ದೀಪವು ನಿನ್ನದೆ ಗಾಳಿಯು ನಿನ್ನದೆ

ವಿಕಿಸೋರ್ಸ್ ಇಂದ
Jump to navigation Jump to search

ದೀಪವು ನಿನ್ನದೆ, ಗಾಳಿಯು ನಿನ್ನದೆ,

ಆರದಿರಲಿ ಬೆಳಕು

ಕಡಲು ನಿನ್ನದೆ, ಹಡಗು ನಿನ್ನದೆ,

ಮುಳುಗದಿರಲಿ ಬದುಕು || ಪ ||


ಬೆಟ್ಟವು ನಿನ್ನದೆ, ಬಯಲು ನಿನ್ನದೆ,

ಹಬ್ಬಿ ನಗಲಿ ಪ್ರೀತಿ

ನೆರಳು, ಬಿಸಿಲು ಎಲ್ಲವೂ ನಿನ್ನವೆ,

ಇರಲಿ ಏಕರೀತಿ || ದೀಪವು ನಿನ್ನದೆ ||


ಆಗೊಂದು ಸಿಡಿಲು, ಈಗೊಂದು ಮುಗಿಲು,

ನಿನಗೆ ಅಲಂಕಾರ

ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು,

ನಿನಗೆ ನಮಸ್ಕಾರ || ದೀಪವು ನಿನ್ನದೆ ||


ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ,

ನಿನ್ನ ಪ್ರತಿಧ್ವನಿ,

ಆ ಮಹಾಕಾವ್ಯ, ಈ ಭಾವಗೀತೆ,

ನಿನ್ನ ಪದಧ್ವನಿ || ದೀಪವು ನಿನ್ನದೆ ||


ದೀಪವು ನಿನ್ನದೆ, ಗಾಳಿಯು ನಿನ್ನದೆ,

ಆರದಿರಲಿ ಬೆಳಕು

ಕಡಲು ನಿನ್ನದೆ, ಹಡಗು ನಿನ್ನದೆ,

ಮುಳುಗದಿರಲಿ ಬದುಕು