಿಸಿದ್ದಾರೆ.
(ಚರ್ವಿತ ಚರ್ವಣದ ಬಗ್ಗೆ ಈಗಾಗಲೇ ಕಲಾವಿದರಲ್ಲೂ, ಪ್ರೇಕ್ಷಕರಲ್ಲೂ
ಪ್ರತಿಭಟನೆ ಇದೆ.)
ಗೋಷ್ಠಿಯಲ್ಲಿ ಸಾಕಷ್ಟು ಚರ್ಚೆ ಆಗಿದೆ (ಚರ್ಚೆಯ ಬಹುತೇಕ ಅ೦ಶ ಶೇಣಿ-
ಸಾಮಗರ ಅರ್ಥಗಾರಿಕೆಯನ್ನೆ ಲಕ್ಷಿಸುವುದು ಸ್ವಾಭಾವಿಕ.) ಸಮಕಾಲೀನ ಪ್ರಜ್ಞೆ,
ಚಿಂತನಗಳ ಅಳವಡಿಕೆಗೆ ಬಹುಶಃ ಆಕ್ಷೇಪ ಇರುವುದಿಲ್ಲ. ಆಕ್ಷೇಪ ಇರುವುದು ಪದ
ಪ್ರಯೋಗ, ಅಭಿವ್ಯಕ್ತಿ ವಿಧಾನದ ಬಗೆಗೆ, ಹಿ೦ದಣ 'ಸಾಂಸ್ಕೃತಿಕ ಕಲೆ'ಯೊಂದರ
ಆವರಣದೊಳಗೆ ಸಮಕಾಲೀನ ಪ್ರಜ್ಞೆಯನ್ನು ತರುವ ವಿಧಾನ ಯಾವುದು ಎಂಬುದು
ಪ್ರಶ್ನೆ, ಈ ರಂಗದ ಆಯಾಮ ವಿಸ್ತರಣೆಗೆ ಅತ್ಯಂತ ಅವಶ್ಯವಾದ ಒಂದು ಮುಖ್ಯ
ವಿಷಯ ಇದು. ಈ ಪ್ರಶ್ನೆಯಲ್ಲಿ ಪ್ರಬ೦ಧಕಾರರಿಗೂ - ಶ್ರೀ ಉಚ್ಚಿಲರಿಗೂ,
ಸ್ಪಷ್ಟ ಭಿನ್ನಮತ ಇದೆ. ಏಕೆಂದರೆ, ವರ್ತಮಾನವನ್ನು ನೆನಪಿಸುವ ಪದ ಪ್ರಯೋಗ
ಗಳ ಬಗ್ಗೆಯೂ ಉಚ್ಚಿಲರ ಒಪ್ಪಿಗೆ, ಸಮರ್ಥನೆ ಇದೆ. ಚಿಂತನದ ಮಟ್ಟದಲ್ಲಿ,
ಪೌರಾಣಿಕ ಚಿತ್ರವನ್ನು ಭ೦ಗ ಗೊಳಿಸದೆ, ಸಮಕಾಲೀನ ವಿಚಾರ ತರಲು ಸಾಧ್ಯ
ಎಂಬುದು ನ೦ಬಿಯಾರರ ನಿಲುವು.
ಶ್ರೀ ನಂಬಿಯಾರರು ನೀಡಿದ ಕಾಳಿದಾಸನ ಕಾವ್ಯದ ಉದಾಹರಣೆಗೆ, ಶ್ರೀ
ಉಚ್ಚಿಲರ ಆಕ್ಷೇಪ ಜಾಣತನದಿಂದ ಕೂಡಿದ್ದರೂ, ಇಲ್ಲಿನ ಮುಖ್ಯ ತಾತ್ಪರ್ಯಕ್ಕೆ
ಅದು ಉತ್ತರವಾಗಲಾರದು. ಕಾಳಿದಾಸನದು ತನ್ನ ಕಾಲದ ಸಮಕಾಲೀನತೆ. ನಮ್ಮ
ಕಾಲದ್ದನ್ನು ನಾವು ಚಿತ್ರಿಸಿದರೆ ತಪ್ಪೇನು ಎಂಬುದು ಉಚ್ಚಿಲರ ವಾದ.
ಇಲ್ಲಿ ಆವರಣ ಪ್ರಶ್ನೆ' ಬಹಳ ಮುಖ್ಯ - ಪಂಪ, ರನ್ನರು ಸಮಕಾಲೀನ ದೃಷ್ಟಿ
ಯಿಂದ ಕಾವ್ಯ ರಚನೆ ಮಾಡಿದ್ದಾರೆ - ಎಂಬುದನ್ನು ಸಮರ್ಥನೆಗಾಗಿ ಅವರು ಹೇಳಿ
ಪಂಪ, ರನ್ನರು ಬರಿಯ ಶಾಬ್ದಿಕ ಮಟ್ಟದಲ್ಲಿ ಸಮಕಾಲೀನತೆ ತಂದಾಗ
ಆಭಾಸವಾದದ್ದನ್ನು ನಾವು ಗಮನಿಸಬೇಕು (ತಾತ್ವಿಕವಾಗಿಯೂ ಅವರು ಸಮಕಾಲೀ
ನತೆ ತಂದಿದ್ದಾರೆ. )ಇಂತಹ ಯತ್ನದಿಂದ ಪಂಪರನ್ನರ ಕಾವ್ಯದ ಮೌಲ್ಯ ಇಳಿದಿದೆ,
ಹೊರತು ಹೆಚ್ಚಿಲ್ಲ. (ಇದನ್ನೂ ಉಚ್ಚಿಲರು ಗಮನಿಸಿ, ವಾಚ್ಯವಾಗಿ ಸಮಕಾಲೀನತೆ
ಬೇಡ ಎಂದೂ ಹೇಳಿದ್ದಾರೆ.) ಇಲ್ಲಿ ಉಚ್ಚಿಲರ ವಾದದಲ್ಲಿ, ಅಸ್ಪಷ್ಟತೆ, ಗೊಂದಲ
ಗಳಿವೆ.
ಸಮಕಾಲೀನತೆಯನ್ನು ತರುವಲ್ಲಿ ಎರಡು ದಾರಿಗಳಿವೆ. ಒಂದು ಆಧುನಿಕ
ಸಾಹಿತ್ಯ, ಚಿಂತನ, ಜೀವನ ದರ್ಶನ, ಪೌರಾಣಿಕ ವಿಮರ್ಶಾಸಾಹಿತ್ಯ ಮತ್ತು
ಸಾಂಸ್ಕೃತಿಕ ವಿಚಾರ ಪ್ರವಾಹಗಳನ್ನು ಪೌರಾಣಿಕ ಆವರಣದಲ್ಲಿ ಎರಕವಾಗಿ ತರುವ
ರೀತಿ, (ವಿ. ಸ. ಖಾಂಡೇಕರರ “ಯಯಾತಿ' ಗಿರೀಶ ಕಾರ್ನಾಡರ “ಹಯವದನ” ದ
ರೀತಿ) ಇನ್ನೊಂದು ವಾರ್ತಾಪತ್ರಿಕೆಯ ಪದಗಳನ್ನೂ ರಾಜಕೀಯ ಘಟನೆಗಳನ್ನೊ
ಹಸಿಹಸಿಯಾಗಿ ತುರುಕಿಸುವ ರೀತಿ, ಇದು ಅಗ್ಗದ ದಾರಿ, ಜನರ ನಗೆ, ಚಪ್ಪಾಳೆ
ಗಳಿಗಾಗಿ ಬಳಸುವ ಒಂದು cheap gimmick ( ಈ ಎರಡೂ ದಾರಿಗಳನ್ನು
ಅತ್ಯಂತ ಸಮರ್ಥವಾಗಿ ಬಳಸಿದವರು ಶೇಣಿ ಅವರು. ಶ್ರೀ ಶಂಕರನಾರಾಯಣ
ಸಾಮಗರ, ದೇರಾಜೆ ಅವರೂ ತಮ್ಮದಾದ ರೀತಿಯಿಂದ ಸಮಕಾಲೀನ ಚಿಂತನ
೧೨೦ | ಜಾಗರ
ವನ್ನು ಅರ್ಥಗಾರಿಕೆಗೆ ತಂದವರು.) ಕಲಾಮಾಧ್ಯಮದ ಸಮಗ್ರತೆಯನ್ನೂ ಆವರಣ
ವನ್ನೂ ಕಾಯ್ದು ತರುವ ಸರ್ವಕಾಲಿಕ ಸಮಕಾಲೀನತೆ, ನಮಗೆ ಬೇಕಾಗಿರುವುದು.
ಕಥೆಯ ಸಂದರ್ಭಕ್ಕೆ ಹೊಂದುತ್ತದೆ ಎಂಬ ಕಾರಣಕ್ಕಾಗಿ ಕಮ್ಮಿ ನಿಷ್ಠೆ' 'ಕಾಮಿನೀ
ಪ್ರಕರಣ' 'ವಿಷಮ ಪರಿಸ್ಥಿತಿಯ ಬಂಧನ' 'ಎಡ - ಬಲ' 'ಭ್ರಷ್ಟಾ ಚಾರ
“ನ್ಯಾಯಾಂಗ ಪರಿಶೀಲನೆ' 'ಅಲ್ಪ ಸ೦ಖ್ಯಾತ' 'ವಿರೋಧ ಪಕ್ಷ 'ಮತದಾನ'
ಉತ್ತರದವರ ರಾಜಕೀಯ' - ಮುಂತಾದ ಕಥಾಕಥಿತ ಸಮಕಾಲೀನತೆ ಕ್ಷಮ್ಯವಾಗ
ಲಾರದು. ಪೇಪರಿನ ಶಬ್ದಗಳನ್ನು ತಂದು ಜನಮೆಚ್ಚುಗೆ ಗಳಿಸುವುದು ಸಮಕಾಲೀನ
ಕಲಾನಿರ್ಮಾಣ ಅಲ್ಲ." ಅದು ಸಮಕಾಲೀನತೆಯ ಅಣಕ” ಜಾಣತನದ ಚಮತ್ಕಾರ
ದಿಂದ ವರ್ತಮಾನ ಪ್ರಪಂಚದ ಘಟನೆಗಳನ್ನು ನ್ಯೂಸ್ ಪೇಪರ್ ಶಿರೋನಾಮೆ
ಗಳನ್ನು ಅರ್ಥಗಾರಿಕೆಯಲ್ಲಿ ತರುವುದು ಕಲೆಯಲ್ಲ. ಅದನ್ನು ಸಮಕಾಲೀನ ಸೃಷ್ಟಿ
ಎಂದು ವೈಭವೀಕರಿಸುವುದು, ಅನರ್ಥಕ್ಕೆ ಮೂಲ. ಹಾಗೆ ಮಾಡುವುದು ಸಾಂಸ್ಕೃತಿಕ
ದುರಂತಕ್ಕೆ ದಾರಿ ಮಾಡುವ 'ಲೈಸನ್ಸ್' ಆಗಬಹುದು. ತಾಳಮದ್ದಳೆಯಲ್ಲಿ ರೂಪ,
ರಚನಾ ವಿಧಾನದ ನಿಯಮಗಳನ್ನು ಭಂಗಿಸದೆ, ಸಮಕಾಲೀನತೆಗಳನ್ನು ತರಲು ಸಾಧ್ಯ.
ಶ್ರೀ ನಂಬಿಯಾರರ ಪ್ರಬಂಧದಲ್ಲಿ - ವ್ಯವಸ್ಥೆ, ಮೌಲ್ಯಗಳಿಗೆ ಸಂಬಂಧಿಸಿ
ಮಾಡಿರುವ ಚರ್ಚೆ, (ಅದು ಮಹತ್ವದ್ದಾದರೂ) ಅದರಲ್ಲಿ ಇರುವ ಗೊಂದಲ
ವನ್ನು ಉಚ್ಚಿಲರು ಸರಿಯಾಗಿ ಗುರುತಿಸಿದ್ದಾರೆ.
ಅರ್ಥಗಾರಿಕೆಯನ್ನು, ಭಾರತೀಯ ಕಾವ್ಯ ಮೀಮಾಂಸೆಯ ಗಟ್ಟಿ ನೆಲೆ
ಯಲ್ಲಿ ಬರೆದು, ಉಚ್ಚಿಲರು ತನ್ನ ಪ್ರತಿಕ್ರಿಯೆಗೆ ಬಲವಾದ ತಾತ್ವಿಕ ನೆಲೆಗಟ್ಟನ್ನು
ಒದಗಿಸಿದ್ದಾರೆ.
ರೆ. 'ಸ್ವರೂಪ ಸಮೀಕ್ಷೆ'ಯ ಗೊಂಡಾರಣ್ಯದಲ್ಲಿ ಸಲೀಸಾಗಿ ಸಂಚರಿಸಿ
ದ್ದಾರೆ. ಗೋಷ್ಠಿಯ ಪ್ರಬಂಧಕ್ಕೆ ಪ್ರತಿಕ್ರಿಯೆ ಪ್ರಕಟಿಸುವ ಒ೦ದು ಒಳ್ಳೆಯ
ಮಾದರಿ ಇದು.
ಶ್ರೀ ಪೆರ್ಲ ಕೃಷ್ಣ ಭಟ್ಟರ ಪ್ರತಿಕ್ರಿಯೆ ಸಾಮಾನ್ಯ ಔಚಿತ್ಯ ದೃಷ್ಟಿ,
ಪ್ರಾಯೋಗಿಕ ದೃಷ್ಟಿಗಳಾದರೆ, ಉಚ್ಚಿಲರದು ರಸ-ಧ್ವನಿ- ಔಚಿತ್ಯಗಳ ದೃಷ್ಟಿಯದು.
ಶ್ರೀ ಲಕ್ಷ್ಮೀಶ ತೋಳ್ಳಾಡಿ ಅವರು ಇನ್ನಷ್ಟು ಮುಂದೆ ಹೋಗಿ, ಆಧುನಿಕ ದೃಷ್ಟಿಯ
ಪ್ರೌಢವಾದ ಚಿಂತನ ಕ್ರಮವನ್ನು ಅರ್ಥಗಾರಿಕೆಗೆ ಅಳವಡಿಸಿ, ಒಂದು ಹೊಸ
ಲೋಕವನ್ನೇ ತೆರೆದು ತೋರಿದ್ದಾರೆ. ಈ ದೃಷ್ಟಿ ಯಕ್ಷಗಾನಕ್ಕೆ ಹೊಸದು ಮತ್ತು
ಕಲೆಗೆ ಮಹತ್ವದ ಪ್ರಯೋಜನವನ್ನು ಕೊಡಬಲ್ಲದು. ಅರ್ಥಗಾರಿಕೆಯ ಸಾಧ್ಯತೆ
ಗಳನ್ನೆ ಕೆದಕಿ, ಹೊಸ “ಎಕ್ಸ್‌ಪ್ಲೋರೇಷನ್' ಕೈಗೊಂಡಿರುವ ತೋಳ್ಪಾಡಿ ಕಾವ್ಯ
ದಲ್ಲಿ 'ರಹಸ್ಯ'ವನ್ನೂ 'ಪ್ರಕಾಶ'ವನ್ನೂ ಗುರುತಿಸುವ ಕೆಲಸ ಕಲಾವಿದನದ್ದು ಎಂದಿ
ರುವುದು, ನಮ್ಮ ವಿಮರ್ಶಾ ಪ್ರಪಂಚಕ್ಕೆ ಒಂದು ಸೂತ್ರ ವಾಕ್ಯವಾಗಬಲ್ಲ ಮಾತು. ಶ್ರೀಯುತರು ತಮ್ಮ ಅರ್ಥಗಾರಿಕೆಯಲ್ಲಿ ಪಾತ್ರದ ಮನಸ್ಸಿನ ಜೀವನಾದರ್ಶ ವೈವಿಧ್ಯದ ಚಿತ್ರಣದ ಪ್ರಯೋಗ ಮಾಡಿದ್ದಾರೆ. ಅವರ ಪ್ರತಿಕ್ರಿಯೆ ಬಹು ಅಂಶ ನನಗೆ ಒಪ್ಪಿಗೆಯಾಗಿದೆ.
ಮಾತಿನ ವಿಶಿಷ್ಟತೆಯ ಬಗೆಗೆ ತೋಳ್ಳಾಡಿಯವರು ಹೇಳಿರುವಂತಹದು ಸಹ, ಮಾತು ಮಾಧ್ಯಮವಾಗಿರುವ ಈ ರಂಗದಲ್ಲಿ, ಅರ್ಥಗಾರಿಕೆಯ ವಿವೇಚನೆಗೆ ಒ೦ದು ಕೊಡುಗೆ: ಮಾತು, ಮನಃ ಶಾಸ್ತ್ರೀಯವಾಗಿ, ಭಾಷಾಶಾಸ್ತ್ರೀಯವಾಗಿ ಹೊಂದಿರುವ ಇತಿಹಾಸ, ಹಿನ್ನೆಲೆ, ಅರ್ಥವ್ಯಾಪ್ತಿಗಳು ಮಾತಿನ ಅರ್ಥವ್ಯಂಜ ಕತೆಯನ್ನು ನಿರ್ಧರಿಸಿ, ನಿಯಂತ್ರಿಸುತ್ತದೆ. ಪದ್ಯದ ಅರ್ಥ ಹೇಳುವಾಗ, ಪ್ರಸಂಗದಲ್ಲಿ ಇಲ್ಲದ ಸ್ವಾತಂತ್ರ್ಯವನ್ನು ಕಲಾವಿದ ಪಡೆದುಕೊಳ್ಳುವ ವಿಚಾರ - ಅನುಭವಸಿದ್ದ. (ಈ ವಾದವನ್ನು ಔಚಿತ್ಯ ಭಂಗಕ್ಕೆ ಸಮರ್ಥನೆಯಾಗಿ ಬಳಸಕೂಡದು) ಅಂತಹ ಒಂದು ಸ್ವಾತಂತ್ರ್ಯದ ಉದಾಹರಣೆ: 'ಕರ್ಣಪರ್ವ'ದ ಕರ್ಣನ ಪಾತ್ರದ್ದು, ನಾವು ಮಾತಿನಲ್ಲಿ ಚಿತ್ರಿಸುವ ಕರ್ಣನ ದ್ವಂದ್ವ ದುರಂತ ಪ್ರಜ್ಞೆ, ಸ್ವಾಮಿಭಕ್ತಿ, ಜಾತಿಯ ಬಗೆಗಿನ ಕೀಳನದ ತುಮುಲ, ಯಾವುದೂ ಕರ್ಣಪರ್ವದಲ್ಲಿ ಇಲ್ಲ. (ಕೊನೆಯ ಶಿವ ಶಿವ ಸಮರದೊಳು ಪದ್ಯಗಳ ಹೊರತು) ಕರ್ಣಪರ್ವದ ಕರ್ಣ ಒಬ್ಬ ಧೀರ, ಉದ್ಧತ, ಸರಳ ಪಾತ್ರ-ಖಳನಾಯಕ, (ಬೇಕಾದರೆ ಆ ಪ್ರಸಂಗದ ನಾಯಕನನ್ನಿ) ಅದರಾಚೆ ನಾವು ಮಾಡುವ ಸೃಷ್ಟಿ 'ರಹಸ್ಯಂಚ' ಅದು ನಾವು ಪಡೆಯುವ ಸ್ವಾತಂತ್ರ್ಯದಿಂದ ಮೂಡುವಂತಹದು ಮತ್ತು ಉಚಿತವಾದದ್ದೆ.
ಬಯಲಾಟದ ವೇಷಗಳು ಮತ್ತು ರಂಗವು ನಿರ್ಮಿಸುವ ಸರಳ, ಮುಗ್ಧ ಲೋಕದಲ್ಲಿ ಪಾತ್ರಗಳ ಒಳತೋಟಿ, ವೈಚಾರಿಕ ಅಂಶ ಅನಾವಶ್ಯಕ, ಅಸಾಧ್ಯ - ಎಂಬ ವಾದ, ಪ್ರಶ್ನಾರ್ಹ ಮತ್ತು ನಮ್ಮ ಅನುಭವಕ್ಕೆ ವಿರುದ್ಧವಾದುದು. ಒಂದು ದೃಷ್ಟಿಯಿಂದ ಸಂಕೀರ್ಣವಾದ ಭಾವಗಳ ಚಿತ್ರಣಕ್ಕೆ ಅಲ್ಲಿ (ಅಭಿನಯವೂ ಸೇರಿದಂತೆ) ಹೆಚ್ಚಿನ ಸೌಲಭ್ಯ ಇದೆ. ಆಟದಲ್ಲಿ ಪ್ರಸಂಗದ ಹೆಚ್ಚಿನ ಎಲ್ಲ ಚಿಕ್ಕ ದೊಡ್ಡ ಪಾತ್ರಗಳು ಬರುತ್ತವೆ. ಮುಕ್ತವಾಗಿ ಮಾತಾಡಲು ಹೆಚ್ಚಿನ ಸ್ವಾತಂತ್ರ್ಯ ಇರುವ ಹಾಸ್ಯಗಾರನಿದ್ದಾನೆ. ಸನ್ನಿವೇಶಗಳ ರೂಪ ಹೆಚ್ಚು ದಟ್ಟವಾಗಿ, ಜೀವಂತವಾಗಿ ಬರುತ್ತವೆ. ಕತೆ, ಪಾತ್ರದ ಸ್ಥಿತಿ, ಅವಸ್ಥಾಂತರಗಳೆಲ್ಲ ಸ್ಪುಟವಾಗಿ ಬರುತ್ತವೆ.
ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಯಕ್ಷಗಾನ ರಂಗದ ರೂಪಕ್ಕೆ ಬಾಧಕವಾಗದಂತೆ ತೋರಿಸಿ, ಆಧುನಿಕ ಚಿಂತನಾಂಶಗಳನ್ನು ಆ ಪಾತ್ರಗಳ ಪ್ರಪಂಚಕ್ಕೆ ಹೇಗೆ ಹೊಂದಿಸಲು ಸಾಧ್ಯ ಎಂಬುದನ್ನು ಹಲವು ಸಮರ್ಥ ಕಲಾವಿದರು ಆಟದಲ್ಲಿ ತೋರಿಸಿದ್ದಾರೆ. ತನ್ನ ಬಹಳಷ್ಟು ಪಾತ್ರಗಳಲ್ಲಿ ಶೇಣಿಯವರು ಈ ಕೆಲಸದಲ್ಲಿ ಆಶ್ಚರ್ಯಕರ ಯಶಸ್ಸು ಪಡೆದಿದ್ದಾರೆ. ಶ್ರೀ ಸಾಮಗರು (ದಶರಥ, ಕೌರವ) ೧೨೨ | ಜಾಗರ
ಕೆರೆಮನೆ ಮಹಾಬಲ ಹೆಗ್ಡೆ (ಕಂಸ, ದುಷ್ಟಬುದ್ಧಿ, ಕೌರವ, ಬಲರಾಮ, ಶಂಭುಹೆಗ್ಡೆ
(ಸಂಧಾನದ ಕೃಷ್ಣ, ಹರಿಶ್ಚಂದ್ರ) ಕುಂಬ್ಳೆ ಸುಂದರ ರಾವ್ (ತ್ರಿಶಂಕು, ಕರ್ಣ,
ಪರೀಕ್ಷಿತ) - ಇವರೆಲ್ಲ ತಮ್ಮ ಪಾತ್ರಗಳಿಗೆ ಹೊಸ ಚಿಂತನದ ಜೀವ ತುಂಬಿಸಿ ಯಶಸ್ಸು
ಗಳಿಸಿದ್ದಾರೆ. ಪಾತ್ರಸೃಷ್ಟಿಯ ವೈಚಾರಿಕತೆ ಮತ್ತು ಭಾವಾತ್ಮಕತೆ ಎಂದು ಎರಡಾಗಿ
ವಿಂಗಡಿಸುವಾಗ ಅವರು ಶೇಣಿ ಅವರ ವೈಚಾರಿಕತೆ ಮತ್ತು ದೇರಾಜೆ ಅವರ ಭಾವು
ಕತಾದಾತ್ಮ್ಯಾ ದೃಷ್ಟಿ ಎಂದುದು, ಒಂದು ತೋರ ಮಟ್ಟಿನ ಸರಳ ವರ್ಗಿಕರಣ
ಎಂದೇ ನನ್ನೆಣಿಕೆ. ಬಹುಶಃ ಅದರ ಉದ್ದೇಶವೂ ಅಲ್ಲಿ ಅಷ್ಟೆ.
ಪ್ರಾಚೀನ ಸಂಸ್ಕೃತ ಕಾವ್ಯಗಳ ಜೀವನ ದೃಷ್ಟಿಯ ವೈಶಾಲ್ಯ, ಸಂಕೀರ್ಣ
ತೆಗಳು ಮನುಷ್ಯ ಪ್ರಪಂಚದ ಬಗೆಗೆ ಅವಕ್ಕಿರುವ ಹೆಚ್ಚಿನ ನಿಷ್ಠೆ ವಾಸ್ತವ ದೃಷ್ಟಿಗಳ
ಬಗ್ಗೆ ಪ್ರಸ್ತಾಪಿಸಿದ ತೋಳ್ಪಾಡಿ , ಪರ್ಯಾಯವಾಗಿ, ಪ್ರಬಂಧಕಾರರ ಮೌಲ್ಯ
ವ್ಯವಸ್ಥೆಯ ಚರ್ಚೆಯ ಒಂದು ಮಗ್ಗುಲನ್ನು ಪೂರೈಸಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ
ತೋಳ್ಪಾಡಿ ಅವರದು ದಿಟ್ಟ ಸಾರ್ಥಕ ಯತ್ನ, ಅರ್ಥಗಾರಿಕೆಗೆ ಹೊಸ ಬೆಳಕು.
ಶ್ರೀ ಶಂಭುಹೆಗ್ಡೆ ಅವರ ಅಧ್ಯಕ್ಷ ಭಾಷಣವು, ಸಾಂದರ್ಭಿಕವಾದದ್ದು,
ಪೂರ್ವಸಿದ್ಧತೆಯಿಂದ ಬರೆದು ತಂದುದಲ್ಲ. ಹಾಗಾಗಿ ಪ್ರಬಂಧವೊಂದರ ಮಾನ
ದಿಂದ ಅದನ್ನು ವಿಶ್ಲೇಷಿಸುವುದು ಉಚಿತವಾಗಲಾರದು. ಅದರ ಕೆಲವು ಮುಖ್ಯಾಂಶ
ಗಳನ್ನು ಗಮನಿಸುವುದಷ್ಟೇ ಇಲ್ಲಿ ಪ್ರಕೃತ, ರಂಗದ ಪರಿಕರಗಳು ಮಾಡುವ ಕೆಲಸ
ವನ್ನು ಮಾತು ಮಾಡಲಾರದೆಂದು ಹೇಳಿ, ಆಟ - ಕೂಟಗಳ ಅರ್ಥಗಾರಿಕೆ ಬಗೆಗೆ
ಮೌಲಿಕ ವ್ಯತ್ಯಾಸವನ್ನು ತೋರಿಸಿಯೇ ಶ್ರೀ ಹೆಗ್ಡೆ ತಮ್ಮ ವಿವೇಚನೆ ಆರಂಭಿಸಿ
ದ್ದಾರೆ. ಗೋಷ್ಠಿಯನ್ನು ಸಮಗ್ರವಾಗಿ ಅವಲೋಕಿಸಲು ಯತ್ನಿಸಿದ್ದಾರೆ.
ಅರ್ಥಗಾರಿಕೆಗೆ ಪಾಂಡಿತ್ಯ, ಶಾಸ್ತ್ರಾಜ್ಞಾನಗಳು ಗೊಬ್ಬರವಾಗಿ ಒದಗಬೇಕು,
ಅದು ಫಲವಾದಾಗ ಗೊಬ್ಬರ ಕಾಣಿಸಲಾರದು - ಎಂಬ ನಿರೂಪಣೆಯಿಂದ, ಶ್ರೀ ಹೆಗ್ಡೆ
ಒಂದು ಒಳ್ಳೆಯ ವಿಮರ್ಶೆಯ ಕಲ್ಪನೆ ಒದಗಿಸಿದ್ದಾರೆ. ಹಿಮ್ಮೇಳ ಮತ್ತು ಅರ್ಥ
ಗಳ ಪರಸ್ಪರ ಸಂಬಂಧವನ್ನು ಬಹಳ ಚೆನ್ನಾಗಿ ಪ್ರಸ್ತಾಪಿಸಿದ್ದಾರೆ. ತಮ್ಮ ತಾಳ
ಮದ್ದಳೆಗಳಲ್ಲ, ಆಟಗಳಲ್ಲೂ ಹಿಮ್ಮೇಳ ಹೆಚ್ಚು ಸಕ್ರಿಯ, ಸಶಕ್ತವಾಗಬೇಕು,
ಯಾಂತ್ರಿಕವಾಗಬಾರದು (ಉ ಕನ್ನಡದ ಹಿಮ್ಮೇಳದ ಸಕ್ರಿಯತೆಗೂ, ಅಲ್ಲಿಯ
ರಂಗ ಜೀವಂತಿಗೆಗೂ ಸಂಬಂಧವಿದೆ.) ತಾಳಮದ್ದಳೆಯಲ್ಲಿ ಯುದ್ಧ ಏಳುಬೀಳು
ಗಳಿಗೆ ಹಿಮ್ಮೇಳದ ಬಳಕೆ ಪರಿಣಾಮಕ್ಕೆ ತುಂಬ ಸಹಾಯಕ. ಸಮರ್ಥ ಭಾಗವತ
ನೊಬ್ಬನಿದ್ದಾಗ ಅರ್ಥಕ್ಕೆ ಎಂತಹ ಸ್ಫೂರ್ತಿ, ಸೊಗಸುಗಳು, ಪದ್ಯಗಳಿಗೆ ಹೊಸ
ಅರ್ಥವೂ ಸ್ಪುರಿಸಬಹುದೆಂಬುದು, ಅನುಭವಸಿದ್ದ - ಶ್ರೀ ಮಂಡೆಚ್ಚರು, ಕಡತೋಕ
ಮಂಜುನಾಥ, ಬಲಿಪ ಭಾಗವತರಂತಹವರಿದ್ದಾಗ - ತಾಳಮದ್ದಳೆಯ ಅರ್ಥಗಾರಿಕೆ
ವೈಚಾರಿಕತೆಯನ್ನು ಕಲೆಯ ಆಧಾರದಲ್ಲಿ ಕೆಡದಂತೆ ಮಾತ್ರ ತರಬಹುದು
ಎನ್ನುವ ಶ್ರೀ ಹೆಗ್ಡೆ 'ಆವರಣ'ದ ಒಂದು ಕಲ್ಪನೆಯಿಂದ, ವಿಮರ್ಶೆಯ ಹಲವು
ಸಮಸ್ಯೆಗಳಿಗೆ ಸೂಕ್ತವಾದೊಂದು ಉತ್ತರದ ತಳಪಾಯ ತಯಾರಿಸಿದ್ದಾರೆ. ಆದರೆ,
ಆವರಣ ನಿರ್ಮಾಣಕ್ಕಾಗಿ ಸಮವಸ್ತ್ರ ಅವಶ್ಯ ಎಂಬ ವಾದ ಒಪ್ಪಿಗೆ ಯಾಗುವಂತ
ಹುದಲ್ಲ. ಈಗ ಇರುವ ಸಾಮಾನ್ಯ ಉಡುಪಿನ ವಾಸ್ತವವನ್ನು ಸೀಳಿ ಪ್ರೇಕ್ಷಕ
ತಾಳ ಮದ್ದಳೆಯ ಪುರಾಣ ಲೋಕವನ್ನು ಪ್ರವೇಶಿಸುತ್ತಿರುವಲ್ಲಿ, ಇಲ್ಲದ ಕೃತಕ
ಆವರಣ ನಿರ್ಮಾಣದ ಉಪದ್ಯಾಪ ಯಾಕೆ? ಪರಿಕರದಿಂದ ಆವರಣ ಸೃಷ್ಟಿ ಇಲ್ಲ
ದಿರುವುದೇ ಈ ಮಾಧ್ಯಮದ ಲಕ್ಷಣ.
ಇದಿರಾಳಿಯ ಮಾತನ್ನು ಬಳಸಿ ಬೆಳೆಸಿ, ಎರಡೂ ಪಾತ್ರಗಳ ಚಿತ್ರಣ
ಮಾಡುವ ರಸ ತಂತ್ರದ ಪ್ರಸ್ತಾಪ, ತುಂಬ ಪ್ರಸ್ತುತವಾದದ್ದು, ಮಹತ್ವದ್ದು.
ದೇರಾಜೆ, ಶೇಣಿ, ಪೆರ್ಲ ಅವರ ಅರ್ಥಗಾರಿಕೆಯಲ್ಲಿ ಈ ತಂತ್ರ ಇದೆ. ಇದಿರಾಳಿ
ಯಿಂದ ಪ್ರಶ್ನೆ, ವಾದಗಳ ಧಾಳಿಯ ಭಯದ ಅಡಿಯಲ್ಲಿ, ಕಲಾವಿದನ ಸೃಷ್ಟಿಶೀಲ
ಪ್ರತಿಭೆ ಅರಳಲಾರದೆಂಬ ಅವರ ಅನಿಸಿಕೆ, ಹಲವರ ಅನುಭವ. “ರಂಗದ ವಾದ
ವೆಂಬುದು ಪ್ರಣಯ ಕಲಹದಂತೆ, ಅದರಿಂದ ಉಂಟಾಗುವ ಸುಖವೇ ಅದಕ್ಕೆ ಲಕ್ಷ್ಮ
ವಾಗಿರಬೇಕೆಂದು ಶ್ರೀ ದೇರಾಜೆ ಸೀತಾರಾಮಯ್ಯ ತಾವೇ ವ್ಯಾಖ್ಯಾನಿಸಿದ್ದನ್ನು
ಇಲ್ಲಿ ನೆನ ಪಿಸಬೇಕೆನಿಸುತ್ತದೆ. 'ಭಾವ ಮಂದಾಗಿದ್ದು, ಅದಕ್ಕೆ ಅನುವರ್ತಿಯಾದ
ಬುದ್ಧಿಯ ವ್ಯವಸಾಯ' ಎಂಬ ಶ್ರೀ ಹೆಗ್ಡೆ ಅವರ ಸೂತ್ರ ಇಲ್ಲಿ ಮುಖ್ಯವೆನಿಸು
ತದೆ.
ಅರ್ಥಗಾರಿಕೆಯಲ್ಲಿ ಅತಿವಾದದ ಹಾವಳಿಯ ಗಾಳಿ ಈಗ ಕಡಿಮೆ ಆಗು
ತ್ತಿದೆ - ಎಂಬುದನ್ನು ಶ್ರೀ ಶಂಭು ಹೆಗ್ಡೆ ಅವರು ಗುರುತಿಸಿರುವುದು ತುಂಬ ಮಹ
ತ್ವದ ಅಂಶ.
ಇಂದಿನ ಅರ್ಥಧಾರಿಗಳ ಕಲಾಮಾರ್ಗವಾದ ಪ್ರಧಾನವಾದುದಲ್ಲ,
ಹೊಂದಾಣಿಕೆಯದ್ದು, ಒಟ್ಟಂದದ್ದು. ಈ ದೃಷ್ಟಿ ಹಿರಿಯ ಕಲಾವಿದರ ಮೇಲೂ
ಸಾಕಷ್ಟು ಪ್ರಭಾವ ಬೀರಿದೆ. ಸಂವಾದ ಪ್ರಧಾನ ವಾದ ಸುಸಂಬದ್ಧವಾದೊಂದು
ಅರ್ಥಗಾರಿಕೆಯ ರೀತಿ ಮೂಡಿ ಬರುತ್ತಿರುವ ಇಂದಿನ ಸ್ಥಿತಿಯ ಶ್ರೇಯಸ್ಸು ಹೊಸ
ತಲೆಮಾರಿನ ತಾಳಮದ್ದಳೆ ಅರ್ಥಧಾರಿಗಳಿಗೆ, ಕೆಲ ಆಟದ ವೇಷಧಾರಿಗಳಿಗೆ ಸಲ್ಲ
ಬೇಕು.
"ಚಮತ್ಕಾರವು ಕಲೆಯಲ್ಲ” ಎಂಬುದು, ಕಲಾನಿರ್ಮಿತಿಯಲ್ಲಿ ಒಪ್ಪಬೇಕಾದ
ಒಂದು ಮುಖ್ಯಾಂಶ. ಆದರೆ ಚಮತ್ಕಾರದ ಕಲಾತ್ಮಕವಾದ ಉಪಯೋಗಕ್ಕೆ
ಸ್ಥಾನ ಇದೆ. ರಸಸಿದ್ಧಿಗೆ, ಪಾತ್ರನಿರ್ಮಾಣಕ್ಕೆ ಉಪಕರಣವಾಗಿ ಅದನ್ನು ಬಳಸಲು
ಸಾಧ್ಯ. ತಿಳಿಯಾದ ಹಾಸ್ಯದ ಸೃಷ್ಟಿಗೆ, ಸಹ ಪಾತ್ರಗಳೊಳಗಿನ ಸಂವಾದಕ್ಕೆ ಖಳ
ನಾಯಕನ ಖಳ ಸ್ವಭಾವದ ಚಿತ್ರಣಕ್ಕೆ, ಹೀಗೆ ಹಲವು ಬಗೆಯಿಂದ ಚಮತ್ಕಾರದ ೧೨೪ | ಜಾಗರ
ಉಪಯೋಗ ಇದೆ. ಆದರೆ, ಅಳತೆ ಮೀರಿದಾಗ, ಗ೦ಭೀರವಾದ ವಿಷಯದ
ನಿರ್ವಹಣ ಮಾಡುವಾಗ ಚಮತ್ಕಾರ ಆಭಾಸವಾಗುತ್ತದೆ. ಚಮತ್ಕಾರವನ್ನೆ ಲಕ್ಷ
ವಾಗಿರಿಸಿದರೆ, ಕಲಾವಿದ ಅದರಿಂದ ಬರಬಹುದಾದ ಕ್ಷಣಿಕ ಪರಿಣಾಮಕ್ಕೆ ಸೆರೆಯಾಗಿ
ಉಚ್ಚ ಕಲಾಸೃಷ್ಟಿಯನ್ನು ತಲುಪಲು ವಿಫಲನಾಗುತ್ತಾನೆ ಎಂಬ ಅಂಶದ ಅರಿವು
ಎಲ್ಲ ಕಲಾವಿದರಿಗೂ ಬೇಕಾದದ್ದೆ. ತಾನೇ ಸೃಷ್ಟಿಸುತ್ತ, ಜನರ ಮುಂದೆ ಅಲ್ಲಲ್ಲೆ
ತನ್ನ ಕಲೆಯನ್ನು ಪ್ರದರ್ಶಿಸುವ ಯಕ್ಷಗಾನ ಕಲಾಕಾರನಿಗಂತೂ ಈ ಅರಿವು ಬಹು
ಮುಖ್ಯವಾದದ್ದು.
ಹಾಗೆಯೇ ಶ್ರೀ ಪೆರ್ಲ ಕೃಷ್ಣ ಭಟ್ಟರು, 'ಕಲೆಯ ಸ್ವಧರ್ಮವನ್ನು
ರಕ್ಷಿಸಬೇಕು' ಎಂಬ ಒಂದು ಅರ್ಥಗರ್ಭಿತವಾದ ಸೂತ್ರವನ್ನು ಮಂಡಿಸಿ, ಬಹಳಷ್ಟು
ನಿರೀಕ್ಷೆಯನ್ನು ನಿರ್ಮಿಸುತ್ತಾರೆ. ಆದರೆ ಅದರ ಸೋದಾಹರಣ ವಿವೇಚನೆಗೆ ಅವರು
ಮುಂದಾಗಿಲ್ಲ. ಇದರಿಂದ ಅವರ ಪ್ರಬಂಧದಲ್ಲಿ ಉತ್ಕೃಷ್ಟವಾಗಿ ಬೆಳೆಯಬಹುದಾ
ಗಿದ್ದ ಒಂದು ಅಂಶ ಕಾಣಿಸಿಕೊಂಡು. ಮಾಯವಾಗಿ ಬಿಟ್ಟಿದೆ. ಹೀಗೆ ಅಧ್ಯಕ್ಷ
ಭಾಷಣದಲ್ಲ, ಪ್ರಬಂಧಗಳಲ್ಲಿ ವಿವರಣೆ ಕಡಿಮೆ ಆಗಿ, ಕೆಲವೊಂದು ಮುಖ್ಯ
ಅಂಶಗಳು ಇನ್ನಷ್ಟು ಗಮನಾರ್ಹವಾಗಬಹುದಾದ ಅವಕಾಶ ಉಳಿದು ಬಿಟ್ಟಿದೆ.
ಈ ದೃಷ್ಟಿಯಿಂದ ತೋಳ್ಳಾಡಿಯವರ ಪ್ರತಿಕ್ರಿಯೆಯೇ ತಾನು ಹೇಳಬೇಕಾದ್ದನ್ನು
ಬಿಗಿಯಾಗಿ ಹೇಳುತ್ತದೆ.
ಇಡಿಯ ಗೋಷ್ಠಿಯಲ್ಲಿ ಒಟ್ಟಾಗಿ ಕಂಡ ಒಂದು ಮುಖ್ಯ ಒಲವು ಎಂದರೆ,
ಅರ್ಥಗಾರಿಕೆ ಎಂಬಲ್ಲಿ ತಾಳಮದ್ದಳೆಯ ಕಡೆಗೇ ಇದ್ದ ಒತ್ತು, ಲಕ್ಷ್ಯ ಆಟದ ಪ್ರಸ್ತಾಪ
ಬಂದಿದೆ ನಿಜ. ಆದರೆ ಒಟ್ಟು ಧೋರಣೆ - ತಾಳಮದ್ದಳೆಯ ಅರ್ಥಗಾರಿಕೆ ಎಂಬ
ಗೃಹೀತದ ಮೇಲೆಯೇ, (ಬಹುಶಃ ತಾಳಮದ್ದಳೆಯಲ್ಲಿ ವಾಚಸ್ಪತಿ ಎಂದು ಖ್ಯಾತಿ
ಪಡೆದ ದಿ| ಪೊಳಲಿ ಶಾಸ್ತ್ರಿಗಳ ಸಂಸ್ಮರಣಾರ್ಥ ಜರಗಿದ ಗೋಷ್ಟಿ ಎಂಬ ಒಂದು ಅಂಶ-
ಸಂಗತಿ - ಈ ಗೋಷ್ಟಿಯ ಮೇಲೆ ಅಜ್ಞಾತ ಪ್ರಭಾವ ಬೀರಿ, ಹೀಗಾಗಿರಬಹುದೇ?)
ಅರ್ಥಗಾರಿಕೆಯ ದೃಷ್ಟಿಯಿಂದ, ಈ ಗೋಷ್ಟಿಯಲ್ಲಿ ಚರ್ಚೆಗೆ ಬರಬಹು
ದಾಗಿದ್ದ ಕೆಲವು ಅಂಶಗಳೆಂದರೆ (೧) ಅರ್ಥದಲ್ಲಿ ಇದಿರಾಳಿಯ ಮಾತಿಗೆ ಸಂದರ್ಭ
ಕೊಡುವ ಕ್ರಮ (ಮುಂದಿನ ಎತ್ತುಗಡೆಗೆ ಕೊಡುವ ಮುಖ್ಯ, Catch words)
ಅದರ ಬಳಕೆ ಅದರಿಂದಾಗುವ ಕೆಲವು ಗೊಂದಲಗಳು, (೨) ಪ್ರಸಂಗದ ಪದ್ಯಗಳ
ಆಯ್ಕೆ (Editing) ಯ ಪ್ರಶ್ನೆ (೩) ಬಿಟ್ಟ ಪದ್ಯಗಳ ಅರ್ಥಗಳನ್ನು ಹೇಳಬೇಕಾದ,
ಬಿಡಬೇಕಾದ ಸಂದರ್ಭಗಳು. (೪) ಕೆಲವು ಪದ್ಯಗಳಿಗೆ ಅರ್ಥವನ್ನು ತೀರ ಸಂಕ್ಷೇಪ
ವಾಗಿ ಹೇಳಬೇಕಾಗಿರುವ ಸನ್ನಿವೇಶಗಳು (ಮಾತಿಗಿಂತಲೂ ಮೌನ ಪ್ರಧಾನವಾಗು
ವುದಿದೆ ಎಂಬುದನ್ನು ಶ್ರೀ ಶಂಭುಹೆಗ್ಡೆ ಒಂದೆಡೆ ಹೇಳಿದ್ದಾರೆ. ಈ ಎಲ್ಲದರ ಬಗೆಗೆ
ವ್ಯಕ್ತವಾದ ಹಲವು ವಿಚಾರಗಳು ಹೆಚ್ಚು ಸೋದಾಹರಣವಾಗಿರುತ್ತಿದ್ದರೆ
ವಿಮರ್ಶೆಗೆ ಪುಷ್ಟಿ ಒದಗುತ್ತಿತ್ತು. (ಒಂದು ಗೋಷ್ಠಿಯ ಮಿತಿಯಲ್ಲಿ, ಇಡಿಯ
ಅರ್ಥಗಾರಿಕೆ ಬಗೆಗೆ ಎಲ್ಲ ಮುಖಗಳ ಸಮಗ್ರ ವಿವೇಚನೆಯನ್ನು ಬಯಸುವುದೂ
ಸರಿಯಾಗದು ಎಂಬುದನ್ನು ಇಲ್ಲಿ ನಮೂದಿಸಬೇಕು.)
ಇಷ್ಟೆಲ್ಲ ಇದ್ದರೂ, ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ವಿದ್ವಾಂಸರೂ
ಸಾಕಷ್ಟು ಪರಿಶ್ರಮ, ಚಿಂತನ ವಿವೇಚನೆಗಳಿಂದ ಉತ್ತಮ ಮಟ್ಟದ ಮಂಡನೆ ಮಾಡಿ
ದ್ದಾರೆ. ಸ್ಪಷ್ಟವಾಗಿ ಹೇಳಿದ್ದಾರೆ. ಗೋಷ್ಠಿಯ ಉದ್ದೇಶವನ್ನು ಸಫಲ, ಸಾರ್ಥಕ
ಗೊಳಿಸಿ, ಯಕ್ಷಗಾನ ವಾಚಸ್ಪತಿಯ ಸ್ಮೃತಿಗೆ ಅರ್ಹ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಅರ್ಥಗಾರಿಕೆ : ಸ್ವರೂಪ ಸಮೀಕ್ಷೆ ಕೃತಿಗಾಗಿ ಬರೆದ ಹಿನ್ನುಡಿ
ಪ್ರಕಾಶಕರು : ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, ಮಂಗಳೂರು 1981