ನಾಸ್ತಿಕ ಕೊಟ್ಟ ದೇವರು/ನಾಸ್ತಿಕ ಕೊಟ್ಟ ದೇವರು

ವಿಕಿಸೋರ್ಸ್ ಇಂದ
Jump to navigation Jump to search

 

ಕಥೆ : ಒ೦ದು
ನಾಸ್ತಿಕ ಕೊಟ್ಟ ದೇವರುಯಾಲಕ್ಕಿ ತೋಟದ ಸ್ನೇಹಿತರ ಮನೆಯಲ್ಲಿ, ಎರಡು ತಿಂಗಳ ಕಾಲಎಣಿಕೆಗೆ ಸಿಗದ ಹಾಗೆ ಕಳೆದುಹೋಗಿತ್ತು. ಸಂಚಾರಜೀವಿಯಾದ ಸೀತಾ ಪತಿಯನ್ನು ದೂರದ ಹಾದಿಗಳು ತಿರುತಿರುಗಿ ಕರೆಯುತ್ತಿದ್ದುವು. ಕಲ್ಪನೆಯ ಹಕ್ಕಿ ದೂರ ದೂರಕ್ಕೆ ಹಾರತೊಡಗಿತ್ತು.

ಮನಸ್ಸಿನ ನೆಮ್ಮದಿ ಮರಳಿಬಂದ ಹಾಗಾಯಿತು ಎಂದು ಭಾವಿಸಿದಾಗಲೇ, ಆ ಬೆಳಗ್ಗೆ ನಡೆದ ಘಟನೆಯೊಂದು ಅವನ ಕಲಾಹೃದಯದಮೇಲೆ ಕಾದ ಬರೆ ಎಳೆಯಿತು.

ಆ ಕೆಲಸಗಾರರೋ ! ತುಳು ಮಾತು, ಮಲೆಯಾಳ ಮಾತು, ಕನ್ನಡ ... ದುಡಿದು ಬದುಕುವ ಆಸೆ ಕಟ್ಟಿಕೊಂಡು ಬಯಲು ಭೂಮಿ ಯಿ೦ದ ಮೈಸೂರಿನ ಆ 'ಘಟ್ಟ ಸೀಮೆ'ಗೆ ಬಂದಿದ್ದ ಬಡವರು. ಊರಲ್ಲಾದರೆ ಅವರು ದಿನಗೂಲಿಯ ಕೃಷಿಕೊಲಿಕಾರರು; ಇಲ್ಲವೆ ಒಪ್ಪೊತ್ತು ಊಟವೂದೊರೆಯದಂಥ ಉತ್ಪತ್ತಿ ಇರುವ ಪುಟ್ಟ ಹೊಲಗಳ 'ಒಕ್ಕಲು-ಯಜಮಾನರು.' ಇಲ್ಲಿಯೋ, ಸ್ವಂತದ ಶ್ರಮವನ್ನು ಮಾರಿ ಬದುಕುವ ಸ್ವತಂತ್ರರು ಅವರು.

ಆದರೆ ಆ ಸ್ವಾತಂತ್ರ್ಯ!

ಎರಡು ಬದಿಗಳಲ್ಲೂ ಎತ್ತರದ ಗಿಡಗಳಿದ್ದ ಕಣಿವೆಯಂಥ ಹಾದಿಯ ಲ್ಲಿಆ ಭಾನುವಾರ ಬೆಳಗ್ಗೆ ಸೀತಾಪತಿ ವಾಯುಸೇವನೆಗೆ ಹೊರಟಿದ್ದ. ಅದು ರಜಾ ದಿನ. ಮಾನವರ ಸುಳಿವೇ ಇಲ್ಲದೆ ಗಿಡಮರಗಳಿಗೆಲ್ಲ ಏಕಾಂತದ ಸುಖ ದೊರೆತಿತ್ತು ಆ ಹೊತ್ತು. ಕ್ರಮ ಕ್ರಮವಾಗಿ ಹೆಜ್ಜೆ ಇಡುತ್ತಾನಡೆಗೋಲನ್ನು ಬೀಸುತ್ತಾ ತಂಗಾಳಿಗೆ ಮೈಯೊಡ್ಡಿ ಸೀತಾಪತಿ ಸಾಗಿದ್ದ.

ಹಾಗೆ ಒಂದು ಮೈಲಿ ಸಾಗಿದ ಬಳಿಕ ವಾಪಸು ಹೋಗೋಣವೆಂದುಕೊಂಡ ಸೀತಾಪತಿ.

ಇನ್ನೇನು ತಿರುಗಬೇಕೆನ್ನುವಷ್ಟರಲ್ಲೆ “ಅಯ್ಯೋ ಸತ್ತೆ! ಮಾರಿಬಡಿಯ ನಿಂಗೆ! ನಿನ್ ಕೈ ಕತ್ತರಿ ಹೋಗ ! ಅಯ್ಯೋ ಅವ್ವಾ!...”ಎಂಬ ಕೂಗು ಕೇಳಿಸಿತು. ಯಾತನೆಯ ಆಲಾಪನೆ ಮಾಡುತ್ತಿದ್ದ ಬಲುಬಳಲಿದ ಸ್ವರ...

ಸೀತಾಪತಿ ಶಿಲಾಪ್ರತಿಮೆಯ೦ತೆ ಅಲ್ಲೇ ನಿ೦ತ.

ನೋವಿನ ನರಳಾಟದೊಂದಿಗೆ ಒಂದು ಸ್ವರ ಕೂಗಾಡುತಿತ್ತು :

"ಕೆಟ್ಟ ರಂ-! ಮುದುಕಪ್ಪ ಕಣ್ ಕಾಣಿಸ್ದೆ ಬಿದ್ದವ್ನೆ, ಉಡುಗ್ರುಅಸಿದವೆ. ಜರಾ ಬಂದು ನಾನು ಸಾಯ್ತಿದ್ರೆ, ಅಬ್ಬ ಇವ್ಳ ಸೊಕ್ಕೆ!ಹಳ್ಳಿಗೆ ಓತಾಳಂತೆ... ಊರ್ಗೆ ಓಗ್ಗೇಕಂತೆ ... ಹೂಂ!”

ಸೀತಾಪತಿಯ ಮುಖ ಕಪ್ಪಿಟ್ಟಿತು. ಮತ್ತೆ ಅದೇ ಕತೆ. ಆ ಗುಡಿಸಲಿನತ್ತ ಸಾಗೋಣ ಎ೦ದಿತು ಮನಸ್ಸು. ಆದರೆ ಆತ ಏನುಮಾಡಬಲ್ಲ?ಎಂಥ ಪರಿಹಾರ ಸೂಚಿಸಬಲ್ಲ? ಏನು ಸಹಾಯ ನೀಡಬಲ್ಲ? ಮನಸ್ಸುಹಿಂಜರಿಯಿತು. ಶರೀರ ಕದಲಲಿಲ್ಲ.

ಅಲ್ಲೇ ಪಕ್ಕದಲ್ಲೇ ಇರಬೇಕು ಆ ಗುಡಿಸಲು. ಹೌದು, ಆ ಜಾಗದಿಂದಲೇ ಅವರ ಕೇರಿ ಆರಂಭವಾಗುವುದು. ಆ ಸಂಭಾಷಣೆಯ ಹಿಂದಿನವ್ಯಕ್ತಿಗಳನ್ನು, ಆ ವಾತಾವರಣವನ್ನು, ಸೀತಾಪತಿ ಚಿತ್ರಿಸಿಕೊಂಡ. ಮಗಸೊಸೆಯರ ಜಗಳದೆಡೆಯಲ್ಲಿ ಮೂಕನಾಗಿ ಮೌನದ ಕಣ್ಣೀರು ಸುರಿಸುವಕುರುಡು ತಂದೆ. ಮಲೆ ಜ್ವರ ಹಿಡಿದು ಕೃಶನಾಗಿ ಕೊಳಕು ಕಂಬಳಿಯೊಳಗೆಮುದುಡಿ ಮಲಗಿರುವ ಯಜಮಾನ ... ಹಳ್ಳಿಗೆ ಹೊರಟು ಹೋಗೋಣವೆಂದು ಹಂಬಲಿಸುತ್ತಿರುವ, ಯೌವನದಲ್ಲೇ ಮುಪ್ಪು ಕಂಡ, ಆ ಹೆಣ್ಣು... ಭೀತರಾಗಿ ಮೂಲೆಯಲ್ಲಿ ಅವಿತಿರುವ ಪುಟಾಣಿ ಮಕ್ಕಳಿಬ್ಬರು...

ಸೀತಾಪತಿಯ ಕಾಲುಗಳು ಅವನ ಸ್ನೇಹಿತನ ಮನೆಯತ್ತ ಚಲಿಸಿದುವು. ಸೀದುಹೋಗಿತ್ತು ಹೃದಯ. ಬಿರಿಯುವ ಭೀತಿ ತೋರಿಸುತ್ತಮೆದುಳು ಗುಡುಗುಟ್ಟತಿತ್ತು.

ಮನೆಯ ಮೆಟ್ಟಲೇರಿದಾಗಲೇ ಎದುರಿನ ನಿಲುವುಗನ್ನಡಿ ಅವನ ಪ್ರತಿಬಿಂಬವನ್ನು ತೋರಿತು. ಸೀತಾಪತಿ ಕಂಡುದು ತನಗೇ ಅರ್ಥವಾಗದಂಥಒಂದು ಮುಖಮುದ್ರೆ. ತುಟಿಗಳು ಬಿಗಿದುಕೊಂಡಿದ್ದುವು. ಹಣೆ ನೆರಿಗೆಕಟ್ಟಿತ್ತು. ಕೆನ್ನೆಯ ಎಲುಬುಗಳು ಎದ್ದು ಕಾಣಿಸುತ್ತಿದ್ದುವು. ಶೀಘ್ರಗತಿಯಿಂದ ಬಿಳಿ ಬಣ್ಣಕ್ಕೆ ತಿರುಗುತ್ತಿದ್ದ ತೆಳ್ಳಗಿನ ನೀಳವಾದ ತಲೆಗೂದಲು ...

ಕಲಾವಿದ ಸೀತಾಪತಿ ಆರಾಮ ಕುರ್ಚಿಯ ಮೇಲೆ ಕುಳಿತು ಕಾಲು ನೀಡಿದ. ಪೈಪ್ ಹೊರತೆಗೆದು, ತಂಬಾಕು ತುಂಬಿಸಿ, ಕಡ್ಡಿಗೀರಿದ. ಇಲ್ಲ, ಪೈಪನ್ನೆಷ್ಟು ಚೀಪಿದರೂ ಕದಡಿ ಹೋದ ಮನಸ್ಸಿನ ನೆಮ್ಮದಿ ಮರಳಿ ಬರ ಲಿಲ್ಲ. ಆ ಸಂಭಾಷಣೆ ಪ್ರತಿಧ್ವನಿಸುತ್ತಿತ್ತು. ಅದರ ಹಿಂದಿನ ಚಿತ್ರ ಕಣ್ಣಿಗೆ ಕಟ್ಟುತ್ತಿತ್ತು.

–ಆ ಬಡ ರೈತ ಕುಟುಂಬಕ್ಕೆ ಹಳ್ಳಿಗೆ ಹೋಗಬೇಕೆಂಬ ಆಸೆಯಿದೆ- ಬಲವತ್ತರವಾದ ಆಸೆ. ಅವರು 'ಅಡ್ವಾನ್ಸ್' ಇಸಕೊಂಡಿದ್ದಾರೆ. ಕಾಗದ ಗಳಿಗೆ ಹೆಬ್ಬೆಟ್ಟಿನ ಮುದ್ರೆಯೊತ್ತಿದ್ದಾರೆ. ಹೆಂಡದಂಗಡಿಯಲ್ಲಿ, ದಿನಸಿ ಅಂಗಡಿಯಲ್ಲಿ, ಅವರಿಗೆ ಸಾಲವಾಗಿದೆ. ಅವರನ್ನು ಅಲ್ಲಿಗೆ ಕರೆದು ತಂದ ಮೇಸ್ತ್ರೀಯೇ ಅವರ ಪಾಲಿನ ಪರದೈವ. ಆ ತೋಟದಿಂದ ಬಿಡುಗಡೆಯಾಗ ಬೇಕಾದರೆ ಅತ ಕರುಣಿಸಬೇಕು...

ಅಂಥ ಯೋಚನಾಸರಣಿಯಲ್ಲಿ, ಆ ಹೆಣ್ಣಿನ ಚಿತ್ರವೊಂದೇ ಕ್ರಮಶಃ ರೂಪುಗೊಂಡು ಸೀತಾಪತಿಯ ಮನಸ್ಸಿನಲ್ಲಿ ಉಳಿಯಿತು. ಆ ಕಾಲುಗಳಿಗೆ ಬೇಡಿ ಹಾಕಿದ್ದಾರೆ... ಆದರೂ ಕುಳಿತಲ್ಲಿಂದಲೇ ಆಕೆ ಹುಟ್ಟೂರಿನತ್ತ ಕೈಚಾಚಿ ಹಂಬಲದ ದೃಷ್ಟಿ ಹರಿಸಿದ್ದಾಳೆ... ಅವಳೊಬ್ಬಳದೇ ಅಲ್ಲ ಆ ಆಶಯ. ತೋಟಗಳಲ್ಲಿ ದುಡಿಯಲೆಂದು ಬಯಲು ಭೂಮಿಯಿಂದ ಬರುವ ಎಲ್ಲ ಬಡಪಾಯಿಗಳ ಆಸೆಯ ಪ್ರತಿನಿಧಿ ಆಕೆ.

ಚಟುವಟಿಕೆಯಿಂದ ಸೀತಾಪತಿ ಎದ್ದುನಿಂತು, ಗೆಳೆಯ ತನಗಾಗಿಯೇ ತೆರವು ಮಾಡಿಸಿದ್ದ ಕೊಠಡಿಯತ್ತ ಸಾಗಿದ. ನರನಾಡಿಗಳಲ್ಲಿ ಚೈತನ್ಯ ಹರಿಯಿತು. ಕೈಬೆರಳುಗಳಲ್ಲಿ ಲವಲವಿಕೆ ತುಂಬಿತು. ಆ ಕಣ್ಣಗಳು ಮಿನುಗಿದುವು... ಸೀತಾಪತಿ ಮೃದುವಾದ ಮಣ್ಣಿನ ಮೇಲೆ ಕೈಯಾಡಿಸಿ ಅದನ್ನು ಹದಗೊಳಿಸಿದ.

...ಮುಂದೆ ಐದು ಗಂಟೆಗಳ ಕಾಲ ಒಂದೇ ಸಮನೆ ನಿರ್ಮಾಣ ಕಾರ್ಯದಲ್ಲಿ ಸೀತಾಪತಿ ನಿರತನಾದ. ಕೊನೆಯಲ್ಲಿ, ಹುಟ್ಟೂರಿನ ನೆಲ ಕ್ಕಾಗಿ ಹ೦ಬಲಿಸುವ ಒ೦ದಡಿ ಎತ್ತರದ ಹೆಣ್ಣು ಸಿದ್ಧವಾದಳು... ಕಾಲುಗಳಿಗೆ ಬೇಡಿ...ನೀಡಿದ ಕೈ...ಕಣ್ಣುಗಳಲ್ಲಿ ಆಸೆಯ ದೂರ ನೋಟ...

ಆಕೃತಿ ಸಿದ್ಧವಾದ ಮೇಲೆ ಸ್ವಲ್ಪ ಕಾಲ ಮನಸ್ಸಿಗೆ ನೆಮ್ಮದಿ ಎನ್ನಿಸಿತು. ಸೀತಾಪತಿ ಹೊರಹೋಗಿ, ಮತ್ತೆ ಶೂನ್ಯವನ್ನೆ ನೋಡುತ್ತ ಕುಳಿತ. ತಿರುಗಿ ಆ ಶೂನ್ಯ, ಅವ್ಯಕ್ತ ವೇದನೆಯ ಭಾರವಾದ ಹೊರೆಯನ್ನು ಅವನ ಮೇಲೆ ಹೇರಿತು ... ಆ ನೋವು-ಅಸಮಾಧಾನ-ಕ್ಷೋಭೆ ...

ದೀಪ ಹಚ್ಚುವ ಹೊತ್ತಿಗೆ ಆ ಪ್ರದೇಶದ ಧರ್ಮಗುರು ಬಂದರು.

"ಮನೆಯವರನ್ನು ಕಾಣಬೇಕಾಗಿತ್ತೆ? ಆತ ಊರಲಿಲ್ಲ,” ಎಂದ ಸೀತಾಪತಿ.

"ಇಲ್ಲ ಮಿಸ್ಟರ್ ಸೀತಾಪತಿ, ನಿಮ್ಮನ್ನೇ ಕಾಣಲು ಬಂದೆ.”

"ನಾನು ಬರಹೇಳಿದ್ದು ನೆನಪಿಲ್ಲ.”

"ఇల్ల, ನಾನಾಗಿಯೇ ಬ೦ದೆ."

"ಅಪ್ಪಣೆಯಾಗಲಿ! ಏನು ಸಮಾಚಾರ?”

ಅವರು ಸಮಾಚಾರ ಹೇಳಿದರು. ಸೀತಾಪತಿ ಅಳ್ಳೆ ಬಿರಿಯುವಂತೆ ಬಿದ್ದು ಬಿದ್ದು ನಕ್ಕ.

"ನಿಮ್ಮದು ಅಭಿನಂದನೀಯ ಸಾಹಸ ಗುರುಗಳೆ! ಹೀಗೆಲ್ಲ ಕೇಳಿ ನೀವು ನನ್ನನ್ನು ಗೌರವಿಸುತ್ತಿದ್ದೀರಿ!”

"ಇಲ್ಲ ಸೀತಾಪತಿ. ನೀವು ತಪ್ಪುಗ್ರಹಿಸಬಾರದು. ಇದು ಮಹತ್ವದ ವಿಷಯ."

ಸೀತಾಪತಿಯೊಂದು ದೇವರನ್ನು ನಿರ್ಮಿಸುವುದು ಮಹತ್ವದ ವಿಷಯ ವಲ್ಲದೆ ಮತ್ತೇನು ?

ತೋಟದ ಜೀವನದಲ್ಲಿ ಕೆಲಸಗಾರರು ಸುಖ ಕಾಣುವುದಿಲ್ಲ. ಅವರ ಯೋಚನೆ ಸತ್ಪಥದಲ್ಲಿ ಸಾಗುವುದಿಲ್ಲ. ಅವರನ್ನು ನಾಗರಿಕರನ್ನಾಗಿ ಮಾಡಲು ಇರುವ ಸಾಧನ, ಧರ್ಮವೊಂದೇ. ಅವರು ಈಗ ಕಷ್ಟಪಡುತ್ತಿರು ವುದು ಹಿಂದಿನ ಜನ್ಮದಲ್ಲಿ ಅವರು ಮಾಡಿದ ಕೆಟ್ಟ ಕೃತಿಗಳ ಕಾರಣದಿಂದ. ಈಗ ಧರ್ಮನಿಷ್ಟರಾಗಿ ದೈವಭಕ್ತರಾಗಿ ಸ್ವಾಮಿಭಕ್ತರಾಗಿ ಸಚ್ಚರಿತ್ರರಾಗಿ ಅವರು ಇದ್ದರೆ, ಮು೦ದಿನ ಜನ್ಮದಲಾದರೂ ಅವರಿಗೆ ಸುಖ ದೊರೆಯ ಬಹುದು. ತೋಟದ ಮಾಲಿಕರೂ ಹಾಗೆಯೇ ಹೇಳಿದ್ದಾರೆ. ಶ್ರದ್ಧೆ ಇಲ್ಲದೆ ಮಾನವ ಬದುಕಲಾರ. ವಿಶ್ವಾಸವಿಡಲು ಒಬ್ಬ ದೇವರಿದ್ದರೆ, ಅವನನ್ನು ನಂಬಿಯಾದರೂ ಜನ ದಿನ ನೂಕುವರು. ಆಗ ತೋಟದಿಂದ ವಾಪಸು ಓಡಿಹೋಗುವ ಪ್ರಯತ್ನವನ್ನು ಯಾರೂ ಮಾಡಲಾರರು.

-ಹೀಗೆ ಧರ್ಮಗುರು ವಿವರಿಸಿದರು. ಸೀತಾಪತಿ ನಗುತ್ತಲೇ ಇದ್ದ.

ಕೊನೆಗೆ ಅವನೆಂದ :

"ನನ್ನ ಕತೆ ನಿಮಗೆ ಗೊತ್ತಿರಬಹುದು. ನನಗೂ ಜೀವನದಲ್ಲಿ ಒಂದು ಶ್ರದ್ಧೆಯಿದೆ. ಆದರೆ ಈವರೆಗೂ ದೇವರನ್ನು ನಿರ್ಮಿಸುವ ಸಾಹಸಕ್ಕೆ ನಾನು ಕೈ ಹಾಕಿಲ್ಲ ..."

ಧರ್ಮಗುರುಗಳು, ಬಟ್ಟೆ, ಬರೆ ಮಣ್ಣು ಬಣ್ಣ ಬೀಡಿ ಸಿಗರೇಟು ಗಳೆಲ್ಲ ಅಸ್ತವ್ಯಸ್ತವಾಗಿ ಹರಡಿದ್ದ ಆ ಕೊಠಡಿಯನ್ನು ನೋಡಿದರು. ಗೋಡೆಗಳ ಮೇಲಿದ್ದ ಚಿತ್ರಗಳನ್ನು ಕಂಡರು ... ಆಮೇಲೆ ಅಲ್ಲಿದ್ದ ವಿವಿಧ ವಿಗ್ರಹಗಳನ್ನು ದೃಷ್ಟಿಸಿದರು.

"ನಾಸ್ತಿಕ ... ನರಕ ಇವನಿಗೆ ಕಟ್ಟಿಟ್ಟಿದೆ ... ಧರ್ಮಲಂಡ" ಎಂದು ಮನಸ್ಸಿನಲ್ಲೇ ಧರ್ಮಗುರು ಟಿಪ್ಪಣಿ ಮಾಡಿಕೊಂಡರು. ಆದರೆ ಪ್ರಕಾಶವಾಗಿ, “ ಇಲ್ಲ ಸೀತಾಪತಿ, ನೀವು ಹಾಗೆನ್ನಬಾರದು ... ಆ ಬಡಪಾಯಿಗಳ ಮೇಲೆ ಕನಿಕರವಿಡಬೇಕು ... ಒಬ್ಬ ದೇವರನ್ನು ನಿರ್ಮಿಸಿ ಕೊಡಬೇಕು," ಎಂದು ವಿನಯದಿಂದ ನುಡಿದರು.

“ ಹಹ್ಹ! ಬಡಪಾಯಿಗಳ ಮೇಲೆ ಕನಿಕರ ! ಸರಿ ಹೇಳಿದಿರಿ!"

"ಹಾಗಲ್ಲ ಸೀತಾಪತಿ ..."

ಇದೊಂದು ದೊಡ್ಡ ತಮಾಷೆಯೆನಿಸಿತು ಸೀತಾಪತಿಗೆ. ಅಂತೂ ಬಲು ಪ್ರಯಾಸದಿಂದ ಧರ್ಮಗುರುವನ್ನು ಕಳಿಸಿಕೊಟ್ಟುದಾಯಿತು. ಆದರೆ ಆ ಸ್ವಾರಸ್ಯಕರ ಘಟನೆಯ ನೆನಪನ್ನು ಬೀಳ್ಕೊಡುವುದಾಗಲಿಲ್ಲ ... ಸೀತಾಪತಿ ನಗುತ್ತಲೇ ಇದ್ದ.

ರಾತ್ರಿ ಏನನ್ನೋ ಆತ ಓದಲು ಯತ್ನಿಸಿದ. ಬಲು ತಡವಾಗಿ ನಿದ್ದೆ ಬ೦ತು.

ಅದರೆ ಜೊರೋ ಎ೦ದು ಸುರಿದ ಮಲೆನಾಡಿನ ಮಳೆ ಉಷಃಕಾಲದಲ್ಲಿ ಅವನನ್ನು ಎಬ್ಬಿಸಿತು.

ಸೀತಾಪತಿ ಪೈಪ್ ಹಚ್ಚಿ ಬಲು ಹೊತ್ತು ಕುಳಿತ.

ಹಾಗೆ ಕುಳಿತು ಬೇಸರವಾಗಲು, ಎದ್ದು, ಆವೆಮಣ್ಣಿನ ಮೇಲೆ ಕೈಯಾಡಿಸಿದ.

ಉದ್ದಕ್ಕೂ ಮುಗುಳ್ನಗುತ್ತಿದ್ದ ಸೀತಾಪತಿಯ ಕೈಯಲ್ಲಿ ಆ ಆವೆ ಮಣ್ಣು ರೂಪು ತಳೆದು, ಮೆಲ್ಲಮೆಲ್ಲನೆ, ದೇವರಾಗಿ ಮಾರ್ಪಾಟಾಯಿತು !

. . . ಚಿಂತಾಕ್ರಾಂತವಾದ ಹುಬ್ಬು; ಶುಭ್ರ ನಿಚ್ಚಳವಾದ ಕಣ್ಣು; ಮುಗುಳ್ನಗೆ ಮಿನುಗಿಸುವ ತುಟಿ; ಸಾಧುತ್ವವನ್ನು ತೋರಿಸುವ ಆ ಬಡಕಲು ಅಂಗಾಂಗಗಳು... ನಗುನಗುತ್ತಲೇ ಸೀತಾಪತಿ ಆ ದೇವರನ್ನು ನಿರ್ಮಿಸಿದ.

ಎರಡು ದಿನಗಳ ಬಳಿಕ ಬಂದ ಧರ್ಮಗುರು, ದೇವರನ್ನು ನೋಡಿ ದೊಡನೆಯೇ ಪ್ರಾರ್ಥನೆ ಸಲ್ಲಿಸಿದರು. ಪ್ರೀತಿಯಿಂದ ಸೀತಾಪತಿಗೆ ಧನ್ಯವಾದ ಅರ್ಪಿಸಿದರು. “ ಇಂಥ ಕೃತಿ ನಿರ್ಮಿಸಿದ್ದರ ಫಲವಾಗಿ ಈ ಪಾಪಿ ಪುನೀತನಾಗುವುದು ಖಂಡಿತ. ಇವನಿಗೆ ಸ್ವರ್ಗದಲ್ಲಿ ಸ್ಥಾನ ದೊರೆತೇ ದೊರೆಯುವುದು,” ಎಂದು ಗಟ್ಟಿಯಾಗಿ ಉಚ್ಚರಿಸುವ ಧೈರ್ಯವಿಲ್ಲದೆ, ಮನಸ್ಸಿನಲ್ಲೇ ಅಂದುಕೊಂಡರು.

ರಜಾ ದಿನವಾದ ಭಾನುವಾರವೇ ದೇವತಾ ಪ್ರತಿಷ್ಠಾಪನೆಗೆ ಯೋಗ್ಯ ವೆಂದು ತೋಟದ ಮಾಲಿಕರು ತಿಳಿಸಿದರು. ದಿನ ಗೊತ್ತಾಯಿತು. ಸೀತಾ ಪತಿಗೂ ಆಹ್ವಾನ ಹೋಯಿತು.

ಶನಿವಾರ ಸಂಜೆಯವರೆಗೂ ಸೀತಾಪತಿ, ತನ್ನ ಗೆಳೆಯ ಬರುವ ನೇನೋ ಎಂದು ಹಾದಿ ನೋಡಿದ. ಕೊನೆಗೂ ಬರದೆ ಇದಾಗ, "ಇನ್ನು ಇಲ್ಲಿರಲಾರೆ, ನಸುಕಿನಲ್ಲೆ ಹೊರಡ್ತೀನಿ... ಆರು ತಿಂಗಳ ಮೇಲೆ ಬಂದರೂ ಬಂದೆ," ಎಂದು ಬರೆದಿಟ್ಟ.

...ಎಂಟು ಗಂಟೆಗೆ ಪ್ರತಿಷ್ಠಾಪನೆಯೆಂದು ಜಾಹೀರಾಗಿತ್ತು.

ಆ ಹೊತ್ತಿಗಾಗಲೇ ಸೀತಾಪತಿ ಮೋಟಾರು ಹಾದಿಯನ್ನು ಅರಸುತ್ತ ಆರೆಂಟು ಮೈಲಿ ದೂರ ಸಾಗಿದ್ದ.

ಎಂಟು ಗಂಟೆ... ಸೀತಾಪತಿ, ಮುರಿದು ಬಿದ್ದಿದ್ದ ಮರದ ಒಂದು ಕೊಂಬೆಯಮೇಲೆ ಕುಳಿತು ಪೈಪ್ ಹೊರತೆಗೆದು, ತಂಬಾಕು ತುಂಬಿ, ಕಡ್ಡಿ ಕೊರೆದು ಸೇದತೊಡಗಿದ ...

ಎಂಥ ನಾಟಕ! ಇಷ್ಟು ಹೊತ್ತಿಗೆ ಅಲ್ಲಿ ವಾದ್ಯಗಳು ಮೊಳಗುತ್ತಿರಬಹುದು ... ದೇವರ ಮೆರವಣಿಗೆ ... ಧರ್ಮಶಾಸ್ತ್ರದ ಪಠನ ... ಕೂಲಿಕಾರರ ಸಮುದಾಯ ಭಯಭಕ್ತಿಯಿಂದ ಕೈಜೋಡಿಸಿ ನಿಂತಿರುವ ದೃಶ್ಯ ... ಆ ಸಮಾರಂಭದ ಸರ್ವ ವೆಚ್ಚವನ್ನೂ ವಹಿಸಿದ ತೋಟದಮಾಲಿಕರ ಉಪಸಂಹಾರ ಭಾಷಣ ...

ನಗಬೇಕೆನ್ನಿಸಿತು ಸೀತಾಪತಿಗೆ ...

ಆತ ಎದ್ದು ನಿಂತು ಮುಂದೆ ಸಾಗಿದ.

ಕಾಲುಗಳಿಗೆ ಸಂಕೋಲೆ, ನೀಡಿದ ಕೈ, ದೂರನೋಡುತ್ತ ಹಂಬಲಿಸುವ ದೃಷ್ಟಿ-ಅಂಥ ಆ ಬಡಪಾಯಿ ಹೆಣ್ಣು ಕಣ್ಣೆದುರಿಗೆ ಬಂದಳು. ಸ್ಮರಣೆಯಲ್ಲಿ ఆ ಸ್ಥಿರಚಿತ್ರವನ್ನು ಹೊತ್ತು ಅವನು ದಾರಿ ನಡೆದ.