ಜೈಮಿನಿ ಭಾರತ ಹನ್ನೊಂದನೆಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಹನ್ನೊಂದನೆಯ ಸಂಧಿ[ಸಂಪಾದಿಸಿ]

ಪದ್ಯ :-:ಸೂಚನೆ :[ಸಂಪಾದಿಸಿ]

ಹಿಂದುಳಿದನಾಹವಕ್ಕೆಂದು ಹಂಸಧ್ವಜಂ | ನಂದನನನೆಣ್ಣೆ ಗಾಯ್ದಿರ್ದ ಕೊಪ್ಪರಿಗೆಯೊಳ್ | ತಂದು ಕೆಡಹಿಸಲಚ್ಯತಧ್ಯಾನದಿಂತಂಪುವಡೆದನವನಚ್ಚರಿಯೆನೆ ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಸೂಚನೆ:
  • ಹಿಂದುಳಿದನು ಆಹವಕ್ಕೆ ಎಂದು ಹಂಸಧ್ವಜಂ ನಂದನನನ ಎಣ್ಣೆ ಗಾಯ್ದಿರ್ದ ಕೊಪ್ಪರಿಗೆಯೊಳ್ ತಂದು ಕೆಡಹಿಸಲ್ ಅಚ್ಯತಧ್ಯಾನದಿಂ ತಂಪುವಡೆದನು ಅವನು ಅಚ್ಚರಿಯೆನೆ.=[ಹಂಸಧ್ವಜನು ಮಗನನ್ನು ಯುದ್ಧಕ್ಕೆ ಹಿಂದುಳಿದನು ಎಂದು ಎಣ್ಣೆ ಕಾಯಿಸಿದ ಕೊಪ್ಪರಿಗೆಯಲ್ಲಿ ತಂದು ಹಾಕಿಸಲು, ಅಚ್ಯತನ ಧ್ಯಾನದಿಂದ ಅವನು ಅಲ್ಲಿ ತಂಪನ್ನು ಅನುಭವಿಸಿದನು; ಇದು ಆಶ್ಚರ್ಯವಾಗಿತ್ತು].
  • ತಾತ್ಪರ್ಯ:ಹಂಸಧ್ವಜನು ಮಗನನ್ನು ಯುದ್ಧಕ್ಕೆ ಹಿಂದುಳಿದನು ಎಂದು ಎಣ್ಣೆ ಕಾಯಿಸಿದ ಕೊಪ್ಪರಿಗೆಯಲ್ಲಿ ತಂದು ಹಾಕಿಸಲು, ಅಚ್ಯತನ ಧ್ಯಾನದಿಂದ ಅವನು ಅಲ್ಲಿ ತಂಪನ್ನು ಅನುಭವಿಸಿದನು; ಇದು ಆಶ್ಚರ್ಯವಾಗಿತ್ತು].
  • (ಪದ್ಯ- ಸೂಚನೆ:)

ಪದ್ಯ :-:ಸೂಚನೆ :[ಸಂಪಾದಿಸಿ]

ಭೂಹಿತಚರಿತ್ರ ಕೇಳುಳಿಯದೆ ಸಮಸ್ತಭಟ | ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ | ಮೋಹದ ಕುಮಾರಂ ಸುಧನ್ವನಾಯತಮಾಗಿ ಬಂದು ನಿಜಮಾತೆಯಡಿಗೆ ||
ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗೆ ಸಿತ | ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್ | ಸಾಹಸಂಮಾಳ್ಪಿನೆನ್ನಂ ಪರಿಸಿ ಕಳುಹೆಂದಂ ಕೈಮುಗಿದೊಡಿಂತೆಂದಳು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೂಹಿತಚರಿತ್ರ (ಭೂಮಿಯ ಜನರಿಗೆ ಹಿತ ಮಾಡುವವನು)ಕೇಳು ಉಳಿಯದೆ ಸಮಸ್ತಭಟರು ಆಹವಕೆ ಪೊರಮಟ್ಟ ಬಳಿಕ ಹಂಸಧ್ವಜನ ಮೋಹದ ಕುಮಾರಂ ಸುಧನ್ವನು=[ಜನಮೇಜಯನೇ ಕೇಳು ಉಳಿಯದೆ ಸಮಸ್ತ ಯೋಧರು ಯುದ್ಧಕ್ಕೆ ಹೊರಟ ಬಳಿಕ ಹಂಸಧ್ವಜನ ಮೋಹದ ಮಗ ಸುಧನ್ವನು]; ಆಯತಮಾಗಿ ಬಂದು ನಿಜಮಾತೆಯಡಿಗೆ ಬಾಹುಯುಗಮಂ ನೀಡಿ ಸಾಷ್ಟಾಂಗಂ ಎರಗೆ ಸಿತವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್ ಸಾಹಸಂಮಾಳ್ಪೆನು=[ಯುದ್ಧಕ್ಕೆ ಸಿದ್ಧವಾಗಿ ಬಂದು ತನ್ನ ತಾಯಿಯ ಪಾದಕ್ಕೆ ಕೈಚಾಚಿ ಸಾಷ್ಟಾಂಗಂ ನಮಸ್ಕಾರ ಮಾಡಲು, ಅರ್ಜುನನಕುದುರೆಯನ್ನು ಹಿಡಿದು ಕಟ್ಟಿ ಕದನದಲ್ಲಿ ಸಾಹಸವನ್ನು ಮಾಡುವೆನು]; ಎನ್ನಂ ಪರಿಸಿ ಕಳುಹೆಂದಂ ಕೈಮುಗಿದೊಡೆ ಇಂತೆಂದಳು=[ನನ್ನನ್ನು ಹರಿಸಿ ಕಳುಹಿಸಬೇಕು ಕೈಮುಗಿದಾಗ ಹೀಗೆ ಹೇಳಿದಳು].
  • ತಾತ್ಪರ್ಯ: ಜನಮೇಜಯನೇ ಕೇಳು ಉಳಿಯದೆ ಸಮಸ್ತ ಯೋಧರು ಯುದ್ಧಕ್ಕೆ ಹೊರಟ ಬಳಿಕ ಹಂಸಧ್ವಜನ ಮೋಹದ ಮಗ ಸುಧನ್ವನು]; ಆಯತಮಾಗಿ ಬಂದು ನಿಜಮಾತೆಯಡಿಗೆ ಯುದ್ಧಕ್ಕೆ ಸಿದ್ಧವಾಗಿ ಬಂದು ತನ್ನ ತಾಯಿಯ ಪಾದಕ್ಕೆ ಕೈಚಾಚಿ ಸಾಷ್ಟಾಂಗಂ ನಮಸ್ಕಾರ ಮಾಡಲು, ಅರ್ಜುನನಕುದುರೆಯನ್ನು ಹಿಡಿದು ಕಟ್ಟಿ ಕದನದಲ್ಲಿ ಸಾಹಸವನ್ನು ಮಾಡುವೆನು; ನನ್ನನ್ನು ಹರಿಸಿ ಕಳುಹಿಸಬೇಕು ಕೈಮುಗಿದಾಗ ಹೀಗೆ ಹೇಳಿದಳು.
  • (ಪದ್ಯ- ೫೦)

ಪದ್ಯ :-:೨ :[ಸಂಪಾದಿಸಿ]

ಕಂದ ಕೇಳ್ ಫಲುಗುಣಂ ಪಾಲಿಪಂ ನಾಲ್ಕಡಿಯ | ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ | ನಂದದಿಂ ಪಾರ್ಥನಂ ರಕ್ಷಿಸುವ ಹರಿಯನೇ ಹಿಡಿವ ಬುದ್ಧಿಯನೆ ಮಾಡು ||
ಹಿಂದೆ ನಾರದಮುನಿಯ ಮುಖದಿಂದೆ ಕೇಳ್ದಿಂ ಮು | ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ | ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂದ ಕೇಳ್ ಫಲುಗುಣಂ ಪಾಲಿಪಂ ನಾಲ್ಕಡಿಯದೊಂದು ಹರಿಯಂ=[ಮಗನೇ ಕೇಳು ಫಲ್ಗುಣನು ಪಾಲಿಸುತ್ತಿರುವನು ನಾಲ್ಕು ಫಾದದ ಒಂದು ಹರಿಯನ್ನ ಎಂದರೆ ಕುದುರೆಯನ್ನು]; ನಿನಗದರ ಚಿಂತೆ ಬೇಡ ಸಾನಂದದಿಂ ಪಾರ್ಥನಂ ರಕ್ಷಿಸುವ ಹರಿಯನೇ ಹಿಡಿವ ಬುದ್ಧಿಯನೆ ಮಾಡು=[ನಿನಗೆ ಅದರ ಚಿಂತೆ ಬೇಡ; ಸಂತೋಷದಿಂದ ಪಾರ್ಥನನ್ನು ರಕ್ಷಿಸುವ ಹರಿಯನ್ನೇ/ಕೃಷ್ಣನನ್ನೇ ಹಿಡಿಯುವ ಮನಸ್ಸು ಮಾಡು]; ಹಿಂದೆ ನಾರದಮುನಿಯ ಬಾಯಿಯಿಂದ ಕೇಳ್ದಿಂ ಮುಕುಂದನ ವಿಶಾಲಲೀಲಾಮಾಲೆಯಂ ಕೃಷ್ಣನು ಇಂದು ಪ್ರತ್ಯಕ್ಷನಾದರೆ ಕಣ್ಣಾರೆ ಕಾಣಬಹುದೆಂದೊಡೆ ಅವನು ಇಂತೆಂದನು=[ಹಿಂದೆ ನಾರದಮುನಿಯ ಬಾಯಿಂದ ಮುಕುಂದನ ವಿಶಾಲವಾದ ಆನೇಕ ಲೀಲೆಗಳನ್ನು ಕೇಳಿದ್ದೇನೆ.ಕೃಷ್ಣನಿಂದು ಮೈದೋರಿದರೆ ಕಣ್ಣಾರೆ ಕಾಣಬಹುದು ಎಂದೊಡೆ ಅವನು ಹೀಗೆ ಹೇಳಿದನು.].
  • ತಾತ್ಪರ್ಯ: ಮಗನೇ ಕೇಳು ಫಲ್ಗುಣನು ಪಾಲಿಸುತ್ತಿರುವನು ನಾಲ್ಕು ಫಾದದ ಒಂದು ಹರಿಯನ್ನ ಎಂದರೆ ಕುದುರೆಯನ್ನು, ನಿನಗೆ ಅದರ ಚಿಂತೆ ಬೇಡ; ಸಂತೋಷದಿಂದ ಪಾರ್ಥನನ್ನು ರಕ್ಷಿಸುವ ಹರಿಯನ್ನೇ/ಕೃಷ್ಣನನ್ನೇ ಹಿಡಿಯುವ ಮನಸ್ಸು ಮಾಡು; ಹಿಂದೆ ನಾರದಮುನಿಯ ಬಾಯಿಂದ ಮುಕುಂದನ ವಿಶಾಲವಾದ ಆನೇಕ ಲೀಲೆಗಳನ್ನು ಕೇಳಿದ್ದೇನೆ. ಕೃಷ್ಣನಿಂದು ಮೈದೋರಿದರೆ ಕಣ್ಣಾರೆ ಕಾಣಬಹುದು ಎಂದೊಡೆ ಅವನು ಹೀಗೆ ಹೇಳಿದನು.
  • (ಪದ್ಯ- ೨)

ಪದ್ಯ :-:೩ :[ಸಂಪಾದಿಸಿ]

ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ | ರಾಯನಂ ತನ್ನೆಡೆಗೆ ಬರಿಸಿಕೊಳ್ವುದಕೊಂದು | ಪಾಯಮಂ ಬಲ್ಲೆನಾಂಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು |
ನೋಯಿಸಿದೊಡಗಧರಂ ಬಾರದಿರನಾನತರ | ಪಾಯಮಂ ಸೈರಿಸಂ ಬಳಿಕ ತೋರುವೆನಂಬು | ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮುಗುಳಿಂತೆಂದಳು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾಯೆ ಚಿತ್ತೈಸು ಆದೊಡೆ ಈ ಭಾಷೆಯಂ ಕೃಷ್ಣರಾಯನಂ ತನ್ನೆಡೆಗೆ ಬರಿಸಿಕೊಳ್ವುದಕೆ ಒಂದು ಪಾಯಮಂ ಬಲ್ಲೆನು=[ತಾಯೆ ಕೇಳು, ಆದರೆ ಈ ಭಾಷೆಯನ್ನು, ಕೃಷ್ಣರಾಯನನ್ನು ಇಲ್ಲಿಗೆ ಬರಿಸಿಕೊಳ್ಳಲು ಒಂದು ಪಾಯವನ್ನು ಅರಿತಿದ್ದೇನೆ.]; ಆಂ ಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು ನೋಯಿಸಿದೊಡೆ ಅಗಧರಂ (ಬೆಟ್ಟವನ್ನು ಎತ್ತಿದವನು) ಬಾರದಿರನು=[ನಾನು ಕಯ್ಯನ್ನು ಹಿಡಿದರೆ ಮೈ ತಾನೆ ಬರುವುದು, ಇಂದ್ರಜನನಾದ ಅರ್ಜುನನ್ನು ನೋಯಿಸಿದರೆ ಕೃಷ್ಣನು ಬಾರದೆ ಇರಲಾರನು]; ಆನತರ ಅಪಾಯಮಂ ಸೈರಿಸಂ ಬಳಿಕ ತೋರುವೆನಂಬು ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮುಗುಳಿಂತೆಂದಳು[ಭಕ್ತರ ಅಪಾಯವನ್ನು ಅವನು ಸಹಿಸನು; ಬಳಿಕ ತೋರುವೆನು ಅಂಬುಜಾಯತಾಕ್ಷನ ಮುಂದೆ ತನ್ನ ಪೌರುಷವನು ಎನಲು ಆಕೆ ತಿರುಗಿ ಹೀಗೆ ಹೇಳಿದಳು];
  • ತಾತ್ಪರ್ಯ:ತಾಯೆ ಕೇಳು, ಆದರೆ ಈ ಭಾಷೆಯನ್ನು, ಕೃಷ್ಣರಾಯನನ್ನು ಇಲ್ಲಿಗೆ ಬರಿಸಿಕೊಳ್ಳಲು ಒಂದು ಪಾಯವನ್ನು ಅರಿತಿದ್ದೇನೆ. ನಾನು ಕಯ್ಯನ್ನು ಹಿಡಿದರೆ ಮೈ ತಾನೆ ಬರುವುದು, ಇಂದ್ರಜನನಾದ ಅರ್ಜುನನ್ನು ನೋಯಿಸಿದರೆ ಕೃಷ್ಣನು ಬಾರದೆ ಇರಲಾರನು; ಭಕ್ತರ ಅಪಾಯವನ್ನು ಅವನು ಸಹಿಸನು; ಬಳಿಕ ತೋರುವೆನು ಕೃಷ್ಣನ ಮುಂದೆ ತನ್ನ ಪೌರುಷವನು ಎನಲು ಆಕೆ ತಿರುಗಿ ಹೀಗೆ ಹೇಳಿದಳು;
  • (ಪದ್ಯ- ೩)

ಪದ್ಯ :-:೪:[ಸಂಪಾದಿಸಿ]

ಕರುವನೆಳಗಂದಿ ತಾನರ ಕೊಂಡೈತರ್ಪ | ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ | ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು ||
ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್ | ನೆರೆ ಕೃಷ್ಣನಂ ಗೆಲ್ವರುಂಟೆ ಸ ಕೆನ್ನೊಡಲ | ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ವೆಟ್ಟದಿರ್ ಪೋಗೆಂದಳು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕರುವನು ಎಳಗಂದಿ ತಾನು ಅರಕೊಂಡು ಐತರ್ಪ ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆಗೆ=[ಕರುವನ್ನು ಎಳಗಂದಿಹಸು ಅರಿಸಿಕೊಂಡು ಬರುವಂತೆ, ಪಾರ್ಥನು ಇರವಲ್ಲಿ ಕೃಷ್ನನು ಬರುವನು.]; ಅರಿವೆನು ಇದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು ಜರಿವರು ಇಕ್ಕೆಲದ ಬಂಧುಗಳು=[ಅರಿತಿದ್ದೇನೆ, ಇದು ನಿಶ್ಚಯವು ಮಗನೆ ನೀನು ಆ ಹರಿಗೆ ಹೆದರಿ ಹಿಮ್ಮೆಟ್ಟಿದರೆ, ತನ್ನನ್ನು ಜರಿವರು ಅಕ್ಕ ಪಕ್ಕದ ಬಂಧುಗಳು ಹೀಯಾಳಿಸುವರು.]; ಇನ್ನು ಸಮರದೊಳ್ ನೆರೆ ಕೃಷ್ಣನಂ ಗೆಲ್ವರುಂಟೆ ಸಾಕು ಎನ್ನೊಡಲ ಮರುಕಮಂ ಬಿಟ್ಟೆನು ಅವನಂ ಕಂಡ ಬಳಿಕ ಹಿಮ್ವೆಟ್ಟದಿರ್ ಪೋಗೆಂದಳು=[ಇನ್ನು ಯುದ್ಧದಲ್ಲಿ ಹೆಚ್ಚಿನ ಕೃಷ್ಣನನ್ನು ಗೆಲ್ಲುವವರುಂಟೆ, ಕೃಷ್ಣನದರ್ಶನ ಸಾಕು; ನನ್ನ ದೇಹದ ಭಾಗವಾಗ ನಿನ್ನ ಮೇಲಿನ ಮರುಕವನ್ನು ಬಿಟ್ಟೆನು; ಅವನನ್ನು ಕಂಡ ಬಳಿಕ ಹಿಮ್ವೆಟ್ಟಬೇಡ ಹೋಗು ಎಂದಳು].
  • ತಾತ್ಪರ್ಯ:ಕರುವನ್ನು ಎಳಗಂದಿಹಸು ಅರಿಸಿಕೊಂಡು ಬರುವಂತೆ, ಪಾರ್ಥನು ಇರವಲ್ಲಿ ಕೃಷ್ಣನು ಬರುವನು. ಇದನ್ನು ಅರಿತಿದ್ದೇನೆ, ಇದು ನಿಶ್ಚಯವು ಮಗನೆ ನೀನು ಆ ಹರಿಗೆ ಹೆದರಿ ಹಿಮ್ಮೆಟ್ಟಿದರೆ, ತನ್ನನ್ನು ಅಕ್ಕ ಪಕ್ಕದ ಬಂಧುಗಳು ಹೀಯಾಳಿಸುವರು. ಇನ್ನು ಯುದ್ಧದಲ್ಲಿ ಹೆಚ್ಚಿನಪುರುಷ ಕೃಷ್ಣನನ್ನು ಗೆಲ್ಲುವವರುಂಟೆ, ಕೃಷ್ಣನದರ್ಶನ ಸಾಕು; ನನ್ನ ದೇಹದ ಭಾಗವಾಗ ನಿನ್ನ ಮೇಲಿನ ಮರುಕವನ್ನು ಬಿಟ್ಟೆನು; ಅವನನ್ನು ಕಂಡ ಬಳಿಕ ಹಿಮ್ವೆಟ್ಟಬೇಡ ಹೋಗು ಎಂದಳು.
  • (ಪದ್ಯ- ೪)XXV-||X

ಪದ್ಯ :-:೫:[ಸಂಪಾದಿಸಿ]

ಎಂದೊಡೆಲೆ ತಾಯೆ ಕೇಳ್ ಚಕ್ರಿಗೆ ವಿಮುಖನಾಗಿ | ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ | ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ ||
ಕೊಂದಪೆಂ ಪಾರ್ಥನ ಪತಾಕಿನಿಯನವನದಟ | ನಂದಗೆಡೆಸುವೆನೆನ್ನ ವಿಕರಮವನಚ್ಯುತನ | ಮುಂದೆ ತೋರಿಸುವೆನಿನಿತರಮೇಲೆ ಸೋಲುಗೆಲುವದು ಪುಣ್ಯವಶಮೆಂದನು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಂದೊಡೆ ಎಲೆ ತಾಯೆ ಕೇಳ್ ಚಕ್ರಿಗೆ ವಿಮುಖನಾಗಿ ಬಂದೆನಾದೊಡೆ ನಿನ್ನ ಗರ್ಭದಿಂದ ಉದಯಿಸಿದ ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ=[ತಾಯಿ ಹಿಮ್ಮೆಟ್ಟಬೇಡ ಎಂದಾಗ, ಎಲೆ ತಾಯೆ ಕೇಳು ಕೃಷ್ಣನಿಗೆ ಸೋತು ಬಂದರೆ ನಿನ್ನ ಗರ್ಭದಿಂದ ಬಂದ ಮಗನೇ, ಹಂಸಧ್ವಜನ ಕುಮಾರನೆ? ಅಲ್ಲದೆ ವಿಷ್ಣುಭಕ್ತನೇ - ವೀರನೇ?]; ಕೊಂದಪೆಂ ಪಾರ್ಥನ ಪತಾಕಿನಿಯನು ಅವನ ಅದಟನು ಅಂದಗೆಡೆಸುವೆನು ಎನ್ನ ವಿಕ್ರಮವನು ಅಚ್ಯುತನ ಮುಂದೆ ತೋರಿಸುವೆನು ಇನಿತರಮೇಲೆ ಸೋಲುಗೆಲುವದು ಪುಣ್ಯವಶಮೆಂದನು=[ಕೊಂದಪೆಂ ಪಾರ್ಥನ ಸೈನ್ಯವನ್ನು ಕೊಲ್ಲುವೆನು; ಅವನ ಶೌರ್ಯವನ್ನು ಕಡಿಮೆಯದುಯೆಂದು ತೋರಿಸುವೆನು; ನನ್ನ ಪರಾಕ್ರಮವನ್ನು ಅಚ್ಯುತನ ಮುಂದೆ ತೋರಿಸುವೆನು; ಇಷ್ಟರಮೇಲೆ ಸೋಲುಗೆಲುವುಗಳೂ ಪುಣ್ಯವಶವು ಎಂದನು ].
  • ತಾತ್ಪರ್ಯ:ಸುಧನ್ವನಿಗೆ ತಾಯಿ ಹಿಮ್ಮೆಟ್ಟಬೇಡ ಎಂದಾಗ, ಎಲೆ ತಾಯೆ ಕೇಳು ಕೃಷ್ಣನಿಗೆ ಸೋತು ಬಂದರೆ ನಿನ್ನ ಗರ್ಭದಿಂದ ಬಂದ ಮಗನೇ, ಹಂಸಧ್ವಜನ ಕುಮಾರನೆ? ಅಲ್ಲದೆ ವಿಷ್ಣುಭಕ್ತನೇ - ವೀರನೇ? ಪಾರ್ಥನ ಸೈನ್ಯವನ್ನು ಕೊಲ್ಲುವೆನು; ಅವನ ಶೌರ್ಯವನ್ನು ಕಡಿಮೆಯದುಯೆಂದು ತೋರಿಸುವೆನು; ನನ್ನ ಪರಾಕ್ರಮವನ್ನು ಅಚ್ಯುತನ ಮುಂದೆ ತೋರಿಸುವೆನು; ಇಷ್ಟರಮೇಲೆ ಸೋಲುಗೆಲುವುಗಳು ಪುಣ್ಯವಶವು ಎಂದನು ].
  • (ಪದ್ಯ- ೫)

ಪದ್ಯ :-:೬:[ಸಂಪಾದಿಸಿ]

ಅನಿತರೊಳ್ ಕುವಲೆಯೆಂಬುವಳೋರ್ವಳಾ ಸುಧ | ನ್ವನ ಸಹೋದರಿ ತಂದಳಾರತಿಯನನುಜ ಕೇ | ಳನುವರದೊಳಿಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ಮಾನವ ||
ಮನೆಯೊಳಾಂ ತಲೆಯೆತ್ತಿ ನಡೆವೆನೆಂತದರಿಂದೆ | ವನಜಾಕ್ಷನಂ ಮೆಚ್ಚಿಸಾಹವದೊಳೆಂದು ಚಂ | ದನದ ನುಣ್ಪಿಟ್ಟು ಕರ್ಪ್ಪುರವೀಳೆಯಂಗೊಟ್ಟು ಕಳುಹಿದಳ್ ಸೇಸೆದಳೆದು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅನಿತರೊಳ್ ಕುವಲೆಯೆಂಬುವಳು ಓರ್ವಳು ಆ ಸುಧನ್ವನ ಸಹೋದರಿ ತಂದಳು ಆರತಿಯನು=[ಅಷ್ಟರಲ್ಲಿ ಕುವಲೆಯೆಂಬುವವಳು ಒಬ್ಬಳು ಆ ಸುಧನ್ವನ ಸಹೋದರಿ ಆರತಿಯನ್ನು ತಂದಳು ]; ಅನುಜ ಕೇಳು ಅನುವರದೊಳು ಇಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದರೆ, ಮಾನವ (ಗಂಡನ)ಮನೆಯೊಳು ಆಂ ತಲೆಯೆತ್ತಿ ನಡೆವೆನೆಂತು=[ಅಣ್ನನೇ ಕೇಳು ಯುದ್ಧದಲ್ಲಿ ಇಂದು ಕೃಷ್ಣನಿಗೆ ಸೋತು ನೀನು ಬಂದೆಯಾದರೆ, ಮಾನವ (ಗಂಡನ)ಮನೆಯಲ್ಲಿ ನಾನು ತಲೆಯೆತ್ತಿ ನಡೆಯುವುದು ಹೇಗೆ?]; ಅದರಿಂದೆ ವನಜಾಕ್ಷನಂ ಮೆಚ್ಚಿಸು ಆಹವದೊಳೆಂದು ಚಂದನದ ನುಣ್ಪಿಟ್ಟು ಕರ್ಪ್ಪುರವೀಳೆಯಂ ಕೊಟ್ಟು ಕಳುಹಿದಳ್ ಸೇಸೆ ತಳೆದು=[ಅದ್ದರಿಂದ ಕೃಷ್ಣನನ್ನು ಮೆಚ್ಚಿಸು, ಯುದ್ಧದಲ್ಲಿ ಎಂದು ಚಂದನದ ಹಣೆಗೆ ಬೊಟ್ಟನ್ನು ಇಟ್ಟು, ಕರ್ಪ್ಪುರವೀಳೆಯಗಳನ್ನು ಕೊಟ್ಟು ಸೇಸೆ ತಳೆದು ಕಳುಹಿಸಿದಳು].
  • ತಾತ್ಪರ್ಯ:ಅಷ್ಟರಲ್ಲಿ ಕುವಲೆಯೆಂಬುವವಳು ಒಬ್ಬಳು ಆ ಸುಧನ್ವನ ಸಹೋದರಿ ಆರತಿಯನ್ನು ತಂದಳು; ಅಣ್ನನೇ ಕೇಳು ಯುದ್ಧದಲ್ಲಿ ಇಂದು ಕೃಷ್ಣನಿಗೆ ಸೋತು ನೀನು ಬಂದೆಯಾದರೆ, ಮಾನವ (ಗಂಡನ)ಮನೆಯಲ್ಲಿ ನಾನು ತಲೆಯೆತ್ತಿ ನಡೆಯುವುದು ಹೇಗೆ?]; ಅದ್ದರಿಂದ ಕೃಷ್ಣನನ್ನು ಮೆಚ್ಚಿಸು, ಯುದ್ಧದಲ್ಲಿ ಎಂದು ಚಂದನದ ಬೊಟ್ಟನ್ನು ಹಣೆಗೆಇಟ್ಟು, ಕರ್ಪ್ಪುರವೀಳೆಯಗಳನ್ನು ಕೊಟ್ಟು ಸೇಸೆ ತಳೆದು ಕಳುಹಿಸಿದಳು.
  • (ಪದ್ಯ- ೬)

ಪದ್ಯ :-:೭:[ಸಂಪಾದಿಸಿ]

ಅರಸ ಕೇಳಾ ಸುಧನ್ವಂ ಬಳಿಕ ಜನನಿಸೋ | ದಿರಯರಂ ಬೀಳ್ಕೊಂಡು ಪೊರಮಟ್ಟು ತನ್ನ ಮಂ | ದಿರದ ಪÉÇರೆಗೈತರಲ್ಕಿದಿರಾಗಿ ಪೊಂದಟ್ಟೆಯೊಳ್ ಸಂಪಗೆಯ ಪೂವನು ||
ಸರಸ ಪರಿಮಳಗಂಧ ಕರ್ಪೂರವೀಟಿಕೆಯ | ನಿರಿಸಿಕೊಂಡೊಲವಿಂದೆ ಬಂದಳಂಗಜನ ಜಯ | ಸಿರಿ ತಾನೆನಲ್ ಪ್ರಭಾವತಿಯೆನಿಪವನರಾಣಿ ಸಂಶ್ರೇಣಿ ಸರ್ಪವೇಣಿ ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸ ಕೇಳು ಆ ಸುಧನ್ವಂ ಬಳಿಕ ಜನನಿಸೋದಿರಯರಂ ಬೀಳ್ಕೊಂಡು ಪೊರಮಟ್ಟು=[ಅರಸ ಕೇಳು ಆ ಸುಧನ್ವನು ಬಳಿಕ ತಾಯಿ ತಂಗಿಯರನ್ನು ಬೀಳ್ಕೊಂಡು ಹೊರಹೊರಟು]; ತನ್ನ ಮಂದಿರದ ಪೊರೆಗೆ ಐತರಲ್ಕೆ ಇದಿರಾಗಿ ಪೊಂದಟ್ಟೆಯೊಳ್ ಸಂಪಗೆಯ ಪೂವನು=[ತನ್ನ ಮನೆಯ ಕಡೆಗೆ ಬರಲು, ಅವನಿಗೆ ಇದಿರಾಗಿ ಹೊನ್ನಿನ ತಟ್ಟೆಯಲ್ಲಿ ಸಂಪಗೆಯ ಹೂವನ್ನು]; ಸರಸ ಪರಿಮಳ ಗಂಧ ಕರ್ಪೂರ ವೀಟಿಕೆಯ ನಿರಿಸಿಕೊಂಡು ಒಲವಿಂದೆ ಬಂದಳು=[ಸೊಗಸಾದ ಪರಿಮಳ ಗಂಧ ಕರ್ಪೂರ ವೀಳೆಯಗಳನ್ನು ನಿರಿಸಿಕೊಂಡು ಒಲವಿನಿಂದ ಬಂದಳು]; ಅಂಗಜನ ಜಯಸಿರಿ ತಾನೆನಲ್ ಪ್ರಭಾವತಿಯೆನಿಪ ಅವನರಾಣಿ ಸಂಶ್ರೇಣಿ ಸರ್ಪವೇಣಿ=[ಮನ್ಮಥನ ಜಯಲಕ್ಷ್ಮ ತಾನು ಎನ್ನುವಂತೆ ಪ್ರಭಾವತಿಯೆಂಬ ಅವನ ಪತ್ನಿ ಸುಂದರದೇಹದ ಸರ್ಪದಂತೆ ಉದ್ದ ಜಡೆಯವಳು ಬಂದಳು.];
  • ತಾತ್ಪರ್ಯ:ತನ್ನ ಮನೆಯ ಕಡೆಗೆ ಬರಲು, ಅವನಿಗೆ ಇದಿರಾಗಿ ಹೊನ್ನಿನ ತಟ್ಟೆಯಲ್ಲಿ ಸಂಪಗೆಯ ಹೂವನ್ನು, ಸೊಗಸಾದ ಪರಿಮಳ ಗಂಧ ಕರ್ಪೂರ ವೀಳೆಯಗಳನ್ನು ನಿರಿಸಿಕೊಂಡು ಒಲವಿನಿಂದ ಬಂದಳು; ಮನ್ಮಥನ ಜಯಲಕ್ಷ್ಮಿ ತಾನು ಎನ್ನುವಂತೆ ಪ್ರಭಾವತಿಯೆಂಬ ಅವನ ಪತ್ನಿ ಸುಂದರದೇಹದ ಸರ್ಪದಂತೆ ಉದ್ದ ಜಡೆಯವಳು ಬಂದಳು.];
  • (ಪದ್ಯ- ೭)

ಪದ್ಯ :-:೮:[ಸಂಪಾದಿಸಿ]

ಚಂದ್ರಮಂಡಲ ಸದೃಶ ವದನದೆಳನಗೆಯ ನವ | ಚಂದ್ರಿಕೆಯೆನಲ್ ಮೇಲುದಿನ ದುಕೂಲಂ ಮೆರೆಯೆ | ಚಂದ್ರತಿಲಕದ ರಾಗಮುಂ ಚಿತ್ತದನುರಾಗಮಂ ಸೂಚಿಪಂತೆ ಸೊಗಸೆ ||
ಇಂದ್ರನೀಲದ ಮಣಿಯ ಮಿರುಗುವ ಲಲಿತಕಾಂತಿ | ಸಾಂದ್ರಮಾದ ಪೊಲೆಸೆವಳಕಪಾಶದಿಂದೆ ನಯ | ನೇಂದ್ರಿಯವನುರೆ ಕಟ್ಟಿ ಕೆಡಪದಿರಳೆಂಬಿನಂ ರಂಜಿಸಿದಳಾ ಮೃಗಾಕ್ಷಿ ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಚಂದ್ರಮಂಡಲ ಸದೃಶ ವದನದ ಎಳನಗೆಯ ನವಚಂದ್ರಿಕೆಯೆನಲ್ ಮೇಲುದಿನ ದುಕೂಲಂ ಮೆರೆಯೆ=[ಚಂದ್ರಮಂಡಲದಂತಿರುವ ಮುಖದ ಎಳನಗೆಯ ಹೊಸ ಬೆಳದಿಂಗಳಂತೆ ಮೇಲುಸೆರಗಿನ ವಸ್ತ್ರವು ಶೋಭಿಸುತ್ತಿರಲು]; ಚಂದ್ರತಿಲಕದ ರಾಗಮುಂ ಚಿತ್ತದ ಅನುರಾಗಮಂ ಸೂಚಿಪಂತೆ ಸೊಗಸೆ=[ಹಣೆಯಮೇಲೆ ಚಂದ್ರತಿಲಕದ ಕೆಂಪುಬಣ್ಣವು ಮನಸ್ಸಿನ ಪ್ರೇಮವನ್ನು ಸೂಚಿಸುವಂತೆ ಚಂದಕಾಣಲು]; ಇಂದ್ರನೀಲದ ಮಣಿಯ ಮಿರುಗುವ ಲಲಿತಕಾಂತಿ ಸಾಂದ್ರಮಾದಪೊಲ್ ಎಸೆವ ಅಳಕಪಾಶದಿಂದೆ=[ಇಂದ್ರನೀಲದ ಮಣಿಯ ಮಿರುಗುವ ಕೋಮಲಬಣ್ಣವು ಒಟ್ಟುಸೇರಿದಂತೆ ಶೋಭಿಸುವ ಮುಂಗುರುಳಿನ ಪಾಶದಿಂದ]; ನಯನೇಂದ್ರಿಯವನು ಉರೆ ಕಟ್ಟಿ ಕೆಡಪದಿರಳು ಎಂಬಿನಂ ರಂಜಿಸಿದಳಾ ಮೃಗಾಕ್ಷಿ=[ನೋಡುವವರ ಕಣ್ಣಿನ ನೋಟವನ್ನು ಪೂರ್ಣ ಕಟ್ಟಿ ಕೆಡವದಿರಳು ಎಂಬಂತೆ ಮೃಗಾಕ್ಷಿಯಾದ ಪ್ರಭಾವತಿಯು ಶೋಭಿಸಿದಳು.].
  • ತಾತ್ಪರ್ಯ:ಚಂದ್ರಮಂಡಲದಂತಿರುವ ಮುಖದ ಎಳನಗೆಯ ಹೊಸ ಬೆಳದಿಂಗಳಂತೆ ಮೇಲುಸೆರಗಿನ ವಸ್ತ್ರವು ಶೋಭಿಸುತ್ತಿರಲು, ಹಣೆಯಮೇಲೆ ಚಂದ್ರತಿಲಕದ ಕೆಂಪುಬಣ್ಣವು ಮನಸ್ಸಿನ ಪ್ರೇಮವನ್ನು ಸೂಚಿಸುವಂತೆ ಚಂದಕಾಣಲು, ಇಂದ್ರನೀಲದ ಮಣಿಯ ಮಿರುಗುವ ಕೋಮಲಬಣ್ಣವು ಒಟ್ಟುಸೇರಿದಂತೆ ಶೋಭಿಸುವ ಮುಂಗುರುಳಿನ ಪಾಶದಿಂದ, ನೋಡುವವರ ಕಣ್ಣಿನ ನೋಟವನ್ನು ಪೂರ್ಣ ಕಟ್ಟಿ ಕೆಡವದಿರಳು ಎಂಬಂತೆ ಮೃಗಾಕ್ಷಿಯಾದ ಪ್ರಭಾವತಿಯು ಶೋಭಿಸಿದಳು.]
  • (ಪದ್ಯ- ೮)

ಪದ್ಯ :-:೯:[ಸಂಪಾದಿಸಿ]

ಸ್ಫುರಿಸುವೊಳ್ದೊಡೆಯ ಬೆಡಗಿನ ನಡೆಯ ನಿರಿಯ ಸಿಂ | ಗರದುಡಿಯ ತೆಳ್ವಾದಸಿಯ ಪೊಡೆಯ ಚೆಲ್ವುದಳೆ | ದುರದೆಡೆಯ ನಿಂಬುಗೊಂಡಿಟ್ಟೆಡೆಯ ಬಲ್ಮೊಲೆಯ ಪೊಳೆವ ಕಣ್ಮಲರ ಕಡೆಯ ||
ತ್ವರಿಪ ಭುಜವಲ್ಲರಿಯ ತೊಡವುಗಳ ಮೈಸಿರಿಯ | ಬಿರಿಮುಗಳ ಕಬರಿಯ ಕಲೆಗಳಿಡಿವ ಸೌಂದರಿಯ | ದರಸಿ ನಿಜಪತಿಯ ಮುಂದಚ್ಚರಿಯ ಬಗೆಗೊಂಡಳಂದು ಬೇರೊಂದು ಪರಿಯ ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸ್ಫುರಿಸುವ ಒಳ್ದೊಡೆಯ ಬೆಡಗಿನ ನಡೆಯ ನಿರಿಯ ಸಿಂಗರದ ಉಡಿಯ=[ಎದ್ದುಕಾಣುವ ಒಳತೊಡೆಯ ಬೆಡಗಿನ ನಡೆಯಲ್ಲಿಕಾಣುವ ಸೀರೆಯ ನೆರಿಗೆಯ ಶ್ಋಂಗಾರದ ಉಡಿಗೆಯ]; ತೆಳ್ವಾದ ಅಸಿಯ ಪೊಡೆಯ(ಹೊಟ್ಟೆಯ) ಚೆಲ್ವುದಳೆದ ಉರದ ಎಡೆಯನು ಇಂಬುಗೊಂಡ ಇಟ್ಟೆಡೆಯ ಬಲ್ಮೊಲೆಯ ಪೊಳೆವ ಕಣ್ಮಲರ ಕಡೆಯ=[ತೆಳ್ಳಗಿರುವ ಸಣ್ಣಕತ್ತಿಯಂತಿರುವ ಸೊಂಟದ(ಹೊಟ್ಟೆಯ) ಚೆಲುವುತುಂಬಿದ ಎದೆಯಭಾಗದಲ್ಲಿ ತುಂಬಿದ ಒತ್ತಾಗಿರುವ ದಪ್ಪಸ್ತನಗಳ ಹೊಳೆಯುವ ಹೂವಿನಂತೆಸುಂದರವಾದ ಕಣ್ನಿನ ಕುಡಿನೋಟದ ಕಣ್ಮಲರ]; [ತ್ವರಿಪ ಭುಜವಲ್ಲರಿಯ ತೊಡವುಗಳ ಮೈಸಿರಿಯ ಬಿರಿಮುಗಳ ಕಬರಿಯ ಕಲೆಗಳಿಡಿವ=[ಚುರುಕಾದ ಭುಜ ಬಳ್ಳಿಯಂಯಿರುವ, ಉಡುಪುಗಳನ್ನು ತೊಟ್ಟಿರುವ ಮೈಸೊಬಗಿನಿಂದ, ಅರಳಿದ ಹೋವಿನ ತುರುಬುನಿಂದ, ಅಲಂಕಾರದಿಂದ ಕೂಡಿದ]; ಸೌಂದರಿಯದರಸಿ ನಿಜಪತಿಯ ಮುಂದಚ್ಚರಿಯ ಬಗೆಗೊಂಡಳಂದು ಬೇರೊಂದು ಪರಿಯ=[ಸೌಂದರ್ಯದ ರಾಣಿ ತನ್ನಪತಿಯ ಮುಂದೆ ಅಚ್ಚರಿಯಾಗುವ ರೀತಿಯಲ್ಲಿ ಹಸರೀತಿಯಲ್ಲಿ ಕಾಣಿಸಿಕೊಂಡಳು].
  • ತಾತ್ಪರ್ಯ:ಎದ್ದುಕಾಣುವ ಒಳತೊಡೆಯ, ಬೆಡಗಿನ ನಡೆಯಲ್ಲಿ ಕಾಣುವ ಸೀರೆಯ ನೆರಿಗೆಯ ಶೃಂಗಾರದ ಉಡಿಗೆಯ, ತೆಳ್ಳಗಿರುವ ಸಣ್ಣಕತ್ತಿಯಂತಿರುವ ಸೊಂಟದ ಚೆಲುವು ತುಂಬಿದ ಎದೆಯಭಾಗದಲ್ಲಿ ತುಂಬಿದ ಒತ್ತಾಗಿರುವ ದಪ್ಪಸ್ತನಗಳ ಹೊಳೆಯುವ ಹೂವಿನಂತೆ ಸುಂದರವಾದ ಕಣ್ನಿನ ಕುಡಿನೋಟದ (ಕಣ್ಮಲ)ರ, ಚುರುಕಾದ ಭುಜ ಬಳ್ಳಿಯಂಯಿರುವ ತೋಳುಗಳ, ಉಡುಪುಗಳನ್ನು ತೊಟ್ಟಿರುವ ಮೈಸೊಬಗಿನಿಂದ, ಅರಳಿದ ಹೂವಿನ ತುರುಬುನ ಅಲಂಕಾರದಿಂದ ಕೂಡಿದ, ಸೌಂದರ್ಯದ ರಾಣಿ ಪ್ರಭಾವತಿ ತನ್ನ ಪತಿ ಸುಧನ್ವನ ಮುಂದೆ ಅಚ್ಚರಿಯಾಗುವ ಹೊಸ ರೀತಿಯಲ್ಲಿ ಕಾಣಿಸಿಕೊಂಡಳು.
  • (ಪದ್ಯ- ೮)

ಪದ್ಯ :-:೧೦:[ಸಂಪಾದಿಸಿ]

ಮುಡಿಯ ಪೊಸಮಲ್ಲಿಗೆಯ ಸೂಸುವೆಳನಗೆಯ ಸವಿ | ನುಡಿಯ ಬಾಯ್ದೆರೆದು ಹೊಳೆಹೊಳೆವ ದಶನದ ಮಿಸುಪ | ಕಡಿಗಣ್ಣ ತೊಳಗುವ ನಖಾವಳಿಯ ಥಳಥಳಿಪ ಕಂಠಮಾಲೆಯ ಮುತ್ತಿನ ||
ತೊಡವುಗಳ ಘನಸಾರದನುಲೇಪನದ ಸಣ್ಣ | ಮಡಿದುಕೂಲದ ಬೆಳ್ವೊಗರ್ ಕೋಮಲಾಂಗದೊಳ್ | ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿಪೊಲವಳೆಸೆದಳು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮುಡಿಯ ಪೊಸಮಲ್ಲಿಗೆಯ ಸೂಸುವ ಎಳನಗೆಯ ಸವಿನುಡಿಯ ಬಾಯ್ದೆರೆದು ಹೊಳೆಹೊಳೆವ ದಶನದ ಮಿಸುಪ ಕಡಿಗಣ್ಣ=[ ಹೊಸಮಲ್ಲಿಗೆಯನ್ನು ಮುಡಿದಿದ್ದಾಳೆ; ಎಳನಗೆಯನ್ನು ಬೀರುತ್ತಿದ್ದಾಳೆ; ಬಾಯಿ ತರೆದರೆ ಸವಿನುಡಿ; ಹೊಳೆಹೊಳೆಯುತ್ತಿರುವ ಹಲ್ಲುಗಳು; [ತೊಳಗುವ ನಖಾವಳಿಯ ಥಳಥಳಿಪ ಕಂಠಮಾಲೆಯ ಮುತ್ತಿನ ತೊಡವುಗಳ, ಘನಸಾರದನುಲೇಪನದ]ಹೊಳೆಯುವ ಕಡೆಗಣ್ಣ ನೋಟ]; ಪ್ರಕಾಶಿಸುವ ಉಗುರುಗಳು; ಥಳಥಳಿಪ ಕಂಠಮಾಲೆಯನ್ನೂ ಮತ್ತು ಮುತ್ತಿನ ಆಭರಣಗಳನ್ನು ತೊಟ್ಟಿದ್ದಾಳೆ; ಕರ್ಪೂರದ ಲೇಪನವನ್ನು ಚೆನ್ನಾಗಿ ಮಾಡಿಕೊಂಡಿದ್ದಾಳೆ,; ಸಣ್ಣ ತೊಳೆದ ಬಟ್ಟೆಯನ್ನುಹಾಕಿದ್ದಾಳೆ; ಸಣ್ಣ ಮಡಿದುಕೂಲದ ಬೆಳ್ವೊಗರ್ ಕೋಮಲಾಂಗದೊಳ್ ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿಪೊಲವಳೆಸೆದಳು=[ಕೋಮಲವಾದ ಶರೀರದಲ್ಲಿ ಬಿಳಿಯಛಾಯೆಯ ಕಾಂತಿಯು ಎಲ್ಲಾಕಡೆ ಹರಡುತ್ತಿರಲು, ಚಂದ್ರಕಾಂತದ ಶಿಲೆಯಿಂದ ನಿರ್ಮಿಸಿದ ಪುತ್ತಳಿ / ಗೊಂಬೆಯಂತೆ ಶೋಭಿಸುತ್ತಿದ್ದಳು.]
  • ತಾತ್ಪರ್ಯ: ಹೊಸಮಲ್ಲಿಗೆಯನ್ನು ಮುಡಿದಿದ್ದಾಳೆ; ಎಳನಗೆಯನ್ನು ಬೀರುತ್ತಿದ್ದಾಳೆ; ಬಾಯಿ ತರೆದರೆ ಸವಿನುಡಿ; ಹೊಳೆಹೊಳೆಯುತ್ತಿರುವ ಹಲ್ಲುಗಳು; ಹೊಳೆಯುವ ಕಡೆಗಣ್ಣ ನೋಟ; ಪ್ರಕಾಶಿಸುವ ಉಗುರುಗಳು; ಥಳಥಳಿಪ ಕಂಠಮಾಲೆಯನ್ನೂ ಮತ್ತು ಮುತ್ತಿನ ಆಭರಣಗಳನ್ನು ತೊಟ್ಟಿದ್ದಾಳೆ; ಕರ್ಪೂರದ ಲೇಪನವನ್ನು ಚೆನ್ನಾಗಿ ಮಾಡಿಕೊಂಡಿದ್ದಾಳೆ,; ಸಣ್ಣ ತೊಳೆದ ಬಟ್ಟೆಯನ್ನುಹಾಕಿದ್ದಾಳೆ; ಕೋಮಲವಾದ ಶರೀರದಲ್ಲಿ ಬಿಳಿಯಛಾಯೆಯ ಕಾಂತಿಯು ಎಲ್ಲಾಕಡೆ ಹರಡುತ್ತಿರಲು,ಪ್ರಭಾವತಿಯು ಚಂದ್ರಕಾಂತದ ಶಿಲೆಯಿಂದ ನಿರ್ಮಿಸಿದ ಪುತ್ತಳಿ / ಗೊಂಬೆಯಂತೆ ಶೋಭಿಸುತ್ತಿದ್ದಳು.
  • (ಪದ್ಯ- ೧೦)XXVI

ಪದ್ಯ :-:೧೧:[ಸಂಪಾದಿಸಿ]

ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ | ಪೆರಪಿರ್ದ ಸಂಪಗೆಯ ಪೂಗಳಂ ತನ್ನ ಮೆ | ಯ್ಯೊರಗೆ ಸರಿಯಾದಪುವೆ ನೋಡೆಂದು ತೋರ್ಪಂತೆ ಕೊಂಡುಬಂದಿದಿರೆ ನಿಂದ ||
ತರಳೆಯಂ ಕಡೆಗಣ್ಣೊಳೊಯ್ಯನೀಕ್ಷಿಸಿ ನಗುತೆ | ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು | ಭರದಿಂದ ಎಕೊಳಗುಳಕೆ ಪೊರಮಡುವ ಗಮನದಿಂ ಕಾಂತೆಗವನಿಂತೆಂದನು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕರಯುಗದೊಳು ಆಂತ ಪೊಂದಟ್ಟೆಯನು ಅದರ ಮೇಲೆ ಪೆರಪಿರ್ದ ಸಂಪಗೆಯ ಪೂಗಳಂ ತನ್ನ ಮೆಯ್ಯೊರಗೆ ಸರಿಯಾದಪುವೆ ನೋಡೆಂದು ತೋರ್ಪಂತೆ=[ಎರಡೂ ಕೈಯಲ್ಲಿ ಹಿಡಿದ ಹೊನ್ನಿನ ತಟ್ಟೆಯನ್ನು, ಅದರ ಮೇಲೆ ಹರಡಿದ ಸಂಪಗೆಯ ಹೂವುಗಳನ್ನು, ತನ್ನ ದೇಹದಬಣ್ನಕ್ಕೆ ಸರಿಯಾಗಿ ಹೊಂದುವುದೆ ನೋಡೆಂದು ತೋರುವಂತೆ]; ಕೊಂಡುಬಂದು ಇದಿರೆ ನಿಂದ ತರಳೆಯಂ ಕಡೆಗಣ್ಣೊಳೊಯ್ಯನೆ ಈಕ್ಷಿಸಿ ನಗುತೆ ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು=[ಸಂಪಗೆಯನ್ನು ತೆಗೆದುಕೊಂಡು ಬಂದು ಇದಿರು ನಿಂತ ತನ್ನ ಹೆಂಡತಿಯನ್ನು ಕಡೆಗಣ್ಣಲ್ಲಿ ನೋಡಿ, ನಗುತ್ತಾ ಸೊಗಸಾದ ಪರಿಮಳದ ಹೊಸಹೂವುಗಳನ್ನು ತೆಗೆದುಕೊಂಡು]; ಭರದಿಂದ ಕೊಳಗುಳಕೆ ಪೊರಮಡುವ ಗಮನದಿಂ ಕಾಂತೆಗೆ ಅವನು ಇಂತು ಎಂದನು=[ಅವಸರದಿಂದ ಯುದ್ಧಕ್ಕೆ ಹೊರಡುವ ಮನಸ್ಸಿನಿಂದ ಪತ್ನಿಗೆ ಅವನು ಹೀಗೆ ಹೇಳಿದನು.]
  • ತಾತ್ಪರ್ಯ:ಎರಡೂ ಕೈಯಲ್ಲಿ ಹಿಡಿದ ಹೊನ್ನಿನ ತಟ್ಟೆಯನ್ನು, ಅದರ ಮೇಲೆ ಹರಡಿದ ಸಂಪಗೆಯ ಹೂವುಗಳನ್ನು, ತನ್ನ ದೇಹದಬಣ್ನಕ್ಕೆ ಸರಿಯಾಗಿ ಹೊಂದುವುದೆ ನೋಡೆಂದು ತೋರುವಂತೆ, ಸಂಪಗೆಯನ್ನು ತೆಗೆದುಕೊಂಡು ಬಂದು ಇದಿರು ನಿಂತ ತನ್ನ ಹೆಂಡತಿಯನ್ನು ಕಡೆಗಣ್ಣಲ್ಲಿ ನೋಡಿ, ನಗುತ್ತಾ ಸೊಗಸಾದ ಪರಿಮಳದ ಹೊಸಹೂವುಗಳನ್ನು ತೆಗೆದುಕೊಂಡು, ಅವಸರದಿಂದ ಯುದ್ಧಕ್ಕೆ ಹೊರಡುವ ಮನಸ್ಸಿನಿಂದ ಪತ್ನಿಗೆ ಅವನು ಹೀಗೆ ಹೇಳಿದನು.
  • (ಪದ್ಯ- ೧೧)

ಪದ್ಯ :-:೧೨:[ಸಂಪಾದಿಸಿ]

ಕಾಂತೆ ಕೇಳಿಂದು ಸಮರದೊಳರ್ಜುನಂಗೆ ಮಾ | ರಾಂತವನ ಬಿಂಕಮಂ ಮುರಿವೆನಾ ಹರೆಬಕಸು | ರಾಂತಕಂ ಬಂದೊಡಾತನ ಮುಂದೆ ತೋರಿಸುವೆನೆನ್ನ ಭುಜವಿಕ್ರಮನು ||
ನಾಂ ತಳೆವನಾರ್ಪಿಂದೆ ವಿಜಯಮಂ ಮೀರ್ದೊಡೆ ಭ | ವಾಂತರವನೈದಿ ಸನ್ಮುಕ್ತಿಯಂ ಪಡೆದಪೆಂ | ನೀಂ ತಳಮಳಿಸದಿರೆಂದಿನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಂತೆ ಕೇಳಿಂದು ಸಮರದೊಳು ಅರ್ಜುನಂಗೆ ಮಾರಾಂತು ಅವನ ಬಿಂಕಮಂ ಮುರಿವೆನು=[ಕಾಂತೆಯೇ ಕೇಳು ಇಂದು ಯುದ್ಧದಲ್ಲಿ ಅರ್ಜುನನಿಗೆ ಎದುರುನಿಂತು ಅವನ ಅಹಂಕಾರವನ್ನು ಮುರಿಯುವೆನು]; ಆ ಹರಿಬಕೆ ಅಸುರಾಂತಕಂ ಬಂದೊಡೆ ಆತನ ಮುಂದೆ ತೋರಿಸುವೆನು ಎನ್ನ ಭುಜವಿಕ್ರಮನು =[ಅವನ ಕಷ್ಟ ನಿವಾರಣೆಗೆಕೃಷ್ಣನು ಬಂದರೆ ಆತನ ಮುಂದೆ ನನ್ನ ಪರಾಕ್ರಮನ್ನು ತೋರಿಸುವೆನು.];ನಾಂ ತಳೆವನು ಆರ್ಪಿಂದೆ ವಿಜಯಮಂ ಮೀರ್ದೊಡೆ ಭವಾಂತರವನು ಐದಿ ಸನ್ಮುಕ್ತಿಯಂ ಪಡೆದಪೆಂ=[ನಾನು ಸಾಮರ್ಥ್ಯದಿಂದ ವಿಜಯವನ್ನು ಗಳಿಸುವೆನು; ಆಗದಿದ್ದರೆ ಸಂಸಾರದಂದ ದೂರವಾದ ಸ್ವರ್ಗವನ್ನು ಹೊಂದಿ ಸನ್ಮುಕ್ತಿಯಂ ಪಡೆಯುವೆನು]; ನೀಂ ತಳಮಳಿಸದಿರು ಎಂದು ಇನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳು=[ ನೀನು ಅತಿಯಾಗಿ ದುಃಖಿಸಬೇಡ ಎಂದು ಪತ್ನಿಯನ್ನು ಸಂತೈಸಿ ಹೊರಡಲು ತಡೆದು ಹೀಗೆ ಹೇಳಿದಳು.]
  • ತಾತ್ಪರ್ಯ:ಸುಧನ್ವ ಹೇಳಿದ, 'ಕಾಂತೆಯೇ ಕೇಳು ಇಂದು ಯುದ್ಧದಲ್ಲಿ ಅರ್ಜುನನಿಗೆ ಎದುರುನಿಂತು ಅವನ ಅಹಂಕಾರವನ್ನು ಮುರಿಯುವೆನು. ಅವನ ಕಷ್ಟ ನಿವಾರಣೆಗೆ ಕೃಷ್ಣನು ಬಂದರೆ ಆತನ ಮುಂದೆ ನನ್ನ ಪರಾಕ್ರಮನ್ನು ತೋರಿಸುವೆನು. ನಾನು ಸಾಮರ್ಥ್ಯದಿಂದ ವಿಜಯವನ್ನು ಗಳಿಸುವೆನು; ಆಗದಿದ್ದರೆ ಸಂಸಾರದಂದ ದೂರವಾದ ಸ್ವರ್ಗವನ್ನು ಹೊಂದಿ ಸನ್ಮುಕ್ತಿಯಂ ಪಡೆಯುವೆನು. ನೀನು ಅತಿಯಾಗಿ ದುಃಖಿಸಬೇಡ ಎಂದು ಪತ್ನಿಯನ್ನು ಸಂತೈಸಿ ಹೊರಡಲು ತಡೆದು ಹೀಗೆ ಹೇಳಿದಳು.
  • (ಪದ್ಯ- ೧೨)

ಪದ್ಯ :-:೧೩:[ಸಂಪಾದಿಸಿ]

ಯುಕ್ತಮಲ್ಲಿದು ರಮಣ ನಿನಗೆ ಕೇಳ್ ಕಾದುವಾ | ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ | ಮುಕ್ತಿಯಿಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು ||
ವ್ಯಕ್ತದಿಂ ತನಗೊಂದಪತ್ಯಮುದಯಿಸದೊಡೆ ವಿ | ರಕ್ತಿಯಿಂ ಕೈವಲ್ಯಮಾದಪುದು ಸಮರಕು | ದ್ಯುಕ್ತನಪ್ಪಾತಂಗೆ ಸಂತಾನಮಿಲ್ಲದಿರಲಪ್ಪುದೇ ಹೇಳೆಂದಳು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಯುಕ್ತಮ್ ಅಲ್ಲಿದು ರಮಣ ನಿನಗೆ ಕೇಳ್ ಕಾದುವ ಆಸಕ್ತಿಯಿಂ ಚಕ್ರಿಗೆ ಅಭಿಮುಖನಾದ ಬಳಿಕ=[ಇದು ಸರಿ ಅಲ್ಲ; ಕೇಳು ರಮಣ ನಿನಗೆ ಯುದ್ದದಲ್ಲಿ ಆಸಕ್ತಿಯಿಂದ ಕೃಷ್ಣನಿಗೆ ಅಭಿಮುಖನಾದ ಬಳಿಕ]; ಅಲ್ಲಿ ಮುಕ್ತಿಯಿಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕ ಸಂತತಿ ನಿನ್ನೊಳು ವ್ಯಕ್ತದಿಂ=[ಅಲ್ಲಿ ಮುಕ್ತಿಯಲ್ಲದೆ ಬೇರೆ ಜಯ ಇರದು;ನಿನ್ನಿಂದ ಉತ್ತಮ ಸಂತತಿ ಜನಿಸದು.];ವ್ಯಕ್ತದಿಂ ತನಗೆ ಒಂದು ಅಪತ್ಯಂ(ಮಗ/ಮಗಳು/ಮಕ್ಕಳು) ಉದಯಿಸದೊಡೆ ವಿರಕ್ತಿಯಿಂ ಕೈವಲ್ಯಮಾದಪುದು ಸಮರಕೆ ಉದ್ಯುಕ್ತನಪ್ಪ ಆತಂಗೆ ಸಂತಾನಂ ಇಲ್ಲದಿರಲು ಅಪ್ಪುದೇ ಹೇಳೆಂದಳು=[ಶಾಸ್ತ್ರ ಹೇಳಿದಂತೆ ತನಗೆ ಮಕ್ಕಳು ಆಗದಿದ್ದರೆ ಕೇವಲ ವಿರಕ್ತಿಯಿಂದ ಕೈವಲ್ಯವಾಗುವುದೇ? ಯುದ್ಧಕ್ಕೆ ಉದ್ಯುಕ್ತನಾದ ಪುರುಷನಿಗೆ ಸಂತಾನವು ಇಲ್ಲದಿದ್ದರೆ ಮೋಕ್ಷವಾಗುವುದೇ ಹೇಳು ಎಂದಳು]..
  • ತಾತ್ಪರ್ಯ:ಪ್ರಭಾವತಿ ಹೇಳುವಳು,'ಇದು ಸರಿ ಅಲ್ಲ; ಕೇಳು ರಮಣ ನಿನಗೆ ಯುದ್ದದಲ್ಲಿ ಆಸಕ್ತಿಯಿಂದ ಕೃಷ್ಣನಿಗೆ ಅಭಿಮುಖನಾದ ಬಳಿಕ ಅಲ್ಲಿ ಮುಕ್ತಿಯಲ್ಲದೆ ಬೇರೆ ಜಯ ಇರದು; ನಿನ್ನಿಂದ ಉತ್ತಮ ಸಂತತಿ ಜನಿಸದು. ಶಾಸ್ತ್ರ ಹೇಳಿದಂತೆ ತನಗೆ ಮಕ್ಕಳು ಆಗದಿದ್ದರೆ ಕೇವಲ ವಿರಕ್ತಿಯಿಂದ ಕೈವಲ್ಯವಾಗುವುದೇ? ಯುದ್ಧಕ್ಕೆ ಉದ್ಯುಕ್ತನಾದ ಪುರುಷನಿಗೆ ಸಂತಾನವು ಇಲ್ಲದಿದ್ದರೆ ಮೋಕ್ಷವಾಗುವುದೇ ಹೇಳು ಎಂದಳು.
  • (ಪದ್ಯ- ೧೩)

ಪದ್ಯ :-:೧೪:[ಸಂಪಾದಿಸಿ]

ಅದರಿಂದಮಾತ್ಮಜವಿವೇಕಮಿಲ್ಲದೊಡೆ ನನ | ಗಿದುವೆ ಜಲದೋದಯದ ಋತುಸಮಯಮೀ ಪದದೊ | ಳುದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತೊದೊಡೆ ಬೆಳೆ ಬಾಳ್ಕೆಗೆ |
ಕದನಕೈದುವವೇಳೆಯಲ್ಲೆನಲವಂ ಮುಂದೆ | ಬೆದೆಗಾಲಮುಂಟೆಂದೊಡವಳೆಣೆಸಿ ಮಳೆಗಳಂ | ತುದಿವಿಶಾಖೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅದರಿಂದಂ ಆತ್ಮಜವಿವೇಕಂ ಇಲ್ಲದೊಡೆ ನನಗಿದುವೆ ಜಲದೋದಯದ ಋತುಸಮಯಮು=[ಅದುದರಿಂದ ಮಕ್ಕಳನ್ನು ಪಡೆಯುವ ವಿವೇಕವು ಇಲ್ಲದಿದ್ದರೆ ನನಗೆ ಇದು ಗರ್ಭನಿಲ್ಲುವ ಸಮಯವು]; ಈ ಪದದೊಳು ಉದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತೊದೊಡೆ ಬೆಳೆ ಬಾಳ್ಕೆಗೆ ಕದನಕೆ ಐದುವ ವೇಳೆಯಲ್ಲಿ ಎನಲ್=[ಈ ಸಮಯದಲ್ಲಿ ನಿನ್ನ ಈ ಭೂಮಿಯಾದ ನನ್ನಗರ್ಭದಲ್ಲಿ ಬೀಜವನ್ನು ಬಿತ್ತಿದರೆ ಬಾಳ್ಕೆಗೆ ಬೆಳೆ ಉದ್ಭವಿಸುವುದು ಯುದ್ಧಕ್ಕೆ ಹೋಗುವ ವೇಳೆಯಲ್ಲಿ ಎನ್ನಲು]; ಅವಂ ಮುಂದೆ ಬೆದೆಗಾಲಮುಂಟು ಎಂದೊಡೆ =[ಎನ್ನಲು ಅವನು ಮುಂದೆ ಮತ್ತೆ ಬಿತ್ತುವ ಕಾಲ ಉಂಟು ಎಂದಾಗ]; ಅವಳು ಎಣೆಸಿ ಮಳೆಗಳಂ ತುದಿ ವಿಶಾಖೇಗೆ ಬಂದುದು ಇನ್ನು ಮೇಲೆ ಅಂಕುರಿಸಲು ಅರಿಯದು ಎನಲು ಇಂತೆಂದನು=[ಅವಳು ಮಳೆಯ ನಕ್ಷತ್ರಗಳನ್ನು ಎಣೆಸಿ ಮಳೆಗಾಲದ ತುದಿ ವಿಶಾಖೆ (ಚಿಗುರದು) ಬಂದಿದೆ, ಆನಂತರ 'ಈ ಸಮಯ ಬಿಟ್ಟರೆ ಇನ್ನು ಮೇಲೆ ಅಂಕುರಿಸಲು ಸಾಧ್ಯವಿಲ್ಲ' ಎನ್ನಲು ಸುಧನ್ವನು ಹೀಗೆ ಹೇಳಿದನು.]
  • ತಾತ್ಪರ್ಯ:ಅದುದರಿಂದ ಮಕ್ಕಳನ್ನು ಪಡೆಯುವ ವಿವೇಕವು ಇಲ್ಲದಿದ್ದರೆ ನನಗೆ ಇದು ಗರ್ಭನಿಲ್ಲುವ ಸಮಯವು ಈ ಸಮಯದಲ್ಲಿ ನಿನ್ನ ಈ ಭೂಮಿಯಾದ ನನ್ನಗರ್ಭದಲ್ಲಿ ಬೀಜವನ್ನು ಬಿತ್ತಿದರೆ ಬಾಳ್ಕೆಗೆ ಬೆಳೆ ಉದ್ಭವಿಸುವುದು ಈಗ ಯುದ್ಧಕ್ಕೆ ಹೋಗುವ ವೇಳೆಯಲ್ಲಿ ಎನ್ನಲು, ಎನ್ನಲು ಅವನು ಮುಂದೆ ಮತ್ತೆ ಬಿತ್ತುವ ಕಾಲ ಉಂಟು ಎಂದಾಗ, ಅವಳು ಮಳೆಯ ನಕ್ಷತ್ರಗಳನ್ನು ಎಣೆಸಿ ಮಳೆಗಾಲದ ತುದಿ ವಿಶಾಖೆ(ಚಿಗುರದು ಕೊಂಬೆಗಳಿಲ್ಲದ್ದು)ನಕ್ಷತ್ರ ಬಂದಿದೆ, ಆನಂತರ 'ಈ ಸಮಯ ಬಿಟ್ಟರೆ ಇನ್ನು ಮೇಲೆ ಅಂಕುರಿಸಲು ಸಾಧ್ಯವಿಲ್ಲ' ಎನ್ನಲು ಸುಧನ್ವನು ಹೀಗೆ ಹೇಳಿದನು.]
  • (ಪದ್ಯ- ೧೪)

ಪದ್ಯ :-:೧೫:[ಸಂಪಾದಿಸಿ]

ರಮಣಿ ನೀನೆಂಬುದನುನಯಮಪ್ಪುದಾದೊಡಂ | ಸಮಯಮಲ್ಲಿದು ಮೊಳಗುತಿದೆ ಭೇರಿ ಪೊರಮಟ್ಟು | ಸಮರಕಯ್ಯಂ ಪೋದನುಳಿದೆನಾದೊಡೆತಾತನಾಜ್ಞೆಗೊಳಗಾಗದಿರೆನು ||
ಕ್ರಮವನರಿಯದಳೆ ನೀನೆನಗೆ ಸೈರಿಸಲಳವೆ | ಗಮನಕನುಕೂಲೆಯಾಗೆನುತ ಗಲ್ಲಂಬಿಡಿದು | ಕಮಲಾಕ್ಷಿಯಂ ಮುದ್ದುಗೈದು ಬೀಳ್ಕೊಳ್ವಿನಂ ಕಾತಿರಿಸಿ ಮೇಲ್ವಾಯ್ದಳು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಮಣಿ ನೀನೆಂಬುದು ಅನುನಯಮಪ್ಪುದು ಆದೊಡಂ ಸಮಯಂ ಅಲ್ಲಿದು ಮೊಳಗುತಿದೆ ಭೇರಿ=[ರಮಣಿಯೇ ನೀನು ಹೇಳುವುದುನ್ಯವೇ ಸರಿ. ಆದರೆ ಈಗ ನಿನ್ನ ಆಸೆ ಪೂರಯಸುವ ಸಮಯವಲ್ಲ; ಭೇರಿಯು ಮೊಳಗುತ್ತಿದೆ, ತಪ್ಪಿದರೆ ಶಿಕ್ಷೆ.]; ಪೊರಮಟ್ಟು ಸಮರಕೆ ಅಯ್ಯಂ ಪೋದನು ಉಳಿದೆನಾದೊಡೆ ತಾತನಾಜ್ಞೆಗೆ ಒಳಗಾಗದಿರೆನು=[ ಯುದ್ಧಕ್ಕೆ ತಂದೆಯು ಹೊರಹೊರಟು ಹೋದನು ನಾನು ಹೋಗದೆ ಉಳಿದೆನಾದರೆ ತಂದೆಯ ಆಜ್ಞೆ ಕಾದ ಎಣ್ಣೆಯ ಶಿಕ್ಷೆಗೆ ಒಳಗಾಗದೆ ಇರೆನು]; ಕ್ರಮವನು ಅರಿಯದಳೆ ನೀನು ಎನಗೆ ಸೈರಿಸಲು ಅಳವೆ ಗಮನಕೆ ಅನುಕೂಲೆಯಾಗು ಎನುತ ಗಲ್ಲಂ ಬಿಡಿದು ಕಮಲಾಕ್ಷಿಯಂ ಮುದ್ದುಗೈದು ಬೀಳ್ಕೊಳ್ವಿನಂ ಕಾತಿರಿಸಿ ಮೇಲ್ವಾಯ್ದಳು=[ ಈ ಕ್ರಮವನು ಅರಿಯದಳೆ ನೀನು? ನನಗೆ ಸೈರಿಸಲು ಸಾಧ್ಯವೇ? ಹೋಗಲು ಸಹಕರಿಸು ಎನ್ನುತ್ತಾ ಗಲ್ಲವನ್ನು ಹಿಡಿದು ಕಮಲಾಕ್ಷಿಯಾದ ಪತ್ನಿಯನ್ನು ಮುದ್ದುಮಾಡಿ ಬೀಳ್ಕೊಟ್ಟುಹೊರಡಲುಅನುವಾದಾಗ ಅವಳು ಬಯಸಿ ಕಾತಿರಿಸಿ ಅವನ ಮೇಲೆ ಆಕ್ರಮಿಸಿದಳು].
  • ತಾತ್ಪರ್ಯ:ರಮಣಿಯೇ ನೀನು ಹೇಳುವುದು ನ್ಯಾವೇ ಸರಿ. ಆದರೆ ಈಗ ನಿನ್ನ ಆಸೆ ಪೂರಯಸುವ ಸಮಯವಲ್ಲ; ಭೇರಿಯು ಮೊಳಗುತ್ತಿದೆ, ತಪ್ಪಿದರೆ ಶಿಕ್ಷೆ. ಯುದ್ಧಕ್ಕೆ ತಂದೆಯು ಹೊರಹೊರಟು ಹೋದನು. ನಾನು ಹೋಗದೆ ಉಳಿದೆನಾದರೆ ತಂದೆಯ ಆಜ್ಞೆ- ಕಾದ ಎಣ್ಣೆಯ ಶಿಕ್ಷೆಗೆ ಒಳಗಾಗದೆ ಇರೆನು; ಈ ಕ್ರಮವನ್ನು ಅರಿಯದಳೆ ನೀನು? ನನಗೆ ಸೈರಿಸಲು ಸಾಧ್ಯವೇ? ಹೋಗಲು ಸಹಕರಿಸು, ಎನ್ನುತ್ತಾ ಗಲ್ಲವನ್ನು ಹಿಡಿದು ಕಮಲಾಕ್ಷಿಯಾದ ಪತ್ನಿಯನ್ನು ಮುದ್ದುಮಾಡಿ ಬೀಳ್ಕೊಟ್ಟು ಹೊರಡಲು ಅನುವಾದಾಗ, ಅವಳು ಬಯಸಿ ಕಾತಿರಿಸಿ ಅವನನ್ನು ಆಕ್ರಮಿಸಿದಳು.
  • (ಪದ್ಯ- ೧೫)

ಪದ್ಯ :-:೧೬:[ಸಂಪಾದಿಸಿ]

ಅಂಗಮಿಲ್ಲದನ ಸಮರಂಗಮಂ ಪುಗಲಂಜಿ | ತುಂಗವಿಕ್ರಮವಿಜಯಸಂಗರಕೆಳಸುವೆನೆಂ | ಬಂಗವಣೆಯೆಂತುಂಟೆಂದಂಗನೆ ಬಲಾತ್ಕಾರದಿಂ ಗುರುಕುಚದ್ವಯವನು ||
ಸಂಗಡಿಸುವಂತಾರ್ಪಿನಿಂ ಗಾಢತರದೊಳಾ | ಲಿಂಗನಂಗೈದು ಕುಡಿಗಂಗಳಿಂದವನ ಮೊಗ | ದಿಂಗಿತವನಾರೈವ ಶೃಂಗಾರಚೇಷ್ಟೆಯ ಬೆಡಂಗನದನೇವೇಳ್ವೆನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಂಗಂ ಇಲ್ಲದನ (ಪ್ರೇಮದೇವತೆ ಮನ್ಮಥನಿಗೆ ದೇಹವಿಲ್ಲ) ಸಮರ ಅಂಗಮಂ ಪುಗಲಂಜಿ ತುಂಗವಿಕ್ರಮ ವಿಜಯಸಂಗರಕೆ ಎಳಸುವೆನೆಂಬ ಅಂಗವಣೆ ಯೆಂತು ಉಂಟು ಎಂದು=[ಅಂಗವಿಲ್ಲದ ಮನ್ಮಥನ ಯುದ್ಧದ ಅಂಗವನ್ನು ಹೊಗಲು ಹೆದರಿ, ದೊಡ್ಡಶೂರನಾದ ಅರ್ಜುನನೊಡನೆ ಯುದ್ಧ ಮಾಡುವೆನೆಂದು ಪರಾಕ್ರಮ ಹೇಗೆ ಉಂಟಾಯಿತು? ಎಂದು]; ಅಂಗನೆ ಬಲಾತ್ಕಾರದಿಂ ಗುರುಕುಚದ್ವಯವನು ಸಂಗಡಿಸುವಂತೆ ಆರ್ಪಿನಿಂ ಗಾಢತರದೊಳು ಆಲಿಂಗನಂಗೈದು=[ಪ್ರಭಾವತಿಯು ಬಲಾತ್ಕಾರದಿಂದ ತನ್ನ ಉಬ್ಬಿದ ಎದೆಯನ್ನು ಒತ್ತುವಂತೆ ಶಕ್ತಿಮೀರಿ ಗಾಢವಾಗಿ ಆಲಿಂಗನಮಾಡಿದಳು. ]; ಕುಡಿಗಂಗಳಿಂದ ಅವನ ಮೊಗದ ಇಂಗಿತವನು ಆರೈವ ಶೃಂಗಾರಚೇಷ್ಟೆಯ ಬೆಡಂಗನು ಅದನು ಏವೇಳ್ವೆನು=[ತನ್ನ ಕುಡಿಕಣ್ಣೋಟದಿಂದ ಅವನ ಮುಖದ ಭಾವನೆಯನ್ನು ನೋಡುತ್ತಾ ಶೃಂಗಾರಚೇಷ್ಟೆಯ ಆ ಬೆಡಗನ್ನು ಎನೆಂದು ವಿವರಿಸಲಿ!].
  • ತಾತ್ಪರ್ಯ: ಅಂಗವಿಲ್ಲದ ಮನ್ಮಥನ ಯುದ್ಧದ ಅಂಗವನ್ನು ಹೊಗಲು ಹೆದರಿ, ದೊಡ್ಡಶೂರನಾದ ಅರ್ಜುನನೊಡನೆ ಯುದ್ಧಕ್ಕೆ ಹೋಗುವ ಪರಾಕ್ರಮ ಹೇಗೆ ಉಂಟಾಯಿತು? ಪ್ರಭಾವತಿಯು ಗಂಡನನ್ನು, ಬಲಾತ್ಕಾರದಿಂದ ತನ್ನ ಉಬ್ಬಿದ ಎದೆಯು ಒತ್ತುವಂತೆ ಶಕ್ತಿಮೀರಿ ಗಾಢವಾಗಿ ಆಲಿಂಗನಮಾಡಿದಳು. ತನ್ನ ಕುಡಿಕಣ್ಣೋಟದಿಂದ ಅವನ ಮುಖದ ಭಾವನೆಯನ್ನು ನೋಡುತ್ತಾ ಶೃಂಗಾರಚೇಷ್ಟೆಯ ಆ ಬೆಡಗನ್ನು ಎನೆಂದು ವಿವರಿಸಲಿ! ಎಂದು ಮುನಿ ಜನಮೇಜಯನಿಗೆ ಹೇಳಿದನು.
  • (ಪದ್ಯ- ೧೬)

ಪದ್ಯ :-:೧೭:[ಸಂಪಾದಿಸಿ]

ಮಿಡಿದೊಡೊಡೆವಂತಮೃತರಸದಿಂದೆ ಮೆರೆವ ಪೊಂ | ಗೊಡಮೊಲೆಯಮವನ ವಕ್ಷಸ್ಥಳದೊಳಿಟ್ಟೊತ್ತಿ | ದೊಡೆ ಹಿಸಿದೊಳಗಣ ತನುಸುಧೆಯೊಸರ್ದುತೊಟ್ಟಿಡುವ ಬಿಂದುಗಳ ಸಾಲಿದೆನಲು ||
ಕಡಿಕಿ ಪರಿದುಗುವ ಹಾರದ ಮುತ್ತುಗಳ ಮಣಿಗ | ಳೆಡೆವಿಡದೆ ಸೂಸುತಿರೆ ಸೊಕ್ಕುದೆಕ್ಕೆಯಳ್ ಸೊಗಸು | ವಡೆದಳಾಕಾಂತೆ ಪ್ರಿಯನಂಗದೊಳ್ ಮೋಹನೋತ್ಸಂಗದೊಳ್ ಬಗೆಗೊಳಿಸುತೆ ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಿಡಿದೊಡೆ ಒಡೆವಂತೆ ಅಮೃತರಸದಿಂದೆ ಮೆರೆವ ಪೊಂಗೊಡಮೊಲೆಯಂ=[ಬೆಟ್ಟಿನಿಂದ ಸಿಡಿದುಮಿಡಿದಾಗ ಹೊರಚಿಮ್ಮುವ ಅಮೃತರಸದಿಂದ ಶೋಭಿಸುವ ಹೊನ್ನಿನಕೊಡದಂತಿರವ ಮೊಲೆಯನ್ನು]; ಅವನ ವಕ್ಷಸ್ಥಳದೊಳು ಇಟ್ಟೊತ್ತಿದೊಡೆ ಹಿಸಿದು ಒಳಗಣ ತನುಸುಧೆಯು ಒಸರ್ದುತೊಟ್ಟಿಡುವ ಬಿಂದುಗಳ ಸಾಲಿದೆನಲು=[ಪತಿಯ ಎದೆಗೆ ಇಟ್ಟೊತ್ತಿದರೆ ಹಿಸಿದುಬಾಯಿಬಿಟ್ಟು ಒಳಗಣ ದೇಹದಹಾಲಿನಂತರಸವು ಒಸರಿ ಹೊರಬಂದು ತೊಟ್ಟಿಕ್ಕುವ ಬಿಂದುಗಳ ಸಾಲು ಇದು ಎನ್ನುವಂತೆ]; ಕಡಿಕಿ ಪರಿದು ಉಗುವ ಹಾರದ ಮುತ್ತುಗಳ ಮಣಿಗಳು ಎಡೆವಿಡದೆ ಸೂಸುತಿರೆ ಸೊಕ್ಕು-ತೆಕ್ಕೆಯಳ್ ಸೊಗಸು ವಡೆದಳ ಆ ಕಾಂತೆ ಪ್ರಿಯನಂಗದೊಳ್ ಮೋಹನೋತ್ಸಂಗದೊಳ್ ಬಗೆ (ಮನಸ್ಸು ಕೊಡು)ಗೊಳಿಸುತೆ=[ಕಡಿದು ಹರಿದು ಉದುರುವ ಹಾರದ ಮುತ್ತುಗಳ ಮಣಿಗಳು ಒಂದೇಸಮನೆ ಬೀಳುತ್ತಿರಲು, ಉದ್ರೇಕದ ಅಪ್ಪುಗೆಯಲ್ಲಿ ಅವನ ಪತ್ನಿ ತನ್ನ ಪ್ರಿಯನ ದೇಹದ ಪ್ರೇಮದ ಸಾಮೀಪ್ಯಸಂಗದಲ್ಲಿ ಮೈಮರೆತು ಆನಂದವನ್ನು ಅನುಭವವನ್ನು ಪಡೆದಳು].
  • ತಾತ್ಪರ್ಯ: ಬೆಟ್ಟಿನಿಂದ ಸಿಡಿದುಮಿಡಿದಾಗ ಹೊರಚಿಮ್ಮುವ ಅಮೃತರಸದಿಂದ ಶೋಭಿಸುವ ಹೊನ್ನಿನಕೊಡದಂತಿರವ ಮೊಲೆಯನ್ನು ಪತಿಯ ಎದೆಗೆ ಇಟ್ಟೊತ್ತಿದರೆ ಹಿಸಿದುಬಾಯಿಬಿಟ್ಟು ಒಳಗಣ ದೇಹದ ಹಾಲಿನಂತ ರಸವು ಒಸರಿ ಹೊರಬಂದು ತೊಟ್ಟಿಕ್ಕುವ ಬಿಂದುಗಳ ಸಾಲು ಇದು ಎನ್ನುವಂತೆ ಕಡಿದು ಹರಿದು ಉದುರುವ ಹಾರದ ಮುತ್ತುಗಳ ಮಣಿಗಳು ಒಂದೇ ಸಮನೆ ಬೀಳುತ್ತಿರಲು, ಉದ್ರೇಕದ ಅಪ್ಪುಗೆಯಲ್ಲಿ ಅವನ ಪತ್ನಿ ತನ್ನ ಪ್ರಿಯನ ದೇಹದ ಪ್ರೇಮದ ಸಾಮೀಪ್ಯಸಂಗದಲ್ಲಿ ಮೈಮರೆತು ಆನಂದವನ್ನು ಅನುಭವವನ್ನು ಪಡೆದಳು.
  • (ಪದ್ಯ- ೧೭)

ಪದ್ಯ :-:೧೮:[ಸಂಪಾದಿಸಿ]

ಪ್ರಿಯನ ತನುಚಂದನಮಹೀಜಮಂ ಸುತ್ತಿದ ಫ | ಣಿಯೊ ವಲ್ಲಭಾಂ ಗದಾಲಸ್ತಂಭಮಂ ತೊಡ | ರ್ದಯುಗಸ್ಮ/ಶ್ಮ/ರಕರಿಯ ಸುಂಡಿಲೊ ಕಾಂತಕಾಯಬಲಮಂ ಬಂಧಿಸಿದ ಮದನನ ||
ಜಯಪಾಶಮೋ ರಮಣ ದೇಹ ಕಲ್ಪದ್ರುಮಾ | ಶ್ರಯದ ಕೋಮಲಲತೆಯೊ ವೂಸತಾದುಂದೆಂಬಂತಿ | ನಿಯನನಪ್ಪಿದಹರಿಣಲೋಚನೆಯ ನಳಿತೋಳ್ಗಳೆಸೆದುವತಿಗಾಢದಿಂದೆ ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪ್ರಿಯನ ತನುಚಂದನ ಮಹೀಜಮಂ(ಮರ) ಸುತ್ತಿದ ಫಣಿಯೊ, ವಲ್ಲಭಾಂಗದ ಆಲಸ್ತಂಭಮಂ ತೊಡರ್ದ ಯುಗಸ್ಮರ ಕರಿಯ ಸುಂಡಿಲೊ=[ಪ್ರಿಯನ ದೇಹದ ಚಂದನ ಮರವನ್ನು ಸುತ್ತಿದ ಸರ್ಪಯೋ,, ವಲ್ಲಭಾಂಗದ ಆಲದಕಂಬವನ್ನು ಸುತ್ತಿದ ಎರಡು ಆನೆಯ ಸುಂಡಿಲೊ]; ಕಾಂತಕಾಯಬಲಮಂ ಬಂಧಿಸಿದ ಮದನನ ಜಯಪಾಶಮೋ ರಮಣ ದೇಹ ಕಲ್ಪದ್ರುಮಾಶ್ರಯದ ಕೋಮಲ ಲತೆಯೊ=[ಗಂಡನ ದೇಹಬಲವನ್ನು ಬಂಧಿಸಿದ ಮನ್ಮಥನ ಜಯಪಾಶವೋ(ಯಮಪಾಶವಲ್ಲ - ಜಯಪಾಶ) ರಮಣ /ಗಂಡನ ದೇಹವನ್ನು ಆಶ್ರಯಿಸಿರುವ /ಕಲ್ಪದ್ರುಮಾಶ್ರಯದ ಮೃದುವಾದ ಬಳ್ಳಿಯೋ!]; ವೂಸತಾದುದು ಅಂದು ಎಂಬಂತೆ ಇನಿಯನನು ಅಪ್ಪಿದ ಹರಿಣಲೋಚನೆಯ ನಳಿತೋಳ್ಗಳು ಎಸೆದುವು ಅತಿಗಾಢದಿಂದೆ=[ಇದು ಹೊಸದು ಎಂಬಂತೆ ಇನಿಯನನ್ನು ಅತಿಗಾಢವಾಗಿ ಅಪ್ಪಿದ ಹರಿಣದಂತೆ ಕಣ್ಣುಳ್ಳ ಪ್ರಭಾವತಿಯ ತೆಳುವಾದ ಉದ್ದ ತೋಳುಗಳು ಶೋಭಿಸಿದವು. ].
  • ತಾತ್ಪರ್ಯ:ಪ್ರಿಯನ ದೇಹವೆಂಬ ಚಂದನ ಮರವನ್ನು ಸುತ್ತಿದ ಸರ್ಪಗಳೋ,, ವಲ್ಲಭಾಂಗದ ಆಲದ ಕಂಬವನ್ನು ಸುತ್ತಿದ ಎರಡು ಆನೆಯ ಸುಂಡಿಲೊ; ಗಂಡನ ದೇಹಬಲವನ್ನು ಬಂಧಿಸಿದ ಮನ್ಮಥನ ಜಯಪಾಶವೋ(ಯಮಪಾಶವಲ್ಲ - ಜಯಪಾಶ) ರಮಣ /ಗಂಡನ ದೇಹವನ್ನು ಆಶ್ರಯಿಸಿರುವ /ಕಲ್ಪದ್ರುಮಾಶ್ರಯದ ಮೃದುವಾದ ಬಳ್ಳಿಯೋ! ಇದು ಹೊಸದು ಎಂಬಂತೆ ಇನಿಯನನ್ನು ಅತಿಗಾಢವಾಗಿ ಅಪ್ಪಿದ, ಹರಿಣದಂತೆ ಕಣ್ಣುಳ್ಳ ಪ್ರಭಾವತಿಯ ತೆಳುವಾದ ಉದ್ದ ತೋಳುಗಳು ಶೋಭಿಸಿದವು.
  • (ಪದ್ಯ- ೧೮)XXVII

ಪದ್ಯ :-:೧೯:[ಸಂಪಾದಿಸಿ]

ಕಣ್ಮಲರ್ ಕಾತರಿಸೆ ಮುಡಿ ಪೂಗಳಂ ಸೂಸೆ | ನುಣ್ಮೊಗಂ ಬೇರೊಂದು ಪರಿಯಾಗೆ ನುಡಿ ದಐನ್ಯ | ಮುಣ್ಮೆಹೀನಸ್ವರದೊಳೆಸೆಯೆ ಕೈ ಕಲೆಗಳೊಳ್ ಸೋಂಕೆ ಮೈ ಪುಳಕದಿಂದೆ ||
ಪೊಣ್ಮೆ ಮದನಾತುರಂ ತಲೆದೋರೆ ಮೇಲುದಂ | ಬಿಣ್ಮೊಲೆಗಳೋಸರಿಸೆ ನಿರಿಯ ಬಿಗಿ ಪೈಸರಿಸೆ | ಪೆಣ್ಮಂಚದಂಚೆದುಪ್ಪುಳ್ವಾಸಿಗೆಳೆದೋಯ್ದಳಿಸನಿಯನಂ ಬಲ್ಪಿನಿಂದೆ ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಣ್ಮಲರ್ (ಕಣ್ಣ್ +ಅಲರ್) ಕಾತರಿಸೆ ಮುಡಿ ಪೂಗಳಂ ಸೂಸೆ ನುಣ್ಮೊಗಂ (ನುಣ್+ಮೊಗಂ) ಬೇರೊಂದು ಪರಿಯಾಗೆ=[ಕಮಲದಹೂವಿನ ಎಸಳಿನಂತಿರುವ ಅವಳ ಕಣ್ಣು ಮಾದಕತೆಯಿಂದ ಸಮಾಗಮಕ್ಕೆ ಹಂಬಲಿಸುತ್ತಿರಲು, ಅವಳ ತುರುಬು ಹೂವುಗಳನ್ನು ಉದುರಿಸುತ್ತಿರಲು, ನುಣುಪಾದ ಮುಖವು (ನುಣ್+ಮೊಗಂ) ಬೇರೆ ಪರಿಯಾಗಿ ಕೆಂಪಡರಲು]; ನುಡಿ ದೈನ್ಯ ಮುಣ್ಮೆ ಹೀನಸ್ವರದೊಳ್ ಎಸೆಯೆ ಕೈ ಕಲೆಗಳೊಳ್ ಸೋಂಕೆ ಮೈ ಪುಳಕದಿಂದೆ ಪೊಣ್ಮೆ=[ಅವಳ ಮಾತು ದೈನ್ಯದಿಂದ ತಗ್ಗಿ ಅಸ್ಫಟವಾಗಿ ತೋರಲು, ಅವಳ ಕೈ ಕಾಮಕಲೆಗಳ ಸ್ಥಳಗಳನ್ನು ಸವರುತ್ತಿರಲು, ಮೈ ಪುಳಕದಿಂದ ರೋಮಾಚನಗೊಳ್ಳಲು]; ಮದನ ಆತುರಂ ತಲೆದೋರೆ ಮೇಲುದಂ ಬಿಣ್ಮೊಲೆಗಳು(ಬಿಣ್/ದೊಡ್ಡ +ಮೊಲೆ) ಓಸರಿಸೆ (ಸರಿಯಲು) ನಿರಿಯ ಬಿಗಿ ಪೈಸರಿಸೆ=[ರತಿಕ್ರೀಡೆಯ ಅವಸರವು ತಲೆದೋರಲು, ಮೇಲಿನಸೆರಗನ್ನು ಮೊಲೆಗಳು ಉಬ್ಬಿ ಸರಿದುಲು, ಸೀರೆಯ ನಿರಿಗೆಯ ಬಿಗಿ ಸಡಿಲವಾಗಲು,]; ಪೆಣ್ ಮಂಚದ ಅಂಚೆದುಪ್ಪುಳ್ವಾಸಿಗೆ(ಅಂಚೆ+ದುಪ್ಪುಳ್ವ+ಹಾಸಿಗೆ) ಎಳೆದೋಯ್ದಳು ಇಸನಿಯನಂ ಬಲ್ಪಿನಿಂದೆ=[ ಬಾಲೆ ಪ್ರಭಾವತಿಯು ಮಂಚದ ಹಂತೂಲಿಕಾತಲ್ಪದ ಹಾಸಿಗೆಗೆ ಪ್ರಿಯಕರನನ್ನು ಬಲವಂತವಾಗಿ ಎಳೆದೊಯ್ದಳು.]
  • ತಾತ್ಪರ್ಯ:ಕಮಲದಹೂವಿನ ಎಸಳಿನಂತಿರುವ ಅವಳ ಕಣ್ಣು ಮಾದಕತೆಯಿಂದ ಸಮಾಗಮಕ್ಕೆ ಹಂಬಲಿಸುತ್ತಿರಲು, ಅವಳ ತುರುಬು ಹೂವುಗಳನ್ನು ಉದುರಿಸುತ್ತಿರಲು, ನುಣುಪಾದ ಮುಖವು ಬೇರೆ ಪರಿಯಾಗಿ ಕೆಂಪಡರಲು; ಅವಳ ಮಾತು ದೈನ್ಯದಿಂದ ತಗ್ಗಿ ಅಸ್ಫಟವಾಗಿ ತೋರಲು, ಅವಳ ಕೈ ಕಾಮಕಲೆಗಳ ಸ್ಥಳಗಳನ್ನು ಸವರುತ್ತಿರಲು, ಮೈ ಪುಳಕದಿಂದ ರೋಮಾಚನಗೊಳ್ಳಲು; ರತಿಕ್ರೀಡೆಯ ಅವಸರವು ತಲೆದೋರಲು, ಮೇಲಿನಸೆರಗನ್ನು ಮೊಲೆಗಳು ಉಬ್ಬಿ ಸರಿಸಲು, ಸೀರೆಯ ನಿರಿಗೆಯ ಬಿಗಿ ಸಡಿಲವಾಗಲು, ಬಾಲೆ ಪ್ರಭಾವತಿಯು ಮಂಚದ ಹಂತೂಲಿಕಾತಲ್ಪದ ಹಾಸಿಗೆಗೆ ಪ್ರಿಯಕರನನ್ನು ಬಲವಂತವಾಗಿ ಎಳೆದೊಯ್ದಳು.
  • (ಪದ್ಯ- ೧೯)

ಪದ್ಯ :-:೨೦:[ಸಂಪಾದಿಸಿ]

ಸತಿಗೆ ಷೋಡಶದ ಋತುಮಯಮೇಕಾದಶೀ | ವ್ರತಮಲಂಘ್ಯಶ್ರಾದ್ಧಮಿನಿತೊಂದುದಿನಮೆ ಸಂ | ಗುಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನಮಾಘ್ರಾಣಿರೆ ||
ಕೃತಭೋಜ್ಯಮಾದಪುದು ನಡುವಿರುಳ್ಗಳೆದಾವ | ನಿತೆಯನೊಡಗೂಡಬಹುದದರಿಂದ ಧರ್ಮಪ | ದ್ಧತಿಯನೀಕ್ಷಿಸಲಿವಳನಿಂದು ಮೀರುವುದು ಮತವಲ್ಲೆಂದವಂ ತಿಳಿದನು||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸತಿಗೆ ಷೋಡಶದ ಋತುಮಯಂ ಏಕಾದಶೀವ್ರತಂ ಅಲಂಘ್ಯಶ್ರಾದ್ಧಂ ಇನಿತು ಒಂದು ದಿನಮೆ ಸಂಗುಮ ಆದೊಡೆ=[ಸತಿಗೆ ಹದಿನಾರನೆಯ ಋತುಮಯವು, ಏಕಾದಶೀವ್ರತಂ ಅಲಂಘ್ಯಶ್ರಾದ್ಧಂ ಇವು, ಒಂದು ದಿನವೇ ಕೂಡಿ ಬಂದರೆ]; ಎಂತು ಕರ್ತವ್ಯಮ್ ಎನೆ ಪೈತೃಕದ ಶೇಷಾನ್ನಂ ಆಘ್ರಾಣಿರೆ ಕೃತಭೋಜ್ಯಂ ಆದಪುದು=[ಯಾವ ರೀತಿ ಕರ್ತವ್ಯವನ್ನು ಮಾಡಬೇಕೆಂದರೆ ಪಿತೃವಿನ ಶೇಷಾನ್ನವನ್ನು ಸೇವಿಸಿದಾಗ ಕೃತಭೋಜ್ಯವು ಆದಪುದು; ಹಾಗಿದ್ದಾಗ,]; ನಡುವಿರುಳ್ ಕಳೆದು ಆ ವನಿತೆಯನು ಒಡಗೂಡಬಹುದು ಅದರಿಂದ ಧರ್ಮಪದ್ಧತಿಯನು ಈಕ್ಷಿಸಲು ಇವಳನು ಇಂದು ಮೀರುವುದು ಮತವು ಅಲ್ಲೆಂದು ಅವಂ ತಿಳಿದನು.=[ಮಧ್ಯರಾತ್ರಿ ಕಳೆದನಂತರ ಆ ವನಿತೆಯನ್ನು ಒಡಗೂಡಬಹುದು; ಅದ್ದರಿಂದ ಧರ್ಮಪದ್ಧತಿಯನ್ನು ನೋಡಿದರೂ, ಇವಳನ್ನು ಇಂದು ಮೀರುವುದು ಸಮ್ಮತವು ಅಲ್ಲ ಎಂದು ಅವನು ನಿರ್ಧರಿಸಿದನು.]
  • ತಾತ್ಪರ್ಯ:ಸತಿಗೆ ಹದಿನಾರನೆಯ (ಋತು ಸಮಯದಿಂದ ೧೬ನೆಯ ದಿನ) ಋತುಮಯವು, ಏಕಾದಶೀವ್ರತಂ ಅಲಂಘ್ಯಶ್ರಾದ್ಧಂ ಇವು, ಒಂದು ದಿನವೇ ಕೂಡಿ ಬಂದರೆ, ಯಾವ ರೀತಿ ಕರ್ತವ್ಯವನ್ನು ಮಾಡಬೇಕೆಂದರೆ ಪಿತೃವಿನ ಶೇಷಾನ್ನವನ್ನು ಸೇವಿಸಿದಾಗ ಕೃತಭೋಜ್ಯವು ಆಗುಪುದು; ಮಧ್ಯರಾತ್ರಿ ಕಳೆದನಂತರ ಆ ವನಿತೆಯನ್ನು ಒಡಗೂಡಬಹುದು; ಈಗ ಅದಾವುದೂ ಧಾರ್ಮಿಕ ದೋಷವಿಲ್ಲ, ಹಾಗಿದ್ದಾಗ, ಧರ್ಮಪದ್ಧತಿಯನ್ನು ನೋಡಿದರೂ, ಇವಳನ್ನು ಇಂದು ಮೀರುವುದು, ಇವಳ ಅಪೇಕ್ಷೆಯನ್ನು ನಿರಾಕರಿಸುವುದು ಸಮ್ಮತವಲ್ಲ ಎಂದು ಅವನು ನಿರ್ಧರಿಸಿದನು.]
  • (ಪದ್ಯ- ೧೯)

ಪದ್ಯ :-:೨೧:[ಸಂಪಾದಿಸಿ]

ತಾತನಾಜ್ಞೆಯನುಳಿದು ಕೃಷ್ಣದರ್ಶನಕೈದ | ದೀತರಳೆಗಿಂದು ಋತುದಾನಮಂ ಮಾಡಿದೊಡೆ | ಪಾತಕಂ ತನಗಿಲ್ಲಮೆಂದು ನಿಶ್ಚೈಸಿ ಬಳಿಕಾ ಸುಧನ್ವಂ ಮನದೊಳು ||
ಭೀತಿಯಂ ತೊರೆದು ಕಾಂತೆಯ ಕೊಡೆ ರಮಿಸಿದಂ | ಪ್ರೀತಿಯಿಂದುಗುರೊತ್ತು ಸರಸ ಚುಂಬನ ಲಲ್ಲೆ | ವಾತುಗಳರವ ನೇಮಗಲೆ ತಾಡನಪ್ರೌಢಿ ಬಂಧ ಸಮ್ಮೋಹನದೊಳು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾತನ ಆಜ್ಞೆಯನು ಉಳಿದು ಕೃಷ್ಣದರ್ಶನಕೆ ಐದದೆ ಈ ತರಳೆಗಿಂದು ಋತುದಾನಮಂ ಮಾಡಿದೊಡೆ ಪಾತಕಂ ತನಗಿಲ್ಲಮೆಂದು ನಿಶ್ಚೈಸಿ=[ತಂದೆಯ ಆಜ್ಞೆಯನ್ನು ಮೀರಿ, ಕೃಷ್ಣನ ದರ್ಶನಕ್ಕೆ ಹೋಗದೆ ಈ ಬಾಲೆಗೆ ಇಂದು ಗರಭದಾನಮಂ ಮಾಡಿದರೆ ಧಾರ್ಮಿಕದೋಷವು ತನಗಿಲ್ಲವೆಂದು ನಿಶ್ಚೈಸಿ]; ಬಳಿಕಾ ಸುಧನ್ವಂ ಮನದೊಳು ಭೀತಿಯಂ ತೊರೆದು ಕಾಂತೆಯ ಕೊಡೆ ರಮಿಸಿದಂ ಪ್ರೀತಿಯಿಂದ=[ಬಳಿಕ ಆ ಸುಧನ್ವನು ಮನಸ್ಸಿನಲ್ಲಿ ನಡೆತಪ್ಪಿದ ಭೀತಿಯನ್ನು ತೊರೆದು ಪತ್ನಿಯೊಡನೆ ಪ್ರೀತಿಯಿಂದ ರಮಿಸಿದನು]; ಉಗುರೊತ್ತು ಸರಸ ಚುಂಬನ ಲಲ್ಲೆವಾತುಗಳ ರವ ನೇಮಗಲೆ ತಾಡನ ಪ್ರೌಢಿ ಬಂಧ ಸಮ್ಮೋಹನದೊಳು=[ಹೇಗೆಂದರೆ ರತಿಕ್ರೀಡೆಯ ಉಗುರೊತ್ತು, ಸರಸ, ಚುಂಬನ, ಲಲ್ಲೆಮಾತುಗಳ ರವ ನೇಮಗಲೆ/ಇಂದ್ರಿಯ ಹತೋಟಿ ತಾಡನ/ಪ್ರಿತಿಯಿಂದ ಹೊಡೆಯುವುದು, ಪ್ರೌಢಿ/ಶಕ್ತಿಪ್ರಯೋಗ, ಬಂಧ/ವಿವಿಧ ಬಂದನದಭೋಗ, ಸಮ್ಮೋಹ/ಸುಖಪರಾಕಾಷ್ಟೆಯಲ್ಲಿ ಸ್ಕಲನದಲ್ಲಿ ಮೈಮರೆತ ಈ ಬಗೆಯಲ್ಲಿ ಕ್ರೀಡಿಸಿ ಸುಖಿಸಿದರು];
  • ತಾತ್ಪರ್ಯ:ತಂದೆಯ ಆಜ್ಞೆಯನ್ನು ಮೀರಿ, ಕೃಷ್ಣನ ದರ್ಶನಕ್ಕೆ ಹೋಗದೆ ಈ ಬಾಲೆಗೆ ಇಂದು ಗರಭದಾನಮಂ ಮಾಡಿದರೆ ಧಾರ್ಮಿಕದೋಷವು ತನಗಿಲ್ಲವೆಂದು ನಿಶ್ಚೈಸಿ; ಬಳಿಕ ಆ ಸುಧನ್ವನು ಮನಸ್ಸಿನಲ್ಲಿ ನಡೆತಪ್ಪಿದ ಭೀತಿಯನ್ನು ತೊರೆದು ಪತ್ನಿಯೊಡನೆ ಪ್ರೀತಿಯಿಂದ ರಮಿಸಿದನು; ಹೇಗೆಂದರೆ ರತಿಕ್ರೀಡೆಯ ಉಗುರೊತ್ತು, ಸರಸ, ಚುಂಬನ, ಲಲ್ಲೆಮಾತುಗಳ ರವ ನೇಮಗಲೆ/ಇಂದ್ರಿಯ ಹತೋಟಿ, ತಾಡನ/ಪ್ರೀತಿಯಿಂದ ಹೊಡೆಯುವುದು, ಪ್ರೌಢಿ/ಶಕ್ತಿಪ್ರಯೋಗ, ಬಂಧ/ವಿವಿಧ ಬಂದನದ ಭೋಗ, ಸಮ್ಮೋಹ/ಸುಖಪರಾಕಾಷ್ಟೆಯಲ್ಲಿ ಸ್ಕಲನದಲ್ಲಿ ಮೈಮರೆತ ಈ ಬಗೆಯಲ್ಲಿ ಕ್ರೀಡಿಸಿ ಸುಖಿಸಿದರು];
  • (ಪದ್ಯ- ೨೧)

ಪದ್ಯ :-:೨೨:[ಸಂಪಾದಿಸಿ]

ನಾಣ್ಮೀಸಲಳಿದವಯವದ ಭೇದಮಂ ಮರೆದು | ಜಾಣ್ಮೆಗಳ ಬಂಧಂಗಳೊಳ್ ಬಳಸಿ ಸೊಗಯಿಸುವ | ಗೋಣ್ಮೊಳಗಿನಿಂಚರಂಗಳನೆಸಗಿ ಮೊನೆವಲ್ಲ ಕರ್ದುಂಕನುಗುರೊತ್ತನು ||
ಮಾಣ್ಮಾಣೆನಲ್ ಕೈಗೊಳಿಸಿ ಲಲ್ಲೆಗೈದೊಲವ | ನಾಣ್ಮಂಗೆ ಕಾಣಿಸಿದಳವಳೊಡನೆ ಕೂರ್ಮೆಯಿಂ | ಮೇಣ್ಮಾನಿನಿಗೆ ಮದನಕಲೆಗಳಂ ತೋರಿಸಿದನವನಂದು ಸಮರತಿಯೊಳು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಾಣ್(ಲಜ್ಜೆ) ಮೀಸಲು ಅಳಿದ ಅವಯವದ ಭೇದಮಂ ಮರೆದು ಜಾಣ್ಮೆಗಳ ಬಂಧಂಗಳೊಳ್ ಬಳಸಿ ಸೊಗಯಿಸುವ ಗೋಣ್ ಮೊಳಗಿನ ಇಂಚರಂಗಳನು ಎಸಗಿ=[ಪರಸ್ಪರ ಲಜ್ಜೆ ಹೋಗಿ ಅವಯವದ ಭೇದಗಳನ್ನು ಮರೆತು ಜಾಣತನದ ಬಂಧಗಳನ್ನು ಬಳಸಿ ಆನಂದದಲ್ಲಿ ಗಳಪ್ರದ ಸದ್ದಿನೊಡನೆ ಉದ್ಗಾರಗಳನ್ನು ಮಾಡಿ]; ಮೊನೆವಲ್ಲ ಕರ್ದುಂಕನು ಉಗುರೊತ್ತನು ಮಾಣ್ ಮಾಣೆನಲ್ ಕೈಗೊಳಿಸಿ=[ಮೊನಚಾದ ಹಲ್ಲನಿಂದ ಗುರುತನ್ನುಮಾಡಿ ಉಗುರನ್ನು ಒತ್ತಿಗುರುತುಮಾಡಿ, ಬೇಡ ಬೇಡ ಎನ್ನುವಂತೆ ಕೂಗಿಸಿ]; ಲಲ್ಲೆಗೈದು ಒಲವನು ಆಣ್ಮಂಗೆ ಕಾಣಿಸಿದು ಅವಳೊಡನೆ ಕೂರ್ಮೆಯಿಂ ಮೇಣ್ ಮಾನಿನಿಗೆ ಮದನಕಲೆಗಳಂ ತೋರಿಸಿದನು ಅವನಂದು ಸಮರತಿಯೊಳು=[ಪ್ರೀತಿಮಾತಾಡಿ, ತನ್ನಪ್ರೀತಿಯನ್ನು ಪ್ರಿಯಕರ ಪತಿಗೆ ತೋರಿಸಿದಾಗ, ಅವಳೊಡನೆ ಅವನೂ ಪ್ರೇಮದಿಂದ ಪತ್ನಿಗೆ ಸಮರತಿಯಲ್ಲಿ ಅವನು ಆದಿನ ಮದನಕಲೆಗಳನ್ನು ತೋರಿಸಿದನು].
  • ತಾತ್ಪರ್ಯ:ಪರಸ್ಪರ ಲಜ್ಜೆ ಹೋಗಿ ಅವಯವದ ಭೇದಗಳನ್ನು ಮರೆತು ಜಾಣತನದ ಬಂಧಂಗಳನ್ನು ಬಳಸಿ ಆನಂದದಲ್ಲಿ ಗಳಪ್ರದ ಸದ್ದಿನೊಡನೆ ಉದ್ಗಾರಗಳನ್ನು ಮಾಡಿ; ಮೊನಚಾದ ಹಲ್ಲನಿಂದ ಗುರುತನ್ನುಮಾಡಿ ಉಗುರನ್ನು ಒತ್ತಿ ಗೀರಿ, ಬೇಡ ಬೇಡ ಎನ್ನುವಂತೆ ಕೂಗಿಸಿ; ಪ್ರೀತಿಯಮಾತಾಡಿ, ತನ್ನ ಪ್ರೀತಿಯನ್ನು ಪ್ರಿಯಕರ ಪತಿಗೆ ತೋರಿಸಿದಾಗ, ಅವಳೊಡನೆ ಅವನೂ ಪ್ರೇಮದಿಂದ ಪತ್ನಿಗೆ ಸಮರತಿಯಲ್ಲಿ ಆ ದಿನ ಮದನಕಲೆಗಳನ್ನು ತೋರಿಸಿದನು.
  • (ಪದ್ಯ- ೨೨)

ಪದ್ಯ :-:೨೩:[ಸಂಪಾದಿಸಿ]

ಒದವಿದ ಸೊಬಗಿನ ಶೃಂಗಾರದಾತುರದ ವೀ | ರದ ಲಲ್ಲೆವಾತಿನ ಕರುಣದ ನಗೆಮೊಗದ ಹಾ | ಸ್ಯದ ನಖಕ್ಷತದ ರೌದ್ರದ ಖಾತುರದ ಭಯದ ಬೆಮರೊಗೆದ ಭೀಭತ್ಸದ ||
ರೋಮಾಂಚದದ್ಭುತದ ಸೊಗಸಿನ ಮೋಹ | ನದ ಶಾಂತದೆಸೆವ ನವರಸದೇಳ್ಗೆಯಾದ ಸುರ | ತದ ನವರಸವನುರೆ ಸವಿದು ಸೊಕ್ಕಿ ಮರೆದರನ್ನೋನ್ಯಭಾವವನವರ್ಗಳು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಈ ಸಮಯದಲ್ಲಿ ನವರಸ ಕಾಣಿಸಿತು: ಒದವಿದ ಸೊಬಗಿನ ಶೃಂಗಾರದ ಆತುರದ ವೀರದ ಲಲ್ಲೆವಾತಿನ ಕರುಣದ ನಗೆಮೊಗದ ಹಾಸ್ಯದ=[ಈ ಎಲ್ಲಾ ಎಂದರೆ- ಸೊಬಗಿನಿಂದ ಕೂಡಿದ್ದೇ ಶೃಂಗಾರ; ಆತುರವೇ ವೀರ; ಲಲ್ಲೆಮಾತೇ ಕರುಣ; ನಗೆಮೊಗವೇ ಹಾಸ್ಯ]; ನಖಕ್ಷತದ ರೌದ್ರದ ಖಾತುರದ ಭಯದ ಬೆಮರು ಒಗೆದ ಭೀಭತ್ಸದ ರೋಮಾಂಚದ ಅದ್ಭುತದ ಸೊಗಸಿನ ಮೋಹನದ ಶಾಂತದ ಎಸೆವ=[ನಖಕ್ಷತ/ಉಗರು ನಾಟಿಸುವುದೇ ರೌದ್ರ; ಆತುರದ ಭಯದ ಬೆವರುವುದೇ ಭೀಭತ್ಸ; ರೋಮಾಂಚದ ಅದ್ಭುತದ ಸೊಗಸಿನ ಮೋಹನವೇ ಕಾಣುವ ಶಾಂತ]; ನವರಸದ ಏಳ್ಗೆಯಾದ ಸುರತದ ನವರಸವನು ಉರೆ ಸವಿದು ಸೊಕ್ಕಿ ಮರೆದರು ಅನ್ನೋನ್ಯಭಾವವನು ಅವರ್ಗಳು=[ಈ ಬಗೆಯ ನವರಸವು ಹೊರಹೊಮ್ಮುವ ಸುರತದ ನವರಸವನ್ನು, ಅವರಿಬ್ಬರೂ ಅನ್ಯೋನ್ಯವಾಗಿ ಅತಿಯಾಗಿ ಸವಿದು ಸೊಕ್ಕಿ ಮರೆದರು.]
  • ತಾತ್ಪರ್ಯ:ಈ ಸಮಯದಲ್ಲಿ ನವರಸ ಕಾಣಿಸಿತು: ಈ ಎಲ್ಲಾ ಎಂದರೆ- ಸೊಬಗಿನಿಂದ ಕೂಡಿದ್ದೇ ಶೃಂಗಾರ; ಆತುರವೇ ವೀರ; ಲಲ್ಲೆಮಾತೇ ಕರುಣ; ನಗೆಮೊಗವೇ ಹಾಸ್ಯ; ನಖಕ್ಷತ/ಉಗರು ನಾಟಿಸುವುದೇ ರೌದ್ರ; ಆತುರದ ಭಯದ ಬೆವರುವುದೇ ಭೀಭತ್ಸ; ರೋಮಾಂಚದ ಅದ್ಭುತದ ಸೊಗಸಿನ ಮೋಹನವೇ ಕಾಣುವ ಶಾಂತ; ಈ ಬಗೆಯ ನವರಸವು ಹೊರಹೊಮ್ಮುವ ಸುರತದ ನವರಸವನ್ನು, ಅವರಿಬ್ಬರೂ ಅನ್ಯೋನ್ಯವಾಗಿ ಅತಿಯಾಗಿ ಸವಿದು ಸೊಕ್ಕಿ ಮರೆದರು.]
  • (ಪದ್ಯ- ೨೩)

ಪದ್ಯ :-:೨೪:[ಸಂಪಾದಿಸಿ]

ಕೂರುಗುರ್ಗಳ ಗೆರೆಯ ಸೂತ್ರಬಂಧದೊಳೆಸೆವ | ತೋರಮೊಲೆಗಳ ಕುಂಭಸಂಸ್ಥಾಪನಂಗೈಯ್ದು | ಚಾರುತರ ಗಳರವದಮಂತ್ರದಿಂ ರೊಮಾಂಚನದ ಕುಶಾಗ್ರಂಗಳಿಂದೆ ||
ವೀರರತಿ ಸಾಮಾಜ್ಯಪಟ್ಟದೊಳ್ ಬೆಮರ್ವನಿಯ | ವಾರಿಸೇಚನದಿಂದೆ ಕೃತಕೃತ್ಯನಾದಂತೆ | ರಾರಾಜಿಸಿದನವಂ ಮೆಲ್ಪಾಸಿನೊಳ್‍ಮರೆವ ಮಣಿಮಂಚದಾಸನದೊಳು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೂರು ಉಗುರ್ಗಳ ಗೆರೆಯ ಸೂತ್ರಬಂಧದೊಳ ಎಸೆವ ತೋರಮೊಲೆಗಳ ಕುಂಭಸಂಸ್ಥಾಪನಂಗೈಯ್ದು=[ಮೊನಚು ಉಗುರುಗಳ ಗೆರೆಯ ಸೂತ್ರ/ ದಾರದ ಬಂಧದಲ್ಲಿ, ತೋರುತ್ತಿರುವ ದಪ್ಪಮೊಲೆಗಳ ಕುಂಭಕಲಶಗಳನ್ನು ಇಟ್ಟು]; ಚಾರುತರ ಗಳರವದಮಂತ್ರದಿಂ ರೊಮಾಂಚನದ ಕುಶಾಗ್ರಂಗಳಿಂದೆ ವೀರರತಿ ಸಾಮಾಜ್ಯಪಟ್ಟದೊಳ್ =[ ಇಂಪಾದ (ಸುರತದ) ಗಳಪ್ರಳ ಶಬ್ಧದ ಮಂತ್ರದಿಂದ ರೊಮಾಂಚನದ ರೋಮಗಳೇ ದರ್ಭೆಯಕುಡಿಗಳು ಎನ್ನುವಂತೆ 'ವೀರರತಿಕ್ರೀಡಾ ಸಾಮಾಜ್ಯಪಟ್ಟದಲ್ಲಿ']; ಬೆಮರ್ವನಿಯ ವಾರಿಸೇಚನದಿಂದೆ ಕೃತಕೃತ್ಯನಾದಂತೆ ರಾರಾಜಿಸಿದನವಂ ಮೆಲ್ಪಾಸಿನೊಳ್‍ ಮರೆವ ಮಣಿಮಂಚದಾಸನದೊಳು=[ಬೆವರಿನ ಹನಿಯ ನೀರಿನ ಪ್ರೋಕ್ಷಣದಿಂದ ಕೃತಕೃತ್ಯನಾದಂತೆ ಪ್ರದ್ಯುಮ್ನನು ಮಣಿಮಂಚದ ಆಸನದ ಮೇಲುಹಾಸಿನಲ್ಲಿ ಪತ್ನಿಯೊಡನೆ ಶೋಭಿಸಿದನು.]
  • ತಾತ್ಪರ್ಯ:ಮೊನಚು ಉಗುರುಗಳ ಗೆರೆಯ ಸೂತ್ರ/ ದಾರದ ಬಂಧದಲ್ಲಿ, ತೋರುತ್ತಿರುವ ದಪ್ಪಮೊಲೆಗಳ ಕುಂಭಕಲಶಗಳನ್ನು ಇಟ್ಟು, ಇಂಪಾದ(ಸುರತದ) ಗಳಪ್ರಳ ಶಬ್ಧದ ಮಂತ್ರದಿಂದ ರೊಮಾಂಚನದಿಂದ ರೋಮಗಳೇ ದರ್ಭೆಯಕುಡಿಗಳು ಎನ್ನುವಂತೆ 'ವೀರರತಿಕ್ರೀಡಾ ಸಾಮಾಜ್ಯಪಟ್ಟದಲ್ಲಿ' ಬೆವರಿನ ಹನಿಯ ನೀರಿನ ಪ್ರೋಕ್ಷಣದಿಂದ ಕೃತಕೃತ್ಯನಾದಂತೆ ಪ್ರದ್ಯುಮ್ನನು ಮಣಿಮಂಚದ ಆಸನದ ಮೇಲುಹಾಸಿನಲ್ಲಿ ಪತ್ನಿಯೊಡನೆ ಶೋಭಿಸಿದನು.
  • (ಪದ್ಯ- ೨೪)

ಪದ್ಯ :-:೨೫:[ಸಂಪಾದಿಸಿ]

ಪ್ರಕಟಸಿದ ಕಟಿ ತಳ್ಳುವಳ್ಳೆ ಬೆಂಡಾದ ಮೈ ಸುಕಲೆಗಳನಾಂತ ಮೊಲೆ ಕದಡುಲೇಪದ ಬೆಮರ್ | ವಿಕಸಿತಸುಖದೊಳಿದ್ದ ಮನಮೆದ್ದ ರೋಮಾಂಚಮಸವಳಿದ ಕೈ ಮಸುಳ್ದ ||
ಮಕರಪತ್ರದ ಕದಪು ಮಾಣ್ದ ರವದೊಳ್ಗೊರಲ್ | ಮುಕುಳಿತವಿಲೋಚನಂ ನರಸುಯ್ ನಿಮಿರ್ದನಾ | ಸಿಕಮಳಿದ ತಿಲಕಂಪರೆಧ ಕುರುಳ್ ಸೊಪ್ಪಾದಧರಮೊಪ್ಪಿತಾ ಕಾಂತೆಗೆ ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪ್ರಕಟಸಿದ ಕಟಿ ತಳ್ಳುವ ಅಳ್ಳೆ ಬೆಂಡಾದ ಮೈ ಸುಕಲೆಗಳನೂ ಆಂತ ಮೊಲೆ=[ತೋರುತ್ತಿರುವ ಸೊಂಟ,ಏರಿಳಿಯುತ್ತಿರುವ ಎದೆಯ ಪಕ್ಕೆ, ಬೆಂಡಾದ ಮೈ ಉಗುರು ಕಲೆಗಳನ್ನು ಹೊಂದಿದ ಮೊಲೆ]; ಕದಡುಲೇಪದ ಬೆಮರ್ ವಿಕಸಿತಸುಖದೊಳಿದ್ದ ಮನಮೆದ್ದ ರೋಮಾಂಚಮಸವಳಿದ ಕೈ ಮಸುಳ್ದ=[ಸುಗಂಧ ಹಚ್ಚಿದ ಮೈಯ ಬೆವರು ಪೂರ್ಣಸುಖದೊಳಿದ್ದ ಮನತುಂಬಿದ ರೋಮಾಂಚಗೊಂಡ ಬಸವಳಿದ ಕೈ]; ಮಸುಳ್ದ ಮಕರಪತ್ರದ ಕದಪು ಮಾಣ್ದ ರವದೊಳ್ ಕೊರಲ್ ಮುಕುಳಿತವಿಲೋಚನಂ ನರಸುಯ್ ನಿಮಿರ್ದನಾ ಸಿಕಮಳಿದ ತಿಲಕಂಪರೆಧ ಕುರುಳ್ ಸೊಪ್ಪಾದಧರಮೊಪ್ಪಿತಾ ಕಾಂತೆಗೆ=[ಅಳಿಸಿದ ಮಕರಪತ್ರದ ಗಲ್ಲ,ಕಂಠದಲ್ಲಿ ನಿಂತ ದನಿ (ಮಾತು ನಿಂತಿದೆ), ಅರ್ಧಮುಚ್ಚಿದ ಕಣ್ಣು ಉಸಿರುಬಿಡುವ ಮೇಲೆದ್ದೆ ಎಳಸು ಮೂಗು, ಹಣೆಯಲ್ಲಿ ಅಳಿಸಿದ ಕುಂಕುಮದ ಬೊಟ್ಟು, ಹರಡಿದ ಕುರುಳು, ಆಯಾಸದಿಂದ ಬಾಡಿದ ತುಟಿ, ಹೀಗೆ ಕಾಂತೆ ಪ್ರಭಾವತಿ ಇದ್ದಳು (ಒಪ್ಪಿದ್ದಳು)]
  • ತಾತ್ಪರ್ಯ: (ರತಿಕ್ರೀಡೆಯ ನಂತರ) ತೋರುತ್ತಿರುವ ಸೊಂಟ,ಏರಿಳಿಯುತ್ತಿರುವ ಎದೆಯ ಪಕ್ಕೆ, ಬೆಂಡಾದ ಮೈ ಉಗುರು ಕಲೆಗಳನ್ನು ಹೊಂದಿದ ಮೊಲೆ; ಸುಗಂಧ ಹಚ್ಚಿದ ಮೈಯ ಬೆವರು ಪೂರ್ಣ ಸುಖದೊಳಿದ್ದ ಮನತುಂಬಿದ ರೋಮಾಂಚಗೊಂಡ ಬಸವಳಿದ ಕೈ; ಅಳಿಸಿದ ಮಕರಪತ್ರದ ಗಲ್ಲ,ಕಂಠದಲ್ಲಿ ನಿಂತ ದನಿ (ಮಾತು ನಿಂತಿದೆ), ಅರ್ಧಮುಚ್ಚಿದ ಕಣ್ಣು ಉಸಿರುಬಿಡುವ ಮೇಲೆದ್ದೆ ಎಳಸು ಮೂಗು, ಹಣೆಯಲ್ಲಿ ಅಳಿಸಿದ ಕುಂಕುಮದ ಬೊಟ್ಟು, ಹರಡಿದ ಕುರುಳು, ಆಯಾಸದಿಂದ ಬಾಡಿದ ತುಟಿ, ಹೀಗೆ ಕಾಂತೆ ಪ್ರಭಾವತಿ ಇದ್ದಳು (ಒಪ್ಪಿದ್ದಳು).
  • (ಪದ್ಯ- ೨೫)

ಪದ್ಯ :-:೨೬:[ಸಂಪಾದಿಸಿ]

ಮನ್ವಾದಿಋಷಿಗಳಭಿಮತಮಿದೆಂದರಿದಾ ಸು | ಧ್ವನಂ ಋತುಸ್ನಾತೆಯಂ ಮೀರದೊಡಗೂಡಿ | ತನ್ವಿಯಂ ಬೀಳ್ಕೊಂಡುಸಮರಕನುವಾಗಲಿರಲಿತ್ತ ಕುರುಕುಲದ ನೃಪರ ||
ಅನ್ವಯಕೆ ತೊಡವಾದ ನರನ ಹಯಮಂ ಕಟ್ಟು | ವನ್ವೇಷಣದೊಳಾಹವಕೆ ನಡೆಯುತತಿಬಲ ಸ | ಮನ್ವಿತಕುಮಾರನಂ ಸೇನೆಯೊಳ್ ಕಾಣದೆ ಕೆರಳ್ದಂ ಮರಾಳಕೇತು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮನ್ವಾದಿಋಷಿಗಳ ಅಭಿಮತಂ ಇದೆಂದು ಅರಿದ ಆ ಸುಧ್ವನಂ ಋತುಸ್ನಾತೆಯಂ ಮೀರದೆ ಒಡಗೂಡಿ ತನ್ವಿಯಂ ಬೀಳ್ಕೊಂಡು ಸಮರಕೆ ಅನುವಾಗಲು=[ಮನು ಮೊದಲಾದ ಋಷಿಗಳ ಧರ್ಮಶಾಸ್ತ್ರ ಅಭಿಮತವು ಹೀಗೇ ಎಂದು ತಿಳಿದ ಆ ಸುಧ್ವನನು ಋತುಸ್ನಾತೆಯನ್ನು ತಿರಸ್ಕರಿಸದೆ ರಮಿಸಿ ಪತ್ನಿಯನ್ನು ಬೀಳ್ಕೊಂಡು ಸಮರಕ್ಕೆ ಅನುವಾಗಲು]; ಇರಲಿತ್ತ ಕುರುಕುಲದ ನೃಪರ ಅನ್ವಯಕೆ ತೊಡವಾದ ನರನ ಹಯಮಂ ಕಟ್ಟುವ ಅನ್ವೇಷಣದೊಳು ಆಹವಕೆ ನಡೆಯುತ=[ಇರಲು ಇತ್ತಲಾಗಿ ಕುರುಕುಲದ ರಾಜರ ವಂಶಕ್ಕೆ ಆಭರಣದಂತಿರುವ ಅರ್ಜುನನ ಕುದುರೆಯನ್ನು ಕಟ್ಟುವುದಕ್ಕಾಗಿ ಅದನ್ನು ಹುಡುಕಲು, ಯುದ್ಧಕ್ಕೆ ನಡೆಯುತ್ತಾ]; ಅತಿಬಲ ಸಮನ್ವಿತ ಕುಮಾರನಂ ಸೇನೆಯೊಳ್ ಕಾಣದೆ ಕೆರಳ್ದಂ ಮರಾಳಕೇತು=[ಮಹಾ ಪರಾಕ್ರಮಿಯಾದ ಮಗನನ್ನು ಸೇನೆಯಲ್ಲಿ ಕಾಣದೆ ಹಂಸದ್ವಜನು ಕೋಪಗೊಂಡನು.]
  • ತಾತ್ಪರ್ಯ:ಮನು ಮೊದಲಾದ ಋಷಿಗಳ ಧರ್ಮಶಾಸ್ತ್ರ ಅಭಿಮತವು ಹೀಗೇ ಎಂದು ತಿಳಿದ ಆ ಸುಧ್ವನನು ಋತುಸ್ನಾತೆಯನ್ನು ತಿರಸ್ಕರಿಸದೆ ರಮಿಸಿ ಪತ್ನಿಯನ್ನು ಬೀಳ್ಕೊಂಡು ಸಮರಕ್ಕೆ ಅನುವಾಗಲು; ಇತ್ತಲಾಗಿ ಕುರುಕುಲದ ರಾಜರ ವಂಶಕ್ಕೆ ಆಭರಣದಂತಿರುವ ಅರ್ಜುನನ ಕುದುರೆಯನ್ನು ಕಟ್ಟುವುದಕ್ಕಾಗಿ ಅದನ್ನು ಹುಡುಕಲು, ಯುದ್ಧಕ್ಕೆ ನಡೆಯುತ್ತಾ, ಮಹಾ ಪರಾಕ್ರಮಿಯಾದ ಮಗ ಸುಧನ್ವನನ್ನು ಸೇನೆಯಲ್ಲಿ ಕಾಣದೆ ಹಂಸದ್ವಜನು ಕೋಪಗೊಂಡನು.
  • (ಪದ್ಯ- ೨೬)

ಪದ್ಯ :-:೨೭:[ಸಂಪಾದಿಸಿ]

ಪೊರೆಯೊಳಿಹ ಸಚಿವರಂ ನೋಡುತವರೊಳ್ ಸುಮತಿ | ಗರಸಂ ನಿರೊಪಿಸಲವಂ ಕಡುಗಡಿಕರಾದ | ಚರರನಟ್ಟಿದೊಡವರ್ ಬರೆಸೆಳೆದುನಗುತಿಹ ಸುಧನ್ವನಂ ತುಡಿಕಿ ಪಿಡಿದು ||
ಕರಯುಗಳಮಂ ನೇಣ್ಗಳಿಂ ಬಿಗಿದು ತುಂದರತಿ | ಭರದಿಂದ ರಾಯನಿದ್ದಡೆಗಾಗಿ ಪೌರಜನ | ಪರಿಜನಂ ಬೆರಗಾಗೆ ಕದ್ದಾತನಂ ಕೊಂಡುಬರ್ಪಂತೆ ನಿಷ್ಠುರದೊಳು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೊರೆಯೊಳು ಇಹ ಸಚಿವರಂ ನೋಡುತ ಅವರೊಳ್ ಸುಮತಿಗೆ ಅರಸಂ ನಿರೊಪಿಸಲು=[ಪಕ್ಕದಲ್ಲಿ ಇದ್ದ ಸಚಿವರನ್ನು ನೋಡುತ್ತಾ ಅವರಲ್ಲಿ ಸುಮತಿ ಎಂಬ ಮಂತ್ರಿಗೆ ಅರಸನು ಆಜ್ಞೆ ಮಾಡಲು]; ಅವಂ ಕಡುಗಡಿಕರಾದ ಚರರನು ಅಟ್ಟಿದೊಡೆ ಅವರ್ ಬರೆಸೆಳೆದು ನಗುತಿಹ ಸುಧನ್ವನಂ ತುಡಿಕಿ ಪಿಡಿದು ಕರಯುಗಳಮಂ ನೇಣ್ಗಳಿಂ ಬಿಗಿದು ತುಂದರು ಅತಿ ಭರದಿಂದ ರಾಯನು ಇದ್ದಡೆಗಾಗಿ =[ಅವನು ಕ್ರೂರರಾದ ಚಾರರನ್ನು ಕರೆತರಲುಕಳಿಸಿದಾಗ ಅವರು ನಗುತ್ತಿರುವ ಸುಧನ್ವನನ್ನು ಬಲವಂತವಾಗಿ ಎಳೆದು ಹಿಡಿದು ಎರಡೂಕೈಗಳನ್ನು ಹಗ್ಗದಿಂದ ಬಿಗಿದು ವೇಗವಾಗಿ ಎಳೆದು ರಾಜನು ಇದ್ದ ಕಡೆಗೆ ತುಂದರು.]; ಪೌರಜನ ಪರಿಜನಂ ಬೆರಗಾಗೆ ಕದ್ದಾತನಂ ಕೊಂಡುಬರ್ಪಂತೆ ನಿಷ್ಠುರದೊಳು=[ಕದ್ದವನನ್ನು ಎಳೆದುತರುವಂತೆ ನಿಷ್ಠುರದಿಂದ ಎಳದು ತಂದುದನ್ನು ನಗರದ ಪೌರಜನರೂ ರಾಜನಪರಿವಾರದ ಜನರೂ ನೋಡಿ ಬೆರಗಾದರು.]
  • ತಾತ್ಪರ್ಯ: ಪಕ್ಕದಲ್ಲಿ ಇದ್ದ ಸಚಿವರನ್ನು ನೋಡುತ್ತಾ ಅವರಲ್ಲಿ ಸುಮತಿ ಎಂಬ ಮಂತ್ರಿಗೆ ಅರಸನು ಆಜ್ಞೆ ಮಾಡಲು, ಅವನು ಕ್ರೂರರಾದ ಚಾರರನ್ನು ಕರೆತರಲು ಕಳಿಸಿದಾಗ ಅವರು ನಗುತ್ತಿರುವ ಸುಧನ್ವನನ್ನು ಬಲವಂತವಾಗಿ ಎಳೆದು ಹಿಡಿದು ಎರಡೂಕೈಗಳನ್ನು ಹಗ್ಗದಿಂದ ಬಿಗಿದು ವೇಗವಾಗಿ ಎಳೆದು ರಾಜನು ಇದ್ದ ಕಡೆಗೆ ತುಂದರು; ಕದ್ದವನನ್ನು ಎಳೆದುತರುವಂತೆ ನಿಷ್ಠುರದಿಂದ ಎಳದು ತಂದುದನ್ನು ನಗರದ ಪೌರಜನರೂ ರಾಜನಪರಿವಾರದ ಜನರೂ ನೋಡಿ ಬೆರಗಾದರು.
  • (ಪದ್ಯ- ೨೭)

ಪದ್ಯ :-:೨೮:[ಸಂಪಾದಿಸಿ]

ಕಟ್ಟುಸಹಿತಾ ಸುಧನ್ವಂ ತಾತನಡಿಗೆ ಪೊಡ | ಮಟ್ಟೊಡೆ ಕೆರಳ್ದೆಲವೊ ಮೂಢಾತ್ಮನೀನೆನ್ನ | ಕಹ್ಟಳೆಯನರಿದು ಕೃಷ್ಣನ ದೀಕ್ಷೆಯಂ ಮರೆದು ರಣದುತ್ಸವವನೆ ತೊರೆದು ||
ಪಟ್ಟಣದೊಳೇಕೆ ತಳುವಿದೆಯೆಂದು ಕುವರನಂ | ಧಟ್ಟಿಸಿ ಮರಾಳಧ್ವಜಂ ಕೇಳ್ದೊಡಡಿಗಿಟ್ಟ | ದಿಟ್ಟಿಯಿಂದಂಜುತೊಯ್ಯನೆ ಲಜ್ಜೆವೆರಸಿ ಬಿನ್ನೈಸಿದನವಂ ಪಿತಂಗೆ ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಟ್ಟುಸಹಿತ ಆ ಸುಧನ್ವಂ ತಾತನ ಅಡಿಗೆ ಪೊಡಮಟ್ಟೊಡೆ ಕೆರಳ್ದು=[ಕೈಯ ಕಟ್ಟುಸಹಿತ ಆ ಸುಧನ್ವನು ಅವನ ತಂದೆಯ ಪಾದಗಳಿಗೆ ನಮಸ್ಕರಿಸಿದಾಗ, ಅವನು ಕೆರಳಿ ]; ಎಲವೊ ಮೂಢಾತ್ಮನೀನೆನ್ನ ಕಹ್ಟಳೆಯನು ಅರಿದು ಕೃಷ್ಣನ ದೀಕ್ಷೆಯಂ ಮರೆದು ರಣದ ಉತ್ಸವವನೆ ತೊರೆದು=[ಎಲವೊ ಬುದ್ಧಯಿಲ್ಲದವನೇ, ನೀನು ನನ್ನ ಆಜ್ಞೆಯನ್ನು ತಿಳಿದು, ಕೃಷ್ಣನನ್ನು ಕರೆಸುವ ದೀಕ್ಷೆಯನ್ನು ಮರೆತು, ಯುದ್ಧದ ಸಂಭ್ರಮವನ್ನು ಪಾಲುಗೊಳ್ಲದೆ ತೊರೆದು ]; ಪಟ್ಟಣದೊಳು ಏಕೆ ತಳುವಿದೆಯೆಂದು ಕುವರನಂ ಧಟ್ಟಿಸಿ ಮರಾಳಧ್ವಜಂ ಕೇಳ್ದೊಡೆ ಅಡಿಗಿಟ್ಟ ದಿಟ್ಟಿಯಿಂದ ಅಂಜುತ ಒಯ್ಯನೆ ಲಜ್ಜೆವೆರಸಿ ಬಿನ್ನೈಸಿದನು ಅವಂ ಪಿತಂಗೆ=[ಪಟ್ಟಣದೊಳಗೆ ಏಕೆ ಹೋದೆ ಎಂದು ಮಗನನ್ನು ಗದರಿಸಿ ಹಂಸಧ್ವಜನು ಕೇಳಿದಾಗ, ದೃಷ್ಟಿಯನ್ನು ಕೆಳಗಿಟ್ಟು ಅಂಜುತ್ತಾ ಮೆಲ್ಲನೆ ಲಜ್ಜೆಯಿಂದ ಅವನು ತಂದೆಗೆ ವಿನಯದಿಂದ ಹೇಳಿದನು.]
  • ತಾತ್ಪರ್ಯ:ಕೈಯ ಕಟ್ಟುಸಹಿತ ಆ ಸುಧನ್ವನು ಅವನ ತಂದೆಯ ಪಾದಗಳಿಗೆ ನಮಸ್ಕರಿಸಿದಾಗ, ಅವನು ಕೆರಳಿ, ಎಲವೊ ಬುದ್ಧಯಿಲ್ಲದವನೇ, ನೀನು ನನ್ನ ಆಜ್ಞೆಯನ್ನು ತಿಳಿದು, ಕೃಷ್ಣನನ್ನು ಕರೆಸುವ ದೀಕ್ಷೆಯನ್ನು ಮರೆತು, ಯುದ್ಧದ ಸಂಭ್ರಮವನ್ನು ಪಾಲುಗೊಳ್ಲದೆ ತೊರೆದು ಪಟ್ಟಣದೊಳಗೆ ಏಕೆ ಹೋದೆ ಎಂದು ಮಗನನ್ನು ಗದರಿಸಿ ಹಂಸಧ್ವಜನು ಕೇಳಿದಾಗ, ದೃಷ್ಟಿಯನ್ನು ಕೆಳಗಿಟ್ಟು ಅಂಜುತ್ತಾ ಮೆಲ್ಲನೆ ಲಜ್ಜೆಯಿಂದ ಅವನು ತಂದೆಗೆ ವಿನಯದಿಂದ ಹೇಳಿದನು.
  • (ಪದ್ಯ- ೨೮)

ಪದ್ಯ :-:೨೯:[ಸಂಪಾದಿಸಿ]

ಸತಿ ಸಂತತಿಗೆ ಬಯಸಿ ದಿನಗಳೆದುದು ಇನ್ನಿಲ್ಲ ಋತುಸಮಯಮೆಂದೆನಗೆ ಪೇಳ್ದೊಡಲ್ಲಿರ್ದೆನೆನೆ | ಕೃತಕಮಿದು ನೂಕೀತನಂ ಕೃಷ್ಣದರ್ಶನದ ಕಾಲಮೊದಗಿರಲಿತ್ತಲು ||
ಇತರಧರ್ಮದ ವೇಳೆ ಗಡ ತನಗೆ ಕರೆ ಪುರೋ | ಹಿತ ಶಂಖ ಲಿಖಿತರಂ ಬೆಸಗೊಳ್ವೆನಿದಕೆ ನಿ | ಷ್ಕೃತಿಯನೆನಲರಸಾಜ್ಞೆಯೊಳವರ ಪೊರೆಗೆ ಚರರೈತಂದದಂ ಪೇಳ್ದರು ||29|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸತಿ ಸಂತತಿಗೆ ಬಯಸಿ ದಿನಗಳೆದುದು ಇನ್ನಿಲ್ಲ ಋತುಸಮಯಮೆಂದು ಎನಗೆ ಪೇಳ್ದೊಡೆ ಅಲ್ಲಿರ್ದೆನು ಎನೆ=[ಪತ್ನಿಯು ಸಂತತಿಗಾಗಿ ಬಯಸಿ ತನಗೆ ದಿನಕಳೆದು (ಇದು ಸಮಯ ಬಿಟ್ಟರೆ) ಇನ್ನಿಲ್ಲ ಋತುಸಮಯಮು ಇನ್ನಿಲ್ಲ ಎಂದು ತನಗೆ ಹೇಳಿದಾಗ ಅಲ್ಲಿದ್ದೆನು ಎನ್ನಲು]; ಕೃತಕಮಿದು ನೂಕು ಈತನಂ ಕೃಷ್ಣದರ್ಶನದ ಕಾಲಂ ಒದಗಿರಲು ಇತ್ತಲು ಇತರಧರ್ಮದ ವೇಳೆ ಗಡ ತನಗೆ=[ಕೃತಕದ ಮಾತು ಕಲ್ಪಿತ ಮಾತು ಇದು, ಈತನನ್ನು ಆಚೆ ತಳ್ಳಿ; ಕೃಷ್ಣದರ್ಶನದ ಕಾಲವು ಬಂದಿರುವಾಗ, ತನಗೆ ಇತರ ಧರ್ಮದಮಾತನಾಡುವ ವೇಳೆ ಗಡ ]; ಕರೆ ಪುರೋಹಿತ ಶಂಖ ಲಿಖಿತರಂ ಬೆಸಗೊಳ್ವೆನು ಇದಕೆ ನಿಷ್ಕೃತಿಯನು ಎನಲು=[ಕರೆದುತಾ, ಪುರೋಹಿತ ಶಂಖ ಲಿಖಿತರನ್ನು, ಇದಕ್ಕೆ ಪರಿಹಾರವನ್ನು ಅವರಲ್ಲಿ ಕೇಳುವೆನು,ಎನ್ನಲು]; ಅರಸಾಜ್ಞೆಯೊಳ್ ಅವರ ಪೊರೆಗೆ ಚರರು ಐತಂದು ಅದಂ ಪೇಳ್ದರು=[ಅರಸನ ಆಜ್ಞೆಯಂತೆ ಅವರ ಕಡೆಗೆ ದೂತರು ಬಂದು ಅದನ್ನು ಹೇಳಿದರು].
  • ತಾತ್ಪರ್ಯ: ಸುಧನ್ವನು ಹೇಳಿದನು, ಪತ್ನಿಯು ಸಂತತಿಗಾಗಿ ಬಯಸಿ ತನಗೆ ದಿನಕಳೆದು (ಇದು ಸಮಯ ಬಿಟ್ಟರೆ) ಋತು ಸಮಯಮು ಇನ್ನಿಲ್ಲ ಎಂದು ತನಗೆ ಹೇಳಿದಾಗ ಅಲ್ಲಿದ್ದೆನು ಎನ್ನಲು; ಕೃತಕದ ಮಾತು, ಕಲ್ಪಿತ ಮಾತು ಇದು, ಈತನನ್ನು ಆಚೆ ತಳ್ಳಿ; ಕೃಷ್ಣದರ್ಶನದ ಕಾಲವು ಬಂದಿರುವಾಗ, ತನಗೆ ಇತರ ಧರ್ಮದ ಮಾತನಾಡುವ ವೇಳೆ ಗಡ; ಕರೆದುತಾ, ಪುರೋಹಿತ ಶಂಖ ಲಿಖಿತರನ್ನು, ಇದಕ್ಕೆ ಪರಿಹಾರವನ್ನು ಅವರಲ್ಲಿ ಕೇಳುವೆನು,ಎನ್ನಲು; ಅರಸನ ಆಜ್ಞೆಯಂತೆ ಅವರ ಕಡೆಗೆ ದೂತರು ಬಂದು ಅದನ್ನು ಹೇಳಿದರು.
  • (ಪದ್ಯ- ೨೯)

ಪದ್ಯ :-:೩೦:[ಸಂಪಾದಿಸಿ]

ಆ ಚರರ ನುಡಿಗೇಳ್ದು ಶಂಖಲಿಖೀತರ್ ಬಂದು | ವಾಚಿಸಿಡರೆಲೆ ಹಂಸಕೇತು ನೀನೇನನಾ | ಳೋಚಿಸುವೆ ನಿನ್ನ ತನಯನ ಮೇಳಣಾಶೆಯಿಂ ಭಾಷೆದಪ್ಪಿದೆಯಾದೊಡೆ ||
ಈ ಚಂಪಕಾಪುರದೊಳಿಹುದಿಲ್ಲ ನಾವು ಸ | ತ್ಯಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ | ಭೂಚಕ್ರಪಾಲರಾತ್ಮಜರ ಮೊಗನೋಡಿದರೆ ಹೇಳೆಂದು ನುಡಿದರವರು ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಚರರ ನುಡಿ ಕೇಳ್ದು ಶಂಖಲಿಖೀತರ್ ಬಂದು ವಾಚಿಸಿದರು=[ಆ ಚಾರರ ಮಾತನ್ನು ಕೇಳಿ ಶಂಖಲಿಖೀತರು ಬಂದು ಹೇಳಿದರು]; ಎಲೆ ಹಂಸಕೇತು ನೀನೇನನು ಆಳೋಚಿಸುವೆ ನಿನ್ನ ತನಯನ ಮೇಳಣ ಆಶೆಯಿಂ ಭಾಷೆದಪ್ಪಿದೆಯಾದೊಡೆ ಈ ಚಂಪಕಾಪುರದೊಳು ಇಹುದಿಲ್ಲ ನಾವು =[ಎಲೆ ಹಂಸಕೇತು ನೀನೇನನ್ನು ಆಲೋಚಿಸುವೆ? ನಿನ್ನ ಮಗನ ಮೇಲಿನ ಆಶೆಯಿಂದ ಭಾಷೆ ತಪ್ಪಿದ್ದಾದರೆ ಈ ಚಂಪಕಾಪುರದಲ್ಲಿ ನಾವು ಇರುವುದಿಲ್ಲ.]; ಸತ್ಯಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ ಭೂಚಕ್ರಪಾಲರ ಆತ್ಮಜರ ಮೊಗ ನೋಡಿದರೆ ಹೇಳೆಂದು ನುಡಿದರವರು=[ಸತ್ಯಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ ಭೂಚಕ್ರಪಾಲರು ಧರ್ಮದಂತೆ ನಡೆಯಲು, ತಮ್ಮ ಮಕ್ಕಳಮುಖ ನೋಡಿ ಧರ್ಮ ಬಿಟ್ಟರೆ? ಹೇಳೆಂದು ಅವರು ನುಡಿದರು].
  • ತಾತ್ಪರ್ಯ:ಆ ಚಾರರ ಮಾತನ್ನು ಕೇಳಿ ಶಂಖಲಿಖೀತರು ಬಂದು ಹೇಳಿದರು; ಎಲೆ ಹಂಸಕೇತು ನೀನೇನನ್ನು ಆಲೋಚಿಸುವೆ? ನಿನ್ನ ಮಗನ ಮೇಲಿನ ಆಶೆಯಿಂದ ಭಾಷೆ ತಪ್ಪಿದ್ದಾದರೆ ಈ ಚಂಪಕಾಪುರದಲ್ಲಿ ನಾವು ಇರುವುದಿಲ್ಲ. ಸತ್ಯಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ ಭೂಚಕ್ರಪಾಲರು ಧರ್ಮದಂತೆ ನಡೆಯಲು, ತಮ್ಮ ಮಕ್ಕಳಮುಖ ನೋಡಿ ಧರ್ಮ ಬಿಟ್ಟರೆ? ಹೇಳೆಂದು ಅವರು ನುಡಿದರು].
  • (ಪದ್ಯ- ೩೦)

ಪದ್ಯ :-:೩೧:[ಸಂಪಾದಿಸಿ]

ಬಳಿಕರಸನಾ ಸುಮತಿಯಂ ಕರೆದು ಪೇಳ್ದನೀ | ಖಳನಂ ಕಟಾಹ ಪೂರಿತ ತಪ್ತತೈಲದೊಳ್ | ಮುಳುಗಿಸೆನಲವನೊಡೆಯನಾಜ್ಞೆಯಂ ಮೀರದಾತನ ಕೈಗಳಂ ಕಟ್ಟಿಸಿ ||
ತಳಪಳನೆ ಕುದೆವೆಣ್ಣೆಗೊಪ್ಪರಿಗೆ ಕಾಯ್ವಲ್ಲಿ | ಗೆಳತರಿಸಿ ಮತ್ತೆ ಪೊತ್ತುವೊಲುರಿವ ಪೆರ್ಗೊರಡು | ಗಳನಿಡಿಸಿ ಕಳಕಳಿಸುತಿಹ ಸುಧನ್ವಂಗೆ ಮರುಗತೆ ಸಚಿವನಿಂತೆಂದನು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಅರಸನು ಆ ಸುಮತಿಯಂ ಕರೆದು ಪೇಳ್ದನು ಈ ಖಳನಂ ಕಟಾಹ ಪೂರಿತ ತಪ್ತತೈಲದೊಳ್ ಮುಳುಗಿಸು ಎನಲು=[ಬಳಿಕ ಅರಸನು ಆ ಸುಮತಿಯನ್ನು ಕರೆದು ಹೇಳಿದನು, ಈ ಖಳನನ್ನು ಕೊಪ್ಪರಿಗೆಯಲ್ಲಿ ತುಂಬಿದ ಕುದಿಯುವ ಎಣ್ಣೆಯಲ್ಲಿ ಮುಳುಗಿಸು ಎನ್ನಲು]; ಅವನು ಒಡೆಯನ ಆಜ್ಞೆಯಂ ಮೀರದೆ ಆತನ ಕೈಗಳಂ ಕಟ್ಟಿಸಿ ತಳಪಳನೆ ಕುದೆವ ಎಣ್ಣೆಗೊಪ್ಪರಿಗೆ ಕಾಯ್ವಲ್ಲಿಗೆ ಎಳತರಿಸಿ=[ಅವನು ರಾಜನ ಆಜ್ಞೆಯಯನ್ನು ಮೀರದೆ ಆತನ ಕೈಗಳನ್ನು ಕಟ್ಟಿಸಿ ತಳಪಳನೆ ಕುದಿಯುವ ಎಣ್ಣೆಗೊಪ್ಪರಿಗೆ ಕಾಯುವ ಬಳಿ ಎಳತರಿಸಿ]; ಮತ್ತೆ ಪೊತ್ತುವೊಲುರಿವ ಪೆರ್ಗೊರಡುಗಳನಿಡಿಸಿ ಕಳಕಳಿಸುತಿಹ ಸುಧನ್ವಂಗೆ ಮರುಗತೆ ಸಚಿವನಿಂತೆಂದನು=[ಮತ್ತೆ ಬೆಂಕಿ ಹತ್ತುವಂತೆ ಉರಿವ ದೊಡ್ಡ ಕೊರಡುಗಳನ್ನು ಇಡಿಸಿ, ಶೋಭಿಸುತ್ತಿರುವ ಸುಧನ್ವನಿಗೆ ಮರುಗತ್ತಾ ಸಚಿವನು ಹೀಗೆ ಹೇಳಿದನು.].
  • ತಾತ್ಪರ್ಯ:ಬಳಿಕ ಅರಸನು ಆ ಸುಮತಿಯನ್ನು ಕರೆದು ಹೇಳಿದನು, ಈ ಖಳನನ್ನು ಕೊಪ್ಪರಿಗೆಯಲ್ಲಿ ತುಂಬಿದ ಕುದಿಯುವ ಎಣ್ಣೆಯಲ್ಲಿ ಮುಳುಗಿಸು ಎನ್ನಲು, ಅವನು ರಾಜನ ಆಜ್ಞೆಯಯನ್ನು ಮೀರದೆ ಆತನ ಕೈಗಳನ್ನು ಕಟ್ಟಿಸಿ ತಳಪಳನೆ ಕುದಿಯುವ ಎಣ್ಣೆಗೊಪ್ಪರಿಗೆ ಕಾಯುವ ಬಳಿ ಎಳತರಿಸಿ; ಮತ್ತೆ ಬೆಂಕಿ ಹತ್ತುವಂತೆ ಉರಿವ ದೊಡ್ಡ ಕೊರಡುಗಳನ್ನು ಇಡಿಸಿ, ಶೋಭಿಸುತ್ತಿರುವ ಸುಧನ್ವನಿಗೆ ಮರುಗತ್ತಾ ಸಚಿವನು ಹೀಗೆ ಹೇಳಿದನು.
  • (ಪದ್ಯ- ೩೧)

ಪದ್ಯ :-:೩೨:[ಸಂಪಾದಿಸಿ]

ತಾತ ನಿನಗಿಂತಾಗಬಹುದೆ ಲೋಕೈಕ ವಿ | ಖ್ಯಾತನಬಿಮಾನಿ ಹರಿಸೇವಕಂ ನುಂದರಂ | ಮಾತಾಪಿತೃಪ್ರಿಯಂ ಕೋವಿದಂ ಕೋಮಲಂ ಸುಖಿ ಸಕಲಸಜ್ಜನಸಖಂ ||
ನೀತಿವಿದನಾಚಾರಸಂಪನ್ನನುತ್ತಮಂ | ದಾತನೆಂಬಿನಿಸು ಗುಣಮುಳ್ಳ ಕುವರಂ ನಿನ್ನ | ನೀತಪ್ತ ತೈಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾತ ನಿನಗೆ ಇಂತು ಆಗಬಹುದೆ ಲೋಕೈಕ ವಿಖ್ಯಾತನು ಅಬಿಮಾನಿ ಹರಿಸೇವಕಂ ನುಂದರಂ ಮಾತಾಪಿತೃಪ್ರಿಯಂ ಕೋವಿದಂ ಕೋಮಲಂ ಸುಖಿ ಸಕಲಸಜ್ಜನಸಖಂ=[ಅಯ್ಯಾ! ನಿನಗೆ ಈ ರೀತಿ ಆಗಬಹುದೆ! ನೀನು ಲೋಕೈಕ ಪ್ರಖ್ಯಾತನು; ಅಬಿಮಾನಿ, ಹರಿಭಕ್ತನು, ನುಂದರನು, ಮಾತಾಪಿತೃಗಳಿಗೆ ಪ್ರಿಯನಾದವನು, ಶಾಸ್ತ್ರ ತಿಳಿದವನು, ಕೋಮಲನು, ಸುಖಿಯಾದವನು, ಸಕಲಸಜ್ಜನರ ಸ್ನೇಹಿತನು,]; ನೀತಿವಿದನು ಆಚಾರಸಂಪನ್ನಸು ಉತ್ತಮಂ ದಾತನೆಂಬ ಇನಿಸು ಗುಣಮುಳ್ಳ ಕುವರಂ ನಿನ್ನ ನೀತಪ್ತ ತೈಲದೊಳಗೆ ಎಂತಕಟ ಬೀಳಿಸುವೆನೆಂದೊಡೆ ಅವನು ಇಂತೆಂದನು=[ನೀತಿ ಶಾಸ್ತ್ರ ತಿಳಿದ ಸಂಪನ್ನನು, ಆಚಾರಸಂಪನ್ನನು, ಉತ್ತಮನು, ದಾತನು ಹೀಗೆ ಇಷ್ಟೊಂದು ಗುಣಶೀಲನಾದ ಮಗ ನಿನ್ನನ್ನು ಈ ಕುದಿಯುವ ಎಣ್ಣೆಯೊಳಗೆ ಹೇಗೆ ಅಕಟಾ! ಹಾಕಲಿ ಎಂದಾಗ ಸುಧನ್ವನು ಹೀಗೆ ಹೇಳಿದನು.]
  • ತಾತ್ಪರ್ಯ:ಅಯ್ಯಾ! ನಿನಗೆ ಈ ರೀತಿ ಆಗಬಹುದೆ! ನೀನು ಲೋಕೈಕ ಪ್ರಖ್ಯಾತನು; ಅಬಿಮಾನಿ, ಹರಿಭಕ್ತನು, ನುಂದರನು, ಮಾತಾಪಿತೃಗಳಿಗೆ ಪ್ರಿಯನಾದವನು, ಶಾಸ್ತ್ರ ತಿಳಿದವನು, ಕೋಮಲನು, ಸುಖಿಯಾದವನು, ಸಕಲಸಜ್ಜನರ ಸ್ನೇಹಿತನು; ನೀನು ನೀತಿ ಶಾಸ್ತ್ರ ತಿಳಿದ ಸಂಪನ್ನನು, ಆಚಾರಸಂಪನ್ನನು, ಉತ್ತಮನು, ದಾತನು ಹೀಗೆ ಇಷ್ಟೊಂದು ಗುಣಶೀಲನಾದ ಮಗ ನಿನ್ನನ್ನು ಈ ಕುದಿಯುವ ಎಣ್ಣೆಯೊಳಗೆ ಹೇಗೆ ಅಕಟಾ! ಹಾಕಲಿ ಎಂದಾಗ ಸುಧನ್ವನು ಹೀಗೆ ಹೇಳಿದನು.
  • (ಪದ್ಯ- ೩೨)

ಪದ್ಯ :-:೩೩:[ಸಂಪಾದಿಸಿ]

ಅಂಜಬೇಡೆಲೆ ಸುಮತಿ ನೀನೀಗಳಿದಕೆ ಮನ | ಮಂ ಜರಿವಿಡುವನಲ್ಲ ತಾನಿನ್ನೆಗಂ ಧರ್ಮ | ಮಂ ಜಡಿದು ನಡೆದುದಿಲ್ಲಾಹವದೊಳ ಹಿತರೊಳ್ ಪೊಯ್ದಾಡಿ ಮಡಿವೊಡಲಿದು ||
ಜಂಜಡದೊಳಳಿವುದೆಂಬೊಂದು ಭಯಮಿಹುದಾದೊ | ಡಂ ಜನಾರ್ದನನಂ ಶರಣ್ಬುಗುವೆನಳುಕದೆ | ನ್ನಂ ಜನಕನಾಜ್ಞೆದಪ್ಪದೆ ಹಾಯ್ಕಿಸನಲವಂ ತೆಗೆದೆತ್ತಿ ಬಿಸುಡಿಸಿದನು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಂಜಬೇಡ ಎಲೆ ಸುಮತಿ ನೀನೀಗಳಿದಕೆ ಮನಮಂ ಜರಿವಿಡುವನಲ್ಲ ತಾನಿನ್ನೆಗಂ ಧರ್ಮಮಂ ಜಡಿದು ನಡೆದುದಿಲ್ಲ=[ ಎಲೆ ಸುಮತಿ,ನೀನು ಈಗ ಇದಕ್ಕೆ ಅಂಜಬೇಡ! ತಾನು ಮನಸ್ಸನ್ನು ಕುಸಿಯಲು ಬಿಡುವವನಲ್ಲ; ತಾನು ಇಷ್ಟರವರೆಗೆ ಧರ್ಮವನ್ನು ಬಿಟ್ಟು ನಡೆದಿಲ್ಲ]; ಆಹವದೊಳು ಅಹಿತರೊಳ್ ಪೊಯ್ದಾಡಿ ಮಡಿವ ಒಡಲು ಇದು ಜಂಜಡದೊಳ್ ಅಳಿವುದೆಂಬ ಒಂದು ಭಯಮಿಹುದು=[ಯುದ್ಧದಲ್ಲಿ ಶತ್ರುಗಳೊಡನೆ ಹೋರಾಡಿ ಸಾಯುವ ದೇಹ ಇದು! ತೊಂದರೆಯಲ್ಲಿ ಸಿಲುಕಿ ಅದರಲ್ಲಿ ಸಾಯುವದಲ್ಲಾ ಎಂಬ ಒಂದು ಚಿಂತೆಯಿದೆ.]; ಆದೊಡಂ ಜನಾರ್ದನನಂ ಶರಣು ಒಗುನೆನು ಅಳುಕದೆ ಎನ್ನಂ ಜನಕನಾಜ್ಞೆ ತಪ್ಪದೆ ಹಾಯ್ಕಿಸು ಎನಲ್ ಅವಂ ತೆಗೆದು ಎತ್ತಿ ಬಿಸುಡಿಸಿದನು=[ಆದರೂ ಜನಾರ್ದನನ್ನು ಶರಣುಹೋಗುವೆನು ಅಳುಕದೆ ನನ್ನನ್ನು ತಂದೆಯ ಆಜ್ಞೆಯಂತೆ ತೈಲ ಕೊಪ್ಪರಿಗೆಯಲ್ಲಿ ತಪ್ಪದೆ ಹಾಕಿಸು, ಎನಲು ಅವನು/ಮಂತ್ರಿಯು ಸುಧನ್ವನನ್ನು ತೆಗೆದು ಎತ್ತಿ ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಹಾಕಿಸಿದನು].
  • ತಾತ್ಪರ್ಯ:ಎಲೆ ಸುಮತಿ,ನೀನು ಈಗ ಇದಕ್ಕೆ ಅಂಜಬೇಡ! ತಾನು ಮನಸ್ಸನ್ನು ಕುಸಿಯಲು ಬಿಡುವವನಲ್ಲ; ತಾನು ಇಷ್ಟರವರೆಗೆ ಧರ್ಮವನ್ನು ಬಿಟ್ಟು ನಡೆದಿಲ್ಲ; ಯುದ್ಧದಲ್ಲಿ ಶತ್ರುಗಳೊಡನೆ ಹೋರಾಡಿ ಸಾಯುವ ದೇಹ ಇದು! ತೊಂದರೆಯಲ್ಲಿ ಸಿಲುಕಿ ಇದರಲ್ಲಿ ಸಾಯುವದಲ್ಲಾ ಎಂಬ ಒಂದು ಚಿಂತೆಯಿದೆ; ಆದರೂ ಜನಾರ್ದನನ್ನು ಶರಣುಹೋಗುವೆನು. ಅಳುಕದೆ ನನ್ನನ್ನು ತಂದೆಯ ಆಜ್ಞೆಯಂತೆ ತೈಲ ಕೊಪ್ಪರಿಗೆಯಲ್ಲಿ ತಪ್ಪದೆ ಹಾಕಿಸು ಎನ್ನಲು, ಅವನು/ಮಂತ್ರಿಯು ಸುಧನ್ವನನ್ನು ತೆಗೆದು ಎತ್ತಿ ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಹಾಕಿಸಿದನು].
  • (ಪದ್ಯ- ೩೩)

ಪದ್ಯ :-:೩೪:[ಸಂಪಾದಿಸಿ]

ಭೋ ಯೆಂದುದಖಿಳ ಪರಿವಾರ ಮಡಿಗಡಿಗೆ ಹಾ | ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ | ತಾ ಯೆಂದು ಪೊರುಳ್ದುದೊಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು ||
ವಾಯಕಿಂತಕಟ ಸುಕುಮಾಶನಂ ಕೊಂದನೀ | ರಾಯನರಿವಂ ನೆರೆ ಸುಡಲಿ ಶಂಖಲಿಖಿತರೆಂ | ಬೀ ಯಮೋಪಮರೇಕೆ ಜನಿಸಿದರೊ ಭೂಸುರರೊಳೆಂದು ಮೊರೆಯಿಡುತಿರ್ದುದು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೋ ಯೆಂದುದು ಅಖಿಳ ಪರಿವಾರ ಮಡಿಗಡಿಗೆ ಹಾ ಹಾ ಯೆಂದು ಮರುಗಿದುದು ನೀನಿಂತು ಅಳಿವರೆ ತಾ ತಾ ಯೆಂದು ಪೊರುಳ್ದುದು=[ಸುಧನ್ವನನ್ನು ಬಿಸಿ ಎಣ್ಣೆಕೊಪ್ಪರಿಗೆಗೆ ಎಸೆದಾಗ, ಎಲ್ಲಾ ಪರಿವಾರದವರೂ ಭೋಎಂದು ಕೂಗಿಕೊಂಡರು; ಮತ್ತೆ ಮತ್ತೆ - ಅಡಿಗಡಿಗೆ ಹಾ ಹಾ ಯೆಂದು ಮರುಗಿದರು; ನೀನು ಹೀಗೆ ಸತ್ತರೆ ತಾ/ಅಯ್ಯೊ, ತಾ/ಅಯ್ಯೊ ಎಂದು ಹೊರಳಾಡಿದರು.]; ಒಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು ವಾಯಕೆ (ಅಲ್ಪಕಾರಣಕ್ಕೆ) ಇಂತು ಅಕಟ ಸುಕುಮಾರನಂ ಕೊಂದನು=[ಪ್ರಭುತ್ವಕ್ಕೆ ಬೇಸರಿಸಿ ಸತ್ತಾಯೆಂದು ಮೂರ್ಛೆಹೋದರು; ಅಲ್ಪಕಾರಣಕ್ಕೆ ಈ ಶಿಕ್ಷೆಯೇ! ಅಕಟ! ಪ್ರಾಯದ ಮಗನನ್ನು ಕೊಂದನು.]; ಈ ರಾಯನು ಅರಿವಂ ನೆರೆ ಸುಡಲಿ ಶಂಖಲಿಖಿತರೆಂಬೀ ಯಮೋಪಮರೇಕೆ ಜನಿಸಿದರೊ ಭೂಸುರರೊಳೆಂದು ಮೊರೆಯಿಡುತಿರ್ದುದು=[ಈ ರಾಜನ ಜ್ಞಾನವನ್ನು ಪೂರಾ ಸುಡಲಿ! ಶಂಖಲಿಖಿತರೆಂಬ ಈ ಯಮನಂತಹವರು ಬ್ರಾಹ್ಮಣರಾಗಿ ಯಾಕೆ ಹುಟ್ಟಿದರೋ ಎಂದು ದುಃಖಿಸುತ್ತದ್ದರು.]
  • ತಾತ್ಪರ್ಯ:ಸುಧನ್ವನನ್ನು ಬಿಸಿ ಎಣ್ಣೆಕೊಪ್ಪರಿಗೆಗೆ ಎಸೆದಾಗ, ಎಲ್ಲಾ ಪರಿವಾರದವರೂ ಭೋಎಂದು ಕೂಗಿಕೊಂಡರು; ಮತ್ತೆ ಮತ್ತೆ - ಅಡಿಗಡಿಗೆ ಹಾ ಹಾ ಯೆಂದು ಮರುಗಿದರು; ನೀನು ಹೀಗೆ ಸತ್ತೆಯಾ ತಾ/ಅಯ್ಯೊ, ತಾ/ಅಯ್ಯೊ ಎಂದು ಹೊರಳಾಡಿದರು.]; ಪ್ರಭುತ್ವಕ್ಕೆ ಬೇಸರಿಸಿ ಸತ್ತಾಯೆಂದು ಮೂರ್ಛೆಹೋದರು; ಅಲ್ಪಕಾರಣಕ್ಕೆ ಈ ಶಿಕ್ಷೆಯೇ! ಅಕಟ! ಪ್ರಾಯದ ಮಗನನ್ನು ಕೊಂದನು. ಈ ರಾಜನ ಜ್ಞಾನವನ್ನು ಪೂರಾ ಸುಡಲಿ! ಶಂಖಲಿಖಿತರೆಂಬ ಈ ಯಮನಂತಹವರು ಬ್ರಾಹ್ಮಣರಾಗಿ ಯಾಕೆ ಹುಟ್ಟಿದರೋ ಎಂದು ದುಃಖಿಸುತ್ತಿದ್ದರು.]
  • (ಪದ್ಯ- ೩೪)

ಪದ್ಯ :-:೩೫:[ಸಂಪಾದಿಸಿ]

ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದ್ರುಪದ | ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ | ಬಂದೆಡರನಾವಗಂ ಪರಿಹರಿಪೆ ಗಡ ದೇವ ನಿನ್ನಂ ಪೆಸರ್ಗೊಂಡೊಡೆ ||
ಇಂದು ಮೊರೆವೊಗುವೊಡಾರಂ ಕಾಣೆನಕಟ ಗೋ | ವಿಂದ ನೀನಲ್ಲದೆವಿಚಾರಿಸುವರಿಲ್ಲ ಸಲ | ಹೆಂದವಂ ಚಿತ್ತದೊಳ್ ಕೃಷ್ಣನಂ ಧ್ಯಾನಿಸುತೆ ನಿರ್ಭಯದೊಳಿರುತಿರ್ದನು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದ್ರುಪದ ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ ಬಂದೆಡರನು ಆವಗಂ ಪರಿಹರಿಪೆ ಗಡ ದೇವ ನಿನ್ನಂ ಪೆಸರ್ಗೊಂಡೊಡೆ=['ಹಿಂದೆ ಪ್ರಹ್ಲಾದನನ್ನು ಕಾಪಾಡಿದೆ ಗಡ! ದ್ರುಪದ ನಂದನೆಯಾದ ದ್ರೌಪದಿಯ ಮಾನವನ್ನು ಕಾದೆ ಗಡ! ಭಕ್ತರಿಗೆ ಬಂದ ಕಷ್ಟವನ್ನು ಯಾವಾಗಲೂ,ಪರಿಹರಿಸುವೆ ಗಡ! ದೇವ ನಿನ್ನ ಹೆಸರು ಹೇಳಿದಾಗ ಇವರನ್ನು ಕಾಪಾಡಿದೆ.']; ಇಂದು ಮೊರೆವೊಗುವೊಡಾರಂ ಕಾಣೆನಕಟ ಗೋವಿಂದ ನೀನಲ್ಲದೆವಿಚಾರಿಸುವರಿಲ್ಲ ಸಲಹೆಂದವಂ ಚಿತ್ತದೊಳ್ ಕೃಷ್ಣನಂ ಧ್ಯಾನಿಸುತೆ ನಿರ್ಭಯದೊಳಿರುತಿರ್ದನು=['ಇಂದು ಮೊರೆಹೊಗಲು ಯಾರನ್ನೂ ಕಾಣೆನು ಅಕಟ ಗೋವಿಂದ! ನೀನಲ್ಲದೆ ವಿಚಾರಿಸುವವರಿಲ್ಲ ಸಲಹು ಎಂದು' ಅವನು ಮನಸ್ಸಿನಲ್ಲಿ ಕೃಷ್ಣನನ್ನು ಧ್ಯಾನಿಸುತ್ತಾ ನಿರ್ಭಯದಿಂದ ಇದ್ದನು.]
  • ತಾತ್ಪರ್ಯ: 'ಹಿಂದೆ ಪ್ರಹ್ಲಾದನನ್ನು ಕಾಪಾಡಿದೆ ಗಡ! ದ್ರುಪದ ನಂದನೆಯಾದ ದ್ರೌಪದಿಯ ಮಾನವನ್ನು ಕಾದೆ ಗಡ! ಭಕ್ತರಿಗೆ ಬಂದ ಕಷ್ಟವನ್ನು ಯಾವಾಗಲೂ,ಪರಿಹರಿಸುವೆ ಗಡ! ದೇವ ನಿನ್ನ ಹೆಸರು ಹೇಳಿದಾಗ ಇವರನ್ನು ಕಾಪಾಡಿದೆ.ಇಂದು ಮೊರೆಹೊಗಲು ಯಾರನ್ನೂ ಕಾಣೆನು ಅಕಟ ಗೋವಿಂದ! ನೀನಲ್ಲದೆ ವಿಚಾರಿಸುವವರಿಲ್ಲ ಸಲಹು ಎಂದು' ಅವನು ಮನಸ್ಸಿನಲ್ಲಿ ಕೃಷ್ಣನನ್ನು ಧ್ಯಾನಿಸುತ್ತಾ ನಿರ್ಭಯದಿಂದ ಇದ್ದನು.
  • (ಪದ್ಯ- ೩೫)

ಪದ್ಯ :-:೩೬:[ಸಂಪಾದಿಸಿ]

ಜಯಜಯ ಜನಾರ್ದನ ಮುಕುಂದ ಮುರಮರ್ದನ ವಿ | ಜಯಮಿತ್ರ ಗೋವಿಂದ ಪಕ್ಷಿವಾಹನ ಕಮಲ | ನಯನ ಪೀತಾಂಭರ ಘನಶ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ ||
ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾ | ಲಯಧೇನು ಭಕ್ತವತ್ಸಲ ಕೃಪಾಕರ ಮಹಾ | ಭಯನಿವಾರಣ ನೃಸಿಂಹ ತ್ರಾಹಿಯೆನುತಿರ್ದನಾ ಸುಧನ್ವಂ ಮರೆಯದೆ ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಕುದಿಯುತ್ತಿದ್ದ ಎಣ್ಣಯಲ್ಲಿ ಹಾಕಿದಾಗ, "ಜಯಜಯ ಜನಾರ್ದನ ಮುಕುಂದ ಮುರಮರ್ದನ ವಿಜಯಮಿತ್ರ ಗೋವಿಂದ ಪಕ್ಷಿವಾಹನ ಕಮಲನಯನ ಪೀತಾಂಭರ ಘನಶ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾಲಯಧೇನು /ನತರಿಗೆ =ಶರಣಾಗತರಿಗೆ, ಸುರಾಲಯದ=ಸ್ವರ್ಗಲ್ಲಿರುವ, ಧೇನು= ಕೇಳಿದ್ದನ್ನುಕೊಡುವ ಧೆನುವಿದ್ದಂತೆ; ಭಕ್ತವತ್ಸಲ ಕೃಪಾಕರ ಮಹಾ ಭಯನಿವಾರಣ ನೃಸಿಂಹ ತ್ರಾಹಿ =ಕಾಪಾಡು" ಎಂದು ಆ ಸುಧನ್ವನು ಮರೆಯದೆ ಎನ್ನುತ್ತಿದ್ದನು'
  • ತಾತ್ಪರ್ಯ: ಆ ಕುದಿಯುತ್ತಿದ್ದ ಎಣ್ಣಯಲ್ಲಿ ಹಾಕಿದಾಗ, "ಜಯಜಯ ಜನಾರ್ದನ! ಮುಕುಂದ! ಮುರಮರ್ದನ! ವಿಜಯಮಿತ್ರ! ಗೋವಿಂದ! ಪಕ್ಷಿವಾಹನ! ಕಮಲನಯನ! ಪೀತಾಂಭರ ಘನಶ್ಯಾಮ! ಹರಿ! ಕೃಷ್ಣ! ವೈಕುಂಠ! ನಾರಾಯಣ! ಕ್ಷಯರಹಿತ (ನಾಶವಿಲ್ಲದವನು)! ರಾಮ! ಲಕ್ಷ್ಮೀರಮಣ! ಶರಣಾಗತರಿಗೆ ಸ್ವರ್ಗಲ್ಲಿರುವ ಕೇಳಿದ್ದನ್ನು ಕೊಡುವ ಧೇನುವಿಆಗಿರುವವನು! ಭಕ್ತವತ್ಸಲ! ಕೃಪಾಕರ! ಮಹಾ ಭಯನಿವಾರಣ! ನೃಸಿಂಹ! ಕಾಪಾಡು" ಎಂದು ಆ ಸುಧನ್ವನು ಮರೆಯದೆ ಪ್ರಾರ್ಥಿಸುತ್ತಿದ್ದನು.'
  • (ಪದ್ಯ- ೩೬)

ಪದ್ಯ :-:೩೭:[ಸಂಪಾದಿಸಿ]

ಅರಸ ಕೇಳಾಶ್ಚರ್ಯಮಂ ನೋಡಲೆವೆ ಸೀವೊಲುರಿಗೊಂಡು ಕಡುಗಾಯ್ದು ತಳಪಳದೆ ಕುದಿದುಕ್ಕಿ ಮೊರೆವುರು ಕಟಾಹತೈಲಂ ಮೈಗೆ ಸೊಗೆಯಿಸುವ ಬಾವನ್ನದಣ್ಪಾಗಿರೆ ||
ಕೊರಗದಾತನ ರೋಮ ವಡಗದಂಗದ ಸೊಂಪು ಕೊರಳದುಲಸಿಯ ದಂಡೆ ಬಾಡದು ಮುಡಿದ ಪೂಗಳರೆಗಂದವರಳ್ದುದು ಸುಧನ್ವನ ಮುಖಾಂಭುಜಮಿನೋದಯದ ಕಮಲದಂತೆ ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸ ಕೇಳು ಅಶ್ಚರ್ಯಮಂ ನೋಡಲು ಏವೆ ಸೀವೊಲು ಉರಿಗೊಂಡು ಕಡುಗಅಯ್ದು (ಕಡು (ಬಹಳ)ಕಾಯ್ದು) ತಳಪಳದೆ ಕುದಿದುಕ್ಕಿ ಮೊರೆವ ಉರು/ದೊಡ್ಡ ಕಟಾಹತೈಲಂ=[ಅರಸ ಜನಮೇಜಯನೇ ಕೇಳು ಅಶ್ಚರ್ಯವನ್ನು, ಬೆಂಕಿಯನ್ನೂ ಮೇಲೆ ಕುದಿಯುವ ಎಣ್ಣೆಯನ್ನು ನೋಡಿದರೆ ಕಣ್ನಿನ ಎವೆಯೇ ಸೀದುಹೋಗುವಂತೆ ಉರಿಯುತ್ತಿತ್ತು; ಎಣ್ಣೆ ಬಹಳಕಾದು ತಳಪಳ ಎಂದು ಕುದಿದು ಉಕ್ಕಿ ದೊಡ್ಡ ಕೊಪ್ಪರಿಗೆಯ ತೈಲವು ಶಬ್ದಮಾಡುತ್ತಿತ್ತು]; ಮೈಗೆ ಸೊಗೆಯಿಸುವ ಬಾವನ್ನ(ಚಂದನ) ತಣ್ಪಾಗಿರೆ, ಕೊರಗದು(ಕುಂದು) ಆತನ ರೋಮವು ಅಡಗದು ಅಂಗದ ಸೊಂಪು, ಕೊರಳ ತುಲಸಿಯ ದಂಡೆ ಬಾಡದು, ಮುಡಿದ ಪೂಗಳು ಅರೆಗುಂದವು (ಅರೆ+ಕಂದು)=[ಆದರೆ ಸುಧನ್ವನ ಮೈಗೆ ಅದು ಅಲಂಕರಿಸುವ ಚಮದನ ಸವರಿದಂತೆ ತಂಪಾಗಿತ್ತು, ಆತನ ರೋಮಕೂಡಾ ಕುಂದಲಿಲ್ಲ; ದೇಹದ ಸೊಗಸು/ಕಾಂತಿ ಅಡಗಲಿಲ್ಲ; ಕೊರಳ ತುಲಸಿಯ ದಂಡೆ ಬಾಡಲಿಲ್ಲ; ಮುಡಿದ ಹೂವುಗಳು ಅರ್ಧವೂ ಕಂದಲಿಲ್ಲ];ಅರಳ್ದುದು ಸುಧನ್ವನ ಮುಖಾಂಭುಜಂ ಇನೋದಯದ(ಇನ+ಉದಯದ) ಕಮಲದಂತೆ=[ಆದರೆ ಸುಧನ್ವನ ಮುಖಕಮಲವು ಸೂರ್ಯೋದಯಲ್ಲಿ ಅರಳುವ ಕಮಲದಂತೆ ಅರಳಿ ಕಾಂತಿಯುಕ್ತವಾಯಿತು, ].
  • ತಾತ್ಪರ್ಯ: ಅರಸ ಜನಮೇಜಯನೇ ಕೇಳು ಅಶ್ಚರ್ಯವನ್ನು, ಬೆಂಕಿಯನ್ನೂ ಮೇಲೆ ಕುದಿಯುವ ಎಣ್ಣೆಯನ್ನು ನೋಡಿದರೆ ಕಣ್ನಿನ ಎವೆಯೇ ಸೀದುಹೋಗುವಂತೆ ಉರಿಯುತ್ತಿತ್ತು; ಎಣ್ಣೆ ಬಹಳಕಾದು ತಳಪಳ ಎಂದು ಕುದಿದು ಉಕ್ಕಿ ದೊಡ್ಡ ಕೊಪ್ಪರಿಗೆಯ ತೈಲವು ಶಬ್ದಮಾಡುತ್ತಿತ್ತು; ಆದರೆ ಸುಧನ್ವನ ಮೈಗೆ ಅದು ಅಲಂಕಾರಕ್ಕೆ ಪೂಸುವ ಚಂದನವನ್ನು ಸವರಿದಂತೆ ತಂಪಾಗಿತ್ತು, ಆತನ ರೋಮಕೂಡಾ ಕುಂದಲಿಲ್ಲ; ದೇಹದ ಸೊಗಸು/ಕಾಂತಿ ಅಡಗಲಿಲ್ಲ; ಕೊರಳ ತುಲಸಿಯ ದಂಡೆ ಬಾಡಲಿಲ್ಲ; ಮುಡಿದ ಹೂವುಗಳು ಅರ್ಧವೂ ಕಂದಲಿಲ್ಲ; ಆದರೆ ಸುಧನ್ವನ ಮುಖಕಮಲವು ಸೂರ್ಯೋದಯಲ್ಲಿ ಅರಳುವ ಕಮಲದಂತೆ ಅರಳಿ ಕಾಂತಿಯುಕ್ತವಾಯಿತು.
  • (ಪದ್ಯ- ೩೭)

ಪದ್ಯ :-:೩೮:[ಸಂಪಾದಿಸಿ]

ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್| ಪುಂಡರೀಕಾಕ್ಷನಂ ಬಳಿಕ ಲಿಖಿತಂ ಖಾತಿ | ಗೊಂಡಿವಂ ಬಲ್ಲನಗ್ನಿಸ್ತಂಭಮಂ ನಾರಿಕೇಳಂಗಳಂ ತರಿಸೆನೆ ||
ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನಭೋ | ಮಂಡಲವನಪ್ಪಳಿಸೆ ಹೊಡೆದುವು ಪುರೋಹಿತರ | ಗಂಡಸ್ಥಳಂಗಳಂ ಸಿಡಿವೋಳ್ಗಳಾಗಳುಂ ನಗುತಿರ್ದನಾಕುವರನು ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂಡು ಬೆರಗಾದುದು ಎಲ್ಲಾ ಜನಂ ಸ್ತುತಿಸಿದರ್ ಪುಂಡರೀಕಾಕ್ಷನಂ=[ಈ ಅದ್ಭುತವನ್ನು ಕಂಡು ಎಲ್ಲಾ ಜನರೂ ಬೆರಗಾದರು; ಪುಂಡರೀಕಾಕ್ಷನನ್ನು ಸ್ತುತಿಸಿದರು. ]; ಬಳಿಕ ಲಿಖಿತಂ ಖಾತಿ ಗೊಂಡ ಇವಂ ಬಲ್ಲನು ಅಗ್ನಿಸ್ತಂಭಮಂ ನಾರಿಕೇಳಂಗಳಂ ತರಿಸು ಎನೆ=[ಬಳಿಕ ಲಿಖಿತನು, ಸಿಟ್ಟಿನಿಂದ, ಇವನು ಅಗ್ನಿಸ್ತಂಭ ತಂತ್ರವನ್ನು ಬಲ್ಲನು; ನಾರಿಕೇಳ/ ಎಳನೀರುಗಳನ್ನು ತರಿಸು ಎನ್ನಲು]; ಕೊಂಡು ಬಂದ ಎಳನೀರ್ಗಳಂ ಸುರಿಯಲು ಉರಿ ನಭೋ ಮಂಡಲವನು ಅಪ್ಪಳಿಸೆ=[ಅವನ್ನು ತಂದರು, ಹಾಗೆ ತಂದ ಬಂದ ಎಳನೀರುಗಳನ್ನು ಕೊಪ್ಪರಿಗೆಗೆ ಸುರಿಯಲು ಉರಿಯು, ಆಕಾಶದೆತ್ತರಕ್ಕೆ ಎದ್ದು ಅಪ್ಪಳಿಸಿತು.]; ಹೊಡೆದುವು ಪುರೋಹಿತರ ಗಂಡಸ್ಥಳಂಗಳಂ ಸಿಡಿವ ಓಳ್ಗಳು(ಹೋಳುಗಳು) ಆಗಳುಂ ನಗುತಿರ್ದನಾಕುವರನು=[ಸಿಡಿವ ಎಳನೀರ ಹೋಳುಗಳು ಪುರೋಹಿತರ ಕೆನ್ನಗಳಿಗೆ ಮುಖಕ್ಕೆ ಹೊಡೆದುವು ಆಗಲೂ ರಾಜಕುಮಾರನು ನಗುತತಿದ್ದನು. ಅವನಿಗೆ ಏನೂ ಅಪಾಯವಾಗಲಿಲ್ಲ.]
  • ತಾತ್ಪರ್ಯ: ಈ ಅದ್ಭುತವನ್ನು ಕಂಡು ಎಲ್ಲಾ ಜನರೂ ಬೆರಗಾದರು; ಪುಂಡರೀಕಾಕ್ಷನನ್ನು ಸ್ತುತಿಸಿದರು. ಬಳಿಕ ಲಿಖಿತನು, ಸಿಟ್ಟಿನಿಂದ, ಇವನು ಅಗ್ನಿಸ್ತಂಭ ತಂತ್ರವನ್ನು ಬಲ್ಲನು; ನಾರಿಕೇಳ/ ಎಳನೀರುಗಳನ್ನು ತರಿಸು ಎನ್ನಲು; ಅವನ್ನು ತಂದರು, ಹಾಗೆ ತಂದ ಎಳನೀರುಗಳನ್ನು ಕೊಪ್ಪರಿಗೆಗೆ ಸುರಿಯಲು ಉರಿಯು, ಆಕಾಶದೆತ್ತರಕ್ಕೆ ಎದ್ದು ಅಪ್ಪಳಿಸಿತು. ಸಿಡಿವ ಎಳನೀರ ಹೋಳುಗಳು ಪುರೋಹಿತರ ಕೆನ್ನಗಳಿಗೆ ಮುಖಕ್ಕೆ ಹೊಡೆದುವು ಆಗಲೂ ರಾಜಕುಮಾರನು ನಗುತ್ತಿದ್ದನು. ಅವನಿಗೆ ಏನೂ ಅಪಾಯವಾಗಲಿಲ್ಲ.
  • (ಪದ್ಯ- ೩೮)

ಪದ್ಯ :-:೩೯:[ಸಂಪಾದಿಸಿ]

ನಿಶ್ಚಲಹೃದಯನಾಗಿ ವಿಷ್ಣುನಾಮಂಗಳ ಪು | ನಶ್ಚರಣೆಯಂದವಂ ಸುಖದೊಳಿರುತಿರೆ ಕಂಡು | ಪಶ್ಚಾದ್ವಿವೇಕದಿಂದುರೆ ನೊಂದು ಹರಿಕಿಂಕರದ್ರೋಹಮಂ ಮಾಡಿದ ||
ದುಶ್ಚರಿತಕಾವುದುಂ ನಿಷ್ಕೃತಿಗಳಿಲ್ಲೆಂಬ | ನಿಶ್ಚಯದೊಳಾಗ ಮರಣಾಂತವೇ ತನಗೆ ಪ್ರಾ | ಯಶ್ಚಿತ್ತಮೆಂದಾ ಕಟಾಹದೊಳ್ ಕುದಿವೆಣ್ಣೆಯೊಳ್ ಬಿದ್ದನಾ ಲಿಖಿತನು||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿಶ್ಚಲಹೃದಯನಾಗಿ ವಿಷ್ಣುನಾಮಂಗಳ ಪುನಶ್ಚರಣೆಯಿಂದ ಅವಂ ಸುಖದೊಳು ಇರುತಿರೆ ಕಂಡು=[ನಿಶ್ಚಲಹೃದಯನಾಗಿ ವಿಷ್ಣುನಾಮಗಳನ್ನು ಪುನಶ್ಚರಣೆ/ ಹೇಳುತ್ತಿರುವುದರಿಂದ ಪ್ರದ್ಯುಮ್ನನು ಸುಖದಲ್ಲಿ ಇರುವುದನ್ನು ಕಂಡು]; ಪಶ್ಚಾದ್ವಿವೇಕದಿಂದ (ತಪ್ಪುಮಾಡಿದ ನಂತರ ನೊಂದು ಪಶ್ಚಾತ್ತಾಪಡುವುದು) ಉರೆ ನೊಂದು ಹರಿಕಿಂಕರ ದ್ರೋಹಮಂ ಮಾಡಿದ ದುಶ್ಚರಿತಕೆ ಆವುದುಂ ನಿಷ್ಕೃತಿಗಳು ಇಲ್ಲೆಂಬ ನಿಶ್ಚಯದೊಳು=[ತಪ್ಪುಮಾಡಿ ಅದನ್ನು ತಿಳಿದು ಪಶ್ಚಾದ್ವಿವೇಕಹೊಂದಿ ಬಹಳ ನೊಂದು ಹರಿಭಕ್ತನಿಗೆ ದ್ರೋಹವನ್ನು ಮಾಡಿದ ತನ್ನ ದುಷ್ಟ ನಡತೆಗೆ ಯಾವುದೂ ಪರಿಹಾರ ಇಲ್ಲ ಎಂದು ನಿಶ್ಚಯಿಸಿ,]; ಆಗ ಮರಣಾಂತವೇ ತನಗೆ ಪ್ರಾಯಶ್ಚಿತ್ತಮೆಂದ ಆ ಕಟಾಹದೊಳ್ ಕುದಿವೆ ಎಣ್ಣೆಯೊಳ್ ಬಿದ್ದನಾ ಲಿಖಿತನು=[ ಲಿಖಿತನು ಆಗ ತನಗೆ ಮರಣವೇ ಪ್ರಾಯಶ್ಚಿತ್ತವೆಂದು ಆ ಕೊಪ್ಪರಿಗೆಯಲ್ಲಿ ಕುದಿವ ಎಣ್ಣೆಯಲ್ಲಿ ಬಿದ್ದನು].
  • ತಾತ್ಪರ್ಯ: ನಿಶ್ಚಲಹೃದಯನಾಗಿ ವಿಷ್ಣುನಾಮಗಳನ್ನು ಪುನಶ್ಚರಣೆ/ ಹೇಳುತ್ತಿರುವುದರಿಂದ ಸುಧನ್ವನು ಸುಖದಲ್ಲಿ ಇರುವುದನ್ನು ಕಂಡು, ತಪ್ಪುಮಾಡಿ ಅದನ್ನು ತಿಳಿದು ಪಶ್ಚಾದ್ವಿವೇಕಹೊಂದಿ ಬಹಳ ನೊಂದು ಹರಿಭಕ್ತನಿಗೆ ದ್ರೋಹವನ್ನು ಮಾಡಿದ ತನ್ನ ದುಷ್ಟ ನಡತೆಗೆ ಯಾವುದೂ ಪರಿಹಾರ ಇಲ್ಲ ಎಂದು ನಿಶ್ಚಯಿಸಿ, ಲಿಖಿತನು ಆಗ ತನಗೆ ಮರಣವೇ ಪ್ರಾಯಶ್ಚಿತ್ತವೆಂದು ಆ ಕೊಪ್ಪರಿಗೆಯಲ್ಲಿ ಕುದಿವ ಎಣ್ಣೆಯಲ್ಲಿ ಬಿದ್ದನು.
  • (ಪದ್ಯ- ೩೯)

ಪದ್ಯ :-:೪೦:[ಸಂಪಾದಿಸಿ]

ಆ ತಪ್ತತೈಲದ ಕಟಾಹದೆಡೆ ಲಿಖಿತಂಗೆ | ಶೀತಳಸ್ಥಳಮಾದುದಾ ಸುಧನ್ವನ ಸಂಗ | ಮೇತರತಿಶಯಮೊ ಹರಿಭಕ್ತರಂ ಸಾರ್ದಂಗೆ ತಾಪಮಿರ್ದಪುದೆ ಬಳಿಕ ||
ಆತಗಳ್ ಕುದಿವೆಣ್ಣೆಯೊಳ್ ಸುಖದೊಳಿರೆ ಹಂಸ | ಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಂದು | ಪ್ರೀತಿಯಿಂದವರೀರ್ವರಂ ತೆಗೆದು ತಕ್ಕೈಸಿದಂ ಸುತಪುರೋಹಿತರನು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ತಪ್ತತೈಲದ ಕಟಾಹದ ಎಡೆ ಲಿಖಿತಂಗೆ ಶೀತಳಸ್ಥಳಂ ಆದುದ ಆ ಸುಧನ್ವನ ಸಂಗಂ ಏತರ ಅತಿಶಯಮೊ=[ಆ ಕದಿಯುವ ಎಣ್ಣೆಯ ಕೊಪ್ಪರಿಗೆಯ ತಾಣವು ಲಿಖಿತನಿಗೂ ತಂಪು ಸ್ಥಳವಾಗಿತ್ತು; ಅಲ್ಲಿ ಆ ಸುಧನ್ವನ ಸಹವಾಸ ಎಷ್ಟೊಂದು ಅತಿಶಯವೋ ಹೇಳಲು ಆಗದು!]; ಹರಿಭಕ್ತರಂ ಸಾರ್ದಂಗೆ ತಾಪಂ ಇರ್ದಪುದೆ ಬಳಿಕ ಆತಗಳ್ ಕುದಿವೆಣ್ಣೆಯೊಳ್ ಸುಖದೊಳು ಇರೆ=[ಹರಿಭಕ್ತರ ಬಳಿ ಹೋದವನಿಗೆ ತಾಪ ಸಂಕಟ ಇರುವುದೇ - ಇರಲಾರದು! ಬಳಿಕ ಅವರು ಕುದಿವ ಎಣ್ಣೆಯಲ್ಲಿ ಸುಖವಾಗಿ ಇರಲು,]; ಹಂಸಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಂದು ಪ್ರೀತಿಯಿಂದ ಅವರ ಈರ್ವರಂ ತೆಗೆದು ತಕ್ಕೈಸಿದಂ ಸುತ ಪುರೋಹಿತರನು=[ರಾಜ ಹಂಸಕೇತು ಆಶ್ಚರ್ಯಪಟ್ಟು ಮಂತ್ರಿಗಳೊಡನೆ ಬಂದು ಪ್ರೀತಿಯಿಂದ ಮಗ ಮತ್ತು ಪುರೋಹಿತ- ಅವರಿಬ್ಬರನ್ನೂ ಕೊಪ್ಪರಿಗೆಯಿಂದ ತೆಗೆದು ಉಪಚರಿಸಿದನು.]
  • ತಾತ್ಪರ್ಯ: ಆ ಕದಿಯುವ ಎಣ್ಣೆಯ ಕೊಪ್ಪರಿಗೆಯ ತಾಣವು ಲಿಖಿತನಿಗೂ ತಂಪು ಸ್ಥಳವಾಗಿತ್ತು; ಅಲ್ಲಿ ಆ ಸುಧನ್ವನ ಸಹವಾಸ ಎಷ್ಟೊಂದು ಅತಿಶಯವೋ ಹೇಳಲು ಆಗದು! ಹರಿಭಕ್ತರ ಬಳಿ ಹೋದವನಿಗೆ ತಾಪ ಸಂಕಟ ಇರುವುದೇ - ಇರಲಾರದು! ಬಳಿಕ ಅವರು ಕುದಿವ ಎಣ್ಣೆಯಲ್ಲಿ ಸುಖವಾಗಿ ಇರಲು, ರಾಜ ಹಂಸಕೇತು ಆಶ್ಚರ್ಯಪಟ್ಟು ಮಂತ್ರಿಗಳೊಡನೆ ಬಂದು ಪ್ರೀತಿಯಿಂದ ಮಗ ಮತ್ತು ಪುರೋಹಿತ- ಅವರಿಬ್ಬರನ್ನೂ ಕೊಪ್ಪರಿಗೆಯಿಂದ ತೆಗೆದು ಉಪಚರಿಸಿದನು.
  • (ಪದ್ಯ- )

ಪದ್ಯ :-:೪೧:[ಸಂಪಾದಿಸಿ]

ಪನ್ನೀರಮಿಂದು ದಿವ್ಯಾಂಬರವನುಟ್ಟು ಬಾ | ವನ್ನದಿಗುರಂ ಗೈಯ್ದು ಕಮಲರ್ಗಳಂ ಸೂಡಿ | ಸನ್ನುತ ಸುಯಕ್ಷಕರ್ದಮವನನುಕರಿಸಿ ಕತ್ತುರಿತಿಲಕವಿಟ್ಟು ಪಣೆಗೆ ||
ರನ್ನದೊಡವುಗಳನಳವಡಿಸಿ ವೀಳೆಯಗೊಂಡು | ತನ್ನನುಳುಹಿದ ದೇವಪುರದ ಲಕ್ಷ್ಮೀಪತಿಯ | ನಿನ್ನು ಕಂಡಪೆನೆಂಬ ಹರ್ಷದಿಂ ಕಳೆಯೇರಿ ಮೆರೆದಂ ಸುಧನ್ವನಂದು||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪನ್ನೀರಮಿಂದು ದಿವ್ಯಾಂಬರವನುಟ್ಟು ಬಾವನ್ನದಿ ಗುರಂ ಗೈಯ್ದು ಕಮಲರ್ಗಳಂ ಸೂಡಿ ಸನ್ನುತ ಸುಯಕ್ಷಕರ್ದಮವನು ಅನುಕರಿಸಿ ಕತ್ತುರಿತಿಲಕವಿಟ್ಟು ಪಣೆಗೆ=[ಪನ್ನೀರಲ್ಲಿ ಸ್ನಾನಮಾಡಿ ದಿವ್ಯಾಂಬರವನ್ನು ಉಟ್ಟು ಚಂದನವನ್ನು ಹಚ್ಚಿಕೊಂಡು ಹೂವುಗಳನ್ನು ಸೂಡಿಕೊಂಡು ಉತ್ತಮವಾದ ಕಸ್ತೂರಿ ಕುಂಕುಮವನ್ನು ಹಣೆಯಲ್ಲಿ ಧರಿಸಿ,ಕರ್ಪೂರ, ಕಸ್ತೂರಿ, ಅಗರು, ಕಕ್ಕೋಲ ಹಚ್ಚಿಕೊಂಡು]; ರನ್ನದೊಡವುಗಳನು ಅಳವಡಿಸಿ ವೀಳೆಯಗೊಂಡು ತನ್ನನು ಉಳುಹಿದ ದೇವಪುರದ ಲಕ್ಷ್ಮೀಪತಿಯನು ಇನ್ನು ಕಂಡಪೆನೆಂಬ ಹರ್ಷದಿಂ ಕಳೆಯೇರಿ ಮೆರೆದಂ ಸುಧನ್ವನಂದು=[ರತ್ನದ ಒಡವೆಗಳನ್ನು ಹಾಕಿಕೊಂಡು,ವೀಳೆಯಪಡೆದು ಎಂದರೆ ಯುದ್ಧಕ್ಕೆ ಅಪ್ಪಣೆ ಪಡೆದು, ತನ್ನನ್ನು ಕಾಪಾಡಿದ ದೇವಪುರದ ಲಕ್ಷ್ಮೀಪತಿಯನ್ನು ಇನ್ನು ನೋಡುವೆನುನೆಂಬ ಹರ್ಷದಿಂದ ಮುಖದಲ್ಲಿ ಕಾಂತಿಹೊಂದಿ ಅಂದು ಸುಧನ್ವನು ಪ್ರಕಾಸಿಸಿದನು.]
  • ತಾತ್ಪರ್ಯ: ಪನ್ನೀರಲ್ಲಿ ಸ್ನಾನಮಾಡಿ ದಿವ್ಯಾಂಬರವನ್ನು ಉಟ್ಟು ಚಂದನವನ್ನು ಹಚ್ಚಿಕೊಂಡು ಹೂವುಗಳನ್ನು ಸೂಡಿಕೊಂಡು ಉತ್ತಮವಾದ ಕಸ್ತೂರಿ ಕುಂಕುಮವನ್ನು ಹಣೆಯಲ್ಲಿ ಧರಿಸಿ,ಕರ್ಪೂರ, ಕಸ್ತೂರಿ, ಅಗರು, ಕಕ್ಕೋಲ ಹಚ್ಚಿಕೊಂಡು, ರತ್ನದ ಒಡವೆಗಳನ್ನು ಹಾಕಿಕೊಂಡು,ವೀಳೆಯಪಡೆದು ಎಂದರೆ ಯುದ್ಧಕ್ಕೆ ಅಪ್ಪಣೆ ಪಡೆದು, ತನ್ನನ್ನು ಕಾಪಾಡಿದ ದೇವಪುರದ ಲಕ್ಷ್ಮೀಪತಿಯನ್ನು ಇನ್ನು ನೋಡುವೆನುನೆಂಬ ಹರ್ಷದಿಂದ ಮುಖದಲ್ಲಿ ಕಾಂತಿಹೊಂದಿ ಅಂದು ಸುಧನ್ವನು ಪ್ರಕಾಸಿಸಿದನು.]
  • (ಪದ್ಯ- ೪೧)
  • [೧]
  • [೨]
  • ಸಂಧಿ ೧೧ಕ್ಕೆ ಪದ್ಯ೫೬೬.

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.