ವಿಷಯಕ್ಕೆ ಹೋಗು

ಜಾಗರ/ಮೂರು ತಿಟ್ಟುಗಳು

ವಿಕಿಸೋರ್ಸ್ದಿಂದ
99517ಮೂರು ತಿಟ್ಟುಗಳು1984
ಮೂರು ತಿಟ್ಟುಗಳು


ಪ್ರಾದೇಶಿಕ ಭಿನ್ನತೆಯೆಂಬುದು ಲೋಕಜೀವನದ ಒಂದು ಅಪರಿಹಾರ್ಯವಾದ ಲಕ್ಷಣ. ಆಹಾರ, ವಸತಿ, ಕೃಷಿವಿಧಾನ, ರೀತಿರಿವಾಜು, ಹಾವಭಾವಗಳಿಂದ ತೊಡಗಿ, ಭಾಷೆ, ಸಾಹಿತ್ಯ, ಮತ, ಕಲೆಯ ವರೆಗೆ ಎಲ್ಲೆಡೆ ಇದು ಕಾಣಿಸುತ್ತದೆ. ಮೂಲತ: ಒಂದೇ ಆದ ಮತವೋ, ಕಲೆಯೋ, ಭಾಷೆಯೋ, ಭಿನ್ನಕಾಲ ಮತ್ತು ಭಿನ್ನಪ್ರದೇಶಗಳಲ್ಲಿ ಬೇರೆ ಬೇರೆ ರೂಪಗಳನ್ನು ತಾಳುತ್ತದೆ. ಇದಕ್ಕೆ ಸೌಲಭ್ಯದ ದೃಷ್ಟಿ, ಇತರ ಸಮಾನ ಸಂಗತಿಗಳ ಪ್ರಭಾವ, ಸೃಷ್ಟಿಶೀಲ ಪ್ರತಿಭೆಯ ವ್ಯತ್ಯಾಸ, ವಸ್ತುಭೇದ - ಇವೆಲ್ಲ ಕಾರಣಗಳು. ಹೀಗೆ ಕಾಲ ಮತ್ತು ಪ್ರದೇಶ ಭೇದದಿಂದ ವ್ಯತ್ಯಾಸವಾದಾಗ, ಮೂಲವಸ್ತುವಿನ ಯೋಗ್ಯತೆ ಉತ್ಕರ್ಷ ಹೊಂದುವುದೂ ಇದೆ; ಅಪಕರ್ಷಗೊಳ್ಳುವುದೂ ಇದೆ.

ಯಕ್ಷಗಾನವೆ೦ಬ ಒಂದು ರಂಗ ಪ್ರಕಾರದಲ್ಲಿ ಹಲವು ಪ್ರಾದೇಶಿಕ ಭೇದ, ಉಪಭೇದಗಳಿವೆ. ಯಕ್ಷಗಾನವು ಅತಿ ಹೆಚ್ಚು ಬೆಳವಣಿಗೆ ಹೊಂದಿದ ರೂಪದಲ್ಲಿರುವುದು ನಮ್ಮಿ ಕರಾವಳಿಯಲ್ಲಿ. ಅದರಲ್ಲಿ ಮರು ಪ್ರಭೇದ ಅಥವಾ ತಿಟ್ಟುಗಳನ್ನು ಗುರುತಿಸಬಹುದು. ಸಾಮಾನ್ಯವಾಗಿ ತೆಂಕು-ಬಡಗು ಎಂಬ ಎರಡೇ ತಿಟ್ಟುಗಳೆಂದು ಹೇಳುವುದು ರೂಢಿ. ಆದರೆ ರಂಗತಂತ್ರ, ನೃತ್ಯ ಹಿಮ್ಮೇಳದ ಬಳಕೆ ಇವುಗಳ ನೆಲೆಯಲ್ಲಿ ಉತ್ತರ ಕನ್ನಡದ ಯಕ್ಷಗಾನವು ಬೇರೆಯೇ ತಿಟ್ಟಾಗಿ ಇದೆ. ವೇಷ ಹಿಮ್ಮೇಳ ಪರಿಕರ - ಇವು ಬಡಗಿನಂತೆ ಇದ್ದರೂ, ರಂಗ ಪ್ರಯೋಗದಲ್ಲಿ ಉತ್ತರ ಕನ್ನಡದ ತಿಟ್ಟು ಬಡಗಿನದಕ್ಕಿಂತ ಸಾಕಷ್ಟು ಭಿನ್ನವಾಗಿದೆ.

ತಿಟ್ಟುಗಳು ಕಾಣಿಸಿಕೊಳ್ಳುವ ಮೊದಲಿನ ಯಕ್ಷಗಾನ ಬಹುಶ: ಈಗ ನಾವು ಬಡಗುತಿಟ್ಟೆಂದು ಹೇಳುವ ರೂಪಕ್ಕೆ ಹತ್ತಿರ ಇದ್ದಿರಬೇಕು. ತೆಂಕುತಿಟ್ಟಿನಲ್ಲಿ ಅಟ್ಟೆಯಿಂದ ಕಟ್ಟುವ ಮುಂಡಾಸು, ಕಿರೀಟದ ಮುಂದಣ ಕೇದಗೆ ಇವೆಲ್ಲ ಇದ್ದುದಕ್ಕೆ ಪುರಾವೆ ಇದೆ. ಹಿರಿಯ ವೇಷಧಾರಿಗಳು ಇದನ್ನು ನೆನಪಿಸುತ್ತಾರೆ. ಅಲ್ಲದೆ ತುಳು ಮಲಯಾಳಿ ಭಾಷೆಗಳೇ ಮಾತೃಭಾಷೆಯಾಗಿದ್ದ - ಜಿಲ್ಲೆಯ ತೆಂಕಣದ ಭಾಗದಲ್ಲೇ ೨೪ | ಜಾಗರ
ಕನ್ನಡ ಕಲೆಯಾದ ಯಕ್ಷಗಾನ ಹುಟ್ಟಿ ಬೆಳೆದಿರುವುದು ಅಸಂಭವ. ಹಾಗೇ ಉತ್ತರ ಕನ್ನಡದ ತಿಟ್ಟು ಈಗ ತೋರಿಸುವ ಅಭಿನಯ ಪ್ರೌಢಿಮೆ, ಪ್ರಯೋಗದ ಸೂಕ್ಷ್ಮತೆ, ಮೂಲರೂಪದಲ್ಲಿ ಇದ್ದಿರಲಾರದು. ಹಾಗಾಗಿ ಈಗಿನ ಬಡಗುತಿಟ್ಟು ಯಕ್ಷಗಾನದ ಹಿಂದಣ ರೂಪಕ್ಕೆ ಹೆಚ್ಚು ನಿಕಟ ಎನ್ನಬಹುದು.
ಬಡಗಿನ ಎರಡೂ ತಿಟ್ಟುಗಳಲ್ಲಿ ಭಾಗವತನು ತಾಳಧಾರಿಯಾದರೆ, ತಂಕಿ ನಲ್ಲಿ ಜಾಗಟೆ ಹಿಡಿಯುತ್ತಾನೆ. ಜಾಗಟೆಯನ್ನು ಎತ್ತಿ ಹೊಡೆಯುವಾಗ, ಅದರ ನಾದ ಗ೦ಭೀರವಾಗಿ, ಚೆಂಡೆ ಮದ್ದಳೆಗಳಿಗೆ ಎರಕವಾಗಿ ಬರುತ್ತದೆ. ಆದರೆ, ಕೆಳಗಿಟ್ಟು ಹೊಡೆಯುವಾಗ ಅದರ ಸ್ವರ ಅಷ್ಟು ಸುಖವಾಗಿಲ್ಲ. ಹಿಂದೆ ತೆಂಕು ಬಡಗು ಗಳಲ್ಲಿ ಒಂದೇ ತೆರನ ಮದ್ದಳೆ ಬಳಕೆಯಲ್ಲಿತ್ತು. ಈಗ ಬಡಗಿನಲ್ಲಿ ಚಿಕ್ಕದಾದ “ಏರು ಮದ್ದಲೆ' ಬಳಕೆ ಹೆಚ್ಚು. ಉತ್ತರ ಕನ್ನಡದಲ್ಲಿ ದೊಡ್ಡ ಗಾತ್ರದ ಮದ್ದಲೆ ಯೇ ಬಳಕೆ. ಬಡಗಿನ ಮದ್ದಲೆಗಳ ಎಡಭಾಗಕ್ಕೆ ಅನ್ನ ಯಾ 'ಬೋನ' ಇದ್ದರೆ ತೆಂಕಣ ಮದ್ದಲೆಗೆ 'ಕರ್ಣ' ಇರುತ್ತದೆ. ಇದೀಗ ದಕ್ಷಿಣಾದಿ ಪದ್ಧತಿಯ ಮೋಹ ದಿಂದ, ತೆಂಕಿನಲ್ಲಿ ಮೃದಂಗ ಬಳಕೆಯಲ್ಲಿದ್ದು ಇದು ಯಕ್ಷಗಾನ ಪದ್ಧತಿಯ ನುಡಿತ ಗಳಿಗೆ ಒದಗುವುದಿಲ್ಲ. ಯಕ್ಷಗಾನ ನೃತ್ಯಕ್ಕಾಗಲಿ, ಚೆಂಡೆ ಜಾಗಟೆಗಳ ನಾದಕ್ಕಾಗಲಿ ಎರಕವಾಗಿ ನುಡಿಯದೆ ಬೇರಾಗಿ ಕೇಳುತ್ತದೆ. ಆದರೆ ತೆಂಕಿನಲ್ಲಿ ಬಳಕೆಗೆ ಬಂದಿರುವ ಒಂದು ಬಗೆಯ ಅರೆ ಮೃದಂಗ' (ಮೃದಂಗ - ಮದ್ದಲೆಗಳ ಮಧ್ಯದ ರೂಪ) ಒಂದು ಒಳ್ಳೆಯ ಪ್ರಯೋಗವೆಂದು ಅನುಭವದಿಂದ ಕಂಡು ಬಂದಿದೆ.
ಬಡಗಿನ ಚೆಂಡೆ, 'ತಾಸೆ' ಎಂಬ ವಾದನದ ಸುಧಾರಿತ ರೂಪವೆನ್ನುತ್ತಾರೆ. ಇದನ್ನು ಬಾರಿಸಲು ನೀಟಾದ ಬೆತ್ತದ ಕೋಲುಗಳನ್ನು ಬಳಸುತ್ತಾರೆ. ತೆಂಕಣ ಚೆಂಡೆ ಈ ಕಡೆಯ ದೇವಾಲಯಗಳ ಚೆಂಡೆಯಂತೆ ಇದ್ದು, ಅದನ್ನು ಬಾರಿಸಲು ತುದಿ ಬಗ್ಗಿರುವ ಮರದ ಕೋಲುಗಳನ್ನು ಬಳಸುವರು. ತೆಂಕಣ ಚೆಂಡೆ ಮಧುರವೂ, ಗಂಭೀರವೂ ಆದ ನಾದದಿಂದ ಕೂಡಿದ ಒಂದು ಉತ್ಕೃಷ್ಟವಾದ್ಯ, ತೆಂಕಿನಲ್ಲಿ ದೊಡ್ಡ ಚಕ್ರತಾಳವನ್ನು ಬಳಸಿ, ಚೆಂಡೆಯ ನಾದಕ್ಕೆ ಹೆಚ್ಚಿನ ಮೆರುಗು ಕೊಡುತ್ತಾರೆ.
ಯಕ್ಷಗಾನದಲ್ಲಿ ಬಳಸುವ ರಾಗಗಳಲ್ಲಿ ದಕ್ಷಿಣಾದಿ ರಾಗಗಳೇ ಹೆಚ್ಚು. ಹಿಂದುಸ್ತಾನೀ ರಾಗಗಳ ಬಳಕೆ ಬಡಗಿನಲ್ಲಿ ಹೆಚ್ಚು. ತೆಂಕಿನ ಹಾಡಿಕೆ, ಹೆಚ್ಚಾಗಿ ಪದ್ಯದ ಕೊನೆಗೆ ತಾರಷಷ್ಟದಲ್ಲಿ ನಿಂತರೆ, ಬಡಗಿನಲ್ಲಿ ಮಧ್ಯ ಸ್ಥಾಯಿ ಪಂಚಮ ಯಾ ಷಡ್ವದಲ್ಲಿ ನಿಲ್ಲಿಸುತ್ತಾರೆ. ಹಾಡಿನ ಮಧ್ಯೆ ರಾಗವಿನ್ಯಾಸ, ತಾಳವಿನ್ಯಾಸದ ಪದ್ದತಿ ಬಡಗಿನಲ್ಲಿ ವಿಶಿಷ್ಟ.
ತೆಂಕುತಿಟ್ಟಿನಲ್ಲಿ ಬಳಸುವ ಬಿಡ್ತಿಗೆ (ಪದ್ಯದ ಮೊದಲ ಚರಣದ ನಂತರ ಬಾರಿಸುವಂತಹದು) ಬಡಗಣ ತಿಟ್ಟುಗಳಲ್ಲೂ ಇತ್ತೆಂದು ಅನುಮಾನಿಸಲು ಪುರಾವೆಗಳಿವೆ. ಉತ್ತರ ಕನ್ನಡದಲ್ಲಿ ಈಗಲೂ ಅದು ಬಳಕೆಯಾಗುತ್ತಿದೆ. ಒಟ್ಟಿನಲ್ಲಿ ಬಡಗುತಿಟ್ಟಿನ ಮತ್ತು ಉತ್ತರ ಕನ್ನಡದ ಹಿಮ್ಮೇಳದಲ್ಲಿ ಹಿಮ್ಮೇಳ - ಮುಮ್ಮೇಳದ ಎರಕ ಹೆಚ್ಚು ಸಮರ್ಪಕವಾಗಿದ್ದು, ಹಿಮ್ಮೇಳದಲ್ಲಿ 'ಕುಣಿಸುವ ಗುಣ' ಹೆಚ್ಚಾಗಿದೆ. ಆ ವಾದ್ಯಗಳ ನುಡಿತದ ವೈವಿಧ್ಯ ಸಮೃದ್ಧವಾಗಿದ್ದು ಅದರ ಬೆಳವಣಿಗೆ ಯಕ್ಷಗಾನದ'ಸ್ವಂತಿಕೆ'ಯನ್ನು ಬಿಡದೆ ಸಾಗಿದೆ. ತೆಂಕಿನ ಹಿಮ್ಮೇಳದಲ್ಲಿ ನಾದ ಗಾಂಭೀರ ಹೆಚ್ಚು.

ಯಕ್ಷಗಾನದ ಎಲ್ಲ ತಿಟ್ಟುಗಳ ವೇಷ ಭೂಷಣಗಳು ಒಂದೇ ಮೂಲದವಾದರೂ, ಇದೀಗ ಸಾಕಷ್ಟು ವ್ಯತ್ಯಾಸಗಳಿಂದ ಕೂಡಿದೆ. ಬಡಗು - ಉತ್ತರ ಕನ್ನಡ ತಿಟ್ಟುಗಳಲ್ಲಿ ವೇಷಗಳು ಉಡುವ ಬಟ್ಟೆ ಚೌಕುಳಿಗಳಿಂದ ಕೂಡಿದ್ದು, ನೃತ್ಯಕ್ಕೆ ಹೊಂದಿಕೆಯಾಗುವಂತಹದು. ಭೂಷಣಗಳಿಗೆ ಹಳದಿ ಬಣ್ಣ, ಬಿಳಿಬಣ್ಣದ ಬೇಗಡೆಗಳನ್ನು ಬಳಸುತ್ತಾರೆ. ಪಗಡಿಯನ್ನು ಅಟ್ಟೆಗಳಿಂದ ಕಟ್ಟಿ ಜರಿಲಾಡಿಯನ್ನು ಸುತ್ತುತಾರೆ. ತಲೆಯ ಹಿಂಭಾಗದಿಂದ ತ್ರಿಕೋಣಾಕಾರವಾಗಿ ಇಳಿಬಿಡುವ 'ಶಲ್ಲೆ' ನೃತ್ಯಕ್ಕೆ ತುಂಬ ಸೊಗಸು ನೀಡುತ್ತದೆ. ತೆಂಕಿನ ಸಾಂಪ್ರದಾಯಿಕ ವೇಷಭೂಷಣ ಇದೇ ತೆರನಾದರೂ, ಇತ್ತೀಚೆಗೆ ಮರದಿಂದ ತಯಾರಿಸಿದ 'ಸಿದ್ದ' ಪಗಡಿ, ಮಣಿ ಸಾಮಾನುಗಳ ಬಳಕೆ - ಇವೆಲ್ಲ ಬಂದಿವೆ. ಮಣಿಸಾಮಾನುಗಳಿಗೆ ಮರದಿಂದ ತಯಾರಿಸಿದ ಸಾಮಾಗ್ರಿಗಳ ಅಂದವಾಗಲಿ 'ಶೈಲಿ' ಯಾಗಲಿ ಇಲ್ಲ. ಇಲ್ಲಿನ ಬೆನ್ನ ಮೇಲಣ ಶಲ್ಲೆ ತೀರ ಚಿಕ್ಕದಿದ್ದು, ಅದರ ಮುಖ್ಯ ಉದ್ದೇಶವೇ ಮರೆತು, ಕೇವಲತಲೆಯ ಹಿಂಭಾಗವನ್ನು ಮುಚ್ಚುವ ಸಾಧನವಾಗಿದೆ. ವೇಷಗಳಿಗೆ ಇರುವ ಮುಖ್ಯ ವ್ಯತ್ಯಾಸ ಅಂದರೆ, ತೆಂಕಿನಲ್ಲಿ ಮಾತ್ರ ಬಳಸುವ ಕಿರುಗಣೆ ಅಥವಾ ಬಾಲಮುಂಡು, ಇದು, ಕಥಕಳಿಯಿಂದ ಬಂದುದೆಂಬ ವಾದವಿದ್ದರೂ,ಅದಕ್ಕೆ ಪುರಾವೆ ಸಾಲದು. ಏಕೆಂದರೆ ಕಥಕಳಿಯೇ ಯಕ್ಷಗಾನದಿಂದ ಜನ್ಯ-ಯಾ ಪ್ರಭಾವಿತ ಎಂಬ ವಾದವೂ ಇದೆ. ತೆಂಕಿನ 'ಗಿರಿಕೆ' ಹಾರುವ ಕುಣಿತದ ಕ್ರಮಕ್ಕೆ ಈ ಬಾಲಮುಂಡು ತುಂಬ ಹೊಂದಿಕೆಯಾಗುತ್ತದೆ. ಬಾಲಮುಂಡಿನ ಒಳಗೆ ಉಡುವ ಪದ್ಧತಿ ಇತ್ತು. (ಇದಕ್ಕೆ 'ಕಸ' ಎನ್ನುತ್ತಾರೆ) ಈಗ ಚಲ್ಲಣವನ್ನು ಧರಿಸುತ್ತಾರೆ.

ಮುಖವರ್ಣಿಕೆಯ ವೈವಿಧ್ಯ,ಬಣ್ಣಗಾರಿಕೆಗಳಲ್ಲಿ ತೆಂಕಣದ್ದೆ ಹೆಚ್ಚುಗಾರಿಕೆ ತೆಂಕಣ ವೇಷಗಳ ಹಣೆಯ ನಾಮ್ಮ ಮುಖದ ಮೇಲಿನ 'ಚಿತ್ರ'ಗಳು ನಾಜೂಕು, ಸ್ಪಷ್ಟ, ವೈವಿಧ್ಯಪೂರ್ಣ, ಸಂಪ್ರದಾಯವನ್ನು ಸಶಕ್ತವಾಗಿ ಉಳಿಸಿರುವ ಬಡಗುತಿಟ್ಟು, ಬಣ್ಣದ ವೇಷ (ರಾಕ್ಷಸ ಪಾತ್ರ)ಗಳಲ್ಲಿ, ತೆಂಕಿಗಿಂತ ಹಿಂದೆ ಇರುವುದು ಒಂದು ವಿಚಿತ್ರ. ತೆಂಕಣ ಬಣ್ಣದ ವೇಷ ಒಂದು ಅದ್ಭುತ ಸೃಷ್ಟಿ, ಇಲ್ಲಿನ 'ಚುಟ್ಟಿಯ' ಕೆಲಸ, ವೇಷದ ಗಾತ್ರ ಇವೆಲ್ಲ ಅನ್ಯಾದೃಶ. ಬಡಗಿನ ಬಣ್ಣದ ವೇಷ ಇದರ ಅಪರಿಷ್ಕೃತ ರೂಪದಂತಿದ್ದು ಸೊಂಟದ ಕೆಳಗೆ ಬಡಕಲಾಗಿರುವುದರಿಂದ ತೆಂಕಣ' ವೇಷದ ಭವ್ಯತೆ ಅದಕ್ಕಿಲ್ಲ. ಒಟ್ಟಿನಲ್ಲಿ, ತೆಂಕಣ ಎಲ್ಲ ವೇಷಗಳು ಗಾತ್ರದಲ್ಲಿ ದೊಡ್ಡವು, ಅಡಿಯಿಂದ ಮುಡಿಯವರೆಗೆ ಒಟ್ಟು ಸಪ್ರಮಾಣವಾದ ಆಕಾರವುಳ್ಳವು. ವೇಷಧಾರಿ ಸೊಂಟದ ಸುತ್ತ ಮತ್ತು ಮೈಗೆ ಬಟ್ಟೆಗಳನ್ನು ಸುತ್ತಿತುಂಬಿಸಿಕೊಂಡು, ನಂತರ ವೇಷ ಕಟ್ಟುವುದರಿ೦ದ ವೇಷಗಳು 'ಭರ್ಜರಿ' ಆಗಿರುತ್ತವೆ.

ಬಡಗು - ಉತ್ತರ ಕನ್ನಡ ತಿಟ್ಟುಗಳಲ್ಲಿ ವೇಷಭೂಷಣಗಳು ಒಂದೇ ಬಗೆಯವಾದರೂ ಕೆಲ ಪ್ರಾಯೋಗಿಕ ವ್ಯತ್ಯಾಸಗಳಿವೆ. ಬಡಗಿನಲ್ಲಿ ಅರ್ಜುನನಿಗೆ ಕೇದಗೆ ಮುಂದಲೆಯಾದರೆ, ಉತ್ತರ ಕನ್ನಡದಲ್ಲಿ ಕಿರೀಟ ಇದೆ. ಉತ್ತರ ಕನ್ನಡದ "ಎದೆಹಾರ' (ಪದಕ)ಗಳು ಉರುಟು (ತೆಂಕಿನಂತೆ). ಬಡಗಿನಲ್ಲಿ 'X' ಆಕೃತಿಯ ಎದೆ ಪದಕಗಳ ಬಳಕೆ. ಬಡಗಿನ ಕೃಷ್ಣ ಕಿರುಗಣೆಯಂತೆ ಸೀರೆ ಉಟ್ಟರೆ, ಉತ್ತರ ಕನ್ನಡದಲ್ಲಿ ಉಳಿದ ವೇಷಗಳಂತೆ ಕಚ್ಚೆ ಉಡುತ್ತಾನೆ. ಉತ್ತರ ಕನ್ನಡದ ಕರ್ಕಿ ಮೇಳದವರು ಮುಂಡಾಸಿನ ವೇಷಕ್ಕೆ ಕೇದಗೆ ಮುಂದಲೆ ಬಳಸುವುದಿಲ್ಲ.

ರಂಗತಂತ್ರ, ಸಂಪ್ರದಾಯಗಳಲ್ಲಿ ತೆಂಕು ಬಡಗುಗಳಲ್ಲಿ ಬಹಳಷ್ಟು ವ್ಯತ್ಯಾಸವಿಲ್ಲ. ಆದರೆ, ಬಡಗಿನ ತಿಟ್ಟುಗಳ ರಂಗತಂತ್ರ, ಯಕ್ಷಗಾನದ ರೂಪದಲ್ಲಿ ಇದ್ದರೆ, ತೆಂಕಿನಲ್ಲಿ ಇದೀಗ ನಾಟಕದ ಪ್ರಭಾವ ಬಂದಿದೆ.

ನೃತ್ಯದಲ್ಲಿ ಮರು ತಿಟ್ಟುಗಳಲ್ಲಿ ಒಡೆದು ಕಾಣುವ ವ್ಯತ್ಯಾಸಗಳಿವೆ. ತೆಂಕಣ ನೃತ್ಯದಲ್ಲಿ ಹೆಜ್ಜೆಗಳು ದೊಡ್ಡವು. ದಾಪು ಕಾಲಿನ ಕುಣಿತಗಳು ಬಹಳ ಚಲನ ವಲನ, ತಿರುಗುವಿಕೆ ಇವುಗಳಲ್ಲಿ ಗಾಂಭೀರ ತುಂಬಿರುತ್ತದೆ.ಬಡಗಿನ ನೃತ್ಯದಲ್ಲಿ ಲಾಸ್ಯ ಹೆಚ್ಚು, ಅಭಿನಯ ಇಲ್ಲ ಎಂಬಷ್ಟು ಕಡಿಮೆ. ಹಸ್ತದ ಚಲನೆಗಳ ಸರಳ. ತೆಂಕಿನಲ್ಲಿ ಇರುವ ಗುತ್ತು (ಗಿರಿಕೆ) ಹಾರುವಿಕೆ ಇದೀಗ ಬಡಗಿಗೂ ವಲಸೆಯಾಗಿದೆ. ಸ್ತ್ರೀವೇಷದ ನೃತ್ಯ. ಪ್ರಯಾಣ ಇತ್ಯಾದಿಗಳಲ್ಲಿ ಬಡಗಿನಲ್ಲಿ ವಿಸ್ತಾರವಾದ ಕುಣಿತಗಳಿವೆ. ಪ್ರವೇಶ ನೃತ್ಯ ತೆಂಕಿನಲ್ಲಿ ಏಕತಾಳದಲ್ಲಿ ದ್ದರೆ, ಬಡಗು ಮತ್ತು ಉತ್ತರ ಕನ್ನಡಗಳಲ್ಲಿ ಏಕತಾಳ ಮತ್ತು ತಿತ್ತೆ (ಕೋರತಾಳ) ಗಳೆರಡಲ್ಲೂ ಇದೆ. ತೆಂಕುತಿಟ್ಟಿನ ಪ್ರವೇಶ ನೃತ್ಯದಲ್ಲಿ ಪೌರಾಣಿಕ ಪಾತ್ರದ ಪ್ರವೇಶದ ಅಬ್ಬರ, ಸೊಗಸು ಗಾಂಭೀರಗಳೆಲ್ಲ ಮೈತಾಳಿ ಮೂಡುತ್ತವೆ. ಉತ್ತರ ಕನ್ನಡದ ಪ್ರವೇಶ ನೃತ್ಯದ ಹೆಜ್ಜೆಗಳಲ್ಲಿ ರಂಗಸ್ಥಳದ ಇಡೀ ವ್ಯಾಪ್ತಿಯಲ್ಲಿ ಚಲನೆ ಗಳಿದ್ದು, ಓರೆಯಾಗಿ ಕುಣಿಯುವ ಹಾರುವ ಮತ್ತು ಕೈಗಳನ್ನು ವಿಸ್ತರಿಸಿ ಚಲಿಸುವ ಕ್ರಮ ಇದೆ. ಅಲ್ಲಿನ ಕೆಲ ವೇಷಗಳಿಗೆ 'ಲಾಲಿ' ಎಂಬ ವಿಶಿಷ್ಟ ಪ್ರವೇಶ ಪೂರ್ವ ನೃತ್ಯವಿದೆ.

ಭಾವಾಭಿವ್ಯಕ್ತಿ, ಅಭಿನಯ ಮತ್ತು ರಸಾವಿಷ್ಕಾರದ ಸೂಕ್ಷ್ಮತೆಗಳ ದೃಷ್ಟಿ ಯಿಂದ ಉತ್ತರ ಕನ್ನಡದ ತಿಟ್ಟು ಅತ್ಯಂತ ಪರಿಷ್ಕೃತವಾಗಿ ಸಾಕಷ್ಟು ಬೆಳವಣಿಗೆ ಸಾಧಿಸಿದೆ. ಅಲ್ಲಿ ವಿಸ್ತಾರವಾದ ಅಭಿನಯ, ಅದರ ಪುನರಾವರ್ತನೆ, ಸೂಕ್ಷ್ಮ ಸಂಚಾರಿ ಭಾವಗಳ ವಿವರವಾದ ಅಭಿವ್ಯಕ್ತಿ ಇದೆ. ನೃತ್ಯದಲ್ಲಿ ವೈವಿಧ್ಯಪೂರ್ಣ ಮನೋಧರ್ಮಕ್ಕೆ ಅವಕಾಶವಿದ್ದು, ಕಲಾವಿದನಿಗೆ ಸಾಕಷ್ಟು ಪರಿಶ್ರಮ ಮತ್ತು ಅವಕಾಶ ಎರಡೂ ಇವೆ. ಆದುದರಿಂದ ಅಲ್ಲಿಯ ಹಿಮ್ಮೇಳದಲ್ಲೂ ಸಾಹಿತ್ಯದ ಕಡೆ, ಭಾವದ ಕಡೆ ಬಹಳ ಒತ್ತು ಇದೆ. ಅಲ್ಲಿನ ಹಿಮ್ಮೇಳ ಉಳಿದ ತಿಟ್ಟು ಗಳ ಹಿಮ್ಮೇಳಕ್ಕಿಂತ ಹೆಚ್ಚು ಹೊಣೆ ಹಾಗೂ ಶ್ರಮವಿರುವ ವಿಭಾಗ, ಹಾಡುಗಳನ್ನು ವಿಭಜಿಸಿ ಪುನರಾವರ್ತಿಸಿ ಹಾಡುವ ಕ್ರಮವಿದೆ. ಯಕ್ಷಗಾನವು ಒಂದು ಪರಿಪೂರ್ಣ ರಂಗಭೂಮಿ (Total theatre) ಎಂಬ ಮಾತಿಗೆ ಸಶಕ್ತ ದೃಷ್ಟಾಂತ ಉತ್ತರ ಕನ್ನಡದ ಪದ್ಧತಿ.

ಈಚೆಗೆ ಉತ್ತರ ಕನ್ನಡ ತಿಟ್ಟಿನ ಪ್ರಭಾವ ಉಳಿದೆರಡೂ ತಿಟ್ಟುಗಳ ಮೇಲೆ ಆಗಿದೆ. ಬಡಗುತಿಟ್ಟು ಸಾಧಿಸಿದ ಪ್ರಗತಿ ಮತ್ತು ಪುನರುಜ್ಜೀವನಕ್ಕೆ ಉತ್ತರ ಕನ್ನಡ ಕಲಾವಿದರ ಕೊಡುಗೆ ಬಹಳ ದೊಡ್ಡದು - ಅದೇ ಕಾರಣ ಎಂಬ ಷ್ಟು ಉತ್ತರ ಕನ್ನಡ ಪದ್ದತಿಯ ನೃತ್ಯ, ಅಭಿನಯಗಳು, ಉಳಿದ ಪ್ರದೇಶದ ಜನರಿಗೆ ಹೊಸ ರಸಲೋಕವನ್ನೇ ತೆರೆದು ತೋರಿಸಿದವು. ಉತ್ತರ ಕನ್ನಡದ ನೃತ್ಯ ಅಭಿನಯ ಗಳು ಮರಾಠಿ ನಾಟಕಗಳಿಂದ ಬಂದುವೆಂಬ ಒಂದು ಅಭಿಪ್ರಾಯವಿದೆ. ಆದರೆ ಅದು ಅವಸರದ ತೀರ್ಮಾನ ಎನಿಸುತ್ತದೆ. ಏಕೆಂದರೆ ಅಲ್ಲಿನ ನಟರಲ್ಲಿ ಹೆಚ್ಚಿನವರಿಗೆ ನಾಟಕಗಳ ಸಂಪರ್ಕವೇ ಇಲ್ಲ. ಅಲ್ಲದೆ ಆ ತಿಟ್ಟಿನಲ್ಲಿ ಈಗಿರುವುದಕ್ಕಿಂತ ಹೆಚ್ಚು 'ಪದಾಭಿನಯ ಹಿಂದೆ ಇತ್ತೆಂದು ಹಳೆಯ ವೇಷಧಾರಿಗಳ ಅಂಬೋಣ.

ಸಂಪ್ರದಾಯವನ್ನು ಉಳಿಸಿ ಬೆಳೆಸುವುದರಲ್ಲಿ ಬಡಗು, ಉತ್ತರ ಕನ್ನಡ ತಿಟ್ಟುಗಳು ಎಚ್ಚರ ವಹಿಸಿವೆ. ಅಲ್ಲಿ ಹೊಸ ಪ್ರಸಂಗಗಳನ್ನು ಕೂಡಾ ಯಕ್ಷಗಾನ ರಂಗಭೂಮಿಯ ಮೂಲ ಚೌಕಟ್ಟಿಗೆ ಭಂಗ ತಾರದೆ ಪ್ರಯೋಗಿಸುತ್ತಾರೆ. ಲಾಸ್ಯ, ಸಂಪ್ರದಾಯದ ಹೆಜ್ಜೆ. ವೇಷಗಳ ಅಚ್ಚುಕಟ್ಟುಗಳಲ್ಲಿ ಬಡಗೂ, ಅಭಿನಯ, ನಾಟ್ಯ, ಮಾತುಗಳ ಪ್ರೌಢತೆ, ಸೂಕ್ಷ್ಮತೆಗಳಿಗೆ ಉತ್ತರ ಕನ್ನಡ ಪದ್ಧತಿಯ ವೇಷಗಳ ಭರ್ಜರಿ ಆಕಾರ, ಕುಣಿತದ ಗಾಂಭೀರ, ಬೆಡಗು, ಚೆಂಡೆಯ ನಾದ, ಮಾತಿನ ವೈವಿಧ್ಯಗಳಲ್ಲಿ - ತೆಂಕುತಿಟ್ಟೂ ಪ್ರಗತಿ ಸಾಧಿಸಿವೆ. ಉತ್ತರ ಕನ್ನಡ ತಿಟ್ಟಿನ ಅಭಿನಯ ಕೆಲವೊಮ್ಮೆ ಅತಿಯಾದ ಪುನರಾವರ್ತನೆ, ಭಾವ ವಿಭಜನೆಗಳಿಂದ ಬಾಲಿಶ ಯಾ ಅತಿ ಅನಿಸುವುದಿದೆ. ೨೮ | ಜಾಗರ
ತೆಂಕುತಿಟ್ಟಿನ ವೇಷಗಾರಿಕೆ, ಹಿಮ್ಮೇಳ, ನೃತ್ಯ - ಇವುಗಳಲ್ಲಿ ಸೊಗಸು, ಸಂಪ್ರದಾಯದ ಸಶಕ್ತತೆ ಎಲ್ಲ ಇವೆ. ಆದರೆ ಅದನ್ನು ಉಳಿಸುವ ಬಗ್ಗೆ ಎಚ್ಚರ ಇಲ್ಲದಿರುವುದು ದುರ್ದೈವ ಕಂಪೆನಿ ನಾಟಕದಿಂದ, ನವರಾತ್ರಿ ವೇಷಗಳಿಂದ, ಸಿನಿಮಾದಿಂದ, ಕ್ಯಾಲೆಂಡರುಗಳಿಂದ ಬಂದ ವೇಷಗಳೂ, ನರ್ಸಣ್ಣನ ಕಿರೀಟಗಳೂ, ನೈಲೆಕ್ಸ್ ಬಟ್ಟೆಗಳೂ, ಸರ್ಕಸ್ ಹಾಸ್ಯಗಳೂ ಒಂದು ಕಡೆಯಿಂದ ನುಗ್ಗಿದರೆ, 'ದಕ್ಷಿಣಾದಿ ಸಂಗೀತ'ವು ಇನ್ನೊಂದೆಡೆಯಿಂದ ನುಗ್ಗಿ ಹಾವಳಿ ಎಬ್ಬಿಸಿವೆ.
ಅತ್ತ ಬಡಗುತಿಟ್ಟು ಮೆಲ್ಲನೆ ಸಂಪ್ರದಾಯದಿಂದ ದೂರ ಹೋಗಿ ತೆಂಕು ತಿಟ್ಟಿನ ದಾರಿ ಹಿಡಿಯುವ ಲಕ್ಷಣಗಳೂ ಕಾಣಿಸಿವೆ. ಹಾಗಾಗದಿರಲಿ.




'ಯಕ್ಷಗಾನ ಮಕರಂದ - ಪ್ರಕಾಶಕರು - ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, ಮಂಗಳೂರು - 3 1980