ನಳಚರಿತ್ರೆ:ಐದನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

<ನಳಚರಿತ್ರೆ

ನಳಚರಿತ್ರೆ:ಐದನೆಯ ಸಂಧಿ (ಸಂಗ್ರಹ)[ಸಂಪಾದಿಸಿ]

ಐದನೆಯ ಸಂಧಿ
ಸೂ|ಅಡವಿಯಲಿ ಪತಿ ಕಳೆದು ಬಿಡೆ ಫಣಿ
ಯೊಡಲಿಗಿಳಿಯದೆ ಮುಂದೆ ಕರಿಗಳ
ಪಡೆಗೆರಗಿ ದಮಯಂತಿ ಹೊಕ್ಕಳು ಚೈದ್ಯನಗರಿಯನು


ಕೇಳು ಕುಂತೀತನಯ ನಳನೃಪ
ಬೀಳುಕೊಟ್ಟನು ಪುರವನಲ್ಲಂ
ಮೇಲೆ ನಡೆದರು ಪಯಣಗತಿಯಲಿ ಹಲವು ಯೋಜನವ
ಹೇಳಲೇನದನವರ ವಿಧಿಯನು
ತಾಳಿಗೆಗಳೊಣಗಿದವು ಸತಿಯಳ
ಕಾಲೊಡೆದು ಸುರಿವರುಣಜಲದಲಿ ಬಟ್ಟೆ ಕೆಸರಾಯ್ತು ||೧||

ಎಳೆಯ ಬಾಳೆಯ ಸುಳಿಯು ಅನಲನ
ಜಳದ ಹೊಯ್ಲಲಿ ನೊಂದವೊಲ್ ಕಡು
ಬಳಲಿದಬಲೆಯ ಕಂಡು ನೃಪ ಮರುಗಿದನು ಮನದೊಳಗೆ
ಲಲಿತಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗುವ
ಲಲನೆಗೀ ವಿಧಿ ಬಂದುದೇ ಹಾಯೆನುತ ಬಿಸುಸುಯ್ದ ||೨||

ಮರುಗಲಿನ್ನೇಕರಸ ಬಿಡು ವಿಧಿ
ಬರೆದ ಬರೆಹವ ತಪ್ಪಿಸಲು ಹರಿ
ಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು
ಹರೆವುದಾಕ್ಷಣ ತುಂಬುವುದು ಗೋ
ಚರಿಸುವುದು ಸಿರಿ ನಿತ್ಯವೇನಿದ
ನರಿಯದವನೇ ನೋಯಲೇಕೆಂದಳು ಸರೋಜಮುಖಿ ||೩||

ನುಡಿಯ ಕೇಳುತ ಮನದಿ ಮಿಡುಕುತ
ಪೊಡವಿಪನು ಸತಿಸಹಿತ ಘನಘೋ
ರಡವಿಯಲಿ ಬರುತಿರೆ ಜಗನ್ಮೋಹನದ ಪಕ್ಷಿಗಳು
ಪೊಡವಿಗಿಳಿಯಲು ಕಂಡಪೇಕ್ಷಿಸಿ
ಪಿಡಿವೆನೆಂದುರವಣಿಸಿ ನೃಪ ಹ
ಚ್ಚಡವ ಬೀಸಿದಡದನು ಕೊಂಡೊಯ್ದವು ನಭಸ್ಥಳಕೆ ||೪||

ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ನಸುನಗುತ ನಿಂದಿರ
ಲಾಗ ಸೂಚಿಸಿದವು ನಿರಂತರ ರಾಜ್ಯ ಭೋಗವನು
ಬೇಗದಿಂದಪಹರಿಸಿಕೊಂಡವ
ರೀಗವಾವಿದನರಿದಿರೆಂದು ಸ
ರಾಗದಿಂದಲಿ ಮಾಯವಾದವು ಪಕ್ಷಿಯುಗಳಗಳು ||೫||

ಧರಣಿಪತಿ ಕೇಳ್ ನಿಷಧಪತಿ ಕಲಿ
ಪುರುಷ ಮಾಯವ ಬಲ್ಲನೆ ಮನ
ಮರುಗಿ ನಿರ್ವಾಣದಲಿ ನಿಂದಿರಲಾಗ ಸತಿ ಕಂಡು
ಹರಹರಾಯೆನುತಾಗ ಸೀರಿಯ
ಸೆರಗ ಹರಿದಿತ್ತಳು ನೃಪಾಲಗೆ
ಶಿರವ ನಸುಬಾಗಿದನು ನಾಚಿಕೆಯಾಗಲಿಂತೆಂದ ||೬||

ಧರೆಯ ನೃಪರಿಗೆ ನಿಷಧಪುರಪತಿ
ಯರಮನೆಯ ಬಾಗಿಲಿನ ಸುಮುಖವು
ದೊರಕಲದು ತಾ ಪುಣ್ಯವೆಂಬೀಯರಸುತನ ನಮಗೆ
ಹರೆದುದೆಲ್ಲ ಸಮಸ್ತರಾಜ್ಯದ
ಸಿರಿಗೆ ಬಾಹಿರನಾಗಿ ಸತಿಯಳ
ಸೆರಗನುಡುವಂತಾಯ್ತೆ ಹರಹರಯೆನುತ ಬಿಸುಸುಯ್ದ ||೭||

ಧರೆಯ ಸಂಪದದಷ್ಟಭೋಗವ
ಪರಿಹರಿಸಿ ನಿಜಪುತ್ರಮಿತ್ರರ
ತೊರೆದು ನಂಬಿದ ಸತಿಯ ಘೋರಾರಣ್ಯಮಧ್ಯದಲಿ
ಹಿರಿದು ಬಳಲಿಸಿ ನೋಯಿಸಿದೆ ಕೇಳ್
ತರುಣಿಯೆನ್ನವೊಲಾರು ಪಾಪಿಗ
ಳಿರದೆ ನೀ ಹೋಗಿನ್ನು ತಂದೆಯ ಮನೆಗೆ ನಡೆಯೆಂದಾ ||೮||

ಇನಿಯನಾಡಿದ ನುಡಿಗೆಯಂಗನೆ
ಕನಲಿ ನುಡಿದಳು ಶೋಕದಲಿ ನೀ
ನಿನಿತು ಮುನಿದಾಡುವರೆ ಸಾಕಿನ್ನಾರು ಗತಿಯೆನಗೆ
ಅನುದಿನವು ನಾ ನಿಮ್ಮ ಪದಯುಗ
ವನಜವನು ಭಜಿಸುವುದ ತೊರೆದೀ
ತನುವ ಸೈರಿಸಲಾಪೆನೆ ಹೇಳೆಂದಳಿಂದುಮುಖಿ ||೯||

ನೆಳಲು ತನುವಿನ ಬಳಿಯೊಳಲ್ಲದೆ
ಚಲಿಸುವುದೆ ತಾ ಬೇರೆ ನಿಮ್ಮಡಿ
ನಳಿನದಲಿ ಸುಖದುಃಖವಲ್ಲದೆ ಬೇರೆ ಗತಿಯುಂಟೆ
ಹಳುವವೇ ಸಾಮ್ರಾಜ್ಯ ನಿಮ್ಮಡಿ
ನೆಳಲಿನಲಿ ತಾನಿರುವೆನಲ್ಲದೆ
ನಿಳಯವೇ ನನಗಡವಿಯೆಂದೆರಗಿದಳು ಪದಯುಗಕೆ ||೧೦||

ಎನುತ ಸುರಿದಳು ಕಣ್ಣಿನಲಿ ಕಂ
ಬನಿಯ ಮಿಡಿದಳು ಬೆರಳಿನಲಿ ಮು
ನ್ನಿನಲಿ ಮಾಡಿದ ಕರ್ಮಫಲವಿದಕೇನ ಮಾಡುವುದು
ಎನಗೆ ಚಿಂತಿಸಲೇಕೆ ನೀನಿಂ
ದಿನಲಿ ನಿರ್ಮಲಚಿತ್ತದಲಿ ಕಾ
ನನವ ಸಂಚರಿಸುವೆನು ನಿಮ್ಮೊಡನೆಂದಳಿಂದಮುಖಿ ||೧೧||

ಶೋಕವೇಕೆಲೆ ತರುಣಿ ಬಾರೆಂ
ದಾಕಮಲಲೋಚನೆಯ ತೋಳಿನೊ
ಳೌಕಿ ಬಿಗಿಯಪ್ಪಿದನು ಸೆರಗಿನೊಳಿರಸಿ ಕಂಬನಿಯ
ಜೋಕೆಯಲಿ ಕುಳ್ಳಿರಿಸಿ ತೊಡೆಯೊಳ
ನೇಕ ಪ್ರೀತಿಯೊಳೆಂದ ನೀನವಿ
ವೇಕಿಯೇ ಬಿಡು ಮನದ ದುಗುಡವೆಂದನಾ ನೃಪತಿ ||೧೨||

ಎಂದು ಸತಿಯಳ ಸಂತವಿಟ್ಟರ
ವಿಂದನಾಭಧ್ಯಾನದಲಿ ಬರೆ
ಮುಂದೆ ಘೋರಾರಣ್ಯವೆಸೆದುದು ಘನಭಯಂಕರದಿ
ಸಂದ ಖಗಮೃಗವಲ್ಲಿ ನೆರೆದಿರೆ
ಬಂದು ಹೊಕ್ಕರು ಕಾನನವನರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ ||೧೩||

ಲೋಕಕಧಿಪತಿ ನಳನ ರಾಣಿಗೆ
ಶೋಕ ಪರ್ಬಿದ ತೆರದಿ ಕತ್ತಲೆ
ಲೋಕವನು ಮುಸುಕಿದುದು ಭರಣಿಯ ಮುಚ್ಚುವಂದದಲಿ
ಭೀಕರಧ್ವನಿಗಳಿಗೆ ಹೆದರಿದ
ಳಾ ಕಮಲಲೋಚನೆಯ ಕಂಡು ವಿ
ವೇಕನಿಧಿ ಸಂತಯಿಸಿ ಬಿಗಿಯಪ್ಪಿದನು ತೂಪಿರಿದು ||೧೪||

ತರುಣಿಯಂಜದಿರಂಜದಿರು ವಿಧಿ
ಬರೆದ ಬರಹವಿದೆನುತ ವೃಕ್ಷದ
ತರಗೆಲೆಯ ಹಾಸಿನಲಿ ಮಲಗಿಸಿ ಸತಿಯನೀಕ್ಷಿಸುತ
ವರರತುನಮಂಚದಲಿ ಪವಡಿಸಿ
ಪರಮಸುಖವಿಹ ಸತಿಗೆ ವಿಧಿಯಿದು
ಹರಹರಾಯೆನುತರಸ ಕಂಬನಿದುಂಬಿದನು ಮರುಗಿ ||೧೫||

ಎಲ್ಲರೋಪಾದಿಯ ಪತಿವ್ರತೆ
ಯಲ್ಲವೀ ದಮಯಂತಿ ಬಿಡುವವ
ಳಲ್ಲ ತನ್ನನು ತರುಣಿ ಕಾಣದ ಕಡೆಗೆ ತೆರಳಿದರೆ
ಅಲ್ಲಿ ತಂದೆಯ ಮನೆಗೆ ಹೋಗುವ
ಳಿಲ್ಲಿ ತಾನಿರೆ ಬಿಡಳೆನುತ ಮನ
ದಲ್ಲಿ ಯೋಚಿಸಿ ನಿದ್ರೆಗೈಸಿದನಾ ಮಹಾಸತಿಯ ||೧೬||

ಮರೆದು ಮಲಗಿದಳವಳ ಮಗ್ಗುಲ
ಸೆರಗ ಮೆಲ್ಲನೆ ಜಾರಿಸುತಲಾ
ಗರಸ ವಸನವ ಕೊಂಡು ಮಲಗಿದ ಸತಿಯನೀಕ್ಷಿಸುತ
ಮರುಗಿದನು ಮನದೊಳಗೆ ಹರಿಹರಿ
ವರ ಜಗತ್ಪತಿ ಅಡವಿಯಲಿ ಎ
ಚ್ಚರಿಸದೇ ತಾನೆಂತು ಪೋಗುವೆನೆನುತ ಬಿಸುಸುಯ್ದ ||೧೭||

ಮಡದಿಯಗಲಿದ ಬಳಿಕ ಹತ್ತೆಂ
ಟಡಿಯ ದಾಂಟುವ ಮರಳಿ ನಿಜಸತಿ
ಯೆಡೆಗೆ ತಿರುಗುವ ಚಂದ್ರಬಿಂಬಾನನೆಯನೀಕ್ಷಿಸುವ
ಅಡಸಿ ಬರೆ ದುಃಖದಲಿ ಮೆಲ್ಲಡಿ
ಯಿಡುವ ಸತಿಯನು ನೋಡಿ ಮನದು
ಗ್ಗಡದ ಶೋಕದಿ ನಡೆದ ನಳನೃಪನೊಂದು ಯೋಜನವ ||೧೮||

ಮರುಗುವುದು ಮನವೊಮ್ಮೆ ಕಂಗಳು
ಮರಳಿ ನೋಡುವುದೊಮ್ಮೆ ಸತಿಯಳ
ಯಿರವ ಕಾಣದೆ ಕಳವಳಕೆ ಬೀಡಾದುದಾ ಹೃದಯ
ಕರಗಿತರಸನ ಧೈರ್ಯ ಚಿತ್ತದಿ
ಮುರಿದುದಗ್ಗದ ಮಹಿಮೆ ಶೋಕದ
ಹೊರಿಗೆಯಲಿ ಕಾತರಿಸಿ ನಡೆದನು ನೃಪತಿ ಕೇಳೆಂದ ||೧೯||

ಕರುಣೆದೋರದೆ ನೃಪತಿ ಸತಿಯಳ
ತೊರೆದು ಬಿಸುಟನು ವನದೊಳಗೆ ಹುಲಿ
ಕರಡಿ ಮೃಗದುಪಟಳವ ತಾನಿನ್ನೆಂತು ಸೈರಿಪಳೊ
ಮೊರೆಯ ಲಾಲಿಸಿ ನೋಳ್ಪೆನೆಂದುರು
ತರದ ಪ್ರೇಮದಿ ಬಂದು ಸತಿಗೆ
ಚ್ಚರಿಸುವಂದದಿ ತರಣಿ ತಲೆದೋರಿದನು ಪೂರ್ವದಲಿ ||೨೦||

ನಳಿನಮುಖಿ ಮೈಮುರಿದು ನಿದ್ರೆಯ
ತಿಳಿದು ಮೆಲ್ಲನೆ ನೋಡಿದಳು ಎಡ
ಬಲವನೀಕ್ಷಿಸಿ ಪತಿಯ ಕಾಣದೆ ಬಲಿದ ಮೂರ್ಛೆಯಲಿ
ಮಲಗಿದಳು ಮೈಮರೆದು ನಿಮಿಷಕೆ
ತಿಳಿದು ಕಾಣದೆ ಕಾತುರದಿ ಹಂ
ಬಲಿಸಿ ಹಲುಬಿದಳಲ್ಲಿ ಗಿರಿತರುನಿಕರಮಧ್ಯದಲಿ ||೨೧||

ಹಾ ರಮಣ ನಳನೃಪತಿ ಹಾ ರಣ
ಧೀರ ಸದ್ಗುಣಹಾರ ರಿಪುಸಂ
ಹಾರ ನಿತ್ಯೋದಾರ ನಿರ್ಮಳಸತ್ಸಂಚಾರ
ಘೋರಕಾನನದೊಳಗೆ ನಂಬಿದ
ನಾರಿಯನು ಬಿಸುಡುವರೆ ತನಗಿ
ನ್ನಾರು ಗತಿ ಮುಖದೋರೆನುತ ಹಲುಬಿದಳು ದಮಯಂತಿ ||೨೨||

ಪೊಡವಿಗಿಳಿದನೊ ಹಾಯ್ದು ಪಾವಕ
ನೊಡಲ ಹೊಗುವೆನೊ ಕಾಳಕೂಟದ
ಮಡುವಿನೊಳು ಮುಳುಗುವೆನೊ ಹಾಸರೆಯೊಳಗೆ ಬೀಳುವೆನೊ
ಅಡಸಿದಾಪತ್ತಿನಲಿ ಗರಳವ
ಕುಡಿವೆನೋ ತಾನೆನುತ ಸತಿ ಬಾ
ಯ್ಬಿಡುತ ಕಾನನದೊಳಗೆ ತಿರು ಗಿದಳಬಲೆ ಶೋಕದಲಿ ||೨೩||

ಕಾಣಿರೇಯರಸಂಚೆಗಳೆ ನೀವ್
ಕಾಣಿರೇ ನಿಜಪತಿಯ ಶುಕಪಿಕ
ಕಾಣಿರೇ ಮೃಗಪಕ್ಷಿಗಳೆ ನಳಚಕ್ರವರ್ತಿಯನು
ಕಾಣಿರೇ ತರುಲತೆಗಳಿನಿಯನ
ಕಾಣಿರೇ ನೀವೆಂದು ಶೋಕದೊ
ಳೇಣಲೋಚನೆ ಹಲುಬಿದಳು ಹಲವಂಗದಲಿ ಪತಿಯ ||೨೪||

ಮುಡಿಕೆದರಿ ಹುಡಿಯೊಳಗೆ ಹೊರಳುತ
ಲೊಡಲನೀಡಾಡಿದಳು ಧರೆಯೊಳ
ಗಡವಿ ಪಾಲಾಗೆಂದು ಪಡೆದಳೊ ತನ್ನ ನಿಜಜನನಿ
ಮಡದಿಯರು ತನ್ನಂತೆ ಲೋಕದೊ
ಳೊಡಲ ತೆತ್ತವರುಂಟೆ ಶೋಕದಿ
ಪೊಡವಿಪತಿ ಮುಖದೋರೆನುತ ಹಂಬಲಿಸಿದಳು ಪತಿಯ ||೨೫||

ಮಾನವಾಧಿಪ ಕೇಳು ಬನದಲಿ
ಮಾನಿನಿಗೆ ಮತ್ತೊಂದು ಕಂಟಕ
ಹಾನಿ ಬಂದುದೇನೆಂಬೆನು ಪತಿಗೆ ಬಾಯ್ಬಿಡುತ
ಕಾನನದ ಬಳಿವಿಡಿದು ಬರೆ ಸು
ಮ್ಮಾನದಲಿ ತರಗೆಲೆಯ ಹಕ್ಕೆಯ
ಮೌನದಲಿ ಉರಗೇಂದ್ರನಿದ್ದನು ಬಲಿದ ನಿದ್ರೆಯಲಿ ||೨೬||

ತರಳೆ ಕಾಣದೆ ಬರುತ ಮೆಟ್ಟಿದ
ಳುರಗಪತಿಯನು ಕೋಪದಲಿ ಮಿಗೆ
ಸುರಿವ ಗರಳದಿ ರೌದ್ರಮಯರೂಪಿನಲಿ ಬಾಲಕಿಯ
ತರುಬಿ ಹಿಡಿದುದು ತವಕದಲಿ ಹಿಮ
ಕರನ ನುಂಗುವ ರಾಹುವಿನವೊಲ್
ಅರಸ ಕೇಳಂಗನೆಯ ವಿಧಿಯನು ಹೇಳಲೇನೆಂದ ||೨೭||
ಹಾ ರಮಣ ನ ಳನೃಪತಿ ತನ್ನನ
ದಾರಿಗೊಪ್ಪಿಸಿ ಕಳೆದೆ ಹರಿಹರಿ
ಕ್ರೂರಸರ್ಪನ ಬಾಯ್ಗೆ ತುತ್ತಾದೆನೆ ಜಗನ್ನಾಥ
ಆರಿಗೊರಲುವೆನಿನ್ನು ಪ್ರಾಣವ
ನಾರು ಕಾವವರಕಟ ಬಿಡಿಸೈ
ವಾರಿಜಾಕ್ಷ ಮುಕುಂದ ಸಲಹೆಂದೊರಲಿದಳು ತರಳೆ ||೨೮||

ಶೈರಶಿಖರದೊಳಿರ್ದು ಕೇಳಿದ
ಬಾಲಕಿಯ ಶೋಕವನು ಬಿಲ್ಲಿನ
ಕೋಲುಗಾರನು ಕರೆದ ಬಿಲ್ಲಿನ ಶಬರನೈತಂದು
ಆ ಲತಾಂಗಿಯ ಪಿಡಿದು ನುಂಗುವ
ಕಾಲಭುಜಗನ ಕಂಡು ನಿಜಕರ
ವಾಳದಲಿ ಖಂಡಿಸಿದನಹಿಯನು ಬಿಡಿಸಿದನು ಸತಿಯ ||೨೯||

ಹಾಯೆನುತ ಸುರರುಲಿಯೆ ಹಾವಿನ
ಬಾಯೊಳಗೆ ಸಿಲುಕಿರ್ದ ಕಮಲದ
ಳಾಯತಾಕ್ಷಿಯ ಬಿಡಿಸಿದನು ಸಂತೈಸಿದನು ಸತಿಯ
ರಾಯ ಕೇಳೈ ರಾಹುವಿನ ಕಟ
ವಾಯ ಚಂದ್ರನ ಸೆಳೆವವೋಲರಿ
ದಾಯಿತಬಲೆಗೆ ಮೂರ್ಛೆ ತಿಳಿದುದು ಶಬರಮಂತ್ರದಲಿ ||೩೦||

ಬಂದು ಕೆಂದಾವರೆಯ ಕೊಳದಲಿ
ಮಿಂದು ನಿಂದಿರೆ ಶಬರನೆಂದನು
ಇಂದುಮುಖಿ ನೀನೆನಗೆ ಸತಿಯಾಗೆನಲು ಖತಿಗೊಂಡು
ಇಂದೆನಗೆ ಅಸುವಿತ್ತು ಸಲಹಿದ
ತಂದೆಯಲ್ಲವೆ ನೀನು ಕೇಳು ಪು
ಳಿಂದ ಮುಳಿದರೆ ಶಪಿಸುವೆನು ಹೋಗೆಂದಳಿಂದುಮುಖಿ ||೩೧||

ತರುಣಿ ಕೋಪಿಸಿ ನುಡಿಯೆ ಭಯದಲಿ
ಶಿರವ ಬಾಗಿ ಪುಳಿಂದನತ್ತಲು
ಮರಳಿದನು ದಮಯಂತಿ ಮನದಲಿ ಪತಿಗೆ ಹಂಬಲಿಸಿ
ಮರುಗುವಳು ಬನದೊಳಗೆ ಭೂಪನ
ನರಸಿ ಕಾಣದೆ ಬಯಲನಪ್ಪುವ
ಳುರವಣಿಪ ಕಣ್ಣೀರಿನಲಿ ನಡೆತಂದಳಿಂದುಮುಖಿ ||೩೨||

ಅರಸ ಕೇಳಾಶ್ಚರ್ಯವನು ಸತಿ
ಬರುತಿರಲು ಕಾನನದಿ ನೆರೆದಿಹ
ಮರುಳು ಬಳಗವು ಭೂತಭೇತಾಳಗಳು ತೊಲಗಿದವು
ಶರಭ ಮೊಲ ಕಾಡಾನೆ ಸಿಂಹಗ
ಳಿರದೆ ಜಾರಿದುವಲ್ಲಿ ಸತಿಯಳ
ಪರಮಪಾತಿವ್ರತ್ಯಮಹಿಮೆಗೆ ನೃಪತಿ ಕೇಳೆಂದ ||೩೩||

ಮುಂದೆ ಕಂಡಳು ಹೊಳೆವ ತಾಪಸ
ವೃಂದವನು ಕಣ್ಣೀರ ಸುರಿಸುತ
ಬಂದವಳನುರೆ ಕೇಳಿದರು ಮುನಿವರರು ಕರುಣದಲಿ
ಇಂದುಮುಖಿ ನೀನಾರು ಇಲ್ಲಿಗೆ
ಬಂದ ಹದನೇನೆನಲು ಶೋಕದಿ
ನೊಂದು ನುಡಿದಳು ಮುನಿಗಳಿಗೆ ಕೈಮುಗಿದು ವಿನಯದಲಿ ||೩೪||

ಏನನೆಂಬೆನು ತನ್ನ ಪುಣ್ಯದ
ಹಾನಿಯನು ಚಿತ್ತವಿಸಿ ಕರುಣದಿ
ಮಾನನಿಧಿಗಳು ಬಲ್ಲಿರೇ ನಳಚಕ್ರವರ್ತಿಯನು
ಆ ನರೇಂದ್ರನ ಮಡದಿ ತಾ ಮು
ನ್ನೇನ ನೋಂತೆನೊ ಪತಿಯಗಲಿ ಘನ
ಕಾನನಕೆ ಗುರಿಯಾದೆನೆಂದಳು ತರುಣಿ ಬಿಸುಸುಯ್ದು ||೩೫ ||

ಭೂತಳವ ನಳನೃಪತಿ ದ್ಯೂತದಿ
ಸೋತು ಪುಷ್ಕರಗಿತ್ತು ಸತ್ಯದ
ನೀತಿ ತಪ್ಪದೆ ಬಂದು ಬನದಲಿ ತನ್ನನಗಲಿದನು
ಧಾತುಗುಂದಿದೆ ಪತಿಯ ಕಾಣದೆ
ಭೀತಿಯಲಿ ನಿಮ್ಮಡಿಯ ಕಂಡೆನು
ಭೂತದಯೆ ನಿಮಗುಂಟಲಾ ಸಲಹೆಂದಳಿಂದುಮುಖಿ ||೩೬||

ನನೆದುದಂತಃಕರಣ ಕೇಳುತ
ಮುನಿಗಳೆಂದರು ತಾಯೆ ಶೋಕದಿ
ಕನಲಿ ಕಂಗೆಡಬೇಡ ನಿಜಪತಿರಾಜ್ಯಸಿರಿಸುತರು
ನಿನಗೆ ಬಂದಪರಿನ್ನು ಯೋಗದ
ಮನದಲರಿದೆವು ನಾವು ಅಂಜದಿ
ರೆನುತ ಪೇಳಿಯದೃಶ್ಯವಾದರು ಮುನಿಗಳೊಗ್ಗಿನಲಿ ||೩೭||

ಆ ತರುಣಿ ಬೆರಗಾಗಿ ಕನಸಿನ
ರೀತಿಯಾಯ್ತಕಟಕಟ ಮೌನಿ
ವ್ರಾತವೆತ್ತಲು ಸರಿದುದೋ ವಿಸ್ಮಯವಲಾಯೆನುತ
ಆ ತಳೋದರಿ ಪತಿಯ ಕಾಣದೆ
ಕಾತುರದಿ ಬರುತಿರಲು ಕಂಡರು
ನೂತನದ ಬೇಹಾರಿಗಳು ತೊಳಲುವ ನಿತಂಬಿನಿಯ ||೩೮||

ಆರಿವಳು ವನಲಕ್ಷ್ಮಿಯೋ ಸುರ
ನಾರಿಯೋ ಮಾರಾಂಗನೆಯ ಮದ
ನಾರಿಸತಿಯೋ ಸರಸತಿಯೊ ಮೇಣಸುರಮಾನಿನಿಯೊ
ಆರ ವನಿತೆಯೊ ಮಾಯಾರೂಪಿನ
ಭೂರಿಭೂತವೊ ತಿಳಿಯಲರಿದಿವ
ಳಾರೆನುತ ಭಯಗೊಂಡು ಓಡಿದರಲ್ಲಿ ಬಣಜಿಗರು ೩೯||

ನೋಡಿದಳು ದಮಯಂತಿ ಭೀತಿಯ
ಲೋಡುತಿಹ ಬೀಡಿಕೆಯ ವೈಶ್ಯರ
ಹೇಡಿತನವನು ಕಂಡು ನಸುನಗುತಲ್ಲಿಗೈತಂದು
ಓಡಲೇತಕೆ ನಿಮಗೆ ಉಪಹತಿ
ಮಾಡುವವಳು ತಾನಲ್ಲ ಜಗಕತಿ
ರೂಢಿಸಿದ ನಳನೃಪನ ಸತಿ ತಾನೆಂದಳಿಂದುಮುಖಿ ||೪೦||

ವೀರಸೇನನ ತನಯ ನಳನೃಪ
ಧಾರಿಣಿಯನುರೆ ಸೋತು ಕಾರ್ಯದ
ಕಾರಣದಿ ನಡೆತಂದನಡವಿಗೆ ತನ್ನನಗಲಿದನು
ದಾರಿತಪ್ಪಿದೆನಿಲ್ಲಿ ನಿಮ್ಮನು
ಸೇರಿದೆನು ಪರದೇಶಿ ತನಗೊಂ
ದೂರ ತೋರಿರೆ ನೀವೆನುತ ತುಂಬಿದಳು ಕಂಬನಿಯ ||೪೧ ||

ತಾಯೆ ನಿಮ್ಮ ಪದಾಬ್ಜದರ್ಶನ
ವಾಯಿತೆಮಗಿಂದಿನಲಿ ಧನ್ಯರು
ಈಯವಸ್ತೆಗೆ ತಂದುದೇ ವಿಧಿ ನಿಮ್ಮನೆನುತೆರಗಿ
ನೋಯದಿರಿಯಿದೆ ಚೈದ್ಯಪುರವೆಂ
ದಾ ಯುವತಿಯೊಡಗೊಂಡು ಬರುತಿರೆ
ತೋಯಜಾಪ್ತನು ಪಶಶ್ಚಿಮಾಂಬುಧಿಗಿಳಿದನೊಲವಿನಲಿ ||೪೨||

ಹಗಲು ಸವೆದುದು ಹೊಂಬಿಸಿಲು ನೆರೆ
ದೆಗೆದುದತಿವೇಗದಲಿ ಕತ್ತಲೆ
ಬಿಗಿದುದವನೀತಳವ ಪೆಟ್ಟಿಗೆ ಮುಚ್ಚಿದಂದದಲಿ
ಸುಗುಣೆ ದಮಯಂತಿಯಳ ನೋಡಲು
ಸೊಗಸಿ ಬಂದನಿಮಿಷರವೋಲ್ ತಾ
ರೆಗಳು ಮೂಡಿದುವಂಬರದಿ ಪ್ರಜ್ವಲಿಪ ಕಾಂತಿಯಲಿ ||೪೩||

ಅವನಿಪತಿ ಕೇಳ್ ವೈಶ್ಯಕುಲಸಂ
ಭವರು ಹಾಯ್ಕಿದರಲ್ಲಿ ಗೂಡಾ
ರವನು ಬಿಟ್ಟರು ಪಾಳೆಯವ ಮಲಗಿದರು ರಾತ್ರಿಯಲಿ
ಅವಧಿ ಬಂದುದನೇನನೆಂಬೆನು
ಕವಿದು ಕಾಡಾನೆಗಳು ಮಡುವಿಗೆ
ತವಕದಿಂ ನೀರಡಿಸಿ ಬಂದುದು ಸಿರಿಗಳಂದದಲಿ ||೪೪||

ಅಮ್ಮ ಕೇಳೀ ಮದಗಜಂಗಳು
ನಮ್ಮ ಕೊಲುತಿವೆ ಹದನ ಕಾಣೆನು
ನಮ್ಮನೇ ನೆರೆ ನಂಬಿ ಬಂದಿರಿ ಇದಕೆ ಗತಿಯೇನು
ನಿಮ್ಮನಿಲ್ಲಿಗೆ ತಂದುದೇ ವಿಧಿ
ಬೊಮ್ಮ ಬರಹವ ಮೀರುವವರಾ
ರಮ್ಮ ಲೋಕದೊಳೆಂದು ಮರುಗಿದ ವೈಶ್ಯಕುಲತಿಲಕ ||೪೮||

ಜನನವೇ ವರಭೀಮರಾಯನ
ಮನೆಯೊಳಗೆ ನಳಚಕ್ರವರ್ತಿಯೆ
ಇನಿಯನಗ್ಗದ ವೀರಸೇನನೆ ಮಾವನಾಗಿರಲು
ವನದೊಳಿಭಕರಿಗಳಿಗೆ ತಾ ನಿಜ
ತನುವ ತೆರಬೇಕೆಂಬ ಕಾರಣ
ತನಗಿರಲು ನೀವೇನ ಮಾಡುವಿರೆಂದಳಿಂದುಮುಖಿ ||೪೯||

ಎನುತ ಕಣ್ಣೆವೆ ಬಿಗಿದು ಮನದಲಿ
ನೆನೆದಳಚ್ಯುತನಂಘ್ರಿಕಮಲವ
ವನಜನಾಭ ಮುಕುಂದ ಸಲಹೆನೆ ಕರಿಗಳಾಕ್ಷಣಕೆ
ವನಕೆ ಮರಳಿದುವವರನೆಲ್ಲರ
ವನಿತೆ ಸಂತೈಸಿದಳು ದೈವವ
ನೆನೆದ ಭಕ್ತರಿಗುಂಟೆ ಭಯವೆಲೆ ನೃಪತಿ ಕೇಳೆಂದ ||೫೦||

ರಸದ ಲೇಪದಮಿಸುನಿಯೊ ಮಲಿನ
ವಸನದಲಿ ಹುದುಗಿರ್ದ ರತ್ನವೊ
ನಸಿದ ಮೇಘದೊಳೆಸೆವ ಚಂದ್ರನ ಬಿಂಬದಂದದಲಿ
ಶಶಿವದನೆ ಬರುತಿರಲು ಪುರಜನ
ವೊಸೆದು ನೋಡಿದುದಲ್ಲಿಗಲ್ಲಿಗೆ
ಬಿಸಜಮುಖಿಯಿವಳಾರೆನುತ ಬೆರಗಾಯ್ತು ಜನನಿಕರ ||೫೨||

ನುಡಿಗೆ ಶುಕಪಿಕ ನಲಿಯೆ ಮಿಗೆ ಸೆಳೆ
ನಡು ಬಳುಕೆ ವೃತ್ತಸ್ತನಕೆ ಸೋ
ರ್ಮುಡಿಯ ಭಾರಕೆ ಕೊರಳು ಕೊಂಕಲು ಮೆಲ್ಲಡಿಯನಿಡುತ
ಕುಡಿತೆಗಂಗಳ ನೋಟ ಕಾರ್ಮುಗಿ
ಲೊಡೆದು ಮಿಂಚುವ ಮಿಂಚಿನಂದದಿ
ಸಡಗರದಿ ಬರುತಿರ್ದಳಂಗನೆ ಹೊಳಲ ಬೀದಿಯಲಿ ||೫೩||

ಹೇಮದುಪ್ಪರಿಗೆಯಲಿ ನೃಪಸತಿ
ಕಾಮಿನಿಯರೋಲಗದೊಳೊಪ್ಪುತ
ತಾಮರಸದಳನಯನೆ ದಮಯಂತಿಯನು ತಾ ಕಂಡು
ಈ ಮಹಾ ಸತಿ ಯಾವಳೋ ಸು
ತ್ರಾಮನರಸಿಯೊ ಎನುತ ಕರೆಸಿದ
ಡಾ ಮಹಿಳೆ ಬಂದಳು ನೃಪಾಲನ ಸತಿಯ ಸಮ್ಮುಖಕೆ ||೫೪||

ತಾಯೆ ನೀನಾರಾವ ದೇಶದ
ರಾಯನರಸಿಯಿದೇನು ನಿನಗೀ
ಪ್ರಾಯದಲಿ ಕಳೆಗುಂದಿ ಮಾಸಿಹುದೇನು ಪೇಳೆನಲು
ಆ ಯುವತಿ ಕಣ್ಣೀರಿನಲಿ ಪೂ
ರಾಯ ಶೋಕದಲೆಂದಳಾ ತರ
ಳಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯ್ದು ||೫೫||

ಕ್ಷಿತಿಯನೆಲ್ಲವ ಸೋತು ಜೂಜಿನಲಿ
ಪತಿ ಬನಕೆ ಬಂದೆನ್ನನಗಲಿದ
ಮತಿವಿಕಳತನದಿಂದ ತಿರುಗುತ ಬಂದೆ ನಿಮ್ಮಡಿಗೆ
ಹಿತವರಾರನು ಕಾಣೆ ನೀವೇ
ಗತಿಯೆನಗೆ ಪರದೇಶಿಯನು ಪರ
ಹಿತವೆ ಪುಣ್ಯವು ರಕ್ಷಿಸೆಂದಳು ನಳನೃಪನ ರಾಣಿ ||೫೬||

ನುಡಿಯ ಕೇಳುತ ಚೈದ್ಯಭೂಪನ
ಮಡದಿ ನೂಪುರ ಘಲಿರುಘಲಿರೆನ
ಲಡಿಯಿಡುತ ಬಂದಪ್ಪಿ ಸೆರಗಿನೊಳೊರಸಿ ಕಂಬನಿಯ
ಬಿಡು ವ್ಯಥೆಯ ವರಭೂಷಣಂಗಳ
ತೊಡು ದುಕೂಲವನುಡು ಸುಮಾಲ್ಯವ
ಮುಡಿಗೆ ಸೇರಿಸು ತರುಣಿಯೆಂದಳು ಚೈದ್ಯನೃಪನರಸಿ ||೫೭||

ದೇವಿ ನಿಮ್ಮುಪಚಾರವೇ ಸಂ
ಭಾವನೆಯಲಾ ನಮಗೆ ಬೇರಿ
ನ್ನಾವ ಭೂಷಣವೇಕೆ ದೇಸಿಗರಾವು ನಿಮ್ಮಡಿಯ
ಸೇವೆಯಲಿ ತಾನಿಹೆನು ಹೀನವ
ನಾವು ಬಳಸುವರಲ್ಲ ತನ್ನನು
ಕಾವ ಹದನನು ನೀವೆ ಬಲ್ಲಿರಿಯೆಂದಳಾ ಸತಿಗೆ ||೫೮||

ಎನಲು ನಸುನಗುತೆಂದಳಾ ಮಾ
ನಿನಿಗೆ ತಮ್ಮಿಂದಾಗದುಪಹತಿ
ನಿನಗೆ ಪೇಳೆವು ಹೀನಕೆಲಸವ ಚಿಂತೆ ಬೇಡಿನ್ನು
ತನಗೆ ಮಗಳು ಸುನೀತಿಯಾಕೆಯ
ಮನೆಯೊಳಿರು ಸೈರಂಧ್ರಿತನದಿಂ
ದನವರತ ನೀನೆಂದು ನೇಮಿಸಿ ಕಳುಹಿದಳು ಮನೆಗೆ ||೫೯||

ನೋಡಿ[ಸಂಪಾದಿಸಿ]

ನಳಚರಿತ್ರೆ- ಸಂಧಿಗಳು>:

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ