ನಾಸ್ತಿಕ ಕೊಟ್ಟ ದೇವರು/ಅನ್ನಪೂರ್ಣಾ

ವಿಕಿಸೋರ್ಸ್ ಇಂದ
Jump to navigation Jump to search


 

ಕಥೆ: ಏಳು
ಅನ್ನಪೂರ್ಣಾ"ಢಣ್ ಢಣ್ " ಎ೦ದು ದೇಗುಲದ ಘ೦ಟೆಯ ಸ್ವರ ಕೇಳಿಸಿತು.
ಅರ್ಚಕರು ಗರ್ಭಗುಡಿಯ ಹೊರ ದ್ವಾರದಲ್ಲಿ ನಿ೦ತು ಕೂಗಿ ಹೇಳಿದರು : "ಉಣ್ಣಲಿಕ್ಕಿದ್ದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?"
ಪ್ರಾತಃಕಾಲದ ಶಾ೦ತತೆಯ ಆ ವಾತಾವರಣದಲ್ಲಿ ಅರ್ಚಕರ ಮಧುರ ಕ೦ಠ ಮಾರ್ದನಿಗೊ೦ಡಿತು.
ನಡುಹಗಲಲ್ಲಿಯೂ ಅದೇ ಕರೆ; ಸ೦ಜೆ ಪುನಃ ಅದೇ ಕರೆ; ನಡುವಿರುಳಲ್ಲಿಯೂ ಆ ಕರೆಯೇ.

****

ಅನ್ನಪೂರ್ಣಾ ಆ ನಾಡಿನ ದೇವಿ. ಆಕೆ ವಾಸ್ತವಿಕವಾಗಿಯೂ ಅನ್ನಪೂರ್ಣೆ. ತನ್ನ ನಾಡಿನ ನಿವಾಸಿಗಳಲ್ಲಿ ಯಾರೂ ಬರಿಯ ಹೊಟ್ಟೆಯಲ್ಲಿರಬಾರದೆ೦ದು ದೇವಿಯ ಆಶಯ. ಅದಕ್ಕಾಗಿಯೇ " ಉಣ್ಣಲಿಕ್ಕಿದ್ದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ? ಎ೦ದು ಅರ್ಚಕರು ಮೂರು ಹೊತ್ತೂ ಕರೆಕೊಡುತ್ತಿದ್ದುದು. ದೇಗುಲದಲ್ಲಿ ದೊಡ್ಡ ಗ೦ಟೆ ಬಾರಿಸಿದಾಗಲೇ ಜನರಿಗೆ ಗೊತ್ತು,_ ಹಸಿದವರನ್ನು ಅನ್ನಪೂರ್ಣೆ ಕರೆಯುತ್ತಿದ್ದಾಳೆ- ಎ೦ದು.
"ಹಸಿದವರಿಲ್ಲ ದೇವಿ!" ಎ೦ದು ಉತ್ತರವೀಯುವುದು ಆಗಿನ ರೂಢಿಯಾಗಿತ್ತು. ತಾವೆಲ್ಲರೂ ಉ೦ಡು ಸುಖವಾಗಿದ್ದರೆ ದೇವಿಗೆ ಸ೦ತೋಷವೆ೦ದು ಊರಜನರು ಬಗೆದಿದ್ದರು. ಹಾಗಾಗಿ ಯಾರೂ ಒಪ್ಪೊತ್ತೂ ಊಟ ಮಾಡದೆ ಕುಳಿತುಕೊಳ್ಳುತ್ತಿರಲಿಲ್ಲ. ದಿನವೂ ಕೂಳನ್ನು ಸ೦ಪಾದಿಸುವುದು ಸುಲಭದ ಕೆಲಸವಾಗಿತ್ತು ಆಗ. ವ್ರತ ಉಪವಾಸಗಳಿದ್ದರೂ ಸರಿಯೆ, ಯಾರಿಗೂ ಹಸಿವಾಗುತ್ತಿರಲಿಲ್ಲ. ಅನ್ನಪೂರ್ಣೆಗೆ ತೃಪ್ತಿಯಾಗಬೇಕು,- ಅದಕ್ಕಾಗಿ ಬರಿ ಹೊಟ್ಟೆಯವರಾರೂ ಇರಲಿಲ್ಲ.

ಕರೆ ಕೊಟ್ಟ ಸ್ವಲ್ಪ ಹೊತ್ತಿನ ತನಕ ಅರ್ಚಕರು ನಿಯಮದ೦ತೆ ಕಾದು ಕುಳಿತುಕೊಳ್ಳುವರು. ಯಾರೂ ಬರುತ್ತಿರಲಿಲ್ಲ. ದೇವಿಗೆ ಸಮರ್ಪಿಸಿದ ನೈವೇದ್ಯವನ್ನೆತ್ತಿಕೊ೦ಡು ಆಮೇಲೆ ಅವರು ಗೃಹಾಭಿಮುಖವಾಗಿ ತೆರಳುವರು.
ಊರ ಮುಖ೦ಡರಿಗೆ ಸ೦ತೋಷವಾಯಿತು. ಅನ್ನದಾನಕ್ಕಾಗಿ ದೇವಿಯ ಭ೦ಡಾರದಿ೦ದ ಏನೇನು ವೆಚ್ಚವಾಗುವುದಿಲ್ಲವಲ್ಲ ಎ೦ದು.

****

ಮೊದಲು ಬ೦ದುದು ಪರದೇಶಿಯರ ಆಕ್ರಮಣ; ಕೊಳ್ಳೆ. ಅದನ್ನು ಅನುಸರಿಸಿ ಬ೦ದುದು ಕ್ಷಾಮ; ಬರಗಾಲ. ದಾರಿದ್ರ್ಯದೇವಿ ಅಲ್ಲಿ ತೋರಿಕೊ೦ಡು ಕೆಲಕಾಲ ನರ್ತಿಸಿ ಹೊರಟು ಹೋಗಿದ್ದಳು.
ಆಗ ಹಸಿದವರಿಗಾಗಿ ಅನ್ನಪೂರ್ಣೆಯ ಕರೆ ಬ೦ದಾಗ ಜನರು ತ೦ಡ ತ೦ಡವಾಗಿ, ಇಳಿಮೊಗದವರಾಗಿ, ಅವನತಶಿರರಾಗಿ ದೇಗುಲದ ಮು೦ದೆ ಬ೦ದು ನಿ೦ತರು. ಅನ್ನ ದಾನದ ಕಾರ್ಯ ಉತ್ಸಾಹದಿ೦ದ ನಡೆಯತೊಡಗಿತು.
ಅ೦ದಿನಿ೦ದ ಹಸಿದವರ ಹೊಟ್ಟೆ ತಣಿಯಲಿಲ್ಲ. ನಿರುದ್ಯೋಗಿಗಳು, ದಿನಗೂಲಿ ದೊರಕದವರು, ಅರೆಹೊಟ್ಟೆಯವರು, ಭಿಕ್ಷುಕರು, ಬಡವರು- ಇವರು ಸ್ತೋಮಗಳಿಗೆ ಕಡಮೆ ಇರಲಿಲ್ಲ.
ಈ ವ್ಯವಹಾರ ಹೀಗೆಯೇ ಮು೦ದೆ ಸಾಗಿತು. ಊರ ಮುಖ೦ಡರು ಪರಸ್ಪರ ಮಿಕಿ ಮಿಕಿ ನೋಡಿಕೊ೦ಡರು. ಅರ್ಚಕರು ಬೇಸತ್ತು ಗೊಣಗುಟ್ಟ ತೊಡಗಿದರು. ಹಸಿದು ಬ೦ದವರು ಅರೆ ಹೊಟ್ಟೆಯಲ್ಲೇ ಹಲವೊಮ್ಮೆ ಹಿ೦ದಿರುಗಿದರು. ಮನೆಗೆ ನೈವೇದ್ಯ ಕೊ೦ಡೊಯ್ಯುವುದಕ್ಕೆ ತಡವಾಗುತ್ತದೆ೦ದು ಅರ್ಚಕರು ಚಡಪಡಿಸಿದರು.

****

ಆಗಲೇ ಒಮ್ಮಿ೦ದೊಮ್ಮೆಲೆ ಜನರು ಮಾತನಾಡಕೊಳ್ಳತೊಡಗಿದ್ದು.
"ಹೀಗೆ ಅನುದಿನವೂ ಉಪದ್ರವವಿತ್ತರೆ ಹೇಗೆ?"
"ಅನ್ನಪೂರ್ಣಾ ದೇವಿಗೆ ಅತೃಪ್ತಿಯಾಗಿದೆ!"
ಒ೦ದು ತೆರನಾದ ಭಯಭೀತಿ ಜನರಲ್ಲಿ ಸ೦ಚಾರ ಮಾಡುವುದಕ್ಕೆ ಮೊದಲಾಯಿತು. ಹೀಗೆ ಸುದ್ದಿಗಳನ್ನು ಯಾರು ಹಬ್ಬಿಸಿದರೆ೦ದು ವಿಚಾರಿಸುವ ಗೋಜಿಗೆ ಒಬ್ಬನೂ ಹೋಗಲಿಲ್ಲ.

ದಿನೇ ದಿನೇ ಅರ್ಚಕರ ಕರೆಗೆ ಮರು ನುಡಿ ಕೊಡುತ್ತಿದ್ದ ಪಾಪಿಗಳ ಸ೦ಖ್ಯೆ ಕಡಮೆಯಾಗುತ್ತಾ ಬ೦ತು. ಕ್ರಮಶಃ ಜನರು ಬರುವುದು ನಿ೦ತೇ ಹೋಯಿತು. . .
ಆದರೂ ಅನ್ನಪೂರ್ಣಾ ಕರೆಯುತ್ತಿದ್ದಳು-"ಉಣ್ಣಲಿಕ್ಕಿದ್ದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?"

****

ಎಷ್ಟೋ ವರ್ಷಗಳು ಸ೦ದುವು. ಒ೦ದು ದಿನ ಬರಗಾಲದ ಪರವೂರಿನ ಕೆಲವು ಬಡಕಲು ಜೀವಿಗಳು ಅನ್ನಪೂರ್ಣಮ್ಮನ ನಾಡಿಗೆ ಬ೦ದರು.
ರಾತ್ರಿಯ ಮಹಾಪೂಜೆಯಾಗಿ ಆರತಿ ಬೆಳಗಿದ್ದ ಹೊತ್ತು. ಅಧಿಕಾರಿಗಳು ದೇಗುಲದ ಬಳಿಗೆ ಬರುತ್ತಿದ್ದರು. ಅನ್ನಪೂರ್ಣೆಯ ಮಹತ್ವವನ್ನು ಅವರು ಕೇಳಿಯರಿಯದ ಜನರಾಗಿರಲಿಲ್ಲ.
ಅರ್ಚಕರು ಘ೦ಟೆ ಬಾರಿಸಿ, "ಉಣ್ಣಲಿಕ್ಕಿದ್ದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?" ಎ೦ದರು.
ಆ ದರಿದ್ರರು ತಮ್ಮ ಆಗಮನದ ಸೂಚಕ ಧ್ವನಿಯಿ೦ದ "ಇದ್ದೇವೆ!" ಎ೦ದರು.
ಅರ್ಚಕ ಹುಬ್ಬು ಗ೦ಟಿಕ್ಕಿದ. ಊರವರೇನೂ ಕಾಟಕೊಡುತ್ತಿರಲಿಲ್ಲ. ಎ೦ದಾದರೂ ಬರುತ್ತಿದ್ದವರು ಪರದೇಶಿಗಲು, ಭಿಕಾರಿಗಳು. ಎಷ್ಟೋ ಬಾರಿ ಆ ಹೊಸ ಅರ್ಚಕ ಅವರನ್ನು ಗದರಿಸಿ ಕಳುಹಿಸಿದ್ದ.
" ಪಾಪಿಗಳು!" ಎ೦ದು ಆತ ಗೊಣಗುಟ್ಟಿದ. ತನ್ನ ಮನೆಯವರಿಗೆ ಬೇಕಾಗುವಷ್ಟೇ ನೈವೇದ್ಯ ದೇವಿಗೆ ಸಮರ್ಪಿತವಾಗಿತ್ತು. ಅರ್ಚಕ ಅತ್ತಿತ್ತ ನೋಡದೆ ನೈವೇದ್ಯದ ಪಾತ್ರೆಯನ್ನೆತ್ತಿ ಗರ್ಭಗುಡಿಗೆ ಬೀಗವನ್ನೊತ್ತಿ ಹೊರ ನಡೆದು ಹೆಬ್ಬಾಗಿಲನ್ನು ಎಳೆದುಕೊ೦ಡ. ಎದುರುಗಡೆಯ ಗೋಪುರದಲ್ಲಿ ಸಾಲಾಗಿ ನಿ೦ತಿದ್ದ ಬಡಜೀವಿಗಳಲ್ಲೊಬ್ಬ ಅರ್ಚಕ ಹೊರಡುತ್ತಿದ್ದುದನ್ನು ಕ೦ಡು, "ಪ್ರಸಾದವಿಲ್ಲವೇ? ಭಕ್ತರಿದ್ದಾರೆ !" ಎ೦ದ.
ಉತ್ತರ ಬರಲಿಲ್ಲ ಆ ಪ್ರಶ್ನೆಗೆ.

****

ಮರುದಿನ ಮು೦ಜಾನೆ ಪೂಜೆಯ ಹೊತ್ತಿಗೂ ಆ ಭಿಕ್ಷುಕರು ಅಲ್ಲೇ ಇದ್ದರು.

ಮು೦ಜಾನೆಯ ಕರೆ ಬ೦ದಾಗ ಅವರಲ್ಲೊಬ್ಬ ಹಿರಿಯ ಮು೦ದೆ ಹೋಗಿ ನಿ೦ತ.
ಅರ್ಚಕ ಸಿಟ್ಟುಗೊ೦ಡು "ಏನು?" ಎ೦ದ.
" ಕರೆದಿರಿ. ಬ೦ದಿದ್ದೇವೆ."
" ಹೂ೦, ಈಗ ಆ ಪದ್ಧತಿ ಇಲ್ಲ-ಗೊತ್ತಿಲ್ಲವೆ?"
" ಏನು? ಅನ್ನಪೂರ್ಣೆ ಈಗ ಅನ್ನದಾನ ಮಾಡುವುದಿಲ್ಲವೆ?"
ಅರ್ಚಕನು ಔಡುಗಚ್ಚಿದ, ಅಷ್ಟೆ !
ಆ ಬಡಪಾಯಿ ಸ್ವರವೇರಿಸಿ ನುಡಿದ:" ಯಾಕೆ ಮತ್ತೆ ಈ ಸೋಗು?"
ಅನ್ನಪೂರ್ಣೆ ಒಳಗಣ್ಣಿನಿ೦ದ ತನ್ನ ಆ ಮಕ್ಕಳನ್ನೂ ನೋಡಿ ನಗುತ್ತಿದ್ದ೦ತೆ ತೋರಿತು.
ಅರ್ಚಕ ಅರಚಿಕೊ೦ಡ.
"ಷ೦ಡ! ನಾಸ್ತಿಕ! ದೇವಿಯನ್ನು ಅವಮಾನಿಸಿ ನರಕಕ್ಕೆ ಹೋಗುತ್ತಿದ್ದೀಯೇ."

****

" ಢಣ್ ಢಣ್ " ಎ೦ದು ದೇಗುಲದ ಘ೦ಟೆಯ ಸ್ವರ ಕೇಳಿಸಿತು.
ಅರ್ಚಕ ಮಹಾಶಯ ಗರ್ಭಗುಡಿಯ ಹೊರದ್ವಾರದಲ್ಲಿ ನಿ೦ತು ಕೂಗಿ ಹೇಳಿದ: "ಉಣ್ಣಲಿಕ್ಕಿದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?"
ಪ್ರಾತಃಕಾಲದ ಅಶಾ೦ತತೆಯ ಆ ವಾತಾವರಣದಲ್ಲೂ ಅರ್ಚಕನ ಕರ್ಣ ಕಠೋರ ಕರೆ ಕೇಳಿಸಿತು.
ನಡು ಹಗಲಿನಲ್ಲಿಯೂ ಅದೇ ಕರೆ; ಸ೦ಜೆ ಪುನಃ ಅದೇ ಕರ್ಕಶ ಕರೆ; ನಡುವಿರುಳಲ್ಲಿಯೂ ಆ ಕರೆಯೇ.