ಜೈಮಿನಿ ಭಾರತ/ಹತ್ತನೆಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಜೈಮಿನಿ ಭಾರತ ಹತ್ತನೆಯ ಸಂಧಿ[ಸಂಪಾದಿಸಿ]

ಪದ್ಯ :-:ಸೂಚನೆ:[ಸಂಪಾದಿಸಿ]

ಸೂಚನೆ: ಹರಿ ಶಿಲೆಯಮೇಲೆ ನಡೆಗೆಡೆ ಸವ್ಯಸಾಚಿ ಸೌ | ಭರಿಯ ದೆಸೆಯಿಂದಮುದ್ದಾಲಕನ ಕಥೆಗೇಳು | ತಿರದೆ ಹಂಸದ್ವಜನ ಪಟ್ಟಣಕೆ ಬರಲವಂ ಕಾದಲ್ಕೆ ಪೊರಮಟ್ಟನು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹರಿ ಶಿಲೆಯಮೇಲೆ ನಡೆಗೆಡೆ ಸವ್ಯಸಾಚಿ ಸೌಭರಿಯ ದೆಸೆಯಿಂದ ಮುದ್ದಾಲಕನ ಕಥೆಗೇಳುತ=[ಕುದುರೆಯು ಒಂದುವಿಶಾಲ ಶಿಲೆಯಮೇಲೆ ನಡೆಯಲು ಬಾರದೆ ಸಿಕ್ಕಿಕೊಳ್ಳಲು,ಸವ್ಯಸಾಚಿಯಾದ ಅರ್ಜುನನು. ಸೌಭರಿಯೆಂಬ ಮುನಿಯಿಂದ ಮುದ್ದಾಲಕನ ಕಥೆಯನ್ನು ಕೇಳಿದನು.]; ಇರದೆ ಹಂಸದ್ವಜನ ಪಟ್ಟಣಕೆ ಬರಲವಂ ಕಾದಲ್ಕೆ ಪೊರಮಟ್ಟನು=[ನಂತರ ಅಲ್ಲಿ ಇರದೆ ಕುದುರೆಯನ್ನು ಹಿಂಬಾಲಿಸಿ ಹಂಸದ್ವಜನ ಪಟ್ಟಣಕ್ಕೆ ಬರಲು ಅವನು ಯುದ್ಧಮಾಡಲು ಹೊರಟನು].
  • ತಾತ್ಪರ್ಯ:: ಹರಿ ಶಿಲೆಯಮೇಲೆ ನಡೆಗೆಡೆ ಸವ್ಯಸಾಚಿ ಸೌಭರಿಯ ದೆಸೆಯಿಂದ ಮುದ್ದಾಲಕನ ಕಥೆಗೇಳುತ=[ಕುದುರೆಯು ಒಂದುವಿಶಾಲ ಶಿಲೆಯಮೇಲೆ ನಡೆಯಲು ಬಾರದೆ ಸಿಕ್ಕಿಕೊಳ್ಳಲು,ಸವ್ಯಸಾಚಿಯಾದ ಅರ್ಜುನನು. ಸೌಭರಿಯೆಂಬ ಮುನಿಯಿಂದ ಮುದ್ದಾಲಕನ ಕಥೆಯನ್ನು ಕೇಳಿದನು.]; ಇರದೆ ಹಂಸದ್ವಜನ ಪಟ್ಟಣಕೆ ಬರಲವಂ ಕಾದಲ್ಕೆ ಪೊರಮಟ್ಟನು=[ನಂತರ ಅಲ್ಲಿ ಇರದೆ ಕುದುರೆಯನ್ನು ಹಿಂಬಾಲಿಸಿ ಹಂಸದ್ವಜನ ಪಟ್ಟಣಕ್ಕೆ ಬರಲು ಅವನು ಯುದ್ಧಮಾಡಲು ಹೊರಟನು].

(ಪದ್ಯ - ಸೂಚನೆ)XVII-VIII

ಪದ್ಯ :-:೧:[ಸಂಪಾದಿಸಿ]

ಆಲಿಸೆಲೆ ಜನಮೇಜಯಕ್ಷಿತಿಪ ಮುಂದಣ ಕ | ಥಾಲಾಪ ಕೌತುಕವನುಚಿತದಿಂ ಫಲುಗುಣಂ| ನೀಲದ್ವಜನ ಕಂಡ ಬಳಿಕಾತನಂ ಕೂಡಿಕೊಂಡಖಿಳ ಸೇನೆಸಹಿತ ||
ಮೇಲೆ ನಡೆದಂ ತೆಂಕಮೊಗಮಾಗಿ ಹಯದೊಡನೆ | ಕಾಲಿಡುವ ಮಂದಿಗಿಂಬಿಲ್ಲ ನೆಲನಾಗಸಂ | ಸಾಲದೇಳುವ ಧೂಳಿಗೆಣ್ದೆಸೆ ಕಠೋರ ವಾದ್ಯದ್ವನಿಗೆ ನೆರೆಯದೆನಲು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆಲಿಸೆಲೆ ಜನಮೇಜಯಕ್ಷಿತಿಪ ಮುಂದಣ ಕಥಾಲಾಪ ಕೌತುಕವನು ಉಚಿತದಿಂ=[ಎಲೆ ಜನಮೇಜಯ ರಾಜನೇ ಮಂದಿನ ಕಥೆಯ ಆಶ್ಚರ್ಯವನ್ನು ಮನಸ್ಸಿಟ್ಟು ಆಲಿಸು.]; ಫಲುಗುಣಂ ನೀಲದ್ವಜನ ಕಂಡ ಬಳಿಕಾತನಂ ಕೂಡಿಕೊಂಡಖಿಳ ಸೇನೆಸಹಿತ ಮೇಲೆ ನಡೆದಂ ತೆಂಕಮೊಗಮಾಗಿ ಹಯದೊಡನೆ=[ಫಲ್ಗುಣನು ನೀಲದ್ವಜನ ಕಂಡ ಬಳಿಕ ಆತನನ್ನು ಕೂಡಿಕೊಂಡು ಅಖಿಳ ಸೇನೆಸಹಿತ ದಕ್ಷಿಣ ದಿಕ್ಕಿಗೆ ಕುದುರೆಯೊಡನೆ ನಡೆದನು.]; ಕಾಲಿಡುವ ಮಂದಿಗಿಂಬಿಲ್ಲ ನೆಲನಾಗಸಂ ಸಾಲದೇಳುವ ಧೂಳಿಗೆ ಎಣ್ದೆಸೆ ಕಠೋರ ವಾದ್ಯದ್ವನಿಗೆ ನೆರೆಯದೆನಲು=[ಸೈನ್ಯ ದೊಡ್ಡದಿದ್ದು ಕಾಲಿಡಲು ಅಲ್ಲಿ ಜಾಗವಿಲ್ಲದಂತೆ ಭಟರು ತುಂಬಿದ್ದರು. ಏಳುವ ಧೂಳಿಗೆ ಮತ್ತು ಕಠೋರ ವಾದ್ಯ ಧ್ವನಿಗೆ ಎಂಟು ದಿಕ್ಕುಗಳೂ ನೆಲವೂ ಆಗಸವೂ ಸಾಲದೆಂಬಂತೆ ಇತ್ತು.]
  • ತಾತ್ಪರ್ಯ:ಎಲೆ ಜನಮೇಜಯ ರಾಜನೇ ಮಂದಿನ ಕಥೆಯ ಆಶ್ಚರ್ಯವನ್ನು ಮನಸ್ಸಿಟ್ಟು ಆಲಿಸು.ಫಲ್ಗುಣನು ನೀಲದ್ವಜನ ಕಂಡ ಬಳಿಕ ಆತನನ್ನು ಕೂಡಿಕೊಂಡು ಅಖಿಳ ಸೇನೆಸಹಿತ ದಕ್ಷಿಣ ದಿಕ್ಕಿಗೆ ಕುದುರೆಯೊಡನೆ ನಡೆದನು. ಸೈನ್ಯ ದೊಡ್ಡದಿದ್ದು ಕಾಲಿಡಲು ಅಲ್ಲಿ ಜಾಗವಿಲ್ಲದಂತೆ ಭಟರು ತುಂಬಿದ್ದರು. ಏಳುವ ಧೂಳಿಗೆ ಮತ್ತು ಕಠೋರ ವಾದ್ಯ ಧ್ವನಿಗೆ ಎಂಟು ದಿಕ್ಕುಗಳೂ ನೆಲವೂ ಆಗಸವೂ ಸಾಲದೆಂಬಂತೆ ಇತ್ತು.

(ಪದ್ಯ - ೧)

ಪದ್ಯ :-:೨:[ಸಂಪಾದಿಸಿ]

ಸಹದೇವನಾಗಿ ಸಮುದಿತ ನಕುಲನಾಗಿ ಸ | ನ್ನಿಹಿತಾರ್ಜುನನುಮಾಗಿ ವರ ವೃಕೋದರನಾಗಿ | ಮಹದಿಳಾಭೃದ್ರಾಜನಾಗಿ ಶಶಿಕಾಂತ ಕುಲದಿಂದೆ ಪಾಂಡವನುಮಾಗಿ ||
ಅಹಿತರುಗಳಂ ಧಾರ್ತರಾಷ್ಟ್ರರಂ ಕೂಡಿಕೊಂ | ಡಿಹುದರಿಂದಚಲನಾಗಿಹೆನೆಂದು ಹರಿಯೊಡನೆ | ಬಹ ಫಾರ್ಥನಂ ಕೆರದು ಮೂದಲಿಪ ತೆರದಿಂದೆ ವಿಂಧ್ಯಾದ್ರಿ ಮುಂದೆಸೆದುದು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಂದ್ಯ ಪರ್ವತವು ಅರ್ಜುನನಿಗೆ ತಾನೂ ಅವನ ಸಮಾ ಎಂದು ಹೇಳುವುದು: 'ಸಹದೇವ'ನಾಗಿ, ಸಮುದಿತ ನಕುಲನಾಗಿ,ಸನ್ನಿಹಿತ ಅರ್ಜುನನುಮಾಗಿ ವರ ವೃಕೋದರನಾಗಿ, ಮಹತ್ ದಿಳಾಭೃತ್ ರಾಜನಾಗಿ ಶಶಿಕಾಂತ ಕುಲದಿಂದೆ ಪಾಂಡವನುಮಾಗಿ =['ಸಹದೇವ'ನಾಗಿ,ಶಿವಾಲಯ ಹೊಂದಿ- ಸಹದೇವ; ಸಮುದಿತ ನಕುಲನಾಗಿ- ಮುಂಗಸಿ ಇರುವುದರಿಂದ ನಕುಲ =ಮುಂಗುಸಿ; ಸನ್ನಿಹಿತ ಅರ್ಜುನನುಮಾಗಿ:ಅಲ್ಲಿ ಬಂದಿರುವ ಅರ್ಜುನನ್ನೂ ಒಳಗೊಂಡಂತೆ ಆಯಿತು;, ವರ ವೃಕೋದರನಾಗಿ:ಅಲ್ಲಿ ತೋಳಗಳಿರುವುದರೀಂದ ವೃಕೋದರನನ್ನು ಹೋದಿದೆ; ಮಹದ್ ಇಳಾಭೃತ್ ರಾಜನಾಗಿ:ಅರ್ಜುನನಿಗೆ ಅಣ್ಣ ರಾಜನಿರುವಂತೆ ವಿಂಧ್ಯನಿಗೆಎತ್ತರದ ಬೆಟ್ಟ-ಬೆಟ್ಟಗಳರಾಜನಿದ್ದಾನೆ; ಶಶಿಕಾಂತ ಕುಲದಿಂದೆ-ಚಂದ್ರವಂಶ ಅರ್ಜುನನಂತೆ ವಿಂದ್ಯನೂ -ಪಾಂಡವ, ಅಲ್ಲಿ ಬಿಳಿಯ ಶಿಲೆಗಳಿವೆ. ] ಅಹಿತರುಗಳಂ ಧಾರ್ತರಾಷ್ಟ್ರರಂಕೂಡಿಕೊಂಡು ಇಹುದರಿಂದ ಅಚಲನಾಗಿ ಇಹೆನು ಎಂದು=[ಹಿಂದೆ ಅಹಿತರಾದ/ ಶತ್ರುಗಳಾದ ಧಾರ್ತರಾಷ್ಟ್ರರನ್ನು ಎಂದರೆ ಕೌರವರನ್ನುಹೊಂದಿರುವಂತೆ, ವಿಂಧ್ಯವು ಅಹಿತರುಗಳನ್ನು ಹೊಂದಿದೆ:ಅಹಿ- ಸರ್ಪ, ತರುಗಳು- ಮರಗಳು, ಇವುಗಳನ್ನು ಕೂಡಿಕೊಂಡಿದೆ; ಇಹುದರಿಂದ ಅರ್ಜುನನು ಶತ್ರುಗಳೆದುರು ಅಚಲನಾಗಿದ್ದರೆ, ತಾನು ಚಲನೆಇಲ್ಲದೆ ಅಚಲನಾಗಿ ಇರುವೆನೆಂದು ಹೇಳುವಂತೆ]; ಹರಿಯೊಡನೆ ಬಹ ಫಾರ್ಥನಂ ಕೆರದು ಮೂದಲಿಪ ತೆರದಿಂದೆ ವಿಂಧ್ಯಾದ್ರಿ ಮುಂದೆ ಎಸೆದುದು=[ಕುದುರೆಯೊಡನೆ ಬರುತ್ತಿರುವ ಫಾರ್ಥನನ್ನು ಕೆರದು ಮೂದಲಿಸುವಂತೆ ರಿತಿಯಲ್ಲಿ ವಿಂಧ್ಯಾದ್ರಿ ಮುಂದೆ ಕಂಡಿತು.].
  • ತಾತ್ಪರ್ಯ: ವಿಂದ್ಯ ಪರ್ವತವು ಅರ್ಜುನನಿಗೆ ತಾನೂ ಅವನ ಸಮಾ ಎಂದು ಹೇಳುವುದು: 'ಸಹದೇವ'ನಾಗಿ,ಶಿವಾಲಯ ಹೊಂದಿ- ಸಹದೇವ; ಸಮುದಿತ ನಕುಲನಾಗಿ- ಮುಂಗಸಿ ಇರುವುದರಿಂದ ನಕುಲ =ಮುಂಗುಸಿ; ಸನ್ನಿಹಿತ ಅರ್ಜುನನುಮಾಗಿ:ಅಲ್ಲಿ ಬಂದಿರುವ ಅರ್ಜುನನ್ನೂ ಒಳಗೊಂಡಂತೆ ಆಯಿತು;, ವರ ವೃಕೋದರನಾಗಿ:ಅಲ್ಲಿ ತೋಳಗಳಿರುವುದರೀಂದ ವೃಕೋದರನನ್ನು ಹೋದಿದೆ; ಮಹದ್ ಇಳಾಭೃತ್ ರಾಜನಾಗಿ:ಅರ್ಜುನನಿಗೆ ಅಣ್ಣ ರಾಜನಿರುವಂತೆ ವಿಂಧ್ಯನಿಗೆಎತ್ತರದ ಬೆಟ್ಟ-ಬೆಟ್ಟಗಳರಾಜನಿದ್ದಾನೆ; ಶಶಿಕಾಂತ ಕುಲದಿಂದೆ-ಚಂದ್ರವಂಶ ಅರ್ಜುನನಂತೆ ವಿಂದ್ಯನೂ -ಪಾಂಡವ, ಅಲ್ಲಿ ಬಿಳಿಯ ಶಿಲೆಗಳಿವೆ. ಹಿಂದೆ ಅಹಿತರಾದ/ ಶತ್ರುಗಳಾದ ಧಾರ್ತರಾಷ್ಟ್ರರನ್ನು ಎಂದರೆ ಕೌರವರನ್ನು ಹೊಂದಿರುವಂತೆ, ವಿಂಧ್ಯವು ಅಹಿತರುಗಳನ್ನು ಹೊಂದಿದೆ:ಅಹಿ- ಸರ್ಪ, ತರುಗಳು- ಮರಗಳು, ಇವುಗಳನ್ನು ಕೂಡಿಕೊಂಡಿದೆ; ಇಹುದರಿಂದ ಅರ್ಜುನನು ಶತ್ರುಗಳೆದುರು ಅಚಲನಾಗಿದ್ದರೆ, ತಾನು ಚಲನೆಇಲ್ಲದೆ ಅಚಲನಾಗಿ ಇರುವೆನೆಂದು ಹೇಳುವಂತೆ, ಕುದುರೆಯೊಡನೆ ಬರುತ್ತಿರುವ ಫಾರ್ಥನನ್ನು ಕೆರದು ಮೂದಲಿಸುವಂತೆ ರಿತಿಯಲ್ಲಿ ವಿಂಧ್ಯಾದ್ರಿ ಮುಂದೆ ಕಂಡಿತು.

(ಪದ್ಯ - ೨)

ಪದ್ಯ :-:3:[ಸಂಪಾದಿಸಿ]

ಎಸೆದುದಾ ಗಿರಿ ಗಗನ ಮಂಡಲವನಂಡಲೆವ | ಲಸದುನ್ನತದ ಶೃಂಗದುತ್ಕರದ ಸತ್ಕರದ ಶಶಿಕಾಂತಮಯವಾದ ರಮಣೀಯ ಕಮಣೀಯ ಕಮನೀಯ ಕಂದರದ ಸೌಂದರದೊಳು ||
ಮುಸುಕಿ ತಪ್ಪಲ ಮೇವ ಮಂಜುಗಳ ನಂಜುಗಳ | ದಶನದುಗ್ರಾಹಿಗಳ ಪುತ್ತುಗಳ ಮುತ್ತುಗಳ | ನೆಸಲಾದ ಪೆರ್ಬಿದಿರ ಕಾಡುಗಳ ನೀಡುಗಳ ಶಬರಿಯರ ಸಂಕುಲದೊಳು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಸೆದುದು (ಕಾಣುತ್ತಿತ್ತು) ಆ ಗಿರಿ ಗಗನ ಮಂಡಲವನು ಅಂಡಲೆವು ಎಸದ ಉನ್ನತದ ಶೃಂಗದ ಉತ್ಕರದ ಸತ್ಕರದ ಶಶಿಕಾಂತಮಯವಾದ ರಮಣೀಯ ಕಮಣೀಯ ಕಮನೀಯ ಕಂದರದ ಸೌಂದರದೊಳು=[ಎಸೆದುದು ಆ ವಿಂಧ್ಯ ಕಾಣುತ್ತಿತ್ತು ,ಹೇಗೆಂದರೆ ಗಿರಿಗಳು ಆಕಾಶಮಂಡಲವನ್ನು ತಾಗಿಕೊಂಡು ಚಲಿಸುವ ಶೋಭಿಸುವ ಉನ್ನತದ ಶಿಕರದ ಹಚ್ಚಿನ ಸಂತಸಪಡಿಸುವ ಬಿಳಿಕಲ್ಲಿನಿಂದ ಕೂಡಿದ, ಮನೋಹರವಾದ, ಸುಂದರವಾದ, ಗವಿಗಳುಳ್ಳ, ಸೌಂದರ್ಯದಲ್ಲಿ ]; ಮುಸುಕಿ ತಪ್ಪಲ ಮೇವ ಮಂಜುಗಳ ನಂಜುಗಳ ದಶನದುಗ್ರಾಹಿಗಳ ಪುತ್ತುಗಳ ಮುತ್ತುಗಳ ನೆಸಲಾದ ಪೆರ್ಬಿದಿರ ಕಾಡುಗಳ ನೀಡುಗಳ ಶಬರಿಯರ ಸಂಕುಲದೊಳು=[ಆವರಿಸಿಕೊಂಡ, ಬೆಟ್ಟತಪ್ಪಲುಗಳ, ಹಸಿಯ ಹುಲ್ಲು ಹಾಸಿನಮೇವನ್ನು ಹೊಂದಿದ, ಮಂಜುಹನಿಗಳ, ನಂಜುಗಳಾದ ಕ್ರಿಮಿಕೀಟಗಳ, ಕೋರೆಹಲ್ಲಿನ ಉಗ್ರ ಪ್ರಾಣಿಗಳ, ಹುತ್ತಗಳ ಮುತ್ತು ರತ್ನಗಳ, ಪರಸ್ಪರ ಹೆಣೆದುಕೊಂಡ ದೊಡ್ಡಬಿದಿರುಗಳ, ಕಾಡುಗಳ, ಬಯಲುಗಳ. ಬೇಡತಿಯರ ಸಮೂಹಗಳನ್ನು ಹೊಂದಿತ್ತು.]
  • ತಾತ್ಪರ್ಯ:ಆ ವಿಂಧ್ಯಪರ್ವತಗಳು ಈ ರೀತಿ ಕಾಣುತ್ತಿತ್ತು ,ಹೇಗೆಂದರೆ ಗಿರಿಗಳು ಆಕಾಶಮಂಡಲವನ್ನು ತಾಗಿಕೊಂಡು ಚಲಿಸುವ ಶೋಭಿಸುವ ಉನ್ನತದ ಶಿಕರದ ಹಚ್ಚಿನ ಸಂತಸಪಡಿಸುವ ಬಿಳಿಕಲ್ಲಿನಿಂದ ಕೂಡಿದ, ಮನೋಹರವಾದ, ಸುಂದರವಾದ, ಗವಿಗಳುಳ್ಳ, ಸೌಂದರ್ಯದಿಂದ ತುಂಬಿದ, ಬೆಟ್ಟತಪ್ಪಲುಗಳ, ಹಸಿಯ ಹುಲ್ಲು ಹಾಸಿನಮೇವನ್ನು ಹೊಂದಿದ, ಮಂಜುಹನಿಗಳ, ನಂಜುಗಳಾದ ಕ್ರಿಮಿಕೀಟಗಳ, ಕೋರೆಹಲ್ಲಿನ ಉಗ್ರ ಪ್ರಾಣಿಗಳ, ಹುತ್ತಗಳ, ಮುತ್ತು ರತ್ನಗಳ, ಪರಸ್ಪರ ಹೆಣೆದುಕೊಂಡ ದೊಡ್ಡಬಿದಿರುಗಳ, ಕಾಡುಗಳ, ಬಯಲುಗಳ. ಬೇಡತಿಯರ ಸಮೂಹಗಳನ್ನು ಹೊಂದಿತ್ತು.]

(ಪದ್ಯ - ೩)

ಪದ್ಯ :-:೪:[ಸಂಪಾದಿಸಿ]

ಪಕ್ಷಿ ಮೃಗಜಾತಿಗಳು ಲೀಲೆ ಮಿಗೆ ರಮಿಸುತಿಹ | ಯಕ್ಷ ಕಿನ್ನರ ಕಿಂಪುರುಷ ಗಂಧರ್ವ | ರಕ್ಷೋಗಣಂಗಳಿಂದಲ್ಲಲ್ಲಿಗೆಸೆವ ಪುಣ್ಯಾಶ್ರಮದ ಮುನಿಗಳಿಂದೆ ||
ಋಕ್ಷ ವಾನರ ಕುಲದ ವಿವಿಧ ಚೇಷ್ಟೆಗಳಿಂದೆ | ವೃಕ್ಷ ಲತೆಗಳ ಕುಸುಮ ಫಲ ಸಮೃದ್ಧಿಗಳಿಂದ | ಮಕ್ಷಿಗಚಲೇಂದ್ರಮೆಸೆದಿರ್ದುದು ಪುಳಿಂದಿಯರ ತನುಬಂಧ ಬಂಧುರದೊಳು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಲ್ಲಿ ವಿಂದ್ಯ ಪರ್ವತದಲ್ಲಿ,ಪಕ್ಷಿ ಮೃಗಜಾತಿಗಳು ಲೀಲೆ ಮಿಗೆ ರಮಿಸುತಿಹ ಯಕ್ಷ ಕಿನ್ನರ ಕಿಂಪುರುಷ ಗಂಧರ್ವ ರಕ್ಷೋಗಣಂಗಳಿಂದ=[ಅಲ್ಲಿ ವಿಂದ್ಯ ಪರ್ವತದಲ್ಲಿ,ಪಕ್ಷಿ ಮೃಗಜಾತಿಗಳು ಬಹಳ ಆನಂದದಿಂದ ಒಟ್ಟಾಗಿ ಆಡುತ್ತಿರಲು (ರಮಿಸುತಿಹ) ಯಕ್ಷ ಕಿನ್ನರ ಕಿಂಪುರುಷ ಗಂಧರ್ವ ರಕ್ಷೋಗಣಗಳಿಂದ ತುಂಬಿತ್ತು;]; ಅಲ್ಲಲ್ಲಿಗೆ ಎಸೆವ ಪುಣ್ಯಾಶ್ರಮದ ಮುನಿಗಳಿಂದೆ ಋಕ್ಷ (ಕರಡಿ) ವಾನರ ಕುಲದ ವಿವಿಧ ಚೇಷ್ಟೆಗಳಿಂದೆ, ವೃಕ್ಷ ಲತೆಗಳ ಕುಸುಮ ಫಲ ಸಮೃದ್ಧಿಗಳಿಂದಂ=[ಅಲ್ಲಲ್ಲಿ ಪುಣ್ಯಾಶ್ರಮದ ಮುನಿಗಳಿಂದ ಶೋಬಿಸುತ್ತಿತ್ತು; ಕರಡಿ,ಕಪಿಗಳ ಗುಂಪಿನ ವಿವಿಧ ಚೇಷ್ಟೆಗಳಿಂದ ಮರಬಳ್ಳಿಗಳ, ಹೂವು ಹಣ್ಣುಗಳ ಸಮೃದ್ಧಿಗಳಿಂದ]; ಅಕ್ಷಿಗೆ ಅಚಲೇಂದ್ರಮ್ ಎಸೆದಿರ್ದುದು ಪುಳಿಂದಿಯರ ತನುಬಂಧ ಬಂಧುರದೊಳು=[ಕೂಡಿದ, ಸುಂದರಕಾಯದ ಕಿರಾತರು ನೆಲಸಿರುವ ವಿಂಧ್ಯಪರ್ವತವು ಕಣ್ಣಿಗೆ ಕಾಣಿಸಿತು.].
  • ತಾತ್ಪರ್ಯ:ವಿಂದ್ಯ ಪರ್ವತದಲ್ಲಿ,ಪಕ್ಷಿ ಮೃಗಜಾತಿಗಳು ಬಹಳ ಆನಂದದಿಂದ ಒಟ್ಟಾಗಿ ಆಡುತ್ತಿರಲು (ರಮಿಸುತಿಹ) ಯಕ್ಷ ಕಿನ್ನರ ಕಿಂಪುರುಷ ಗಂಧರ್ವ ರಕ್ಷೋಗಣಗಳಿಂದ ತುಂಬಿತ್ತು;ಅಲ್ಲಲ್ಲಿ ಪುಣ್ಯಾಶ್ರಮದ ಮುನಿಗಳಿಂದ ಶೋಬಿಸುತ್ತಿತ್ತು; ಕರಡಿ,ಕಪಿಗಳ ಗುಂಪಿನ ವಿವಿಧ ಚೇಷ್ಟೆಗಳಿಂದ ಮರಬಳ್ಳಿಗಳ, ಹೂವು ಹಣ್ಣುಗಳ ಸಮೃದ್ಧಿಗಳಿಂದ ಕೂಡಿದ, ಸುಂದರಕಾಯದ ಕಿರಾತರು ನೆಲಸಿರುವ ವಿಂಧ್ಯಪರ್ವತವು ಕಣ್ಣಿಗೆ ಕಾಣಿಸಿತು.

(ಪದ್ಯ - ೪)

ಪದ್ಯ :-:೫:[ಸಂಪಾದಿಸಿ]

ಅಭಿಲಾಷೆಯಂತಿರೆ ಸದಾನವಂ ಸಿರಿಯಂತೆ | ವಿಭವಾಸ್ಪದಂ ಕಲಾ ನಿಧಿಯಂತೆ ಮೃಗಧರಂ | ನಭದಂತೆ ಕುಜಯುತರ ದ್ವಿಜನಂತೆ ವಂಶ ಪರಿಶೋಭಿತಂ ಸ್ವರ್ಗದಂತೆ ||
ಶುಭ ಸುರಭಿ ಸಂಭೃತಂ ರಣದಂತೆ ಶರವೃತಂ | ಸಭೆಯಂತೆ ಚಿತ್ರ ಪತಾ ನಿವತಂ ದಿನಕರ | ಪ್ರಭೆಯಂತೆ ಪುಂಡರೀಕೊಲ್ಲಾಸಕರಮಾಗಿ ತಚ್ಛೈಲಮೆಸೆದಿರ್ದುದು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಭಿಲಾಷೆಯಂತಿರೆ ಸದಾನವಂ= ಅಪೇಕ್ಷೆಯಂತೆ ಸದಾ ನವ/ಹೊಸದು//ಸ ದಾನವ-ರಾಕ್ಷಸರಿಧ ಕೂಡಿದ್ದು; ಸಿರಿಯಂತೆ ವಿಭವ ಆಸ್ಪದಂ=ಸಿರಿ-ಲಕ್ಷ್ಮಿಯಂತೆ ಐಶ್ವರ್ಯವುಳ್ಳದ್ದು//(ಸಿರಿ=ಪುಣ್ಯ) ವಿ ಭವ-ಸಂಸಾರದಿಂದ ದೂರವಾದ ಮುನಿಗಳಿಂದ ಕೂಡಿದ್ದು, ಕಲಾ(ಆಶ್ರಯ)ನಿಧಿ(ಚಂದ್ರ)ಯಂತೆ ಮೃಗಧರಂ=ಚಂದ್ರನಂತೆ ಮೃಗವುಳ್ಳದ್ದು//ನೆಲೆ ವೀಡಾಗಿ ಮೃಗಗಳಿಗೆ ಆಶ್ರಯವು, ನಭದಂತೆ ಕುಜಯುತರ= ಆಕಾಸದಂತೆ ಕುಜವಿರುವವನು//ಮರಗಳಿಂದ ಕೋಡಿದವನು; ದ್ವಿಜನಂತೆ ವಂಶ ಪರಿಶೋಭಿತಂ= ಬ್ರಾಹ್ಮಣನಂತೆ ವಂಶ ಶೋಭಿತನು//ವಂಶವೆಂಬ ಮರುಳ್ಳವನು; ಸ್ವರ್ಗದಂತೆ ಶುಭ ಸುರಭಿ ಸಂಭೃತಂ=ಕಾಮಧೇನು ಸ್ವರ್ಗದಲ್ಲಿರುವಂತೆ, ಇಲ್ಲಿ ವಸಂತ ಋತು-,ಚಂದನದ ಪರಿಮಳ ಇದೆ; ರಣದಂತೆ ಶರವೃತಂ=ಯುಧ್ಧಭೂಮಿಯಂತೆ ಬಾಣ/ಶರವಿದೆ- ಇಲ್ಲಿ ಅದೇ ಶರದೃತುವಿದೆ; ಸಭೆಯಂತೆ ಚಿತ್ರ ಪತ್ರಾನ್ವಿತಂ=ಎಲೆಗಳಿಂದ ಅಲಂಕರಿದ ಸಭೆಯಂತಿದೆ- ಇಲ್ಲಿಯೂ ಹಸಿರೆಲೆಗಳಿವೆ. ದಿನಕರ ಪ್ರಭೆಯಂತೆ(ಸೂರ್ಯ) ಪುಂಡರೀಕ ಉಲ್ಲಾಸಕರಮಾಗಿ= ಸೂರ್ಯನಂತೆ ಕಮಲಗಳನ್ನು ಅರಳಿಸುವನು; ಹೀಗೆ ಆವಿಂಧ್ಯವು ಶೋಭಾಯಮಾನವಾಗಿತ್ತು.
  • ತಾತ್ಪರ್ಯ:ಅಪೇಕ್ಷೆಯಂತೆ ಸದಾ ನವ/ಹೊಸದು//ಸ ದಾನವ-ರಾಕ್ಷಸರಿಧ ಕೂಡಿದ್ದು; ಸಿರಿ-ಲಕ್ಷ್ಮಿಯಂತೆ ಐಶ್ವರ್ಯವುಳ್ಳದ್ದು//(ಸಿರಿ=ಪುಣ್ಯ) ವಿ ಭವ-ಸಂಸಾರದಿಂದ ದೂರವಾದ ಮುನಿಗಳಿಂದ ಕೂಡಿದ್ದು, ಚಂದ್ರನಂತೆ ಮೃಗವುಳ್ಳದ್ದು//ನೆಲೆ ವೀಡಾಗಿ ಮೃಗಗಳಿಗೆ ಆಶ್ರಯವು, ಆಕಾಶದಂತೆ ಕುಜವಿರುವವನು//ಮರಗಳಿಂದ ಕೋಡಿದವನು; ಬ್ರಾಹ್ಮಣನಂತೆ ವಂಶ ಶೋಭಿತನು//ವಂಶವೆಂಬ ಮರುಳ್ಳವನು; ಕಾಮಧೇನು ಸ್ವರ್ಗದಲ್ಲಿರುವಂತೆ, ಇಲ್ಲಿ ವಸಂತ ಋತು ಇದೆ-,ಚಂದನದ ಪರಿಮಳ ಇದೆ; ಯುಧ್ಧಭೂಮಿಯಂತೆ ಬಾಣ/ಶರವಿದೆ- ಇಲ್ಲಿ ಅದೇ ಶರದೃತುವಿದೆ; ಎಲೆಗಳಿಂದ ಅಲಂಕರಿದ ಸಭೆಯಂತಿದೆ- ಇಲ್ಲಿಯೂ ಹಸಿರೆಲೆಗಳಿವೆ. ಸೂರ್ಯನಂತೆ ಇಲ್ಲಿಯೂ ಕಮಲಗಳನ್ನು ಅರಳಿಸುವನು; ಹೀಗೆ ಆವಿಂಧ್ಯವು ಶೋಭಾಯಮಾನವಾಗಿತ್ತು.

(ಪದ್ಯ - ೫)XVIII

ಪದ್ಯ :-:೬:[ಸಂಪಾದಿಸಿ]

ನಾಗಭೂಷಣನಾಗಿ ಶಿವನಲ್ಲ ಹರಿಗಿರ್ಕೆ | ಯಾಗಿ ಪಾಲ್ಗಡಲಲ್ಲ ಶಿಖಿ ನಿವಾಸಸ್ಥಾನ | ಮಾಗಿ ದಿಗ್ಭಾಗಮಲ್ಲಷ್ಟಾಪದೋದ್ಭಾಸಮಾಗಿ ನೈಪಥ್ಯಮಲ್ಲ ||
ಗೋ ಗಣಾನ್ವಿತಮಾಗಿ ವ್ರಜಮಲ್ಲ ಖಡ್ಗಧರ | ನಾಗಿ ಪಟುಭಟನಲ್ಲ ಮಹಿಷೀ ವಿಲಾಸಕರ | ಮಾಗಿ ನೃಪಗೇಹಮಲ್ಲೆನಿಸಿರ್ದುದಾಶ್ಚರ್ಯ ಸಾಂದ್ರಮಚಲೇಂದ್ರವೆಸೆದು||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಂಧ್ಯ ಪರ್ವತವು, ನಾಗಭೂಷಣನಾಗಿ ಶಿವನಲ್ಲ= ಹಾವುಗಳನ್ನು ಧರಿಸಿದ್ದರೂ ಶಿವನಲ್ಲಿ; ಹರಿಗಿರ್ಕೆಯಾಗಿ ಪಾಲ್ಗಡಲಲ್ಲ= ಹರಿ-ಎಣದರೆ ಸಿಂಹ ಮೊದಲಾದವಿದ್ದರೂ,ಕ್ಷೀರಸಮುದ್ರವು ಅಲ್ಲ; ಶಿಖಿ(ಅಗ್ನಿ, ನವಿಲು) ನಿವಾಸಸ್ಥಾನ ಮಾಗಿ ದಿಗ್ಭಾಗಮಲ್ಲ=ಶಿಖಿ ಇದ್ದರೂ ಇದು ಆಗ್ನೇಯ ದಿಕ್ಕಲ್ಲ; ಅಷ್ಟ ಆಪದೋದ್ಭಾಸಗಳ ಉದ್ಭಾಸಮಾಗಿ ನೈಪಥ್ಯಮಲ್ಲ=[ಅಷ್ಟ ಆಪದ ಉದ್ಭಾಸಮಾಗಿ= ಆಭರಣಗಳು /ಶರಭಪಕ್ಷಿ- ಅಷ್ಟಪದಿ ಜೀವಿಗಳು? ನೈಪಥ್ಯವಲ್ಲ- ಆಭರಣವಲ್ಲ,ಅಷ್ಟಪದಿ ಜೀವಿಗಳಿಗೆ ಆಶ್ರಯ?]; ಗೋ ಗಣ ಆನ್ವಿತಮಾಗಿ ವ್ರಜಮಲ್ಲ=[ಗೋವುಗಳ ಹಿಂಡು ಇದ್ದರೂ ದೊಡ್ಡಿಯಲ್ಲ; ಖಡ್ಗಧರನಾಗಿ ಪಟುಭಟನಲ್ಲ=[ಆದರೆ ಖಡ್ಗಮೃಗವಿರುವುದರಿಂದ ಖಡ್ಗಧರ, ಖಡ್ಗ ಹಿಡಿದಿದ್ದರೂ ಯೋಧನಲ್ಲ ]; ಮಹಿಷೀ ವಿಲಾಸಕರ ಮಾಗಿ ನೃಪಗೇಹಮಲ್ಲ=[ ಮಹಿಷೀ/ರಾಣಿಯರಿದ್ದರೂ ಅರಮನೆಯ ಅಂತಃಪುರವಲ್ಲ, ಏಕೆಂದರೆ ಕಾಡೆಮ್ಮೆಗಳವೆ ಅಷ್ಟೆ,] ಎನಿಸಿರ್ದುದು ಆಶ್ಚರ್ಯ ಸಾಂದ್ರಂ(ನಿಬಿಡ) ಅಚಲೇಂದ್ರವು(ವಿಂಧ್ಯಪರ್ವತ) ಎಸೆದು=[ನಿಬಿಡವಾದ ವಿಂಧ್ಯಪರ್ವತವು ಆಶ್ಚರ್ಯಕರವಾಗಿ ಶೋಭಿಸುತ್ತಿತ್ತು].
  • ತಾತ್ಪರ್ಯ:ಹಾವುಗಳನ್ನು ಧರಿಸಿದ್ದರೂ ಶಿವನಲ್ಲ, ಹಾವಿನ ವಾಸಸ್ಥಳ; ಹರಿಯ ವಾಸವಾದರೂಸ್ಥಾನ ಕ್ಷೀರಸಮುದ್ರವು ಅಲ್ಲ, ಹರಿ-ಎಂದರೆ ಸಿಂಹಗಳಿವೆ; ಶಿಖಿ ಇದ್ದರೂ ಇದು ಆಗ್ನೇಯ ದಿಕ್ಕಲ್ಲ,ನವಿಲುಗಳಿವೆ; ಅಷ್ಟ ಆಪದ ಉದ್ಭಾಸಮಾಗಿದ್ದರು ನೈಪಥ್ಯವಲ್ಲ ಎಂದರೆ ಆಭರಣವಲ್ಲ,ಅಷ್ಟಪದಿ ಜೀವಿಗಳಿಗೆ ಆಶ್ರಯ[?]/ಶರಭಪಕ್ಷಿಗಳಿವೆ; ಗೋವುಗಳ ಹಿಂಡು ಇದ್ದರೂ ದೊಡ್ಡಿಯಲ್ಲ, ಗೋ ಎಂದರೆ ನೀರಿನ ಹೊಂಡಗಳಿವೆ; ಖಡ್ಗಮೃಗವಿರುವುದರಿಂದ ಖಡ್ಗಧರ, ಖಡ್ಗ ಇದ್ದರೂ ಯೋಧನಲ್ಲ; ಮಹಿಷೀ/ರಾಣಿಯರಿದ್ದರೂ ಅರಮನೆಯ ಅಂತಃಪುರವಲ್ಲ, ಏಕೆಂದರೆ ಕಾಡೆಮ್ಮೆಗಳವೆ ಅಷ್ಟೆ, ಹೀಗೆ ನಿಬಿಡವಾದ ವಿಂಧ್ಯಪರ್ವತವು ಆಶ್ಚರ್ಯಕರವಾಗಿ ಶೋಭಿಸುತ್ತಿತ್ತು.(ದ್ವಂದ್ವಾರ್ಥ ಪದ ಚಮತ್ಕಾರ)

(ಪದ್ಯ - ೬)

ಪದ್ಯ :-:೭:[ಸಂಪಾದಿಸಿ]

ಶೃಂಗಮಯಮುರುಶಿಲಾ ಸಂಗಮಯಮಧಿಕ ಮಾ | ತಂಗಮಯಮನುಪಮಭುಜಂಗಮಯಮುನ್ನತ(ಪ್ಲ)ಲ | ಮಂಗಮಯಮಮಿತ ಸಾರಂಗಮಯದ್ಭುತದ ಸಿಂಗಮಯ ಶರಭಮಯವು ||
ಭೃಂಗಮಯಮವಿರಳ ವಿಹಂಗಮಯಮೊಪ್ಪುವ ಕು | ರಂಗಮಯಮಮರಿಯರನಂಗಮಯ ಕೇಳಿಗಳ | ಸಂಗಮಯಮೆನಿಪ ಗಿರಿಭಂಗಮಯಮಲ್ಲದುತ್ತುಂಗಮಯ ಮಾಗಿರ್ದುದು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶೃಂಗಮಯಂ ಉರುಶಿಲಾ ಸಂಗಮಯಂ ಅಧಿಕ ಮಾತಂಗಮಯಂ ಅನುಪಮಭುಜಂಗಮಯಂ ಉನ್ನತ (ಪ್ಲ)ಲಮಂಗಮಯಂ=[ಕೋಡುಗಲ್ಲುಗಳಿಂದ ತುಂಬಿದೆ- ಮಯವು, ಬಹಳ ಕಲ್ಲುಗಳ ಮಯವು, ಬಹಳ ಆನೆಗಳ ಮಯವು, ಸುಂದರ ಸರ್ಪಗಳಮಯವು, ಉನ್ನತ (ಪ್ಲ)ಲಮಂಗ]ಕಪಿಗಳಮಯವು ಅಥವಾ ಲವಂಗ ಮರಗಳ /ಜಿಂಕೆಗಳ ಮಯವು;]; ಮಿತ ಸಾರಂಗಮಯಂ ಅದ್ಭುತದ ಸಿಂಗಮಯ ಶರಭಮಯವು ಭೃಂಗಮಯಮ ವಿರಳ ವಿಹಂಗ ಮಯಮು ಒಪ್ಪುವ ಕುರಂಗಮಯಮ್ ಅಮರಿಯರ ಅನಂಗಮಯ ಕೇಳಿಗಳ ಸಂಗಮಯ=[ಬಹಳ ಕಡವೆ /ಕದಂಬ ವೃಕ್ಷ ಮಯ, ಅದ್ಭುತದ ಸಿಂಗ/ ಸಿಂಹ/ಕಪ್ಪು ಮೂತಿಯ ಕಪಿ ಮಯವು, ಜೇಡ,ಶರಭ ಎಂಬ ವಿಚಿತ್ರ ಪ್ರಾಣಿಯ (ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ) ಮಯವು ಭೃಂಗ /ಜೇನು ಮಯವು, ಅವಿರಳ ವಿಹಂಗ/ಪಕ್ಷಿಗಳ ಮಯವು, ಒಪ್ಪುವ ಹುಲ್ಲೆಗಳ (ಕುರಂಗ)ಮಯವು, ದೇವಕನ್ಯೆಯರ ಮನ್ಮಥ ಕೇಳಿಗಳ ಸಂಗಮದಕೂಡುವಿಕೆಯ ಮಯ; ಎನಿಪ ಗಿರಿಯು ಭಂಗಮಯಂ ಅಲ್ಲದ ಉತ್ತುಂಗಮಯ ಮಾಗಿರ್ದುದು=[ಈ ರೀತಿ ಇರುವ ವಿಂದ್ಯಪರ್ವತಗಳು, ಭಂಗ/ದೋಷಗಳಿಲ್ಲದ ಎತ್ತರ ಗಿರಿಗಳಮಯ ಮಾಗಿತ್ತು].
  • ತಾತ್ಪರ್ಯ:ವಿಂಧ್ಯವು ಕೋಡುಗಲ್ಲುಗಳಿಂದ ತುಂಬಿದೆ- ಮಯವು, ಬಹಳ ಕಲ್ಲುಗಳ ಮಯವು, ಬಹಳ ಆನೆಗಳ ಮಯವು, ಸುಂದರ ಸರ್ಪಗಳಮಯವು, ಉನ್ನತ (ಪ್ಲ)ಲಮಂಗ] ಕಪಿಗಳಮಯವು ಅಥವಾ ಲವಂಗ ಮರಗಳ /ಜಿಂಕೆಗಳ ಮಯವು; ಬಹಳ ಕಡವೆ /ಕದಂಬ ವೃಕ್ಷ ಮಯ, ಅದ್ಭುತದ ಸಿಂಗ/ ಸಿಂಹ/ಕಪ್ಪು ಮೂತಿಯ ಕಪಿ ಮಯವು, ಜೇಡ,ಶರಭ ಎಂಬ ವಿಚಿತ್ರ ಪ್ರಾಣಿಯ (ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ) ಮಯವು, ಭೃಂಗ /ಜೇನು ಮಯವು, ಅವಿರಳ ವಿಹಂಗ/ಪಕ್ಷಿಗಳ ಮಯವು, ಒಪ್ಪುವ ಹುಲ್ಲೆಗಳ (ಕುರಂಗ)ಮಯವು, ದೇವಕನ್ಯೆಯರ ಮನ್ಮಥ ಕೇಳಿಗಳ ಸಂಗಮದ/ ಕೂಡುವಿಕೆಯ ಮಯ; ಈ ರೀತಿ ಇರುವ ವಿಂದ್ಯಪರ್ವತಗಳು, ಭಂಗ/ದೋಷಗಳಿಲ್ಲದ ಎತ್ತರ ಗಿರಿಗಳಮಯ ಮಾಗಿತ್ತು.

(ಪದ್ಯ - ೭)

ಪದ್ಯ :-:೮:[ಸಂಪಾದಿಸಿ]

ಬಹು ಕಾಲಮೆನಗೆ ನೀರ್ಮಳೆಗೆರೆದ ಪುರುಷಾರ್ಥಾ | ಕಹಹ ಮೃದ್ಬಿಂದುಗಳನೀಗ ಸುರಿದಪೆನೆಂದು | ಮಹಿ ನಭಸ್ಥಳಕೂಧ್ರ್ವಮುಖಮಾಗಿ ಸೂಸುವ ರಜದಸೋನೆಯೆನೆ ದೂಳಿಡೆ ||
ಬಹುಳ ತರು ಗುಲ್ಮಲತೆ ಮೃಗ ಪಕ್ಷಿ ಕ್ರಿಮಿ ಕೀಟ | ಗುಹೆ ದೊಣೆ ಮೊರಡಿ ಪಳ್ಳ ಕೊಳ್ಳ ಜರಿ ಸರಿ ಜಲುಗು | ಗಹನ ಗಹ್ವರದ ವಿಂಧ್ಯಾದ್ರಿಯಂ ಫಲುಗುಣನ ಸೇನೆ ತುಳಿದಸಿಯರೆದುದು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಹು ಕಾಲಂ ಎನಗೆ ನೀರ್ಮಳೆಗೆರೆದ ಪುರುಷಾರ್ಥಾಕೆ ಅಹಹ ಮೃದ್ಬಿಂದುಗಳನು ಈಗ ಸುರಿದಪೆನು ಎಂದು=[ಬಹಳ ಕಾಲ ತನಗೆ ನೀರಿನ ಮಳೆಗೆರೆದ ಆಕಾಶದ ಉಪಕಾರಕ್ಕೆ/ ಪ್ರಯೋಜನಕ್ಕೆ ಆನಂದದಿಂದ ಅಹಹ ಮಣ್ಣಿನ ಬಿಂದುಗಳನ್ನು ಈಗ ಸುರಿಯುವೆನು ಎಂದು]; ಮಹಿ ನಭಸ್ಥಳಕೆ ಊಧ್ರ್ವಮುಖಮಾಗಿ ಸೂಸುವ ರಜದಸೋನೆಯೆನೆ ದೂಳಿಡೆ=[ಭೂಮಿಯು ಆಕಾಶಕ್ಕೆ ಮೇಲ್ಮುಖವಾಗಿ ಸೂಸುವ/ ಸುರಿಸುವ ರಜದಸೋನೆಯೋ (ಧೂಳಿನ ಮಳೆ) ಎನ್ನುವಂತೆನ ದೂಳು ಹಾರುತ್ತಿರಲು];

ಬಹಳ ತರು ಗುಲ್ಮ(ಪೊದೆ) ಲತೆ ಮೃಗ ಪಕ್ಷಿ ಕ್ರಿಮಿ ಕೀಟ ಗುಹೆ ದೊಣೆ(ತಗ್ಗು) ಮೊರಡಿ ಪಳ್ಳ(ಹಳ್ಳ) ಕೊಳ್ಳ ಜರಿ ಸರಿ ಜಲುಗು(ಜಲ) ಗಹನ ಗಹ್ವರ(ಗುಹೆ)ದ ವಿಂಧ್ಯ ಅದ್ರಿಯ(ಬೆಟ್ಟ)ವನ್ನು ಫಲ್ಗುಣನ ಸೇನೆ ಹತ್ತಿ ಅಸಿ(ಕ್ಷಯಿಸು) ಆಯಾಸಪಟ್ಟಿತು.

  • ತಾತ್ಪರ್ಯ:(ಭೂಮಿಯು) ಬಹಳ ಕಾಲ ತನಗೆ ನೀರಿನ ಮಳೆಗೆರೆದ ಆಕಾಶದ ಉಪಕಾರಕ್ಕೆ/ ಪ್ರಯೋಜನಕ್ಕೆ ಆನಂದದಿಂದ ಅಹಹ ಮಣ್ಣಿನ ಬಿಂದುಗಳನ್ನು ಈಗ ಸುರಿಯುವೆನು ಎಂದು, ಭೂಮಿಯು ಆಕಾಶಕ್ಕೆ ಮೇಲ್ಮುಖವಾಗಿ ಸೂಸುವ/ ಸುರಿಸುವ ರಜದ ಸೋನೆಯೋ (ಧೂಳಿನ ಮಳೆಯೋ) ಎನ್ನುವಂತೆನ ದೂಳು ಹಾರುತ್ತಿರಲು, ಬಹಳ ತರು ಪೊದೆ ಲತೆ ಮೃಗ ಪಕ್ಷಿ ಕ್ರಿಮಿ ಕೀಟ ಗುಹೆ ತಗ್ಗು ಮೊರಡಿ ಹಳ್ಳ ಕೊಳ್ಳ ಜರಿ ಸರಿ ಜಲಗುಹೆ ವಿಂಧ್ಯ ಪರ್ವತವನ್ನು ಫಲ್ಗುಣನ ಸೇನೆ ಹತ್ತಿ ಆಯಾಸಪಟ್ಟಿತು.

(ಪದ್ಯ - ೮)

ಪದ್ಯ :-:೯:[ಸಂಪಾದಿಸಿ]

ಹರಿಯ ಸೇವಕರ ಬರವಂ ಕಾಣುತಾ ವಿಂಧ್ಯ | ಗಿರಿಯ ದುರ್ಮಾರ್ಗಮುಂ ಸನ್ಮಾರ್ಗಮಾಯ್ತು ದು | ರ್ಧರ ಹೃದಯವನಜಾಂಧಕಾರಮುಂ ಸುಪ್ರಕಾಶಿತವಾಯ್ತು ವಿಕೃತಿಯಡಗಿ ||
ಉರುತರ ಪ್ರಭವದವಮುಕ್ತ ಭಾವಿತಮಾಯ್ತು | ನಿರುಪಮಾಶಾ ಪರಿಜ್ಞಾನಮಾಯ್ತಿರದೆ ಗೋ | ಚರಮಾಯ್ತು ವಿಷ್ಣುಪದಮೆನೆನಡೆದುದಾ ಹಯಂ ಬೆಂಬಿಡದ ಸೇನೆಸಹಿತ ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹರಿಯ ಸೇವಕರ ಬರವಂ ಕಾಣುತಾ ವಿಂಧ್ಯ ಗಿರಿಯ ದುರ್ಮಾರ್ಗಮುಂ ಸನ್ಮಾರ್ಗಮಾಯ್ತು=[ಹರಿಯ ಸೇವಕರು ಬರುವುದನ್ನು ಕಂಡು ವಿಂಧ್ಯ ಗಿರಿಯ ದುರ್ಮಾರ್ಗವು/ ಕಷ್ಟದ ದಾರಿ ಸುಭದ ದಾರಿಯಾಯಿತು, ಕೆಟ್ಟದಾರಿಯಲ್ಲಿದ್ದು ಧರ್ಮಮಾರ್ಗಕ್ಕೆ ಬಂತು,]; ದುರ್ಧರ ಹೃದಯವನಜ(ಹೃದ್ವನಜ) ಅಂಧಕಾರಮುಂ ಸುಪ್ರಕಾಶಿತವಾಯ್ತು ವಿಕೃತಿಯಡಗಿ ಉರುತರ ಪ್ರಭವದ ಅವಮುಕ್ತ ಭಾವಿತಮಾಯ್ತು=[ಸಹಿಸಲು ಆಗದ ಹೃದಯಕಮಲದ ಅಂಧಕಾರವು/ ಕತ್ತಲೆಯು ಸುಪ್ರಕಾಶವುಳ್ಳದ್ಧಾಯಿತು. ವಿಕೃತಿಯಡಗಿ ಪ್ರಕೃತಿಯ ಕ್ರೂರತೆ ಹೋಗಿ ಉತ್ತಮ ಪ್ರಭಾವದ ಪ್ರಕಾಶಿತವಳ್ಳದ್ದಾಯಿತು.]; ನಿರುಪಮ ಆಶಾ(ದಿಕ್ಕು) ಪರಿಜ್ಞಾನಮಾಯ್ತ ಇರದೆ ಗೋಚರಮಾಯ್ತು ವಿಷ್ಣುಪದಮೆನೆ ನಡೆದುದಾ ಹಯಂ ಬೆಂಬಿಡದ ಸೇನೆಸಹಿತ=[ಸ್ಪಷ್ಟವಾದ ಗುರಿಯುಳ್ಳ ಅನಮಾನವಿಲ್ಲದ ವಿಶೇಷ ಜ್ಞಾನದಿಂದ ಗೋಚರವಾದ ವಿಷ್ಣುಪದದ ಜ್ಞಾನಪಡೆದವರು ನಡೆಯವಂತೆ, ಆ ಕುದುರೆಯು ಹಿಂಬಾಲಿಸುವ ಸೇನೆ ಸಹಿತ ನಡೆಯಿತು.]
  • ತಾತ್ಪರ್ಯ:ಹರಿಯ ಸೇವಕರು ಬರುವುದನ್ನು ಕಂಡು ವಿಂಧ್ಯ ಗಿರಿಯ ದುರ್ಮಾರ್ಗವು/ ಕಷ್ಟದ ದಾರಿ ಸುಲಭದ ದಾರಿಯಾಯಿತು, ಕೆಟ್ಟದಾರಿಯಲ್ಲಿದ್ದುದು ಧರ್ಮಮಾರ್ಗಕ್ಕೆ ಬಂತು, ಸಹಿಸಲು ಆಗದ ಹೃದಯಕಮಲದ ಅಂಧಕಾರವು/ ಕತ್ತಲೆಯು ಸುಪ್ರಕಾಶವುಳ್ಳದ್ಧಾಯಿತು. ವಿಕೃತಿಯಡಗಿ ಪ್ರಕೃತಿಯ ಕ್ರೂರತೆ ಹೋಗಿ ಉತ್ತಮ ಪ್ರಭಾವದ ಪ್ರಕಾಶಿತವಳ್ಳದ್ದಾಯಿತು. ಸ್ಪಷ್ಟವಾದ ಗುರಿಯುಳ್ಳ ಅನಮಾನವಿಲ್ಲದ ವಿಶೇಷ ಜ್ಞಾನದಿಂದ ಗೋಚರವಾದ ವಿಷ್ಣುಪದದ ಜ್ಞಾನಪಡೆದವರು ನಡೆಯವಂತೆ, ಆ ಕುದುರೆಯು ಹಿಂಬಾಲಿಸುವ ಸೇನೆ ಸಹಿತ ನಡೆಯಿತು.

(ಪದ್ಯ - ೯)

ಪದ್ಯ :-:೧೦:[ಸಂಪಾದಿಸಿ]

ಮಂದಿ ಸಂದಣೀಸಿ ಬೆಂಕೊಂಡು ನಡೆತೆರ ಕುದುರೆ | ಮುಂದೆ ಬರೆಬರೆ ಕಂಡುದೊಂದು ಯೋಜನದಗಲ | ದಿಂದೆಸೆವೆ ಶಿಲೆಯನದರೊಳ್ ಪೊರಳ್ದಪೆನೆಂಬ ತವಕದಿಂದತಿಭರದೊಳು ||
ಬಂದಡರ್ದಾ ಕಲ್ಲು ಮೇಲೆ ಹರಿ ಕಾಲಿಟ್ಟು | ದಂದು ಹರಿ ಮೆಟ್ಟಿದೊಡೆ ಪೆಣ್ಣಾದುದಂತೆ ಮೇ | ಣಿಂದಾಗದಿರ್ದಪುದೆ ಪೇಳೆಂಬಿನಂ ಮಹೀಪಾಲ ಕೇಳದ್ಭುತವನು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಂದಿ ಸಂದಣೀಸಿ ಬೆಂಕೊಂಡು ನಡೆತೆರ ಕುದುರೆ ಮುಂದೆ ಬರೆಬರೆ ಕಂಡುದೊಂದು ಯೋಜನದಗಲ ದಿಂದೆಸೆವೆ ಶಿಲೆಯನು=[ಸೈನ್ಯದ ಜನರು ಗುಂಪಾಗಿ ಅನುಸರಿಸಿ ಬರುತ್ತಿರಲು, ಕುದುರೆ ಮುಂದೆ ಬರುಬರುತ್ತಾ ಒಂದು ಯೋಜನದಗಲ ಹರಡಿದ ಶಿಲೆಯನ್ನುಕಂಡಿತು]; ಅದರೊಳ್ ಪೊರಳ್ದಪೆನೆಂಬ ತವಕದಿಂದ ಅತಿಭರದೊಳು ಬಂದಡರ್ದು ಆ ಕಲ್ಲು ಮೇಲೆ ಹರಿ ಕಾಲಿಟ್ಟುದಂದು ಹರಿ ಮೆಟ್ಟಿದೊಡೆ ಪೆಣ್ಣಾದುದು=[ಅದರಮೇಲೆ ಹೊರಳಬೇಕೆಂದು ತವಕದಿಂದ ವೇಗವಾಗಿ ಬಂದು, ಕುದುರೆ ಆ ಕಲ್ಲು ಮೇಲೆ ಹತ್ತಿ ಕಾಲಿಟ್ಟಾಗ, ಅಂದು ರಾಮನು ಕಲ್ಲು ಮೆಟ್ಟಿದಾಗ ಕಲ್ಲು ಅಹಲ್ಯೆಯಾದಂತೆ, ಮೆಟ್ಟಿದೊಡೆನೆ ಹೆಣ್ಣು ಕುದುರೆಯಾಯಿತು.];ಅಂತೆ ಮೇಣಿಂದು ಆಗದಿರ್ದಪುದೆ ಪೇಳೆಂಬಿನಂ ಮಹೀಪಾಲ ಕೇಳದ್ಭುತವನು=[ಮಹೀಪಾಲ ಕೇಳು ಅದ್ಭುತವನು, ಹರಿ(ಅಂದು ಆ ಹರಿ (ವಿಷ್ಣು) - ಇಂದು ಈ ಹರಿ -ಕುದುರೆ?)ಹಾಗೆ ಈ ಸಮಯದಲ್ಲಿ ಮೆಟ್ಟಿದಾಗ ಆಗದಿರುವುದೆ? ಹೇಳು ಎಂದನು.]
  • ತಾತ್ಪರ್ಯ:ಸೈನ್ಯದ ಜನರು ಗುಂಪಾಗಿ ಅನುಸರಿಸಿ ಬರುತ್ತಿರಲು, ಕುದುರೆ ಮುಂದೆ ಬರುಬರುತ್ತಾ ಒಂದು ಯೋಜನದಗಲ ಹರಡಿದ ಶಿಲೆಯನ್ನುಕಂಡಿತು; ಅದರ ಮೇಲೆ ಹೊರಳಬೇಕೆಂದು ತವಕದಿಂದ ವೇಗವಾಗಿ ಬಂದು, ಕುದುರೆ ಆ ಕಲ್ಲು ಮೇಲೆ ಹತ್ತಿ ಕಾಲಿಟ್ಟಾಗ, ಅಂದು ರಾಮನು ಕಲ್ಲು ಮೆಟ್ಟಿದಾಗ ಕಲ್ಲು ಅಹಲ್ಯೆಯಾದಂತೆ, ಮೆಟ್ಟಿದೊಡೆನೆ ಅದೇ ಹೆಣ್ಣು ಕುದುರೆಯಾಯಿತು. ಮಹೀಪಾಲ ಕೇಳು ಅದ್ಭುತವನು, ಹರಿ(ಅಂದು ಹಾಗೆ ಆ ಹರಿ (ವಿಷ್ಣು) - ಇಂದು ಈ ಹರಿ -ಕುದುರೆ?) ಈ ಸಮಯದಲ್ಲಿ ಮೆಟ್ಟಿದಾಗ ಆಗದಿರುವುದೆ? ಹೇಳು ಎಂದನು.]

(ಪದ್ಯ - ೧೦)

ಪದ್ಯ :-:೧೧:[ಸಂಪಾದಿಸಿ]

ಕಾಲಿಡಲ್ಕಾ ಶಿಲೆಯೊಳಾ ತುಂರಗದ ಖುರಂ | ಕೀಲಿಸಿತು ಭಿನ್ನಿಸದೆ ಕೂಡೆ ಬೆಚ್ಚಂದದಿಂ | ಮೇಲೆ ನಡೆಗೆಟ್ಟು ನಿಂದುದು ದರಿದ್ರನ ಮನೊರಥದಂತೆ ನಿಜ ತನುವಿನ |
ಲೀಲೇಯಡಗಿರ್ದುರ್ದುದಾಕೃತಿಯ ಭಂಜಿಕೆಯೆನಲ್ | ಭೂಲೋಲ ಕೇಳೈಕ್ಯಮಾಗಿರ್ದುದಾ ಕಲ್ಲೊ | ಳಾ ಲಲಿತ ವಾಜಿ ಪೂರ್ಣೇಂದು ಮಂಡಲದೊಳೊಪ್ಪುವ ಮೃಗಾಂಕದ ತೆರದೊಳು | |11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಲಿಡಲ್ಕೆ ಆ ಶಿಲೆಯೊಳ ಆ ತುಂರಗದ ಖುರಂ ಕೀಲಿಸಿತು ಭಿನ್ನಿಸದೆ ಕೂಡೆ=[ಆ ಕಲ್ಲು ಹಾಸಿನ ಮೇಲೆ ಕಾಲಿಡಲು, ಆ ಶಿಲೆಯಲ್ಲಿ ಆ ತುಂರಗದ ಖುರವು/ ಗೊರಸು ಕೀಲಿಸಿ ಅಂಟಿಕೊಂಡಿತು; ಸಂದಿಲ್ಲದಂತೆ ಕೂಡಿತ್ತು.]; ಬೆಚ್ಚಂದದಿಂ -ಗದ್ದೆಯ ಬೆದರುಗೊಂಬೆಯಂತೆ (ಬೆಚ್ಚಿನ ಅಂದದಿಂದ/ ರೀತಿಯಲ್ಲಿ) ಮೇಲೆ ನಡೆಗೆಟ್ಟು ನಿಂದುದು ದರಿದ್ರನ ಮನೊರಥದಂತೆ=[ಗದ್ದೆಯ ಬೆದರುಗೊಂಬೆಯಂತೆ ಕಲ್ಲಿನ ಮೇಲೆ ನಡೆಯಲಾಗದೆ ಬಡವನ ಬಯಕೆಯಂತೆ ನಿಂತಿತು;]; ನಿಜ ತನುವಿನ ಲೀಲೇಯಡಗಿರ್ದುದಾಕೃತಿಯ ಭಂಜಿಕೆಯೆನಲ್ ಭೂಲೋಲ ಕೇಳೈಕ್ಯಮಾಗಿರ್ದುದಾ ಕಲ್ಲೊಳು ಆ ಲಲಿತ ವಾಜಿ ಪೂರ್ಣೇಂದು ಮಂಡಲದೊಳು ಒಪ್ಪುವ ಮೃಗಾಂಕದ ತೆರದೊಳು =[ಅದರ ದೇಹದ ಚಲನೆಗಳೆಲ್ಲಾ ನಿಂತುಹೋಯಿತು, ಕುದುರೆಯರೂಪದ ಗೊಂಬೆಯಂತೆ ನಿಂತಿತು; ರಾಜನೇ ಕೇಳು ಆ ಕಲ್ಲಿನಲ್ಲಿ ಆ ಸುಂದರ ಕುದುರೆ ಪೂರ್ಣಿಮೆಯ ಚಂದ್ರನ ಒಳಗಿರುವ ಜಿಂಕೆಯಂತೆ ಐಕ್ಯವಾಗಿತ್ತು.]
  • ತಾತ್ಪರ್ಯ:ಆ ಕಲ್ಲು ಹಾಸಿನ ಮೇಲೆ ಕಾಲಿಡಲು, ಆ ಶಿಲೆಯಲ್ಲಿ ಆ ಕುದುರೆಯ ಖುರವು/ ಗೊರಸು ಕೀಲಿಸಿ ಅಂಟಿಕೊಂಡಿತು; ಸಂದಿಲ್ಲದಂತೆ ಕೂಡಿತ್ತು. ಗದ್ದೆಯ ಬೆದರುಗೊಂಬೆಯಂತೆ ಕಲ್ಲಿನ ಮೇಲೆ ನಡೆಯಲಾಗದೆ, ಬಡವನ ಬಯಕೆಯಂತೆ, ನಿಂತಿತು; ಅದರ ದೇಹದ ಚಲನೆಗಳೆಲ್ಲಾ ನಿಂತುಹೋಯಿತು, ಕುದುರೆಯರೂಪದ ಗೊಂಬೆಯಂತೆ ನಿಂತಿತು; ರಾಜನೇ ಕೇಳು ಆ ಕಲ್ಲಿನಲ್ಲಿ ಆ ಸುಂದರ ಕುದುರೆ ಪೂರ್ಣಿಮೆಯ ಚಂದ್ರನ ಒಳಗಿರುವ ಜಿಂಕೆಯಂತೆ ಐಕ್ಯವಾಗಿತ್ತು.]

(ಪದ್ಯ - ೧೧)

ಪದ್ಯ :-:೧೨:[ಸಂಪಾದಿಸಿ]

ಗಾಳಿಯಂ ಮಿಕ್ಕು ನಡೆವಾ ಹಯಂ ಕಾಲ್ಗಳಂ ಕೀಳಲಾರದೆ ನಿಂದು ದರೆಯೊಳೇನಚ್ಚರಿಯೊ | ಪೇಳೆಬೇಕೆಂದು ಚರರೈ ತಂದು ಪಾರ್ಥಂಗೆ ಕೈಮುಗಿದು ಬಿನ್ನೈಸಲು ||
ಕೇಳಿವಿಸ್ಮಿತನಾಗಿ ಬಂದು ನೋಡಿದನಲ್ಲಿ | ಗಾಳನಟ್ಟಿದನಬ್ಬರಿಸಿ ಸೆಳೆಗಳಿಂದ ಪೊ | ಯ್ದೇಳಿಸಿದೊಡದು ವಜ್ರ ಲೇಪವಾದುದು ಸಿಕ್ಕಿತಾ ಕುದುರೆ ಕಲ್ಲೆಡೆಯೊಳು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಗಾಳಿಯಂ ಮಿಕ್ಕು ನಡೆವಾ ಹಯಂ ಕಾಲ್ಗಳಂ ಕೀಳಲಾರದೆ ನಿಂದು ದರೆಯೊಳು ಏನಚ್ಚರಿಯೊ ಪೇಳೆಬೇಕೆಂದು ಚರರು ಐತಂದು ಪಾರ್ಥೆಂಗೆ ಕೈಮುಗಿದು ಬಿನ್ನೈಸಲು=[ಗಾಳಿಯನ್ನೂ ಮೀರಿಸಿ ನಡೆಯುವ ಕುದುರೆ ಕಾಲುಗಳನ್ನು ಕೀಳಲಾರದೆ ಧರೆಯಲ್ಲಿ ನಿಂತಿರುವುದು ಏನು ವಿಚಿತ್ರವೋ,ಆ ವಿಷಯವನ್ನು ಹೇಳಬೇಕೆಂದು ಚಾರರು ಬಂದು ಪಾರ್ಥನಿಗೆ ಕೈಮುಗಿದು ತಿಳಿಸಲು, ]; ಕೇಳಿವಿಸ್ಮಿತನಾಗಿ ಬಂದು ನೋಡಿದನು ಅಲ್ಲಿಗೆ ಆಳನು ಅಟ್ಟಿದನು ಅಬ್ಬರಿಸಿ ಸೆಳೆಗಳಿಂದ ಪೊಯ್ದೇಳಿಸಿದೊಡದು ವಜ್ರ ಲೇಪವಾದುದು ಸಿಕ್ಕಿತಾ ಕುದುರೆ ಕಲ್ಲೆಡೆಯೊಳು=[ಅವನು ಅದನ್ನು ಕೇಳಿ ಆಶ್ಚರ್ಯಪಟ್ಟು, ಬಂದು ನೋಡಿದನು; ಅಲ್ಲಿಗೆ ಆಳುಗಳನ್ನು ಕುದುರೆಯನ್ನು ಎಬ್ಬಿಸಲು ಕಳಿಸಿದನು. ಅವರು ಅಬ್ಬರಿಸಿ, ಚಾಟಿಗಳಿಂದ / ಸಣ್ಣಕೋಲುಸುಳಿಗಳಿಂದ ಹೊಡೆದು ಏಳಿಸಿದರೂ ಕುದುರೆ ವಜ್ರಲೇಪದಂತೆ ಕಲ್ಲೆಡೆಯಲ್ಲಿ ಸಿಕ್ಕಿತ್ತು].
  • ತಾತ್ಪರ್ಯ:ಗಾಳಿಯನ್ನೂ ಮೀರಿಸಿ ನಡೆಯುವ ಕುದುರೆ ಕಾಲುಗಳನ್ನು ಕೀಳಲಾರದೆ ಧರೆಯಲ್ಲಿ ನಿಂತಿರುವುದು ಏನು ವಿಚಿತ್ರವೋ,ಆ ವಿಷಯವನ್ನು ಹೇಳಬೇಕೆಂದು ಚಾರರು ಬಂದು ಪಾರ್ಥನಿಗೆ ಕೈಮುಗಿದು ತಿಳಿಸಲು, ಅವನು ಅದನ್ನು ಕೇಳಿ ಆಶ್ಚರ್ಯಪಟ್ಟು, ಬಂದು ನೋಡಿದನು; ಅಲ್ಲಿಗೆ ಆಳುಗಳನ್ನು ಕುದುರೆಯನ್ನು ಎಬ್ಬಿಸಲು ಕಳಿಸಿದನು. ಅವರು ಅಬ್ಬರಿಸಿ, ಚಾಟಿಗಳಿಂದ / ಸಣ್ಣಕೋಲು ಚುಳಿಕೆ(ಸೆಳೆ)ಗಳಿಂದ ಹೊಡೆದು ಏಳಿಸಿದರೂ ಕುದುರೆ ವಜ್ರಲೇಪದಂತೆ ಕಲ್ಲೆಡೆಯಲ್ಲಿ ಸಿಕ್ಕಿತ್ತು].

(ಪದ್ಯ - ೧೨)

ಪದ್ಯ :-:೧೩:[ಸಂಪಾದಿಸಿ]

ಬಳಿಕ ಚಿಂತಿಸಿದನರ್ಜುನನಿದೇನಾದೊಡಂ | ಮುಳಿದ ಮುನಿಪನ ಶಾಪಮಾಗಬೇಕೀ ವನ | ಸ್ಥಳದೊಳಾಶ್ರಮಮುಂಟೆ ನೋಳ್ಬುದಗಲದೊಳೆಂದು ಚಾರರಂ ಕಳುಹಲವರು ||
ತೊಳಲಿ ನಿಮಿಷದೊಳರಸಿ ಬಂದುಬಿನ್ನೈಸಲ್ಕೆ | ಫಲುಗುಣಂ ಪ್ರದ್ಯುಮ್ನ ವೃಷಕೇತು ಸಾಲ್ವಪತಿ | ಕಲಿಯೌವನಾಶ್ವ ನೀಲಧ್ವಜರನೈವರಂ ಕೊಡಿಕೊಂಡೈತಂದನು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಚಿಂತಿಸಿದನು ಅರ್ಜುನನು ಇದೇನು ಆದೊಡಂ ಮುಳಿದ ಮನಿಪನ ಶಾಪಮು ಆಗಬೇಕೀ=[ಬಳಿಕ ಅರ್ಜುನನು ಯೋಚಿಸಿದನು; ಇದೇನಾದರೂ ಸಿಟ್ಟಿನ ಮುನಿಯ ಶಾಪವು ಆಗಿರಬೇಕು,]; ವನಸ್ಥಳದೊಳಾಶ್ರಮಂ ಉಂಟೆ ನೋಳ್ಬುದು ಅಗಲದೊಳು ಎಂದು ಚಾರರಂ ಕಳುಹಲು=[ವನಸ್ಥಳದಲ್ಲಿ ಆಶ್ರಮವು ಉಂಟೆ ಸುತ್ತಲೂ ಹುಡುಕಿನೋಡುವುದು ಎಂದು ಚಾರರನ್ನು ಕಳುಹಿಸಲು]; ಅವರು ತೊಳಲಿ ನಿಮಿಷದೊಳರಸಿ ಬಂದುಬಿನ್ನೈಸಲ್ಕೆ ಫಲುಗುಣಂ ಪ್ರದ್ಯುಮ್ನ ವೃಷಕೇತು ಸಾಲ್ವಪತಿ ಕಲಿಯೌವನಾರ್ಶವ ನೀಲಧ್ವಜರನೈವರಂ ಕೊಡಿಕೊಂಡೈತಂದನು=[ಅವರು ತಿರುಗಾಡಿನೋಡಿ, ಸ್ವಲ್ಪಸಮಯದಲ್ಲೇ ಹುಡುಕಿ ಬಂದು ಆಶ್ರಮವಿರುವುದನ್ನು ಹೇಳಲು, ಫಲ್ಗುಣನು, ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಕಲಿಯೌವನಾಶ್ವ ನೀಲಧ್ವಜರು ಐವರನ್ನು ಕೊಡಿಕೊಂಡು ಆಶ್ರಮಕ್ಕೆ ಬಂದನು ].
  • ತಾತ್ಪರ್ಯ: ಬಳಿಕ ಅರ್ಜುನನು ಯೋಚಿಸಿದನು; ಇದೇನಾದರೂ ಸಿಟ್ಟಿನ ಮುನಿಯ ಶಾಪವು ಆಗಿರಬೇಕು, ಈ ವನಸ್ಥಳದಲ್ಲಿ ಆಶ್ರಮವು ಉಂಟೆ ಸುತ್ತಲೂ ಹುಡುಕಿನೋಡುವುದು ಎಂದು ಚಾರರನ್ನು ಕಳುಹಿಸಲು; ಅವರು ತಿರುಗಾಡಿನೋಡಿ, ಸ್ವಲ್ಪಸಮಯದಲ್ಲೇ ಹುಡುಕಿ ಬಂದು ಆಶ್ರಮವಿರುವುದನ್ನು ಹೇಳಲು, ಫಲ್ಗುಣನು, ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಕಲಿಯೌವನಾಶ್ವ ನೀಲಧ್ವಜರು, ಈ ಐದು ಜನರನ್ನು ಕೊಡಿಕೊಂಡು ಆಶ್ರಮಕ್ಕೆ ಬಂದನು.

(ಪದ್ಯ - ೧೩)

ಪದ್ಯ :-:೧೪:[ಸಂಪಾದಿಸಿ]

ವೆಗ್ಗಳಿಸರಿನ ಚಂದ್ರ ಪವನ ಶಿಖಿ ಪರ್ಜನ್ಯ | ರೊಗ್ಗಿಹವು ವೈರಮಿಲ್ಲದೆ ನಿಖಿಳ ಮೃಗಪಕ್ಷಿ | ಮೊಗ್ಗಲರ್ ಕಾಯ್ಪಣ್ತಳಿರ್ಗಳಿಂ ಬೀಯವೆಂದೆಂದುಮೆಲಾ ತರುಗಳು ||
ಸಗ್ಗದವರಂತೆ ಬೇಡಿದನೀವುವಾವಗಂ | ಸುಗ್ಗಿಯಾಗಿಹುದಾರು ಋತುಗಳುಂ ಸಲೆ ಪೆಚ್ಚಚು | ತಗ್ಗು ಶೀತೋಷ್ಣ ಸುಖದುಃಖಂಗಳೊಗೆಯದಾಶ್ರಮಮೊಂದು ಮುಂದೆಸೆದುದು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವೆಗ್ಗಳಿಸರು (ಹೆಚ್ಚುಮಾಡರು) ಇನ ಚಂದ್ರ ಪವನ ಶಿಖಿ ಪರ್ಜನ್ಯರು=[ವೆಗ್ಗಳಿಸರು ಇನ/ಸೂರ್ಯನು ಗ್ರೀಷ್ಮ- ಬೇಸಿಗೆಯಲ್ಲಿ, ಚಂದ್ರ-ವಸಂತ, ಪವನ-ಶಿಶಿರ, ಶಿಖಿ-ಹೇಮಂತ ಪರ್ಜನ್ಯರು-ವರ್ಷ‍ಋತುಗಳಲ್ಲಿ ಅತಿಮಾಡರು]; ಒಗ್ಗಿಹವು ವೈರಮಿಲ್ಲದೆ ನಿಖಿಳ ಮೃಗಪಕ್ಷಿ=[ ವೈರವಿಲ್ಲದೆ ಎಲ್ಲಾ ಮೃಗಪಕ್ಷಿಗಳು ಒಗ್ಗಿಕೊಂಡು ಒಂದಕ್ಕೊಂದು ಹೊಂದಿಕೊಂಡು ವೈರವಿಲ್ಲದೆ ಇವೆ]; ಮೊಗ್ಗಲರ್ ಕಾಯ್,ಪಣ್ಣ್ ತಳಿರ್‍ ಗಳು ಬೀಯವು ಎಂದೆಂದುಂ ಎಲಾ ತರುಗಳು=[ಮೊಗ್ಗು ಹೂವು, ಕಾಯಿ, ಹಣ್ಣು ತಳಿರುಗಳು ಬೀಯುವುದಿಲ್ಲ,ಸದಾಕಾಲವೂ ಇರುವುವು,]; ತರುಗಳು ಸಗ್ಗದವರಂತೆ ಬೇಡಿದನು ಈವುವು ಆವಗಂ ಸುಗ್ಗಿಯಾಗಿಹುದಾರು ಋತುಗಳುಂ=[ಮರಗಳು ಸ್ವರ್ಗದವರಂತೆ ಬೇಡಿದ್ದನ್ನು ಕೊಡುವುವು ಯಾವಾಗಲೂ, ಸುಗ್ಗಿಯಾಗಿಹುದು ಆರು ಋತುಗಳು]; ಸಲೆ ಪೆಚ್ಚು ತಗ್ಗು(ಕಡಿಮೆ) ಶೀತೋಷ್ಣ ಸುಖದುಃಖಂಗಳು ಒಗೆಯದ ಆಶ್ರಮಂ ಒಂದು ಮುಂದೆ ಎಸೆದುದು=[ಶೀತೋಷ್ಣ, ಸುಖದುಃಖಗಳು ತುಂಬಾ ಹೆಚ್ಚು ಕಡಿಮೆ ಆಗದ ಒಂದು ಆಶ್ರಮವು ಮುಂದೆ ಕಂಡಿತು].
  • ತಾತ್ಪರ್ಯ: ಇನ/ಸೂರ್ಯನು ಗ್ರೀಷ್ಮ- ಬೇಸಿಗೆಯಲ್ಲಿ, ಚಂದ್ರ-ವಸಂತ, ಪವನ-ಶಿಶಿರ, ಶಿಖಿ-ಹೇಮಂತ ಪರ್ಜನ್ಯರು-ವರ್ಷ‍ಋತುಗಳಲ್ಲಿ ಅತಿಮಾಡರು; ವೈರವಿಲ್ಲದೆ ಎಲ್ಲಾ ಮೃಗಪಕ್ಷಿಗಳು ಒಗ್ಗಿಕೊಂಡು ಒಂದಕ್ಕೊಂದು ಹೊಂದಿಕೊಂಡು ವೈರವಿಲ್ಲದೆ ಇವೆ; ಮೊಗ್ಗು ಹೂವು, ಕಾಯಿ, ಹಣ್ಣು ತಳಿರುಗಳು ಬೀಯುವುದಿಲ್ಲ,ಸದಾಕಾಲವೂ ಇರುವುವು; ಮರಗಳು ಸ್ವರ್ಗದವರಂತೆ ಬೇಡಿದ್ದನ್ನು ಕೊಡುವುವು; ಆರು ಋತುಗಳಲ್ಲೂ ಯಾವಾಗಲೂ, ಸುಗ್ಗಿಯಾಗಿಹುದು; ಶೀತೋಷ್ಣ, ಸುಖದುಃಖಗಳು ತುಂಬಾ ಹೆಚ್ಚು ಕಡಿಮೆ ಆಗದ ಒಂದು ಆಶ್ರಮವು ಮುಂದೆ ಕಂಡಿತು.

(ಪದ್ಯ - ೧೪)

ಪದ್ಯ :-:೧೫:[ಸಂಪಾದಿಸಿ]

ವೇದಶಾಸ್ತ್ರಾಗಮ ಸ್ಮೃತಿ ಪುರಾಣಾವಳಿಯ | ನೋದಿಸುವ ಕುಶ ಸಮಿತ್ಪುಷ್ಪ ಫಲ ಮೂಲ ಪ | ರ್ಣಾದಿ ಗಳನೊದಮಿಸುವ ಜಪ ತಪಸ್ಸ್ನಾನಾಗ್ನಿಹೋತ್ರ ವಿಧಿ ವೇಳೆಗಳನು ||
ಸಾಧಿಸುವ ರವಿ ನಮಸ್ಕಾರ ಹರಿ ಹರ ಸಮಾ | ರಾಧನೆಗಳಂ ಮಾಡುವತಿಥಿಗಳನಳ್ತಿಯಿಂ | ದಾದರಿಪ ಯೋಗಮಾರ್ಗದೊಳೆಸೆವ ಮುನಿಗಳಾಶ್ರಮದೆಡೆಯೊಳಿರುತಿರ್ದರು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವೇದಶಾಸ್ತ್ರಾಗಮ ಸ್ಮೃತಿ ಪುರಾಣ ಆವಳಿಯನು ಓದಿಸುವ ಕುಶ ಸಮಿತ್ತು, ಪುಷ್ಪ ಫಲ ಮೂಲ ಪರ್ಣಾದಿಗಳನು ಒದಮಿಸುವ ಜಪ ತಪಸ್ ಸ್ನಾನ ಅಗ್ನಿಹೋತ್ರ ವಿಧಿ ವೇಳೆಗಳನು ಸಾಧಿಸುವ= [ವೇದ ಶಾಸ್ತ್ರ ಆಗಮ ಸ್ಮೃತಿ ಪುರಾಣಗಳು ಎಲ್ಲವನ್ನೂ ಓದಿಸುವ, ಕುಶ ಸಮಿತ್ತು, ಪುಷ್ಪ ಫಲ ಮೂಲ ಪರ್ಣಾ(ಎಲೆ)ದಿಗಳನು ಒದಗಿಸುವ, ಜಪ ತಪಸ್ ಸ್ನಾನ ಅಗ್ನಿಹೋತ್ರ ವಿಧಿ ಸಕಾಲದ ಕಾರ್ಯಗಳನ್ನು ಮಾಡುವ ]; ರವಿ ನಮಸ್ಕಾರ ಹರಿ ಹರ ಸಮಾರಾಧನೆಗಳಂ ಮಾಡುವ ಅತಿಥಿಗಳನು ಅಳ್ತಿಯಿಂದಾ ಆದರಿಪ ಯೋಗಮಾರ್ಗದೊಳು ಎಸೆವ ಮುನಿಗಳು ಆಶ್ರಮದ ಎಡೆಯೊಳು ಇರುತಿರ್ದರು=[ಸೂರ್ಯನಮಸ್ಕಾರ, ಹರಿ ಹರ ಇವರ ಪೂಜಾ ಸಮಾರಾಧನೆಗಳನ್ನು ಮಾಡುವ, ಅತಿಥಿಗಳನ್ನು ಪ್ರೀತಿಯಿಂದ ಆದರಿಸುವ, ಯೋಗಮಾರ್ಗದಲ್ಲಿ ಶೋಭಿಸುತ್ತಿರುವ ಮುನಿಗಳು ಆ ಆಶ್ರಮದಲ್ಲಿ ಇದ್ದರು.]
  • ತಾತ್ಪರ್ಯ:ವೇದ ಶಾಸ್ತ್ರ ಆಗಮ ಸ್ಮೃತಿ ಪುರಾಣಗಳು ಎಲ್ಲವನ್ನೂ ಓದಿಸುವ, ಕುಶ ಸಮಿತ್ತು, ಪುಷ್ಪ ಫಲ ಮೂಲ ಪರ್ಣಾ(ಎಲೆ)ದಿಗಳನು ಒದಗಿಸುವ, ಜಪ ತಪಸ್ ಸ್ನಾನ ಅಗ್ನಿಹೋತ್ರ ವಿಧಿ ಸಕಾಲದ ಕಾರ್ಯಗಳನ್ನು ಮಾಡುವ ಸೂರ್ಯನಮಸ್ಕಾರ, ಹರಿ ಹರ ಇವರ ಪೂಜಾ ಸಮಾರಾಧನೆಗಳನ್ನು ಮಾಡುವ, ಅತಿಥಿಗಳನ್ನು ಪ್ರೀತಿಯಿಂದ ಆದರಿಸುವ, ಯೋಗಮಾರ್ಗದಲ್ಲಿ ಶೋಭಿಸುತ್ತಿರುವ ಮುನಿಗಳು ಆ ಆಶ್ರಮದಲ್ಲಿ ಇದ್ದರು.

(ಪದ್ಯ - ೧೫)XIX

ಪದ್ಯ :-:೧೬:[ಸಂಪಾದಿಸಿ]

ಸುಡದಿರ್ದ ಪಾವಕನೊ ಬಿಸಿ ಮಾಣ್ದ ರವಿಯೊ ತಂ | ಪಿಡಿದಿರದ ಚಂದ್ರಮನೊ ವಿಷಕಂಠನಾಗದಿಹ | ಮೈಡನೋ ರಜಮಂ ಪೊರ್ದದಂಬುಜಾಸನನೊ ಫಣಿ ತಲ್ಪನಲ್ಲದ ವಿಷ್ಣವೊ ||
ಕಡುತೇಜದೊಬ್ಬುಳಿಯೊ ಶಾಂತಿಯ ನಿಜಾಕಾರ | ದೊಡಲೋ ವೇಳೆಂಬ ಸೌಭರಿ ಮುನಿಪನಾಶ್ರಮದ || ನಡುವೆ ಕುಳ್ಳಿರ್ದ ಸುಖಯೋಗದೊಳಿರಲ್ಕೆ ನಡೆತೆಂದರ್ಜನಂ ಕಂಡನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸುಡದಿರ್ದ ಪಾವಕನೊ ಬಿಸಿ ಮಾಣ್ದ ರವಿಯೊ ತಂಪು ಇಡಿದಿರದ(ಹಿಡಿದಿರದ) ಚಂದ್ರಮನೊ ವಿಷಕಂಠನು ಆಗದಿಹ ಮೈಡನೋ=[ಸುಡದಿರುವ ಅಗ್ನಿಯೋ, ಬಿಸಿ ಇಲ್ಲದ ಸೂರ್ಯನೋ, ತಂಪಿಲ್ಲದ ಚಂದ್ರನೊ, ವಿಷಕಂಠನು ಆಗಿರದ ಶಿವನೋ];ರಜಮಂ ಪೊರ್ದದ ಅಂಬುಜಾಸನನೊ ಫಣಿ ತಲ್ಪನು ಅಲ್ಲದ ವಿಷ್ಣವೊ ಕಡುತೇಜದೊಬ್ಬುಳಿಯೊ ಶಾಂತಿಯ ನಿಜಾಕಾರ ದೊಡಲೋ ವೇಳೆಂಬ=[ರಜೊಗುಣವನ್ನು ಹೊಂದದ ಬ್ರಹ್ಮನೋ, ಶೇಷನಮೇಲೆ ಮಲುಗಿರದ ವಿಷ್ಣವೊ, ಹೀಗೆ ಬಹಳ ತೇಜಸ್ಸಿನ ಸಮೂಹವೋ, ಶಾಂತಿಯ ನಿಜಾಕಾರದ ದೇಹವೊ ಹೇಳು ಎನ್ನುವಂತಿರುವ]; ಸೌಭರಿ ಮುನಿಪನು ಆಶ್ರಮದ ನಡುವೆ ಕುಳ್ಳಿರ್ದ ಸುಖಯೋಗದೊಳ್ ಇರಲ್ಕೆ ನಡೆತೆಂದು ಅರ್ಜನಂ ಕಂಡನು=[ಸೌಭರಿ ಮುನಿಪನು ಆಶ್ರಮದ ನಡುವೆ ಕುಳಿತಿದ್ದು ಸುಖಯೋಗದಲ್ಲಿ ಇರಲು, ಅರ್ಜನನು ಅಲ್ಲಿಗೆ ಬಂದು ಕಂಡನು ].
  • ತಾತ್ಪರ್ಯ:ಸುಡದಿರುವ ಅಗ್ನಿಯೋ, ಬಿಸಿ ಇಲ್ಲದ ಸೂರ್ಯನೋ, ತಂಪಿಲ್ಲದ ಚಂದ್ರನೊ, ವಿಷಕಂಠನು ಆಗಿರದ ಶಿವನೋರಜೊಗುಣವನ್ನು ಹೊಂದದ ಬ್ರಹ್ಮನೋ, ಶೇಷನಮೇಲೆ ಮಲುಗಿರದ ವಿಷ್ಣವೊ, ಹೀಗೆ ಬಹಳ ತೇಜಸ್ಸಿನ ಸಮೂಹವೋ, ಶಾಂತಿಯ ನಿಜಾಕಾರದ ದೇಹವೊ ಹೇಳು ಎನ್ನುವಂತಿರುವ, ಸೌಭರಿ ಮುನಿಪನು ಆಶ್ರಮದ ನಡುವೆ ಕುಳಿತಿದ್ದು ಸುಖಯೋಗದಲ್ಲಿ ಇರಲು, ಅರ್ಜನನು ಅಲ್ಲಿಗೆ ಬಂದು ಅವನನ್ನು ಕಂಡನು.

(ಪದ್ಯ - ೧೬)

ಪದ್ಯ :-:೧೭:[ಸಂಪಾದಿಸಿ]

ಬಂದು ಸಾಷ್ಟಾಂಗದಿಂದೆರಗಿ ಸೌಭರಿ ಮುನಿಯ | ಮುಂದೆ ಕೈ ಮುಗಿದು ನಿಲಲಾ ಪಾರ್ಥನಂ ಪ್ರೀತಿ | ಯಿಂದೆ ಸತ್ಕರಿಸಿ ಕುಶಲಂಗಳಂ ಕೇಳ್ದಿಲ್ಲಿಗೇಕೆ ಬರವಾಯಿತೆನಲು ||
ಅಂದು ಕುಲಗೋತ್ರಮಂ ಕೊಂದಪಾಪಂ ಪೋಗ | ಲೆಂದಶ್ವಮೇಧಮಂ ತೊಡಗಿ ಯೆನ್ನಂ ಧರ್ಮ | ನಂದನಂ ಕಳುಹಿದಂ ಹಯ ರಕ್ಷೆಗದರೊಡನೆ ಬರೆ ಸಿಲ್ಕಿತದು ಶಿಲೆಯೊಳು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಂದು ಸಾಷ್ಟಾಂಗದಿಂದ ಎರಗಿ ಸೌಭರಿ ಮುನಿಯ ಮುಂದೆ ಕೈ ಮುಗಿದು ನಿಲಲ=[ಅರ್ಜುನನು ಆಶ್ರಮಕ್ಕೆ ಬಂದು ಮುನಿಗೆ ಸಾಷ್ಟಾಂಗ ನಮಸ್ಕಾರಮಾಡಿ, ಸೌಭರಿ ಮುನಿಯ ಮುಂದೆ ಕೈ ಮುಗಿದು ನಿಲ್ಲುಲು]; ಆ ಪಾರ್ಥನಂ ಪ್ರೀತಿಯಿಂದೆ ಸತ್ಕರಿಸಿ ಕುಶಲಂಗಳಂ ಕೇಳ್ದು ಇಲ್ಲಿಗೆ ಏಕೆ ಬರವು -ಬರುವುದು ಆಯಿತು ಎನಲು=[ಆ ಪಾರ್ಥನನ್ನು ಪ್ರೀತಿಯಿಂದೆ ಸತ್ಕರಿಸಿ ಕುಶಲಗಳನ್ನು ಕೇಳಿ, ಇಲ್ಲಿಗೆ ಏಕೆ ಬರುವಂತಾಯಿತು ಎನಲು, ]; ಅಂದು ಕುಲಗೋತ್ರಮಂ ಕೊಂದಪಾಪಂ ಪೋಗಲೆಂದು ಅಶ್ವಮೇಧಮಂ ತೊಡಗಿ=[ ಅಂದು ಕುರುಕ್ಷೇತ್ರಯುದ್ಧದಲ್ಲಿ, ಕುಲಗೋತ್ರಜರನ್ನು ಕೊಂದ ಪಾಪವನ್ನು ಹೋಗಲಾಡಿಸಲು,ಅಶ್ವಮೇಧಯಾಗದಲ್ಲಿ ತೊಡಗಿ]; ಯೆನ್ನಂ ಧರ್ಮನಂದನಂ ಕಳುಹಿದಂ ಹಯ ರಕ್ಷೆಗದರೊಡನೆ ಬರೆ ಸಿಲ್ಕಿತದು ಶಿಲೆಯೊಳು=[ನನ್ನನ್ನು ಧರ್ಮನಂದನನು ಕುದುರೆಯ ರಕ್ಷಣೆಗೆ ಕಳುಹಿದನು; ಅದರೊಡನೆ ಬರಲು ಕುದುರೆಯು ಶಿಲೆಯಲ್ಲಿ ಸಿಲುಕಿಕೊಂಡಿತು.];
  • ತಾತ್ಪರ್ಯ:ಅರ್ಜುನನು ಆಶ್ರಮಕ್ಕೆ ಬಂದು ಮುನಿಗೆ ಸಾಷ್ಟಾಂಗ ನಮಸ್ಕಾರಮಾಡಿ, ಸೌಭರಿ ಮುನಿಯ ಮುಂದೆ ಕೈ ಮುಗಿದು ನಿಲ್ಲುಲು; ಆ ಪಾರ್ಥನನ್ನು ಪ್ರೀತಿಯಿಂದೆ ಸತ್ಕರಿಸಿ ಕುಶಲಗಳನ್ನು ಕೇಳಿ, ಇಲ್ಲಿಗೆ ಏಕೆ ಬರುವಂತಾಯಿತು ಎನಲು, ಅಂದು ಕುರುಕ್ಷೇತ್ರಯುದ್ಧದಲ್ಲಿ, ಕುಲಗೋತ್ರಜರನ್ನು ಕೊಂದ ಪಾಪವನ್ನು ಹೋಗಲಾಡಿಸಲು,ಅಶ್ವಮೇಧಯಾಗದಲ್ಲಿ ತೊಡಗಿ ನನ್ನನ್ನು ಧರ್ಮನಂದನನು ಕುದುರೆಯ ರಕ್ಷಣೆಗೆ ಕಳುಹಿದನು; ಅದರೊಡನೆ ಬರಲು ಕುದುರೆಯು ಶಿಲೆಯಲ್ಲಿ ಸಿಲುಕಿಕೊಂಡಿತು ಎಂದನು.];

(ಪದ್ಯ - ೧೭)

ಪದ್ಯ :-:೧೮:[ಸಂಪಾದಿಸಿ]

ಎಲೆ ಮುನೀಶ್ವರ ತವಾನುಗ್ರಹದೊಳಲ್ಲದೀ | ಶಿಲೆಯೊಳೊಂದಿದ ಹಯಂ ಬಿಡುವಂದಮಂ ಕಾಣೆ | ನಳುಹಬೇಕೆಂದರೆಗಲರ್ಜುನನ ಮೋಗ ನೋಡಿ ನಗುತೆ ಸೌಭರಿ ನುಡಿದನು ||
ತಿಳುಹಿದಂ ಪಿಂತೆ ಭಾರತ ಯುದ್ಧ ಮಧ್ಯದೊಳ್ | ನಳಿನನಾಭಂ ನಿನಗೆ ಮತ್ತೆ ಯುಮಹಂಕಾರ| ಮಳಿದುದಿಲ್ಲಕಟ ಜಗದೊಳ್ ಕೊಲ್ವರಾರ್ ಕಾವರಾರ್ ಬಲ್ಲೊಡುಸಿರೆಂದನು ||18|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲೆ ಮುನೀಶ್ವರ ತವ(ನಿಮ್ಮ) ಅನುಗ್ರಹದೊಳು ಅಲ್ಲದೆ ಈ ಶಿಲೆಯೊಳು ಒಂದಿದ(ಸೇರಿದ) ಹಯಂ ಬಿಡುವ ಅಂದಮಂ(ರೀತಿ) ಕಾಣೆನು ಉಳುಹಬೇಕು ಎಂದು ಎರೆಗಲು=[ಎಲೆ ಮುನೀಶ್ವರ ನಿಮ್ಮ ಅನುಗ್ರಹದೊಳು ಇಲ್ಲದೆ ಈ ಶಿಲೆಯಲ್ಲಿ ಸಿಲುಕಿಕೊಂಡ ಹಯವು ಬಿಡುವ ಮಾರ್ಗವನ್ನು ಕಾಣೆನು ನಮ್ಮನ್ನು ಕಾಪಾಡಬೇಕು ಎಂದು ನಮಿಸಲು,]; ಅರ್ಜುನನ ಮೋಗ ನೋಡಿ ನಗುತೆ ಸೌಭರಿ ನುಡಿದನು ತಿಳುಹಿದಂ ಪಿಂತೆ ಭಾರತ ಯುದ್ಧ ಮಧ್ಯದೊಳ್ ನಳಿನನಾಭಂ ನಿನಗೆ ಮತ್ತೆಯುಂ ಅಹಂಕಾರಂ ಅಳಿದುದಿಲ್ಲ=[ಅರ್ಜುನನ ಮುಖವನ್ನು ನೋಡಿ ನಗುತ್ತಾ ಸೌಭರಿಮುನಿ ಹೇಳಿದನು,' ಹಿಂದೆ ಭಾರತ ಯುದ್ಧ ಮಧ್ಯದಲ್ಲಿ ನಳಿನನಾಭನಾದ ಕೃಷ್ಣನು ಜ್ಞಾನಮಾರ್ಗವನ್ನು ತಿಳಿಸಿದ್ದಾನೆ; ನಿನಗೆ ಮತ್ತೆ ಇನ್ನೂ ನಾನುಕೊಂದೆ ಎಂಬ ಅಹಂಕಾರವು ಹೋಗಲಿಲ್ಲ]; ಅಕಟ ಜಗದೊಳ್ ಕೊಲ್ವರಾರ್ ಕಾವರಾರ್ ಬಲ್ಲೊಡೆ ಉಸಿರು ಎಂದನು=[ಅಕಟ (ಆಶ್ಚರ್ಯವು!) ಜಗತ್ತಿನಲ್ಲಿ ಕೊಲ್ಲುವವರು ಯಾರು - ಕಾಯುವವರು ಯಾರು? ನಿನಗೆ ತಿಳಿದಿದ್ದರೆ ಹೇಳು ಎಂದನು.]
  • ತಾತ್ಪರ್ಯ:ಅರ್ಜುನನು, ಎಲೆ ಮುನೀಶ್ವರ ನಿಮ್ಮ ಅನುಗ್ರಹದೊಳು ಇಲ್ಲದೆ ಈ ಶಿಲೆಯಲ್ಲಿ ಸಿಲುಕಿಕೊಂಡ ಹಯವು ಬಿಡುವ ಮಾರ್ಗವನ್ನು ಕಾಣೆನು ನಮ್ಮನ್ನು ಕಾಪಾಡಬೇಕು ಎಂದು ನಮಿಸಲು, ಅರ್ಜುನನ ಮುಖವನ್ನು ನೋಡಿ ನಗುತ್ತಾ ಸೌಭರಿಮುನಿ ಹೇಳಿದನು,' ಹಿಂದೆ ಭಾರತ ಯುದ್ಧ ಮಧ್ಯದಲ್ಲಿ ನಳಿನನಾಭನಾದ ಕೃಷ್ಣನು ಜ್ಞಾನಮಾರ್ಗವನ್ನು ತಿಳಿಸಿದ್ದಾನೆ; ನಿನಗೆ ಮತ್ತೆ ಇನ್ನೂ ನಾನು ಕೊಂದೆ ಎಂಬ ಅಹಂಕಾರವು ಹೋಗಲಿಲ್ಲ, ಅಕಟ (ಆಶ್ಚರ್ಯವು!) ಜಗತ್ತಿನಲ್ಲಿ ಕೊಲ್ಲುವವರು ಯಾರು - ಕಾಯುವವರು ಯಾರು? ನಿನಗೆ ತಿಳಿದಿದ್ದರೆ ಹೇಳು ಎಂದನು.

(ಪದ್ಯ - ೧೮)

ಪದ್ಯ :-:೧೯:[ಸಂಪಾದಿಸಿ]

ಶ್ರೀ ಕೃಷ್ಣನಿರೆ ಮುಂದೆ ವಂಶಮಂ ಕೊಂದೆನೆಂ | ಬೀ ಕೃತ್ಯದಿಂ ಪಾತಕಂ ಬಹುದೆ ನಿಮ್ಮೊಳ್ ಸ | ದಾ ಕೃಪಾನಿಧಿಯ ಸಾನ್ನಿಧ್ಯಮಿರುತಿರಲಾಗಿ ವಾಜಿಮೇಧಂ ಬೇಹುದೆ ||
ಆ ಕೃತಾಂತಕನರಿದುದಿಲ್ಲಲಾ ಲೋಕದೊಳ್ | ಪ್ರಾಕೃತರ ತೆರದಿಂದೆ ಹರಿ ಮನೆಯೊಳಿರೆ ಗರ್ದ | ಭಾಕೃತಿಯ ಹರಿಯೊಡನೆ ಬಂದೆಸುರಭೂಜಮಿರೆ ಶಾಲ್ಮಲಿಯನರಸುವಂತೆ ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶ್ರೀ ಕೃಷ್ಣನಿರೆ ಮುಂದೆ ವಂಶಮಂ ಕೊಂದೆನು ಎಂಬ ಈ ಕೃತ್ಯದಿಂ ಪಾತಕಂ ಬಹುದೆ=[ಶ್ರೀ ಕೃಷ್ಣನು ಮುಂದೆ (ಮಾರ್ಗದರ್ಶನ) ಇರಲು, ವಂಶವನ್ನು ಕೊಂದೆನು ಎಂಬ ಈ ಯುದ್ಧದ ಕೃತ್ಯದಿಂದ ಪಾಪವು ಬರುವುದೆ? ಬರಲಾರದು.]; ನಿಮ್ಮೊಳ್ ಸದಾ ಕೃಪಾನಿಧಿಯ ಸಾನ್ನಿಧ್ಯಂ ಇರುತಿರಲಾಗಿ ವಾಜಿಮೇಧಂ ಬೇಹುದೆ=[ನಿಮ್ಮಲ್ಲಿ ಸದಾ ಕೃಪಾನಿಧಿಯಾದ ಕೃಷ್ಣನ ಸಾನ್ನಿಧ್ಯವು ಇರುತ್ತಿರಲು ಅಶ್ವಮೇಧವು ಬೇಕೇ? ];ಆ ಕೃತಾಂತಕನು ಅರಿದುದಿಲ್ಲಲಾ=[ ಆ ಯಮನಮಗ ಯುಧಿಷ್ಠಿರ ತಿಳಿಯಲಿಲ್ಲವಲ್ಲಾ!] ಲೋಕದೊಳ್ ಪ್ರಾಕೃತರ ತೆರದಿಂದೆ ಹರಿ ಮನೆಯೊಳಿರೆ ಗರ್ದಭಾಕೃತಿಯ ಹರಿಯೊಡನೆ ಬಂದೆ ಸುರಭೂಜಮಿರೆ ಶಾಲ್ಮಲಿಯನು ಅರಸುವಂತೆ=[ಲೋಕದಲ್ಲಿ ಸಾಮಾನ್ಯರ ರೀತಿಯಲ್ಲಿ ಹರಿ (ವಿಷ್ಣು) ಮನೆಯಲ್ಲಿ ಇರಲು,ಕತ್ತೆಯ ರೂಪದ ಹರಿ (ಕುದುರೆ)ಯೊಡನೆ ಬಂದೆ! ಕಲ್ಪವೃಕ್ಷವು ಇದ್ದಾಗ ಅದು ಬಿಟ್ಟು ಬೂರುಗದ ಮರವನ್ನು ಹುಡುಕಿದಂತಾಯಿತು ನಿಮ್ಮ ಆಚರಣೆ ಎಂದನು ಮುನಿ.]
  • ತಾತ್ಪರ್ಯ:ಶ್ರೀ ಕೃಷ್ಣನು ಮುಂದೆ (ಮಾರ್ಗದರ್ಶನ) ಇರಲು, ವಂಶವನ್ನು ಕೊಂದೆನು ಎಂಬ ಈ ಯುದ್ಧದ ಕೃತ್ಯದಿಂದ ಪಾಪವು ಬರುವುದೆ? ಬರಲಾರದು. ನಿಮ್ಮಲ್ಲಿ ಸದಾ ಕೃಪಾನಿಧಿಯಾದ ಕೃಷ್ಣನ ಸಾನ್ನಿಧ್ಯವು ಇರುತ್ತಿರಲು ಅಶ್ವಮೇಧವು ಬೇಕೇ? ಆ ಯಮನಮಗ ಯುಧಿಷ್ಠಿರ ತಿಳಿಯಲಿಲ್ಲವಲ್ಲಾ! ಲೋಕದಲ್ಲಿ ಸಾಮಾನ್ಯರ ರೀತಿಯಲ್ಲಿ ಹರಿ (ವಿಷ್ಣು) ಮನೆಯಲ್ಲಿ ಇರಲು, ಕತ್ತೆಯ ರೂಪದ ಈ ಹರಿ (ಕುದುರೆ)ಯೊಡನೆ ಬಂದೆಯಲ್ಲಾ! ಕಲ್ಪವೃಕ್ಷವು ಇದ್ದಾಗ ಅದು ಬಿಟ್ಟು ಬೂರುಗದ ಮರವನ್ನು ಹುಡುಕಿದಂತಾಯಿತು ನಿಮ್ಮ ಆಚರಣೆ, ಎಂದನು ಮುನಿ.]

(ಪದ್ಯ - ೧೯)

ಪದ್ಯ :-:೨೦:[ಸಂಪಾದಿಸಿ]

ಕೊಟ್ಟಿಗೆಯ ಕಾಮಧೇನುವನೊಲ್ಲದಳ್ತಿಯಿಂ | ಕಟ್ಟಿರಣ್ಯದ ಪುಲಿಯನರಸಿ ಕರೆಯಲ್ಕೊದೆ(ಡೆ)ಯ | ಕಟ್ಟುವೆಯಲಾ ತುರಗಮೇಧಮೇಗೈವುದಾ ಹರಿಯ ಸಾನ್ನಿಧ್ಯಮಿರಲು ||
ಹುಟ್ಟಿತಿಲ್ಲವೆ ನಿನಗರಿವು ಧರ್ಮಸೂನು ಮತಿ | ಗಟ್ಟಿಹನೆ ಶಿವಶಿವ ವೃಥಾ ಪ್ರರಿಭ್ರಮವೆ ನಿಮ | ಗಟ್ಟಿತೆಂದಮರೇಂದ್ರ ತನಯನಂ ಜರೆದು ಶೌಭರಿ ನುಡಿದೊಡಿಂತೆಂದನು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೊಟ್ಟಿಗೆಯ ಕಾಮಧೇನುವನು ಒಲ್ಲದೆ ಅಳ್ತಿಯಿಂ ಕಟ್ಟ್ ಅರಣ್ಯದ ಪುಲಿಯನು ಅರಸಿ ಕರೆಯಲ್ಕೆ ಒಡೆಯಕಟ್ಟುವೆಯಲಾ=[ಕೊಟ್ಟಿಗೆಯಲ್ಲಿರುವ ಕಾಮಧೇನುವನ್ನು ಇಷ್ಟಪಡದೆ, ಪ್ರೀತಿಯಿಂದ ದಟ್ಟ ಅರಣ್ಯದ ಹುಲಿಯನ್ನು ಹುಡುಕಿ ಕರೆಯಲು,ನಿನಗೆ ಒಡೆಯನ ಕಟ್ಟಪ್ಪಣೆಯಲ್ಲವೇ!];ತುರಗಮೇಧಂ ಏಗೈವುದಾ ಹರಿಯ ಸಾನ್ನಿಧ್ಯಮಿರಲು ಹುಟ್ಟಿತಿಲ್ಲವೆ ನಿನಗರಿವು ಧರ್ಮಸೂನು ಮತಿಗಟ್ಟಿಹನೆ ಶಿವಶಿವ ವೃಥಾ ಪ್ರರಿಭ್ರಮವೆ ನಿಮಗೆ ಅಟ್ಟಿತೆಂದು=[ಆ ಕೃಷ್ಣನ ಸಾನ್ನಿಧ್ಯವಿರಲು ಹಯಮೇಧವು ಏನುಮಾಡುವುದು? ನಿನಗೆ ಜ್ಞಾನವು ಹುಟ್ಟಲಿಲ್ಲವೆ? ಧರ್ಮಜನು ಬುದ್ಧಿಹೀನನಾದನೇ? ಶಿವಶಿವ ವೃಥಾ ತಿರುಗಾಟ ನಿಮಗೆ ಅಂಟಿತು ಎಂದು ]; ಅಮರೇಂದ್ರ ತನಯನಂ ಜರೆದು ಶೌಭರಿ ನುಡಿದೊಡೆ ಇಂತೆಂದನು=[ಶಿವಶಿವ ವೃಥಾ ತಿರುಗಾಟ ನಿಮಗೆ ಅಂಟಿತು ಎಂದು ಅರ್ಜುನನ್ನು ಧಿಕ್ಕರಿಸಿ ಶೌಭರಿ ನುಡಿದಾಗ ಅರ್ಜುನ ಹೀಗೆ ಹೇಳಿದನು].
  • ತಾತ್ಪರ್ಯ:ಶೌಭರಿ ಮುನಿಯು,'ಕೊಟ್ಟಿಗೆಯಲ್ಲಿರುವ ಕಾಮಧೇನುವನ್ನು ಇಷ್ಟಪಡದೆ, ಪ್ರೀತಿಯಿಂದ ದಟ್ಟ ಅರಣ್ಯದ ಹುಲಿಯನ್ನು ಹುಡುಕಿ ಕರೆಯಲು,ನಿನಗೆ ಒಡೆಯನ ಕಟ್ಟಪ್ಪಣೆಯಲ್ಲವೇ! ಆ ಕೃಷ್ಣನ ಸಾನ್ನಿಧ್ಯವಿರಲು ಹಯಮೇಧವು ಏನುಮಾಡುವುದು? ನಿನಗೆ ಜ್ಞಾನವು ಹುಟ್ಟಲಿಲ್ಲವೆ? ಧರ್ಮಜನು ಬುದ್ಧಿಹೀನನಾದನೇ? ಶಿವಶಿವ ವೃಥಾ ತಿರುಗಾಟ ನಿಮಗೆ ಅಂಟಿತು ಎಂದು ಅರ್ಜುನನ್ನು ಧಿಕ್ಕರಿಸಿ ಶೌಭರಿ ನುಡಿದಾಗ ಅರ್ಜುನ ಹೀಗೆ ಹೇಳಿದನು].

(ಪದ್ಯ - ೨೦)

ಪದ್ಯ :-:೨೧:[ಸಂಪಾದಿಸಿ]

ಹರಿಯನುಳಿದಾವು ಬದುಕುವರಲ್ಲ ಚಿತ್ತದೊಳ್ | ಭರಿತನಾಗಿಹನಾವಗಂ ಧರ್ಮಸೂನು ಮರೆ | ದಿರನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕ್ರತುವನು ||
ತರಳತೆಯ ಮರೆವೆಗಿಂತರಿವನುಪದೇಶಿವೊಡೆ | ಗುರುಗಳೆಲ್ಲವೆ ನೀವು ಧನ್ಯರಾದಪೆವಿನ್ನು | ಕರುಣದಿಂಡೀ ಶಿಲೆಯೊಳೊಂದಿದ ತುರಂಗಮಂ ಬಿಡಿಸಿಕೊಡಬೇಕೆಂದನು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹರಿಯನು ಉಳಿದು ಆವು ಬದುಕುವರಲ್ಲ ಚಿತ್ತದೊಳ್ ಭರಿತನು ಆಗಿಹನು ಆವಗಂ ಧರ್ಮಸೂನು ಮರೆದಿರನು=[ಹರಿಯನ್ನು ಬಿಟ್ಟು ನಾವು ಬದುಕುವವರಲ್ಲ; ಚಿತ್ತದಲ್ಲಿ ಅವನು ಯಾವಾಗಲೂ ತುಂಬಿರುವನು ಧರ್ಮಜನೂ ಅವನನ್ನು ಮರತು ಇರಲಾರ;]; ಅ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕ್ರತುವನು=[ಅ ಕೃಷ್ಣನ ಅನುಮತಿಯಿಂದಲೇ ಈ ಮಹಾಯಜ್ಞವನ್ನು ಆರಂಭಿಸಿ ಮಾಡುವನು]; ತರಳತೆಯ ಮರೆವೆಗೆ ಇಂತರಿವನು ಉಪದೇಶಿವೊಡೆ ಗುರುಗಳೆಲ್ಲವೆ ನೀವು ಧನ್ಯರಾದಪೆವು=[ಚಿಕ್ಕವರು ಧರ್ಮವನ್ನು ಮರೆತಾಗ ಹೀಗೆ ಜ್ಞಾನವನ್ನು ಉಪದೇಶಿದರೆ ಒಳಿತು, ಗುರುಗಳೆಲ್ಲವೆ ನೀವು ಧನ್ಯರಾದಪೆವು!]; ಇನ್ನು ಕರುಣದಿಂದೀ ಶಿಲೆಯೊಳೊಂದಿದ ತುರಂಗಮಂ ಬಿಡಿಸಿಕೊಡಬೇಕು ಎಂದನು=[ಇನ್ನು ಕರುಣದಿಂದ ಈ ಶಿಲೆಯಲ್ಲಿ ಸಿಕ್ಕಿಕೊಂಡ ಅಶ್ವವನ್ನು ಬಿಡಿಸಿಕೊಡಬೇಕು ಎಂದನು.]
  • ತಾತ್ಪರ್ಯ:ಹರಿಯನ್ನು ಬಿಟ್ಟು ನಾವು ಬದುಕುವವರಲ್ಲ; ಚಿತ್ತದಲ್ಲಿ ಅವನು ಯಾವಾಗಲೂ ತುಂಬಿರುವನು ಧರ್ಮಜನೂ ಅವನನ್ನು ಮರತು ಇರಲಾರ; ಅ ಕೃಷ್ಣನ ಅನುಮತಿಯಿಂದಲೇ ಈ ಮಹಾಯಜ್ಞವನ್ನು ಆರಂಭಿಸಿ ಮಾಡುವನು; ನಾವು ಚಿಕ್ಕವರು ಧರ್ಮವನ್ನು ಮರೆತಾಗ ಹೀಗೆ ಜ್ಞಾನವನ್ನು ಉಪದೇಶಿದರೆ ಒಳಿತು, ಗುರುಗಳೆಲ್ಲವೆ ನೀವು ಧನ್ಯರಾದಪೆವು! ಇನ್ನು ಕರುಣದಿಂದ ಈ ಶಿಲೆಯಲ್ಲಿ ಸಿಕ್ಕಿಕೊಂಡ ಅಶ್ವವನ್ನು ಬಿಡಿಸಿಕೊಡಬೇಕು ಎಂದನು.]

(ಪದ್ಯ - ೨೧)

ಪದ್ಯ :-:೨೨:[ಸಂಪಾದಿಸಿ]

ಇನ್ನು ಚಿಂತಿಸದೆ ಕೃಷ್ಣಸ್ಮರಣೆಯಂ ಮಾಡಿ | ನಿನ್ನ ಹಸ್ತಸ್ಪರ್ಶನಂ ಗೆಯ್ದೊಡಾ ಕುದುರೆ | ಮುನ್ನಿನಂತವನಿಯೊಳ್ ನಡೆದಪುದು ಪೋಗು ನೀನೆಂದು ಶೌಭರಿ ನುಡಿಯಲು ||
ತನ್ನೊಳಗೆ ತಾನೆ ವಿಸ್ಮಿತನಾಗಿ ಪಾರ್ಥನದ | ರುನ್ನತಿಯ ತುದಿ ಮೊದಲನರುಪೆನಲ್ ಜ್ಞಾನ ಸಂ | ಪನ್ನ ತಾಪಸನರ್ಜುನಂಗೆ ವಿಸ್ತಿರಿಸಿದು ಮತ್ತೆ ಪೂರ್ವಾಪರವನು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇನ್ನು ಚಿಂತಿಸದೆ ಕೃಷ್ಣಸ್ಮರಣೆಯಂ ಮಾಡಿ ನಿನ್ನ ಹಸ್ತಸ್ಪರ್ಶನಂ ಗೆಯ್ದೊಡ ಆ ಕುದುರೆ ಮುನ್ನಿನಂತೆ ಅವನಿಯೊಳ್ ನಡೆದಪುದು ಪೋಗು ನೀನೆಂದು ಶೌಭರಿ ನುಡಿಯಲು=[ಇನ್ನು ಚಿಂತಿಸದೆ ಕೃಷ್ಣಸ್ಮರಣೆಯನ್ನು ಮಾಡಿ ನಿನ್ನ ಹಸ್ತಸ್ಪರ್ಶ ಮಾಡಿದರೆ, ಆ ಕುದುರೆ ಮೊದಲಿನಂತೆ ಭೂಮಿಯಲ್ಲಿ ನಡೆಯುವುದು, ನೀನು ಹೋಗು ಎಂದು ಶೌಭರಿ ಹೇಳಿದಾಗ]; ತನ್ನೊಳಗೆ ತಾನೆ ವಿಸ್ಮಿತನಾಗಿ ಪಾರ್ಥನು ಅದರ ಉನ್ನತಿಯ ತುದಿ ಮೊದಲನು ಅರುಪೆನಲ್ ಜ್ಞಾನ ಸಂಪನ್ನ ತಾಪಸನು ಅರ್ಜುನಂಗೆ ವಿಸ್ತಿರಿಸಿದಂ ಮತ್ತೆ ಪೂರ್ವಾಪರವನು (ಹಿಂದು ಮುಂದಿನವಿಚಾರ)=[ಅರ್ಜುನನು ಈ ಘಟನೆಗೆ ತನ್ನೊಳಗೆ ತಾನೆ ಆಸಶ್ಚರ್ಯ ಪಟ್ಟು, ಆ ಶಿಲೆಯ ಪ್ರಭಾವದ ತುದಿ ಮೊದಲನ್ನು ಹೇಳಬೇಕು ಎನ್ನಲು, ಆ ಜ್ಞಾನ ಸಂಪನ್ನ ತಪಸ್ವಿಯು ಅರ್ಜುನನಿಗೆ ಅದರ ಪೂರ್ವಾಪರವನ್ನು ವಿಸ್ತಿರಿಸಿ ಹೇಳಿದನು].
  • ತಾತ್ಪರ್ಯ:ಇನ್ನು ಚಿಂತಿಸದೆ ಕೃಷ್ಣಸ್ಮರಣೆಯನ್ನು ಮಾಡಿ ನಿನ್ನ ಹಸ್ತಸ್ಪರ್ಶ ಮಾಡಿದರೆ, ಆ ಕುದುರೆ ಮೊದಲಿನಂತೆ ಭೂಮಿಯಲ್ಲಿ ನಡೆಯುವುದು, ನೀನು ಹೋಗು ಎಂದು ಶೌಭರಿ ಹೇಳಿದಾಗ; ಅರ್ಜುನನು ಈ ಘಟನೆಗೆ ತನ್ನೊಳಗೆ ತಾನೆ ಆಸಶ್ಚರ್ಯ ಪಟ್ಟು, ಆ ಶಿಲೆಯ ಪ್ರಭಾವದ ತುದಿ ಮೊದಲನ್ನು ಹೇಳಬೇಕು ಎನ್ನಲು, ಆ ಜ್ಞಾನ ಸಂಪನ್ನ ತಪಸ್ವಿಯು ಅರ್ಜುನನಿಗೆ ಅದರ ಪೂರ್ವಾಪರವನ್ನು ವಿಸ್ತಿರಿಸಿ ಹೇಳಿದನು.

(ಪದ್ಯ - ೨೨)

ಪದ್ಯ :-:೨೩:[ಸಂಪಾದಿಸಿ]

ಆಲಿಸರ್ಜುನ ಮುನ್ನ ವಿಪ್ರನುಂಟೋರ್ವನು | ದ್ದಾಲಕಾಖ್ಯಂ ತಿಳಿದನಖಿಳಶಾಸ್ತ್ರಂಗಳಂ | ಮೇಲೆ ವೈವಾಹದೊಳ್ ವಧುವಾದಳಾತಂಗೆ ಚಂಡಿಯೆಂಬಾಕೆ ಬಳಿಕ ||
ಕಾಲಕಾಲದ ಜಪಾನುಷ್ಠಾನಪೂಜೆಗಳಿ | ಗಾಲಸ್ಯಮಂ ಮಾಡದೆನ್ನ ಪರಿಚರ್ಯೆಗನು | ಕೂಲೆಯಾಗಿರ್ದು ಮನೆವಾಳ್ತೆಯಂ ಸಾಗಿಪುದು ನೀನೆಂದೊಡಿಂತೆಂದಳು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆಲಿಸು ಅರ್ಜುನ ಮುನ್ನ ವಿಪ್ರನು ಉಂಟು ಓರ್ವನು ಉದ್ದಾಲಕಾಖ್ಯಂ (ಆಖ್ಯ=ಹೆಸರು), ತಿಳಿದನು ಅಖಿಳ ಶಾಸ್ತ್ರಂಗಳಂ=[ಅರ್ಜುನನೇ ಕೇಳು, ಹಿಂದೆ ಒಬ್ಬ ವಿಪ್ರನು ಇದ್ದ. ಅವನ ಹೆಸರು ಉದ್ದಾಲಕ. ಅವನು ಅಖಿಲ ಶಾಸ್ತ್ರಂಗಳನ್ನೂ ತಿಳಿದುಕೊಂಡನು]; ಮೇಲೆ ವೈವಾಹದೊಳ್ ವಧುವಾದಳು ಆತಂಗೆ ಚಂಡಿಯೆಂಬಾಕೆ=[ಆಮೇಲೆ ಅವನಿಗೆ ವಿವಾಹದಲ್ಲಿ ಚಂಡಿಯೆಂಬುವವಳು ಪತ್ನಿಯಾದಳು.]; ಬಳಿಕ ಕಾಲಕಾಲದ ಜಪಾನುಷ್ಠಾನಪೂಜೆಗಳಿ ಗಾಲಸ್ಯಮಂ ಮಾಡದೆನ್ನ ಪರಿಚರ್ಯೆಗನು ಕೂಲೆಯಾಗಿರ್ದು ಮನೆವಾಳ್ತೆಯಂ ಸಾಗಿಪುದು ನೀನು ಎಂದೊಡೆ ಇಂತೆಂದಳು=[ಬಳಿಕ ಕಾಲಕಾಲದಲ್ಲಿ ಜಪ, ಅನುಷ್ಠಾನ, ಪೂಜೆಗಳಿಗೆ ಆಲಸ್ಯವನ್ನು ಮಾಡದೆ ನನ್ನ ಪರಿಚರ್ಯೆಗೆ/ ಧರ್ಮಕ್ರಿಯೆಗೆ ಸಹಕರಿಸುತ್ತಿದ್ದು, ನೀನು ಮನೆಕೆಲಸವನ್ನೂ ಸಾಗಿಪಸಬೇಕು ಎಂದಾಗ, ಅವಳು ಹೀಗೆ ಹೇಳಿದಳು.]
  • ತಾತ್ಪರ್ಯ:ಅರ್ಜುನನೇ ಕೇಳು, ಹಿಂದೆ ಒಬ್ಬ ವಿಪ್ರನು ಇದ್ದ. ಅವನ ಹೆಸರು ಉದ್ದಾಲಕ. ಅವನು ಅಖಿಲ ಶಾಸ್ತ್ರಂಗಳನ್ನೂ ತಿಳಿದುಕೊಂಡನು; ಆಮೇಲೆ ಅವನಿಗೆ ವಿವಾಹದಲ್ಲಿ ಚಂಡಿಯೆಂಬುವವಳು ಪತ್ನಿಯಾದಳು. ಬಳಿಕ ಕಾಲಕಾಲದಲ್ಲಿ ಜಪ, ಅನುಷ್ಠಾನ, ಪೂಜೆಗಳಿಗೆ ಆಲಸ್ಯವನ್ನು ಮಾಡದೆ ನನ್ನ ಪರಿಚರ್ಯೆಗೆ/ ಧರ್ಮಕ್ರಿಯೆಗೆ ಸಹಕರಿಸುತ್ತಿದ್ದು, ನೀನು ಮನೆಕೆಲಸವನ್ನೂ ಸಾಗಿಸಬೇಕು ಎಂದಾಗ, ಅವಳು ಹೀಗೆ ಹೇಳಿದಳು.

(ಪದ್ಯ - ೨೩)

ಪದ್ಯ :-:೨೪:[ಸಂಪಾದಿಸಿ]

ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆ | ಗೊಳ್ಳದಿರ್ ಪರಿಚರ್ಯೆ ಮನೆವಾಳ್ತೆಯೆಂದೆಂಬ | ತಳ್ಳಿಯಿವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಗೊಳಲು(ಚಂಡಿಪೊರೆ) ||
ಮುಳ್ಳಿಡಿದ ಮರವೇರಿವಂತಾದುದಿಹಪರಕಿ | ದೂಳ್ಳಿತಾದಪುದೆ ಬಂದುದು ತಪೋಹಾನಿಯೆಂ | ದಳ್ಳೆಯೊಳ್ ಕೋಲ್ಗೊಂಡ ತೆರದೊಳುದ್ದಾಲಕಂ ಚಿಂತಿಪಂ ಪ್ರತಿದಿನದೊಳು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಳ್ಳ ಅನಿತು ನಿನ್ನ ಮಾತಂ ಕೇಳ್ವಳು ಎಂದು ಎಣಿಕೆ ಗೊಳ್ಳದಿರ್,=[ಎಳ್ಳು ಕಾಳಿನಷ್ಟಾದರೂ ನಿನ್ನ ಮಾತನ್ನು ಕೇಳುವವಳು ಎಂದು ಎಣಿಸಬೇಡ]; ಪರಿಚರ್ಯೆ ಮನೆವಾಳ್ತೆಯೆಂದು ಎಂಬ ತಳ್ಳಿಯಿವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಗಳಲು(ಚಂಡಿಪೊರೆ)=[ಪರಿಚರ್ಯೆಯ/ ಸೇವೆಯ ಕೆಲಸ, ಮನೆವಾಳ್ತೆ /ಮನೆಯಕೆಲಸ ಎಂಬುದನ್ನು ಮಾಡುವ ಸಾಧು ಕೆಲಸದ ಹೆಂಗಸು 'ತಳ್ಳಿ' ತಾನಲ್ಲ, ನೀನು ಹೇಳಿದುದನ್ನು ಮಾಡುವುದಿಲ್ಲ ಎಂದು ಚಂಡಿ ಹಟ ಮಾಡಿದಳು]; ಮುಳ್ಳಿಡಿದ ಮರವೇರಿವಂತೆ ಆದುದು ಇಹಪರಕೆ ಇದೂಳ್ಳಿತು ಆದಪುದೆ=[ಆಗ ಉದ್ದಾಲಕನು ಮುಳ್ಳಿನ ಮರವನ್ನು ಹತ್ತಿದಂತೆ ಆಯಿತು (ಇದರಿಂದ ಇಳಿಯಲೂ ಬರದು); ಇಹಪರಕ್ಕೆ ಈ ದಾಂಪತ್ಯದಿಂದ ಒಳ್ಳೆಯದು ಆಗುವುದೆ - ಆಗಲಾರದು;]; ಬಂದುದು ತಪೋಹಾನಿಯೆಂದು ಅಳ್ಳೆ (ಮಗ್ಗುಲು)ಯೊಳ್ ಕೋಲ್ಗೊಂಡ(ಬಾಣ) ತೆರದೊಳು ಉದ್ದಾಲಕಂ ಚಿಂತಿಪಂ ಪ್ರತಿದಿನದೊಳು=[ತಪೋಹಾನಿ ಬಂದಿತಲ್ಲಾ ಎಂದು ಮಗ್ಗುಲಲ್ಲಿ ಬಾಣ ನಾಟಿದಂತೆ ಉದ್ದಾಲಕನು ಪ್ರತಿದಿನವೂ ಚಿಂತಿಸುತ್ತಿದ್ದನು.]
  • ತಾತ್ಪರ್ಯ:ಎಳ್ಳು ಕಾಳಿನಷ್ಟಾದರೂ ನಿನ್ನ ಮಾತನ್ನು ಕೇಳುವವಳು ಎಂದು ಎಣಿಸಬೇಡ; ಪರಿಚರ್ಯೆಯ/ ಸೇವೆಯ ಕೆಲಸ, ಮನೆವಾಳ್ತೆ /ಮನೆಯಕೆಲಸ ಎಂಬುದನ್ನು ಮಾಡುವ ಸಾಧು ಕೆಲಸದ ಹೆಂಗಸು-'ತಳ್ಳಿ' ತಾನಲ್ಲ, ನೀನು ಹೇಳಿದುದನ್ನು ಮಾಡುವುದಿಲ್ಲ ಎಂದು ಚಂಡಿ ಹಟಮಾಡಿದಳು; ಆಗ ಉದ್ದಾಲಕನು ಮುಳ್ಳಿನ ಮರವನ್ನು ಹತ್ತಿದಂತೆ ಆಯಿತು (ಇದರಿಂದ ಇಳಿಯಲೂ ಬರದು); ಇಹಪರಕ್ಕೆ ಈ ದಾಂಪತ್ಯದಿಂದ ಒಳ್ಳೆಯದು ಆಗುವುದೆ - ಆಗಲಾರದು; ತಪೋಹಾನಿ ಬಂದಿತಲ್ಲಾ ಎಂದು ಮಗ್ಗುಲಲ್ಲಿ ಬಾಣ ನಾಟಿದಂತೆ ಉದ್ದಾಲಕನು ಪ್ರತಿದಿನವೂ ಚಿಂತಿಸುತ್ತಿದ್ದನು.

(ಪದ್ಯ - ೨೩)

ಪದ್ಯ :-:೨೫:[ಸಂಪಾದಿಸಿ]

ಇಂತಿರುತಿರೆಲ್ಕೆ ಕೌಂಡಿನ್ಯನೆಂಬೊರ್ವಮುನಿ | ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ | ಚಿಂತೆವೆತ್ತಿರಲವನಿದೇನೆಂದು ಬೆಸೆಗೊಂಡೊಡವಳ ಪ್ರತಿಕೂಲತೆಯನು ||
ಅಂತರಿಸದೆಲ್ಲಮಂ ಪೇಳ್ದೊಡವನಿದಕೆ ನೀಂ | ಮುಂತೆ ವಿಪರೀತಮಂ ಮಾಡಲಾದಪುದೆಂದು | ಸಂತಾಪಮಂ ಬಿಡಿಸಿ ಬೀಳ್ಕೊಂಡವಂ ತೀರ್ಥ ಯಾತ್ರೆಗೈದಿದನಿತ್ತಲು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂತು ಇರುತಿರೆಲ್ಕೆ ಕೌಂಡಿನ್ಯನೆಂಬ ಓರ್ವಮುನಿಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ ಚಿಂತೆವೆತ್ತಿರಲು=[ಹೀಗೆ ಇರಲಾಗಿ ಕೌಂಡಿನ್ಯನೆಂಬ ಒಬ್ಬ ಮುನಿಯು ತನ್ನ ಮನೆಗೆ ಬರಲು ಆತನನ್ನು ಸತ್ಕರಿಸಿ ಮುಖದಲ್ಲಿ ಚಿಂತೆತೋರುತ್ತಿರಲು]; ಅವನು ಇದೇನೆಂದು ಬೆಸೆಗೊಂಡೊಡೆ ಅವಳ ಪ್ರತಿಕೂಲತೆಯನು ಅಂತರಿಸದೆ ಎಲ್ಲಮಂ ಪೇಳ್ದೊಡೆ=[ಅವನು ಚಿಂತೆ ಏನೆಂದು ಕೇಳಿದೊಡನೆ ಪತ್ನಿಯ ಹೇಳಿದ ಕೆಲಸವನ್ನು ಪ್ರತಿಕೂಲವಾಗಿ/ವಿರುದ್ಧವಾಗಿ ಮಾಡುವುದನ್ನು ಮೆರೆಮಾಚದೆ ಎಲ್ಲವನ್ನೂ ಹೇಳಿದಾಗ]; ಅವನಿದಕೆ ನೀಂಮುಂತೆ ವಿಪರೀತಮಂ ಮಾಡಲಾದಪುದು ಎಂದು ಸಂತಾಪಮಂ ಬಿಡಿಸಿ ಬೀಳ್ಕೊಂಡು ಅವಂ ತೀರ್ಥ ಯಾತ್ರೆಗೆ ಐದಿದನು ಇತ್ತಲು=[ ಅವನು ಇದಕ್ಕೆ, 'ನೀನು ಮೊದಲೇ ವಿರುದ್ಧವಾಗಿ /ವಿಪರೀತವಾಗಿ ಮಾಡುವಂತೆ ಹೇಳಿದರೆ ನಿನ್ನ ಕೆಲಸಾಗುವುದು ಎಂದು ಚಿಂತೆಯನ್ನು ಬಿಡಿಸಿ ಬೀಳ್ಕೊಂಡು ಅವನು ತೀರ್ಥ ಯಾತ್ರೆಗೆ ಹೋದನು; ಇತ್ತಲು].
  • ತಾತ್ಪರ್ಯ:ಹೀಗೆ ಇರಲಾಗಿ ಕೌಂಡಿನ್ಯನೆಂಬ ಒಬ್ಬ ಮುನಿಯು ತನ್ನ ಮನೆಗೆ ಬರಲು ಆತನನ್ನು ಸತ್ಕರಿಸಿ ಮುಖದಲ್ಲಿ ಚಿಂತೆತೋರುತ್ತಿರಲು, ಅವನು ಚಿಂತೆ ಏನೆಂದು ಕೇಳಿದೊಡನೆ ಪತ್ನಿಯ ಹೇಳಿದ ಕೆಲಸವನ್ನು ಪ್ರತಿಕೂಲವಾಗಿ/ವಿರುದ್ಧವಾಗಿ ಮಾಡುವುದನ್ನು ಮೆರೆಮಾಚದೆ ಎಲ್ಲವನ್ನೂ ಹೇಳಿದಾಗ; ಅವನು ಇದಕ್ಕೆ, 'ನೀನು ಮೊದಲೇ ವಿರುದ್ಧವಾಗಿ /ವಿಪರೀತವಾಗಿ ಮಾಡುವಂತೆ ಹೇಳಿದರೆ ನಿನ್ನ ಕೆಲಸಾಗುವುದು ಎಂದು ಚಿಂತೆಯನ್ನು ಬಿಡಿಸಿ ಬೀಳ್ಕೊಂಡು ಅವನು ತೀರ್ಥ ಯಾತ್ರೆಗೆ ಹೋದನು; ಇತ್ತಲು].

(ಪದ್ಯ - ೨೫)

ಪದ್ಯ :-:೨೬:[ಸಂಪಾದಿಸಿ]

ಉದ್ದಾಲಕಂ ಬಳಿಕ ತನ್ನ ಮಂದಿರದೊಳಿರುತಿದ್ದ ಸಮಯಕೆ ಪಿತೃಶ್ರಾದಿವಸಂ ಬಂದೊಡೆದ್ದು ಚಂಡಿಯೊಳೆಲಗೆ ನಾಳೆ ಪೈತೃಕಮದಂ ನಾಡಿದಲ್ಲದೆ ಮಾಡೆನು ||
ಕದ್ದು ತಹೆನಧಮಧಾನ್ಯ ವ್ರೀಹಿ ಶಾಕಮಂ | ಪೆಒದ್ದಲೀಯೆಂ ಶುದ್ಧವಸ್ತುಗಳ ನೊಂದುಮಂ | ತದ್ದಿನಕೆ ಮರುದಿವಸದೊಳ್ ಪೇಳ್ದು ಬಹೆನಪಾತ್ರಂಗೆಂದೊಡಿಂತೆಂದಳು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉದ್ದಾಲಕಂ ಬಳಿಕ ತನ್ನ ಮಂದಿರದೊಳು ಇರುತಿದ್ದ ಸಮಯಕೆ ಪಿತೃಶ್ರಾದಿವಸಂ ಬಂದೊಡೆ=[ಉದ್ದಾಲಕನು ಬಳಿಕ ತನ್ನ ಮನೆಯಲ್ಲಿ ಇರುತ್ತಿದ್ದ ಸಮಯಕ್ಕೆ ಪಿತೃಶ್ರಾದಿವಸವು ಬಂದಾಗ]; ಎದ್ದು ಚಂಡಿಯೊಳ್ ಎಲಗೆ ನಾಳೆ ಪೈತೃಕಮು ಅದಂ ನಾಡಿದಲ್ಲದೆ ಮಾಡೆನು=[ಎದ್ದು ಚಂಡಿಯಬಳಿ ಎಲೆ ಚಂಡಿ, ನಾಳೆ ಪೈತೃಕವು/ ಪಿತೃಶ್ರಾದ್ಧವು, ಅದಂ ನಾಡಿದ್ದು ಅಲ್ಲದೆ ಅದಕ್ಕೆ ಮೊದಲು ಮಾಡುವುದಿಲ್ಲ.]; ಕದ್ದು ತಹೆನು ಅಧಮಧಾನ್ಯ ವ್ರೀಹಿ ಶಾಕಮಂ ಪೊದ್ದಲೀಯೆಂ(ತರು,ಹೊಂದಿಸು) ಶುದ್ಧವಸ್ತುಗಳ ನೊಂದುಮಂ=[ಅದಕ್ಕೆ ಕೊಳಕು ಧಾನ್ಯ ಅಕ್ಕಿ ತರಕಾರಿಗಳನ್ನು ಕದ್ದು ತರುವೆನು, ಶುದ್ಧವಸ್ತುಗಳನು ಒಂದನ್ನೂತರುವುದಿಲ್ಲ]; ತದ‍್ ದಿನಕೆ ಮರುದಿವಸದೊಳ್ ಪೇಳ್ದು ಬಹೆನು ಅಪಾತ್ರಂಗೆ ಎಂದೊಡೇ ಇಂತೆಂದಳು=[ಆ ದಿನಕ್ಕೆ ಬದಲಾಗಿ ಮರುದಿವಸದಲ್ಲಿ(ನಾಳೆ) ಅಪಾತ್ರನಿಗೆ ಪೇಳಿ ಬರುವೆನು ಎಂದಾಗ ಅವಳು ಹೀಗೆ ಹೇಳಿದಳು];
  • ತಾತ್ಪರ್ಯ: ಉದ್ದಾಲಕನು ಬಳಿಕ ತನ್ನ ಮನೆಯಲ್ಲಿ ಇರುತ್ತಿದ್ದ ಸಮಯಕ್ಕೆ ಪಿತೃಶ್ರಾದಿವಸವು ಬಂದಾಗ, ಎದ್ದು ಚಂಡಿಯಬಳಿ ಎಲೆ ಚಂಡಿ, ನಾಳೆ ಪೈತೃಕವು/ ಪಿತೃಶ್ರಾದ್ಧವು, ಅದನ್ನು ನಾಡಿದ್ದು ಅಲ್ಲದೆ ಅದಕ್ಕೆ ಮೊದಲು ಮಾಡುವುದಿಲ್ಲ. ಅದಕ್ಕೆ ಕೊಳಕು ಧಾನ್ಯ ಅಕ್ಕಿ ತರಕಾರಿಗಳನ್ನು ಕದ್ದು ತರುವೆನು, ಶುದ್ಧವಸ್ತುಗಳನು ಒಂದನ್ನೂತರುವುದಿಲ್ಲ; ಆ ದಿನಕ್ಕೆ ಬದಲಾಗಿ ಮರುದಿವಸದಲ್ಲಿ (ನಾಳೆ) ಅಪಾತ್ರನಿಗೆ ಪೇಳಿ ಬರುವೆನು ಎಂದಾಗ ಅವಳು ಹೀಗೆ ಹೇಳಿದಳು];

(ಪದ್ಯ - ೨೬)

ಪದ್ಯ :-:೨೭:[ಸಂಪಾದಿಸಿ]

ನಾಳೆ ಮಾಡಿಸುವೆನಾ ಪೈತೃಕವನುತ್ತಮದ | ಶಾಲಿಧಾನ್ಯ ವ್ರೀಹಿ ಶಾಕಮಂ ಕೊಂಡು ಬಹೆ | ನಾಲಯವನತಿಶುದ್ಧಮಾದ ವಸ್ತುಗಳಿನಲ್ಲದೆ ಕೂಡೆನಳ್ತಿಯಿಂದೆ ||
ಪೇಳಿಸುವೆನಂದಿನ ದಿನದ ಮೊದಲ ರಾತ್ರಿಯೆ ವಿ | ಶಾಲಗುಣಸಂಪನ್ನ ವೇದಪಾರಂಗತ ಸು | ಶೀಲರಹ ಸತ್ಪಾತ್ರದವನಿಯಮರರ್ಗೆನಲ್ ಚಂಡಿಗವನಿಂತೆಂದನು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಾಳೆ ಮಾಡಿಸುವೆನು ಆ ಪೈತೃಕವನುತ್ತಮದ ಶಾಲಿಧಾನ್ಯ ವ್ರೀಹಿ ಶಾಕಮಂ ಕೊಂಡು ಬಹೆನು=[ನಾಳೆಯೇ ಮಾಡಿಸುವೆನು ಆ ಪೈತೃಕವನ್ನು, ಉತ್ತಮವಾದ ಶಾಲಿಧಾನ್ಯ ವ್ರೀಹಿ/ಅಕ್ಕಿ ಶಾಕವನ್ನು(ತರಕಾರಿ) ಕೊಂಡುತರುವೆನು]; ಆಲಯವನು ಅತಿಶುದ್ಧಮಾದ ವಸ್ತುಗಳಿನಲ್ಲದೆ ಕೂಡೆನು ಅಳ್ತಿಯಿಂದೆ ಪೇಳಿಸುವೆನು ಅಂದಿನ ದಿನದ ಮೊದಲ ರಾತ್ರಿಯೆ ವಿಶಾಲಗುಣಸಂಪನ್ನ ವೇದಪಾರಂಗತ ಸುಶೀಲರಹ ಸತ್ಪಾತ್ರದ ಅವನಿಯಮರರ್ಗೆ (ಬ್ರಾಹ್ಮಣರಿಗೆ) ಎನಲ್=[ಮನೆಯನ್ನು ಅತಿಶುದ್ಧವಾದ ವಸ್ತುಗಳಿನ್ನು ಅಲ್ಲದೆ ಕೂಡೆನು- ಶದ್ಧವಸ್ತುಗಳನ್ನೇಕೊಡುತ್ತೇನೆ; ಪ್ರೀತಿಯಿಂದ ಹೇಳಿಸುವೆನು ಅಂದಿನ ದಿನದ ಮೊದಲ ರಾತ್ರಿಯೆ ವಿಶಾಲಗುಣಸಂಪನ್ನ ವೇದಪಾರಂಗತ ಸುಶೀಲನಾಗಿರುವ, ಸತ್ಪಾತ್ರದ ಬ್ರಾಹ್ಮಣರಿಗೆ ಎನ್ನಲು]; ಚಂಡಿಗವನಿಂತೆಂದನು=[ಚಂಡಿಗೆ ಅವನು ಹೀಗೆ ಹೇಳಿದನು.]
  • ತಾತ್ಪರ್ಯ: ನಾಳೆಯೇ ಆ ಪೈತೃಕವನ್ನು ಮಾಡಿಸುವೆನು, ಉತ್ತಮವಾದ ಶಾಲಿಧಾನ್ಯ ವ್ರೀಹಿ/ಅಕ್ಕಿ ಶಾಕವನ್ನು(ತರಕಾರಿ) ಕೊಂಡುತರುವೆನು; ಮನೆಯನ್ನು ಅತಿಶುದ್ಧವಾದ ವಸ್ತುಗಳಿನ್ನು ಅಲ್ಲದೆ ಕೂಡೆನು- ಶದ್ಧವಸ್ತುಗಳನ್ನೇಕೊಡುತ್ತೇನೆ; ಪ್ರೀತಿಯಿಂದ ಹೇಳಿಸುವೆನು ಅಂದಿನ ದಿನದ ಮೊದಲ ರಾತ್ರಿಯೆ ವಿಶಾಲಗುಣಸಂಪನ್ನ ವೇದಪಾರಂಗತ ಸುಶೀಲನಾಗಿರುವ, ಸತ್ಪಾತ್ರದ ಬ್ರಾಹ್ಮಣರಿಗೆ ಎನ್ನಲು; ಚಂಡಿಗೆ ಅವನು ಹೀಗೆ ಹೇಳಿದನು.

(ಪದ್ಯ - ೨೭)XX

ಪದ್ಯ :-:೨೮:[ಸಂಪಾದಿಸಿ]

ಆದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ ಳಾದರಿಸೆ ನಾಂ ಬಂದ ವಿಪ್ರರಂ ಪಾಕದ ನ | ವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಭಕ್ಷ್ಯ ಭೋಜ್ಯಾದಿಗಳನು
ಸ್ವಾದುಫಲ ಶರ್ಕರ ವಿನುತ ಶಾಕ ನಿರ್ಮಲ ಪ | ಯೋದಧಿಗಳಂ ಸಕುತ್ಸಿತಮಾಗದಂತೆ ಸಂ | ಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆದೊಡೆ ಕುತುಪಕಾಲಮಂ(೧೫ನೇ ಘಳಿಗೆಯಿಂದ೨೪ನೇ ಘಳಿಗೆ) ಬಿಡುವೆನರ್ಚನೆಯೊ ಳಾದರಿಸೆ=[ಆದರೆ ಕುತುಪಕಾಲಮಂ(೧೫ನೇ ಘಳಿಗೆಯಿಂದ೨೪ನೇ ಘಳಿಗೆ) ಬಿಡುವೆನು ಅರ್ಚನೆಯಲ್ಲಿ ಆದರಿಸುವುದಿಲ್ಲ]; ಆಂ ಬಂದ ವಿಪ್ರರಂ ಪಾಕದ ನವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಭಕ್ಷ್ಯ ಭೋಜ್ಯಾದಿಗಳನು=[ನಾನು ಬಂದ ವಿಪ್ರರ ಪಾಕದ/ಬೇಯಿಸಿದ ನವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಭಕ್ಷ್ಯ ಭೋಜ್ಯಾದಿಗಳನ್ನು]; ಸ್ವಾದುಫಲ(ಸಿಹಿ) ಶರ್ಕರ/ಸಕ್ಕರೆ ವಿನುತ ಶಾಕ ನಿರ್ಮಲ ಪಯೋದಧಿಗಳಂ ಸಕುತ್ಸಿತಮಾಗಂತೆ ಸಂಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು=[ಸ್ವಾದು/ ಸಿಹಿ ಫಲ ಸಕ್ಕರೆ, ಉತ್ತಮ ಶಾಕ, ನಿರ್ಮಲಶುದ್ಧ ಪಯೋದಧಿಗಳನ್ನು ಸಕುತ್ಸಿತಮಾಗದಂತೆ ಸಂಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು.]
  • ತಾತ್ಪರ್ಯ: ಆದರೆ ಕುತುಪಕಾಲಮಂ(೧೫ನೇ ಘಳಿಗೆಯಿಂದ೨೪ನೇ ಘಳಿಗೆ) ಬಿಡುವೆನು ಅರ್ಚನೆಯೊಳು ಆದರಿಸೆನು; ನಾನು ಬಂದ ವಿಪ್ರರ ಪಾಕದ/ಬೇಯಿಸಿದ ನವಅನ್ನ, ಸುಪಾಯಸ, ಗುಡಾಜ್ಯ, ಮಧು ತೈಲ, ಮೃದುಭಕ್ಷ್ಯ, ಭೋಜ್ಯಾದಿಗಳನ್ನು, ಸ್ವಾದುಫಲ(ಸಿಹಿ) ಶರ್ಕರ/ಸಕ್ಕರೆ ವಿನುತ ಶಾಕ ನಿರ್ಮಲ ಪಯೋದಧಿಗಳಂ(ಹಾಲು ಮೊಸರು) ಸಕುತ್ಸಿತಮಾಗಂತೆ(ಕುಂದಿಲ್ಲದೆ) ಸಂಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು=[ಸ್ವಾದು/ ಸಿಹಿ, ಫಲ, ಸಕ್ಕರೆ, ಉತ್ತಮ ಶಾಕ, ನಿರ್ಮಲ ಹಾಲು ಮೊಸರುಗಳನ್ನು ಕುಂದಿಲ್ಲದಂತೆ ಸಂಪಾದಿಸಿ ಪಿತೃಶ್ರಾದ್ಧವನ್ನು ಮಾಡಿ ವಸ್ತ್ರದಕ್ಷಿಣೆಗಳನ್ನು ಕೊಡುವುದಿಲ್ಲ ಎಂದನು.

(ಪದ್ಯ - ೨೮)

ಪದ್ಯ :-:೨೯:[ಸಂಪಾದಿಸಿ]

ಎಂದೊಡೆ ಕುತುಪಕಾಲಮಂ ಮೀರಲೀಯೆನಾಂ | ಬಂದ ವಿವ್ರರನಾದರಸಿ ಪೂಜೆಗೈಸದಿರೆ | ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಸದೆ ಮಾಣೆನು ||
ತಂದಮಲವಸ್ತ್ರ ತಾಂಬೂಲ ವರದಕ್ಷಿಣೆಗ | ಳಿಂದೆ ಸತ್ಕರಿಸಿ ಕಳುಹಿಸದೆ ಬಿಡೆನೆನುತ ನಲ | ವಿಂದೊದವಿಸಿ ಳಖಿಲಸದ್ರವ್ಯಮಂ ಬಳಿಕ ಚಂಡಿ ಪಾಕಂಗೈದಳು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹಾಗೆ ಉದ್ದಾಲಕ ಹೇಳಿದಾಗ ಎಂದೊಡೆ ಕುತುಪಕಾಲಮಂ ಮೀರಲು ಈಯೆನಾಂ ಬಂದ ವಿವ್ರರನು ಆದರಸಿ ಪೂಜೆಗೈಸದೆ ಇರೆ ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ-ಇಂದು ಒಲ್ಲೆನೆಂದು ಒಕ್ಕಣಿಸಿದ ಇನಿತು ಎನೆಲ್ಲಮಂ=[ಹಾಗೆ ಉದ್ದಾಲಕ ಹೇಳಿದಾಗ ಪಿಂಡ ಕೊಡಲುಯೋಗ್ಯವಾದ ಕುತುಪಕಾಲವನ್ನು ಮೀರಲು ಬಿಡೆನು, ಬಂದ ವಿವ್ರರನ್ನು ಆದರಸಿ ಪೂಜೆಮಾಡಿಸದೆ ಇರೆನು (ಮಾಡಿಸುತ್ತೇನೆ), ಇಂದು ಕೂಡದೆಂದು ಹೇಳಿದ ಇವೆನೆಲ್ಲವನ್ನೂ]; ಸಂಪಾದಿಸದೆ ಮಾಣೆನು ತಂದಮಲವಸ್ತ್ರ ತಾಂಬೂಲ ವರದಕ್ಷಿಣೆಗಳಿಂದೆ ಸತ್ಕರಿಸಿ ಕಳುಹಿಸದೆ ಬಿಡೆನೆನುತ ನಲವಿಂದೊದವಿಸಿ ಳಖಿಲಸದ್ರವ್ಯಮಂ ಬಳಿಕ ಚಂಡಿ ಪಾಕಂಗೈದಳು=[ಸಂಪಾದಿಸದೆ ಮಾಮಾಡುವುದಿಲ್ಲ; ತಂದ ಶುದ್ಧವಾದ ವಸ್ತ್ರ, ತಾಂಬೂಲ, ವರದಕ್ಷಿಣೆಗಳಿಂದ ಸತ್ಕರಿಸಿ ಕಳುಹಿಸದೆ ಬಿಡೆನು, ಎನ್ನುತ್ತಾ ಸಂತೋಷದಿಂದ ತಂದು ಎಲ್ಲಾ ವಸ್ತುಗಳನ್ನೂ ಬಳಿಕ ಚಂಡಿ ಅಡಿಗೆ ಮಾಡಿದಳು.]
  • ತಾತ್ಪರ್ಯ:ಹಾಗೆ ಉದ್ದಾಲಕ ಹೇಳಿದಾಗ ಪಿಂಡ ಕೊಡಲುಯೋಗ್ಯವಾದ ಕುತುಪಕಾಲವನ್ನು ಮೀರಲು ಬಿಡೆನು, ಬಂದ ವಿವ್ರರನ್ನು ಆದರಸಿ ಪೂಜೆಮಾಡಿಸದೆ ಇರೆನು (ಮಾಡಿಸುತ್ತೇನೆ), ಇಂದು ಕೂಡದೆಂದು ಹೇಳಿದ ಇವೆನೆಲ್ಲವನ್ನೂ ಸಂಪಾದಿಸದೆ ಮಾಡುವುದಿಲ್ಲ; ತಂದ ಶುದ್ಧವಾದ ವಸ್ತ್ರ, ತಾಂಬೂಲ, ವರದಕ್ಷಿಣೆಗಳಿಂದ ಸತ್ಕರಿಸಿ ಕಳುಹಿಸದೆ ಬಿಡೆನು, ಎನ್ನುತ್ತಾ ಸಂತೋಷದಿಂದ ತಂದು ಎಲ್ಲಾ ವಸ್ತುಗಳನ್ನೂ ಬಳಿಕ ಚಂಡಿ ಅಡಿಗೆ ಮಾಡಿದಳು.]

(ಪದ್ಯ - ೨೯)

ಪದ್ಯ :-:೩೦:[ಸಂಪಾದಿಸಿ]

ಕಂಡನೀತೆರನನುದ್ದಾಲಕಂ ಸಂತಸಂ | ಗೊಂಡು ಮನದೊಳ್ ವೊರಗೆ ತಾನೊಪ್ಪದವನಾಗಿ | ಚಂಡಿ ಪೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ ||
ತೊಂಡುತೊಳಸಂ ಮರೆದು ಕರ್ಮಾಂಗಮಾಗಿರ್ದ | ಪಿಂಡಮಂ ತೆಗೆದು ಮಡುವಿನೊಳೆ ಹಾಯ್ಕೆಂದೊಡು | ದ್ದಂಡದಿಂದೆತ್ತಿ ಬೀದಿಗೆ ಬಿಸುಡಲಾ ನ್ವಿಜಂ ರೋಷಭಿಷಣನಾದನು ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂಡನು ಈ ತೆರನನು ಉದ್ದಾಲಕಂ ಸಂತಸಂಗೊಂಡು ಮನದೊಳ್ ವೊರಗೆ ತಾನು ಒಪ್ಪದವನಾಗಿ ಚಂಡಿ ಪೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ=[ಉದ್ದಾಲಕನು ಈ ಬಗೆಯನ್ನು ಕಂಡನು, ಮನಸ್ಸಿನಲ್ಲಿ ಸಂತೋಷಗೊಂಡನು, ಆದರೆ ಹೊರಗೆ ತಾನು ಒಪ್ಪದವನಂತೆ ಇದ್ದು, ಚಂಡಿ ಪೇಳಿದಂತೆಯೇ ಶ್ರಾದ್ಧವನ್ನು ಮಾಡಿ ಆನಂದದಿಂದಲ್ಲಿ ಮೈಮರೆತು, ]; ವಿಪರೀತದ ತೊಂಡುತೊಳಸಂ ಮರೆದು ಕರ್ಮಾಂಗಮಾಗಿರ್ದ ಪಿಂಡಮಂ ತೆಗೆದು ಮಡುವಿನೊಳೆ ಹಾಯ್ಕೆಂದೊಡುದ್ದಂಡದಿಂದೆತ್ತಿ ಬೀದಿಗೆ ಬಿಸುಡಲಾ ದ್ವಿಜಂ ರೋಷಭಿಷಣನಾದನು=[ವಿರುದ್ಧವಾಗಿ ಹೇಳುವ ತೊಂಡುತೊಳಸಿನ/ ಸೊಕ್ಕಿಗೆತಿರುಮುರುವಿನ ಪ್ರಯೋಗ ಮರೆತು ಪಿತೃಕರ್ಮಾಂಗದ, 'ಪಿಂಡವನ್ನು ತೆಗೆದುಕೊಂಡುಹೋಗಿ ಮಡುವಿನಲ್ಲಿ ಹಾಕು' ಎಂದೊಡೆ ಉದ್ದಂಡದಿಂದ ಎತ್ತಿ ಬೀದಿಗೆ ಬಿಸುಡಲು, ಆ ಬ್ರಾಹ್ಮಣನು ಭಯಂಕರ ಕೋಪಾವಿಷ್ಠನಾದನು.].
  • ತಾತ್ಪರ್ಯ:ಉದ್ದಾಲಕನು ಈ ಬಗೆಯನ್ನು ಕಂಡನು, ಮನಸ್ಸಿನಲ್ಲಿ ಸಂತೋಷಗೊಂಡನು, ಆದರೆ ಹೊರಗೆ ತಾನು ಒಪ್ಪದವನಂತೆ ಇದ್ದು, ಚಂಡಿ ಪೇಳಿದಂತೆಯೇ ಶ್ರಾದ್ಧವನ್ನು ಮಾಡಿ ಆನಂದದಿಂದಲ್ಲಿ ಮೈಮರೆತು, ವಿರುದ್ಧವಾಗಿ ಹೇಳುವ ತೊಂಡುತೊಳಸಿನ/ ಸೊಕ್ಕಿಗೆತಿರುಮುರುವಿನ ಪ್ರಯೋಗ ಮರೆತು ಪಿತೃಕರ್ಮಾಂಗದ, 'ಪಿಂಡವನ್ನು ತೆಗೆದುಕೊಂಡುಹೋಗಿ ಮಡುವಿನಲ್ಲಿ ಹಾಕು' ಎಂದಾಗ ಚಂಡಿ ಉದ್ದಂಡದಿಂದ ಎತ್ತಿ ಬೀದಿಗೆ ಬಿಸುಡಲು, ಆ ಬ್ರಾಹ್ಮಣನು ಭಯಂಕರ ಕೋಪಾವಿಷ್ಠನಾದನು.

(ಪದ್ಯ - ೩೦)

ಪದ್ಯ :-:೩೧:[ಸಂಪಾದಿಸಿ]

ಎಲೆಗೆ ನಿನ್ನೊಡನೆ ನಾನೇಂ ಹಗೆ(ರಿ)ಯಹೋರುವೆಂ | ಛಲಿತನಕಲಸಿದೆ ನೀನರೆಯಾಗಿ ಹೋಗೆಂದು | ಸಲೆ ಮುಳಿದು ಶಾಪವಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ ಕೂಡೆ ತಿಳಿದು ||
ಕೆಲವುಕಾಲಕೆ ನಿನ್ನೊಳಧ್ವರಹಯಂ ಬಂದು | ನಿಲಲರ್ಜುನಂ ಬಿಡಿಸಿದೊಡೆ ಮೋಕ್ಷಮಹುದೆಂದು | ತೊಲಗಿದಂ ಸನ್ಯಾಸಕವನತ್ತಲವನಿಯೊಳ್ ಕಲ್ಲಾದಳಿವಳಿತ್ತಲು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲೆಗೆ ನಿನ್ನೊಡನೆ ನಾನು ಏಂ ಹಗೆಯ ಹೋರುವೆಂ ಛಲಿತನಕೆ ಅಲಸಿದೆ=[ಎಲೆ ಹೆಣ್ಣೇ ನಿನ್ನೊಡನೆ ನಾನು ಏಕೆ ಕಾರಣವಿಲ್ಲದೆ ಹಗೆತನಕ್ಕೆ ಹೋರಾಡಲಿ? ಹಠಕ್ಕೆಬಿದ್ದು ಕರ್ತವ್ಯಮಾಡದೆ ಆಲಸ್ಯಮಾಡಿದೆ]; ನೀನರೆಯಾಗಿ ಹೋಗೆಂದು ಸಲೆ ಮುಳಿದು ಶಾಪವಂ ಕೊಟ್ಟು ಕಾರುಣ್ಯದಿಂದ ಆ ದ್ವಿಜಂ ಕೂಡೆ ತಿಳಿದು=['ನೀನು ಅರೆಯಾಗಿ / ಕಲ್ಲಾಗಿಹೋಗು' ಎಂದು ಅತಿ ಸಿಟ್ಟಿನಿಂದ ಶಾಪವನ್ನು ಕೊಟ್ಟು ಮತ್ತೆ ಕಾರುಣೆಯಿಂದ ಆ ಬ್ರಾಹ್ಮಣನು ಕೂಡೆ ಯೋಚಿಸಿ,]; ಕೆಲವುಕಾಲಕೆ ನಿನ್ನೊಳು ಅಧ್ವರಹಯಂ ಬಂದು ನಿಲಲು ಅರ್ಜುನಂ ಬಿಡಿಸಿದೊಡೆ ಮೋಕ್ಷಮ್ ಅಹುದೆಂದು ತೊಲಗಿದಂ ಸನ್ಯಾಸಕೆ ಅವನು ಅತ್ತಲು ಅವನಿಯೊಳ್ ಕಲ್ಲಾದಳು ಇವಳು ಇತ್ತಲು=[ಕೆಲವುಕಾಲದ ನಂತರ ಕಲ್ಲಾದ ನಿನ್ನ ಮೇಲೆ ಅಧ್ವರದಕುದುರೆ ಬಂದು ನಿಲ್ಲಲು, ಅರ್ಜುನನು ಅದನ್ನು ಬಿಡಿಸಿದಾಗ ನಿನಗೆ ಮೋಕ್ಷವು ಆಗುವುದೆಂದು ಹೇಳಿ ಸಂನ್ಯಾಸ ಸ್ವೀಕರಿಸಲು ಅವನು ಅತ್ತ ಹೊರಟು ಹೋದನು. ಇವಳು ಇತ್ತ ಭೂಮಿಯಲ್ಲಿ ಕಲ್ಲಾದಳು].
  • ತಾತ್ಪರ್ಯ:ಎಲೆ ಹೆಣ್ಣೇ ನಿನ್ನೊಡನೆ ನಾನು ಏಕೆ ಕಾರಣವಿಲ್ಲದೆ ಹಗೆತನಕ್ಕೆ ಹೋರಾಡಲಿ? ಹಠಕ್ಕೆಬಿದ್ದು ಕರ್ತವ್ಯಮಾಡದೆ ಆಲಸ್ಯಮಾಡಿದೆ; 'ನೀನು ಅರೆಯಾಗಿ / ಕಲ್ಲಾಗಿಹೋಗು' ಎಂದು ಅತಿ ಸಿಟ್ಟಿನಿಂದ ಶಾಪವನ್ನು ಕೊಟ್ಟು ಮತ್ತೆ ಕರುಣೆಯಿಂದ ಆ ಬ್ರಾಹ್ಮಣನು ಕೂಡಲೆ ಯೋಚಿಸಿ, ಕೆಲವುಕಾಲದ ನಂತರ ಕಲ್ಲಾದ ನಿನ್ನ ಮೇಲೆ ಯಜ್ಞದಕುದುರೆ ಬಂದು ನಿಲ್ಲಲು, ಅರ್ಜುನನು ಅದನ್ನು ಬಿಡಿಸಿದಾಗ ನಿನಗೆ ಮೋಕ್ಷವು ಆಗುವುದೆಂದು ಹೇಳಿ, ಸಂನ್ಯಾಸ ಸ್ವೀಕರಿಸಲು ಅವನು ಅತ್ತ ಹೊರಟು ಹೋದನು. ಇವಳು ಇತ್ತ ಭೂಮಿಯಲ್ಲಿ ಕಲ್ಲಾದಳು.

(ಪದ್ಯ - ೩೧)

ಪದ್ಯ :-:೩೨:[ಸಂಪಾದಿಸಿ]

ಮೋಕ್ಷಮಹುದಾಗಿ ಚಂಡಿಗೆ ಶಾಪಪಮೀಗಳುಪ | ಸಾಕ್ಷಿಗೈತಂದು ನಿಂದುದು ಹಯಂ ನೀಂ ಮುಟ್ಟ | ಲೀಕ್ಷಣದೊಳೆದ್ದು ಪೋದಪುದು ಪÉÇೀಗಿನ್ನು ಮುಂದಣ ನೃಪರ್ ಬಲವಂತರು ||
ರಾಕ್ಷಸಾರಿಯನೆ ಮರೆಯದಿರೆಂದು ಸೌಭರಿ ನಿ | ರೀಕ್ಷಿಸಿ ಕೃಪಾವಲೋಕದಿಂದೆ ವರಸಹ | ಸ್ರಾಕ್ಷನ ಕುಮಾರನಂ ಕಳುಹಲಾನತನಾಗಿ ವಿನಯದಿಂ ಬೀಳ್ಕೊಂಡನು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೋಕ್ಷಂ ಅಹುದಾಗಿ ಚಂಡಿಗೆ ಶಾಪಂ ಈಗಳು ಉಪಸಾಕ್ಷಿಗೆ ಐತಂದು ನಿಂದುದು ಹಯಂ=[ಚಂಡಿಗೆ ಮೋಕ್ಷವು ಬೇಕಾಗಿ ಶಾಪವು ಈಗ ಶಾಪವಿಮೋಚನೆಗೆ ಕುದುರೆಯು ಅಲ್ಲಿ ಬಂದು ನಿಂತಿದೆ ]; ನೀಂ ಮುಟ್ಟ ಲು ಈಕ್ಷಣದೊಳು ಎದ್ದು ಪೋದಪುದು ಪೋಗಿನ್ನು ಮುಂದಣ ನೃಪರ್ ಬಲವಂತರು=[ ನೀನು ಮುಟ್ಟಲು ಈ ಕ್ಷಣದಲ್ಲಿ ಕುದುರೆ ಎದ್ದು ಹೋಗುವುದು. ಹೋಗು, ಇನ್ನು ಮುಂದಣ ರಾಜರು ಬಲಶಾಲಿಗಳು.]; ರಾಕ್ಷಸಾರಿಯನೆ ಮರೆಯದಿರೆಂದು ಸೌಭರಿ ನಿರೀಕ್ಷಿಸಿ ಕೃಪಾವಲೋಕದಿಂದೆ ವರಸಹಸ್ರಾಕ್ಷನ ಕುಮಾರನಂ ಕಳುಹಲಾನತನಾಗಿ ವಿನಯದಿಂ ಬೀಳ್ಕೊಂಡನು=[ಕೃಷ್ಣನನ್ನು ಮರೆಯದಿರು ಎಂದು ಸೌಭರಿ ಕೃಪಾವಲೋಕದಿಂದ ಅವನನ್ನು ನೋಡಿ, ಅರ್ಜುನನ್ನು ಕಳುಹಿಸಲು, ಅವನು ಮುನಿಗೆ ನಮಸ್ಕರಿಸಿ ವಿನಯದಿಂದ ಬೀಳ್ಕೊಂಡು ಹೊರಟನು.]
  • ತಾತ್ಪರ್ಯ:ಚಂಡಿಗೆ ಮೋಕ್ಷವು ಬೇಕಾಗಿ ಶಾಪವು ಈಗ ಶಾಪವಿಮೋಚನೆಗೆ ಕುದುರೆಯು ಅಲ್ಲಿ ಬಂದು ನಿಂತಿದೆ. ನೀನು ಮುಟ್ಟಲು ಈ ಕ್ಷಣದಲ್ಲಿ ಕುದುರೆ ಎದ್ದು ಹೋಗುವುದು. ಹೋಗು, ಇನ್ನು ಮುಂದಣ ರಾಜರು ಬಲಶಾಲಿಗಳು. ಕೃಷ್ಣನನ್ನು ಮರೆಯದಿರು, ಎಂದು ಸೌಭರಿ ಕೃಪಾವಲೋಕದಿಂದ ಅವನನ್ನು ನೋಡಿ, ಅರ್ಜುನನ್ನು ಕಳುಹಿಸಲು, ಅವನು ಮುನಿಗೆ ನಮಸ್ಕರಿಸಿ ವಿನಯದಿಂದ ಬೀಳ್ಕೊಂಡು ಹೊರಟನು.

(ಪದ್ಯ - ೩೨)

ಪದ್ಯ :-:೩೩:[ಸಂಪಾದಿಸಿ]

ತದನಂತರದೊಳರ್ಜುನಂ ಬಂದು ಕುದುರೆಯಂ | ಮುದದಿಂದೆಮುಟ್ಟಲದು ಬಿಟ್ಟು ನಡೆದುದು ಮುಂದ | ಕೊದರಿಕೊಳುತೆದ್ದು ನರನಂ ಕಂಡು ಚಂಡಿತಪಕಾಗಿ ಕಳುಹಿಸಿಕೊಂಡಳೂ ||
ಒದವಿದ ಸಮಸ್ತ ಜನಮಾಗ ವಿಸ್ಮಿತಮಾದು | ದುದಿರಿತು ಕುಸುಮವೃಷ್ಟಿ ಬಳಿಕ ದಕ್ಷಿಣಕೆ ನಡೆ | ದುದು ವಾಜಿ ಚಂಪಕಾಪುರಕಂದು ಹಿಂದೆ ಬಹ ಪಡೆಸಹಿತ ವಹಿಲದಿಂ ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತದನಂತರದೊಳು ಅರ್ಜುನಂ ಬಂದು ಕುದುರೆಯಂ ಮುದದಿಂದೆ ಮುಟ್ಟಲದು ಬಿಟ್ಟು ನಡೆದುದು ಮುಂದಕೆ ಒದರಿಕೊಳುತ ಎದ್ದು=[ಆ ನಂತರ ಅರ್ಜುನನು ಬಂದು ಕುದುರೆಯನ್ನು ಸೊತೋಷದಿಂದ ಕೃಷ್ನನ್ನು ನೆನೆದು ಮುಟ್ಟಲು, ಅದು ಶಿಲೆಯನ್ನು ಬಿಟ್ಟು ಕೂಗಿಕೊಳ್ಳುತ್ತಾ ಎದ್ದು ಮುಂದಕ್ಕೆ ನಡೆಯಿತು.]; ನರನಂ ಕಂಡು ಚಂಡಿ ತಪಕಾಗಿ ಕಳುಹಿಸಿಕೊಂಡಳು=[ಚಂಡಿಯು ಅರ್ಜುನನ್ನು ನೋಡಿ ತಪಸ್ಸಿಗಾಗಿ ಅವನ ಅನುಮತಿ ಪಡೆದು ಹೋದಳು.]; ಒದವಿದ ಸಮಸ್ತ ಜನಂ ಆಗ ವಿಸ್ಮಿತಮಾದುದು ಉದಿರಿತು ಕುಸುಮವೃಷ್ಟಿ=[ಅಲ್ಲಿ ಸೇರಿದ ಸಮಸ್ತ ಜನರೂ ಆಗ ಆಶ್ಚರ್ಯ ಪಟ್ಟರು. ಆಗ ಪುಷ್ಪವೃಷ್ಟಿ ಉದಿರಿತು.]; ಬಳಿಕ ದಕ್ಷಿಣಕೆ ನಡೆದುದು ವಾಜಿ ಚಂಪಕಾಪುರಕೆ ಅಂದು ಹಿಂದೆ ಬಹ ಪಡೆಸಹಿತ ವಹಿಲದಿಂ=[ಬಳಿಕ ಕುದುರೆಯು ಹಿಂದೆ ಬರುವ ವಿಶಾಲ ಸೈನ್ಯಸಹಿತ ದಕ್ಷಿಣಕ್ಕೆ ನಡೆದು ಅಂದು ಚಂಪಕಾಪುರಕ್ಕೆ ಬಂದಿತು.]
  • ತಾತ್ಪರ್ಯ:ಆ ನಂತರ ಅರ್ಜುನನು ಬಂದು ಕುದುರೆಯನ್ನು ಸೊತೋಷದಿಂದ ಕೃಷ್ನನ್ನು ನೆನೆದು ಮುಟ್ಟಲು, ಅದು ಶಿಲೆಯನ್ನು ಬಿಟ್ಟು ಕೂಗಿಕೊಳ್ಳುತ್ತಾ ಎದ್ದು ಮುಂದಕ್ಕೆ ನಡೆಯಿತು. ಚಂಡಿಯು ಅರ್ಜುನನ್ನು ನೋಡಿ ತಪಸ್ಸಿಗಾಗಿ ಅವನ ಅನುಮತಿ ಪಡೆದು ಹೋದಳು. ಅಲ್ಲಿ ಸೇರಿದ ಸಮಸ್ತ ಜನರೂ ಆಗ ಆಶ್ಚರ್ಯ ಪಟ್ಟರು. ಆಗ ಪುಷ್ಪವೃಷ್ಟಿ ಉದಿರಿತು. ಬಳಿಕ ಕುದುರೆಯು ಹಿಂದೆ ಬರುವ ವಿಶಾಲ ಸೈನ್ಯಸಹಿತ ದಕ್ಷಿಣಕ್ಕೆ ನಡೆದು ಅಂದು ಚಂಪಕಾಪುರಕ್ಕೆ ಬಂದಿತು.

(ಪದ್ಯ - ೩೩)

ಪದ್ಯ :-:೩೪:[ಸಂಪಾದಿಸಿ]

ಘನಘೋಷದಿಂದ ವಾಹಿನಿಗಳೈತರುತಿರಲ್ | ವನಧಿ ಮೇರೆಯನತಿಕ್ರಮಿಸಿ ಬಂದಪುದೆಂದು | ಮುನಿದು ಭೂಮಂಡಮಿರದೆ ನಭಸ್ಥಳಕೆ ಪೋಪಂತೆ ದೂಳೇಳುತಿರಲು ||
ಅನುಸಾಲ್ವ ಸಾತ್ಯಕಿ ಪ್ರದ್ಯುಮ್ನ ಯೌವನಾ | ಶ್ವನರೇಶ ವೃಷಕೇತು ನೀಲಧ್ವಜರ ಸೈನ್ಯ | ಮನುಪಮಿತಮಾಗಿ ನಡೆದುದು ಚಂಪಕಾನಗರಿಗರ್ಜುನನ ಹಯದಕೂಡೆ ||34||
|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಘನಘೋಷದಿಂದ ವಾಹಿನಿಗಳು ಐತರುತಿರಲ್ ವನಧಿ ಮೇರೆಯನು ಅತಿಕ್ರಮಿಸಿ ಬಂದಪುದೆಂದು ಮುನಿದು=[ದೊಡ್ಡಘೋಷದಿಂದ ಸೈನ್ಯಗಳು ಬರುತ್ತಿರುವಾಗ,ಸಮುದ್ರವು ತನ್ನ ಮೇರೆಯನು ಅತಿಕ್ರಮಿಸಿ ಸಿಟ್ಟಿನಿಂದ ಬಂದಿರುವುದೆಂದು,]; ಭೂಮಂಡಮ್ ಇರದೆ ನಭಸ್ಥಳಕೆ ಪೋಪಂತೆ ದೂಳು ಏಳುತಿರಲು=[ಅದನ್ನು ನೋಡಿ, ಭೂಮಂಡಲವು ಇಲ್ಲಿರದೆ ಆಕಾಶಕ್ಕೆ ಹೋಗುವಂತೆ ದೂಳು ಏಳುತ್ತಿರಲು ]; ಅನುಸಾಲ್ವ ಸಾತ್ಯಕಿ ಪ್ರದ್ಯುಮ್ನ ಯೌವನಾಶ್ವನರೇಶ ವೃಷಕೇತು ನೀಲಧ್ವಜರ ಸೈನ್ಯಂ ಅನುಪಮಿತಮಾಗಿ ನಡೆದುದು ಚಂಪಕಾನಗರಿಗರ್ಜುನನ ಹಯದಕೂಡೆ=[ಅನುಸಾಲ್ವ, ಸಾತ್ಯಕಿ, ಪ್ರದ್ಯುಮ್ನ, ಯೌವನಾಶ್ವನರೇಶ, ವೃಷಕೇತು, ನೀಲಧ್ವಜರ ಸೈನ್ಯವು ಹೋಲಿಸಲು ಅಸಾಧ್ಯವೆಂಬಂತೆ ಅರ್ಜುನನ ಹಯದಕೂಡೆ ಚಂಪಕಾನಗರಿಗೆ ನಡೆದುಬಂತು.]
  • ತಾತ್ಪರ್ಯ:ಅರ್ಜುನನ ಯಾಗದ ಕುದುರೆಯ ಹಿಂದೆ ದೊಡ್ಡ ರಣವಾದ್ಯ ಘೋಷದಿಂದ ಸೈನ್ಯಗಳು ಬರುತ್ತಿರುವಾಗ,ಸಮುದ್ರವು ತನ್ನ ಮೇರೆಯನು ಅತಿಕ್ರಮಿಸಿ ಸಿಟ್ಟಿನಿಂದ ಬಂದಿರುವುದೆಂದು, ಅದನ್ನು ನೋಡಿ, ಭೂಮಂಡಲವು ಇಲ್ಲಿರದೆ ಆಕಾಶಕ್ಕೆ ಹೋಗುವಂತೆ ದೂಳು ಏಳುತ್ತಿರಲು, ಅನುಸಾಲ್ವ, ಸಾತ್ಯಕಿ, ಪ್ರದ್ಯುಮ್ನ, ಯೌವನಾಶ್ವನರೇಶ, ವೃಷಕೇತು, ನೀಲಧ್ವಜರ ಸೈನ್ಯವು ಹೋಲಿಸಲು ಅಸಾಧ್ಯವೆಂಬಂತೆ ಅರ್ಜುನನ ಹಯದಕೂಡೆ ಚಂಪಕಾನಗರಿಗೆ ನಡೆದುಬಂತು.

(ಪದ್ಯ - ೩೪)XXῚ

ಪದ್ಯ :-:೩೫:[ಸಂಪಾದಿಸಿ]

ತವೆ ಸರ್ವಮಂಗಳಾಸ್ಪದಮಾದೊಡಂ ಪರಾ | ಭವಯುಕ್ತಮಾಗಿರ್ಪುದೆಂದು ಕೈಲಾಸಾಚ | ಲವನತುಳಕ್ಷ್ಮೀನಿಳಯಮಾದೊಡಂ ಭಂಗಸಹಿತಮಾಗಿರ್ಪುದೆಂದು ||
ಅವಿರಳಪಯೋನಿಧಿಯನಟ್ಟಹಾಸಂ ಮಾಡು | ವವೊಲಿರ್ದುದಾಪುರಂ ಪ್ರಾಸಾದಕೋಟೆಗಳ | ಧವಳಿಮ ಸುಧಾಕೀರ್ಣ ರುಚಿಗಳಿಂ ಪೊರೆಗೆ ನೋಡುವ ಜನರ್ಗೇವೇಳ್ವೆನು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತವೆ ಸರ್ವಮಂಗಳ ಆಸ್ಪದಮ್ ಆದೊಡಂ ಪರಾಭವಯುಕ್ತಮ್ ‍ಆಗಿರ್ಪುದೆಂದು ಕೈಲಾಸಾಚಲವನು,=[ಬಹಳವಾಗಿ ಎಲ್ಲರಿಗೂ ಮಂಗಳಕರವಾದುದೂ ಪರಾಭವಯುಕ್ತವಾಗಿದೆ (ಪರಾಭವ:ಸೋಲು- ಪರ ಅಭವ:ಶಿವ) ‍ಎಂದು ಕೈಲಾಸಾಚಲವನು]; ಅತುಲ ಲಕ್ಷ್ಮೀನಿಳಯಮ್ ಆದೊಡಂ ಭಂಗಸಹಿತಮಾಗಿರ್ಪುದೆಂದು ಅವಿರಳಪಯೋನಿಧಿಯನು, =[ಅಸಮಾನವಾದ ಲಕ್ಷ್ಮೀನಿಲಯವಾಗಿದ್ದರೂ ಭಂಗಸಹಿತವಾಗಿದೆ ಎಂದು (ಭಂಗ ತಿರಸ್ಕಾರ -ತರಂಗಗಳಿಮದ ಕೂಡಿದೆ)ಏಕಪ್ರಕಾರವಾಗಿ ಹಬ್ಬಿದ ಕ್ಷೀರ ಸಮುದ್ರವನ್ನು,]; ಅಟ್ಟಹಾಸಂ ಮಾಡುವವೊಲಿರ್ದುದು ಆ ಪುರಂ ಪ್ರಾಸಾದಕೋಟೆಗಳ ಧವಳಿಮ ಸುಧಾಕೀರ್ಣ ರುಚಿಗಳಿಂ ಪೊರೆಗೆ ನೋಡುವ ಜನರ್ಗೆ ಏವೇಳ್ವೆನು=[ಅಪಹಾಸ್ಯ ಮಾಡಿನಗುವಂತೆ ಆ ನಗರವು ಇದ್ದಿತು. ಅದು ಪ್ರಾಸಾದಕೋಟೆಗಳಿಂದ ಬಿಳಿಯ ಬಣ್ನದ, ಸುಣ್ಣಬಳಿದ ಹೊರಗಿನಿಂದ ಬಂದ ಜನರಿಗೆ ಕಾಂತಿಯಿಂದ ಪ್ರಕಾಶಮಾನವಾಗಿ ಕಾಣುತ್ತಿತ್ತು ಏನು ಹೇಳಲಿ!].
  • ತಾತ್ಪರ್ಯ: ಬಹಳವಾಗಿ ಎಲ್ಲರಿಗೂ ಮಂಗಳಕರವಾದುದೂ ಪರಾಭವಯುಕ್ತವಾಗಿದೆ (ಸೋಲು- ಪರ ಆಭವ:ಶಿವ) ‍ಎಂದು ಕೈಲಾಸಾಚಲವನ್ನೂ, ಅಸಮಾನವಾದ ಲಕ್ಷ್ಮೀನಿಲಯವಾಗಿದ್ದರೂ ಭಂಗಸಹಿತವಾಗಿದೆ ಎಂದು (ಭಂಗ ತಿರಸ್ಕಾರ -ತರಂಗಗಳಿಮದ ಕೂಡಿದೆ)ಏಕಪ್ರಕಾರವಾಗಿ ಹಬ್ಬಿದ ಕ್ಷೀರ ಸಮುದ್ರವನ್ನ್ನೂ, ಅಪಹಾಸ್ಯ ಮಾಡಿನಗುವಂತೆ ಆ ನಗರವು ಇದ್ದಿತು. ಹೇಗೆಂದರೆ ಅದು ಪ್ರಾಸಾದಕೋಟೆಗಳಿಂದ ಬಿಳಿಯ ಬಣ್ನದ, ಸುಣ್ಣಬಳಿದ ಹೊರಗಿನಿಂದ ಬಂದ ಜನರಿಗೆ ಕಾಂತಿಯಿಂದ ಪ್ರಕಾಶಮಾನವಾಗಿ ಕಾಣುತ್ತಿತ್ತು; ಏನು ಹೇಳಲಿ! (ಸೋಲು- ಪರ ಆಭವ:ಶಿವ ; ಪರಾಬವ ಎನ್ನುವ ಪದ ಬಂದಿದೆ,; ಭಂಗ ತಿರಸ್ಕಾರ -ತರಂಗಗಳಿಮದ ಕೂಡಿದೆ ಇಲ್ಲಿ ಭಂಗ ಎಂಬ ಪದ ಬಂದು ದೋಷ ಹೊಂದಿದೆ, ಆದರೆ ಈ ನಗರಕ್ಕೆ ಅದಿಲ್ಲ ಎಂಬ ಪದ ಚಮತ್ಕ್ಕಾರ ; ಆದರೆ ನಂತರದ ಯುದ್ಧದಲ್ಲಿ ಈ ಎರಡೂ ದೋಷಗಳು ಈ ನಗರಕ್ಕೆ ನಿಜವಾದವು ಎಂಬ ಭಾವವಿರಬಹುದು)

(ಪದ್ಯ- ೩೫)

ಪದ್ಯ :-:೩೬:[ಸಂಪಾದಿಸಿ]

ಇದು ಪುರಸ್ತ್ರೀಯ ಮಣಿಕಾಂಚೀವಲಯಮೊ ಭೂ | ಸುದತಿಯ ಕೊರಳ ವಿರಾಜಿಪ ರತ್ನ ಮಾಲಿಕೆಯೊ | ತ್ರಿದಶಪತಿ ಗಿರಿಗಳಂ ಕಡಿವಂದು ತೆಗೆದಿಡುವೆನೆಂದು ತಿರುಪಿದ ಕುಲಿಶದಾ ||
ಪೊದರುವೆಳಗಿಳೆಗಿಳಿದು ವಜ್ರಮಯಮಾಗಿ ನಿಂ | ದುದೊ ವಿಮಲಕೀರ್ತಿಚಂದ್ರಿಕೆಯಂ ಪರಪುವ ನಗ | ರದ ರಾಜಮಂಡಲದ ಪರಿವೇಷಮೋ ಪೇಳೆನಲ್ ಕೋಟೆ ಕಣ್ಗೆಸೆದುದು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇದು ಪುರಸ್ತ್ರೀಯ ಮಣಿಕಾಂಚೀವಲಯಮೊ ಭೂಸುದತಿಯ ಕೊರಳ ವಿರಾಜಿಪ ರತ್ನ ಮಾಲಿಕೆಯೊ=[ಇದು ನಗರದಸ್ತ್ರೀಯ ಮಣಿಯ ಸೊಂಟಪಟ್ಟಯೋ, ಭೂಲಲನೆಯ(ಹೆಣ್ನಿನ)ಕೊರಳಿನ ಹೊಳೆಯುವ ರತ್ನದ ಮಾಲೆಯೊ ]. ತ್ರಿದಶಪತಿ ಗಿರಿಗಳಂ ಕಡಿವಂದು ತೆಗೆದಿಡುವೆನೆಂದು ತಿರುಪಿದ (ಮಸೆದ) ಕುಲಿಶದ ಆ ಪೊದರು(ಹೊಳಪು) ವೆಳಗು(ಬೆಳಕು) ಇಳೆಗೆ ಇಳಿದು ವಜ್ರಮಯಮಾಗಿ ನಿಂದುದೊ=[ತ್ರಿದಶಪತಿಯಾದ ಇಂದ್ರನು ಗಿರಿಗಳನ್ನು ವಜ್ರಾಯುಧದಿಂದ ಕಡಿಯುವಾಗ ತೆಗೆದಿಟ್ಟಿರುವ ಮಸೆದ ವಜ್ರಾಯುಧದ ಹೊಳಪಿನ ಬೆಳಕು ಭೂಮಿಗೆ ಇಳಿದು ವಜ್ರಮಯಪ್ರಕಾಶಮಾಗಿ ನಿಂತಿದೆಯೊ! ]; ವಿಮಲಕೀರ್ತಿಚಂದ್ರಿಕೆಯಂ ಪರಪುವ ನಗರದ ರಾಜಮಂಡಲದ ಪರಿವೇಷಮೋ ಪೇಳೆನಲ್ ಕೋಟೆ ಕಣ್ಗೆಸೆದುದು=[ವಿಮಲವಾದ ಕೀರ್ತಿಯ ಬೇಳದಿಂಗಳನ್ನು ಹರಡುವ ನಗರದ ರಾಜಚಕ್ರದ ಸುತ್ತುವಿಕೆಯೋ, ಪೇಳು ಎನಲು ಕೋಟೆ ಕೋಟೆ ಕಣ್ಣಿಗೆ ಶೋಬಿಸಿತು].
  • ತಾತ್ಪರ್ಯ:ಇದು ನಗರದಸ್ತ್ರೀಯ ಮಣಿಯ ಸೊಂಟಪಟ್ಟಯೋ, ಭೂಲಲನೆಯ(ಹೆಣ್ನಿನ)ಕೊರಳಿನ ಹೊಳೆಯುವ ರತ್ನದ ಮಾಲೆಯೊ. ತ್ರಿದಶಪತಿಯಾದ ಇಂದ್ರನು ಗಿರಿಗಳನ್ನು ವಜ್ರಾಯುಧದಿಂದ ಕಡಿಯುವಾಗ ತೆಗೆದಿಟ್ಟಿರುವ ಮಸೆದ ವಜ್ರಾಯುಧದ ಹೊಳಪಿನ ಬೆಳಕು ಭೂಮಿಗೆ ಇಳಿದು ವಜ್ರಮಯಪ್ರಕಾಶಮಾಗಿ ನಿಂತಿದೆಯೊ! ವಿಮಲವಾದ ಕೀರ್ತಿಯ ಬೇಳದಿಂಗಳನ್ನು ಹರಡುವ ನಗರದ ರಾಜಚಕ್ರದ ಸುತ್ತುವಿಕೆಯೋ, ಹೇಳು ಎನಲು ಕೋಟೆ ಕಣ್ಣಿಗೆ ಶೋಬಿಸಿತು.

(ಪದ್ಯ- ೩೬)

ಪದ್ಯ :-:೩೭:[ಸಂಪಾದಿಸಿ]

ಆ ನಗರದರಸು ಹಂಸಧ್ವಜಂ ಕೇಳ್ದನೀ | ಸೇನೆ ಸಹಿತರ್ಜುನಂ ವರಮಖ ತುರಂಗ ರ | ಕ್ಷನಿಮಿತ್ತಂ ಬಂದು ಸೀಮೆಯಂ ಪೊಕ್ಕುದಂ ದೂತಮುಖದಿಂದೆ ಬಳಿಕ ||
ಧ್ಯಾನಿಸಿದನೊಂದೆರಡುಗಳಿಗೆ ತನ್ನಾಪ್ತಪ್ರ | ಧಾನರೆಲ್ಲರನಾಗ ಕರೆಸಿಕೊಂಡವರೊಳ್ ನಿ | ಧಾನಿಸಿ ನುಡಿದನಂದು ಶ್ರದ್ದಾಳು ಸುಮತಿ ಪ್ರಮತೆಯೆಂಬ ಮಂತ್ರಿಗಳ್ಗೆ ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ನಗರದ ಅರಸು ಹಂಸಧ್ವಜಂ ಕೇಳ್ದನು ಈ ಸೇನೆ ಸಹಿತ ಅರ್ಜುನಂ ವರಮಖ ತುರಂಗ ರಕ್ಷನಿಮಿತ್ತಂ ಬಂದು ಸೀಮೆಯಂ ಪೊಕ್ಕುದಂ ದೂತಮುಖದಿಂದೆ=[ಆ ನಗರದ ಅರಸು ಹಂಸಧ್ವಜನು. ಅವನು ಈ ಸೇನೆ ಸಹಿತ ಅರ್ಜುನನು ಶ್ರೇಷ್ಠಯಜ್ಞದ ಕುದುರೆಯ ರಕ್ಷಣೆಯ ನಿಮಿತ್ತ ಬಂದು ತನ್ನ ರಾಜ್ಯವನ್ನು ಹೊಕ್ಕ ವಿಷಯವನ್ನು ದೂತರಿಂದ ಮುಖದಿಂದೆ ಕೇಳಿದನು]; ಬಳಿಕ ಧ್ಯಾನಿಸಿದನು ಒಂದೆರಡುಗಳಿಗೆ ತನ್ನ ಆಪ್ತ ಪ್ರಧಾನರೆಲ್ಲರನು ಆಗ ಕರೆಸಿಕೊಂಡು=[ಬಳಿಕ ಒಂದೆರಡುಗಳಿಗೆ ಯೋಚಿಸಿದನು. ಆಗ ತನ್ನ ಆಪ್ತ ಪ್ರಧಾನರೆಲ್ಲರನ್ನೂ ಕರೆಸಿಕೊಂಡು]; ಅವರೊಳ್ ನಿಧಾನಿಸಿ ನುಡಿದನು ಅಂದು ಶ್ರದ್ದಾಳು ಸುಮತಿ ಪ್ರಮತೆಯೆಂಬ ಮಂತ್ರಿಗಳ್ಗೆ=[ಅಂದು ಅವರೊಂದಿಗೆ ಎಚ್ಚರಿಕೆಯಿಂದ ಅವನ ಮಂತ್ರಿಗಳಾದ ಶ್ರದ್ದಾಳು ಸುಮತಿ ಪ್ರಮತೆಯೆಂಬ ಮಂತ್ರಿಗಳಿಗೆ ನುಡಿದನು,].
  • ತಾತ್ಪರ್ಯ:ಆ ನಗರದ ಅರಸು ಹಂಸಧ್ವಜನು. ಅವನು ಈ ಸೇನೆ ಸಹಿತ ಅರ್ಜುನನು ಶ್ರೇಷ್ಠಯಜ್ಞದ ಕುದುರೆಯ ರಕ್ಷಣೆಯ ನಿಮಿತ್ತ ಬಂದು ತನ್ನ ರಾಜ್ಯವನ್ನು ಹೊಕ್ಕ ವಿಷಯವನ್ನು ದೂತರಿಂದ ಮುಖದಿಂದೆ ಕೇಳಿದನು; ಬಳಿಕ ಒಂದೆರಡುಗಳಿಗೆ ಯೋಚಿಸಿದನು. ಆಗ ತನ್ನ ಆಪ್ತ ಪ್ರಧಾನರೆಲ್ಲರನ್ನೂ ಕರೆಸಿಕೊಂಡು, ಅಂದು ಅವರೊಂದಿಗೆ ಎಚ್ಚರಿಕೆಯಿಂದ ಅವನ ಮಂತ್ರಿಗಳಾದ ಶ್ರದ್ದಾಳು ಸುಮತಿ ಪ್ರಮತೆಯೆಂಬ ಮಂತ್ರಿಗಳಿಗೆ ನುಡಿದನು.

(ಪದ್ಯ- ೩೭)

ಪದ್ಯ :-:೩೮:[ಸಂಪಾದಿಸಿ]

ಈ ಧನಂಜಯನ ತುರಗವನೀಗ ಕಟ್ಟಿದೊಡೆ | ಮಾಧವಂ ತಾನೆ ಮೈದೋರುವನೆಮಗೆ ಕೃಷ್ಣ | ನೀಧರೆಯೊಳಿರುತಿರ್ದುಮಿನ್ನೆಗಂ ಕಂಡುದಿಲ್ಲಚ್ಯುತನ ಮೂರುತಿಯನು ||
ಬಾಧೀಸುವುದೀ ದೇಹಮಂ ನರೆತೆರೆಗಳಿನ್ನು | ಸಾಧಿರುವುದೇನಸುರರಿಪು ಬಂದು ತನ್ನೊಳ್ ವಿ | ರೋಧಿಸಿದೊಡಿನಿತರಿಂದಳಿದೊಡೇನುಳಿದೊಡೇನೆಂದನಾ ನೃಪತಿ ನಗುತೆ ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಈ ಧನಂಜಯನ ತುರಗವನು ಈಗ ಕಟ್ಟಿದೊಡೆ ಮಾಧವಂ ತಾನೆ ಮೈದೋರುವನು=[ಈ ಧನಂಜಯನ ಅಶ್ವವನ್ನು ಈಗ ಕಟ್ಟಿದರೆ ಮಾಧವನು ತಾನೆ ದರ್ಶನ ಕೊಡುವನು.]; ಎಮಗೆ ಕೃಷ್ಣನು ಈ ಧರೆಯೊಳು ಇರುತಿರ್ದುಂ ಇನ್ನೆಗಂ ಕಂಡುದಿಲ್ಲ ಅಚ್ಯುತನ ಮೂರುತಿಯನು=[ನಮಗೆ ಕೃಷ್ಣನು ಈಭೂಮಿಯಲ್ಲಿ ಇರುತ್ತಿದ್ದರೂ ಇನ್ನೂವರೆಗೂ ಅಚ್ಯುತನ ಪ್ರತ್ಯಕ್ಷ ಕಂಡಿಲ್ಲ;]; ಬಾಧೀಸುವುದು ಈ ದೇಹಮಂ ನರೆತೆರೆಗಳು ಇನ್ನು ಸಾಧಿರುವುದೇನು=[ಈ ದೇಹವನ್ನು ನರೆ/ ಮುಪ್ಪು ತೆರೆ/ಕಣ್ಣುಪೊರೆಗಳು ಬಾಧೀಸುವುದು; ಇನ್ನು ಇದ್ದು ಸಾಧಿರುವುದೇನು]; ಅಸುರರಿಪು ಬಂದು ತನ್ನೊಳ್ ವಿರೋಧಿಸಿದೊಡೆ ಇನಿತರಿಂದ ಅಳಿದೊಡೇನು ಉಳಿದೊಡೇನು ಎಂದನಾ ನೃಪತಿ ನಗುತೆ=[ಆ ನೃಪತಿ ನಗುತ್ತಾ, ಅಸುರರಿಪುವಾದ ಕೃಷ್ಣನು ಬಂದು ತನ್ನನ್ನು ವಿರೋಧಿಸಿ ಯುದ್ಧಮಾಡಿದರೆ,ಅವನನ್ನು ನೋಡಿ, ಇಷ್ಟರಮೇಲೆ ಅಳಿದರೇನು, ಉಳಿದರೇನು ಎಂದನು ].
  • ತಾತ್ಪರ್ಯ:ಈ ಧನಂಜಯನ ಅಶ್ವವನ್ನು ಈಗ ಕಟ್ಟಿದರೆ ಮಾಧವನು ತಾನೆ ದರ್ಶನ ಕೊಡುವನು. ನಮಗೆ ಕೃಷ್ಣನು ಈಭೂಮಿಯಲ್ಲಿ ಇರುತ್ತಿದ್ದರೂ ಇನ್ನೂವರೆಗೂ ಅಚ್ಯುತನ ಪ್ರತ್ಯಕ್ಷ ಕಂಡಿಲ್ಲ; ಈ ದೇಹವನ್ನು ನರೆ/ ಮುಪ್ಪು ತೆರೆ/ಕಣ್ಣುಪೊರೆಗಳು ಬಾಧೀಸುವುದು; ಇನ್ನು ಇದ್ದು ಸಾಧಿರುವುದೇನು; ಆ ನೃಪತಿ ನಗುತ್ತಾ, ಅಸುರರಿಪುವಾದ ಕೃಷ್ಣನು ಬಂದು ತನ್ನನ್ನು ವಿರೋಧಿಸಿ ಯುದ್ಧಮಾಡಿದರೆ,ಅವನನ್ನು ನೋಡಿ, ಇಷ್ಟರಮೇಲೆ ಅಳಿದರೇನು, ಉಳಿದರೇನು ಎಂದನು.

(ಪದ್ಯ- ೩೮)

ಪದ್ಯ :-:೩೯:[ಸಂಪಾದಿಸಿ]

ಆ ನರಾಧಿಪತಿ ನಿಶ್ಚೈಸಿದಂ ಕದನಮಂ | ಭೂನಾಥ ಕೇಳವನ ಕಟ್ಟಳೆಯನೆಲ್ಲಮಂ | ತಾನಾಳ್ವ ದೇಶದೊಳ್ ತನ್ನನಗರದೊಳೇಕಪತ್ನೀವ್ರತದೊಳಿರದೊಡೆ ||
ದಾನವಾರಿಯ ಪೂಜೆಗೈಯ್ಯದೊಡೆ ಸಂತತಂ | ದಾನಧರ್ಮಂಗಳಂ ಮಾಡದೊಡೆ ಗತಿಗೆಟ್ಟು | ಹೀನಜಾತಿಗಳೊಡನೆ ಕೂಡಿದೊಡೆ ಸೈರಿಸಂ ಪರಿವಾರದೊಳ್ ಪ್ರಜೆಯೊಳು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ನರಾಧಿಪತಿ ನಿಶ್ಚೈಸಿದಂ ಕದನಮಂ ಭೂನಾಥ ಕೇಳವನ ಕಟ್ಟಳೆಯನೆಲ್ಲಮಂ=[ಆ ರಾಜನು ಯುದ್ಧವನ್ನು ಮಾಡುವುದೆಂದು ನಿಶ್ಚೈಸಿದನು; ಜನಮೇಜಯನೇ ಆ ರಾಜನ ಕಟ್ಟಳೆಯನ್ನು ಕೇಳು.];ತಾನಾಳ್ವ ದೇಶದೊಳ್ ತನ್ನನಗರದೊಳು ಏಕಪತ್ನೀವ್ರತದೊಳು ಇರದೊಡೆ =[ತಾನು ಆಳುವ ದೇಶದಲ್ಲಿ ತನ್ನ ನಗರದಲ್ಲಿ, ಏಕಪತ್ನೀವ್ರತದಲ್ಲಿ ಇರದಿದ್ದರೆ,]; ದಾನವಾರಿಯ ಪೂಜೆಗೈಯ್ಯದೊಡೆ ಸಂತತಂ ದಾನಧರ್ಮಂಗಳಂ ಮಾಡದೊಡೆ ಗತಿಗೆಟ್ಟು ಹೀನಜಾತಿಗಳೊಡನೆ ಕೂಡಿದೊಡೆ ಸೈರಿಸಂ ಪರಿವಾರದೊಳ್ ಪ್ರಜೆಯೊಳು=[ಕೃಷ್ಣನ ಪೂಜೆಯನ್ನು ಮಾಡದಿದ್ದರೆ, ಸತತವಾಗಿ ದಾನಧರ್ಮಗಳನ್ನು, ಮಾಡದಿದ್ದರೆ, ಸನ್ಮಾರ್ಗ ಬಿಟ್ಟು ಹೀನಜಾತಿಗಳೊಡನೆ ಕೂಡಿದರೆ, ಪರಿವಾರದಲ್ಲಿಯು ಮತ್ತು ಪ್ರಜೆಗಳಲ್ಲಿಯೂ ಸೈರಿಸುತ್ತಿರಲಿಲ್ಲ.].
  • ತಾತ್ಪರ್ಯ: ಆ ರಾಜನು ಯುದ್ಧವನ್ನು ಮಾಡುವುದೆಂದು ನಿಶ್ಚೈಸಿದನು; ಜನಮೇಜಯನೇ ಆ ರಾಜನ ಕಟ್ಟಳೆಯನ್ನು ಕೇಳು. ತಾನು ಆಳುವ ದೇಶದಲ್ಲಿ ತನ್ನ ನಗರದಲ್ಲಿ, ಏಕಪತ್ನೀವ್ರತದಲ್ಲಿ ಇರದಿದ್ದರೆ, ಕೃಷ್ಣನ ಪೂಜೆಯನ್ನು ಮಾಡದಿದ್ದರೆ, ಸತತವಾಗಿ ದಾನಧರ್ಮಗಳನ್ನು, ಮಾಡದಿದ್ದರೆ, ಸನ್ಮಾರ್ಗ ಬಿಟ್ಟು ಹೀನಜಾತಿಗಳೊಡನೆ ಕೂಡಿದರೆ, ಅದು ತನ್ನ ಪರಿವಾರದಲ್ಲಿಯಾಗಲೀ, ಮತ್ತು ಪ್ರಜೆಗಳಲ್ಲಿಯಾದರೂ ಆಗಲಿ ಸೈರಿಸುತ್ತಿರಲಿಲ್ಲ.].

(ಪದ್ಯ- ೩೯)

ಪದ್ಯ :-:೪೦:[ಸಂಪಾದಿಸಿ]

ಅಂತುಮದರಿಂದೆಲ್ಲರೇಕಪತ್ನೀವ್ರತರ | ನಂತಪೂಜಾರತರ್ ಸೌಭಾಗ್ಯಸಂಯುತರ್ | ಸಂತತಮಲಂಕಾರಮಂಡಿತರ್ ನೀತಿಶಾಸ್ತ್ರಸ್ಮೃತಿವಿಚಾರರತರು ||
ಕಂದುಶರನಿರ್ಜಿತರ್ ಮದಲೋಭವರ್ಜಿತರ್ | ಸಂತೋಷಭಾಷಿತರ್ ಸದ್ಗುಣವಿಭೂಷಿತರ್ | ಚಿಂತಿಸಫಲಾಗತರ್ ಸಕ ಭೋಗಾನ್ವಿತರ್ ಪರಿವಾರದೊಳ್ ಪ್ರಜೆಯೊಳು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಂತುಂ ಅದರಿಂದ ಎಲ್ಲರು ಏಕಪತ್ನೀವ್ರತರ್ ಅನಂತಪೂಜಾರತರ್ ಸೌಭಾಗ್ಯಸಂಯುತರ್=[ಹೀಗೆ ಅದರಿಂದ ಎಲ್ಲರೂ ಏಕಪತ್ನೀವ್ರತರು, ಅನಂತ/ ವಿಷ್ಣು ಪೂಜಾರತರು, ಸೌಭಾಗ್ಯ / ಸಂಪತ್ತು ಹೋದಿದವರು;]; ಸಂತತವ ಅಲಂಕಾರ ಮಂಡಿನರ್ ನೀತಿಶಾಸ್ತ್ರ ಸ್ಮೃತಿವಿಚಾರ ರತರು=[ಸತತವು ಅಲಂಕಾರ ಮಾಡಿಕೊಂಡಿರುವವರು, ನೀತಿಶಾಸ್ತ್ರ ಸ್ಮೃತಿವಿಚಾರ ರತರು]; ಕಂತುಶರ ನಿರ್ಜಿತರ್ ಮದಲೋಭ ವರ್ಜಿತರ್ ಸಂತೋಷಭಾಷಿತರ್ ಸದ್ಗುಣ ವಿಭೂಷಿತರ್=[ಸ್ತ್ರೀ ವ್ಯಾಹೋಮ ಗದ್ದವರು, ಮದಲೋಭಿತ್ಯಾದಿ ಅರಿಷಡ್ವರ್ಗ ಗೆದ್ದವರು, ಒರಟು ಮಾತಿಲ್ಲದೆ ಸಂತೋಷದ ಮಾತಿನವರು; ಸದ್ಗುಣ ಹೊಂದಿದವರು]; ಚಿಂತಿತ ಫಲಾಗತರ್ ಸಕಲ ಭೋಗಾನ್ವಿತರ್ ಪರಿವಾರದೊಳ್ ಪ್ರಜೆಯೊಳು=[ಅಪೇಕ್ಷೆ ಪಟ್ಟಿದ್ದನ್ನು ಪಡೆಯುವವರು, ಸಕಲ ಸುಖಗಳನ್ನೂ ಹೊಂದಿದವರು ಪರಿವಾರದಲ್ಲಿ ಮತ್ತು ಪ್ರಜೆಗಳಲ್ಲಿ].
  • ತಾತ್ಪರ್ಯ:ಹೀಗೆ ಅದರಿಂದ ಎಲ್ಲರೂ ಏಕಪತ್ನೀವ್ರತರು, ಅನಂತ/ ವಿಷ್ಣು ಪೂಜಾರತರು, ಸೌಭಾಗ್ಯ / ಸಂಪತ್ತು ಹೋದಿದವರು; ಸತತವು ಅಲಂಕಾರ ಮಾಡಿಕೊಂಡಿರುವವರು, ನೀತಿಶಾಸ್ತ್ರ ಸ್ಮೃತಿವಿಚಾರ ರತರು; ಸ್ತ್ರೀ ವ್ಯಾಹೋಮ ಗದ್ದವರು, ಮದಲೋಭಿತ್ಯಾದಿ ಅರಿಷಡ್ವರ್ಗ ಗೆದ್ದವರು, ಒರಟು ಮಾತಿಲ್ಲದೆ ಸಂತೋಷದ ಮಾತಿನವರು; ಸದ್ಗುಣ ಹೊಂದಿದವರು; ಅಪೇಕ್ಷೆ ಪಟ್ಟಿದ್ದನ್ನು ಪಡೆಯುವವರು, ಸಕಲ ಸುಖಗಳನ್ನೂ ಹೊಂದಿದವರು ಪರಿವಾರದಲ್ಲಿ ಮತ್ತು ಪ್ರಜೆಗಳಲ್ಲಿ.

(ಪದ್ಯ- ೪೦))XXῚῚ

ಪದ್ಯ :-:೪೧:[ಸಂಪಾದಿಸಿ]

ಏಕಪತ್ನೀವ್ರತಂ ಪ್ರಾಯತಂ ಕೋಮಲಂ | ಮಾಂಕಾಂತ ಕಿಂಕರನಲಂಕಾರ ಪೂಜ್ಯಂ ಶು | ಭಾಕಾರನಾರೋಗ್ಯಪಟು ಕರಣನಿರ್ಮಲನಕೈತವಂ ಬಲವಂತನು ||
ಭೀಕರ ಪರಾಕ್ರಮ ವಿಶಾರದಂ ಸಂಗರವಿ | ವೇಖಿಯೆಂಬಿನಿತುಗುಣಮೊರ್ವನೊಳಿರಲ್ಕವನ | ನೇ ಕರೆದು ಮನ್ನಿಸುವವನಲ್ಲದರನುಳಿವನಂತೆಲ್ಲರೀತೆರದ ನರರು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಏಕಪತ್ನೀವ್ರತಂ ಪ್ರಾಯತಂ ಕೋಮಲಂ ಮಾಂಕಾಂತ (ಲಕ್ಕ್ಮಿಯ ಕಾಂತ) ಕಿಂಕರನು ಅಲಂಕಾರ ಪೂಜ್ಯಂ ಶುಭಾಕಾರನು=[ಏಕಪತ್ನೀವ್ರತನು ಪ್ರಾಯದವನು, ಕೋಮಲನು ಮಾಂಕಾಂತ ಲಕ್ಕ್ಮಿಯ ಕಾಂತನಾದ ವಿಷ್ಣುಭಕ್ತನು, ಪೂಜ್ಯನಂತೆಅಲಂಕಾರಮಾಡಿಕೊಳ್ಳುವವನು, ಸುಂದರನು]; ಆರೋಗ್ಯಪಟು ಕರಣನಿರ್ಮಲನು ಅಕೈತವಂ(ನಿಶ್ಕಪಟಿ) ಬಲವಂತನು ಭೀಕರ ಪರಾಕ್ರಮ ವಿಶಾರದಂ ಸಂಗರವಿವೇಕಿಯೆಂಬ=[ಉತ್ತಮಆರೋಗ್ಯವಂತನು, ನಿರ್ಮಲ ಮನಸ್ಸಿನವನು, ನಿಶ್ಕಪಟಿ, ಬಲಶಾಲಿ, ಭೀಕರ ಪರಾಕ್ರಮವಿದ್ದು ಯುದ್ಧ ವಿಶಾರದನು, ಯುದ್ಧದವಿಚಾರದಲ್ಲಿ ವಿವೇಕಿಯೆಂಬ]; ಇನಿತುಗುಣಂ ಒರ್ವನೊಳಿರಲ್ಕೆ ಅವನನೇ ಕರೆದು ಮನ್ನಿಸುವವನು ಅಲ್ಲದರನು ಉಳಿವನಂತೆ ಎಲ್ಲರು ಈತೆರದ ನರರು=[ಇಷ್ಟೊಂದು ಗುಣಗಳು ಒಬ್ಬನಲ್ಲಿ ಇರಲು ಅವನನ್ನೇ ಕರೆದು ಮನ್ನಿಸುವವನು; ಈ ಗುಣಗಳು ಅಲ್ಲದರನ್ನು ಬಿಡುವನಂತೆ; ಆದರೆ ಎಲ್ಲರು ಈ ತೆರದ ಉತ್ತಮ ಗುಣಯುತರು.]
  • ತಾತ್ಪರ್ಯ:ಏಕಪತ್ನೀವ್ರತನು ಪ್ರಾಯದವನು, ಕೋಮಲನು ಮಾಂಕಾಂತ ಲಕ್ಕ್ಮಿಯ ಕಾಂತನಾದ ವಿಷ್ಣುಭಕ್ತನು, ಪೂಜ್ಯನಂತೆಅಲಂಕಾರಮಾಡಿಕೊಳ್ಳುವವನು, ಸುಂದರನು; ಉತ್ತಮಆರೋಗ್ಯವಂತನು, ನಿರ್ಮಲ ಮನಸ್ಸಿನವನು, ನಿಶ್ಕಪಟಿ, ಬಲಶಾಲಿ, ಭೀಕರ ಪರಾಕ್ರಮವಿದ್ದು ಯುದ್ಧ ವಿಶಾರದನು, ಯುದ್ಧದವಿಚಾರದಲ್ಲಿ ವಿವೇಕಿಯೆಂಬ; ಇಷ್ಟೊಂದು ಗುಣಗಳು ಒಬ್ಬನಲ್ಲಿ ಇರಲು ಅವನನ್ನೇ ಕರೆದು ಮನ್ನಿಸುವವನು; ಈ ಗುಣಗಳು ಅಲ್ಲದರನ್ನು ಬಿಡುವನಂತೆ; ಆದರೆ ಎಲ್ಲರು ಈ ತೆರದ ಉತ್ತಮ ಗುಣಯುತರು.]

(ಪದ್ಯ- ೪೧)

ಪದ್ಯ :-:೪೨:[ಸಂಪಾದಿಸಿ]

ಉಣಲುಡಲ್ ತೊಡಲೀಯಲಿರಲೆಯ್ದಲುಂಟಾಗಿ | ತಣಿದಿಹುದಲಂಕಾರಪೂಜ್ಯದಿಂ ವಸ್ತ್ರಭೂ | ಷಣ ಗಂಧ ಮಾಲ್ಯಾನುಲೇಪನಂಗಳ ಪರಿಮಳಂಗಳಿಂ ಸೋಗಸಿರ್ಪುದು ||
ಸೆಣಸುಗಳ ಬಿರುದುಗಳ ಪಚ್ಚಿರ್ದ ಮುಡುಹುಗಳ | ಹೊಣಿಕೆಗಳ ತಡಹುಗಳ ಕಲಿತನದ ಕಡುಹುಗಳ | ರಣದವಕದಿಂ ಕುದಿಯುತಿಹುದು ಹಂಸಧ್ವಜನ ಪರಿವಾರಮನುದಿನದೊಳು ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉಣಲು ಉಡಲ್ ತೊಡಲು ಈಯಲು ಇರಲು ಐಯ್ದಲು(ಸ್ವೀಕರಿಸು?) ಉಂಟಾಗಿ ತಣಿದು ಇಹುದು(ತೃಪ್ತರು),=[ಹಂಸಧ್ವಜನ ಪರಿವಾರವು ಅಮನುದಿನವೂ, - ಉಣಲು, ಉಡಲು, ತೊಡಲು, ಕೊಡುವುದಕ್ಕೆ ಸಾಕಷ್ಟುಇರಲು,ಪಡೆಯಲು ಅಗತ್ಯವಿರದಷ್ಟು ತೃಪ್ತರಾಗಿದ್ದಾರೆ. ];ಲಂಕಾರಪೂಜ್ಯದಿಂ ವಸ್ತ್ರಭೂಷಣ ಗಂಧ ಮಾಲ್ಯಾನುಲೇಪನಂಗಳ ಪರಿಮಳಂಗಳಿಂ ಸೋಗಸಿರ್ಪುದು=[ ಉತ್ತಮ ಅಲಂಕಾರದಿಂದ ವಸ್ತ್ರಭೂಷಣ ಗಂಧ ಮಾಲ್ಯಾ ಅನುಲೇಪನಗಳ ಪರಿಮಳಂಗಳಿಂದ ಸೋಗಸಿರುವರು;] ಸೆಣಸುಗಳ(ಯುದ್ಧ) ಬಿರುದುಗಳ ಪಚ್ಚಿರ್ದ ಮುಡುಹುಗಳ(ಹೆಗಲು) ಹೊಣಿಕೆಗಳ ತಡಹುಗಳ ಕಲಿತನದ ಕಡುಹುಗಳ ರಣದವಕದಿಂ ಕುದಿಯುತಿಹುದು ಹಂಸಧ್ವಜನ ಪರಿವಾರಮನುದಿನದೊಳು=[ಯುದ್ಧಗಳ ಗೆದ್ದ ಬಿರುದುಗಳನ್ನು ಹಚ್ಚಿದ ಭುಜಗಳ ಪಟ್ಟಿಗಳ, ಶತ್ರುಗಳನ್ನು ಎದುರಿಸವ ಶೌರ್ಯಿಂದ ನಾಶಮಾಡುವ ಯುದ್ಧದ ಬಯಕೆಯಿಂದ ಉತ್ಸಾಹದಿಣದ ಹಂಸಧ್ವಜನ ಪರಿವಾರವು ಅನುದಿನವೂ ತುಂಬಿರುವದು].
  • ತಾತ್ಪರ್ಯ:ಹಂಸಧ್ವಜನ ಪರಿವಾರವು ಅಮನುದಿನವೂ, - ಉಣಲು, ಉಡಲು, ತೊಡಲು, ಕೊಡುವುದಕ್ಕೆ ಸಾಕಷ್ಟು ಇರಲು,ಪಡೆಯಲು ಅಗತ್ಯವಿರದಷ್ಟು ತೃಪ್ತರಾಗಿದ್ದಾರೆ. ಉತ್ತಮ ಅಲಂಕಾರದಿಂದ ವಸ್ತ್ರಭೂಷಣ ಗಂಧ ಮಾಲ್ಯಾ ಅನುಲೇಪನಗಳ ಪರಿಮಳಂಗಳಿಂದ ಸೋಗಸಿರುವರು; ಯುದ್ಧಗಳಲ್ಲಿ ಗೆದ್ದ ಬಿರುದುಗಳನ್ನು ಹಚ್ಚಿದ ಭುಜಗಳ ಪಟ್ಟಿಗಳ, ಶತ್ರುಗಳನ್ನು ಎದುರಿಸವ ಶೌರ್ಯಿಂದ ನಾಶಮಾಡುವ ಯುದ್ಧದ ಬಯಕೆಯಿಂದ ಉತ್ಸಾಹದಿಣದ ಹಂಸಧ್ವಜನ ಪರಿವಾರವು ಅನುದಿನವೂ ತುಂಬಿರುವದು].

(ಪದ್ಯ- ೪೨)

ಪದ್ಯ :-:೪3:[ಸಂಪಾದಿಸಿ]

ಮಣಿಮಯ ವರೂಥಮೆಪ್ತತ್ತೊಂದು ಸಾಸಿರಂ | ಗಣನೆಗೆಪ್ಪತ್ತೊಂದುಸಾಸಿರಗಜಂ ತುರಗ | ಮೆಣಿಸುವೊಡೆ ಲಕ್ಕಂ ಪದಾತಿ ಸಾಸಿರಮುಳಿಯೆ ಲಕ್ಷಮೊರ್ವನ ಬಳಿಯೊಳು ||
ಗಣಿತಕಿಹುದಿನಿತು ಬಲಮಿನಿತುಬಲದಿಂದ ವೆಂ | ಟಣಿಸಿರ್ಪ ದಳಪತಿಗಳೆಪ್ಪತ್ತುಮಂದಿ ಸಂ | ದಣಿಸಿ ಬರುತಿಹುದು ಹಂಸಧ್ವಜ ನೃಪಾಲಕಂ ಪೊರಮಟ್ಟುನಡೆವೆಡೆಯೊಳು ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಣಿಮಯ ವರೂಥಮು ಎಪ್ತತ್ತೊಂದು ಸಾಸಿರಂ ಗಣನೆಗೆ ಎಪ್ಪತ್ತೊಂದುಸಾಸಿರಗಜಂ, ತುರಗಂ ಎಣಿಸುವೊಡೆ ಲಕ್ಕಂ=[ಮಣಿಮಯ ರಥಗಳು ಎಪ್ತತ್ತೊಂದು ಸಾವಿರ, ಲೆಕ್ಕದಲ್ಲಿ ಎಪ್ಪತ್ತೊಂದು ಸಾವಿರ ಆನೆಗಳು, ಕುದುರೆಗಳು ಎಣಿಕೆಯಲ್ಲಿ ಲಕ್ಷವು.]; ಪದಾತಿ ಸಾಸಿರಂ ಉಳಿಯೆ ಲಕ್ಷಂ ಓರ್ವನ ಬಳಿಯೊಳು ಗಣಿತಕೆ ಇಹುದು ಇನಿತು ಬಲಂ=[ ಸಾವಿರ ಲಕ್ಷ ಪದಾತಿಗಳು ಒಬ್ಬ ದಳಪತಿಯ ಬಳಿಯಲ್ಲಿ ಇರುವುದು; ಲೆಕ್ಕದಲ್ಲಿ ಇಷ್ಟು ಸೈನ್ಯಿದೆ.]; ಇನಿತು ಬಲದಿಂದ ವೆಂಟಣಿಸಿರ್ಪ ದಳಪತಿಗಳು ಎಪ್ಪತ್ತುಮಂದಿ ಸಂದಣಿಸಿ ಬರುತಿಹುದು ಹಂಸಧ್ವಜ ನೃಪಾಲಕಂ ಪೊರಮಟ್ಟು ನಡೆವೆಡೆಯೊಳು=[ಇಷ್ಟೊಂದು ಸೈನ್ಯದಿಂದ ಕೂಡಿಕೊಂಡಿರುವ ದಳಪತಿಗಳು ಎಪ್ಪತ್ತುಮಂದಿ ಒಟ್ಟಾಗಿ ಹಂಸಧ್ವಜ ನೃಪಾಲಕನು ಹೊರಟು ನಡೆಯುವಕಡೆ. ಬರುತ್ತಿರುವರು].
  • ತಾತ್ಪರ್ಯ:ಮಣಿಮಯ ರಥಗಳು ಎಪ್ತತ್ತೊಂದು ಸಾವಿರ, ಲೆಕ್ಕದಲ್ಲಿ ಎಪ್ಪತ್ತೊಂದು ಸಾವಿರ ಆನೆಗಳು, ಕುದುರೆಗಳು ಎಣಿಕೆಯಲ್ಲಿ ಲಕ್ಷವು; ಸಾವಿರ ಲಕ್ಷ ಪದಾತಿಗಳು ಒಬ್ಬ ದಳಪತಿಯ ಬಳಿಯಲ್ಲಿ ಇರುವುದು; ಲೆಕ್ಕದಲ್ಲಿ ಇಷ್ಟು ಸೈನ್ಯಿದೆ. ಇಷ್ಟೊಂದು ಸೈನ್ಯದಿಂದ ಕೂಡಿಕೊಂಡಿರುವ ದಳಪತಿಗಳು ಎಪ್ಪತ್ತುಮಂದಿ ಒಟ್ಟಾಗಿ ಹಂಸಧ್ವಜ ನೃಪಾಲಕನು ಹೊರಟು ನಡೆಯುವಕಡೆ. ಬರುತ್ತಿರುವರು.

(ಪದ್ಯ- ೪೩)XXῚῚῚ

ಪದ್ಯ :-:೪೪:[ಸಂಪಾದಿಸಿ]

ಆತಂಗೆ ಧನಬಲಂ ಚಂದ್ರಸೇನಂ ಚಂದ್ರ | ಕೇತು ವರಚಂದ್ರದೇವಂ ವಿಡೂರಥನತಿ | ಖ್ಯಾತನಹ ಧರ್ಮವಾಹಂ ನ್ಯಾಯವರ್ತಿಯೆಂಬಿವರನುಜರೇಳುದುಂದಿ ||
ಜಾತರ್ ಸುದರ್ಶನ ಸುಧನ್ವ ಸುಮನಸ್ಸುರಥ |ರೀ ತೆರದ ನಾಲ್ವರಿವರೆಲ್ಲರ್ ಸಮರ್ಥರ್ ಮ | ಹಾತಿ ಬಲರಮಲಧರ್ಮಜ್ಞರಪ್ರತಿಮರ್ ಪರಾಕ್ರಮಯುತರ್ ವೀರರು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆತಂಗೆ ಧನಬಲಂ ಚಂದ್ರಸೇನಂ ಚಂದ್ರಕೇತು ವರಚಂದ್ರದೇವಂ ವಿಡೂರಥನು ಅತಿ ಖ್ಯಾತನಹ ಧರ್ಮವಾಹಂ ನ್ಯಾಯವರ್ತಿಯೆಂಬವರ್ ಅನುಜರು ಏಳುದುಂದಿ=[ಅತನಿಗೆ ಧನಬಲ, ಚಂದ್ರಸೇನ, ಚಂದ್ರಕೇತು, ಉತ್ತಮಗುಣದ ಚಂದ್ರದೇವ, ವಿಡೂರಥನು ಅತಿ ಖ್ಯಾತನಾಗಿರುವ ಧರ್ಮವಾಹನು ನ್ಯಾಯವರ್ತಿಯೆಂಬವರು ಸಹೋದರರು ಏಳುಜನ ]; ಜಾತರ್ ಸುದರ್ಶನ ಸುಧನ್ವ ಸುಮನಸ ಸುರಥರೀ ತೆರದ ನಾಲ್ವರು ಇವರೆಲ್ಲರ್ ಸಮರ್ಥರ್ ಮಹಾತಿಬಲರ್ ಅಮಲಧರ್ಮಜ್ಞರ್ ಅಪ್ರತಿಮರ್ ಪರಾಕ್ರಮಯುತರ್ ವೀರರು=[ಮಕ್ಕಳು, ಸುದರ್ಶನ, ಸುಧನ್ವ, ಸುಮನಸ, ಸುರಥರು ಈ ತೆರದ ನಾಲ್ಕು ಜನ; ಇವರೆಲ್ಲರು ಸಮರ್ಥರು ಮಹಾ ಅತಿಬಲರು ಸ್ರೇಷ್ಠಧರ್ಮಜ್ಞರು ಅಪ್ರತಿಮರು ಪರಾಕ್ರಮಿಗಳು ವೀರರು].
  • ತಾತ್ಪರ್ಯ:ಅತನಿಗೆ (ಹಂಸಧ್ವಜನಿಗೆ) ಧನಬಲ, ಚಂದ್ರಸೇನ, ಚಂದ್ರಕೇತು, ಉತ್ತಮಗುಣದ ಚಂದ್ರದೇವ, ವಿಡೂರಥನು ಅತಿ ಖ್ಯಾತನಾಗಿರುವ ಧರ್ಮವಾಹನು ನ್ಯಾಯವರ್ತಿಯೆಂಬವರು ಸಹೋದರರು ಏಳುಜನ; ಮಕ್ಕಳು, ಸುದರ್ಶನ, ಸುಧನ್ವ, ಸುಮನಸ, ಸುರಥರು ಈ ತೆರದ ನಾಲ್ಕು ಜನ; ಇವರೆಲ್ಲರು ಸಮರ್ಥರು ಮಹಾ ಅತಿಬಲರು ಶ್ರೇಷ್ಠ ಧರ್ಮಜ್ಞರು ಸರಿಸಾಟಿ ಇಲ್ಲದ ಪರಾಕ್ರಮಿಗಳು, ವೀರರು.

(ಪದ್ಯ- ೪೪)

ಪದ್ಯ :-:೪೫:[ಸಂಪಾದಿಸಿ]

ವರಶಂಖಲಿಖಿತರೆಂಬವರಣ್ಣತಮ್ಮಂದಿ | ರಿರಲವರೊಳಾ ಲಿಖಿತನಾಶ್ರಮಕೆ ಶಂಖನೈ | ತರುತೆ ಪೇಳದೆ ಬಿದ್ದ ಪಣ್ಣನಾಸ್ವಾದಿಪಲ್ ಕರೆದಿವಂ ದೋಷಿಯೆಂದು ||
ಅರಮನೆಗೆ ತಂದೊಪ್ಪಿಸಲ್ಕಾ ನೃಪಂಕರವ | ನರಿಸಲ್ಕೆ ಮತ್ತೆ ಲಿಖಿತನ ತಪೋಬಲದಿಂದೆ | ಮರಳಿ ಕೈಯಂ ಪಡೆವನಾ ಶಂಖನವರಿರ್ವರುಂ ಪುರೋಹಿತರವಂಗೆ ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವರ ಶಂಖ ಲಿಖಿತರು ಎಂಬವರು ಅಣ್ಣತಮ್ಮಂದಿರು ಇರಲು=[ಶ್ರೇಷ್ಠರಾದ ಶಂಖ ಲಿಖಿತರು ಎಂಬ ಅಣ್ಣತಮ್ಮಂದಿರು ಅಲ್ಲಿ ಇದ್ದಾರೆ.]; ಅವರೊಳ ಆ ಲಿಖಿತನ ಆಶ್ರಮಕೆ ಶಂಖನು ಐತರುತೆ ಪೇಳದೆ ಬಿದ್ದ ಪಣ್ಣನು ಆಸ್ವಾದಿಪಲ್ ಕರೆದು ಇವಂ ದೋಷಿಯೆಂದು=[ಅವರಲ್ಲಿ ಆ ಲಿಖಿತನ ಆಶ್ರಮಕ್ಕೆ ಶಂಖನು ಬರುವಾಗ ಹೇಳದೆ ಬಿದ್ದ ಹಣ್ಣನ್ನು ತಿನ್ನಲು, ಅದಕ್ಕೆ ಲಿಖಿತನು ಶಂಖನನ್ನು ದೋಷಿಯೆಂದು ಕರೆದು]; ಅರಮನೆಗೆ ತಂದೊಪ್ಪಿಸಲ್ಕೆ ಆ ನೃಪಂ ಕರವನು ಅರಿಸಲ್ಕೆ=[ಅರಮನೆಗೆ ತಂದು ಒಪ್ಪಿಸಲು, ಆ ರಾಜನು ಅವನ ಕೈಯನ್ನು ಕತ್ತರಿಸಿಸಲು]; ಮತ್ತೆ ಲಿಖಿತನು ತಪೋಬಲದಿಂದೆ ಮರಳಿ ಕೈಯಂ ಪಡೆವನು=[ಮತ್ತೆ ಲಿಖಿತನು ತನ್ನ ತಪೋಬಲದಿಂದ ಪುನಃ ಶಂಖನ ಕೈಯನ್ನು ಪಡೆಯುವಂತೆ ಮಾಡಿದನು]; ಆ ಶಂಖನು ಅವರು ಈರ್ವರುಂ ಪುರೋಹಿತರು ಅವಂಗೆ=[ ಆ ಶಂಖ ಮತ್ತು ಲಿಖಿತರು, ಅವರು ಇಬ್ಬರೂ ಆ ರಾಜನಿಗೆ ಪುರೋಹಿತರು].
  • ತಾತ್ಪರ್ಯ:ಶ್ರೇಷ್ಠರಾದ ಶಂಖ ಲಿಖಿತರು ಎಂಬ ಅಣ್ಣತಮ್ಮಂದಿರು ಅಲ್ಲಿ ಇದ್ದಾರೆ. ಅವರಲ್ಲಿ, ಆ ಲಿಖಿತನ ಆಶ್ರಮಕ್ಕೆ ಶಂಖನು ಬರುವಾಗ ಹೇಳದೆ ಬಿದ್ದ ಹಣ್ಣನ್ನು ತಿನ್ನಲು, ಅದಕ್ಕೆ ಲಿಖಿತನು ಶಂಖನನ್ನು ದೋಷಿಯೆಂದು ಕರೆದು ಅರಮನೆಗೆ ತಂದು ಒಪ್ಪಿಸಲು, ಆ ರಾಜನು ಅವನ ಕೈಯನ್ನು ಕತ್ತರಿಸಿಸಲು; ಮತ್ತೆ ಲಿಖಿತನು ತನ್ನ ತಪೋಬಲದಿಂದ ಪುನಃ ಶಂಖನ ಕೈಯನ್ನು ಪಡೆಯುವಂತೆ ಮಾಡಿದನು. ಆ ಶಂಖ ಮತ್ತು ಲಿಖಿತರು, ಇಬ್ಬರೂ ಆ ರಾಜನಿಗೆ ಪುರೋಹಿತರು.

(ಪದ್ಯ- ೪೫)

ಪದ್ಯ :-:೪೬:[ಸಂಪಾದಿಸಿ]

ಆ ಶಂಖಲಿಖಿತರೆಂದವೊಲಾತನಿರ್ದಪನಿ | ಳೇಶ ಕೇಳವನದಿನ್ನೊಂದು ಕಟ್ಟಳೆಯಂ ಹು | ತಾಶನಜ್ವಾಲೆಯಿಂ ಕಾಯ್ದುಕ್ಕು ವೆಣ್ಣೆಗೊಪ್ಪರಿಗೆಯೊಳ್ ತಾಂ ಸಮರಕೆ ||
ಆಶುವಿಂ ಪೊರಮಡುವ ದುಂದುಬಿಯ ಸನ್ನೆಯ ಮ | ಹಾಶಬ್ದಮಂ ಕೇಳ್ದು ಹಿಂದುಳಿದ ಭಟನಂ ಪ್ರ | ವೇಶಮಂ ಮಾಡಿಸುವುದಲ್ಲದೊಡೆ ತನ್ನ ಭಾಷೆಗೆ ಭಂಗಮಪ್ಪುದೆಂದು ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಶಂಖಲಿಖಿತರು ಎಂದವೊಲ್ ಆತನು ಇರ್ದಪನು=[ಆ ಶಂಖಲಿಖಿತರು ಎಂದಂತೆ ಆತನು ಇರುವನು,]; ಇಳೇಶ ಕೇಳು ಅವನದು ಇನ್ನೊಂದು ಕಟ್ಟಳೆಯಂ=[ಜನಮೇಜಯನೇ ಕೇಳು ಅವನದು ಇನ್ನೊಂದು ಕಟ್ಟಳೆಯನ್ನು;]; ಹುತಾಶನಜ್ವಾಲೆಯಿಂ ಕಾಯ್ದುಕ್ಕುವ ಎಣ್ಣೆಗೊಪ್ಪರಿಗೆಯೊಳ್ ತಾಂ ಸಮರಕೆ ಆಶು(ತ್ವರೆ)ವಿಂ ಪೊರಮಡುವ ದುಂದುಬಿಯ ಸನ್ನೆಯ ಮಹಾಶಬ್ದಮಂ ಕೇಳ್ದು=[ರಣಭೇರಿಯ ಸನ್ನೆಯ ಮಹಾಶಬ್ದವನ್ನು ಕೇಳಿಯೂ ಬೆಂಕಿಯ ಜ್ವಾಲೆಯಿಂದ ಕಾದು ಉಕ್ಕುವ ಎಣ್ಣೆಗೊಪ್ಪರಿಗೆಯಲ್ಲಿ ಯುದ್ಧಕ್ಕೆ ತ್ವರೆಮಾಡಿ ಹೊರಮಡಲು ಯಾವನು ]; ಹಿಂದುಳಿದ ಭಟನಂ ಪ್ರವೇಶಮಂ ಮಾಡಿಸುವುದು ಅಲ್ಲದೊಡೆ ತನ್ನ ಭಾಷೆಗೆ ಭಂಗಂ ಅಪ್ಪುದೆಂದು=[ಹಿಂದುಳಿದ ಯೋಧನನ್ನು, ಆ ಎಣ್ಣೆಗೊಪ್ಪರಿಗೆಯಲ್ಲಿ ಪ್ರವೇಶ ಮಾಡಿಸುವುದು, ಇಲ್ಲದಿದ್ದರೆ ತನ್ನ ಭಾಷೆಗೆ ಭಂಗವಾಗುವುದೆಂದು ಭಾವಿಸುವನು.].
  • 'ತಾತ್ಪರ್ಯ:ಆ ಶಂಖಲಿಖಿತರು ಎಂದಂತೆ ಆತನು ಇರುವನು; ಜನಮೇಜಯನೇ ಕೇಳು ಅವನದು ಇನ್ನೊಂದು ಕಟ್ಟಳೆಯನ್ನು; ಬೆಂಕಿಯ ಜ್ವಾಲೆಯಿಂದ ಕಾದು ಉಕ್ಕುವ ಎಣ್ಣೆಗೊಪ್ಪರಿಗೆಯಲ್ಲಿ, ರಣಭೇರಿಯ ಸನ್ನೆಯ ಮಹಾಶಬ್ದವನ್ನು ಕೇಳಿಯೂ,ಯಾವನು ಯುದ್ಧಕ್ಕೆ ತ್ವರೆಮಾಡಿ ಹೊರಮಡದೇ ಹಿಂದುಳಿದ ಯೋಧನನ್ನು, ಆ ಎಣ್ಣೆಗೊಪ್ಪರಿಗೆಯಲ್ಲಿ ಪ್ರವೇಶ ಮಾಡಿಸುವುದು, ಇಲ್ಲದಿದ್ದರೆ ತನ್ನ ಭಾಷೆಗೆ ಭಂಗವಾಗುವುದೆಂದು ಭಾವಿಸುವನು.].
  • (ಪದ್ಯ- ೪೬)

ಪದ್ಯ :-:೪೭:[ಸಂಪಾದಿಸಿ]

ಬಳಿಕನಿಬರೆಲ್ಲರಂ ಕರೆಸಿ ಹಂಸಧ್ವಜಂ | ಸೆಲವಿತ್ತು ಫಲುಗುಣನ ತುರಗಮಂ ಪಿಡಿತಂದು | ಪೊಳಲೊಳಗೆ ಕಟ್ಟಬೇಕೆಂದು ಸಾರಿಸಿ ಡಂಗುರಬೊಯ್ಸಿ ಪೊರಮಡುತಿರೆ ||
ಮೊಳಗಿದುವು ಮೇಲೆ ನಿಸ್ಸಾಳಂಗಳಾಹವಕೆ | ದಳದುಳಿಸಿತಾಗ ಸುಭಟಪ್ರತತಿ ಜೋಡಿಸುತ | ಖಿಳ ಕರಿ ರಥಾಶ್ಸಕುಲಮೊದಗಿತು ಪದಾತಿ ಸನ್ನಾಹದಿಂದಾ ಕ್ಷಣದೊಳು ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಅನಿಬರು ಎಲ್ಲರಂ ಕರೆಸಿ ಹಂಸಧ್ವಜಂ ಸೆಲವಿತ್ತು ಫಲುಗುಣನ ತುರಗಮಂ ಪಿಡಿತಂದು ಪೊಳಲೊಳಗೆ ಕಟ್ಟಬೇಕೆಂದು ಸಾರಿಸಿ=[ಬಳಿಕ ಅವರೆಲ್ಲರನ್ನೂ ಕರೆಸಿ ಹಂಸಧ್ವಜನು ಸೂಕ್ತ ಸಲಹೆ ನೀಡಿ,ಫಲ್ಗುಣನ ತುರಗವನ್ನು ಹಿಡಿದುತಂದು ನಗರದೊಳಗೆ ಕಟ್ಟಬೇಕೆಂದು ಸಾರಿಸಿದನು.]; ಡಂಗುರಬೊಯ್ಸಿ ಪೊರಮಡುತಿರೆ ಮೊಳಗಿದುವು ಮೇಲೆ ನಿಸ್ಸಾಳಂಗಳು=[ ಹೀಗೆ ಸಾರಿಸಿ ಡಂಗುರ ಹೊಡೆಸಿದನು(ತಮಟೆ ಬಾರಿಸುತ್ತಾಕೂಗಿ ಹೇಳುವುದು). ರಾಜನೂ ಪರಿವಾರದವರೂ,ಹೊರಮಡುತ್ತಿರಲು ಕಹಳೆ ಕೊಂಬುಗಳು ಮೊಳಗಿದುವು.]; ಆಹವಕೆ ದಳದುಳಿಸಿತು ಆಗ ಸುಭಟಪ್ರತತಿ ಜೋಡಿಸುತು ಅಖಿಳ ಕರಿ ರಥ ಅಶ್ವಕುಲಮ್ ಒದಗಿತು ಪದಾತಿ ಸನ್ನಾಹದಿಂದ ಆ ಕ್ಷಣದೊಳು=[ಆಗ ಯುದ್ಧಕ್ಕೆ ಸೈನ್ಯ ಒಟ್ಟುಗೂಡಿತು, ಆ ಕ್ಷಣದಲ್ಲಿ ಸುಭಟರ ಸಮೂಹ ಅಖಿಲ ಆನೆ ರಥ ಅಶ್ವಕುಲಗಳು ಪದಾತಿದಳಗಳು ಸಕಲ ಸನ್ನಾಹದಿಂದ ಯುದ್ಧಕ್ಕೆ ಬೇಕಾದ ಎಲ್ಲವನ್ನು ಜೋಡಿಸುತ ಸೇರಿದವು].
  • ತಾತ್ಪರ್ಯ:ಬಳಿಕ ಅವರೆಲ್ಲರನ್ನೂ ಕರೆಸಿ ಹಂಸಧ್ವಜನು ಸೂಕ್ತ ಸಲಹೆ ನೀಡಿ,ಫಲ್ಗುಣನ ತುರಗವನ್ನು ಹಿಡಿದುತಂದು ನಗರದೊಳಗೆ ಕಟ್ಟಬೇಕೆಂದು ಸಾರಿಸಿದನು. ಹೀಗೆ ಸಾರಿಸಿ ಡಂಗುರ ಹೊಡೆಸಿದನು(ತಮಟೆ ಬಾರಿಸುತ್ತಾಕೂಗಿ ಹೇಳುವುದು). ರಾಜನೂ ಪರಿವಾರದವರೂ,ಹೊರಮಡುತ್ತಿರಲು ಕಹಳೆ ಕೊಂಬುಗಳು ಮೊಳಗಿದುವು. ಆಗ ಯುದ್ಧಕ್ಕೆ ಸೈನ್ಯ ಒಟ್ಟುಗೂಡಿತು, ಆ ಕ್ಷಣದಲ್ಲಿ ಸುಭಟರ ಸಮೂಹ ಅಖಿಲ ಆನೆ ರಥ ಅಶ್ವಕುಲಗಳು ಪದಾತಿದಳಗಳು ಸಕಲ ಸನ್ನಾಹದಿಂದ ಯುದ್ಧಕ್ಕೆ ಬೇಕಾದ ಎಲ್ಲವನ್ನು ಜೋಡಿಸುತ ಸೇರಿದವು].
  • (ಪದ್ಯ- ೪೭)

ಪದ್ಯ :-:೪೮:[ಸಂಪಾದಿಸಿ]

ಸುರಪಸುತನೆಂಬ ವೈರಕೆ ಧನಂಜಯನ ಮೇ | ಲಿರದೆ ಮುಳಿದೆದ್ದುದೊ ಕುಲಾದ್ರಿಗಳ ಬಳಗಮೆನೆ | ಕರಿಗಳೈದಿದುವು ತನ್ನ ಮಗನಂ ಕೊಂದನೆಂದು ನರನೊಳ್ ಕನಲ್ಡು||
ತರಣಿ ತಾಳ್ದನೋ ನಿಜಾಕಾರಕೋಟಿಗಳನೆನೆ |ತೆರಳಿದವು ಮಣಿಮಯ ವರೂಥಂಗಳೀದುದೋ| ಧರೆ ಮಂದಿ ಕುದುರೆಗಳನೆನೆ ನಡೆದುದಾಹವಕೆ ಪರಿವಾರಮಾನೃಪತಿಯ ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸುರಪಸುತನೆಂಬ(ಇಂದ್ರನ ಮಗ) ವೈರಕೆ ಧನಂಜಯನ ಮೇಲೆ ಇರದೆ ಮುಳಿದು ಎದ್ದುದೊ ಕುಲಾದ್ರಿಗಳ ಬಳಗಂ ಎನೆ=ಬೆಟ್ಟಗಳ ರೆಕ್ಕೆಗಳನ್ನು ಕಡಿದ ಇಂದ್ರನ ಮಗ ಎಂಬ ವೈರದಿಂದ ಧನಂಜಯನ ಮೇಲೆ ಸುಮ್ಮನಿರದೆ ಸಿಟ್ಟಿನಿಂದ ಕುಲಾದ್ರಿಗಳ (ಬೆಟ್ಟಗಳ) ಬಳಗವು ಸಿಟ್ಟಿನಂದ ಎದ್ದವೋ ಎನ್ನುವಂತೆ]; ಕರಿಗಳು ಐದಿದುವು ತನ್ನ ಮಗನಂ ಕೊಂದನೆಂದು ನರನೊಳ್ ಕನಲ್ಡು=[ಬೆಟ್ಟದಾಕಾರದ ಆನೆಗಳು, ತನ್ನ ಮಗನಂ ಕೊಂದನೆಂದು ಅರ್ಜುನನಮೇಲೆ ಬಂದವು,]; ತರಣಿ ತಾಳ್ದನೋ ನಿಜಾಕಾರಕೋಟಿಗಳನು ಎನೆ ನಮತೆರಳಿದವು ಮಣಿಮಯ ವರೂಥಂಗಳೀದುದೋ ಧರೆ ಮಂದಿ ಕುದುರೆಗಳನೆನೆ ನಡೆದುದು ಆಹವಕೆ ಪರಿವಾರಂ ಆ ನೃಪತಿಯ=[ಸೂರ್ಯನು ತನ್ನ ಆಕಾರದ ಚಕ್ರದರಥಗಳ ರೂಪ ತಾಳಿದನೋ ಎನ್ನುವಂತೆ ತೆರಳಿದವು ಮಣಿಮಯವಾದ ರಥಗಳನ್ನು ಮಂದಿಯನ್ನು ಕುದುರೆಗಳನ್ನು ಭೂಮಿಯು ಈದುದೋ/ಜನಿಸಿತೋ, ಎನ್ನುವಂತೆ ಆರಾಜನ ಪರಿವಾರ ಯುದ್ಧಕ್ಕೆ ನಡೆಯಿತು.]
  • ತಾತ್ಪರ್ಯ: ಬೆಟ್ಟಗಳ ರೆಕ್ಕೆಗಳನ್ನು ಕಡಿದ ಇಂದ್ರನ ಮಗ ಎಂಬ ವೈರದಿಂದ ಧನಂಜಯನ ಮೇಲೆ ಸುಮ್ಮನಿರದೆ ಸಿಟ್ಟಿನಿಂದ ಕುಲಾದ್ರಿಗಳ (ಬೆಟ್ಟಗಳ) ಬಳಗವು ಸಿಟ್ಟಿನಂದ ಎದ್ದವೋ ಎನ್ನುವಂತೆ, ಬೆಟ್ಟದಾಕಾರದ ಆನೆಗಳು, ತನ್ನ ಮಗನಂ ಕೊಂದನೆಂದು ಅರ್ಜುನನಮೇಲೆ ಬಂದವು; ಸೂರ್ಯನು ತನ್ನ ಆಕಾರದ ಚಕ್ರದರಥಗಳ ರೂಪ ತಾಳಿದನೋ ಎನ್ನುವಂತೆ ತೆರಳಿದವು ಮಣಿಮಯವಾದ ರಥಗಳನ್ನು ಮಂದಿಯನ್ನು ಕುದುರೆಗಳನ್ನು ಭೂಮಿಯು ಈದುದೋ/ಜನಿಸಿತೋ, ಎನ್ನುವಂತೆ ಆ ರಾಜನ ಪರಿವಾರ ಯುದ್ಧಕ್ಕೆ ನಡೆಯಿತು.
  • (ಪದ್ಯ- ೪೮)

ಪದ್ಯ :-:೪೮:[ಸಂಪಾದಿಸಿ]

ಕಂಸಾರಿ ಬಾರದೆ ನರಂಗೆ ಸೋಲ್ವವನಲ್ಲ | ಹಂಸಧ್ವಜಂ ಧುರದೊಳಿನ್ನು ಕೃಷ್ಣನ ದರ್ಶ | ನಂ ಸುಲಭಮೆಲ್ಲರ್ಗೆ ಸಂದೇಹಮಿಲ್ಲ ದೇಹಮನಾಂತು ಜನಿಯಿಸಿರ್ದ ||

  • ಸಂಸಾರಕಿದು ಸಫಲಮಹುದೆಂದು ಪರಿತೋಷ | ದಿಂ ಸಮರಕೈದುತಿರ್ದು ಸಕಲಪಟುಭಟರ | ದಂ ಸತಿಯರೀಕ್ಷಿಸಿದರುಪ್ಪರಿಗೆಗಳ ಮೇಲಿನಿಯನಾದರಿಸಿ ಕಳುಹಿ ||49||
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂಸಾರಿ ಬಾರದೆ ನರಂಗೆ ಸೋಲ್ವವನಲ್ಲ ಹಂಸಧ್ವಜಂ ಧುರದೊಳ್=[ಕಂಸಾರಿಯಾದ ಕೃಷ್ಣನು ಬರದೆ ಅರ್ಜುನನಿಗೆ ಹಂಸಧ್ವಜನು ಯುದ್ಧದಲ್ಲಿ ಸೋಲುವವನು ಅವನಲ್ಲ.]; ಇನ್ನು ಕೃಷ್ಣನ ದರ್ಶನಂ ಸುಲಭಂ ಎಲ್ಲರ್ಗೆ ಸಂದೇಹಂ ಇಲ್ಲ ದೇಹಮನು ಆಂತು ಜನಿಯಿಸಿರ್ದ=[ಇನ್ನು ಕೃಷ್ಣನ ದರ್ಶನವು ಎಲ್ಲರಿಗೂ ಸುಲಭವಾಗಿ ಆಗುವುದು. ಇದರಲ್ಲಿ ಸಂದೇಹ ಇಲ್ಲ! ದೇಹವನ್ನು ಪಡೆದು ಸಾಮಾನ್ಯರಂತೆ ವಿಷ್ಣುವು ಜನಿಸಿದ್ದಾನೆ.]; ಸಂಸಾರಕಿದು ಸಫಲಂ ಅಹುದೆಂದು ಪರಿತೋಷದಿಂ ಸಮರಕೆ ಐದುತಿರ್ದು ಸಕಲಪಟುಭಟರು=[ಇದು ಈ ಸಂಸಾರವು, - ಈ ದರ್ಶನದಿಂದ ಸಫಲವಾಗುವುದು; ಈ ಅತಿ ಸಂತೋಷದಿಂದ ಸಕಲ ವೀರ ಭಟರು ಯುದ್ಧಕ್ಕೆ ಹೊಗುತ್ತಿದ್ದರು]; ಅದಂ ಸತಿಯರು ಈಕ್ಷಿಸಿದರು ಉಪ್ಪರಿಗೆಗಳ ಮೇಲೆ ಇನಿಯರನು ಆದರಿಸಿ ಕಳುಹಿ=[ಅದನ್ನು ಭಟರ ಪತ್ನಿಯರು ತಮ್ಮ ಪ್ರೀತಿಯ ಗಂಡಂದಿರನ್ನು ಆದರಿಸಿ ಕಳಿಸಿ ಉಪ್ಪರಿಗೆಗಳ(ಮಹಡಿಗಳ) ಮೇಲೆ ನಿಂತು ನೋಡಿದರು.].
  • ತಾತ್ಪರ್ಯ:ಕಂಸಾರಿಯಾದ ಕೃಷ್ಣನು ಬರದೆ ಅರ್ಜುನನಿಗೆ ಹಂಸಧ್ವಜನು ಯುದ್ಧದಲ್ಲಿ ಸೋಲುವವನು ಅವನಲ್ಲ. ಇನ್ನು ಕೃಷ್ಣನ ದರ್ಶನವು ಎಲ್ಲರಿಗೂ ಸುಲಭವಾಗಿ ಆಗುವುದು. ಇದರಲ್ಲಿ ಸಂದೇಹ ಇಲ್ಲ! ದೇಹವನ್ನು ಪಡೆದು ಸಾಮಾನ್ಯರಂತೆ ವಿಷ್ಣುವು ಜನಿಸಿದ್ದಾನೆ. ಇದು ಈ ಸಂಸಾರಕ್ಕೆ -ಈ ದರ್ಶನದಿಂದ ಸಫಲವಾಗುವುದು ಎಂಬ ಈ ಅತಿಯಾದ ಸಂತೋಷದಿಂದ ಸಕಲ ವೀರ ಭಟರು ಯುದ್ಧಕ್ಕೆ ಹೊಗುತ್ತಿದ್ದರು; ಅದನ್ನು ಭಟರ ಪತ್ನಿಯರು ತಮ್ಮ ಪ್ರೀತಿಯ ಗಂಡಂದಿರನ್ನು ಆದರಿಸಿ ಕಳಿಸಿ ಉಪ್ಪರಿಗೆಗಳ(ಮಹಡಿಗಳ) ಮೇಲೆ ನಿಂತು ನೋಡಿದರು.
  • (ಪದ್ಯ- ೪೯)

ಪದ್ಯ :-:೫೦:[ಸಂಪಾದಿಸಿ]

ಅಳಿಲಾದ ನಿರಿಯ ಬಳಲಿದ ಮುಡಿಯ ಸೊಪ್ಪಾದ | ತಿಲಕದ ಕೆದರ್ದ ಕಾಡಿಗೆಯ ಬೆಮರಿದ ಮೈಯ | ಪುಳಕದದಯವದ ಕೆಂಬಾಸುಳೇರುಗಳ ಪರೆದ ನುಲೇಪನದ ತೊಡಕಿದ ||
ಗಳದ ಹಾರದ ಕೆಂಪುಗದಡಿದಧರದ ನುಡಿಯ | ಕಳವಳದ ಕಡೆಗಣ್ಣ ಕೊಂಬೊಗರ ಕದಪುಗಳ | ಕಲೆಯ ಕೋಮಲೆಯರಿನಿಯರ್ಕಳಮ್ ಕಳಿಪಿ ನೆಲೆವಾಡವನಡರ್ದರಂದು ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಳಿಲಾದ ನಿರಿಯ ಬಳಲಿದ ಮುಡಿಯ ಸೊಪ್ಪಾದ ತಿಲಕದ ಕೆದರ್ದ ಕಾಡಿಗೆಯ ಬೆಮರಿದ ಮೈಯ ಪುಳಕದ=[ಸಡಿಲಾದ ಸೀರಯನಿರಿಯ, ಚದುರಿದ ತಲೆಮುಡಿಯ, ಮಾಸಿದ ಹಣೆಯತಿಲಕದ, ಕೆದರಿದ ಕಣ್ಣ ಕಾಡಿಗೆಯ,ಪುಳಕದಿಂದ ಬೆವರಿದ ಮೈಯ]; ಅದಯವದ ಕೆಂಬಾಸುಳೇರುಗಳ ಪರೆದ ಅನುಲೇಪನದ ತೊಡಕಿದ ಗಳದ ಹಾರದ ಕೆಂಪು ಕದಡಿದ ಅಧರದ ನುಡಿಯ=[ದೇಹದ ಮೇಲಿನ ಕೆಂಪು ಗೀರುಗಳ, ಮಾಸಿದ ಗಂಧದ ಅನುಲೇಪನದ, ಕುತ್ತಿಗೆಯ ಹಾರ ತೊಡಕಿ ಸಿಕ್ಕಾದ, ತುಟಿಯ ಕೆಂಪು ಕದಡಿದ, ನುಡಿಯ]; ನುಡಿಯ ಕಡೆಗಣ್ಣ ಕೊಂಬೊಗರ ಕದಪುಗಳ ಕಲೆಯ ಕೋಮಲೆಯರು ಇನಿಯರ್ಕಳಮ್ ಕಳಿಪಿ ನೆಲೆವಾಡವನು ಅಡರ್ದರಂದು=[ಚಿಂತೆಯ ನುಡಿಯ, ಕಡೆಗಣ್ಣ ಕೆಂಪು ಬಣ್ಣದ, ಕೆನ್ನೆಗಳಲ್ಲಿ ಕಾಂತಿಯನ್ನು ಹೊಂದಿದ,ಕೋಮಲೆಯರು ಹೆಂಗಸರು, ತಮ್ಮ ಪ್ಇಯರನ್ನು /ಗಂಡರನ್ನು ಕಳಿಸಿ ಉಪ್ಪರಿಗೆಯನ್ನು ಅಂದು ಹತ್ತಿದರು.]
  • ತಾತ್ಪರ್ಯ: ಸಡಿಲಾದ ಸೀರಯನಿರಿಯ, ಚದುರಿದ ತಲೆಮುಡಿಯ, ಮಾಸಿದ ಹಣೆಯತಿಲಕದ, ಕೆದರಿದ ಕಣ್ಣ ಕಾಡಿಗೆಯ,ಪುಳಕದಿಂದ ಬೆವರಿದ ಮೈಯ; ದೇಹದ ಮೇಲಿನ ಕೆಂಪು ಗೀರುಗಳ, ಮಾಸಿದ ಗಂಧದ ಅನುಲೇಪನದ, ಕುತ್ತಿಗೆಯ ಹಾರ ತೊಡಕಿ ಸಿಕ್ಕಾದ, ತುಟಿಯ ಕೆಂಪು ಕದಡಿದ, ನುಡಿಯ; ಚಿಂತೆಯ ನುಡಿಯ, ಕಡೆಗಣ್ಣ ಕೆಂಪು ಬಣ್ಣದ, ಕೆನ್ನೆಗಳಲ್ಲಿ ಕಾಂತಿಯನ್ನು ಹೊಂದಿದ,ಕೋಮಲೆಯರು ಹೆಂಗಸರು, ತಮ್ಮ ಪ್ಇಯರನ್ನು /ಗಂಡರನ್ನು ಕಳಿಸಿ ಉಪ್ಪರಿಗೆಯನ್ನು ಅಂದು ಹತ್ತಿದರು.(ಅವರೆಲ್ಲರೂ ಗಂಡಂದಿರನ್ನು ಮನೆಯಿಂದ ಕಳಿಸುವ ಮೊದಲು ಅವರೊಂದಿಗೆ ದೇಹಸಂಪರ್ಕ ಮಾಡಿದ್ದರೆಂದು ಭಾವ)
  • (ಪದ್ಯ- ೫೦)

ಪದ್ಯ :-:೫೦:[ಸಂಪಾದಿಸಿ]

ಇನ್ನು ಮರ್ಜನಕೃಷ್ಣರೊಡನೆ ಸಂಗರಕೆ ಸಂ | ಪನ್ನಪಟುಭಟಿರೊದಗಿ ಗಾಯವಡೆಯದಮುನ್ನ | ನಿನ್ನಧರಕೆಂತ ದುದಬಲೆ ಕೃಷ್ಣ ಕ್ಷತಂ ಪೇಳೆಂದಸಿಯಳೊರ್ವಳು ||
ಕನ್ನೆ ಮತ್ತೊರ್ವಳಂ ಕೇಳ್ದೊಡವಳೇಂ ಳೆಲೆ | ಪನ್ನಗಸುವೇಣಿ ಕೃಷ್ಣಾಂಕಮಿಲ್ಲದ ವದನ | ಮುನ್ನಿಸೆಲ್ ಬಿಲಕೆ ಸರಿಯೆಂಬುದಂ ನೀನರಿಯದಕಟ ಮರುಳಾದೆಯೆಂದು ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇನ್ನುಂ ಅರ್ಜನಕೃಷ್ಣರೊಡನೆ ಸಂಗರಕೆ ಸಂಪನ್ನಪಟುಭಟಿರು ಒದಗಿ ಗಾಯವಡೆಯದಮುನ್ನ ನಿನ್ನಧರಕೆಂತಾದುದಬಲೆ ಕೃಷ್ಣ ಕ್ಷತಂ ಪೇಳೆಂದಸಿಯಳೊರ್ವಳು=[ಇನ್ನೂ ಅರ್ಜನ ಕೃಷ್ಣರೊಡನೆ ಯುದ್ಧಕ್ಕೆ ಬಂದ ಪಟುಭಟಿರು ಬಂದು ಗಾಯಪಡೆಯವುದಕ್ಕೆ ಮುಂಚೆ ನಿನ್ನ ತುಟಿ ಏಕೆ ಕೆಂಪಾಯಿತು ಹುಡುಗಿ/ಅಬಲೆ; ಅದು ಕತ್ತಲೆಯಲ್ಲಿ (ಪ್ರಿಯನು) ಕಚ್ಚಿರುವುದೇ?]; ಕನ್ನೆ ಮತ್ತೊರ್ವಳಂ ಕೇಳ್ದೊಡವಳೆಂದಳೆಲೆ ಪನ್ನಗಸುವೇಣಿ ಕೃಷ್ಣಾಂಕಮಿಲ್ಲದ ವದನಂ ಉನ್ನಿಸೆಲ್ ಬಿಲಕೆ ಸರಿಯೆಂಬುದಂ ನೀನರಿಯದಕಟ ಮರುಳಾದೆಯೆಂದು=[ಹುಡುಗಿಯು,ಮತ್ತೊಬ್ಬಳನ್ನು ಕೇಳಿದಾಗ ಅವಳೆಂದಳು ಎಲೆ ಹಾವಿನಂತೆ ಉದ್ದ ಜಡೆಯವಳೇ ಕೃಷ್ಣಾಂಕವು ಕಪ್ಪು ಅಂಕವು ಅಥವಾ ಗುರುತು/ ಬೊಟ್ಟು ಇಲ್ಲದ ಮಖವು ಊಹಿಸಿದರೆ ಬಿಲಕ್ಕೆ ಸಮೆ ಎನ್ನವುದನ್ನು ನೀನರಿಯದೆ ಇರುವೆಯಾ ಅಕಟ! ನೀನು ಮರುಳಾದೆ ಎಂದಳು].(ಕೃಷ್ಣ ಎಂಬ ಹೆಸರು ಹೇಳದ ಬಾಯಿ ಬಿಲದಂತೆ ಎಂದೂ ಅರ್ಥ ಮಅಡುವರು.)
  • ತಾತ್ಪರ್ಯ:*ಇನ್ನೂ ಅರ್ಜನ ಕೃಷ್ಣರೊಡನೆ ಯುದ್ಧಕ್ಕೆ ಬಂದ ಪಟುಭಟಿರು ಬಂದು ಗಾಯಪಡೆಯವುದಕ್ಕೆ ಮುಂಚೆ ನಿನ್ನ ತುಟಿ ಏಕೆ ಕೆಂಪಾಯಿತು ಹುಡುಗಿ/ಅಬಲೆ; ಅದು ಕತ್ತಲೆಯಲ್ಲಿ (ಪ್ರಿಯನು) ಕಚ್ಚಿರುವುದೇ?; ಹುಡುಗಿಯು,ಮತ್ತೊಬ್ಬಳನ್ನು ಕೇಳಿದಾಗ ಅವಳೆಂದಳು ಎಲೆ ಹಾವಿನಂತೆ ಉದ್ದ ಜಡೆಯವಳೇ ಕೃಷ್ಣಾಂಕವು ಕಪ್ಪು ಅಂಕವು ಅಥವಾ ಗುರುತು/ ಬೊಟ್ಟು ಇಲ್ಲದ ಮಖವು ಊಹಿಸಿದರೆ ಬಿಲಕ್ಕೆ ಸಮೆ ಎನ್ನವುದನ್ನು ನೀನರಿಯದೆ ಇರುವೆಯಾ ಅಕಟ! ನೀನು ಮರುಳಾದೆ ಎಂದಳು.(ಕೃಷ್ಣ ಎಂಬ ಹೆಸರು ಹೇಳದ ಬಾಯಿ [ಪ್ರಿಯನು ಮುದ್ದಿಸದ ಬಾಯಿ]ಬಿಲದಂತೆ ಎಂದೂ ಅರ್ಥ ಮಅಡುವರು.)
  • (ಪದ್ಯ- ೫೦)

ಪದ್ಯ :-:೫೨:[ಸಂಪಾದಿಸಿ]

ಒದಗದಿನ್ನು ಮುರಾರಿಯ ಸಮರಮರ್ಜುನನ | ಕದನಂ ಪ್ರವರ್ತಿಸದು ಪ್ರದ್ಯುಮ್ನನಾಹವಂ | ಮೊದಲೆ ತಲೆದೋರಿತಿಂದೂರೊಳೆಂದೊರ್ವಳೀ ಪೊಸವಾರ್ತೆಯಂ ಪೇಳಲು ||
ಚದುರೆ ಮತ್ತೊರ್ವಳಿದು ಜಗದೊಳಚ್ಚರಿಯೆ ಹರೆ | ಯದರ ಕೈ ಮುಂಚುವುದು ವರಸಂಗರಂಜಿತವ | ಹುದು ವರ್ತಮಾನದೊಳ್ ಜನಜನಿತಮಿಲ್ಲಿ ನೂತನದ ಮಾತೇನೆಂದಳು ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಒದಗದೆ ಇನ್ನು ಮುರಾರಿಯ ಸಮರಂ ಅರ್ಜುನನ =[ಇನ್ನೂ ಕೃಷ್ಣನ ಮತ್ತು ಅರ್ಜುನನ ಯುದ್ಧವು ಆರಂಬವಾಗಿಲ್ಲ;];ಕದನಂ ಪ್ರವರ್ತಿಸದು ಪ್ರದ್ಯುಮ್ನನಾಹವಂ ಮೊದಲೆ ತಲೆದೋರತು ಇಂದು ಊರೊಳು ಎಂದು ಓರ್ವಳು ಈ ಪೊಸವಾರ್ತೆಯಂ ಪೇಳಲು =[ಪ್ರದ್ಯುಮ್ನನ / ಮನ್ಮಥನ ಕದನವು ಮೊದಲೇ ಊರಲ್ಲಿ ಮೊದಲೇ ಆರಂಭವಾಯಿತು ಎಂದು ಒಬ್ಬ ಜಾಣೆ ಹೊಸ ವಾರ್ತೆಯಂತೆ ಹೇಳಲು.];ಮತ್ತೊರ್ವಳು ಇದರೊಳು ಎಂದು ಓರ್ವಳೀ ಪೊಸವಾರ್ತೆಯಂ ಪೇಳಲು ಇದು ಜಗದೊಳಚ್ಚರಿಯೆ ಹರೆಯದರ ಕೈ ಮುಂಚುವುದು ವರಸಂಗರಂ ಜಿತವಹುದು=[ಮತ್ತೋಬ್ಬಳು ಇದರಲ್ಲಿ ಹೊಸವಾರ್ತೆಯಲ್ಲ, ಇದರಲ್ಲಿ ಆಶ್ಚರ್ಯವಿಲ್ಲ; ಹರೆಯದರ/ ಪ್ರಾಯದವರ ಶೌರ್ಯದ ಯುದ್ಧ ಮೊದಲು ಆಗುವುದು ವರ(ಪತಿ)ಯುದ್ಧದಲ್ಲಿ ಗೆಲುವಾಗುವುದು]; ವರ್ತಮಾನದೊಳ್ ಜನಜನಿತಮಿಲ್ಲಿ ನೂತನದ ಮಾತೇನೆಂದಳು=[ವರ್ತಮಾನದಲ್ಲಿ ಇದು ಎಲ್ಲರಿಗೂ ಗೊತ್ತು; ಇದರಲ್ಲಿ ಮಾತು ಏನಿದೆ ಎಂದಳು].
  • ತಾತ್ಪರ್ಯ:ಇನ್ನೂ ಕೃಷ್ಣನ ಮತ್ತು ಅರ್ಜುನನ ಯುದ್ಧವು ಆರಂಬವಾಗಿಲ್ಲ; ಪ್ರದ್ಯುಮ್ನನ / ಮನ್ಮಥನ ಕದನವು ಮೊದಲೇ ಊರಲ್ಲಿ ಮೊದಲೇ ಆರಂಭವಾಯಿತು ಎಂದು ಒಬ್ಬ ಜಾಣೆ ಹೊಸ ವಾರ್ತೆಯಂತೆ ಹೇಳಲು. ಮತ್ತೋಬ್ಬಳು ಇದರಲ್ಲಿ ಹೊಸವಾರ್ತೆಯಿಲ್ಲ, ಇದರಲ್ಲಿ ಆಶ್ಚರ್ಯವಿಲ್ಲ; ಹರೆಯದರ/ ಪ್ರಾಯದವರ ಶೌರ್ಯದ ಯುದ್ಧ ಮೊದಲು ತೋರುವುದು ವರ(ಪತಿ)ಯುದ್ಧದಲ್ಲಿ ಗೆಲುವಾಗುವುದು; ವರ್ತಮಾನದಲ್ಲಿ ಇದು ಎಲ್ಲರಿಗೂ ಗೊತ್ತು; ಇದರಲ್ಲಿ ಮಾತು ಏನಿದೆ ಎಂದಳು.
  • (ಪದ್ಯ- ೫೦)

ಪದ್ಯ :-:೫೨:[ಸಂಪಾದಿಸಿ]

ಇಂದುಂಂಡಲದ ಸಿರಿಯಂ ಸೂರೆಯಾಡಿದರ್ | ಬಂದು ವಿಷಯದೊಳೂರುಗಳನಿರಿದರೊತ್ತಾಯ | ದಿಂದ ದುರ್ಗಂಗಳಂ ಕೈಕೊಂಡರೊದಗಿದರ್ ಸೆಳೆಸೂರೆಗಾತುರದೊಳು ||
ಮುಂದುವರಿದಂಕವೇರಿದರೀಗ ವರಸುಭಟ | ರೆಂದು ಪೊಸವಾರ್ತೆಯಂ ಪ್ರೌಢೆಯೊರ್ವಳ್ಪೇಳ್ದೊ| ಡಂದು ಬಾಲೆಯರಾಕೆಯಂ ಜರೆದರರಸನಿಲ್ಲವೆ ಗೆಲ್ವೊಡೆಂದು ನಗುತೆ ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂದುಂಂಡಲದ ಸಿರಿಯಂ ಸೂರೆಯಾಡಿದರ್ ಬಂದು ವಿಷಯದೊಳು ಊರುಗಳನು ಇರಿದರು ಒತ್ತಾಯದಿಂದ ದುರ್ಗಂಗಳಂ ಕೈಕೊಂಡರು=[ಇಂದುಂಂಡಲದಹಾಗಿದ್ದ ಮುಖದಸಿರಿಯನ್ನು (ಚುಂಬನದಿಂದ) ಸೂರೆಯಾಡಿದರು; ಬಂದು ವಿಷಯ(ಇಂದಿಯ)ದಿಂದ ತೊಡೆಗಳನ್ನು ಚುಚ್ಚಿದರು, ಒತ್ತಾಯದಿಂದ ದುರ್ಗ/ ಬೆಟ್ಟದಂತಿರುವ ಸ್ತನದಳನ್ನು ಕೈಯಲ್ಲಿ ಹಿಡಿದರು/ಕೊಂಡರು]; ಒದಗಿದರ್ ಸೆಳೆ(ಎಳೆದು)ಸೂರೆಗೆ ಆತುರದೊಳು ಮುಂದುವರಿದು ಅಂಕ(ತೊಡೆ) ವೇರಿದರೂ ಈಗ ವರಸುಭಟರೆಂದು=[ಈಗ ತಾವು ವರ ಸುಭಟರು ಎಂದು, ಮುಂದೆ ಒತ್ತಿ ಬಂದರು,ಆತುರದಲ್ಲಿ ಸೂರೆಗೊಳ್ಳಲು ಪ್ರಿಯೆಯನ್ನು ಸೆಳೆದುಕೊಂಡರು, ಮುಂದುವರಿದು ಅಂಕವೇರಿದರು/ ತೊಡೆಯ ಮೇಲೆ ಏರಿದರು (ಈಗ ತಾವು ವರ ಸುಭಟರು ಎಂದು)]; ಪೊಸವಾರ್ತೆಯಂ ಪ್ರೌಢೆಯೊರ್ವಳ್ ಪೇಳ್ದೊಡೆ ಅಂದು ಬಾಲೆಯರು ಆಕೆಯಂ ಜರೆದರೂ ಆರಸನೂ ಇಲ್ಲವೆ ಗೆಲ್ಲಲು ಎಂದು ನಗುತೆ=[ಇದು ಹೊಸ ಸುದ್ದಿಯೆಂದು ಪ್ರೌಢೆಯಾದವಳು ಹೇಳಿದಾಗ, ಅಂದು ಯುವತಿಯರು ಆಕೆಯನ್ನು, ಜರೆದರು/ ಹೀಗಳೆದರು ಆರಸನು ಗೆಲ್ಲುವನು ಇಲ್ಲವೆ ಗೆಲ್ಲಲು ಎಂದು ನಗುತ್ತಾ, ದೊರೆಯು ಗೆಲ್ಲುವನು/ ಗೆಲ್ಲಲು ಅ+ರಸನು- ರಸವಿಲ್ಲದವನು ಇಲ್ಲವೇ? ಸ್ಕಲನವಾಗದವನು ಇಲ್ಲವೇ ಎಂದರು ನಗುತ್ತಾ].
  • ತಾತ್ಪರ್ಯ: ಇಂದುಂಂಡಲದಹಾಗಿದ್ದ ಮುಖದಸಿರಿಯನ್ನು (ಚುಂಬನದಿಂದ) ಸೂರೆಯಾಡಿದರು; ಬಂದು ವಿಷಯ(ಇಂದಿಯ)ದಿಂದ ತೊಡೆಗಳನ್ನು ಚುಚ್ಚಿದರು, ಒತ್ತಾಯದಿಂದ ದುರ್ಗ/ ಬೆಟ್ಟದಂತಿರುವ ಸ್ತನದಳನ್ನು ಕೈಯಲ್ಲಿ ಹಿಡಿದರು/ಕೊಂಡರು; ಈಗ ತಾವು ವರ(ಗಂಡ) ಸುಭಟರು ಎಂದು, ಮುಂದೆ ಒತ್ತಿ ಬಂದರು,ಆತುರದಲ್ಲಿ ಸೂರೆಗೊಳ್ಳಲು ಪ್ರಿಯೆಯನ್ನು ಸೆಳೆದುಕೊಂಡರು, ಮುಂದುವರಿದು ಅಂಕವೇರಿದರು/ ತೊಡೆಯ ಮೇಲೆ ಏರಿದರು (ಈಗ ತಾವು ವರ ಸುಭಟರು ಎಂದು); ಇದು ಹೊಸ ಸುದ್ದಿಯೆಂದು ಪ್ರೌಢೆಯಾದವಳು ಹೇಳಿದಾಗ, ಅಂದು ಯುವತಿಯರು ಆಕೆಯನ್ನು, ಜರೆದರು/ ಹೀಗಳೆದರು, ಅರಸನು ಇಲ್ಲವೆ ಗೆಲ್ಲಲು? ಆರಸನು ಗೆಲ್ಲುವನು; ಎಂದು ನಗುತ್ತಾ, ದೊರೆಯು ಗೆಲ್ಲುವನು/ ಗೆಲ್ಲಲು ಅ+ರಸನು- ರಸವಿಲ್ಲದವನು ಇಲ್ಲವೇ? ಸ್ಕಲನವಾಗದವನು ಇಲ್ಲವೇ ಎಂದರು ನಗುತ್ತಾ].
  • (ಪದ್ಯ- ೫೦)

ಪದ್ಯ :-:೫೪:[ಸಂಪಾದಿಸಿ]

ವಿಮಲ ದಧಿ ಲಾಜ ದೂರ್ವಾಕ್ಷತೆಗಳಂ ತಳಿದು | ಕ್ರಮದೊಳಾರತಿಗಳಂ ತಂದೆತ್ತಿ ಯಕ್ಷಕ | ರ್ದಮ ವಿಲೇಪನ ಕುಸುಮ ತಾಂಬೂಲಮಂ ಕೊಟ್ಟು ಪರಸಿ ಸೇಸೆಗಳನಿಟ್ಟು ||
ರಮಣರಂ ತಗೆದು ಬಿಗಿಯಪ್ಪಿ ಶುಭವಾಕ್ಯದಿಂ | ಸಮರಭೂಮಿಗೆ ಕಳುಹಿ ಸತಿಯರ್ ಸುರತ್ನ ಕು| ಟ್ಟಿಮದ ಹರ್ಮ್ಯಂಗಳನಡರ್ದರ್ ದಿವಿಜಪುರದ ಲಕ್ಷ್ಮೀಶನಂ ನೋಡಲು ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಮಲ ದಧಿ ಲಾಜ ದೂರ್ವಾಕ್ಷತೆಗಳಂ ತಳಿದು ಕ್ರಮದೊಳಾರತಿಗಳಂ ತಂದೆತ್ತಿ ಯಕ್ಷ ಕರ್ದಮ ವಿಲೇಪನ ಕುಸುಮ ತಾಂಬೂಲಮಂ ಕೊಟ್ಟು=[ಶುದ್ಧವಅದ ಮೊಸರು ಅರಳು ದೂರ್ವೆ ಅಕ್ಷತೆಗಳನ್ನು ತಳಿದು /ಅವರ ಮೇಲೆ ಹಾಕಿ, ಕ್ರಮವಾದ ರೀತಿಯಲ್ಲಿ ಆರತಿಗಳನ್ನು ತಂದು ಎತ್ತಿ, ಯಕ್ಷಕರ್ದಮ ವೆಂಬ ಗಂಧ ಹಚ್ಚಿ, ಹೂವು ತಾಂಬೂಲಗಳನ್ನು ಕೊಟ್ಟು]; ಪರಸಿ ಸೇಸೆಗಳನು ಇಟ್ಟು ರಮಣರಂ ತಗೆದು ಬಿಗಿಯಪ್ಪಿ ಶುಭವಾಕ್ಯದಿಂ ಸಮರಭೂಮಿಗೆ ಕಳುಹಿ ಸತಿಯರ್ ಸುರತ್ನ ಕ(ಕು)ಟ್ಟಿಮದ ಹರ್ಮ್ಯಂಗಳನು ಅಡರ್ದರ್ ದಿವಿಜಪುರದ ಲಕ್ಷ್ಮೀಶನಂ ನೋಡಲು=[ಹರಸಿ ಸೇಸೆಗಳನ್ನು ಇಟ್ಟು ಗಂಡರನ್ನು ತಗೆದು ಬಿಗಿದು ಅಪ್ಪಿಕೊಂಡು, ಶುಭವಾಕ್ಯವನ್ನು ಹೇಳಿ, ಪತ್ನಿಯರು ಗಂಡಂದಿರನ್ನು ಯುದ್ಧಭೂಮಿಗೆ ಕಳುಹಿಸಿದರು. ನಂತರ ದೇವನೂರಿನ ಲಕ್ಷ್ಮೀಶನನ್ನು ನೋಡಲು ರತ್ನದಿಂದ ಕೆತ್ತಿರುವದ ಉತ್ತಮ ನೆಲಗಟ್ಟಿನ ಮನೆಮಹಡಿಗಳನ್ನು ಪ್ರವೇಶಿಸಿದರು.]
  • ತಾತ್ಪರ್ಯ:ಶುದ್ಧವಅದ ಮೊಸರು ಅರಳು ದೂರ್ವೆ ಅಕ್ಷತೆಗಳನ್ನು ತಳಿದು /ಅವರ ಮೇಲೆ ಹಾಕಿ, ಕ್ರಮವಾದ ರೀತಿಯಲ್ಲಿ ಆರತಿಗಳನ್ನು ತಂದು ಎತ್ತಿ ; ಯಕ್ಷಕರ್ದಮ ವೆಂಬ ಗಂಧ ಹಚ್ಚಿ, ಹೂವು ತಾಂಬೂಲಗಳನ್ನು ಕೊಟ್ಟು, ಹರಸಿ ಸೇಸೆಗಳನ್ನು ಇಟ್ಟು ಗಂಡರನ್ನು ತಗೆದು ಬಿಗಿದು ಅಪ್ಪಿಕೊಂಡು, ಶುಭವಾಕ್ಯವನ್ನು ಹೇಳಿ, ಪತ್ನಿಯರು ಗಂಡಂದಿರನ್ನು ಯುದ್ಧಭೂಮಿಗೆ ಕಳುಹಿಸಿದರು. ನಂತರ ದೇವನೂರಿನ ಲಕ್ಷ್ಮೀಶನನ್ನು ನೋಡಲು ರತ್ನದಿಂದ ಕೆತ್ತಿರುವದ ಉತ್ತಮ ನೆಲಗಟ್ಟಿನ ಮನೆಮಹಡಿಗಳನ್ನು ಪ್ರವೇಶಿಸಿದರು.
  • (ಪದ್ಯ- ೫೪)XXIV
  • (ಸಂಧಿ ೧೦ಕ್ಕೆ ಪದ್ಯ ೫೨೫.)

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.