ವಿಷಯಕ್ಕೆ ಹೋಗು

ಜಾಗರ/ಶೈಲಿಯ ಸಂರಕ್ಷಣೆ

ವಿಕಿಸೋರ್ಸ್ದಿಂದ
99516ಶೈಲಿಯ ಸಂರಕ್ಷಣೆ1984

ಶೈಲಿಯ ಸಂರಕ್ಷಣೆ



ಯಕ್ಷಗಾನದ ಗಾನ, ನೃತ್ಯ ಮತ್ತು ಚಿತ್ರ ಶೈಲಿಗಳು ಅಸಾಮಾನ್ಯ ಕಲ್ಪನೆ ಮತ್ತು ಸೃಷ್ಟ್ಯಾತ್ಮಕ ಪ್ರತಿಭೆಯ ಫಲಗಳು, ಯಕ್ಷಗಾನದ ಯಕ್ಷಗಾನತ್ವ ಇರುವುದು ಅದರ ಶೈಲಿಯಲ್ಲಿ. ಈ ಅಂಶವನ್ನು ನಾವಿನ್ನೂ ಸಾಕಷ್ಟು ಮನನ ಮಾಡಿಕೊಂಡಿಲ್ಲ ಅನ್ನಬೇಕು. ಈ ವರೆಗೆ ಈ ಶೈಲಿ ಉಳಿದಿದ್ದರೆ ಅದು ಶೈಲಿಯನ್ನು ಉಳಿಸಬೇಕೆಂಬ ತೀವ್ರ ಪ್ರಜ್ಞೆಯಿಂದ ಅಲ್ಲ; ಕೇವಲ ಗತಾನುಗತಿಕ ನ್ಯಾಯದಿಂದ, ಹಾಗಾಗಿ ಹೊಸ ತಾದ, ಯಕ್ಷಗಾನಕ್ಕೆ ಹೊರತಾದ ಗಾನವನ್ನೂ, ವೇಷವನ್ನೂ ನರ್ತನವನ್ನೂ ಇದಕ್ಕೆ ತಂದು ಅಳವಡಿಸುವಾಗ ನಮ್ಮ ಕಲಾವಿದರಿಗೆ ಏನೂ ಅನಿಸುವುದಿಲ್ಲ ಮಾತ್ರವಲ್ಲ, ಅಂತಹ ಮಿಶ್ರಣ ಅಪೇಕ್ಷಣೀಯ, ಸಮರ್ಥನೀಯ ಎಂಬ ಮಾತುಗಳನ್ನೂ ಕೇಳುತ್ತಿದ್ದೇವೆ.

ಯಕ್ಷಗಾನವೆಂಬ ಈ ಸಾಂಪ್ರದಾಯಿಕ ಕಲಾ ಪ್ರಸಾರಕ್ಕೆ ತನ್ನದಾದ ಒಂದು ಶೈಲಿ ಇದೆ ಮತ್ತು ಅದು ಇರುವುದರಿಂದಲೇ ಯಕ್ಷಗಾನವು ಒಂದು ಶ್ರೇಷ್ಠ ಕಲಾ ಪ್ರಕಾರ ಅನ್ನುವ ಸಾಮಾನ್ಯ ಮೂಲಭೂತ ಸಂಗತಿಯನ್ನೂ ನಾವಿಂದು ಹೊಸದಾಗಿ ಎಂಬಂತೆ ಸ್ಥಾಪಿಸಬೇಕಾಗಿ ಬಂದಿರುವುದು ವಿಚಿತ್ರ, ಆದರೂ ಸತ್ಯ. ಜಗತ್ತಿನಾದ್ಯಂತ ಎಲ್ಲ ದೇಶಗಳೂ ತಮ್ಮ ಜಾನಪದ ಮತ್ತಿತರ ಸಾಂಪ್ರದಾಯಿಕ ಕಲೆಗಳನ್ನು ಅವುಗಳ ಸ್ವಸ್ವರೂಪದಲ್ಲಿ ರಕ್ಷಿಸಲು ಯೋಜನಾಬದ್ದವಾದ ಯತ್ನ ನಡೆಸಿವೆ, ಅದರಲ್ಲಿ ಯಶಸ್ವಿಯಾಗಿವೆ. ಹೀಗಿರುವಾಗ, ನಾವೋ ಯಕ್ಷಗಾನಕ್ಕೊಂದು ಸ್ವತಂತ್ರ ಶೈಲಿ ಇದೆ ಎಂದು ಒಪ್ಪಿಕೊಳ್ಳುವಲ್ಲಿ ಮೀನ ಮೇಷ ಎಣಿಸುತ್ತಿದ್ದೇವೆ. ಇದೇಕೆ ಹೀಗಾಯಿತು? ಕಾರಣಗಳು ಹಲವು -

ಯಕ್ಷಗಾನವು ಒಂದು ಲಾಭಕರ ವ್ಯವಸಾಯವಾಗಿ ಬೆಳೆದ ಮೇಲೆ, ಕೇವಲ ಸಾಮಾನ್ಯ ಮನೋರಂಜನೆ, ಹಾಗೂ ಆರ್ಥಿಕ ಯಶಸ್ಸಿನ (ಬಾಕ್ಸ್ ಆಫೀಸ್) ದೃಷ್ಟಿ ಈ ಕಲಾ ಶೈಲಿಯ ಅಸ್ತವ್ಯಸ್ತತೆಗೆ ಒಂದು ಕಾರಣ ಅನ್ನದೆ ವಿಧಿಯಿಲ್ಲ. "ಯಾವುದು ಬೇಕು, ಯಾವುದು ಬೇಡ ಅನ್ನುವುದನ್ನು ಜನರೇ ನಿರ್ಧರಿಸಲಿ," "ಜನರು ಕೇಳಿದರು,
ಶೈಲಿಯ ಸಂರಕ್ಷಣೆ / ೧೯

ನಾವು ಕೊಟ್ಟೆವು”, “ಸಾಂಪ್ರದಾಯಿಕ ಪದ್ಧತಿಯ ಆಟ ಯಾರಿಗೆ ಬೇಕು?"- ಎಂಬ ವಾದವನ್ನು ನಾನು ಹಲವು ಬಾರಿ ಕೇಳಿದ್ದೇನೆ.

ಇದಕ್ಕೆ ಪ್ರತಿಯಾಗಿ ಸಂಬಂಧಿತರು ಈ ಪ್ರಶ್ನೆಗಳನ್ನೂ ಉತ್ತರಿಸಬೇಕಾಗುತ್ತದೆ-

1 'ಜನ' ಅಂದರೆ ಯಾರು? ಈ 'ಜನ' ಕಲಾಭಿಜ್ಞರೆ? ಕೇವಲ ಬಹುಮತದ ಡೆಮಾಕ್ರಸಿಯಿಂದ ಕಲಾ ಮೌಲ್ಯಗಳ ನಿರ್ಧಾರ ಸಾಧ್ಯವೆ?

2 ಕೇವಲ ಮನೋರಂಜನಾ ದೃಷ್ಟಿ ಇರುವ, ಯಕ್ಷಗಾನದ ಚೌಕಟ್ಟಿನ ಉಲ್ಲಂಘನೆ ಮಾಡುವ ಪ್ರದರ್ಶನಗಳನ್ನು ಜನರು ತಾವಾಗಿ ಕೇಳಿದರೆ? ಅಲ್ಲ ವ್ಯವಸಾಯಿಗಳು ಈ ಕಲಬೆರಕೆ ಪಾಕದ ರುಚಿಯನ್ನು ಜನರಿಗೆ ಉಣಿಸಿ ಅದರ ರುಚಿ ಕೆಡಿಸಿದರೆ?

3 ಸಾ೦ಪ್ರದಾಯಿಕ ಪದ್ಧತಿಯ ಕ್ರಮದಲ್ಲೇ ಬೇಕಾದ ಸುಧಾರಣೆ ಮಾಡಿ ವ್ಯವಸ್ಥಿತವಾದ ಆಟಗಳನ್ನು ಜನರ ಮುಂದಿಡುವ ಯತ್ನಗಳನ್ನು ವ್ಯವಸಾಯ ಮಂಡಳಿಗಳು ಮಾಡಿವೆಯೆ?

4 ಸಾಂಪ್ರದಾಯಿಕ ರೀತಿಯ ಭಾಗವತಿಕೆ, ವೇಷಭೂಷಣ ತೊಟ್ಟು ಆಟ ಆಡಿದ ಮಾತ್ರಕ್ಕೆ ಆಟಕ್ಕೆ ಆರ್ಥಿಕ ಅಡಚಣೆ ಬರುತ್ತದೆಯೆ? ಅಂದರೆ, ಇವುಗಳಿಂದಲೇ ಕಲೆಕ್ಷನ್ ಕಡಿಮೆ ಆದೀತೆ? ಅರ್ಥಾತ್, ಸಾಂಪ್ರದಾಯಿಕ ರೀತಿ, ತಂತ್ರದಿಂದಲೇ ಹೊಸ ಕತೆಗಳನ್ನು ರಂಗಕ್ಕೆ ತರಲು ಸಾಧ್ಯವಿಲ್ಲವೆ?

5 ಪರಂಪರೆ ಮತ್ತು ಅದಕ್ಕೆ ವ್ಯತಿರಿಕ್ತ ಅನಿಸದ ಸುಧಾರಣೆಗಳಿಂದ ಆಟಗಳು ಆರ್ಥಿಕ ಯಶಸ್ಸು ಕಾಣಲು ಸಾಧ್ಯವಿದೆ ಎಂಬ ಸತ್ಯ ಕೆಲವು ಮ೦ಡಳಿಗಳ ಪ್ರದರ್ಶನಗಳಿಂದ ಅನುಭವಕ್ಕೆ ಬಂದಿವೆಯಲ್ಲವೆ? (ಉದಾ : ಇಡಗು೦ಜಿ, ಸಾಲಿಗ್ರಾಮ, ಅಮೃತೇಶ್ವರಿ ಮೇಳಗಳು)

ಇನ್ನೊಂದು ಕಾರಣ: ಹಿಮ್ಮೇಳದಲ್ಲಿ ನಮ್ಮ ಶೈಲಿಯನ್ನು ನಾವು ಕಡೆಗಣಿಸಲು ಕಾರಣ ಅಂದರೆ, ಇತ್ತ ದಕ್ಷಿಣಾದಿ ಅತ್ತ ಹಿಂದುಸ್ಥಾನಿ ಎಂಬೆರಡು ಗಾನಶೈಲಿಗಳು ವ್ಯವಸ್ಥಿತವಾಗಿ ಬೆಳೆದು ನಿಂತಿದ್ದು, “ಅವು ಮಾತ್ರ ಶೈಲಿಗಳು; ಸಂಗೀತವೆಂದರೆ ದಕ್ಷಿಣಾದಿ ಯಾ ಹಿಂದುಸ್ಥಾನಿ - ಉಳಿದದ್ದೆಲ್ಲಾ ವಿಕೃತ ರೂಪ, ಅದು ಕಸ" ಎಂಬ ಭ್ರಮೆ. ೨೦ | ಜಾಗರ

ಉತ್ತರಾದಿ, ದಕ್ಷಿಣಾದಿ ಶೈಲಿಗಳೂ ಹಂತ ಹಂತದ ವಿಕಾಸದಿಂದ ಬೆಳೆದವುಗಳು. ಮೇಲಾಗಿ ಆರಂಭದಲ್ಲೇ ಇದಕ್ಕೆ ಶಾಸ್ತ್ರವಿತ್ತೇ? ಶಾಸ್ತ್ರವಿಲ್ಲದ ಮಾತ್ರಕ್ಕೆ ಒಂದು ಜೀವಂತ ಶೈಲಿಯನ್ನು "ಅದಿಲ್ಲವೇ ಇಲ್ಲ” ಅಂತ ತಿರಸ್ಕರಿಸಬಹುದೆ?

ಇದಕ್ಕಿಂತ ಮಹತ್ವದ ಪ್ರಶ್ನೆ ಅಂದರೆ ಶೈಲಿ ಮತ್ತು ಶಾಸ್ತ್ರಗಳ ಸಂಬಂಧದ್ದು. ಶಾಸ್ತ್ರವು ಲಕ್ಷಣವನ್ನು ಹೇಳೀತಲ್ಲದೆ, ಶೈಲಿಯನ್ನು ಪೂರ್ಣವಾಗಿ ತಿಳಿಸಲಾರದು. ಶೈಲಿ (Style-School) ಎಂಬುದು, ಕಲೆಯಲ್ಲಿ ಅನುಭವ ವೇದ್ಯ. ಗಾನದ ಶೈಲಿ ಕೇಳುವ ಅನುಭವದಿಂದಲೇ ತಿಳಿಯಬೇಕು.

ಒಂದು ಉದಾಹರಣೆ : ದಕ್ಷಿಣಾದಿ ಸ೦ಗೀತದ ಮೋಹನ ರಾಗಕ್ಕೆ ಸ, ರಿ, ಗ, ಪ, ದ, ಸ ಸ ದ ಪ ಗ ರಿ, ಸ - ಎಂಬುದು ಆರೋಹಣ ಅವರೋಹಣ. ಇದೇ ಹಿಂದುಸ್ಥಾನಿಯ ಭೂಪ ರಾಗದ ಆರೋಹ, ಅವರೋಹ. ಶಾಸ್ತ್ರ ಒಂದೇ, ಆದರೆ ಈ ರಾಗವನ್ನು ಹಾಡಲು ತೊಡಗಿದಾಗಲೇ ಇದು ದಕ್ಷಿಣಾದಿ ಇದು ಹಿಂದುಸ್ಥಾನಿ ಎಂದು ಹೇಳಲು ಬರುತ್ತದೆ. ಹಾಗಾದರೆ ಯಾವುದು ಶಾಸ್ತ್ರಕ್ಕೆ ಸರಿ, ಯಾವುದು ಅಲ್ಲ? ಎರಡೂ ಸರಿಯೇ. ಅವು ಒಂದೇ ರಾಗದ ಭಿನ್ನ ಶೈಲಿಗಳು ಅಷ್ಟೆ. ಅದೇ ಮೋಹನರಾಗ ಯಕ್ಷಗಾನ ಕ್ರಮದಿಂದ ಹಾಡಿದಾಗ ಮೂರನೇ ರೀತಿ ಕೇಳುತ್ತದೆ.

ಗಾನದ ಶೈಲಿ ಇರುವುದು ಶಾಸ್ತ್ರದಲ್ಲಲ್ಲ. ಪರಂಪರೆಯಿ೦ದ ಬೆಳೆದ ಪದ್ಧತಿಯಲ್ಲಿ. ಶೈಲಿಯ ವ್ಯತ್ಯಾಸ ಕಾಣುವುದು ಹೇಗೆ? ಅದು ಸ್ವರದ ಸಂಚಾರ ವಿನ್ಯಾಸದಲ್ಲಿ. ಸ್ವರದಿಂದ ಸ್ವರಕ್ಕೆ ಹೋಗುವ ರೀತಿ, ಗಮಕದ ರೀತಿ, ಎತ್ತುಗಡೆ ಇತ್ಯಾದಿಗಳಿಂದ. ಹಾಗಾಗಿ ಶಾಸ್ತ್ರವಾದದಿಂದ ಯಕ್ಷಗಾನ ಶೈಲಿಯನ್ನು ನಿರಾಕರಿಸಬಾರದು.

ಅಷ್ಟೇ ಏಕೆ? ಯಕ್ಷಗಾನದಲ್ಲೇ ಬಡಗು ತೆಂಕು ಎಂಬ ಎರಡು ಶೈಲಿಗಳಿವೆ. (ಗಾಯನವನ್ನು ಗಮನಿಸಿ) ಅವೆರಡೂ ಭಿನ್ನ ಭಿನ್ನ ಎಂದು ನಾವು ಗುರುತಿಸುವುದು ಶಾಸ್ತ್ರದ ಆಧಾರದಿಂದಲೋ? ಕಿವಿಯ ಅನುಭವದಿಂದಲೇ? ಅವೆರಡೂ ಭಿನ್ನವಾಗಿವೆ ನಿಜ. ಆದರೆ, ಅವೆರಡೂ ಒಂದೇ ಆಗಿಯೂ ಇವೆ. ತೆಂಕು - ಬಡಗಿನ ಭಾಗವತಿಕೆಯಲ್ಲಿ ಒಂದೇ ಶೈಲಿಯ ಲಕ್ಷಣಗಳು ಕಾಣುತ್ತವೆ. ಅವು ಒಂದೇ ಶೈಲಿಯ ಪ್ರಭೇದಗಳು ಅಷ್ಟೆ. ಇದೂ ಸಹ ಯಕ್ಷಗಾನದ ಶೈಲಿಯ ಅಸ್ತಿತ್ವಕ್ಕೆ ಪುಷ್ಟಿ ನೀಡುತ್ತದೆ.

ನೃತ್ಯವೂ ಅಷ್ಟೆ. ಭರತನಾಟ್ಯವೊಂದೇ ನಾಟ್ಯವಲ್ಲ. ಕೂಚಿಪುಡಿ ಕಥಕಳಿ ಇಲ್ಲವೆ? ಹಾಗೇ ಯಕ್ಷಗಾನದ ನೃತ್ಯ. ಮನುಷ್ಯನ ಕೈಕಾಲು ಮೈಗಳ ಚಲನೆಯ ವ್ಯವಸ್ಥೆಗೆ, ಲಯದ ವೈವಿಧ್ಯಕ್ಕೆ ಸಾವಿರ ಬಗೆಯ ಸಾಧ್ಯತೆ ಇಲ್ಲವೆ? ಹಾಗಾಗಿ,
ಶೈಲಿಯ ಸಂರಕ್ಷಣೆ / ೨೧

ಸಾವಿರ ಶೈಲಿಗಳ ಸಾಧ್ಯತೆಯೂ ಇದೆ. ಪ್ರಪಂಚದಾದ್ಯಂತ ಇರುವ ಅಸ೦ಖ್ಯ ನೃತ್ಯ ಶೈಲಿಗಳು ಒಂದರ ಹಾಗೆ ಇನ್ನೊಂದಿಲ್ಲ. ಅವುಗಳನ್ನು ಏಕ ರೂಪತೆಗೆ ತಂದು ಒಂದೇ ಶೈಲಿ ಮಾಡಿದರೆ, ಏನು ಸಾಧಿಸಿದ೦ತಾಯಿತು? ಅವುಗಳೆಲ್ಲ ಉಳಿದು ಬೆಳೆದರೇನೇ ಅವುಗಳ ಸಾರ್ಥಕ್ಯ.

ಹಿಮ್ಮೇಳದ ಮಾತು. ಮದ್ದಲೆಯ ಬದಲು ಮೃದಂಗ ಬಾರಿಸುವುದು ಸರಿಯೆ? ಮೃದಂಗ ಬಾರಿಸಬಹುದಾದರೆ, ಅಂತಹ ಅನೇಕ ವಾದನಗಳು ಯಾಕೆಸಲ್ಲ? ಡ್ರಂ, ಬಾಂಗೋ, ತಬ್ಲಾ ಯಾವುದೂ ಆದೀತಲ್ಲವೆ? ಅಲ್ಲ ಎಲ್ಲ ರೀತಿಯ ಗಾಯನಗಳಿಗೆ ಶಾಸ್ತ್ರೀಯ ಸಂಗೀತ ಕಚೇರಿಯ ವಾದನಗಳನ್ನೆ ಬಳಸುವುದಾದರೆ, ಎಲ್ಲದಕ್ಕೂ ಮೃದಂಗ, ತಬಲಾ ಎರಡೇ ಸಾಕಲ್ಲ? ಭೂತ ನೃತ್ಯಕ್ಕೆ ಮೃದಂಗ ಹಾರ್ಮೋನಿಯಂ ಬಾರಿಸೋಣವೆ? - ಕೂಡದು. ಯಾಕೆ? ಅದು ಆ ಶೈಲಿಗೆ ಹೊಂದುವ ವಾದನ ಅಲ್ಲ. ಅದರಲ್ಲಿ ಆ ಗುಣವಿಲ್ಲ, ಮಾತ್ರವಲ್ಲ ಆಯಾ ಶೈಲಿಗಳಲ್ಲಿ ಅದಕ್ಕಾಗಿ ಸೃಷ್ಟಿಗೊಂಡ ವಾದನಗಳಿರುವಾಗ, ಅವನ್ನೆ ಬಳಸಿದರೆ ಅದು ಚೆಂದ, ಅದು ಶೈಲಿಯ ಧರ್ಮ, ಅದರ ಸತ್ವ.

ವೇಷ ಭೂಷಣಗಳ ಮಾತೂ ಅಷ್ಟೆ. ಅವು ಕೆಡಲು ಕಾರಣ - ಕಂಪೆನಿ ನಾಟಕಗಳ ವೇಷಗಳ ಅನುಕರಣೆ, ಕ್ಯಾಲಂಡರ್ ವೇಷಗಳ ಪ್ರಭಾವ - ಇವುಗಳ ಧಾಳಿ. ಇದರಿಂದ ನಮ್ಮ ವೇಷ ಭೂಷಣಗಳ ಶೈಲಿ ಅಡಿಮೇಲಾಗಿ ಹೋಗಿದೆ. ಈ ಪ್ರಭಾವವನ್ನು ತಡೆಯದಿದ್ದರೆ, ಯಕ್ಷಗಾನದ ವೇಷ, ಶೈಲಿ ಮರೆಯಾಗುವ ಭಯವಿದೆ. ಯಕ್ಷಗಾನದ ಚಿತ್ರಶೈಲಿ; ಕ್ಯಾಲಂಡರ್ ಚಿತ್ರ ಮತ್ತು ನಾಟಕದ ವೇಷಗಳಿಗಿಂತ ಭಿನ್ನ ಉದ್ದೇಶದ್ದು. ಅದೊಂದು 'ಪೌರಾಣಿಕ' ಪದ್ಧತಿಯ ನೃತ್ಯ ನಾಟಕದ ವೇಷ ಪದ್ಧತಿ - ನೃತ್ಯಕ್ಕೆ ಅನುಕೂಲಿಸಿ ಇರುವಂತದ್ದು ಅಲ್ಲದೆ ಕ್ಯಾಲಂಡರು ಚಿತ್ರ, ನಾಟಕದ ವೇಷಗಳಿಗಿಂತ ಬಹಳ ಉನ್ನತ ಮಟ್ಟದ ಕಲ್ಪನಾ ಸೃಷ್ಟಿ ಯಕ್ಷಗಾನದ ವೇಷ.

ಪ್ರದರ್ಶನಕ್ಕೆ ಇರುವ ಕಥೆ ಯಾವುದೇ ಇರಲಿ, ಅದರ ವೇಷಗಳು ಯಕ್ಷಗಾನ ಶೈಲಿಯಲ್ಲೆ ಇರಲಿ. ಕೃಷ್ಣದೇವರಾಯನೋ, ಅಲ್ಲ ಚಂದ್ರಗುಪ್ತನೋ ಯಕ್ಷಗಾನ ರಂಗಭೂಮಿಯಲ್ಲಿ ಗಲ್ಲ ಮೀಸೆ, ನಾಮ, ಸೋಗೆವಲ್ಲಿ, ಬಾಲಮುಂಡು, ಕೋಲು ಕಿರೀಟ ತೊಟ್ಟಿರಬೇಕು ಹೊರತು ಪೈಜಾಮ, ಜರಿಪೇಟ ಇಟ್ಟು ಬರುವುದು ಬೇಡ.

ಯಕ್ಷಗಾನದ ಶೈಲಿಯನ್ನು ಉಲ್ಲಂಘಿಸುವಾಗ ತಾನೇನೋ ತಪ್ಪು ಮಾಡುತ್ತಿದ್ದೇನೆ ಎಂಬ ಅರಿವು ಕಲಾವಿದನಿಗೆ ಬರಬೇಕು. ಶೈಲಿಯ ರಕ್ಷಣೆಯ 'ವ್ರತ' ಕಲಾವಿದನ ಬಾಳ ಉಸಿರಾಗಬೇಕು.

ಹಾಗಾದರೆ, ಶಾಸ್ತ್ರೀಯ ಕಲೆಗಳಿಂದ ನಾವು ಕಲಿಯಬೇಕಾದ್ದೇನೂ ಇಲ್ಲವೆ? ಇದೆ. ಉದಾ: ಹಾಡುವಿಕೆಗೆ ಬೇಕಾದ ರಾಗ ನಿರ್ಧಾರ, ಶ್ರುತಿ, ತಾಳ - ಇವುಗಳ ಅಭ್ಯಾಸ, ನಿರ್ಣಯಗಳ ಕಲ್ಪನೆ ಒಬ್ಬ ಭಾಗವತ ದಕ್ಷಿಣಾದಿ ಸಂಗೀತದ ಅಭ್ಯಾಸ ಮಾಡಿ ಪಡೆಯಲಿ, ಆದರೆ, ಯಕ್ಷಗಾನಕ್ಕೆ ಅದರ ರಾಗದ ಶೈಲಿ ಬೇಡ, ಯಕ್ಷಗಾನವನ್ನೆ ವ್ಯವಸ್ಥಿತವಾಗಿ, ಅದರ ಶೈಲಿಯನ್ನು ಕಾದುಕೊ೦ಡು ಹಾಡಲು ಬೇಕಾದ ಮೂಲ ಜ್ಞಾನ (ಇದು ಎಲ್ಲ ಸಂಗೀತ ಪದ್ಧತಿಗಳಿಗೂ ಒಂದೇ ತಾನೆ?)ಅವನಿಗೆ ಇರಲಿ ಅಷ್ಟೆ (Basic rules of any system of music)

ಯಕ್ಷಗಾನದ ಶೈಲಿ, ಶೈಲಿ ಎಂದು ಅದನ್ನು ಳಿಸಿದರಷ್ಟೆ ಸಾಕೆ? ಸಾಲದು.ಆದರೆ ಅದು ಮೊತ್ತ ಮೊದಲ ಕೆಲಸ. ಅದನ್ನೇ ಮಾಡದೆ, 'ಸುಧಾರಣೆ' ಅಂದರೆ ಅದು ಸೋಗು, ಅದು ಅವ್ಯವಸ್ಥೆ ಅಷ್ಟೆ.

ಸುಧಾರಣೆ ಬೇಕೇ ಬೇಕು. ಅದು ಯಕ್ಷಗಾನದ ಚೌಕಟ್ಟಿನಲ್ಲೆ ಆಗಬೇಕು.ಯಕ್ಷಗಾನದ ಮಾದರಿಯಲ್ಲಿ ಕಲ್ಪನೆಯನ್ನು ಬೆಳೆಸಿ ಇನ್ನೂ ನಾಲ್ಕಾರು ಮಾದರಿಯ ವೇಷಗಳ ಸೃಷ್ಟಿ ಸಾಧ್ಯವಿದೆ. ಯಕ್ಷಗಾನದ ನೃತ್ಯದಿಂದಲೇ ಹಲವು ಬಗೆಯ ಸಮೂಹ ನೃತ್ಯ, ಭಾವ ಪ್ರಕಟನೆಯ ವೈವಿಧ್ಯದ ಚಲನೆಗಳು-ಇವನ್ನೆಲ್ಲ ಸೃಷ್ಟಿಸಲು ಸಾಧ್ಯ.

ಯಕ್ಷಗಾನದ "ಪರಂಪರೆ" ಎಂಬ ಹೆಸರಲ್ಲಿ ಇರುವ, ನಿಜಕ್ಕೂ ರಂಗದ ಔಚಿತ್ಯಕ್ಕಾಗಲಿ ಯಕ್ಷಗಾನ ಆಟದ ಸ್ವರೂಪಕ್ಕಾಗಲಿ ಹೊಂದದ ಅನೇಕ ಅಸಂಬದ್ಧಗಳನ್ನು ಕೈಬಿಡಲು ಸಂಪ್ರದಾಯ ಅಡ್ಡಿ ಬರಬಾರದು.

ಯಕ್ಷಗಾನ ವೇಷಭೂಷಣಗಳು ಭಾರ' ಆಗುತ್ತವೆ ಅನ್ನುತ್ತೀರಾ? ಹಗುರದ ವಸ್ತುಗಳಿಂದ ಅದೇ ಆಕಾರದ ಸಾಮಗ್ರಿ ತಯಾರಿಸಿದರೆ ತಪ್ಪೇನಿಲ್ಲ. ಒಳಗಿನ ವಸ್ತು ಯಾವುದಿದ್ದರೂ ಆ ವೇಷ ಸಾಮಗ್ರಿಯ ಆಕಾರ ಮುಖ್ಯ ತಾನ? ಮರದ ಬದಲು ರಟ್ಟು, ಅದರ ಬದಲು ಪ್ಲಾಸ್ಟಿಕ್‌ ಆದರೂ ಸರಿ,

ಶೈಲಿಯ ಸಂರಕ್ಷಣೆ - ಇದು ನಮ್ಮ ತುರ್ತಿನ ಕೆಲಸ.ನಮ್ಮ ಸುಧಾರಕ ಬುದ್ಧಿ ಶೈಲಿಯ ಸೀಮೆಯಲ್ಲೆ ಸಂಚರಿಸಬೇಕು.

ಮಂಗಳಾವಲೋಕನ 1976 . ಸಂ. ಎಸ್. ವಿ. ಪರಮೇಶ್ವರ ಭಟ್ಟ