ವಿಷಯಕ್ಕೆ ಹೋಗು

ಪಂಪಭಾರತ ಏಕಾದಶಾಶ್ವಾಸಂ

ವಿಕಿಸೋರ್ಸ್ದಿಂದ

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ಏಕಾದಶಾಶ್ವಾಸಂ

[ಸಂಪಾದಿಸಿ]
  • (I.VI.XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
ಕುರುಕ್ಷೇತ್ರದಲ್ಲಿ ಭೀಷ್ಮನ ಶರಶಯ್ಯೆ - ದ್ರೋಣನಿಗೆ ಸೇನಾಧಿಪತಿ ಪಟ್ಟ - ಅಭಿಮನ್ಯುವಿನ ಮರಣ - ಸೈಂಧವ ವಧೆ
ಕಂ|| ಶ್ರೀ ಯುವತಿಯನಾ ವೀರ
ಶ್ರೀ ಯುವತಿಗೆ ಸವತಿಮಾೞ್ಪೆನೆಂದರಿ ನೃಪರು|
ಳ್ಳಾಯವೆರಸೆೞೆದುಕೊಂಡು ಧ
ರಾ ಯುವತಿಗೆ ನೆಗೞ್ದ ಹರಿಗನೊರ್ವನೆ ಗಂಡಂ|| ೧ ||
ಪದ್ಯ-೧:ಪದವಿಭಾಗ-ಅರ್ಥ:ಶ್ರೀ ಯುವತಿಯನು ಆ ವೀರಶ್ರೀ ಯುವತಿಗೆ ಸವತಿ ಮಾೞ್ಪೆನೆಂದು (ಸಂಪತ್ತೆಂಬಲಕ್ಷ್ಮಿಗೆ (ಒಡೆಯನಾಗಿ) ಜಯಲಕ್ಷ್ಮಿಯನ್ನು ಸವತಿಯನ್ನಾಗಿ ಮಾಡುತ್ತೇನೆಂದು) ಅರಿ ನೃಪರು ಉಳ್ಳಾಯವೆರಸೆ ಎೞೆದುಕೊಂಡು (ಶತ್ರುರಾಜರನ್ನು ಅವರ ಸಮರಸಾಮರ್ಥ್ಯದಿಂದ ಸೆಳೆದು ವಶಪಡಿಸಿಕೊಂಡು) ಧರಾ ಯುವತಿಗೆ ನೆಗೞ್ದ ಹರಿಗನೊರ್ವನೆ ಗಂಡಂ (ಭೂದೇವಿಯ ಒಡೆಯನಾದ (ಭೂಪತಿ - ಅರಿಕೇಸರಿ) ಅರ್ಜುನನೊಬ್ಬನೇ ಶೂರನಾದವನು )
ಪದ್ಯ-೧:ಅರ್ಥ: ಸಂಪತ್ತೆಂಬಲಕ್ಷ್ಮಿಗೆ (ಒಡೆಯನಾಗಿ) ಜಯಲಕ್ಷ್ಮಿಯನ್ನು ಸವತಿಯನ್ನಾಗಿ ಮಾಡುತ್ತೇನೆಂದು ಶತ್ರುರಾಜರನ್ನು ಅವರ ಸಮರಸಾಮರ್ಥ್ಯದಿಂದ ಸೆಳೆದು ವಶಪಡಿಸಿಕೊಂಡು ಭೂದೇವಿಯ ಒಡೆಯನಾದ (ಭೂಪತಿ - ಅರಿಕೇಸರಿ) ಅರ್ಜುನನೊಬ್ಬನೇ ಶೂರನಾದವನು.
ಎಂಬ ನಿಜ ಚರಿತಮಂ ಪಲ
ರುಂ ಬಣ್ಣಿಸೆ ಕಿವಿಯನಾಂತು ಕೇಳುತ್ತುಮಳುಂ|
ಬಂ ಬೀರಮೆನಿಸಿ ತನಗಿದಿ
ರಂ ಬಂದು ಕಡಂಗಿ ಸತ್ತರಂ ಪೊಗೞುತ್ತುಂ|| ೨ ||
ಪದ್ಯ-೨:ಪದವಿಭಾಗ-ಅರ್ಥ:ಎಂಬ ನಿಜ ಚರಿತಮಂ ಪಲರುಂ ಬಣ್ಣಿಸೆ ಕಿವಿಯನಾಂತು ಕೇಳುತ್ತುಂ (ಎಂಬ ತನ್ನ ಚರಿತ್ರವನ್ನು ಅನೇಕರು ವರ್ಣಿಸುತ್ತಿರಲು ಅದನ್ನು ಕಿವಿಗೊಟ್ಟು ಕೇಳುತ್ತಲೂ) ಅಳುಂಬಂ ಬೀರಮೆನಿಸಿ (ಅತಿಶಯ ಶೂರರೆನಿಸಿಕೊಂಡು) ತನಗಿದಿರಂ ಬಂದು ಕಡಂಗಿ ಸತ್ತರಂ ಪೊಗೞುತ್ತುಂ (ತನಗೆ ಇದಿರಾಗಿ ಬಂದು ಶೌರ್ಯದಿಂದ ಹೋರಾಡಿ ಸತ್ತವರನ್ನು ಹೊಗಳುತ್ತಲೂ ಇದ್ದನು.)
ಪದ್ಯ-೨:ಅರ್ಥ: ಎಂಬ ತನ್ನ ಚರಿತ್ರವನ್ನು ಅನೇಕರು ವರ್ಣಿಸುತ್ತಿರಲು ಅದನ್ನು ಕಿವಿಗೊಟ್ಟು ಕೇಳುತ್ತಲೂ ಅತಿಶಯ ಶೂರರೆನಿಸಿಕೊಂಡು ತನಗೆ ಇದಿರಾಗಿ ಬಂದು ಶೌರ್ಯದಿಂದ ಹೋರಾಡಿ ಸತ್ತವರನ್ನು ಹೊಗಳುತ್ತಲೂ ಇದ್ದನು.
ವ|| ಅಂತು ವಿಕ್ರಾಂತ ತುಂಗನಿರ್ಪನ್ನೆಗಮಿತ್ತಲೆರಡುಂ ಪಡೆಯ ನಾಯಕರೞಿಯೆ ನೊಂದ ತಮ್ಮಣುಗಾಳ್ಗಳ ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಗಳನುಡಿಯಲುಮೋವಲುಂ ಮರ್ದುಬೆಜ್ಜರಮನಟ್ಟುತ್ತುಮಿಕ್ಕಿದ ಸನ್ನಣಂಗಳಂ ಗೆಲ್ದು ಕಣಕೆನೆ ಪೋಗುರ್ಚಿ ತಮ್ಮ ಮೆಯ್ಯೊಳುಡಿದಂಬುಗಳುಮನೆಲ್ವಂ ನಟ್ಟುಡಿದ ಬಾಳ ಕಕ್ಕಡೆಯುಡಿಗಳುಮನಯಸ್ಕಾಂತಮಂ ತೋಱಿ ತೆಗೆಯಿಸುತ್ತುಂ ವಜ್ರಮುಷ್ಟಿಯ ಪೊಯ್ಲೊಳಂ ಬಾಳ ಕೊಳೊಳಮುಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ-
ವಚನ:ಪದವಿಭಾಗ-ಅರ್ಥ: ಅಂತು ವಿಕ್ರಾಂತ ತುಂಗನು ಇರ್ಪನ್ನೆಗಂ (ಹಾಗೆ ಅತ್ಯಂತ ಪರಾಕ್ರಮಿಯಾದ ಅರ್ಜುನನು ಇರುತ್ತಿರಲು) ಇತ್ತಲೆರಡುಂ ಪಡೆಯ ನಾಯಕರು ಅೞಿಯೆ (ಅಳಿಯೆ- ಸಾಯುವಷ್ಟು) ನೊಂದ ತಮ್ಮ ಅಣುಗ ಆಳ್ಗಳ (ಎರಡು ಸೈನ್ಯದ ನಾಯಕರೂ ಸಾಯುವಷ್ಟು ನೋವನ್ನು ಪಡೆದಿದ್ದ ತಮ್ಮ ಪ್ರೀತಿಪಾತ್ರರಾದ ಸೇವಕರ,) ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಗಳನು ಉಡಿಯಲುಂ ಓವಲುಂ (ತಮ್ಮ ಹೊಗಳಿಕೆಗೆ ಪಾತ್ರವಾದ ಆನೆಗಳ, ತಮ್ಮ ಮೆಚ್ಚಿನ ಕುದುರೆಗಳ ಹುಣ್ಣುಗಳನ್ನು (ಗಾಯವನ್ನು) ಗುಣಪಡಿಸುವುದಕ್ಕೂ ರಕ್ಷಿಸುವುದಕ್ಕೂ) ಮರ್ದು ಬೆಜ್ಜರಮನು ಅಟ್ಟುತ್ತುಂ (ಔಷಧವನ್ನೂ ಲೇಪನವನ್ನೂ ವೈದ್ಯರನ್ನೂ ಕಳುಹಿಸುತ್ತಾ- ಇದ್ದರು.) ಇಕ್ಕಿದ ಸನ್ನಣಂಗಳಂ ಗೆಲ್ದು ಕಣಕೆನೆ ಪೋಗುರ್ಚಿ ತಮ್ಮ ಮೆಯ್ಯೊಳು ಉಡಿದಂಬುಗಳುಮನು ಎಲ್ವಂ (ಅವರು ಧರಿಸಿದ್ದ ಕವಚಗಳನ್ನೂ ಭೇದಿಸಿಕೊಂಡು ನೇರವಾಗಿ ಒಳಕ್ಕೆ ಪ್ರವೇಶಿಸಿ ಚುಚ್ಚಿಕೊಂಡು ಶರೀರದೊಳಗೆ ಮುರಿದುಹೋಗಿದ್ದ ಬಾಣಗಳನ್ನೂ ಎಲುಬುಗಳನ್ನೂ) ನಟ್ಟುಡಿದ ಬಾಳ ಕಕ್ಕಡೆಯುಡಿಗಳುಂ ಅನಯಸ್ಕಾಂತಮಂ (ಕತ್ತಿ ಮತ್ತು ಮುಳ್ಳುಗೋಲುಗಳ ಚೂರುಗಳನ್ನೂ ಸೂಜಿಗಲ್ಲನ್ನು (ಅಯಸ್ಕಾಂತ) ) ತೋಱಿ ತೆಗೆಯಿಸುತ್ತುಂ (ತೋರಿಸಿ ತೆಗೆಯಿಸುತ್ತಿದ್ದರು.) ವಜ್ರಮುಷ್ಟಿಯ ಪೊಯ್ಲೊಳಂ (ವಜ್ರಮುಷ್ಟಿಯ ಪೆಟ್ಟಿನಿಂದಲೂ) ಬಾಳ ಕೊಳೊಳಂ ಉಚ್ಚಳಿಸಿದ ಕಪಾಲದೋಡುಗಳಂ (ಕತ್ತಿಯ ಇರಿತದಿಂದಲೂ ಸಿಡಿದುಹೋದ ತಲೆಯ ಚಿಪ್ಪುಗಳನ್ನು) ಗಂಗೆಗಟ್ಟುತ್ತುಂ (ಗಂಗಾನದಿಗೆ ಕಳುಹಿಸುತ್ತಿದ್ದರು.)-
ವಚನ:ಅರ್ಥ:ಹಾಗೆ ಅತ್ಯಂತ ಪರಾಕ್ರಮಿಯಾದ ಅರ್ಜುನನು ಇರುತ್ತಿರಲು ಎರಡು ಸೈನ್ಯದ ನಾಯಕರೂ ಸಾಯುವಷ್ಟು ನೋವನ್ನು ಪಡೆದಿದ್ದ ತಮ್ಮ ಪ್ರೀತಿಪಾತ್ರರಾದ ಸೇವಕರ, ತಮ್ಮ ಹೊಗಳಿಕೆಗೆ ಪಾತ್ರವಾದ ಆನೆಗಳ, ತಮ್ಮ ಮೆಚ್ಚಿನ ಕುದುರೆಗಳ ಹುಣ್ಣುಗಳನ್ನು (ಗಾಯವನ್ನು) ಗುಣಪಡಿಸುವುದಕ್ಕೂ ರಕ್ಷಿಸುವುದಕ್ಕೂ ಔಷಧವನ್ನೂ ಲೇಪನವನ್ನೂ ವೈದ್ಯರನ್ನೂ ಕಳುಹಿಸುತ್ತಿದ್ದರು. ಅವರು ಧರಿಸಿದ್ದ ಕವಚಗಳನ್ನೂ ಭೇದಿಸಿಕೊಂಡು ನೇರವಾಗಿ ಒಳಕ್ಕೆ ಪ್ರವೇಶಿಸಿ ಚುಚ್ಚಿಕೊಂಡು ಶರೀರದೊಳಗೆ ಮುರಿದುಹೋಗಿದ್ದ ಬಾಣಗಳನ್ನೂ ಎಲುಬುಗಳನ್ನೂ ಕತ್ತಿ ಮತ್ತು ಮುಳ್ಳುಗೋಲುಗಳ ಚೂರುಗಳನ್ನೂ ಸೂಜಿಗಲ್ಲನ್ನು (ಅಯಸ್ಕಾಂತ) ತೋರಿಸಿ ತೆಗೆಯಿಸುತ್ತಿದ್ದರು. ವಜ್ರಮುಷ್ಟಿಯ ಪೆಟ್ಟಿನಿಂದಲೂ ಕತ್ತಿಯ ಇರಿತದಿಂದಲೂ ಸಿಡಿದುಹೋದ ತಲೆಯ ಚಿಪ್ಪುಗಳನ್ನು ಗಂಗಾನದಿಗೆ ಕಳುಹಿಸುತ್ತಿದ್ದರು.
ಉ|| ಉನ್ನತಮಸ್ತಕಸ್ಥಳದೊಳಂಬುಗಳೞ್ದುಡಿದಿರ್ದೊಡತ್ತಮಿ
ತ್ತನ್ನೆರೆ ತಂದು ಬಲ್ದಡಿಗರಿೞ್ಕುೞನೊಳ್ ಕಿೞೆ ನೊಂದೆನೆನ್ನದ|
ಎನ್ನದಣಂ ಮೊಗಂ ಮುರಿಯದಳ್ಕದೆ ಬೇನೆಗಳೊಳ್ ಮೊಗಂಗಳಂ
ಬಿನ್ನಗೆ ಮಾಡದಿರ್ದರಳವಚ್ಚರಿಯಾಗೆ ಕೆಲರ್ ಮಹಾರಥರ್|| ೩ ||
ಪದ್ಯ-೩:ಪದವಿಭಾಗ-ಅರ್ಥ:ಉನ್ನತ ಮಸ್ತಕಸ್ಥಳದೊಳು ಅಂಬುಗಳ್ ಅೞ್ದು ಉಡಿದಿರ್ದೊಡೆ (ತಲೆಯ ಮೇಲಿನ ಪ್ರದೇಶದಲ್ಲಿ ಬಾಣಗಳು ನಾಟಿಕೊಂಡು ಮುರಿದಿರಲು) ಅತ್ತಂ ಇತ್ತ ಎನ್ನೆರೆ ತಂದು ಬಲ್ದಡಿಗರು ಉೞ್ಕುೞನೊಳ್ ಕಿೞೆ (ಬಲಿಷ್ಠರಾದ ದಾಂಡಿಗರು ಆ ಕಡೆಯಿಂದ ಈ ಕಡೆಯಿಂದ ಒಟ್ಟಾಗಿ ಬಂದು ಸೇರಿ ಇಕ್ಕಳದಿಂದ ಅವುಗಳನ್ನು ಕೀಳಲು) ನೊಂದೆನು ಎನ್ನದ ಎನ್ನದ ಅಣಂ (ನೋವಾಯಿತು ಎನ್ನದೆ ಅ ಎನ್ನದೆ ಸ್ವಲ್ಪವೂ) ಮೊಗಂ ಮುರಿಯದೆ ಅಳ್ಕದೆ (ಮುಖವನ್ನು ತಿರುಗಿಸದೆ ಹೆದರದೆ) ಬೇನೆಗಳೊಳ್ ಮೊಗಂಗಳಂ ಬಿನ್ನಗೆ ಮಾಡದಿರ್ದರ್ (ಮುಖವನ್ನು ಪೆಚ್ಚಾಗಿ ಮಾಡಿಕೊಳ್ಳದೆ ಇದ್ದರು) ಅಳವಚ್ಚರಿಯಾಗೆ ಕೆಲರ್ ಮಹಾರಥರ್ (ಕೆಲವು ಮಹಾರಥರು ತಮ್ಮ ಸಾಮರ್ಥ್ಯವು ಆಶ್ಚರ್ಯಕರವಾಗುವ ಹಾಗೆ ಇದ್ದರು.)
ಪದ್ಯ-೩:ಅರ್ಥ: ತಲೆಯ ಮೇಲಿನ ಪ್ರದೇಶದಲ್ಲಿ ಬಾಣಗಳು ನಾಟಿಕೊಂಡು ಮುರಿದಿರಲು ಬಲಿಷ್ಠರಾದ ದಾಂಡಿಗರು ಆ ಕಡೆಯಿಂದ ಈ ಕಡೆಯಿಂದ ಒಟ್ಟಾಗಿ ಬಂದು ಸೇರಿ ಇಕ್ಕಳದಿಂದ ಅವುಗಳನ್ನು ಕೀಳುತ್ತಿದ್ದರೂ ನೋವಾಯಿತು ಎನ್ನದೆ ಅ ಎನ್ನದೆ ಸ್ವಲ್ಪವೂ ಮುಖವನ್ನು ತಿರುಗಿಸದೆ ಹೆದರದೆ ಮುಖವನ್ನು ಪೆಚ್ಚಾಗಿ ಮಾಡಿಕೊಳ್ಳದೆ ಇದ್ದರು. ಕೆಲವು ಮಹಾರಥರು ತಮ್ಮ ಸಾಮರ್ಥ್ಯವು ಆಶ್ಚರ್ಯಕರವಾಗುವ ಹಾಗೆ ಇದ್ದರು.
ಚಂ|| ರಸಮೊಸರ್ವನ್ನೆಗಂ ತಗುಳೆ ಪಾಡುವ ಗಾಣರ ಗೇಯಮೞ್ಕಱಂ
ಪೊಸಯಿಸೆ ಸೋಂಕುವೊಲ್ದೊಲಿಸುವೋಪಳ ಸೋಂಕು ಪೊದೞ್ದ ಜಾದಿಯೊಳ್|
ಮಸಗಿದ ಕಂಪು ಕಂಪನೊಳಕೊಂಡಲೆವೊಂದೆಲರೆಂಬಿವಂದು ಪಾ
ಱಿಸುವುವುದಗ್ರ ವೀರ ಭಟರಾಹವಕೇಳಿ ಪರಿಶ್ರಮಂಗಳಂ|| ೪ ||
ಪದ್ಯ-೪:ಪದವಿಭಾಗ-ಅರ್ಥ:ರಸಂ ಒಸರ್ವನ್ನೆಗಂ ತಗುಳೆ ಪಾಡುವ (ರಸವು ಸೂಸುವವರೆಗೂ ಬಿಡದೆ ಹಾಡುವ) ಗಾಣರ ಗೇಯಮ ಅೞ್ಕಱಂ ಪೊಸಯಿಸೆ (ಸಂಗೀತಗಾರರ ಗಾನ, ಪ್ರೀತಿಯನ್ನು ಹೊಸದಾಗಿ ಉಂಟುಮಾಡುವಂತೆ) ಸೋಂಕುವ ಒಲ್ದು ಒಲಿಸುವ (ಹತ್ತಿರವೇ ಕುಳಿತು ಪ್ರೀತಿಸಿ ಸುಖವನ್ನು ಹೆಚ್ಚಿಸುತ್ತಿರುವ) ಓಪಳ ಸೋಂಕು ಪೊದೞ್ದ ಜಾದಿಯೊಳ್ ಮಸಗಿದ ಕಂಪು ( ಪ್ರಿಯಳ ಸ್ಪರ್ಶ, ಎಲ್ಲೆಡೆಯೂ ಹರಡಿದ ಜಾಜಿಯ ತುಂಬಿದ ಪರಿಮಳದಿಂದ) ಕಂಪನೊಳಕೊಂಡ ಅಲೆವ ಒಂದು ಎಲರ್ ಎಂಬ ಇವಂದು (ಸುವಾಸನೆಯಿಂದ ಕೂಡಿದ ಗಾಳಿ ಎಂಬ ಇವು ಬಂದು) ಪಾಱಿಸುವುವು ಉದಗ್ರ ವೀರ ಭಟರ ಆಹವ ಕೇಳಿ ಪರಿಶ್ರಮಂಗಳಂ (ಶ್ರೇಷ್ಠರಾದ ವೀರಭಟರ ಯುದ್ಧ ಪರಿಶ್ರಮವನ್ನು ಪಾಱಿಸುವುವು- ಹೋಗಲಾಡಿಸುತ್ತಿದ್ದುವು.)
ಪದ್ಯ-೪:ಅರ್ಥ: ೪. ರಸವು ಸೂಸುವವರೆಗೂ ಬಿಡದೆ ಹಾಡುವ ಸಂಗೀತಗಾರರ ಗಾನ, ಪ್ರೀತಿಯನ್ನು ಹೊಸದಾಗಿ ಉಂಟುಮಾಡುವಂತೆ ಹತ್ತಿರವೇ ಕುಳಿತು ಪ್ರೀತಿಸಿ ಸುಖವನ್ನು ಹೆಚ್ಚಿಸುತ್ತಿರುವ ಪ್ರಿಯಳ ಸ್ಪರ್ಶ, ಎಲ್ಲೆಡೆಯೂ ಹರಡಿದ ಜಾಜಿಯ ತುಂಬಿದ ಪರಿಮಳದಿಂದ ಸುವಾಸನೆಯಿಂದ ಕೂಡಿದ ಗಾಳಿ ಎಂಬ ಇವು ಬಂದು ಶ್ರೇಷ್ಠರಾದ ವೀರಭಟರ ಯುದ್ಧಪರಿಶ್ರಮವನ್ನು ಹೋಗಲಾಡಿಸುತ್ತಿದ್ದುವು.
ವ|| ಆಗಳ್ ಧರ್ಮನಂದನಂ ಮುಕುಂದಂಗೆ ಬೞಿಯನಟ್ಟಿ ಬರಿಸಿ ನಮ್ಮ ಸೇನಾನಾಯಕ ನುತ್ತಾಯಕನಾಗಿ ಗಾಂಗೇಯರಿಂದಮೞಿದ ನಿನ್ನಾರ್ಗೆ ವೀರಪಟ್ಟಮಂ ಕಟ್ಟುವಂ ಪೇೞಿಮೆನೆ-
ವಚನ:ಪದವಿಭಾಗ-ಅರ್ಥ:ಆಗಳ್ ಧರ್ಮನಂದನಂ ಮುಕುಂದಂಗೆ ಬೞಿಯನಟ್ಟಿ ಬರಿಸಿ (ದೂತನನ್ನು ಕಳುಹಿಸಿ ಬರಮಾಡಿಕೊಂಡು) ನಮ್ಮ ಸೇನಾನಾಯಕನು ಉತ್ತಾಯಕನಾಗಿ ಗಾಂಗೇಯರಿಂದಂ ಅೞಿದನು (‘ನಮ್ಮ ಸೇನಾನಾಯಕನು ತನ್ನ ಪ್ರತಾಪವನ್ನು ಮೆರೆದು ಭೀಷ್ಮರಿಂದ ಮರಣಹೊಂದಿದನು) ಇನ್ನಾರ್ಗೆ ವೀರಪಟ್ಟಮಂ ಕಟ್ಟುವಂ ಪೇೞಿಮೆನೆ (ಇನ್ನು ಯಾರಿಗೆ ವೀರಪಟ್ಟವನ್ನು ಕಟ್ಟೋಣ ಹೇಳಿ’ ಎಂದು ಕೇಳಿದನು; ಕೇಳಲು-)
ವಚನ:ಅರ್ಥ: ವ|| ಆಗ ಧರ್ಮರಾಜನು ಶ್ರೀಕೃಷ್ಣನಲ್ಲಿಗೆ ದೂತನನ್ನು ಕಳುಹಿಸಿ ಬರಮಾಡಿಕೊಂಡು ‘ನಮ್ಮ ಸೇನಾನಾಯಕನು ತನ್ನ ಪ್ರತಾಪವನ್ನು ಮೆರೆದು ಭೀಷ್ಮರಿಂದ ಮರಣಹೊಂದಿದನು. ಇನ್ನು ಯಾರಿಗೆ ವೀರಪಟ್ಟವನ್ನು ಕಟ್ಟೋಣ ಹೇಳಿ’ ಎಂದು ಕೇಳಿದನು; ಕೇಳಲು-
ಕಂ|| ಬೇಳ್ವೆಯ ಕೊಂಡದೊಳುರ್ಚಿದ
ಬಾಳ್ವೆರಸರಿಬಲಮನರಿಯಲೆಂದಂಕದ ಕ|
ಟ್ಟಾಳ್ವೀರನತಿ ಬಲಂ ನಿನ
ಗಾಳ್ವೆಸಕೆಂದಿರ್ದನಲ್ತೆ ಧೃಷ್ಟದ್ಯುಮ್ನಂ|| ೫ ||
ಪದ್ಯ-೫:ಪದವಿಭಾಗ-ಅರ್ಥ:ಬೇಳ್ವೆಯ ಕೊಂಡದೊಳು ಉರ್ಚಿದ ಬಾಳ್ ವೆರಸು (ಯಜ್ಞಕುಂಡದಿಂದ ಬಿಚ್ಚಿದ ಕತ್ತಿಯ ಸಮೇತ) ಅರಿಬಲಮನ ಅರಿಯಲೆಂದು ಅಂಕದ ಕಟ್ಟಾಳ್ ವೀರನು (ಶತ್ರುಸೈನ್ಯವನ್ನು ಕತ್ತರಿಸುವುದಕ್ಕಾಗಿಯೇ ಉದ್ಭವಿಸಿದ, ಸುಪ್ರಸಿದ್ಧನೂ ಮಹಾಬಲಿಷ್ಠನೂ ವೀರನೂ ಆದ) ಅತಿ ಬಲಂ ನಿನಗೆ ಆಳ್ವೆಸಕೆಂದು ಇರ್ದನಲ್ತೆ ಧೃಷ್ಟದ್ಯುಮ್ನಂ (ನಿನಗೆ ಸೇವೆಮಾಡಲೆಂದೇ ಇದ್ದಾನಲ್ಲವೇ?)
ಪದ್ಯ-೫:ಅರ್ಥ:ಯಜ್ಞಕುಂಡದಿಂದ ಬಿಚ್ಚಿದ ಕತ್ತಿಯ ಸಮೇತ ಶತ್ರುಸೈನ್ಯವನ್ನು ಕತ್ತರಿಸುವುದಕ್ಕಾಗಿಯೇ ಉದ್ಭವಿಸಿದ, ಸುಪ್ರಸಿದ್ಧನೂ ಮಹಾಬಲಿಷ್ಠನೂ ವೀರನೂ ಆದ ಧೃಷ್ಟದ್ಯುಮ್ನನು ನಿನಗೆ ಸೇವೆಮಾಡಲೆಂದೇ ಇದ್ದಾನಲ್ಲವೇ?
ವ|| ಎಂಬುದುಮೀ ಕಜ್ಜಮೆನ್ನ ಮನದೊಳೊಡಂಬಟ್ಟ ಕಜ್ಜಮಾತನೆ ವೀರಪಟ್ಟಕ್ಕೆ ತಕ್ಕನೆಂದು ಧರ್ಮನಂದನಂ ದ್ರುಪದನಂದನಂಗೆ ಬೞಯನಟ್ಟಿ ಬರಿಸಿ ಪಿರಿದುಮೊಸಗೆವೆರಸು ತಾನೆ ವೀರಪಟ್ಟಮಂ ಕಟ್ಟಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಈ ಕಜ್ಜಮ್ ಎನ್ನ ಮನದೊಳು ಒಡಂಬಟ್ಟ ಕಜ್ಜಮ್ (ಎನ್ನಲು ಈ ಕಾರ್ಯ ನನ್ನ ಮನಸ್ಸಿಗೂ ಒಪ್ಪಿದ ಕಾರ್ಯವೇ.) ಆತನೆ ವೀರಪಟ್ಟಕ್ಕೆ ತಕ್ಕನೆಂದು ಧರ್ಮನಂದನಂ ದ್ರುಪದನಂದನಂಗೆ ಬೞಯನಟ್ಟಿ ಬರಿಸಿ (ಅವನೇ ವೀರಪಟ್ಟಕ್ಕೆ ಯೋಗ್ಯನಾದವನು ಎಂದು ಧರ್ಮರಾಜನು ದ್ರುಪದನ ಮಗನಾದ ಧೃಷ್ಟದ್ಯುಮ್ನನಿಗೆ ಹೇಳಿಕಳುಹಿಸಿ ಬರಮಾಡಿಕೊಂಡು) ಪಿರಿದುಮ್ ಒಸಗೆವೆರಸು ತಾನೆ ವೀರಪಟ್ಟಮಂ ಕಟ್ಟಿ (ವಿಶೇಷಪ್ರೀತಿಯಿಂದ ಕೂಡಿ ತಾನೆ ವೀರಪಟ್ಟವನ್ನು ಕಟ್ಟಿ-)-
ವಚನ:ಅರ್ಥ:ಎನ್ನಲು ಈ ಕಾರ್ಯ ನನ್ನ ಮನಸ್ಸಿಗೂ ಒಪ್ಪಿದ ಕಾರ್ಯವೇ. ಅವನೇ ವೀರಪಟ್ಟಕ್ಕೆ ಯೋಗ್ಯನಾದವನು ಎಂದು ಧರ್ಮರಾಜನು ದ್ರುಪದನ ಮಗನಾದ ಧೃಷ್ಟದ್ಯುಮ್ನನಿಗೆ ಹೇಳಿಕಳುಹಿಸಿ ಬರಮಾಡಿಕೊಂಡು, ವಿಶೇಷಪ್ರೀತಿಯಿಂದ ಕೂಡಿ ತಾನೆ ವೀರಪಟ್ಟವನ್ನು ಕಟ್ಟಿದನು. ಕಟ್ಟಿ-
ಕಂ|| ಆ ಸಮರಮುಖದೊಳೆಸೆವರಿ
ಕೇಸರಿಯ ವಿರೋಧಿ ರುಧಿರ ಜಲನಿಧಿವೊಲ್ ಸಂ|
ಧ್ಯಾಸಮಯಮೆಸೆಯೆ ತೞತೞ
ನೇಸಱು ಮೂಡುವುದುಮೊಡ್ಡಣಕ್ಕೆೞ್ತಂದರ್|| ೬ ||
ಪದ್ಯ-೦೬:ಪದವಿಭಾಗ-ಅರ್ಥ:ಆ ಸಮರಮುಖದೊಳು ಎಸೆವ ಅರಿಕೇಸರಿಯ ವಿರೋಧಿ ರುಧಿರ ಜಲನಿಧಿವೊಲ್ (ಆ ಯುದ್ಧದ ಆರಂಭದಲ್ಲಿ ಪ್ರಸಿದ್ಧನಾದ ಅರ್ಜುನನ ಶತ್ರುಗಳ ರಕ್ತ ಸಮುದ್ರದ ಹಾಗೆ) ಸಂಧ್ಯಾಸಮಯಂ ಎಸೆಯೆ ತೞತೞ ನೇಸಱು ಮೂಡುವುದುಂ ಒಡ್ಡಣಕ್ಕೆ ಎೞ್ತಂದರ್ (ಸಂಧ್ಯಾಕಾಲವು ಪ್ರಕಾಶಿಸುತ್ತಿರಲು ಸೂರ್ಯನು ತಳತಳನೆ ಉದಯಿಸಲು, ಎಲ್ಲರೂ ಯುದ್ಧರಂಗಕ್ಕೆ ಬಂದರು. )
ಪದ್ಯ-೦೬:ಅರ್ಥ:೬. ಆ ಯುದ್ಧದ ಆರಂಭದಲ್ಲಿ ಪ್ರಸಿದ್ಧನಾದ ಅರ್ಜುನನ ಶತ್ರುಗಳ ರಕ್ತ ಸಮುದ್ರದ ಹಾಗೆ ಸಂಧ್ಯಾಕಾಲವು ಪ್ರಕಾಶಿಸುತ್ತಿರಲು ಸೂರ್ಯನು ತಳತಳನೆ ಉದಯಿಸಲು, ಎಲ್ಲರೂ ಯುದ್ಧರಂಗಕ್ಕೆ ಬಂದರು.
ವ|| ಅಂತಜಾತಶತ್ರು ಮುನ್ನಮೆ ಬಂದೊಡ್ಡಿ ಶತ್ಕುಬಲಜಲನಿಯಳ್ಳಾಡೆ ವಿಳಯ ಕಾಳಾನಿಳನೆ ಬೀಸುವಂತೆ ಕೆಯ್ವೀಸಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತಜಾತಶತ್ರು ಮುನ್ನಮೆ ಬಂದು ಒಡ್ಡಿ (ಧರ್ಮರಾಜನು ಮೊದಲೇ ಬಂದು ಸೈನ್ಯವನ್ನು ಒಡ್ಡಿ) ಶತ್ಕುಬಲಜಲನಿಯ ಅಳ್ಳಾಡೆ (ಶತ್ರುಸೇನಾಸಮುದ್ರವು ನಡುಗುವಂತೆಯೂ) ವಿಳಯ ಕಾಳಾನಿಳನೆ ಬೀಸುವಂತೆ (ಪ್ರಳಯಕಾಲದ ಮಾರುತವು ಬೀಸುವ ಹಾಗೆ) ಕೆಯ್ವೀಸಿದಾಗಳ್ - ಕೈ ಬೀಸಿದಾಗಳ್- ( ಯುದ್ದಪ್ರಾರಂಭಸೂಚಕವಾಗಿ ಕೈಬೀಸಿದಾಗ)
ವಚನ:ಅರ್ಥ:ಧರ್ಮರಾಜನು ಮೊದಲೇ ಬಂದು ಸೈನ್ಯವನ್ನು ಒಡ್ಡಿ ಶತ್ರುಸೇನಾಸಮುದ್ರವು ನಡುಗುವಂತೆಯೂ ಪ್ರಳಯಕಾಲದ ಮಾರುತವು ಬೀಸುವ ಹಾಗೆ ಯುದ್ದಪ್ರಾರಂಭಸೂಚಕವಾಗಿ ಕೈಬೀಸಿದಾಗ-
ಮ|| ಚತುರಂಗಂ ಚತುರಂಗ ಸೈನ್ಯದೊಳಡುರ್ತ್ತುಂ ತಿಱ್ರನೆಯ್ತಂದು ತಾ
ಗಿ ತಡಂಮೆಟ್ಟದೆ ಕಾದೆ ಬಾಳ್ಗಳುಡಿಗಳ್ ಜೀರೆೞ್ದು ಮಾರ್ತಾಗಿ ಶೋ|
ಣಿತ ಧಾರಾಳಿಗಳುರ್ಚಿ ಪೆರ್ಚಿ ಸಿಡಿಯಲ್ ತೇಂಕಲ್ ವಿಮಾನಂಗಳ
ಳ್ಕಿ ತಗುಳ್ದಾಗಳೆ ಮತ್ತಮತ್ತ ತಳರ್ದರ್ ದೇವರ್ ನಭೋಭಾಗದೊಳ್|| ೭ ||
ಪದ್ಯ-೭:ಪದವಿಭಾಗ-ಅರ್ಥ:ಚತುರಂಗಂ ಚತುರಂಗ ಸೈನ್ಯದೊಳ್ ಅಡುರ್ತ್ತುಂ ತಿಱ್ರನೆಯ್ತಂದು ತಾಗಿ (ಒಂದು ಚತುರಂಗಸೈನ್ಯವು ಮತ್ತೊಂದು ಚತುರಂಗಸೈನ್ಯವನ್ನು ಸಮೀಪಿಸಿ ಬಂದು ಸುತ್ತಿ ಆಕ್ರಮಿಸಿ,) ತಡಂಮೆಟ್ಟದೆ ಕಾದೆ (ಸಾವಕಾಶ ಮಾಡದೆ ಯುದ್ಧಮಾಡಲು) ಬಾಳ್ಗಳ ಉಡಿಗಳ್ ಜೀರೆೞ್ದು ಮಾರ್ತಾಗಿ (ಕತ್ತಿಯ ಮುರುಕುಗಳು ಜೀರ್ ಎಂದು ಶಬ್ದ ಮಾಡಿಕೊಂಡು ಕತ್ತಿಯ ಮುರುಕುಗಳು ಜೀರ್ ಎಂದು ಶಬ್ದ ಮಾಡಿಕೊಂಡು ಒಂದಕ್ಕೊಂದು ತಗಲಿ-) ಶೋಣಿತ ಧಾರಾಳಿಗಳು ಉರ್ಚಿ ಪೆರ್ಚಿ ಸಿಡಿಯಲ್ (ರಕ್ತಧಾರೆಗಳು ಮೇಲಕ್ಕೆದ್ದು ಹಾರಿ ಸಿಡಿಯಲು-) ತೇಂಕಲ್ ವಿಮಾನಂಗಳು (ಮೇಲೆ ದೇವತೆಗಳ ವಿಮಾನಗಳು ತೇಲಾಡಿದುವು.) ಅಳ್ಕಿ ತಗುಳ್ದು (ಅಂತರಿಕ್ಷಭಾಗದಲ್ಲಿ ದೇವತೆಗಳು ಹೆದರಿ ಒಟ್ಟಾಗಿ ಸೇರಿ ) ಆಗಳೆ ಮತ್ತಮತ್ತ ತಳರ್ದರ್ (ಅತ್ತಿತ್ತ ಜಾರಿದರು.) ದೇವರ್ ನಭೋಭಾಗದೊಳ್ (ಅಂತರಿಕ್ಷಭಾಗದಲ್ಲಿ ದೇವತೆಗಳು )
ಪದ್ಯ-೭:ಅರ್ಥ:ಒಂದು ಚತುರಂಗಸೈನ್ಯವು ಮತ್ತೊಂದು ಚತುರಂಗಸೈನ್ಯವನ್ನು ಸಮೀಪಿಸಿ ಬಂದು ಸುತ್ತಿ ಆಕ್ರಮಿಸಿ, ಸಾವಕಾಶ ಮಾಡದೆ ಯುದ್ಧಮಾಡಲು,. ಕತ್ತಿಯ ಮುರುಕುಗಳು ಜೀರ್ ಎಂದು ಶಬ್ದ ಮಾಡಿಕೊಂಡು ಒಂದಕ್ಕೊಂದು ತಗಲಿ- ರಕ್ತಧಾರೆಗಳು ಮೇಲಕ್ಕೆದ್ದು ಹಾರಿ ಸಿಡಿದುವು. ಮೇಲೆ ದೇವತೆಗಳ ವಿಮಾನಗಳು ತೇಲಾಡಿದುವು. ಅಂತರಿಕ್ಷಭಾಗದಲ್ಲಿ ದೇವತೆಗಳು ಹೆದರಿ ಒಟ್ಟಾಗಿ ಸೇರಿ ಅತ್ತಿತ್ತ ಜಾರಿದರು.
ವ|| ಆಗಳೆರಡುಂ ಪಡೆಯ ನಾಯಕರೊಂದೊರ್ವರೊಳ್ ತಾಗಿ ಕಿಡಿಗುಟ್ಟಿದಂತೆ ಕಾದುವಾಗಳಭಿಮನ್ಯು ಉಗ್ರತೇಜನಪ್ಪ ಮಗಧ ತನೂಜನನೊಂದೆ ಪಾರೆಯಂಬಿನೊಳ್ ಕೆಯ್ಯ ಕೂಸನಿಕ್ಕುವಂತಿಕ್ಕುವುದುಂ ನೆಪ್ಪಿಂಗೆ ನೆಪ್ಪುಗೊಳ್ಳದೆ ಮಾಣೆನೆಂಬಂತೆ ಬಕಾಸುರನ ಮಗನಳಂಭೂಷನರ್ಜುನನ ಮಗನಿಳಾವಂತನನಂತಕಲೋಕಮನೆಯ್ದಿಸುವುದುಂ ಘಟೋತ್ಕಚನಿಳಾವಂತನ ಸಾವಂ ಕಂಡು ಸೈರಿಸದಳಂ ಭೂಷನನೆೞ್ಬಟ್ಟುವುದುಮವನಳ್ಕಿ ಭಗದತ್ತನಾನೆಯ ಮರೆಯಂ ಪುಗುವುದುಮಳಂಭೂಷನಂ ಪಿಂತಿಕ್ಕಿ ಭಗದತ್ತಂ ಘಟೋತ್ಕಚನಂ ಮಾರ್ಕೊಂಡು-
ವಚನ:ಪದವಿಭಾಗ-ಅರ್ಥ:ಆಗಳೆರಡುಂ ಪಡೆಯ ನಾಯಕರ್ ಒಂದ್ ಓರ್ವರೊಳ್ ತಾಗಿ (ಆಗ ಎರಡು ಸೈನ್ಯದ ನಾಯಕರೂ ಬಂದು ಒಬ್ಬರಲ್ಲಿ ಒಬ್ಬರು ತಾಗಿ- ಎದುರಿಸಿ) ಕಿಡಿಗುಟ್ಟಿದಂತೆ ಕಾದುವಾಗಳ್ (ಕೆಂಡವನ್ನ ಕುಟ್ಟಿದ ಹಾಗೆ ಯುದ್ಧಮಾಡಲು) ಅಭಿಮನ್ಯು ಉಗ್ರತೇಜನಪ್ಪ ಮಗಧ ತನೂಜನನು (ಅಭಿಮನ್ಯುವು ಬಹಳ ಉಗ್ರವಾದ ತೇಜಸ್ಸನ್ನುಳ್ಳ ಭಗದತ್ತನನ್ನು) ಒಂದೆ ಪಾರೆಯಂಬಿನೊಳ್ ಕೆಯ್ಯ ಕೂಸನಿಕ್ಕುವಂತೆ ಇಕ್ಕುವುದುಂ (ಒಂದೇ ಹಾರುವ ಬಾಣದಿಂದ ಕಯ್ಯಲ್ಲಿರುವ ಕೂಸನ್ನು ಬಡಿಯುವಂತೆ ನೆಲಕ್ಕೆ ಅಪ್ಪಳಿಸಿದನು-) ನೆಪ್ಪಿಂಗೆ ನೆಪ್ಪುಗೊಳ್ಳದೆ ಮಾಣೆನೆಂಬಂತೆ (ನೆಪ್ಪು- ಕತ್ತರಿಸು; ಕೊಲೆಗೆ ಪ್ರತಿಯಾಗಿ ಕೊಲೆಮಾಡದೆ ಬಿಡುವುದಿಲ್ಲ ಎನ್ನುವ ಹಾಗೆ) ಬಕಾಸುರನ ಮಗನ ಅಳಂಭೂಷನು ಅರ್ಜುನನ ಮಗನು ಇಳಾವಂತನನು ಅಂತಕಲೋಕಮನು ಎಯ್ದಿಸುವುದುಂ (ಹಾಗೆ ಬಕಾಸುರನ ಮಗನಾದ ಅಳಂಭೂಷನೆಂಬುವನು ಅರ್ಜುನನ ಮಗನಾದ ಇಳಾವಂತನೆಂಬುವನನ್ನು ಯಮಲೋಕಕ್ಕೆ ಕಳುಹಿಸಿದನು.) ಘಟೋತ್ಕಚನು ಇಳಾವಂತನ ಸಾವಂ ಕಂಡು ಸೈರಿಸದೆ ಅಳಂಭೂಷನನು ಎೞ್ಬಟ್ಟುವುದುಂ ಅವನು ಅಳ್ಕಿ ಭಗದತ್ತನ ಆನೆಯ ಮರೆಯಂ ಪುಗುವುದುಂ (ಘಟೋತ್ಕಚನು ಇಳಾವಂತನ ಸಾವನ್ನು ಸೈರಿಸಲಾರದೆ ಅಳಂಭೂಷನನ್ನು ಎದುರಿಸಲು ಅವನು ಹೆದರಿ ಭಗದತ್ತನ ಆನೆಯನ್ನು ಮರೆಹೊಕ್ಕನು.) ಮಳಂಭೂಷನಂ ಪಿಂತಿಕ್ಕಿ ಭಗದತ್ತಂ ಘಟೋತ್ಕಚನಂ ಮಾರ್ಕೊಂಡು (ಭಗದತ್ತನು ಅಳಂಭೂಷನನ್ನು ಹಿಂದಕ್ಕೆ ತಳ್ಳಿ ಘಟೋತ್ಕಚನನ್ನು ಪ್ರತಿಭಟಿಸಿದನು)-
ವಚನ:ಅರ್ಥ:ಆಗ ಎರಡು ಸೈನ್ಯದ ನಾಯಕರೂ ಒಬ್ಬರಲ್ಲಿ ಒಬ್ಬರು ಎದುರಿಸಿ, ಕೆಂಡವನ್ನ ಕುಟ್ಟಿದ ಹಾಗೆ ಯುದ್ಧಮಾಡಲು ಅಭಿಮನ್ಯುವು ಬಹಳ ಉಗ್ರವಾದ ತೇಜಸ್ಸನ್ನುಳ್ಳ ಭಗದತ್ತನನ್ನು ಒಂದೇ ಹಾರುವ ಬಾಣದಿಂದ ಕಯ್ಯಲ್ಲಿರುವ ಕೂಸನ್ನು ಬಡಿಯುವಂತೆ ನೆಲಕ್ಕೆ ಅಪ್ಪಳಿಸಿದನು. ಕೊಲೆಗೆ ಪ್ರತಿಯಾಗಿ ಕೊಲೆಮಾಡದೆ ಬಿಡುವುದಿಲ್ಲ ಎನ್ನುವ ಹಾಗೆ ಬಕಾಸುರನ ಮಗನಾದ ಅಳಂಭೂಷನೆಂಬುವನು ಅರ್ಜುನನ ಮಗನಾದ ಇಳಾವಂತನೆಂಬುವನನ್ನು ಯಮಲೋಕಕ್ಕೆ ಕಳುಹಿಸಿದನು. ಘಟೋತ್ಕಚನು ಇಳಾವಂತನ ಸಾವನ್ನು ಸೈರಿಸಲಾರದೆ ಅಳಂಭೂಷನನ್ನು ಎದುರಿಸಲು ಅವನು ಹೆದರಿ ಭಗದತ್ತನ ಆನೆಯನ್ನು ಮರೆಹೊಕ್ಕನು. ಭಗದತ್ತನು ಅಳಂಭೂಷನನ್ನು ಹಿಂದಕ್ಕೆ ತಳ್ಳಿ ಘಟೋತ್ಕಚನನ್ನು ಪ್ರತಿಭಟಿಸಿದನು.
ಕಂ|| ಉತ್ಕೋಪ ದಹನದೊಡನೆ ಪೃ
ಷತ್ಕಂಗಳ್ ಕೋಟಿ ಗಣಿತದಿಂದುಱುವಿನಮಾ|
ರ್ದುತ್ಕಚ ದಿತಿಜನನುಱದೆ ಘ
ಟೋತ್ಕಚನಂ ಬಿೞ್ದು ಮೂರ್ಛೆವೋಪಿನಮೆಚ್ಚಂ|| ೮ ||
ಪದ್ಯ-೮:ಪದವಿಭಾಗ-ಅರ್ಥ:ಉತ್ಕೋಪ ದಹನದೊಡನೆ (ಅತಿಯಾದ ಕೋಪಾಗ್ನಿಯೊಡನೆ) ಪೃಷತ್ಕಂಗಳ್ ಕೋಟಿ ಗಣಿತದಿಂದ (ಬಾಣಗಳು ಕೋಟಿ ಸಂಖ್ಯೆಯಿಂದ ) ಉಱುವಿನಂ ಆರ್ದು ಉತ್ಕಚ ದಿತಿಜನಂ ಉಱದೆ (ಹೆಚ್ಚುತ್ತಿರಲು ಆರ್ಭಟಿಸಿ ಕೆದರಿದ ಕೂದಲನ್ನುಳ್ಳ) ಘಟೋತ್ಕಚನಂ ಬಿೞ್ದು ಮೂರ್ಛೆವೋಪಿನಂ ಎಚ್ಚಂ (ರಾಕ್ಷಸನಾದ ಘಟೋತ್ಕಚನನ್ನು ಮೂರ್ಛೆಹೋಗುವ ಹಾಗೆ ಭಗದತ್ತನು ಹೊಡೆದನು. )
ಪದ್ಯ-೮:ಅರ್ಥ:ಅತಿಯಾದ ಕೋಪಾಗ್ನಿಯೊಡನೆ ಬಾಣಗಳು ಕೋಟಿ ಸಂಖ್ಯೆಯಿಂದ ಹೆಚ್ಚುತ್ತಿರಲು ಆರ್ಭಟಿಸಿ ಕೆದರಿದ ಕೂದಲನ್ನುಳ್ಳ ರಾಕ್ಷಸನಾದ ಘಟೋತ್ಕಚನನ್ನು ಮೂರ್ಛೆಹೋಗುವ ಹಾಗೆ ಭಗದತ್ತನು ಹೊಡೆದನು.
ವ|| ಅನ್ನೆಗಂ ವೃಕೋದರಂ ಚತುರ್ದಶ ಭುವನಂಗಳೆಲ್ಲಮಂ ತೆರಳ್ಚಿ ತೇರೈಸಿ ನುಂಗುವಂತೆ ಮಸಕದಿಂ ಭಗದತ್ತನಂ ಮಾರ್ಕೊಂಡು-
ವಚನ:ಪದವಿಭಾಗ-ಅರ್ಥ:ಅನ್ನೆಗಂ ವೃಕೋದರಂ ಚತುರ್ದಶ ಭುವನಂಗಳೆಲ್ಲಮಂ ತೆರಳ್ಚಿ ತೇರೈಸಿ (ಭೀಮನು ಹದಿನಾಲ್ಕು ಲೋಕಗಳನ್ನೂ ಉಂಡೆ ಮಾಡಿ ಚಪ್ಪರಿಸಿ ನುಂಗುವಂತೆ) ಮಸಕದಿಂ ಭಗದತ್ತನಂ ಮಾರ್ಕೊಂಡು (ಸಿಟ್ಟಿನಿಂದ ಭಗದತ್ತನನ್ನು ಪ್ರತಿಭಟಿಸಿದನು. )-
ವಚನ:ಅರ್ಥ:ಅಷ್ಟರಲ್ಲಿ ಭೀಮನು ಹದಿನಾಲ್ಕು ಲೋಕಗಳನ್ನೂ ಉಂಡೆ ಮಾಡಿ ಚಪ್ಪರಿಸಿ ನುಂಗುವಂತೆ ಸಿಟ್ಟಿನಿಂದ ಭಗದತ್ತನನ್ನು ಪ್ರತಿಭಟಿಸಿದನು.
ಚಂ|| ಇಸುವುದುಮೆಚ್ಚ ಶಾತ ಶರ ಸಂತತಿಯಂ ಭಗದತ್ತನೆಯ್ದೆ ಖಂ
ಡಿಸಿ ರಥಮಂ ಪಡಲ್ವಡಿಸೆ ಮಚ್ಚರದಿಂ ಗಜೆಗೊಂಡು ತಾಗೆ ಮಾ|
ಣಿಸಲಮರಾಪಗಾಸುತನಿದಿರ್ಚುವುದುಂ ರಥಮೞ್ಗಿ ಪೊಯ್ದು ಶಂ
ಕಿಸದಿದಿರಾಂತ ಸೈಂಧವನುಮಂ ಪವನಾತ್ಮಜನೋಡೆ ಕಾದಿದಂ|| ೯ ||
ಪದ್ಯ-೯:ಪದವಿಭಾಗ-ಅರ್ಥ:ಇಸುವುದುಂ ಎಚ್ಚ ಶಾತ ಶರ ಸಂತತಿಯಂ (ಬಾಣಪ್ರಯೋಗ ಮಾಡಿದ ಅವನ ಆ ಹರಿತವಾದ ಬಾ ಣಸಮೂಹವನ್ನು) ಭಗದತ್ತನ ಎಯ್ದೆ ಖಂಡಿಸಿ (ಬರಲು ಭಗದತ್ತನು ಪೂರ್ಣವಾಗಿ ಕತ್ತರಿಸಿ) ರಥಮಂ ಪಡಲ್ವಡಿಸೆ (ರಥವನ್ನು ಉರುಳಿಸಲು) ಮಚ್ಚರದಿಂ ಗಜೆಗೊಂಡು ತಾಗೆ (ಭೀಮನು ಮತ್ಸರದಿಂದ ಗದೆಯನ್ನು ತೆಗೆದುಕೊಂಡು ಎದುರಿಸಲು,) ಮಾಣಿಸಲು ಅಮರಾಪಗಾಸುತನು ಇದಿರ್ಚುವುದುಂ (ಅದನ್ನು ತಪ್ಪಿಸಲು ಭೀಷ್ಮನು ಅವನನ್ನು ಎದುರಿಸಲು,) ರಥಮೞ್ಗಿ ಪೊಯ್ದು (ಭೀಮನು ಅವನ ರಥವನ್ನು ನಾಶವಾಗುವಂತೆ ಹೊಡೆದು) ಶಂಕಿಸದೆ ಇದಿರಾಂತ ಸೈಂಧವನುಮಂ () ಪವನಾತ್ಮಜನು ಓಡೆ ಕಾದಿದಂ (ಸಂದೇಹವೇ ಪಡದೆ, ತನ್ನನ್ನು ಎದುರಿಸಿದ ಸೈಂಧವನನ್ನು ಪಲಾಯನಗೊಳ್ಳುವಂತೆ ಕಾದಿದನು.)
ಪದ್ಯ-೯:ಅರ್ಥ: ಬಾಣಪ್ರಯೋಗ ಮಾಡಿದ ಅವನ ಆ ಹರಿತವಾದ ಬಾ ಣಸಮೂಹವನ್ನು ಬರಲು ಭಗದತ್ತನು ಪೂರ್ಣವಾಗಿ ಕತ್ತರಿಸಿ ರಥವನ್ನು ಉರುಳಿಸಲು ಭೀಮನು ಮತ್ಸರದಿಂದ ಗದೆಯನ್ನು ತೆಗೆದುಕೊಂಡು ಎದುರಿಸಲು, ಅದನ್ನು ತಪ್ಪಿಸಲು ಭೀಷ್ಮನು ಅವನನ್ನು ಎದುರಿಸಿದನು. ಭೀಮನು ಅವನ ರಥವನ್ನು ನಾಶವಾಗುವಂತೆ ಹೊಡೆದು ಸಂದೇಹವೇ ಪಡದೆ, ತನ್ನನ್ನು ಎದುರಿಸಿದ ಸೈಂಧವನನ್ನು ಪಲಾಯನಗೊಳ್ಳುವಂತೆ ಕಾದಿದನು.
ವ|| ಅಂತು ಕಾದೆ ಸಿಂಧುರಾಜನ ಬೆಂಬಲದೊಳ್ ಕಾದಲೆಂದು ಬಂದ ನೂರ್ವರ್ ಕೌರವರುಂ ಭೀಮನೊಳ್ ತಾಗೆ ತಾಗಿದ ಬೇಗದಿಂ ದುರ್ಧರ್ಷಣ ದುರ್ಧರ್ಷಣ ದೀರ್ಘಬಾಹು ಮಹಾಬಾಹು ಚಿತ್ರೋಪಚಿತ್ರ ನಂದೋಪನಂದರ್ ಮೊದಲಾಗೆ ಮೂವತ್ತು ಮೂವರಂ ಜವಂಗೆ ಬಿರ್ದನಿಕ್ಕುವಂತಿಕ್ಕಿ ಮತ್ತಿನುೞಿದರುಮನುೞಿಯಲೀಯದೆ ಬೞಿಸಂದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಕಾದೆ ಸಿಂಧುರಾಜನ ಬೆಂಬಲದೊಳ್ ಕಾದಲೆಂದು ಬಂದ ನೂರ್ವರ್ ಕೌರವರುಂ ಭೀಮನೊಳ್ ತಾಗೆ (ಸೈಂಧವನ ಸಹಾಯಕನಾಗಿ ಕಾದಲು ಬಂದ ನೂರುಮಂದಿ ಕೌರವರೂ ಭೀಮನನ್ನು ಮುತ್ತಲು,) ತಾಗಿದ ಬೇಗದಿಂ (ಮತ್ತಿದ ಸಂಘರ್ಷದಿಂದ) ದುರ್ಧರ್ಷಣ ದುರ್ಧರ್ಷಣ ದೀರ್ಘಬಾಹು ಮಹಾಬಾಹು ಚಿತ್ರೋಪಚಿತ್ರ ನಂದೋಪನಂದರ್ ಮೊದಲಾಗೆ ಮೂವತ್ತು ಮೂವರಂ ಜವಂಗೆ ಬಿರ್ದನು ಇಕ್ಕುವಂತೆ ಇಕ್ಕಿ (ಯಮನಿಗೆ ಬಲಿಯನ್ನು ಇಡುವ ಹಾಗೆ ಹೊಡೆದು ಕೊಂದು) ಮತ್ತಿನ ಉೞಿದರುಮನು ಉೞಿಯಲೀಯದೆ ಬೞಿಸಂದಾಗಳ್ ()-
ವಚನ:ಅರ್ಥ:ಹಾಗೆ ಯುದ್ಧವಾಗುತ್ತಿರಲು, ಸೈಂಧವನ ಸಹಾಯಕನಾಗಿ ಕಾದಲು ಬಂದ ನೂರುಮಂದಿ ಕೌರವರೂ ಭೀಮನನ್ನು ಮುತ್ತಲು, ಮತ್ತಿದ ಸಂಘರ್ಷದಿಂದ ತಕ್ಷಣವೇ ದುರ್ಧರ್ಷಣ, ದುರ್ಮರ್ಷಣ, ದೀರ್ಘಬಾಹು, ಮಹಾಬಾಹು, ಚಿತ್ರೋಪಚಿತ್ರ, ನಂದೋಪನಂದರೇ ಮೊದಲಾದ ಮೂವತ್ತುಮೂರು ಜನರನ್ನು ಭೀಮನು ಯಮನಿಗೆ ಬಲಿಯನ್ನು ಇಡುವ ಹಾಗೆ ಹೊಡೆದು ಕೊಂದು. ಇನ್ನುಳಿದವರನ್ನು ಬದುಕುವುದಕ್ಕೆ ಅವಕಾಶ ಕೊಡದೆ ಸಮೀಪಕ್ಕೆ ಬಂದಾಗ-
ಮ|| ಮೊದಲಿಟ್ಟಂ ಕೊಲಲೆಂದು ಕೌರವರನಿನ್ನೇಕಿರ್ಪನಾರ್ದುರ್ಚಿ ಮು
ಕ್ಕದಿವಂಗಾಂ ಕರಮೆಯ್ದೆ ಕೂರ್ಪೆನಿವರುಂ ಸತ್ತಪ್ಪರಿಂದಿಂಗೆ ಕಾ|
ವುದನಾಂ ಕಾವೆನೆನುತ್ತ ಬೇರೆ ರಥಮಂ ಬಂದೇಱಿ ಪೋ ಪೋಗಲೆಂ
ದೊದಱುತ್ತುಂ ಪರಿತಂದು ತಾಗಿ ತಗರ್ದಂ ಗಂಗಾಸುತಂ ಭೀಮನಂ|| ೧೦ ||
ಪದ್ಯ-೧೦:ಪದವಿಭಾಗ-ಅರ್ಥ:ಮೊದಲಿಟ್ಟಂ ಕೊಲಲೆಂದು ಕೌರವರನ ಇನ್ನೇಕೆ ಇರ್ಪನು (‘ಇವನು ಕೌರವರನ್ನು ಕೊಲ್ಲಬೇಕೆಂದು ಪ್ರಾರಂಭಿಸಿದ್ದಾನೆ. --ಇನ್ನು ಸುಮ್ಮನೆ ಬಿಡುವುದಿಲ್ಲ. ) ಆರ್ದು ಉರ್ಚಿ ಮುಕ್ಕದೆ ( ಆರ್ಭಟಮಾಡಿ ಕತ್ತರಿಸಿ ನುಂಗದೇ-- ಬಿಡುವುದಿಲ್ಲ) ಇವಂಗೆ ಆಂ ಕರಂ ಎಯ್ದೆ ಕೂರ್ಪೆನು (ಇವನನ್ನು ನಾನು ವಿಶೇಷವಾಗಿ ಪ್ರೀತಿಸುತ್ತೇನೆ.) ಇವರುಂ ಸತ್ತಪ್ಪರು ಇಂದಿಂಗೆ ಕಾವುದನು ಆಂ ಕಾವೆನು ಎನುತ್ತ (ಇವನನ್ನು ನಾನು ವಿಶೇಷವಾಗಿ ಪ್ರೀತಿಸುತ್ತೇನೆ. ಇವರೂ ಸತ್ತುಹೋಗುತ್ತಾರೆ; ಈ ದಿನ ನಾನು ಸಾಧ್ಯವಾದಷ್ಟು ರಕ್ಷಿಸುತ್ತೇನೆ ಎನ್ನುತ್ತ), ಬೇರೆ ರಥಮಂ ಬಂದೇಱಿ (ಬೇರೊಂದು ರಥವನ್ನು ತರಿಸಿ ಅದನ್ನು ಏರಿಕೊಂಡು) ಪೋ ಪೋಗಲ್ ಎಂದು ಒದಱುತ್ತುಂ ಪರಿತಂದು (‘ಹೋ, ಹೋಗಬೇಡ’ ಎಂಬುದಾಗಿ ಕೂಗಿಕೊಳ್ಳುತ್ತಾ ಓಡಿ ಬಂದು) ತಾಗಿ ತಗರ್ದಂ ಗಂಗಾಸುತಂ ಭೀಮನಂ(ಭೀಷ್ಮನು ಎದುರಿಸಿ, ಭೀಮನನ್ನು ತಡೆಗಟ್ಟಿದನು)
ಪದ್ಯ-೧೦:ಅರ್ಥ:(ಭೀಮನು-) ‘ಇವನು ಕೌರವರನ್ನು ಕೊಲ್ಲಬೇಕೆಂದು ಪ್ರಾರಂಭಿಸಿದ್ದಾನೆ. ಇನ್ನು ಸುಮ್ಮನೆ ಬಿಡುವುದಿಲ್ಲ. ಆರ್ಭಟಮಾಡಿ ಕತ್ತರಿಸಿ ನುಂಗದೇ ಬಿಡುವುದಿಲ್ಲ. ಇವನನ್ನು ನಾನು ವಿಶೇಷವಾಗಿ ಪ್ರೀತಿಸುತ್ತೇನೆ. ಇವರೂ ಸತ್ತುಹೋಗುತ್ತಾರೆ ಎಂಬುದು ನಿಜವೇ ಆದರೂ ಈ ದಿನ ನಾನು ಸಾಮರ್ಥ್ಯವಾದಷ್ಟು ರಕ್ಷಿಸುತ್ತೇನೆ ಎನ್ನುತ್ತ ಬೇರೊಂದು ರಥವನ್ನು ತರಿಸಿ ಅದನ್ನು ಏರಿಕೊಂಡು ‘ಹೋ, ಹೋಗಬೇಡ’ ಎಂಬುದಾಗಿ ಕೂಗಿಕೊಳ್ಳುತ್ತಾ ಓಡಿ ಬಂದು ಭೀಷ್ಮನು ಎದುರಿಸಿ, ಭೀಮನನ್ನು ತಡೆಗಟ್ಟಿದನು
ವ|| ಅನ್ನಗೆಮತ್ತ ಸಂಸಪ್ತಕ ಬಲಮೆಲ್ಲಮನಳರೆ ಪೆಳರೆ ಕಿವುೞಿದುೞಿದು ಕೊಲ್ವಲ್ಲಿ ವಿಕ್ರಮಾರ್ಜುನಂ ಮುರಾಂತಕನೊಳಿಂತೆಂದಂ-
ವಚನ:ಪದವಿಭಾಗ-ಅರ್ಥ:ಅನ್ನಗೆಮ್ ಅತ್ತ ಸಂಸಪ್ತಕ ಬಲಮೆಲ್ಲಮನು ಅಳರೆ ಪೆಳರೆ (ಹೆದರಿ ಬೆವರುವಂತೆ ) ಕಿವುೞಿ ದುೞಿದು ಕೊಲ್ವಲ್ಲಿ (ಅವುಕಿ ಹಿಂಡಿ ಕೊಲ್ಲುವಸಮಯದಲ್ಲಿ) ವಿಕ್ರಮಾರ್ಜುನಂ ಮುರಾಂತಕನೊಳು ಇಂತೆಂದಂ-
ವಚನ:ಅರ್ಥ: ಅಷ್ಟರಲ್ಲಿ ಆ ಕಡೆ ವಿಕ್ರಮಾರ್ಜುನನು ಸಂಸಪ್ತಕ ಸೈನ್ಯವನ್ನೆಲ್ಲ ಹೆದರಿ ಬೆವರುವಂತೆ ಅವುಕಿ ಹಿಂಡಿ ಕೊಲ್ಲುವಸಮಯದಲ್ಲಿ ಕೃಷ್ಣನೊಡನೆ ಹೀಗೆಂದನು-
ಚಂ|| ಪ್ರಳಯ ಪಯೋಧಿ ನಾದಮನೆ ಪೋಲ್ತು ರಣಾನಕ ರಾವಮೀಗಳ
ಗ್ಗಳಮೆಸೆದಪ್ಪುದತ್ತ ಕರೆವಂಬಿನ ಬಲ್ಸರಿಯಿಂದಮಾ ದಿಶಾ|
ವಳಿ ಮಸುಳ್ದಿಂತು ನೀಳ್ದಪುದು ಪೋಗದೆ ಕಾದುವ ಗಂಡರಿಲ್ಲ ನಿ
ನ್ನಳಿಯನುಮಾ ವೃಕೋದರನುಮಲ್ಲದರಿಲ್ಲ ಪೆಱರ್ ಮುರಾಂತಕಾ|| ೧೧/11||
ಪದ್ಯ-೧೧:ಪದವಿಭಾಗ-ಅರ್ಥ:ಪ್ರಳಯ ಪಯೋಧಿ ನಾದಮನೆ ಪೋಲ್ತು ರಣಾನಕ ರಾವಂ (ರವ- ದ್ವನಿ) ಈಗಳ್ (ಈಗ ರಣಭೇರಿಯ ಧ್ವನಿಯು ಪ್ರಳಯಸಮುದ್ರದ ಧ್ವನಿಯಂತೆ ಕೇಳಿಸುತ್ತಿದೆ.) ಅಗ್ಗಳಮ್ ಎಸೆದಪ್ಪುದು (ವಿಶೇಷವಾಗಿ ಕೇಳಿಸುತ್ತಿದೆ) ಅತ್ತ ಕರೆವ ಅಂಬಿನ ಬಲ್ಸರಿಯಿಂದಮ್ ಆ ದಿಶಾವಳಿ ಮಸುಳ್ದು (ಮಸುಕಾಗಿ) ಇಂತು ನೀಳ್ದಪುದು ಪೋಗದೆ ( ಆ ಕಡೆ ಸುರಿಯುತ್ತಿರುವ ಬಾಣದ ಮಳೆಯಿಂದ ಆ ದಿಕ್ಕುಗಳ ಸಮೂಹವು ಮಾಸಲಾಗಿ ಕಾಂತಿಹೀನವಾಗಿ ಚಾಚಿಕೊಂಡಿದೆ) ಪೋಗದೆ ಕಾದುವ ಗಂಡರಿಲ್ಲ (ವೀರರಿಲ್ಲ) ನಿನ್ನಳಿಯನುಮ್ ಆ ವೃಕೋದರನುಂ ಅಲ್ಲದರಿಲ್ಲ ಪೆಱರ್ ಮುರಾಂತಕಾ (ಕೃಷ್ಣ, ನಿನ್ನಳಿಯನಾದ ಅಭಿಮನ್ಯು ಮತ್ತು ಭೀಮನು ವಿನಾ ಕಾದುವ ಶೂರರು ಮತ್ತಾರೂ ಅಲ್ಲಿ ಇಲ್ಲ)
ಪದ್ಯ-೧೧:ಅರ್ಥ: ಈಗ ರಣಭೇರಿಯ ಧ್ವನಿಯು ಪ್ರಳಯಸಮುದ್ರದ ಧ್ವನಿಯಂತೆ ವಿಶೇಷವಾಗಿ ಕೇಳಿಸುತ್ತಿದೆ. ಆ ಕಡೆ ಸುರಿಯುತ್ತಿರುವ ಬಾಣದ ಮಳೆಯಿಂದ ಆ ದಿಕ್ಕುಗಳ ಸಮೂಹವು ಮಾಸಲಾಗಿ ಕಾಂತಿಹೀನವಾಗಿ ಚಾಚಿಕೊಂಡಿದೆ. ಕೃಷ್ಣ, ನಿನ್ನಳಿಯನಾದ ಅಭಿಮನ್ಯು ಮತ್ತು ಭೀಮನು ವಿನಾ ಕಾದುವ ಶೂರರು ಮತ್ತಾರೂ ಅಲ್ಲಿ ಇಲ್ಲ, ಎಂದನು ಅರ್ಜುನ.
ಚಂ|| ಗುರು ಗುರುಪುತ್ರ ಶಲ್ಯ ಭಗದತ್ತ ನದೀಸುತರೆಂಬ ಸಂದ ಬೀ
ರರೆ ಮಱುವಕ್ಕಮಣ್ಣನೊಡನಿರ್ವರೆ ಕೂಸುಗಳೆಂಬ ಶಂಕೆಯುಂ|
ಪಿರಿದೆನಗೀಗಳಾದಪುದು ಮಾಣದೆ ಚೋದಿಸು ಬೇಗಮತ್ತಲ
ತ್ತ ರಥಮನೆಂದು ಭೋರ್ಗರೆಯೆ ಬಂದನರಾತಿಗೆ ಮಿೞ್ತು ಬರ್ಪವೋಲ್|| ೧೨ ||
ಪದ್ಯ-೧೨:ಪದವಿಭಾಗ-ಅರ್ಥ:ಗುರು ಗುರುಪುತ್ರ ಶಲ್ಯ ಭಗದತ್ತ ನದೀಸುತರೆಂಬ ಸಂದ ಬೀರರೆ ಮಱುವಕ್ಕಂ (ಪ್ರಸಿದ್ಧ ವೀರರೆ ಎದುರುಪಕ್ಷ) ಅಣ್ಣನೊಡನೆ ಇರ್ವರೆ ಕೂಸುಗಳೆಂಬ ಶಂಕೆಯುಂ (ನಮ್ಮ ಕಡೆ ಅಣ್ಣನಾದ ಭೀಮನೊಡನೆ ಅಭಿಮನ್ಯು ಮತ್ತು ಘಟೋತ್ಕಚರು ಎಂಬ ಮಕ್ಕಳಿಬ್ಬರೇ ಇದ್ದಾರಲ್ಲ ಶಂಕೆಯಾಗಿದೆ.) ಪಿರಿದು ಎನಗೆ ಈಗಳು ಆದಪುದು (ದೊಡ್ಡ ಚಿಂತೆ ನನಗೆ ಈಗ ಆಗಿದೆ.) ಮಾಣದೆ ಚೋದಿಸು ಬೇಗಂ ಅತ್ತಲು ಅತ್ತ ರಥಮನೆಂದು (ಆದುದರಿಂದ ಜಾಗ್ರತೆಯಾಗಿ ರಥವನ್ನು ತಡೆಯದೆ ಆ ಕಡೆ ನಡೆಯಿಸು ಎಂದು) ಭೋರ್ಗರೆಯೆ ಬಂದನು ಅರಾತಿಗೆ ಮಿೞ್ತು ಬರ್ಪವೋಲ್ (ಶತ್ರುವಿಗೆ ಮೃತ್ಯು ಬರುವ ಹಾಗೆ ಆ ಕಡೆಗೆ ಬಂದನು.)
ಪದ್ಯ-೧೨:ಅರ್ಥ: ಅರ್ಜುನನು ಕೃಷ್ಣನನ್ನು ಕುರಿತು, ಶತ್ರುಪಕ್ಷದಲ್ಲಿ ದ್ರೋಣ, ಅಶ್ವತ್ಥಾಮ, ಶಲ್ಯ, ಭಗದತ್ತ, ಭೀಷ್ಮ ಮೊದಲಾದ ಪ್ರಸಿದ್ಧ ವೀರರಿದ್ದಾರೆ. ನಮ್ಮ ಕಡೆ ಅಣ್ಣನಾದ ಭೀಮನೊಡನೆ ಅಭಿಮನ್ಯು ಮತ್ತು ಘಟೋತ್ಕಚರು ಎಂಬ ಮಕ್ಕಳಿಬ್ಬರೇ ಇದ್ದಾರಲ್ಲ ಎಂಬ ದೊಡ್ಡ ಚಿಂತೆ ನನಗೆ ಈಗ ಆಗಿದೆ. ಆದುದರಿಂದ ಜಾಗ್ರತೆಯಾಗಿ ರಥವನ್ನು ತಡೆಯದೆ ಆ ಕಡೆ ನಡೆಯಿಸು ಎಂದು ಶಬ್ದಮಾಡುತ್ತ ಶತ್ರುವಿಗೆ ಮೃತ್ಯು ಬರುವ ಹಾಗೆ (ಆ ಕಡೆಗೆ) ಬಂದನು.
ವ|| ಅಂತು ನೆಲನದಿರೆ ಬರ್ಪ ವಿಕ್ರಮಾರ್ಜುನನ ಬರವಿಂಗೆ ಕುರುಬಲಮೆಲ್ಲ ಮೊಲ್ಲನುಲಿದೋಡಿ ಸುರಾಪಗಾನಂದನನ ಮರೆಯಂ ಪೊಕ್ಕಾಗಳ್-
ವಚನ:ಪದವಿಭಾಗ-ಅರ್ಥ:ಅಂತು ನೆಲನು ಅದಿರೆ ಬರ್ಪ ವಿಕ್ರಮಾರ್ಜುನನ ಬರವಿಂಗೆ (ನೆಲವು ನಡುಗುವ ಹಾಗೆ ಬರುತ್ತಿರುವ ಅರ್ಜುನನ ಬರುವಿಕೆಗೆ) ಕುರುಬಲಂ ಎಲ್ಲ ಮೊಲ್ಲನೆ ಉಲಿದೋಡಿ ಸುರಾಪಗಾನಂದನನ ಮರೆಯಂ ಪೊಕ್ಕಾಗಳ್ (ಕೌರವಸೈನ್ಯವೆಲ್ಲ ಒಟ್ಟಿಗೆ ಕೂಗಿಕೊಂಡು ಓಡಿ ಭೀಷ್ಮನ ಮರೆಹೊಕ್ಕವು. ಆಗ)-
ವಚನ:ಅರ್ಥ:ವ|| ಹಾಗೆ ನೆಲವು ನಡುಗುವ ಹಾಗೆ ಬರುತ್ತಿರುವ ಅರ್ಜುನನ ಬರುವಿಕೆಗೆ ಕೌರವಸೈನ್ಯವೆಲ್ಲ ಒಟ್ಟಿಗೆ ಕೂಗಿಕೊಂಡು ಓಡಿ ಭೀಷ್ಮನ ಮರೆಹೊಕ್ಕವು.
ಮ|| ಎಡೆಗೊಂಡಂಕದ ಶಲ್ಯ ಸೈಂಧವ ಕೃಪ ದ್ರೋಣರ್ಕಳುಂ ಸಾಯಕಂ
ಗಿಡೆ ತನ್ನೆಚ್ಚ ಶರಾಳಿಗಳ್ ವಿಲಯ ಕಾಲೋಲ್ಕಂಗಳಂ ತಾಗಿದಾ|
ಗಡೆ ತತ್ಸೂತ ರಥಾಶ್ವ ಕೇತನ ಶರವ್ರಾತಂಗಳುಂ ನುರ್ಗಿ ಕ
ಣ್ಗಿಡೆ ಬೆನ್ನಟ್ಟಿದನಂತು ನಮ್ಮ ಹರಿಗಂ ಗಂಡಂ ಪೆಱರ್ ಗಂಡರೇ|| ೧೩ ||
ಪದ್ಯ-೧೩:ಪದವಿಭಾಗ-ಅರ್ಥ:ಎಡೆಗೊಂಡು (ನಡುವೆ ಬಂದ) ಅಂಕದ ಶಲ್ಯ ಸೈಂಧವ ಕೃಪ ದ್ರೋಣರ್ಕಳುಂ ಸಾಯಕಂ ಗಿಡೆ (ಬಾಣಗಳು ನಿಷ್ಪ್ರಯೋಜಕವಾಗಲು) ತನ್ನ ಎಚ್ಚ ಶರಾಳಿಗಳ್ ವಿಲಯ ಕಾಲೋಲ್ಕಂಗಳಂ (ಅfಜುನನು / ತಾನು ಹೊಡೆದ ಬಾಣಗಳು ಪ್ರಳಯಕಾಲದ ಉಲ್ಕಾಪಾತಗಳು) ತಾಗಿದಾಗಡೆ (ತಗಲಿದ ಕೂಡಲೆ) ತತ್ಸೂತ ರಥಾಶ್ವ ಕೇತನ ಶರವ್ರಾತಂಗಳುಂ (ಅದರ ಸೂತ ಆ ಸಾರಥಿ, ತೇರು, ಕುದುರೆ, ಬಾವುಟ, ಬಾಣಸಮೂಹ ) ನುರ್ಗಿ ಕಣ್ಗಿಡೆ (ನುರಿಯಾಗಿ ಕಂಗೆಡಲು) ಬೆನ್ನಟ್ಟಿದನು ಅಂತು (ಹಾಗೆ ನಮ್ಮ ಅರಿಕೇಸರಿ ಬೆನ್ನಟ್ಟಿದನು)ನಮ್ಮ ಹರಿಗಂ ಗಂಡಂ ಪೆಱರ್ ಗಂಡರೇ(ಶೂರನೆಂದರೆ ನಮ್ಮ ಅರಿಕೇಸರಿ, ಅವನಂತೆ ಮತ್ತಾರಿದ್ದಾರೆ.)
ಪದ್ಯ-೧೩:ಅರ್ಥ:೧೩. ನಡುವೆ ಬಂದ ಶಲ್ಯ ಸೈಂಧವ ಕೃಪ ದ್ರೋಣಾದಿಗಳ ಭೀಷ್ಮರು ಬಾಣಗಳು ನಿಷ್ಪ್ರಯೋಜಕವಾಗಲು, ಅರ್ಜುನನು ಪ್ರಯೋಗಿಸದ ಬಾಣಸಮೂಹಗಳು ಪ್ರಳಯಕಾಲದ ಉಲ್ಕಾಪಾತಗಳಂತೆ ಅವರ ಆ ಸಾರಥಿ, ತೇರು, ಕುದುರೆ, ಬಾವುಟ, ಬಾಣಸಮೂಹ -ಎಲ್ಲವೂ ನುರಿಯಾಗಿ- ಪುಡಿಯಾಗಿ ಕಂಗೆಡಲು, ಹಾಗೆ ನಮ್ಮ ಅರ್ಜುನನು ಬೆನ್ನಟ್ಟಿದನು. ಶೂರನೆಂದರೆ ನಮ್ಮ ಅರಿಕೇಸರಿ, ಅವನಂತೆ ಮತ್ತಾರಿದ್ದಾರೆ.
ವ|| ಅಂತತಿರಥ ಸಮರಥ ಮಹಾರಥಾರ್ಧರರ್ಥರ್ಕಳನಾನೆ ಮೆಟ್ಟಿದ ಕುಳುಂಪೆಯ ನೀರಂತೆ ದೆಸೆದೆಸೆಗೆ ಕೆದಱುವನ್ನಮೆೞ್ಬಟ್ಟಿ ದಾಗಳ್ ಸೋಲ್ತ ತನ್ನ ಬಲಮನಳುಂಬಮಾದ ವಿಕ್ರಮಾರ್ಜುನನ ಭುಜಬಲಮುಮಂ ಕಂಡು ಕನಕತಾಳಧ್ವಜಂಗೆ ಪನ್ನಗಧ್ವಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಅತಿರಥ ಸಮರಥ ಮಹಾರಥ ಅರ್ಧರರ್ಥರ್ಕಳನು ಆನೆ ಮೆಟ್ಟಿದ ಕುಳುಂಪೆಯ (ಕೊಳ, ಹೊಂಡದ) ನೀರಂತೆ ದೆಸೆದೆಸೆಗೆ ಕೆದಱುವನ್ನಂ (ದಿಕ್ಕುದಿಕ್ಕಿಗೂ ಸಿಡಿದು ಚದುರಿ ) ಎೞ್ಬಟ್ಟಿದಾಗಳ್ ಸೋಲ್ತ ತನ್ನ ಬಲಮನು (ಓಡುತ್ತಿರಲು, ಸೋತ ತನ್ನ ಸೈನ್ಯವನ್ನೂ,) ಅಳುಂಬಮಾದ (ಅತಿಶಯವಾದ) ವಿಕ್ರಮಾರ್ಜುನನ ಭುಜಬಲಮುಮಂ ಕಂಡು,(ಅರ್ಜುನನ ಶೌರ್ವನ್ನೂ ನೋಡಿ) ಕನಕತಾಳಧ್ವಜಂಗೆ (ಹೊಂದಾಳೆಯ ಚಿಹ್ನೆಯ ಧ್ಜಜವುಳ್ಳ ಭೀಷ್ಮನಿಗೆ ) ಪನ್ನಗಧ್ವಜನಿಂತೆಂದಂ ( ಸರ್ಪಧ್ವಜದ ದುರ್ಯೋಧನನು ಭೀಷ್ಮನನ್ನು ಕುರಿತು ಹೀಗೆಂದನು.)-
ವಚನ:ಅರ್ಥ:ಹಾಗೆ ಅತಿರಥ ಸಮರಥ ಮಹಾರಥ ಅರ್ಧರಥರುಗಳನ್ನು ಆನೆ ತುಳಿದು ಕದಡಿದ ಕುಂಟೆಯ ನೀರಿನ ಹಾಗೆ ದಿಕ್ಕುದಿಕ್ಕಿಗೂ ಸಿಡಿದು ಓಡುತ್ತಿರಲು, ಸೋತ ತನ್ನ ಸೈನ್ಯವನ್ನೂ, ಅರ್ಜುನನ ಶೌರ್ವನ್ನೂ ನೋಡಿ ದುರ್ಯೋಧನನು ಭೀಷ್ಮನನ್ನು ಕುರಿತು ಹೀಗೆಂದನು.
ತರಳ|| ಮುಳಿಯೆ ಬಿನ್ನಪಮಜ್ಜ ದಾಯಿಗರೊಳ್ ವಿರೋಧಮನಿಂತು ಬ
ಳ್ವಳನೆ ಮಾೞ್ಪುದನಂದು ನಿಮ್ಮನೆ ನಂಬಿ ಮಾಡಿದೆನಿಂತು ಗೋ|
ವಳಿಗನಂ ಗೆಡೆಗೊಂಡು ಮುಂ ಬಳೆದೊಟ್ಟ ಪೇಡಿಯೆ ನಿಮ್ಮನಿಂ
ತಿಳಿಸಿ ಮದ್ದಲಮೆಲ್ಲಮಂ ಕೊಲೆ ನೋಡುತಿರ್ಪುದು ಪಾೞಿಯೇ|| ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ಮುಳಿಯೆ ಬಿನ್ನಪಂ ಅಜ್ಜ (ಅಜ್ಜ, ವಿಜ್ಞಾಪನೆ; ಕೋಪಮಾಡಬೇಡಿ) ದಾಯಿಗರೊಳ್ ವಿರೋಧಮನು ಇಂತು ಬಳ್ವಳನೆ (ಬಹಳವಾಗಿ) ಮಾೞ್ಪುದನು ಅಂದು ನಿಮ್ಮನೆ ನಂಬಿ ಮಾಡಿದೆನು (ದಾಯಾದಿಗಳಲ್ಲಿ ಈ ರೀತಿಯ ವಿರೋವನ್ನು ಮಾಡುವಾಗ ನಿಮ್ಮ ವಿಶೇಷವಾದ ಸಹಾಯಮಾಡುವುದನ್ನೇ ನಂಬಿ ಮಾಡಿದೆನು) ಇಂತು ಗೋವಳಿಗನಂ ಗೆಡೆಗೊಂಡು (ಹೀಗಿರುವಲ್ಲಿ ಈಗ ಹೀಗೆ ದನಕಾಯುವವನೊಬ್ಬನ ಸ್ನೇಹಮಾಡಿಕೊಂಡು) ಮುಂ ಬಳೆದೊಟ್ಟ ಪೇಡಿಯೆ (ಹೀಗಿರುವಲ್ಲಿ ಈಗ ಹೀಗೆ ದನಕಾಯುವವನೊಬ್ಬನ ಸ್ನೇಹಮಾಡಿಕೊಂಡು ಬಳೆದೊಟ್ಟ ಹೇಡಿಯೊಬ್ಬನು) ನಿಮ್ಮನು ಇಂತು ಇಳಿಸಿ ಮದ್ ಬಲಮೆಲ್ಲಮಂ ಕೊಲೆ ನೋಡುತಿರ್ಪುದು ಪಾೞಿಯೇ (ನನ್ನ ಸೈನ್ಯವೆಲ್ಲವನ್ನೂ ಕೊಲ್ಲುತ್ತಿರಲು ಅದನ್ನು ನೀವು ಉದಾಸೀನವಾಗಿ ನೋಡುತ್ತಿರುವುದು ಧರ್ಮವೇ? ಅಲ್ಲ.)
ಪದ್ಯ-೧೪:ಅರ್ಥ:ಅಜ್ಜನೇ, ವಿಜ್ಞಾಪನೆ; ಕೋಪಮಾಡಬೇಡಿ, ದಾಯಾದಿಗಳಲ್ಲಿ ಈ ರೀತಿಯ ವಿರೋವನ್ನು ಮಾಡುವಾಗ ನಿಮ್ಮ ವಿಶೇಷವಾದ ಸಹಾಯಮಾಡುವುದನ್ನೇ ನಂಬಿ ಮಾಡಿದೆನು. ಹೀಗಿರುವಲ್ಲಿ ಈಗ ಹೀಗೆ ದನಕಾಯುವವನೊಬ್ಬನ ಸ್ನೇಹಮಾಡಿಕೊಂಡು ಬಳೆದೊಟ್ಟ ಹೇಡಿಯೊಬ್ಬನು ನಿಮ್ಮನ್ನು ಹೀಗೆ ಅವಮಾನಮಾಡಿ ನನ್ನ ಸೈನ್ಯವೆಲ್ಲವನ್ನೂ ಕೊಲ್ಲುತ್ತಿರಲು ಅದನ್ನು ನೀವು ಉದಾಸೀನವಾಗಿ ನೋಡುತ್ತಿರುವುದು ಧರ್ಮವೇ? ಅಲ್ಲ.
ಕಂ|| ಮೇಳದೊಳೆಂತುಂ ಪೋ ಪೆಱ
ರಾಳಂ ಛಿದ್ರಿಸುವೆವೆಂಬ ಪಾಡವರೊಳ್ ನೀಂ|
ಮೇಳಿಸಿ ನಣ್ಪನೆ ಬಗೆದಿರ್
ಜೋಳದ ಪಾೞಿಯುಮನಿನಿಸು ಬಗೆಯಿಂ ನಿಮ್ಮೊಳ್|| ೧೫ ||
ಪದ್ಯ-೧೫:ಪದವಿಭಾಗ-ಅರ್ಥ:ಮೇಳದೊಳ್ (ಸ್ನೇಹದಲ್ಲಿ) ಎಂತುಂ ಪೋ(ಬಿಡು) ಪೆಱರ ಆಳಂ ಛಿದ್ರಿಸುವು ಎಂಬ (ಸ್ನೇಹದಿಂದಿರುವಾಗ ಎದುರು ಪಕ್ಷದ ಶೂರರನ್ನು- ಹೇಗೆ- ಭೇದಿಸಬಲ್ಲೆವು? ಹೋಗಲಿ ಬಿಡು!) ಪಾಡವರೊಳ್ ನೀಂ ಮೇಳಿಸಿ ನಣ್ಪನೆ (ನಂಟತನವನ್ನು)ಬಗೆದಿರ್ (ಪಾಂಡವರಲ್ಲಿ ನೀವು ಸೇರಿಕೊಂಡು ಬಾಂಧವ್ಯವನ್ನೇ ಬಗೆದಿರಿ; ಬಗೆಯದಿರಿ? ) ಜೋಳದ ಪಾೞಿಯುಮನು (ಅನ್ನದ ಧರ್ಮವನ್ನು;) ಇನಿಸು ಬಗೆಯಿಂ ನಿಮ್ಮೊಳ್ (ನಿಮ್ಮ ಮನಸ್ಸಿನಲ್ಲಿ ಅನ್ನದ ಋಣವನ್ನು ಸ್ವಲ್ಪ ಯೋಚಿಸಿ.)
ಪದ್ಯ-೧೫:ಅರ್ಥ: ೧೫. ‘ಸ್ನೇಹದಿಂದಿರುವಾಗ ಎದುರು ಪಕ್ಷದ ಶೂರರನ್ನು ಹೇಗೆ ಭೇದಿಸಬಲ್ಲೆವು? ಹೋಗಲಿ ಬಿಡು!’ ಎಂಬುದಾಗಿರುವ ಪಾಂಡವರಲ್ಲಿ ನೀವು ಸೇರಿಕೊಂಡು ಬಾಂಧವ್ಯವನ್ನೇ ಬಗೆದಿರಿ; ನಿಮ್ಮ ಮನಸ್ಸಿನಲ್ಲಿ ಅನ್ನದ ಋಣವನ್ನು ಸ್ವಲ್ಪ ಯೋಚಿಸಿ.
ವ|| ಎಂಬುದುಂ ಸಿಂಧುತನೂಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಸಿಂಧುತನೂಜನು ಇಂತೆಂದಂ-
ವಚನ:ಅರ್ಥ: ಎನ್ನಲು ಭೀಷ್ಮನು ಹೀಗೆ ಹೇಳಿದನು
ಮ|| ತ್ರಿಜಗಕ್ಕಂ ಗುರು ದೇವನಾದಿಪುರುಷಂ ಕೇಳೊರ್ವನೊರ್ವಂ ರಿಪು
ಧ್ವಜಿನೀ ಧ್ವಂಸಕನಾಗಿ ಸಂದ ಕಲಿಯುಂ ಬಿಲ್ಲಾಳುಮಿನ್ನೆಂದೊಡೆಂ|
ತು ಜಗತ್ಖ್ಯಾತರನೇಳಿಪೈ ಮರೆವೆನೇ ಮುಂ ಪೂಣ್ದುದಂ ಬಿಲ್ ರಥಂ
ಕಧ್ವಜಮಂಬೆಂಬಿವನೆಯ್ದೆ ಸಂಧಿಸು ಜಸಂ ನಿಲ್ವನ್ನೆಗಂ ಕಾದುವೆಂ|| ೧೬ ||
ಪದ್ಯ-೧೬:ಪದವಿಭಾಗ-ಅರ್ಥ:ತ್ರಿಜಗಕ್ಕಂ ಗುರು ದೇವನು ಆದಿಪುರುಷಂ ಕೇಳು ಒರ್ವನ್ (ಧುರ್ಯೋಧನನೇ, ಕೇಳು, ಅವರಲ್ಲಿ ಒಬ್ಬನಾದ ಕೃಷ್ಣನು ಮೂರುಲೋಕಕ್ಕೂ ಗುರು, ಒಡೆಯ, ಆದಿಪುರುಷ,) ಒರ್ವಂ ರಿಪುಧ್ವಜಿನೀ ಧ್ವಂಸಕನಾಗಿ ಸಂದ ಕಲಿಯುಂ ಬಿಲ್ಲಾಳುಂ (ಮತ್ತೊಬ್ಬನಾದ ಅರ್ಜುನನು ಶತ್ರುಪಕ್ಷವನ್ನು ನಾಶಮಾಡುವುದರಲ್ಲಿ ಪ್ರಸಿದ್ಧನಾದ ಶೂರ.) ಇನ್ನು ಎಂದೊಡೆ ಎಂತು ಜಗತ್ ಖ್ಯಾತರನು ಏಳಿಪೈ ಮರೆವೆನೇ ಮುಂ ಪೂಣ್ದುದಂ (ಹೀಗಿರುವಾಗ, ಲೋಕಪ್ರಸಿದ್ಧರಾದವರನ್ನು ಹೇಗೆ ತಿರಸ್ಕರಿಸುತ್ತೀಯೆ? ನಾನು ಮೊದಲು ಮಾಡಿದ ಪ್ರತಿಜ್ಞೆಯನ್ನು ಮರೆಯುತ್ತೇನೆಯೆ?) ಬಿಲ್ ರಥ ಅಂಕ ಧ್ವಜಂ ಎಂಬ ಎಂಬಿವನು ಎಯ್ದೆ ಸಂಧಿಸು (ಬಿಲ್ಲು, ಬಾವುಟ, ಬಾಣ, ತೇರುಗಳನ್ನು ತರಿಸಿ-ಸಿದ್ಧಮಾಡಿದರೆ) ಜಸಂ ನಿಲ್ವನ್ನೆಗಂ ಕಾದುವೆಂ (ಯಶಸ್ಸು ಶಾಶ್ವತವಾಗಿ ನಿಲ್ಲುವ ಹಾಗೆ ಕಾದುತ್ತೇನೆ)
ಪದ್ಯ-೧೬:ಅರ್ಥ:“ಧುರ್ಯೋಧನನೇ, ಕೇಳು, ಅವರಲ್ಲಿ ಒಬ್ಬನಾದ ಕೃಷ್ಣನು ಮೂರುಲೋಕಕ್ಕೂ ಗುರು, ಒಡೆಯ, ಆದಿಪುರುಷ, ಮತ್ತೊಬ್ಬನಾದ ಅರ್ಜುನನು ಶತ್ರುಪಕ್ಷವನ್ನು ನಾಶಮಾಡುವುದರಲ್ಲಿ ಪ್ರಸಿದ್ಧನಾದ ಶೂರ. ಹೀಗಿರುವಾಗ, ಲೋಕಪ್ರಸಿದ್ಧರಾದವರನ್ನು ಹೇಗೆ ತಿರಸ್ಕರಿಸುತ್ತೀಯೆ? ನಾನು ಮೊದಲು ಮಾಡಿದ ಪ್ರತಿಜ್ಞೆಯನ್ನು ಮರೆಯುತ್ತೇನೆಯೆ? ಬಿಲ್ಲು, ಬಾವುಟ, ಬಾಣ, ತೇರುಗಳನ್ನು ಸಿದ್ಧಮಾಡು. ಯಶಸ್ಸು ಶಾಶ್ವತವಾಗಿ ನಿಲ್ಲುವ ಹಾಗೆ ಕಾದುತ್ತೇನೆ
ವ|| ಎಂಬುದುಮನೇಕ ಶರಭರಿತ ಶಕಟಸಹಸ್ರಮನೊಂದುಮಾಡಿ ಗಾಂಗೇಯನ ಪೆಱಗೆ ನಿಲಿಸಿದಾಗಳಮರಾಪಗಾನಂದನನುಮ ಮರೇಂದ್ರನಂದನನುಮೊರ್ವರೊರ್ವರುಂ ಗಱಿಸನ್ನೆಗೆಯ್ದು ಕಾದುವಾಗಳಂಬರತಳದೊಳೆಲ್ಲಂ ಬಿಳಿಯ ಮುಗಿಲ್ಗಳ ಚೌಪಳಿಗೆಗಳೊಳ್ ಬಂದಿರ್ದ ದೇವ ವಿಮಾನಂಗಳುಮೊಡನೊಡನೆ ಕಲಂಕೆ ಕುಲಗಿರಿಗಳುಂ ದಿಕ್ಕರಿಗಳುಮೊಡನೊಡನೆ ತಾಗಿದಂತೆ ತಾಗಿದಾಗಳ್-
ವಚನ:ಪದವಿಭಾಗ-ಅರ್ಥ:.ಎಂಬುದುಂ ಅನೇಕ ಶರಭರಿತ ಶಕಟಸಹಸ್ರಮನು ಒಂದುಮಾಡಿ (ಎಂದು ಹೇಳಲು, ದುರ್ಯೋಧನನು ಅನೇಕ ಬಾಣಗಳಿಂದ ತುಂಬಿದ ಸಾವಿರಾರು ಬಂಡಿಗಳನ್ನು ಒಟ್ಟುಗೂಡಿಸಿ) ಗಾಂಗೇಯನ ಪೆಱಗೆ ನಿಲಿಸಿದಾಗಳ್ ಅಮರಾಪಗಾನಂದನನುಂ ಅಮರೇಂದ್ರನಂದನನುಂ ಒರ್ವರೊರ್ವರುಂ (ಭೀಷ್ಮನೂ ಅರ್ಜುನನೂ ಒಬ್ಬರನ್ನೊಬ್ಬರು) ಗಱಿಸನ್ನೆಗೆಯ್ದು ಕಾದುವಾಗಳ್ (ಬಾಣದ ಗರಿಯಿಂದ ಸನ್ನೆಮಾಡಿ ಯುದ್ಧಮಾಡಲು ಪ್ರಾರಂಭಿಸಿದಾಗ-) ಅಂಬರತಳದೊಳ್ ಎಲ್ಲಂ ಬಿಳಿಯ ಮುಗಿಲ್ಗಳ ಚೌಪಳಿಗೆಗಳೊಳ್ ( ಆಕಾಶಪ್ರದೇಶದಲ್ಲೆಲ್ಲ ಚೌಕಾಕಾರದ ಮಂಟಪ (ತೇರು)ಗಳಲ್ಲಿ ) ಬಂದಿರ್ದ ದೇವ ವಿಮಾನಂಗಳುಂ ಒಡನೊಡನೆ ಕಲಂಕೆ (ಬಂದಿದ್ದ ದೇವವಿಮಾನಗಳು ಜೊತೆ ಜೊತೆಯಲ್ಲಿಯೇ ಕ್ರಮತಪ್ಪಿ ಕಲಕಿಹೋದುವು) ಕುಲಗಿರಿಗಳುಂ ದಿಕ್ಕರಿಗಳುಂ ಒಡನೊಡನೆ ತಾಗಿದಂತೆ ತಾಗಿದಾಗಳ್ (ಕುಲಪರ್ವತಗಳೂ ದಿಗ್ಗಜಗಳೂ ಒಟ್ಟಿಗೆ ತಾಗುವ ಹಾಗೆ ಹೋರಾಡಿದಾಗ-)-
ವಚನ:ಅರ್ಥ:ಎಂದು ಹೇಳಲು, ದುರ್ಯೋಧನನು ಅನೇಕ ಬಾಣಗಳಿಂದ ತುಂಬಿದ ಸಾವಿರಾರು ಬಂಡಿಗಳನ್ನು ಒಟ್ಟುಗೂಡಿಸಿ ಭೀಷ್ಮನ ಹಿಂದೆ ನಿಲ್ಲಿಸಿದಾಗ, ಭೀಷ್ಮನೂ ಅರ್ಜುನನೂ ಒಬ್ಬರನ್ನೊಬ್ಬರು ಬಾಣದ ಗರಿಯಿಂದ ಸನ್ನೆಮಾಡಿ ಯುದ್ಧಮಾಡಲು ಪ್ರಾರಂಭಿಸಿದರು. ಆಕಾಶಪ್ರದೇಶದಲ್ಲೆಲ್ಲ ಚೌಕಾಕಾರದ ಮಂಟಪ (ತೇರು)ಗಳಲ್ಲಿ ಬಂದಿದ್ದ ದೇವವಿಮಾನಗಳು ಜೊತೆ ಜೊತೆಯಲ್ಲಿಯೇ ಕ್ರಮತಪ್ಪಿ ಕಲಕಿಹೋದುವು. ಕುಲಪರ್ವತಗಳೂ ದಿಗ್ಗಜಗಳೂ ಒಟ್ಟಿಗೆ ತಾಗುವ ಹಾಗೆ ಹೋರಾಡಿದಾಗ-
ಮ|| ಉಪಮಾತೀತದ ಬಿಲ್ಲ ಬಲ್ಮೆ ಸಮಸಂದೊಂದೊರ್ವರೊಳ್ ಪರ್ವೆ ಪ
ರ್ವಿ ಪರವ್ಯೂಹ ಭಯಂಕರಂ ನೆಗೆದು ಪಾರ್ದಾರ್ದೆಚ್ಚೊಡಂಬಂಬನ|
ಟ್ಟಿ ಪಳಂಚುತ್ತೆ ಸಿಡಿಲ್ದ ತೋರಗಿಡಿಯಿಂದೊಂದೊಂದಳ್ ಬೇವುದುಂ
ತ್ರಿಪುರಂಬೊತ್ತಿಸಿದಂತೆ ಪೊತ್ತಿ ಪೊಗೆದತ್ತೆತ್ತಂ ವಿಯನ್ಮಂಡಳಂ|| ೧೭ ||
ಪದ್ಯ-೧೭:ಪದವಿಭಾಗ-ಅರ್ಥ:ಉಪಮಾತೀತದ ಬಿಲ್ಲ ಬಲ್ಮೆ ಸಮಸಂದು ಒಂದೊರ್ವರೊಳ್ (ಒಬ್ಬೊಬ್ಬರಲ್ಲಿಯೂ ಹೋಲಿಕೆಮೀರಿದ ಅಸ್ತ್ರವಿದ್ಯಾ ನೈಪುಣ್ಯವು) ಪರ್ವೆ (ವ್ಯಾಪಿಸಿರಲು) ಪರ್ವಿ (ಹಬ್ಬಿ) ಪರವ್ಯೂಹ ಭಯಂಕರಂ ನೆಗೆದು ಪಾರ್ದು ಆರ್ದೆಉ ಎಚ್ಚೊಡೆ ಅಂಬಂಬನಟ್ಟಿ ಪಳಂಚುತ್ತೆ (ಶತ್ರುಸೈನ್ಯಭಯಂಕರನಾದ ಅರ್ಜುನನು ಎದುರುನೋಡುತ್ತ ಆರ್ಭಟಿಸಿ ಹೊಡೆಯಲು ಅವನ ಒಂದು ಬಾಣವು ಮತ್ತೊಂದನ್ನು ಹಿಂಬಾಲಿಸುತ್ತ ತಟ್ಟನೆ ತಗುಲಿ) ಸಿಡಿಲ್ದ ತೋರಗಿಡಿಯಿಂದ (ದೊಡ್ಡ ಕಿಡಿಗಳಿಂದ) ಒಂದೊಂದಳ್ ಬೇವುದುಂ ( ಸಿಡಿದು ಅದರ ದೊಡ್ಡ ಕಿಡಿಗಳಿಂದ ಒಂದೊಂದರಲ್ಲಿಯೂ ಬೇಯುತ್ತಿರಲು) ತ್ರಿಪುರಂ ಬೊತ್ತಿಸಿದಂತೆ ಪೊತ್ತಿ (ತ್ರಿಪುರಾಸುರರ ಪಟ್ಟಣಗಳು ಹತ್ತಿ ಉರಿದಂತೆ ಆಕಾಶಮಂಡಲವು ಹತ್ತಿ) ಪೊಗೆದತ್ತು (ಹೊಗೆಯಾಡುತ್ತಿತ್ತು) ಎತ್ತಂ ವಿಯನ್ಮಂಡಳಂ (ಹತ್ತಿ ಉರಿದಂತೆ ಆಕಾಶಮಂಡಲವು ಹೊಗೆಯಾಡುತ್ತಿತ್ತು.)
ಪದ್ಯ-೧೭:ಅರ್ಥ: ಒಬ್ಬೊಬ್ಬರಲ್ಲಿಯೂ ಹೋಲಿಕೆಮೀರಿದ ಅಸ್ತ್ರವಿದ್ಯಾ ನೈಪುಣ್ಯವು ಕೂಡಿಕೊಂಡು ವ್ಯಾಪಿಸಿರಲು, ಶತ್ರುಸೈನ್ಯಭಯಂಕರನಾದ ಅರ್ಜುನನು ಎದುರುನೋಡುತ್ತ ಆರ್ಭಟಿಸಿ ಹೊಡೆಯಲು ಅವನ ಒಂದು ಬಾಣವು ಮತ್ತೊಂದನ್ನು ಹಿಂಬಾಲಿಸುತ್ತ ತಟ್ಟನೆ ತಗುಲಿ ಸಿಡಿದು ಅದರ ದೊಡ್ಡ ಕಿಡಿಗಳಿಂದ ಒಂದೊಂದರಲ್ಲಿಯೂ ಬೇಯುತ್ತಿರಲು ತ್ರಿಪುರಾಸುರರ ಪಟ್ಟಣಗಳು ಹತ್ತಿ ಉರಿದಂತೆ ಆಕಾಶಮಂಡಲವು ಹತ್ತಿ ಎಲ್ಲೆಡೆಯಲ್ಲಿಯೂ ಹೊಗೆಯಾಡುತ್ತಿತ್ತು.
ವ|| ಅಂತು ಬ್ರಹ್ಮಾಂಡಮುರಿಯೆ ಕಾದೆ-
ವಚನ:ಪದವಿಭಾಗ-ಅರ್ಥ:ಅಂತು ಬ್ರಹ್ಮಾಂಡಂ ಉರಿಯೆ ಕಾದೆ-
ವಚನ:ಅರ್ಥ: ವ|| ಹಾಗೆ ಬ್ರಹ್ಮಾಂಡವೇ ಉರಿಯುವ ಹಾಗೆ ಕಾದಾಡುತ್ತಿರಲು-
ಚಂ|| ನಡಪಿದನಜ್ಜನೆಂದು ವಿಜಯಂ ಕಡುಕೆಯ್ದಿಸನೆನ್ನ ಮಂಮನಾಂ
ನಡಪಿದನೆಂದು ಸಿಂಧುತನಯಂ ಕಡುಕೆಯ್ದಿಸನಿಂತು ಪಾಡುಗಾ|
ದೊಡನೊಡನಿರ್ವರುಂ ಮೆರೆಯಲೆಂದೆ ಶರಾಸನ ವಿದ್ಯೆಯ ಪಡ
ಲ್ವಡಿಸಿದರೆತ್ತಮಿದಿರೊಳ್ ಮಲೆದೊಡ್ಡಿದ ಚಾತುರಂಗಮಂ|| ೧೮ ||
ಪದ್ಯ-೧೮:ಪದವಿಭಾಗ-ಅರ್ಥ:ನಡಪಿದನು ಅಜ್ಜನೆಂದು ವಿಜಯಂ ಕಡುಕೆಯ್ದ ಇಸನು ( ಅಜ್ಜನು ತನ್ನನ್ನು ಸಾಕಿದನು ಎಂದು ಅರ್ಜುನನೂ ತೀವ್ರವಾಗಿ ಬಾಣಪ್ರಯೋಗಮಾಡುವುದಿಲ್ಲ ) ಎನ್ನ ಮಂಮನು ಆಂ ನಡಪಿದನೆಂದು ಸಿಂಧುತನಯಂ ಕಡುಕೆಯ್ದು ಇಸನು (ತಾನು ಸಾಕಿದ ಎನ್ನ/ ತನ್ನ ಮೊಮ್ಮಗ ಎಂದು ಭೀಷ್ಮನೂ ಕ್ರೂರವಾಗಿ ಬಾಣಪ್ರಯೋಗ ಮಾಡುವುದಿಲ್ಲ) ಇಂತು ಪಾಡುಗಾದು ಒಡನೊಡನೆ ಇರ್ವರುಂ ಮೆರೆಯಲೆಂದೆ (ಹೀಗೆ ಇಬ್ಬರೂ ಸಾಂಪ್ರದಾಯಕವಾಗಿ ಶಸ್ತ್ರಕೌಶಲವನ್ನು ಮೆರೆಯುವುದಕ್ಕಾಗಿ ಮಾತ್ರ) ಶರಾಸನ ವಿದ್ಯೆಯ ಪಡಲ್ವಡಿಸಿದರು ಎತ್ತಂ ಇದಿರೊಳ್ ಮಲೆತು ಒಡ್ಡಿದ ಚಾತುರಂಗಮಂ (ಪ್ರತಿಭಟನೆಯಿಂದ ಕೂಡಿದ ಚತುರಂಗಸೈನ್ಯವನ್ನು ಎಲ್ಲೆಡೆಯಲ್ಲಿಯೂ ಉರುಳಿಸಿದರು.)
ಪದ್ಯ-೧೮:ಅರ್ಥ:ಅಜ್ಜನು ತನ್ನನ್ನು ಸಾಕಿದನು ಎಂದು ಅರ್ಜುನನೂ ತೀವ್ರವಾಗಿ ಬಾಣಪ್ರಯೋಗಮಾಡುವುದಿಲ್ಲ; ತಾನು ಸಾಕಿದ ಎನ್ನ/ ತನ್ನ ಮೊಮ್ಮಗ ಎಂದು ಭೀಷ್ಮನೂ ಕ್ರೂರವಾಗಿ ಬಾಣಪ್ರಯೋಗ ಮಾಡುವುದಿಲ್ಲ. ಹೀಗೆ ಇಬ್ಬರೂ ಸಾಂಪ್ರದಾಯಕವಾಗಿ ಶಸ್ತ್ರಕೌಶಲವನ್ನು ಮೆರೆಯುವುದಕ್ಕಾಗಿ ಮಾತ್ರ ಬಾಣಪ್ರಯೋಗಮಾಡಿ ಪ್ರತಿಭಟನೆಯಿಂದ ಕೂಡಿದ ಚತುರಂಗಸೈನ್ಯವನ್ನು ಎಲ್ಲೆಡೆಯಲ್ಲಿಯೂ ಉರುಳಿಸಿದರು.
ವ|| ಅಂತು ಕಿಱಿದು ಪೊೞ್ತು ಕೆಯ್ಗಾದು ಕಾದೆ ಸರಿತ್ಸುತನ ಸುರಿವ ಸರಲ ಮೞೆಯೊಳೞಿದ ನಿಜ ವರೂಥಿನಿಯ ಸಾವುಂ ನೋವುಮೇವಮಂ ಮಾಡೆ-
ವಚನ:ಪದವಿಭಾಗ-ಅರ್ಥ:ಅಂತು ಕಿಱಿದು ಪೊೞ್ತು ಕೆಯ್ಗಾದು ಕಾದೆ (ಹಾಗೆ ಭೀಷ್ಮನು ಸ್ವಲ್ಪಕಾಲ ಶತ್ರುವಿಗೆ ರಕ್ಷಣೆಕೊಟ್ಟು ಕಾದಿದರೂ) ಸರಿತ್ಸುತನ ಸುರಿವ ಸರಲ ಮೞೆಯೊಳು (ಭೀಷ್ಮನ ಧಾರಾಕಾರವಾಗಿ ಸುರಿಯುತ್ತಿರುವ ಬಾಣದ ಮಳೆಯಲ್ಲಿಯೇ) ಅೞಿದ ನಿಜ ವರೂಥಿನಿಯ (ನಾಶವಾದ ತನ್ನ ಸೈನ್ಯದ ) ಸಾವುಂ ನೋವುಮ ಏವಮಂ ಮಾಡೆ (ಸಾವೂ ನೋವೂ ಅರ್ಜುನನಿಗೆ ವಿಶೇಷ ಕೋಪವನ್ನುಂಟುಮಾಡಿತು.)-
ವಚನ:ಅರ್ಥ: ಹಾಗೆ ಭೀಷ್ಮನು ಸ್ವಲ್ಪಕಾಲ ಶತ್ರುವಿಗೆ ರಕ್ಷಣೆಕೊಟ್ಟು ಕಾದಿದರೂ ಭೀಷ್ಮನ ಧಾರಾಕಾರವಾಗಿ ಸುರಿಯುತ್ತಿರುವ ಬಾಣದ ಮಳೆಯಲ್ಲಿಯೇ ನಾಶವಾದ ತನ್ನ ಸೈನ್ಯದ ಸಾವೂ ನೋವೂ ಅರ್ಜುನನಿಗೆ ವಿಶೇಷ ಕೋಪವನ್ನುಂಟುಮಾಡಿತು.
ಚಂ|| ಮುನಿದೆರಡಂಬಿನೊಳ್ ರಥಮುಮಂ ಪದವಿಲ್ಲುಮನೆಯ್ದೆ ಪಾರ್ದು ನೆ
ಕ್ಕನೆ ಕಡಿದಿಂದ್ರನಂದನನಳುರ್ಕೆಯಿನಾರ್ದೊಡೆ ದಿವ್ಯ ಸಿಂಧುನಂ|
ದನನಿರದೇಱಿ ಬೇರೆ ಪೆಱತೊಂದು ಶರಾಸನಕ್ಕೆ ಮೆ
ಲ್ಲನೆ ನಿಡುದೋಳನುಯ್ದು ಕರಮಚ್ಚರಿಯಾಗೆ ಕಡಂಗಿ ಕಾದಿದಂ|| ೧೯ ||
ಪದ್ಯ-೧೯:ಪದವಿಭಾಗ-ಅರ್ಥ:ಮುನಿದು ಎರಡಂಬಿನೊಳ್ ರಥಮುಮಂ ಪದವಿಲ್ಲುಮನು ಎಯ್ದೆ (ಕೋಪಿಸಿಕೊಂಡು ಭೀಷ್ಮರ ರಥವನ್ನು ಹದವಾದ ಬಿಲ್ಲನ್ನು ಚೆನ್ನಾಗಿ ನೋಡಿ ನೆಕ್ಕನೆ ಕತ್ತರಿಸಿ ಅತಿಶಯವಾಗಿ) ಪಾರ್ದು ನೆಕ್ಕನೆ ಕಡಿದು (ಕೂಗಿ ನೆಕ್ಕನೆ ಕತ್ತರಿಸಿ ಅತಿಶಯವಾಗಿ ಆರ್ಭಟಮಾಡಿದನು) ಇಂದ್ರನಂದನನು ಅಳುರ್ಕೆಯಿಂ ಆರ್ದೊಡೆ (ಅರ್ಜುನನು ಅತಿಶಯವಾಗಿ ಆರ್ಭಟಮಾಡಿದಾಗ) ದಿವ್ಯ ಸಿಂಧುನಂದನನು ಇರದೆ ಏಱಿ ಬೇರೆ ಪೆಱತೊಂದು ಶರಾಸನಕ್ಕೆ (ಭೀಷ್ಮನು ಸಾವಕಾಶಮಾಡದೆ ಬೇರೆ ರಥವನ್ನು ಹತ್ತಿಕೊಂಡು, ಬಿಲ್ಲಗೆ) ಮೆಲ್ಲನೆ ನಿಡುದೋಳನು ಉಯ್ದು (ತನ್ನ ದೀರ್ಘವಾದ ತೋಳನ್ನು ಬತ್ತಳಿಕೆಗೆ ನೀಡಿ) ಕರಂ ಅಚ್ಚರಿಯಾಗೆ ಕಡಂಗಿ ಕಾದಿದಂ (ವಿಶೇಷ ಆಶ್ಚರ್ಯಕರವಾಗುವ ಹಾಗೆ ಉತ್ಸಾಹದಿಂದ ಯುದ್ಧಮಾಡಿದನು.)
ಪದ್ಯ-೧೯:ಅರ್ಥ: ಅರ್ಜುನನು ಕೋಪಿಸಿಕೊಂಡು ಭೀಷ್ಮರ ರಥವನ್ನು ಹದವಾದ ಬಿಲ್ಲನ್ನು ಚೆನ್ನಾಗಿ ನೋಡಿ ನೆಕ್ಕನೆ ಕತ್ತರಿಸಿ ಅತಿಶಯವಾಗಿ ಆರ್ಭಟಮಾಡಿದನು. ಭೀಷ್ಮನು ಸಾವಕಾಶಮಾಡದೆ ಬೇರೆ ರಥವನ್ನು ಹತ್ತಿಕೊಂಡು ತನ್ನ ದೀರ್ಘವಾದ ತೋಳನ್ನು ಬತ್ತಳಿಕೆಗೆ ನೀಡಿ ವಿಶೇಷ ಆಶ್ಚರ್ಯಕರವಾಗುವ ಹಾಗೆ ಉತ್ಸಾಹದಿಂದ ಯುದ್ಧಮಾಡಿದನು.
ವ|| ಅಂತು ತೋಡುಂ ಬೀಡು ಕಾಣಲಾಗದೆರ್ದೆಗಾಯಲೆಕ್ಕೆಯಿನೆಂಬತ್ತು ನಾಲ್ಕು ಲಕ್ಕ ಬಂಡಿಯೊಳ್ತಂಡ ತಂಡದೆ ತೀವಿದಕಾಂಡ ಪ್ರಳಯಾನಳ ವಿಸ್ಫುಲಿಂಗೋಪಮಾನಂಗಳಪ್ಪ ನಿಶಿತ ಕಾಂಡಂಗಳಿಂದೊಡ್ಡಿದ ಚತುರ್ಬಲಂಗಳ ಮೆಯ್ಯೊಳ್ ರೋಮ ರೋಮಂದಪ್ಪದೆ ನಡುವನ್ನಮೆಚ್ಚು ಪಯಿಂಛಾಸಿರ್ವರ್ ಮಕುಟಬದ್ಧರುಮನೊಂದು ಲಕ್ಕ ಮದದಾನೆಯುಮಂ ಮೂಱುಲಕ್ಕ ರಥಮುಮನೊಂದು ಕೋಟಿ ತುರುಷ್ಕ ತುರಂಗಂಗಳುಮಂ ಪದಿನೆಂಟು ಕೋಟಿ ಪದಾತಿಯುಮನಲಸದೆ ಪೇಸೇೞೆ ಕೊಂದು ಪರಶುರಾಮನಲ್ಲಿ ಪಡೆದ ದಿವ್ಯಾಸ್ತ್ರಂಗಳನೊಂದನೊಂದು ಸೂೞೊಳೆ ತೊಟ್ಟು-
ವಚನ:ಪದವಿಭಾಗ-ಅರ್ಥ:ಅಂತು ತೋಡುಂ ಬೀಡು ಕಾಣಲಾಗದೆ ಎರ್ದೆಗಾಯಲ್ ಎಕ್ಕೆಯಿಂ(ಆ ರೀತಿಯಲ್ಲಿ ಬಾಣವನ್ನು ತೊಡುವುದೂ ಬಿಡುವುದೂ ಕಾಣಲಾಗದ ರೀತಿಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಂದೇಸಲ ) ಎಂಬತ್ತು ನಾಲ್ಕು ಲಕ್ಕ ಬಂಡಿಯೊಳ್ ತಂಡ ತಂಡದೆ ತೀವಿದ (ಎಂಬತ್ತು ನಾಲ್ಕು ಲಕ್ಷ ಬಂಡಿಯಲ್ಲಿ ರಾಶಿರಾಶಿಯಾಗಿ ತುಂಬಿದ್ದ ) ಅಕಾಂಡ ಪ್ರಳಯಾನಳ (ಅಕಾಲದ ಪ್ರಳಯಾಗ್ನಿಯ ) ವಿಸ್ಫುಲಿಂಗ ಉಪಮಾನಂಗಳಪ್ಪ (ಪ್ರಳಯಾಗ್ನಿಯ ಕಿಡಿಗಳಿಗೆ ಸಮಾನವಾದ) ನಿಶಿತ ಕಾಂಡಂಗಳಿಂದ ಒಡ್ಡಿದ ಚತುರ್ಬಲಂಗಳ ಮೆಯ್ಯೊಳ್ ( ಹರಿತವಾದ ಬಾಣಗಳಿಂದ ಚತುರಂಗಸೈನ್ಯದ ಶರೀರದಲ್ಲಿ) ರೋಮ ರೋಮಂದಪ್ಪದೆ ನಡುವನ್ನಂ ಎಚ್ಚು (ಒಂದು ಕೂದಲೂ ತಪ್ಪದೆ ನಾಟುವ ಹಾಗೆ ಹೊಡೆದು ) ಪಯಿಂಛಾಸಿರ್ವರ್ ಮಕುಟಬದ್ಧರುಮನು ಒಂದು ಲಕ್ಕ ಮದದಾನೆಯುಮಂ (ಹತ್ತು ಸಾವಿರ ರಾಜರನ್ನೂ, ಒಂದು ಲಕ್ಷ ಮದದಾನೆಯನ್ನೂ) ಮೂಱುಲಕ್ಕ ರಥಮುಮನು ಒಂದು ಕೋಟಿ ತುರುಷ್ಕ ತುರಂಗಂಗಳುಮಂ (ಒಂದು ಕೋಟಿ ತುರುಷ್ಕ ಕುದುರೆಗಳನ್ನು ) ಪದಿನೆಂಟು ಕೋಟಿ ಪದಾತಿಯುಮನು ಅಲಸದೆ ಪೇಸೇೞೆ ಕೊಂದು (ಶ್ರಮವಿಲ್ಲದೆ ಜುಗುಪ್ಸೆಯಾಗುವ ಹಾಗೆ ಕೊಂದನು.) ಪರಶುರಾಮನಲ್ಲಿ ಪಡೆದ ದಿವ್ಯಾಸ್ತ್ರಂಗಳನೊಂದನೊಂದು ಸೂೞೊಳೆ ತೊಟ್ಟು (ಪರಶುರಾಮನಿಂದ ಪಡೆದಿದ್ದ ದಿವ್ಯಾಸ್ತ್ರಗಳೊಂದೊಂದನ್ನೂ ಒಂದೊಂದು ಸರದಿಯಿಂದ ತೊಟ್ಟು)-
ವಚನ:ಅರ್ಥ:ಆ ರೀತಿಯಲ್ಲಿ ಬಾಣವನ್ನು ತೊಡುವುದೂ ಬಿಡುವುದೂ ಕಾಣಲಾಗದ ರೀತಿಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಂದೇಸಲ ಎಂಬತ್ತು ನಾಲ್ಕು ಲಕ್ಷ ಬಂಡಿಯಲ್ಲಿ ರಾಶಿರಾಶಿಯಾಗಿ ತುಂಬಿದ್ದ ಅಕಾಲದ ಪ್ರಳಯಾಗ್ನಿಯ ಕಿಡಿಗಳಿಗೆ ಸಮಾನವಾದ ಹರಿತವಾದ ಬಾಣಗಳಿಂದ ಚತುರಂಗಸೈನ್ಯದ ಶರೀರದಲ್ಲಿ ಒಂದು ಕೂದಲೂ ತಪ್ಪದೆ ನಾಟುವ ಹಾಗೆ ಹೊಡೆದು, ಹತ್ತು ಸಾವಿರ ರಾಜರನ್ನೂ, ಒಂದು ಲಕ್ಷ ಮದದಾನೆಯನ್ನೂ, ಒಂದು ಕೋಟಿ ತುರುಷ್ಕ ಕುದುರೆಗಳನ್ನು ಹದಿನೆಂಟು ಕೋಟಿ ಕಾಲಾಳುಬಲವನ್ನೂ ಶ್ರಮವಿಲ್ಲದೆ ಜುಗುಪ್ಸೆಯಾಗುವ ಹಾಗೆ ಕೊಂದನು. ಪರಶುರಾಮನಿಂದ ಪಡೆದಿದ್ದ ದಿವ್ಯಾಸ್ತ್ರಗಳೊಂದೊಂದನ್ನೂ ಒಂದೊಂದು ಸರದಿಯಿಂದ ತೊಟ್ಟು=
ಕಂ|| ನುಡಿವಳಿಗೆ ನರನ ರಥಮಂ
ಪಡುವೆಣ್ಗಾವುದುವರಂ ಸಿಡಿಲ್ವಿನಮೆಚ್ಚ|
ಚ್ಚುಡಿಯೆ ಭುಜಬಲದೆ ಹರಿಯುರ
ದೆಡೆಯಂ ಬಿರಿಯೆಟ್ಟು ಮೆರೆದನಳವಂ ಭೀಷ್ಮಂ|| ೨೦||
ಪದ್ಯ-೨೦:ಪದವಿಭಾಗ-ಅರ್ಥ:ನುಡಿವಳಿಗೆ (ಹಿಂದೆಹೇಳಿದ ಹಾಗೆ) ನರನ ರಥಮಂ ಪಡುವ ಎಣ್ಗಾವುದುವರಂ ಸಿಡಿಲ್ವಿನಂ ಎಚ್ಚ (ಅರ್ಜುನನ ತೇರನ್ನು ಪಶ್ಚಿಮದ ಕಡೆ ಎಂಟುಗಾವುದದವರೆಗೆ ಸಿಡಿದು ಹೋಗುವಂತೆ ಹೊಡೆದನು) ಅಚ್ಚುಡಿಯೆ (ರಥದ ಅಚ್ಚು ಮುರುಯಲು) ಭುಜಬಲದೆ ಹರಿಯ ಉರದೆಡೆಯಂ ಬಿರಿಯೆ ಎಟ್ಟು ಮೆರೆದನು ಅಳವಂ ಭೀಷ್ಮಂ (ಬಾಹುಬಲದಿಂದ ಕೃಷ್ಣನ ಹೃದಯಪ್ರದೇಶವನ್ನು ಬಿರಿಯುವಂತೆ ಹೊಡೆದು ಭೀಷ್ಮನು ತನ್ನ ಶಕ್ತಿಯನ್ನು ಪ್ರದರ್ಶಿಸಿದನು.)
ಪದ್ಯ-೨೦:ಅರ್ಥ: ಆಡಿದ ಮಾತನ್ನು ಪೂರ್ಣಗೊಳಿಸುವುದಕ್ಕೆ (ಮಾತ್ರ) ಅರ್ಜುನನ ತೇರನ್ನು ಪಶ್ಚಿಮದ ಕಡೆ ಎಂಟುಗಾವುದದವರೆಗೆ ಸಿಡಿದು ಹೋಗುವಂತೆ ಹೊಡೆದನು. ರಥದ ಅಚ್ಚು ಮುರಿಯಿತು. ಬಾಹುಬಲದಿಂದ ಕೃಷ್ಣನ ಹೃದಯಪ್ರದೇಶವನ್ನು ಬಿರಿಯುವಂತೆ ಹೊಡೆದು ಭೀಷ್ಮನು ತನ್ನ ಶಕ್ತಿಯನ್ನು ಪ್ರದರ್ಶಿಸಿದನು.
ವ|| ಆಗಳ್-
ವಚನ:ಅರ್ಥ:ವ|| ಆಗ
ಕಂ|| ದೇವಾಸುರದೊಳಮಿಂದಿನ
ನೋವಂ ನೊಂದಱಿಯೆನುೞಿದ ಕೆಯ್ದುವಿನೊಳಿವಂ|
ಸಾವನೆ ಸೆರಗಂ ಬಗೆದೊಡೆ
ಸಾವಾದಪುದೆಂದು ಚಕ್ರಿ ಚಕ್ರದೊಳಿಟ್ಟಂ|| ೨೧ ||
ಪದ್ಯ-೨೧:ಪದವಿಭಾಗ-ಅರ್ಥ:ದೇವಾಸುರದೊಳಂ ಇಂದಿನ ನೋವಂ ನೊಂದು ಅಱಿಯೆನು (ದೇವಾಸುರರ ಯುದ್ಧದಲ್ಲಿಯೂ ಈ ದಿನದ ನೋವನ್ನು ಅರಿಯೆನು- ಅನುಭವಿಸಿರಲಿಲ್ಲ) ಉೞಿದ ಕೆಯ್ದುವಿನೊಳು ಇವಂ ಸಾವನೆ (ಉಳಿದ ಆಯುಧಗಳಿಂದ ಇವನು ಸಾಯುತ್ತಾನೆಯೇ) ಸೆರಗಂ ಬಗೆದೊಡೆ ಸಾವಾದಪುದು ಎಂದು ಚಕ್ರಿ ಚಕ್ರದೊಳಿಟ್ಟಂ ( ಬೇರೆ ಸಹಾಯವನ್ನು ಅಪೇಕ್ಷಿಸಿದರೆ ಮರಣವುಂಟಾಗುತ್ತದೆ ಎಂದು ಶ್ರೀಕೃಷ್ಣನು ಚಕ್ರಾಯುಧದಿಂದಲೇ ಹೊಡೆದನು. )
ಪದ್ಯ-೨೧:ಅರ್ಥ: ದೇವಾಸುರರ ಯುದ್ಧದಲ್ಲಿಯೂ ಈ ದಿನದ ನೋವನ್ನು ಅನುಭವಿಸಿರಲಿಲ್ಲ ; ಉಳಿದ ಆಯುಧಗಳಿಂದ ಇವನು ಸಾಯುತ್ತಾನೆಯೇ? ಸಹಾಯವನ್ನು ಅಪೇಕ್ಷಿಸಿದರೆ ಮರಣವುಂಟಾಗುತ್ತದೆ ಎಂದು ಶ್ರೀಕೃಷ್ಣನು ಚಕ್ರಾಯುಧದಿಂದಲೇ ಹೊಡೆದನು.
ಇಟ್ಟೊಡೆ ತನಗಸುರಾರಿಯ
ಕೊಟ್ಟ ಮಹಾ ವೈಷ್ಣವಾಸ್ತ್ರಮಂ ಗಾಂಗೇಯಂ|
ತೊಟ್ಟಿಸುವುದುಮೆರಡುಂ ಕಿಡಿ
ಗುಟ್ಟಿ ಸಿಡಿಲ್ ಸಿಡಿಯೆ ಪೋರ್ದುವಂಬರತಳದೊಳ್|| ೨೨ ||
ಪದ್ಯ-೨೨:ಪದವಿಭಾಗ-ಅರ್ಥ:ಇಟ್ಟೊಡೆ (ಹಾಗೆ ಹೊಡೆದರೆ) ತನಗೆ ಅಸುರಾರಿಯಕೊಟ್ಟ ಮಹಾ ವೈಷ್ಣವಾಸ್ತ್ರಮಂ ಗಾಂಗೇಯಂ(ಭೀಷ್ಮನು ವಿಷ್ಣುವು ಕೊಟ್ಟ ಮಹಾವೈಷ್ಣವಾಸ್ತ್ರವನ್ನು ಪ್ರಯೋಗಿಸಿದನು) ತೊಟ್ಟಿಸುವುದುಂ ಎರಡುಂ ಕಿಡಿಗುಟ್ಟಿ ಸಿಡಿಲ್ ಸಿಡಿಯೆ ಪೋರ್ದುವು (ಹೋರಾಡಿದುವು) ಅಂಬರತಳದೊಳ್ (ಎರಡು ಅಸ್ತ್ರಗಳೂ ಕಿಡಿಗಳನ್ನು ಚೆಲ್ಲಿ ಸಿಡಿಲು ಸಿಡಿಯುವಂತೆ ಆಕಾಶ ಪ್ರದೇಶದಲ್ಲಿ ಹೋರಾಡಿದುವು. )
ಪದ್ಯ-೨೨:ಅರ್ಥ: ಕೃಷ್ಣನು ಹಾಗೆ ಹೊಡೆದರೆ, ಭೀಷ್ಮನು ವಿಷ್ಣುವು ಕೊಟ್ಟ ಮಹಾವೈಷ್ಣವಾಸ್ತ್ರವನ್ನು ಪ್ರಯೋಗಿಸಿದನು. ಎರಡು ಅಸ್ತ್ರಗಳೂ ಕಿಡಿಗಳನ್ನು ಚೆಲ್ಲಿ ಸಿಡಿಲು ಸಿಡಿಯುವಂತೆ ಆಕಾಶ ಪ್ರದೇಶದಲ್ಲಿ ಹೋರಾಡಿದುವು.
ಪೋರ್ವುದುಮಿಂ ಪೆಱತಂಬಿಂ
ತೀರ್ವುದೆ ಪಗೆಯೆಂದು ಪಾಶುಪತಮಂ ಪಿಡಿಯಲ್|
ಪಾರ್ವುದುಮರ್ಜುನನಾಗಳ್
ಬೇರ್ವೆರಸು ಕಿೞಲ್ಕೆ ಬಗೆಯೆ ಸುರರೆಡೆವೊಕ್ಕರ್|| ೨೩ ||
ಪದ್ಯ-೨೩:ಪದವಿಭಾಗ-ಅರ್ಥ:ಪೋರ್ವುದುಂ (ಹೋರಾಡುತ್ತಿರಲು) ಇಂ ಪೆಱತಂಬಿಂ ತೀರ್ವುದೆ ಪಗೆಯೆಂದು (ಶತ್ರುವು ಇನ್ನು ಬೇರೆಯ ಬಾಣದಿಂದ ನಾಶವಾಗುವುದೇ) ಪಾಶುಪತಮಂ ಪಿಡಿಯಲ್ ಪಾರ್ವುದುಂ ಅರ್ಜುನನು ಆಗಳ್ ಬೇರ್ವೆರಸು ಕಿೞಲ್ಕೆ ಬಗೆಯೆ (ಅರ್ಜುನನು ಯೋಚಿಸಿ ಮೂಲೋತ್ಪಾಟನ ಮಾಡುವುದಕ್ಕೆ ಪಾಶುಪತಾಸ್ತ್ರವನ್ನೇ ಯೋಚಿಸಲು) ಸುರರೆ ಎಡೆವೊಕ್ಕರ್ (ಅದನ್ನು ತಡೆಯಲು ದೇವತೆಗಳು ಮಧ್ಯೆ ಪ್ರವೇಶ ಮಾಡಿದರು).
ಪದ್ಯ-೨೩:ಅರ್ಥ: ಹೀಗೆ ಹೋರಾಡುತ್ತಿರಲು, ಶತ್ರುವು ಇನ್ನು ಬೇರೆಯ ಬಾಣದಿಂದ ನಾಶವಾಗುವುದೇ, ಎಂದು ಅರ್ಜುನನು ಯೋಚಿಸಿ ಮೂಲೋತ್ಪಾಟನ ಮಾಡುವುದಕ್ಕೆ ಪಾಶುಪತಾಸ್ತ್ರವನ್ನೇ ಯೋಚಿಸಲು ನೋಡುತ್ತಿರಲು (ಅವನನ್ನು ತಡೆಯುವುದಕ್ಕಾಗಿ) ದೇವತೆಗಳು ಮಧ್ಯೆ ಪ್ರವೇಶ ಮಾಡಿದರು.
ವ|| ಆ ಪ್ರಸ್ತಾವದೊಳ್-
ವಚನ:ಅರ್ಥ: ಆ ಸಮಯದಲ್ಲಿ-
ಕಂ|| ಎನ್ನುಮನಸುರಾರಿಯ ಪಿಡಿ
ವುನ್ನತ ಕರಚಕ್ರಮೆಂದು ಭೀಷ್ಮಂ ತಱಿಗುಂ|
ಮುನ್ನಮಡಂಗುವೆನೆಂಬವೊ
ಲನ್ನೆಗಮಸ್ತಾಚಳಸ್ಥನಾದಂ ದಿನಪಂ|| ೨೪ ||
ಪದ್ಯ-೨೪:ಪದವಿಭಾಗ-ಅರ್ಥ: ಎನ್ನುಮನು ಅಸುರಾರಿಯ ಪಿಡಿವ ಉನ್ನತ ಕರಚಕ್ರಮೆಂದು ಭೀಷ್ಮಂ ತಱಿಗುಂ (ನನ್ನನ್ನೂ ಕೃಷ್ಣನು ಹಿಡಿಯುವ ಶ್ರೇಷ್ಠವಾದ ಚಕ್ರವೆಂದೇ ಭೀಷ್ಮನು ತರಿದುಹಾಕುತ್ತಾನೆ) ಮುನ್ನಮೆ ಅಡಂಗುವೆನು ಎಂಬವೊಲ್ ಅನ್ನೆಗಂ ಅಸ್ತಾಚಳಸ್ಥನು ಆದಂ ದಿನಪಂ (ಅಸ್ತಾಚಲ ಅಸ್ಥನು ಅದಂ; ಮೊದಲೇ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಅಸ್ತಾಚಲದಲ್ಲಿ ಮರೆಯಾದನು.)
ಪದ್ಯ-೨೪:ಅರ್ಥ: ನನ್ನನ್ನೂ ಕೃಷ್ಣನು ಹಿಡಿಯುವ ಶ್ರೇಷ್ಠವಾದ ಚಕ್ರವೆಂದೇ ಭೀಷ್ಮನು ತರಿದುಹಾಕುತ್ತಾನೆ. ಮೊದಲೇ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಅಸ್ತಾಚಲದಲ್ಲಿ ಮರೆಯಾದನು. (ಸೂರ್ಯನು ಅಸ್ತವಾದನು).
ವ|| ಆಗಳೆರಡುಂ ಪಡೆಗಳಪಹಾರತೂರ್ಯಂಗಳಂ ಬಾಜಿಸಿ ಮುನ್ನೊತ್ತಿದ ವೇಳೆಗಳ್ ಸಮುದ್ರಂಗಳಂ ಪುಗುವಂತೆ ತಂತಮ್ಮ ಬೀಡುಗಳಂ ಪೊಕ್ಕರಾಗಳ್-
ವಚನ:ಪದವಿಭಾಗ-ಅರ್ಥ:ಆಗಳೆರಡುಂ ಪಡೆಗಳು ಅಪಹಾರತೂರ್ಯಂಗಳಂ ಬಾಜಿಸಿ (ಆಗ ಎರಡು ಸೈನ್ಯಗಳೂ ಯುದ್ಧ ನಿಂತಿತೆಂದು ತಿಳಿಸುವ ವಾದ್ಯಗಳನ್ನು ಬಾರಿಸಿ) ಮುನ್ನ ಒತ್ತಿದ ವೇಳೆಗಳ್ ಸಮುದ್ರಂಗಳಂ ಪುಗುವಂತೆ ತಂತಮ್ಮ ಬೀಡುಗಳಂ ಪೊಕ್ಕರಾಗಳ್ (ಮೊದಲು ಎದ್ದಿದ್ದ ಅಲೆಗಳು ಸಮುದ್ರವನ್ನು ಪ್ರವೇಶಿಸುವಂತೆ ಸೈನ್ಯಗಳು ತಮ್ಮ ತಮ್ಮ ಶಿಬಿರಗಳನ್ನು ಪ್ರವೇಶಿಸಿದವು. ಆಗ)-
ವಚನ:ಅರ್ಥ:ಆಗ ಎರಡು ಸೈನ್ಯಗಳೂ ಯುದ್ಧ ನಿಂತಿತೆಂದು ತಿಳಿಸುವ ವಾದ್ಯಗಳನ್ನು ಬಾರಿಸಿ, ಮೊದಲು ಎದ್ದಿದ್ದ ಅಲೆಗಳು ಸಮುದ್ರವನ್ನು ಪ್ರವೇಶಿಸುವಂತೆ ಸೈನ್ಯಗಳು ತಮ್ಮ ತಮ್ಮ ಶಿಬಿರಗಳನ್ನು ಪ್ರವೇಶಿಸಿದವು. ಆಗ
ಕಂ|| ಬರಿಸಿ ಮನೆಗನುಸುರವೈರಿಯ
ನರಸಂ ಭೀಷ್ಮಂಗೆ ಚಕ್ರಮಿಂತೇಕೆ ಮೊಗಂ|
ದಿರಿದುದೊ ನಿಮ್ಮಂ ಪಿಡಿದೆನ
ಗರಿದೆನಲರಿದುಂಟೆ ಧುರದೊಳೇನಸುರಾರೀ|| ೨೫ ||
ಪದ್ಯ-೨೫:ಪದವಿಭಾಗ-ಅರ್ಥ:ಬರಿಸಿ ಮನೆಗೆ ಅನುಸುರವೈರಿಯನು ಅರಸಂ (ಅರಸ ಧರ್ಮರಾಜನು ಕೃಷ್ಣನನ್ನು ಮನೆಗೆ ಬರಮಾಡಿಕೊಂಡು) ಭೀಷ್ಮಂಗೆ ಚಕ್ರಂ ಇಂತೇಕೆ ಮೊಗಂದಿರಿದುದೊ (ನಿಮ್ಮ ಚಕ್ರವು ಭೀಷ್ಮನಿಗೇಕೆ ವಿಮುಖವಾಯಿತೋ!) ನಿಮ್ಮಂ ಪಿಡಿದ ಎನಗೆ ಅರಿದೆನಲ್ (ಅಸಾಧ್ಯವೆಂಬುದು) ಅರಿದುಂಟೆ (ಅರಿಯುವುದು ಉಂಟೇ) ಧುರದೊಳ್ ಏನ್ ಅಸುರಾರೀ ()
ಪದ್ಯ-೨೫:ಅರ್ಥ: ಅರಸ ಧರ್ಮರಾಜನು ಕೃಷ್ಣನನ್ನು ಮನೆಗೆ ಬರಮಾಡಿಕೊಂಡು ನಿಮ್ಮ ಚಕ್ರವು ಭೀಷ್ಮನಿಗೇಕೆ ವಿಮುಖವಾಯಿತೋ! ಕೃಷ್ಣ! ನಿಮ್ಮನ್ನು ಆಶ್ರಯಿಸಿದ ನನಗೆ ಯುದ್ಧದಲ್ಲಿ ಅಸಾಧ್ಯವೆಂಬುದು ಇದೆಯೇ?ಇಲ್ಲ ಎಂದನು.
ಬೆಸಸೆನೆ ನುಡಿದಂ ಮುರನೆಂ
ಬಸುರನನೆನಗಾಗಿ ಕಾದಿ ಭೀಷ್ಮಂ ಪಿಡಿದೊ|
ಪ್ಪಿಸಿದೊಡೆ ವೈಷ್ಣವ ಬಾಣಮ
ನೊಸೆದಿತ್ತೆನದಂ ಗೆಲಲ್ಕೆ ಕೆಯ್ದುಗಳೊಳವೇ|| ೨೬ ||
ಪದ್ಯ-೨೬:ಪದವಿಭಾಗ-ಅರ್ಥ:ಬೆಸಸೆನೆ ನುಡಿದಂ ಮುರನೆಂಬ ಅಸುರನಂ ಎನಗಾಗಿ ಕಾದಿ ಭೀಷ್ಮಂ ಪಿಡಿದು ಒಪ್ಪಿಸಿದೊಡೆ ವೈಷ್ಣವ ಬಾಣಮನು ಒಸೆದು ಇತ್ತೆನು (ಮುರನೆಂಬ ಅಸುರನೊಂದಿಗೆ ಹೋರಾಡಿ ಸೋಲಿಸಿ ಹಿಡಿದು ನನಗೆ ಒಪ್ಪಿಸಿದುದರಿಂದ ಮೆಚ್ಚಿ ಭೀಷ್ಮನಿಗೆ ನಾನು ವೈಷ್ಣವಾಸ್ತ್ರ ಕೊಟ್ಟಿದ್ದೆ) ಅದಂ ಗೆಲಲ್ಕೆ ಕೆಯ್ದುಗಳು ಒಳವೇ (ಅದನ್ನು ಗೆಲ್ಲಲು ಆಯುಧಗಳು ಇವೆಯೇ? ಇಲ್ಲ ಎಂದನು.)
ಪದ್ಯ-೨೬:ಅರ್ಥ: ೨೬. ಕೃಷ್ಣ ಹೇಳಿದನು : ಮುರನೆಂಬ ಅಸುರನೊಂದಿಗೆ ಹೋರಾಡಿ ಸೋಲಿಸಿ ನನಗೊಪ್ಪಿಸಿದುದರಿಂದ ಮೆಚ್ಚಿ ಭೀಷ್ಮನಿಗೆ ನಾನು ವೈಷ್ಣವಾಸ್ತ್ರ ಕೊಟ್ಟಿದ್ದೆ. ಅದನ್ನು ಗೆಲ್ಲಲು ಆಯುಧಗಳು ಇವೆಯೇ? ಇಲ್ಲ ಎಂದನು.
ಭೇದದೊಳಲ್ಲದೆ ಗೆಲಲರಿ
ದಾದಂ ಸುರಸಿಂಧುಸುತನನಿಂದಿರುಳೊಳ್ ನೀಂ|
ಭೇದಿಸೆನೆ ನೃಪತಿಯೊರ್ವನೆ
ಆದರದಿಂ ಬಂದು ಸಿಂಧುಸುತನಂ ಕಂಡಂ|| ೨೭ ||
ಪದ್ಯ-೦೦:ಪದವಿಭಾಗ-ಅರ್ಥ:ಭೇದದೊಳು ಅಲ್ಲದೆ ಗೆಲಲು ಅರಿದಾದಂ (ಭೇದೋಪಾಯದಿಂದ ಅಲ್ಲದೆ ಗೆಲ್ಲಲು ಅಸಾಧ್ಯವಾದವನು) ಸುರಸಿಂಧುಸುತನನ ಇಂದಿರುಳೊಳ್ ನೀಂ ಭೇದಿಸೆನೆ (ಈ ರಾತ್ರಿ ನೀನು ದೈನ್ಯವನ್ನು ತೋರಿ, ಅವನನ್ನು ಭೇದಿಸು ಎನ್ನಲು,) ನೃಪತಿಯು ಒರ್ವನೆ ಆದರದಿಂ ಬಂದು ಸಿಂಧುಸುತನಂ ಕಂಡಂ (ರಾಜನೊಬ್ಬನೇ ಆದರದಿಂದ ಬಂದು ಭೀಷ್ಮನನ್ನು ಕಂಡನು. )
ಪದ್ಯ-೦೦:ಅರ್ಥ:ಭೀಷ್ಮನನ್ನು ಭೇದೋಪಾಯದಿಂದ ಅಲ್ಲದೆ ಗೆಲ್ಲಲು ಅಸಾಧ್ಯವಾದವನು. ಈ ರಾತ್ರಿ ನೀನು ಅವನನ್ನು ದೈನ್ಯವನ್ನು ತೋರಿ, ಭೇದಿಸು ಎನ್ನಲು, ರಾಜನೊಬ್ಬನೇ ಆದರದಿಂದ ಬಂದು ಭೀಷ್ಮನನ್ನು ಕಂಡನು.
ಕಣ್ಡು ಪೊಡೆವಟ್ಟು ನಯಮೆರ್ದೆ
ಗೊಣ್ಡಿರೆ ಪತಿ ನುಡಿದನೆನಗೆ ದೇವರ್ ಕಲುಷಂ|
ಗೊಣ್ಡಾಗಳ್ ಕಾವರ್ ಕಣೆ
ಗೊಣ್ಡವೊಲೆಂದೆಂಬ ಮಾತಿನಂತಾಗಿರದೇ|| ೨೮ ||
ಪದ್ಯ-೦೦:ಪದವಿಭಾಗ-ಅರ್ಥ:ಕಣ್ಡು ಪೊಡೆವಟ್ಟು ನಯಮೆರ್ದೆಗೊಣ್ಡಿರೆ ಪತಿ ನುಡಿದನೆನಗೆ ದೇವರ್ ಕಲುಷಂ ಗೊಣ್ಡಾಗಳ್ ಕಾವರ್ ಕಣೆಗೊಣ್ಡವೊಲೆಂದೆಂಬ ಮಾತಿನಂತಾಗಿರದೇ
ಪದ್ಯ-೦೦:ಅರ್ಥ: ೨೮. ನಮಸ್ಕಾರಮಾಡಿ ಪೂರ್ವಕವಾಗಿ ಧರ್ಮರಾಜನು ಹೇಳಿದನು. ನನಗೆ ಸ್ವಾಮಿಯಾದ ತಾವು ಕೋಪಮಾಡಿದರೆ ‘ರಕ್ಷಿಸಬೇಕಾದವರೇ ಬಾಣವನ್ನು ಹೂಡಿದ ಹಾಗೆ’ ಎಂಬ ಗಾದೆಯ ;ಮಾತಿನಂತಾಗುವುದಿಲ್ಲವೆ?
ತೋಂಬಯ್ಸಾಸಿರ್ವರ್ ನಿ
ಮ್ಮಂಬಿನ ಬಿಂಬಲೊಳೆ ಮಕುಟಬದ್ಧರ್ ಮಡಿದರ್|
ನಂಬಿಂ ನಂಬಲಿಮಿಂದಿಂ
ಗೊಂಬತ್ತು ದಿನಂ ದಲೆಮ್ಮ ಬೆನ್ನಲೆ ನಿಂದಿರ್|| ೨೯ ||
ಪದ್ಯ-೦೦:ಪದವಿಭಾಗ-ಅರ್ಥ:ತೋಂಬಯ್ಸಾಸಿರ್ವರ್ ನಿಮ್ಮ ಅಂಬಿನ ಬಿಂಬಲೊಳೆ ಮಕುಟಬದ್ಧರ್ ಮಡಿದರ್(ತೊಂಬತ್ತುಸಾವಿರ ಕಿರೀಟಧಾರಿಗಳಾದ ರಾಜರು ನಿಮ್ಮ ಬಾಣದ ಸಮೂಹದಿಂದ ಸತ್ತರು) ನಂಬಿಂ ನಂಬಲಿಂ ಇಂದಿಂಗೆ ಒಂಬತ್ತು ದಿನಂ ದಲ್ ಎಮ್ಮ ಬೆನ್ನಲೆ ನಿಂದಿರ್ (ನಂಬಿ, ನಂಬದಿರಿ ಈ ಒಂಬತ್ತು ದಿನವೂ ನೀವು ನಮ್ಮ ಬೆನ್ನುಹತ್ತಿ ವಿರೋಧವಾಗಿ ನಿಂತಿರಿ.)
ಪದ್ಯ-೦೦:ಅರ್ಥ: ತೊಂಬತ್ತುಸಾವಿರ ಕಿರೀಟಧಾರಿಗಳಾದ ರಾಜರು ನಿಮ್ಮ ಬಾಣದ ಸಮೂಹದಿಂದ ಸತ್ತರು. ನಂಬಿ, ನಂಬದಿರಿ ಈ ಒಂಬತ್ತು ದಿನವೂ ನೀವು ನಮ್ಮ ಬೆನ್ನುಹತ್ತಿ ವಿರೋಧವಾಗಿ ನಿಂತಿರಿ.
ಚಕ್ರಿಯ ಚಕ್ರದೊಳಂ ತೊಡ
ರ್ದಾಕ್ರಮಿಸಿದುದೆಚ್ಚ ನಿಜ ಪತತ್ರಿ ದಲೆನೆ ನಿ|
ಮ್ಮೀ ಕ್ರಮಕಮಲಕ್ಕೆಱಗದೆ
ವಕ್ರಿಸಿ ಭೂಚಕ್ರದೊಳಗೆ ಬಾೞ್ವರುಮೊಳರೇ|| ೩೦ ||
ಪದ್ಯ-೩೦:ಪದವಿಭಾಗ-ಅರ್ಥ:ಚಕ್ರಿಯ ಚಕ್ರದೊಳಂ ತೊಡರ್ದು ಆಕ್ರಮಿಸಿದುದು (ಶ್ರೀಕೃಷ್ಣನ ಚಕ್ರವನ್ನೂ ಅಡ್ಡಗಟ್ಟಿ ಆಕ್ರಮಿಸಿತು) ಎಚ್ಚ (ಹೊಡೆದ) ನಿಜ ಪತತ್ರಿ (ನೀವು ಪ್ರಯೋಗಿಸಿದ ಬಾಣವು) ದಲ್ (ನಿಜಕ್ಕೂ) ಎನೆ ನಿಮ್ಮ ಈ ಕ್ರಮಕಮಲಕ್ಕೆ ಎಱಗದೆ ವಕ್ರಿಸಿ (ನಿಮ್ಮ ಈ ಪಾದಕಮಲಕ್ಕೆ ನಮಸ್ಕಾರಮಾಡದೆ ಎದರುಬಿದ್ದು ವಕ್ರವಾಗಿ ನಿಂತು) ಭೂಚಕ್ರದೊಳಗೆ ಬಾೞ್ವರುಂ ಒಳರೇ (ಭೂಮಂಡಲದಲ್ಲಿ ಬಾಳುವವರೂ ಇದ್ದಾರೆಯೇ? )
ಪದ್ಯ-೩೦:ಅರ್ಥ: ನೀವು ಪ್ರಯೋಗಿಸಿದ ಬಾಣವು ಶ್ರೀಕೃಷ್ಣನ ಚಕ್ರವನ್ನೂ ಅಡ್ಡಗಟ್ಟಿ ಆಕ್ರಮಿಸಿತು ಎನ್ನುವಾಗ ನಿಮ್ಮ ಈ ಪಾದಕಮಲಕ್ಕೆ ನಮಸ್ಕಾರಮಾಡದೆ ಎದರುಬಿದ್ದು ವಕ್ರವಾಗಿ ನಿಂತು ಈ ಭೂಮಂಡಲದಲ್ಲಿ ಬಾಳುವವರೂ ಇದ್ದಾರೆಯೇ?
ಸಾವೆ ನಿಮತಿಚ್ಚೆಯೆನೆ ಪೊಣ
ರ್ದಾವಂ ತಳ್ತಿಱಿದು ಗೆಲ್ವನೆಮಗದಱಿಂದಂ|
ಸಾವು ದಿಟಂ ನಿಮ್ಮಡಿ ಕೊಲೆ
ಸಾವುದು ಲೇಸಲ್ತೆ ಸುಗತಿವಡೆಯಲ್ಕಕ್ಕುಂ|| ೩೧ ||
ಪದ್ಯ-೩೧:ಪದವಿಭಾಗ-ಅರ್ಥ:ಸಾವೆ ನಿಮತು ಇಚ್ಚೆಯೆನೆ (ಸಾಯುವುದು ನಿಮ್ಮ ಇಚ್ಚೆಯಿಂದ ಮಾತ್ರಾ ಆಗಿದ್ದರೆ) ಪೊಣರ್ದು (ಯುದ್ಧಮಾಡಿ) ಆವಂ ತಳ್ತು ಇಱಿದು ಗೆಲ್ವನು (ನಿಮ್ಮನ್ನು ಪ್ರತಿಭಟಿಸಿ ಯಾವನು ಎದುರಿಸಿಯುದ್ಧಮಾಡಿ ಗೆಲ್ಲುತ್ತಾನೆ) ಎಮಗೆ ಅದಱಿಂದಂ ಸಾವು ದಿಟಂ (ಆದುದರಿಂದ ನಮಗೆ ಸಾವೆಂಬುದು ನಿಶ್ಚಯ.) ನಿಮ್ಮಡಿ ಕೊಲೆ (ನಿಮ್ಮಪಾದವು ನಮ್ಮನ್ನು ಕೊಲ್ಲಲು) ಸಾವುದು ಲೇಸಲ್ತೆ (ಸಾಯುವುದೇ ಒಳ್ಳೆಯದಲ್ಲವೇ) ಸುಗತಿ ವಡೆಯಲ್ಕಕ್ಕುಂ (ಸದ್ಗತಿಯನ್ನು ಹೊಂದಬಹುದು.)_
ಪದ್ಯ-೩೧:ಅರ್ಥ: (ನೀವು) ಸಾಯುವುದು ನಿಮ್ಮ ಇಚ್ಚೆಯಿಂದ ಮಾತ್ರಾ ಆಗಿದ್ದರೆ ನಿಮ್ಮನ್ನು ಪ್ರತಿಭಟಿಸಿ ಯಾವನು ಎದುರಿಸಿ ಯುದ್ಧಮಾಡಿ ಗೆಲ್ಲುತ್ತಾನೆ. ಆದುದರಿಂದ ನಮಗೆ ಸಾವೆಂಬುದು ನಿಶ್ಚಯ. ನಿಮ್ಮಪಾದವು ನಮ್ಮನ್ನು ಕೊಲ್ಲಲು ಸಾಯುವುದೇ ಒಳ್ಳೆಯದಲ್ಲವೇ, ಸದ್ಗತಿಯನ್ನು ಹೊಂದಬಹುದು.
ವ|| ಎಂದೊಡದೆಲ್ಲಮನೆಯ್ದೆ ಕೇಳ್ದು ಕರುಣಾರಸ ಹೃದಯನಾಗಿ ಮಮ್ಮಗನ ಮೊಗಮಂ ಕೂರ್ಮೆಯಿಂ ನೋಡಿ ಕಣ್ಣ ನೀರಂ ನೆಗಪಿ-
ವಚನ:ಪದವಿಭಾಗ-ಅರ್ಥ:ಎಂದೊಡೆ ಅದೆಲ್ಲಮನು ಎಯ್ದೆ ಕೇಳ್ದು ಕರುಣಾರಸ ಹೃದಯನಾಗಿ (ಅದನ್ನು ಪೂರ್ಣವಾಗಿ ಕೇಳಿ ಕರುಣಾರಸಹೃದಯನಾಗಿ ) ಮಮ್ಮಗನ ಮೊಗಮಂ ಕೂರ್ಮೆಯಿಂ ನೋಡಿ (ಮೊಮ್ಮಗನ ಮುಖವನ್ನು ಪ್ರೀತಿಯಿಂದ ನೋಡಿ) ಕಣ್ಣ ನೀರಂ ನೆಗಪಿ (ಕಣ್ಣಿನಲ್ಲಿ ನೀರನ್ನು ತುಂಬಿಕೊಂಡು ಹೇಳಿದನು.)-
ವಚನ:ಅರ್ಥ:ವ|| ಅದನ್ನು ಪೂರ್ಣವಾಗಿ ಕೇಳಿ ಕರುಣಾರಸ ಹೃದಯನಾಗಿ ಭೀಷ್ಮನು ಮೊಮ್ಮಗನ ಮುಖವನ್ನು ಪ್ರೀತಿಯಿಂದ ನೋಡಿ ಕಣ್ಣಿನಲ್ಲಿ ನೀರನ್ನು ತುಂಬಿಕೊಂಡು ಹೇಳಿದನು.
ಚಂ|| ಜಗದೊಳವಧ್ಯನಂ ಗೆಲಲೆಬಾರದದಾಡೊಡಮೇಂ ಶಿಖಂಡಿ ತೊ
ಟ್ಟಗೆ ಕೊಳೆ ಬಂದು ಮುಂದೆ ನಿಲೆ ಸಾವೆನಗಪ್ಪುದು ನಾಳಿನೊಂದು ಕಾ|
ಳೆಗದೊಳಿದಂ ನರಂಗಱಿಪದೀ ತೆಱದಿಂ ನೆಗೞ್ದೆಯ್ದೆ ವೀರ ಲ
ಕ್ಷ್ಮಿಗೆ ನೆಲೆಯಾಗು ಪೋಗೆನೆ ನೃಪಂ ಪೊಡೆವಟ್ಟು ಮನೋನುರಾಗದಿಂ|| ೩೨ ||
ಪದ್ಯ-೩೨:ಪದವಿಭಾಗ-ಅರ್ಥ:ಜಗದೊಳ್ ಅವಧ್ಯನಂ ಗೆಲಲೆ ಬಾರದು (ಲೋಕದಲ್ಲಿ ಕೊಲ್ಲಲಾಗದವನನ್ನು ಗೆಲ್ಲಲು ಸಾಧ್ಯವಿಲ್ಲ) ಅದು ಆಡೊಡಂ ಏಂ! (ಆದರೆ ತಾನೆ ಏನು?) ಶಿಖಂಡಿ ತೊಟ್ಟಗೆ ಕೊಳೆ ಬಂದು ಮುಂದೆ ನಿಲೆ (ಶಿಖಂಡಿಯು ಬೇಗನೆ ಮುಂದೆ ಬಂದು ನಿಂತರೆ) ಸಾವು ಎನಗಪ್ಪುದು (ನನಗೆ ಮರಣವಾಗುತ್ತದೆ) ನಾಳಿನ ಒಂದು ಕಾಳೆಗದೊಳು (ನಾಳೆಯ ದಿನದ ಯುದ್ಧದಲ್ಲಿ) ಇದಂ ನರಂಗೆ ಅಱಿಪದೆ ಈ ತೆಱದಿಂ ನೆಗೞ್ದು ಎಯ್ದೆ (ಈ ವಿಷಯವನ್ನು ಅರ್ಜುನನಿಗೆ ತಿಳಿಸದೆ ಮಾಡಿ) ವೀರ ಲಕ್ಷ್ಮಿಗೆ ನೆಲೆಯಾಗು ಪೋಗು ಎನೆ (ವೀರಲಕ್ಷ್ಮಿಗೆ ಪೂರ್ಣವಾಗಿ ನೆಲೆಯಾಗು ಹೋಗು’ ಎನ್ನಲು,) ನೃಪಂ ಪೊಡೆವಟ್ಟು (ಧರ್ಮರಾಜನು ನಮಸ್ಕಾರ ಮಾಡಿ) ಮನ ಅನುರಾಗದಿಂ (ಮನಸ್ಸಿನ ಸಂತೋಷದಿಂದ -- ಹಿಂತಿರುಗಿದನು)
ಪದ್ಯ-೩೨:ಅರ್ಥ: ಲೋಕದಲ್ಲಿ ಕೊಲ್ಲಲಾಗದವನನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ತಾನೆ ಏನು? ನಾಳೆಯ ದಿನದ ಯುದ್ಧದಲ್ಲಿ ಶಿಖಂಡಿಯು ಬೇಗನೆ ಮುಂದೆ ಬಂದು ನಿಂತರೆ ನನಗೆ ಮರಣವಾಗುತ್ತದೆ. ಈ ವಿಷಯವನ್ನು ಅರ್ಜುನನಿಗೆ ತಿಳಿಸದೆ ಮಾಡಿ ವೀರಲಕ್ಷ್ಮಿಗೆ ಪೂರ್ಣವಾಗಿ ನೆಲೆಯಾಗು ಹೋಗು’ ಎಂದನು ಭೀಷ್ಮ. ಧರ್ಮರಾಜನು ಮನಸ್ಸಿನ ಸಂತೋಷದಿಂದ ನಮಸ್ಕಾರ ಮಾಡಿ ಹಿಂತಿರುಗಿದನು.
ವ|| ಬಂದು ಮಂದರಧರಂಗೆ ತದ್ವೃತ್ತಾಂತಮನೆಲ್ಲಮನಱಪಿ ನಿಶ್ಚಿಂತಮನನಾಗಿ ಪವಡಿಸಿದಾಗಳ್-
ವಚನ:ಪದವಿಭಾಗ-ಅರ್ಥ:ಬಂದು ಮಂದರಧರಂಗೆ (ಸಮುದ್ರ ಮಥನದಲ್ಲಿ ಮಂದರಗಿರಿಯನ್ನ ಎತ್ತಿಹಿಡಿದ, ಶ್ರೀಕೃಷ್ಣನಿಗೆ) ತದ್ವೃತ್ತಾಂತಮನೆಲ್ಲಮನು ಅಱಪಿ (ಆ ಸಮಾಚಾರವೆಲ್ಲವನ್ನೂ ತಿಳಿಸಿ) ನಿಶ್ಚಿಂತಮನನಾಗಿ ಪವಡಿಸಿದಾಗಳ್ (ಚಿಂತೆಯಿಲ್ಲದ ಮನಸ್ಸಿನಿಂದ ಮಲಗಿದನು)-
ವಚನ:ಅರ್ಥ:ವ|| ಬಂದು ಶ್ರೀಕೃಷ್ಣನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿ ಚಿಂತೆಯಿಲ್ಲದ ಮನಸ್ಸಿನಿಂದ ಮಲಗಿದನು-
ಚಂ|| ಚಲ ಚಲದಾಂತು ಕಾದುವ ಸುಯೋಧನ ಸಾಧನದೊಡ್ಡುಗಳ್ ಕೞ
ಲ್ದಲಱಿ ತೆರಳ್ದು ತೂಳ್ದು ಬಿಱುತೋಡೆ ಗುಣಾರ್ಣವನಿಂದಮಾಜಿಯೊಳ್|
ಕೊಲಿಸಿ ಸಮಸ್ತ ಧಾತ್ರಿಯುಮನಾಳಿಪೆವೆಂದುಲಿವಂತೆ ಪಕ್ಕಿಗಳ್
ಚಿಲಿಮಿಲಿಯೆಂಬ ಪೊೞ್ತಳೆ ಬಂದುಱದೊಡ್ಡಿದನಂತಕಾತ್ಮಜಂ|| ೩೩ ||
ಪದ್ಯ-೩೩:ಪದವಿಭಾಗ-ಅರ್ಥ:ಚಲ ಚಲದಾಂತು ಕಾದುವ ಸುಯೋಧನ ಸಾಧನದ ಒಡ್ಡುಗಳ್ (ಹೆಚ್ಚಿನ ಹಠದಿಂದ ಕಾದುತ್ತಿರುವ ದುರ್ಯೋಧನನ ಸೈನ್ಯದ ಗುಂಪುಗಳು) ಕೞಲ್ದು ಅಲಱಿ ತೆರಳ್ದು ತೂಳ್ದು (ಕೃಶವಾಗಿ ಚೆದರಿ ಹೋಗಿ ಒತ್ತರಿಸಲ್ಪಟ್ಟು) ಬಿಱುತೋಡೆ (ಬೆದರಿ ಓಡಿಹೋಗಲು) ಗುಣಾರ್ಣವನಿಂದಂ ಆಜಿಯೊಳ್ ಕೊಲಿಸಿ (ಅರ್ಜುನನಿಂದ ಯುದ್ಧದಲ್ಲಿ ಕೊಲ್ಲಿಸಿ) ಸಮಸ್ತ ಧಾತ್ರಿಯುಮನು ಆಳಿಪೆವೆಂದು ಉಲಿವಂತೆ (ಸಮಸ್ತ ಭೂಮಂಡಲವನ್ನು ಅವನಿಂದಲೇ ಆಳುವ ಹಾಗೆ ಮಾಡುತ್ತೇವೆ’ ಎಂದು ಕೂಗುವ ಹಾಗೆ) ಪಕ್ಕಿಗಳ್ ಚಿಲಿಮಿಲಿಯೆಂಬ ಪೊೞ್ತಳೆ (ಹಕ್ಕಿಗಳು ಚಿಲಿಮಿಲಿಯೆಂದು ಶಬ್ದಮಾಡುತ್ತಿರುವ ಹೊತ್ತಿನಲ್ಲಿಯೇ) ಬಂದು ಉಱದೆ ಒಡ್ಡಿದನು ಅಂತಕಾತ್ಮಜಂ (ಧರ್ಮರಾಯನು ಬಂದು ಸಾವಕಾಶ ಮಾಡದೆ ಬೇಗ ಸೈನ್ಯವನ್ನು ಒಡ್ಡಿದನು.)
ಪದ್ಯ-೩೩:ಅರ್ಥ:ಹೆಚ್ಚಿನ ಹಠದಿಂದ ಕಾದುತ್ತಿರುವ ದುರ್ಯೋಧನನ ಸೈನ್ಯದ ಗುಂಪುಗಳು ಕೃಶವಾಗಿ ಚೆದರಿ ಹೋಗಿ ಒತ್ತರಿಸಲ್ಪಟ್ಟು ಬೆದರಿ ಓಡಿಹೋಗುವಂತೆ ಅರ್ಜುನನಿಂದ ಯುದ್ಧದಲ್ಲಿ ಕೊಲ್ಲಿಸಿ ಸಮಸ್ತ ಭೂಮಂಡಲವನ್ನು ಅವನಿಂದಲೇ ಆಳುವ ಹಾಗೆ ಮಾಡುತ್ತೇವೆ’ ಎಂದು ಕೂಗುವ ಹಾಗೆ ಹಕ್ಕಿಗಳು ಚಿಲಿಮಿಲಿಯೆಂದು ಶಬ್ದಮಾಡುತ್ತಿರುವ ಹೊತ್ತಿನಲ್ಲಿಯೇ (ಅರುಣೋದಯದಲ್ಲಿಯೇ) ಧರ್ಮರಾಯನು ಬಂದು ಸಾವಕಾಶ ಮಾಡದೆ ಸೈನ್ಯವನ್ನು ಒಡ್ಡಿದನು/ ಯುದ್ಧಕ್ಕೆ ನಿಲ್ಲಿಸಿದನು.
ವ|| ಆಗಳ್ ಕುರುಧ್ವಜಿನಿಯುಮನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳಂತಕಾಲಾಂತಕ ವಿಕಟಾಟ್ಟಹಾಸಂಗಳೆಂಬಂತೆ ಮೊೞಗೆ ಮಲೆದು ಬಂದೊಡ್ಡಿ ನಿಂದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಕುರುಧ್ವಜಿನಿಯುಂ (ಆಗ ಕೌರವ ಸೈನ್ಯವೂ) ಅನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳ ಅಂತಕಾಲಾಂತಕ ವಿಕಟಾಟ್ಟಹಾಸಂಗಳು ಎಂಬಂತೆ(ವಾದ್ಯಗಳ ಪ್ರಳಯಕಾಲದ ಯಮನ ವಿಕಾರವಾದ ನಗುವಿನಂತೆ) ಮೊೞಗೆ ಮಲೆದು ಬಂದೊಡ್ಡಿ ನಿಂದಾಗಳ್ (ಶಬ್ದಮಾಡಲು ಮದಿಸಿ ಬಂದು ಒಡ್ಡಿ ನಿಂತಿತು)-
ವಚನ:ಅರ್ಥ:ಆಗ ಕೌರವ ಸೈನ್ಯವೂ ಅನೇಕ ಶಂಖ, ಕೊಂಬು, ನಗಾರಿ, ಪಣವ, ಜಲ್ಲರಿ, ಮೃದಂಗವೆಂಬ ವಾದ್ಯಗಳ ಪ್ರಳಯಕಾಲದ ಯಮನ ವಿಕಾರವಾದ ನಗುವಿನಂತೆ ಶಬ್ದಮಾಡಲು ಮದಿಸಿ ಬಂದು ಒಡ್ಡಿ ನಿಂತಿತು.
ಕಂ|| ಉಭಯ ಬಲದರಸುಗಳ್ ರಣ
ರಭಸಂಗಳ್ವೆರಸು ಮುಳಿದು ಕೆಯ್ವೀಸೆ ಲಯ|
ಕ್ಷುಭಿತ ಜಲನಿಧಿ ನಿನಾದಮ
ನಭಿನಯಿಸಿದುದೊಗೆದು ನೆಗೆದ ಸಮರಾರಾವಂ|| ೩೪
ಪದ್ಯ-೩೪:ಪದವಿಭಾಗ-ಅರ್ಥ:ಉಭಯ ಬಲದ ಅರಸುಗಳ್ ರಣರಭಸಂಗಳ್ ವೆರಸು ಮುಳಿದು ಕೆಯ್ವೀಸೆ (ಎರಡು ಸೈನ್ಯದ ರಾಜರುಗಳೂ ಯುದ್ಧವೇಗದಿಂದ ಕೂಡಿ ಕೋಪದಿಂದ ಕೈಬೀಸಲಾಗಿ) ಲಯಕ್ಷುಭಿತ (ಪ್ರಳಯಕಾಲದ ಕಲಕಿದ) ಜಲನಿಧಿ ನಿನಾದಮನು ( ಸಮುದ್ರಧ್ವನಿಯನ್ನು) ಅಭಿನಯಿಸಿದುಂ (ಅನುಕರಿಸಿತು.) ಒಗೆದು ನೆಗೆದ ಸಮರಾರಾವಂ (ಸಮರ ಆರವಂ-- ಹುಟ್ಟಿ ಚಿಮ್ಮಿದ ಯುದ್ಧದ ಮೊಳಗು)
ಪದ್ಯ-೩೪:ಅರ್ಥ:ಎರಡು ಸೈನ್ಯದ ರಾಜರುಗಳೂ ಯುದ್ಧವೇಗದಿಂದ ಕೂಡಿ ಕೋಪದಿಂದ ಕೈಬೀಸಲಾಗಿ ಆಗ ಹುಟ್ಟಿ ಚಿಮ್ಮಿದ ಯುದ್ಧದ ಮೊಳಗು ಪ್ರಳಯಕಾಲದ ಕಲಕಿದ ಸಮುದ್ರಧ್ವನಿಯನ್ನು ಅನುಕರಿಸಿತು.
ಇಸುವ ಧನುರ್ಧರರಿಂ ಪಾ
ಯಿಸುವ ದೞಂಗಳಿನಗುರ್ವು ಪರ್ವುವಿನಂ ಚೋ|
ದಿಸುವ ರಥಂಗಳಿನೆಂಟುಂ
ದೆಸೆ ಮಸುಳ್ವಿನಮಿಱಿದುವಾಗಳುಭಯಬಲಂಗಳ್|| ೩೫ ||
ಪದ್ಯ-೩೫:ಪದವಿಭಾಗ-ಅರ್ಥ:ಇಸುವ ಧನುರ್ಧರರಿಂ ಪಾಯಿಸುವ ದೞಂಗಳಿನ ಅಗುರ್ವು (ಬಾಣ ಪ್ರಯೋಗಮಾಡುವ ಬಿಲ್ಗಾರರಿಂದಲೂ ಮುನ್ನುಗ್ಗಿಸುವ ಸೈನ್ಯಗಳಿಂದಲೂ ಭಯಂಕರತೆಯು) ಪರ್ವುವಿನಂ (ಹಬ್ಬುತ್ತಿರಲು) ಚೋದಿಸುವ ರಥಂಗಳಿಂ ಎಂಟುಂ ದೆಸೆ (ನಡೆಸುತ್ತಿರುವ ತೇರುಗಳಿಂದ ಎಂಟು ದಿಕ್ಕುಗಳೂ) ಮಸುಳ್ವಿನಂ ಇಱಿದುವು ಆಗಳ್ ಉಭಯಬಲಂಗಳ್ (ಮಂಕಾಗುತ್ತಿರಲು ಎರಡು ಸೈನ್ಯಗಳೂ ಯುದ್ಧ ಮಾಡಿದುವು.)
ಪದ್ಯ-೩೫:ಅರ್ಥ:ಬಾಣ ಪ್ರಯೋಗಮಾಡುವ ಬಿಲ್ಗಾರರಿಂದಲೂ ಮುನ್ನುಗ್ಗಿಸುವ ಸೈನ್ಯಗಳಿಂದಲೂ ಭಯಂಕರತೆಯು ಹಬ್ಬುತ್ತಿರಲು ನಡೆಸುತ್ತಿರುವ ತೇರುಗಳಿಂದ ಎಂಟು ದಿಕ್ಕುಗಳೂ ಮಂಕಾಗುತ್ತಿರಲು ಎರಡು ಸೈನ್ಯಗಳೂ ಯುದ್ಧ ಮಾಡಿದುವು.
ಅೞಿದೞ್ಗಿದ ಕರಿ ಘಟೆಗಳ
ಬಳಗದಿನುಚ್ಚಳಿಸಿ ಮೊರೆವ ನೆತ್ತರ ತೆರೆಗಳ್|
ಸುೞಿಸುೞಿದೊಡವರಿದವು ಕ
ಲ್ವೞಿಯೊಳ್ ಭೋರ್ಗರೆದು ಪರಿವ ತೊಗಳ ತೆಱದಿಂ|| ೩೬ ||
ಪದ್ಯ-೩೬:ಪದವಿಭಾಗ-ಅರ್ಥ:ಅೞಿದು ಅೞ್ಗಿದ ಕರಿ ಘಟೆಗಳ ಬಳಗದಿಂ ಉಚ್ಚಳಿಸಿ (ಸತ್ತು ನಾಶವಾದ ಆನೆಗಳ ರಾಶಿಯಿಂದ ಮೇಲಕ್ಕೆ ಹಾರಿ) ಮೊರೆವ ನೆತ್ತರ ತೆರೆಗಳ್ (ಶಬ್ದಮಾಡುತ್ತಿರುವ ರಕ್ತದ ಅಲೆಗಳು) ಸುೞಿಸುೞಿದು ಒಡವರಿದವು (ಸುಳಿಸುಳಿದು ಒಡನೆ ಹರಿದುವು) ಕಲ್ವೞಿಯೊಳ್ ಭೋರ್ಗರೆದು ಪರಿವ ತೊಗಳ ತೆಱದಿಂ(ಭೋರೆಂದು ಶಬ್ದ ಮಾಡುತ್ತ ಹರಿಯುವ ನದಿಗಳ ರೀತಿಯಿಂದ )
ಪದ್ಯ-೩೬:ಅರ್ಥ: ಸತ್ತು ನಾಶವಾದ ಆನೆಗಳ ರಾಶಿಯಿಂದ ಮೇಲಕ್ಕೆ ಹಾರಿ ಶಬ್ದಮಾಡುತ್ತಿರುವ ರಕ್ತದ ಅಲೆಗಳು ಸುಳಿಸುಳಿದು ಕಲ್ಲುದಾರಿಯಲ್ಲಿ ಭೋರೆಂದು ಶಬ್ದ ಮಾಡುತ್ತ ಹರಿಯುವ ನದಿಗಳ ರೀತಿಯಿಂದ ಒಡನೆ ಹರಿದುವು.
ವ|| ಅಂತು ಚಾತುರ್ದಂತಮೊಂದೊಂದರೊಳೋರಂತೆ ನಡುವಗಲ್ವರುಂ ಕಾದುವುದುಂ ನಾವಿಂದಿನನುವರಮನನಿಬರುಮೊಂದಾಗಿ ಭೀಷ್ಮರೊಳ್ ಕಾದುವಮೆಂದು ಸಮಕಟ್ಟಿ ಧರ್ಮಪುತ್ರಂ ಕದನತ್ರಿಣೇತ್ರನಂ ಮುಂದಿಟ್ಟುಂ ಸಮಸ್ತಬಲಂಬೆರಸು ಕಾದುವ ಸಮಕಟ್ಟಂ ದುರ್ಯೋಧನನಱಿದು-
ವಚನ:ಪದವಿಭಾಗ-ಅರ್ಥ:ಅಂತು ಚಾತುರ್ದಂತಂ ಒಂದೊಂದರೊಳು ಓರಂತೆ (ಚತುರಂಗಬಲವೂ ಒಂದೊಂದು ಒಂದೊಂದರಲ್ಲಿ ಕ್ರಮವಾಗಿ) ನಡುವಗಲ್ವರುಂ ಕಾದುವುದುಂ (ನಡುಹಗಲಿನವರೆಗೆ ಒಂದೇ ಸಮನಾಗಿ ಕಾದಿದುವು) ನಾವು ಇಂದಿನ ಅನುವರಮನು ಅನಿಬರುಂ ಒಂದಾಗಿ ಭೀಷ್ಮರೊಳ್ ಕಾದುವಮೆಂದು (ಧರ್ಮರಾಜನು ನಾವು ಭೀಷ್ಮರೊಡನೆ ಇಂದಿನ ಯುದ್ಧವನ್ನು ಎಲ್ಲರೂ ಒಟ್ಟಿಗೆ ಸೇರಿ ಕಾದೋಣ ಎಂದು) ಸಮಕಟ್ಟಿ ಧರ್ಮಪುತ್ರಂ ಕದನತ್ರಿಣೇತ್ರನಂ ಮುಂದಿಟ್ಟುಂ (ನಿಷ್ಕರ್ಷಿಸಿ ಅರ್ಜುನನನ್ನು ಮುಂದಿಟ್ಟುಕೊಂಡು) ಸಮಸ್ತಬಲಂ ಬೆರಸು ಕಾದುವ ಸಮಕಟ್ಟಂ ದುರ್ಯೋಧನನು ಅಱಿದು (ಸಮಸ್ತಸೈನ್ಯವನ್ನೂ ಕೂಡಿಸಿದನು.ಇದನ್ನು ದುರ್ಯೋಧನನನ್ನೂ ಅರಿತು.)-
ವಚನ:ಅರ್ಥ:ಚತುರಂಗಬಲವೂ ಒಂದೊಂದು ಒಂದೊಂದರಲ್ಲಿ ಕ್ರಮವಾಗಿ ನಡುಹಗಲಿನವರೆಗೆ ಒಂದೇ ಸಮನಾಗಿ ಕಾದಿದುವು. ಧರ್ಮರಾಜನು ನಾವು ಭೀಷ್ಮರೊಡನೆ ಇಂದಿನ ಯುದ್ಧವನ್ನು ಎಲ್ಲರೂ ಒಟ್ಟಿಗೆ ಸೇರಿ ಕಾದೋಣ ಎಂದು ನಿಷ್ಕರ್ಷಿಸಿ ಅರ್ಜುನನನ್ನು ಮುಂದಿಟ್ಟುಕೊಂಡು ಸಮಸ್ತಸೈನ್ಯವನ್ನೂ ಕೂಡಿಸಿದನು. ಇದನ್ನು ದುರ್ಯೋಧನನನ್ನೂ ಅರಿತು-
ಚ|| ಕುರುಬಲಮೆಂಬುದೀ ಸುರನದೀಜನ ತೋಳ್ವಲಮೆಂಬ ವಜ್ರ ಪಂ
ಜರದೊಳಗಿರ್ದು ಬೞ್ದಪುದು ಪಾಂಡವ ಸೈನ್ಯಮುಮಿಂದು ಭೀಷ್ಮರೊ|
ರ್ವರೊಳಿರದಾಂತು ಕಾದಲವರಂ ಪೆಱಗಿಕ್ಕಿ ಕಡಂಗಿ ಕಾದಿ ನಿ
ತ್ತರಿಸುವೆನೆಂದು ಪಾಂಡವ ಬಲಕ್ಕಿದಿರಂ ತಱಿಸಂದು ತಾಗಿದಂ|| ೩೭ ||
ಪದ್ಯ-೩೭:ಪದವಿಭಾಗ-ಅರ್ಥ:ಕುರುಬಲಮೆಂಬುದು ಈ ಸುರನದೀಜನ ತೋಳ್ವಲಮೆಂಬ ವಜ್ರ ಪಂಜರದೊಳಗಿರ್ದು ಬೞ್ದಪುದು (ಈ ಕೌರವ ಸೈನ್ಯವೆಂಬುದು ಭೀಷ್ಮನ ಬಾಹುಬಲವೆಂಬ ವಜ್ರಪಂಜರದಲ್ಲಿದ್ದು ಬಾಳುತ್ತಿದೆ) ಪಾಂಡವ ಸೈನ್ಯಮುಂ ಇಂದು ಭೀಷ್ಮರ ಒರ್ವರೊಳು ಇರದಾಂತು ಕಾದಲು (ಪಾಂಡವಸೈನ್ಯವು ಈ ದಿನ ಭೀಷ್ಮರೊಬ್ಬರನ್ನು ಬಿಡದೆ ಪ್ರತಿಭಟಿಸಿ ಕಾದಲು ಯೋಚಿಸಿದೆ) ಅವರಂ ಪೆಱಗಿಕ್ಕಿ ಕಡಂಗಿ ಕಾದಿ (ಅವರನ್ನು ಈ ದಿನ ನಾನು ಹಿಂದಿಕ್ಕಿ (ರಕ್ಷಿಸಿ) ಉತ್ಸಾಹದಿಂದ ಕಾದಿ/ ಹೋರಾಡಿ) ನಿತ್ತರಿಸುವೆನೆಂದು (ನಿಭಾಯಿಸುತ್ತೇನೆ’ ಎಂದು) ಪಾಂಡವ ಬಲಕ್ಕೆ ಇದಿರಂ ತಱಿಸಂದು ತಾಗಿದಂ ( ಪಾಂಡವಸೈನ್ಯಕ್ಕೆ ಇದಿರಾಗಿ ಹತ್ತಿರಬಂದು ತಾಗಿದನು (ಪ್ರತಿಭಟಿಸಿದನು))
ಪದ್ಯ-೩೭:ಅರ್ಥ:‘ಈ ಕೌರವ ಸೈನ್ಯವೆಂಬುದು ಭೀಷ್ಮನ ಬಾಹುಬಲವೆಂಬ ವಜ್ರಪಂಜರದಲ್ಲಿದ್ದು ಬಾಳುತ್ತಿದೆ. ಪಾಂಡವಸೈನ್ಯವು ಈ ದಿನ ಭೀಷ್ಮರೊಬ್ಬರನ್ನು ಬಿಡದೆ ಪ್ರತಿಭಟಿಸಿ ಕಾದಲು ಯೋಚಿಸಿದೆ. ಆದುದರಿಂದ ಅವರನ್ನು ಈ ದಿನ ನಾನು ಹಿಂದಿಕ್ಕಿ (ರಕ್ಷಿಸಿ) ಉತ್ಸಾಹದಿಂದ ಕಾದಿ ನಿಭಾಯಿಸುತ್ತೇನೆ’ ಎಂದು ದುರ್ಯೋಧನನು ನಿಶ್ಚಯಿಸಿ ಪಾಂಡವಸೈನ್ಯಕ್ಕೆ ಇದಿರಾಗಿ ಹತ್ತಿರಬಂದು ತಾಗಿದನು (ಪ್ರತಿಭಟಿಸಿದನು).
ವ|| ಅಂತು ತಾಗುವುದುಂ ಸಾತ್ಯಕಿ ಕೃತವರ್ಮನೊಳ್ ಯುಷ್ಠಿರಂ ಶಲ್ಯನೊಳ್ ಸೌಭದ್ರನಶ್ವತ್ಥಾಮನೊಳ್ ಸಹದೇವಂ ಶಕುನಿಯೊಳ್ ನಕುಲಂ ಚಿತ್ರಸೇನನೊಳ್ ಚೇಕಿತಾನಂ ಸೈಂಧವನೊಳ್ ಘಟೋತ್ಕಚಂ ಕೃಪನೊಳ್ ಭೀಮಸೇನಂ ಕೌರವನೊಳ್ ಕಳಿಂಗರಾಜಂ ಪಾಂಚಾಳರಾಜನೊಳ್ ಅತಿರಥಮಥನಂ ದ್ರೋಣಾಚಾರ್ಯರೊಳ್ ಅವರವರೊಳದಿರದಾಂತಾಗಳ್-
ವಚನ:ಪದವಿಭಾಗ-ಅರ್ಥ:ಅಂತು ತಾಗುವುದುಂ (ಹಾಗೆ ಎದುರುಬಿದ್ದಾಗ) ಸಾತ್ಯಕಿ ಕೃತವರ್ಮನೊಳ್, ಯುಷ್ಠಿರಂ ಶಲ್ಯನೊಳ್, ಸೌಭದ್ರನು ಅಶ್ವತ್ಥಾಮನೊಳ್, ಸಹದೇವಂ ಶಕುನಿಯೊಳ್, ನಕುಲಂ ಚಿತ್ರಸೇನನೊಳ್, ಚೇಕಿತಾನಂ ಸೈಂಧವನೊಳ್, ಘಟೋತ್ಕಚಂ ಕೃಪನೊಳ್, ಭೀಮಸೇನಂ ಕೌರವನೊಳ್, ಕಳಿಂಗರಾಜಂ ಪಾಂಚಾಳರಾಜನೊಳ್, ಅತಿರಥಮಥನಂ ದ್ರೋಣಾಚಾರ್ಯರೊಳ್ (ಅರ್ಜುನನು ದ್ರೋಣಾಚಾರ್ಯರೊಡನೆಯೂ ಪರಸ್ಪರ ಹೆದರದೆ ಪ್ರತಿಭಟಿಸಿದರು.)ಅವರವರೊಳ್ ಅದಿರದೆ ಆಂತಾಗಳ್ (ಪರಸ್ಪರ ಹೆದರದೆ ಪ್ರತಿಭಟಿಸಿದರ. ಆಗ) -
ವಚನ:ಅರ್ಥ:ಹಾಗೆ ಎದುರುಬಿದ್ದಾಗ ಸಾತ್ಯಕಿಯು ಕೃತವರ್ಮನೊಡನೆಯೂ ಧರ್ಮರಾಜನು ಶಲ್ಯನೊಡನೆಯೂ ಅಭಿಮನ್ಯುವು ಅಶ್ವತ್ಥಾಮನೊಡನೆಯೂ ಸಹದೇವನು ಶಕುನಿಯೊಡನೆಯೂ ನಕುಲನು ಚಿತ್ರಸೇನನೊಡನೆಯೂ ಚೇಕಿತಾನನು ಸೈಂಧವನೊಡನೆಯೂ ಘಟೋತ್ಕಚನು ಕೃಪನೊಡನೆಯೂ ಭೀಮಸೇನನು ದುರ್ಯೋಧನನೊಡನೆಯೂ ಕಳಿಂಗರಾಜನು ದ್ರುಪದನೊಡನೆಯೂ ಅರ್ಜುನನು ದ್ರೋಣಾಚಾರ್ಯರೊಡನೆಯೂ ಪರಸ್ಪರ ಹೆದರದೆ ಪ್ರತಿಭಟಿಸಿದರು.
ಚಂ|| ನಡುವಿಡುವುರ್ಚುವಾರ್ದರಿವ ನೇರ್ವ ಪಳಂಚುವ ಪೋರ್ವ ಬಾಣದಿಂ
ದುಡಿದು ಸಿಡಿಲ್ದು ಸೂಸಿಯೆ ಕೞಲ್ದು ಬೞಲ್ದು ಸಡಿಲ್ದು ಜೋಲ್ದು ನೇ|
ಲ್ದುಡಿದ ನೊಗಂ ಧ್ವಜಂ ಪಲಗೆ ಕೀಲ್ ಕವರಚ್ಚು ತುರಂಗಮಂ ರಥಂ
ಕಿಡೆ ಕವರಿಂದಗುರ್ವನೊಳಕೊಂಡಿರೆ ತಳ್ತಿಱಿದರ್ ಮಹಾರಥರ್|| ೩೮ ||
ಪದ್ಯ-೩೮:ಪದವಿಭಾಗ-ಅರ್ಥ:ನಡುವ ಇಡುವ ಉರ್ಚುವ ಆರ್ದು ಅರಿವ (ಬಾಣಗಳನ್ನು ನಾಟುವ, ಬೀಸಿ, ಎಸೆಯುವ, ಚುಚ್ಚುವ, ಶಬ್ದಮಾಡಿ ಕತ್ತರಿಸುವ,) ನೇರ್ವ ಪಳಂಚುವ ಪೋರ್ವ (ತುಂಡುಮಾಡುವ, ಪ್ರತಿಭಟಿಸಿ ತಗಲುವ ಹೋರಾಡುತ್ತಿರುವ) ಬಾಣದಿಂದ ಉಡಿದು ಸಿಡಿಲ್ದು ಸೂಸಿಯೆ ಕೞಲ್ದು ಬೞಲ್ದು ಸಡಿಲ್ದು ಜೋಲ್ದು (ಬಾಣಗಳಿಂದ ಮುರಿದು ಸಿಡಿದು ಚೆಲ್ಲಿ ಶಿಥಿಲವಾಗಿ ಜೋತು ಬಿದ್ದು ನೇತಾಡಿ ) ನೇಲ್ದುಡಿದ ನೊಗಂ ಧ್ವಜಂ ಪಲಗೆ ಕೀಲ್ ಕವರಚ್ಚು (ತುಂಡರಿಸಿದ ನೊಗ, ಬಾವುಟ, ಹಲಗೆ, ಕೀಲು, ಕವಲುಮರ, (ತೇರಿನ) ಅಚ್ಚು) ತುರಂಗಮಂ ರಥಂಕಿಡೆ ((ತೇರಿನ) ಅಚ್ಚು, ಕುದುರೆ, ತೇರು ಇವುಗಳು ನಾಶವಾಗಲು) ಕವರಿಂದ ಉಗುರ್ವಂ ಒಳಕೊಂಡಿರೆ (ಕೊಳ್ಳೆಯಿಂದ ಭಯವನ್ನು ಹೊಂದಿರಲು,) ತಳ್ತು ಇಱಿದರ್ ಮಹಾರಥರ್ (ಮಹಾರಥರು ಒಟ್ಟುಗೂಡಿ ಭಯಂಕರವಾಗಿ ಯುದ್ಧಮಾಡಿದರು.)
ಪದ್ಯ-೩೮:ಅರ್ಥ:(ಬಾಣಗಳನ್ನು) ನಾಟುವ, ಬೀಸಿ, ಎಸೆಯುವ, ಚುಚ್ಚುವ, ಶಬ್ದಮಾಡಿ ಕತ್ತರಿಸುವ, ತುಂಡುಮಾಡುವ, ಪ್ರತಿಭಟಿಸಿ ತಗಲುವ ಹೋರಾಡುತ್ತಿರುವ, ಬಾಣಗಳಿಂದ ಮುರಿದು ಸಿಡಿದು ಚೆಲ್ಲಿ ಶಿಥಿಲವಾಗಿ ಜೋತು ಬಿದ್ದು ನೇತಾಡಿ ತುಂಡರಿಸಿದ ನೊಗ, ಬಾವುಟ, ಹಲಗೆ, ಕೀಲು, ಕವಲುಮರ, (ತೇರಿನ) ಅಚ್ಚು, ಕುದುರೆ, ತೇರು ಇವುಗಳು ನಾಶವಾಗಲು ಮಹಾರಥರು ಒಟ್ಟುಗೂಡಿ ಭಯಂಕರವಾಗಿ ಯುದ್ಧಮಾಡಿದರು.
ವ|| ಅಂತು ಕಿಡಿಗುಟ್ಟಿದಂತೆ ತಳ್ತಿಱಿಯೆ ಜಗದೇಕಮಲ್ಲಂಗೆ ಮಾರ್ಮಲೆಯಲಾಱದೆ ಕುರುಬಲಮೆಲ್ಲಮೊಲ್ಲನುಲಿದೋಡಿ ಭೀಷ್ಮರ ಮಯಂ ಪೊಕ್ಕಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಕಿಡಿಗುಟ್ಟಿದಂತೆ ತಳ್ತಿಱಿಯೆ (ಬೆಂಕಿಯ ಕಿಡಿಯು ಚೆಲ್ಲುವ ಹಾಗೆ ಜಗದೇಕಮಲ್ಲನಾದ ಅರ್ಜುನನು ಸಮೀಪಿಸಿ ಯುದ್ಧಮಾಡುತ್ತಿರಲು) ಜಗದೇಕಮಲ್ಲಂಗೆ ಮಾರ್ಮಲೆಯಲಾಱದೆ (ಅವನನ್ನು ಪ್ರತಿಭಟಿಸಲಾರದೆ) ಕುರುಬಲಂ ಎಲ್ಲಂ ಒಲ್ಲನೆ ಉಲಿದು ಓಡಿ (ಕೌರವಸೈನ್ಯವೆಲ್ಲವೂ ಮೆಲ್ಲನೆ ಕೂಗಿಕೊಂಡು ಓಡಿ) ಭೀಷ್ಮರ ಮಯಂ ಪೊಕ್ಕಾಗಳ್ ()-
ವಚನ:ಅರ್ಥ:ಬೆಂಕಿಯ ಕಿಡಿಯು ಚೆಲ್ಲುವ ಹಾಗೆ ಜಗದೇಕಮಲ್ಲನಾದ ಅರ್ಜುನನು ಸಮೀಪಿಸಿ ಯುದ್ಧಮಾಡುತ್ತಿರಲು, ಅವನನ್ನು ಪ್ರತಿಭಟಿಸಲಾರದೆ ಕೌರವಸೈನ್ಯವೆಲ್ಲವೂ ಮೆಲ್ಲನೆ ಕೂಗಿಕೊಂಡು ಓಡಿ ಭೀಷ್ಮರ ಮರೆಯನು ಹೊಕ್ಕಾಗ-
ಕಂ|| ಧವಳ ಹಯಂ ಧವಳ ರಥಂ
ಧವಳೋಷ್ಣೀಷಂ ಶಶಾಂಕ ಸಂಕಾಶ ಯಶೋ|
ಧವಳಿತ ಭುವನಂ ತಾಗಿದ
ನವಯವದಿಂ ಬಂದು ಧರ್ಮತನಯನ ಬಲದೋಳ್|| ೩೯ ||
ಪದ್ಯ-೩೯:ಪದವಿಭಾಗ-ಅರ್ಥ: ಧವಳ ಹಯಂ ಧವಳ ರಥಂ (ಬಿಳಿಯ ಕುದುರೆ, ಬಿಳಿಯ ರಥವುಳ್ಳವನು,) ಧವಳೋಷ್ಣೀಷಂ (ಧವಳ-ಬಿಳಿಯ ಉಷ್ಣೀಷಂ- ಪೇಟ?: ಬಿಳಿಯ ತಲೆಯುಡಿಗೆಯುಳ್ಳವನು) ಶಶಾಂಕ ಸಂಕಾಶ ಯಶೋಧವಳಿತ ಭುವನಂ ( ಚಂದ್ರನ ಹೋಲಿಕೆಯ ಬಿಳಿ-ಶುಭ್ರ ಯಶಸ್ಸಿನಿಂದ ಕೂಡಿದ ಲೋಕದಂತಿರುವ ಭೀಷ್ಮನು) ತಾಗಿದನು ಅವಯವದಿಂ ಬಂದು ಧರ್ಮತನಯನ ಬಲದೋಳ್ (ಧರ್ಮರಾಜನ ಸೈನ್ಯದೊಡನೆ ಕಾದಲು ಬಂದನು.)
ಪದ್ಯ-೩೯:ಅರ್ಥ:ಬಿಳಿಯ ಕುದುರೆ, ಬಿಳಿಯ ರಥವುಳ್ಳವನು, ಬಿಳಿಯ ತಲೆಯುಡಿಗೆಯುಳ್ಳವನು, ಚಂದ್ರನ ಹೋಲಿಕೆಯ ಬಿಳಿ-ಶುಭ್ರ ಯಶಸ್ಸಿನಿಂದ ಕೂಡಿದ ಲೋಕದಂತಿರುವ ಭೀಷ್ಮನು ಧರ್ಮರಾಜನ ಸೈನ್ಯದೊಡನೆ ಕಾದಲು ಬಂದನು.
ವ|| ಅಂತು ತಾಗಿದ ಸಿಂಧುನಂದನನ ಕೋಪಶಿಖಿ ಶಿಖಾಕಳಾಪಂಗಳೊಳ್ ಪುಡುಪುಡನೞ್ಗಿ ಸಾಯಲೆಂದು ಪಾಯ್ವ ಪತಂಗಂಗಳಂತೆ ಸೋಮಕ ಶ್ರೀಜಯ ಪ್ರಮುಖ ನಾಯಕರೊಂದಕ್ಷೋಹಿಣೀ ಬಲಂಬೆರಸು ಭರಂಗೆಯ್ದಾಂತೊಡೆ-
ವಚನ:ಪದವಿಭಾಗ-ಅರ್ಥ:ಅಂತು ತಾಗಿದ ಸಿಂಧುನಂದನನ ಕೋಪಶಿಖಿ (ಭೀಷ್ಮನ ಕೋಪಾಗ್ನಿಜ್ವಾಲೆಯ) ಶಿಖಾಕಳಾಪಂಗಳೊಳ್ (ಸುಳಿಗಳ ಸಮೂಹದಲ್ಲಿ) ಪುಡುಪುಡನೆ ಅೞ್ಗಿ (ಬಿಸಿಬಿಸಿಯಾಗಿ ಬೆಂದು ) ಸಾಯಲೆಂದು ಪಾಯ್ವ ಪತಂಗಂಗಳಂತೆ (ಸಾಯಬೇಕೆಂದು ಹಾಯುವ ‘ದೀಪದ ಹುಳುಗಳ ಹಾಗೆ) ಸೋಮಕ ಶ್ರೀಜಯ ಪ್ರಮುಖ ನಾಯಕರ ಒಂದು ಅಕ್ಷೋಹಿಣೀ ಬಲಂಬೆರಸು ( ಶ್ರೀಜಯನೇ ಮೊದಲಾದ ನಾಯಕರು ಒಂದಕ್ಷೋಹಿಣೀ ಸೈನ್ಯದಿಂದೊಡಗೂಡಿ) ಭರಂಗೆಯ್ದು ಆಂತೊಡೆ (ವೇಗವಾಗಿ ಬಂದು ಆಭರ್ಟಿಸಿ ಮುತ್ತಿದಾಗ)-
ವಚನ:ಅರ್ಥ:ಭೀಷ್ಮನ ಕೋಪಾಗ್ನಿಜ್ವಾಲೆಯ ಸುಳಿಗಳ ಸಮೂಹದಲ್ಲಿ ಬಿಸಿಬಿಸಿಯಾಗಿ ಬೆಂದು ನಾಶವಾಗಿ ಸಾಯಬೇಕೆಂದು ಹಾಯುವ ‘ದೀಪದ ಹುಳುಗಳ ಹಾಗೆ ಸೋಮಕ ಶ್ರೀಜಯನೇ ಮೊದಲಾದ ನಾಯಕರು ಒಂದಕ್ಷೋಹಿಣೀ ಸೈನ್ಯದಿಂದೊಡಗೂಡಿ ವೇಗವಾಗಿ ಬಂದು ಆಭರ್ಟಿಸಿ ಮುತ್ತಿದಾಗ.
ಮ|| ಶರಸಂಧಾನದ ಬೇಗಮಂಬುಗಳನಂಬೀಂಬಂತೆ ಮೇಣಂಬಿನಾ
ಗರಮೆಂಬಂತೆನೆ ಪಾಯ್ವರಾತಿ ಶರ ಸಂಘಾತಂಗಳಂ ನುರ್ಗಿ ನೇ||
ರ್ದರಿದಟ್ಟುಂಬರಿಗೊಂಡು ಕೂಡೆ ಕಡಿದಂತಾ ಸೈನ್ಯಮಂ ಪರ್ವಿ ಗೋ
ೞ್ಮುರಿಗೊಂಡುರ್ವಿದುವಾ ರಸಾತಳಮುಮಂ ಗಾಂಗೇಯನಸ್ತ್ರಾಳಿಗಳ್|| ೪೦ ||
ಪದ್ಯ-೪೦:ಪದವಿಭಾಗ-ಅರ್ಥ:ಶರಸಂಧಾನದ ಬೇಗಂ ಅಂಬುಗಳನು ಅಂಬು ಈಂಬಂತೆ (ಭೀಷ್ಮನ ಬಾಣಪ್ರಯೋಗಮಾಡುವ ವೇಗವು ಬಾಣಗಳು ಬಾಣಗಳನ್ನು ಹೆರುತ್ತಿರುವ ಹಾಗೆ) ಮೇಣಂಬಿನ ಆಗರಮೆಂಬಂತೆ ಎನೆ (ಬಾಣಗಳ ಅಕರದಂತಿರಲು) ಪಾಯ್ವ ಅರಾತಿ ಶರ ಸಂಘಾತಂಗಳಂ ನುರ್ಗಿ (ಆ ಭೀಷ್ಮನ ಬಾಣಗಳು ಹಾರಿ ಬರುತ್ತಿರುವ ಶತ್ರುಗಳ ಬಾಣಸಮೂಹವನ್ನು ಪುಡಿಮಾಡಿ) ನೇರ್ದು (ಕತ್ತರಿಸಿ,) ಅರಿದು ಅಟ್ಟು ಅಂಬರಿಗೊಂಡು ( ನೇರವಾಗಿ ಕತ್ತರಿಸಿ, ತುಂಡುಮಾಡಿ, ಹಿಂಬಾಲಿಸಿ ಓಡಿಸಿ,) ಕೂಡೆ ಕಡಿದಂತಾ ಸೈನ್ಯಮಂ ಪರ್ವಿ (ಕೂಡಲೆ ಆ ಸೈನ್ಯವನ್ನು ಆವರಿಸಿ) ಗೋೞ್ಮುರಿಗೊಂಡು ಉರ್ವಿದುವು (ಕತ್ತನ್ನು ಕತ್ತರಿಸಿ -- ತುಂಬಿದುವು ) ಆ ರಸಾತಳಮುಮಂ ಗಾಂಗೇಯನ ಅಸ್ತ್ರಾಳಿಗಳ್ (ಪಾತಾಳವನ್ನು ತುಂಬಿದುವು ಭೀಷ್ಮನ ಬಾಣಗಳ ಸಾಲುಗಳು)
ಪದ್ಯ-೪೦:ಅರ್ಥ: ಭೀಷ್ಮನ ಬಾಣಪ್ರಯೋಗಮಾಡುವ ವೇಗವು ಬಾಣಗಳು ಬಾಣಗಳನ್ನು ಹೆರುತ್ತಿರುವ ಹಾಗೆ, ಮತ್ತು ಬಾಣಗಳ ಅಕರದಂತಿರಲು ಆ ಭೀಷ್ಮನ ಬಾಣಗಳು ಹಾರಿ ಬರುತ್ತಿರುವ ಶತ್ರುಗಳ ಬಾಣಸಮೂಹವನ್ನು ಪುಡಿಮಾಡಿ ನೇರವಾಗಿ ಕತ್ತರಿಸಿ, ತುಂಡುಮಾಡಿ, ಹಿಂಬಾಲಿಸಿ, ಓಡಿಸಿ, ಆಗಲೇ ಕತ್ತರಿಸಿದಂತೆ, ಕೂಡಲೆ ಆ ಸೈನ್ಯವನ್ನು ಆವರಿಸಿ ಕತ್ತನ್ನು ಕತ್ತರಿಸಿ ಭೀಷ್ಮನ ಬಾಣಗಳ ಸಾಲುಗಳು ಪಾತಾಳವನ್ನು ತುಂಬಿದುವು
ವ|| ಅಂತು ಭೀಷ್ಮಂ ಗ್ರೀಷ್ಮಕಾಲದಾದಿತ್ಯನಂತೆ ಕಾಯ್ದಂತಕಾಲದಂತಕನಂತೆ ಕೆಳರ್ದು ವಿಳಯಕಾಲಮೇಘದಂತೆ ಮೊೞಗಿ ಮಹಾಪ್ರಳಯಭೈರವನಂತೆ ಮಸಗಿ ಪಯಿಂಛಾಸಿರ್ವರ್ ಮಕುಟಬದ್ಧರಂ ಕೊಂದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಭೀಷ್ಮಂ ಗ್ರೀಷ್ಮಕಾಲದ ಆದಿತ್ಯನಂತೆ ಕಾಯ್ದ ಅಂತಕಾಲದ ಅಂತಕನಂತೆ ಕೆಳರ್ದು (ಭೀಷ್ಮನು ಬೇಸಿಗೆಯ ಸೂರ್ಯನಂತೆ ಕೆರಳಿ, ಪ್ರಳಯಕಾಲದ ಯಮನಂತೆ ಸಿಟ್ಟಾಗಿ) ವಿಳಯಕಾಲಮೇಘದಂತೆ ಮೊೞಗಿ (ವಿಳಯಕಾಲದ ಮೋಡದಂತೆ ಶಬ್ದಮಾಡಿ) ಮಹಾಪ್ರಳಯಭೈರವನಂತೆ ಮಸಗಿ (ಮಹಾಪ್ರಳಯಭೈರವನಂತೆ ಕೆರಳಿ) ಪಯಿಂಛಾಸಿರ್ವರ್ ಮಕುಟಬದ್ಧರಂ ಕೊಂದಾಗಳ್ (ಹತ್ತು ಸಾವಿರ ರಾಜರನ್ನು ಕೊಂದನು. ಆಗ)-
ವಚನ:ಅರ್ಥ:ಭೀಷ್ಮನು ಬೇಸಿಗೆಯ ಸೂರ್ಯನಂತೆ ಕೆರಳಿ, ಪ್ರಳಯಕಾಲದ ಯಮನಂತೆ ಸಿಟ್ಟಾಗಿ, ವಿಳಯಕಾಲದ ಮೋಡದಂತೆ ಶಬ್ದಮಾಡಿ, ಮಹಾಪ್ರಳಯಭೈರವನಂತೆ ಕೆರಳಿ ಹತ್ತು ಸಾವಿರ ರಾಜರನ್ನು ಕೊಂದನು. ಆಗ-
ಚಂ|| ಮಣಿಮಕುಟಾಳಿಗಳ್ವೆರಸುರುಳ್ದ ನರೇಂದ್ರಶಿರಂಗಳೊಳ್ಫಣಾ
ಮಣಿಗಳ ದೀಪ್ತಿಗಳ್ ಬೆಳಗೆ ಧಾತ್ರಿಯನೊಯ್ಯನೆ ಕಂಡಿ ಮಾಡಿ ಕಣ್|
ತಣಿವಿನಮಂದು ನಿಂದಿಱಿದ ಕೊಳ್ಗುಳನಂ ನಡೆ ನೊೞ್ಪಹೀಂದ್ರರೊಳ್
ಸೆಣಸಿದುವೆಂದೊಡೇವೊಗೞ್ಪುದೇರ್ವೆಸನಂ ಸುರಸಿಂಧುಪುತ್ರನಾ|| ೪೧||
ಪದ್ಯ-೪೧:ಪದವಿಭಾಗ-ಅರ್ಥ:ಮಣಿಮಕುಟಾಳಿಗಳ್ವೆರಸು ಉರುಳ್ದ (ರತ್ನಖಚಿತವಾದ ಕಿರೀಟಗಳ ಸಮೂಹದೊಡನೆ ಉರುಳಿದ) ನರೇಂದ್ರಶಿರಂಗಳೊಳು (ಚಕ್ರವರ್ತಿಗಳ ತಲೆಗಳ ಬಳಿ) ಫಣಾಮಣಿಗಳ ದೀಪ್ತಿಗಳ್ ಬೆಳಗೆ (ಸರ್ಪಗಳ ಹೆಡೆಯ ರತ್ನಗಳ ಕಾಂತಿಯು ಬೆಳಗಲು) ಧಾತ್ರಿಯನು ಒಯ್ಯನೆ ಕಂಡಿ ಮಾಡಿ ಕಣ್ ತಣಿವಿನಮಂದು (ಭೂಮಿಯನ್ನು ನಿಧಾನವಾಗಿ ರಂಧ್ರಮಾಡಿಕೊಂಡು ಪಾತಾಳಲೋಕದಿಂದ ಬಂದು ಕಣ್ಣು ತೃಪ್ತಿಯಾಗುವಷ್ಟು) ನಿಂದು ಇಱಿದ ಕೊಳ್ಗುಳನಂ (ಆ ದಿನದ ಹೋರಾಡಿದದ ಯುದ್ಧವನ್ನು) ನಡೆ ನೊೞ್ಪ ಅಹೀಂದ್ರರೊಳ್ ಸೆಣಸಿದುವೆಂದೊಡೆ (ನೋಡಬೇಕೆಂಬ ಕುತೂಹಲದಿಂದ ನೋಡಲು ಸ್ಪರ್ಧಿಸಿದವು ಎಂದರೆ) ಏವೊಗೞ್ಪುದು (ಏನೆಂದು ಹೊಗಳುವುದು) ಏರ್ವೆಸನಂ (ಯುದ್ಧಕಾರ್ಯವನ್ನು) ಸುರಸಿಂಧುಪುತ್ರನಾ (ಭೀಷ್ಮನ)
ಪದ್ಯ-೪೧:ಅರ್ಥ:ರತ್ನಖಚಿತವಾದ ಕಿರೀಟಗಳ ಸಮೂಹದೊಡನೆ ಉರುಳಿದ ಚಕ್ರವರ್ತಿಗಳ ತಲೆಗಳ ಬಳಿ ಆ ದಿನದ ಹೋರಾಡಿದದ ಯುದ್ಧವನ್ನು ನೋಡಬೇಕೆಂಬ ಕುತೂಹಲದಿಂದ ನೋಡಲು ಸ್ಪರ್ಧಿಸಿದವು ಎಂದರೆ ಭೂಮಿಯನ್ನು ನಿಧಾನವಾಗಿ ರಂಧ್ರಮಾಡಿಕೊಂಡು ಪಾತಾಳಲೋಕದಿಂದ ಬಂದು ಕಣ್ಣು ತೃಪ್ತಿಯಾಗುವಷ್ಟು ಇಣಿಕಿ ನೋಡುತ್ತಿರುವ ಸರ್ಪಗಳ ಹೆಡೆಯ ರತ್ನಗಳ ಕಾಂತಿಯನ್ನೂ ರ್ಸ್ಪಸುವಂತಿತ್ತು ಎನ್ನುವಾಗ ಭೀಷ್ಮನ ಯುದ್ಧಕಾರ್ಯವನ್ನು ಏನೆಂದು ಹೊಗಳುವುದು!
ವ|| ಅಂತ ಸೋಮಕಬಲಮೆಲ್ಲಮಂ ಪೇೞೆ ಪೆಸರಿಲ್ಲದಂತು ಕೊಂದು ಶ್ರೀ ಜಯಬಲಕ್ಕಪಜಯಮಾಗೆ ಕೊಂದುಮೋಡಿಸಿಯುಮಿಕ್ಕಿ ಗೆಲ್ದ ಮಲ್ಲನಂತಿರ್ದಾಗಳ್ ಜಗದೇಕಮಲ್ಲಂ ಮೊದಲಾಗೆ ವಿರಾಟ ವಿರಾಟಜ ದ್ರುಪದ ದ್ರುಪದಜ ಚೇಕಿತಾನ ಯುಧಾಮನ್ಯೂತ್ತಮೋಜಸ್ಸೌಭದ್ರ ಘಟೋತ್ಕಚ ನಕುಲ ಸಹದೇವ ಸಾತ್ಯಕಿ ಪಂಚಪಾಂಡವ ಪ್ರಮುಖನಾಯಕರೆಲ್ಲರುಂಬೆರಸು ಧರ್ಮಪುತ್ರಂ ಶಿಖಂಡಿಯಂ ಮುಂದಿಟ್ಟುಕೊಂಡು ಬಂದು ಪೇಂಕುಳಿಗೊಂಡ ಸಿಂಹಮಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಸೋಮಕಬಲಮೆಲ್ಲಮಂ ಪೇೞೆ ಪೆಸರಿಲ್ಲದಂತು ಕೊಂದು (ಹಾಗೆ ಸೋಮಕ ಸೈನ್ಯವೆಲ್ಲವನ್ನೂ ಹೇಳಲು ಹೇಸರಿಲ್ಲದ ಹಾಗೆ ಕೊಂದು) ಶ್ರೀ ಜಯಬಲಕ್ಕೆ ಅಪಜಯಮಾಗೆ ಕೊಂದುಂ ಓಡಿಸಿಯುಂ ಇಕ್ಕಿ (ಶ್ರೀಜಯಬಲಕ್ಕೆ ಸೋಲುಂಟಾಗುವ ಹಾಗೆ ಸಂಹರಿಸಿಯೂ ಓಡಿಸಿಯೂ ಹೊಡೆದೂ) ಗೆಲ್ದ ಮಲ್ಲನಂತಿರ್ದಾಗಳ್ (ಗೆದ್ದ ಜಟ್ಟಿಯ ಹಾಗೆ ಇದ್ದನು.ಆಗ-) ಜಗದೇಕಮಲ್ಲಂ ಮೊದಲಾಗೆ (ಜಗದೇಕಮಲ್ಲನಾದ ಅರ್ಜುನನೇ ಮೊದಲಾದ) ವಿರಾಟ ವಿರಾಟಜ ದ್ರುಪದ ದ್ರುಪದಜ ಚೇಕಿತಾನ ಯುಧಾಮನ್ಯು ಉತ್ತಮೋಜ ಸ್ಸೌಭದ್ರ ಘಟೋತ್ಕಚ ನಕುಲ ಸಹದೇವ ಸಾತ್ಯಕಿ ಪಂಚಪಾಂಡವ ಪ್ರಮುಖನಾಯಕರೆಲ್ಲರುಂ ಬೆರಸು (ಪಂಚಪಾಂಡವರೇ ಮುಖ್ಯವಾಗಿರುವ ನಾಯಕರೆಲ್ಲರೊಡಗೂಡಿ) ಧರ್ಮಪುತ್ರಂ ಶಿಖಂಡಿಯಂ ಮುಂದಿಟ್ಟುಕೊಂಡು ಬಂದು (ಧರ್ಮರಾಯನು ಶಿಖಂಡಿಯನ್ನು ಮುಂದುಮಾಡಿಕೊಂಡು ಬಂದು) ಪೇಂಕುಳಿಗೊಂಡ ಸಿಂಹಮಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್ (ಹುಚ್ಚು ಹಿಡಿದ ಸಿಂಹವನ್ನು ಮುತ್ತುವ ಹಾಗೆ ಮುತ್ತಿದನು; ಆಗ )-
ವಚನ:ಅರ್ಥ:(ಭೀಷ್ಮನು) ಹಾಗೆ ಸೋಮಕ ಸೈನ್ಯವೆಲ್ಲವನ್ನೂ ಹೇಳಲು ಹೇಸರಿಲ್ಲದ ಹಾಗೆ ಕೊಂದು ಶ್ರೀಜಯಬಲಕ್ಕೆ ಸೋಲುಂಟಾಗುವ ಹಾಗೆ ಸಂಹರಿಸಿಯೂ ಓಡಿಸಿಯೂ ಹೊಡೆದೂ ಗೆದ್ದ ಜಟ್ಟಿಯ ಹಾಗೆ ಇದ್ದನು.ಆಗ- ಜಗದೇಕಮಲ್ಲನಾದ ಅರ್ಜುನನೇ ಮೊದಲಾದ ವಿರಾಟ, ಉತ್ತರ, ದ್ರುಪದ, ದ್ರೌಪದೇಯ, ಚೇಕಿತಾನ, ಯುಧಾಮನ್ಯು, ಉತ್ತಮೋಜ, ಅಭಿಮನ್ಯು, ಘಟೋತ್ಕಚ, ಭೀಮಸೇನ, ನಕುಲ, ಸಹದೇವ, ಸಾತ್ಯಕಿ, ಪಂಚಪಾಂಡವರೇ ಮುಖ್ಯವಾಗಿರುವ ನಾಯಕರೆಲ್ಲರೊಡಗೂಡಿ ಧರ್ಮರಾಯನು ಶಿಖಂಡಿಯನ್ನು ಮುಂದುಮಾಡಿಕೊಂಡು ಬಂದು, ಹುಚ್ಚು ಹಿಡಿದ ಸಿಂಹವನ್ನು ಮುತ್ತುವ ಹಾಗೆ ಮುತ್ತಿದನು; ಆಗ-
ಉ|| ಅಂಬರಮೆಲ್ಲಮಂಬಿನೊಳೆ ಪೂೞೆ ಮಹೀಭುಜರೆತ್ತಮೆಚ್ಚ ಕಿ
ತ್ತಂಬುಗಳೆತ್ತಮವ್ವಳಿಸೆ ಮಾಣದವಂ ಕಡಿದಿಕ್ಕಿ ತನ್ನ ನ|
ಲ್ಲಂಬುಗಳಿಂದಮಾರ್ದಿರದಡುರ್ತಿಸೆ ಭೂಭುಜರೆಲ್ಲಮಲ್ಲಿ ಬಿ
ಲ್ಲುಂ ಬೆಱಗಾಗೆ ಬಂದು ಪೊಣರ್ದಂ ಸೆರಗಿಲ್ಲದೆ ವಿಕ್ರಮಾರ್ಜುನಂ|| ೪೨
ಪದ್ಯ-೪೨:ಪದವಿಭಾಗ-ಅರ್ಥ:ಅಂಬರಂ ಎಲ್ಲಂ ಅಂಬಿನೊಳೆ ಪೂೞೆ (ಪೂಳೆ- ಹೂಳೆ, ಹೂಳುವಂತೆ; ಆಕಾಶ ಪ್ರದೇಶವೆಲ್ಲವೂ ಬಾಣಸಮೂಹಗಳಲ್ಲಿಯೇ ಹೂತುಹೋಗುವ ಹಾಗೆ) ಮಹೀಭುಜರ್ ಎತ್ತಂ ಎಚ್ಚ (ರಾಜರುಗಳು ಎಲ್ಲ ಕಡೆಗಳಿಂದಲೂ ಪ್ರಯೋಗಿಸಿದ) ಕಿತ್ತಂಬುಗಳು (ಚಿಕ್ಕ ಬಾಣಗಳು) ಎತ್ತಂ ಅವ್ವಳಿಸೆ ಮಾಣದೆ ಅವಂ ಕಡಿದಿಕ್ಕಿ (ಎಲ್ಲಾ ಕಡೆಗೂ ನುಗ್ಗಲು ಅವಕಾಶಕೊಡದೆ ತನ್ನ ಉತ್ತಮ ಬಾಣಗಳಿಂದ ಅವನ್ನು ಕತ್ತರಿಸುತ್ತಿರಲು) ತನ್ನ ನಲ್ಲಂಬುಗಳಿಂದಮ ಆರ್ದು ಇರದೆ ಅಡುರ್ತು ಇಸೆ (ತನ್ನ ಉತ್ತಮ ಬಾಣಗಳಿಂದ ಅವನ್ನು ಕತ್ತರಿಸುತ್ತಿರಲು, ) ಭೂಭುಜರೆಲ್ಲಮಲ್ಲಿ ಬಿಲ್ಲುಂ ಬೆಱಗಾಗೆ (ಅಲ್ಲಿಯ ರಾಜರುಗಳೆಲ್ಲ ಸಂಭ್ರಾಂತರಾಗಲು,) ಬಂದು ಪೊಣರ್ದಂ ಸೆರಗಿಲ್ಲದೆ ವಿಕ್ರಮಾರ್ಜುನಂ (ಹಾಗೆ ಭಯವಿಲ್ಲದೆ ಮುಂದೆ ಬಂದು ಹೋರಾಡಿದನು - ಅರ್ಜುನನು.)
ಪದ್ಯ-೪೨:ಅರ್ಥ: ಭೀಷ್ಮನು ಆಕಾಶ ಪ್ರದೇಶವೆಲ್ಲವೂ ಬಾಣಸಮೂಹಗಳಲ್ಲಿಯೇ ಹೂತುಹೋಗುವ ಹಾಗೆ ರಾಜರುಗಳು ಎಲ್ಲ ಕಡೆಗಳಿಂದಲೂ ಪ್ರಯೋಗಿಸಿದ ಚಿಕ್ಕ ಬಾಣಗಳು ಎಲ್ಲಾ ಕಡೆಗೂ ನುಗ್ಗಲು ಅರ್ಜುನನು ಅವಕಾಶಕೊಡದೆ ತನ್ನ ಉತ್ತಮ ಬಾಣಗಳಿಂದ ಇರದೆ ಆರ್ಭಟಿಸಿ ಸಮೀಪಸಿ ಬಾಣಪ್ರಯೋಗಿಸಲು, ಅಲ್ಲಿಯ ರಾಜರುಗಳೆಲ್ಲ ಸಂಭ್ರಾಂತರಾಗಲು, ಅರ್ಜುನನು ಹಾಗೆ ಭಯವಿಲ್ಲದೆ ಮುಂದೆ ಬಂದು ಹೋರಾಡಿದನು.
ವ|| ಅಂತು ಪೊಣರ್ದಾಗಳೆಮ್ಮ ಮಮ್ಮಂಗಮೆಮಗಮೀಗಳನುವರಂ ದೊರೆಯಾಯ್ತೆಂದು ಪರಶುರಾಮನ ಕೊಟ್ಟ ದಿವ್ಯಾಸ್ತ್ರಂಗಳನೊಂದನೊಂದು ಸೂೞೊಳೆ ತೊಟ್ಟೆಚ್ಚಾಗಳ್ ()-
ವಚನ:ಪದವಿಭಾಗ-ಅರ್ಥ:ಅಂತು ಪೊಣರ್ದಾಗಳು ಎಮ್ಮ ಮಮ್ಮಂಗಂ ಎಮಗಂ ಈಗಳು ಅನುವರಂ ದೊರೆಯಾಯ್ತೆಂದು (ನಮ್ಮ ಮೊಮ್ಮಗನಿಗೂ ನಮಗೂ ಈಗ ಯುದ್ಧವು ಸಮಾನವಾಯಿತು ಎಂದು) ಪರಶುರಾಮನ ಕೊಟ್ಟ ದಿವ್ಯಾಸ್ತ್ರಂಗಳನು ಒಂದನೊಂದು ಸೂೞೊಳೆ ತೊಟ್ಟೆಚ್ಚಾಗಳ್ (ಪರಶುರಾಮನು ಕೊಟ್ಟ ದಿವ್ಯಾಸ್ತ್ರಗಳನ್ನು ಒಂದೊಂದಾಗಿ ಕ್ರಮದಿಂದ ಪ್ರಯೋಗಿಸಿದಾಗ)-
ವಚನ:ಅರ್ಥ:ನಮ್ಮ ಮೊಮ್ಮಗನಿಗೂ ನಮಗೂ ಈಗ ಯುದ್ಧವು ಸಮಾನವಾಯಿತು ಎಂದು ಭೀಷ್ಮನು (ತಮ್ಮ ಆಚಾರ್ಯರಾದ) ಪರಶುರಾಮನು ಕೊಟ್ಟ ದಿವ್ಯಾಸ್ತ್ರಗಳನ್ನು ಒಂದೊಂದಾಗಿ ಕ್ರಮದಿಂದ ಪ್ರಯೋಗಿಸಿದನು.
ಚಂ|| ಜ್ವಳನ ಪತತ್ರಿಯಂ ಕಡಿದು ವಾರುಣ ಪತತ್ರಿಯಿನೈಂದ್ರ ಬಾಣಮಂ
ಕಳೆದು ಸಮೀರಣಾಸ್ತ್ರದಿನಿದಿರ್ಚಿದ ಭೂಭುಜರೆಲ್ಲರಂ ಭಯಂ|
ಗೊಳಿಸಿ ನಿಶಾತ ವಜ್ರಿಶರದಿಂ ಸುರರಂಬರದೊಳ್ ತಗುಳ್ದು ಬಿ
ಚ್ಚಳಿಸೆ ನದೀಜನುಚ್ಚಳಿಸೆ ಕಾದಿದನೇಂ ಕಲಿಯೋ ಗುಣಾರ್ಣವಂ|| ೪೩ ||
ಪದ್ಯ-೪೩:ಪದವಿಭಾಗ-ಅರ್ಥ:ಜ್ವಳನ ಪತತ್ರಿಯಂ ಕಡಿದು ವಾರುಣ ಪತತ್ರಿಯಿಂ (ಆಗ್ನೇಯಾಸ್ತ್ರವನ್ನು ವಾರಣಾಸ್ತ್ರದಿಂದ ಕತ್ತರಿಸಿ) ಇಂದ್ರ/ ಐಂದ್ರ ಬಾಣಮಂ ಕಳೆದು ಸಮೀರಣಾಸ್ತ್ರದಿಂ (ಐಂದ್ರಾಸ್ತ್ರವನ್ನು ವಾಯ್ವಸ್ತ್ರದಿಂದ ಎದುರಿಸಿ) ಇದಿರ್ಚಿದ ಭೂಭುಜರೆಲ್ಲರಂ ಭಯಂಗೊಳಿಸಿ (ಎದುರಿಸಿ ರಾಜರುಗಳನ್ನೆಲ್ಲ ಹೆದರುವ ಹಾಗೆ ಮಾಡಿ) ನಿಶಾತ ವಜ್ರಿಶರದಿಂ ಸುರರು ಅಂಬರದೊಳ್ ತಗುಳ್ದು ಬಿಚ್ಚಳಿಸೆ (ದೇವತೆಗಳೆಲ್ಲ ಆಕಾಶದಲ್ಲಿ ಗುಂಪುಗುಂಪಾಗಿ ಕೂಡಿ ಸ್ತೋತ್ರ ಮಾಡುತ್ತಿರಲು) ನದೀಜನು ಉಚ್ಚಳಿಸೆ ಕಾದಿದನು ಏಂ ಕಲಿಯೋ ಗುಣಾರ್ಣವಂ; (ಭೀಷ್ಮನು ಮೇಲಕ್ಕೆ ನೆಗೆಯುವ ಹಾಗೆ ಹೋರಾಡಿದನು. ಅರ್ಜುನನದು ಏನು ಶೌರ್ಯವೋ!)
ಪದ್ಯ-೪೩:ಅರ್ಥ: ೪೩. ಆಗ್ನೇಯಾಸ್ತ್ರವನ್ನು ವಾರಣಾಸ್ತ್ರದಿಂದ ಕತ್ತರಿಸಿ, ಐಂದ್ರಾಸ್ತ್ರವನ್ನು ವಾಯ್ವಸ್ತ್ರದಿಂದ ಎದುರಿಸಿ ರಾಜರುಗಳನ್ನೆಲ್ಲ ಹೆದರುವ ಹಾಗೆ ಮಾಡಿ ದೇವತೆಗಳೆಲ್ಲ ಆಕಾಶದಲ್ಲಿ ಗುಂಪುಗುಂಪಾಗಿ ಕೂಡಿ ಸ್ತೋತ್ರ ಮಾಡುತ್ತಿರಲು, ಅರ್ಜುನನು ಇಂದ್ರಾಸ್ತ್ರದಿಂದ ಭೀಷ್ಮನು ಮೇಲಕ್ಕೆ ನೆಗೆಯುವ ಹಾಗೆ ಹೋರಾಡಿದನು. ಅರ್ಜುನನದು ಏನು ಶೌರ್ಯವೋ!
ವ|| ಅಂತಮೋಘಾಸ್ತ್ರ ಧನಂಜಯಂ ತನ್ನಮೋಘಾಸ್ತ್ರಂಗಳಂ ಕಡಿದೊಡೆ ಸಾಮಾನ್ಯಾಸ್ತ್ರಂಗಳೊಳ್ ಧರ್ಮಪುತ್ರಂಗೆ ತನ್ನ ನುಡಿದ ನುಡಿವಳಿಯಂ ನೆನೆದಲ್ಲಳಿಗಾಳೆಗಂಗಾದೆ-
ವಚನ:ಪದವಿಭಾಗ-ಅರ್ಥ:ಅಂತು ಅಮೋಘಾಸ್ತ್ರ ಧನಂಜಯಂ ತನ್ನ ಅಮೋಘಾಸ್ತ್ರಂಗಳಂ ಕಡಿದೊಡೆ (ಅತ್ಯುತ್ತಮವಾದ ಅಸ್ತ್ರಗಳನ್ನುಳ್ಳ ಅರ್ಜುನನು ತನ್ನ ಅಮೋಘಾಸ್ತ್ರಗಳನ್ನು ಕತ್ತರಿಸಲು) ಸಾಮಾನ್ಯಾಸ್ತ್ರಂಗಳೊಳ್ (ಸಾಮಾನ್ಯ ಅಸ್ತ್ರಗಳಿಳಿಂದ) ಧರ್ಮಪುತ್ರಂಗೆ ತನ್ನ ನುಡಿದ ನುಡಿವಳಿಯಂ ನೆನೆದು (ಭೀಷ್ಮನು ಧರ್ಮರಾಜನಿಗೆ ತಾನು ಕೊಟ್ಟ ಮಾತನ್ನು ಜ್ಞಾಪಿಸಿಕೊಂಡು) ಅಲ್ಲಳಿಗಾಳೆಗಂ (ಗಾ)ಕಾದೆ (ವಿನೋದ ಕಾಳೆಗವನ್ನು ಕಾದಲು)-
ವಚನ:ಅರ್ಥ: ಹಾಗೆ ಅತ್ಯುತ್ತಮವಾದ ಅಸ್ತ್ರಗಳನ್ನುಳ್ಳ ಅರ್ಜುನನು ತನ್ನ ಅಮೋಘಾಸ್ತ್ರಗಳನ್ನು ಕತ್ತರಿಸಲು, ಭೀಷ್ಮನು ಧರ್ಮರಾಜನಿಗೆ ತಾನು ಕೊಟ್ಟ ಮಾತನ್ನು ಜ್ಞಾಪಿಸಿಕೊಂಡು ಸಾಮಾನ್ಯವಾದ ಬಾಣಗಳಿಂದ ಮೇಳ ಗಾಳೆಗವನ್ನು ಕಾದಿದನು.ಹಾಗೆ ಕಾದಲು-
ಚಂ|| ಕಡಿದನುದಗ್ರ ನಾಯಕರ ಸಾಯಕಮೆಲ್ಲಮನಾ ಶಿಖಂಡಿ ಪೊ
ಕ್ಕಡಿಗಿಡೆ ಬಂದು ಮುಂದೆ ನಿಲೆಯುಂ ಮೊಗಮಂ ನಡೆ ನೋಡಿಯಾತನಾ|
ರ್ದೊಡನೊಡನೆಚ್ಚೊಡೆಚ್ಚ ಮೊನೆಯಂಬುಗಳೞ್ಗಿಡಿವೋಗೆಯುಂ ಮನಂ
ಗಿಡನವನಾಂಕೆಗೊಳ್ಳನಗಿಯಂ ಸುಗಿಯಂ ಸುರಸಿಂಧುನಂದನಂ|| ೪೪ ||
ಪದ್ಯ-೪೪:ಪದವಿಭಾಗ-ಅರ್ಥ:ಕಡಿದನು ಉದಗ್ರ ನಾಯಕರ ಸಾಯಕಮೆಲ್ಲಮನು (ಶ್ರೇಷ್ಠರಾದ ನಾಯಕರ ಬಾಣಗಳೆಲ್ಲವನ್ನೂ ಭೀಷ್ಮನು ಕಡಿದು ಹಾಕಿದನು.) ಆ ಶಿಖಂಡಿ ಪೊಕ್ಕು ಅಡಿಗಿಡೆ ಬಂದು ಮುಂದೆ ನಿಲೆಯುಂ (ಆ ಶಿಖಂಡಿಯು ಹೆಜ್ಜೆ ತಪ್ಪಿ ಮುಂದೆ ಬಂದು ನಿಂತರೂ) ಮೊಗಮಂ ನಡೆ ನೋಡಿಯೂ (ಮುಖವನ್ನು ನೇರವಾಗಿ ನೋಡಿದರೂ) ಆತನು ಆರ್ದೊಡನೆ ಒಡನೆ ಎಚ್ಚೊಡೆ (ಆರ್ಭಟಮಾಡಿ ಕೂಡಲೆ ಹೊಡೆದರೂ) ಎಚ್ಚ ಮೊನೆಯಂಬುಗಳು ಅೞ್ಗಿಡಿವೋಗೆಯುಂ (ಹೊಡೆದ ಮೊನಚಾದ ಬಾಣಗಳು ತನ್ನ ಶರೀರದಲ್ಲಿ ನಾಟಿ ಕಿಕ್ಕಿರಿದರೂ) ಮನಂಗಿಡಂ ಅವನು ಆಂಕೆಗೊಳ್ಳನು (ಎದುರಿಸನು) ಅಗಿಯಂ (ಹೆದರಲಿಲ್ಲ)- (ಭೀಷ್ಮನು ತನ್ನ ಮನಸ್ಥೆ ರ್ಯವನ್ನು ಕಳೆದುಕೊಳ್ಳಲಿಲ್ಲ, ಪ್ರತಿಭಟಿಸಲಿಲ್ಲ, ಹೆದರಲಿಲ್ಲ,) ಸುಗಿಯಂ ಸುರಸಿಂಧುನಂದನಂ (ಬೆದರಲಿಲ್ಲ, ಸ್ವರ್ಗನದಿಯ ಮಗ ಭೀಷ್ಮನು.)
ಪದ್ಯ-೪೪:ಅರ್ಥ:ಶ್ರೇಷ್ಠರಾದ ನಾಯಕರ ಬಾಣಗಳೆಲ್ಲವನ್ನೂ ಭೀಷ್ಮನು ಕಡಿದು ಹಾಕಿದನು. (ಆಗ) ಆ ಶಿಖಂಡಿಯು ಹೆಜ್ಜೆ ತಪ್ಪಿ ಮುಂದೆ ಬಂದು ನಿಂತರೂ, ಮುಖವನ್ನು ನೇರವಾಗಿ ನೋಡಿದರೂ, ಆರ್ಭಟಮಾಡಿ ಕೂಡಲೆ ಹೊಡೆದರೂ, ಹೊಡೆದ ಮೊನಚಾದ ಬಾಣಗಳು ತನ್ನ ಶರೀರದಲ್ಲಿ ನಾಟಿ ಕಿಕ್ಕಿರಿದರೂ, ಭೀಷ್ಮನು ತನ್ನ ಮನಸ್ಥೆ ರ್ಯವನ್ನು ಕಳೆದುಕೊಳ್ಳಲಿಲ್ಲ, ಪ್ರತಿಭಟಿಸಲಿಲ್ಲ, ಹೆದರಲಿಲ್ಲ, ಬೆದರಲಿಲ್ಲ.
ಇದು ರಣಮೊನ್ನೊಳಾಂತಿಱಿವ ಮೆಯ್ಗಲಿಯುಂ ಸಮರೈಕಮೇರುವೆ
ನ್ನದಟುಮಳುರ್ಕೆಯುಂ ಪಿರಿದು ಪೇಡಿಗದೆಂತಿದಿರಾಂಪೆನೆಂದಣಂ||
ಬೆದಱದೆ ನಟ್ಟ ಕೂರ್ಗಣೆಯ ಬಿಣ್ಪೊರೆಯಿಂದೆ ಬೞಲ್ದನುರ್ವಿ ಪೆ
ರ್ವಿದಿರ ಸಿಡಿಂಬಿನೊಳ್ ಪುದಿದದೊಂದು ಕುಳಾಚಳದಂತೆ ಸಿಂಧುಜಂ|| ೪೫ ||
ಪದ್ಯ-೪೫:ಪದವಿಭಾಗ-ಅರ್ಥ:ಇದು ರಣಂ (ಇದು ಯುದ್ಧ;) ಎನ್ನೊಳಾಂತಿಱಿವ ಮೆಯ್ಗಲಿಯುಂ (ನನ್ನನ್ನು ಪ್ರತಿಭಟಿಸುವ ಶೂರನಾದರೋ) ಸಮರೈಕಮೇರುವು (ನನ್ನನ್ನು ಪ್ರತಿಭಟಿಸುವ ಶೂರನಾದರೋ ಸಮರೈಕಮೇರುವೆಂಬ ಬಿರುದುಳ್ಳ ಅರ್ಜುನ) ಎನ್ನ ಅದಟುಂ ಅಳುರ್ಕೆಯುಂ ಪಿರಿದು (ನನ್ನ ಪರಾಕ್ರಮವೂ ಅದರ ವ್ಯಾಪ್ತಿಯೂ ಹಿರಿದಾದುದು) ಪೇಡಿಗೆ ಅದೆಂತು ಇದಿರಾಂಪೆನು ಎಂದು (ಹೇಡಿಗೆ ಹೇಗೆ ಪ್ರತಿಭಟಿಸಲಿ? ಎಂದು) ಅಣಂ ಬೆದಱದೆ (ಸ್ವಲ್ಪವೂ ಹೆದರದೆ) ನಟ್ಟ ಕೂರ್ಗಣೆಯ ಬಿಣ್ ಪೊರೆಯಿಂದೆ (ತನ್ನ ಶರೀರದಲ್ಲಿ ನಾಟಿಕೊಂಡಿರುವ ಹರಿತವಾದ ಬಾಣಗಳ ವಿಶೇಷವಾದ ಭಾರದಿಂದ) ಬೞಲ್ದನು (ಜೋತುಬಿದ್ದನು) ಉರ್ವಿ ಪೆರ್ವಿದಿರ ಸಿಡಿಂಬಿನೊಳ್ ಪುದಿದ (ಉಬ್ಬಿ ಬೆಳೆದ ದೊಡ್ಡ ಬಿದಿರಿನ ಮೆಳೆಯಿಂದ ತುಂಬಿದ) ಅದೊಂದು ಕುಳಾಚಳದಂತೆ ಸಿಂಧುಜಂ (ಒಂದು ಕುಲಪರ್ವತದಂತೆ ಭೀಷ್ಮನು -- ಜೋತುಬಿದ್ದನು)
ಪದ್ಯ-೪೫:ಅರ್ಥ: ೪೫. ಇದು ಯುದ್ಧ; ನನ್ನನ್ನು ಪ್ರತಿಭಟಿಸುವ ಶೂರನಾದರೋ ಸಮರೈಕಮೇರುವೆಂಬ ಬಿರುದುಳ್ಳ ಅರ್ಜುನ; ನನ್ನ ಪರಾಕ್ರಮವೂ ಅದರ ವ್ಯಾಪ್ತಿಯೂ ಹಿರಿದಾದುದು. ಹೇಡಿಗೆ ಹೇಗೆ ಪ್ರತಿಭಟಿಸಲಿ? ಎಂದು ಸ್ವಲ್ಪವೂ ಹೆದರದೆ ತನ್ನ ಶರೀರದಲ್ಲಿ ನಾಟಿಕೊಂಡಿರುವ ಹರಿತವಾದ ಬಾಣಗಳ ವಿಶೇಷವಾದ ಭಾರದಿಂದ ಉಬ್ಬಿ ಬೆಳೆದ ದೊಡ್ಡ ಬಿದಿರಿನ ಮೆಳೆಯಿಂದ ತುಂಬಿದ ಒಂದು ಕುಲಪರ್ವತದಂತೆ ಭೀಷ್ಮನು ಆಯಾಸದಿಂದ ಜೋತುಬಿದ್ದನು.
ಉ|| ತಿಂತಿಣಿಯಾಗೆ ನಟ್ಟ ಕಣೆಯೊಳ್ ನೆಲ ಮುಟ್ಟದೆ ಮೆಯ್ಯೊಳತ್ತಮಿ
ತ್ತಂ ತೆದಿರ್ದ ಪುಣ್ಗಳೆಸೆವಕ್ಕರದಂತಿರೆ ನೋಡಿ ಕಲ್ಲಿಮೆಂ|
ಬಂತೆವೊಲಿರ್ದನಟ್ಟವಣೆ ಕೋಲ್ಗಳ ಮೇಲೆಸೆದಿರ್ದ ವೀರ ಸಿ
ದ್ಧಾಂತದ ಶಾಸನಂ ಬರೆದ ಪೊತ್ತಗೆಯಂತಮರಾಪಗಾತ್ಮಜಂ|| ೪೬ ||
ಪದ್ಯ-೪೬:ಪದವಿಭಾಗ-ಅರ್ಥ:ತಿಂತಿಣಿಯಾಗೆ ನಟ್ಟ ಕಣೆಯೊಳ್ ನೆಲ ಮುಟ್ಟದೆ (ಗುಂಪು ಗುಂಪಾಗಿ ಶರೀರದ ನಾನಾಕಡೆಗಳಲ್ಲಿ ಎಲ್ಲೆಲ್ಲಿಯೂ ನೆಲವನ್ನು ಮುಟ್ಟದೆ) ಮೆಯ್ಯೊಳ್ ಅತ್ತಮಿತ್ತಂ ತೆದಿರ್ದ ಪುಣ್ಗಳು (ನಾಟಿಕೊಂಡಿರುವ ಬಾಣಗಳಿಂದ ಬಾಯಿಬಿಟ್ಟುಕೊಂಡಿರುವ ಹುಣ್ಣುಗಳು) ಎಸೆವ ಅಕ್ಕರದಂತಿರೆ- 'ನೋಡಿ ಕಲ್ಲಿಮೆಂಬಂತೆವೊಲ್' (‘ಇಲ್ಲಿ ನೋಡಿ ಕಲಿಯಿರಿ’ ಎಂಬಂತೆ ಪ್ರಕಾಶಮಾನವಾದ ಅಕ್ಷರಗಳ ಹಾಗಿರಲು) ಇರ್ದನು ಅಟ್ಟವಣೆ ಕೋಲ್ಗಳ ಮೇಲೆ ಎಸೆದಿರ್ದ (ಮಣೆಯ ಬಾಣಗಳ ಮೇಲೆ ಇದ್ದ ಭೀಷ್ಮನು --- ಪುಸ್ತಕದ ಹಾಗೆ ಶೋಭಿಸುತ್ತ ಇದ್ದನು) ವೀರ ಸಿದ್ಧಾಂತದ ಶಾಸನಂ ಬರೆದ ಪೊತ್ತಗೆಯಂತೆ (ಪ್ರತಾಪತತ್ವದ ವೀರಶಾಸನವನ್ನು ಬರೆದಿರುವ ವಪುಸ್ತಕದ ಹಾಗೆ) ಅಮರಾಪಗಾತ್ಮಜಂ (ಅಮರಲೋಕದಿಂದ ಇಳಿದವಳ ಮಗ ಭೀಷ್ಮನು)
ಪದ್ಯ-೪೬:ಅರ್ಥ: ಗುಂಪು ಗುಂಪಾಗಿ ಶರೀರದ ನಾನಾಕಡೆಗಳಲ್ಲಿ ಎಲ್ಲೆಲ್ಲಿಯೂ ನೆಲವನ್ನು ಮುಟ್ಟದೆ ನಾಟಿಕೊಂಡಿರುವ ಬಾಣಗಳಿಂದ ಬಾಯಿಬಿಟ್ಟುಕೊಂಡಿರುವ ಹುಣ್ಣುಗಳು ‘ಇಲ್ಲಿ ನೋಡಿ ಕಲಿಯಿರಿ’ ಎಂಬ ಪ್ರಕಾಶಮಾನವಾದ ಅಕ್ಷರಗಳ ಹಾಗಿರಲು ಭೀಷ್ಮನು ವ್ಯಾಸಪೀಠದ ಮೇಲಿರುವ ಪ್ರತಾಪತತ್ವದ ವೀರಶಾಸನವನ್ನು ಬರೆದಿರುವ ಪುಸ್ತಕದ ಹಾಗೆ ಶೋಭಿಸುತ್ತಿದ್ದನು.
ಚಂ|| ನಡೆದುದು ಬಾಳ ಕಾಲದೊಳೆ ತೊಟ್ಟೆನಗಂಕದ ಶೌಚವೀಗಳೋ
ಗಡಿಪುದೆ ಮುಟ್ಟಿ ನಾಂ ನೆಲನನೇಕದು ಪೆಣ್ಗಡಿಮೆಂದು ಮೆಯ್ಯೊಳ|
ೞ್ದಿಡಿದ ವಿಕರ್ಣ ಕೋಟಿಯೊಳಣಂ ನೆಲ ಮುಟ್ಟದೆ ನೋಡೆ ಬಿೞ್ದೊಡಂ
ಬಡಿಸಿದನಯ್ಯ ಶೌಚ ಗುಣದುನ್ನತಿಯಂ ಸುರಸಿಂಧುನಂದನಂ|| ೪೭ ||
ಪದ್ಯ-೪೭:ಪದವಿಭಾಗ-ಅರ್ಥ:ನಡೆದುದು ಬಾಳ ಕಾಲದೊಳೆ ತೊಟ್ಟು ಎನಗೆ ಅಂಕದ ಶೌಚವು (ಬಾಲ್ಯಕಾಲದಲ್ಲೇ ವ್ರತತೊಟ್ಟು ನನಗೆ ಪ್ರಸಿದ್ಧವಾದ ಬ್ರಹ್ಮಚರ್ಯವು ನಡೆದುಬಂದಿದೆ.) ಈಗಳು ಓಗಡಿಪುದೆ ಮುಟ್ಟಿ ನಾಂ ನೆಲನಂ (ಈಗ ನಾನು -ಹೆಣ್ಣಾದ- ಭೂಮಿಯನ್ನು ಮುಟ್ಟಿ ನನ್ನ ಶೌಚಗುಣವನ್ನು ಹೋಗಲಾಡಿಸುವುದೇ?) ಏಕೆ ಅದು ಪೆಣ್ಗಡಿಂ (ಹೆಣ್ಣಲ್ಲವೇ) ಎಂದು, ಮೆಯ್ಯೊಳು ಅೞ್ದು ಇಡಿದ (ಎಂದು ಶರೀರದ ಒಳಗಿಳಿದು ನಾಟಿಕೊಂಡು ತುಂಬಿದ್ದ) ವಿಕರ್ಣ ಕೋಟಿಯೊಳು ಅಣಂ ನೆಲ ಮುಟ್ಟದೆ ನೋಡೆ ಬಿೞ್ದು (ಲೆಕ್ಕವಿಲ್ಲದ ಬಾಣಗಳಿಂದ ಭೂದೇವಿಯನ್ನು ಸ್ವಲ್ಪವೂ ಮುಟ್ಟದೆ ಬಿದ್ದುದನ್ನು ನೋಡಲು,) ಒಡಂಬಡಿಸಿದನು ಅಯ್ಯ ಶೌಚ ಗುಣದುನ್ನತಿಯಂ ಸುರಸಿಂಧುನಂದನಂ (ಅಯ್ಯಾ! ಭೀಷ್ಮನು ತನ್ನ ಶೌಚಗುಣವನ್ನು ಅಂಗೀಕರಿಸಿದನು. )
ಪದ್ಯ-೪೭:ಅರ್ಥ: ಬಾಲ್ಯಕಾಲದಲ್ಲೇ ವ್ರತತೊಟ್ಟು ನನಗೆ ಪ್ರಸಿದ್ಧವಾದ ಬ್ರಹ್ಮಚರ್ಯವು ನಡೆದುಬಂದಿದೆ. ಈಗ ನಾನು ಸ್ತ್ರೀಯಾದ ಅವಳನ್ನು ಮುಟ್ಟಿ ನನ್ನ ಶೌಚಗುಣವನ್ನು ಹೋಗಲಾಡಿಸುವುದೇ? ಕೆಡಿಸುವುದೇ? ಎಂದು ಶರೀರದ ಒಳಗಿಳಿದು ನಾಟಿಕೊಂಡು ತುಂಬಿದ್ದ ಲೆಕ್ಕವಿಲ್ಲದ ಬಾಣಗಳಿಂದ ಭೂದೇವಿಯನ್ನು ಸ್ವಲ್ಪವೂ ಮುಟ್ಟದೆ, ಅಯ್ಯಾ! ಭೀಷ್ಮನು ತನ್ನ ಶೌಚಗುಣವನ್ನು ಅಂಗೀಕರಿಸಿದನು.
ವ|| ಅಂತು ಶರಪಂಜರದೊಳೊಱಗಿಯುಮೊಡಲಿಂ ಪತ್ತುವಿಟ್ಟು ಪೋಪ ಜೀವಮಂ ಪೋಗಲೀಯದೆ ಸ್ವಚ್ಛಂದಮಿೞ್ತ್ತು ವಪ್ಪುದಱಿಂದುತ್ತರಾಯಣಂ ಬರ್ಪನ್ನಮಿರಿಸಿದನಂತು ಮಾಗಳ್ ಕುರುಬಲಮೆಲ್ಲಂ ಕುರುಕುಳವನಸಿಂಹಂ ಶರಪಂಜರದೊಳೊಱಗಿದನಿನ್ನೆಮ್ಮಂ ಕಾವರಾರೆಂದೊಲ್ಲನುಲಿದೋಡಿ ಬೀಡಂ ಪೊಕ್ಕಾಗಳ್ ಧರ್ಮಪುತ್ರಂ ನಿಜಾನುಜ ಸಹಿತಂ ಬಂದು ಬಲಗೊಂಡು ಕಾಲ ಮೇಲೆ ಕವಿದು ಪಟ್ಟು-
ವಚನ:ಪದವಿಭಾಗ-ಅರ್ಥ:ಅಂತು ಶರಪಂಜರದೊಳ್ ಒಱಗಿಯುಂ (ಹೀಗೆ ಶರಪಂಜರದಲ್ಲಿ ಒರಗಿದ್ದರೂ) ಒಡಲಿಂ ಪತ್ತುವಿಟ್ಟು (ಪತ್ತು- ಆಶ್ರಯ) ಪೋಪ ಜೀವಮಂ ಪೋಗಲೀಯದೆ (ಶರೀರದಿಂದ ನಂಟುಬಿಟ್ಟು ಹೋಗುವ ಜೀವವನ್ನು ಹೋಗುವುದಕ್ಕೆ ಹೋಗಲು ಬಿಡದೆ) ಸ್ವಚ್ಛಂದಮಿೞ್ತು ವಪ್ಪುದಱಿಂದ (ಸ್ವೇಚ್ಛಾಮರಣಿಯಾದುದರಿಂದ ) ಉತ್ತರಾಯಣಂ ಬರ್ಪನ್ನಂ ಇರಿಸಿದನು (ಉತ್ತರಾಯಣವು ಬರುವವರೆಗೆ ಜೀವವನ್ನುಇರಿಸಿದನು) ಅಂತುಮಾಗಳ್ ಕುರುಬಲಂ ಎಲ್ಲಂ ಕುರುಕುಳವನಸಿಂಹಂ (ಆಗ ಕೌರವಸೈನ್ಯವೆಲ್ಲವೂ ಕುರುಬಲವೆಂಬ ಕಾಡಿಗೆ ಸಿಂಹದೋಪಾದಿಯಲ್ಲಿದ್ದ) ಶರಪಂಜರದೊಳು ಒಱಗಿದನು ಇನ್ನೆಮ್ಮಂ ಕಾವರಾರೆಂದು (ಭೀಷ್ಮನು ಶರಪಂಜರದಲ್ಲೊರಗಿದನು, ಇನ್ನು ನಮ್ಮನ್ನು ರಕ್ಷಿಸುವವರಾರು ಎಂದು) ಒಲ್ಲನುಲಿದೋಡಿ ಬೀಡಂ ಪೊಕ್ಕಾಗಳ್ (ನಿಧಾನವಾಗಿ ನುಡಿದು ಓಡಿ ಬೀಡನ್ನು ಸೇರಿದಾಗ.) ಧರ್ಮಪುತ್ರಂ ನಿಜ ಅನುಜ ಸಹಿತಂ ಬಂದು (ಧರ್ಮರಾಜನು ತನ್ನ ತಮ್ಮಂದಿರೊಡನೆ ಬಂದು) ಬಲಗೊಂಡು ಕಾಲ ಮೇಲೆ ಕವಿದು ಪಟ್ಟು (ಭೀಷ್ಮರ ಕಾಲ ಮೇಲೆ ಕವಿದುಬಿದ್ದು ಅತ್ತನು)-
ವಚನ:ಅರ್ಥ:ಹೀಗೆ ಶರಪಂಜರದಲ್ಲಿ ಒರಗಿದ್ದರೂ ಶರೀರದಿಂದ ನಂಟುಬಿಟ್ಟು ಹೋಗುವ ಜೀವವನ್ನು ಹೋಗುವುದಕ್ಕೆ ಹೋಗಲು ಬಿಡದೆ ಸ್ವೇಚ್ಛಾಮರಣಿಯಾದುದರಿಂದ ಉತ್ತರಾಯಣವು ಬರುವವರೆಗೆ ಇರಿಸಿದನು. ಆಗ ಕೌರವಸೈನ್ಯವೆಲ್ಲವೂ ಕುರುಬಲವೆಂಬ ಕಾಡಿಗೆ ಸಿಂಹದೋಪಾದಿಯಲ್ಲಿದ್ದ ಭೀಷ್ಮನು ಶರಪಂಜರದಲ್ಲೊರಗಿದನು, ಇನ್ನು ನಮ್ಮನ್ನು ರಕ್ಷಿಸುವವರಾರು ಎಂದು ನಿಧಾನವಾಗಿ ನುಡಿದು ಓಡಿ ಬೀಡನ್ನು ಸೇರಿದಾಗ. ಧರ್ಮರಾಜನು ತನ್ನ ತಮ್ಮಂದಿರೊಡನೆ ಬಂದು ಪ್ರದಕ್ಷಿಣೆ ಮಾಡಿ ಭೀಷ್ಮರ ಕಾಲ ಮೇಲೆ ಕವಿದುಬಿದ್ದು ಅತ್ತನು.
ಕಂ|| ಕರುಣದಿನೆಮ್ಮಂ ತಾಯ್ವೋಲ್
ತರುವಲಿಗಳನೆಯ್ದೆ ನಡಪಿದಜ್ಜರ್ ನೀಮಿಂ|
ತಿರೆಯುಂ ನೋಡಿದೆವೇನೆಮ
ಗರಸಿಕೆಯೋ ಪೇೞಿಮೆಂದು ಶೋಕಂಗೆಯ್ದರ್|| ೪೮ ||
ಪದ್ಯ-೪೮:ಪದವಿಭಾಗ-ಅರ್ಥ:ಕರುಣದಿಂ ಎಮ್ಮಂ ತಾಯ್ವೋಲ್ ತರುವಲಿಗಳನು ಎಯ್ದೆ ನಡಪಿದ ಅಜ್ಜರ್ (ತಬ್ಬಲಿಗಳಾದ ನಮ್ಮನ್ನು ದಯೆಯಿಂದ ತಾಯಿಯ ಹಾಗೆ ಸಾಕಿದ ಅಜ್ಜರಾದ) ನೀಮು ಇಂತಿರೆಯುಂ ನೋಡಿದೆವು (ನೀವು ಈ ಸ್ಥಿತಿಯಲ್ಲಿರುವುದನ್ನು ನೋಡಿದೆವು) ಏನು ಎಮಗೆ ಅರಸಿಕೆಯೋ ಪೇೞಿಮೆಂದು ಶೋಕಂಗೆಯ್ದರ್ (ನಮಗೆ ಎಂತಹ ಅರಸಿಕೆಯೋ ಹೇಳಿ ಎಂದು ದುಖಪಟ್ಟನು.)
ಪದ್ಯ-೪೮:ಅರ್ಥ: ತಬ್ಬಲಿಗಳಾದ ನಮ್ಮನ್ನು ದಯೆಯಿಂದ ತಾಯಿಯ ಹಾಗೆ ಸಾಕಿದ ಅಜ್ಜರಾದ ನೀವು ಈ ಸ್ಥಿತಿಯಲ್ಲಿರುವುದನ್ನು ನೋಡಿದೆವು. ನಮಗೆ ಎಂತಹ ಅರಸಿಕೆಯೋ ಹೇಳಿ ಎಂದು ದುಖಪಟ್ಟನು.
ವ|| ಅಂತು ಶೋಕಂಗೆಯ್ದೊಡೆ ನೀಮಂತೆನಲ್ವೇಡ ಕ್ಷತ್ರಿಯಧರ್ಮಮಿಂತದರ್ಕೞಲ್ವೇಡ ಬೀಡಿಂಗೆ ಪೋಗಿಮೆಂದೊಡೆ ಮಹಾಪ್ರಸಾದಮಂತೆ ಗೆಯ್ವೆಮೆಂದನಿಬರುಮೆಱಗಿ ಪೊಡೆವಟ್ಟು ಪೋದರಾಗಳ್ ದುರ್ಯೋಧನಂ ಬಂದು ಪೊಡೆವಟ್ಟು-
ವಚನ:ಪದವಿಭಾಗ-ಅರ್ಥ:ಅಂತು ಶೋಕಂಗೆಯ್ದೊಡೆ (ಹಾಗೆ ಶೋಕ ಪಟ್ಟಾಗ) ನೀಮಂತು ಎನಲ್ವೇಡ (ನೀವು ಹಾಗೆ ಹೇಳಬೇಡಿ;) ಕ್ಷತ್ರಿಯಧರ್ಮಂ ಇಂತದರ್ಕೆ ಅೞಲ್ವೇಡ ಬೀಡಿಂಗೆ ಪೋಗಿಂ ಎಂದೊಡೆ (ಕ್ಷತ್ರಧರ್ಮವೇ ಹಾಗೆ; ಹೀಗಿರುವುದರಿಂದ ಅಳಬೇಡಿ; ಬೀಡಿಗೆ ಹೋಗಿ’ ಎನ್ನಲು) ಮಹಾಪ್ರಸಾದಂ ಅಂತೆ ಗೆಯ್ವೆಮೆಂದು ಅನಿಬರುಮ್ ಎಱಗಿ ಪೊಡೆವಟ್ಟು ಪೋದರಾಗಳ್ (ಮಹಾಪ್ರಸಾದ ಹಾಗೆಯೇ ಮಾಡುತ್ತೇವೆ’ ಎಂದು ಎಲ್ಲರೂ ಎರಗಿ ನಮಸ್ಕಾರ ಮಾಡಿ ಹೋದರು. ಆಗ) ದುರ್ಯೋಧನಂ ಬಂದು ಪೊಡೆವಟ್ಟು (ಆಗ ದುರ್ಯೋಧನನು ಬಂದು ನಮಸ್ಕಾರಮಾಡಿ- ಹೇಳಿದನು.)-
ವಚನ:ಅರ್ಥ: ಹಾಗೆ ಶೋಕ ಪಟ್ಟಾಗ ನೀವು ಹಾಗೆ ಹೇಳಬೇಡಿ; ಕ್ಷತ್ರಧರ್ಮವೇ ಹಾಗೆ; ಹೀಗಿರುವುದರಿಂದ ಅಳಬೇಡಿ; ಬೀಡಿಗೆ ಹೋಗಿ’ ಎನ್ನಲು ‘ಮಹಾಪ್ರಸಾದ ಹಾಗೆಯೇ ಮಾಡುತ್ತೇವೆ’ ಎಂದು ಎಲ್ಲರೂ ಎರಗಿ ನಮಸ್ಕಾರ ಮಾಡಿ ಹೋದರು. ಆಗ ದುರ್ಯೋಧನನು ಬಂದು ನಮಸ್ಕಾರಮಾಡಿ- ಹೇಳಿದನು.
ಚಂ|| ಇಱಿವುದನಾಂತ ಮಾರ್ವಲಮನಿನ್ನೆಗಮಚ್ಚರಿಯಾಗೆ ತಾಗಿ ತ
ಳ್ತಿಱಿದಿರಿದೊಂದವಸ್ಥೆ ನಿಮಗೆನ್ನಯ ಕರ್ಮದಿನಾದುದೆಂದೊಡಿಂ|
ಮರಿವುದು ಕಂದ ಪಾಂಡವರ ವೈರಮನೆನ್ನೊಡವೋಕೆ ಕೋಪಮುಂ
ಕಱು ಪುಮೊಡಂಬಡೇವುದದನಿನ್ನು ಮೊಡಂಬಡು ಸಂಧಿಮಾಡುವೆಂ|| ೪೯ ||
ಪದ್ಯ-೪೯:ಪದವಿಭಾಗ-ಅರ್ಥ:ಇಱಿವುದನು ಆಂತ ಮಾರ್ವಲಮನು ಇನ್ನೆಗಂ ಅಚ್ಚರಿಯಾಗೆ ತಾಗಿ ತಳ್ತು ಇಱಿದಿರಿ (ಪ್ರತಿಭಟಿಸಿದ ಪರಪಕ್ಷವನ್ನು ಇಲ್ಲಿಯವರೆಗೆ ಆಶ್ಚರ್ಯವಾಗುವ ಹಾಗೆ ತಗುಲಿ ಕೂಡಿಕೊಂಡು ಕತ್ತರಿಸಿದಿರಿ.) ಇದೊಂದವಸ್ಥೆ ನಿಮಗೆ ಎನ್ನಯ ಕರ್ಮದಿಂ ಆದುದು ಎಂದೊಡೆ (ಈಗ ಈ ಶರಶಯನದಲ್ಲಿ ಮಲಗುವ ದುರವಸ್ಥೆಯು ನನ್ನ ಕರ್ಮದಿಂದಾಯಿತು ಎನ್ನಲು) ಇಂ ಮರಿವುದು ಕಂದ ಪಾಂಡವರ ವೈರಮನು (ಭೀಷ್ಮನು 'ಇನ್ನು ಮೇಲಾದರೂಮಗು, ಪಾಂಡವರ ಮೇಲಿನ ದ್ವೇಷವನ್ನು ಬಿಡು') ಎನ್ನೊಡವೋಕೆ ಕೋಪಮುಂ (ಕೋಪವೂ ದ್ವೇಷವೂ ನನ್ನೊಡನೆ ಹೋಗಲಿ) ಕಱುಪುಂ ಎಡಂಬಡು ಏವುದು ಅದನು ಇನ್ನುಂ? ಒಡಂಬಡು ಸಂಧಿಮಾಡುವೆಂ. (ವೈರದಿಂದೇನು ಪ್ರಯೋಜನ? ನೀನು ಒಪ್ಪುವವನಾಗು ಸಂಯನ್ನು ಮಾಡುತ್ತೇನೆ, ಎಂದನು)
ಪದ್ಯ-೪೯:ಅರ್ಥ:‘ಪ್ರತಿಭಟಿಸಿದ ಪರಪಕ್ಷವನ್ನು ಇಲ್ಲಿಯವರೆಗೆ ಆಶ್ಚರ್ಯವಾಗುವ ಹಾಗೆ ತಗುಲಿ ಕೂಡಿಕೊಂಡು ಕತ್ತರಿಸಿದಿರಿ. ಈಗ ಈ ಶರಶಯನದಲ್ಲಿ ಮಲಗುವ ದುರವಸ್ಥೆಯು ನನ್ನ ಕರ್ಮದಿಂದಾಯಿತು ಎನ್ನಲು ಭೀಷ್ಮನು ‘ಮಗು, ಪಾಂಡವರ ಮೇಲಿನ ದ್ವೇಷವನ್ನು ಇನ್ನು ಮೇಲಾದರೂ ಬಿಡು. ಕೋಪವೂ ದ್ವೇಷವೂ ನನ್ನೊಡನೆ ಹೋಗಲಿ; ವೈರದಿಂದೇನು ಪ್ರಯೋಜನ? ನೀನು ಒಪ್ಪುವವನಾಗು ಸಂಯನ್ನು ಮಾಡುತ್ತೇನೆ, ಎಂದನು
ವ|| ಎಂಬುದುಂ ದುರ್ಯೋಧನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ದುರ್ಯೋಧನನಿಂತೆಂದಂ-
ವಚನ:ಅರ್ಥ:ಎನ್ನಲಾಗಿ ದುರ್ಯೋಧನನು ಹೀಗೆ ಹೇಳಿದನು.
ಚಂ|| ಅದಟಿನಳುರ್ಕೆಯಂ ಬಲದಳುರ್ಕೆಯುಮಂ ಗೆಡೆಗೊಂಡು ನೀಮಿದಾ
ವುದು ಪಡೆಮಾತನಿಂತು ನುಡಿದಿರ್ ಪುದುವಾೞ್ಕೆಯೊಳೆನ್ನ ಬಳ್ಕಿದ|
ಳ್ಕಿದ ಬಗೆಗಂಡಿರೇ ಮಗನೆ ನೀಂ ಪಗೆಯಂ ತಱಿದೊಟ್ಟು ನೆಟ್ಟನೆ
ನ್ನದೆ ಬಗೆಗೆಟ್ಟು ದಾಯಿಗರೊಳಿಂ ಮಗುೞ್ದುಂ ಪುದುವಾೞ್ವುದೆಂಬಿರೇ|| ೫೦ ||
ಪದ್ಯ-೫೦:ಪದವಿಭಾಗ-ಅರ್ಥ:ಅದಟಿನ ಅಳುರ್ಕೆಯಂ (ಶೌರ್ಯದ ಅತಿಶಯವನ್ನೂ) ಬಲದ ಅಳುರ್ಕೆಯುಮಂ ಗೆಡೆಗೊಂಡು(ಸೈನ್ಯದ ಆಧಿಕ್ಯವನ್ನೂ ಹೊಂದಿ ಜೊತೆಯಾಗಿ ಒಟ್ಟಿಗೇ ಬಾಳಿ ಎಂಬ-) ನೀಂ ಇದಾವುದು ಪಡೆಮಾತನು ಇಂತು ನುಡಿದಿರ್ (ಈ ಬೀಳುಮಾತನ್ನು ಈ ರೀತಿ ನುಡಿದಿರಿ) ಪುದುವಾೞ್ಕೆಯೊಳು ಎನ್ನ ಬಳ್ಕಿದ ಅಳ್ಕಿದ (ಬಳುಕಿದ ಬೆದರಿದ) ಬಗೆ (ಗ) ಕಂಡಿರೇ (ಅಳುಕಿದ ಹೆದರಿದ ಮನಸ್ಸನ್ನೇನಾದರೂ ಕಂಡಿರೇನು?) ಮಗನೆ ನೀಂ ಪಗೆಯಂ ತಱಿದೊಟ್ಟು ನೆಟ್ಟನೆ ಎನ್ನದೆ (ಮಗನೆ ನೀನು ನೇರವಾಗಿ ಶತ್ರುವನ್ನು ಕತ್ತರಿಸಿ ರಾಶಿಮಾಡು ಎಂದು ಹೇಳದೆ) ಬಗೆಗೆಟ್ಟು ದಾಯಿಗರೊಳಿಂ ಮಗುೞ್ದುಂ ಪುದುವಾೞ್ವುದು ಎಂಬಿರೇ (ಬುದ್ಧಿಹೀರಾಗಿ ಜ್ಞಾತಿಗಳಲ್ಲಿ ಇನ್ನೂ ಕೂಡಿ ಹುದುವಾಗಿ / ಪ್ರೀತಿಯಿಂದ ಬಾಳು ಎನ್ನುವುದೇ?)
ಪದ್ಯ-೫೦:ಅರ್ಥ:ಶೌರ್ಯದ ಅತಿಶಯವನ್ನೂ ಸೈನ್ಯದ ಆಧಿಕ್ಯವನ್ನೂ ಹೊಂದಿ ಒಟ್ಟಿಗೇ ಬಾಳಿ ಎಂಬ ಈ ಬೀಳುಮಾತನ್ನು ಈ ರೀತಿ ನುಡಿದಿರಿ. ಅಳುಕಿದ ಹೆದರಿದ ಮನಸ್ಸನ್ನೇನಾದರೂ ಕಂಡಿರೇನು? ಮಗನೆ ನೀನು ನೇರವಾಗಿ ಶತ್ರುವನ್ನು ಕತ್ತರಿಸಿ ರಾಶಿಮಾಡು ಎಂದು ಹೇಳದೆ, ಬುದ್ಧಿಹೀರಾಗಿ ಜ್ಞಾತಿಗಳಲ್ಲಿ ಇನ್ನೂ ಕೂಡಿ ಪ್ರೀತಿಯಿಂದ ಬಾಳು ಎನ್ನುವುದೇ?
ವ|| ಎಂಬುದುಮಿಲ್ಲಿಂದಂ ಮೇಲಾದ ಕಜ್ಜಮಂ ನೀನೆ ಬಲ್ಲೆ ಬೀಡಿಂಗೆ ಬಿಜಯಂಗೆಯ್ಯಿಮೆನೆ ಪೊಡೆವಟ್ಟು ಸುಯೋಧನಂ ಪೋದನಾಗಳ್-
ವಚನ:ಪದವಿಭಾಗ-ಅರ್ಥ:ಎಂಬುದುಂ ಇಲ್ಲಿಂದಂ ಮೇಲಾದ ಕಜ್ಜಮಂ ನೀನೆ ಬಲ್ಲೆ (ಎನ್ನಲು, ಭೀಷ್ಮರು, ‘ಇನ್ನು ಇದಕ್ಕಿಂತಲೂ ಉತ್ತಮವಾದ ಕಾರ್ಯವನ್ನು (ಇನ್ನು ಮೇಲಾಗಬೇಕಾದ ಕಾರ್ಯವನ್ನು) ನೀನೇ ಬಲ್ಲೆ - ನಿನಗೆ ತಿಳಿದಂತೆ ಮಾಡು,) ಬೀಡಿಂಗೆ ಬಿಜಯಂಗೆಯ್ಯಿಂ ಎನೆ (ನಿನಗೆ ತಿಳಿದಂತೆ ಮಾಡು, ಬೀಡಾರಕ್ಕೆ ಹೋಗು’ ಎನ್ನಲು) ಪೊಡೆವಟ್ಟು ಸುಯೋಧನಂ ಪೋದನಾಗಳ್-
ವಚನ:ಅರ್ಥ:ಎನ್ನಲು ಭೀಷ್ಮರು, ‘ಇನ್ನು ಇದಕ್ಕಿಂತಲೂ ಉತ್ತಮವಾದ ಕಾರ್ಯವನ್ನು ನೀನೇ ಬಲ್ಲೆ,- ನಿನಗೆ ತಿಳಿದಂತೆ ಮಾಡು, ಬೀಡಾರಕ್ಕೆ ಹೋಗು’ ಎನ್ನಲು ನಮಸ್ಕಾರಮಾಡಿ ದುರ್ಯೋಧನನು ಹೋದನು.
ಚಂ|| ನೆರೆದ ವಿರೋನಾಯಕರನಾಹವದೊಳ್ ತಱಿದೊಟ್ಟಲೊಂದಿದೊ
ಡ್ಡುರುಳ್ವಿನಮಾ ಗುಣಾರ್ಣವನಡುರ್ತಿಱಿದಲ್ಲಿ ಸಿಡಿಲ್ದ ನೆತ್ತರೊಳ್|
ಪೊರೆದು ನಿರಂತರಂ ಪೊಲಸು ನಾಱುವ ಮೆಯ್ಯನೆ ಕರ್ಚಲೆಂದು ಚೆ
ಚ್ಚರಮಪರಾಂಬುರಾಶಿಗಿೞಿವಂತಿೞದಂ ಕಮಳೈಕಬಾಂಧವಂ|| ೫೧ ||
ಪದ್ಯ-೫೧:ಪದವಿಭಾಗ-ಅರ್ಥ:ನೆರೆದ ವಿರೋಧಿ ನಾಯಕರನು ಆಹವದೊಳ್ ತಱಿದು ಒಟ್ಟಲು ಒಂದಿದ ಒಡ್ಡು ಉರುಳ್ವಿನಮ್ ಆ ಗುಣಾರ್ಣವನ ಅಡುರ್ತು ಅಱಿದು (ಒಟ್ಟುಗೂಡಿದ ಶತ್ರುನಾಯಕರನ್ನು ತರಿದು ಯುದ್ಧದಲ್ಲಿ ರಾಶಿ ಮಾಡಲು ಸೇರಿದ್ದ ಆ ಸೈನ್ಯದ ರಾಶಿಯು ಉರುಳುವಂತೆ ಅರ್ಜುನನು ಸಮೀಪಕ್ಕೆ ಬಂದು ಇರಿದಾಗ) ಅಲ್ಲಿ ಸಿಡಿಲ್ದ ನೆತ್ತರೊಳ್ ಪೊರೆದು (ಸಿಡಿದ ರಕ್ತದಿಂದ ಲೇಪನಗೊಂಡು ) ನಿರಂತರಂ ಪೊಲಸು ನಾಱುವ ಮೆಯ್ಯನೆ (ಯಾವಾಗಲೂ ದುರ್ನಾತ ಹೊಡೆಯುತ್ತಿದ್ದ ತನ್ನ ಶರೀರವನ್ನು) ಕರ್ಚಲೆಂದು ಚೆಚ್ಚರಂ ಅಪರಾಂಬುರಾಶಿಗೆ (ತೊಳೆಯಬೇಕೆಂದು ಬೇಗನೆ ಪಶ್ಚಿಮಸಮುದ್ರಕ್ಕೆ) ಇೞಿವಂತೆ ಇೞದಂ ಕಮಳೈಕಬಾಂಧವಂ (ಇಳಿಯುವಂತೆ -ಇಳಿದನು- ಸೂರ್ಯನು ಮುಳುಗಿದನು.)
ಪದ್ಯ-೫೧:ಅರ್ಥ:ಸೂರ್ಯಾಸ್ತದ ವರ್ಣನೆ: ಒಟ್ಟುಗೂಡಿದ ಶತ್ರುನಾಯಕರನ್ನು ತರಿದು ಯುದ್ಧದಲ್ಲಿ ರಾಶಿ ಮಾಡಲು ಸೇರಿದ್ದ ಆ ಸೈನ್ಯದ ರಾಶಿಯು ಉರುಳುವಂತೆ ಅರ್ಜುನನು ಸಮೀಪಕ್ಕೆ ಬಂದು ಇರಿದಾಗ, ಸಿಡಿದ ರಕ್ತದಿಂದ ಲೇಪನಗೊಂಡು ಯಾವಾಗಲೂ ದುರ್ನಾತ ಹೊಡೆಯುತ್ತಿದ್ದ ತನ್ನ ಶರೀರವನ್ನು ತೊಳೆಯಬೇಕೆಂದು ಸೂರ್ಯನು ಬೇಗನೆ ಪಶ್ಚಿಮಸಮುದ್ರಕ್ಕೆ ಇಳಿದನೋ ಎಂಬಂತೆ ಸೂರ್ಯನು ಮುಳುಗಿದನು.
ವ|| ಆಗಳ್ ದುರ್ಯೋಧನನಾತ್ಮೀಯ ಸೇನಾನಾಯಕನಪ್ಪ ಗಾಂಗೇಯಂ ಬಿದಿರ ಸಿಡಿಂಬಿನ ಪೊದರೊಳಗೆ ಮರೆದೊಱಗಿದ ಮೃಗರಾಜನಂತೆ ಶರಶಯನದೊಳೊಱಗಿದಂ ಕದನತ್ರಿಣೇತ್ರನನೆಂತು ಗೆಲ್ವೆನೆಂದು ಚಿಂತಿಸಿ ಮಂತ್ರಶಾಲೆಯಂ ಪೊಕ್ಕು ಕರ್ಣ ದ್ರೋಣ ಕೃಪ ಕೃತವರ್ಮಾಶ್ವತ್ಥಾಮ ಶಲ್ಯ ಶಕುನಿ ಸೈಂಧವ ಭೂರಿಶ್ರವ ಪ್ರಭೃತಿಗಳ್ಗೆಲ್ಲಂ ಬೞಿಯನಟ್ಟಿ ಬರಿಸಿ
ವಚನ:ಪದವಿಭಾಗ-ಅರ್ಥ:ಆಗಳ್ ದುರ್ಯೋಧನನು ಆತ್ಮೀಯ ಸೇನಾನಾಯಕನಪ್ಪ ಗಾಂಗೇಯಂ (ಆಗ ದುರ್ಯೋಧನನು ತನ್ನ ಸೇನಾನಾಯಕನಾದ ಭೀಷ್ಮನು) ಬಿದಿರ ಸಿಡಿಂಬಿನ ಪೊದರೊಳಗೆ ಮರೆದು ಒಱಗಿದ ಮೃಗರಾಜನಂತೆ (ಬಿದಿರ ಮೆಳೆಯ ಪೊದರಿನಲ್ಲಿ ಎಚ್ಚರತಪ್ಪಿ ಮಲಗಿದ ಸಿಂಹದಂತೆ) ಶರಶಯನದೊಳು ಒಱಗಿದಂ (ಶರಶಯನದಲ್ಲಿ ಮಲಗಿದನು) ಕದನತ್ರಿಣೇತ್ರನನು ಎಂತು ಗೆಲ್ವೆನೆಂದು ಚಿಂತಿಸಿ (ಅರ್ಜುನನನ್ನು ಹೇಗೆ ಗೆಲ್ಲಲಿ ಎಂದು ಯೋಚಿಸಿ) ಮಂತ್ರಶಾಲೆಯಂ ಪೊಕ್ಕು (ಮಂತ್ರಶಾಲೆಯನ್ನು ಪ್ರವೇಶಮಾಡಿ) ಕರ್ಣ ದ್ರೋಣ ಕೃಪ ಕೃತವರ್ಮಾಶ್ವತ್ಥಾಮ ಶಲ್ಯ ಶಕುನಿ ಸೈಂಧವ ಭೂರಿಶ್ರವ ಪ್ರಭೃತಿಗಳ್ಗೆಲ್ಲಂ ಬೞಿಯನಟ್ಟಿ ಬರಿಸಿ (ಸಮರ್ಥರಿಗೆಲ್ಲ ದೂತರನ್ನು ಕಳುಹಿಸಿ ಬರಮಾಡಿದನು.)
ವಚನ:ಅರ್ಥ: ಆಗ ದುರ್ಯೋಧನನು ತನ್ನ ಸೇನಾನಾಯಕನಾದ ಭೀಷ್ಮನು ಬಿದಿರ ಮೆಳೆಯ ಪೊದರಿನಲ್ಲಿ ಎಚ್ಚರತಪ್ಪಿ ಮಲಗಿದ ಸಿಂಹದಂತೆ ಶರಶಯನದಲ್ಲಿ ಮಲಗಿದನು. ಅರ್ಜುನನನ್ನು ಹೇಗೆ ಗೆಲ್ಲಲಿ ಎಂದು ಯೋಚಿಸಿ, ಮಂತ್ರಶಾಲೆಯನ್ನು ಪ್ರವೇಶಮಾಡಿ ಕರ್ಣ, ದ್ರೋಣ, ಕೃಪ, ಕೃತವರ್ಮ, ಅಶ್ವತ್ಥಾಮ, ಶಲ್ಯ, ಶಕುನಿ, ಸೈಂಧವ, ಭೂರಿಶ್ರವನೇ ಮೊದಲಾದ ಸಮರ್ಥರಿಗೆಲ್ಲ ದೂತರನ್ನು ಕಳುಹಿಸಿ ಬರಮಾಡಿದನು.
ಶಾ|| ಆಯ್ತೇ ಸಾಸಿಕೊಂಡು ಪಾಂಡುಸುತರಂ ನಣ್ಪಿಂಗೆ ಬೆನ್ನಿತ್ತು ದಲ್
ಸಯ್ತಾಯ್ತಜ್ಜನ ಮಾತು ನಮ್ಮ ಪಡೆಯಂ ಕಾವನ್ನರಿನ್ನಾರೊ ಸು|
ಪ್ಠೀತಂ ಕಾವೊಡೆ ಕರ್ಣನಕ್ಕುಮದಱಿಂ ನಾಮೆಲ್ಲಮಾತಂಗೆ ನಿ
ರ್ದ್ವೈತಂ ಬೀರದ ಬೀರವಟ್ಟಮನಿದಂ ನಿರ್ವ್ಯಾಜದಿಂ ಕಟ್ಟುವಂ ||೫೨ ||
ಪದ್ಯ-೫೨:ಪದವಿಭಾಗ-ಅರ್ಥ:ಆಯ್ತೇ ಸಾಸಿಕೊಂಡು ಪಾಂಡುಸುತರಂ ನಣ್ಪಿಂಗೆ ಬೆನ್ನಿತ್ತು (ಪಾಂಡವರನ್ನು ಗೆದ್ದುದಾಯಿತೇ? ಬಾಂಧವ್ಯಕ್ಕೆ ಮನಸ್ಸು/ ಬೆನ್ನು ಕೊಟ್ಟು -ಸೋತು) ದಲ್ ಸಯ್ತಾಯ್ತ ಅಜ್ಜನ ಮಾತು (ನಿಜಕ್ಕೂ? ಅಜ್ಜನಾಡಿದ ಮಾತು ನೆಟ್ಟಗಾಯಿತಲ್ಲವೇ?) ನಮ್ಮ ಪಡೆಯಂ ಕಾವನ್ನರು ಇನ್ನಾರೊ (ಇನ್ನು ಮೇಲೆ ನಮ್ಮ ಸೈನ್ಯವನ್ನು ರಕ್ಷಿಸುವವರಾರಿದ್ದಾರೆ) ಸುಪ್ಠೀತಂ ಕಾವೊಡೆ ಕರ್ಣನಕ್ಕುಂ ಅದಱಿಂ ನಾಂ ಎಲ್ಲಮ್ ಆತಂಗೆ (ರಕ್ಷಿಸುವುದಕ್ಕೆ ಸಮರ್ಥನಾದವನು ಈ ಕರ್ಣನೇ! ಆದುದರಿಂದ ನಾವೆಲ್ಲ ಆತನಿಗೆ) ನಿರ್ದ್ವೈತಂ ಬೀರದ ಬೀರವಟ್ಟಮನು ಇದಂ ನಿರ್ವ್ಯಾಜದಿಂ ಕಟ್ಟುವಂ (ನಿರ್ ದ್ವೈತ ಎರಡು ಇಲ್ಲ - ಎರಡನೆಯ ಮಾತಿಲ್ಲದೆ ಸರ್ವಾನುಮತದಿಂದ ಯಾವ ನೆಪವೂ ಇಲ್ಲದೆ ಸೇನಾಪತ್ಯವನ್ನು ಅವನಿಗೆ ಕಟ್ಟೋಣ)
ಪದ್ಯ-೫೨:ಅರ್ಥ: ಪಾಂಡವರನ್ನು ಗೆದ್ದುದಾಯಿತೇ? ಬಾಂಧವ್ಯಕ್ಕೆ ಆಶ್ರಯಕೊಟ್ಟ (ಸೋತು) ಅಜ್ಜನಾಡಿದ ಮತು ನೆಟ್ಟಗಾಯಿತಲ್ಲವೇ? ಇನ್ನು ಮೇಲೆ ನಮ್ಮ ಸೈನ್ಯವನ್ನು ರಕ್ಷಿಸುವವರಾರಿದ್ದಾರೆ. ರಕ್ಷಿಸುವುದಕ್ಕೆ ಸಮರ್ಥನಾದವನು ಈ ಕರ್ಣನೇ! ಆದುದರಿಂದ ನಾವೆಲ್ಲ ಆತನಿಗೆ ಎರಡನೆಯ ಮಾತಿಲ್ಲದೆ (ಸರ್ವಾನುಮತದಿಂದ) ಯಾವ ನೆಪವೂ ಇಲ್ಲದೆ ಸೇನಾಪತ್ಯವನ್ನು ಅವನಿಗೆ ಕಟ್ಟೋಣ ಎಂದನು ದುರ್ಯೋಧನ.
ವ|| ಎಂಬುದುಂ ಕರ್ಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಕರ್ಣನು ಇಂತು ಎಂದಂ
ವಚನ:ಅರ್ಥ:ವ|| ಎನ್ನಲು ಕರ್ಣನು ಹೀಗೆಂದನು-
ಮ|| ಸುರಸಿಂಧೂಧ್ಭವನಿಂ ಬೞಕ್ಕೆ ಪೆಱಿರಾರ್ ಸೇನಾಧಿಪತ್ಯಕ್ಕೆ ತ
ಕ್ಕರೆ ಲೋಕೈಕ ಧನುರ್ಧರಂ ಕಳಶಜಂ ತಕ್ಕಂ ನದೀನಂದನಂ|
ಗೆ ರಣಕ್ಕಾಂ ನೆರಮಾದೆನಪ್ಪೊಡಿನಿತೇಕಾದಪ್ಪುದೀ ಪೊೞ್ತೆ ಪೊ
ೞ್ತಿರವೇಡೀವುದು ಬೀರವಟ್ಟಮನದಂ ದ್ರೋಣಂಗೆ ನೀಂ ಭೂಪತೀ|| ೫೩ ||
ಪದ್ಯ-೫೩:ಪದವಿಭಾಗ-ಅರ್ಥ:ಸುರಸಿಂಧೂಧ್ಭವನಿಂ ಬೞಕ್ಕೆ ಪೆಱಿರಾರ್ (ಭೀಷ್ಮನಾದ ಮೇಲೆ ಸೇನಾಪತ್ಯಕ್ಕೆ ಯೋಗ್ಯರಾದವರು ಬೇರೆ ಯಾರಿದ್ದಾರೆ?) ಸೇನಾಧಿಪತ್ಯಕ್ಕೆ ತಕ್ಕರೆ ಲೋಕೈಕ ಧನುರ್ಧರಂ ಕಳಶಜಂ ತಕ್ಕಂ (ಸೇನಾಧಿಪತ್ಯಕ್ಕೆ ಯೋಗ್ಯರಾದವರಿರುವ ಪಕ್ಷದಲ್ಲಿ ಪ್ರಪಂಚದ ಬಿಲ್ಗಾರರಲ್ಲೆಲ್ಲ ಅಗ್ರೇಸರನಾದ ದ್ರೋಣನೇ ಯೋಗ್ಯನಾದವನು) ನದೀನಂದನಂಗೆ ರಣಕ್ಕೆ ಆಂ ನೆರಮಾದೆನಪ್ಪೊಡೆ ಇನಿತು ಏಕಾದಪ್ಪುದು (ನಾನು ಭೀಷ್ಮನಿಗೆ ಸಹಾಯಮಾಡಿದ್ದಿದ್ದರೆ ಹೀಗೇಕಾಗುತ್ತಿತ್ತು.) ಈ ಪೊೞ್ತೆ ಪೊೞ್ತ ಇರವೇಡ( ಈ ಹೊತ್ತೇ ಹೊತ್ತು (ಇದೇ ಸರಿಯಾದ ಕಾಲ) ಈವುದು (ಕೊಡುವುದು) ಬೀರವಟ್ಟಮನು ಅದಂ ದ್ರೋಣಂಗೆ ನೀಂ ಭೂಪತೀ (ದ್ರೋಣನಿಗೆ ನೀನು ವೀರಪಟ್ಟವನ್ನು ಕೊಡುವುದು ರಾಜನೇ.)
ಪದ್ಯ-೫೩:ಅರ್ಥ: ಭೀಷ್ಮನಾದ ಮೇಲೆ ಸೇನಾಪತ್ಯಕ್ಕೆ ಯೋಗ್ಯರಾದವರು ಬೇರೆ ಯಾರಿದ್ದಾರೆ? ಸೇನಾಧಿಪತ್ಯಕ್ಕೆ ಯೋಗ್ಯರಾದವರಿರುವ ಪಕ್ಷದಲ್ಲಿ ಪ್ರಪಂಚದ ಬಿಲ್ಗಾರರಲ್ಲೆಲ್ಲ ಅಗ್ರೇಸರನಾದ ದ್ರೋಣನೇ ಯೋಗ್ಯನಾದವನು. ನಾನು ಭೀಷ್ಮನಿಗೆ ಸಹಾಯಮಾಡಿದ್ದಿದ್ದರೆ ಹೀಗೇಕಾಗುತ್ತಿತ್ತು. ಈ ಹೊತ್ತೇ ಹೊತ್ತು (ಇದೇ ಸರಿಯಾದ ಕಾಲ). ದ್ರೋಣನಿಗೆ ನೀನು ವೀರಪಟ್ಟವನ್ನು ಕೊಡುವುದು ರಾಜನೇ, ಎಂದನು ಕರ್ಣ.
ವ|| ಅಂತು ಭೀಷ್ಮಾದನಂತರಂ ದ್ರೋಣಯೆಂಬುದು ಪರಾಶರ ವಚನಮೆನೆ ಕರ್ಣನ ನುಡಿಗೊಡಂಬಟ್ಟು-
ವಚನ:ಪದವಿಭಾಗ-ಅರ್ಥ:ಅಂತು ಭೀಷ್ಮಾದನಂತರಂ ದ್ರೋಣಯೆಂಬುದು ಪರಾಶರ ವಚನಮೆನೆ ಕರ್ಣನ ನುಡಿಗೊಡಂಬಟ್ಟು-
ವಚನ:ಅರ್ಥ:ವ|| ‘ಭೀಷ್ಮನಾದ ಮೇಲೆ ದ್ರೋಣ ಎಂಬುದು ವ್ಯಾಸಋಷಿಗಳ ಮಾತು’ ಎನ್ನಲು ಹಾಗೆಯೇ ಆಗಲಿ ಎಂದು ಕರ್ಣನ ಮಾತಿಗೆ ಒಪ್ಪಿದನು.
ಕಂ|| ವಿಸಸನ ರಂಗಕ್ಕಾನಿರೆ
ಬೆಸಗೊಳ್ವುದೆ ಪೆಱರನೆಂದು ಜಯಪಟಹಂಗಳ್|
ದೆಸೆದೆಸೆಗೆಸೆವಿನೆಗಂ ಕ
ಟ್ಟಿಸಿಕೊಂಡಂ ಬೀರವಟ್ಟಮಂ ಕಳಶಭವಂ|| ೫೪ ||
ಪದ್ಯ-೫೪:ಪದವಿಭಾಗ-ಅರ್ಥ:ವಿಸಸನ ರಂಗಕ್ಕೆ ಆನು ಇರೆ ಬೆಸಗೊಳ್ವುದೆ ಪೆಱರನು ಎಂದು (ಯುದ್ಧರಂಗಕ್ಕೆ ನಾನಿರುವಾಗ ಬೇರೆಯವರನ್ನು ವಿಚಾರಮಾಡುವುದೇ! ಎಂದು ಹೇಳುತ್ತ) ಜಯಪಟಹಂಗಳ್| ದೆಸೆದೆಸೆಗೆ ಎಸೆವಿನೆಗಂ (ಜಯಭೇರಿಗಳು ದಿಕ್ಕುದಿಕ್ಕುಗಳಲ್ಲಿಯೂ ಭೋರ್ಗರೆಯುತ್ತಿರಲು) ಕಟ್ಟಿಸಿಕೊಂಡಂ ಬೀರವಟ್ಟಮಂ ಕಳಶಭವಂ (ವೀರಪಟ್ಟವನ್ನು ಕಟ್ಟಿಸಿಕೊಂಡನು, ದ್ರೋಣನು)
ಪದ್ಯ-೫೪:ಅರ್ಥ: ಯುದ್ಧರಂಗಕ್ಕೆ ನಾನಿರುವಾಗ ಬೇರೆಯವರನ್ನು ವಿಚಾರಮಾಡುವುದೇ! ಎಂದು ಹೇಳುತ್ತ ಜಯಭೇರಿಗಳು ದಿಕ್ಕುದಿಕ್ಕುಗಳಲ್ಲಿಯೂ ಭೋರ್ಗರೆಯುತ್ತಿರಲು ದ್ರೋಣನು ವೀರಪಟ್ಟವನ್ನು ಕಟ್ಟಿಸಿಕೊಂಡನು.
ವ|| ಅಂತು ಕುಂಭಸಂಭವನನೇಕ ಶಾತಕುಂಭ ಕುಂಭಸಂಭೃತ ಮಂಗಳಗಂಗಾ ಜಲಂಗಳಿಂ ಪವಿತ್ರೀಕೃತಗಾತ್ರನಾಗಿ ಕೌರವಬಳಾಗ್ರಗಣ್ಯನಾಗಿರ್ದನಿತ್ತ ತದ್ವೃತ್ತಾಂತಮ ನೆಲ್ಲಮನಜಾತಶತ್ರು ಕೇಳ್ದು ಜನಾರ್ದನನೊಡನೆ ರಿಪುಬಳಮರ್ದನೋಪಾಯಮಂ ಸಮಕಟ್ಟುತಿರ್ಪನ್ನೆಗಂ-
ವಚನ:ಪದವಿಭಾಗ-ಅರ್ಥ:ಅಂತು ಕುಂಭಸಂಭವನ ಅನೇಕ ಶಾತಕುಂಭ (ಹಾಗೆ ದ್ರೋಣಾಚಾರ್ಯನು ಅನೇಕ ಚಿನ್ನದ ಕಲಶಗಳಲ್ಲಿ) ಕುಂಭಸಂಭೃತ ಮಂಗಳಗಂಗಾ ಜಲಂಗಳಿಂ (ಮಂಗಳ ಗಂಗಾಜಲದಿಂದ ) ಪವಿತ್ರೀಕೃತಗಾತ್ರನಾಗಿ (ಶುದ್ಧಿ ಮಾಡಲ್ಪಟ್ಟ ಶರೀರವುಳ್ಳವನಾಗಿ ) ಕೌರವಬಳ ಅಗ್ರಗಣ್ಯನಾಗಿರ್ದನು (ಕೌರವಸೈನ್ಯದ ಮುಖ್ಯಸ್ನಾಗಿದ್ದನು.) ಇತ್ತ ತದ್ವೃತ್ತಾಂತಮನು ಎಲ್ಲಮನು ಅಜಾತಶತ್ರು ಕೇಳ್ದು (ಈ ಕಡೆ ಈ ವೃತ್ತಾಂತವನ್ನೆಲ್ಲ ಧರ್ಮರಾಯನು ಕೇಳಿ) ಜನಾರ್ದನನೊಡನೆ ರಿಪುಬಳ ಮರ್ದನ ಉಪಾಯಮಂ ಸಮಕಟ್ಟುತಿರ್ಪ ಅನ್ನೆಗಂ (ಕೃಷ್ಣನೊಡನೆ ಶತ್ರುಸೈನ್ಯವನ್ನು ನಾಶಪಡಿಸುವ ಉಪಾಯವನ್ನು ಏರ್ಪಡಿಸುತ್ತಿರುವಾಗ)-
ವಚನ:ಅರ್ಥ:ಹಾಗೆ ದ್ರೋಣಾಚಾರ್ಯನು ಅನೇಕ ಚಿನ್ನದ ಕಲಶಗಳಲ್ಲಿ ತುಂಬಿಟ್ಟಿದ್ದ ಮಂಗಳ ಗಂಗಾಜಲದಿಂದ ಶುದ್ಧಿ ಮಾಡಲ್ಪಟ್ಟ ಶರೀರವುಳ್ಳವನಾಗಿ ಕೌರವಸೈನ್ಯದ ಮುಖ್ಯಸ್ನಾಗಿದ್ದನು. ಈ ಕಡೆ ಈ ವೃತ್ತಾಂತವನ್ನೆಲ್ಲ ಧರ್ಮರಾಯನು ಕೇಳಿ ಕೃಷ್ಣನೊಡನೆ ಶತ್ರುಸೈನ್ಯವನ್ನು ನಾಶಪಡಿಸುವ ಉಪಾಯವನ್ನು ಏರ್ಪಡಿಸುತ್ತಿರುವಾಗ-.
ಮ|| ಅದಟಂ ಸಿಂಧುತನೂಭವಂ ವಿಜಯನೊಳ್ ಮಾರ್ಕೊಂಡಣಂ ಕಾದಲಾ
ಱದೆ ಬೆಂಬಿೞ್ದೊಡೆ ಕಾದಲೆಂದು ಬೆಸನಂ ಪೂಣ್ದಂ ಗಡಂ ದ್ರೋಣನಂ||
ತದುವಂ ನೋಡುವೆನೆಂದು ಕಣ್ ತಣಿವಿನಂ ನೋಡಲ್ಕೆ ಬರ್ಪಂತೆ ಬಂ
ದುದಯಾದ್ರೀಂದ್ರಮನೇರಿ ಭಾನು ಪೊಱಮಟ್ಟೊಡ್ಡಿತ್ತನೀಕಾರ್ಣವಂ|| ೫೫ ||
ಪದ್ಯ-೫೫:ಪದವಿಭಾಗ-ಅರ್ಥ:ಅದಟಂ ಸಿಂಧುತನೂಭವಂ ವಿಜಯನೊಳ್ ಮಾರ್ಕೊಂಡು ಅಣಂ ಕಾದಲಾಱದೆ(ಪರಾಕ್ರಮಶಾಲಿಯಾದ ಭೀಷ್ಮನು ಅರ್ಜುನನನ್ನು ಪ್ರತಿಭಟಿಸಿ ವಿಶೇಷವಾಗಿ ಕಾದಲಾರದೆ ) ಬೆಂಬಿೞ್ದೊಡೆ (ಬಾಣಗಳಿಗೆ ಬೆನ್ನುಕೊಟ್ಟು ಬಿದ್ದರೆ,) ಕಾದಲೆಂದು ಬೆಸನಂ ಪೂಣ್ದಂ ಗಡಂ ದ್ರೋಣನು (ದ್ರೋಣನು ತಾನು ಕಾದುವೆನೆಂದು ಕಾರ್ಯವನ್ನು ಪ್ರತಿಜ್ಞೆ ಮಾಡಿದನಲ್ಲ!) ಅಂತದುವಂ ನೋಡುವೆನೆಂದು ಕಣ್ ತಣಿವಿನಂ ನೋಡಲ್ಕೆ ಬರ್ಪಂತೆ (ಅದನ್ನು ನೋಡುತ್ತೇನೆ ಎಂದು ಕಣ್ಣು ತೃಪ್ತಿಪಡುವವರೆಗೆ ನೋಡಲು ಬರುವ ಹಾಗೆ) ಬಂದು ಉದಯಾದ್ರೀಂದ್ರಮನು ಏರಿ (ಉದಯ ಪರ್ವತವನ್ನೇರಿ) ಭಾನು ಪೊಱಮಟ್ಟು (ಸೂರ್ಯನು ಹೊರಬಂದು ಉದಯ ಪರ್ವತವನ್ನು ಏರಲು) ಒಡ್ಡಿತ್ತು ಅನೀಕಾರ್ಣವಂ ()
ಪದ್ಯ-೫೫:ಅರ್ಥ: ಪರಾಕ್ರಮಶಾಲಿಯಾದ ಭೀಷ್ಮನು ಅರ್ಜುನನನ್ನು ಪ್ರತಿಭಟಿಸಿ ವಿಶೇಷವಾಗಿ ಕಾದಲಾರದೆ ಬಾಣಗಳಿಗೆ ಬೆನ್ನುಕೊಟ್ಟು ಬಿದ್ದರೆ, ದ್ರೋಣನು ತಾನು ಕಾದುವೆನೆಂದು ಕಾರ್ಯವನ್ನು ಪ್ರತಿಜ್ಞೆ ಮಾಡಿದನಲ್ಲ! ಅದನ್ನು ನೋಡುತ್ತೇನೆ ಎಂದು ಕಣ್ಣು ತೃಪ್ತಿಪಡುವವರೆಗೆ ನೋಡಲು ಬರುವ ಹಾಗೆ ಸೂರ್ಯನು ಉದಯ ಪರ್ವತವನ್ನೇರಿ ಹೊರಬರಲು, ಸೇನಾಸಮುದ್ರವು ಹೊರಟು ಯುದ್ಧಕ್ಕೆ ಸಿದ್ಧವಾಗಿತ್ತು.
ವ|| ಆಗಳ್ ಪಾಂಡವ ಬಲದ ಸೇನಾನಾಯಕಂ ಧೃಷ್ಟದ್ಯುಮ್ನನೊಡ್ಡಿದ ವಜ್ರವ್ಯೂಹಕ್ಕೆ ಪದ್ಮವ್ಯೂಹಮನೊಡ್ಡಿ ತದ್ವ್ಯೂಹದ ಮೊನೆಗೆ ವಂದು-
ವಚನ:ಪದವಿಭಾಗ-ಅರ್ಥ:ಆಗಳ್ ಪಾಂಡವ ಬಲದ ಸೇನಾನಾಯಕಂ ಧೃಷ್ಟದ್ಯುಮ್ನನು ಒಡ್ಡಿದ ವಜ್ರವ್ಯೂಹಕ್ಕೆ (ದೃಷ್ಟದ್ಯುಮ್ನನು ಒಡ್ಡಿದ್ದ ವಜ್ರವ್ಯೂಹಕ್ಕೆ) ಪದ್ಮವ್ಯೂಹಮನು ಒಡ್ಡಿ ()ತದ್ವ್ಯೂಹದ ಮೊನೆಗೆ ವಂದು-
ವಚನ:ಅರ್ಥ:ವ|| ಆಗ ಪಾಂಡವಸೈನ್ಯದ ಸೇನಾನಾಯಕನಾದ ದೃಷ್ಟದ್ಯುಮ್ನನು ಒಡ್ಡಿದ್ದ ವಜ್ರವ್ಯೂಹಕ್ಕೆ ಪ್ರತಿಯಾಗಿ ಪದ್ಮವ್ಯೂಹವನ್ನು ಎದುರು ನಿಲ್ಲಸಿ ಆ ವ್ಯೂಹದ ಮುಂಭಾಗಕ್ಕೆ ಬಂದು-
ಮಂ|| ಕ್ರಾಂ|| ಶೋಣಾಶ್ವಂಗಳ್ ರಜತ ವಥಮಂ ಪೂಡೆ ಕುಂಭಧ್ವಜಂ ಗೀ
ರ್ವಾಣಾವಾಸಂಬರಮಡರೆ ಮಾಳೊಡ್ಡು ದಲ್ ಸಾಲದೆನ್ನೀ|
ಬಾಣಾವಾಸಕ್ಕೆನುತುಮಳವಂ ಬೀಱುತುಂ ಬಿಲ್ಗೆ ಜಾಣಂ
ದ್ರೋಣಂ ನಿಂದಂ ಮಸಗಿ ತಿರುಪುತ್ತೊಂದು ಕೂರಂಬನಾಗಳ್|| ೫೬ ||
ಪದ್ಯ-೦೦:ಪದವಿಭಾಗ-ಅರ್ಥ:ಶೋಣಾಶ್ವಂಗಳ್ ರಜತ ವಥಮಂ ಪೂಡೆ (ಬೆಳ್ಳಿಯ ರಥಕ್ಕೆ ಕೆಂಪುಕುದುರೆಗಳನ್ನು ಹೂಡಿರಲು ) ಕುಂಭಧ್ವಜಂ ಗೀರ್ವಾಣ ಆವಾಸ ಅಂಬರಂ ಅಡರೆ (ಕಲಶದ ಚಿಹ್ನೆಯುಳ್ಳ ಬಾವುಟವು ದೇವಲೋಕದವರೆಗೆ ಚಾಚಿರಲು) ಮಾಳೊಡ್ಡು ದಲ್ ಸಾಲದು ಎನ್ನ ಈ ಬಾಣಾವಾಸಕ್ಕೆ ಎನುತುಂ (ಎದುರುಬಿದ್ದ ಶತ್ರುಸೈನ್ಯವು ಈ ನನ್ನ ಬತ್ತಳಿಕೆಗೆ ಸಾಕಾಗುವುದಿಲ್ಲ) ಅಳವಂ ಬೀಱುತುಂ (ತನ್ನ ಶಕ್ತಿಯನ್ನು ಪ್ರದರ್ಶಿಸುತ್ತ) ಬಿಲ್ಗೆ ಜಾಣಂ ದ್ರೋಣಂ ನಿಂದಂ ಮಸಗಿ(ಕೆರಳಿ) (ಬಿಲ್ಲಿನಲ್ಲಿ ಜಾಣನಾದ ದ್ರೋಣನು ರೇಗಿ ಒಂದು ಹರಿತವಾದ ಬಾಣವನ್ನು ಬೀಸುತ್ತ ನಿಂತು ಕೊಂಡನು.) ತಿರುಪುತ್ತ ಒಂದು ಕೂರಂಬನು ಆಗಳ್ (ಒಂದು ಹರಿತವಾದ ಬಾಣವನ್ನು ಬೀಸುತ್ತ ನಿಂತು ಕೊಂಡನು)
ಪದ್ಯ-೦೦:ಅರ್ಥ:ಬೆಳ್ಳಿಯ ರಥಕ್ಕೆ ಕೆಂಪುಕುದುರೆಗಳನ್ನು ಹೂಡಿರಲು ಕಲಶದ ಚಿಹ್ನೆಯುಳ್ಳ ಬಾವುಟವು ದೇವಲೋಕದವರೆಗೆ ಚಾಚಿರಲು, ಎದುರುಬಿದ್ದ ಶತ್ರುಸೈನ್ಯವು ಈ ನನ್ನ ಬತ್ತಳಿಕೆಗೆ ಸಾಕಾಗುವುದಿಲ್ಲ ಅಲ್ಲವೇ! ಎಂದು ಹೇಳಿ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತ ಬಿಲ್ಲಿನಲ್ಲಿ ಜಾಣನಾದ ದ್ರೋಣನು ಕೆರಳಿ, ಒಂದು ಹರಿತವಾದ ಬಾಣವನ್ನು ಬೀಸುತ್ತ ನಿಂತು ಕೊಂಡನು.
ಕಂ|| ಆ ಸಕಳ ಧರಾಧೀಶರ
ಬೀಸುವ ಕುಂಚಮನೆ ಪಾರ್ದು ಬೀಸಲೊಡಂ ಕೆ|
ಯ್ವೀಸಲೊಡಮಱಿದು ತಾಗಿದು
ವಾಸುಕರಂ ಬೆರಸು ತಡೆಯದುಭಯ ಬಲಂಗಳ್|| ೫೭ ||
ಪದ್ಯ-೦೦:ಪದವಿಭಾಗ-ಅರ್ಥ:ಆ ಸಕಳ ಧರಾಧೀಶರ ಬೀಸುವ ಕುಂಚಮನೆ (ಆ ರಾಜರುಗಳ ಬೀಸುವ ಚವುರಿಗಳನ್ನೇ ) ಪಾರ್ದು ಬೀಸಲು ಒಡಂ ಕೆಯ್ವೀಸಲೊಡಂ (ನೋಡಿಕೊಂಡು ಕೈಬೀಸಿದೊಡನೆಯೇ) ಅಱಿದು ತಾಗಿದುವು (ವೇಗದಿಂದ ಕೂಡಿ ಯುದ್ಧದಲ್ಲಿ ತೊಡಗಿದುವು) ಆ ಸುಕರಂ ಬೆರಸು ತಡೆಯದೆ ಉಭಯ ಬಲಂಗಳ್ (ಎರಡುಸೈನ್ಯಗಳೂ ಅದನ್ನು ತಿಳಿದು ಸಾವಕಾಶಮಾಡದೆ)
ಪದ್ಯ-೦೦:ಅರ್ಥ: ಆ ರಾಜರುಗಳ ಬೀಸುವ ಚವುರಿಗಳನ್ನೇ ನೋಡಿಕೊಂಡು ಕೈಬೀಸಿದೊಡನೆಯೇ ಎರಡುಸೈನ್ಯಗಳೂ ಅದನ್ನು ತಿಳಿದು ಸಾವಕಾಶಮಾಡದೆ ವೇಗದಿಂದ ಕೂಡಿ ಯುದ್ಧದಲ್ಲಿ ತೊಡಗಿದುವು.
ವ|| ಅಂತು ಚಾತುರ್ದಂತಮೊದೊಂದರೊಳ್ ತಾಗಿ ತಳ್ತಿಱಿವಲ್ಲಿ ತಲೆಗಳ್ ಪಱಿಯೆ ಬರಿಗಳ್ ಮುಱಿಯೆ ತೊಡೆಗಳುಡಿಯೆ ಪುಣ್ಗಳ್ ಸುಲಿಯೆ-
ವಚನ:ಪದವಿಭಾಗ-ಅರ್ಥ:ಅಂತು ಚಾತುರ್ದಂತಮು ಒಂದೊಂದರೊಳ್ ತಾಗಿ ತಳ್ತು ಇಱಿವಲ್ಲಿ (ಚತುರಂಗಬಲವೂ ಒಂದರೊಡನೊಂದು ತಾಗಿ ಕೂಡಿಕೊಂಡು ಯುದ್ಧಮಾಡುವಾಗ) ತಲೆಗಳ್ ಪಱಿಯೆ, ಬರಿಗಳ್ ಮುಱಿಯೆ, ತೊಡೆಗಳ ಉಡಿಯೆ ಪುಣ್ಗಳ್ ಸುಲಿಯೆ (ತಲೆಗಳು ಹರಿದುವು, ಪಕ್ಕೆಗಳು ಮುರಿದುವು, ತೊಡೆಗಳು ಒಡೆದುವು, ಹುಣ್ಣುಗಳು ಬಿರಿದುವು)-
ವಚನ:ಅರ್ಥ:ಚತುರಂಗಬಲವೂ ಒಂದರೊಡನೊಂದು ತಾಗಿ ಕೂಡಿಕೊಂಡು ಯುದ್ಧಮಾಡುವಾಗ ತಲೆಗಳು ಹರಿದುವು, ಪಕ್ಕೆಗಳು ಮುರಿದುವು, ತೊಡೆಗಳು ಒಡೆದುವು, ಹುಣ್ಣುಗಳು ಬಿರಿದುವು-
ಚಂ|| ಒಡನೆ ನಭಂಬರಂ ಸಿಡಿಲ್ವ ಪಂದಲೆ ಸೂಸುವ ಕಂಡದಿಂಡೆಗಳ್
ತೊಡರೆ ತೆರಳ್ದ ನೆತ್ತರ ಕಡಲ್ ನೆಣದೊಳ್ಗೆಸರೊಳ್ ಜಿಗಿಲ್ತಗು|
ರ್ವಡರೆ ನಿರಂತರಂ ಪೊಳೆವ ಬಾಳುಡಿ ಸುಯ್ವ ನವ ವ್ರಣಂಗಳೊಳ್
ಪೊಡರೆ ಪೊದೞ್ದುದದ್ಭುತ ಭಯಾನಕಮಾಹವ ರಂಗಭೂಮಿಯೊಳ್|| ೫೮ ||
ಪದ್ಯ-೫೮:ಪದವಿಭಾಗ-ಅರ್ಥ:ಒಡನೆ ನಭಂಬರಂ ಸಿಡಿಲ್ವ ಪಂದಲೆ (ಆ ಕೂಡಲೆ ಆಕಾಶದವರೆಗೂ ಸಿಡಿಯುವ ಹಸಿಯ ತಲೆಯೂ) ಸೂಸುವ ಕಂಡದಿಂಡೆಗಳ್ ತೊಡರೆ (ಚೆಲ್ಲುವ ಮಾಂಸಖಂಡದ ಮುದ್ದೆಗಳೂ ಸಿಕ್ಕಿಕೊಳ್ಳಲು) ತೆರಳ್ದ ನೆತ್ತರ ಕಡಲ್ ನೆಣದ ಒಳ್ (ಗೆ) ಕೆಸರೊಳ್ ಜಿಗಿಲ್ತು ಅಗುರ್ವು ಅಡರೆ (ಸಾಂದ್ರವಾದ ರಕ್ತಸಮುದ್ರದ ಕೊಬ್ಬಿನ ಹೆಚ್ಚಾದ ಕೆಸರಿನಲ್ಲಿ ಅಂಟಿಕೊಂಡು ಭಯವನ್ನು ಹೆಚ್ಚಿಸುತ್ತಿರಲು,) ನಿರಂತರಂ ಪೊಳೆವ ಬಾಳ್ ಉಡಿ ಸುಯ್ವ (ಒಂದೇ ಸಮನಾಗಿ ಹೊಳೆಯುತ್ತಿರುವ ಕತ್ತಿಯ ಚೂರುಗಳು ಹೊರಸೂಸುಯುತ್ತಿರುವ) ನವ ವ್ರಣಂಗಳು ಒಳ್ಪು ಒಡರೆ (ಹೊಸಗಾಯಗಳಲ್ಲಿ ಬಹಳ ಉಕ್ಕುತ್ತಿರಲು- ಸ್ಫುರಿಸುತ್ತಿರಲು) ಪೊದೞ್ದುದು ಅದ್ಭುತ ಭಯಾನಕಂ ಆಹವ ರಂಗಭೂಮಿಯೊಳ್ (ಯುದ್ಧಭೂಮಿಯಲ್ಲಿ ಆಶ್ಚರ್ಯವೂ ಭಯವೂ ವ್ಯಾಪಿಸಿದುವು)
ಪದ್ಯ-೫೮:ಅರ್ಥ: ಆ ಕೂಡಲೆ ಆಕಾಶದವರೆಗೂ ಸಿಡಿಯುವ ಹಸಿಯ ತಲೆಯೂ ಚೆಲ್ಲುವ ಮಾಂಸಖಂಡದ ಮುದ್ದೆಗಳೂ ಸಿಕ್ಕಿಕೊಳ್ಳಲು, ಸಾಂದ್ರವಾದ ರಕ್ತಸಮುದ್ರದ ಕೊಬ್ಬಿನ ಹೆಚ್ಚಾದ ಕೆಸರಿನಲ್ಲಿ ಅಂಟಿಕೊಂಡು ಭಯವನ್ನು ಹೆಚ್ಚಿಸುತ್ತಿರಲು, ಒಂದೇ ಸಮನಾಗಿ ಹೊಳೆಯುತ್ತಿರುವ ಕತ್ತಿಯ ಚೂರುಗಳು ಹೊರಸೂಸುಯುತ್ತಿರುವ ಹೊಸಗಾಯಗಳಲ್ಲಿ ಬಹಳ ಉಕ್ಕುತ್ತಿರಲು, ಯುದ್ಧಭೂಮಿಯಲ್ಲಿ ಆಶ್ಚರ್ಯವೂ ಭಯವೂ ವ್ಯಾಪಿಸಿದುವು.
ವ|| ಆಗಳೆರಡುಂ ಬಲದ ಸೇನಾನಾಯಕರೊಂದೊರ್ವರೊಳ್ ಕಾದುವಾಗಳ್ ಕುಂಭಸಂಭವಂ ಧರ್ಮಪುತ್ರನ ಮೊನೆಯೊಳ್ ಭರಂಗೆಯ್ದು ಕಾದುವಾಗಳ್-
ವಚನ:ಪದವಿಭಾಗ-ಅರ್ಥ:ಆಗಳು ಎರಡುಂ ಬಲದ ಸೇನಾನಾಯಕರ್ ಒಂದೊರ್ವರೊಳ್ ಕಾದುವಾಗಳ್ (ಎರಡು ಸೈನ್ಯದ ಸೇನಾ ನಾಯಕರೂ ಪರಸ್ಪರ ಹೋರಾಡುವಾಗ) ಕುಂಭಸಂಭವಂ ಧರ್ಮಪುತ್ರನ ಮೊನೆಯೊಳ್ ಭರಂಗೆಯ್ದು ಕಾದುವಾಗಳ್ (ದ್ರೋಣನು ಧರ್ಮರಾಜನೊಡನೆ ಆರ್ಭಟಮಾಡಿ ಕಾದುವಾಗ-)-
ವಚನ:ಅರ್ಥ:ವ|| ಆಗ ಎರಡು ಸೈನ್ಯದ ಸೇನಾ ನಾಯಕರೂ ಪರಸ್ಪರ ಹೋರಾಡುವಾಗ ದ್ರೋಣನು ಧರ್ಮರಾಜನೊಡನೆ ಆರ್ಭಟಮಾಡಿ ಕಾದುವಾಗ-.
ವ|| ಧ್ವಜಮಂ ಖಂಡಿಸಿ ಪೂಣ್ದು ಬಾಣದೊಳೆ ಧೃಷ್ಪದ್ಯುಮ್ನನಂ ನೆಟ್ಟನೊ
ಟ್ಟಜೆಯಿಂ ತೂಳ್ದಿ ಶಿಖಂಡಿಯಂ ದ್ರುಪದನಂ ಕಾಯ್ಪಿಂದಮೇಸಾಡಿ ಮಿ|
ಕ್ಕು ಜವಂ ಕೊಲ್ವವೊಲಾತನಿಂ ಕಿಱಿಯರಂ ಪನ್ನೊರ್ವರಂ ಕೊಂದು ಮ
ತ್ಸ್ಯಜನಂ ಮಾಣದೆ ಕೊಂದನೊಂದೆ ಶರದಿಂ ನಿಶ್ಯಂಕನಂ ಶಂಕನಂ|| ೫೯ ||
ಪದ್ಯ-೫೯:ಪದವಿಭಾಗ-ಅರ್ಥ:ಧ್ವಜಮಂ ಖಂಡಿಸಿ ಪೂಣ್ದು ಬಾಣದೊಳೆ ಧೃಷ್ಪದ್ಯುಮ್ನನಂ ನೆಟ್ಟನೆ ಒಟ್ಟಜೆಯಿಂ ತೂಳ್ದಿ (ಧ್ವಜವನ್ನು ಕತ್ತರಿಸಿ ಧೃಷ್ಟದ್ಯುಮ್ನನನ್ನು ನೇರವಾಗಿ ಪೂರ್ತಿ ಬಾಣಗಳಲ್ಲಿ ಹೂಳಿ,) ಶಿಖಂಡಿಯಂ ದ್ರುಪದನಂ ಕಾಯ್ಪಿಂದಂ ಏಸಾಡಿ (ಶಿಖಂಡಿಯನ್ನೂ ದ್ರುಪದನನ್ನು ಕೋಪದಿಂದ ತಳ್ಳಿ ಹೊಡೆದು) ಮಿಕ್ಕು ಜವಂ ಕೊಲ್ವವೊಲ್ ಆತನಿಂ ಕಿಱಿಯರಂ ಪನ್ನೊರ್ವರಂ ಕೊಂದು (ಮೀರಿ ಆತನ ತಮ್ಮಂದಿರಾದ ಹನ್ನೊಂದು ಜನರನ್ನೂ ಯಮನು ಕೊಲ್ಲುವ ಹಾಗೆ ಕೊಂದು) ಮತ್ಸ್ಯಜನಂ ಮಾಣದೆ ಕೊಂದನು ಒಂದೆ ಶರದಿಂ ನಿಶ್ಯಂಕನಂ ಶಂಕನಂ ( ವಿರಾಟನ ಮಗನಾದ ಶಂಕಾರಹಿತನಾದ ಶಂಖನನ್ನು ಒಂದೇ ಬಾಣದಿಂದ ಕೊಂದು ಹಾಕಿದನು.)
ಪದ್ಯ-೫೯:ಅರ್ಥ: ಧ್ವಜವನ್ನು ಕತ್ತರಿಸಿ ಧೃಷ್ಟದ್ಯುಮ್ನನನ್ನು ನೇರವಾಗಿ ಪೂರ್ತಿ ಬಾಣಗಳಲ್ಲಿ ಹೂಳಿ, ಶಿಖಂಡಿಯನ್ನೂ ದ್ರುಪದನನ್ನು ಕೋಪದಿಂದ ತಳ್ಳಿ ಹೊಡೆದು ಮೀರಿ ಆತನ ತಮ್ಮಂದಿರಾದ ಹನ್ನೊಂದು ಜನರನ್ನೂ ಯಮನು ಕೊಲ್ಲುವ ಹಾಗೆ ಕೊಂದು ವಿರಾಟನ ಮಗನಾದ ಶಂಕಾರಹಿತನಾದ ಶಂಖನನ್ನು ಒಂದೇ ಬಾಣದಿಂದ ಕೊಂದು ಹಾಕಿದನು.
ವ|| ಆಗಳ್ ಸಾಲ್ವಲ ದೇಶದರಸಂ ಚೇಕಿತ್ಸಂ ಪ್ರಳಯಕಾಲದ ಮೇಘಘಟೆಗಳೆನಿಸುವ ನೇಕಾನೇಕಪ ಘಟೆಗಳ್ವೆರಸರಸನಂ ಪೆಱಗಿಕ್ಕಿ ಬಂದು ತಾಗಿದಾಳ್-
ವಚನ:ಪದವಿಭಾಗ-ಅರ್ಥ: ಆಗಳ್ ಸಾಲ್ವಲ ದೇಶದರಸಂ ಚೇಕಿತ್ಸಂ (ಆಗ ಸಾಲ್ವಲದೇಶದ ಅರಸನಾದ ಚೇಕಿತ್ಸನು) ಪ್ರಳಯಕಾಲದ ಮೇಘಘಟೆಗಳೆನು ಇಸುವ ಅನೇಕ ಅನೇಕಪ ಘಟೆಗಳ್ವೆರಸು (ಪ್ರಳಯಕಾಲದ ಮೋಡಗಳೆನಿಸುವ ಅನೇಕ ಆನೆಯ ಗುಂಪುಗಳನ್ನು ಕೂಡಿಕೊಂಡು) ಅರಸನಂ ಪೆಱಗಿಕ್ಕಿ ಬಂದು ತಾಗಿದಾಳ್ (ರಾಜನನ್ನು ಹಿಂದಿಕ್ಕಿ ಬಂದು ಎದುರಿಸಿದನು.)-
ವಚನ:ಅರ್ಥ:ಆಗ ಸಾಲ್ವಲ ದೇಶದ ಅರಸನಾದ ಚೇಕಿತ್ಸನು ಪ್ರಳಯಕಾಲದ ಮೋಡಗಳೆನಿಸುವ ಅನೇಕ ಆನೆಯ ಗುಂಪುಗಳನ್ನು ಕೂಡಿಕೊಂಡು ಧರ್ಮರಾಜನನ್ನು ಹಿಂದಕ್ಕಿರಿಸಿ ಬಂದು ಎದುರಿಸಿದನು.
ಕಂ|| ಓರೊಂದೆ ಪಾರೆಯಂಬಿನೊ
ಳೋರೊಂದೆ ಗಜೇಂದ್ರಮುರುಳೆ ತೆಗೆನೆರೆದೆಚ್ಚೆ|
ಚ್ಚೋರಣದೊಳ್ ಚೇಕಿತ್ಸನ
ನಾರುಮಗುರ್ವಿಸೆ ಘಟೋದ್ಭುವಂ ತಱಿದಾರ್ದಂ|| ೬೦ ||
ಪದ್ಯ-೬೦:ಪದವಿಭಾಗ-ಅರ್ಥ:ಓರೊಂದೆ ಪಾರೆಯಂಬಿನೊಳ್ (ಒಂದೊಂದು ಹಾರೆಯಂಥ ಅಂಬಿನಿಂದಲೇ) ಒರೊಂದೆ ಗಜೇಂದ್ರಮು ಉರುಳೆ (ಒಂದೊಂದು ಅನೆಯು ಉರುಳಲು) ತೆಗೆನೆರೆದು ಎಚ್ಚೆಚ್ಚು (ಕಿವಿಯಬರೆಗೆ ಎಳೆದು ಹೊಡೆದು ಹೊಡೆದು) ಓರಣದೊಳ್ ಚೇಕಿತ್ಸನನು ಆರುಂ ಅಗುರ್ವಿಸೆ ಘಟೋದ್ಭುವಂ (ದ್ರೋಣನು) ತಱಿದು ಆರ್ದಂ (ಕ್ರಮವಾಗಿ ಎಲ್ಲರೂ ಭಯಪಡುವ ಹಾಗೆ ಚೇಕಿತ್ಸನನ್ನು ದ್ರೋಣನು ಕತ್ತರಿಸಿ ಆರ್ಭಟಮಾಡಿದನು. )
ಪದ್ಯ-೬೦:ಅರ್ಥ: ಒಂದೊಂದು ಹಾರೆಯಂಥ ಅಂಬಿನಿಂದಲೇ ಒಂದೊಂದು ಅನೆಯು ಉರುಳಲು ಹೆದೆಯನ್ನು ಕಿವಿಯವರೆಗೆ ಎಳೆದು ಹೊಡೆದು ಹೊಡೆದು. ಕ್ರಮವಾಗಿ ಎಲ್ಲರೂ ಭಯಪಡುವ ಹಾಗೆ ಚೇಕಿತ್ಸನನ್ನು ದ್ರೋಣನು ಕತ್ತರಿಸಿ ಆರ್ಭಟಮಾಡಿದನು.
ವ|| ಅಂತು ಪಾಂಡವ ಬಲಮೆಲ್ಲಮನಲ್ಲಕಲ್ಲೋಲಂ ಮಾಡಿ ಕಳಶಕೇತನನಜಾತಶತ್ರುಮಂ ಪಿಡಿಯಲೆಯ್ತರ್ಪಾಗಳ್
ವಚನ:ಪದವಿಭಾಗ-ಅರ್ಥ:ಅಂತು ಪಾಂಡವ ಬಲಂ ಎಲ್ಲಮನು (ಪಾಂಡವಸೈನ್ಯವನ್ನೆಲ್ಲ) ಅಲ್ಲಕಲ್ಲೋಲಂ ಮಾಡಿ ಕಳಶಕೇತನನು ಅಜಾತಶತ್ರುಮಂ ಪಿಡಿಯಲೆಯ್ತರ್ಪಾಗಳ್ (ದ್ರೋಣನು ಧರ್ಮರಾಜನನ್ನು ಹಿಡಿಯಲು ಬಂದಾಗ-.)
ವಚನ:ಅರ್ಥ: ಪಾಂಡವಸೈನ್ಯವನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಚೆದುರಿಸಿ ದ್ರೋಣನು ಧರ್ಮರಾಜನನ್ನು ಹಿಡಿಯಲು ಬಂದಾಗ-.
ಸ್ರ|| ಕಾದಲ್ ಸಂಸಪ್ತಕರ್ಕಳ್ ಕರೆದೊಡವರ ಬೆನ್ನಂ ತಗುಳ್ದಾದ ಕಾಯ್ಪಿಂ
ಕಾದುತ್ತಿರ್ಪಾತನಂತಾ ಕಳಕಳಮನದಂ ಕೇಳ್ದು ಭೋರೆಂದು ಬಂದೆ|
ಚ್ಚಾ ದಿವ್ಯಾಸ್ತ್ರಂಗಳಿಂ ತಮ್ಮೊವಜರುಗಿಯೆ ತಮ್ಮಣ್ಣನಂ ಶೌರ್ಯದಿಂದಂ
ಕಾದಂ ಮುಂ ಬಿಜ್ಜನಂ ಕಾದರಿಗನುೞಿದರಂ ಕಾವುದೇಂ ಚೋದ್ಯಮಾಯ್ತೆ|| ೬೧ ||
ಪದ್ಯ-೬೧:ಪದವಿಭಾಗ-ಅರ್ಥ:ಕಾದಲ್ ಸಂಸಪ್ತಕರ್ಕಳ್ ಕರೆದೊಡೆ ಅವರ ಬೆನ್ನಂ ತಗುಳ್ದು ಆದ ಕಾಯ್ಪಿಂ (ಸಂಸಪ್ತಕರುಗಳು ತಮ್ಮೊಡನೆ ಕಾದಲು ಕರೆಯಲಾಗಿ ಅವರ ಬೆನ್ನಟ್ಟಿಹೋಗಿ ವಿಶೇಷಕೋಪದಿಂದ) ಕಾದುತ್ತಿರ್ಪ ಆತನು ಅಂತು ಆ ಕಳಕಳಮನದಂ ಕೇಳ್ದು (ಕಾದುತ್ತಿದ್ದ ಅರ್ಜುನನು ಆ ಕಳಕಳ ಶಬ್ದವನ್ನು ಕೇಳಿ) ಭೋರೆಂದು ಬಂದು ಎಚ್ಚ ಆ ದಿವ್ಯಾಸ್ತ್ರಂಗಳಿಂ (ವೇಗವಾಗಿ ಬಂದು ಪ್ರಯೋಗಿಸಿದ ಶ್ರೇಷ್ಠವಾದ ಬಾಣಗಳಿಂದ) ತಮ್ಮ ಓವಜರ್ (ಗುರುಗಳು) ಉಗಿಯೆ ತಮ್ಮಣ್ಣನಂ (ದ್ರೋಣಾಚಾರ್ಯರು ಎಳೆದುಕೆಡವಲು/ ಸೋಲಿಸಲು ಅರ್ಜುನನು ತಮ್ಮಣ್ಣನಾದ ಧರ್ಮರಾಜನನ್ನು) ಶೌರ್ಯದಿಂದಂ ಕಾದಂ (ಪರಾಕ್ರಮದಿಂದ ರಕ್ಷಿಸಿದನು.) ಮುಂ ಬಿಜ್ಜನಂ ಕಾದ ಅರಿಗನು ಉೞಿದರಂ ಕಾವುದೇಂ ಚೋದ್ಯಮಾಯ್ತೆ (ಮೊದಲು ವಿಜಯಾದಿತ್ಯನನ್ನು ರಕ್ಷಿಸಿದವ ಅರಿಗನಿಗೆ ಅರ್ಜುನನಿಗೆ ಉಳಿದವರನ್ನು ರಕ್ಷಿಸುವುದೇನು ಆಶ್ಚರ್ಯವೇ?) (ಅರಿಕೇಸರಿಯು ವಿಜಯಾದಿತ್ಯನನ್ನು ರಕ್ಷಿಸಿದ್ದನು)
ಪದ್ಯ-೬೧:ಅರ್ಥ:ಅರ್ಜುನನ್ನು, ಸಂಸಪ್ತಕರುಗಳು ತಮ್ಮೊಡನೆ ಕಾದಲು ಕರೆಯಲಾಗಿ ಅವರ ಬೆನ್ನಟ್ಟಿಹೋಗಿ ವಿಶೇಷಕೋಪದಿಂದ ಕಾದುತ್ತಿದ್ದ ಅರ್ಜುನನು ಆ ಕಳಕಳಶಬ್ದವನ್ನು ಕೇಳಿ, ವೇಗವಾಗಿ ಬಂದು ಪ್ರಯೋಗಿಸಿದ ಶ್ರೇಷ್ಠವಾದ ಬಾಣಗಳಿಂದ ದ್ರೋಣಾಚಾರ್ಯರು ಎಳೆದುಕೆಡವಲು/ ಸೋಲಿಸಲು ಅರ್ಜುನನು ತಮ್ಮಣ್ಣನಾದ ಧರ್ಮರಾಜನನ್ನು ಪರಾಕ್ರಮದಿಂದ ರಕ್ಷಿಸಿದನು. ಮೊದಲು ವಿಜಯಾದಿತ್ಯನನ್ನು ರಕ್ಷಿಸಿದವ ಅರಿಗನಿಗೆ/ ಅರ್ಜುನನಿಗೆ ಉಳಿದವರನ್ನು ರಕ್ಷಿಸುವುದೇನು ಆಶ್ಚರ್ಯವೇ?
ವ|| ಆಗಳ್ ಮರ್ತಾಂಡಂ ಪ್ರಚಂಡಮಾರ್ತಾಂಡನ ಶರ ನಿಕರ ಸುರಿತ ಕಿರಣಂಗಳ್ ಕವಿಯೆ ತನ್ನ ಕಿರಣಂಗಳ್ ಮಸುಳ್ದಪರಜಳನಿಧಿಗಿೞಿದನಾಗಳೆರಡುಂ ಪಡೆಗಳಪಹಾರತೂರ್ಯಂಗಳಂ ಬಾಜಿಸಿದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಮರ್ತಾಂಡಂ (ಸೂರ್ಯನು) ಪ್ರಚಂಡಮಾರ್ತಾಂಡನ ಶರ ನಿಕರ ಸುರಿತ ಕಿರಣಂಗಳ್ ಕವಿಯೆ (ಪ್ರಚಂಡಮಾರ್ತಾಂಡನಾದ ಅರ್ಜುನನ ಬಾಣರಾಶಿಯ ಪ್ರಕಾಶಮಾನವಾದ ಕಿರಣಗಳು ಕವಿಯಲು) ತನ್ನ ಕಿರಣಂಗಳ್ ಮಸುಳ್ದು (ತನ್ನ ಕಿರಣಗಳು ನಿಸ್ತೇಜವಾಗಿ) ಅಪರಜಳನಿಧಿಗೆ ಇೞಿದನು (ತನ್ನ ಕಿರಣಗಳು ನಿಸ್ತೇಜವಾಗಿ ಪಶ್ಚಿಮಸಮುದ್ರಕ್ಕಿಳಿದನು.) ಆಗಳೆರಡುಂ ಪಡೆಗಳು ಅಪಹಾರತೂರ್ಯಂಗಳಂ ಬಾಜಿಸಿದಾಗಳ್ (ಆಗ ಎರಡುಸೈನ್ಯಗಳೂಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾರಿಸಿದುವು)-
ವಚನ:ಅರ್ಥ:ಆಗ ಸೂರ್ಯನು ಪ್ರಚಂಡಮಾರ್ತಾಂಡನಾದ ಅರ್ಜುನನ ಬಾಣರಾಶಿಯ ಪ್ರಕಾಶಮಾನವಾದ ಕಿರಣಗಳು ಕವಿಯಲು, ತನ್ನ ಕಿರಣಗಳು ನಿಸ್ತೇಜವಾಗಿ ಪಶ್ಚಿಮಸಮುದ್ರಕ್ಕಿಳಿದನು. ಆಗ ಎರಡುಸೈನ್ಯಗಳೂಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾರಿಸಿದುವು.
ಹರಿಣೀಪುತಂ|| ಪಡೆಗಳೆರಡುಂ ಬೀಡಿಂಗೆತ್ತಂ ತೆರಳ್ದು ನೆಗೞ್ತೆಯಂ
ಪಡೆದೞಿದರಂ ಮೆಚ್ಚುತ್ತುತ್ಸಾಹದಿಂ ಪೊಗೞುತ್ತುಮೊ|
ಳ್ಪಡರೆ ನುಡಿಯುತ್ತಂತಿರ್ದಾದಿತ್ಯನಂದುದಯಾದ್ರಿಯ
ತ್ತಡರೆ ಪೊಱಮಟ್ಟಾಗಳ್ ಬಂದೊಡ್ಡಿ ನಿಂದುವು ಕೋಪದಿಂ|| ೬೨ ||
ಪದ್ಯ-೬೨:ಪದವಿಭಾಗ-ಅರ್ಥ: ಪಡೆಗಳೆರಡುಂ ಬೀಡಿಂಗೆ ಎತ್ತಂ ತೆರಳ್ದು (ಎರಡೂ ಸೈನ್ಯಗಳು ತಮ್ಮ ಪಾಳೆಯಗಳ ಕಡೆಗೆ ಹೋಗಿ/ ಸೇರಿ) ನೆಗೞ್ತೆಯಂ ಪಡೆದು ಅೞಿದರಂ ಮೆಚ್ಚುತ್ತ ಉತ್ಸಾಹದಿಂ ಪೊಗೞುತ್ತಂ (ಖ್ಯಾತಿಯನ್ನು ಪಡೆದು ಸತ್ತವರನ್ನು ಉತ್ಸಾಹದಿಂದ ಮೆಚ್ಚಿ ಹೊಗಳುತ್ತ) ಒಳ್ಪು ಅಡರೆ ನುಡಿಯುತ್ತ ಅಂತಿರ್ದು (ಒಳ್ಳೆಯತನವು/ ಸದ್ಗುಣವು ಪ್ರಕಾಶವಾಗುವ ಹಾಗೆ ಮಾತನಾಡುತ್ತ ಇದ್ದರು;) ಆದಿತ್ಯನಂದು ಉದಯಾದ್ರಿಯತ್ತ ಅಡರೆ ಪೊಱಮಟ್ಟಾಗಳ್ ಬಂದೊಡ್ಡಿ ನಿಂದುವು ಕೋಪದಿಂ ( ಸೂರ್ಯನು ಉದಯಪರ್ವತವನ್ನೇರಲು ಸೈನ್ಯವು ಹೊರಟು ಕೋಪದಿಂದ ಬಂದೊಡ್ಡಿ ನಿಂತವು.)
ಪದ್ಯ-೬೨:ಅರ್ಥ: ಎರಡೂ ಸೈನ್ಯಗಳು ತಮ್ಮ ಪಾಳೆಯಗಳ ಕಡೆಗೆ ಹೋಗಿ (ಸೇರಿ) ಖ್ಯಾತಿಯನ್ನು ಪಡೆದು ಸತ್ತವರನ್ನು ಉತ್ಸಾಹದಿಂದ ಮೆಚ್ಚಿ ಹೊಗಳುತ್ತ, ಒಳ್ಳೆಯತನವು/ ಸದ್ಗುಣವು ಪ್ರಕಾಶವಾಗುವ ಹಾಗೆ ಮಾತನಾಡುತ್ತ ಇದ್ದರು; ಸೂರ್ಯನು ಉದಯಪರ್ವತವನ್ನೇರಲು ಸೈನ್ಯವು ಹೊರಟು ಕೋಪದಿಂದ ಬಂದೊಡ್ಡಿ ನಿಂತವು.
ಕಂ|| ಅಂತೊಡ್ಡಿ ನಿಂದ ಚಾತು
ರ್ದಂತಂ ಕೆಯ್ವೀಸುವನ್ನೆಗಂ ಸೈರಿಸದೋ|
ರಂತೆ ಪೆಣೆದಿಱಿದುವಂತೆ ದಿ
ಗಂತಾಂತಮನೆಯ್ದಿ ಪರಿಯೆ ನೆತ್ತರ ತೊಗಳ್|| ೬೩ ||
ಪದ್ಯ-೬೩:ಪದವಿಭಾಗ-ಅರ್ಥ:ಅಂತೊಡ್ಡಿ ನಿಂದ ಚಾತುರ್ದಂತಂ ಕೆಯ್ವೀಸುವ ಅನ್ನೆಗಂ ಸೈರಿಸದೆ (ಹಾಗೆ ಬಂದು ಒಡ್ಡಿ ನಿಂತ ಚತುರಂಗಸೈನ್ಯವು ಯುದ್ಧಸೂಚಕವಾಗಿ ಕೈಬೀಸುವಷ್ಟರವರೆಗೂ ಸೈರಿಸದೆ) ಓರಂತೆ ಪೆಣೆದು ಇಱಿದುವಂತೆ (ಒಂದೇ ಸಮನಾಗಿ ಹೆಣೆದುಕೊಂಡು ಯುದ್ಧಮಾಡಿದುವು) ದಿಗಂತ ಆಂತಮನು ಎಯ್ದಿ ಪರಿಯೆ ನೆತ್ತರ ತೊಗಳ್ (ರಕ್ತಪ್ರವಾಹವು ದಿಗಂತದ ಕೊನೆಯನ್ನು ಸೇರಿ ಹರಿಯುವ ಹಾಗೆ ಯುದ್ಧಮಾಡಿದುವು.)
ಪದ್ಯ-೬೩:ಅರ್ಥ: ಹಾಗೆ ಬಂದು ಒಡ್ಡಿ ನಿಂತ ಚತುರಂಗಸೈನ್ಯವು ಯುದ್ಧಸೂಚಕವಾಗಿ ಕೈಬೀಸುವಷ್ಟರವರೆಗೂ ಸೈರಿಸದೆ ಒಂದೇ ಸಮನಾಗಿ ಹೆಣೆದುಕೊಂಡು ರಕ್ತಪ್ರವಾಹವು ದಿಗಂತದ ಕೊನೆಯನ್ನು ಸೇರಿ ಹರಿಯುವ ಹಾಗೆ ಯುದ್ಧಮಾಡಿದುವು.
ಅೞ್ಗಿದ ಬಿಲ್ವಡೆ ಮಾಣದೆ
ತೞ್ಗಿದ ರಥಮೆಯ್ದೆ ಬಗಿದ ಪುಣ್ಗಳ ಪೊರೆಯಿಂ|
ಮೊೞ್ಗಿದ ಕರಿ ಘಟೆ ಜವನಡು
ವೞ್ಗೆಯನನುಕರಿಸೆ ವೀರ ಭಟ ರಣರಂಗಂ|| ೬೪ ||
ಪದ್ಯ-೬೪:ಪದವಿಭಾಗ-ಅರ್ಥ:ಅೞ್ಗಿದ ಬಿಲ್ವಡೆ ಮಾಣದೆ ತೞ್ಗಿದ ರಥಮೆಯ್ದೆ (ನಾಶವಾದ ಬಿಲ್ಗಾರರ ಸೈನ್ಯ, ತಪ್ಪದೆ ಮುರಿದ ರಥಗಳು,) ಬಗಿದ ಪುಣ್ಗಳ ಪೊರೆಯಿಂ(ತೋಡಿದ ಹುಣ್ಣುಗಳ ಭಾರದಿಂದಲೂ) ಮೊೞ್ಗಿದ ಕರಿ ಘಟೆ (ಕುಗ್ಗಿದ/ಪೆಟ್ಟಾಗಿ ಮಲಗಿದ ಆನೆಗಳ ಸಮೂಹದಿಂದಲೂ,) ಜವನ ಅಡುವ ಅೞ್ಗೆಯನು ಅನುಕರಿಸೆ ವೀರ ಭಟ ರಣರಂಗಂ (ಯಮನು ಬೇಯಿಸುವ ಅಡುಗೆಯಯನ್ನು ಹೋಲುತ್ತಿತ್ತು. < ರಣರಂಗವು)
ಪದ್ಯ-೬೪:ಅರ್ಥ: ರಣರಂಗವು, ನಾಶವಾದ ಬಿಲ್ಗಾರರ ಸೈನ್ಯ, ತಪ್ಪದೆ ಮುರಿದ ರಥಗಳು, ತೋಡಿದ ಹುಣ್ಣುಗಳ ಭಾರದಿಂದಲೂ, ಕುಗ್ಗಿದ/ಪೆಟ್ಟಾಗಿ ಮಲಗಿದ ಆನೆಗಳ ಸಮೂಹದಿಂದಲೂ, ಯಮನು ಬೇಯಿಸುವ ಅಡುಗೆಯಯನ್ನು ಹೋಲುತ್ತಿತ್ತು.
ವ|| ಆಗಳ್ ಧೃಷ್ಟಕೇತು ವೃಷಸೇನನೊಳ್ ಸಾತ್ಯಕಿ ಭಗದತ್ತನೊಳ್ ದ್ರುಪದ ಧೃಷ್ಟಧ್ಯುಮ್ನರಿರ್ವರುಂ ದ್ರೋಣಾಚಾರ್ಯನೊಳ್ ಪ್ರತಿವಿಂಧ್ಯಂ ಸೌಬಲನೊಳ್ ಘಟೋತ್ಕಚಂ ಕರ್ಣನೊಳ್ ಪೆಣೆದು ಕಾದೆ-
ವಚನ:ಪದವಿಭಾಗ-ಅರ್ಥ:ಆಗಳ್ ಧೃಷ್ಟಕೇತು ವೃಷಸೇನನೊಳ್ ಸಾತ್ಯಕಿ ಭಗದತ್ತನೊಳ್ ದ್ರುಪದ ಧೃಷ್ಟಧ್ಯುಮ್ನರು ಇರ್ವರುಂ ದ್ರೋಣಾಚಾರ್ಯನೊಳ್ ಪ್ರತಿವಿಂಧ್ಯಂ ಸೌಬಲನೊಳ್ ಘಟೋತ್ಕಚಂ ಕರ್ಣನೊಳ್ ಪೆಣೆದು ಕಾದೆ (ಹೆಣೆದುಕೊಂಡು ಕಾದಿದರು/ ಯುದ್ಧಮಾಡಿದರು)-
ವಚನ:ಅರ್ಥ:ವ|| ಆಗ ದೃಷ್ಟಕೇತುವು ವೃಷಸೇನನಲ್ಲಿಯೂ ಸಾತ್ಯಕಿಯು ಭಗದತ್ತನಲ್ಲಿಯೂ ದ್ರುಪದ ಧೃಷ್ಟದ್ಯುಮ್ನರು ಇಬ್ಬರೂ ದ್ರೋಣಾಚಾರ್ಯನಲ್ಲಿಯೂ ಪ್ರತಿವಿಂದ್ಯನು ಶಕುನಿಯಲ್ಲಿಯೂ ಘಟೋತ್ಕಚನು ಕರ್ಣನಲ್ಲಿಯೂ ಹೆಣೆದುಕೊಂಡು ಕಾದಿದರು/ ಯುದ್ಧಮಾಡಿದರು.
ಚಂ|| ಪೊಸಮಸೆಯಂಬುಗಳ್ ದೆಸೆಗಳಂ ಮಸುಳ್ವನ್ನೆಗಮೆಯ್ದೆ ಪಾಯೆ ಪಾ
ಯಿಸುವ ರಥಂಗಳಾ ರಥದ ಕೀಲ್ಮುಱಿದಾಗಳೆ ಕೆಯ್ಯನಲ್ಲಿ ಕೋ|
ದೆಸಗುವ ಸೂತರಂಬು ಕೊಳೆ ಸೂತರುರುಳ್ದುಮಿಳಾತಳಕ್ಕೆ ಪಾ
ಯ್ದಸಿಯೊಳೆ ತಾಗಿ ತಳ್ತಿಱಿವ ನಿಚ್ಚಟರೊಪ್ಪಿದರಾಜಿರಂಗದೊಳ್|| ೬೫ ||
ಪದ್ಯ-೬೫:ಪದವಿಭಾಗ-ಅರ್ಥ:ಪೊಸಮಸೆಯ ಅಂಬುಗಳ್ ದೆಸೆಗಳಂ ಮಸುಳ್ವನ್ನೆಗಂ ಎಯ್ದೆ ಪಾಯೆ(ಹೊಸ ಮಸೆದ ಬಾಣಗಳು, ದಿಕ್ಕುಗಳನ್ನೆಲ್ಲ ಮುಚ್ಚುವ ರೀತಿಯಲ್ಲಿ ಬಂದು ನುಗ್ಗಲು) ಪಾಯಿಸುವ ರಥಂಗಳು ಆ ರಥದ ಕೀಲ್ಮುಱಿದಾಗಳೆ ಕೆಯ್ಯನು ಅಲ್ಲಿ ಕೋದು ಎಸಗುವ ಸೂತರು ಅಂಬು ಕೊಳೆ (ಓಡಿಸುತ್ತಿದ್ದ ರಥಗಳೂ, ಆ ರಥಗಳ ಕೀಲು ಮುರಿದೊಡನೆ ತಮ್ಮ ಕೈಗಳನ್ನೇ ಆ ಕೀಲಿನ ಸ್ಥಾನದಲ್ಲಿ ಪೋಣಿಸವ ಸೂತರು ಬಾಣ ನಾಟಲು) ಸೂತರು ಉರುಳ್ದುಂ ಇಳಾತಳಕ್ಕೆ ಪಾಯ್ದು ಅಸಿಯೊಳೆ ತಾಗಿ (ಸೂತರು ನೆಲಕ್ಕೆ ಉರುಳಿದರೂ ರಥದಿಂದ ನೆಲಕ್ಕೆ ನೆಗೆದು ನೆಗೆದು ಕತ್ತಿಯಿಂದ ಘಟ್ಟಿಸಿ ಎದುರಿಸಿ,) ತಳ್ತು ಇಱಿವ ನಿಚ್ಚಟರು ಒಪ್ಪಿದರು ಆಜಿರಂಗದೊಳ್ (ಶತ್ರುಸೈನ್ಯವನ್ನು ಪ್ರತಿಭಟಿಸಿ ಸ್ಥೆರ್ಯದಿಂದ ಇರಿವ/ ಹೋರಾಡುವ ಯೋಧಾಗ್ರೇಸರರೂ ಯುದ್ಧರಂಗದಲ್ಲಿ ಶೋಭಿಸಿದರು.)
ಪದ್ಯ-೬೫:ಅರ್ಥ: ಹೊಸ ಮಸೆದ ಬಾಣಗಳು, ದಿಕ್ಕುಗಳನ್ನೆಲ್ಲ ಮುಚ್ಚುವ ರೀತಿಯಲ್ಲಿ ಬಂದು ನುಗ್ಗಲು, ಓಡಿಸುತ್ತಿದ್ದ ರಥಗಳೂ, ಆ ರಥಗಳ ಕೀಲು ಮುರಿದೊಡನೆ ತಮ್ಮ ಕೈಗಳನ್ನೇ ಆ ಕೀಲಿನ ಸ್ಥಾನದಲ್ಲಿ ಪೋಣಿಸವ ಸೂತರು ಬಾಣ ನಾಟಲು ಸೂತರು ನೆಲಕ್ಕೆ ಉರುಳಿದರೂ ರಥದಿಂದ ನೆಲಕ್ಕೆ ನೆಗೆದು ನೆಗೆದು ಕತ್ತಿಯಿಂದ ಎದುರಿಸಿ, ಶತ್ರುಸೈನ್ಯವನ್ನು ಪ್ರತಿಭಟಿಸಿ ಸ್ಥೆರ್ಯದಿಂದ ಹೋರಾಡುವ ಯೋಧಾಗ್ರೇಸರರೂ ಯುದ್ಧರಂಗದಲ್ಲಿ ಶೋಭಿಸಿದರು.
ವ|| ಆಗಳ್ ಕಳಿಂಗರಾಜನ ಗಜಘಟೆಗಳನಿತುವೊಂದಾಗಿ ಭೀಮಸೇನನ ರಥಮಂ ವಿಳಯ ಕಾಳ ಜಳಧರಂಗಳೆಲ್ಲವೊಂದಾಗಿ ಕುಲಗಿರಿಯಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್
ವಚನ:ಪದವಿಭಾಗ-ಅರ್ಥ:ಆಗಳ್ ಕಳಿಂಗರಾಜನ ಗಜಘಟೆಗಳು ಅನಿತುವೊಂದಾಗಿ (ಆಗ ಕಳಿಂಗರಾಜನ ಆನೆಯ ಸಮೂಹವಷ್ಟೂ ಒಂದಾಗಿ) ಭೀಮಸೇನನ ರಥಮಂ ( ಭೀಮಸೇನನ ತೇರನ್ನು) ವಿಳಯ ಕಾಳ ಜಳಧರಂಗಳೆಲ್ಲ ಒಂದಾಗಿ (ಪ್ರಳಯಕಾಲದ ಮೋಡಗಳೆಲ್ಲ ಒಂದಾಗಿ) ಕುಲಗಿರಿಯಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್ (ಕುಲಪರ್ವತವನ್ನು ಮುತ್ತುವಂತೆ ಸುತ್ತಿ ಮುತ್ತಿದುವು ಆಗ.)
ವಚನ:ಅರ್ಥ:ಆಗ ಕಳಿಂಗರಾಜನ ಆನೆಯ ಸಮೂಹವಷ್ಟೂ ಒಂದಾಗಿ ಭೀಮಸೇನನ ತೇರನ್ನು ಪ್ರಳಯಕಾಲದ ಮೋಡಗಳೆಲ್ಲ ಒಂದಾಗಿ ಕುಲಪರ್ವತವನ್ನು ಮುತ್ತುವಂತೆ ಸುತ್ತಿ ಮುತ್ತಿದುವು, ಆಗ
ಮ|| ರಥದಿಂ ಧಾತ್ರಿಗೆ ಪಾಯ್ದು ಕೊಂಡು ಗದೆಯಂ ಕೆಯ್ಸಾರ್ದುದಸ್ಮನ್ಮನೋ
ರಥಮಿಂದೆಂದು ಕಡಂಗಿ ಮಾಣದೆ ಸಿಡಿಲ್ ಪೊಯ್ವಂತೆವೋಲ್ ಪೊಯ್ವುದುಂ|
ರಥಯೂಥ ಧ್ವಜ ಶಸ್ತ್ರ ಶಂಖಪುಟದೊಳ್ ಘಂಟಾಸಮೇತಂ ಮಹಾ
ರಥನಿಂದಂ ಕುಳಶೈಳದಂತೆ ಕರಿಗಳ್ ಬೀೞ್ತಂದುವುಗ್ರಾಜಿಯೊಳ್|| ೬೬ ||
ಪದ್ಯ-೬೬:ಪದವಿಭಾಗ-ಅರ್ಥ:ರಥದಿಂ ಧಾತ್ರಿಗೆ ಪಾಯ್ದು ಕೊಂಡು ಗದೆಯಂ (ಭೀಮಸೇನನು ರಥದಿಂದ ಭೂಮಿಗೆ ಹಾರಿ ಗದೆಯನ್ನೆತ್ತಿಕೊಂಡು) ಕೆಯ್ಸಾರ್ದುದು (ಕೈಗೂಡಿತು) ಅಸ್ಮನ್ ಮನೋರಥಮ್ ಇಂದು ಎಂದು (‘ನನ್ನ ಮನಸ್ಸಿನ ಇಷ್ಟಾರ್ಥ ಈ ದಿನ ಕೈಗೂಡಿತು’ ಎಂದು) ಕಡಂಗಿ ಮಾಣದೆ ಸಿಡಿಲ್ ಪೊಯ್ವಂತೆವೋಲ್ (ಉತ್ಸಾಹಿಸಿ ತಡಮಾಡದೆ ಸಿಡಿಲು ಹೊಡೆಯುವ ಹಾಗೆ) ಪೊಯ್ವುದುಂ ರಥಯೂಥ ಧ್ವಜ ಶಸ್ತ್ರ ಶಂಖಪುಟದೊಳ್/ ಸಂಘಟನದೊಳ್ (ಹೊಡೆಯಲು ರಥಗಳ ಸಮೂಹ, ಬಾವುಟಗಳು, ಆಯುಧಗಳು ಇವುಗಳ ಪರಸ್ಪರ ತಾಕಲಾಟದಲ್ಲಿ) ಘಂಟಾಸಮೇತಂ ಮಹಾರಥನಿಂದಂ (ಮಹಾರಥನಾದ ಭೀಮಸೇನನಿಂದ ಕತ್ತಿನ ಗಂಟೆಯೊಡನೆ ಆನೆಗಳು ಆ ಘೋರಯುದ್ಧದಲ್ಲಿ ಕುಲಪರ್ವತಗಳ ಹಾಗೆ ಕೆಳಕ್ಕೆ ಬಿದ್ದವು) ಕುಳಶೈಳದಂತೆ ಕರಿಗಳ್ ಬೀೞ್ತಂದುವು (ಬೀಳ್ದು ಅಂದು ಅವು- ಅಂದು ಅವು ಬಿದ್ದವು) ಉಗ್ರಾಜಿಯೊಳ್ (ಕುಲಪರ್ವತಗಳ ಹಾಗೆ ಕೆಳಕ್ಕೆ ಬಿದ್ದವು)
ಪದ್ಯ-೬೬:ಅರ್ಥ: ಭೀಮಸೇನನು ರಥದಿಂದ ಭೂಮಿಗೆ ಹಾರಿ ಗದೆಯನ್ನೆತ್ತಿಕೊಂಡು ‘ನನ್ನ ಮನಸ್ಸಿನ ಇಷ್ಟಾರ್ಥ ಈ ದಿನ ಕೈಗೂಡಿತು’ ಎಂದು ಉತ್ಸಾಹಿಸಿ ತಡಮಾಡದೆ ಸಿಡಿಲು ಹೊಡೆಯುವ ಹಾಗೆ ಹೊಡೆಯಲು ರಥಗಳ ಸಮೂಹ, ಬಾವುಟಗಳು, ಆಯುಧಗಳು ಇವುಗಳ ಪರಸ್ಪರ ತಾಕಲಾಟದಲ್ಲಿ ಕತ್ತಿನ ಗಂಟೆಯೊಡನೆ ಆನೆಗಳು ಆ ಘೋರಯುದ್ಧದಲ್ಲಿ ಕುಲಪರ್ವತಗಳ ಹಾಗೆ ಕೆಳಕ್ಕೆ ಬಿದ್ದವು.
ಮ|| ಮದವದ್ದಂತಿಗಳಂ ಕಱುತ್ತಸಗವೊಯ್ಲ್ಪೊ ಯ್ದಾಜಿಯೊಳ್ ಭೀಮನಾ
ರ್ದೊದೆದೀಡಾಡಿದೊಡತ್ತಜಾಂಡ ತಟಮಂ ತಾಪನ್ನೆಗಂ ಪಾಱಿ ತಾ|
ಱಿದ ಪೇರಾನೆಯೊಡಲ್ಗಳಭ್ರತಳದೊಳ್ ಸಿಲ್ಕಿರ್ದುವೋರೊಂದು ಮಾ
ಣದೆ ಬೀೞ್ತರ್ಪುವು ಬೆಟ್ಟು ಬೀೞ್ವ ತೆಱದಿಂದಿನ್ನುಂ ಕುರುಕ್ಷೇತ್ರದೊಳ್|| ೬೭ ||
ಪದ್ಯ-೬೭:ಪದವಿಭಾಗ-ಅರ್ಥ:ಮದವದ್ದಂತಿಗಳಂ ಕಱುತ್ತು (ಕೋಪಿಸಿ) ಅಸಗವೊಯಿಲ್ ಪೊಯ್ದ್ ಆಜಿಯೊಳ್ (ಮದವೇರಿದ ಆನೆಗಳನ್ನು ಗುರಿಯಿಟ್ಟು ಅಗಸನು ಒಗೆಯುವ ಹಾಗೆ ಒಗೆದು) ಭೀಮನು ಆರ್ದು ಒದೆದು ಈಡಾಡಿದೊಡೆ (ಆರ್ಭಟಮಾಡಿ ಭೀಮನು ಯುದ್ಧದಲ್ಲಿ ಒದ್ದು ಎಸೆದಾಡಿದರೆ,) ಅತ್ತ ಅಜಾಂಡ ತಟಮಂ ತಾಪನ್ನೆಗಂ ಪಾಱಿ ತಾಱಿದ ಪೇರಾನೆಯೊಡಲ್ಗಳು (ಅತ್ತ ಬ್ರಹ್ಮಾಂಡದ ಮೇರೆಯನ್ನು ತಗಲುವಷ್ಟು ದೂರ ಹಾರಿ ಆ ಒಣಗಿದ ಹಿರಿಯಾನೆಯ ಶರೀರಗಳು) ಅಭ್ರತಳದೊಳ್ ಸಿಲ್ಕಿರ್ದು (ಮೋಡಗಳ ಪದರದ ಮಧ್ಯೆ ಸಿಕ್ಕಿದ್ದು) ಓರೊಂದು ಮಾಣದೆ ಬೀೞ್ತರ್ಪುವು ಬೆಟ್ಟು ಬೀೞ್ವ ತೆಱದಿಂದಿನ್ನುಂ ಕುರುಕ್ಷೇತ್ರದೊಳ್ (ಅಲ್ಲಿ ನಿಲ್ಲದೆ ಬೆಟ್ಟಗಳು ಬೀಳುವ ಹಾಗೆ ಇನ್ನೂ ಕುರುಕ್ಷೇತ್ರದಲ್ಲಿ ಬೀಳುತ್ತಿದ್ದವು.)
ಪದ್ಯ-೬೭:ಅರ್ಥ: ಮದವೇರಿದ ಆನೆಗಳನ್ನು ಗುರಿಯಿಟ್ಟು ಅಗಸನು ಒಗೆಯುವ ಹಾಗೆ ಒಗೆದು ಆರ್ಭಟಮಾಡಿ ಭೀಮನು ಯುದ್ಧದಲ್ಲಿ ಒದ್ದು ಎಸೆದಾಡಿದರೆ, ಅತ್ತ ಬ್ರಹ್ಮಾಂಡದ ಮೇರೆಯನ್ನು ತಗಲುವಷ್ಟು ದೂರ ಹಾರಿ ಆ ಒಣಗಿದ ಹಿರಿಯಾನೆಯ ಶರೀರಗಳು ಮೋಡಗಳ ಪದರದ ಮಧ್ಯೆ ಸಿಕ್ಕಿದ್ದು, ಅಲ್ಲಿ ನಿಲ್ಲದೆ ಬೆಟ್ಟಗಳು ಬೀಳುವ ಹಾಗೆ ಇನ್ನೂ ಕುರುಕ್ಷೇತ್ರದಲ್ಲಿ ಬೀಳುತ್ತಿದ್ದವು.
ಕಂ|| ತೊಡರೆ ತಡಂಗಾಲ್ ಪೊಯ್ದೊಡೆ
ಕೆಡೆದುಂ ತಿವಿದೊಡೆ ಸುರುಳ್ದು ಮೋದಿದೊಡಿರದೆ|
ಲ್ವಡಗಾಗಿ ಮಡಿದು ಬಿೞ್ದುವು
ಗಡಣದೆ ಕರಿಘಟೆಗಳೇಂ ಬಲಸ್ಥನೊ ಭೀಮಂ|| ೬೮ ||
ಪದ್ಯ-೬೮:ಪದವಿಭಾಗ-ಅರ್ಥ:ತೊಡರೆ ತಡಂಗಾಲ್ ಪೊಯ್ದೊಡೆ ಕೆಡೆದುಂ (ಭೀಮನ ಅಡ್ಡಗಾಲಿಗೆ ಸಿಕ್ಕಿಸಿಕೊಂಡು ಒದೆದರೆ ಕೆಳಕ್ಕೆ ಬಿದ್ದು) ತಿವಿದೊಡೆ ಸುರುಳ್ದು (ತಿವಿದರೆ ಸುರುಟಿಕೊಂಡವು) ಮೋದಿದೊಡೆ ಇರದೆ ಎಲ್ವಡಗಾಗಿ ಮಡಿದು ಬಿೞ್ದುವು ಗಡಣದೆ ಕರಿಘಟೆಗಳು (ಗುದ್ದಿದರೆ ತಡವಿಲ್ಲದೆ ಎಲುಬು ಮಾಂಸಗಳಾಗಿ ಬಿದ್ದುಸತ್ತವು ಗುಂಪಾಗಿ) ಏಂ ಬಲಸ್ಥನೊ ಭೀಮಂ (ಭೀಮನು ಎಷ್ಟು ಬಲಶಾಲಿಯೋ)
ಪದ್ಯ-೬೮:ಅರ್ಥ: ಭೀಮನ ಅಡ್ಡಗಾಲಿಗೆ ಸಿಕ್ಕಿಸಿಕೊಂಡು ಒದೆದರೆ ಕೆಳಕ್ಕೆ ಬಿದ್ದು, ತಿವಿದರೆ ಸುರುಟಿಕೊಂಡವು; ಗುದ್ದಿದರೆ ತಡವಿಲ್ಲದೆ ಎಲುಬು ಮಾಂಸಗಳಾಗಿ ಬಿದ್ದುಸತ್ತವು; ಆನೆಗಳ ಸಮೂಹವು ರಾಶಿಯಾಗಿ/ಗುಂಪಾಗಿ ಬಿದ್ದವು. ಭೀಮನು ಎಷ್ಟು ಬಲಶಾಲಿಯೋ!
ವ|| ಅಂತಲ್ಲಿ ಪದಿನಾಲ್ಸಾಸಿರ ಮದದಾನೆಯುಮಂ ಕಳಿಂಗನಾಯಕಂ ಭಾನುದತ್ತಂ ಮೊದಲಾಗೆ ನೂರ್ವರರಸುಮಕ್ಕಳುಮಂ ಕೊಂದೊಡೆ ಕೌರವಬಲಮೆಲ್ಲಮೊಲ್ಲನುಲಿದೋಡಿ ಭಗದತ್ತನಾನೆಯ ಮರೆಯಂ ಪೊಕ್ಕಾಗಳ್-
ವಚನ:ಪದವಿಭಾಗ-ಅರ್ಥ:ಅಂತಲ್ಲಿ ಪದಿನಾಲ್ಸಾಸಿರ ಮದದಾನೆಯುಮಂ ಕಳಿಂಗನಾಯಕಂ ಭಾನುದತ್ತಂ ಮೊದಲಾಗೆ ನೂರ್ವರರಸುಮಕ್ಕಳುಮಂ ಕೊಂದೊಡೆ (ಹದಿನಾಲ್ಕು ಸಾವಿರ ಮದ್ದಾನೆಗಳನ್ನೂ ಕಳಿಂಗನಾಯಕನಾದ ಭಾನುದತ್ತನೇ ಮೊದಲಾದ ನೂರುಮಂದಿ ರಾಜಕುಮಾರರನ್ನೂ ಕೊಂದಾಗ,) ಕೌರವಬಲಮೆಲ್ಲಂ ಒಲ್ಲನೆ ಉಲಿದು ಓಡಿ (ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಓಡಿಹೋಗಿ) ಭಗದತ್ತನಾನೆಯ ಮರೆಯಂ ಪೊಕ್ಕಾಗಳ್ (ಭಗದತ್ತನ ಆನೆಯ ಮರೆಯನ್ನು ಹೊಕ್ಕಿತು)-
ವಚನ:ಅರ್ಥ:ವ|| ಹಾಗೆ ಅಲ್ಲಿ ಹದಿನಾಲ್ಕು ಸಾವಿರ ಮದ್ದಾನೆಗಳನ್ನೂ ಕಳಿಂಗನಾಯಕನಾದ ಭಾನುದತ್ತನೇ ಮೊದಲಾದ ನೂರುಮಂದಿ ರಾಜಕುಮಾರರನ್ನೂ ಕೊಂದನು. ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಓಡಿಹೋಗಿ ಭಗದತ್ತನ ಆನೆಯ ಮರೆಯನ್ನು ಹೊಕ್ಕಿತು.
ಮ|| ಸ್ರ|| ನೆಗೞ್ದೆಂ ದೇವೇಂದ್ರನೈರಾವತದ ಕೆಳೆಯನೆನ್ನೇಱಿದೀಯಾನೆಯುಂ ದಲ್
ದಿಗಿಭಂ ದುರ್ಯೋಧನಂ ನಚ್ಚಿದನೆನಗಿದಿರಂ ಭೀಮನೆೞ್ತಂದನೀಗಳ್|
ಮುಗಿಲಂ ಮುಟ್ಟಿತ್ತು ಸಂದೆನ್ನಳವುಮದಟುಮೆಂದಾರ್ದು ದೋರ್ದರ್ಪಯುಕ್ತಂ
ಭಗದತ್ತಂ ಸುಪ್ರತೀಕದ್ವಿಪಮನುಪಚಿತೋತ್ಸಾಹದಿಂ ತೋಱಿಕೊಟ್ಟಂ|| ೬೯
ಪದ್ಯ-೬೯:ಪದವಿಭಾಗ-ಅರ್ಥ:ನೆಗೞ್ದೆಂ ದೇವೇಂದ್ರನ ಐರಾವತದ ಕೆಳೆಯನು ಎನ್ನೇಱಿದ ಈ (ಯಾ) ಆನೆಯುಂ (ನಾನು ಹತ್ತಿರುವ ಈ ಆನೆಯೂ ಪ್ರಖ್ಯಾತನಾದ ದೇವೇಂದ್ರನ ಐರಾವತದ ಸ್ನೇಹಿತ) ದಲ್ ದಿಗಿಭಂ ದುರ್ಯೋಧನಂ ನಚ್ಚಿದಂ (ನನ್ನನ್ನು ದುರ್ಯೋಧನನು ನಂಬಿಕೊಂಡಿದ್ದಾನೆ) ಎನಗೆ ಇದಿರಂ ಭೀಮನು ಎೞ್ತಂದಂ (ಈಗ ನನಗೆ ಭೀಮನೇ ಪ್ರತಿಭಟಿಸಿ ಬಂದಿದ್ದಾನೆ) ಈಗಳ್ ಮುಗಿಲಂ ಮುಟ್ಟಿತ್ತು ಸಂದು ಎನ್ನ ಅಳಳವುಂ ಅದಟುಂ (ಈಗ ನನ್ನ ಪೌರುಷವೂ ಪರಾಕ್ರಮವೂ ಗಗನವನ್ನು ಮುಟ್ಟಿದೆ) ಎಂದು ಆರ್ದು ದೋರ್ದರ್ಪಯುಕ್ತಂ (ಎಂದು ಆರ್ಭಟಮಾಡಿ ಬಾಹುಬಲದ ಅಹಂಕಾರದಿಂದ ಕೂಡಿದ) ಭಗದತ್ತಂ ಸುಪ್ರತೀಕದ್ವಿಪಮಂ ಅಪಚಿತ ಉತ್ಸಾಹದಿಂ ತೋಱಿಕೊಟ್ಟಂ (ಭಗದತ್ತನು ಕೂಡಿಕೊಂಡಿರುವ ಉತ್ಸಾಹದಿಂದ ಸುಪ್ರತೀಕವೆಂಬ ಆನೆಯನ್ನು ಸೈನ್ಯದ ಮುಂದುಗಡೆ ತೋರಿಸಿ ಛೂಬಿಟ್ಟನು. -ನೂಕಿದನು.)
ಪದ್ಯ-೬೯:ಅರ್ಥ: ನಾನು ಹತ್ತಿರುವ ಈ ಆನೆಯೂ ಪ್ರಖ್ಯಾತನಾದ ದೇವೇಂದ್ರನ ಐರಾವತದ ಸ್ನೇಹಿತ. ಹಾಗೆಯೇ ದಿಗ್ಗಜವೂ ಹೌದು. ನನ್ನನ್ನು ದುರ್ಯೋಧನನು ನಂಬಿಕೊಂಡಿದ್ದಾನೆ. ಈಗ ನನಗೆ ಭೀಮನೇ ಪ್ರತಿಭಟಿಸಿ ಬಂದಿದ್ದಾನೆ. ಈಗ ನನ್ನ ಪೌರುಷವೂ ಪರಾಕ್ರಮವೂ ಗಗನವನ್ನು ಮುಟ್ಟಿದೆ ಎಂದು ಆರ್ಭಟಮಾಡಿ ಬಾಹುಬಲದ ಅಹಂಕಾರದಿಂದ ಕೂಡಿದ ಭಗದತ್ತನು ಕೂಡಿಕೊಂಡಿರುವ ಉತ್ಸಾಹದಿಂದ ಸುಪ್ರತೀಕವೆಂಬ ಆನೆಯನ್ನು ಸೈನ್ಯದ ಮುಂದುಗಡೆ ತೋರಿಸಿ ಛೂಬಿಟ್ಟನು.- ನೂಕಿದನು.
  • ಟಿಪ್ಪಣಿ::ಭಗದತ್ತನು ಭೂದೇವಿಯ ಮಗನಾದ ನರಕಾಸುರನ ಮಗ. ಭೂಮಿಯನ್ನು ಸಮುದ್ರದ ಕೆಳಗೆ ಪಾತಾಳಕ್ಕೆ ಹೊತ್ತುಕೊಂಡು ಹೋಗಿದ್ದ ಹಿರಣ್ಯಾಕ್ಷನನ್ನು ಸಂಹರಿಸಲು ವಿಷ್ಣುವು ವರಾಹ ಅವತಾರವೆತ್ತಿ ರಾಕ್ಷಸನೊಡನೆ ಹೋರಾಡಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಪುನಃ ಸ್ಥಿರವಾಗಿಟ್ಟನು. ಆಗ ಆ ವರಾಹದ ಬೆವರು ಭೂಮಿಯಮೇಲೆ ಬಿದ್ದು ಅದರಿಂದ ನರಕಾಸುರನು ಹುಟ್ಟಿ ಲೋಕಕಂಟಕನಾದನು. ಅವನನ್ನು ಕೃಷ್ಣನು ಭೂದೇವಿಯ ಅಂಶದವಳಾದ ಸತ್ಯಭಾಮೆಯ ಸಹಾಯದಿಂದ ಕೊಂದಿದ್ದನು. ಆ ನರಕಾಸುರನ ಮಗನೇ ಭಗದತ್ತ. ಅವನ ಬಳಿ ಭೂಮಿಯನ್ನು ಹೊತ್ತ ಮಹಾ ದಿಗ್ಗಜಗಳಲ್ಲಿ ಒಂದಾದ ಸುಪ್ರತೀಕವು ಇತ್ತು. ಮತ್ತೂ ಹಿರಣ್ಯಾಕ್ಷನೊಡನೆ ಹೋರಾಡಿ ಭೂಮಿಯನ್ನು ಎತ್ತುವಾಗ ವರಾಹದ ಒಂದು ಕೋರೆಹಲ್ಲು ಮುರಿದಿದ್ದು ಅದು ವೈಷ್ಣಾವಸ್ತ್ರವಾಗಿ ಅದನ್ನು ಭೂಮಿಯು ಪಡೆದಿದ್ದಳು. ಅದನ್ನು ಅವಳು ನರಕಾಸುರನ ಮಗ, ತನ್ನ ಮೊಮ್ಮಗ ಭಗದತ್ತನಿಗೆ ಕೊಟ್ಟಿದ್ದಳು. ಈ ಯುದ್ಧದಲ್ಲಿ ಭಗದತ್ತ ಅದನ್ನು ಪ್ರಯೋಗಿಸಿದಾಗ, ಅದನ್ನು ಕೃಷ್ಣ ಹಿಂದಕ್ಕೆ ಪಡೆದನು.
ಕಂ|| ಮದಕರಿಯ ಪರಿವ ಭರದಿಂ
ದದಿರ್ದೊಡೆ ನೆಲನೊಡ್ಡಿ ನಿಂದ ಚತುರಂಗಮಮೊ|
ರ್ಮೊದಲೆ ನಡುಗಿದುದು ಕೂಡಿದ
ಚದುರಂಗದ ಮಣೆಯನಲ್ಗಿದಂತಪ್ಪಿನೆಗಂ|| ೭೦
ಪದ್ಯ-೭೦:ಪದವಿಭಾಗ-ಅರ್ಥ:ಮದಕರಿಯ ಪರಿವ ಭರದಿಂದ ಅದಿರ್ದೊಡೆ ನೆಲಂ (ಆ ಮದ್ದಾನೆಯು ನಡೆಯುವ ವೇಗದಿಂದ ಭೂಮಿಯು ಅಲುಗಾಡಿದರೆ,) ಒಡ್ಡಿ ನಿಂದ ಚತುರಂಗಮಂ ಒರ್ಮೊದಲೆ (ಒಂದೇಸಲ) ನಡುಗಿದುದು (ಅದರ ಮೇಲೆ ನಿಂತಿರುವ ಚತುರಂಗ ಸೈನ್ಯವೂ ಒಡನೆಯೇ ನಡುಗಿದವು) ಕೂಡಿದ ಚದುರಂಗದ ಮಣೆಯನು ಅಲ್ಗಿದಂ ತಪ್ಪಿನೆಗಂ ( ಕಾಯಿಗಳಿಂದ ಕೂಡಿದ ಚದುರಂಗದ ಮಣೆಯನ್ನು ಅಲುಗಾಡಿಸಿದಂತೆ-<)
ಪದ್ಯ-೦೦:ಅರ್ಥ:ಆ ಮದ್ದಾನೆಯು ನಡೆಯುವ ವೇಗದಿಂದ ಭೂಮಿಯು ಅಲುಗಾಡಿದರೆ, ಅದರ ಮೇಲೆ ನಿಂತಿರುವ ಚತುರಂಗ ಸೈನ್ಯವೂ ಕಾಯಿಗಳಿಂದ ಕೂಡಿದ ಚದುರಂಗದ ಮಣೆಯನ್ನು ಅಲುಗಾಡಿಸಿದಂತೆ ಇದ್ದಕ್ಕಿದ್ದ ಹಾಗೆ ಒಡನೆಯೇ ನಡುಗಿದವು.
ವ|| ಆಗಳಸುರನುಯ್ದ ನೆಲನನಾದಿ ವರಾಹನಱಸಲೆಂದು ಸಕಳ ಜಳಚರಕಳಿತ ಜಳನಿಧಿಗಳಂ ಕಲಂಕುವಂತೆ ಪಾಂಡವ ಬಳ ಜಳನಿಧಿಯನಳಿಕುಳ ಝೇಂಕಾರ ಮುಖರಿತ ವಿಶಾಳ ಕರಟ ತಟಮಾ ದಿಶಾಗಜೇಂದ್ರಂ ಕಲಂಕೆ-
ವಚನ:ಪದವಿಭಾಗ-ಅರ್ಥ:ಆಗಳು ಅಸುರನು ಉಯ್ದ ನೆಲನನು ಆದಿ ವರಾಹನ ಅಱಸಲೆಂದು (ಆಗ ರಾಕ್ಷಸ ಹಿರಣ್ಯಾಕ್ಷನು ಎತ್ತಿಕೊಂಡುಹೋದ ಭೂದೇವಿಯನ್ನು ಆದಿವರಾಹನಾದ ವಿಷ್ಣುವು ಹುಡುಕಬೇಕೆಂದು) ಸಕಳ ಜಳಚರ ಕಳಿತ ಜಳನಿಧಿಗಳಂ ಕಲಂಕುವಂತೆ (ಸಮಸ್ತ ಜಲಚರಗಳಿಂದ ತುಂಬಿದ ಸಮುದ್ರಗಳನ್ನು ಕಲಕಿದಂತೆ) ಪಾಂಡವ ಬಳ ಜಳನಿಧಿಯನು (ಪಾಂಡವ ಸೇನಾಸಮುದ್ರವನ್ನು) ಅಳಿಕುಳ ಝೇಂಕಾರ (ದುಂಬಿಗಳ ಝೇಂಕಾರ) ಮುಖರಿತ ವಿಶಾಳ ಕರಟ ತಟಮ್ (ವಿಶಾಲವಾದ ಕಪೋಲಪ್ರದೇಶವುಳ್ಳ) ಆ ದಿಶಾಗಜೇಂದ್ರಂ ಕಲಂಕೆ (ಆ ದಿಗ್ಗಜವು ಕಲಕಿದಂತೆ- ನೆಲವನ್ನು ಆ ಆನೆ ಅಲುಗಾಡಿಸಿತು.)-
ವಚನ:ಅರ್ಥ: ಆಗ ರಾಕ್ಷಸ ಹಿರಣ್ಯಾಕ್ಷನು ಎತ್ತಿಕೊಂಡುಹೋದ ಭೂದೇವಿಯನ್ನು ಆದಿವರಾಹನಾದ ವಿಷ್ಣುವು ಹುಡುಕಬೇಕೆಂದು ಸಮಸ್ತ ಜಲಚರಗಳಿಂದ ತುಂಬಿದ ಸಮುದ್ರಗಳನ್ನು ಕಲಕಿದಂತೆ ಪಾಂಡವ ಸೇನಾಸಮುದ್ರವನ್ನು ದುಂಬಿಗಳ ಝೇಂಕಾರಶಬ್ದದಿಂದ ಧ್ವನಿಮಾಡಲ್ಪಟ್ಟ ವಿಶಾಲವಾದ ಕಪೋಲಪ್ರದೇಶವುಳ್ಳ ಆ ದಿಗ್ಗಜವು ಕಲಕಿದಂತೆ- ಅಲುಗಾಡಿಸಿತು.
ಚಂ|| ತಳರ್ದುದು ಕರ್ಣತಾಳ ಪವನಾಹತಿಯಂ ಜಳರಾಶಿ ಕೆಯ್ಯ ಬ
ಳ್ವಳಿಕೆಗೆ ದಿಗ್ಗಜಂ ದೆಸೆಯಿನತ್ತ ತೆರಳ್ದುವುಕಾಯ್ಪಿನಿಂ ದಿಶಾ|
ವಳಿವೆರಸಂಬರಂ ಪೊಗೆದು ಪೊತ್ತಿದುದಾದ ಮದಾಂಬುವಿಂ ಜಗಂ
ಜಳಧಿವೊಲಾಯ್ತದಂ ನೆರೆಯೆ ಬಣ್ಣಿಪರಾರ್ ಗಳ ಸುಪ್ರತೀಕಮಂ|| ೭೧ ||71
ಪದ್ಯ-೭೧:ಪದವಿಭಾಗ-ಅರ್ಥ:ತಳರ್ದುದು ಕರ್ಣತಾಳ ಪವನ ಆಹತಿಯಂ ಜಳರಾಶಿ('ಅದು ಕಿವಿಯನ್ನು ಬಿಸುವುದರಿಂದುಂಟಾದ ಗಾಳಿಯ ಹೊಡೆತದಿಂದ ಸಮುದ್ರವು-ತಳರ್ದುದು- ಚಲಿಸಿತು) ಕೆಯ್ಯ ಬಳ್ವಳಿಕೆಗೆ (ಸೊಂಡಿಲಿನ ಬಲವಾದ ಬೀಸುವಿಕೆಗೆ) ದಿಗ್ಗಜಂ ದೆಸೆಯಿನು ಅತ್ತ ತೆರಳ್ದುವು ಕಾಯ್ಪಿನಿಂ (ದಿಗ್ಗಜಗಳು ದಿಕ್ಕುಗಳಿಂದ ಆಚೆಗೆ ಹೋದುವು) ದಿಶಾವಳಿವೆರಸು ಅಂಬರಂ ಪೊಗೆದು ಪೊತ್ತಿದುದು (ಅದರ ಕೋಪದಿಂದ ದಿಕ್ಕುಗಳ ಸಮೂಹದೊಡನೆ ಆಕಾಶವು ಪೊಗೆದು- ಹೊಗೆಯಿಂದ ಕೂಡಿ ಉರಿಯಿತು) ಆದ ಮದಾಂಬುವಿಂ (ಸುರಿದ ಮದೋದಕದಿಂದ) ಜಗಂ ಜಳಧಿವೊಲಾಯ್ತು (ಸುರಿದ ಮದೋದಕದಿಂದ ಭೂಮಂಡಲವು ಸಮುದ್ರದ ಹಾಗಾಯಿತು) ಅದಂ ನೆರೆಯೆ ಬಣ್ಣಿಪರಾರ್ ಗಳ(ಉದ್ದವಾಗಿ ವಿಸ್ತಾರವಾಗಿ?) ಸುಪ್ರತೀಕಮಂ (ಆ ಸುಪ್ರತೀಕವನ್ನು (ಗಳ) ಸಂಪೂರ್ಣವಾಗಿ ವರ್ಣಿಸುವವರು ಯಾರಿದ್ದಾರೆ?)
ಪದ್ಯ-೭೧/ 71:ಅರ್ಥ:ಅದು ಕಿವಿಯನ್ನು ಬಿಸುವುದರಿಂದುಂಟಾದ ಗಾಳಿಯ ಹೊಡೆತದಿಂದ ಸಮುದ್ರವು ಚಲಿಸಿತು. ಸೊಂಡಿಲಿನ ಬಲವಾದ ಬೀಸುವಿಕೆಗೆ ದಿಗ್ಗಜಗಳು ದಿಕ್ಕುಗಳಿಂದ ಆಚೆಗೆ ಹೋದುವು. ಅದರ ಕೋಪದಿಂದ ದಿಕ್ಕುಗಳ ಸಮೂಹದೊಡನೆ ಆಕಾಶವೂ ಹೊಗೆಯಿಂದ ಕೂಡಿ ಉರಿಯಿತು. ಸುರಿದ ಮದೋದಕದಿಂದ ಭೂಮಂಡಲವು ಸಮುದ್ರದ ಹಾಗಾಯಿತು. ಆ ಸುಪ್ರತೀಕವನ್ನು ಸಂಪೂರ್ಣವಾಗಿ ವರ್ಣಿಸುವವರಾರಿದ್ದಾರೆ?
ಚಿಂ|| ಕರ ನಖ ದಂತ ಘಾತದಿನುರುಳ್ವ ಚತುರ್ಬಲದಿಂ ತೆರಳ್ವ ನೆ
ತ್ತರ ಕಡಲಾ ಕಡಲ್ವರೆಗಮೆಯ್ದೆ ಮಹಾಮಕರಂ ಸಮುದ್ರದೊಳ್|
ಪರಿವವೊಲಿಂತಗುರ್ವುವೆರಸಾ ಭಗದತ್ತನ ಕಾಲೊಳಂತದೇಂ
ಪರಿದುದೊ ಸುಪ್ರತೀಕ ಗಜಮಚ್ಚರಿಯಪ್ಪಿನಮಾಜಿರಂಗದೊಳ್|| ೭೨ ||
ಪದ್ಯ-೭೨:ಪದವಿಭಾಗ-ಅರ್ಥ:ಕರ ನಖ ದಂತ ಘಾತದಿಂ ಉರುಳ್ವ ಚತುರ್ಬಲದಿಂ (ಆನೆಯ ಸೊಂಡಿಲು, ಉಗುರು, ದಂತಗಳ ಹೊಡೆತದಿಂದ ಉರುಳಿ ಬೀಳುವ ಚತುರಂಗ ಬಲದಿಂದ) ತೆರಳ್ವ ನೆತ್ತರ ಕಡಲು ಆ ಕಡಲ್ವರೆಗಂ ಎಯ್ದೆ (ಹೊರಡುವ ರಕ್ತಸಮುದ್ರವು ಆ ಸಮುದ್ರದವರೆಗೂ ಬರಲು/ ಹರಿಯಲು ಸಮುದ್ರ ಮಧ್ಯೆ ಓಡುವ) ಮಹಾಮಕರಂ ಸಮುದ್ರದೊಳ್ ಪರಿವವೊಲ್ (ಸಮುದ್ರ ಮಧ್ಯೆ ಓಡುವ ದೊಡ್ಡ ಮೊಸಳೆಯ ಹಾಗೆ) ಅಗುರ್ವುವೆರಸು ಆ ಭಗದತ್ತನ ಕಾಲೊಳು ಅಂತು ಅದೇಂ ಪರಿದುದೊ ಸುಪ್ರತೀಕ ಗಜಂ (ಭೀಕರತೆಯಿಂದ ಕೂಡಿ ಆ ಭಗದತ್ತನು ನಡೆಸುತ್ತಿದ್ದ ಸುಪ್ರತೀಕವೆಂಬ ಆನೆಯು ಯುದ್ಧರಂಗದ ಮಧ್ಯೆ ) ಅಚ್ಚರಿಯಪ್ಪಿನಂ ಆಜಿರಂಗದೊಳ್ (ಆಶ್ಚರ್ಯವಾಗುವ ಹಾಗೆ ನಿರಾಯಾಸವಾಗಿ ಹರಿಯಿತು)
ಪದ್ಯ-೭೨:ಅರ್ಥ: ಸುಪ್ರತೀಕ ಆನೆಯ ಸೊಂಡಿಲು, ಉಗುರು, ದಂತಗಳ ಹೊಡೆತದಿಂದ ಉರುಳಿ ಬೀಳುವ ಚತುರಂಗ ಬಲದಿಂದ ಹೊರಡುವ ರಕ್ತಸಮುದ್ರವು ಆ ಸಮುದ್ರದವರೆಗೂ ಹರಿಯಲು ಸಮುದ್ರ ಮಧ್ಯೆ ಓಡುವ ದೊಡ್ಡ ಮೊಸಳೆಯ ಹಾಗೆ ಭೀಕರತೆಯಿಂದ ಕೂಡಿ ಆ ಭಗದತ್ತನು ನಡೆಸುತ್ತಿದ್ದ ಸುಪ್ರತೀಕವೆಂಬ ಆನೆಯು ಯುದ್ಧರಂಗದ ಮಧ್ಯೆ ಆಶ್ಚರ್ಯವಾಗುವ ಹಾಗೆ ನಿರಾಯಾಸವಾಗಿ ಹರಿಯಿತು!
ವ|| ಅಂತು ಪರಿದ ಬೀದಿಗಳೊಳೆಲ್ಲಂ ನೆತ್ತಂ ತೊಗರೆಳ್ ಪರಿಯೆ ಕೆಂಡದ ತೊರೆಯಂತೆ ಪರಿದ ಸುಪ್ರತೀಕಂ ಕೆಯ್ಯ ಕಾಲ ಕೋಡೇಱಿನೊಳ್ ಬಲಮನೆಲ್ಲಂ ಜವನೆ ಜಿವುಳಿದುೞಿವಂತೆ ತೊೞ್ತುೞಿದುೞಿದು ಪದಿನಾಲ್ಸಾಸಿರ ಮದಾಂಧ ಗಂಧಸಿಂಧುರಂಗಳುಮನೊಂದು ಲಕ್ಕ ರಥಮುಮನರೆದು ಸಣ್ಣಿಸಿದಂತೆ ಮಾಡಿದಾಗಳ್ ಗಜಾಸುರನೊಳಾಸುರಂಬೆರಸು ತಾಗುವಂಧಕಾರಾತಿಯಂತೆ ಭೀಮಸೇನಂ ಬಂದು ಪೊಣರೆ-
ವಚನ:ಪದವಿಭಾಗ-ಅರ್ಥ: ಅಂತು ಪರಿದ (ಓಡಿದ) ಬೀದಿಗಳೊಳು ಎಲ್ಲಂ ನೆತ್ತಂ ತೊಗರೆಳ್ ಪರಿಯೆ (ರಕ್ತನದಿಗಳು ಹರಿಯಲು,) ಕೆಂಡದ ತೊರೆಯಂತೆ ಪರಿದ ಸುಪ್ರತೀಕಂ ಕೆಯ್ಯ ಕಾಲ ಕೋಡ ಏಱಿನೊಳ್ (ಕೆಂಡದ ಪ್ರವಾಹದಂತೆ ಹರಿಯುತ್ತಿರುವ ಸುಪ್ರತೀಕದ ಸೊಂಡಲಿನ, ಕಾಲಿನ, ಕೊಂಬಿನ ಪೆಟ್ಟಿನಿಂದ) ಬಲಮನು ಎಲ್ಲಂ ಜವನೆ ಜಿವುಳಿ (ದು)ತುೞಿವಂತೆ ತೊೞ್ತುೞಿದುೞಿದು (ಯಮನೇ ಚೂರ್ಣ ಮಾಡಿದಂತೆ (ಚಿಗುಳಿಯನ್ನು ತುಳಿದಂತೆ) ಸಂಪೂರ್ಣವಾಗಿ ತುಳಿದು ತುಳಿದು) ಪದಿನಾಲ್ಸಾಸಿರ ಮದಾಂಧ ಗಂಧಸಿಂಧುರಂಗಳುಮನು ಒಂದು ಲಕ್ಕ ರಥಮುಮನು ಅರೆದು ಸಣ್ಣಿಸಿದಂತೆ ಮಾಡಿದಾಗಳ್ (ಹದಿನಾಲ್ಕು ಸಾವಿರ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಗಳನ್ನೂ ಒಂದು ಲಕ್ಷ ರಥವನ್ನೂ ಅರೆದು ಪುಡಿಮಾಡಿ) ಗಜಾಸುರನೊಳು ಆಸುರಂ ಬೆರಸು ತಾಗುವ ಅಂಧಕ ಆರಾತಿಯಂತೆ ಭೀಮಸೇನಂ ಬಂದು ಪೊಣರೆ (ಅದನ್ನು ನೋಡಿದ ಭೀಮನು ಗಜಾಸುರನೆಂಬ ರಾಕ್ಷಸನೊಡನೆ ರಭಸದಿಂದ ಕೂಡಿ ತಗಲುವ ಈಶ್ವರನಂತೆ ಬಂದು ಹೋರಾಡಿದನು-)-
ವಚನ:ಅರ್ಥ:ಹಾಗೆ ಓಡಿದ ಬೀದಿಗಳಲ್ಲೆಲ್ಲ ರಕ್ತನದಿಗಳು ಹರಿಯಲು, ಕೆಂಡದ ಪ್ರವಾಹದಂತೆ ಹರಿಯುತ್ತಿರುವ ಸುಪ್ರತೀಕದ ಸೊಂಡಲಿನ, ಕಾಲಿನ, ಕೊಂಬಿನ ಪೆಟ್ಟಿನಿಂದ ಸೈನ್ಯವೆಲ್ಲವನ್ನು ಯಮನೇ ಚೂರ್ಣ ಮಾಡಿದಂತೆ (ಚಿಗುಳಿಯನ್ನು ತುಳಿದಂತೆ) ಸಂಪೂರ್ಣವಾಗಿ ತುಳಿದು ಹದಿನಾಲ್ಕು ಸಾವಿರ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಗಳನ್ನೂ ಒಂದು ಲಕ್ಷ ರಥವನ್ನೂ ಅರೆದು ಪುಡಿಮಾಡಿತು. ಅದನ್ನು ನೋಡಿದ ಭೀಮನು ಗಜಾಸುರನೆಂಬ ರಾಕ್ಷಸನೊಡನೆ ರಭಸದಿಂದ ಕೂಡಿ ತಗಲುವ ಈಶ್ವರನಂತೆ ಬಂದು ಹೋರಾಡಿದನು-
ಚಂ|| ತೊಲಗಿದು ಸುಪ್ರತೀಕ ಗಜಮಾಂ ಭಗದತ್ತನೆನಿಲ್ಲಿ ನಿನ್ನ ತೋ
ಳ್ವಲದ ಪೊಡರ್ಪು ಸಲ್ಲದೆಲೆ ಸಾಯದೆ ಪೋಗೆನೆ ಕೇಳ್ದು ಭೀಮನಾಂ|
ತೊಲೆಯದಿರುರ್ಕಿನೊಳ್ ನುಡಿವೆಯೀ ಕರಿ ಸೂಕರಿಯಲ್ತೆ ಪತ್ತಿ ಗಂ
ಟಲನೊಡೆಯೊತ್ತಿ ಕೊಂದಪೆನಿದಲ್ತಿದಱಮ್ಮನುಮೆನ್ನನಾಂಪುದೇ|| ೭೩ ||
ಪದ್ಯ-೭೩:ಪದವಿಭಾಗ-ಅರ್ಥ: ತೊಲಗು ಇದು ಸುಪ್ರತೀಕ ಗಜಮ್ ಆಂ ಭಗದತ್ತನು ಎನೆ ಇಲ್ಲಿ ನಿನ್ನ ತೋಳ್ವಲದ ಪೊಡರ್ಪು ಸಲ್ಲದು (ತೊಲಗು ಇದು ಸುಪ್ರತೀಕವೆಂಬ ಆನೆ. ನಾನೇ ಭಗದತ್ತ. ಇಲ್ಲಿ ನಿನ್ನ ತೋಳಿನ ಶಕ್ತಿಯ ಹಿರಿಮೆಯು ಸಲ್ಲುವುದಿಲ್ಲ.) ಎಲೆ ಸಾಯದೆ ಪೋಗು ಎನೆ (ಎಲವೋ ಸಾಯದೆ ಹೋಗು ಎನ್ನಲು,) ಕೇಳ್ದು ಭೀಮನು ಆಂತು ಒಲೆಯದಿರ್ ಉರ್ಕಿನೊಳ್ (ಅದನ್ನು ಕೇಳಿ ಭೀಮನು (ಎಲವೋ) ನಾನು ಭೀಮ; ಅಹಂಕಾರದಿಂದ ತೂಗಾಡಬೇಡ) ನುಡಿವೆಯ ಈ ಕರಿ ಸೂಕರಿಯಲ್ತೆ ಪತ್ತಿ ಗಂಟಲನು ಒಡೆಯೊತ್ತಿ ಕೊಂದಪೆನು (ಈ ಆನೆಯು ನನಗೆ ಹಂದಿಗೆ ಸಮಾನ. ಇದರ ಮೇಲೆ ಹತ್ತಿ ಇದರ ಗಂಟಲನ್ನು ಅಮುಕಿ ಕೊಲ್ಲುತ್ತೇನೆ.) ಇದಲ್ತು ಇದಱ ಅಮ್ಮನುಮ್ ಎನ್ನನು ಆಂಪುದೇ (ಇದಲ್ಲ ಇದರಪ್ಪನೂ ನನ್ನನ್ನು ಪ್ರತಿಭಟಿಸಬಲ್ಲುದೇ? )
ಪದ್ಯ-೭೩:ಅರ್ಥ:(ಭಗದತ್ತನು ಭೀಮನನ್ನು ಕುರಿತು) ತೊಲಗು ಇದು ಸುಪ್ರತೀಕವೆಂಬ ಆನೆ. ನಾನೇ ಭಗದತ್ತ. ಇಲ್ಲಿ ನಿನ್ನ ತೋಳಿನ ಶಕ್ತಿಯ ಹಿರಿಮೆಯು ಸಲ್ಲುವುದಿಲ್ಲ. ಎಲವೋ ಸಾಯದೆ ಹೋಗು ಎನ್ನಲು, ಅದನ್ನು ಕೇಳಿ ಭೀಮನು (ಎಲವೋ) ನಾನು ಭೀಮ; ಅಹಂಕಾರದಿಂದ ತೂಗಾಡಬೇಡ. ಗರ್ವದಿಂದ ಅಹಂಕಾರದಿಂದ ಮಾತನಾಡುತ್ತಿದ್ದೀಯೆ. ಈ ಆನೆಯು ನನಗೆ ಹಂದಿಗೆ ಸಮಾನ. ಇದರ ಮೇಲೆ ಹತ್ತಿ ಇದರ ಗಂಟಲನ್ನು ಅಮುಕಿ ಕೊಲ್ಲುತ್ತೇನೆ. ಇದಲ್ಲ ಇದರಪ್ಪನೂ ನನ್ನನ್ನು ಪ್ರತಿಭಟಿಸಬಲ್ಲುದೇ?
ವ|| ಎಂದು ನಾರಾಚಂಗಳಿಂ ತೋಡುಂ ಬೀಡುಂ ಕಾಣಲಾಗದಂತು ಸುಪ್ರತೀಕ ಕರಿಯೆಂಬ ಗಿರಿಯ ಮೇಲೆ ಭೀಮನೆಂಬ ಕಾಲಮೇಘಂ ಸರಲ ಸರಿಯಂ ಸುರಿಯೆ-
ವಚನ:ಪದವಿಭಾಗ-ಅರ್ಥ:ಎಂದು ನಾರಾಚಂಗಳಿಂ ತೋಡುಂ ಬೀಡುಂ ಕಾಣಲಾಗದಂತು (ಎಂದು ಬಾಣಗಳನ್ನು ತೊಡುವುದೂ ಬಿಡುವುದೂ ಕಾಣದಂತೆ) ಸುಪ್ರತೀಕ ಕರಿಯೆಂಬ ಗಿರಿಯ ಮೇಲೆ ಭೀಮನೆಂಬ ಕಾಲಮೇಘಂ ಸರಲ ಸರಿಯಂ ಸುರಿಯೆ (ಸುಪ್ರತೀಕಗಜವೆಂಬ ಬೆಟ್ಟದ ಮೇಲೆ ಭೀಮನೆಂಬ ಪ್ರಳಯಕಾಲದ ಮೋಡವು ಬಾಣದ ಮಳೆಯನ್ನು ಸುರಿಸಯಲು-)-
ವಚನ:ಅರ್ಥ:ಎಂದು ಬಾಣಗಳನ್ನು ತೊಡುವುದೂ ಬಿಡುವುದೂ ಕಾಣದಂತೆ ಸುಪ್ರತೀಕಗಜವೆಂಬ ಬೆಟ್ಟದ ಮೇಲೆ ಭೀಮನೆಂಬ ಪ್ರಳಯಕಾಲದ ಮೋಡವು ಬಾಣದ ಮಳೆಯನ್ನು ಸುರಿಸಿ-.
ಚಂ|| ಸಿಡಿಲೆಱಪಂದದಿಂದೆಱಗಿ ದಿಕ್ಕರಿ ತನ್ನ ವರೂಥಮಂ ಪಡ
ಲ್ವಡಿಸೆ ಮರುತ್ಸುತಂ ಮುಳಿದು ಮಚ್ಚರದಿಂ ಗಜೆಗೊಂಡು ಸುತ್ತುಗೊಂ||
ಡಡಿಗಿಡೆ ನುರ್ಗಿ ಪೊಯ್ದು ಪೆಱಪಿಂಗುವುದುಂ ಕರಿ ನೊಂದು ಕೋಪದಿಂ
ಪಿಡಿದೆಱಗಿತ್ತು ಭೀಮನನಗುರ್ವಿಸಿ ಪಾಂಡವ ಸೈನ್ಯಮಳ್ಕುಱಲ್|| ೭೪ ||
ಪದ್ಯ-೭೪:ಪದವಿಭಾಗ-ಅರ್ಥ:ಸಿಡಿಲು ಎಱಪಂದದಿಂದೆ ಎಱಗಿ ದಿಕ್ಕರಿ ತನ್ನ ವರೂಥಮಂ ಪಡಲ್ವಡಿಸೆ (ದಿಗ್ಗಜವಾದ ಸುಪ್ರತೀಕವು ಸಿಡಿಲೆರಗುವ ವೇಗದಿಂದ ಎರಗಿ ತನ್ನ ತೇರಿನ್ನು ತಲೆಕೆಳಗುಮಾಡಲು) ಮರುತ್ಸುತಂ ಮುಳಿದು ಮಚ್ಚರದಿಂ ಗಜೆಗೊಂಡು (ಭೀಮನು ಕೋಪಿಸಿಕೊಂಡು ಮತ್ಸರದಿಂದ ಗದೆಯನ್ನು ತೆಗೆದುಕೊಂಡು) ಸುತ್ತುಗೊಂಡು ಅಡಿಗಿಡೆ (ಸುತ್ತಲೂ ಬಳಸಿ ಅದರ ಹೆಜ್ಜೆ ಕೆಡಲು .) ನುರ್ಗಿ ಪೊಯ್ದು ಪೆಱಪಿಂಗುವುದುಂ (ನುಗ್ಗಿ ಹೊಡೆದು ಹಿಂದಕ್ಕೆ ಹೋಗಲು,) ಕರಿ ನೊಂದು ಕದಿಂಪಿಡಿದ ಎಱಗಿತ್ತು ಭೀಮನನು ಅಗುರ್ವಿಸಿ ಪಾಂಡವ ಸೈನ್ಯಮ್ ಅಳ್ಕುಱಲ್(ಆನೆಯು ನೊಂದು ಕೋಪದಿಂದ ಭೀಮನನ್ನು ಹೆದರಿಸಿ ಪಾಂಡವಸೈನ್ಯವು ಭಯಪಡುವ ಹಾಗೆ ಅವನ ಮೇಲೆ ಬಿದ್ದಿತು)
ಪದ್ಯ-೭೪:ಅರ್ಥ: ದಿಗ್ಗಜವಾದ ಸುಪ್ರತೀಕವು ಸಿಡಿಲೆರಗುವ ವೇಗದಿಂದ ಎರಗಿ ತನ್ನ ತೇರಿನ್ನು ತಲೆಕೆಳಗುಮಾಡಲು ಭೀಮನು ಕೋಪಿಸಿಕೊಂಡು ಮತ್ಸರದಿಂದ ಗದೆಯನ್ನು ತೆಗೆದುಕೊಂಡು ಸುತ್ತಲೂ ಬಳಸಿ ಅದರ ಹೆಜ್ಜೆ ಕೆಡಲು ನುಗ್ಗಿ ಹೊಡೆದು ಹಿಂದಕ್ಕೆ ಹೋಗಲು, ಆನೆಯು ನೊಂದು ಕೋಪದಿಂದ ಭೀಮನನ್ನು ಹೆದರಿಸಿ ಪಾಂಡವಸೈನ್ಯವು ಭಯಪಡುವ ಹಾಗೆ ಅವನ ಮೇಲೆ ಬಿದ್ದಿತು.
ವ|| ಅಂತೆಱಗಿದೊಡೆ ಕೋಡಕೆಯ್ಯ ಕಾಲೆಡೆಗಳೊಳ್ ಬಿಣ್ಪುಮಂ ಪೆಣೆವಂದದಿಂದೇರ್ದು ಡೊಕ್ಕರಂಗೊಂಡು ಕುರುಕ್ಷೇತ್ರದಿಂದತ್ತ ಪನ್ನೆರಡು ಯೋಜನಂಬರಮೊತ್ತುವುದುಂ-
ವಚನ:ಪದವಿಭಾಗ-ಅರ್ಥ:ಅಂತು ಎಱಗಿದೊಡೆ ಕೋಡ ಕೆಯ್ಯ ಕಾಲೆಡೆಗಳೊಳ್ ಬಿಣ್ಪುಮಂ ಪೆಣೆವಂದದಿಂದ ಏರ್ದು (ಭೀಮನು ಆ ಆನೆಯ ಕೊಂಬು, ಸೊಂಡಿಲು ಕಾಲಿನ ಮಧ್ಯದಲ್ಲಿ ಭಾರವನ್ನು ಹೊರಳಿಸುವ ರೀತಿಯಿಂದ ಹತ್ತಿ) ಡೊಕ್ಕರಂಗೊಂಡು ಕುರುಕ್ಷೇತ್ರದಿಂದ ಅತ್ತ ಪನ್ನೆರಡು ಯೋಜನಂಬರಮ್ ಒತ್ತುವುದುಂ (ಡೊಕ್ಕರವೆಂಬ ಪಟ್ಟಿನಿಂದ ಆನೆಯನ್ನು ಕುರುಕ್ಷೇತ್ರದಿಂದ ಆ ಕಡೆಗೆ ಹನ್ನೆರಡುಯೋಜನದವರೆಗೆ ನೂಕಿದನು. )-
ವಚನ:ಅರ್ಥ:ಭೀಮನು ಆ ಆನೆಯ ಕೊಂಬು, ಸೊಂಡಿಲು ಕಾಲಿನ ಮಧ್ಯದಲ್ಲಿ ಭಾರವನ್ನು ಹೊರಳಿಸುವ ರೀತಿಯಿಂದ ಹತ್ತಿ ಡೊಕ್ಕರವೆಂಬ ಪಟ್ಟಿನಿಂದ ಆನೆಯನ್ನು ಕುರುಕ್ಷೇತ್ರದಿಂದ ಆ ಕಡೆಗೆ ಹನ್ನೆರಡುಯೋಜನದವರೆಗೆ ನೂಕಿದನು.
ಕಂ|| ಕರಿಯುಂ ಕುರುಭೂಮಿಯ ನಡು
ವರೆಗಂ ಪವನಜನನೊತ್ತೆ ತೋಳ್ವಲಮಾಗಳ್|
ಸರಿ ಸರಿಯಾದುದು ತದ್ದಿ
ಕ್ಕರಿಗಂ ಬೀಮಂಗಮುಗ್ರ ಸಂಗರ ಧರೆಯೊಳ್|| ೭೫ ||
ಪದ್ಯ-೭೫:ಪದವಿಭಾಗ-ಅರ್ಥ:ಕರಿಯುಂ ಕುರುಭೂಮಿಯ ನಡುವರೆಗಂ ಪವನಜನನು ಒತ್ತೆ (ಸುಪ್ರತೀಕ ಆನೆಯು ಭೀಮನನ್ನು ಕುರುಭೂಮಿಯ ಮಧ್ಯದವರೆಗೆ ನೂಕಲು) ತೋಳ್ವಲಮಾಗಳ್ ಸರಿ ಸರಿಯಾದುದು ತದ್ ದಿಕ್ ಕರಿಗಂ ಬೀಮಂಗಮುಗ್ರ ಸಂಗರ ಧರೆಯೊಳ್
ಪದ್ಯ-೭೫:ಅರ್ಥ: ಸುಪ್ರತೀಕ ಆನೆಯು ಭೀಮನನ್ನು ಕುರುಭೂಮಿಯ ಮಧ್ಯದವರೆಗೆ ನೂಕಲು, ಆಗ ಆ ಭಯಂಕರವಾದ ಯುದ್ಧರಂಗದಲ್ಲಿ ಬಾಹುಬಲ ಭೀಮನಿಗೂ ಆ ದಿಗ್ಗಜಕ್ಕೂ ಸರಿಸಮಾನವಾಯಿತು.
ವ|| ಅನ್ನೆಗಮಿತ್ತ ಸಂಸಪ್ತಕಬಲಮೆಲ್ಲಮನಳರೆ ಪೆಳರೆ ಕಿವುೞೆದುೞಿದು ಕೊಲ್ವ ವಿಕ್ರಾಂತತುಂಗಂ ಚಕ್ರಿಯನಿಂತೆಂದಂ-
ವಚನ:ಪದವಿಭಾಗ-ಅರ್ಥ: ಅನ್ನೆಗಂ ಇತ್ತ ಸಂಸಪ್ತಕಬಲಮೆಲ್ಲಮನು (ಅಷ್ಟರಲ್ಲಿ ಸಂಸಪ್ತಕಂ ಸೈನ್ಯವನ್ನೆಲ್ಲವನ್ನೂ) ಅಳರೆ ಪೆಳರೆ ಕಿವುೞೆ ದುೞಿದು ಕೊಲ್ವ (ಹೆದರಿ ಬೆದರುವಂತೆ ಅಜ್ಜುಗುಜ್ಜಿ ಯಾಗುವ ಹಾಗೆ ತುಳಿದು ಕೊಲ್ಲುವ) ವಿಕ್ರಾಂತತುಂಗಂ ಚಕ್ರಿಯನು ಇಂತೆಂದಂ (ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು. )-
ವಚನ:ಅರ್ಥ: ಅಷ್ಟರಲ್ಲಿ ಸಂಸಪ್ತಕಂ ಸೈನ್ಯವನ್ನೆಲ್ಲವನ್ನೂ ಹೆದರಿ ಬೆದರುವಂತೆ ಅಜ್ಜುಗುಜ್ಜಿ ಯಾಗುವ ಹಾಗೆ ತುಳಿದು ಕೊಲ್ಲುವ ಮಹಾಪರಾಕ್ರಮಿಯಾದ ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು.
ಚಂ|| ಪರಿದುದು ಸುಪ್ರತೀಕ ಗಜಮೇಱಿದವಂ ಭಗದತ್ತನಾಮದ
ದ್ವಿರದಮನಾಂಕೆಗೊಂಡು ಪೆಣೆವಂ ಪವನಾತ್ಮಜನೀಗಳಾಹವಂ|
ಪಿರಿದುದಲತ್ತ ಪೋಪಮೆನೆ ತದ್ರಥಮಂ ಹರಿ ವಾಯುವೇಗದಿಂ
ಪರಿಯಿಸೆ ತಾಗಿದಂ ಹರಿಗನಂಕದ ಪೊಂಕದ ಸುಪ್ರತೀಕಮಂ|| ೭೬ ||
ಪದ್ಯ-೭೬:ಪದವಿಭಾಗ-ಅರ್ಥ:ಪರಿದುದು ಸುಪ್ರತೀಕ ಗಜಂ ಏಱಿದವಂ ಭಗದತ್ತನ್ (ಸುಪ್ರತೀಕವೆಂಬ ಆನೆಯು ಓಡಿಬರುತ್ತಿದೆ. ಅದನ್ನು ಹತ್ತಿ ಬರುತ್ತಿರುವವನು ಭಗದತ್ತ;) ಆ ಮದದ್ವಿರದಮನು ಆಂಕೆಗೊಂಡು ಪೆಣೆವಂ ಪವನಾತ್ಮಜನು (ಆ ಮದ್ದಾನೆಯನ್ನು ತಡೆದು ಹೆಣೆದುಕೊಂಡಿರುವವನು ಭೀಮ.) ಈಗಳು ಆಹವಂ ಪಿರಿದು ದಲ್ ಅತ್ತ ಪೋಪಂ ಎನೆ (ಈಗ ಆ ಕಡೆ ಯುದ್ಧವು ಹಿರಿದಾಗಿದೆ. ಆ ಕಡೆ ಹೋಗೋಣ’ ಎಂದನು.) ತದ್ ರಥಮಂ ಹರಿ ವಾಯುವೇಗದಿಂ ಪರಿಯಿಸೆ (ಆ ರಥವನ್ನು ಕೃಷ್ಣನು ವಾಯುವೇಗದಿಂದ ಆ ಕಡೆಗೆ ಓಡಿಸಲು) ತಾಗಿದಂ ಹರಿಗಂ ಅಂಕದ ಪೊಂಕದ ಸುಪ್ರತೀಕಮಂ (ಅರ್ಜುನನು ಖ್ಯಾತವೂ ಸೊಕ್ಕಿದ ಸುಪ್ರತೀಕವೆಂಬ ಆನೆಯನ್ನು ಬಂದು ಎದುರಿಸಿದನು.)
ಪದ್ಯ-೭೬:ಅರ್ಥ: ಸುಪ್ರತೀಕವೆಂಬ ಆನೆಯು ಓಡಿಬರುತ್ತಿದೆ. ಅದನ್ನು ಹತ್ತಿ ಬರುತ್ತಿರುವವನು ಭಗದತ್ತ; ಆ ಮದ್ದಾನೆಯನ್ನು ತಡೆದು ಹೆಣೆದುಕೊಂಡಿರುವವನು ಭೀಮ. ಈಗ ಆ ಕಡೆ ಯುದ್ಧವು ಹಿರಿದಾಗಿದೆ. ಆ ಕಡೆ ಹೋಗೋಣ’ ಎಂದನು. ಆ ರಥವನ್ನು ಕೃಷ್ಣನು ವಾಯುವೇಗದಿಂದ ಆ ಕಡೆಗೆ ಓಡಿಸಲು, ಅರ್ಜುನನು ಖ್ಯಾತವೂ ಸೊಕ್ಕಿದ ಸುಪ್ರತೀಕವೆಂಬ ಆನೆಯನ್ನು ಬಂದು ಎದುರಿಸಿದನು.
ವ|| ಅಂತು ತಾಗಿ ಮೃಗರಾಜ ನಖರ ಮಾರ್ಗಣಂಗಳೊಳಂ ಕೂರ್ಮನಖಾಸ್ತ್ರಂಗಳೊಳ ಮಾನೆಯುಮಂ ಭಗದತ್ತನುಮಂ ಪೂೞ್ದೊಡೆ ಭಗದತ್ತಂ ಮುಳಿದು ಭೂದತ್ತಮಪ್ಪ ದಿವ್ಯಾಂಕುಶಮಂ ಕೊಂಡು-
ವಚನ:ಪದವಿಭಾಗ-ಅರ್ಥ:ಅಂತು ತಾಗಿ ಮೃಗರಾಜ ನಖರ ಮಾರ್ಗಣಂಗಳೊಳಂ (ಹಾಗೆ ಎದುರಿಸಿ ಸಿಂಹದ ಉಗುರಿನಂತಿರುವ ಬಾಣಗಳಲ್ಲಿಯೂ ಆಮೆಯ ಉಗುರಿನಂತಿರುವ ಬಾಣಗಳಿಂದ) ಕೂರ್ಮನಖಾಸ್ತ್ರಂಗಳೊಳಂ ಆನೆಯುಮಂ ಭಗದತ್ತನುಮಂ ಪೂೞ್ದೊಡೆ (ಆಮೆಯ ಉಗುರಿನಂತಿರುವ ಅಸ್ತ್ರಗಳಿಂದ ಆನೆಯನ್ನೂ ಭಗದತ್ತನನ್ನೂ ಹೂಳಿದಾಗ), ಭಗದತ್ತಂ ಮುಳಿದು ಭೂದತ್ತಮಪ್ಪ ದಿವ್ಯಾಂಕುಶಮಂ ಕೊಂಡು (ಭೂದೇವಿಯಿಂದ ಕೊಡಲ್ಪಟ್ಟ ದಿವ್ಯಾಂಕುಶವನ್ನು ತೆಗೆದುಕೊಂಡು)-
ವಚನ:ಅರ್ಥ:ಹಾಗೆ ಎದುರಿಸಿ ಸಿಂಹದ ಉಗುರಿನಂತಿರುವ ಬಾಣಗಳಿಂದ, ಆಮೆಯ ಉಗುರಿನಂತಿರುವ ಅಸ್ತ್ರಗಳಿಂದ ಆನೆಯನ್ನೂ ಭಗದತ್ತನನ್ನೂ ಹೂಳಿದಾಗ, ಭಗದತ್ತನು ಕೋಪಿಸಿಕೊಂಡು ಭೂದೇವಿಯಿಂದ ಕೊಡಲ್ಪಟ್ಟ ದಿವ್ಯಾಂಕುಶವನ್ನು ತೆಗೆದುಕೊಂಡು-
ಕಂ|| ಇಡುವುದುಮದು ವಿಲಯಾಗ್ನಿಯ
ಕಿಡಿಗಳನುಗುೞುತ್ತುಮೆಯ್ದೆವರ್ಪುದುಮಿದಿರಂ|
ನಡೆದಜರನುರದಿನಾಂತೊಡೆ
ತುಡುಗೆವೊಲೆಸೆದಿರ್ದುದಂಕುಶಂ ಕಂಧರದೊಳ್|| ೭೭ ||
ಪದ್ಯ-೦೦:ಪದವಿಭಾಗ-ಅರ್ಥ: ಇಡುವುದುಂ, ಅದು ವಿಲಯಾಗ್ನಿಯಕಿಡಿಗಳನು ಉಗುೞುತ್ತುಂ ಎಯ್ದೆವರ್ಪುದುಂ (ಎಸೆಯಲು ಅದು ಪ್ರಳಯಾಗ್ನಿಯ ಕಿಡಿಯನ್ನು ಉಗುಳುತ್ತ ಸಮೀಪಕ್ಕೆ ಬರಲು) ಇದಿರಂ ನಡೆದು ಅಜರಂ ಉರದಿಂ ಆಂತೊಡೆ (ಕೃಷ್ಣನು ಎದುರಾಗಿ ಹೋಗಿ ಎದೆಯಿಂದ ಅದನ್ನು ಎದುರಿಸಿದಾಗ,) ತುಡುಗೆವೊಲ್ (ಆಭರಣದಂತೆ) ಎಸೆದಿರ್ದುದು ಅಂಕುಶಂ ಕಂಧರದೊಳ್ (ಆ ಅಂಕುಶವು ಅವನ ಕತ್ತಿನಲ್ಲಿ ಆಭರಣದ ಹಾಗೆ ಶೋಭಿಸಿತು. )
ಪದ್ಯ-೦೦:ಅರ್ಥ: ಆ ಅಂಕುಶವನ್ನು ಬೀಸಿ ಎಸೆಯಲು ಅದು ಪ್ರಳಯಾಗ್ನಿಯ ಕಿಡಿಯನ್ನು ಉಗುಳುತ್ತ ಸಮೀಪಕ್ಕೆ ಬರಲು, ಕೃಷ್ಣನು ಎದುರಾಗಿ ಹೋಗಿ ಎದೆಯಿಂದ ಅದನ್ನು ಎದುರಿಸಿದಾಗ, ಆ ಅಂಕುಶವು ಅವನ ಕತ್ತಿನಲ್ಲಿ ಆಭರಣದ ಹಾಗೆ ಶೋಭಿಸಿತು.
ವ|| ಆಗಳ್ ವಿಕ್ರಾಂತತುಂಗಂ ಚೋದ್ಯಂಬಟ್ಟಿದೇನೆಂದು ಬೆಸಗೊಳೆ-
ವಚನ:ಪದವಿಭಾಗ-ಅರ್ಥ:ಆಗಳ್ ವಿಕ್ರಾಂತತುಂಗಂ (ಅರ್ಜುನನು) ಚೋದ್ಯಂಬಟ್ಟು ಇದೇನೆಂದು ಬೆಸಗೊಳೆ-
ವಚನ:ಅರ್ಥ:ವ|| ಆಗ ವಿಕ್ರಾಂತತುಂಗನಾದ ಅರ್ಜುನನು ಆಶ್ವರ್ಯಪಟ್ಟು ಇದೇನೆಂದು ಕೇಳಿದಾಗ-
ಚುಂ|| ಇದು ಪೆಱತಲ್ತು ಭೂತಲಮನಾಂ ತರಲಾದಿ ವರಾಹನಾದೆನಂ
ದದಱ ವಿಷಾಣಮಂ ಬೞಿಯಮಾ ವಸುಧಾಂಗನೆಗಿತ್ತೆನೀತನಾ|
ಸುದತಿಯ ಪೌತ್ರನಾಕೆ ಕುಡೆ ಬಂದುದಿವಂಗೆನಗಲ್ಲದಾನಲಾ
ಗದುದಱಿನಾಂತೆನಿಂ ತಱಿವುದೀ ಕರಿ ಕಂಧರಮಂ ಗುಣಾರ್ಣವಾ|| ೭೮ ||
ಪದ್ಯ-೭೮:ಪದವಿಭಾಗ-ಅರ್ಥ:ಇದು ಪೆಱತಲ್ತು (ಇದು ಬೇರೆಯಲ್ಲ) ಭೂತಲಮನು ಆಂ ತರಲು ಆದಿ ವರಾಹನಾದೆನ್ (ಭೂಮಂಡಲವನ್ನು ತರಲು ನಾನು ಆದಿವರಾಹನಾದೆನು.)ಅಂದು ಅದಱ ವಿಷಾಣಮಂ (ಅಂದು ಅದರ ಕೋರೆಹಲ್ಲನ್ನು) ಬೞಿಯಂ ಆ ವಸುಧಾಂಗನೆಗೆ ಇತ್ತೆನು (ಬಳಿಕ ನಾನು ಭೂದೇವಿಗೆ ಕೊಟ್ಟೆನು). ಈತನು ಆ ಸುದತಿಯ ಪೌತ್ರನು (ಈತನು ಆ ಭೂದೇವಿಯ ಮೊಮ್ಮಗ) ಆಕೆ ಕುಡೆ ಬಂದುದು ಇವಂಗೆ (ಅವಳು ಕೊಡಲು ಇವನಿಗೆ ಬಂದಿತು) ಎನಗಲ್ಲದೆ ಆನಲು ಆಗದು ಅದಱಿಂ ಆಂತೆನು (ನಾನಲ್ಲದೆ ಮತ್ತಾರೂ ಇದನ್ನು ಎದುರಿಸಲಾಗದುದರಿಂದ ನಾನು ಎದುರಿಸಿದೆನು) ಇಂ ತಱಿವುದೀ ಕರಿ ಕಂಧರಮಂ ಗುಣಾರ್ಣವಾ ( ಇನ್ನು ಈ ಆನೆಯ ಕತ್ತನ್ನು ಕತ್ತರಿಸು ಎಂದನು.)
ಪದ್ಯ-೭೮:ಅರ್ಥ: ಇದು ಬೇರೆಯಲ್ಲ; ಭೂಮಂಡಲವನ್ನು ತರಲು ನಾನು ಆದಿವರಾಹನಾದೆನು. ಅಂದು ಅದರ ಕೋರೆಹಲ್ಲನ್ನು ಭೂದೇವಿಯನ್ನು ಕಾಪಾಡಿದ ಬಳಿಕ ನಾನು ಭೂದೇವಿಗೆ ಕೊಟ್ಟೆನು. ಈತನು ಆ ಭೂದೇವಿಯ ಮೊಮ್ಮಗ, ಅವಳು ಕೊಡಲು ಇವನಿಗೆ ಬಂದಿತು. ನಾನಲ್ಲದೆ ಮತ್ತಾರೂ ಇದನ್ನು ಎದುರಿಸಲಾಗದುದರಿಂದ ನಾನು ಎದುರಿಸಿದೆನು. ಅರ್ಜುನಾ, ಇನ್ನು ಈ ಆನೆಯ ಕತ್ತನ್ನು ಕತ್ತರಿಸು ಎಂದನು.
ಉ|| ಎಂಬುದುಮೊಂದೆ ದಿವ್ಯಶರದಿಂ ಶಿರಮಂ ಪಱಿಯೆಚ್ಚೊಡಾತನೊ
ತ್ತಂಬದಿನಾಂತೊಡಾಂ ಬಱಿದೆ ತಪ್ಪಿದೆನೆಂದು ಕಿರೀಟಿ ತನ್ನ ಬಿ|
ಲ್ಲಂ ಬಿಸುಟಿರ್ದೊಡಚ್ಯುತನಿದೇತರಿನಾಕುಲಮಿರ್ದೆ ನೋಡಿದೆಂ
ತೆಂಬುದುಮೆಚ್ಚನಂತೆರಡು ಕೆಯ್ಗಳುಮಂ ಮುಳಿಸಿಂ ಗುಣಾರ್ಣವಂ|| ೭೯ ||
ಪದ್ಯ-೭೯:ಪದವಿಭಾಗ-ಅರ್ಥ:ಎಂಬುದುಂ ಒಂದೆ ದಿವ್ಯಶರದಿಂ ಶಿರಮಂ ಪಱಿಯೆಚ್ಚೊಡೆ (ಹೇಳಲು. ಒಂದೆ ದಿವ್ಯಾಸ್ತ್ರದಿಂದ ಆನೆಯ ತಲೆಯನ್ನು ಹರಿದುಹೋಗುವ ಹಾಗೆ ಹೊಡೆದಾಗ) ಆತನು ಒತ್ತಂಬದಿಂ ಆಂತೊಡೆ (ಆ ಭಗದತ್ತನು ಅದನ್ನು ಬಲಿಷ್ಠವಾಗಿ ಎದುರಿಸಿದಾಗ) ಆಂ ಬಱಿದೆ ತಪ್ಪಿದೆನೆಂದು (ಅರ್ಜುನನು ನಾನು ವ್ಯರ್ಥವಾಗಿ- ಹೊಡೆದು ತಪ್ಪುಮಾಡಿದೆ ಎಂದು) ಕಿರೀಟಿ ತನ್ನ ಬಿಲ್ಲಂ ಬಿಸುಟಿರ್ದೊಡೆ (ಎಂದು ಬಿಲ್ಲನ್ನು ಬಿಸುಟಿರಲು) ಅಚ್ಯುತನು ಇದೇತರಿಂ ಆಕುಲಮಿರ್ದೆ (ಕೃಷ್ಣನು ಇದೇಕೆ ವ್ಯಾಕುಲನಾಗಿದ್ದೀಯೆ?) ನೋಡು ಇದು ಎಂತು ಎಂಬುದುಂ ಎಚ್ಚನು ಅಂತೆ ಎರಡು ಕೆಯ್ಗಳುಮಂ ಮುಳಿಸಿಂ ಗುಣಾರ್ಣವಂ ( ಅರ್ಜುನನು ಅದೇರೀತಿ ಕೋಪದಿಂದ ಭಗದತ್ತನ ಎರಡು ಕೈಗಳನ್ನು ಹೊಡೆದನು)
ಪದ್ಯ-೭೯:ಅರ್ಥ:ಕೃಷ್ಣನು ಹಾಗೆ ಹೇಳಲು. ಒಂದೆ ದಿವ್ಯಾಸ್ತ್ರದಿಂದ ಆನೆಯ ತಲೆಯನ್ನು ಹರಿದುಹೋಗುವ ಹಾಗೆ ಹೊಡೆದನು. ಆ ಭಗದತ್ತನು ಅದನ್ನು ಬಲಿಷ್ಠವಾಗಿ ಎದುರಿಸಿದಾಗ, ಅರ್ಜುನನು ನಾನು ವ್ಯರ್ಥವಾಗಿ ಪ್ರಯೋಗಮಾಡಿದೆ (ಆನೆಯ ತಲೆಯನ್ನೂ ಭಗದತ್ತನ ತಲೆಯನ್ನೂ ಒಟ್ಟಿಗೆ ಹೊಡೆಯಬೇಕಾಗಿದ್ದಿತು) ಎಂದು ಬಿಲ್ಲನ್ನು ಬಿಸುಟಿರಲು ಕೃಷ್ಣನು ಇದೇಕೆ ವ್ಯಾಕುಲನಾಗಿದ್ದೀಯೆ? ‘ನೋಡು ಇದು ಹೀಗೆ’ ಎಂದು ಸನ್ನೆಮಾಡಿ ತೋರಿಸಿದನು. ಅರ್ಜುನನು ಅದೇರೀತಿ ಕೋಪದಿಂದ ಭಗದತ್ತನ ಎರಡು ಕೈಗಳನ್ನು ಹೊಡೆದನು
ಕಂ|| ಎಚ್ಚವನ ತಲೆಯುಮಂ ಪಱಿ
ಯೆಚ್ಚೊಡೆ ದಿಕ್ಕರಿಯ ತಲೆಯುಮಾತನ ತಲೆಯುಂ|
ಪಚ್ಚಿಕ್ಕಿದಂತೆ ಕೆಯ್ಗಳು
ಮಚ್ಚರಿಯಪ್ಪಿನೆಗಮೊಡನುರುಳ್ದುವು ಧರೆಯೊಳ್|| ೮೦||
ಪದ್ಯ-೮೦:ಪದವಿಭಾಗ-ಅರ್ಥ:ಎಚ್ಚು, ಅವನ ತಲೆಯುಮಂ ಪಱಿಯೆ ಎಚ್ಚೊಡೆ (ಕೃಷ್ಣ ಹೇಳಿದಂತೆ ಹೊಡೆದು- ಕೈಗಳನ್ನು ಕತ್ತರಿಸಿ, ಅವನ ತಲೆಯನ್ನು ಹರಿದುಹೋಗುವಂತೆ ಹೊಡೆಯಲು) ದಿಕ್ಕರಿಯ ತಲೆಯುಂ ಆತನ ತಲೆಯುಂ (ದಿಗ್ಗಜದ ತಲೆಯೂ ಆತನ ತಲೆಯೂ) ಪಚ್ಚಿಕ್ಕಿದಂತೆ ಕೆಯ್ಗಳುಂ (ಕೈಗಳೂ ಭಾಗಮಾಡಿದಂತೆ) ಅಚ್ಚರಿಯಪ್ಪಿನೆಗಂ ಒಡನೆ ಉರುಳ್ದುವು ಧರೆಯೊಳ್ (ಆಶ್ಚರ್ಯಯುತವಾಗಿ ಜೊತೆಯಾಗಿಯೇ ಭೂಮಿಯ ಮೇಲೆ ಉರುಳಿದುವು. )
ಪದ್ಯ-೮೦:ಅರ್ಥ: ಕೈಗಳನ್ನು ಕತ್ತರಿಸಿ, ಅವನ ತಲೆಯನ್ನು ಹರಿದುಹೋಗುವಂತೆ ಹೊಡೆಯಲು, ದಿಗ್ಗಜದ ತಲೆಯೂ ಆತನ ತಲೆಯೂ ಕೈಗಳೂ ಭಾಗಮಾಡಿದಂತೆ ಆಶ್ಚರ್ಯಯುತವಾಗಿ ಜೊತೆಯಾಗಿಯೇ ಭೂಮಿಯ ಮೇಲೆ ಉರುಳಿದುವು.
ಉ|| ಇತ್ತರಿಗಂಗಮಿತ್ರ ಜಯಮಪ್ಪುದುಮತ್ತಮರರ್ಕಳಾರ್ದು ಸೂ
ಸುತ್ತಿರೆ ಪುಷ್ಪವೃಷ್ಟಿಗಳನೋಗರವೂಗಳ ಬಂಡನೆಯ್ದೆ ಪೀ|
ರುತ್ತೊಡವಂದುವಿಂದ್ರವನದಿಂ ಮಱಿದುಂಬಿಗಳಿಂದ್ರನೀಲಮಂ
ಮುತ್ತು ಮನೋಳಿಯೋಳಿಯೊಳೆ ಕೋದೆೞಲಿಕ್ಕಿದ ಮಾಲೆಯಂತೆವೋಲ್|| ೮೧ ||81||
ಪದ್ಯ-೮೧:ಪದವಿಭಾಗ-ಅರ್ಥ:ಇತ್ತ ಅರಿಗಂಗೆ ಅಮಿತ್ರ ಜಯಮಪ್ಪುದುಂ ಅತ್ತಂ ಅಮರರ್ಕಳು ಆರ್ದು (ಈ ಕಡೆ ಅರಿಗನಿಗೆ (ಅರ್ಜುನನಿಗೆ) ಶತ್ರುಜಯವಾಗಲು ಆ ಕಡೆ ದೇವತೆಗಳು ಜಯಘೋಷಮಾಡಿ ) ಸೂಸುತ್ತಿರೆ ಪುಷ್ಪವೃಷ್ಟಿಗಳನು (ಹೂಮಳೆಯನ್ನು ಸುರಿಸುತ್ತಿರಲು) ಓಗರವೂಗಳ ಬಂಡನು ಎಯ್ದೆ ಪೀರುತ್ತ ಒಡವಂದುವು ಇಂದ್ರವನದಿಂ ( ಆ ಮಿಶ್ರುಪುಷ್ಪಗಳ ವಾಸನೆಯನ್ನು ಪೂರ್ಣವಾಗಿ ಹೀರುತ್ತ ಇಂದ್ರನ ತೋಟವಾದ ನಂದನವನದಿಂದ ಮರಿದುಂಬಿಗಳು ಜೊತೆಯಲ್ಲಿಯೇ ಬಂದುವು.) ಮಱಿದುಂಬಿಗಳು ಇಂದ್ರನೀಲಮಂ ಮುತ್ತುಮನು ಓಳಿಯೋಳಿಯೊಳೆ ಕೋದು ಎೞಲಿಕ್ಕಿದ (ಸುರುಗಿ/ ಪೋಣಿಸಿ ನೇತುಬಿಟ್ಟ) ಮಾಲೆಯಂತೆವೋಲ್ (ಇಂದ್ರನೀಲಮಣಿರತ್ನವನ್ನೂ ಮುತ್ತುಗಳನ್ನೂ ದಂಡೆದಂಡೆಯಾಗಿ ಸಾಲಾಗಿ ಪೋಣಿಸಿ ಜೋಲುಬಿಟ್ಟ ಹಾರದಂತೆ ಬಂದುವು).
ಪದ್ಯ-೮೧:ಅರ್ಥ: ಈ ಕಡೆ ಅರಿಗನಿಗೆ (ಅರ್ಜುನನಿಗೆ) ಶತ್ರುಜಯವಾಗಲು ಆ ಕಡೆ ದೇವತೆಗಳು ಜಯಘೋಷಮಾಡಿ ಹೂಮಳೆಯನ್ನು ಸುರಿಸುತ್ತಿರಲು, ಆ ಮಿಶ್ರುಪುಷ್ಪಗಳ ವಾಸನೆಯನ್ನು ಪೂರ್ಣವಾಗಿ ಹೀರುತ್ತ ಇಂದ್ರನ ತೋಟವಾದ ನಂದನವನದಿಂದ ಮರಿದುಂಬಿಗಳು ಇಂದ್ರನೀಲಮಣಿರತ್ನವನ್ನೂ ಮುತ್ತುಗಳನ್ನೂ ದಂಡೆದಂಡೆಯಾಗಿ ಸಾಲಾಗಿ ಪೋಣಿಸಿ ಜೋಲುಬಿಟ್ಟ ಹಾರದಂತೆ ಜೊತೆಯಲ್ಲಿಯೇ ಬಂದುವು.
ಕಂ|| ಧರಣೀಸುತನೞಿದಂ ದಿ
ಕ್ಕರಿ ಕೆಡೆದುದು ನರಶರಂಗಳಿಂ ಭುವನಮುಮಿ|
ನ್ನುರಿಯದಿರದಾನಡಂಗುವೆ
ನಿರದೆಂಬವೊಲರ್ಕನಪರಜಳನಿಗಿೞಿದಂ|| ೮೨ ||
ಪದ್ಯ-೮೨:ಪದವಿಭಾಗ-ಅರ್ಥ:ಧರಣೀಸುತನು ಅೞಿದಂ ದಿಕ್ಕರಿ ಕೆಡೆದುದು ನರಶರಂಗಳಿಂ (ಅರ್ಜುನನ ಬಾಣದಿಂದ ಭೂಪುತ್ರನಾದ ಭಗದತ್ತನು ನಾಶವಾದನು) ಭುವನಮುಂ ಇನ್ನುರಿಯದಿರದು ಆನು ಅಡಂಗುವೆನು ಎಂದೆಂಬವೊಲ್ ಅರ್ಕನು ಅಪರಜಳನಿಗೆ ಇೞಿದಂ(ದಿಗ್ಗಜವು ಕೆಳಗುರುಳಿತು. ಪ್ರಪಂಚವು ಇನ್ನು ಸುಟ್ಟು ಹೋಗದೇ ಇರುವುದಿಲ್ಲ; ನಾನು ಇಲ್ಲಿರದೆ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮ ಸಮುದ್ರಕ್ಕಿಳಿದನು.)
ಪದ್ಯ-೮೨:ಅರ್ಥ:೮೨. ಅರ್ಜುನನ ಬಾಣದಿಂದ ಭೂಪುತ್ರನಾದ ಭಗದತ್ತನು ನಾಶವಾದನು. ದಿಗ್ಗಜವು ಕೆಳಗುರುಳಿತು. ಪ್ರಪಂಚವು ಇನ್ನು ಸುಟ್ಟು ಹೋಗದೇ ಇರುವುದಿಲ್ಲ; ನಾನು ಇಲ್ಲಿರದೆ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮ ಸಮುದ್ರಕ್ಕಿಳಿದನು.
ವ|| ಆಗಳೆರಡುಂ ಪಡೆಗಳಪಹಾರತೂರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳ್ಗೆ ಪೊಪುದುಂ ಸುಯೋಧನಂ ಭಗದತ್ತನ ಸಾವಿಂಗೞಲ್ದು ತೊಟ್ಟ ಸನ್ನಣಮನಪ್ಟೊಡಂ ಕಳೆಯದೆಯುಮರಮನೆಗೆ ಪೋಗದೆ ಕುಂಭಸಂಭವನಲ್ಲಿಗೆ ವಂದು-
ವಚನ:ಪದವಿಭಾಗ-ಅರ್ಥ:ಆಗಳ್ ಎರಡುಂ ಪಡೆಗಳ್ ಅಪಹಾರ ತೂರ್ಯಂಗಳಂ ಬಾಜಿಸಿ (ಆಗ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಸೂಚಿಸುವ ವಾದ್ಯಗಳನ್ನು ಬಾರಿಸಿ,) ತಂತಮ್ಮ ಬೀಡುಗಳ್ಗೆ ಪೊಪುದುಂ (ತಮ್ಮ ತಮ್ಮ ಶಿಬಿರಕ್ಕೆ ಹೋದಾಗ-) ಸುಯೋಧನಂ ಭಗದತ್ತನ ಸಾವಿಂಗೆ ಅೞಲ್ದು ತೊಟ್ಟ ಸನ್ನಣಮನಪ್ಟೊಡಂ ಕಳೆಯದೆಯುಂ (ದುರ್ಯೋಧನನು ಭಗದತ್ತನ ಸಾವಿಗೆ ದುಖಪಟ್ಟು ಧರಿಸಿದ ಯುದ್ಧಕವಚವನ್ನೂ ತೆಗೆಯದೆ) ಅರಮನೆಗೆ ಪೋಗದೆ ಕುಂಭಸಂಭವನಲ್ಲಿಗೆ ವಂದು (ಅರಮನೆಗೆ ಹೋಗದೆ ದ್ರೋಣಾಚಾರ್ಯರ ಹತ್ತಿರಕ್ಕೆ (ಬಳಿಗೆ) ಬಂದನು)-
ವಚನ:ಅರ್ಥ:ಆಗ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಸೂಚಿಸುವ ವಾದ್ಯಗಳನ್ನು ಬಾರಿಸಿ, ತಮ್ಮ ತಮ್ಮ ಶಿಬಿರಕ್ಕೆ ಹೋದುವು. ದುರ್ಯೋಧನನು ಭಗದತ್ತನ ಸಾವಿಗೆ ದುಖಪಟ್ಟು ಧರಿಸಿದ ಯುದ್ಧಕವಚವನ್ನೂ ತೆಗೆಯದೆ ಅರಮನೆಗೆ ಹೋಗದೆ ದ್ರೋಣಾಚಾರ್ಯರ ಹತ್ತಿರಕ್ಕೆ ಬಂದನು-
ಮ|| ಮಸಕಂಗುಂದದ ಸುಪ್ರತೀಕ ಗಜಮಂ ಧಾತ್ರೀಸುತಂ ಕೀಱಿ ಚೋ
ದಿಸಿ ಭೀಮಂ ಗೆಲೆ ಮುಟ್ಟೆವಂದು ಹರಿಯುಂ ತಾನುಂ ಭರಂಗೆಯ್ದು ತ|
ನ್ನೆಸಕಂಗಾಯದಧರ್ಮಯುದ್ಧದೆ ನರಂ ಕೊಲ್ವಲ್ಲಿ ಕಂಡಿಂತುಪೇ
ಕ್ಷಿಸಿ ನೀಮುಂ ನಡೆ ನೋಡುತಿರ್ದಿರೆನೆ ಮತ್ತಿನ್ನಾರನಾಂ ನಂಬುವೆಂ|| ೮೩ ||
ಪದ್ಯ-೦೦:ಪದವಿಭಾಗ-ಅರ್ಥ:ಮಸಕಂಗುಂದದ ಸುಪ್ರತೀಕ ಗಜಮಂ (ಮದವು ಅಡಗದ ಸುಪ್ರತೀಕಗಜವನ್ನು) ಧಾತ್ರೀಸುತಂ ಕೀಱಿ ಚೋದಿಸಿ ಭೀಮಂ ಗೆಲೆ (ಭಗದತ್ತನು ಭಯಶಬ್ದಮಾಡುತ್ತ ರೇಗಿಸಿ ಮುಂದೆ ನುಗ್ಗಿಸಿ ಭೀಮನನ್ನು ಗೆಲ್ಲಲು) ಮುಟ್ಟೆವಂದು ಹರಿಯುಂ ತಾನುಂ ಭರಂಗೆಯ್ದು (ಕೃಷ್ಣನೂ ಅರ್ಜುನನೂ ಹತ್ತಿರಕ್ಕೆ ಭರದಿಂದ ಬಂದು) ತನ್ನ ಎಸಕಂಗಾಯದೆ (ತನ್ನ ಮಾತಿನಂತೆ ನಡೆದುಕೊಳ್ಳದೆ) ಅಧರ್ಮಯುದ್ಧದೆ ನರಂ ಕೊಲ್ವಲ್ಲಿ ( ಅಧರ್ಮಯುದ್ಧದಲ್ಲಿ ಅರ್ಜುನನು (ಭಗದತ್ತನನ್ನು) ಕೊಲ್ಲುತ್ತಿರುವುದನ್ನು ನೋಡಿ) ಕಂಡು ಇಂತು ಉಪೇಕ್ಷಿಸಿ ನೀಮುಂ ನಡೆ ನೋಡುತಿರ್ದಿರಿ ಎನೆ(ಅಧರ್ಮಯುದ್ಧದಲ್ಲಿ ಅರ್ಜುನನು (ಭಗದತ್ತನನ್ನು) ಕೊಲ್ಲುತ್ತಿರುವುದನ್ನು ನೋಡಿ ನೀವು ಹೀಗೆ ಉಪೇಕ್ಷಿಸಿ ನೋಡುತ್ತೀರಿ ಎನ್ನುವಾಗ) ಮತ್ತೆ ಇನ್ನಾರನು ಆಂ ನಂಬುವೆಂ (ನಾನು ಮತ್ತಾರನ್ನು ನಂಬಲಿ) ಎಂದನು.
ಪದ್ಯ-೦೦:ಅರ್ಥ:ಮದವು ಅಡಗದ ಸುಪ್ರತೀಕಗಜವನ್ನು ಭಗದತ್ತನು ಭಯಶಬ್ದಮಾಡುತ್ತ ರೇಗಿಸಿ ಮುಂದೆ ನುಗ್ಗಿಸಿ ಭೀಮನನ್ನು ಗೆಲ್ಲಲು ಕೃಷ್ಣನೂ ಅರ್ಜುನನೂ ಹತ್ತಿರಕ್ಕೆ ಬಂದು ವೇಗದಿಂದ ತನ್ನ ಮಾತಿನಂತೆ ನಡೆದುಕೊಳ್ಳದೆ (ಯುದ್ಧ ಮಾಡುವುದಿಲ್ಲವೆಂಬ ತನ್ನ ಪ್ರತಿಜ್ಞೆಯನ್ನು, ಕಾರ್ಯವನ್ನು, ಮಾತನ್ನು ಪರಿಪಾಲಿಸದೆ) ಅಧರ್ಮಯುದ್ಧದಲ್ಲಿ ಅರ್ಜುನನು (ಭಗದತ್ತನನ್ನು) ಕೊಲ್ಲುತ್ತಿರುವುದನ್ನು ನೋಡಿ ನೀವು ಹೀಗೆ ಉಪೇಕ್ಷಿಸಿ ನೋಡುತ್ತೀರಿ ಎನ್ನುವಾಗ ನಾನು ಮತ್ತಾರನ್ನು ನಂಬಲಿ, ಎಂದನು ದುರ್ಯೋದನ.
ವ|| ಎಂದು ನುಡಿದ ಪನ್ನಗದ್ವಜನ ನುಡಿಗೆ ಕಾರ್ಮುಕಾಚಾರ್ಯನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನುಡಿದ ಪನ್ನಗದ್ವಜನ (ದುಯೋಧನನ) ನುಡಿಗೆ ಕಾರ್ಮುಕಾಚಾರ್ಯನು (ಬಿಲ್ಲಿನ ಗುರು- ದ್ರೋಣನು)ಇಂತೆಂದಂ-
ವಚನ:ಅರ್ಥ:ವ|| ಎಂದು ಹೇಳಿದ ದುಯೋಧನನ ಮಾತಿಗೆ ದ್ರೋಣನು ಹೀಗೆ ಹೇಳಿದನು-
ಮ|| ಎನಗಲ್ತಾರ್ಗಮಸಾಧ್ಯನಲ್ತೆ ವಿಜಯಂ ನೀನಾತನಂ ಗೆಲ್ವ ಮಾ
ತನಮೋಘಂ ಬಿಸುಡಿಂದೆ ನಾಳೆ ವಿಜಯಂ ಮಾರ್ಕೊಳ್ಳದಂದುರ್ಕಿ ಪೊ|
ಕ್ಕನನಾಂತೊರ್ವನನಿಕ್ಕುವೆಂ ಕದನದೊಳ್ ಮೇಣ್ ಕಟ್ಟುವೆಂ ಧರ್ಮ ನಂ
ದನನಂ ನೀನಿದನಿಂತು ನಂಬು ಬಗೆಯಲ್ವೇಡನ್ನನಂ ಭೂಪತೀ|| ೮೪ ||
ಪದ್ಯ-೮೪:ಪದವಿಭಾಗ-ಅರ್ಥ:ಎನಗಲ್ತು ಆರ್ಗಮ್ ಅಸಾಧ್ಯನಲ್ತೆ ವಿಜಯಂ (ಅರ್ಜುನನು ನನಗೆ ಮಾತ್ರವಲ್ಲ, ಯಾರಿಗೂ ಗೆಲ್ಲಲು ಅಸಾಧ್ಯನಾದವನು.) ನೀನು ಆತನಂ ಗೆಲ್ವ ಮಾತಂ ಅಮೋಘಂ (ನೀನು ಅವನನ್ನು ಗೆಲ್ಲುವ ಮಾತು ವ್ಯರ್ಥವು,) ಬಿಸುಡು ಇಂದೆ (ಆ ಮಾತನ್ನು ಈ ದಿನವೇ ಬಿಟ್ಟುಬಿಡು) ನಾಳೆ ವಿಜಯಂ ಮಾರ್ಕೊಳ್ಳದಂದು (ನಾಳೆಯ ದಿನ ಅರ್ಜುನನು (ತನ್ನೊಡನೆ) ಪ್ರತಿಭಟಿಸದೆಇದ್ದರೆ) ಉರ್ಕಿ ಪೊಕ್ಕನನು ಆಂತು ಒರ್ವನನು ಇಕ್ಕುವೆಂ ಕದನದೊಳ್ (ಅಹಂಕಾರದಿಂದ ಹೊಕ್ಕಂಥ ಯಾವನನ್ನೇ ಆದರೂ ಎದುರಿಸಿ ಯುದ್ಧದಲ್ಲಿ ಕೊಲ್ಲುತ್ತೇನೆ.) ಮೇಣ್ ಕಟ್ಟುವೆಂ ಧರ್ಮ ನಂದನನಂ (ಅಲ್ಲದೆ ಧರ್ಮರಾಜನನ್ನು ಸೆರೆಹಿಡಿಯುತ್ತೇನೆ.) ನೀನಿದನು ಇಂತು ನಂಬು, ಬಗೆಯಲ್ವೇಡ ಅನ್ನನಂ ಭೂಪತೀ (ನೀನು ಇದನ್ನು ನಂಬು ನನ್ನನ್ನು ಅಂಥವನೆಂದು - ಮೋಸಮಾಡುವವನೆಂದು - ಭಾವಿಸಬೇಡ.)
ಪದ್ಯ-೮೪:ಅರ್ಥ:ಮಹಾರಾಜನೇ ಅರ್ಜುನನು ನನಗೆ ಮಾತ್ರವಲ್ಲ, ಯಾರಿಗೂ ಅಸಾಧ್ಯನಾದವನು. ನೀನು ಅವನನ್ನು ಗೆಲ್ಲುವ ಮಾತು ವ್ಯರ್ಥವು ಅದನ್ನು ಈ ದಿನವೇ ಬಿಟ್ಟುಬಿಡು. ನಾಳೆಯ ದಿನ ಅರ್ಜುನನು (ತನ್ನೊಡನೆ) ಪ್ರತಿಭಟಿಸದಿದ್ದರೆ, ಅಹಂಕಾರದಿಂದ ಹೊಕ್ಕಂಥ ಯಾವನನ್ನೇ ಆದರೂ ಎದುರಿಸಿ ಯುದ್ಧದಲ್ಲಿ ಕೊಲ್ಲುತ್ತೇನೆ. ಅಲ್ಲದೆ ಧರ್ಮರಾಜನನ್ನು ಸೆರೆಹಿಡಿಯುತ್ತೇನೆ. ನೀನು ಇದನ್ನು ನಂಬು ನನ್ನನ್ನು ಅಂಥವನೆಂದು ಗಣಿಸಬೇಡ.

ಕುಮಾರವ್ಯಾಸನ ಕಾವ್ಯದಲ್ಲಿ ಅಭಿಮನ್ಯವಿನ ಅಂತ್ಯ:
(ದ್ರೋಣ ಪರ್ವ - ೪ನೆಯ ಸಂಧಿ)
ಹೊಗಲು ಬಲ್ಲನು ಹೊಕ್ಕವೊಲು ಹೆರ
ದೆಗೆಯಲರಿಯನು ವೀರ ಪಾರ್ಥನ
ಮಗನು ಮತ್ತಯ್ದನೆಯ ಸುಭಟರ ಕಾಣೆ ನಾನೆನುತ
ಆಗಿವ ಚಿಂತೆಯೊಳರಸ ಕದನದ
ದುಗುಡ ಭಾರದಲಿರಲು ಮುಂಗೈ
ನಿಗಳವನು ತಿರುಹುತ್ತ ನಸು ನಗುತೆದ್ದನಭಿಮನ್ಯು ||೩೪||

ಜನಪನಂಘ್ರಿಗೆ ಮಣಿದು ಕೈಮುಗಿ
ದೆನಗೆ ಬೆಸಸೈ ಬೊಪ್ಪ ತಾ ಬ
ಲ್ಲೆನು ಮಹಾಹವದೊಳಗೆ ಪದ್ಮವ್ಯೂಹ ಭೇದನವ
ಅನುವರವ ಗೆಲುವೆನು ಕೃತಾಂತನ
ಮನೆಗೆ ಕಳುವೆನಹಿತರನು ನೀ
ನಿನಿತು ಚಿಂತಿಸಲೇಕೆ ಕಾಳೆಗಕೆನ್ನ ಕಳುಹೆಂದ ||೩೫||

ಹಸುಳೆಯದಟಿನ ನುಡಿಯ ಕೇಳಿದು
ನಸು ನಗುತ ಧರ್ಮಜನು ಘನ ಪೌ
ರುಷವು ನಿನಗಂಟೆಂದು ಕಂದನ ತೆಗೆದು ಬಿಗಿಯಪ್ಪಿ
ಶಿಶುವು ನೀನೆಲೆ ಮಗನೆ ಕಾದುವ
ರಸಮ ಬಲರು ಕಣಾ ಮಹಾ ರಥ
ರೆಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ ||೩೬||

ಕೈದುಕಾರರ ಬಿಗುಹು ಘನ ನೀ
ಹೊಯ್ದು ಮೊದಲಲಿ ಬಿಡಿಸು ಬಳಿಕಾ
ವೈದಿ ನಿನ್ನನು ಕೂಡಿಕೊಂಬೆವು ಹೊಕ್ಕು ಬಳಿಸಲಿಸಿ
ಎಯ್ದೆ ಹಗೆಯಲಿ ಹೂಣಿ ಹೊಗದಿರು
ಮೈದೆಗೆದು ಕಾದುವುದು ಜಯಸಿರಿ
ಯೈದೆತನ ನಿನ್ನಿಂದ ಮೆರೆವುದು ಕಂದ ಕೇಳೆಂದ ||೪೪||

ಕೆತ್ತುಕೊಂಡಿರೆ ಬಿಡಿಸುವೆನು ರಥ
ವೆತ್ತಲುರುಬಿದರತ್ತ ಕಣನೊಳು
ಮತ್ತಗಜ ಮುರಿದಂತೆ ಕದಡುವೆನಹಿತ ಮೋಹರವ
ಹೊತ್ತಿ ಹೊಗೆವ ಪರಾಕ್ರಮಾಗ್ನಿಯ
ತುತ್ತು ಪದ್ಮವ್ಯೂಹ ದೇವರು
ಚಿತ್ತಯಿಸುವುದು ಹೊತ್ತುಗಳೆಯದೆ ಎನ್ನ ಕಳುಹೆಂದ ||೪೫||

ತುರಗ ತತಿಗಭಿನಮಿಸಿ ರಥವನು
ತಿರುಗಿ ಬಲವಂದೆರಗಿ ಚಾಪಕೆ
ಕರವ ನೊಸಲಲಿ ಚಾಚಿ ಭಾರಿಯ ಭುಜವನೊದರಿಸುತ
ಅರಸಗಭಿವಂದಿಸುತ ಭೀಮನ
ಹರಕೆಗಳ ಕೈಕೊಳುತ ನಕುಳಾ
ದ್ಯರಿಗೆ ಪೊಡವಟ್ಟಡರಿದನು ನವರತುನಮಯ ರಥವ ||೫೧||

ಮರುಳು ಸಾರಥಿ ನಮ್ಮ ನಾವ್ ಪತಿ
ಕರಿಸಿಕೊಳಲಾಗದು ಕಣಾ ನೀ
ನರಿಯೆ ನಮ್ಮಂತರವ ನಾವಿನ್ನಾಡಿ ಫಲವೇನು
ಗುರುತನುಜನೇ ಕೃಪನೆ ದ್ರೋಣನೆ
ತರಣಿತನಯನೆ ಸೈಂಧವನೆ ಹುಲು
ನರರು ಗಣ್ಯವೆ ಕೇಳು ಭಾಷೆಯನೆಂದನಭಿಮನ್ಯು ||೫೫||

ಬವರವಾದರೆ ಹರನ ವದನಕೆ
ಬೆವರ ತಹೆನವಗಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ
ಜವನ ಜಗವೆಡಿಸುವೆನು ಸಾಕಿ
ನ್ನಿವರವರಲೇನರ್ಜುನನು ಮಾ
ಧವನು ಮುನಿದಡೆ ಗೆಲುವೆನಂಜದೆ ರಥವ ಹರಿಸೆಂದ ||೫೬||

ರಥ ಮುರಿದು ಮನನೊಂದು ಸುಮಹಾ
ರಥರು ಹಿಮ್ಮೆಟ್ಟಿದರು ಬಳಿಕತಿ
ರಥಭಯಂಕರನೊಡೆದು ಹೊಕ್ಕನು ವೈರಿಮೋಹರವ
ಮಥನದಲಿ ಮುರಿಯೊಡೆದ ಶೈಲ
ವ್ಯಥಿತ ಸಾಗರದಂತೆ ಬಿರಿದವು
ಕರ ಕಾಲಾಳು ಕುದುರೆಗಳೊಂದು ನಿಮಿಷದಲಿ ||೬೧ ||

೦೫. ಐದನೆಯ ಸಂಧಿ
ಕದಳಿಯೊಳು ಮದದಾನೆ ಹೊಕ್ಕಂ
ದದಲಿ ಹೆಚ್ಚಿದ ಚಾತುರಂಗದ
ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು
ಇದಿರೊಳೆಚ್ಚನು ಕೆಲಬಲದೊಳಿಹ
ಕದನಗಲಿಗಳ ಸೀಳಿದನು ಕಾ
ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ ||೪||

ಹುರುಡ ಮರೆದೆನು ಮಗನೆ ಸಾಲದೆ
ಭರತಕುಲದಲಿ ನಿನ್ನ ಬೆಳವಿಗೆ
ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ
ಕರುಳು ಬೀಳವೆ ತನ್ನ ಬಸುರಿಂ
ದುರುಳಿದವದಿರಲೇನು ಫಲ ಮ
ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ ||೧೮||

ಗುರುಸುತನನೊಟ್ಟೈಸಿ ಶಲ್ಯನ
ಭರವಸವ ನಿಲಿಸಿದನು ಕೃಪನು
ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ
ಅರಸನನುಜರ ಸದೆದು ಬಾಹ್ಲಿಕ
ದುರುಳ ಸೌಬಲ ಸೋಮದತ್ತರ
ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ ||೨೬||

ಉರುಗನಿಕ್ಕಡಿಗಾರ ಹುಲ್ಲಿನ
ಸರವಿಗಂಜುವುದುಂಟೆ ಕರ್ಣಾ
ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
ಎರಡು ಶರದಲಿ ಲಕ್ಷಣನ ಸಂ
ಹರಿಸಿದನು ಹದಿನೈದು ಬಾಣದ
ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ }}೭೮||

೦೬. ಆರನೆಯ ಸಂಧಿ
ಆರಯಿದು ಮಗನೆನಿಸುವೀ ಮಮ
ಕಾರವೆಮ್ಮೊಳು ಮೊಳೆತಡಾ ದಾ
ತಾರನುಳಿವೆನ್ನಿಂದ ತಪ್ಪುವುದೆನುತ ಮನದೊಳಗೆ
ಕೂರಲಗನಾ ಕರ್ಣ ಬರಸೆಳೆ
ದಾರಿ ಹಿಂದಣಿನೆಚ್ಚು ಪಾರ್ಥಕು
ಮಾರಕನ ಚಾಪವನು ಮುಕ್ಕಡಿಯಾಗಿ ಖಂಡಿಸಿದ ||೩೨||

ಉರುವ ಜಯವಧುವೊಕ್ಕತನದಲಿ
ಮುರಿದ ಕಡ್ಡಿಯಿದೆನಲು ಕರದಿಂ
ಮುರಿದು ಬಿದ್ದುದು ಚಾಪವಿಂದ್ರಕುಮಾರ ನಂದನನ
ಬೆರಗಡರಿ ಮುಖದಿರುಹಿ ಹಿಂದಣಿ
ನಿರಿದ ಕರ್ಣನ ನೋಡಿ ಮುಖದಲಿ
ಕಿರುನಗೆಯ ಕೇವಣಿಸಿ ನುಡಿದನು ಬೆರಳನೊಲೆದೊಲೆದು ||೩೩||

ಆವ ಶರಸಂಧಾನ ಲಾಘವ
ದಾವ ಪರಿ ಮಝ ಪೂತು ಪಾಯಿಕು
ದೇವ ಬಿಲ್ಲಾಳೆಂತು ಕಡಿದೈ ಕರ್ಣ ನೀ ಧನುವ
ಈ ವಿವೇಕವಿದಾರ ಸೇರುವೆ
ಯಾವಗಹುದಿದು ಹಿಂದೆ ಬಂದೆಸು
ವೀ ವಿಗಡತನ ನಿನಗೆ ಮೆರೆವುದು ಕರ್ಣ ಕೇಳೆಂದ ||೩೪||

ಸುರಿವ ರಕುತದ ಸರಿಯ ಸೆರಗಿನೊ
ಳೊರಸಿ ರಥದಚ್ಚುಗಳನೊದೆದನು
ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
ಅರಿಬಲವನಿಡೆ ಮುಗ್ಗಿ ಕೆಡೆದುದು
ತುರಗವಜಿಗಿಜಿಯಾದುದಿಭ ತತಿ
ಯುರುಳಿದವು ಹೊರಳಿದವು ಹೂಣಿಗರಟ್ಟೆ ಸಮರದಲಿ ||೫೫||

ಹರಿಯ ಚಕ್ರದ ಸತ್ವವೀತನ
ಧುರದೊಳಾಯ್ತೆನೆ ರಥದ ಚಕ್ರದೊ
ಳರಿಬಲವನಿಡೆ ಮುಗ್ಗಿ ಕೆಡೆದುದು ಬಹಳ ತಳತಂತ್ರ
ಬಿರುದರಾನುವರಿಲ್ಲ ಷಡುರಥ
ರುರವಣಿಯು ಹಿಂದಾಯ್ತು ರಾಯರ
ಗುರುವ ಕಂಡವರಿಲ್ಲೆನುತ ಕುರುರಾಯ ಚಿಂತಿಸಿದ ||೫೬||

ಮನದ ಖತಿ ಹೊಗರೇರೆ ದುಶ್ಶಾ
ಸನನ ಮಗನಿದಿರಾಗಿ ಖಡುಗದ
ಮೊನೆಯ ಚೂರಿಸಿ ದಂಡವಲಗೆಯ ತೊಡೆಯೊಳೊದರಿಸುತ
ತನಗೆ ಮೃತ್ಯುವ ಕರೆವವೋಲ
ರ್ಜುನ ಕುಮಾರನ ಕರೆದು ಹಳಚಿದ
ನನಿಮಿಷಾವಳಿ ಪೂತು ಪಾಯ್ಕೆನೆ ಹೆಣಗಿದರು ಭಟರು ||೫೭||

ಗಾಲಿ ತೀರಿದವೆಂದು ಬಂದನೆ
ಕಾಳೆಗಕೆ ತಪ್ಪೇನೆನುತ ಕರ
ವಾಳಿನಾತನ ಬಗೆಯದೊಳಹೊಕ್ಕೆರಗಿದನು ಶಿರವ
ಮೇಲುವಲಗೆಯಲಣೆದು ಹಾಯ್ದನು
ಬಾಲಕನ ಘಾಯವನು ನಸು ನಗು
ತೇಳಿಸುತ ದಂಡೆಯಲಿ ಕಳೆದನು ತಿವಿದನವನುರವ ||೫೮||

ಕರಹತಿಗೆ ಧಡಧಡಿಸಿ ತಿರ್ರನೆ
ತಿರುಗಿ ಬೀಳುತ ಧೈರ್ಯದಲಿ ಹೊಡ
ಕರಿಸಿ ಹೊರಬಿನೊಳೆದ್ದು ಹೊಯ್ದನು ಪಾರ್ಥನಂದನನ
ಅರಿ ಕೃಪಾಣದ ಘಾಯವನು ತರ
ಹರಿಸಲರಿಯದೆ ಬೀಳುತಹಿತನ
ನೆರಗಿದನು ಬಳಿಕವನಿಗೊರಗಿದರಾ ಕುಮಾರಕರು ||೫೯||

ಕಾಳುಕಿಚ್ಚೆದ್ದಡವಿಯನು ಕುಡಿ
ನಾಲಗೆಯೊಳಳವಡಿಸಿ ದಳ್ಳುರಿ
ಜ್ವಾಲೆ ತಗ್ಗಿದವೋಲು ಗಗನದ ಮುಗಿಲ ಮೋಹರವ
ದಾಳಿಯಲಿಯರೆಯಟ್ಟಿ ಸುಂಟರು
ಗಾಳಿಯುರವಣೆ ನಿಂದವೊಲು ಸುರ
ಪಾಲ ತನಯನ ತನಯನಸ್ತಮಿಸಿದನು ರಣದೊಳಗೆ ||೬೦||

ತೋಳ ತಲೆಗಿಂಬಿನಲಿ ಕೈದುಗ
ಳೋಳಿಗಳ ಹಾಸಿನಲಿ ತನ್ನಯ
ಕಾಲ ದೆಸೆಯಲಿ ಕೆಡೆದ ಕೌರವ ಸುತರು ನೂರ್ವರಲಿ
ಬಾಲಕನು ಬಳಲಿದನು ಸಮರದ
ಲೀಲೆಯಲಿ ಕುಣಿಕುಣಿದು ಬಸವಳಿ
ದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ ||೬೧||

ಗಿದ ಹುಬ್ಬಿನ ಬಿಟ್ಟ ಕಂಗಳ
ಹೊಗರು ಮೋರೆಯ ಹಿಣಿಲ ಮಂಡೆಯ
ಜಿಗಿಯ ರಕುತದ ಜೋರಿನೊಡಲಿನ ತುರುಗಿದಂಬುಗಳ
ಹೆಗಲ ಕೊಯ್ಲಿನ ತಗ್ಗಿನಲಿ ಸೈ
ನೆಗೆದ ರೋಮದ ವಿಕ್ರಮಾಗ್ನಿಯ
ತಗಹು ಬಿಡದಭಿಮನ್ಯು ಮೆರೆದನು ಶಸ್ತ್ರ ಶಯನದಲಿ ||೬೨||


ಸಾವ ಹರಯವೆ ಎನುತ ಗಗನದ
ದೇವತತಿ ಮರುಗಿತ್ತು ಶಕ್ರನ
ಸಾವಿರಾಲಿಯೊಳೊರತೆ ಮಸಗಿತು ಪೌತ್ರಶೋಕದಲಿ
ತಾವು ಷಡುರಥರೊಬ್ಬ ಹಸುಳೆಯ
ಹೇವವಿಲ್ಲದೆ ಕೊಂದರೋ ಸುಡ
ಲಾವ ವೀರರು ಕೌರವಾದಿಗಳೆಂದುದಮರಗಣ ||೬೩||

ಮಗುವು ವೇಷವ ಧರಿಸಿ ದೂರದ
ಲಗಲಿ ಹೋಗಲು ತನ್ನ ಚಿತ್ತಕೆ
ಢಗೆಯ ಡಾವರವಾಯ್ತು ತನಗೊಳಗಾಯ್ತು ಪರಿತಾಪ
ಮಗನ ಮರಣದಲೆಂತು ಜೀವವ
ಬಗೆವಳಕಟ ಸುಭದ್ರೆಯೆನುತವೆ
ದೃಗುಜಲವ ಬೆರಳಿಂದ ಮಿಡಿದರು ಗೌರಿ ದೇವಿಯರು ||೬೪||
-೦-♦♦♦-೦-

ವ|| ಎಂಬುದಮಾನಿನಿತಂ ನಿಮ್ಮ ಪೂಣಿಸಲೆ ಬಂದೆನೆಂದು ಪೊಡೆಮಟ್ಟು ಬೀೞ್ಕೊಂಡು ಪೋಗಿ ಸಂಸಪ್ತಕರ್ಕಳ್ಗೆ ಬೞಿಯನಟ್ಟಿ ಬರಿಸಿ-
ವಚನ:ಪದವಿಭಾಗ-ಅರ್ಥ:ಎಂಬುದಂ ಆನು ಇನಿತಂ ನಿಮ್ಮ ಪೂಣಿಸಲೆ (ಇಷ್ಟನ್ನು ಪ್ರತಿಜ್ಞೆಮಾಡಿಸಬೇಕೆಂದೇ) ಬಂದೆನು ಎಂದು ಪೊಡೆಮಟ್ಟು ಬೀೞ್ಕೊಂಡು ಪೋಗಿ (ಎಂದು ನಮಸ್ಕಾರಮಾಡಿ ಅವರನ್ನು ಬಿಟ್ಟುಹೋಗಿ) ಸಂಸಪ್ತಕರ್ಕಳ್ಗೆ ಬೞಿಯನಟ್ಟಿ ಬರಿಸಿ (ಸಂಸಪ್ತಕರುಗಳಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು-)-
ವಚನ:ಅರ್ಥ:ಎನ್ನಲು ನಾನು ನಿಮ್ಮಲ್ಲಿ ಇಷ್ಟನ್ನು ಪ್ರತಿಜ್ಞೆಮಾಡಿಸಬೇಕೆಂದೇ ಬಂದೆನು ಎಂದು ನಮಸ್ಕಾರಮಾಡಿ ಅವರನ್ನು ಬಿಟ್ಟುಹೋಗಿ ಸಂಸಪ್ತಕರುಗಳಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡನು.
ಚಂ|| ಅರಿಗನನಾಂಪ ಗಂಡುಮದಟುಂ ನಿಮಗಾವಗಮಾದುದಾಹವಾ
ಜಿರದೊಳದರ್ಕೆ ನಾಳೆ ನರನಂ ತೆಗೆದುಯ್ವುದು ಧರ್ಮಪುತ್ರನಂ|
ಗುರು ಪಿಡಿದಪ್ಪನೆಂದವರನಾಗಳೆ ಪೂಣಿಸಿ ಪೋಗವೇೞ್ದು ಮ
ಚ್ಚರದೊಳೆ ಮಾಣದೊಡ್ಡಿದನಸುಂಗೊಳೆ ಕಕ್ಕರ ಸಂಜೆ ಸಂಜೆಯೊಳ್|| ೮೫ ||
ಪದ್ಯ-೮೫:ಪದವಿಭಾಗ-ಅರ್ಥ:ಅರಿಗನನು ಆಂಪ ಗಂಡುಂ ಅದಟುಂ (ಯುದ್ಧರಂಗದಲ್ಲಿ ಅರ್ಜುನನನ್ನು ಪ್ರತಿಭಟಿಸುವ ಪೌರುಷವೂ ಶಕ್ತಿಯೂ) ನಿಮಗೆ ಆವಗಂ ಆದುದು ಆಹವ (ನಿಮಗೆ ಯಾವಾಗಲೂ ಇದೆ. ಅದಕ್ಕಾಗಿ) ಆಜಿರದೊಳ್ (ಯುದ್ಧರಂಗದಲ್ಲಿ); ಅದರ್ಕೆ, ನಾಳೆ ನರನಂ ತೆಗೆದು ಉಯ್ವುದು (ಅದಕ್ಕಾಗಿ ನಾಳೆ ಅರ್ಜುನನನ್ನು ದೂರಕ್ಕೆ ಕರೆದುಕೊಂಡು ಹೋಗುವುದು); ಧರ್ಮಪುತ್ರನಂ ಗುರು ಪಿಡಿದಪ್ಪನು ಎಂದು ಅವರನಾಗಳೆ ಪೂಣಿಸಿ ಪೋಗವೇೞ್ದು (ದ್ರೋಣಾಚಾರ್ಯನು ಧರ್ಮಪುತ್ರನನ್ನು ನಾಳೆ ಸೆರೆಹಿಡಿಯುತ್ತಾನೆ ಎಂದು ಅವರನ್ನು ಆಗಲೇ ಪ್ರತಿಜ್ಞೆ ಮಾಡಿಸಿ ಹೋಗಲು ಹೇಳಿ-,) ಮಚ್ಚರದೊಳೆ ಮಾಣದೆ ಒಡ್ಡಿದನು ಅಸುಂಗೊಳೆ (ಮಾತ್ಸರ್ಯದಿಂದ ತಡವಿಲ್ಲದೆ ಸೈನ್ಯವನ್ನು ಒಡ್ಡಿದನು) ಕಕ್ಕರಸ ಅಂಜೆ ಸಂಜೆಯೊಳ್ (ಬೆಳಗಿನ ಜಾವದಲ್ಲಿಯೇ ಎಂತಹ ಕಠಿಣರಾದವರೂ ಹೆದರುವ ಹಾಗೆ-- ಸೈನ್ಯವನ್ನು ಒಡ್ಡಿದನು, -ಸಿದ್ಧಪಡಿಸಿ ನಿಲ್ಲಿಸಿದನು)
ಪದ್ಯ-೮೫:ಅರ್ಥ:ಯುದ್ಧರಂಗದಲ್ಲಿ ಅರ್ಜುನನನ್ನು ಪ್ರತಿಭಟಿಸುವ ಪೌರುಷವೂ ಶಕ್ತಿಯೂ ನಿಮಗೆ ಯಾವಾಗಲೂ ಇದೆ. ಅದಕ್ಕಾಗಿ ನಾಳೆ ಅರ್ಜುನನನ್ನು ದೂರಕ್ಕೆ ಕರೆದುಕೊಂಡು ಹೋಗುವುದು. ದ್ರೋಣಾಚಾರ್ಯನು ಧರ್ಮಪುತ್ರನನ್ನು ನಾಳೆ ಸೆರೆಹಿಡಿಯುತ್ತಾನೆ ಎಂದು ಅವರನ್ನು ಆಗಲೇ ಪ್ರತಿಜ್ಞೆ ಮಾಡಿಸಿ ಹೋಗಹೇಳಿದನು. ಮಾತ್ಸರ್ಯದಿಂದ ತಡವಿಲ್ಲದೆ ಬೆಳಗಿನ ಜಾವದಲ್ಲಿಯೇ ಎಂತಹ ಕಠಿಣರಾದವರೂ ಹೆದರುವ ಹಾಗೆ ಶತ್ರುಗಳ ಪ್ರಾಣಾಪಹಾರಕ್ಕಾಗಿ ಭಯಂಕರವಾದ ಸೈನ್ಯವನ್ನು ಒಡ್ಡಿದನು-
ವ|| ಆಗಳ್ ಪಾಂಡವ ಪತಾಕಿನಿಯುಮಿರದೆ ಪೊಱಮಟ್ಟರ್ಧಚಂದ್ರ ವ್ಯೂಹಮನೊಡ್ಡಿ ನಿಲೆ ಸಂಸಪ್ತಕರ್ ತಮಗೆ ಮಿೞ್ತುಗರೆವಂತೆ ವಿಕ್ರಮಾರ್ಜುನನಂ ಕರೆದುಯ್ದರಿತ್ತ-
ವಚನ:ಪದವಿಭಾಗ-ಅರ್ಥ:ಆಗಳ್ ಪಾಂಡವ ಪತಾಕಿನಿಯುಂ ಇರದೆ (ಆಗ ಪಾಂಡವಸೈನ್ಯವೂ ಸುಮ್ಮನಿರದೆ) ಪೊಱಮಟ್ಟು ಅರ್ಧಚಂದ್ರ ವ್ಯೂಹಮನು ಒಡ್ಡಿ ನಿಲೆ (ಹೊರಟು ಅರ್ಧಚಂದ್ರಾಕಾರದ ಸೈನ್ಯರಚನೆಯನ್ನು ಚಾಚಿ ನಿಲ್ಲಲು,) ಸಂಸಪ್ತಕರ್ ತಮಗೆ ಮಿೞ್ತುಗರೆವಂತೆ ವಿಕ್ರಮಾರ್ಜುನನಂ ಕರೆದುಯ್ದರು (ಸಂಸಪ್ತಕರು ತಮಗೆ ಮೃತ್ಯುವನ್ನು ಕರೆಯುವಂತೆ ಅರ್ಜುನನನ್ನು ಕರೆದುಕೊಂಡೆಯ್ದರು) ಇತ್ತ-
ವಚನ:ಅರ್ಥ:ಆಗ ಪಾಂಡವಸೈನ್ಯವೂ ಸುಮ್ಮನಿರದೆ ಹೊರಟು ಅರ್ಧಚಂದ್ರಾಕಾರದ ಸೈನ್ಯರಚನೆಯನ್ನು ಚಾಚಿ ನಿಲ್ಲಲು ಸಂಸಪ್ತಕರು ತಮಗೆ ಮೃತ್ಯುವನ್ನು ಕರೆಯುವಂತೆ ಅರ್ಜುನನನ್ನು ಯುದ್ಧಮಾಡತ್ತಾ ದೂರ ಸೆಳೆದುಕೊಂಡು ಹೋದರು. ಈ ಕಡೆ
ಅನವದ್ಯ|| ಅಱಿಪಿದಂ ಗುರು ಭಾರ್ಗವನಿಂತೀಯೊಡ್ಡನಿದಂ ಗೆಲಲಾವನುಂ
ನೆರೆಯನುರ್ಕಿನಳುರ್ಕೆಯಿನೊರ್ವಂ ಪೊಕ್ಕೊಡೆ ಪೊಕ್ಕನೆ ಮತ್ತಣಂ|
ಪೊಱಮಡಂ ತಱಿದೊಟ್ಟುವೆನಂತಾ ಪಾಂಡವಸೈನ್ಯಮನೆಂದು ಬಿ
ಲ್ಲೆರೆಯನೊಡ್ಡಿದನಂಕದ ಚಕ್ರವ್ಯೂಹಮನಾಹವರಂಗದೊಳ್|| ೮೬ ||
ಪದ್ಯ-೮೬:ಪದವಿಭಾಗ-ಅರ್ಥ:ಅಱಿಪಿದಂ ಗುರು ಭಾರ್ಗವನು ಇಂತು ಈಯೊಡ್ಡನು (ಈ ಚಕ್ರವ್ಯೂಹದ ಹಿಗಿರುವ ರಚನೆಯನ್ನು ಆಚಾರ್ಯನಾದ ಪರಶುರಾಮನು ನನಗೆ ಉಪದೇಶಮಾಡಿದ್ದಾನೆ) ಇದಂ ಗೆಲಲು ಆವನುಂ ನೆರೆಯನು (ಇದನ್ನು ಗೆಲ್ಲಲು ಯಾವನೂ ಸಮರ್ಥನಾಗುವುದಿಲ್ಲ.) ಉರ್ಕಿನ ಅಳುರ್ಕೆಯಿಂ ಒರ್ವಂ ಪೊಕ್ಕೊಡೆ ಪೊಕ್ಕನೆ ಮತ್ತಣಂ ಪೊಱಮಡಂ (ಸೊಕ್ಕಿನ ಉದ್ಧಟತನದಿಂದ ಯಾವನಾದರೊಬ್ಬ ಪ್ರವೇಶಮಾಡಿದರೆ, ಹೊಕ್ಕ ಅವನು ಪುನ ಹೇಗೂ ಹೊರಟುಹೋಗಲಾರ;) ತಱಿದು ಒಟ್ಟುವೆನು ಅಂತ ಆ ಪಾಂಡವಸೈನ್ಯಮನು ಎಂದು (ಆ ಪಾಂಡವ ಸೈನ್ಯವನ್ನು ಇದರಿಂದ ಕತ್ತರಿಸಿ ಹಾಕುತ್ತೇನೆ ಎಂದು) ಬಿಲ್ಲೆರೆಯನು (ಬಿಲ್ಲುಗಾರ ದ್ರೋಣನು) ಒಡ್ಡಿದನು ಅಂಕದ ಚಕ್ರವ್ಯೂಹಮನು ಆಹವರಂಗದೊಳ್ (ಪ್ರಸಿದ್ಧವಾದ ಚಕ್ರವ್ಯೂಹವನ್ನು ಯುದ್ಧರಂಗದಲ್ಲಿ ಹೂಡಿದನು)
ಪದ್ಯ-೮೬:ಅರ್ಥ: ಈ ಚಕ್ರವ್ಯೂಹದ ಹಿಗಿರುವ ರಚನೆಯನ್ನು ಆಚಾರ್ಯನಾದ ಪರಶುರಾಮನು ನನಗೆ ಉಪದೇಶಮಾಡಿದ್ದಾನೆ. ಇದನ್ನು ಗೆಲ್ಲಲು ಯಾವನೂ ಸಮರ್ಥನಾಗುವುದಿಲ್ಲ. ಸೊಕ್ಕಿನ ಉದ್ಧಟತನದಿಂದ ಯಾವನಾದರೊಬ್ಬ ಪ್ರವೇಶಮಾಡಿದರೆ, ಹೊಕ್ಕ ಅವನು ಪುನ ಹೇಗೂ ಹೊರಟುಹೋಗಲಾರ; ಆ ಪಾಂಡವ ಸೈನ್ಯವನ್ನು ಇದರಿಂದ ಕತ್ತರಿಸಿ ಹಾಕುತ್ತೇನೆ ಎಂದು ಬಿಲ್ಲುಗಾರನಾದ ದ್ರೋಣನು ಪ್ರಸಿದ್ಧವಾದ ಚಕ್ರವ್ಯೂಹವನ್ನು ಯುದ್ಧರಂಗದಲ್ಲಿ ಹೂಡಿದನು-
ವ|| ಅಂತೊಡ್ಡಿದ ಚಕ್ರವ್ಯೂಹದ ನಡುವೆಡೆಯಱಿದು ಕಳಿಂಗರಾಜನ ಕರಿಘಟೆಗಳುಮಂ ಕರ್ಣ ಶಲ್ಯ ಶಕುನಿ ಕೃಪ ಕೃತವರ್ಮ ಭೂರಿಶ್ರವೋಶ್ವತ್ಥಾಮ ದುರ್ಯೋಧನ ವೃಷಸೇನ ಲಕ್ಕಣಾದಿಗಳಪ್ಪತಿರಥ ಮಹಾರಥ ಸಮರಥಾರ್ಧರಥರ್ಕಳನಿರಿಸಿ ಮತ್ತಮವರ ಬಳಸಿಯುಮನೇಕ ಸಾಮಜಬಲಂಬೆರಸು ಜಯತ್ಸೇನ ಸುದಕ್ಷಿಣ ಕಾಂಭೋಜಾದಿ ನಾಯಕರನಿರಿಸಿ ಮತ್ತಮವರ ಕೆಲದೊಳೆಡೆಯಱದು ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಷಣ ಹಳಾಯುಧ ಮುಸಳಾಯುಧ ಕಾಳ ನೀಳ ರೂಕ್ಷ ರಾಕ್ಷಸ ಬಲಮನಿರಿಸಿ ಮತ್ತಮವರ ಕೆಲದೊಳಿವರ್ಗಿವರ್ ಷಾಸಟಿಯಾಗಿರ್ಪುದೆಂದು ನಿಂದ ನೆಲೆಯೊಳ್ ತಳರದೆ ನಿಲ್ವಂತಾಗಿರಿಸಿ ಗುಹೆಯ ಬಾಗಿಲೊಳ್ ಸಿಂಹಮಿರ್ಪಂದದಿಂ ಭಾರದ್ವಾಜಂ ಸಿಂಧುರಾಜಂಬೆರಸು ಚಕ್ರವ್ಯೂಹದ ಬಾಗಿಲೊಳ್ ನೆರೆದು ಮೆರೆದು ನಿಂದಾಗಳ್ ಧರ್ಮಪುತ್ರನೇಗೆಯ್ವ ತೆಱನುಮನಱಿಯದಭಿಮನ್ಯುವಂ ಕರೆದಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಒಡ್ಡಿದ ಚಕ್ರವ್ಯೂಹದ ನಡುವೆ ಎಡೆಯಱಿದು (ನಡುವೆ ಯೋಗ್ಯವಾದ ಸ್ಥಳಗಳಲ್ಲಿ) ಕಳಿಂಗರಾಜನ ಕರಿಘಟೆಗಳುಮಂ ( ಆನೆಯ ಸಮೂಹವನ್ನೂ) ಕರ್ಣ ಶಲ್ಯ ಶಕುನಿ ಕೃಪ ಕೃತವರ್ಮ ಭೂರಿಶ್ರವ ಅಶ್ವತ್ಥಾಮ ದುರ್ಯೋಧನ ವೃಷಸೇನ ಲಕ್ಕಣಾದಿಗಳಪ್ಪ ಅತಿರಥ ಮಹಾರಥ ಸಮರಥ ಅರ್ಧರಥರ್ಕಳನು ಇರಿಸಿ (ಅತಿರಥ ಮಹಾರಥ ಸಮರಥ ಅರ್ಧರಥರುಗಳನ್ನು ಇರಿಸಿ-) ಮತ್ತಮ್ ಅವರ ಬಳಸಿಯುಂ (ಸುತ್ತ) ಅನೇಕ ಸಾಮಜ ಬಲಂಬೆರಸು (ಆನೆಯ ಸೈನ್ಯದೊಡನೆ) ಜಯತ್ಸೇನ ಸುದಕ್ಷಿಣ ಕಾಂಭೋಜಾದಿ ನಾಯಕರನು ಇರಿಸಿ ಮತ್ತಂ ಅವರ ಕೆಲದೊಳು ಎಡೆಯಱದು(ಪಕ್ಕದಲ್ಲಿ ಸೂಕ್ತ ಸ್ಥಳವನ್ನು ತಿಳಿದು) ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಷಣ ಹಳಾಯುಧ ಮುಸಳಾಯುಧ ಕಾಳ ನೀಳ ರೂಕ್ಷ ರಾಕ್ಷಸ ಬಲಮನು ಇರಿಸಿ ಮತ್ತಂ ಅವರ ಕೆಲದೊಳು ಇವರ್ಗಿವರ್ ಷಾಸಟಿಯಾಗಿರ್ಪುದೆಂದು (ಪಕ್ಕದಲ್ಲಿ ಇವರಿಗೆ ಇವರು ಸಮನಾಗಿರುತ್ತದೆ) ನಿಂದ ನೆಲೆಯೊಳ್ ತಳರದೆ ನಿಲ್ವಂತಾಗಿರಿಸಿ (ನಿಂತ ಸ್ಥಳದಲ್ಲಿಯೇ ಚಲಿಸದೆ ನಿಲ್ಲುವ ಹಾಗೆ ಇರಿಸಿ) ಗುಹೆಯ ಬಾಗಿಲೊಳ್ (ವ್ಯೂಹದ/ ಗುಹೆಯ ಬಾಗಿಲಿಗೆ) ಸಿಂಹಂ ಇರ್ಪ ಅಂದದಿಂ ಭಾರದ್ವಾಜಂ ಸಿಂಧುರಾಜಂ ಬೆರಸು (ಸಿಂಹವಿರುವ ಹಾಗೆ ದ್ರೋಣಾಚಾರ್ಯನು ಸೈಂಧವನೊಡಗೂಡಿ) ಚಕ್ರವ್ಯೂಹದ ಬಾಗಿಲೊಳ್ ನೆರೆದು ಮೆರೆದು (ಒಟ್ಟುಗೂಡಿಕೊಂಡು ಪೂರ್ಣ ಸಮರ್ಥನಾಗಿ) ನಿಂದಾಗಳ್, ಧರ್ಮಪುತ್ರನು ಏಗೆಯ್ವ ತೆಱನುಮನು ಅಱಿಯದೆ (ಏನು ಮಾಡಬೇಕೆಂಬ ಕ್ರಮದನ್ನು ತಿಳಿಯದೆ) ಅಭಿಮನ್ಯುವಂ ಕರೆದು ಇಂತೆಂದಂ-
ವಚನ:ಅರ್ಥ:ಹಾಗೆ ಹೂಡಿದ ಚಕ್ರವ್ಯೂಹದ ನಡುವೆ ಯೋಗ್ಯವಾದ ಸ್ಥಳಗಳಲ್ಲಿ ಕಳಿಂಗ ರಾಜನ ಆನೆಯ ಸಮೂಹವನ್ನೂ ಕರ್ಣ, ಶಲ್ಯ, ಶಕುನಿ, ಕೃತವರ್ಮ, ಭೂರಿಶ್ರವ, ಅಶ್ವತ್ಥಾಮ, ದುರ್ಯೋಧನ, ವೃಷಸೇನ, ಲಕ್ಷಣನೇ ಮೊದಲಾದ ಅತಿರಥ ಮಹಾರಥ ಸಮರಥ ಅರ್ಧರಥರುಗಳನ್ನು ಇರಿಸಿದನು. ಅದರ ಸುತ್ತಲೂ ಅನೇಕ ಆನೆಯ ಸೈನ್ಯದೊಡನೆ ಜಯತ್ಸೇನ, ಸುದಕ್ಷಿಣ, ಕಾಂಭೋಜರೇ ಮೊದಲಾದ ನಾಯಕರುಗಳನ್ನಿಟ್ಟನು. ಮತ್ತು ಅವರ ಪಕ್ಕದಲ್ಲಿ ಸೂಕ್ತ ಸ್ಥಳವನ್ನು ತಿಳಿದು ಬಕಾಸುರ ಜಟಾಸುರರ ಮಕ್ಕಳಾದ ಅಳಂಭೂಷಣ, ಹಳಾಯುಧ, ಮುಸಳಾಯುಧ, ಕಾಳನೀಳರ ಭಯಂಕರವಾದ ರಾಕ್ಷಸ ಸೈನ್ಯವನ್ನಿರಿಸಿದನು. ಅವರ ಪಕ್ಕದಲ್ಲಿ ಇವರಿಗೆ ಇವರು ಸಮನಾಗಿರುತ್ತದೆ ಎಂದು ನಿಂತ ಸ್ಥಳದಲ್ಲಿಯೇ ಚಲಿಸದೆ ನಿಲ್ಲುವ ಹಾಗೆ ಇರಿಸಿ ವ್ಯೂಹದ/ ಗುಹೆಯ ಬಾಗಿಲಿಗೆ ಸಿಂಹವಿರುವ ಹಾಗೆ ದ್ರೋಣಾಚಾರ್ಯನು ಸೈಂಧವನೊಡಗೂಡಿ ಚಕ್ರವ್ಯೂಹದ ಬಾಗಿಲಿನಲ್ಲಿ ಒಟ್ಟುಗೂಡಿಕೊಂಡು ಮೆರೆದು ನಿಂತನು. ಧರ್ಮರಾಜನು ಏನು ಮಾಡಬೇಕೆಂಬ ಕ್ರಮದನ್ನು ತಿಳಿಯದೆ ಅಭಿಮನ್ಯುವನ್ನು ಕರೆದು ಹೀಗೆ ಹೇಳಿದನು.-
ಮ|| ಸ್ರ|| ಇದು ಚಕ್ರವ್ಯೂಹಮೀ ವ್ಯೂಹಮನೊಡೆವದಟಂ ಪಾರ್ಥನಂತಾತನುಂ ಗೆಂ
ಟಿದನೆಮ್ಮೀ ನಾಲ್ವರುಂ ಭೇದಿಸಲಱಿಯೆವಿದಂ ಕಂದ ನೀಂ ಬಲ್ಲ ಪೇೞೆಂ|
ಬುದುಮಾನೆಮ್ಮಯ್ಯನಲ್ ಕೇಳ್ದಱಿವೆನಿದನಿದೇನಯ್ಯ ಚಿಂತಾಂತರಂ ಪೊ
ಕ್ಕಿದನೀಗಳ್ ವನ್ಯಗಂಧದ್ವಿರದಮೆ ಕೊಳನಂ ಪೊಕ್ಕವೋಲ್ ಕಾದಿ ತೋರ್ಪೆ|| ೮೭ ||
ಪದ್ಯ-೮೭:ಪದವಿಭಾಗ-ಅರ್ಥ:ಇದು ಚಕ್ರವ್ಯೂಹಮಂ ಈ ವ್ಯೂಹಮನು ಒಡೆವ ಅದಟಂ ಪಾರ್ಥನು ಅಂತು ಆತನುಂ ಗೆಂಟಿದಂ (ಈ ಚಕ್ರವ್ಯೂಹವನ್ನು ಬೇಧಿಸುವ ವೀರ ಅರ್ಜುನ, ಅವನೂ ದೂರವಾದನು;) ಎಮ್ಮೀ ನಾಲ್ವರುಂ ಭೇದಿಸಲು ಅಱಿಯೆವು ಇದಂ (ನಾವು ಉಳಿದ ನಾಲ್ಕು ಜನವೂ ಇದನ್ನು ಭೇದಿಸಲು ತಿಳಿಯೆವು.) ಕಂದ ನೀಂ ಬಲ್ಲ ಪೇೞ್ ಎಂಬುದಂ (ನೀನೇನಾದರೂ ತಿಳಿದಿದ್ದೀಯಾ ಹೇಳು ಎನ್ನಲು) ಎಂಬುದುಂ- ಆನು ಎಮ್ಮಯ್ಯನಲ್ ಕೇಳ್ದಱಿವೆನು ಇದನು ಇದೇನು ಅಯ್ಯ ಚಿಂತಾಂತರಂ (ಇದನ್ನು ತಂದೆಯಲ್ಲಿ ಕೇಳಿ ತಿಳಿದಿದ್ದೇನೆ. ದೊಡ್ಡಪ್ಪಾ ಇದಕ್ಕೇಕೆ ವಿಶೇಷ ಚಿಂತೆ.) ಪೊಕ್ಕು ಇದನು ಈಗಳ್ ವನ್ಯಗಂಧದ್ವಿರದಮೆ (ವನ್ಯ ಗಂಧ ದ್ವಿರದಮೆ -ಕಾಡಿನ ಮದ್ದಾನೆಯು) ಕೊಳನಂ ಪೊಕ್ಕವೋಲ್ ಕಾದಿ ತೋರ್ಪೆ (ಕೊಳವನ್ನು ಪ್ರವೇಶಿಸುವ ಹಾಗೆ ಯುದ್ಧಮಾಡಿ ತೋರಿಸುತ್ತೇನೆ. )
ಪದ್ಯ-೮೭:ಅರ್ಥ:ಇದು ಚಕ್ರವ್ಯೂಹ, ಈ ಚಕ್ರವ್ಯೂಹವನ್ನು ಬೇಧಿಸುವ ವೀರ ಅರ್ಜುನ, ಅವನೂ ದೂರವಾದನು. ನಾವುನಾಲ್ಕು ಜನವೂ ಇದನ್ನು ಭೇದಿಸಲು ತಿಳಿಯೆವು. ಮಗು ನೀನೇನಾದರೂ ತಿಳಿದಿದ್ದೀಯಾ ಹೇಳು ಎನ್ನಲು ಇದನ್ನು ತಂದೆಯಲ್ಲಿ ಕೇಳಿ ತಿಳಿದಿದ್ದೇನೆ. ದೊಡ್ಡಪ್ಪಾ ಇದಕ್ಕೇಕೆ ವಿಶೇಷ ಚಿಂತೆ. ಇದನ್ನು ಈಗಲೇ ಪ್ರವೇಶಿಸಿ ಕಾಡಿನ ಮದ್ದಾನೆಯು ಕೊಳವನ್ನು ಪ್ರವೇಶಿಸುವ ಹಾಗೆ ಯುದ್ಧಮಾಡಿ ತೋರಿಸುತ್ತೇನೆ.
ಚಂ|| ಆನಲನ ಕೊಟ್ಟ ಗಾಂಡಿವದ ತೇರ ಮುರಾರಿಯ ಮೆಚ್ಚ ದೇವ ದೇ
ವನ ದಯೆಗೆಯ್ದ ಸಾಯಕದ ಬೆಂಬಲದೊಳ್ ಕಲಿಯೆಂದು ಕೆಮ್ಮನ|
ಮ್ಮನನದಟೞ್ಗುತಿರ್ಪಿರವಿದೇಂ ಪೆಗೆಯೊಡ್ಡು ಗೆಲಲ್ಕಳುಂಬಮೆಂ
ಬನಿತುವರಂ ಮನಕ್ಕೆ ನಿಮಗತ್ತಳಗಂ ಬರೆ ಮತ್ತೆ ಮಾಣ್ಬೆನೇ|| ೮೮ ||
ಪದ್ಯ-೮೮:ಪದವಿಭಾಗ-ಅರ್ಥ: ಆನಲನ ಕೊಟ್ಟ ಗಾಂಡಿವದ ತೇರ (ಅಗ್ನಿಯು ದಾನಮಾಡಿದ ಗಾಂಡೀವಾಸ್ತ್ರದ ದಿವ್ಯ ರಥದ,) ಮುರಾರಿಯ ಮೆಚ್ಚ ದೇವ ದೇವನ ದಯೆಗೆಯ್ದ ಸಾಯಕದ ಬೆಂಬಲದೊಳ್ (ಸಾರಥಿಯಾಗಿರುವ ಕೃಷ್ಣನ ಪ್ರಸಾದದ, ದೇವದೇವನಾದ ಈಶ್ವರನು ಅನುಗ್ರಹಿಸಿದ ಪಾಶುಪತಾಸ್ತ್ರದ ಬೆಂಬಲದಿಂದ) ಕಲಿಯೆಂದು ಕೆಮ್ಮನೆ ಅಮ್ಮನಂ ಅದಟ ಅೞ್ಗುತಿರ್ಪ (ಒಲಿದು ಮೆಚ್ಚುತ್ತಿರುವ) ಇರವು ಇದೇಂ (ಶೂರನೆಂದು ಸುಮ್ಮನೆ ಕರೆಯಿಸಿಕೊಳ್ಳುವ ತಂದೆಯಾದ ಅರ್ಜುನನ ಪರಾಕ್ರಮವನ್ನು ಒಲಿದು ಮೆಚ್ಚುತ್ತಿರುವ ಈ ಸ್ಥಿತಿಯು ಇದೇನು?) ಪೆಗೆಯ ಒಡ್ಡು ( ಶತ್ರುಸೈನ್ಯವು) ಗೆಲಲ್ಕೆ ಅಳುಂಬಂ ಎಂಬನಿತುವರಂ (ಗೆಲ್ಲುವುದಕ್ಕೆ ಅಸಾಧ್ಯವೆಂದು ಹೇಳುವವರೆಗೆ) ಮನಕ್ಕೆ ನಿಮಗೆ ಅತ್ತಳಗಂ ಬರೆ (ಮನಸ್ಸಿಗೆ ಚಿಂತೆಯುಂಟಾದರೆ) ಮತ್ತೆ ಮಾಣ್ಬೆನೇ (ಮತ್ತೆ ಯುದ್ಧಕ್ಕೆ ಹೋಗದೆ ನಿಲ್ಲುತ್ತೇನೆಯೇ? ಇಗೋ ಹೊರಟೆನು!)
ಪದ್ಯ-೮೮:ಅರ್ಥ:ಅಗ್ನಿಯು ದಾನಮಾಡಿದ ಗಾಂಡೀವಾಸ್ತ್ರದ ದಿವ್ಯ ರಥದ, ಸಾರಥಿಯಾಗಿರುವ ಕೃಷ್ಣನ ಪ್ರಸಾದದ, ದೇವದೇವನಾದ ಈಶ್ವರನು ಅನುಗ್ರಹಿಸಿದ ಪಾಶುಪತಾಸ್ತ್ರದ ಬೆಂಬಲದಿಂದ ಶೂರನೆಂದು ಸುಮ್ಮನೆ ಕರೆಯಿಸಿಕೊಳ್ಳುವ ತಂದೆಯಾದ ಅರ್ಜುನನ ಪರಾಕ್ರಮವನ್ನು ಒಲಿದು ಮೆಚ್ಚುತ್ತಿರುವ ಈ ಸ್ಥಿತಿಯದೇನು? ಶತ್ರುಸೈನ್ಯವು ಗೆಲ್ಲುವುದಕ್ಕೆ ಅಸಾಧ್ಯವೆಂದು ಹೇಳುವವರೆಗೆ ಮನಸ್ಸಿಗೆ ಚಿಂತೆಯುಂಟಾದರೆ, ಮತ್ತೆ ಯುದ್ಧಕ್ಕೆ ಹೋಗದೆ ನಿಲ್ಲುತ್ತೇನೆಯೇ? (ಇಲ್ಲಿ ಈಗಲೇ ಯುದ್ಧಕ್ಕೆ ಹೊರಡುತ್ತೇನೆ)
ಚಂ|| ನೆರೆದು ಚತುರ್ವಲಂಬೆರಸು ಬಂದುಱದೊಡ್ಡಿದ ಗಂಡರಾರುಮೆ
ನ್ನಱಿಯದ ಗಂಡರೇ ನೆಗೆದ ನೆತ್ತರ ಸುಟ್ಟುರೆಕಂಡದಿಂಡೆಗಳ್|
ಪಱಿದು ನಭಂಬರಂ ಪರೆದು ಪರ್ವಿ ಲಯಾಗ್ನಿ ಶಿಖಾಕಳಾಪಮಂ
ಮರೆಯಿಸೆ ತಾಗಿ ತಳ್ತಿಱಿಯದನ್ನೆಗಮೆಂತು ನರಂಗೆ ವುಟ್ಟಿದೆಂ|| ೮೯ ||
ಪದ್ಯ-೮೯:ಪದವಿಭಾಗ-ಅರ್ಥ:ನೆರೆದು ಚತುರ್ವಲಂ ಬೆರಸು (ಚತುರಂಗ ಬಲದೊಡನೆ ಕೂಡಿಕೊಂಡು) ಬಂದು ಉಱದೆ ಒಡ್ಡಿದ ಗಂಡರು (ವೇಗವಾಗಿ ಬಂದು ಸೈನ್ಯವನ್ನು ಒಡ್ಡಿರುವ ಶೂರರು) ಆರುಂ ಎನ್ನ ಅಱಿಯದ ಗಂಡರೇ (ನನಗೆ ತಿಳಿಯದ ಶೂರರೇ?) ನೆಗೆದ ನೆತ್ತರ ಸುಟ್ಟುರೆ (ಪ್ರವಾಹವು) ಕಂಡದಿಂಡೆಗಳ್ (ಮೇಲಕ್ಕೆ ಚಿಮ್ಮಿದ ರಕ್ತಪ್ರವಾಹವು ಮಾಂಸಖಂಡದ ರಾಶಿಗಳು) ಪಱಿದು ನಭಂಬರಂ ಪರೆದು ಪರ್ವಿ (ಕತ್ತರಿಸಿ ಮುಗಿಲವರೆಗೆ ಹರಿದು ಚೆಲ್ಲಾಡುವಂತೆಯೂ) ಲಯಾಗ್ನಿ ಶಿಖಾಕಳಾಪಮಂ ಮರೆಯಿಸೆ ತಾಗಿ (ಲಯಮಾಡುವ ಪ್ರಳಯಾಗ್ನಿ ಜ್ವಾಲೆಗಳನ್ನು ಮರೆಮಾಡುತ್ತಿರಲು ಎದುರಿಸಿ) ತಳ್ತು ಇಱಿಯದನ್ನೆಗಂ (ಯುದ್ಧ ಮಾಡದೆ ಉರುವವರೆಗೆ) ಎಂತು ನರಂಗೆ ವುಟ್ಟಿದೆಂ (ಎದುರಿಸಿ ಕೂಡಿ ಯುದ್ಧ ಮಾಡದಿದ್ದರೆ ನಾನು ಅರ್ಜುನನಿಗೆ ಹೇಗೆ ಹುಟ್ಟಿದವನಾಗುತ್ತೇನೆ?)
ಪದ್ಯ-೮೯:ಅರ್ಥ: ಚತುರಂಗ ಬಲದೊಡನೆ ಕೂಡಿಕೊಂಡು ವೇಗವಾಗಿ ಬಂದು ಸೈನ್ಯವನ್ನು ಒಡ್ಡಿರುವ ಶೂರರು ನನಗೆ ತಿಳಿಯದ ಶೂರರೇ? ಮೇಲಕ್ಕೆ ಚಿಮ್ಮಿದ ರಕ್ತಪ್ರವಾಹವು ಆಕಾಶಕ್ಕೆ ಚಿಮ್ಮುವಂತೆಯೂ ಮಾಂಸಖಂಡದ ರಾಶಿಗಳು ಕತ್ತರಿಸಿ ಮುಗಿಲವರೆಗೆ ಹರಿದು ಚೆಲ್ಲಾಡುವಂತೆಯೂ ಲಯಮಾಡುವ ಪ್ರಳಯಾಗ್ನಿ ಜ್ವಾಲೆಗಳನ್ನು ಮರೆಮಾಡುತ್ತಿರಲು ಎದುರಿಸಿ ಕೂಡಿ ಯುದ್ಧ ಮಾಡದಿದ್ದರೆ ನಾನು ಅರ್ಜುನನಿಗೆ ಹೇಗೆ ಹುಟ್ಟಿದವನಾಗುತ್ತೇನೆ?
ವ|| ಎಂಬುದುಂ ಯಮನಂದನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಯಮನಂದನು ಇಂತೆಂದಂ-
ವಚನ:ಅರ್ಥ:ವ|| ಎನ್ನಲು ಯಮನ ಪುತ್ರನಾದ ಧರ್ಮರಾಯನು ಹೀಗೆಂದನು-
ಚಂ|| ಅನುವರದಲ್ಲಿ ತಳ್ತು ಪಗೆಯಂ ತವೆ ಕೊಂದೊಡಮಾಂತರಾತಿ ಸಾ
ಧನದೊಳಗೞ್ಗಿ ತೞ್ಗಿದೊಡಮೆನ್ನಯ ಸಂತತಿಗಾಗಿಸಿರ್ದ ನಿ|
ನ್ನನೆ ಮದದಂತಿ ದಂತ ಮುಸಲಾಹತಿಗಂ ಕರವಾಳ ಬಾಯ್ಗಮಂ
ಬಿನ ಮೊನೆಗಂ ಮಹಾರಥರ ತಿಂತಿಣಿಗಂ ಪಿಡಿದೆಂತು ನೂಂಕುವೆಂ|| ೯೦ ||
ಪದ್ಯ-೯೦:ಪದವಿಭಾಗ-ಅರ್ಥ:ಅನುವರದಲ್ಲಿ ತಳ್ತು ಪಗೆಯಂ ತವೆ ಕೊಂದೊಡಂ (ಯುದ್ಧದಲ್ಲಿ ಸೇರಿ ಶತ್ರುವನ್ನು ಪೂರ್ಣವಾಗಿ ಕೊಲ್ಲಬಹುದು ಅಥವಾ) ಆಂತ ಅರಾತಿ ಸಾಧನದೊಳಗೆ (ಪ್ರತಿಭಟಿಸಿದ ಶತ್ರುಸೈನ್ಯದಲ್ಲಿ ) ಅೞ್ಗಿ ತೞ್ಗಿದೊಡಂ ಎನ್ನಯ ಸಂತತಿಗೆ ಆಗಿಸಿರ್ದ (ಅಳಿದು ಸತ್ತರೂ, ಆದರೆ ನನ್ನ ವಂಶೋದ್ಧಾರಕ್ಕಾಗಿಯೇ ಹುಟ್ಟಿರುವ) ನಿನ್ನನೆ ಮದದಂತಿ ದಂತ ಮುಸಲಾಹತಿಗಂ ಕರವಾಳ ಬಾಯ್ಗಂ (ನಿನ್ನನ್ನೇ ಮದ್ದಾನೆಯ ದಂತವೆಂಬ ಒನಕೆಯ ಪೆಟ್ಟಿಗೂ ಕತ್ತಿಯ ಬಾಯಿಗೂ) ಅಂಬಿನ ಮೊನೆಗಂ ಮಹಾರಥರ ತಿಂತಿಣಿಗಂ (ಬಾಣದ ತುದಿಗೂ ಮಹಾರಥರ ಸಮೂಹಕ್ಕೂ) ಪಿಡಿದು ಎಂತು ನೂಂಕುವೆಂ (ಹಿಡಿದು ಹೇಗೆ ನೂಕಲಿ?)
ಪದ್ಯ-೯೦:ಅರ್ಥ:ಯುದ್ಧದಲ್ಲಿ ಸೇರಿ ಶತ್ರುವನ್ನು ಪೂರ್ಣವಾಗಿ ಕೊಲ್ಲಬಹುದು ಅಥವಾ ಪ್ರತಿಭಟಿಸಿದ ಶತ್ರುಸೈನ್ಯದಲ್ಲಿ, ಅಳಿದು ಸತ್ತರೂ, ಆದರೆ ನನ್ನ ವಂಶೋದ್ಧಾರಕ್ಕಾಗಿಯೇ ಹುಟ್ಟಿರುವ ನಿನ್ನನ್ನೇ ಮದ್ದಾನೆಯ ದಂತವೆಂಬ ಒನಕೆಯ ಪೆಟ್ಟಿಗೂ, ಕತ್ತಿಯ ಬಾಯಿಗೂ, ಬಾಣದ ತುದಿಗೂ ಮಹಾರಥರ ಸಮೂಹಕ್ಕೂ ಹಿಡಿದು ಹೇಗೆ ನೂಕಲಿ?
ಕಂ|| ಮಗನೆ ಪದಿನಾಲ್ಕು ವರುಷದ
ಮಗನೈ ನಿನ್ನನ್ನನೊರ್ವನಂ ಪಗೆವಡೆಯೊ|
ಡ್ಡುಗಳನೊಡೆಯಲ್ಕೆವೇೞ್ದೆರ್ದೆ
ಧಗಮೆನೆ ಸೈರಿಸುವುಪಾಯಮಾವುದು ಕಱುವೇ|| ೯೧||91
ಪದ್ಯ-೯೧:ಪದವಿಭಾಗ-ಅರ್ಥ:ಮಗನೆ ಪದಿನಾಲ್ಕು ವರುಷದಮಗನೈ (ಮಗನೇ ಇನ್ನೂ ಹದಿನಾಲ್ಕು ವರ್ಷದ ಮಗುವಪ್ಪಾ.) ನಿನ್ನನ್ನ ಒರ್ವನಂ (ನಿನ್ನಂತಹ ಒಬ್ಬನನ್ನು ) ಪಗೆವಡೆಯ ಒಡ್ಡುಗಳನು ಒಡೆಯಲ್ಕೆ ವೇೞ್ದು ಎರ್ದೆ ಧಗಮ್ ಎನೆ (ಶತ್ರುಸೈನ್ಯದ ಗುಂಪನ್ನು ಭೇದಿಸಲು ಹೇಳಿ ಎದೆ ಧಗ್ಗೆಂದು ಉರಿಯಲು) ಸೈರಿಸುವ ಉಪಾಯಮಾವುದು (ತಡೆದುಕೊಳ್ಳುವ ಉಪಾಯವಾವುದು) ಕಱುವೇ (ಕಂದನೇ?)
ಪದ್ಯ-೯೧:ಅರ್ಥ:ಮಗನೇ ನೀನು ಇನ್ನೂ ಹದಿನಾಲ್ಕು ವರ್ಷದ ಮಗುವಪ್ಪಾ. ನಿನ್ನಂತಹ ಒಬ್ಬನನ್ನು ಶತ್ರುಸೈನ್ಯದ ಗುಂಪನ್ನು ಭೇದಿಸಲು ಹೇಳಿ ಎದೆ ಧಗ್ಗೆಂದು ಉರಿಯಲು ತಡೆದುಕೊಳ್ಳುವ ಉಪಾಯವಾವುದು ಕಂದನೇ?
ವ|| ಎಂದೊಡಾ ಮಾತಂ ಮಾರ್ಕೊಂಡಭಿಮನ್ಯುವಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದೊಡೆ ಆ ಮಾತಂ ಮಾರ್ಕೊಂಡು (ಪ್ರತಿಭಟಿಸಿ) ಅಭಿಮನ್ಯುವು ಇಂತೆಂದಂ-
ವಚನ:ಅರ್ಥ: ವ|| ಎನ್ನಲು ಆ ಮಾತನ್ನು ಪ್ರತಿಭಟಿಸಿ ಅಭಿಮನ್ಯುವು ಹೀಗೆ ಹೇಳಿದನು.
ಮ|| ಕ್ರಮಮಂ ಕೆಯ್ಕೊಳಲೆಂದು ಪುಟ್ಟಿ ರಣದೊಳ್ ಸಾವನ್ನೆಗಂ ಮಾಣ್ದೊಡ
ಕ್ರಮಮಕ್ಕುಂ ಕ್ರಮಮಕ್ಕುಮೇ ಕ್ರಮಮನಾಗೇಗೆಯ್ದಪೆಂ ವಿಕ್ರಮಂ|
ಕ್ರಮಮಾಂ ವಿಕ್ರಮದಾತನೆಂ ಕ್ರಮದ ಮಾತಂತಿರ್ಕೆ ಮಾಣ್ದಿರ್ದೊಡಾಂ|
ಕ್ರಮಕೆಂದಿರ್ದೆನೆ ಬಿಟ್ಟೊಡಂ ಬಿಡದೊಡಂ ಬೀೞ್ಕೊಂಡೆನಿಂ ಮಾಣ್ಬೆನೇ|| ೯೨ ||
ಪದ್ಯ-೯೨:ಪದವಿಭಾಗ-ಅರ್ಥ:ಕ್ರಮಮಂ ಕೆಯ್ಕೊಳಲೆಂದು ಪುಟ್ಟಿ (ಯುದ್ಧದಲ್ಲಿ ಕ್ರಮವಾಗಿ ಅವಕಾಶ ಪ್ರಾಪ್ತವಾದುದನ್ನು ಸ್ವೀಕರಿಸುವುದಕ್ಕಾಗಿಯೇ ಹುಟ್ಟಿ) ರಣದೊಳ್ ಸಾವನ್ನೆಗಂ ಮಾಣ್ದೊಡೆ ಅಕ್ರಮಮಕ್ಕುಂ (ಯುದ್ಧದಲ್ಲಿ ಸಾಯುವವರಿಗೂ ಹೋರಾಡದೆ, ಯುದ್ಧಕ್ಕೆ ತಪ್ಪಿದರೆ (ಹೆದರಿದರೆ) ಅದು ಅಕ್ರಮವಾಗುತ್ತದೆ;) ಕ್ರಮಂ ಅಕ್ಕುಮೇ? ಕ್ರಮಂ ಆನು ಆಗ ಏಗೆಯ್ದಪೆಂ? (ನಾನು ಏನು ಮಾಡಿದರೆ ಕ್ರಮವಾದದ್ದು ಆಗುತ್ತದೆ, ಏನು ಮಾಡಲಿ?) ವಿಕ್ರಮಂ ಕ್ರಮಂ, (ಪರಾಕ್ರಮ ತೋರುವುವೇ ಈಗ ಕ್ರಮ) ಆಂ ವಿಕ್ರಮದಾತನೆಂ ಕ್ರಮದ ಮಾತು ಅಂತಿರ್ಕೆ (ಕ್ರಮದ ಮಾತು ಹಾಗಿರಲಿ) ಮಾಣ್ದು ಇರ್ದೊಡೆ ಆಂ ಕ್ರಮಕೆಂದಿರ್ದೆನೆ (ನೀವು ಬೇಡವೆಂದು ಅಪ್ಪಣೆ ಕೊಡಿದಿದ್ದರೂ ನಾನು ಕ್ರಮಕ್ಕಾಗಿ ಇದ್ದೇನೆ.) ಬಿಟ್ಟೊಡಂ ಬಿಡದೊಡಂ ಬೀೞ್ಕೊಂಡೆನು ಇಂ ಮಾಣ್ಬೆನೇ (ನೀವು ಬಿಡಲಿ ಬಿಡದಿರಲಿ ಹೊರಟಿದ್ದೇನೆ. ಅದನ್ನು ಇನ್ನು ನಿಲ್ಲುತ್ತೇನೆಯೇ?)
ಪದ್ಯ-೯೨:ಅರ್ಥ: ಯುದ್ಧದಲ್ಲಿ ಕ್ರಮವಾಗಿ ಅವಕಾಶ ಪ್ರಾಪ್ತವಾದುದನ್ನು ಸ್ವೀಕರಿಸುವುದಕ್ಕಾಗಿಯೇ ಹುಟ್ಟಿ, ಯುದ್ಧದಲ್ಲಿ ಸಾಯುವವರಿಗೂ ಹೋರಾಡದೆ, ಯುದ್ಧಕ್ಕೆ ತಪ್ಪಿದರೆ (ಹೆದರಿದರೆ) ಅದು ಅಕ್ರಮವಾಗುತ್ತದೆ; ಕ್ರಮವಾಗುತ್ತದೆಯೇ? ನಾನು ಏನು ಮಾಡಿದರೆ ಕ್ರಮವಾದದ್ದು ಆಗುತ್ತದೆ, ಏನು ಮಾಡಲಿ?. ಕ್ರಮದ ಮಾತು ಹಾಗಿರಲಿ; ಪರಾಕ್ರಮ ತೋರುವುವೇ ಈಗ ಕ್ರಮ. ನಾನು ಪರಾಕ್ರಮಶಾಲಿ. ಕ್ರಮದ ಮಾತು ಹಾಗಿರಲಿ. ನೀವು ಬೇಡವೆಂದು ಅಪ್ಪಣೆ ಕೊಡಿದಿದ್ದರೂ ನಾನು ಕ್ರಮಕ್ಕಾಗಿ ಇದ್ದೇನೆ. ನೀವು ಬಿಡಲಿ ಬಿಡದಿರಲಿ ಹೊರಟಿದ್ದೇನೆ. ಅದನ್ನು ಇನ್ನು ನಿಲ್ಲುತ್ತೇನೆಯೇ?
ವ|| ಎಂದು ತನ್ನೇಱಿದ ಕನಕ ರಥಮಂ ತನ್ನ ಮನದನ್ನನಪ್ಪ ಜಯನೆಂಬ ಸಾರಥಿಯಂ ಚೋದಿಸೆಂದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ತನ್ನ ಏಱಿದ ಕನಕ ರಥಮಂ ತನ್ನ ಮನದನ್ನನಪ್ಪ ಜಯನೆಂಬ ಸಾರಥಿಯಂ ಚೋದಿಸೆಂದಾಗಳ್-
ವಚನ:ಅರ್ಥ:ವ|| ಎಂದು ತಾನು ಹತ್ತಿದ್ದ ಚಿನ್ನದ ತೇರನ್ನು ತನಗೆ ಪ್ರೀತಿಪಾತ್ರನಾದ ಜಯನೆಂಬ ಸಾರಥಿಯನ್ನು ರಥವನ್ನು ನೆಡಸೆಂದು ಹೇಳಿ-ಹೊರಟೇಬಿಟ್ಟನು.
ಚಂ|| ಎಱಗುವ ಬಟ್ಟಿನಂಬುಗಳ ಬಲ್ಲರಿ ಕುಂಭಜನಂ ಮರಳ್ಚೆ ಪಾ
ಯ್ದಱಿಕೆಯ ಪಾರೆಯಂಬುಗಳ ತಂದಲಗುರ್ವಿಸಿ ಸಿಂಧುರಾಜನಂ|
ಮಱುಗಿಸೆ ಬಾಗಿಲೊಳ್ ಮುಸುಱಿ ನಿಂದ ಘಟಾವಳಿಯಂ ತೆರಳ್ಚಿ ತ
ತ್ತಱದಱಿದೊತ್ತಿ ಪೊಕ್ಕನಭಿಮನ್ಯು ವಿರೋಧಿಬಳಾಂಬುರಾಶಿಯಂ|| ೯೩ ||
ಪದ್ಯ-೦೦:ಪದವಿಭಾಗ-ಅರ್ಥ:ಎಱಗುವ ಬಟ್ಟಿನ ಅಂಬುಗಳ ಬಲ್ಲರಿ (ಮೇಲೆ ಬೀಳುತ್ತಿರುವ ಭಾರವಾದ ಬಾಣಗಳ ದೊಡ್ಡ ಮಳೆಯು) ಕುಂಭಜನಂ ಮರಳ್ಚೆ (ದ್ರೋಣನನ್ನು ಹಿಂದಿರುಗಿಸಲು,) ಪಾಯ್ದಱಿಕೆಯ ಪಾರೆಯಂಬುಗಳ (ಹಾದು ಬರುವ ದೊಡ್ಡದಾದ ಹಾರೆಯಂಥ ಅಂಬುಗಳ) ತಂದಲ್ ಅಗುರ್ವಿಸಿ ಸಿಂಧುರಾಜನಂ ಮಱುಗಿಸೆ (ಹಾದು ಬರುವ ದೊಡ್ಡದಾದ ಹಾರೆಯಂಥ ಅಂಬುಗಳ ಜಿನುಗು ಮಳೆಯು ಸೈಂಧವನನ್ನು ಹೆದರಿಸಿ ವ್ಯಥೆಪಡಿಸಲು) ಬಾಗಿಲೊಳ್ ಮುಸುಱಿ ನಿಂದ ಘಟಾವಳಿಯಂ (ಚಕ್ರವ್ಯೂಹದ ಬಾಗಿಲಿನಲ್ಲಿ ಮುತ್ತಿಕೊಂಡು ನಿಂತಿದ್ದ ಆನೆಯ ಸೈನ್ಯವನ್ನು) ತೆರಳ್ಚಿ (ತೆರಳಿಸಿ, ಓಡಿಸಿ) ತತ್ತಱದಱಿದು ಒತ್ತಿ ( ಶತ್ರುಸೇನೆಯನ್ನು- ಚೂರುಚೂರಾಗಿ ತರಿದು ನುಗ್ಗಿ,) ಪೊಕ್ಕನು ಅಭಿಮನ್ಯು ವಿರೋಧಿಬಳ ಅಂಬುರಾಶಿಯಂ (ಅಭಿಮನ್ಯುವು ನೂಕಿ ವಿರೋಧಿ ಬಲದ/ ಸೈನ್ಯದ ಸಮುದ್ರವನ್ನು ಹೊಕ್ಕನು.)
ಪದ್ಯ-೦೦:ಅರ್ಥ: ಮೇಲೆ ಬೀಳುತ್ತಿರುವ ಭಾರವಾದ ಬಾಣಗಳ ದೊಡ್ಡ ಮಳೆಯು ದ್ರೋಣನನ್ನು ಹಿಂದಿರುಗಿಸಿತು. ಹಾದು ಬರುವ ದೊಡ್ಡದಾದ ಹಾರೆಯಂಥ ಅಂಬುಗಳ ಜಿನುಗು ಮಳೆಯು ಸೈಂಧವನನ್ನು ಹೆದರಿಸಿ ವ್ಯಥೆಪಡಿಸಿತು. ಚಕ್ರವ್ಯೂಹದ ಬಾಗಿಲಿನಲ್ಲಿ ಮುತ್ತಿಕೊಂಡು ನಿಂತಿದ್ದ ಆನೆಯ ಸೈನ್ಯವನ್ನು ಓಡಿಸಿ, ಶತ್ರುಸೇನಾಸಮುದ್ರವನ್ನು ಚೂರುಚೂರಾಗಿ ತರಿದು ನುಗ್ಗಿ, ಅಭಿಮನ್ಯುವು ನೂಕಿ ವಿರೋಧಿ ಬಲದ/ ಸೈನ್ಯದ ಸಮುದ್ರವನ್ನು ಹೊಕ್ಕನು.
ವ|| ಅಂತು ಪೊಕ್ಕು ವಿರೋಧಿ ಸೈನ್ಯಮಂ ಮಾರಿ ಪೊಕ್ಕಂತೆ ಪೆಣಮಯಂ ಮಾಡಿ ತೂಱಿಕೊಂಡ ಜೋಳದಂತಿರೆ ಪಡಲ್ವಡಿಸಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಪೊಕ್ಕು ವಿರೋಧಿ ಸೈನ್ಯಮಂ ಮಾರಿ ಪೊಕ್ಕಂತೆ ಪೆಣಮಯಂ ಮಾಡಿ (ಶತ್ರುಸೈನ್ಯವನ್ನು ಪ್ರವೇಶಮಾಡಿ ಮಾರಿ ಹೊಕ್ಕಂತೆ ಹೆಣಮಯವನ್ನಾಗಿ ಮಾಡಿ) ತೂಱಿಕೊಂಡ ಜೋಳದಂತಿರೆ ಪಡಲ್ವಡಿಸಿದಾಗಳ್ (ಗಾಳಿಯಲ್ಲಿ ತೂರಿದ ಜೋಳದ ಹಾಗೆ ನೆಲಕ್ಕೆ ಚೆಲ್ಲಾಪಿಲ್ಲಿಯಾಗಿ ಬೀಳಿಸಿದಾಗ-)-
ವಚನ:ಅರ್ಥ:ವ|| ಹಾಗೆ ಶತ್ರುಸೈನ್ಯವನ್ನು ಪ್ರವೇಶಮಾಡಿ ಮಾರಿ ಹೊಕ್ಕಂತೆ ಹೆಣಮಯವನ್ನಾಗಿ ಮಾಡಿ ಗಾಳಿಯಲ್ಲಿ ತೂರಿದ ಜೋಳದ ಹಾಗೆ ನೆಲಕ್ಕೆ ಚೆಲ್ಲಾಪಿಲ್ಲಿಯಾಗಿ ಬೀಳಿಸಿದನು. ಆಗ-
ಚಂ|| ಒಣಗಿದುದೊಂದು ಪೆರ್ವಿದಿರ ಪೆರ್ವೊದಱಿಂ ಮೊರೆದುರ್ವುವಾಶುಶು
ಕ್ಷಣಿಯವೊಲಾಂತ ಖೞ್ಗ ನಿವಹಕ್ಕೆ ರಥಕ್ಕೆ ದೞಕ್ಕೆ ಮತ್ತವಾ|
ರಣ ನಿವಹಕ್ಕೆ ತಕ್ಕಿನಭಿಮನ್ಯುವ ಕೂರ್ಗಣೆ ಪಾಯ್ದು ನುಂಗಲುಂ
ಟೊಣೆಯಲುಮುರ್ಚಿ ಮಕ್ಕಲುಮಿದೇಂ ನೆರೆ ಕಲ್ತುವೊ ಯುದ್ಧರಂಗದೊಳ್ ||೯೪ ||
ಪದ್ಯ-೪:ಪದವಿಭಾಗ-ಅರ್ಥ:ಒಣಗಿದುದೊಂದು ಪೆರ್ವಿದಿರ ಪೆರ್ವೊದಱಿಂ (ಒಣಗಿಸಿದ ಒಂದು ಹೆಬ್ಬಿದಿರಿನ ದೊಡ್ಡ ಬಿದಿರುಮೆಳೆಯಿಂದ) ಮೊರೆದು ಉರ್ವುವ ಅಶುಶುಕ್ಷಣಿಯವೊಲ್ (ಶಬ್ದಮಾಡಿಕೊಂಡು ಉರಿಯುವ ಅಗ್ನಿಯ ಹಾಗೆ ಪ್ರತಿಭಟಿಸಿದ ಖಡ್ಗಧಾರಿಗಳ ಗುಂಪಿಗೆ,) ತ ಖೞ್ಗ ನಿವಹಕ್ಕೆ ರಥಕ್ಕೆ ದೞಕ್ಕೆ (ಪ್ರತಿಭಟಿಸಿದ ಖಡ್ಗಧಾರಿಗಳ ಗುಂಪಿಗೆ, ರಥಕ್ಕೆ, ಸೈನ್ಯಕ್ಕೆ,) ಮತ್ತವಾರಣ ನಿವಹಕ್ಕೆ (ಮದ್ದಾನೆಗಳ ಸಮೂಹಕ್ಕೆ,) ತಕ್ಕಿನ ಅಭಿಮನ್ಯುವ ಕೂರ್ಗಣೆ ಪಾಯ್ದು (ಸಮರ್ಥವಾದ ಅಭಿಮನ್ಯುವಿನ ಹರಿತವಾದ ಬಾಣಗಳು ಹಾದುಹೊಗಿ) ನುಂಗಲುಂ ಟೊಣೆಯಲುಂ ಉರ್ಚಿ ಮಕ್ಕಲುಂ, (ನುಂಗುವುದಕ್ಕೂ ಚಪ್ಪರಿಸುವುದಕ್ಕೂ ಮುಕ್ಕುವುದಕ್ಕೂ) ಇದೇಂ ನೆರೆ ಕಲ್ತುವೊ ಯುದ್ಧರಂಗದೊಳ್ (ರಣರಂಗದಲ್ಲಿ ಎಷ್ಟು ಚೆನ್ನಾಗಿ ಕಲಿತುವೋ!)
ಪದ್ಯ-೯೪:ಅರ್ಥ:ಒಣಗಿದ ಒಂದು ಹೆಬ್ಬಿದಿರಿನ ದೊಡ್ಡ ಬಿದಿರುಮೆಳೆಯಿಂದ ಶಬ್ದಮಾಡಿಕೊಂಡು ಉಬ್ಬುವ ಅಗ್ನಿಯ ಹಾಗೆ ಪ್ರತಿಭಟಿಸಿದ ಖಡ್ಗಧಾರಿಗಳ ಗುಂಪಿಗೆ, ರಥಕ್ಕೆ, ಸೈನ್ಯಕ್ಕೆ, ಮದ್ದಾನೆಗಳ ಸಮೂಹಕ್ಕೆ, ಸಮರ್ಥವಾದ ಅಭಿಮನ್ಯುವಿನ ಹರಿತವಾದ ಬಾಣಗಳು ಹಾದುಹೊಗಿ, ನುಂಗುವುದಕ್ಕೂ ಚಪ್ಪರಿಸುವುದಕ್ಕೂ ಮುಕ್ಕುವುದಕ್ಕೂ ರಣರಂಗದಲ್ಲಿ ಎಷ್ಟು ಚೆನ್ನಾಗಿ ಕಲಿತುವೋ!
ವ|| ಅಂತಿದಿರಾಂತ ಮಾರ್ಪಡೆಯೆಲ್ಲಮಂ ಜವನ ಪಡೆಗೆ ಪಡಿಗಚ್ಚಿಕ್ಕುವಂತಿಕ್ಕಿ ನಿಂದ ನರನಂದನನಂ ಕಂಡು ವಿಕ್ರಮಕ್ಕಂ ಕ್ರಮಕ್ಕಂ ಪುರುಡಿಸುವ ಸುಯೋಧನನ ಮಕ್ಕಳ್ ಲಕ್ಕಣಂ ಮೊದಲಾಗೆ ನೂರ್ವರುಮೊಂದಾಗೆ ಬಂದು ತಾಗಿದಾಗಳ್-
ವಚನ:ಪದವಿಭಾಗ-ಅರ್ಥ: ಅಂತು ಇದಿರಾಂತ ಮಾರ್ಪಡೆಯೆಲ್ಲಮಂ ಜವನ ಪಡೆಗೆ ಪಡಿಗಚ್ಚಿ ಇಕ್ಕುವಂತೆ ಇಕ್ಕಿ ('ಹಾಗೆ ಎದುರಿಸಿದ ಸೈನ್ಯವೆಲ್ಲವನ್ನೂ ಯಮನ ಸೈನ್ಯಕ್ಕೆ ನಿಯಮಿತ (ನಿತ್ಯಾಹಾರವನ್ನು ಕೊಡುವ ಹಾಗೆ ಕೊಟ್ಟು) ನಿಂದ ನರನಂದನನಂ ಕಂಡು (ಅಭಿಮನ್ಯುವನ್ನು ಕಂಡು) ವಿಕ್ರಮಕ್ಕಂ ಕ್ರಮಕ್ಕಂ ಪುರುಡಿಸುವ ಸುಯೋಧನನ ಮಕ್ಕಳ್ (ಪರಾಕ್ರಮಕ್ಕೂ ಸಂಪ್ರದಾಯಕ್ಕೂ ಸ್ಪರ್ಧೆಮಾಡುತ್ತಿದ್ದ ದುರ್ಯೋಧನನ ಮಕ್ಕಳಾದ) ಲಕ್ಕಣಂ ಮೊದಲಾಗೆ ನೂರ್ವರುಂ ಒಂದಾಗೆ ಬಂದು ತಾಗಿದಾಗಳ್ (ಲಕ್ಷಣನೇ ಮೊದಲಾದ ನೂರುಮಂದಿಯೂ ಒಟ್ಟಾಗಿ ಬಂದು ಎದುರಿಸಿದಾಗ) -
ವಚನ:ಅರ್ಥ:ಹಾಗೆ ಎದುರಿಸಿದ ಸೈನ್ಯವೆಲ್ಲವನ್ನೂ ಯಮನ ಸೈನ್ಯಕ್ಕೆ ನಿಯಮಿತ ನಿತ್ಯಾಹಾರವನ್ನು ಕೊಡುವ ಹಾಗೆ ಕೊಟ್ಟ, ನಿಂತಿರುವ ಅಭಿಮನ್ಯುವನ್ನು ಕಂಡು ಪರಾಕ್ರಮಕ್ಕೂ ಸಂಪ್ರದಾಯಕ್ಕೂ ಸ್ಪರ್ಧೆಮಾಡುತ್ತಿದ್ದ ದುರ್ಯೋಧನನ ಮಕ್ಕಳಾದ ಲಕ್ಷಣನೇ ಮೊದಲಾದ ನೂರುಮಂದಿಯೂ ಒಟ್ಟಾಗಿ ಬಂದು ಎದುರಿಸಿದಾಗ-
ಸ್ರ|| ಸೂೞೈಸೆಚ್ಚೆಚ್ಚು ಬಿಲ್ಲಂ ರಥದ ಕುದುರೆಯಂ ಸೂತನಂ ಖಂಡಿಸುತ್ತಾ
ಳೇೞೆಂಟೊಂಬತ್ತು ಪತ್ತೆಂಬಱಿಕೆಯ ಸರಲಿಂದೂಱಿಕೊಂಡಾವ ಮೆಯ್ಯುಂ|
ಪಾೞೆಂಬಂತಾಗೆ ಪಾರ್ದಾರ್ದುಱದಿಸೆ ಮುಳಿಸಿಂ ನೂರ್ವರುಂ ಪೊನ್ನ ತಾೞ್ಗಳ್
ಸೂೞೊಳ್ ಬೀೞ್ವಂತೆ ಬಿೞ್ದರ್ ಮಕುಟಮಣಿಗಣದ್ಯೋತಿಸಾರರ್ ಕುಮಾರರ್|| ೯೫ ||
ಪದ್ಯ-೯೫:ಪದವಿಭಾಗ-ಅರ್ಥ:ಸೂೞೈಸಿ ಎಚ್ಚೆಚ್ಚು (ಸರದಿಯ ಪ್ರಕಾರ ಹೊಡೆಹೊಡೆದು) ಬಿಲ್ಲಂ ರಥದ ಕುದುರೆಯಂ ಸೂತನಂ (ಸರದಿಯ ಪ್ರಕಾರ ಬಿಲ್ಲನ್ನೂ ರಥದ ಕುದುರೆಯನ್ನು ಸಾರಥಿಯನ್ನೂ ಹೊಡೆಹೊಡೆದು) ಖಂಡಿಸುತ್ತ ಆಳೇೞೆ ಎಂಟೊಂಬತ್ತು ಪತ್ತೆಂಬ ಅಱಿಕೆಯ ಸರಲಿಂದ (ಕತ್ತರಿಸುತ್ತ ಆರು, ಏಳು, ಎಂಟು, ಒಂಬತ್ತು, ಹತ್ತು ಎಂಬ ಸಂಖ್ಯೆಯ ಪ್ರಸಿದ್ಧವಾದ ಬಾಣಗಳಿಂದ) ಊಱಿಕೊಂಡು ಆವ ಮೆಯ್ಯುಂ ಪಾೞು ಎಂಬಂತಾಗೆ (ನಾಟಿಕೊಳ್ಳುವ ಹಾಗೆ ಮಾಡಿ ಎಲ್ಲ ಶರೀರಗಳೂ ಹಾಳು (ಬಾಣವಿಲ್ಲದ್ದು- ಪೊಳ್ಳು) ಎನ್ನುವಂತಾಗದ ಹಾಗೆ) ಪಾರ್ದು ಆರ್ದು ಉಱದೆ ಇಸೆ ಮುಳಿಸಿಂ (ಆರ್ಭಟ ಮಾಡಿ ಸಿಟ್ಟಿನಿಂದ ಬಿಡದೆ ಹೊಡೆಯಲು) ನೂರ್ವರುಂ ಪೊನ್ನ ತಾೞ್ಗಳ್ ಉೞೊಳ್ ಬೀೞ್ವಂತೆ (ನೂರು ಕುಮಾರರೂ ಹೊಂದಾಳೆಯ ಮರಗಳು ಉರುಳಿ ಬೀಳುವಹಾಗೆ) ಬಿೞ್ದರ್-> ಮಕುಟಮಣಿಗಣದ್ಯೋತಿಸಾರರ್ (ಕಿರೀಟದ ರತ್ನಸಮೂಹದ ಕಾಂತಿಯಿಂದ ಪ್ರಕಾಶರಾದ) ಕುಮಾರರ್ (ನೂರು ಕುಮಾರರೂ) ಬಿಳ್ದರ್ | ಬಿದ್ದರು)
ಪದ್ಯ-೯೫:ಅರ್ಥ: ಸರದಿಯ ಪ್ರಕಾರ ಬಿಲ್ಲನ್ನೂ ರಥದ ಕುದುರೆಯನ್ನು ಸಾರಥಿಯನ್ನೂ ಹೊಡೆಹೊಡೆದು ಕತ್ತರಿಸುತ್ತ ಆರು, ಏಳು, ಎಂಟು, ಒಂಬತ್ತು, ಹತ್ತು ಎಂಬ ಸಂಖ್ಯೆಯ ಸಿದ್ಧವಾದ ಬಾಣಗಳಿಂದ ನಾಟಿಕೊಳ್ಳುವ ಹಾಗೆ ಮಾಡಿ ಎಲ್ಲ ಶರೀರಗಳೂ ಹಾಳು (ಬಾಣವಿಲ್ಲದ್ದು- ಪೊಳ್ಳು) ಎನ್ನುವಂತಾಗದ ಹಾಗೆ) ಆರ್ಭಟ ಮಾಡಿ ಹೊಡೆಯಲು ಕಿರೀಟದ ರತ್ನಸಮೂಹದ ಕಾಂತಿಯಿಂದ ಪ್ರಕಾಶರಾದ ನೂರ್ವರು ಕುಮಾರರು ಹೊಂದಾಳೆಯ ಮರಗಳು ಉರುಳಿ ಬೀಳುವಹಾಗೆ ಬಿದ್ದರು.
ವ|| ಆಗಳ್ ಸುಯೋಧನನ ಮಕ್ಕಳ ಸಾವಂ ಕಂಡು ತಮ್ಮಣ್ಣನ ಮೊಗಮನಾವ ಮೊಗದೊಳ್ ನೋೞ್ಪೆನೆಂದು ದುಶ್ಯಾಸನಂ ಬಂದು ತಾಗಿದಾಗಳ್- ()
ವಚನ:ಪದವಿಭಾಗ-ಅರ್ಥ:ಆಗಳ್ ಸುಯೋಧನನ ಮಕ್ಕಳ ಸಾವಂ ಕಂಡು ತಮ್ಮಣ್ಣನ ಮೊಗಮನು ಆವ ಮೊಗದೊಳ್ ನೋೞ್ಪೆನೆಂದು ದುಶ್ಯಾಸನಂ ಬಂದು ತಾಗಿದಾಗಳ್ (ನಮ್ಮಣ್ಣನ ಮುಖವನ್ನು ಯಾವ ಮುಖದಲ್ಲಿ ನೋಡಲಿ ಎಂದು ದುಶ್ಯಾಸನನು ಬಂದು ಮೇಲೆ ಬಿದ್ದನು)-
ವಚನ:ಅರ್ಥ:ವ|| ಆಗ ದುರ್ಯೋಧನನ ಮಕ್ಕಳ ಸಾವನ್ನು ನೋಡಿ ನಮ್ಮಣ್ಣನ ಮುಖವನ್ನು ಯಾವ ಮುಖದಲ್ಲಿ ನೋಡಲಿ ಎಂದು ದುಶ್ಯಾಸನನು ಬಂದು ಮೇಲೆ ಬಿದ್ದನು.
ಕಂ|| ಒಂದೆ ಸರಲಿಂದಮವನೆರ್ದೆ
ಯಂ ದೊಕ್ಕನೆ ತಿಣ್ಣಮೆಚ್ಚು ಕೊಲಲೊಲ್ಲನೆ ಸಂ|
ಕ್ರಂದನ ನಂದನ ತನಯಂ
ತಂದೆಯ ಪೂಣ್ಕೆಯನೆ ನೆನೆದು ದುಶ್ಯಾಸನನಂ|| ೯೬ ||
ಪದ್ಯ-೯೬:ಪದವಿಭಾಗ-ಅರ್ಥ:ಒಂದೆ ಸರಲಿಂದಂ ಅವನ ಎರ್ದೆಯಂ ದೊಕ್ಕನೆ ತಿಣ್ಣಂ ಎಚ್ಚು (ಒಂದೇ ಬಾಣದಿಂದ ದುಶ್ಶಾಸನನ ಎದೆಯನ್ನು ದೊಕ್ಕೆಂದು ತೀಕ್ಷ್ಣವಾಗಿ ಹೊಡೆದು) ಕೊಲಲ್ ಒಲ್ಲನೆ (ಕೊಲ್ಲಲು ಒಪ್ಪೆನು ಎಂದುಕೊಂಡನು), ಸಂಕ್ರಂದನ ನಂದನ ತನಯಂ (ಅಭಿಮನ್ಯುವು) ತಂದೆಯ (ಭೀಮನ) ಪೂಣ್ಕೆಯನೆ ನೆನೆದು ದುಶ್ಯಾಸನನಂ (ತಂದೆಯಾದ ಭೀಮನ ಪ್ರತಿಜ್ಞೆಯನ್ನು ಜ್ಞಾಪಿಸಿಕೊಂಡು - ದುಶ್ಯಾಸನನನ್ನು ಕೊಲ್ಲಲು ಒಪ್ಪೆನು ಎಂದುಕೊಂಡನು)
ಪದ್ಯ-೯೬:ಅರ್ಥ:ಒಂದೇ ಬಾಣದಿಂದ ದುಶ್ಶಾಸನನ ಎದೆಯನ್ನು ದೊಕ್ಕೆಂದು ತೀಕ್ಷ್ಣವಾಗಿ ಹೊಡೆದು ತಂದೆಯಾದ ಭೀಮನ ಪ್ರತಿಜ್ಞೆಯನ್ನು ಜ್ಞಾಪಿಸಿಕೊಂಡು ಅಭಿಮನ್ಯುವು ದುಶ್ಯಾಸನನನ್ನು ಕೊಲ್ಲಲು ಒಪ್ಪೆನು ಎಂದುಕೊಂಡನು.
ವ|| ಆಗಳ್ ಕಾನೀನಸೂನು ವೃಷಸೇನನೇನುಂ ಮಾಣದೆ ಕಾದುತ್ತಿರ್ದನನ್ನೆಗಮಿತ್ತ ನರನಂದನನ ಬೞಿವೞಿಯಂ ತಗುಳ್ದು ಗೞೆವೞಯ ಪಾವಿನಂತೆ ಚಕ್ರವ್ಯೂಹಮಂ ಪುಗಲೆಂದು ಬರ್ಪ ದ್ರುಪದ ವಿರಾಟ ಧೃಷದ್ಯುಮ್ನ ಭೀಮಸೇನ ಸಹದೇವ ನಕುಲ ಯುಧಿಷ್ಠಿರ ಘಟೋತ್ಕಚಾದಿಗಳೊಡನೆ ಮಲ್ಲಾಮಲ್ಲಿಯಾಗಿ ಕಾದುವ ಕುಂಭಸಂಭವನಲ್ಲಿಗೆ ದುರ್ಯೋಧನಂ ಬಂದು ನಮ್ಮ ಬಲಮೆಲ್ಲಮಭಿಮನ್ಯುವಿನಂಬಿನ ಮೊನೆಯೊಳ್ ತೂಳ್ದು ತೆರಳ್ದೋಡಿದಪ್ಪುದು ನಿಮಗಲ್ಲಿ ಕಾಳೆಗಮತಿಭರಮೇಗೆಯ್ವಮೆನೆ ಸಿಂಧುರಾಜನಿಂದಿನನುವರಕೀಯೆಡೆಯೊಳೆ ನಿತಾದೊಡಮೀಶ್ವರ ವರಪ್ರಸಾದದೊಳಾನೆ ಸಾಲ್ವೆನೆಂದಿಂತೆಂದಂ-
ವಚನ:ಪದವಿಭಾಗ-ಅರ್ಥ:ಆಗಳ್ ಕಾನೀನ ಸೂನು ವೃಷಸೇನನು ಏನುಂ ಮಾಣದೆ ಕಾದುತ್ತಿರ್ದನು ( ಕರ್ಣನ ಮಗನಾದ ವೃಷಸೇನನು ಎನೂ ಬಿಡದೆ ಒಂದೇ ಸಮನಾಗಿ ಕಾದುತ್ತಿದ್ದನು.) ಅನ್ನೆಗಂ ಇತ್ತ ನರನಂದನನ ಬೞಿವೞಿಯಂ ತಗುಳ್ದು (ಅನುಸರಿಸಿ) ಗೞೆವೞಯ ಪಾವಿನಂತೆ (ಅಷ್ಟರಲ್ಲಿ ಈ ಕಡೆ ಅಭಿಮನ್ಯುವು ಬಂದ ದಾರಿಯನ್ನೇ ಹಿಡಿದು ಬಿದುರುಗಣೆಯ ಮೇಲೆ ಬರುವ ಹಾವಿನಂತೆ) ಚಕ್ರವ್ಯೂಹಮಂ ಪುಗಲೆಂದು ಬರ್ಪ (ಚಕ್ರವ್ಯೂಹವನ್ನು ಪ್ರವೇಶಿಸಬೇಕೆಂದು ಬರುತ್ತಿರುವ) ದ್ರುಪದ ವಿರಾಟ ಧೃಷದ್ಯುಮ್ನ ಭೀಮಸೇನ ಸಹದೇವ ನಕುಲ ಯುಧಿಷ್ಠಿರ ಘಟೋತ್ಕಚಾದಿಗಳೊಡನೆ ಮಲ್ಲಾಮಲ್ಲಿಯಾಗಿ ಕಾದುವ ಕುಂಭಸಂಭವನಲ್ಲಿಗೆ ದುರ್ಯೋಧನಂ ಬಂದು (ಮೊದಲಾದವರೊಡನೆ ದ್ವಂದ್ವಯುದ್ಧದಿಂದ ಯುದ್ಧಮಾಡುತ್ತಿರುವ ದ್ರೋಣನಲ್ಲಿಗೆ ದುರ್ಯೋಧನನು ಬಂದು) ನಮ್ಮ ಬಲಮೆಲ್ಲಂ ಅಭಿಮನ್ಯುವಿನ ಅಂಬಿನ ಮೊನೆಯೊಳ್ ತೂಳ್ದು ತೆರಳ್ದು ಓಡಿದಪ್ಪುದು (ನಮ್ಮ ಸೈನ್ಯವೆಲ್ಲ ಅಭಿಮನ್ಯುವಿನ ಬಾಣದ ತುದಿಯಲ್ಲಿ ನೂಕಲ್ಪಟ್ಟು ಚದುರಿ ಓಡಿಹೋಗುತ್ತಿದೆ.) ನಿಮಗೆ ಅಲ್ಲಿ ಕಾಳೆಗಂ ಅತಿಭರಮ್ (ನಿಮಗೆ ಅಲ್ಲಿ ಕಾಳಗವು ಬಹಳ ತೀವ್ರ ಅಗತ್ಯವಾಗಿದೆ.) ಏಗೆಯ್ವಂ ಎಮೆನೆ (ಏನು ಮಾಡೋಣ ಎಂದು ಕೇಳಲು,) ಸಿಂಧುರಾಜನು ಇಂದಿನ ಅನುವರಕೆ ಈ ಯೆಡೆಯೊಳೆ ಎನಿತಾದೊಡಂ ಈಶ್ವರ ವರಪ್ರಸಾದದೊಳು ಆನೆ ಸಾಲ್ವೆನೆಂದು ಇಂತು ಎಂದಂ (ಸೈಂಧವನು ಈ ದಿನ ಯುದ್ಧಕ್ಕೆ ಹೇಗಾದರೂ ಈಶ್ವರನ ಪ್ರಸಾದದಿಂದ ಈ ಸಂದರ್ಭದಲ್ಲಿ ನಾನೇ ಸಮರ್ಥನಾಗುತ್ತೇನೆ ಎಂದು ಹೀಗೆ ಹೇಳಿದನು.)-
ವಚನ:ಅರ್ಥ:ವ|| ಆಗ ಕರ್ಣನ ಮಗನಾದ ವೃಷಸೇನನು ಎನೂ ಬಿಡದೆ ಒಂದೇ ಸಮನಾಗಿ ಕಾದುತ್ತಿದ್ದನು. ಅಷ್ಟರಲ್ಲಿ ಈ ಕಡೆ ಅಭಿಮನ್ಯುವು ಬಂದ ದಾರಿಯನ್ನೇ ಹಿಡಿದು ಬಿದುರುಗಣೆಯ ಮೇಲಿರುವ ಹಾವಿನಂತೆ ಚಕ್ರವ್ಯೂಹವನ್ನು ಪ್ರವೇಶಿಸಬೇಕೆಂದು ಬರುತ್ತಿರುವ ದ್ರುಪದ, ವಿರಾಟ, ಧೃಷ್ಟದ್ಯುಮ್ನ, ಭೀಮಸೇನ, ಸಹದೇವ, ನಕುಲ, ಯುಷ್ಠಿರ, ಘಟೋತ್ಕಚನೇ ಮೊದಲಾದವರೊಡನೆ ದ್ವಂದ್ವಯುದ್ಧದಿಂದ ಯುದ್ಧಮಾಡುತ್ತಿರುವ ದ್ರೋಣನಲ್ಲಿಗೆ ದುರ್ಯೋಧನನು ಬಂದು ನಮ್ಮ ಸೈನ್ಯವೆಲ್ಲ ಅಭಿಮನ್ಯುವಿನ ಬಾಣದ ತುದಿಯಲ್ಲಿ ನೂಕಲ್ಪಟ್ಟು ಚದುರಿ ಓಡಿಹೋಗುತ್ತಿದೆ. ನಿಮಗೆ ಅಲ್ಲಿ ಕಾಳಗವು ಬಹಳ ತೀವ್ರ ಅಗತ್ಯವಾಗಿದೆ. ಏನು ಮಾಡೋಣ ಎಂದು ಕೇಳಲು, ಸೈಂಧವನು ಈ ದಿನ ಯುದ್ಧಕ್ಕೆ ಹೇಗಾದರೂ ಈಶ್ವರನ ಪ್ರಸಾದದಿಂದ ಈ ಸಂದರ್ಭದಲ್ಲಿ ನಾನೇ ಸಮರ್ಥನಾಗುತ್ತೇನೆ ಎಂದು ಹೀಗೆ ಹೇಳಿದನು.
ಚಂ|| ಉಱದಿದಿರಾಂತು ನಿಂದ ರಿಪುಸೈನ್ಯಮನಾಹವರಂಗದಲ್ಲಿ ತ
ತ್ತಱದಱಿದಿಕ್ಕಲಾಂ ನೆರೆವೆನಿನ್ನಿರವೇಡೊಡಗೊಂಡು ಪೋಗು ನಿ|
ನ್ನಱಿಕೆಯ ಕುಂಭಸಂಭವನನೆಂದೊಡೆ ಪಾಂಡವಸೈನ್ಯಮಂ ಕಱು
ತ್ತಿಱಿವನಿತೊಂದಳುರ್ಕೆ ನಿನಗೇತರೊಳಾದುದೊ ಪೇೞ್ ಜಯದ್ರಥಾ|| ೯೭ ||
ಪದ್ಯ-೯೭:ಪದವಿಭಾಗ-ಅರ್ಥ:ಉಱದೆ ಇದಿರಾಂತು ನಿಂದ (ತೀವ್ರವಾಗಿ ಪ್ರತಿಭಟಿಸಿ ನಿಂತಿರುವ) ರಿಪುಸೈನ್ಯಮನು ಆಹವರಂಗದಲ್ಲಿ ತತ್ತಱದಱಿದು ಇಕ್ಕಲು (ಶತ್ರುಸೈನ್ಯವನ್ನು ಯುದ್ಧರಂಗದಲ್ಲಿ ಚೂರು ಚೂರಾಗಿ ಕತ್ತರಿಸಿ ತರಿದಿಕ್ಕಲೂ) ಆಂ ನೆರೆವೆಂ (ನಾನು ಸಮರ್ಥನಾಗಿದ್ದೇನೆ.) ಇನ್ನಿರವೇಡ ಒಡಗೊಂಡು ಪೋಗು (ಇನ್ನು ನೀನು ಇಲ್ಲಿರಬೇಕಾಗಿಲ್ಲ. ಪ್ರಸಿದ್ಧನಾದ ನಿನ್ನ ದ್ರೋಣನನ್ನೂ ಜೊತೆಯಲ್ಲಿಯೇ ಕರೆದುಕೊಂಡುಹೋಗು ಎಂದನು ಜಯದ್ರಥ) ನಿನ್ನ ಅಱಿಕೆಯ ಕುಂಭಸಂಭವನನು ಎಂದೊಡೆ (ನಿನ್ನ ಪ್ರಸಿದ್ಧನಾದ ದ್ರೋಣನನ್ನೂ ಜೊತೆಯಲ್ಲಿಯೇ ಕರೆದುಕೊಂಡುಹೋಗು ಎಂದಾಗ,) ಪಾಂಡವಸೈನ್ಯಮಂ ಕಱುತ್ತು (ಕೆರಳಿ) ಅಱಿವ ಅನಿತೊಂದು ಅಳುರ್ಕೆ (‘ಎಲೈ ಸೈಂಧವನೇ ಪಾಂಡವ ಸೈನ್ಯವನ್ನು ಕತ್ತರಿಸುವ ಅಷ್ಟೊಂದು ಪರಾಕ್ರಮವು) ನಿನಗೇತರೊಳು ಆದುದೊ ಪೇೞ್ ಜಯದ್ರಥಾ (‘ಎಲೈ ಸೈಂಧವನೇ ಪಾಂಡವ ಸೈನ್ಯವನ್ನು ಕತ್ತರಿಸುವ ಅಷ್ಟೊಂದು ಪರಾಕ್ರಮವು ನಿನಗೆ ಹೇಗೆ ಬಂದಿತು’ ಎಂದು ಕೇಳಿದನು .)
ಪದ್ಯ-೯೭:ಅರ್ಥ: ತೀವ್ರವಾಗಿ ಪ್ರತಿಭಟಿಸಿ ನಿಂತಿರುವ ಶತ್ರುಸೈನ್ಯವನ್ನು ಯುದ್ಧರಂಗದಲ್ಲಿ ಚೂರು ಚೂರಾಗಿ ಕತ್ತರಿಸಿ ತರಿದಿಕ್ಕಲೂ ನಾನು ಸಮರ್ಥನಾಗಿದ್ದೇನೆ. ಇನ್ನು ನೀನು ಇಲ್ಲಿರಬೇಕಾಗಿಲ್ಲ. ನಿನ್ನ ಪ್ರಸಿದ್ಧನಾದ ದ್ರೋಣನನ್ನೂ ಜೊತೆಯಲ್ಲಿಯೇ ಕರೆದುಕೊಂಡುಹೋಗು ಎಂದನು ಜಯದ್ರಥ. ಅದಕ್ಕೆ ದುರ್ಯೋದನನು ‘ಎಲೈ ಸೈಂಧವನೇ ಪಾಂಡವ ಸೈನ್ಯವನ್ನು ಕತ್ತರಿಸುವ ಅಷ್ಟೊಂದು ಪರಾಕ್ರಮವು ನಿನಗೆ ಹೇಗೆ ಬಂದಿತು’ ಎಂದು ಕೇಳಿದನು.
ವ|| ಎನೆ ಜಯದ್ರಥನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎನೆ ಜಯದ್ರಥನು ಇಂತು ಎಂದಂ-
ವಚನ:ಅರ್ಥ:ವ|| ಎನ್ನಲು ಸೈಂಧವನು ಹೀಗೆಂದನು.
ಮ|| ನರನೊಳ್ ಮುನ್ನಗಪಟ್ಟುದೊಂದೞಲೊಳಾಂ ಕೈಳಾಸ ಶೈಳೇಶನಂ
ಪಿರಿದುಂ ಭಕ್ತಿಯೊಳರ್ಚಿಸುತ್ತುಮಿರೆ ತದ್ದೇವಾಧಿಪಂ ಮೆಚ್ಚಿದೆಂ|
ನರನೊರ್ವಂ ಪೊರಗಾಗಲೊಂದು ದಿವಸಂ ಕೌಂತೇಯರಂ ಕಾದಿ ಗೆಲ್
ನಿರುತಂ ನೀನೆನೆ ಪೆತ್ತೆನಾಂ ಬರಮನದ್ರೀಂದ್ರಾತ್ಮಜಾಧೀಶನೊಳ್|| ೯೮ ||
ಪದ್ಯ-೯೮:ಪದವಿಭಾಗ-ಅರ್ಥ:ನರನೊಳ್ ಮುಂ (ನ?) ಅಗಪಟ್ಟ ಅದೊಂದು ಅೞಲೊಳು ( ಅರ್ಜುನನಿಂದ ಮೊದಲು ಸೆರೆಸಿಕ್ಕಿದ ಒಂದು ವ್ಯಥೆಯಿಂದ) ಆಂ ಕೈಳಾಸ ಶೈಳೇಶನಂ ಪಿರಿದುಂ ಭಕ್ತಿಯೊಳು ಅರ್ಚಿಸುತ್ತುಂ ಇರೆ (ನಾನು ಕೈಲಾಸಾಪತಿಯಾದ ಈಶ್ವರನನ್ನು ಬಹಳ ಭಕ್ತಿಯಿಂದ ಪೂಜೆ ಮಾಡುತ್ತಿರಲು) ತದ್ ದೇವಾಧಿಪಂ ಮೆಚ್ಚಿದೆಂ (ಆ ದೇವತೆಗಳ ಒಡೆಯನಾದ ಈಶ್ವರನು ‘ಮೆಚ್ಚಿದ್ದೇನೆ’,) ನರನೊರ್ವಂ ಪೊರಗಾಗಲ್ (ಅರ್ಜುನನೊಬ್ಬನನ್ನು ಬಿಟ್ಟು ಉಳಿದ-- ಪಾಂಡವರೊಡನೆ ) ಒಂದು ದಿವಸಂ ಕೌಂತೇಯರಂ ಕಾದಿ ಗೆಲ್ ನಿರುತಂ ನೀನು ಎನೆ (ಪಾಂಡವರೊಡನೆ ನೀನು ಕಾದಿ ಒಂದು ದಿವಸ ನಿಶ್ಚಯವಾಗಿ ಗೆಲ್ಲು ಎನ್ನಲು) ಪೆತ್ತೆ ನಾಂ ಬರಮನು ಅದ್ರೀಂದ್ರ ಆತ್ಮಜಾಧೀಶನೊಳ್ (ಅದ್ರಿ+ಇಂದ್ರ=ಬೆಟ್ಟದ ಇಂದ್ರ- ಹಿಮವಂತ -ಆತ್ಮಜಾ =ಮಗಳು, ಪಾರ್ವತಿಯ, ಅಧೀಶ ಪತಿ= ಶಿವ; ಆ ವರವನ್ನು ಪಾರ್ವತೀ ಪತಿಯಿಂದ ಪಡೆದೆನು)
ಪದ್ಯ-೯೮:ಅರ್ಥ: ಅರ್ಜುನನಿಂದ ಮೊದಲು ಸೆರೆಸಿಕ್ಕಿದ ಒಂದು ವ್ಯಥೆಯಿಂದ ನಾನು ಕೈಲಾಸಾಪತಿಯಾದ ಈಶ್ವರನನ್ನು ಬಹಳ ಭಕ್ತಿಯಿಂದ ಪೂಜೆ ಮಾಡುತ್ತಿರಲು ಆ ದೇವತೆಗಳ ಒಡೆಯನಾದ ಈಶ್ವರನು ‘ಮೆಚ್ಚಿದ್ದೇನೆ’, ಅರ್ಜುನನೊಬ್ಬನನ್ನು ಬಿಟ್ಟು ಉಳಿದ ಪಾಂಡವರೊಡನೆ ನೀನು ಕಾದಿ ಒಂದು ದಿವಸ ನಿಶ್ಚಯವಾಗಿ ಗೆಲ್ಲು ಎನ್ನಲು ಆ ವರವನ್ನು ಪಾರ್ವತೀಪತಿಯಿಂದ ಪಡೆದೆನು, ಎಂದನು ಜಯದ್ರಥ.
  • ಟಿಪ್ಪಣಿ: ಜಯದ್ರಥನು ದ್ರೌಪದಿಯನ್ನು ಅಪಹರಿಸಿಕೊಂಡು ಹೋದಾಗ ಅರ್ಜುನನು ಅವನನ್ನು ಸರೆ ಹಿಡಿದು, ತಂಗಿ ದುಶ್ಶಳೆಯ ಗಂಡನೆಂದು ಹೀಯಾಳಿಸಿ ಬಿಟ್ಟಿದ್ದನು.
ವ|| ಎಂದ ಸಿಂಧುರಾಜನ ನುಡಿಗೆ ರಾಜಾರಾಜನೆರಡು ಮುಯ್ವುಮಂ ನೋಡಿ-
ವಚನ:ಪದವಿಭಾಗ-ಅರ್ಥ:ಎಂದ ಸಿಂಧುರಾಜನ ನುಡಿಗೆ ರಾಜಾರಾಜನು ಎರಡು ಮುಯ್ವುಮಂ ನೋಡಿ-
ವಚನ:ಅರ್ಥ:ಎಂದು ಹೇಳಿದ ಸೈಂಧವನ ಮಾತಿಗೆ ಚಕ್ರವರ್ತಿಯಾದ ದುರ್ಯೋಧನನು (ತನ್ನ) ಎರಡು ಹೆಗಲುಗಳನ್ನು ನೋಡಿಕೊಂಡು ಸಂತೋಷಪಟ್ಟನು.
ಉ|| ನಿನ್ನನೆ ನಚ್ಚಿ ಪಾಂಡವರೊಳಾಂತಿಱಿಯಲ್ ತಱಿಸಂದು ಪೂಣ್ದೆನಾಂ
ನಿನ್ನ ಶರಾಳಿಗಳ್ಗಗಿದು ನಿಂದುವು ಪಾಂಡವ ಸೈನ್ಯಮೆಂದೊಡಿಂ|
ನಿನ್ನ ಭುಜಪ್ರತಾಪದಳವಾರ್ಗಮಸಾಧ್ಯಮಾಯ್ತದೇಂ
ನಿನ್ನಳವಿಂದಮಿನ್ನೆನಗೆ ಸಾರ್ದುದರಾತಿ ಜಯಂ ಜಯದ್ರಥಾ|| ೯೯ ||
ಪದ್ಯ-೯೯:ಪದವಿಭಾಗ-ಅರ್ಥ:ನಿನ್ನನೆ ನಚ್ಚಿ ಪಾಂಡವರೊಳು ಆಂತಿಱಿಯಲ್ ತಱಿಸಂದು (ನಿಶ್ಚಯಿಸಿ) ಪೂಣ್ದೆನು ಆ (ನಿನ್ನನ್ನು ನಂಬಿಕೊಂಡೇ ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ನಿಷ್ಕರ್ಷಿಸಿ ನಾನು ಪ್ರತಿಜ್ಞೆಮಾಡಿದೆನು.) ನಿನ್ನ ಶರಾಳಿಗಳ್ಗೆ ಅಗಿದು ನಿಂದುವು ಪಾಂಡವ ಸೈನ್ಯಂ ಎಂದೊಡೆ (ನಿನ್ನ ಬಾಣ ಸಮೂಹಗಳಿಗೆ ಹೆದರಿ ಪಾಂಡವಸೈನ್ಯವು ನಿಂತಿತು ಎಂದಾಗ) ಇಂ ನಿನ್ನ ಭುಜಪ್ರತಾಪದ ಅಳವು ಆರ್ಗಂ ಅಸಾಧ್ಯಮಾಯ್ತು (ನಿನ್ನ ತೋಳಿನ ಬಲದ ಪ್ರಮಾಣ ಮತ್ತಾರಿಗೂ ಅಸಾಧ್ಯವಾಯಿತು.) ಅದೇಂ ನಿನ್ನ ಅಳವಿಂದಂ ಇನ್ನು ಎನಗೆ ಸಾರ್ದುದು ಅರಾತಿ ಜಯಂ ಜಯದ್ರಥಾ ()
ಪದ್ಯ-೯೯:ಅರ್ಥ:ದುರ್ಯೋಧನ ಹೇಳಿದ, ನಿನ್ನನ್ನು ನಂಬಿಕೊಂಡೇ ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ನಿಷ್ಕರ್ಷಿಸಿ ನಾಬು ಪ್ರತಿಜ್ಞೆಮಾಡಿದೆನು. ನಿನ್ನ ಬಾಣ ಸಮೂಹಗಳಿಗೆ ಹೆದರಿ ಪಾಂಡವಸೈನ್ಯವು ನಿಂತಿತು ಎಂದಾಗ ನಿನ್ನ ತೋಳಿನ ಬಲದ ಪ್ರಮಾಣ ಮತ್ತಾರಿಗೂ ಅಸಾಧ್ಯವಾಯಿತು. ಸೈಂಧವನೇ ನಿನ್ನ ಪರಾಕ್ರಮದಿಂದ ನನಗೆ ಶತ್ರುಜಯವು ಉಂಟಾಯಿತು
ವ|| ಎಂದು ಪೊಗೞ್ದು ಸಿಂಧುರಾಜನನಿರಲ್ವೇೞ್ದು ಕುಂಭಸಂಭವನುಂ ತಾನುಮಭಿ ಮನ್ಯುವಿನ ಸಂಗ್ರಾಮರಂಗಮನಯ್ದೆ ವಂದು-
ವಚನ:ಪದವಿಭಾಗ-ಅರ್ಥ:ಎಂದು ಪೊಗೞ್ದು ಸಿಂಧುರಾಜನನು ಇರಲ್ವೇೞ್ದು (ಹೊಗಳಿ ಸೈಂಧವನನ್ನು ಅಲ್ಲಿಯೇ ಇರುವಂತೆ ಹೇಳಿ ) ಕುಂಭಸಂಭವನುಂ ತಾನುಂ ಅಭಿಮನ್ಯುವಿನ ಸಂಗ್ರಾಮರಂಗಮನು ಅಯ್ದೆ ವಂದು (ದ್ರೋಣನೂ ತಾನೂ ಅಭಿಮನ್ಯುವಿನ ಯುದ್ಧರಂಗವನ್ನು ಸೇರಿ)-
ವಚನ:ಅರ್ಥ: ಎಂದು ಹೀಗೆ ಹೊಗಳಿ ಸೈಂಧವನನ್ನು ಅಲ್ಲಿಯೇ ಇರುವಂತೆ ಹೇಳಿ ದ್ರೋಣನೂ ತಾನೂ ಅಭಿಮನ್ಯುವಿನ ಯುದ್ಧರಂಗವನ್ನು ಸೇರಿದರು.
ಚಂ|| ಉಡಿದ ರಥಂಗಳಿಟ್ಟೆಡೆಗಳೊಳ್ ಮಕುಟಂಗಳ ರತ್ನದೀಪ್ತಿಗಳ್
ಪೊಡರ್ವಿನಮೞ್ಗಿ ತೞ್ಗಿದ ನಿಜಾತ್ಮಜರಂ ನಡೆ ನೋಡಿ ಕಣ್ಣ ನೀ|
ರೊಡನೊಡನುರ್ಚಿ ಪಾಯೆ ಮುಳಿಸಿಂದದನೊಯ್ಯನೆ ತಾಳ್ದಿ ಕಾಯ್ಪಿನೊಳ್
ಕಡಗಿ ಜಗಂಗಳಂ ನೊಣೆದು ನುಂಗುಲುಮಾಟಿಸಿದಂ ಸುಯೋಧನಂ|| ೧೦೦ ||
ಪದ್ಯ-೧೦೧:ಪದವಿಭಾಗ-ಅರ್ಥ:ಉಡಿದ ರಥಂಗಳ ಇಟ್ಟೆಡೆಗಳೊಳ್ (ಮುರಿದ ರಥಗಳ ಸಂದಿಗಳಲ್ಲಿ) ಮಕುಟಂಗಳ ರತ್ನದೀಪ್ತಿಗಳ್ ಪೊಡರ್ವಿನಂ (ಕಿರೀಟಗಳ ರತ್ನಕಾಂತಿಗಳು ಹೊಳೆಯುತ್ತಿರಲು) ಅೞ್ಗಿ ತೞ್ಗಿದ ನಿಜಾತ್ಮಜರಂ ನಡೆ ನೋಡಿ (ನಾಶವಾಗಿ ಸತ್ತುಬಿದ್ದಿರುವ ತನ್ನ ಮಕ್ಕಳುಗಳನ್ನು ದುರ್ಯೋಧನನು ನಿಟ್ಟಿಸಿ ನೋಡಿದಾಗ) ಕಣ್ಣ ನೀರೊಡನೊಡನೆ ಉರ್ಚಿ ಪಾಯೆ (ಕಣ್ಣಿರು ಒಡನೆಯೇ ಚಿಮ್ಮಿ ಹರಿಯಲು,) ಮುಳಿಸಿಂದ ಅದನು ಒಯ್ಯನೆ ತಾಳ್ದಿ (ಅದನ್ನು ನಿಧಾನವಾಗಿ ಸಹಿಸಿಕೊಂಡು ಕೋಪದಿಂದ) ಕಾಯ್ಪಿನೊಳ್ ಕಡಗಿ (ಕೋಪದಿಂದ ರೇಗಿ) ಜಗಂಗಳಂ ನೊಣೆದು ನುಂಗುಲುಂ ಆಟಿಸಿದಂ ಸುಯೋಧನಂ (ಸುಯೋಧನನು ಲೋಕವನ್ನೆಲ್ಲ ಚಪ್ಪರಿಸಿ ನುಂಗಲು ಆಶಿಸಿದನು)
ಪದ್ಯ-೧೦೧:ಅರ್ಥ: ಮುರಿದ ರಥಗಳ ಸಂದಿಗಳಲ್ಲಿ ಕಿರೀಟಗಳ ರತ್ನಕಾಂತಿಗಳು ಹೊಳೆಯುತ್ತಿರಲು ನಾಶವಾಗಿ ಸತ್ತುಬಿದ್ದಿರುವ ತನ್ನ ಮಕ್ಕಳುಗಳನ್ನು ದುರ್ಯೋಧನನು ನಿಟ್ಟಿಸಿ ನೋಡಿದಾಗ ಕಣ್ಣಿರು ಒಡನೆಯೇ ಚಿಮ್ಮಿ ಹರಿಯಲು, ಅದನ್ನು ನಿಧಾನವಾಗಿ ಸಹಿಸಿಕೊಂಡು ಕೋಪದಿಂದ ರೇಗಿ ಸುಯೋಧನನು ಲೋಕವನ್ನೆಲ್ಲ ಚಪ್ಪರಿಸಿ ನುಂಗಲು ಆಶಿಸಿದನು.
ವ|| ಆಗಳ್ ದ್ರೋಣ ದ್ರೋಣಪುತ ಕೃಪ ಕೃತವರ್ಮ ಕರ್ಣ ಶಲ್ಯ ಶಕುನಿ ದುಶ್ಯಾಸನ ವೃಷಸೇನಾದಿಗಳಾಳ್ದನ ಮುಳಿದ ಮೊಗಮನಱಿದು ಧರ್ಮಯುದ್ಧಮಂ ಬಿಸುಟು ನರನಂದನನ ರಥಮಂ ಸುತ್ತಿ ಮುತ್ತಿಕೊಂಡು-
ವಚನ:ಪದವಿಭಾಗ-ಅರ್ಥ:ಆಗಳ್ ದ್ರೋಣ ದ್ರೋಣಪುತ ಕೃಪ ಕೃತವರ್ಮ ಕರ್ಣ ಶಲ್ಯ ಶಕುನಿ ದುಶ್ಯಾಸನ ವೃಷಸೇನಾದಿಗಳಾಳ್ದನ ಮುಳಿದ ಮೊಗಮನು ಅಱಿದು ಧರ್ಮಯುದ್ಧಮಂ ಬಿಸುಟು ನರನಂದನನ ರಥಮಂ ಸುತ್ತಿ ಮುತ್ತಿಕೊಂಡು (ದುರ್ಯೋಧನನ ಕೋಪದಿಂದ ಕೂಡಿದ ಮುಖವನ್ನು ನೋಡಿ ತಿಳಿದು ಧರ್ಮಯುದ್ಧವನ್ನು ಕೈಬಿಟ್ಟು ಅಭಿಮನ್ಯುವಿನ ರಥವನ್ನು ಸುತ್ತಿ ಮುತ್ತಿಕೊಂಡು-)
ವಚನ:ಅರ್ಥ:ವ|| ಆಗ ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಕರ್ಣ, ಶಲ್ಯ, ಶಕುನಿ, ದುಶ್ಯಾಸನ, ವೃಷಸೇನನೇ ಮೊದಲಾದವರು ಒಡೆಯನಾದ ದುರ್ಯೋಧನನ ಕೋಪದಿಂದ ಕೂಡಿದ ಮುಖವನ್ನು ನೋಡಿ ತಿಳಿದು ಧರ್ಮಯುದ್ಧವನ್ನು ಕೈಬಿಟ್ಟು ಅಭಿಮನ್ಯುವಿನ ರಥವನ್ನು ಸುತ್ತಿ ಮುತ್ತಿಕೊಂಡರು.
ಕಂ|| ತೇರಂ ಕುದುರೆಯನೆಸಗುವ
ಸಾರಥಿಯಂ ಬಿಲ್ಲನದಱ ಗೊಣೆಯುಮನುಱದಾ|
ರ್ದೋರೊರ್ವರೊಂದನೆಚ್ಚೊಡೆ
ಬೀರಂ ಗದೆಗೊಂಡು ಬೀರರಂ ಬೆಂಕೊಂಡಂ|| ೧೦೧ ||
ಪದ್ಯ-೧೦೧:ಪದವಿಭಾಗ-ಅರ್ಥ:ತೇರಂ ಕುದುರೆಯಂ ಎಸಗುವ ಸಾರಥಿಯಂ ಬಿಲ್ಲನು ಅದಱ ಗೊಣೆಯುಮನು (ರಥವನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯನ್ನೂ ಬಿಲ್ಲನ್ನೂ ಆದರ ಹೆದೆಯನ್ನೂ) ಉಱದೆ ಆರ್ದು ಒರೊರ್ವರ್ ಒಂದನು ಎಚ್ಚೊಡೆ ( ಸಾವಕಾಶ ಮಾಡದೆ ಒಬ್ಬೊಬ್ಬರೊಂದನ್ನು ಹೊಡೆಯಲು) ಬೀರಂ ಗದೆಗೊಂಡು ಬೀರರಂ ಬೆಂಕೊಂಡಂ (ಅಭಿಮನ್ಯುವು ಗದೆಯನ್ನು ತೆಗೆದುಕೊಂಡು ವೀರರನ್ನು ಬೆನ್ನಟ್ಟಿದನು)
ಪದ್ಯ-೧೦೧:ಅರ್ಥ:ರಥವನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯನ್ನೂ ಬಿಲ್ಲನ್ನೂ ಆದರ ಹೆದೆಯನ್ನೂ ಸಾವಕಾಶ ಮಾಡದೆ ಒಬ್ಬೊಬ್ಬರೊಂದನ್ನು ಹೊಡೆಯಲು ವೀರನಾದ ಅಭಿಮನ್ಯುವು ಗದೆಯನ್ನು ತೆಗೆದುಕೊಂಡು ವೀರರನ್ನು ಬೆನ್ನಟ್ಟಿದನು.
ಬೆಂಕೊಳೆ ಕಳಿಂಗ ರಾಜನ
ನೂಂಕಿದ ಕರಿಘಟೆಯನುಡಿಯೆ ಬಡಿ ಬಡಿದೆತ್ತಂ|
ಕಿಂಕೊೞೆಮಾೞ್ಪುದುಮುಱದೆ
ಚ್ಚಂ ಕರ್ಣಂ ನಿಶಿತ ಶರದಿನೆರಡುಂ ಕರಮಂ|| ೧೦೨ ||
ಪದ್ಯ-೧೦೨:ಪದವಿಭಾಗ-ಅರ್ಥ:ಬೆಂಕೊಳೆ (ಬೆನ್ನಟ್ಟಲು) ಕಳಿಂಗ ರಾಜನ ನೂಂಕಿದ ಕರಿಘಟೆಯನು ಉಡಿಯೆ (ಕಳಿಂಗ ರಾಜನು ಮುಂದಕ್ಕೆ ತಳ್ಳಿದ ಆನೆಯ ಸಮೂಹವನ್ನು ಒಡೆಯುವ ಹಾಗೆ) ಬಡಿ ಬಡಿದು ಎತ್ತಂ ಕಿಂಕೊೞೆ ಮಾೞ್ಪುದುಂ (ಬಡಿಬಡಿದು ಎಲ್ಲೆಲ್ಲಿಯೂ ಸಂಕಟಪಡಿಸಲು) ಉಱದೆ ಎಚ್ಚಂ ಕರ್ಣಂ ನಿಶಿತ ಶರದಿಂ ಎರಡುಂ ಕರಮಂ (ಕರ್ಣನು ವೇಗವಾಗಿ ಬಂದು ಹರಿತವಾದ ಬಾಣದಿಂದ ಅಭಿಮನ್ಯುವಿನ ಎರಡುಕೈಗಳನ್ನು ಹೊಡೆದನು- ಕತ್ತರಿಸಿದನು)
ಪದ್ಯ-೧೦೨:ಅರ್ಥ: ಕಳಿಂಗ ರಾಜನು ಮುಂದಕ್ಕೆ ತಳ್ಳಿದ ಆನೆಯ ಸಮೂಹವನ್ನು ಒಡೆಯುವ ಹಾಗೆ ಬಡಿಬಡಿದು ಎಲ್ಲೆಲ್ಲಿಯೂ ಸಂಕಟಪಡಿಸಲು ಕರ್ಣನು ವೇಗವಾಗಿ ಬಂದು ಹರಿತವಾದ ಬಾಣದಿಂದ ಅಭಿಮನ್ಯುವಿನ ಎರಡುಕೈಗಳನ್ನು ಹೊಡೆದನು (ಕತ್ತರಿಸಿದನು).
ಕರಮೆರಡುಂ ಪಱಿವುದುಮಾ
ಕರದಿಂದಂ ತನ್ನ ಕುನ್ನಗೆಯ್ಯೊಳೆ ಕೊಂಡು
ದ್ಧುರ ರಥಚಕ್ರದಿನಿಟ್ಟಂ
ತಿರಿಪಿ ನರಪ್ರಿಯ ತನೂಜನಕ್ಷೋಹಿಣಿಯಂ|| ೧೦೩ ||
ಪದ್ಯ-೧೦೩:ಪದವಿಭಾಗ-ಅರ್ಥ:ಕರಮೆರಡುಂ ಪಱಿವುದುಂ ಆ ಕರದಿಂದಂ (ಕೈಗಳೆರಡೂ ಕತ್ತರಿಸಿಹೋಗಲು ಅಭಿಮನ್ಯುವು ಆ ತನ್ನ ಮೋಟುಗೈಗಳಿಂದಲೇ)ತನ್ನ ಕುನ್ನಗೆಯ್ಯೊಳೆ ಕೊಂಡು (ತನ್ನ ಮೋಟುಗೈಗಳಿಂದಲೇ ಕಳಚಿ ಬಿದ್ದಿದ್ದ ಗಾಲಿಯೊಂದನ್ನು ತೆಗೆದುಕೊಂಡು) ಉದ್ಧುರ (ಕಳಚಿ ಬಿದ್ದ) ರಥಚಕ್ರದಿಂ (ಕಳಚಿ ಬಿದ್ದಿದ್ದ ಗಾಲಿಯೊಂದನ್ನು ತೆಗೆದುಕೊಂಡು ) ಇಟ್ಟಂ ತಿರಿಪಿ ನರಪ್ರಿಯ ತನೂಜನು ಅಕ್ಷೋಹಿಣಿಯಂ (ಸುತ್ತಿ ತಿರುಗಿ ಪ್ರಯೋಗಮಾಡಿ ಒಂದಕ್ಷೋಹಿಣೀ ಸೈನ್ಯವನ್ನು ಹೊಡೆದು ಹಾಕಿದನು.)
ಪದ್ಯ-೧೦೩:ಅರ್ಥ: ಕೈಗಳೆರಡೂ ಕತ್ತರಿಸಿಹೋಗಲು ಅಭಿಮನ್ಯುವು ಆ ತನ್ನ ಮೋಟುಗೈಗಳಿಂದಲೇ ಕಳಚಿ ಬಿದ್ದಿದ್ದ ಗಾಲಿಯೊಂದನ್ನು ತೆಗೆದುಕೊಂಡು ಸುತ್ತಿ ತಿರುಗಿ ಪ್ರಯೋಗಮಾಡಿ ಒಂದಕ್ಷೋಹಿಣೀ ಸೈನ್ಯವನ್ನು ಹೊಡೆದು ಹಾಕಿದನು.
ವ|| ಆಗಳ್ ದುಶ್ಯಾಸನನ ಮಗಂ ಗದಾಯುಧನೞಿಯೆ ನೊಂದ ಸಿಂಗದ ಮೇಲೆ ಬೆರಗಱಿಯದ ಬೆಳ್ಳಾಳ್ ಪಾಯ್ವಂತೆ ಕಿೞ್ತ ಬಾಳ್ವೆರಸು ಪಾಯ್ವುದುಂ-
ವಚನ:ಪದವಿಭಾಗ-ಅರ್ಥ:ಆಗಳ್ ದುಶ್ಯಾಸನನ ಮಗಂ ಗದಾಯುಧನು ಅೞಿಯೆ ನೊಂದ (ದುಶ್ಯಾಸನನ ಮಗನಾದ ಗದಾಯುಧನು ಸಾಯುವಷ್ಟು ಯಾತನೆಪಡುತ್ತಿರುವ) ಸಿಂಗದ ಮೇಲೆ ಬೆರಗಱಿಯದ ಬೆಳ್ಳಾಳ್ ಪಾಯ್ವಂತೆ (ಸಿಂಹದ ಮೇಲೆ ಅವಿವೇಕಿಯಾದ ದಡ್ಡನು ಹಾಯುವ ಹಾಗೆ) ಕಿೞ್ತ ಬಾಳ್ವೆರಸು ಪಾಯ್ವುದುಂ (ರಿದ ಕತ್ತಿಯಯೊಡನೆ ಅಭಿಮನ್ಯುವಿನ ಮೇಲೆ ಧಾಳಿಮಾಡಿದನು.)-
ವಚನ:ಅರ್ಥ:ಆಗ ದುಶ್ಯಾಸನನ ಮಗನಾದ ಗದಾಯುಧನು ಸಾಯುವಷ್ಟು ಯಾತನೆಪಡುತ್ತಿರುವ ಸಿಂಹದ ಮೇಲೆ ಅವಿವೇಕಿಯಾದ ದಡ್ಡನು ಹಾಯುವ ಹಾಗೆ, ಹಿರಿದ ಕತ್ತಿಯಯೊಡನೆ ಅಭಿಮನ್ಯುವಿನ ಮೇಲೆ ಧಾಳಿಮಾಡಿದನು.
ಚಂ|| ಸ್ಪುರಿತ ಕೃಪಾಣಪಾಣಿಗಿದಿರಂ ನಡೆದಳ್ಕುರಿ ತೊಟ್ಟು ವಾಯ್ದು ಡೊ
ಕ್ಕರದೊಳೆ ಮಿಕ್ಕ ದಿಕ್ಕರಿಯನು ಇಕ್ಕುವವೋಲ್ ನೆಲಕಿಕ್ಕಿ ಪತ್ತಿ ಕ|
ತ್ತರಿಗೊಳೆ ಕಾಯ್ದು ಕಣ್ತುಮುಳ್ದುಸಿರ್ ಕುಸಿದಂತಕನಂತಮೆಯ್ದೆ ಮೆಯ್
ಪರವಶವಾಗೆ ಜೋಲ್ದನಭಿಮನ್ಯು ಭಯಂಕರ ರಂಗಭೂಮಿಯೊಳ್|| ೧೦೪
ಪದ್ಯ-೧೦೪:ಪದವಿಭಾಗ-ಅರ್ಥ:ಸ್ಪುರಿತ ಕೃಪಾಣಪಾಣಿಗೆ ಇದಿರಂ ನಡೆದು (ಹೊಳೆಯುವ ಕತ್ತಿಯನ್ನು ಹಿಡಿದಿರುವ ಗದಾಯುಧನಿಗೆ ಅಭಿಮನ್ಯುವು ಇದಿರಾಗಿ ನಡೆದು) ಉಳ್ಕುರಿತೊಟ್ಟು ವಾಯ್ದು (ಭಯಂಕರವಾದ ರೀತಿಯಲ್ಲಿ ಥಟ್ಟನೆ ಮೇಲೆ ಬಿದ್ದು) ಡೊಕ್ಕರದೊಳೆ ಮಿಕ್ಕ ದಿಕ್ಕರಿಯನು ಇಕ್ಕುವವೋಲ್ (ಡೊಕ್ಕರವೆಂಬ ಪಟ್ಟಿನಿಂದ ದಿಗ್ಗಜವನ್ನು ಹೊಡೆಯುವಂತೆ,) ನೆಲಕಿಕ್ಕಿ ಪತ್ತಿ ಕತ್ತರಿಗೊಳೆ ಕಾಯ್ದು (ಅವನನ್ನು ನೆಲಕ್ಕೆ ಅಪ್ಪಳಿಸಿ, ಅವನ ಮೇಲೆ ಹತ್ತಿ ಕತ್ತರಿಯಂತೆ ಕಾಯ್ದು- ಕೋಪದಿಂದ ಹಿಡಿಯಲು), ಕಣ್ತುಮ್ ಉಳ್ದು ಉಸಿರ್ ಕುಸಿದು ಅಂತಕಂ(ಸಾಯುವ ಆ ಗದಾಯಧನ) ಅಂತಮ್ ಎಯ್ದೆ (ಸಾಯುವ ಆ ಗದಾಯಧನ ಕಣ್ಣಿನ ಗುಳ್ಳೆ ಹೊರಕ್ಕೆ ಬಂದು ಉಸಿರು ಕುಗ್ಗಿ ಸಾಯಲು,) ಮೆಯ್ ಪರವಶವಾಗೆ ಜೋಲ್ದನು ಅಭಿಮನ್ಯು ಭಯಂಕರ ರಂಗಭೂಮಿಯೊಳ್ (ಅಭಿಮನ್ಯುವು ಭಯಂಕರವಾದ ಯುದ್ಧಭೂಮಿಯಲ್ಲಿ ಮೂರ್ಛೆಹೋಗಿ ಜೋತುಬಿದ್ದನು. )
ಪದ್ಯ-೧೦೪:ಅರ್ಥ: ಹೊಳೆಯುವ ಕತ್ತಿಯನ್ನು ಹಿಡಿದಿರುವ ಗದಾಯುಧನಿಗೆ ಅಭಿಮನ್ಯುವು ಇದಿರಾಗಿ ನಡೆದು ಭಯಂಕರವಾದ ರೀತಿಯಲ್ಲಿ ಥಟ್ಟನೆ ಮೇಲೆ ಬಿದ್ದು, ಡೊಕ್ಕರವೆಂಬ ಪಟ್ಟಿನಿಂದ ದಿಗ್ಗಜವನ್ನು ಹೊಡೆಯುವಂತೆ, ಅವನನ್ನು ನೆಲಕ್ಕೆ ಅಪ್ಪಳಿಸಿ, ಅವನ ಮೇಲೆ ಹತ್ತಿ ಕತ್ತರಿಯಂತೆ ಕೋಪದಿಂದ ಹಿಡಿಯಲು, ಸಾಯುವ ಆ ಗದಾಯಧನ ಕಣ್ಣಿನ ಗುಳ್ಳೆ ಹೊರಕ್ಕೆ ಬಂದು ಉಸಿರು ಕುಗ್ಗಿ ಸಾಯಲು, ಅಭಿಮನ್ಯುವು ಭಯಂಕರವಾದ ಯುದ್ಧಭೂಮಿಯಲ್ಲಿ ಮೂರ್ಛೆಹೋಗಿ ಜೋತುಬಿದ್ದನು.
ಕಂ|| ಅನಿತಣ್ಮಿ ಸತ್ತ ನರನಂ
ದನಂಗೆ ಕಣ್ ಸೋಲ್ತು ಬಗೆಯದಮರೇಂದ್ರನನಿ|
ನ್ನೆನಗೆ ತನಗೆಂಬ ದೇವಾಂ
ಗನೆಯರ ಕಳಕಳಮೆ ಪಿರಿದುಮಾಯ್ತಂಬರದೊಳ್|| ೧೦೫ ||
ಪದ್ಯ-೧೦೫:ಪದವಿಭಾಗ-ಅರ್ಥ:ಅನಿತು ಅಣ್ಮಿ ಸತ್ತ ನರನಂದನಂಗೆ (ಅಷ್ಟೊಂದು ಪರಾಕ್ರಮವನ್ನು ಪ್ರದರ್ಶಿಸಿ ಸತ್ತ ಅಭಿಮನ್ಯುವಿಗೆ) ಕಣ್ ಸೋಲ್ತು ಬಗೆಯದೆ (ಅಲಕ್ಷಿಸಿ) ಅಮರೇಂದ್ರನನು,(ಮೋಹಗೊಂಡು ದೇವೇಂದ್ರನನ್ನೂ ಅಲಕ್ಷಿಸಿ,) ಇನ್ನು ಎನಗೆ ತನಗೆಂಬ ದೇವಾಂಗನೆಯರ ಕಳಕಳಮೆ ಪಿರಿದುಮಾಯ್ತು ಅಂಬರದೊಳ್(ಅಭಿಮನ್ಯುವು ನನಗೆ ಬೇಕು ತನಗೆ ಬೇಕು ಎನ್ನುವ ಅಪ್ಸರಸ್ತ್ರೀಯರ ಕಳಕಳ ಶಬ್ದವೇ ಆಕಾಶಪ್ರದೇಶದಲ್ಲಿ ವಿಶೇಷವಾಯಿತು.)
ಪದ್ಯ-೧೦೫:ಅರ್ಥ: ಅಷ್ಟೊಂದು ಪರಾಕ್ರಮವನ್ನು ಪ್ರದರ್ಶಿಸಿ ಸತ್ತ ಅಭಿಮನ್ಯುವಿಗೆ ಮೋಹಗೊಂಡು ದೇವೇಂದ್ರನನ್ನೂ ಅಲಕ್ಷಿಸಿ, ಅಭಿಮನ್ಯುವು ನನಗೆ ಬೇಕು ತನಗೆ ಬೇಕು ಎನ್ನುವ ಅಪ್ಸರಸ್ತ್ರೀಯರ ಕಳಕಳ ಶಬ್ದವೇ ಆಕಾಶಪ್ರದೇಶದಲ್ಲಿ ವಿಶೇಷವಾಯಿತು.
ಅಭಿಮನ್ಯು ಮರಣ ವಾರ್ತಾ
ಪ್ರಭೂತ ಶೋಕಾಗ್ನಿ ಧರ್ಮತನಯನನಿರದಂ|
ದಭಿಭವಿಸಿ ತನ್ನನಳುರ್ದಂ
ತೆ ಭಾಸ್ಕರಂ ಕೆಂಕಮಾದನಸ್ತಾಚಲದೊಳ್|| ೧೦೬
ಪದ್ಯ-೧೦೬:ಪದವಿಭಾಗ-ಅರ್ಥ:ಅಭಿಮನ್ಯು ಮರಣ ವಾರ್ತಾ ಪ್ರಭೂತ ಶೋಕಾಗ್ನಿ (ಅಭಿಮನ್ಯುವಿನ ಮರಣವಾರ್ತೆಯಿಂದ ಉಂಟಾದ ಶೋಕಾಗ್ನಿಯು) ಧರ್ಮತನಯನಂ ಇರದೆ ಅಂದು ಅಭಿಭವಿಸಿ ( ಧರ್ಮರಾಜನನ್ನು ಅಂದು ಬಿಡದೆ ಆಕ್ರಮಿಸಿ) ತನ್ನನು ಅಳುರ್ದಂತೆ(ತನ್ನನ್ನೂ ವ್ಯಾಪಿಸಿದಂತೆ ) ಭಾಸ್ಕರಂ ಕೆಂಕಮಾದನು ಅಸ್ತಾಚಲದೊಳ್ (ಅಸ್ತಪರ್ವತದಲ್ಲಿ ಸೂರ್ಯನು ಕೆಂಪಗಾದನು.)
ಪದ್ಯ-೧೦೬:ಅರ್ಥ: ಅಭಿಮನ್ಯುವಿನ ಮರಣವಾರ್ತೆಯಿಂದ ಉಂಟಾದ ಶೋಕಾಗ್ನಿಯು ಧರ್ಮರಾಜನನ್ನು ಅಂದು ಬಿಡದೆ ಆಕ್ರಮಿಸಿ ತನ್ನನ್ನೂ ವ್ಯಾಪಿಸಿದಂತೆ ಅಸ್ತಪರ್ವತದಲ್ಲಿ ಸೂರ್ಯನು ಕೆಂಪಗಾದನು.
ವ|| ಅಂತು ನಿಜತನೂಜನ ಮರಣ ಶ್ರವಣಾಶನಿಘಾತದಿಂ ಕುಳಶೈಲಂ ಕೆಡೆವಂತೆ ಕೆಡೆದು ಮೂರ್ಛಾಗತನಾದ ಧರ್ಮಪುತ್ರನಂ ಭೀಮಸೇನ ನಕುಳ ಸಹದೇವ ಸಾತ್ಯಕಿ ದ್ರುಪದ ವಿರಾಟಾದಿಗಳಪಹತ ಕದನರ್ ಮುಂದಿಟ್ಟೊಡಗೊಂಡು ಬೀಡಿಂಗೆ ಪೋದರಾಗಳ್ ಧರ್ಮಪುತ್ರನ ಶೋಕಮನಾಱಿಸಲೆಂದು ಕೃಷ್ಣದ್ವೈಪಾಯನಂ ಬಂದು ಸಂಸಾರಸ್ಥಿತಿಯನಱಿಯದವರಂತೆ ನೀನಿಂತು ಶೋಕಾಕ್ರಾಂತನಾದೊಡೆ-
ವಚನ:ಪದವಿಭಾಗ-ಅರ್ಥ:ಅಂತು ನಿಜತನೂಜನ ಮರಣ ಶ್ರವಣ ಅಶನಿಘಾತದಿಂ (ತನ್ನ ಮಗನು ಮರಣದ ಸುದ್ದಿಯನ್ನು ಕೇಳುವಿಕೆಯೆಂಬ ವಜ್ರಾಯುಧದ ಪೆಟ್ಟಿನಿಂದ) ಕುಳಶೈಲಂ ಕೆಡೆವಂತೆ ಕೆಡೆದು ಮೂರ್ಛಾಗತನಾದ ಧರ್ಮಪುತ್ರನಂ (ಕುಲಪರ್ವತಗಳು ಉರುಳುವಂತೆ ಉರುಳಿ ಮೂರ್ಛೆ ಹೋದ ಧರ್ಮಜನನ್ನು) ಭೀಮಸೇನ, ನಕುಳ, ಸಹದೇವ, ಸಾತ್ಯಕಿ, ದ್ರುಪದ ವಿರಾಟಾದಿಗಳಯ ಅಪಹತ ಕದನರ್ (ಯುದ್ಧದಿಂದ ಹಿಂತಿರುಗಿದವರಾಗಿ)ಮೂರ್ಛಾಗತನಾದ ಧರ್ಮಪುತ್ರನಂ ಮುಂದಿಟ್ಟೊಡಗೊಂಡು ಬೀಡಿಂಗೆ ಪೋದರಾಗಳ್ (ಮೊದಲಾದವರು ಯುದ್ಧದಿಂದ ಹಿಂತಿರುಗಿದವರಾಗಿ ಯುದ್ಧವನ್ನು ನಿಲ್ಲಿಸಿ ಧರ್ಮಜನನ್ನು ಮುಂದಿಟ್ಟೊಡಗೊಂಡು ತಮ್ಮ ಬೀಡಿಗೆ ಹೋದಾಗ) ಧರ್ಮಪುತ್ರನ ಶೋಕಮನು ಆಱಿಸಲೆಂದು ಕೃಷ್ಣದ್ವೈಪಾಯನಂ ಬಂದು (ಧರ್ಮರಾಜನ ದುಖವನ್ನು ಶಮನಮಾಡಬೇಕೆಂದು ವೇದವ್ಯಾಸರೇ ಬಂದು) ಸಂಸಾರಸ್ಥಿತಿಯನು ಅಱಿಯದವರಂತೆ ನೀನಿಂತು ಶೋಕಾಕ್ರಾಂತನಾದೊಡೆ ((ಧರ್ಮರಾಜನನ್ನು ಕುರಿತು) ‘ಮಹಾರಾಜ, ಸಂಸಾರಸ್ಥಿತಿಯನ್ನು ತಿಳಿಯದವರಂತೆ ನೀನು ಹೀಗೆ ದುಖಿಸಿದರೆ.)-
ವಚನ:ಅರ್ಥ:ಹಾಗೆ ತನ್ನ ಮಗನು ಮರಣದ ಸುದ್ದಿಯನ್ನು ಕೇಳುವಿಕೆಯೆಂಬ ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳು ಉರುಳುವಂತೆ ಉರುಳಿ ಮೂರ್ಛೆ ಹೋದ ಧ್ರಮಜನನ್ನು, ಭೀಮಸೇನ, ನಕುಳ, ಸಹದೇವ, ಸಾತ್ಯಕಿ, ದ್ರುಪದ, ವಿರಾಟನೇ ಮೊದಲಾದವರು ಯುದ್ಧದಿಂದ ಹಿಂತಿರುಗಿದವರಾಗಿ ಯುದ್ಧವನ್ನು ನಿಲ್ಲಿಸಿ ಧರ್ಮಜನನ್ನು ಮುಂದಿಟ್ಟೊಡಗೊಂಡು ತಮ್ಮ ಬೀಡಿಗೆ ಹೋದಾಗ ಧರ್ಮರಾಜನ ದುಖವನ್ನು ಶಮನಮಾಡಬೇಕೆಂದು ವೇದವ್ಯಾಸರೇ ಬಂದರು. (ಧರ್ಮರಾಜನನ್ನು ಕುರಿತು) ‘ಮಹಾರಾಜ, ಸಂಸಾರಸ್ಥಿತಿಯನ್ನು ತಿಳಿಯದವರಂತೆ ನೀನು ಹೀಗೆ ದುಖಿಸಿದರೆ- ತಿಳಿಯದವರಂತೆ ನೀನು ಹೀಗೆ ದುಖಿಸಬಾರದು. ಎಂದರು ವ್ಯಾಸರು.
ಚಂ|| ಎನಿತಿದಿರಾಂತರಾತಿಬಲಮಂತನಿತಂ ತವೆ ಕೊಂದು ತತ್ಸುಯೋ
ಧನ ಸುತರೆನ್ನ ಬಾಣಗಣದಿಂ ತವದಿರ್ದರೊ ಯುದ್ಧದಾಳ್ಗೆ ರೋ|
ದನಮೆನಗಾವುದಯ್ಯನೆನಗೇಕೆಯೊ ಶೋಕಿಪನೆಂದು ಧರ್ಮನಂ
ದನ ನರನಂದನಂ ನಿನಗೆ ಸಗ್ಗದೊಳೇನಭಿಮನ್ಯು ನೋಯನೇ|| ೧೦೭
ಪದ್ಯ-೧೦೭:ಪದವಿಭಾಗ-ಅರ್ಥ:ಎನಿತು ಇದಿರಾಂತ ಅರಾತಿಬಲಮಂತು ಅನಿತಂ ತವೆ ಕೊಂದು (ಪ್ರತಿಭಟಿಸಿದ ಅಷ್ಟೂ ಶತ್ರುಸೈನ್ಯವನ್ನೆಲ್ಲ ಪೂರ್ಣವಾಗಿ ಕೊಂದು- ಹಾಕಿರುವೆನು!) ತತ್ ಸುಯೋಧನ ಸುತರು ಎನ್ನ ಬಾಣಗಣದಿಂ ತವದೆ ಇರ್ದರೊ (ದುರ್ಯೋಧನನ ಮಕ್ಕಳೆಷ್ಟೋ ಜನವನ್ನು ತನ್ನ ಬಾಣದ ಸಮೂಹದಿಂದ ನಾಶವಾಗದೆ ಇದ್ದರೆಯೊ?) ಯುದ್ಧದ ಆಳ್ಗೆ ರೋದನಂ ಎನಗಾವುದು ಅಯ್ಯನೆ (ಶೂರನಾದ ನನಗಾಗಿ ಆಯ್ಯನೇ (ಧರ್ಮರಾಜನೇ) ಏಕೆ ಅಳುತ್ತಿದ್ದಾನೆ) ಎನಗೆ ಏಕೆಯೊ ಶೋಕಿಪನೆಂದು ಧರ್ಮನಂದನ ನರನಂದನಂ ನಿನಗೆ ಸಗ್ಗದೊಳು ಏನು ಅಭಿಮನ್ಯು ನೋಯನೇ (ಆಯ್ಯನಾದ ಧರ್ಮರಾಜನು ಏಕೆ ಅಳುತ್ತಿದ್ದಾನೆ ಎಂದು ಸ್ವರ್ಗದಲ್ಲಿರುವ ಅಭಿಮನ್ಯುವು ನೊಂದುಕೊಳ್ಳುವುದಿಲ್ಲವೆ? )
ಪದ್ಯ-೧೦೭:ಅರ್ಥ: ಪ್ರತಿಭಟಿಸಿದ ಅಷ್ಟೂ ಶತ್ರುಸೈನ್ಯವನ್ನೆಲ್ಲ ಪೂರ್ಣವಾಗಿ ಕೊಂದು- ಹಾಕಿರುವೆನು! ದುರ್ಯೋಧನನ ಮಕ್ಕಳೆಷ್ಟೋ ಜನವನ್ನು ತನ್ನ ಬಾಣದ ಸಮೂಹದಿಂದ ನಾಶವಾಗದೆ ಇದ್ದರೆಯೊ? ಶೂರನಾದ ನನಗಾಗಿ ಆಯ್ಯನಾದ ಧರ್ಮರಾಜನು ಏಕೆ ಅಳುತ್ತಿದ್ದಾನೆ, ಎಂದು ಸ್ವರ್ಗದಲ್ಲಿರುವ ಅಭಿಮನ್ಯುವು ನೊಂದುಕೊಳ್ಳುವುದಿಲ್ಲವೆ?
ಕಂ|| ಜ್ಞಾನಮಯನಾಗಿ ಸಂಸಾ
ರಾನಿತ್ಯತೆಯಂ ಜಲಕ್ಕನಾಗಱಿದಿರ್ದ|
ಜ್ಞಾನಿಯವೋಲ್ ನೀನುಂ ಶೋ
ಕಾನಲ ಸಂತಪ್ತ ಚಿತ್ತನಪ್ಪುದು ದೊರೆಯೇ|| ೧೦೮ ||
ಪದ್ಯ-೧೦೮:ಪದವಿಭಾಗ-ಅರ್ಥ:’ ಜ್ಞಾನಮಯನಾಗಿ ಸಂಸಾರ ಅನಿತ್ಯತೆಯಂ (ಜ್ಞಾನದಿಂದ ತುಂಬಿದವನಾಗಿ ಈ ಸಂಸಾರದ ಅಶಾಶ್ವತೆಯನ್ನು) ಜಲಕ್ಕನಾಗಿ ಅಱಿದು ಇರ್ದು (ಚೆನ್ನಾಗಿ ತಿಳಿದು ಇದ್ದೂ ) ಅಜ್ಞಾನಿಯವೋಲ್ (ಅಜ್ಞಾನಿಯ/ ಅವಿವೇಕಿಯ ಹಾಗೆ) ನೀನುಂ ಶೋಕಾನಲ ಸಂತಪ್ತ ಚಿತ್ತನಪ್ಪುದು ದೊರೆಯೇ (ನೀನೂ ಶೋಕದ ಬೆಂಕಿಯಿಂದ ಸುಡಲ್ಪಟ್ಟ ಮನಸ್ಸುಳ್ಳವನಾಗುವುದು ಯೋಗ್ಯವೇ?’)
ಪದ್ಯ-೧೦೮:ಅರ್ಥ:ವ್ಯಾಸ ಮುನಿಯು ಧರ್ಮಜನನ್ನು ಕುರಿತು, (ಲೋಕ) ಜ್ಞಾನದಿಂದ ತುಂಬಿದನಾಗಿ ಈ ಸಂಸಾರದ ಅಶಾಶ್ವತೆಯನ್ನು ಚೆನ್ನಾಗಿ ತಿಳಿದೂ ಅಜ್ಞಾನಿಯ/ ಅವಿವೇಕಿಯ ಹಾಗೆ ನೀನೂ ಶೋಕದ ಬೆಂಕಿಯಿಂದ ಸುಡಲ್ಪಟ್ಟ ಮನಸ್ಸುಳ್ಳವನಾಗುವುದು ಯೋಗ್ಯವೇ?’
ವ|| ಎಂದು ಷೋಡಶರಾಜೋಪಾಖ್ಯಾನಮನಱಿಪಿ ಧರ್ಮಪುತ್ರನ ಶೋಕಮನಾರೆ ನುಡಿದು ಪಾರಾಶರ ಮುನೀಂದ್ರಂ ಪೋದನಿತ್ತಲ್
ವಚನ:ಪದವಿಭಾಗ-ಅರ್ಥ:ಎಂದು ಷೋಡಶರಾಜೋಪಾಖ್ಯಾನಮನು ಅಱಿಪಿ (ಹದಿನಾರುರಾಜರ ಕಥೆಯನ್ನು ತಿಳಿಸಿ) ಧರ್ಮಪುತ್ರನ ಶೋಕಮನು ಆರೆ ನುಡಿದು (ಧರ್ಮರಾಜನ ಮನೋವ್ಯಥೆ ಶಮನವಾಗುವಂತೆ ಹೇಳಿ ತಿಳಿಸಿ) ಪಾರಾಶರ ಮುನೀಂದ್ರಂ ಪೋದನು ಇತ್ತಲ್ (ಹೇಳಿ ವ್ಯಾಸಮಹರ್ಷಿಯು ಹೋದನು ಇತ್ತ-)
ವಚನ:ಅರ್ಥ:ಎಂದು ಹದಿನಾರುರಾಜರ ಕಥೆಯನ್ನು ತಿಳಿಸಿ ಧರ್ಮರಾಜನ ಮನೋವ್ಯಥೆ ಶಮನವಾಗುವಂತೆ ತಿಳಿಸಿ ಹೇಳಿ ವ್ಯಾಸಮಹರ್ಷಿಯು ಹೋದನು ಇತ್ತ-
ಅಳಿದುದು ಮತ್ತನೂಜಶತಮಾಜಿಯೊಳಿತ್ತಭಿಮನ್ಯುವೊರ್ವನ
ತ್ತಳಿದನಿದಾವ ಗೆಲ್ಲಮೆನಗಂ ಕಲಿಯಾದನೊ ಪೊಣ್ದಗಂಡವಾ |
ತಳಿಯದೆ ಗಂಡನಿಂತಳಿವುದೀಯಳಿವಿನ್ನೆಗಾಜಿರಂಗದೊಳ್
ಗಳಿಯಿಸುಗೆಂಬಿದಂ ನುಡಿಯುತುಂ ಘಟಸಂಬವನೊಳ್ ಸುಯೋಧನಂ||೧೦೯||
ಪದ್ಯ-೧೦೯:ಪದವಿಭಾಗ-ಅರ್ಥ:ಅಳಿದುದು (ಸತ್ತುಹೋದರು) ಮತ್ ತನೂಜ ಶತಮ್ ಆಜಿಯೊಳ್ ಇತ್ತ,(ಇತ್ತ ನಮ್ಮ ಪಕ್ಷದಲ್ಲಿ ನನ್ನ ನೂರು ಮಕ್ಕಳೂ ಮರಣಹೊಂದಿದರು.) ಅತ್ತ ಅಭಿಮನ್ಯು ಒರ್ವನು ಅತ್ತ ಅಳಿದನು ಇದಾವ ಗೆಲ್ಲಂ ಎನಗಂ (ಆ ಪಕ್ಷದಲ್ಲಿ ಅಭಿಮನ್ಯು ಒಬ್ಬನು ಮಾತ್ರಾ ಸತ್ತಿದ್ದಾನೆ. ನನಗೆ ಯಾವ ಜಯವಿದು?) ಕಲಿಯಾದನೊ (ಶೂರನಾದವನು) ಪೊಣ್ದ ಗಂಡವಾತು ಅಳಿಯದೆ (ಪ್ರತಿಜ್ಞೆಮಾಡಿದ ಧೀರವಾಕ್ಕು ನಾಶವಾಗದಂತೆ) ಗಂಡನು ಇಂತು ಅಳಿವುದು (ಪರಾಕ್ರಮಶಾಲಿಯಾಗಿ ಹೀಗೆ ಸಾಯಬೇಕು) ಈ ಅಳಿವು ಎನ್ನೆಗೆ ಆಜಿರಂಗದೊಳ್ ಅಳಿಯಿಸುಗೆ (ನನಗೆ ಯುದ್ಧದಲ್ಲಿ ಇಂಥ ಸಾವು ಲಭಿಸಲಿ) ಎಂಬಿದಂ ನುಡಿಯುತುಂ ಘಟಸಂಬವನೊಳ್ ಸುಯೋಧನಂ (ಎಂಬ ಈ ಮಾತನ್ನು ಆಡುತ್ತಾ ದುರ್ಯೋಧನನು, ಆಚಾರ್ಯರೊಡನೆ-)
ಪದ್ಯ-೧೦೯:ಅರ್ಥ:ನಮ್ಮ ಪಕ್ಷದಲ್ಲಿ ನನ್ನ ನೂರು ಮಕ್ಕಳೂ ಮರಣಹೊಂದಿದರು. ಆ ಪಕ್ಷದಲ್ಲಿ ಅಭಿಮನ್ಯು ಒಬ್ಬನು ಮಾತ್ರಾ ಸತ್ತಿದ್ದಾನೆ. ನನಗೆ ಯಾವ ಜಯವಿದು? ಶೂರನಾದವನು ಪ್ರತಿಜ್ಞೆಮಾಡಿದ ಧೀರವಾಕ್ಕು ನಾಶವಾಗದಂತೆ ಪರಾಕ್ರಮಶಾಲಿಯಾಗಿ ಹೀಗೆ ಸಾಯಬೇಕು. ನನಗೆ ಯುದ್ಧದಲ್ಲಿ ಇಂಥ ಸಾವು ಲಭಿಸಲಿ ಎಂಬ ಈ ಮಾತನ್ನು ಆಡುತ್ತಾ ದುರ್ಯೋಧನನು ಆಚಾರ್ಯರೊಡನೆ -
ವ||ಅಂತು ಬೀಡಿಂಗೆ ಪೋದನನ್ನಗಮಿತ್ತ ಸಂಸಪ್ತಕಬಳಜಲನಿಧಿಯಂ ಬಡಬಾನಳನಳುರ್ವಂತಳುರ್ದು ನಿಜವಿಜಯಕಟಕಕ್ಕೆ ವಿಜಯಂ ಬರೆವರೆ-
ವಚನ:ಪದವಿಭಾಗ-ಅರ್ಥ:ಅಂತು ಬೀಡಿಂಗೆ ಪೋದನು ಅನ್ನಗಮಿತ್ತ (ಬೀಡಿಗೆ ಹೋದನು. ಅಷ್ಟರಲ್ಲಿ ಈ ಕಡೆ) ಸಂಸಪ್ತಕ ಬಳಜಲನಿಧಿಯಂ ಬಡಬಾನಳನು ಅಳುರ್ವಂತೆ ಅಳುರ್ದು (ಸಂಸಪ್ತಕ ಸೈನ್ಯಸಾಗರವನ್ನು ಬಡಬಾಗ್ನಿ ಸುಡುವಂತೆ ಸುಟ್ಟು) ನಿಜವಿಜಯಕಟಕಕ್ಕೆ ವಿಜಯಂ ಬರೆವರೆ (ತನ್ನ ಜಯಶಾಲಿಯಾದ ಸೈನ್ಯಕ್ಕೆ ಅರ್ಜುನನು ಹಿಂತಿರುಗಿ ಬರುತ್ತಿರಲು)-
ವಚನ:ಅರ್ಥ:ಬೀಡಿಗೆ ಹೋದನು. ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯಸಾಗರವನ್ನು ಬಡಬಾಗ್ನಿ ಸುಡುವಂತೆ ಸುಟ್ಟು ತನ್ನ ಜಯಶಾಲಿಯಾದ ಸೈನ್ಯಕ್ಕೆ ಅರ್ಜುನನು ಹಿಂತಿರುಗಿ ಬರುತ್ತಿರಲು -
ಚಂ|| ಹರಿನಿಜಯೋಗದಿಂದರಿದು ತನ್ನಳಿಯಂ ಲಯಮಾದುದಂ ಭಯಂ
ಕರ ಕಪಿಕೇತನಂಗರಿಪಲೊಲ್ಲದೆಬಂದು ಶಮಂತಪಂಚಕಂ |
ಬರಮಿಳಿಸಂಗರ ಪರಿಶ್ರಮಮಂ ಕಳೆಯಲೆಂದು ಮಯ್ದುನಂ
ಬೆರಸು ಜಳಾವಗಾಹ ದೊಳಿರುತ್ತೆ ಮಹಾ ಕಪಟ ಪ್ರಪಂಚದಿಂ||೧೧೦||
ಪದ್ಯ-೧೧೦:ಪದವಿಭಾಗ-ಅರ್ಥ:ಹರಿ ನಿಜಯೋಗದಿಂದ ಅರಿದು ತನ್ನಳಿಯಂ ಲಯಮಾದುದಂ (ಕೃಷ್ಣನು ತನ್ನ ಯೋಗದೃಷ್ಠಿಯಿಂದ ತನ್ನಳಿಯನಾದ ಅಭಿಮನ್ಯುವು ಸತ್ತುದನ್ನು ತಿಳಿದನು) ಭಯಂ ಕರ ಕಪಿಕೇತನಂಗೆ ಅರಿಪಲೊಲ್ಲದೆ (ಅದನ್ನು ಭಯಂಕರಾಕಾರನೂ ಕಪಿಧ್ವಜನೂ ಆದ ಅರ್ಜುನನಿಗೆ ತಿಳಿಸಲಾರದೆ,) ಬಂದು ಶಮಂತಪಂಚಕಂ ಬರಮಿಳಿಸಂಗರ ಪರಿಶ್ರಮಮಂ ಕಳೆಯಲೆಂದು (ಶಮಂತ ಪಂಚಕವೆಂಬ ಕೊಳದವರೆಗೂ ಬಂದನು.) ಮಯ್ದುನಂ ಬೆರಸು ಜಳಾವಗಾಹದೊಳ್ ಇರುತ್ತೆ (ಮಯ್ದುನನಾದ ಅರ್ಜುನನೊಡಗೂಡಿ ಅಂದು ಸ್ನಾನ ಮಾಡುತ್ತಿರುವಾಗ) ಮಹಾ ಕಪಟ ಪ್ರಪಂಚದಿಂ (ವಿಶೇಷವಾದ ಕೃತ್ರಿಮದ ರೀತಿಯಲ್ಲಿ) ಹೀಗೆಂದನು-
ಪದ್ಯ-೧೧೦:ಅರ್ಥ:ಕೃಷ್ಣನು ತನ್ನ ಯೋಗದೃಷ್ಠಿಯಿಂದ ತನ್ನಳಿಯನಾದ ಅಭಿಮನ್ಯುವು ಸತ್ತುದನ್ನು ತಿಳಿದನು. ಅದನ್ನು ಭಯಂಕರಾಕಾರನೂ ಕಪಿಧ್ವಜನೂ ಆದ ಅರ್ಜುನನಿಗೆ ತಿಳಿಸಲಾರದೆ ಶಮಂತ ಪಂಚಕವೆಂಬ ಕೊಳದವರೆಗೂ ಬಂದನು. ಅಲ್ಲಿ ಇಳಿದು ಯುದ್ಧಾಯಾಸವನ್ನು ಕಳೆಯೋಣ ಬಾ ಎಂದು, ಮಯ್ದುನನಾದ ಅರ್ಜುನನೊಡಗೂಡಿ ಅಂದು ಸ್ನಾನ ಮಾಡುತ್ತಿರುವಾಗ ವಿಶೇಷವಾದ ಕೃತ್ರಿಮದ ರೀತಿಯಲ್ಲಿ --ಹೀಗೆಂದನು
ಕಂ|| ಜಳಮಂತ್ರಂ ಮಂತ್ರಿತಾಶಯ
ಜಳದೊಳ್ ನರನಿನಿಸು ಮುಳುಗೆ ನಿಜಸುತನ ಸುಹೃ|
ದ್ದಳ ಜಳನಿಧಿಯೊಳ್ ಫಲ್ಗುಣ
ಮುಳುಗಿದನಂಬಿದನೆ ನುಡಿದು ಹರಿ ಮುಳುಗುವುದುಂ||೧೧೧||
ಪದ್ಯ-೧೧೧:ಪದವಿಭಾಗ-ಅರ್ಥ:ಜಳಮಂತ್ರಂ ಮಂತ್ರಿತಾಶಯ ಜಳದೊಳ್ (ಜಲಸ್ತಂಬನ ಮಂತ್ರದಿಂದ ಮಂತ್ರಿಸಲ್ಪಟ್ಟ ಕೊಳದಲ್ಲಿ) ನರಂ ಇನಿಸು ಮುಳುಗೆ (ಅರ್ಜುನನು ಸ್ವಲ್ಪ ಮುಳುಗಲು) ನಿಜಸುತಂ ಅಸುಹೃದ್ದಳ ಜಳನಿಧಿಯೊಳ್ ಫಲ್ಗುಣ ಮುಳುಗಿದನು (ಅರ್ಜುನಾ ನಿನ್ನ ಮಗನು ಶತ್ರುಸೇನಾ ಸಮುದ್ರದಲ್ಲಿ ಮುಳುಗಿದನು) ಎಂಬ ಇದನೆ ನುಡಿದು ಹರಿ ಮುಳುಗುವುದುಂ (ಎಂದು ಈ ಮಾತನ್ನು ಹೇಳಿ ತಾನೂ ಮುಳುಗಿದನು.)
ಪದ್ಯ-೧೧೧:ಅರ್ಥ:ಜಲಸ್ತಂಬನ ಮಂತ್ರದಿಂದ ಮಂತ್ರಿಸಲ್ಪಟ್ಟ ಕೊಳದಲ್ಲಿ ಅರ್ಜುನನು ಸ್ವಲ್ಪ ಮುಳುಗಲು ಕೃಷ್ನನು 'ಅರ್ಜುನಾ ನಿನ್ನ ಮಗನು ಶತ್ರುಸೇನಾ ಸಮುದ್ರದಲ್ಲಿ ಮುಳುಗಿದನು' ಎಂದು ಈ ಮಾತನ್ನು ಹೇಳಿ ತಾನೂ ಮುಳುಗಿದನು.
ಭೋಂಕನೆ ಕೇಳ್ದೆರ್ದೆ ಕದಡಿ ಕ
ಲಂಕಿದ ಬಗೆವೆರಸು ನೆಗೆದು ನಾಲ್ಕುಂ ದೆಸೆಯಂ |
ಶಂಕಾಕುಳಿತಂ ನೋಡಿ ಮ
ನಂ ಕೊಳುಕೆನೆ ಮುಳಿಗಿ ನೆಗೆದ ಹರಿಯಂ ನುಡಿದಂ|| ೧೧೨||
ಪದ್ಯ-೦೦:ಪದವಿಭಾಗ-ಅರ್ಥ:ಭೋಂಕನೆ ಕೇಳ್ದೆರ್ದೆ ಕದಡಿ ಕಲಂಕಿದ ಬಗೆವೆರಸು (ಥಟ್ಟನೆ ಈ ಮಾತನ್ನು ಕೇಳಿ ಎದೆ ಕದಡಿ ಕಲಕಿದ ಮನಸ್ಸಿನಿಂದೊಡಗೂಡಿ) ನೆಗೆದು ನಾಲ್ಕುಂ ದೆಸೆಯಂ ಶಂಕಾಕುಳಿತಂ ನೋಡಿ (ನೀರಿನಿಂದ ಮೇಲೆದ್ದು ಸಂದೇಹದಿಂದ ನಾಲ್ಕು ದಿಕ್ಕುಗಳನ್ನೂ ನೋಡಿ,) ಮನಂ ಕೊಳುಕೆನೆ ಮುಳಿಗಿ ನೆಗೆದ ಹರಿಯಂ ನುಡಿದಂ (ಮನಸ್ಸು ಕಳಕ್ಕೆನ್ನಲು, ಮುಳುಗಿಮೇಲೆದ್ದ ಕೃಷ್ಣನ್ನು ಕೇಳಿದನು. )
ಪದ್ಯ-೦೦:ಅರ್ಥ:ಥಟ್ಟನೆ ಈ ಮಾತನ್ನು ಕೇಳಿ ಎದೆ ಕದಡಿ ಕಲಕಿದ ಮನಸ್ಸಿನಿಂದೊಡಗೂಡಿ ನೀರಿನಿಂದ ಮೇಲೆದ್ದು ಸಂದೇಹದಿಂದ ನಾಲ್ಕು ದಿಕ್ಕುಗಳನ್ನೂ ನೋಡಿ, ಮನಸ್ಸು ಕಳಕ್ಕೆನ್ನಲು, ಮುಳುಗಿಮೇಲೆದ್ದ ಕೃಷ್ಣನ್ನು ಕೇಳಿದನು.
ಆಕಾಶ ವಚನವಿದು ಸುತ
ಶೋಕಮನೆ ನೆಗಳಿಪಿದಪ್ಪುದಸ್ಮತ್ತನಯಂ |
ಗೇಕೆಂದರಿಯೆ ಮರಣಮ
ದಾ ಕುರುಪತಿಯಿಂದಮಾದುದಾಗಲೆವೇಳ್ಕುಂ ||೧೧೩||
ಪದ್ಯ-೧೧೩:ಪದವಿಭಾಗ-ಅರ್ಥ:ಆಕಾಶ ವಚನವಿದು ಸುತಶೋಕಮನೆ ನೆಗಳಿಪಿದಪ್ಪುದು (ಇದು ಅಶರೀರವಾಣಿಯು; ಸುತಶೋಕವನ್ನು ನನಗೆ ತಿಳಿಸುತ್ತಿದೆ) ಅಸ್ಮತ್ ತನಯಂಗೆ ಏಕೆಂದು ಅರಿಯೆ ಮರಣಮದು (ಏಕಾಯಿತೆಂದು ತಿಳಿಯದವನಾಗಿದ್ದೇನೆ. ನನ್ನ ಮಗನಿಗೆ ಸಾವು ಆಗಿರಬೇಕು) ಆ ಕುರುಪತಿಯಿಂದಂ ಆದುದು ಆಗಲೆವೇಳ್ಕುಂ (ಆ ದುರ್ಯೋಧನನಿಂದಲೇ ಆಗಿರಬೇಕು)
ಪದ್ಯ-೧೧೩:ಅರ್ಥ: ಇದು ಅಶರೀರವಾಣಿಯು; ಸುತಶೋಕವನ್ನು ನನಗೆ ತಿಳಿಸುತ್ತಿದೆ. ನನ್ನ ಮಗನಿಗೆ ಸಾವು ಆ ದುರ್ಯೋಧನನಿಂದಲೇ ಆಗಿರಬೇಕು. ಏಕಾಯಿತೆಂದು ತಿಳಿಯದವನಾಗಿದ್ದೇನೆ.
ಇಂದಿನ ಚಕ್ರವ್ಯೂಹಮ
ನಾಂ ದಲಣಂ ಮೆಚ್ಚಲಾರೆನೆನುತುಂ ರಥಮಂ |
ಬಂದೇರಿ ಮಗನ ಮನಕತ
ಮೊಂದುತ್ತರಮೆರ್ದೆಯನಲೆಯೆ ನರನಿಂತೆಂದಂ||೧೧೪||
ಪದ್ಯ-೧೧೪:ಪದವಿಭಾಗ-ಅರ್ಥ:ಚಕ್ರವ್ಯೂಹಮನು ಆಂ ದಲ್ ಅಣಂ ಮೆಚ್ಚಲಾರೆನು ಎನುತುಂ (ಈ ದಿನದ ಚಕ್ರವ್ಯೂಹವನ್ನು ನಾನು ಸ್ವಲ್ಪವೂ ಮೆಚ್ಚಲಾರೆ ಎನ್ನುತ್ತಾ) ರಥಮಂ ಬಂದು ಏರಿ (ರಥವನ್ನು ಏರಿ ಬೀಡಿನ ಕಡೆ ಬಂದನು.) ಮಗನ ಮನಕತ (ಬಗೆಗೆ ಮನೋವ್ಯಥೆ) ಒಂದುತ್ತರಂ ಎರ್ದೆಯನು ಅಲೆಯೆ (ಒಂದಿಷ್ಟು ಪೀಡಿಸುತ್ತಿರಲು) ನರನು ಇಂತೆಂದಂ (ಅರ್ಜುನನು ಹೀಗೆಂದನು)
ಪದ್ಯ-೧೧೪:ಅರ್ಥ: ಈ ದಿನದ ಚಕ್ರವ್ಯೂಹವನ್ನು ನಾನು ಸ್ವಲ್ಪವೂ ಮೆಚ್ಚಲಾರೆ ಎನ್ನುತ್ತಾ ನೀರಿನಿಂದ ಎದ್ದು ರಥವನ್ನು ಏರಿ ಬೀಡಿನ ಕಡೆ ಬಂದನು. ಮಗನ ಬಗೆಗೆ ಮನೋವ್ಯಥೆ ಮನಸ್ಸನ್ನು ಒಂದಿಷ್ಟು ಪೀಡಿಸುತ್ತಿರಲು ಅರ್ಜುನನು ಹೀಗೆಂದನು.
ಕದನದಿನಾಂ ಬರೆ ನಿಚ್ಚಲು
ಮಿದಿರ್ವಂದು ಕೊರಲ್ಗೆ ವಾಯ್ದು ಬಾಯ್ವಾಯೊಳಲಂ|
ಪಿದಿರ್ಗೊಳೆ ತಂಬುಲಮಂ ಕೊ
ಳ್ಳದೆ ಮಾಣ್ದೇ ಮಗನ ತಡವಿದೇನಸುರಾರೀ|| ೧೧೫ ||
ಪದ್ಯ-೧೧೫:ಪದವಿಭಾಗ-ಅರ್ಥ:ಕದನದಿ ನಾಂ ಬರೆ ನಿಚ್ಚಲುಂ ಇದಿರ್ವಂದು ಕೊರಲ್ಗೆ ವಾಯ್ದು (ನಾನು ಯುದ್ಧದಿಂದ ಬರಲು ಎದುರಾಗಿ ನಿತ್ಯವೂ ಬಂದು ಕೊರಳಿಗೆ ಹಾರಿ) ಬಾಯ್ವಾಯೊಳ ಅಲಂಪಿ ಇದಿರ್ಗೊಳೆ ತಂಬುಲಮಂ ಕೊಳ್ಳದೆ ಮಾಣ್ದೇ (ಅಪ್ಪಿಕೊಂಡು ನನ್ನ ಬಾಯಿಂದ ತನ್ನ ಬಾಯಿಗೆ ಸುಖವಾಗಿರುವ ಹಾಗೆ ಎದುರುಗೊಂಡು ತಾಂಬೂಲವನ್ನು ಕೊಳ್ಳದೇ ಇರುವ) ಮಗನ ತಡವು ಇದೇನು ಅಸುರಾರೀ (ಮಗನ ಈ ಸಾವಕಾಶವಿದೇನು ಕೃಷ್ಣ?)
ಪದ್ಯ-೧೧೫:ಅರ್ಥ: ನಾನು ಯುದ್ಧದಿಂದ ಬರಲು ಎದುರಾಗಿ ನಿತ್ಯವೂ ಬಂದು ಕೊರಳಿಗೆ ಹಾರಿ ಅಪ್ಪಿಕೊಂಡು ನನ್ನ ಬಾಯಿಂದ ತನ್ನ ಬಾಯಿಗೆ ಸುಖವಾಗಿರುವ ಹಾಗೆ ತಾಂಬೂಲವನ್ನು ಕೊಳ್ಳದೇ ಇರುವ ಮಗನ ಈ ಸಾವಕಾಶವಿದೇನು ಕೃಷ್ಣ?
ವ|| ಎನುತ್ತುಂ ಬೀಡನೆಯ್ದೆ ವಂದು ಶೋಕಸಾಗರದೊಳ್ ಮುೞುಗಾಡುವ ಪರಿಜನಮುಂ ತನ್ನ ಮೊಗಮಂ ನೋಡಲ್ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರ್ದ ವೀರಭಟರುಮಂ ಕಂಡು ಮಗನ ಸಾವಂ ನಿಶ್ಚೆ ಸಿ ರಾಜಮಂದಿರಮಂ ಪೊಕ್ಕು ರಥದಿಂದಮಿೞಿದು ಧರ್ಮಪುತ್ರಂಗಂ ವಾಯುಪುತ್ರಂಗಂ ಪೊಡೆವಟ್ಟು ಕುಳ್ಳಿರ್ಪುದುಮವರ್ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರೆ ಕಿರೀಟಿ ಕಂಡಿದೇನೆಂದು ಬೆಸಗೊಳೆ ಧರ್ಮಪುತ್ರನಿಂತೆಂದ-
ವಚನ:ಪದವಿಭಾಗ-ಅರ್ಥ:ಎನುತ್ತುಂ ಬೀಡನು ಎಯ್ದೆ ವಂದು ಶೋಕಸಾಗರದೊಳ್ ಮುೞುಗಾಡುವ ಪರಿಜನಮುಂ (ಬೀಡಾರವನ್ನು ಸೇರಿ, ದುಖಸಮುದ್ರದಲ್ಲಿ ಮುಳುಗಾಡುವ ಸೇವಕರನ್ನೂ) ತನ್ನ ಮೊಗಮಂ ನೋಡಲ್ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರ್ದ ವೀರಭಟರುಮಂ (ತನ್ನ ಮುಖವನ್ನು ನೋಡಲು ನಾಚಿಕೆಯಿಂದ ಕೂಡಿ ತಲೆಯನ್ನು ಬಗ್ಗಿಸಿಕೊಂಡು ನೆಲವನ್ನು ಬರೆಯುತ್ತಿದ್ದ ವೀರಭಟರನ್ನೂ) ಕಂಡು ಮಗನ ಸಾವಂ ನಿಶ್ಚೆಸಿ ರಾಜಮಂದಿರಮಂ ಪೊಕ್ಕು (ನೋಡಿ ಮಗನ ಸಾವನ್ನು ನಿಶ್ಚಯಿಸಿ, ಅರಮನೆಯನ್ನು ಪ್ರವೇಶ ಮಾಡಿದನು.) ರಥದಿಂದಂ ಇೞಿದು ಧರ್ಮಪುತ್ರಂಗಂ ವಾಯುಪುತ್ರಂಗಂ ಪೊಡೆವಟ್ಟು ಕುಳ್ಳಿರ್ಪುದುಂ (ರಥದಿಂದ ಇಳಿದು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರ ಮಾಡಿ ಕುಳಿತುಕೊಂಡನು) ಅವರ್ ತಲೆಯಂ ಬಾಗಿ ನೆಲನಂ ಬರೆಯುತ್ತುಂ ಇರೆ ಕಿರೀಟಿ ಕಂಡು ಇದೇನೆಂದು ಬೆಸಗೊಳೆ ಧರ್ಮಪುತ್ರನಿಂತೆಂದ- (ತಲೆಯನ್ನು ತಗ್ಗಿಸಿ ದುಖದಿಂದ ನೆಲವನ್ನು ಬರೆಯುತ್ತಿರಲು ಅರ್ಜುನನು ಇದೇನೆಂದು ಪ್ರಶ್ನೆ ಮಾಡಿದನು. ಧರ್ಮರಾಜನು ಹೀಗೆ ಹೇಳಿದನು)
ವಚನ:ಅರ್ಥ: ಎನ್ನುತ್ತ ಹತ್ತಿರಕ್ಕೆ ಬಂದು ಬೀಡಾರವನ್ನು ಸೇರಿ, ದುಖಸಮುದ್ರದಲ್ಲಿ ಮುಳುಗಾಡುವ ಸೇವಕರನ್ನೂ ತನ್ನ ಮುಖವನ್ನು ನೋಡಲು ನಾಚಿಕೆಯಿಂದ ಕೂಡಿ ತಲೆಯನ್ನು ಬಗ್ಗಿಸಿಕೊಂಡು ನೆಲವನ್ನು ಬರೆಯುತ್ತಿದ್ದ ವೀರಭಟರನ್ನೂ ನೋಡಿ ಮಗನ ಸಾವನ್ನು ನಿಶ್ಚಯಿಸಿ, ಅರಮನೆಯನ್ನು ಪ್ರವೇಶ ಮಾಡಿದನು. ರಥದಿಂದ ಇಳಿದು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರ ಮಾಡಿ ಕುಳಿತುಕೊಂಡನು. ಅವರು ತಲೆಯನ್ನು ತಗ್ಗಿಸಿ (ದುಖದಿಂದ) ನೆಲವನ್ನು ಬರೆಯುತ್ತಿರಲು ಅರ್ಜುನನು ಇದೇನೆಂದು ಪ್ರಶ್ನೆ ಮಾಡಿದನು. ಧರ್ಮರಾಜನು ಹೀಗೆ ಹೇಳಿದನು.
ಮ||ಸ್ರ|| ಗುರು ಚಕ್ರವ್ಯೂಹಂ ಪಣ್ಣಿದೊಡೆ ಪುಗಲಿದಂ ಬಲ್ಲರಾರೆಂದೊಡಿಂ ನಾ
ನಿರೆ ಮತ್ತಾರ್ ಬಲ್ಲರೆಂದೊರ್ವನೆ ರಿಪುಬಳವಾರಾಶಿಯಂ ಪೊಕ್ಕು ಮಿಕ್ಕಾಂ|
ತರನಾಟಂದಿಕ್ಕಿ ದುರ್ಯೋಧನನ ತನಯರಂ ನೂರ್ವರಂ ಕೊಂದು ತತ್ಸಂ
ಗರದೊಳ್ ಕಾದೆಮ್ಮನಿಂತಾಂತಿಱಿದು ನಿಜಸುತಂ ದೇವಲೋಕಕ್ಕೆ ಸಂದಂ|| ೧೧೬ ||
ಪದ್ಯ-೧೧೬:ಪದವಿಭಾಗ-ಅರ್ಥ:ಗುರು ಚಕ್ರವ್ಯೂಹಂ ಪಣ್ಣಿದೊಡೆ ಪುಗಲಿದಂ ಬಲ್ಲರಾರೆಂದೊಡೆ ( ಗುರು ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಲು ಇದನ್ನು ಪ್ರವೇಶಿಸಲು ತಿಳಿದವರಾರು ಎಂದಾಗ) ಇಂ ನಾನು ಇರೆ ಮತ್ತಾರ್ ಬಲ್ಲರೆಂದು ಒರ್ವನೆ ರಿಪುಬಳವ ಆರಾಶಿಯಂ ಪೊಕ್ಕು (ಮತ್ತಾರು ತಿಳಿದಿದ್ದಾರೆ ಎಂದು ಶತ್ರುಸೇನಾಸಮೂಹವನ್ನು ಒಬ್ಬನೇ ಪ್ರವೇಶಿಸಿ) ಮಿಕ್ಕ ಆಂತರನು ಆಟಂದಿಕ್ಕಿ (ಮೀರಿ ಪ್ರತಿಭಟಿಸಿದವರನ್ನು ಕೊಂದು) ದುರ್ಯೋಧನನ ತನಯರಂ ನೂರ್ವರಂ ಕೊಂದು (ಮೀರಿ ಪ್ರತಿಭಟಿಸಿದವರನ್ನು ಕೊಂದು ದುರ್ಯೋಧನನ ನೂರು ಜನ ಮಕ್ಕಳನ್ನೂ ಸಂಹರಿಸಿ) ತತ್ಸಂಗರದೊಳ್ ಕಾದು ಎಮ್ಮನು (ಆ ಯುದ್ಧದಲ್ಲಿ ನಮ್ಮನ್ನು ರಕ್ಷಿಸಿ) ಇಂತು ಆಂತು ಇಱಿದು ನಿಜಸುತಂ ದೇವಲೋಕಕ್ಕೆ ಸಂದಂ (ಹೀಗೆ ಎದುರಾಗಿ ಯುದ್ಧಮಾಡಿ ನಿನ್ನ ಮಗನಾದ ಅಭಿಮನ್ಯುವು ದೇವಲೋಕವನ್ನು ಸೇರಿದನು)
ಪದ್ಯ-೧೧೬:ಅರ್ಥ: ಗುರು ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಲು ಇದನ್ನು ಪ್ರವೇಶಿಸಲು ತಿಳಿದವರಾರು ಎಂದಾಗ, ಮತ್ತಾರು ತಿಳಿದಿದ್ದಾರೆ ಎಂದು ಶತ್ರುಸೇನಾಸಮೂಹವನ್ನು ಒಬ್ಬನೇ ಪ್ರವೇಶಿಸಿ, ಮೀರಿ ಪ್ರತಿಭಟಿಸಿದವರನ್ನು ಕೊಂದು ದುರ್ಯೋಧನನ ನೂರು ಜನ ಮಕ್ಕಳನ್ನೂ ಸಂಹರಿಸಿ ಆ ಯುದ್ಧದಲ್ಲಿ ನಮ್ಮನ್ನು ರಕ್ಷಿಸಿ ಹೀಗೆ ಎದುರಾಗಿ ಯುದ್ಧಮಾಡಿ ನಿನ್ನ ಮಗನಾದ ಅಭಿಮನ್ಯುವು ದೇವಲೋಕವನ್ನು ಸೇರಿದನು.
ಮ|| ಬರಮಂ ಬಾಳ ಶಶಾಂಕಮೌಳಿ ಕುಡೆ ಪೆತ್ತೊಂದುರ್ಕಿನಿಂದೋವದಾಂ
ತು ರಣೋತ್ಸಾಹದಿನೆಮ್ಮನೊರ್ವನೆ ಭರಂಗೆಯ್ದತ್ತ ದುರ್ಯೋಧನಂ|
ಬೆರಸಾ ದ್ರೋಣನನಟ್ಟಿ ಸಿಂಧು ವಿಷಯಾಶಂ ಪೊದೞ್ದೊಂದು ಮ
ಚ್ಚರದಿಂ ನಿನ್ನ ತನೂಜನಂ ಕೊಲಿಸಿದಂ ಮತ್ತಾಂತವರ್ ಕೊಲ್ವರೇ|| ೧೧೭ ||
ಪದ್ಯ-೧೧೭:ಪದವಿಭಾಗ-ಅರ್ಥ:ಬರಮಂ (ವರವನ್ನು) ಬಾಳ ಶಶಾಂಕಮೌಳಿ ಕುಡೆ (ಹಣೆಯಲ್ಲಿ ಚಂದ್ರನಿರುವ ಈಶ್ವರನು ಕೊಡಲು) ಪೆತ್ತ ಒಂದು ಉರ್ಕಿ ನಿಂದು ಓವದೆ ಆಂತು (ಆ ಒಂದು ಸೊಕ್ಕಿನಿಂದ ರಕ್ಷಿಸದೆ ನಮ್ಮನ್ನು ಎದುರಿಸಿ) ರಣೋತ್ಸಾಹದಿಂ ನೆಮ್ಮನೊರ್ವನೆ ಭರಂಗೆಯ್ದತ್ತ (ರಣೋತ್ಸಾಹದಿಂದ ಆರ್ಭಟ ಮಾಡುತ್ತ, ನಮ್ಮನ್ನು ಒಬ್ಬನೆ ತೀವ್ರತೆಯನ್ನು ತೋರಿಸಿ) ದುರ್ಯೋಧನಂಬೆರಸು ಆ ದ್ರೋಣನನು ಅಟ್ಟಿ ಸಿಂಧು ವಿಷಯಾಶಂ (ದುರ್ಯೋಧನನೊಡನೆ ದ್ರೋಣನನ್ನು ಬೇರೆ ಕಡೆಗೆ ಕಳುಹಿಸಿ) ಪೊದೞ್ದೊಂದು ಮಚ್ಚರದಿಂ (ಹೊಂದಿದ, ನೆಲೆಗೊಂಡಿದ್ದ ಮತ್ಸರದಿಂದ) ನಿನ್ನ ತನೂಜನಂ ಕೊಲಿಸಿದಂ (ನಿನ್ನ ಮಗನನ್ನು ಕೊಲ್ಲಿಸಿದನು.) ಮತ್ತೆ ಆಂತವರ್ ಕೊಲ್ವರೇ (ಬೇರೆಯವರು ಅಭಿಮನ್ಯುವನ್ನು ಕೊಲ್ಲಲು ಸಾಧ್ಯವೇ?)
ಪದ್ಯ-೧೧೭:ಅರ್ಥ:೧೧೭. ಸೈಂಧವನು ಈಶ್ವರನು ಹಿಂದೆ ವರವನ್ನು ಕೊಡಲು, ಆ ಒಂದು ಸೊಕ್ಕಿನಿಂದ ರಕ್ಷಿಸದೆ ನಮ್ಮನ್ನು ಎದುರಿಸಿ ರಣೋತ್ಸಾಹದಿಂದ ಆರ್ಭಟ ಮಾಡುತ್ತ, ನಮ್ಮನ್ನು ಒಬ್ಬನೆ ತೀವ್ರತೆಯನ್ನು ತೋರಿಸಿ ದುರ್ಯೋಧನನೊಡನೆ ದ್ರೋಣನನ್ನು ಬೇರೆ ಕಡೆಗೆ ಕಳುಹಿಸಿ ತನ್ನಲ್ಲಿ ನೆಲೆಗೊಂಡಿದ್ದ ಮತ್ಸರದಿಂದ ನಿನ್ನ ಮಗನನ್ನು ಕೊಲ್ಲಿಸಿದನು. ಬೇರೆಯವರು ಅಭಿಮನ್ಯುವನ್ನು ಕೊಲ್ಲಲು ಸಾಧ್ಯವೇ?
ವ|| ಎಂಬುದುಂ ಪ್ರಚಂಡ ಕೋಪ ಪಾವಕ ಪ್ರಶಮಿತ ಶೋಕರಸನುಮುನ್ನತ ಲಲಾಟ ತಟ ಘಟಿತ ಭೀಷಣ ಭ್ರುಕುಟಿಯುಂ ಕಲ್ಪಾಂತ ದಿನಕರ ದುರ್ನಿರೀಕ್ಷನುಮುತ್ಪಾತ ಮಾರುತನಂತೆ ಸಕಲ ಭೂಭೃಕ್ಕಂಪಕಾರಿಯುಂ ವಿಂಧ್ಯಾಚಳದಂತೆ ವರ್ಧಮಾನೋತ್ಸೇಧನುಮಧಕಾರಾತಿಯಂತೆ ಭೈರವಾಕಾರನುಮಾಗಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಪ್ರಚಂಡ ಕೋಪ ಪಾವಕ ಪ್ರಶಮಿತ ಶೋಕರಸನುಂ (ಎನ್ನಲು ಅತ್ಯಂತ ಘೋರವಾದ ಕೋಪಾಗ್ನಿಯಿಂದ ಶೋಕರಸವು ಆರಿಹೋಯಿತು, ಶೋಕ ಪ್ರಶಮಿತ - ಆರಿದವನಾಗಿ) ಉನ್ನತ ಲಲಾಟ ತಟ ಘಟಿತ ಭೀಷಣ ಭ್ರುಕುಟಿಯುಂ (ಎತ್ತರವಾದ ಮುಖದಲ್ಲಿ ಹುಬ್ಬು ಭಯಂಕರವಾಗಿ ಗಂಟಿಕ್ಕಿತು.) ಕಲ್ಪಾಂತ ದಿನಕರ ದುರ್ನಿರೀಕ್ಷನುಂ (ಪ್ರಳಯಕಾಲದ ಸೂರ್ಯನಂತೆ (ಕಣ್ಣಿನಿಂದ) ನೋಡಲಾಗದವನೂ) ಉತ್ಪಾತ ಮಾರುತನಂತೆ ಸಕಲ ಭೂಭೃಕ್ಕಂಪಕಾರಿಯುಂ (ವಿಪತ್ಕಾಲದ ಗಾಳಿಯಂತೆ ಸಮಸ್ತ ಬೆಟ್ಟಗಳನ್ನೂ ನಡುಗಿಸುವವನೂ) ವಿಂಧ್ಯಾಚಳದಂತೆ ವರ್ಧಮಾನೋತ್ಸೇಧನುಂ (ವಿಂಧ್ಯಪರ್ವತದಂತೆ ಎತ್ತರವಾಗಿ ಬೆಳೆಯುತ್ತಿರುವವನೂ), ಅಂಧಕಾರಾತಿಯಂತೆ ಭೈರವಾಕಾರನುಮಾಗಿ (ಈಶ್ವರನಂತೆ ಭಯಂಕರಾಕಾರವುಳ್ಳವನೂ ಆಗಿ)-
ವಚನ:ಅರ್ಥ: ಎನ್ನಲು ಅತ್ಯಂತ ಘೋರವಾದ ಕೋಪಾಗ್ನಿಯಿಂದ ಶೋಕರಸವು ಆರಿಹೋಯಿತು. ಎತ್ತರವಾದ ಮುಖದಲ್ಲಿ ಹುಬ್ಬು ಭಯಂಕರವಾಗಿ ಗಂಟಿಕ್ಕಿತು. ಪ್ರಳಯಕಾಲದ ಸೂರ್ಯನಂತೆ (ಕಣ್ಣಿನಿಂದ) ನೋಡಲಾಗದವನೂ, ವಿಪತ್ಕಾಲದ ಗಾಳಿಯಂತೆ ಸಮಸ್ತ ಬೆಟ್ಟಗಳನ್ನೂ ನಡುಗಿಸುವವನೂ, ವಿಂಧ್ಯಪರ್ವತದಂತೆ ಎತ್ತರವಾಗಿ ಬೆಳೆಯುತ್ತಿರುವವನೂ, ಈಶ್ವರನಂತೆ ಭಯಂಕರಾಕಾರವುಳ್ಳವನೂ ಆಗಿ-
ಮ|| ರಸೆಯಿಂ ಭೂತಳದಿಂ ಕುಳಾದ್ರಿ ದಿಗ್ದಂತಿಯಿಂ ವಾರ್ಧಿಯಿಂ
ದೆಸೆಯಿಂದಾಗಸದಿಂದಜಾಂಡ ತಟದಿಂದತ್ತೆಲ್ಲಿ ಪೊಕ್ಕಿರ್ದುಮಿಂ|
ಮಿಸುಕಲ್ ತೀರ್ಗುಮೆ ವೈರಿಗೆನ್ನ ಸುತನಂ ಕೊಂದಿರ್ದುದಂ ಕೇಳ್ದು ಸೈ
ರಿಸಿ ಮಾಣ್ದಿರ್ದಪೆನಿನ್ನುಮೆಂದೊಡಿದನಾಂ ಪೇೞೇತಳ್ ನೀಗುವೆಂ|| ೧೧೮||
ಪದ್ಯ-೧೧೮:ಪದವಿಭಾಗ-ಅರ್ಥ:ರಸೆಯಿಂ ಭೂತಳದಿಂ (ಪಾತಾಳದಿಂದಲೂ ಭೂಮಂಡಲದಿಂದಲೂ) ಕುಳಾದ್ರಿ ದಿಗ್ದಂತಿಯಿಂ (ಕುಲಪರ್ವತಗಳ ಸಮೂಹದಿಂದಲೂ ದಿಗ್ಗಜಗಳಿಂದಲೂ) ವಾರ್ಧಿಯಿಂ ದೆಸೆಯಿಂದ (ಸಮುದ್ರಗಳಿಂದಲೂ ದಿಕ್ಕುಗಳಿಂದಲೂ), ಆಗಸದಿಂದ ಅಜಾಂಡ ತಟದಿಂದ (ಆಕಾಶದಿಂದ ಬ್ರಹ್ಮಾಂಡದಿಂದಲೂ) ಅತ್ತ ಎಲ್ಲಿ ಪೊಕ್ಕಿರ್ದುಮಿಂ (ಆಚೆಯ ಕಡೆ ಎಲ್ಲಿ ಹೊಕ್ಕಿದ್ದರೂ) ಮಿಸುಕಲ್ ತೀರ್ಗುಮೆ ವೈರಿಗೆ (ನನ್ನ ಶತ್ರುವಿಗೆ (ಅಲ್ಲಿಂದ) ಅಳ್ಳಾಡಲು ಸಾಧ್ಯವೇ?) ಎನ್ನ ಸುತನಂ ಕೊಂದಿರ್ದುದಂ ಕೇಳ್ದು ಸೈರಿಸಿ (ನನ್ನ ಮಗನನ್ನು ಕೊಂದಿರುವುದನ್ನು ಕೇಳಿಯೂ ಸೈರಿಸಿಕೊಂಡು) ಮಾಣ್ದು ಇರ್ದಪೆನೆ ಇನ್ನುಂ ಎಂದೊಡೆ (ಇನ್ನೂ ಸುಮ್ಮನಿದ್ದೇನೆ ಎಂದರೆ) ಇದನು ಆಂ ಪೇೞ್ ಏತಳ್ ನೀಗುವೆಂ (ಈ ದುಖವನ್ನು ನಾನು ಮತ್ತಾವುದರಿಂದ ಪರಿಹಾರ ಮಾಡಿಕೊಳ್ಳಲಿ ಹೇಳು!)
ಪದ್ಯ-೧೧೮:ಅರ್ಥ:ಪಾತಾಳದಿಂದಲೂ ಭೂಮಂಡಲದಿಂದಲೂ, ಕುಲಪರ್ವತಗಳ ಸಮೂಹದಿಂದಲೂ ದಿಗ್ಗಜಗಳಿಂದಲೂ, ಸಮುದ್ರಗಳಿಂದಲೂ ದಿಕ್ಕುಗಳಿಂದಲೂ ಆಕಾಶದಿಂದ ಬ್ರಹ್ಮಾಂಡದಿಂದಲೂ ಆಚೆಯ ಕಡೆ ಎಲ್ಲಿ ಹೊಕ್ಕಿದ್ದರೂ, ನನ್ನ ಶತ್ರುವಿಗೆ (ಅಲ್ಲಿಂದ) ಅಳ್ಳಾಡಲು ಸಾಧ್ಯವೇ? ನನ್ನ ಮಗನನ್ನು ಕೊಂದಿರುವುದನ್ನು ಕೇಳಿಯೂ ಸೈರಿಸಿಕೊಂಡು ಇನ್ನೂ ಸುಮ್ಮನಿದ್ದೇನೆ ಎಂದರೆ ಈ ದುಖವನ್ನು ನಾನು ಮತ್ತಾವುದರಿಂದ ಪರಿಹಾರ ಮಾಡಿಕೊಳ್ಳಲಿ ಹೇಳು! (ಇದಕ್ಕೆ ತಕ್ಕ ಪ್ರತೀಕಾರ ಮಾಡುತ್ತೇನೆ)
ಕಂ|| ಬಳೆದ ಸುತಶೋಕದಿಂದೀ
ಗಳೆ ಸುರಿಗುಮೆ ಸುರಿಯವಾ ಜಯದ್ರಥನ ಚಿತಾ|
ನಳನಿಂದಮೊಗೆದ ಪೊಗೆಗಳ್
ಕೊಳೆ ಸುರಿವೊಡೆ ಸುರಿವುವೆನ್ನ ನಯನಜಲಂಗಳ್|| ೧೧೯ ||
ಪದ್ಯ-೧೧೯:ಪದವಿಭಾಗ-ಅರ್ಥ:ಬಳೆದ ಸುತಶೋಕದಿಂದ ಈಗಳೆ ಸುರಿಗುಮೆ ಸುರಿಯವು (ಹೆಚ್ಚುತ್ತಿರುವ ಪುತ್ರಶೋಕದಿಂದ ಈಗ ನನ್ನ ಕಣ್ಣೀರು ಸುರಿಯುವುದೇ?, ಸುರಿಯುವುದಿಲ್ಲ) ಆ ಜಯದ್ರಥನ ಚಿತಾನಳನಿಂದಂ ಒಗೆದ (ಆ ಸೈಂಧವನ ಚಿತಾಗ್ನಿಯಿಂದ ಹುಟ್ಟಿದ) ಪೊಗೆಗಳ್ ಕೊಳೆ (ಮುತ್ತಿಕೊಳ್ಳಲು) ಸುರಿವೊಡೆ ಸುರಿವುವೆನ್ನ ನಯನಜಲಂಗಳ್ (ಹೊಗೆಗಳು ಸುತ್ತಿ ಆವರಿಸಲು, ಆಗ ಮಾತ್ರ ನನ್ನ ಕಣ್ಣೀರು ಸುರಿಯುವುದು.)
ಪದ್ಯ-೧೧೯:ಅರ್ಥ: ಹೆಚ್ಚುತ್ತಿರುವ ಪುತ್ರಶೋಕದಿಂದ ಈಗ ನನ್ನ ಕಣ್ಣೀರು ಸುರಿಯುವುದೇ?, ಸುರಿಯುವುದಿಲ್ಲ; ಆ ಸೈಂಧವನ ಚಿತಾಗ್ನಿಯಿಂದ ಹುಟ್ಟಿದ ಹೊಗೆಗಳು ಸುತ್ತಿ ಆವರಿಸಲು, ಆಗ ಮಾತ್ರ ನನ್ನ ಕಣ್ಣೀರು ಸುರಿಯುವುದು.
ಬಿಸಜಭವನಕ್ಕೆ ಮೃಡನ
ಕ್ಕಸುರಾಂತಕನಕ್ಕೆ ಕಾವೊಡಂ ನಾಳಿನೊಳ|
ರ್ವಿಸೆ ಕೊಂದು ಸಿಂಧುರಾಜನ
ಬಸಿಱಂ ಪೋೞ್ದೆನ್ನ ಮಗನನಾಂ ತೆಗೆಯದಿರೆಂ|| ೧೨೦ ||
ಪದ್ಯ-೧೨೦:ಪದವಿಭಾಗ-ಅರ್ಥ:ಬಿಸಜಭವನು ಅಕ್ಕೆ (ಬ್ರಹ್ಮನಾಗಲಿ) ಮೃಡನಕ್ಕೆ ಅಸುರಾಂತಕನಕ್ಕೆ (ರುದ್ರನಾಗಲಿ ವಿಷ್ಣುವಾಗಲಿ) ಕಾವೊಡಂ ನಾಳಿನೊಳ್ ಅರ್ವಿಸೆ ಕೊಂದು (ರಕ್ಷಿಸಿದರೂ ನಾಳೆ ಭಯಂಕರವಾದ ರೀತಿಯಲ್ಲಿ ಕೊಂದು) ಸಿಂಧುರಾಜನ ಬಸಿಱಂ ಪೋೞ್ದು (ಸೀಳಿ) ಎನ್ನ ಮಗನನು ಆಂ ತೆಗೆಯದೆ ಇರೆಂ (ಆ ಸೈಂಧವನ ಹೊಟ್ಟೆಯನ್ನು ಸೀಳಿ ನನ್ನ ಮಗನನ್ನು ತೆಗೆಯದೆ ಇರುವುದಿಲ್ಲ)
ಪದ್ಯ-೧೨೦:ಅರ್ಥ: ಬ್ರಹ್ಮನಾಗಲಿ ರುದ್ರನಾಗಲಿ ವಿಷ್ಣುವಾಗಲಿ ರಕ್ಷಿಸಿದರೂ ನಾಳೆ ಭಯಂಕರವಾದ ರೀತಿಯಲ್ಲಿ ಕೊಂದು ಆ ಸೈಂಧವನ ಹೊಟ್ಟೆಯನ್ನು ಸೀಳಿ ನನ್ನ ಮಗನನ್ನು ತೆಗೆಯದೆ ಇರುವುದಿಲ್ಲ.
ಕೊಂದೆನ್ನ ಮಗನನಿಂ ಭಯ
ದಿಂದಂ ರಸೆವೊಕ್ಕುಮಜನ ಗುಂಡಿಗೆವೊಕ್ಕುಂ|
ಮಂದರಧರನೀ ಪೊರ್ಕುೞ
ಪೊಂದಾವರೆವೊಕ್ಕು ಮೇಣವಂ ಬರ್ದುಕುವನೇ|| ೧೨೧ ||
ಪದ್ಯ-೧೨೧:ಪದವಿಭಾಗ-ಅರ್ಥ:ಕೊಂದು ಎನ್ನ ಮಗನನು (ನನ್ನ ಮಗನನ್ನು ಕೊಂದು) ಇಂ ಭಯದಿಂದಂ ರಸೆವೊಕ್ಕುಂ (ಭಯದಿಂದ ಇನ್ನು ಅವನು ರಸಾತಳವನ್ನು ಪ್ರವೇಶಿಸಿದರೂ) ಅಜನ ಗುಂಡಿಗೆವೊಕ್ಕುಂ (ಬ್ರಹ್ಮನ ಕಮಂಡಲವನ್ನು ಪ್ರವೇಶಿಸಿದರೂ) ಮಂದರಧರನು ಈ ಪೊರ್ಕುೞ ಪೊಂದಾವರೆವೊಕ್ಕು (ವಿಷ್ಣುವಿನ ಹೊಕ್ಕಳ ಕಮಲವನ್ನು ಸೇರಿದರೂ) ಮೇಣ್ ಅವಂ ಬರ್ದುಕುವನೇ (ಮತ್ತೆ ಅವನು -ಸೈಂಧವನು- ಬದುಕಬಲ್ಲನೇ?)
ಪದ್ಯ-೧೨೧:ಅರ್ಥ:ನನ್ನ ಮಗನನ್ನು ಕೊಂದು ಭಯದಿಂದ ಇನ್ನು ಅವನು ರಸಾತಳವನ್ನು ಪ್ರವೇಶಿಸಿದರೂ ಬ್ರಹ್ಮನ ಕಮಂಡಲವನ್ನು ಪ್ರವೇಶಿಸಿದರೂ, ವಿಷ್ಣುವಿನ ಹೊಕ್ಕಳ ಕಮಲವನ್ನು ಸೇರಿದರೂ ಮತ್ತೆ ಅವನು (ಸೈಂಧವನು) ಬದುಕಬಲ್ಲನೇ?
ಚಂ|| ಪಡೆ ಪಡೆಮೆಚ್ಚೆಗಂಡನೆನೆ ಸಂದರಿಕೇಸರಿಯೆಂಬಗುರ್ವು ನೇ
ರ್ಪಡೆ ನೆಗೞ್ದಾನಣಂ ಸೆಡೆದು ಮಾಣ್ಬೆನೆ ನಾಳೆ ದಿನೇಶನಸ್ತದ|
ತ್ತುಡುಗದ ಮುನ್ನ ಸೈಂಧವನಗುರ್ವಿಸೆ ಕೊಲ್ಲದೊಡೇನೊ ಗಾಂಡಿವಂ
ಬಿಡಿದೆನೆ ಚಿ ತೊವಲ್ವಿಡಿದೆನಲ್ಲೆನೆ ವೈರಿಗೆ ಯುದ್ಧರಂಗದೊಳ್|| ೧೨೨ ||
ಪದ್ಯ-೧೨೨:ಪದವಿಭಾಗ-ಅರ್ಥ:ಪಡೆ ಪಡೆಮೆಚ್ಚೆಗಂಡನು ಎನೆ, ಸಂದ ಅರಿಕೇಸರಿಯೆಂಬ ಅಗುರ್ವು ನೇರ್ಪಡೆ (ಪ್ರಸಿದ್ಧವಾದ ಅರಿಕೇಸರಿಯೆಂಬ ಭಯ ಶತ್ರುಗಳಲ್ಲಿ ಸೇರಿರಲು,) ನೆಗೞ್ದ ಆಂ ಅಣಂ ಸೆಡೆದು (ಭಯದಿಂದ) ಮಾಣ್ಬೆನೆ (ಪ್ರಸಿದ್ಧವಾಗಿರುವ ನಾನು ಸ್ವಲ್ಪ ಹೆದರಿ ಭಯದಿಂದ ಕುಗ್ಗಿ ಬಿಡುವೆನೇ?) ನಾಳೆ ದಿನೇಶನು ಅಸ್ತದತ್ತ ಉಡುಗದ ಮುನ್ನ ಸೈಂಧವನ ಅಗುರ್ವಿಸೆ ಕೊಲ್ಲದೊಡೆ ಏನೊ (ನಾಳೆ ಸೂರ್ಯನು ಮುಳುಗುವುದಕ್ಕೆ ಮುಂಚೆಯೇ ಜಯದ್ರಥನು ಹೆದರುವಂತೆ ಅವನನ್ನು ಕೊಲ್ಲದಿದ್ದರೆ ಏನೋ!) ಗಾಂಡಿವಂ ಪಿಡಿದೆನೆ? (ಗಾಂಡೀವವನ್ನು ಧರಿಸಿದವನೇ ಅಲ್ಲ) ಚಿ! ತೊವಲ್ವಿಡಿದೆನು ಅಲ್ಲ ಎನೆ ವೈರಿಗೆ ಯುದ್ಧರಂಗದೊಳ್ (ಯುದ್ಧರಂಗದಲ್ಲಿ ಹೆದರಿ ವೈರಿಗೆ ಚಿಗುರು ಎಲೆಗಳನ್ನು ಹಿಡಿದವನಾಗುವುದಿಲ್ಲವೇ? (ಹೇಡಿಯಂತೆ))
ಪದ್ಯ-೧೨೨:ಅರ್ಥ: ಸೈನ್ಯವು ನನ್ನನ್ನು ‘ಪಡೆಮೆಚ್ಚೆಗಂಡ’ ಎನ್ನುತ್ತಿರುವಾಗ, ಪ್ರಸಿದ್ಧವಾದ ಅರಿಕೇಸರಿಯೆಂಬ ಭಯ ಶತ್ರುಗಳಲ್ಲಿ ಸೇರಿರಲು, ಪ್ರಸಿದ್ಧವಾಗಿರುವ ನಾನು ಸ್ವಲ್ಪ ಹೆದರಿ ಭಯದಿಂದ ಕುಗ್ಗಿಬಿಡುತ್ತೇನೆಯೇ? ನಾಳೆ ಸೂರ್ಯನು ಮುಳುಗುವುದಕ್ಕೆ ಮುಂಚೆಯೇ ಜಯದ್ರಥನು ಹೆದರುವಂತೆ ಅವನನ್ನು ಕೊಲ್ಲದಿದ್ದರೆ ನಾನು ಗಾಂಡೀವವನ್ನು ಧರಿಸಿದವನೇ ಅಲ್ಲ. ಯುದ್ಧರಂಗದಲ್ಲಿ ಹೆದರಿ ವೈರಿಗೆ ಚಿಗುರು ಎಲೆಗಳನ್ನು ಹಿಡಿದವನಾಗುವುದಿಲ್ಲವೇ? (ಹೇಡಿಯಂತೆ)
ವ|| ಎಂದು ನೃಪ ಪರಮಾತ್ಮಂ ಕೃತಪ್ರತಿಜ್ಞನಾದುದಂ ಸೈಂಧವನ ಸಜ್ಜನಂ ದುಜ್ಜೋದನನ ತಂಗೆ ದುಶ್ಶಳೆ ಕೇಳ್ದು ಮಲಮಲ ಮಱುಗಿ ತಮ್ಮಣ್ಣನಲ್ಲಿಗೆ ವಂದು ಕಾಲ ಮೇಲೆ ಕವಿದು ಪಟ್ಟು-
ವಚನ:ಪದವಿಭಾಗ-ಅರ್ಥ:ಎಂದು ನೃಪ ಪರಮಾತ್ಮಂ ಕೃತಪ್ರತಿಜ್ಞನಾದುದಂ (ಹೀಗೆ ನೃಪಪರಮಾತ್ಮನಾದ ಅರ್ಜುನನು ಕೈಗೊಳ್ಳುವ ಪ್ರತಿಜ್ಞೆ ಮಾಡಿದುದನ್ನು) ಸೈಂಧವನ ಸಜ್ಜನಂ (ಸೈಂಧವನ ಕುಲವಂತೆ) ದುಜ್ಜೋದನನ ತಂಗೆ ದುಶ್ಶಳೆ ಕೇಳ್ದು (ದುರ್ಯೋಧನನ ತಂಗಿಯೂ ಆದ ದುಶ್ಶಳೆಯು ಕೇಳಿ-) ಮಲಮಲ ಮಱುಗಿ (ಬಹಳ ಮುಗಿ- ದುಃಖಪಟ್ಟು) ತಮ್ಮಣ್ಣನಲ್ಲಿಗೆ ವಂದು ಕಾಲ ಮೇಲೆ ಕವಿದು ಪಟ್ಟು (ತಮ್ಮ ಅಣ್ಣನ ಹತ್ತಿರಕ್ಕೆ ಬಂದು ಕಾಲಿನ ಮೇಲೆ ಕವಿದು ಬಿದ್ದಳು) -
ವಚನ:ಅರ್ಥ:ಹೀಗೆ ನೃಪಪರಮಾತ್ಮನಾದ ಅರ್ಜುನನು ಕೈಗೊಳ್ಳುವ ಪ್ರತಿಜ್ಞೆ ಮಾಡಿದುದನ್ನು ಸೈಂಧವನ ಕುಲವಂತೆ ದುರ್ಯೋಧನನ ತಂಗಿಯೂ ಆದ ದುಶ್ಶಳೆಯು ಕೇಳಿ ಬಹಳ ದುಃಖಪಟ್ಟು ತಮ್ಮ ಅಣ್ಣನ ಹತ್ತಿರಕ್ಕೆ ಬಂದು ಕಾಲಿನ ಮೇಲೆ ಕವಿದು ಬಿದ್ದಳು.
ಕಂ|| ತನ್ನ ಸುತನೞಿಯಲೞಿಯಲ್
ನಿನ್ನಯ ಮಯ್ದುನನನರ್ಜುನಂ ಪೂಣ್ದನದ|
ರ್ಕಾನ್ನಡುಗಿ ಬಂದೆನಿನ್ನೀ
ನೆನ್ನೋಲೆಯ ಕಡಗದೞಿವನೇಂ ನೋಡಿದಪಾ|| ೧೨೩ ||
ಪದ್ಯ-೧೨೩:ಪದವಿಭಾಗ-ಅರ್ಥ:ತನ್ನ ಸುತನೞಿಯಲ್ ಅೞಿಯಲ್ ನಿನ್ನಯ ಮಯ್ದುನನಂ ಅರ್ಜುನಂ ಪೂಣ್ದನು ಅದರ್ಕೆ ಆಂ ನಡುಗಿ ಬಂದೆಂ (ಅದಕ್ಕಾಗಿ ನಾನು ಹೆದರಿ ಬಂದೆನು.) ಇನ್ನು ನೀನೆ ಎನ್ನ ಓಲೆಯ ಕಡಗದ ಅೞಿವಂ ಏಂ ನೋಡಿದಪಾ (ನೀನು ನನ್ನ ಓಲೆ ಮತ್ತು ಕಡಗದ ನಾಶವನ್ನು (ಸೌಮಂಗಲ್ಯದ ನಾಶವನ್ನು) ನೋಡುತ್ತೀಯಾ? )
ಪದ್ಯ-೧೨೩೩:ಅರ್ಥ:೧೨೩. ಅರ್ಜುನನು ತನ್ನ ಮಗನು ಸಾಯಲು ನಿನ್ನ ಮಯ್ದುನನ ಸಾವಿಗೆ ಪ್ರತಿಜ್ಞೆ ಮಾಡಿದ್ದಾನೆ. ಅದಕ್ಕಾಗಿ ನಾನು ಹೆದರಿ ಬಂದೆನು. ನೀನು ನನ್ನ ಓಲೆ ಮತ್ತು ಕಡಗದ ನಾಶವನ್ನು ನೋಡುತ್ತೀಯಾ?
ವ|| ಎಂಬುದುಂ ಸುಯೋಧನಂ ಮುಗುಳ್ನಗೆ ನಕ್ಕಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಸುಯೋಧನಂ ಮುಗುಳ್ನಗೆ ನಕ್ಕು ಇಂತು ಎಂದಂ-
ವಚನ:ಅರ್ಥ: ಎನ್ನಲು ದುರ್ಯೋಧನನು ಹುಸಿನಗೆ ನಕ್ಕು ಹೀಗೆಂದನು.
ಕಂ|| ಮರುಳಕ್ಕ ಮಗನ ಶೋಕದಿ
ನುರುಳ್ದುಂ ಪೂಣ್ದವನ ಪೂಣ್ಕೆ ದುಶ್ಶಾಸನನೊಳ್|
ಕರತನದಿಂದೆನ್ನೊಳಮಾ
ಮರುತ್ಸುತಂ ಪೂಣ್ದ ಪೂಣ್ಕೆಯಂತೆವೊಲಕ್ಕುಂ|| ೧೨೪
ಪದ್ಯ-೧೨೪:ಪದವಿಭಾಗ-ಅರ್ಥ:ಮರುಳಕ್ಕ (ಹುಚ್ಚು ನಿನಗೆ ತಂಗೀ!) ಮಗನ ಶೋಕದಿಂ ಉರುಳ್ದುಂ ಪೂಣ್ದವನ ಪೂಣ್ಕೆ (ಮಗನ ದುಃಖದಿಂದ ಉರಿಹೊಂದಿ/ಕೋಪಗೊಂಡು ಪ್ರತಿಜ್ಞೆ ಮಾಡಿದವನು ಅಷ್ಟೆ!) ದುಶ್ಶಾಸನನೊಳ್ ಕರತನದಿಂದ (ಕಠಿಣತೆಯಿಂದ) ಎನ್ನೊಳಂ ಆ ಮರುತ್ಸುತಂ (ದುಶ್ಶಾಸನನಲ್ಲಿಯೂ ನನ್ನಲ್ಲಿಯೂ ಬಹಳ ಕಠಿಣತೆಯಿಂದ ಭೀಮನು) ಪೂಣ್ದ ಪೂಣ್ಕೆಯಂತೆವೊಲ್ ಅಕ್ಕುಂ (ಮಾಡಿದ ಪ್ರತಿಜ್ಞೆಯಂತೆಯೇ ಆಗುತ್ತದೆ - ನಿಷ್ಫಲವಾಗುತ್ತದೆ)
ಪದ್ಯ-೧೨೪:ಅರ್ಥ: ಹುಚ್ಚುತಂಗೀ, ಅರ್ಜುನನು ಮಗನ ದುಃಖದಿಂದ ಉರಿಹೊಂದಿ/ಕೋಪಗೊಂಡು ಪ್ರತಿಜ್ಞೆ ಮಾಡಿದವನು ಅಷ್ಟೆ!; ಭೀಮನು ದುಶ್ಶಾಸನನಲ್ಲಿಯೂ ನನ್ನಲ್ಲಿಯೂ ಬಹಳ ಕಠಿಣತೆಯಿಂದ ಮಾಡಿದ ಪ್ರತಿಜ್ಞೆಯಂತೆಯೇ ಆಗುತ್ತದೆ - ನಿಷ್ಫಲವಾಗುತ್ತದೆ.
ಚಂ|| ಕೃತ ವಿವಿಧಾಸ್ತ್ರಶಸ್ತ್ರ ಯಮಪುತ್ರ ಮರುತ್ಸುತ ಯಜ್ಞಸೇನರು
ದ್ಧತ ಬಳರೆತ್ತಿ ಕಾದಿ ಸುಗಿದೋಡಿದರಲ್ಲರೆ ಕಾವರೀ ವಿವಿಂ|
ಶತಿ ಕೃಪ ಕರ್ಣ ಶಲ್ಯ ಕಳಶೋದ್ಭವ ತತ್ಪ್ರಿಯ ಪುತ್ರರೆಂದೊಡ
ಪ್ರತಿರಥನಂ ಜಯದ್ರಥನನಾಜಿಯೊಳೆಯ್ತರೆ ವರ್ಪ ಗಂಡರಾರ್|| ೧೨೫||
ಪದ್ಯ-೧೨೫:ಪದವಿಭಾಗ-ಅರ್ಥ:ಕೃತ ವಿವಿಧಾಸ್ತ್ರಶಸ್ತ್ರ (ವಿವಿಧ ಬಗೆಯ ಶಸ್ತ್ರಾಸ್ತ್ರಗಳಲ್ಲಿ ಪ್ರವೀಣರಾದ) ಯಮಪುತ್ರ ಮರುತ್ಸುತ ಯಜ್ಞಸೇನರು, ಉದ್ಧತ ಬಳರು ಎತ್ತಿ (ವಿಶೇಷ ಶಕ್ತಿಯುಳ್ಳವರು- ದಂಡೆತ್ತಿ ಬಂದು) ಕಾದಿ ಸುಗಿದ ಓಡಿದರ್ ಅಲ್ಲರೆ (ಯುದ್ಧಮಾಡಿ ಹೆದರಿ ಓಡಿದವರಲ್ಲವೇ? ಕಾವರು ಈ ವಿವಿಂಶತಿ (ಈ ಇಪ್ಪತ್ತು ವೀರರೇ ಮೊದಲಾದವರು ಕಾಯುವರು ಎಂದರೆ) ಕೃಪ ಕರ್ಣ ಶಲ್ಯ ಕಳಶೋದ್ಭವ ತತ್ಪ್ರಿಯ ಪುತ್ರರು ಎಂದೊಡೆ ಅಪ್ರತಿರಥನಂ (ಸಮಾನವಾದ ರಥಿಕರೇ ಇಲ್ಲದ) ಜಯದ್ರಥನನು ಆಜಿಯೊಳ್ ಎಯ್ತರೆ ವರ್ಪ (ಬರುತ್ತಿದ್ದರೆ ಎದರು ಬರುವ) ಗಂಡರಾರ್ (ಜಯದ್ರಥನು ಯುದ್ಧದಲ್ಲಿ ಬರುತ್ತಿದ್ದರೆ ಅವನನ್ನು ಬಂದು ಎದುರಿಸುವ ಶೂರರಾರಿದ್ದಾರೆ?)
ಪದ್ಯ-೧೨೫:ಅರ್ಥ:ವಿವಿಧ ಬಗೆಯ ಶಸ್ತ್ರಾಸ್ತ್ರಗಳಲ್ಲಿ ಪ್ರವೀಣರಾದ ಧರ್ಮರಾಜ, ಭೀಮ, ಧೃಷ್ಟದ್ಯುಮ್ನರು ವಿಶೇಷ ಶಕ್ತಿಯುಳ್ಳವರು- ದಂಡೆತ್ತಿ ಬಂದು ಯುದ್ಧಮಾಡಿ ಹೆದರಿ ಓಡಿದವರಲ್ಲವೇ? (ಜಯದ್ರಥನೊಡನೆ ಕಾದಲಾರದೆ ಹೆದರಿ ಓಡಿ ಹೋದರಲ್ಲವೇ?) ವಿವಿಶಂತಿ, ಕೃಪ, ಕರ್ಣ, ಶಲ್ಯ, ದ್ರೋಣ, ಅವನ ಪ್ರಿಯಪುತ್ರನಾದ ಅಶ್ವತ್ಥಾಮ ಈ ಇಪ್ಪತ್ತು ವೀರರೇ ಮೊದಲಾದವರು ಜಯದ್ರಥನನ್ನು ರಕ್ಷಿಸುವರು ಎನ್ನುವಾಗ ಸಮಾನವಾದ ರಥಿಕರೇ ಇಲ್ಲದ ಜಯದ್ರಥನು ಯುದ್ಧದಲ್ಲಿ ಬರುತ್ತಿದ್ದರೆ ಅವನನ್ನು ಬಂದು ಎದುರಿಸುವ ಶೂರರಾರಿದ್ದಾರೆ?
ವ|| ಎಂದು ದುಶ್ಶಳೆಯನೊಡಗೊಂಡು ಕುಂಭಸಂಭವನಲ್ಲಿಗೆ ವಂದಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ದುಶ್ಶಳೆಯನು ಒಡಗೊಂಡು ಕುಂಭಸಂಭವನಲ್ಲಿಗೆ ವಂದು (ದ್ರೋಣಾಚಾರ್ಯರಲ್ಲಿಗೆ ಬಂದು) ಇಂತೆಂದಂ-
ವಚನ:ಅರ್ಥ:ಎಂದು ದುರ್ಯೋಧನನು, ದುಶ್ಶಳೆಯನ್ನು ಜೊತೆಯಲ್ಲಿ ಕರೆದುಕೊಂಡು ದ್ರೋಣಾಚಾರ್ಯರಲ್ಲಿಗೆ ಬಂದು ಹೀಗೆಂದು ಹೇಳಿದನು-
ಮ||ಸ್ರ|| ಸುತಶೋಕೋದ್ರೇಕದಿಂ ಸೈಂಧವನನೞಿವೆಂದರ್ಜುನಂ ಪೂಣ್ದನಿಂತೀ
ಸತಿ ಬಂದಳ್ ಕಾವುದಾತ್ಮಾನುಜೆಯ ಕಡಗಮಂ ನೀಮೆ ಮಾರ್ಕೊಳ್ವೊಡಾರ್ ತಾ|
ವಿತರರ್ ಮುಟ್ಟಲ್ ಸಮರ್ಥರ್ ಕದನದೊಳೆನೆ ಗೆಲ್ವಾಸೆಯಂತಿರ್ಕೆ ಸಿಂಧು
ಕ್ಷಿತಿಪಂ ತಾನೇನನಾದಂ ರಣದೊಳದನೆ ಪೋಗಾನುಮಪ್ಪೆಂ ನರೇಂದ್ರಾ|| ೧೨೬ ||
ಪದ್ಯ-೧೨೬:ಪದವಿಭಾಗ-ಅರ್ಥ:ಸುತಶೋಕ ಉದ್ರೇಕದಿಂ ಸೈಂಧವನನು ಅೞಿವೆಂದು ಅರ್ಜುನಂ ಪೂಣ್ದನು(ಪುತ್ರಶೋಕದಲ್ಲಿ ಉದ್ರೇಕದಿಂದ ಅರ್ಜುನನು ಸೈಂಧವನನ್ನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿದನು.) ಇಂತು ಈ ಸತಿ ಬಂದಳ್ (ಅದಕ್ಕಾಗಿ ಈ ತಂಗಿ ಬಂದಿದ್ದಾಳೆ.) ಕಾವುದು ಆತ್ಮಾನುಜೆಯ ಕಡಗಮಂ (ನನ್ನ ತಂಗಿಯ ಕಡಗವನ್ನು - ಮತ್ತೈದೆತನವನ್ನು ನೀವೆ ರಕ್ಷಿಸಬೇಕು.) ನೀಮೆ ಮಾರ್ಕೊಳ್ವೊಡೆ ಆರ್ ತಾವ್ ಇತರರ್ ಮುಟ್ಟಲ್ ಸಮರ್ಥರ್ (ನೀವೆ ಯುದ್ಧದಲ್ಲಿ ಪ್ರತಿಭಟಿಸಿದರೆ ಅವನನ್ನು ಮುಟ್ಟಲು ಇತರರು ಯಾರು ಸಮರ್ಥರು?) ಕದನದೊಳೆನೆ ಗೆಲ್ವಾಸೆಯು ಅಂತಿರ್ಕೆ ( ಯುದ್ಧದಲ್ಲಿ ಗೆಲ್ಲುವಾಸೆ ಹಾಗಿರಲಿ,) ಸಿಂಧುಕ್ಷಿತಿಪಂ ತಾನೇನನು ಆದಂ ರಣದೊಳು ಅದನೆ ಪೋಗ್ ಆನುಮಪ್ಪೆಂ ನರೇಂದ್ರಾ (ದುರ್ಯೋಧನಾ ಯುದ್ಧದಲ್ಲಿ ಸೈಂಧವನು ಏನಾಗುತ್ತಾನೆಯೋ ಅದನ್ನೇ ನಾನೂ ಆಗುತ್ತೇನೆ ಹೋಗು.) ಎಂದನು ದ್ರೋಣ.
ಪದ್ಯ-೧೨೬:ಅರ್ಥ:ಪುತ್ರಶೋಕದಲ್ಲಿ ಉದ್ರೇಕದಿಂದ ಅರ್ಜುನನು ಸೈಂಧವನನ್ನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿದನು. ಅದಕ್ಕಾಗಿ ಈ ತಂಗಿ ಬಂದಿದ್ದಾಳೆ. ನನ್ನ ತಂಗಿಯ ಕಡಗವನ್ನು ನೀವೆ ರಕ್ಷಿಸಬೇಕು. ಯುದ್ಧದಲ್ಲಿ ನೀವೆ ಪ್ರತಿಭಟಿಸಿದರೆ ಅವನನ್ನು ಮುಟ್ಟಲು ಯಾರು ಸಮರ್ಥರು? ಎಂದನು. ಯುದ್ಧದಲ್ಲಿ ಗೆಲ್ಲುವಾಸೆ ಹಾಗಿರಲಿ, ದುರ್ಯೋಧನಾ, ಯುದ್ಧದಲ್ಲಿ ಸೈಂಧವನು ಏನಾಗುತ್ತಾನೆಯೋ ಅದನ್ನೇ ನಾನೂ ಆಗುತ್ತೇನೆ ಹೋಗು ಎಂದನು ದ್ರೋಣ.
ಮ|| ಬಿಜಯಂಗೆಯ್ಯೆನೆ ಪೋಪುದುಂ ನೃಪನದಂ ಧರ್ಮಾತ್ಮಜಂ ಕೇಳ್ದು ಪೇ
ೞ್ದಜಿತಂಗಾ ಹಠಿ ಪೇೞ್ದುದೊಂದು ನಯದಿಂದಾ ರಾತ್ರಿಯೊಳ್ ಪೋಗಿ ಕುಂ|
ಭಜನಂ ಕಂಡು ವಿನಮ್ರನಾಗಿ ನುಡಿದಂ ನೀಮಿಂತು ಕೆಯ್ಕೊಂಡು ಕಾ
ದೆ ಜಗತ್ಪೂಜಿತ ಬೆಟ್ಟನಾದೊಡೆಮಗಿಂ ಬಾೞುಸೆಯಾವಾಸೆಯೋ|| ೧೨೭ ||
ಪದ್ಯ-೧೨೭:ಪದವಿಭಾಗ-ಅರ್ಥ:ಬಿಜಯಂಗೆಯ್ಯ್ ಎನೆ ಪೋಪುದುಂ ನೃಪನು (ನೀನು ಹೋಗು ಎನ್ನಲು ರಾಜನು ಹೊರಟು ಹೋದನು.) ಅದಂ ಧರ್ಮಾತ್ಮಜಂ ಕೇಳ್ದು ( ಅದನ್ನು ಧರ್ಮರಾಯನು ಕೇಳಿ) ಪೇೞ್ದು ಅಜಿತಂಗೆ (ಕೃಷ್ಣನಿಗೆ ತಿಳಿಸಿಲು,) ಆ ಹಠಿ ಪೇೞ್ದುದು ಒಂದು ನಯದಿಂದ ( ಕೃಷ್ಣನು ಹೇಳಿದ ಒಂದು ನೀತಿಯಿಂದ (ಉಪಾಯದಿಂದ)) ಆ ರಾತ್ರಿಯೊಳ್ ಪೋಗಿ ಕುಂಭಜನಂ ಕಂಡು (ಧರ್ಮರಾಯನು ರಾತ್ರಿಯಲ್ಲಿ ಹೋಗಿ ದ್ರೋಣನನ್ನು ಕಂಡು,)(ಧರ್ಮರಾಯನು ರಾತ್ರಿಯಲ್ಲಿ ಹೋಗಿ ದ್ರೋಣನನ್ನು ಕಂಡು) ವಿನಮ್ರನಾಗಿ ನುಡಿದಂ (ಬಹಳ ನಮ್ರತೆಯಿಂದ ಹೇಳಿದನು.) ನೀಮಿಂತು ಕೆಯ್ಕೊಂಡು ಕಾದೆ ಜಗತ್ಪೂಜಿತ ಬೆಟ್ಟನು ಆದೊಡೆ (ಲೋಕಪೂಜ್ಯರಾದವರೇ, ನೀವು ಹೀಗೆ ಅಂಗೀಕಾರ ಮಾಡಿ (ದುರ್ಯೋಧನನ ಪಕ್ಷವನ್ನು) ಗಟ್ಟಿಯಾಗಿ ಕಾದಿದರೆ) ಎಮಗೆ ಇಂ ಬಾೞುಸೆಯ ಆವಾಸೆಯೋ (ನಮಗೆ ಇನ್ನು ಬಾಳುವ ಆಸೆ ಯಾವುದು? )
ಪದ್ಯ-೧೨೭:ಅರ್ಥ:ನೀನು ಹೋಗು ಎನ್ನಲು ರಾಜನು ಹೊರಟು ಹೋದನು. ಅದನ್ನು ಧರ್ಮರಾಯನು ಕೇಳಿ ಕೃಷ್ಣನಿಗೆ ತಿಳಿಸಿದನು. ಕೃಷ್ಣನು ಹೇಳಿದ ಒಂದು ನೀತಿ (ಉಪಾಯ)ಯಿಂದ ಧರ್ಮರಾಯನು ರಾತ್ರಿಯಲ್ಲಿ ಹೋಗಿ ದ್ರೋಣನನ್ನು ಕಂಡು ಬಹಳ ನಮ್ರತೆಯಿಂದ ಹೇಳಿದನು,'ಲೋಕಪೂಜ್ಯರಾದವರೇ ನೀವು ಹೀಗೆ ಅಂಗೀಕಾರ ಮಾಡಿ (ದುರ್ಯೋಧನನ ಪಕ್ಷವನ್ನು) ಗಟ್ಟಿಯಾಗಿ ಕಾದಿದರೆ, ನಮಗೆ ಇನ್ನು ಬಾಳುವಾಸೆ ಯಾವುದು?
ಕಂ|| ನಿಮ್ಮಳವನಱಿದು ಮುನ್ನಮೆ
ನಿಮ್ಮಂ ಪ್ರಾರ್ಥಿಸಿದೆಮೀಗಳದುವಂ ಮದಿರ್|
ನಿಮ್ಮಯ ಧರ್ಮದ ಮಕ್ಕಳೆ
ವೆಮ್ಮಂ ಕಡೆಗಣಿಸಿ ನಿಮಗೆ ನೆಗೞ್ವುದು ದೊರೆಯೇ|| ೧೨೮ ||
ಪದ್ಯ-೧೨೮:ಪದವಿಭಾಗ-ಅರ್ಥ:ನಿಮ್ಮ ಅಳವನು ಅಱಿದು ಮುನ್ನಮೆ ನಿಮ್ಮಂ ಪ್ರಾರ್ಥಿಸಿದೆಂ (ನಿಮ್ಮ ಶಕ್ತಿಯನ್ನು ತಿಳಿದು ಮೊದಲೇ ನಿಮ್ಮನ್ನು ಪ್ರಾರ್ಥಿಸಿದೆನು. - ಯುದ್ಧದ ಆರಂಭದಲ್ಲಿ;) ಈಗಳು ಅದುವಂ ಮದಿರ್ ನಿಮ್ಮಯ ಧರ್ಮದ ಮಕ್ಕಳೆವು ಎಮ್ಮಂ ಕಡೆಗಣಿಸಿ ( ಈಗ ಅದನ್ನೂ ಮರೆತು ನಿಮ್ಮ ಧರ್ಮದ ಮಕ್ಕಳಾದ ನಮ್ಮನ್ನು ಕಡೆಗಣಿಸಿ) ನಿಮಗೆ ನೆಗೞ್ವುದು ದೊರೆಯೇ ()
ಪದ್ಯ-೧೨೮:ಅರ್ಥ:ನಿಮ್ಮ ಶಕ್ತಿಯನ್ನು ತಿಳಿದು ಮೊದಲೇ ನಿಮ್ಮನ್ನು ಪ್ರಾರ್ಥಿಸಿದೆನು. ಈಗ ಅದನ್ನೂ ಮರೆತು ನಿಮ್ಮ ಧರ್ಮದ ಮಕ್ಕಳಾದ ನಮ್ಮನ್ನು ಕಡೆಗಣಿಸಿ ನೀವು ನಡೆದುಕೊಳ್ಳುವುದು ಸರಿಯೇ? ಎಂದನು ಧರ್ಮಜ.
ಎನೆ ಗುರು ಕರುಣಾರಸಮದು
ಮನದಿಂ ಪೊಱಪೊಣ್ಣೆ ನಿನಗೆ ಜಯಮಕ್ಕುಮನಂ|
ತನ ಪೇೞ್ದತೆಱದೆ ನೆಗೞೆನೆ
ವಿನಯದೆ ಬೀೞ್ಕೊಂಡು ನೃಪತಿ ಬೀಡಂ ಪೊಕ್ಕಂ|| ೧೨೯ ||
ಪದ್ಯ-೧೨೯:ಪದವಿಭಾಗ-ಅರ್ಥ:ಎನೆ ಗುರು ಕರುಣಾರಸಂ ಅದು ಮನದಿಂ ಪೊಱಪೊಣ್ಣೆ (ಗುರು ದ್ರೋಣನು ಕರುಣಾರಸವು ಮನಸ್ಸಿನಿಂದ ಹೊರಹೊಮ್ಮುತ್ತಿರಲು), ನಿನಗೆ ಜಯಮಕ್ಕುಂ ಅನಂತನ ಪೇೞ್ದ ತೆಱದೆ ನೆಗೞು ಎನೆ (‘ಕೃಷ್ಣನು ಹೇಳಿದ ಹಾಗೆ ಮಾಡು, ನಿನಗೆ ಜಯವಾಗುತ್ತದೆ’ ಎನ್ನಲು,) ವಿನಯದೆ ಬೀೞ್ಕೊಂಡು ನೃಪತಿ ಬೀಡಂ ಪೊಕ್ಕಂ (ವಿನಯದಿಂದ ಅಪ್ಪಣೆಯನ್ನು ಪಡೆದು ಹೊರಟು ಧರ್ಮರಾಜನು ತನ್ನ ಮನೆಯನ್ನು ಪ್ರವೇಶಿಸಿದನು. )
ಪದ್ಯ-೧೨೯:ಅರ್ಥ: ಧರ್ಮಜನು ಹಾಗೆನ್ನಲು, ಗುರು ದ್ರೋಣನು ಕರುಣಾರಸವು ಮನಸ್ಸಿನಿಂದ ಹೊರಹೊಮ್ಮುತ್ತಿರಲು ‘ಕೃಷ್ಣನು ಹೇಳಿದ ಹಾಗೆ ಮಾಡು, ನಿನಗೆ ಜಯವಾಗುತ್ತದೆ’ ಎನ್ನಲು, ವಿನಯದಿಂದ ಅಪ್ಪಣೆಯನ್ನು ಪಡೆದು ಹೊರಟು ಧರ್ಮರಾಜನು ತನ್ನ ಮನೆಯನ್ನು ಪ್ರವೇಶಿಸಿದನು.
ವ|| ಆಗಳಾರೂಢಸರ್ವಜ್ಞಂ ಪ್ರತಿಜ್ಞಾರೂಢನಾಗಿ ಗಂಗಾನದೀ ತರಂಗೋಪಮಾನ ದುಕೂಲಾಂಬರ ಪರಿಧಾನನುಮಾಗಿ ಧವಳಶಯ್ಯಾತಳದೊಳ್ ಮರೆದೊಱೆರಗಿದನಮೋಘಾಸ್ತ್ರ ಧನಂಜಯನಂ ಪುಂಡರೀಕಾಕ್ಷಂ ನೋಡಿ-
ವಚನ:ಪದವಿಭಾಗ-ಅರ್ಥ:ಆಗಳು ಆರೂಢಸರ್ವಜ್ಞಂ ಪ್ರತಿಜ್ಞಾರೂಢನಾಗಿ (ಆಗ ಆರೂಢಸರ್ವಜ್ಞನಾದ ಅರ್ಜುನನು ಪ್ರತಿಜ್ಞೆಯನ್ನು ಮಾಡಿದವನಾಗಿ) ಗಂಗಾನದೀ ತರಂಗೋಪಮಾನ (ಗಂಗಾನದಿಯ ಅಲೆಗಳಿಗೆ ಸಮಾನವಾದ) ದುಕೂಲಾಂಬರ ಪರಿಧಾನನುಮಾಗಿ (ರೇಷ್ಮೆಯ ಬಟ್ಟೆಯ ಹೊದಿಕೆಯುಳ್ಳವನಾಗಿ) ಧವಳಶಯ್ಯಾ ತಳದೊಳ್ (ಬಿಳಿಯ ಹಾಸಿಗೆಯ ಮೇಲೆ) ಮರೆದೊಱೆರಗಿದನು ಅಮೋಘಾಸ್ತ್ರ ಧನಂಜಯನಂ ಪುಂಡರೀಕಾಕ್ಷಂ ನೋಡಿ (ನಿದ್ರಿಸುತ್ತ ಮಲಗಿದ್ದ ಅಮೋಘಾಸ್ತ್ರ ಧನಂಜಯನಾದ ಅರ್ಜುನನನ್ನು ಕೃಷ್ಣನು ನೋಡಿ)-
ವಚನ:ಅರ್ಥ: ಆಗ ಆರೂಢಸರ್ವಜ್ಞನಾದ ಅರ್ಜುನನು ಪ್ರತಿಜ್ಞೆಯನ್ನು ಮಾಡಿದವನಾಗಿ ಗಂಗಾನದಿಯ ಅಲೆಗಳಿಗೆ ಸಮಾನವಾದ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲೊಳ್ ಬಾಹ್ಲೀಕ ರೇಷ್ಮೆಯ ಬಟ್ಟೆಯ ಹೊದಿಕೆಯುಳ್ಳವನಾಗಿ ಬಿಳಿಯ ಹಾಸಿಗೆಯ ಮೇಲೆ ಮೈಮರೆತು/ನಿದ್ರಿಸುತ್ತ ಮಲಗಿದ್ದ ಅಮೋಘಾಸ್ತ್ರ ಧನಂಜಯನಾದ ಅರ್ಜುನನನ್ನು ಕೃಷ್ಣನು ನೋಡಿ-
ಚಂ|| ಅರಿದು ಕೊಲಲ್ಕೆ ಸೈಂಧವನನಾಜಿಯೊಳೀತನ ಪೂಣ್ದ ಪೂಣ್ಕೆಯುಂ
ಪಿರಿದವನುಗ್ರ ಪಾಶುಪತ ಬಾಣದಿನಲ್ಲದೆ ಸಾಯನಂತದಂ|
ಹರನೊಸೆದಿತ್ತುಮೇನದಱ ಮುಷ್ಟಿಯನೀಯನೆ ಬೇಡವೇೞ್ಪುದಾ
ದರದದನೆಂದು ಚಕ್ರಿ ಶಿವನಲ್ಲಿಗೆ ಕೊಂಡೊಗೆದಂ ಕಿರೀಟಿಯಂ|| ೧೩೦ ||
ಪದ್ಯ-೧೩೦:ಪದವಿಭಾಗ-ಅರ್ಥ:ಅರಿದು(ಸಹಜ ಯುದ್ಧಮಾಡಿ) ಕೊಲಲ್ಕೆ ಸೈಂಧವನನು ಆಜಿಯೊಳ್ (ಸೈಂಧವನನ್ನು ಸಹಜ ಯುದ್ಧಮಾಡಿ ಕೊಲ್ಲುವುದು ಅಸಾಧ್ಯ.) ಈತನ ಪೂಣ್ದ ಪೂಣ್ಕೆಯುಂ ಪಿರಿದು (ಇವನು (ಅರ್ಜುನನು) ಮಾಡಿದ ಪ್ರತಿಜ್ಞೆಯೂ ಗುರುತರವಾದುದು.) ಅವನ ಉಗ್ರ ಪಾಶುಪತ ಬಾಣದಿನಲ್ಲದೆ ಸಾಯನು (ಜಯದ್ರಥನು ಉಗ್ರವಾದ ಪಾಶುಪತದಿಂದಲ್ಲದೆ ಸಾಯುವುದಿಲ್ಲ.) ಅಂತೆ ಅದಂ ಹರನು ಒಸೆದು ಇತ್ತುಂ ಏನದಱ ಮುಷ್ಟಿಯನು ಈಯನೆ (ಹಾಗೆ ಅದನ್ನು ಈಶ್ವರನು ಪ್ರೀತಿಯಿಂದ ಕೊಟ್ಟಿದ್ದರೆ ತಾನೆ ಏನು ಪ್ರಯೋಜನ? ಅದರ ಪ್ರಯೋಗ ಮಂತ್ರವನ್ನು ಕೊಟ್ಟಿಲ್ಲವಲ್ಲ, ಕೊಡದಿರುವನೇ?) ಬೇಡವೇೞ್ಪುದು ಆದರದ ಅದನು ಎಂದು (ಅದನ್ನು ಭಕ್ತಿಯಿಂದ ಬೇಡಬೇಕಾಗಿದೆ ಎಂದು) ಚಕ್ರಿ ಶಿವನಲ್ಲಿಗೆ ಕೊಂಡೊಗೆದಂ ಕಿರೀಟಿಯಂ (ಕೃಷ್ಣನು ಅರ್ಜುನನನ್ನು ಶಿವನಲ್ಲಿಗೆ ಕರೆದುಕೊಂಡು ಹಾರಿ ಹೋದನು.)
ಪದ್ಯ-೧೩೦:ಅರ್ಥ: ಸೈಂಧವನನ್ನು ಸಹಜ ಯುದ್ಧಮಾಡಿ ಕೊಲ್ಲುವುದು ಅಸಾಧ್ಯ. ಇವನು (ಅರ್ಜುನನು) ಮಾಡಿದ ಪ್ರತಿಜ್ಞೆಯೂ ಗುರುತರವಾದುದು. ಜಯದ್ರಥನು ಉಗ್ರವಾದ ಪಾಶುಪತದಿಂದಲ್ಲದೆ ಸಾಯುವುದಿಲ್ಲ. ಹಾಗೆ ಅದನ್ನು ಈಶ್ವರನು ಪ್ರೀತಿಯಿಂದ ಕೊಟ್ಟಿದ್ದರೆ ತಾನೆ ಏನು ಪ್ರಯೋಜನ? ಅದರ ಪ್ರಯೋಗ ಮಂತ್ರವನ್ನು ಕೊಟ್ಟಿಲ್ಲವಲ್ಲ ಕೊಡದಿರುವನೇ?; ಅದನ್ನು ಭಕ್ತಿಯಿಂದ ಬೇಡಬೇಕಾಗಿದೆ ಎಂದು ಕೃಷ್ಣನು ಅರ್ಜುನನನ್ನು ಶಿವನಲ್ಲಿಗೆ ಕರೆದುಕೊಂಡು ಹೋದನು.
ವ|| ಅಂತು ಮನಪವನವೇಗದಿಂ ಕೈಳಾಸ ಶೈಳಮನೆಯ್ದಿ ಕದನತ್ರಿಣೇತ್ರನಂ ತ್ರಿಣೇತ್ರನ ಮುಂದಿೞಪುವುದುಮಭವಂ ತನ್ನ ಪಾದಪದ್ಮಂಗಳ್ಗೆಱಗಿದತಿರಥ ಮಥನನುಮಂ ಮಧುಮಥನನು ಮನಮೃತದೃಷ್ಟಿಯಿಂ ನೋಡಿ ಪಾಶುಪತದ ಮುಷ್ಟಿಯಂ ಬೇಡಲೆಂದು ಬಂದುದಂ ತನ್ನ ದಿವ್ಯಜ್ಞಾನದಿಂದಮಱಿದು-
ವಚನ:ಪದವಿಭಾಗ-ಅರ್ಥ:ಅಂತು ಮನ ಪವನವೇಗದಿಂ (ಹಾಗೆ ಯೋಚಿಸಿ, ಮನೋವೇಗ ವಾಯುವೇಗದಿಂದ ಕೈಲಾಸ ಪರ್ವತವನ್ನು ಸೇರಿ,) ಕೈಳಾಸ ಶೈಳಮನು ಎಯ್ದಿ (ಕೈಲಾಸ ಪರ್ವತವನ್ನು ಸೇರಿ,) ಕದನತ್ರಿಣೇತ್ರನಂ ತ್ರಿಣೇತ್ರನ ಮುಂದೆ ಇೞಪುವುದುಮ್ (ಅರ್ಜುನನನ್ನು ಈಶ್ವರನ ಮುಂದೆ ಇಳಿಸಿದನು, ಇಳಿಸಲು) ಅಭವಂ ತನ್ನ ಪಾದಪದ್ಮಂಗಳ್ಗೆ ಎಱಗಿದ ಅತಿರಥ ಮಥನನುಮಂ ಮಧುಮಥನನುಮಂ ಅಮೃತದೃಷ್ಟಿಯಿಂ ನೋಡಿ (ಅರ್ಜುನನನ್ನೂ ಕೃಷ್ಣನನ್ನೂ ಅಮೃತದೃಷ್ಟಿಯಿಂದ ನೋಡಿದನು) ಪಾಶುಪತದ ಮುಷ್ಟಿಯಂ ಬೇಡಲೆಂದು ಬಂದುದಂ ತನ್ನ ದಿವ್ಯಜ್ಞಾನದಿಂದಂ ಅಱಿದು ( ಪಾಶುಪತದ ಮುಷ್ಟಿಯನ್ನು ಮಂತ್ರವನ್ನು ಬೇಡುವುದಕ್ಕಾಗಿ ಬಂದಿರುವುದನ್ನು ತನ್ನ ದಿವ್ಯಜ್ಞಾನದಿಂದ ತಿಳಿದನು.)-
ವಚನ:ಅರ್ಥ:ಹಾಗೆ ಯೋಚಿಸಿ, ಮನೋವೇಗ ವಾಯುವೇಗದಿಂದ ಕೈಲಾಸ ಪರ್ವತವನ್ನು ಸೇರಿ, ಅರ್ಜುನನನ್ನು ಈಶ್ವರನ ಮುಂದೆ ಇಳಿಸಿದನು. ಶಿವನು ತನ್ನ ಪಾದಕಮಲಗಳಿಗೆರಗಿದ ಅರ್ಜುನನನ್ನೂ ಕೃಷ್ಣನನ್ನೂ ಅಮೃತದೃಷ್ಟಿಯಿಂದ ನೋಡಿದನು. ಪಾಶುಪತದ ಮುಷ್ಟಿಯನ್ನು ಮಂತ್ರವನ್ನು ಬೇಡುವುದಕ್ಕಾಗಿ ಬಂದಿರುವುದನ್ನು ತನ್ನ ದಿವ್ಯಜ್ಞಾನದಿಂದ ತಿಳಿದನು.
ಕಂ|| ಅಪಗತ ಕಪಟದೆ ನಟನದ
ನುಪದೇಶಂಗೆಯ್ದು ಪರಸಿ ಪೋಗೆನೆ ಪೊಡೆಮ|
ಟ್ಟು ಪಸಾದಮೆಂದ ಹರಿಗನ
ನುಪೇಂದ್ರನಾ ದರ್ಭಶಯನ ತಳಕಿೞಿಪುವುದುಂ|| ೧೩೧ ||
ಪದ್ಯ-೧೩೦:ಪದವಿಭಾಗ-ಅರ್ಥ:ಅಪಗತ ಕಪಟದೆ (ಕಪಟ ಇಲ್ಲದೆ) ನಟನು ಅದನು ಉಪದೇಶಂಗೆಯ್ದು ಪರಸಿ ಪೋಗೆನೆ (ಕಪಟ ಇಲ್ಲದೆ ಆ ಮಂತ್ರೋಪದೇಶ ಮಾಡಿ ಹರಸಿದನು, ಹೋಗು ಎನ್ನಲು) ಪೊಡೆಮಟ್ಟು ಪಸಾದಮೆಂದ ಹರಿಗನನು (ನಮಸ್ಕರಿಸಿ ಅನುಗ್ರಹೀತನಾದೆನೆಂದು ಹೇಳಿದ ಅರ್ಜುನನನ್ನು) ಉಪೇಂದ್ರನು ಆ ದರ್ಭಶಯನ ತಳಕೆ ಇೞಿಪುವುದುಂ (ಕೃಷ್ಣನು ದರ್ಭೆಯಿಂದ ಮಾಡಿದ (ಹಿಂದಿನ) ಹಾಸಿಗೆಯ ಮೇಲಕ್ಕೆ ತಂದು ಇಳಿಸಿದನು. )
ಪದ್ಯ-೧೩೦:ಅರ್ಥ: ಕಪಟ ಇಲ್ಲದೆ ಆ ಮಂತ್ರೋಪದೇಶ ಮಾಡಿ ಹರಸಿದನು, ಹೋಗು ಎನ್ನಲು. ನಮಸ್ಕರಿಸಿ ಅನುಗ್ರಹೀತನಾದೆನೆಂದು ಹೇಳಿದ ಅರ್ಜುನನನ್ನು ಕೃಷ್ಣನು ದರ್ಭೆಯಿಂದ ಮಾಡಿದ (ಹಿಂದಿನ) ಹಾಸಿಗೆಯ ಮೇಲಕ್ಕೆ ತಂದು ಇಳಿಸಿದನು.
ವ|| ಅಂತುದಾರ ಮಹೇಶ್ವರನೀಶ್ವರ ವರಪ್ರಸಾದಮೆಲ್ಲಂ ತನಗೆ ನನಸಾಗೆಯುಂ ಕನಸಿನಂದಮಾಗಿ ತೋರೆ ಮಂಗಳಪಾಠಕರವಂಗಳೊಳ್ ಭೋಂಕನೆೞ್ಚತ್ತನನ್ನೆಗಂ-
ವಚನ:ಪದವಿಭಾಗ-ಅರ್ಥ:ಅಂತು ಉದಾರ ಮಹೇಶ್ವರನು ಈಶ್ವರ ವರಪ್ರಸಾದಮೆಲ್ಲಂ ತನಗೆ ನನಸಾಗೆಯುಂ ಕನಸಿನಂದಮಾಗಿ ತೋರೆ(ಈಶ್ವರನ ವರಪ್ರಸಾದವೆಲ್ಲ ತನಗೆ ಪ್ರತ್ಯಕ್ಷನಾಗಿದ್ದರೂ ಕನಸಿನಂತೆ ತೋರುತ್ತಿರಲು) ಮಂಗಳಪಾಠಕ ರವಂಗಳೊಳ್ ಭೋಂಕನೆೞ್ಚತ್ತನು ಅನ್ನೆಗಂ (ಸ್ತುತಿಪಾಠಕರ ಮಂಗಳಧ್ವನಿಯಿಂದ ಭೋಂಕನೆ ಎಚ್ಚರಗೊಂಡನು; ಅಷ್ಟರಲ್ಲಿ) -
ವಚನ:ಅರ್ಥ:ಉದಾರಮಹೇಶ್ವರನಾದ ಅರ್ಜುನನು ಈಶ್ವರನ ವರಪ್ರಸಾದವೆಲ್ಲ ತನಗೆ ಪ್ರತ್ಯಕ್ಷನಾಗಿದ್ದರೂ ಕನಸಿನಂತೆ ತೋರುತ್ತಿರಲು ಸ್ತುತಿಪಾಠಕರ ಮಂಗಳಧ್ವನಿಯಿಂದ ಭೋಂಕನೆ ಎಚ್ಚರಗೊಂಡನು; ಅಷ್ಟರಲ್ಲಿ -
ಕಂ|| ತನ್ನ ಸುತನೞಲೊಳರ್ಜುನ
ನೆನ್ನುದಯಮನೆಯ್ದೆ ಪಾರ್ದು ಪಗೆವರ ಬೇರೊಳ್|
ಬೆನ್ನೀರನರಿಯದಿರನದ
ನಾನ್ನೋಡುವೆನೆಂಬ ತೆಱದಿನಿನನುದಯಿಸಿದಂ|| ೧೩೨ ||
ಪದ್ಯ-೦೦:ಪದವಿಭಾಗ-ಅರ್ಥ:ತನ್ನ ಸುತನೞಲೊಳ್ ಅರ್ಜುನನ ಎನ್ನ ಉದಯಮನು ಎಯ್ದೆ ಪಾರ್ದು (ತನ್ನ ಮಗನ ಸಾವಿನ ದುಃಖದಲ್ಲಿ ಅರ್ಜುನನು ನನ್ನ- ಸೂರ್ಯನ ಉದಯವನ್ನೇ ನಿರೀಕ್ಷಿಸುತ್ತಿದ್ದು) ಪಗೆವರ ಬೇರೊಳ್ ಬೆನ್ನೀರನು (ಶತ್ರುಗಳ ಬೇರಿನಲ್ಲಿ ಬಿಸಿನೀರನ್ನು ಎರೆಯದೇ ಇರುವುದಿಲ್ಲ) ಅರಿಯದಿರನು ಅದನು ಆ ನ್ನೋಡುವೆನೆಂಬ ತೆಱದಿಂ ಇನನು ಉದಯಿಸಿದಂ (ಶತ್ರುಗಳ ಬೇರಿನಲ್ಲಿ ಬಿಸಿನೀರನ್ನು ಎರೆಯದೇ ಇರುವುದಿಲ್ಲ ; ಅದನ್ನು ನಾನು ನೋಡುತ್ತೇನೆ ಎಂಬ ರೀತಿಯಲ್ಲಿ ಸೂರ್ಯನು ಉದಯವಾದನು. )
ಪದ್ಯ-೦೦:ಅರ್ಥ: ತನ್ನ ಮಗನ ಸಾವಿನ ದುಃಖದಲ್ಲಿ ಅರ್ಜುನನು ನನ್ನುದಯವನ್ನೇ ನಿರೀಕ್ಷಿಸುತ್ತಿದ್ದು ಶತ್ರುಗಳ ಬೇರಿನಲ್ಲಿ ಬಿಸಿನೀರನ್ನು ಎರೆಯದೇ ಇರುವುದಿಲ್ಲ ; ಅದನ್ನು ನಾನು ನೋಡುತ್ತೇನೆ ಎಂಬ ರೀತಿಯಲ್ಲಿ ಸೂರ್ಯನು ಉದಯವಾದನು.
ವ|| ಅಗಳುಭಯ ಸೈನ್ಯಾಂಬುರಾಶಿಗಳಂಬುರಾಶಿಗಳ್ ನೆಲೆಯಿಂ ತಳರ್ವಂತೆ ತಳರೆ ಕಳಶಸಂಭವನಂದಿನನುವರದೊಳ್ ತನ್ನಂ ಪರಿಚ್ಛೇದಿಸಿ ಕನಕ ಕಳಶ ಸಂಭೃತ ಮಂಗಳ ಜಳಂಗಳಂ ಮಿಂದು ಧವಳ ವಸನ ದುಕೂಲಾಂಬರ ಮಂಗಳ ವಿಭೂಷಣನುಂ ನಿರ್ವತೀತ ಸಂಧ್ಯೋಪಾಸನನುಂ ಪರಿಸಮಾಪ್ತ ಜಪನುಮರ್ಚಿತ ಶಿತಿಕಂಠನುಮಾಹುತಿ ಹುತಾಗ್ನಿಹೋತ್ರನುಂ ಪೂಜಿತ ಧರಾಮರನುಂ ನೀರಾಜಿತ ರಥತುರಗನುಮಾಗಿ ರಜತ ರಥಮನೇಱಿ ಸಂಗ್ರಾಮ ಭೂಮಿಯನೆಯ್ದೆವಂದು ಸಾಮಂತ ಚೂಡಾಮಣಿಯನಿನಿಸು ಮಾರ್ಕೊಂಡು ನಿಲ್ವೊಡಂ ಸಿಂಧುರಾಜನಂ ಕಾವೊಡಮನೇಕ ವ್ಯೂಹರಚನೆಯೊಳಲ್ಲದೆ ಗೆಲಲ್ ಬಾರದೆಂದು ಚಕ್ರವ್ಯೂಹದೊಳಂಗರಾಜ ಶಲ್ಯ ವೃಷಸೇನ ಕೃಪ ಕೃತವರ್ಮಾಶ್ವತ್ಥಾಮರಂ ದುರ್ಯೋಧನಂ ಬೆರಸಿರಿಸಿ ಮತ್ತಿತ್ತ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲೊಳ್ ಬಾಹ್ಲೀಕ ಸೋಮದತ್ತವಿಂದಾನುವಿಂದರೊಡನೆ ಸಂಸಪ್ತಕರನಿರಿಸಿ ಶಕಟವ್ಯೂಹದ ಪೆಱಗೆ ನಾಲ್ಕು ಯೋಜನದೊಳರ್ಧಚಂದ್ರವ್ಯೂಹದೊಳಧಿಕ ಬಲರಪ್ಪ ಸೌಬಲ ದುಶ್ಶಾಸನಾದಿ ಪ್ರಧಾನ ವೀರಭಟ ಕೋಟಿಯ ನಡುವೆ ಸಿಂಧುರಾಜನನಿರಿಸಿ ಮೊದಲ ಚಕ್ರವ್ಯೂಹದ ಬಾಗಿಲೊಳ್ ಶರಾಸನಾಚಾರ್ಯಂ ನಿಂದನಿತ್ತ ಪಾಂಡವಬಲಮೆಲ್ಲಮುಂ ವಿಕ್ರಮಾರ್ಜುನನುಂ ವಜ್ರಪಂಜರದಂತಭೇದ್ಯ.ಮಪ್ಪ ವಜ್ರವ್ಯೂಹಮನೊಡ್ಡಿ ಧರ್ಮರಾಜನೊಡನೆ ಭೀಮ ನಕುಳ ಸಹದೇವ ಸಾತ್ಯಕಿ ಧೃಷ್ಟದ್ಯುಮ್ನ ಘಟೋತ್ಕಚ ಪ್ರಮುಖ ನಾಯಕರಂ ಪೇೞ್ದು ದ್ರುಪದ ವಿರಾಟ ಶಿಖಂಡಿ ಯುಧಾಮನ್ಯೂತ್ತಮೌಜಕೈಕಯ ಪ್ರಧಾನ ನಾಯಕರಂ ತನ್ನೊಡನೆ ಕೂಡಿಕೊಂಡು ನಿಜಾಗ್ರಜನಂ ಬೀೞ್ಕೊಂಡು ನಿಜರಥಮಂ ರಥಾಂಗಧರನಂ ಮುನ್ನಮೇಱಲ್ವೇೞ್ದು ಮೂಱು ಸೂೞ್ ಬಲವಂದು ಪೊಡಮಟ್ಟು ರಥುಮನೇಱಿ ವಜ್ರಕವಚಮಂ ತೊಟ್ಟು ತವದೊಣೆಗಳನಮರೆ ಬಿಗಿದು ಗಾಂಡೀವಮನೇಱಿಸಿ ನೀವಿ ಜೇವೊಡೆದಾಗಳ್-
ವಚನ:ಪದವಿಭಾಗ-ಅರ್ಥ:ಅಗಳು ಉಭಯ ಸೈನ್ಯಾಂಬುರಾಶಿಗಳಂಬುರಾಶಿಗಳ್ ನೆಲೆಯಿಂ ತಳರ್ವಂತೆ ತಳರೆ (ಆಗ ಎರಡು ಸೇನಾಸಮುದ್ರಗಳೂ ನೆಲೆಯಿಂದ ಹೊರಡುವಂತೆ ಹೊರಟು,) ಕಳಶಸಂಭವನ ಅಂದಿನ ಅನುವರದೊಳ್ ತನ್ನಂ ಪರಿಚ್ಛೇದಿಸಿ ( ದ್ರೋಣಾಚಾರ್ಯನು ಆ ದಿನದ ಯುದ್ಧದಲ್ಲಿ ತನ್ನನ್ನು (ತನ್ನ ಸ್ಥಿತಿಯನ್ನು) ನಿಶ್ಚಯಿಸಿಕೊಂಡು) ಕನಕ ಕಳಶ ಸಂಭೃತ ಮಂಗಳ ಜಳಂಗಳಂ ಮಿಂದು (ಚಿನ್ನದ ಕಲಶಗಳಲ್ಲಿ ತುಂಬಿದ ಮಂಗಳಜಲದಲ್ಲಿ ಸ್ನಾನಮಾಡಿ) ಧವಳ ವಸನ ದುಕೂಲಾಂಬರ ಮಂಗಳ ವಿಭೂಷಣನುಂ ನಿರ್ವತೀತ ಸಂಧ್ಯೋಪಾಸನನುಂ (ಬಿಳಿಯ ರೇಷ್ಮೆಯ ಉಡುಪೇ ಮೊದಲಾದ ಮಂಗಳಾಭರಣಯುತನಾಗಿ ಸಂಧ್ಯಾವಂದನವನ್ನೂ) ಪರಿಸಮಾಪ್ತ ಜಪನುಮರ್ಚಿತ ಶಿತಿಕಂಠನುಮ್ ಆಹುತಿ ಹುತಾಗ್ನಿಹೋತ್ರನುಂ (ಜಪವನ್ನೂ ಮುಗಿಸಿ ಶಿವನನ್ನು ಆರಾಸಿ ಅಗ್ನಿಗಾಹುತಿಯನ್ನಿತ್ತು ) ಪೂಜಿತ ಧರಾಮರನುಂ (ಬ್ರಾಹ್ಮಣರನ್ನು ವಂದಿಸಿದವನಾಗಿ) ನೀರಾಜಿತ ರಥತುರಗನುಮಾಗಿ ರಜತ ರಥಮನು ಏಱಿ (ರಥ ಕುದುರೆಗಳಿಗೆ ಆರತಿ ಮಾಡಿ ಬೆಳ್ಳಿಯ ತೇರನ್ನು ಹತ್ತಿ) ಸಂಗ್ರಾಮ ಭೂಮಿಯನು ಎಯ್ದೆವಂದು (ಯುದ್ಧರಂಗದ ಸಮೀಪಕ್ಕೆ ಬಂದು- ಬಂದನು) ಸಾಮಂತ ಚೂಡಾಮಣಿಯನು ಇನಿಸು ಮಾರ್ಕೊಂಡು ನಿಲ್ವೊಡಂ (ಸಾಮಂತ ಚೂಡಾಮಣಿಯಾದ ಅರ್ಜುನನನ್ನು ಸ್ವಲ್ಪ ಎದುರಿಸಿ ನಿಲ್ಲಬೇಕಾದರೂ) ಸಿಂಧುರಾಜನಂ ಕಾವೊಡಮ್ ಅನೇಕ ವ್ಯೂಹರಚನೆಯೊಳಲ್ಲದೆ ಗೆಲಲ್ ಬಾರದೆಂದು (ಸಾಮಂತ ಚೂಡಾಮಣಿಯಾದ ಅರ್ಜುನನನ್ನು ಸ್ವಲ್ಪ ಎದುರಿಸಿ ನಿಲ್ಲಬೇಕಾದರೂ ಸೈಂಧವನನ್ನು ರಕ್ಷಿಸಬೇಕಾದರೂ ಅನೇಕ ವ್ಯೂಹರಚನೆಯಿಂದಲ್ಲದೆ ಗೆಲ್ಲಲು ಸಾಧ್ಯವಿಲ್ಲವೆಂದು) ಚಕ್ರವ್ಯೂಹದೊಳು ಅಂಗರಾಜ ಶಲ್ಯ ವೃಷಸೇನ ಕೃಪ ಕೃತವರ್ಮಅಶ್ವತ್ಥಾಮರಂ ದುರ್ಯೋಧನಂ ಬೆರಸಿ ಇರಿಸಿ ಮತ್ತಿತ್ತ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲೊಳ್ (ಮತ್ತೆ ಇತ್ತ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲಲ್ಲಿ ಇರಿಸಿದನು) ಬಾಹ್ಲೀಕ ಸೋಮದತ್ತ ವಿಂದ ಅನುವಿಂದರೊಡನೆ ಸಂಸಪ್ತಕರನು ಇರಿಸಿ, ಶಕಟವ್ಯೂಹದ ಪೆಱಗೆ ನಾಲ್ಕು (ಶಕಟವ್ಯೂಹದ ಹಿಂದೆ ನಾಲ್ಕು ಯೋಜನದಲ್ಲಿ) ಯೋಜನದೊಳ್ ಅರ್ಧಚಂದ್ರವ್ಯೂಹದೊಳು ಅಧಿಕ ಬಲರಪ್ಪ ಸೌಬಲ ದುಶ್ಶಾಸನಾದಿ ಪ್ರಧಾನ ವೀರಭಟ ಕೋಟಿಯ ನಡುವೆ ಸಿಂಧುರಾಜನನು ಇರಿಸಿ (ಪ್ರಧಾನ ನಾಯಕರ ಸಮೂಹದ ಮಧ್ಯದಲ್ಲಿ ಸಿಂಧುರಾಜನನ್ನು ಇರಿಸಿ- ಇರಿಸಿದನು. ) ಮೊದಲ ಚಕ್ರವ್ಯೂಹದ ಬಾಗಿಲೊಳ್ ಶರಾಸನಾಚಾರ್ಯಂ ನಿಂದನು ( ಮೊದಲನೆಯ ಚಕ್ರವ್ಯೂಹದ ಬಾಗಿಲಿನಲ್ಲಿ ಚಾಪಾಚಾರ್ಯನಾದ ದ್ರೋಣನೇ ನಿಂತುಕೊಂಡನು.) ಇತ್ತ ಪಾಂಡವಬಲಮ್ ಎಲ್ಲಮುಂ ವಿಕ್ರಮಾರ್ಜುನನುಂ ವಜ್ರಪಂಜರದಂತೆ ಅಭೇದ್ಯಮಪ್ಪ ವಜ್ರವ್ಯೂಹಮನು ಒಡ್ಡಿ (ಭೇದಿಸುವುದಕ್ಕಾಗದಿರುವ ವಜ್ರವ್ಯೂಹವನ್ನು ಒಡ್ಡಿ) ಧರ್ಮರಾಜನೊಡನೆ ಭೀಮ ನಕುಳ ಸಹದೇವ ಸಾತ್ಯಕಿ ಧೃಷ್ಟದ್ಯುಮ್ನ ಘಟೋತ್ಕಚ ಪ್ರಮುಖ ನಾಯಕರಂ ಪೇೞ್ದು (ಮುಖ್ಯರಾದ ನಾಯಕರನ್ನು ಇರಹೇಳಿ) ದ್ರುಪದ ವಿರಾಟ ಶಿಖಂಡಿ ಯುಧಾಮನ್ಯು ಉತ್ತಮೌಜ ಕೈಕಯ ಪ್ರಧಾನ ನಾಯಕರಂ ತನ್ನೊಡನೆ ಕೂಡಿಕೊಂಡು ನಿಜಾಗ್ರಜನಂ ಬೀೞ್ಕೊಂಡು (ತಮ್ಮಣ್ಣನ ಅಪ್ಪಣೆಯನ್ನು ಪಡೆದು ಹೋಗಿ- ಹೋದನು) ನಿಜರಥಮಂ ರಥಾಂಗಧರನಂ ಮುನ್ನಮೆ ಏಱಲ್ವೇೞ್ದು (ಕೃಷ್ಣನನ್ನು ಮೊದಲು ತನ್ನ ತೇರನ್ನು ಹತ್ತಲು ಹೇಳಿ) ಮೂಱು ಸೂೞ್ ಬಲವಂದು ಪೊಡಮಟ್ಟು ರಥುಮನೇಱಿ (ಮೂರು ಸಲ ಪ್ರದಕ್ಷಿಣ ನಮಸ್ಕಾರಮಾಡಿ ರಥವನ್ನು ಹತ್ತಿ) ವಜ್ರಕವಚಮಂ ತೊಟ್ಟು ತವದೊಣೆಗಳನು ಅಮರೆ ಬಿಗಿದು (ಬತ್ತಳಿಕೆಯನ್ನು (ಅಕ್ಷಯತೂಣೀರ) ಬಿಗಿಯಾಗಿ ಬಿಗಿದುಕೊಂಡು) ಗಾಂಡೀವಮನು ಏಱಿಸಿ ನೀವಿ ಜೇವೊಡೆದಾಗಳ್ (ಗಾಂಡೀವಕ್ಕೆ ಹೆದೆಯೇರಿಸಿ ನೀವಿ ಶಬ್ದ ಮಾಡಿದನು. ಆಗ)-
ವಚನ:ಅರ್ಥ: ಆಗ ಎರಡು ಸೇನಾಸಮುದ್ರಗಳೂ ನೆಲೆಯಿಂದ ಹೊರಡುವಂತೆ ಹೊರಟರು. ದ್ರೋಣಾಚಾರ್ಯನು ಆ ದಿನದ ಯುದ್ಧದಲ್ಲಿ ತನ್ನನ್ನು (ತನ್ನ ಸ್ಥಿತಿಯನ್ನು) ನಿಶ್ಚಯಿಸಿಕೊಂಡು ಚಿನ್ನದ ಕಲಶಗಳಲ್ಲಿ ತುಂಬಿದ ಮಂಗಳಜಲದಲ್ಲಿ ಸ್ನಾನಮಾಡಿ ಬಿಳಿಯ ರೇಷ್ಮೆಯ ಉಡುಪೇ ಮೊದಲಾದ ಮಂಗಳಾಭರಣಯುತನಾಗಿ ಸಂಧ್ಯಾವಂದನವನ್ನೂ ಜಪವನ್ನೂ ಮುಗಿಸಿ ಶಿವನನ್ನು ಆರಾಸಿ ಅಗ್ನಿಗಾಹುತಿಯನ್ನಿತ್ತು ಬ್ರಾಹ್ಮಣರನ್ನು ವಂದಿಸಿ ರಥ ಕುದುರೆಗಳಿಗೆ ಆರತಿ ಮಾಡಿ ಬೆಳ್ಳಿಯ ತೇರನ್ನು ಹತ್ತಿ ಯುದ್ಧರಂಗದ ಸಮೀಪಕ್ಕೆ ಬಂದನು. ಸಾಮಂತ ಚೂಡಾಮಣಿಯಾದ ಅರ್ಜುನನನ್ನು ಸ್ವಲ್ಪ ಎದುರಿಸಿ ನಿಲ್ಲಬೇಕಾದರೂ ಸೈಂಧವನನ್ನು ರಕ್ಷಿಸಬೇಕಾದರೂ ಅನೇಕ ವ್ಯೂಹರಚನೆಯಿಂದಲ್ಲದೆ ಗೆಲ್ಲಲು ಸಾಧ್ಯವಿಲ್ಲವೆಂದು ಚಕ್ರವ್ಯೂಹವನ್ನೇ ಮುಂಭಾಗದಲ್ಲಿ ಒಡ್ಡಿ ಸಾಮಂತರಾಜರ ಸಮೂಹವನ್ನು ಅಲ್ಲಿ ಇರಹೇಳಿದನು. ಅಲ್ಲಿಗೆ ನಾಲ್ಕು ಯೋಜನದ ದೂರದಲ್ಲಿದ್ದ ಪದ್ಮವ್ಯೂಹದಲ್ಲಿ ಕರ್ಣ, ಶಲ್ಯ, ವೃಷಸೇನ, ಕೃಪ, ಕೃತವರ್ಮಾಶ್ವತ್ಥಾಮರನ್ನು ದುರ್ಯೋಧನನೊಡನೆ ಇರಿಸಿ ಮತ್ತೆ ಇತ್ತ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲಲ್ಲಿ ಇರಿಸಿದನು.- ಮತ್ತೆ ಈ ಕಡೆ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲಿನಲ್ಲಿ ಬಾಹ್ಲಿಕ ಸೋಮದತ್ತ ವಿಂದಾನುವಿಂದರೊಡನೆ ಸಂಸಪ್ತಕರನಿಟ್ಟನು. ಶಕಟವ್ಯೂಹದ ಹಿಂದೆ ನಾಲ್ಕು ಯೋಜನದಲ್ಲಿ ಅರ್ಧಚಂದ್ರವ್ಯೂಹದಲ್ಲಿ ಅಕಬಲರಾದ ಶಕುನಿ ದುಶ್ಶಾಸನನೇ ಮೊದಲಾದ ಪ್ರಧಾನ ನಾಯಕರ ಸಮೂಹದ ಮಧ್ಯದಲ್ಲಿ ಸಿಂಧುರಾಜನನ್ನು ಇರಿಸಿದನು. ಮೊದಲನೆಯ ಚಕ್ರವ್ಯೂಹದ ಬಾಗಿಲಿನಲ್ಲಿ ಚಾಪಾಚಾರ್ಯನಾದ ದ್ರೋಣನೇ ನಿಂತುಕೊಂಡನು. ಈ ಕಡೆ ಅರ್ಜುನನೂ ಪಾಂಡವಸೈನ್ಯವನ್ನೆಲ್ಲ ವಜ್ರಪಂಜರದಂತೆ ಭೇದಿಸುವುದಕ್ಕಾಗದಿರುವ ವಜ್ರವ್ಯೂಹವನ್ನು ಒಡ್ಡಿ/ ಎದುರು ನಿಲ್ಲಿಸಿ, ಧರ್ಮರಾಜನೊಡನೆ ಭೀಮ ನಕುಳ ಸಹದೇವ ಸಾತ್ಯಕಿ ಧೃಷ್ಟದ್ಯುಮ್ನ ಘಟೋತ್ಕಚರೇ ಮುಖ್ಯರಾದ ನಾಯಕರನ್ನು ಇರಹೇಳಿ ದ್ರುಪದ ವಿರಾಟ ಶಿಖಂಡಿ ಯುಧಾಮನ್ಯೂತ್ತಮೌಜಸ್ ಕೈಕಯರೇ ಮೊದಲಾದ ನಾಯಕರನ್ನು ತನ್ನೊಡನೆ ಸೇರಿಸಿಕೊಂಡು ತಮ್ಮಣ್ಣನ ಅಪ್ಪಣೆಯನ್ನು ಪಡೆದು ಹೋದನು. ಕೃಷ್ಣನನ್ನು ಮೊದಲು ತನ್ನ ತೇರನ್ನು ಹತ್ತಲು ಹೇಳಿ ಮೂರು ಸಲ ಪ್ರದಕ್ಷಿಣ ನಮಸ್ಕಾರಮಾಡಿ ರಥವನ್ನು ಹತ್ತಿ ವಜ್ರಕವಚವನ್ನು ತೊಟ್ಟು ಬರಿದಾಗದ ಬತ್ತಳಿಕೆಯನ್ನು (ಅಕ್ಷಯತೂಣೀರ) ಬಿಗಿಯಾಗಿ ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯೇರಿಸಿ ನೀವಿ ಶಬ್ದ ಮಾಡಿದನು. ಆಗ-
ಪಥ್ವಿ || ಭವಂ ಭವನ ಗೋತ್ರದಿಂದಜನಜಾಂಡದಿಂ ಭಾನು ಭಾ
ನು ವೀಧಿಯಿನಿಳಾತಳಂ ತಳದಿನೆಯ್ದೆ ಕಿೞ್ತೆೞ್ದು (ಬರ್ಪಂತೆ) ತೂ|
ಳ್ವವಾರ್ಯ ಭುಜವೀರ್ಯಮಂ ನೆರೆಯೆ ತೋರ್ಪಿನಂ ಕುಂಭ ಸಂ
ಭವಂ ಮರಲೆ ತಾಗಿದಂ ರಿಪುಕುರಂಗ ಕಂಠೀರವಂ|| ೧೩೩ ||
ಪದ್ಯ-೧೩೩:ಪದವಿಭಾಗ-ಅರ್ಥ:ಭವಂ ಭವನ ಗೋತ್ರದಿಂದ (ಆ ಶಬ್ದದಿಂದ ಈಶ್ವರನು ಕೈಲಾಸಪರ್ವತದಿಂದಲೂ) ಅಜಂ ಅಜಾಂಡದಿಂ (ಬ್ರಹ್ಮನು ಬ್ರಹ್ಮಾಂಡದಿಂದಲೂ) ಭಾನು ಭಾನು ವೀಧಿಯಿನು (ಸೂರ್ಯನು ಆಕಾಶಮಾರ್ಗದಿಂದಲೂ) ಇಳಾತಳಂ ತಳದಿಂ ಎಯ್ದೆ (ಭೂಮಂಡಲವು ತನ್ನ ಮೂಲದಿಂದಲೂ ಪೂರ್ಣವಾಗಿ) ಕಿೞ್ತು ಎೞ್ದು ತೂಳ್ವ( ಕಿತ್ತು ಎದ್ದು ತಳ್ಳುವ (ಬರುವ) ಹಾಗಾಯಿತು) ಅವಾರ್ಯ ಭುಜವೀರ್ಯಮಂ ನೆರೆಯೆ ತೋರ್ಪಿನಂ (ತಡೆಯಲಸಾಧ್ಯವಾದ ತನ್ನ ಬಾಹುಬಲವನ್ನು (ಅರ್ಜುನನು) ಪೂರ್ಣವಾಗಿ ಪ್ರದರ್ಶಿಸಿ) ಕುಂಭ ಸಂಭವಂ ಮರಲೆ (ದ್ರೋಣಾಚಾರ್ಯನು ಸಂತೋಷಪಡುವಂತೆ) ತಾಗಿದಂ ರಿಪುಕುರಂಗ ಕಂಠೀರವಂ (ರಿಪುಕುರಂಗ ಕಂಠೀರವನಾದ ಅರ್ಜುನನು (ಪ್ರತಿಸೈನ್ಯವನ್ನು) ತಾಗಿದನು- ಎದುರಿಸಿದನು.)
ಪದ್ಯ-೧೩೩:ಅರ್ಥ: ಆ ಶಬ್ದದಿಂದ, ಈಶ್ವರನು ಕೈಲಾಸಪರ್ವತದಿಂದಲೂ, ಬ್ರಹ್ಮನು ಬ್ರಹ್ಮಾಂಡದಿಂದಲೂ, ಸೂರ್ಯನು ಆಕಾಶಮಾರ್ಗದಿಂದಲೂ, ಭೂಮಂಡಲವು ತನ್ನ ಮೂಲದಿಂದಲೂ ಪೂರ್ಣವಾಗಿ ಕಿತ್ತು ಎದ್ದು ಬರುವ ಹಾಗಾಯಿತು. ತಡೆಯಲಸಾಧ್ಯವಾದ ತನ್ನ ಬಾಹುಬಲವನ್ನು (ಅರ್ಜುನನು) ಪೂರ್ಣವಾಗಿ ಪ್ರದರ್ಶಿಸಿ ದ್ರೋಣಾಚಾರ್ಯನು ಸಂತೋಷಪಡುವಂತೆ ರಿಪುಕುರಂಗ ಕಂಠೀರವನಾದ ಅರ್ಜುನನು (ಪ್ರತಿಸೈನ್ಯವನ್ನು) ಎದುರಿಸಿದನು.
ವ|| ಅಂತು ತಾಗಿ ಚಕ್ರವ್ಯೂಹದ ಬಾಗಿಲೊಳ್ ತನ್ನಂ ಪುಗಲೀಯದಡ್ಡಮಾಗಿ ನಿಂದ ಕಾರ್ಮುಕಾಚಾರ್ಯನನು ಸೆರೆಗೆಯ್ಯದೆ ವಿನಯಾಸ್ತ್ರಮನೆಚ್ಚು ವಿನಯಮನೆ ಮುಂದಿಟ್ಟು ಬಲವಂದು ಪೊಡೆಮಟ್ಟು ಪೋಗೆವೋಗೆ-
ವಚನ:ಪದವಿಭಾಗ-ಅರ್ಥ:ಅಂತು ತಾಗಿ ಚಕ್ರವ್ಯೂಹದ ಬಾಗಿಲೊಳ್ ತನ್ನಂ ಪುಗಲೀಯದೆ ಅಡ್ಡಮಾಗಿ ನಿಂದ ಕಾರ್ಮುಕಾಚಾರ್ಯನನು (ಹಾಗಿ ಎದುರಿಸಿ ಚಕ್ರವ್ಯೂಹದ ಬಾಗಿಲಿನಲ್ಲಿ ತಾನು ಪ್ರವೇಶಿಸುವುದಕ್ಕೆ ನಿಂತಿದ್ದ ಚಾಪಾಚಾರ್ಯನಾದ ದ್ರೋಣಾಚಾರ್ಯನನ್ನು) ಸೆರೆಗೆಯ್ಯದೆ ವಿನಯಾಸ್ತ್ರಮನೆಚ್ಚು ವಿನಯಮನೆ ಮುಂದಿಟ್ಟು (ಕಠಿಣಯುದ್ಧ ಮಾಡದೆ ವಿನಯಾಸ್ತ್ರವನ್ನೇ ಪ್ರಯೋಗಿಸಿ ನಮ್ರತೆಯನ್ನೆ ಮುಂದುಮಾಡಿಕೊಂಡು) ಬಲವಂದು ಪೊಡೆಮಟ್ಟು ಪೋಗೆವೋಗೆ (ಪ್ರದಕ್ಷಿಣ ನಮಸ್ಕರಮಾಡಿ ಮುಂದೆ ಹೋದನು)-
ವಚನ:ಅರ್ಥ: ಹಾಗಿ ಎದುರಿಸಿ ಚಕ್ರವ್ಯೂಹದ ಬಾಗಿಲಿನಲ್ಲಿ ತಾನು ಪ್ರವೇಶಿಸುವುದಕ್ಕೆ ನಿಂತಿದ್ದ ಚಾಪಾಚಾರ್ಯನಾದ ದ್ರೋಣಾಚಾರ್ಯನನ್ನು ಕಠಿಣಯುದ್ಧ ಮಾಡದೆ ವಿನಯಾಸ್ತ್ರವನ್ನೇ ಪ್ರಯೋಗಿಸಿ ನಮ್ರತೆಯನ್ನೆ ಮುಂದುಮಾಡಿಕೊಂಡು ಪ್ರದಕ್ಷಿಣ ನಮಸ್ಕರಮಾಡಿ ಮುಂದೆ ಹೋದನು.
ಮ|| ಕಮನೀಯಂ ಬಲವಂದು ಪೋಪನನೆಲೇ ಪೋಪೋಗದಿರ್ ಪೋಗದಿರ್
ಸಮರಕ್ಕೆನ್ನೊಡನಂಜಿ ಪೋದೆಯೆನಲಿಂತೆಂದಂ ನರಂ ದ್ರೋಣರಂ|
ನಿಮಗಾನಂಜುವುದೆನ್ನ ಬಾಲತನದಿಂದಂದಾದುದಿಂದಾದುದೇ
ನಿಮಗಾನಂಜದೊಡಂಜಿಸಲ್ ನೆರೆವೆನೇ ತ್ರೈಲೋಕ್ಯಮಂ ಯುದ್ಧದೊಳ್|| ೧೩೪
ಪದ್ಯ-೦೦:ಪದವಿಭಾಗ-ಅರ್ಥ:ಕಮನೀಯಂ ಬಲವಂದು ಪೋಪಂ (ಸೊಗಸಾದ ರೀತಿಯಲ್ಲಿ ಪ್ರದಕ್ಷಿಣೆ ಮಾಡಿ ಹೋಗುತ್ತಿರುವ ಅರ್ಜುನನನ್ನು ದ್ರೋಣಾಚಾರ್ಯನು) ಎಲೇ ಪೋಪೋಗದಿರ್ ಪೋಗದಿರ್ ಸಮರಕ್ಕೆ ಎನ್ನೊಡನೆ ಅಂಜಿ ಪೋದೆಯೆನಲ್ ಇಂತೆಂದಂ ನರಂ (‘ಎಲವೋ ಹೋಗಬೇಡ, ಹೋಗಬೇಡ, ನನ್ನೊಡನೆ ಯುದ್ಧ ಮಾಡುವುದಕ್ಕೆ ಹೆದರಿ ಹೋಗುತ್ತಿದ್ದೀಯೆ’ ಎಂದರು. ಅರ್ಜುನನು ಆಚಾರ್ಯರನ್ನು ಕುರಿತು ಹೀಗೆಂದನು-) ದ್ರೋಣರಂ ನಿಮಗಾನಂಜುವುದು ಎನ್ನ ಬಾಲತನದಿಂದ ಅಂದೆ ಆದುದು ಇಂದು ಆದುದೇ ನಿಮಗೆ ಆನು ಅಂಜದೊಡೆ (‘ನಿಮಗೆ ಹೆದರುವುದು ಬಾಲ್ಯದಿಂದಾದುದು, ಇಂದಾಯಿತೇ? ನಿಮಗೆ ನಾನು ಹೆದರದಿದ್ದರೆ) ಅಂಜಿಸಲ್ ನೆರೆವೆನೇ ತ್ರೈಲೋಕ್ಯಮಂ ಯುದ್ಧದೊಳ್ (ನಿಮಗೆ ನಾನು ಹೆದರದಿದ್ದರೆ ಯುದ್ಧದಲ್ಲಿ ಮೂರುಲೋಕವನ್ನು ಹೆದರಿಸಲು ಸಮರ್ಥ ನಾಗುತ್ತೇನೆಯೇ?’)
ಪದ್ಯ-೦೦:ಅರ್ಥ: ಸೊಗಸಾದ ರೀತಿಯಲ್ಲಿ ಪ್ರದಕ್ಷಿಣೆ ಮಾಡಿ ಹೋಗುತ್ತಿರುವ ಅರ್ಜುನನನ್ನು ದ್ರೋಣಾಚಾರ್ಯನು, ‘ಎಲವೋ ಹೋಗಬೇಡ, ಹೋಗಬೇಡ, ನನ್ನೊಡನೆ ಯುದ್ಧ ಮಾಡುವುದಕ್ಕೆ ಹೆದರಿ ಹೋಗುತ್ತಿದ್ದೀಯೆ’ ಎಂದರು. ಅರ್ಜುನನು ಆಚಾರ್ಯರನ್ನು ಕುರಿತು ಹೀಗೆಂದನು- ‘ನಿಮಗೆ ಹೆದರುವುದು ಬಾಲ್ಯದಿಂದಾದುದು, ಇಂದಾಯಿತೇ? ನಿಮಗೆ ನಾನು ಹೆದರದಿದ್ದರೆ ಯುದ್ಧದಲ್ಲಿ ಮೂರುಲೋಕವನ್ನು ಹೆದರಿಸಲು ಸಮರ್ಥ ನಾಗುತ್ತೇನೆಯೇ?’
ವ|| ಅಂತು ವಿನಯಮನೆ ನುಡಿದ ವಿಕ್ರಮಾರ್ಜುನನಂ ಗುರುವನೇಕಾಶೀರ್ವಚನಂಗಳಿಂ ಪರಸುವುದುಂ ಪದುಮನಾಭನ ಚೋದಿಸುವ ರಥವೇಗದಿಂ ಪದ್ಮವ್ಯೂಹಮನೆಯ್ದೆವಂದು ಸುಯೋಧನನ ಸಾಧನದೊಳ್ ತಾಗಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ವಿನಯಮನೆ ನುಡಿದ ವಿಕ್ರಮಾರ್ಜುನನಂ ಗುರುವು ಅನೇಕ ಆಶೀರ್ವಚನಂಗಳಿಂ ಪರಸುವುದುಂ (ಹಾಗೆ ನಮ್ರತೆಯಿಂದಲೇ ಮಾತನಾಡಿದ ವಿಕ್ರಮಾರ್ಜುನನನ್ನು ದ್ರೋಣಾಚಾರ್ಯರು ಅನೇಕ ಆಶೀರ್ವಚನಗಳಿಂದ ಹರಸಿದರು. ಹರಸಲು-) ಪದುಮನಾಭನ ಚೋದಿಸುವ ರಥವೇಗದಿಂ ಪದ್ಮವ್ಯೂಹಮನು ಎಯ್ದೆವಂದು (ಕೃಷ್ಣನು ನಡೆಸಿದ ರಥದ ವೇಗದಿಂದ ಪದ್ಮವ್ಯೂಹದ ಸಮೀಪಕ್ಕೆ ಬಂದು) ಸುಯೋಧನನ ಸಾಧನದೊಳ್ ತಾಗಿದಾಗಳ್ - (ದುರ್ಯೋಧನನ ಸೈನ್ಯವನ್ನು ತಾಗಿದಾಗ- ಎದುರಿಸಿದಾಗ)
ವಚನ:ಅರ್ಥ: ಹಾಗೆ ನಮ್ರತೆಯಿಂದಲೇ ಮಾತನಾಡಿದ ವಿಕ್ರಮಾರ್ಜುನನನ್ನು ದ್ರೋಣಾಚಾರ್ಯರು ಅನೇಕ ಆಶೀರ್ವಚನಗಳಿಂದ ಹರಸಿದರು. ಕೃಷ್ಣನು ನಡೆಸಿದ ರಥದ ವೇಗದಿಂದ ಪದ್ಮವ್ಯೂಹದ ಸಮೀಪಕ್ಕೆ ಬಂದು ದುರ್ಯೋಧನನ ಸೈನ್ಯವನ್ನು ತಾಗಿದಾಗ- ಎದುರಿಸಿದಾಗ
ಚಂ|| ಪೊಸ ಮಸೆಯಂಬು ಕಾರಮೞೆವೋಲ್ ಕರೆಯುತ್ತಿರೆ ನೇರ್ದು ಸೀಳ್ದು ಖಂ
ಡಿಸಿ ಕಡಿದೊಟ್ಟಿ ಸುಟ್ಟನಿತುಮಂ ನಿಜ ಮಾರ್ಗಣ ಕೋಟಿಯಿಂದಗು|
ರ್ವಿಸೆ ತೆಗೆದೆಚ್ಚು ತನ್ನ ಮೊನೆಯಂಬುಗಳಿಂ ಚತುರಂಗಮೆಯ್ದೆ ಕೀ
ಲಿಸೆ ಪಡೆ ಚಿತ್ರದೊಂದೆ ಪಡೆಯಂತೆವೊಲಾಯ್ತಕಳಂಕರಾಮನಿಂ|| ೧೩೫||
ಪದ್ಯ-೧೩೫:ಪದವಿಭಾಗ-ಅರ್ಥ:ಪೊಸ ಮಸೆಯ ಅಂಬು ಕಾರಮೞೆವೋಲ್ ಕರೆಯುತ್ತಿರೆ (ಹೊಸದಾಗಿ ಮಸೆದಿರುವ ಬಾಣಗಳು ಕಾರ್ಗಾಲದ ಮಳೆಯ ಹಾಗೆ ಸುರಿಯುತ್ತಿರಲು) ನೇರ್ದು ಸೀಳ್ದು ಖಂಡಿಸಿ ಕಡಿದೊಟ್ಟಿ ಸುಟ್ಟನು ಅತುಮಂ (ಅರ್ಜುನನು ಅಷ್ಟನ್ನೂ ತನ್ನ ಬಾಣಗಳ ತುದಿಯಿಂದ ಕತ್ತರಿಸಿ, ಸೀಳಿ, ಮುರಿದು, ತುಂಡಿಸಿ, ರಾಶಿಮಾಡಿ ಸುಟ್ಟುನು ಅನಿತುಂ ಎಲ್ಲವನ್ನೂ,) ನಿಜ ಮಾರ್ಗಣ ಕೋಟಿಯಿಂದ ಅಗುರ್ವಿಸೆ ತೆಗೆದು ಎಚ್ಚು ತನ್ನ ಮೊನೆಯಂಬುಗಳಿಂ (ತನ್ನ ಬಾಣಗಳ ಸಮೂಹದಿಂದ ಚತುರಂಗ ಸೈನ್ಯವೂ ಹೆದರುವ ಹಾಗೆ) ಚತುರಂಗಮ್ ಎಯ್ದೆ ಕೀಲಿಸೆ (ಚತುರಂಗ ಸೈನ್ಯವೂ ಹೆದರುವ ಹಾಗೆ ಸೆಳೆದು ಹೊಡೆದು ಚೆನ್ನಾಗಿ ನಾಟಿಸಲು) ಪಡೆ ಚಿತ್ರದೊಂದೆ ಪಡೆಯಂತೆವೊಲ್ ಆಯ್ತು ಅಕಳಂಕರಾಮನಿಂ (ಸೈನ್ಯವು ಚಿತ್ರದಲ್ಲಿ ಬರೆದ ಸೈನ್ಯದಂತೆ ಆಯಿತು, ಅಕಳಂಕರಾಮನಾದ ಅರ್ಜುನನಿಂದ).
ಪದ್ಯ-೧೩೫:ಅರ್ಥ: ಪದ್ಮವ್ಯೂಹದಲ್ಲಿ ಪ್ರವೇಶಿಸಿದಾಗ, ಹೊಸದಾಗಿ ಮಸೆದಿರುವ ಬಾಣಗಳು ಕಾರ್ಗಾಲದ ಮಳೆಯ ಹಾಗೆ ಸುರಿಯುತ್ತಿರಲು ಅರ್ಜುನನು ಅಷ್ಟನ್ನೂ ತನ್ನ ಬಾಣಗಳ ತುದಿಯಿಂದ ಕತ್ತರಿಸಿ, ಸೀಳಿ, ಮುರಿದು, ತುಂಡಿಸಿ, ರಾಶಿಮಾಡಿ ಸುಟ್ಟು ತನ್ನ ಬಾಣಗಳ ಸಮೂಹದಿಂದ ಚತುರಂಗ ಸೈನ್ಯವೂ ಹೆದರುವ ಹಾಗೆ ಸೆಳೆದು ಹೊಡೆದು ಚೆನ್ನಾಗಿ ನಾಟಿಸಲು ಸೈನ್ಯವು ಚಿತ್ರದಲ್ಲಿ ಬರೆದ ಸೈನ್ಯದಂತೆ ಆಯಿತು.
ಅಡಿ ತೊಡೆ ಪೊರ್ಕುೞುಂ ತೆಗಲೆ ಕೈ ಕಣಕಾಲ್ ಕೊರಲೆಂಬಿವುಂ ಬೆರಲ್
ನಡುವುರ ಬೆನ್ ಬಸಿರ್ ತೊಳಕು ಕರ್ಚರೆ ಮುಯ್ವು ಮುಸುಂಬು ಮೂಗು ಪೆ
ರ್ದೊಡೆ ಕಟಿ ಮುಂಮಡಂ ಪರಡು ಸಂದಿ ನೊಸಲ್ ಪಣೆ ಕಣ್ ಕದಂಪಿವೆಂ
ಬೆಡೆಯನೆ ನಟ್ಟುವುರ್ಚಿದುವು ನೇರ್ದುವು ಸೀಳ್ದುವು ಪಾರ್ಥನಂಬುಗಳ್|| ೧೩೬||
ಪದ್ಯ-೧೩೬:ಪದವಿಭಾಗ-ಅರ್ಥ:ಅಡಿ ತೊಡೆ ಪೊರ್ಕುೞುಂ (ಪಾದ, ತೊಡೆ, ಹೊಕ್ಕಳು) ತೆಗಲೆ ಕೈ ಕಣಕಾಲ್ ಕೊರಲ್ ಎಂಬಿವುಂ (ಹೆಗ್ಗತ್ತು, ಕೈ, ಕಾಲಿನ ಕೆಳಭಾಗ, ಕೊರಳು ಎಂಬುವುಗಳನ್ನೂ) ಬೆರಲ್ನಡುವುರ ಬೆನ್ ಬಸಿರ್ ತೊಳಕು ಕರ್ಚರೆ ಮುಯ್ವು ಮುಸುಂಬು ಮೂಗು ಪೆರ್ದೊಡೆ ಕಟಿ (ಹೆಗಲು, ಮೂತಿ, ಹೆದ್ದೊಡೆ, ಸೊಂಟ) ಮುಂಮಡಂ ಪರಡು (ಕಾಲ ಹರಡಿನ ಹಿಂಭಾಗ ಮತ್ತು ಮುಂಭಾಗ, ಕಾಲಿನ ಹರಡು) ಸಂದಿ ನೊಸಲ್ ಪಣೆ ಕಣ್ ಕದಂಪು ಎಂವೆಂಬೆಡೆಯನೆ ನಟ್ಟು ವುರ್ಚಿದುವು (ಈ ಎಲ್ಲಾ ಸ್ಥಳಗಳನ್ನೂ ಅರ್ಜುನನ ಬಾಣಗಳು ನಾಟಿದುವು, ಸೀಳಿದವು) ನೇರ್ದುವು ಸೀಳ್ದುವು ಪಾರ್ಥನಂಬುಗಳ್ (ಅರ್ಜುನನ ಬಾಣಗಳು, (ಸೀಳಿದವು ಮತ್ತು ಹೋಳು ಮಾಡಿದುವು.)
ಪದ್ಯ-೧೩೬:ಅರ್ಥ:ಅರ್ಜುನನ ಬಾಣಗಳು, ಪಾದ, ತೊಡೆ, ಹೊಕ್ಕಳು, ಹೆಗ್ಗತ್ತು, ಕೈ, ಕಾಲಿನ ಕೆಳಭಾಗ, ಕೊರಳು ಎಂಬುವುಗಳನ್ನೂ ಬೆರಳು, ನಡು, ಎದೆ, ಬೆನ್ನು, ಹೊಟ್ಟೆ, ತೊಳಕುಸ(?) ಕರ್ಚರೆ, ಹೆಗಲು, ಮೂತಿ, ಹೆದ್ದೊಡೆ, ಸೊಂಟ, ಕಾಲ ಹರಡಿನ ಹಿಂಭಾಗ ಮತ್ತು ಮುಂಭಾಗ, ಕಾಲಿನ ಹರಡು, ಕೀಲು, ಹಣೆ, ಕಣ್ಣು, ಕೆನ್ನೆ -ಈ ಎಲ್ಲಾ ಸ್ಥಳಗಳನ್ನೂ ಅರ್ಜುನನ ಬಾಣಗಳು ನಾಟಿದುವು, ಸೀಳಿದವು ಮತ್ತು ಹೋಳು ಮಾಡಿದುವು.
ವ|| ಅಂತು ಮಾಱಾಂತ ಮಾರ್ಪಡೆಯೆಲ್ಲವಂ ಜವನೊಕ್ಕಲಿಕ್ಕಿ ತನ್ನೊಳ್ ಪೋಗದೆ ಪೆಣೆದ ಬಾಹ್ಲೀಕ ಸೋಮದತ್ತ ಭೂರಿಶ್ರವರನಾನೆ ಮೆಟ್ಟಿದ ಕುಳುಂಪೆಯ ನೀರಂತೆ ದೆಸೆದೆಸೆಗೆ ಸೂಸುವನ್ನೆಗಮೆೞ್ಬಟ್ಟಿ ಕಾಂಭೋಜ ಸುದಕ್ಷಿಣ ಜಯತ್ಸೇನರೆಂಬರೆಯ್ತರೆ ಮೂವರಕ್ಷೋಹಿಣೀ ಪತಿಗಳ್ವೆರಸು ನಾಲ್ಸಾಸಿರ್ವರ್ ಮಕುಟವರ್ಧನರಂ ಕೊಂದು ಶಲ್ಯನುರಮಂ ಬಿರಿಯೆಚ್ಚು ಕೃಪರಂ ವಿರಥರ್ಮಾಡಿ ನಡುವಗಲಿೞಿವಿನಂ ಕಾದಿ ಬೞಲ್ದು ಕುದುರೆಗಳಂ ನೀರೊಳಿಕ್ಕಲೆಂದು ದೇವಖಾತಮೆಂಬ ಮಡುವಿಂಗೆ ಬರ್ಪುದುಮಿತ್ತ ದುರ್ಯೋಧನಂ ದ್ರೋಣರಲ್ಲಿಗೆ ವಂದು-
ವಚನ:ಪದವಿಭಾಗ-ಅರ್ಥ:ಅಂತು ಮಾಱಾಂತ ಮಾರ್ಪಡೆಯೆಲ್ಲವಂ ಜವನ ಒಕ್ಕಲಿಕ್ಕಿ (ಹಾಗೆ ಎದುರಿಸಿದ ಪ್ರತಿ ಸೈನ್ಯವೆಲ್ಲವನ್ನೂ ಯಮನ ಒಕ್ಕಲವರನ್ನಾಗಿ/ ಲೋಕನಿವಾಸಿಗಳನ್ನಾಗಿ ಮಾಡಿದನು) ತನ್ನೊಳ್ ಪೋಗದೆ ಪೆಣೆದ ಬಾಹ್ಲೀಕ ಸೋಮದತ್ತ ಭೂರಿಶ್ರವರನು ಆನೆ ಮೆಟ್ಟಿದ ಕುಳುಂಪೆಯ ನೀರಂತೆ (ಆನೆಯು ತುಳಿದ ಕುಂಟೆಯ ನೀರಿನಂತೆ) ದೆಸೆದೆಸೆಗೆ ಸೂಸುವನ್ನೆಗಂ ಎೞ್ಬಟ್ಟಿ (ಚೆಲ್ಲುವವರೆಗೆ ಎಬ್ಬಿಸಿ ಓಡಿಸಿದನು) ಕಾಂಭೋಜ ಸುದಕ್ಷಿಣ ಜಯತ್ಸೇನರೆಂಬರ್ ಎಯ್ತರೆ ಮೂವರ ಅಕ್ಷೋಹಿಣೀ ಪತಿಗಳ್ವೆರಸು ನಾಲ್ಸಾಸಿರ್ವರ್ ಮಕುಟವರ್ಧನರಂ ಕೊಂದು (ಮೂರು ಅಕ್ಷೋಹಿಣೀಪತಿಗಳನ್ನೂ ಕೂಡಿಕೊಂಡು ಬರಲು ನಾಲ್ಕು ಸಾವಿರ ರಾಜರನ್ನು ಕೊಂದು) ಶಲ್ಯನ ಉರಮಂ ಬಿರಿಯೆಚ್ಚು (ಲ್ಯನ ಎದೆಯನ್ನು ಬಿರಿಯುವ ಹಾಗೆ ಹೊಡೆದು) ಕೃಪರಂ ವಿರಥರ್ಮಾಡಿ ನಡುವಗಲ ಇೞಿವಿನಂ ಕಾದಿ (ಕೃಪರನ್ನು ರಥವಿಲ್ಲದವರಂತೆ ಮಾಡಿ ನಡುಹಗಲು ಇಳಿಯುವವರೆಗೂ ಕಾದಿ) ಬೞಲ್ದು ಕುದುರೆಗಳಂ ನೀರೊಳ್ ಇಕ್ಕಲೆಂದು (ಕುದುರೆಯನ್ನು ನೀರಿಗೆ ಬಿಡಬೇಕೆಂದು) ದೇವಖಾತಮೆಂಬ ಮಡುವಿಂಗೆ ಬರ್ಪುದುಂ (ದೇವಖಾತವೆಂಬ ಮಡುವಿಗೆ ಬಂದನು. ಹಾಗೆ ಬಂದಾಗ) ಇತ್ತ ದುರ್ಯೋಧನಂ ದ್ರೋಣರಲ್ಲಿಗೆ ವಂದು (ಆಗ ದುರ್ಯೋಧನನು ದ್ರೋಣನಲ್ಲಿಗೆ ಬಂದನು.)-
ವಚನ:ಅರ್ಥ:ಹಾಗೆ ಎದುರಿಸಿದ ಪ್ರತಿ ಸೈನ್ಯವೆಲ್ಲವನ್ನೂ ಯಮನ ಒಕ್ಕಲವರನ್ನಾಗಿ/ ಲೋಕನಿವಾಸಿಗಳನ್ನಾಗಿ ಮಾಡಿದನು. ಹೋಗದೆ ತನ್ನಲ್ಲಿಯೆ ಹೆಣೆದುಕೊಂಡ ಬಾಹ್ಲೀಕ ಸೋಮದತ್ತ ಭೂರಿಶ್ರವರನ್ನು ಆನೆಯು ತುಳಿದ ಕುಂಟೆಯ ನೀರಿನಂತೆ ದಿಕ್ಕು ದಿಕ್ಕಿಗೂ ಚೆಲ್ಲುವವರೆಗೆ ಎಬ್ಬಿಸಿ ಓಡಿಸಿದನು. ಕಾಂಭೋಜ, ಸುದಕ್ಷಿಣ, ಜಯತ್ಸೇನರೆಂಬುವರು ಮೂರು ಅಕ್ಷೋಹಿಣೀಪತಿಗಳನ್ನೂ ಕೂಡಿಕೊಂಡು ಬರಲು ನಾಲ್ಕು ಸಾವಿರ ರಾಜರನ್ನು ಕೊಂದು ಶಲ್ಯನ ಎದೆಯನ್ನು ಬಿರಿಯುವ ಹಾಗೆ ಹೊಡೆದು ಕೃಪರನ್ನು ರಥವಿಲ್ಲದವರಂತೆ ಮಾಡಿ ನಡುಹಗಲು ಇಳಿಯುವವರೆಗೂ ಕಾದಿ/ ಯುದ್ಧಮಾಡಿ, ಬಳಲಿ ಕುದುರೆಯನ್ನು ನೀರಿಗೆ ಬಿಡಬೇಕೆಂದು ದೇವಖಾತವೆಂಬ ಮಡುವಿಗೆ ಬಂದನು. ಆಗ ದುರ್ಯೋಧನನು ದ್ರೋಣನಲ್ಲಿಗೆ ಬಂದನು.
ಚಂ|| ಅೞಿದುದು ಚಾತುರಂಗ ಬಲಮಳ್ಕುಱದಾಂತ ಮಹಾರಥರ್ಕಳುಂ
ಕೞಕುೞಮಾದುದೊಡ್ಡಣಮಣಂ ತಲೆದೋಱಲೆ ಗಂಡರಿಲ್ಲ ತೊ|
ತ್ತೞದುೞಿದಪ್ಪನಿನ್ನಿನಿಸು ಬೇಗದೆ ಸೈಂಧವನಂ ನೆಗೞ್ತೆಯಂ
ಗೞಿಯಿಸಿಕೊಳ್ವೊಡಿನ್ನಿನಿಸು ನಿಂದಿಱಿಯಿಂ ತಱಿಸಂದು ಪಾರ್ಥನೊಳ್|| ೧೩೭ ||
ಪದ್ಯ-೧೩೭:ಪದವಿಭಾಗ-ಅರ್ಥ:ಅೞಿದುದು ಚಾತುರಂಗ ಬಲಮ್ ಅಳ್ಕುಱದೆ ಆಂತ ಮಹಾರಥರ್ಕಳುಂ ಕೞಕುೞಮಾದುದು (ಚತುರಂಗಬಲವೂ ನಾಶವಾಯಿತು. ಹೆದರದೆ ಪ್ರತಿಭಟಿಸಿದ ಮಹಾರಥರುಗಳೂ ಚೆಲ್ಲಾಪಿಲ್ಲಿಯಾದರು.) ಒಡ್ಡಣಮ್ ಅಣಂ ತಲೆದೋಱಲೆ ಗಂಡರಿಲ್ಲ (ಸೈನ್ಯವು ಸ್ವಲ್ಪವಾದರೂ ಎದುರಿಸಲು ಶೂರರಾದವರಾರೂ ಇಲ್ಲ.) ತೊತ್ತೞದು (ತೊತ್ತುೞದು - ಚೆನ್ನಾಗಿ ತುಳಿದು) ಉೞಿದಪ್ಪನು ಇನ್ನು ಇನಿಸುಬೇಗದೆ (ಸ್ವಲ್ಪ ಕಾಲದಲ್ಲಿಯೇ) ಸೈಂಧವನಂ (ಸ್ವಲ್ಪ ಕಾಲದಲ್ಲಿಯೇ ಸೈಂಧವನನ್ನು ತುಳಿದುಹಾಕುತ್ತಾನೆ.) ನೆಗೞ್ತೆಯಂ ಗೞಿಯಿಸಿಕೊಳ್ವೊಡೆ (ಕೀರ್ತಿಯನ್ನು ಪಡೆಯಲು) ಇನ್ನೂ ಇನಿಸು ನಿಂದು ಇಱಿಯಿಂ ತಱಿಸಂದು (ಸ್ಥಿರವಾಗಿ ನಿಂತು) ಪಾರ್ಥನೊಳ್ ( ಕೀರ್ತಿಯನ್ನು ಪಡೆಯಬೇಕಾದರೆ ಸ್ವಲ್ಪ ಸ್ಥಿರವಾಗಿ ನಿಂತು ಅರ್ಜುನನೊಡನೆ ಯುದ್ಧಮಾಡಿ ಎಂದನು.)
ಪದ್ಯ-೧೩೭:ಅರ್ಥ: ಚತುರಂಗಬಲವೂ ಅಳಿಯಿತು/ ನಾಶವಾಯಿತು. ಹೆದರದೆ ಪ್ರತಿಭಟಿಸಿದ ಮಹಾರಥರುಗಳೂ ಚೆಲ್ಲಾಪಿಲ್ಲಿಯಾದರು. ಸೈನ್ಯವು ಸ್ವಲ್ಪವಾದರೂ ಎದುರಿಸಲು ಶೂರರಾದವರಾರೂ ಇಲ್ಲ. ಸ್ವಲ್ಪ ಕಾಲದಲ್ಲಿಯೇ ಸೈಂಧವನನ್ನು ತುಳಿದುಹಾಕುತ್ತಾನೆ. ಕೀರ್ತಿಯನ್ನು ಪಡೆಯಬೇಕಾದರೆ ಸ್ವಲ್ಪ ಸ್ಥಿರವಾಗಿ ನಿಂತು ಅರ್ಜುನನೊಡನೆ ಯುದ್ಧಮಾಡಿ ಎಂದನು.
ವ|| ಎಂಬುದುಂ ದ್ರೋಣಾಚಾರ‍್ಯಂ ಮುಗುಳ್ನಗೆ ನಕ್ಕು ವಿಕ್ರಮಾರ್ಜುನನನಿಳಿಸಿ ನುಡಿವ ನಿನ್ನೆಣಗೋಣಂಗಳುಮೆಕ್ಕಸಕ್ಕತನಂಗಳು ಮೆತ್ತವೋದುವು-
ವಚನ:ಪದವಿಭಾಗ-ಅರ್ಥ: ಎಂಬುದುಂ ದ್ರೋಣಾಚಾರ್ಯಂ ಮುಗುಳ್ನಗೆ ನಕ್ಕು ವಿಕ್ರಮಾರ್ಜುನನಂ ಇಳಿಸಿ ನುಡಿವ (ಅರ್ಜುನನನ್ನು ಅಲ್ಪನೆಂದು ತಿರಸ್ಕರಿಸಿ ಮಾತನಾಡುವ)ನಿನ್ನ ಎಣಗೋಣಂಗಳುಂ (ವಕ್ರವಾದ ಅಹಂಕಾರದ ಮಾತುಗಳೂ) ಎಕ್ಕಸಕ್ಕತನಂಗಳುಂ ಎತ್ತವೋದುವು (ನಿಂದೆ ಮತ್ತು ಪರಿಹಾಸದ ಮಾತುಗಳೂ ಈಗೆಲ್ಲಿಗೆ ಹೋದುವು? ಎಂದರು )-
ವಚನ:ಅರ್ಥ:ದ್ರೋಣಾಚಾರ್ಯನು ಮುಗುಳ್ನಗೆ ನಕ್ಕು ವಿಕ್ರಮಾರ್ಜುನನನ್ನು/ ಅರ್ಜುನನನ್ನು ಅಲ್ಪನೆಂದು ತಿರಸ್ಕರಿಸಿ ಮಾತನಾಡುವ ವಕ್ರವಾದ ಅಹಂಕಾರದ ಮಾತುಗಳೂ, ನಿಂದೆ ಮತ್ತು ಪರಿಹಾಸದ ಮಾತುಗಳೂ ಈಗೆಲ್ಲಿಗೆ ಹೋದುವು ಎಂದರು; -
ಚಂ|| ನಿನಗರಸಾಳ್ತನಂ ನುಡಿವ ಬೀರರ ಬೀರದಳುರ್ಕೆ ವಿಕ್ರಮಾ
ರ್ಜುನನೊಳದೇಕೆ ಸಲ್ಲದೆನಗಾತನಸಾಧ್ಯನವಧ್ಯನಾನುಮೀ|
ಮೊನೆಯೊಳೆ ನಿಂದು ಕಾದಿದಪೆನನ್ನೆಗಮೆನ್ನ ವರೂಥ ಸೂತ ಕೇ
ತನ ಕವಚಂಗಳಿಂ ನೆರೆದು ತಳ್ತಿಱಿ ನೀಂ ಜಗದೇಕಮಲ್ಲನೊಳ್|| ೧೩೮
ಪದ್ಯ-೧೩೮:ಪದವಿಭಾಗ-ಅರ್ಥ: ನಿನಗೆ ಅರಸ ಆಳ್ತನಂ ನುಡಿವ (ಅರಸನೇ ನಿನಗೆ ತಮ್ಮ ಪರಾಕ್ರಮವನ್ನು ಹೇಳಿಕೊಳ್ಳವ) ಬೀರರ ಬೀರದ ಅಳುರ್ಕೆ (ವೀರರ ಶೌರ್ಯದ ಆಧಿಕ್ಯವು) ವಿಕ್ರಮಾರ್ಜುನನೊಳು ಅದೇಕೆ ಸಲ್ಲದು. (ವಿಕ್ರಮಾರ್ಜುನನಲ್ಲಿ ಅದೇಕೆ ಸಲ್ಲುವುದಿಲ್ಲ.) ಎನಗೆ ಆತನು ಅಸಾಧ್ಯನು ಅವಧ್ಯನು. (ನನಗೆ ಅವನು ಗೆಲ್ಲುವುದಕ್ಕೆ ಅಸಾಧ್ಯನಾದವನು.) ಆನುಂ ಈ ಮೊನೆಯೊಳೆ ನಿಂದು ಕಾದಿದಪೆನು (ನಾನೂ ಈ ಯುದ್ಧಮುಖದಲ್ಲಿಯೇ ನಿಂತು ಕಾದುತ್ತೇನೆ.) ಅನ್ನಗಂ ಎನ್ನ ವರೂಥ ಸೂತ ಕೇತನ ಕವಚಂಗಳಿಂ ನೆರೆದು (ಅಲ್ಲಿಯವರೆಗೆ ನೀನು ನನ್ನ ತೇರು, ಸಾರಥಿ, ಧ್ವಜ ಕವಚಗಳಿಂದ ಕೂಡಿಕೊಂಡು) ತಳ್ತಿಱಿ- ತಳ್ತು ಇರಿ ನೀಂ ಜಗದೇಕಮಲ್ಲನೊಳ್ (ನೀನು ಜಗದೇಕಮಲ್ಲನಲ್ಲಿ ಸೆಣಸಿ ಯುದ್ಧಮಾಡು. ಎಂದನು ದ್ರೋಣ)
ಪದ್ಯ-೧೩೮:ಅರ್ಥ: ಅರಸನೇ ನಿನಗೆ ತಮ್ಮ ಪರಾಕ್ರಮವನ್ನು ಹೇಳಿಕೊಳ್ಳವ ವೀರರ ಶೌರ್ಯದ ಆಧಿಕ್ಯವು ವಿಕ್ರಮಾರ್ಜುನನಲ್ಲಿ ಅದೇಕೆ ಸಲ್ಲುವುದಿಲ್ಲ. ನನಗೆ ಅವನು ಗೆಲ್ಲುವುದಕ್ಕೆ ಅಸಾಧ್ಯನಾದವನು. ಕೊಲ್ಲಲಾಗದವನು. ನಾನೂ ಈ ಯುದ್ಧಮುಖದಲ್ಲಿಯೇ ನಿಂತು ಕಾದುತ್ತೇನೆ. ಅಲ್ಲಿಯವರೆಗೆ ನೀನು ನನ್ನ ತೇರು, ಸಾರಥಿ, ಧ್ವಜ ಕವಚಗಳಿಂದ ಕೂಡಿಕೊಂಡು ನೀನು ಜಗದೇಕಮಲ್ಲನಲ್ಲಿ ಸೆಣಸಿ ಯುದ್ಧಮಾಡು, ಎಂದನು ದ್ರೋಣ.
ವ|| ಎಂಬುದುಂ ಸುಯೋಧನನೇನಾದೊಡೇನಾದುದೆನ್ನ ಪಗೆಯ ನಾನೇ ಕೊಲ್ವೆನೆಂದಭೇದ್ಯ ಕವಚಮಂ ತೊಟ್ಟು ದಿವ್ಯಶರಾಸನ ಶರಂಗಳಂ ಕೊಂಡು ಕಳಶ ಕೇತನ ವರೂಥನಾಗಿ ಪೋಗಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಸುಯೋಧನನು ಏನಾದೊಡೇನು (ಎನ್ನಲು ದುರ್ಯೋಧನನು, ಏನಾದರೇನಾಯಿತು,) ಆದುದು ಎನ್ನ ಪಗೆಯ ನಾನೇ ಕೊಲ್ವೆನು ಎಂದು ಅಭೇದ್ಯ ಕವಚಮಂ ತೊಟ್ಟು (ನನ್ನ ಶತ್ರುವನ್ನು ನಾನೇ ಕೊಲ್ಲುತ್ತೇನೆ ಎಂದು ಒಡೆಯಲಾಗದ ಕವಚವನ್ನು ತೊಟ್ಟು) ದಿವ್ಯಶರಾಸನ ಶರಂಗಳಂ ಕೊಂಡು (ಶ್ರೇಷ್ಠವಾದ ಬಿಲ್ಲುಬಾಣಗಳನ್ನು ತೆಗೆದುಕೊಂಡು) ಕಳಶ ಕೇತನ ವರೂಥನಾಗಿ ಪೋಗಿ (ಕಳಶಧ್ವಜವುಳ್ಳ ರಥದಿಂದ ಕೂಡಿಕೊಂಡು ಹೋದನು.)-
ವಚನ:ಅರ್ಥ:ಎನ್ನಲು ದುರ್ಯೋಧನನು, ಏನಾದರೇನಾಯಿತು, ನನ್ನ ಶತ್ರುವನ್ನು ನಾನೇ ಕೊಲ್ಲುತ್ತೇನೆ ಎಂದು ಒಡೆಯಲಾಗದ ಕವಚವನ್ನು ತೊಟ್ಟು ಶ್ರೇಷ್ಠವಾದ ಬಿಲ್ಲುಬಾಣಗಳನ್ನು ತೆಗೆದುಕೊಂಡು ಕಳಶಧ್ವಜವುಳ್ಳ ರಥದಿಂದ ಕೂಡಿಕೊಂಡು ಹೋದನು.
ಚಂ|| ತಡೆಯದೆ ರಾಜರಾಜನಿದಿರಂ ಬರೆ ಭೋರ್ಗರೆದೆಚ್ಚೊಡಂಬುಗಳ್
ನಡದೆ ಸಿಡಿಲ್ವುದುಂ ಕರತಳದ್ವಯಮಂ ಬಿರಿಯೆಚ್ಚು ಕೆಯ್ವುವಂ|
ಪಿಡಿವದಟೆಲ್ಲಮಂ ಕಿಡಿಸಿ ತಾಂ ಕೊಲಲೊಲ್ಲನೆ ಭೀಮನಾತನಂ
ಮಡಿಪುವೆನೆಂದ ಪೂಣ್ಕೆ ಪುಸಿಯಾದಪುದೆಂದಮರೇಂದ್ರನಂದನಂ|| ೧೩೯ ||
ಪದ್ಯ-೧೩೯:ಪದವಿಭಾಗ-ಅರ್ಥ:ತಡೆಯದೆ ರಾಜರಾಜನು ಇದಿರಂ ಬರೆ (ತಡಮಾಡದೆ ದುರ್ಯೋಧನನು ಅರ್ಜುನನ ಎದುರಾಗಿ ಬರಲು) ಭೋರ್ಗರೆದು ಎಚ್ಚೊಡೆ ಅಂಬುಗಳ್ ನಡದೆ ಸಿಡಿಲ್ವುದುಂ (ಭೋರ್ಗರೆದು ಅರ್ಜುನನು ಬಾಣಪ್ರಯೋಗ ಮಾಡಲು ಬಾಣಗಳು ನಾಟಿಕೊಳ್ಳದೆ ಸಿಡಿದುವು.) ಕರತಳ ದ್ವಯಮಂ ಬಿರಿಯೆಚ್ಚು ಕೆಯ್ವುವಂ ಪಿಡಿವ ಅದಟೆಲ್ಲಮಂ ಕಿಡಿಸಿ (ಆಗ ಅರ್ಜುನನು ಅವನ ಎರಡು ಹಸ್ತಗಳನ್ನೂ ಬಿರಿದುಹೋಗುವ ಹಾಗೆ ಹೊಡೆದು ಆಯುಧವನ್ನು ಹಿಡಿಯುವ ಶಕ್ತಿಯನ್ನೂ ಕೆಡಿಸಿ-) ತಾಂ ಕೊಲಲು ಒಲ್ಲನೆ (ತಾನು ಆತನನ್ನು ಕೊಲ್ಲಲು ಒಪ್ಪೆನು ಎಂದು) ಭೀಮನು ಆತನಂ ಮಡಿಪುವೆಂ ಎಂದ ಪೂಣ್ಕೆ (ಭೀಮನು ಆತನನ್ನು ಕೊಲ್ಲುವೆನೆಂದು ಮಾಡಿದ ಪ್ರತಿಜ್ಞೆಯು) ಪುಸಿಯಾದಪುದೆಂದು ಅಮರೇಂದ್ರನಂದನಂ (ಹುಸಿಯಾಗುವುದೆಂದು ಅರ್ಜುನನು ಯೋಚಿಸಿದನು.)
ಪದ್ಯ-೧೩೯:ಅರ್ಥ:ತಡಮಾಡದೆ ದುರ್ಯೋಧನನು ಅರ್ಜುನನ ಎದುರಾಗಿ ಬರಲು, ಭೋರ್ಗರೆದು ಅರ್ಜುನನು ಬಾಣಪ್ರಯೋಗ ಮಾಡಲು ಬಾಣಗಳು ನಾಟಿಕೊಳ್ಳದೆ ಸಿಡಿದುವು. ಆಗ ಅರ್ಜುನನು ಅವನ ಎರಡು ಹಸ್ತಗಳನ್ನೂ ಬಿರಿದುಹೋಗುವ ಹಾಗೆ ಹೊಡೆದು ಆಯುಧವನ್ನು ಹಿಡಿಯುವ ಶಕ್ತಿಯನ್ನೂ ಕೆಡಿಸಿದನು. ತಾನು ಆತನನ್ನು ಕೊಲ್ಲಲು ಒಪ್ಪೆನು ಎಂದು, ಭೀಮನು ಆತನನ್ನು ಕೊಲ್ಲುವೆನೆಂದು ಮಾಡಿದ ಪ್ರತಿಜ್ಞೆಯು ಹುಸಿಯಾಗುವುದೆಂದು ಅರ್ಜುನನು ಯೋಚಿಸಿದನು.
ವ|| ಅನ್ನೆಗಮಿತ್ತ ಧರ್ಮಪುತ್ರನಮೋಘಾಸ್ತ್ರ ಧನಂಜಯನಂ ಕೆಯ್ಕೊಳಲಟ್ಟಿದೊಡೆ ಕೌರವಬಳ ಜಳನಿಯ ನಡುವನುತ್ತರಿಸಿ ಬರ್ಪ ಸಾತ್ಯಕಿಯಂ ಭೂರಿಶ್ರವನೆಡೆಗೊಂಡಾಂತು-
ವಚನ:ಪದವಿಭಾಗ-ಅರ್ಥ:ಅನ್ನೆಗಂ ಇತ್ತ ಧರ್ಮಪುತ್ರನ ಅಮೋಘಾಸ್ತ್ರ ಧನಂಜಯನಂ ಕೆಯ್ಕೊಳಲ್ ಅಟ್ಟಿದೊಡೆ (ಈ ಕಡೆ ಧರ್ಮರಾಯನು ಅರ್ಜುನನ ರಕ್ಷಣೆಗಾಗಿ ಸಾತ್ಯಕಿಯನ್ನು ಕಳುಹಿಸಲು) ಕೌರವಬಳ ಜಳನಿಯ ನಡುವನು ಉತ್ತರಿಸಿ ಬರ್ಪ ಸಾತ್ಯಕಿಯಂ (ಕೌರವಸೇನಾಸಮುದ್ರದ ಮಧ್ಯಭಾಗವನ್ನು ದಾಟಿ ಬರುತ್ತಿದ್ದ ಸಾತ್ಯಕಿಯನ್ನು) ಭೂರಿಶ್ರವನು ಎಡೆಗೊಂಡು ಆಂತು (ಭೂರಿಶ್ರವನು ಅಡ್ಡಗಟ್ಟಿ ಎದುರಿಸಿ) -
ವಚನ:ಅರ್ಥ:ಅಷ್ಟರಲ್ಲಿ ಈ ಕಡೆ ಧರ್ಮರಾಯನು ಅರ್ಜುನನ ರಕ್ಷಣೆಗಾಗಿ ಸಾತ್ಯಕಿಯನ್ನು ಕಳುಹಿಸಲು ಕೌರವಸೇನಾಸಮುದ್ರದ ಮಧ್ಯಭಾಗವನ್ನು ದಾಟಿ ಬರುತ್ತಿದ್ದ ಸಾತ್ಯಕಿಯನ್ನು ಭೂರಿಶ್ರವನು ಅಡ್ಡಗಟ್ಟಿ ಎದುರಿಸಿದನು. ಆಗ-
ಉ|| ಪೋಗದಿರೆಂದು ಮೂದಲಿಸೆ ಸಾತ್ಯಕಿ ತೀವ್ರ ಶರಾಳಿಯಿಂದಗು
ರ್ವಾಗೆ ವರೂಥಮಂ ಕಡಿದೊಡುರ್ಚಿದ ಬಾಳ್ವೆರಸಾತನೆಯ್ದೆವಂ|
ದಾಗಳಿದಿರ್ಚೆ ತಾನುಮಸಿಯಂ ಸೆರಗಿಲ್ಲದೆ ಕಿೞ್ತು ಪಾಯ್ದು ಭೂ
ಭಾಗ ನಭೋವಿಭಾಗವರಮಳ್ಕುರೆ ತಳ್ತಿಱಿದರ್ ವಿರೋಧಿಗಳ್|| ೧೪೦
ಪದ್ಯ-೧೪೦:ಪದವಿಭಾಗ-ಅರ್ಥ:ಪೋಗದಿರೆಂದು ಮೂದಲಿಸೆ (ಹೋಗಬೇಡ ಎಂದು ಮೂದಲಿಸಲು) ಸಾತ್ಯಕಿ ತೀವ್ರ ಶರಾಳಿಯಿಂದ ಅಗುರ್ವ್ ಅಗೆ (ಸಾತ್ಯಕಿಯು ಹರಿತವಾದ ಬಾಣ ಸಮೂಹದಿಂದ ಭಯಂಕರವಾಗಿ) ವರೂಥಮಂ ಕಡಿದೊಡೆ ಉರ್ಚಿದ ಬಾಳ್ವೆರಸು ಆತನ ಎಯ್ದೆವಂದು ಆಗಳ್ ಇದಿರ್ಚೆ(ಸಾತ್ಯಕಿಯು ಹರಿತವಾದ ಬಾಣ ಸಮೂಹದಿಂದ ಭಯಂಕರವಾಗಿ ಅವನ ತೇರನ್ನು ಕತ್ತರಿಸಲು ಹಿರಿದ ಕತ್ತಿಯೊಡನೆ ಆತನು ಸಮೀಪಕ್ಕೆ ಬಂದು ಎದುರಿಸಿ), ತಾನುಮ್ ಅಸಿಯಂ ಸೆರಗಿಲ್ಲದೆ ಕಿೞ್ತು ಪಾಯ್ದು ( ಆಗ ತಾನೂ ಭಯವಿಲ್ಲದೆ ಕತ್ತಿಯನ್ನು ಹೊರಸೆಳೆದು ನುಗ್ಗಿ) ಭೂಭಾಗ ನಭೋವಿಭಾಗವರಂ, ಅಳ್ಕುರೆ ತಳ್ತಿಱಿದರ್ - ತಳ್ತು ಇರಿದರ್ ವಿರೋಧಿಗಳ್ (ಭಯಂವುಂಟಾಗುವಂತೆ ವಿರೋಧಿಗಳು ಸಂಧಿಸಿ ಯುದ್ಧಮಾಡಿದನು.)
ಪದ್ಯ-೧೪೦:ಅರ್ಥ:ಭೂರಿಶ್ರವನು, ಹೋಗಬೇಡ ಎಂದು ಮೂದಲಿಸಲು ಸಾತ್ಯಕಿಯು ಹರಿತವಾದ ಬಾಣ ಸಮೂಹದಿಂದ ಭಯಂಕರವಾಗಿ ಅವನ ತೇರನ್ನು ಕತ್ತರಿಸಲು ಹಿರಿದ ಕತ್ತಿಯೊಡನೆ ಆತನು ಸಮೀಪಕ್ಕೆ ಬಂದು ಎದುರಿಸಿದನು. ಆಗ ತಾನೂ ಭಯವಿಲ್ಲದೆ ಕತ್ತಿಯನ್ನು ಹೊರಸೆಳೆದು ನುಗ್ಗಿ ಭೂಮ್ಯಾಕಾಶಗಳವರೆಗೆ ಭಯಂವುಂಟಾಗುವಂತೆ ವಿರೋಧಿಗಳು ಸಂಧಿಸಿ ಯುದ್ಧಮಾಡಿದನು.
ವ|| ಅಂತಿರ್ವರುಮೋರೊರ್ವರೊಳ್ ಬೀರಮುಮಂ ಬಿಂಕಮುಮಂ ಮೆರೆದು ದಾಸವಣದಂಡೆಯಂ ತೋರದಿಂಡೆಯಾಡಿದಂತೆ ದೆಸೆ ದೆಸೆಗೆ ಕೆದಱಿದ ಕಂಡದಿಂಡೆಗಳುಂ ನಾರಂಗ ಸಕಳವಟ್ಟೆಯ ಪೞಯಿಗೆಗಳಂತೆ ನಭಕ್ಕೆ ಮಿಳಿರ್ದು ಮಿಳ್ಳಿಸಿ ಪಾಱುವ ನೆತ್ತರ ಸುಟ್ಟುರೆಗಳುಮತಿ ಭಯಂಕರಾಕಾರಮಾಗೆ ಕಾದಿ ಬಸವೞಿದ ಸಾತ್ಯಕಿಯಂ ಭೂರಿಶ್ರವನಶ್ರಮದೊಳ್ ನೆಲಕಿಕ್ಕಿ ಗಂಟಲಂ ಮೆಚ್ಚಿ ತಲೆಯನರಿವಾಗಳ್ ಸಾತ್ಯಕಿ ಭೂಮಿಯುದ್ಧ ಪ್ರವೀಣನಪ್ಪುದಱಂದಾತನ ಬಾಳ ಬಾಯೊಳ್ ಚಕ್ರಾಕೃತಿಯೊಳ್ ತಲೆಯಂ ತಿರುಪುತ್ತುಮಿರ್ದಾ ಗಳದಂ ಮುರಾಂತಕಂ ಕಂಡು ವಿದ್ವಿಷ್ಟ ವಿದ್ರಾವಣಂಗೆ ತೋಱದೊಡೆ-
ವಚನ:ಪದವಿಭಾಗ-ಅರ್ಥ:ಅಂತು ಇರ್ವರುಂ ಓರೊರ್ವರೊಳ್ ಬೀರಮುಮಂ ಬಿಂಕಮುಮಂ ಮೆರೆದು (ಹಾಗೆ ಇಬ್ಬರೂ ಒಬ್ಬೊಬ್ಬರಲ್ಲಿ ಶೌರ್ಯವನ್ನೂ ಗರ್ವವನ್ನೂ ತೋರಿ,) ದಾಸವಣದಂಡೆಯಂ ತೋರದ ಇಂಡೆಯಾಡಿದಂತೆ (ದಾಸವಾಳದ ಹೂವಿನ ಹಾರವನ್ನು ದೊಡ್ಡದಾಗಿ ರಾಶಿಮಾಡಿದಂತೆ) ದೆಸೆ ದೆಸೆಗೆ ಕೆದಱಿದ ಕಂಡ ದಿಂಡೆಗಳುಂ (ದಿಕ್ಕು ದಿಕ್ಕಿಗೆ ಚೆದುರಿ ಮಾಂಸದ ಉಂಡೆಗಳೂ), ನಾರಂಗ ಸಕಳವಟ್ಟೆಯ ಪೞಯಿಗೆಗಳಂತೆ (ಕಿತ್ತಳೆಯ ಮತ್ತು ಬಣ್ಣ ಬಣ್ಣದ ಬಟ್ಟೆಯ ಬಾವುಟಗಳಂತೆ,) ನಭಕ್ಕೆ ಮಿಳಿರ್ದು ಮಿಳ್ಳಿಸಿ ಪಾಱುವ ನೆತ್ತರ ಸುಟ್ಟುರೆಗಳುಂ (ಗಗನಕ್ಕೆ ಅತ್ತಿತ್ತ ಚಲಿಸುವ ಮತ್ತು ಚಿಮ್ಮಿ ಹಾರುವ ರಕ್ತದ ಸುಂಟುರುಗಾಳಿಗಳೂ) ಅತಿ ಭಯಂಕರಾಕಾರಮಾಗೆ ಕಾದಿ ಬಸವೞಿದ ಸಾತ್ಯಕಿಯಂ (ಹಾಗೆ ಕಾದಾಡಿ ಶಕ್ತಿಗುಂದಿದ ಸಾತ್ಯಕಿಯನ್ನು) ಭೂರಿಶ್ರವನು ಅಶ್ರಮದೊಳ್ ನೆಲಕಿಕ್ಕಿ (ಭೂರಿಶ್ರವನು ಶ್ರಮವಿಲ್ಲದೆಯೇ ನೆಲಕ್ಕೆ ಬಡಿದು) ಗಂಟಲಂ ಮೆಚ್ಚಿ ತಲೆಯನು ಅರಿವಾಗಳ್ (ಗಂಟಲನ್ನು ಮೆಟ್ಟಿ ತಲೆಯನ್ನು ಕತ್ತರಿಸುವಾಗ) ಸಾತ್ಯಕಿ ಭೂಮಿಯುದ್ಧ ಪ್ರವೀಣನಪ್ಪುದಱಂದ ಆತನ ಬಾಳ ಬಾಯೊಳ್ (ಸಾತ್ಯಕಿಯು ಭೂಮಿಯುದ್ಧದಲ್ಲಿ ಪ್ರವೀಣನಾಗಿದ್ದುದರಿಂದ ಆತನ ಕತ್ತಿಯ ಬಾಯಲ್ಲಿ) ಚಕ್ರಾಕೃತಿಯೊಳ್ ತಲೆಯಂ ತಿರುಪುತ್ತುಮಿರ್ದು (ಚಕ್ರಾಕೃತಿಯಿಂದ ತಲೆಯನ್ನು ತಿರುಗಿಸುತ್ತಿದ್ದಾಗ) ಆಗಳು ಅದಂ ಮುರಾಂತಕಂ ಕಂಡು ವಿದ್ವಿಷ್ಟ ವಿದ್ರಾವಣಂಗೆ ತೋಱದೊಡೆ (ಕೃಷ್ಣನು ನೋಡಿ ವಿದ್ವಿಷ್ಟ ವಿದ್ರಾವಣನಾದ ಅರ್ಜುನನಿಗೆ ತೋರಿಸಿದನು; ತೋರಿಸಿದಾಗ-)-
ವಚನ:ಅರ್ಥ:ಹಾಗೆ ಇಬ್ಬರೂ ಒಬ್ಬೊಬ್ಬರಲ್ಲಿ ಶೌರ್ಯವನ್ನೂ ಗರ್ವವನ್ನೂ ತೋರಿ, ದಾಸವಾಳದ ಹೂವಿನ ಹಾರವನ್ನು ದೊಡ್ಡದಾಗಿ ರಾಶಿಮಾಡಿದಂತೆ ದಿಕ್ಕು ದಿಕ್ಕಿಗೆ ಚೆದುರಿ ಮಾಂಸದ ಉಂಡೆಗಳೂ ಕಿತ್ತಳೆಯ ಮತ್ತು ಬಣ್ಣ ಬಣ್ಣದ ಬಟ್ಟೆಯ ಬಾವುಟಗಳಂತೆ ಗಗನಕ್ಕೆ ಅತ್ತಿತ್ತ ಚಲಿಸುವ ಮತ್ತು ಚಿಮ್ಮಿ ಹಾರುವ ರಕ್ತದ ಸುಂಟುರುಗಾಳಿಗಳೂ ಅತಿ ಭಯಂಕರಾಕಾರದುವು. ಹಾಗೆ ಕಾದಾಡಿ ಶಕ್ತಿಗುಂದಿದ ಸಾತ್ಯಕಿಯನ್ನು ಭೂರಿಶ್ರವನು ಶ್ರಮವಿಲ್ಲದೆಯೇ ನೆಲಕ್ಕೆ ಬಡಿದು ಗಂಟಲನ್ನು ಮೆಟ್ಟಿ ತಲೆಯನ್ನು ಕತ್ತರಿಸುವಾಗ ಸಾತ್ಯಕಿಯು ಭೂಮಿಯುದ್ಧದಲ್ಲಿ ಪ್ರವೀಣನಾಗಿದ್ದುದರಿಂದ ಆತನ ಕತ್ತಿಯ ಬಾಯಲ್ಲಿ ಚಕ್ರಾಕೃತಿಯಿಂದ ತಲೆಯನ್ನು ತಿರುಗಿಸುತ್ತಿದ್ದಾಗ ಅದನ್ನು ಕೃಷ್ಣನು ನೋಡಿ ವಿದ್ವಿಷ್ಟ ವಿದ್ರಾವಣನಾದ ಅರ್ಜುನನಿಗೆ ತೋರಿಸಿದನು- ತೋರಿಸಿದಾಗ-
ಕಂ|| ನರನೆಚ್ಚೊಡೆ ಪಱಿದು ಕರಂ
ಕರವಾಳೊಡನಮರೆ ಕಾಸಿ ಬೆಚ್ಚಂತೆ ವಸುಂ|
ಧರೆಯೊಳ್ ಬಿೞ್ದಿರ್ದುದದೇಂ
ತಿರವೋ ಪೂಣಿಸಿದ ಮುಷ್ಟಿ ಭೂರಿಶ್ರವನಾ|| ೧೪೧ ||
ಪದ್ಯ-೦೦:ಪದವಿಭಾಗ-ಅರ್ಥ:ನರನು ಎಚ್ಚೊಡೆ ಪಱಿದು (ಅರ್ಜುನನು (ಭೂರಿಶ್ರವನನ್ನು) ಹೊಡೆಯಲು ಅವನ ಕೈ ಕತ್ತರಿಸಿ) ಕರಂ ಕರವಾಳೊಡನೆ ಅಮರೆ ಕಾಸಿ ಬೆಚ್ಚಂತೆ ವಸುಂಧರೆಯೊಳ್ ಬಿೞ್ದಿರ್ದುದು- ಬಿಳ್ದು ಇರ್ದುದು(ಕತ್ತಿಯೊಡನೆ ಕಾಯಿಸಿ ಬೆಸೆದ ಹಾಗೆ ಅಂಟಿಕೊಂಡಿದ್ದು ಭೂಮಿಯಲ್ಲಿ ಬಿದ್ದಿತ್ತು.) ಅದೇಂ ತಿರವೋ ಪೂಣಿಸಿದ ಮುಷ್ಟಿ ಭೂರಿಶ್ರವನಾ (ಪ್ರತಿಜ್ಞೆಮಾಡಿ ಹಿಡಿದ ಭೂರಿಶ್ರವನ ಮುಷ್ಟಿಯ ಎಷ್ಟು ಸ್ಥಿರವಾದುದೊ!)
ಪದ್ಯ-೦೦:ಅರ್ಥ: ೧೪೧. ಅರ್ಜುನನು (ಭೂರಿಶ್ರವನನ್ನು) ಹೊಡೆಯಲು ಅವನ ಕೈ ಕತ್ತರಿಸಿಹೋಗಿ ಕತ್ತಿಯೊಡನೆ ಕಾಯಿಸಿ ಬೆಸೆದ ಹಾಗೆ ಅಂಟಿಕೊಂಡಿದ್ದು ಭೂಮಿಯಲ್ಲಿ ಬಿದ್ದಿತು. ಪ್ರತಿಜ್ಞೆಮಾಡಿ ಹಿಡಿದ ಭೂರಿಶ್ರವನ ಮುಷ್ಟಿಯ ಎಷ್ಟು ಸ್ಥಿರವಾದುದೊ!
ವ|| ಆಗಳ್ ಸಾತ್ಯಕಿ ಮುಳಿಸಿನೊಳ್ ಕಣ್ಗಾಣದೆ ಭೂರಿಶ್ರವನ ತಲೆಯನರಿದು ತನ್ನೇಱಿಂಗೆ ತಾನೆ ಸಿಗ್ಗಾಗಿ ಪೋದನನ್ನೆಗಂ ಯಮನಂದನನ ಬೆಸದೊಳ್ ಫಲ್ಗುಣನಂ ಕೆಯ್ಕೊಳಲ್ ಬರ್ಪ ಮರುನ್ನಂದನಂಗಾ ದ್ರೋಣರಡ್ಡಂ ಬಂದೊಡೆ ಗುರುಗೆ ಗುರುದಕ್ಷಿಣೆ ಗುಡುವಂತವರ ರಥಮಂ ಶತಚೂರ್ಣಂ ಮಾಡಿ ಕಳಿಂಗರಾಜ ಗಜಘಟೆಗಳನೌಂಕಿ ಸೊರ್ಕುತ್ತುಂ ಬರೆ ದುಶ್ಶಾಸನಾದಿಗಳದಿರದಿದಿರಂ ಬಂದಾಂತೊಡೆ-
ವಚನ:ಪದವಿಭಾಗ-ಅರ್ಥ:ಆಗಳ್ ಸಾತ್ಯಕಿ ಮುಳಿಸಿನೊಳ್ ಕಣ್ಗಾಣದೆ ಭೂರಿಶ್ರವನ ತಲೆಯನು ಅರಿದು (ಆಗ ಸಾತ್ಯಕಿಯು ಕೋಪದಿಂದ ಕುರುಡನಾಗಿ ಭೂರಿಶ್ರವನ ತಲೆಯನ್ನು ಕತ್ತರಿಸಿ) ತನ್ನ ಏಱಿಂಗೆ ತಾನೆ ಸಿಗ್ಗಾಗಿ ಪೋದನು (ತನ್ನ ಯುದ್ಧಕಾರ್ಯಕ್ಕೆ ತಾನೆ ನಾಚಿಕೊಂಡು ಹೋದನು.) ಅನ್ನೆಗಂ ಯಮನಂದನನ ಬೆಸದೊಳ್ (ಅಷ್ಟರಲ್ಲಿ ಧರ್ಮರಾಜನ ಆಜ್ಞೆಯ ಪ್ರಕಾರ) ಫಲ್ಗುಣನಂ ಕೆಯ್ಕೊಳಲ್ (ಸಹಾಯಕನಾಗಿ) ಬರ್ಪ ಮರುನ್ನಂದನಂಗೆ ಆ ದ್ರೋಣರು ಅಡ್ಡಂ ಬಂದೊಡೆ (ಅಷ್ಟರಲ್ಲಿ ಧರ್ಮರಾಜನ ಆಜ್ಞೆಯ ಪ್ರಕಾರ ಅರ್ಜುನನಿಗೆ ಸಹಾಯಕನಾಗಿ ಬರುತ್ತಿದ್ದ ಭೀಮನಿಗೆ ದ್ರೋಣಾಚಾರ್ಯರು ಅಡ್ಡಲಾಗಿ ಬರಲು) ಗುರುಗೆ ಗುರುದಕ್ಷಿಣೆ ಗುಡುವಂತೆ ಅವರ ರಥಮಂ ಶತಚೂರ್ಣಂ ಮಾಡಿ (ಭೀಮನು ಗುರುವಿಗೆ ಗುರುದಕ್ಷಿಣೆಯನ್ನು ಕೊಡುವಂತೆ ಅವರ ತೇರನ್ನು ನೂರು ಚೂರುಗಳನ್ನಾಗಿ ಮಾಡಿ) ಕಳಿಂಗರಾಜ ಗಜಘಟೆಗಳನು ಔಂಕಿ ಸೊರ್ಕುತ್ತುಂ ಬರೆ (ಕಳಿಂಗರಾಜನ ಆನೆಯ ಸಮೂಹವನ್ನು ಒತ್ತಿ ಸೋಕುತ್ತ ಬರಲು) ದುಶ್ಶಾಸನಾದಿಗಳು ಅದಿರದೆ ಇದಿರಂ ಬಂದು ಆಂತೊಡೆ (ದುಶ್ಶಾಸನನೇ ಮೊದಲಾದವರು ಹೆದರದೆ ಎದುರಾಗಿ ಬಂದು ಪ್ರತಿಭಟಿಸಿದರು. ಪ್ರತಿಭಟಿಸಿದಾಗ)-
ವಚನ:ಅರ್ಥ:ಆಗ ಸಾತ್ಯಕಿಯು ಕೋಪದಿಂದ ಕುರುಡನಾಗಿ ಭೂರಿಶ್ರವನ ತಲೆಯನ್ನು ಕತ್ತರಿಸಿ, ತನ್ನ ಯುದ್ಧಕಾರ್ಯಕ್ಕೆ ತಾನೆ ನಾಚಿಕೊಂಡು ಹೋದನು. ಅಷ್ಟರಲ್ಲಿ ಧರ್ಮರಾಜನ ಆಜ್ಞೆಯ ಪ್ರಕಾರ ಅರ್ಜುನನಿಗೆ ಸಹಾಯಕನಾಗಿ ಬರುತ್ತಿದ್ದ ಭೀಮನಿಗೆ ದ್ರೋಣಾಚಾರ್ಯರು ಅಡ್ಡಲಾಗಿ ಬರಲು ಭೀಮನು ಗುರುವಿಗೆ ಗುರುದಕ್ಷಿಣೆಯನ್ನು ಕೊಡುವಂತೆ ಅವರ ತೇರನ್ನು ನೂರು ಚೂರುಗಳನ್ನಾಗಿ ಮಾಡಿ ಕಳಿಂಗರಾಜನ ಆನೆಯ ಸಮೂಹವನ್ನು ಒತ್ತಿ ಸೋಕುತ್ತ ಬರಲು ದುಶ್ಶಾಸನನೇ ಮೊದಲಾದವರು ಹೆದರದೆ ಎದುರಾಗಿ ಬಂದು ಪ್ರತಿಭಟಿಸಿದರು; ಪ್ರತಿಭಟಿಸಿದಾಗ- .
ಚಂ|| ನಿಡುವಗೆ ಸೈಪಿನಿಂದೆ ದೊರೆಕೊಂಡುದಿವರ್ ಗಜೆಗೊಂಡೆನಪ್ಪೊಡೀ
ಗಡೆ ಪರೆದಪ್ಪರೆಚ್ಚು ತವೆ ಕೊಲ್ವೆನಿವಂದಿರನೆಂದು ನಚ್ಚಿನ|
ಚ್ಚುಡಿವಿನಮೆಚ್ಚೊಡೆಯಿನೆಚ್ಚರುಣಾಂಬು ಕಲಂಕಿ ಪಾಯೆ ಮು
ನ್ನಡಿಯೊಳುರುಳ್ದರಂಧನೃಪನಂದನರಂದು ಮರುತ್ತನೂಜನಾ|| ೧೪೨||
ಪದ್ಯ-೧೪೨:ಪದವಿಭಾಗ-ಅರ್ಥ:ನಿಡುವಗೆ ಸೈಪಿನಿಂದೆ ದೊರೆಕೊಂಡುದು (ದೀರ್ಘಕಾಲದ ಶತ್ರುಗಳು ಅದೃಷ್ಟದಿಂದ ದೊರೆಕೊಂಡಿದ್ದಾರೆ/ ದೊರೆತಿದ್ದಾರೆ.) ಇವರ್ ಗಜೆಗೊಂಡೆನು ಅಪ್ಪೊಡೆ ಈಗಡೆ ಪರೆದಪ್ಪರು (ಗದೆಯನ್ನು ತೆಗೆದುಕೊಂಡರೆ ಇವರು ಈಗಲೇ ಚದುರಿ ಓಡಿಹೋಗುತ್ತಾರೆ) ಎಚ್ಚು ತವೆ ಕೊಲ್ವೆನು ಇವಂದಿರನು ಎಂದು (ಇವರನ್ನು/ ದುಶ್ಶಾಸನಾದಿಗಳನ್ನು ಬಿಲ್ಲಿನಿಂದಲೇ ಚೆನ್ನಾಗಿ ಹೊಡೆದು ಕೊಂದುಹಾಕುತ್ತೇನೆ.) ನಚ್ಚಿನ ಅಚ್ಚು ಉಡಿವಿನಂ ಎಚ್ಚೊಡೆಯಿಂ (ಎಂದು, ತನ್ನ ಆತ್ಮವಿಶ್ವಾಸದ ಮುದ್ರೆಯಿಂದ ಹೊಡೆಯಲು) ಎಚ್ಚ ಅರುಣಾಂಬು ಕಲಂಕಿ ಪಾಯೆ (ಆ ಹೊಡೆದ ಕಡೆಯ ಗಾಯದಿಂದ ಹೊರಟ ರಕ್ತವು ಕದಡಿ ಹಾಯಲು) ಮುನ್ನಡಿಯೊಳು (ಮುನ್ನ ಅಡಿ- ಪಾದದ ಮಂದೆ) ಉರುಳ್ದರು ಅಂಧನೃಪ ನಂದನರು, ಅಂದು ಮರುತ್ತನೂಜನಾ-ಭೀಮನ (ಅಂದು ಕುರುಡುದೊರೆಯಾದ ಧೃತರಾಷ್ಟ್ರನ ಮಕ್ಕಳು ಆ ವಾಯುಪುತ್ರನಾದ ಭೀಮನ ಕಾಲಿನ ಮುಂಭಾಗದಲ್ಲಿ ಉರುಳಿದರು.)
ಪದ್ಯ-೧೪೨:ಅರ್ಥ: ದೀರ್ಘಕಾಲದ ಶತ್ರುಗಳು ಅದೃಷ್ಟದಿಂದ ದೊರೆತಿದ್ದಾರೆ. ಗದೆಯನ್ನು ತೆಗೆದುಕೊಂಡರೆ ಇವರು ಈಗಲೇ ಚದುರಿ ಓಡಿಹೋಗುತ್ತಾರೆ. ಇವರನ್ನು ಬಿಲ್ಲಿನಿಂದಲೇ ಪೂರ್ಣವಾಗಿ ಹೊಡೆದು ಕೊಂದುಹಾಕುತ್ತೇನೆ. ಎಂದು ತನ್ನ ಆತ್ಮವಿಶ್ವಾಸದ ಮುದ್ರೆಯಿಂದ ಹೊಡೆಯಲು, ಆ ಹೊಡೆದ ಕಡೆಯ ಗಾಯದಿಂದ ಹೊರಟ ರಕ್ತವು ಕದಡಿ ಹಾಯಲು ಕುರುಡುದೊರೆಯಾದ ಧೃತರಾಷ್ಟ್ರನ ಮಕ್ಕಳು ಆ ವಾಯುಪುತ್ರನಾದ ಭೀಮನ ಕಾಲಿನ ಮುಂಭಾಗದಲ್ಲಿ ಅಂದು ಉರುಳಿದರು.
ವ|| ಅಂತು ದುರ್ಮುಖ ದುರ್ಮದ ದುರ್ಧರ್ಷಣರ್ ಮೊದಲಾಗೆ ಮೂವತ್ತು ಮೂವರಂ ಕೊಂದು ದುಶ್ಶಾಸನನಂ ವಿರಥನಂ ಮಾಡಿ ದುರ್ಯೋಧನನನೊಂದೆ ನಿಶಿತ ವಿಶಿಖ ಹತಿಯಿಂ ಸುರುಳ್ದು ಉರುಳ್ವಿನಂ ಎಚ್ಚು ಮೂರ್ಛಾಗತನಂ ಮಾಡಿ ಸಿಂಹನಾದದಿನಾರ್ದು ಮುಟ್ಟೆವರ್ಪಾಗಳಾಳ್ದನ ಸಾವಂ ನೋಡಲಾಱದೆ-
ವಚನ:ಪದವಿಭಾಗ-ಅರ್ಥ:ಹಾಗೆ ದುರ್ಮುಖ ದುರ್ಮದ ದುರ್ಧರ್ಷಣರ್ ಮೊದಲಾಗೆ ಮೂವತ್ತು ಮೂವರಂ ಕೊಂದು ದುಶ್ಶಾಸನನಂ ವಿರಥನಂ ಮಾಡಿ (ಮೂವತ್ತು ಮೂರು ಮಂದಿಯನ್ನೂ ಕೊಂದು ದುಶ್ಶಾಸನನನ್ನು ರಥವಿಲ್ಲದವನನ್ನಾಗಿ ಮಾಡಿ) ದುರ್ಯೋಧನನನು ಒಂದೆ ನಿಶಿತ ವಿಶಿಖ ಹತಿಯಿಂ ಸುರುಳ್ದು ಉರುಳ್ವಿನಂ ಎಚ್ಚು ಮೂರ್ಛಾಗತನಂ ಮಾಡಿ (ದುರ್ಯೋಧನನನ್ನು ಒಂದೇ ಹರಿತವಾದ ಬಾಣದ ಪಟ್ಟಿನಿಂದ ಮುರಿದುಕೊಂಡು ಉರುಳಿ ಬೀಳುವ ಹಾಗೆ ಹೊಡೆದು ಮೂರ್ಛಿತನನ್ನಾಗಿ ಮಾಡಿ) ಸಿಂಹನಾದದಿಂ ಆರ್ದು (ಸಿಂಹಧ್ವನಿಯಿಂದ ಗರ್ಜಿಸಿ) ಮುಟ್ಟೆವರ್ಪಾಗಳ್ ಆಳ್ದನ ಸಾವಂ ನೋಡಲಾಱದೆ (ಹತ್ತಿರಕ್ಕೆ ಬಂದಾಗ ತನ್ನನ್ನಾಳಿದ ಯಜಮಾನನ ಸಾವನ್ನು ನೋಡಲಾರದೆ-)-
ವಚನ:ಅರ್ಥ:ವ|| ಹಾಗೆ ದುರ್ಮುಖ, ದುರ್ಮದ, ದುರ್ಧರ್ಷಣರೇ ಮೊದಲಾದ ಮೂವತ್ತು ಮೂರು ಮಂದಿಯನ್ನೂ ಕೊಂದು ದುಶ್ಶಾಸನನನ್ನು ರಥವಿಲ್ಲದವನನ್ನಾಗಿ ಮಾಡಿ (ತೇರಿನಿಂದ ಉರುಳಿಸಿ) ದುರ್ಯೋಧನನನ್ನು ಒಂದೇ ಹರಿತವಾದ ಬಾಣದ ಪಟ್ಟಿನಿಂದ ಮುರಿದುಕೊಂಡು ಉರುಳಿ ಬೀಳುವ ಹಾಗೆ ಹೊಡೆದು ಮೂರ್ಛಿತನನ್ನಾಗಿ ಮಾಡಿ ಸಿಂಹಧ್ವನಿಯಿಂದ ಗರ್ಜಿಸಿ ಹತ್ತಿರಕ್ಕೆ ಬಂದಾಗ ತನ್ನನ್ನಾಳಿದ ಯಜಮಾನನ ಸಾವನ್ನು ನೋಡಲಾರದೆ-
ಮ|| ಎಡೆಗೊಂಡಂಕದ ಕರ್ಣನೆಯ್ದೆವರೆ ದಿವ್ಯಾಸ್ತ್ರಂಗಳಿಂದಂ ಸಿಡಿಲ್
ಪೊಡೆವಂತಪ್ಪಿನಮೆಚ್ಚುದಗ್ರರಥಮಂ ಮುಯ್ಯೇೞು ಸೂೞು ಕೋಪದಿಂ|
ಕಡಿಯಲ್ ಸಾರ್ದೊಡೞಲ್ದು ಸೂತಸುತನೊಂದುಗ್ರೇಷುವಿಂ ತಿಣ್ಣಮೆ
ಚ್ಚೊಡನಾರ್ದಂ ನಸುಮೂರ್ಛೆಹೋಗಿ ರಥದೊಳ್ ಭೀಮಂ ನರಲ್ವನ್ನೆಗಂ|| ೧೪೩ ||
ಪದ್ಯ-೧೪೩:ಪದವಿಭಾಗ-ಅರ್ಥ:ಎಡೆಗೊಂಡು ಅಂಕದ ಕರ್ಣನು ಎಯ್ದೆವರೆ (ಪ್ರಸಿದ್ಧನಾದ ಕರ್ಣನು ದುರ್ಯೋಧನ ಮತ್ತು ಭೀಮರ ಮಧ್ಯೆ ಪ್ರವೇಶಿಸಿ ಹತ್ತಿರ ಬರಲು) ದಿವ್ಯಾಸ್ತ್ರಂಗಳಿಂದಂ ಸಿಡಿಲ್ಪೊಡೆವಂತೆ ಅಪ್ಪಿನಂ ಎಚ್ಚು ((ಭೀಮನು ತನ್ನ ಶ್ರೇಷ್ಠವಾದ ಬಾಣಗಳಿಂದ ಸಿಡಿಲು ಹೊಡೆಯುವ ಹಾಗೆ ಹೊಡೆದು) ಉದಗ್ರರಥಮಂ ಮುಯ್ಯೇೞು ಸೂೞು (ಕರ್ಣನ ಶ್ರೇಷ್ಠವಾದ ರಥವನ್ನು ಇಪ್ಪತ್ತೊಂದು ಸಲ) ಕೋಪದಿಂ ಕಡಿಯಲ್ (ಕೋಪದಿಂದ ಕಡಿದು ಹಾಕಲು,) ಸಾರ್ದೊಡೆ ಅೞಲ್ದು ಸೂತಸುತನು ಒಂದು ಉಗ್ರೇಷುವಿಂ (ಕರ್ಣನು ವ್ಯಥೆಪಟ್ಟು ತನ್ನ ಶ್ರೇಷ್ಠವಾದ ಬಾಣದಿಂದ) ತಿಣ್ಣಂ ಎಚ್ಚೊಡಂ(ತೀಕ್ಷ್ಣವಾಗಿ ಹೊಡೆದಾಗ,) ಆರ್ದಂ ನಸುಮೂರ್ಛೆಹೋಗಿ ರಥದೊಳ್ ಭೀಮಂ ನರಲ್ವನ್ನೆಗಂ( ರಥದಲ್ಲಿಯೇ ಭೀಮನು ಸ್ವಲ್ಪ ಮೂರ್ಛೆಹೋಗಿ ನರಳುವ ಹಾಗೆ ಹೊಡೆದು ಆರ್ಭಟ ಮಾಡಿದನು.)
ಪದ್ಯ-೧೪೩:ಅರ್ಥ:ಪ್ರಸಿದ್ಧನಾದ ಕರ್ಣನು ದುರ್ಯೋಧನ ಮತ್ತು ಭೀಮರ ಮಧ್ಯೆ ಪ್ರವೇಶಿಸಿ ಹತ್ತಿರ ಬರಲು (ಭೀಮನು ತನ್ನ) ಶ್ರೇಷ್ಠವಾದ ಬಾಣಗಳಿಂದ ಸಿಡಿಲು ಹೊಡೆಯುವ ಹಾಗೆ ಹೊಡೆದು, ಕರ್ಣನ ಶ್ರೇಷ್ಠವಾದ ರಥವನ್ನು ಇಪ್ಪತ್ತೊಂದು ಸಲ ಕೋಪದಿಂದ ಕಡಿದು ಹಾಕಲು, ಕರ್ಣನು ವ್ಯಥೆಪಟ್ಟು ತನ್ನ ಶ್ರೇಷ್ಠವಾದ ಬಾಣದಿಂದ ತೀಕ್ಷ್ಣವಾಗಿ ಹೊಡೆದಾಗ, ರಥದಲ್ಲಿಯೇ ಭೀಮನು ಸ್ವಲ್ಪ ಮೂರ್ಛೆಹೋಗಿ ನರಳುವ ಹಾಗೆ ಹೊಡೆದು ಆರ್ಭಟ ಮಾಡಿದನು.
ವ|| ಅಂತು ಮೂರ್ಛಾಗತನಾದ ಭೀಮನ ಕೊರಲೊಳ್ ಬಿಲ್ಲಂ ಕೋದು ಮೇಗಿಲ್ಲದೆ ತೆಗೆದು-
ವಚನ:ಪದವಿಭಾಗ-ಅರ್ಥ:ಅಂತು ಮೂರ್ಛಾಗತನಾದ ಭೀಮನ ಕೊರಲೊಳ್ ಬಿಲ್ಲಂ ಕೋದು ಮೇಗಿಲ್ಲದೆ ತೆಗೆದು-
ವಚನ:ಅರ್ಥ:ವ|| ಹಾಗೆ ಮೂರ್ಛೆ ಹೋದ ಭೀಮನ ಕೊರಳಿಗೆ ಬಿಲ್ಲಿನ ಹಗ್ಗವನ್ನು ಸಿಕ್ಕಿಸಿ ಅಸಮಾನವಾದ ರೀತಿಯಲ್ಲಿ ಸೆಳೆದು-
ಕಂ|| ತಾಂ ಗಡಮೆನ್ನಾಳ್ದನ ತೊಡೆ
ಯಂ ಗಡಮಿನ್ನುಡಿವನೆನ್ನೊಳಂ ಕಾದುವನೆಂ|
ದಂಗಪತಿ ನುಡಿದು ಕೊಲ್ಲದೆ
ತಾಂಗಿದನಂಬಿಕೆಗೆ ನುಡಿದ ನುಡಿ ನಿಲೆ ಮನದೊಳ್|| ೧೪೪||
ಪದ್ಯ-೧೪೪:ಪದವಿಭಾಗ-ಅರ್ಥ:ತಾಂ ಗಡಂ ಎನ್ನ ಆಳ್ದನ ತೊಡೆಯಂ ಗಡ ಇನ್ನು ಉಡಿವನ್ (ಗಡ- ಓಹೋ! ತಾನು ಇವನೇ ಅಲ್ಲವೇ ನನ್ನ ಯಜಮಾನನ ತೊಡೆಯನ್ನು ಒಡೆಯುವವನು) ಎನ್ನೊಳಂ ಕಾದುವನು ಎಂದು ಅಂಗಪತಿ ನುಡಿದು (ಇನ್ನು ನನ್ನಲ್ಲಿಯೂ ಕಾದುವವನು ಎಂದು ಹೇಳಿ ಕರ್ಣನು) ಕೊಲ್ಲದೆ ತಾಂಗಿದಂ (ಭೀಮನನ್ನು ಕೊಲ್ಲದೆ ತಾಳಿದನು.) ಅಂಬಿಕೆಗೆ ನುಡಿದ ನುಡಿ ನಿಲೆ ಮನದೊಳ್ (ತಾಯಿಗೆ ಕೊಟ್ಟ ಮಾತು ಮನಸ್ಸಿನಲ್ಲಿ ನಿಂತಿರಲಾಗಿ )
ಪದ್ಯ-೧೪೪:ಅರ್ಥ: ೧೪೪. ಗಡ- ಓಹೋ! ಇವನೇ ಅಲ್ಲವೇ ನನ್ನ ಯಜಮಾನ ದುರ್ಯೋಧನನ ತೊಡೆಯನ್ನು ಒಡೆಯುವವನು; ಇನ್ನು ನನ್ನಲ್ಲಿಯೂ ಕಾದುವವನು ಎಂದು ಹೇಳಿ ಕರ್ಣನು ತಾಯಿಗೆ ಕೊಟ್ಟ ಮಾತು ಮನಸ್ಸಿನಲ್ಲಿ ನಿಂತಿರಲಾಗಿ ಭೀಮನನ್ನು ಕೊಲ್ಲದೆ ತಾಳಿದನು.
ವ|| ಅನ್ನೆಗಮಿತ್ತ ಚಾಣೂರಾರಿ ಜರಾಸಂಧಾರಿಯ ಮುನ್ನೆಗೆದು ಬೞಿಕ್ಕಡಂಗಿದ ಸಿಂಹನಾದಕ್ಕೆ ಮನಕ್ಷತಂಬಟ್ಟು ಸಾತ್ಯಕಿಯ ನಾರಯಲಟ್ಟಿದೊಡಾತಂ ಬಂದಚೇತನನಾಗಿ ಬಿೞಿರ್ದ ವೃಕೋದರನಂ ತನ್ನ ರಥಮನೇಱಿಸಿಕೊಂಡು ಕೂಡೆ ವಂದನನ್ನೆಗಂ ದುರ್ಯೋಧನಂ ಕರ್ಣಂ ಬೆರಸು ಸೈಂಧವನ ಮೊನೆಯೊಳಾತನಂ ಪೆಱಗಿಕ್ಕಿ ಮುಂದೆ ನಿಂದಾಗಳ್-
ವಚನ:ಪದವಿಭಾಗ-ಅರ್ಥ:ಅನ್ನೆಗಂ ಇತ್ತ ಚಾಣೂರಾರಿ ಜರಾಸಂಧಾರಿಯ ಮುನ್ನೆಗೆದು (ಅಷ್ಟರಲ್ಲಿ ಈ ಕಡೆ ಕೃಷ್ಣನು ಭೀಮನ ಮುಂದಕ್ಕೆ ಹಾರಿ) ಬೞಿಕ್ಕ ಅಡಂಗಿದ ಸಿಂಹನಾದಕ್ಕೆ (ಬಳಿಕ ಕುಗ್ಗಿದ ಸಿಂಹಧ್ವನಿಗೆ) ಮನಕ್ಷತಂಬಟ್ಟು ಸಾತ್ಯಕಿಯನು ಆರಯಲು ಅಟ್ಟಿದೊಡೆ (ಮನಸ್ಸಿನಲ್ಲಿಯೇ ವ್ಯಥೆಪಟ್ಟು ಸಾತ್ಯಕಿಯನ್ನು ನೋಡಿಕೊಂಡು ಬರಲು ಕಳುಹಿಸಲು-) ಆತಂ ಬಂದು ಅಚೇತನನಾಗಿ ಬಿೞಿರ್ದ ವೃಕೋದರನಂ (ಆತನು ಬಂದು ಶಕ್ತಿಗುಂದಿ ಬಿದ್ದಿದ್ದ ಭೀಮನನ್ನು ) ತನ್ನ ರಥಮನು ಏಱಿಸಿಕೊಂಡು ಕೂಡೆ ವಂದನು (ತನ್ನ ರಥದಲ್ಲಿ ಏರಿಸಿಕೊಂಡು ಜೊತೆಯಲ್ಲಿಯೇ ಬಂದನು.) ಅನ್ನೆಗಂ ದುರ್ಯೋಧನಂ ಕರ್ಣಂ ಬೆರಸು (ಅಷ್ಟರಲ್ಲಿ ದುರ್ಯೋಧನನು ಕರ್ಣನೊಡಗೂಡಿಕೊಂಡು) ಸೈಂಧವನ ಮೊನೆಯೊಳು ಆತನಂ ಪೆಱಗಿಕ್ಕಿ ಮುಂದೆ ನಿಂದಾಗಳ್ (ಸೈಂಧವನ ಯುದ್ಧಭೂಮಿಗೆ ಬಂದು ಆತನನ್ನು ಹಿಂದೆ ಹಾಕಿ ತಾನು ನಿಂತನು.)-
ವಚನ:ಅರ್ಥ:ಅಷ್ಟರಲ್ಲಿ ಈ ಕಡೆ ಕೃಷ್ಣನು ಭೀಮನ ಮುಂದಕ್ಕೆ ಹಾರಿ ಬಳಿಕ ಕುಗ್ಗಿದ ಸಿಂಹಧ್ವನಿಗೆ ಮನಸ್ಸಿನಲ್ಲಿಯೇ ವ್ಯಥೆಪಟ್ಟು ಸಾತ್ಯಕಿಯನ್ನು ನೋಡಿಕೊಂಡು ಬರಲು ಕಳುಹಿಸಲು- ಆತನು ಬಂದು ಶಕ್ತಿಗುಂದಿ ಬಿದ್ದಿದ್ದ ಭೀಮನನ್ನು ತನ್ನ ರಥದಲ್ಲಿ ಏರಿಸಿಕೊಂಡು ಜೊತೆಯಲ್ಲಿಯೇ ಬಂದನು. ಅಷ್ಟರಲ್ಲಿ ದುರ್ಯೋಧನನು ಕರ್ಣನೊಡಗೂಡಿಕೊಂಡು ಸೈಂಧವನ ಯುದ್ಧಭೂಮಿಗೆ ಬಂದು ಆತನನ್ನು ಹಿಂದೆ ಹಾಕಿ ತಾನು ನಿಂತನು.
ಚಂ|| ದಿನಕರನಸ್ತಮಸ್ತಕಮನಾಸೆವಡಲ್ ಬಗೆದಪ್ಪನೇಕೆ ಕೆ
ಮ್ಮನೆ ತಡೆವೈ ಜಯದ್ರಥನನಿಕ್ಕುೞಿದಾರೊಳಮಿಂ ತೊಡಂಕವೇ|
ಡೆನುತುಮಜಂ ಮರುಜ್ಚವದೆ ಚೋದಿಸೆ ಪಾರ್ಥನ ದೇವದತ್ತ ನಿ
ಸ್ವನದೊಳೆ ತೀವಿ ಪೊಟ್ಟನೊಡೆವಂತೆವೊಲಾದುದಜಾಂಡಮಂಡಳಂ|| ೧೪೫ ||
ಪದ್ಯ-೧೪೫:ಪದವಿಭಾಗ-ಅರ್ಥ:ದಿನಕರನು ಅಸ್ತ ಮಸ್ತಕಮನ್ ಆಸೆವಡಲ್ ಬಗೆದಪ್ಪನು (ಸೂರ್ಯನು ಅಸ್ತಪರ್ವತದ ನೆತ್ತಿಯನ್ನು ಸೇರಲು (ಮುಳುಗಲು) ಯೋಚಿಸುತ್ತಿದ್ದಾನೆ.) ಏಕೆ ಕೆಮ್ಮನೆ ತಡೆವೈ ಜಯದ್ರಥನನು ಇಕ್ಕು (ಏಕೆ ಸುಮ್ಮನೆ ಸಾವಕಾಶ ಮಾಡುತ್ತಿದ್ದೀಯೆ? ಜಯದ್ರಥನನ್ನು ಹೊಡೆ;) ಉೞಿದ ಆರೊಳಮ್ ಇಂ ತೊಡಂಕವೇಡ ಎನುತುಂ (ಮಿಕ್ಕವರಾರಲ್ಲಿಯೂ ತೊಡಕಿಕೊಳ್ಳಬೇಡ ಎನ್ನುತ್ತ) ಅಜಂ ಮರುಜ್ಚವದೆ ಚೋದಿಸೆ (ಕೃಷ್ಣನು ವಾಯುವೇಗದಿಂದ ರಥವನ್ನು ಓಡಿಸಲು,) ಪಾರ್ಥನ ದೇವದತ್ತ ನಿಸ್ವನದೊಳೆ ತೀವಿ (ರಣರಂಗವು ಅರ್ಜುನನ ದೇವದತ್ತವೆಂಬ ಶಂಖದ ಧ್ವನಿಯಿಂದ ತುಂಬಿ) ಪೊಟ್ಟನೆ ಒಡೆವಂತೆವೊಲ್ ಆದುದು ಅಜಾಂಡಮಂಡಳಂ (ಬ್ರಹ್ಮಾಂಡಮಂಡಲವು ಪಟ್ಟೆಂದು ಒಡೆಯುವಂತಾಯಿತು)
ಪದ್ಯ-೧೪೫:ಅರ್ಥ: ಸೂರ್ಯನು ಅಸ್ತಪರ್ವತದ ನೆತ್ತಿಯನ್ನು ಸೇರಲು (ಮುಳುಗಲು) ಯೋಚಿಸುತ್ತಿದ್ದಾನೆ. ಏಕೆ ಸುಮ್ಮನೆ ಸಾವಕಾಶ ಮಾಡುತ್ತಿದ್ದೀಯೆ? ಜಯದ್ರಥನನ್ನು ಹೊಡೆ; ಮಿಕ್ಕವರಾರಲ್ಲಿಯೂ ತೊಡಕಿಕೊಳ್ಳಬೇಡ ಎನ್ನುತ್ತಾ, ಕೃಷ್ಣನು ವಾಯುವೇಗದಿಂದ ರಥವನ್ನು ಓಡಿಸಲು- ರಣರಂಗವು ಅರ್ಜುನನ ದೇವದತ್ತವೆಂಬ ಶಂಖದ ಧ್ವನಿಯಿಂದ ತುಂಬಿ ಬ್ರಹ್ಮಾಂಡಮಂಡಲವು ಪೊಟ್ಟೆಂದು ಒಡೆಯುವಂತಾಯಿತು.
ಚಂ|| ಚಟುಳಿತ ಚಕ್ರನೇಮಿ ಪರಿವರ್ತನ ಘಟ್ಟನ ಘಾತ ನಿರ್ಭರ
ಸುಟಿತ ಧರಾತಳಂ ವಿಜಯನುಗ್ರರಥಂ ಪರಿದತ್ತು ದಲ್ ಘಟಾ|
ಘಟಿತ ಹಟದ್ವಿರೋಧಿ ರುರಪ್ಲವಲಂಪಟ ಸಂಕಟೋತ್ಕಟಂ
ಕಟಕಟ ಘಾತ ನಾಕತಟ ಸಂಕಟ ಸಂಗರ ರಂಗಭೂಮಿಯೊಳ್|| ೧೪೬ ||
ಪದ್ಯ-೧೪೬:ಪದವಿಭಾಗ-ಅರ್ಥ:ಚಟುಳಿತ ಚಕ್ರನೇಮಿ (ವೇಗವಾಗಿ ಚಲಿಸುತ್ತಿರುವ ತೇರಿನ ಚಕ್ರದ ಬಳೆಯ) ಪರಿವರ್ತನ ಘಟ್ಟನ ಘಾತ ನಿರ್ಭರ ಸ್ಫುಟಿತ ಧರಾತಳಂ (ಸುತ್ತುವುದರ ಪೆಟ್ಟಿನ ಹೊಡೆತದಿಂದ ಭರಿಸಲಸಾಧ್ಯವಾಗಿ ಸೀಳಿದ ಭೂಪ್ರದೇಶವು,) ವಿಜಯನ ಉಗ್ರರಥಂ - ಪರಿದತ್ತು ದಲ್ - ಘಟಾಘಟಿತ (ಆನೆಗಳ ಗುಂಪಿನಿಂದ ಕೂಡಿದ) ಹಟದ್ ವಿರೋಧಿ ರುಧಿರ ಪ್ಲವಲಂಪಟ (ಶತ್ರುಗಳ ಹೊಳೆಯುವ ರಕ್ತಪ್ರವಾಹದಲ್ಲಿ ಆಸಕ್ತಿಯುಳ್ಳ) ಸಂಕಟ (ಕಟ ಶಬ್ದದೊಡನೆ) ಉತ್ಕಟಂ ಕಟಕಟ ಘಾತ (ತಮ್ಮ ಕಟಕಟವೆಂಬ ಹೊಡೆತದಿಂದ) ನಾಕತಟ ಸಂಕಟ ಸಂಗರ ರಂಗಭೂಮಿಯೊಳ್(ಸ್ವರ್ಗಕ್ಕೆ ಹಿಂಸೆಯನ್ನುಂಟುಮಾಡುತ್ತ ಯುದ್ಧಭೂಮಿಯಲ್ಲಿ),- ಪರಿದತ್ತು ದಲ್ - (ರಥವು ವೇಗವಾಗಿ ಓಡಿತ್ತು. ಆಬ್ಬಾ!)
ಪದ್ಯ-೧೪೬:ಅರ್ಥ:ವೇಗವಾಗಿ ಚಲಿಸುತ್ತಿರುವ ತೇರಿನ ಚಕ್ರದ ಬಳೆಯ ಸುತ್ತುವುದರ ಪೆಟ್ಟಿನ ಹೊಡೆತದಿಂದ ಭರಿಸಲಸಾಧ್ಯವಾಗಿ ಸೀಳಿದ ಭೂಪ್ರದೇಶವು, ಅರ್ಜುನನ ಭಯಂಕರವಾದ ರಥವು ಆನೆಗಳ ಗುಂಪಿನಿಂದ ಶತ್ರುಗಳ ಹೊಳೆಯುವ ರಕ್ತಪ್ರವಾಹದಲ್ಲಿ ಆಸಕ್ತಿಯುಳ್ಳ ತಮ್ಮ ಕಟಕಟವೆಂಬ ಹೊಡೆತದಿಂದ ಸ್ವರ್ಗಕ್ಕೆ ಹಿಂಸೆಯನ್ನುಂಟುಮಾಡುತ್ತ ಯುದ್ಧಭೂಮಿಯಲ್ಲಿ ವೇಗವಾಗಿ ಓಡಿತ್ತು; ದಲ್.
ವ|| ಆಗಳ್ ಕುರುಧ್ವಜಿನಿಗೆ ಭಯಜ್ವರಮುಂ ಮಹೇಶ್ವರಜ್ವರಮುಂ ಬರೆ ಬರ್ಪುದಾರ ಮಹೇಶ್ವರನ ರಥದ ಬರವಂ ಕಂಡು ಕರ್ಣ ಶಲ್ಯ ಶಕುನಿ ಶಾರದ್ವತ ಕೃತವರ್ಮ ದುರ್ಯೋಧನ ದುಶ್ಶಾಸನರ್ ಮೊದಲಾದತಿರಥ ಸಮರಥ ಮಹಾರಥಾರ್ಧರಥರೊಂದೆವಿಂದೆಯಲ್ಲ ದೊಂದೊರ್ವರೊಳ್ ಸಂಧಿಸಿ ಗೊಂದಣಿಸಿ ನಿಂದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಕುರುಧ್ವಜಿನಿಗೆ ಭಯಜ್ವರಮುಂ (ಆಗ ಕೌರವಸೈನ್ಯಕ್ಕೆ ಭಯವೆಂಬ ಜ್ವರವೂ) ಮಹೇಶ್ವರ ಜ್ವರಮುಂ ಬರೆ (ಈಶ್ವರನ ಹಣೆಗಣ್ಣಿನ ಜ್ವರವೂ ಬರುವ ಹಾಗೆ) ಬರ್ಪ ಉದಾರಮಹೇಶ್ವರನ ರಥದ ಬರವಂ ಕಂಡು (ಬರುತ್ತಿರುವ ಉದಾರಮಹೇಶ್ವರನಾದ ಅರ್ಜುನನ ರಥದ ಬರುವಿಕೆಯನ್ನು ನೋಡಿ) ಕರ್ಣ ಶಲ್ಯ ಶಕುನಿ ಶಾರದ್ವತ ಕೃತವರ್ಮ ದುರ್ಯೋಧನ ದುಶ್ಶಾಸನರ್ ಮೊದಲಾದ ಅತಿರಥ ಸಮರಥ ಮಹಾರಥ ಅರ್ಧರಥರ್ ಒಂದೆವಿಂದೆಯಲ್ಲದೆ (ಗುಂಪಾಗಿರದೆ ಬೇರೆ ಬೇರೆಯಾಗಿ) ಒಂದೊರ್ವರೊಳ್ ಸಂಧಿಸಿ ಗೊಂದಣಿಸಿ ನಿಂದಾಗಳ್- (ಒಬ್ಬೊಬ್ಬರಲ್ಲಿ ಸೇರಿಕೊಂಡು ಗುಂಪಾಗಿ ನಿಂತರು. ಆಗ-)
ವಚನ:ಅರ್ಥ:ಆಗ ಕೌರವಸೈನ್ಯಕ್ಕೆ ಭಯವೆಂಬ ಜ್ವರವೂ, ಈಶ್ವರನ ಹಣೆಗಣ್ಣಿನ ಜ್ವರವೂ ಬರುವ ಹಾಗೆ ಬರುತ್ತಿರುವ ಉದಾರಮಹೇಶ್ವರನಾದ ಅರ್ಜುನನ ರಥದ ಬರುವಿಕೆಯನ್ನು ನೋಡಿ, ಕರ್ಣ, ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುರ್ಯೋಧನ, ದುಶ್ಶಾಸನನೇ ಮೊದಲಾದ ಅತಿರಥ, ಸಮರಥ, ಮಹಾರಥ, ಅರ್ಧರಥರು ಗುಂಪಾಗಿರದೆ ಬೇರೆ ಬೇರೆಯಾಗಿ ಒಬ್ಬೊಬ್ಬರಲ್ಲಿ ಸೇರಿಕೊಂಡು ಗುಂಪಾಗಿ ನಿಂತರು. ಆಗ-
ಚಂ|| ಶರದೊಳಗುರ್ಚಿಪೋಪ ಪೊಳಪಿಂಗೊಳಗಾಗಿ ತಗುಳ್ದುದೊಂದು ಬೆ
ಳ್ಸರಿಗೆಣೆಯಾದುದೀಯೆಱಗುವಂಬಿನ ಬಲ್ಸರಿಯೆಂಬಿನಂ ನಿರಂ|
ತರದೊಳೆ ಪಾಯ್ದ ಕೂರ್ಗಣೆಗಳಂ ತಱಿದೊಟ್ಟಿ ತೆರಳ್ಚಿ ತೂಳ್ದಿಕೊಂ
ಡರೆದು ಮುಗೞ್ಚಿ ಸಣ್ಣಿಸಿದನಾಂತ ಚತುರ್ವಲಮಂ ಗುಣಾರ್ಣವಂ|| ೧೪೭||
ಪದ್ಯ-೧೪೭:ಪದವಿಭಾಗ-ಅರ್ಥ:ಶರದೊಳಗೆ (ಮಳೆಯೊಳಗೆ) ಉರ್ಚಿಪೋಪ ಪೊಳಪಿಂಗೆ ಒಳಗಾಗಿ (ಮಳೆಯ ನಡುವೆ ನುಸುಳಿಕೊಂಡು ಹೋಗುವ ಕಿರನಗಳ ಹೊಳಪಿಗೆ ವಶವಾಗಿ) ತಗುಳ್ದುದು ಒಂದು ಬೆಳ್ಸರಿಗೆ ಎಣೆಯಾದುದು (ಬೀಳುವ ಬಿಳಿಯ ಬಣ್ಣದ ಮಳೆಗೆ ಸಮಾನವಾಗಿ ಇರುವಂತೆ,) ಈಯೆ ಎಱಗುವ ಅಂಬಿನ ಬಲ್ಸರಿಯೆಂಬಿನಂ (ಹಾದು ಮೇಲೆ ಬೀಳುತ್ತಿರುವ ಬಾಣಗಳ ಮಳೆಯೋ ಎನ್ನುವಹಾಗೆ ) ನಿರಂತರದೊಳೆ ಪಾಯ್ದ ಕೂರ್ಗಣೆಗಳಂ ತಱಿದೊಟ್ಟಿ (ಎಡಬಿಡದೆ ಹಾದು ಬರುತ್ತಿರುವ ಬಾಣಗಳಿಂದ ಪ್ರತಿಭಟಿಸಿದ ಚತುರಂಗಸೈನ್ಯವನ್ನು ಅರ್ಜುನನು ಕತ್ತರಿಸಿ) ತೆರಳ್ಚಿ ತೂಳ್ದಿಕೊಂಡು ಅರೆದು ಮುಗೞ್ಚಿ ಸಣ್ಣಿಸಿದನು (ಓಡಿಸಿ ರಾಶಿಮಾಡಿಕೊಂಡು ಅರೆದು ಪುಡಿಮಾಡಿ ಹಿಂದಿರುಗಿಸಿ ಇಲ್ಲದಂತೆ ಮಾಡಿದನು.) ಆಂತ (ಎದುರಿಸಿದ) ಚತುರ್ವಲಮಂ ಗುಣಾರ್ಣವಂ (ಅರ್ಜುನನು ತನ್ನನ್ನು ಎದುರಿಸಿ ಬಂದ ಚತುರಂಗ ಸೈನ್ಯವನ್ನು)
ಪದ್ಯ-೧೪೭:ಅರ್ಥ: ಮಳೆಯ ನಡುವೆ ನುಸುಳಿಕೊಂಡು ಹೋಗುವ ಕಿರನಗಳ ಹೊಳಪಿಗೆ ವಶವಾಗಿ ಬೀಳುವ ಬಿಳಿಯ ಬಣ್ಣದ ಮಳೆಗೆ ಸಮಾನವಾಗಿ ಇರುವಂತೆ,ಹಾದು ಮೇಲೆ ಬೀಳುತ್ತಿರುವ ಬಾಣಗಳ ಮಳೆಯೋ ಎನ್ನುವಹಾಗೆ ಎಡಬಿಡದೆ ಹಾದು ಬರುತ್ತಿರುವ ಬಾಣಗಳಿಂದ ಪ್ರತಿಭಟಿಸಿದ ಚತುರಂಗಸೈನ್ಯವನ್ನು ಅರ್ಜುನನು ಕತ್ತರಿಸಿ ಓಡಿಸಿ ರಾಶಿಮಾಡಿಕೊಂಡು ಅರೆದು ಪುಡಿಮಾಡಿ ಹಿಂದಿರುಗಿಸಿ, ಅರ್ಜುನನು ತನ್ನನ್ನು ಎದುರಿಸಿ ಬಂದ ಚತುರಂಗ ಸೈನ್ಯವನ್ನು ಇಲ್ಲದಂತೆ ಮಾಡಿದನು.
ಮ||ಸ್ರ|| ಕಲಿಗಂ ಬಲ್ಲಾಳ್ಗಮಂಬೆತ್ತಿದೆನಿದುವೆ ಪದಂ ಮಾರ್ಕೊಳಲ್ ಸಿಂಧುರಾಜಂ
ಗೆಲಲೆಂದಾಂ ಬಂದೆನಿಂ ಕೊಂದಪನೆ ನೆರದು ನಿಂದಾನಿಮೆಂದಾಂತರಂ ಮೂ|
ದಲಿಸುತ್ತೆಚ್ಚಂ ಪ್ರಚಂಡ ಪ್ರಳಯ ಘನ ಘಟಾರಾವದಿಂದಾರ್ದು ಬಾಣಾ
ವಲಿಯಿಂದಂ ಪೂೞೆ ರೋದೋವಿವರಮನೊದವಿತ್ತೊಂದು ಘೋರಾಂಧಕಾರಂ|| ೧೪೮ ||
ಪದ್ಯ-೧೪೮:ಪದವಿಭಾಗ-ಅರ್ಥ:ಕಲಿಗಂ ಬಲ್ಲಾಳ್ಗಂ ಅಂಬೆತ್ತಿದೆಂ (‘ಶೂರರಿಗೂ ಬಲಿಷ್ಠರಾದ ವೀರರಿಗೂ ಬಾಣವನ್ನು ಎತ್ತಿ ಸವಾಲು ಮಾಡುತ್ತಿದ್ದೇನೆ.) ಇದುವೆ ಪದಂ ಮಾರ್ಕೊಳಲ್ ಸಿಂಧುರಾಜಂ ಗೆಲಲೆಂದು ಆಂ ಬಂದೆನ್ (ಪ್ರತಿಭಟಿಸುವುದಕ್ಕೆ ಇದೇ ಹದವಾದ ಕಾಲ. ಸೈಂಧವನನ್ನು ಗೆಲ್ಲುವುದಕ್ಕಾಗಿ ನಾನು ಬಂದಿದ್ದೇನೆ. ಕೊಲ್ಲುತ್ತೇನೆ.) ಇಂ ಕೊಂದಪನೆ ನೆರದು ನಿಂದು ಆನಿಂ ಎಂದು (ಇಂದು ಕೊಲ್ಲುತ್ತೇನೆ. ಗುಂಪಾಗಿ ನಿಂತು ಎದುರಿಸಿ ಎಂದು) ಆಂತರಂ ಮೂದಲಿಸುತ್ತ ಎಚ್ಚಂ (ಪ್ರತಿಭಟಿಸಿದವರನ್ನು ಮೂದಲಿಸುತ್ತಾ / ಅಣಕವಾಡಿ ಹೊಡೆದನು. ಹೇಗೆಂದರೆ) ಪ್ರಚಂಡ ಪ್ರಳಯ ಘನ ಘಟಾರಾವದಿಂದ ಆರ್ದು (ಪ್ರಚಂಡವಾದ ಪ್ರಳಯಕಾಲದ ಗುಡುಗಿನ ಶಬ್ದದಿಂದ ಆರ್ಭಟಮಾಡಿ) ಬಾಣಾವಲಿಯಿಂದಂ ಪೂೞೆ - ರೋದೋವಿವರಮನು(ಬಾಣಗಳ ಸಮೂಹದಿಂದ ಆಕಾಶಪ್ರದೇಶವನ್ನು ಹೂಳಲು) ಒದವಿತ್ತು ಒಂದು ಘೋರಾಂಧಕಾರಂ (ಭಯಂಕರವಾದ ಕತ್ತಲೆಯು ಆವರಿಸಿತು)
ಪದ್ಯ-೧೪೮:ಅರ್ಥ:‘ಶೂರರಿಗೂ ಬಲಿಷ್ಠರಾದ ವೀರರಿಗೂ ಸವಾಲು ಮಾಡುತ್ತಿದ್ದೇನೆ. (ಬಾಣಗಳನ್ನು ಎತ್ತಿದ್ದೇನೆ). ಪ್ರತಿಭಟಿಸುವುದಕ್ಕೆ ಇದೇ ಹದವಾದ ಕಾಲ. ಸೈಂಧವನನ್ನು ಗೆಲ್ಲುವುದಕ್ಕಾಗಿ ನಾನು ಬಂದಿದ್ದೇನೆ. ಇಂದು ಕೊಲ್ಲುತ್ತೇನೆ. ಗುಂಪಾಗಿ ನಿಂತು ಎದುರಿಸಿ ಎಂದು, ಪ್ರತಿಭಟಿಸಿದವರನ್ನು ಮೂದಲಿಸುತ್ತಾ (ಅಣಕವಾಡಿ) ಹೊಡೆದನು. ಪ್ರಚಂಡವಾದ ಪ್ರಳಯಕಾಲದ ಗುಡುಗಿನ ಶಬ್ದದಿಂದ ಆರ್ಭಟಮಾಡಿ ಹೊಡೆದು ಬಾಣಗಳ ಸಮೂಹದಿಂದ ಆಕಾಶಪ್ರದೇಶವನ್ನು ಹೂಳಿದನು. ಅದರಿಂದ ಭಯಂಕರವಾದ ಕತ್ತಲೆಯು ಆವರಿಸಿತು.
ವ|| ಅಂತಮೋಘಾಸ್ತ್ರಧನಂಜಯನೆಚ್ಚ ಶರಸಂಘಾತದಿನೊಗೆದ ರಣಗೞ್ತಲೆಯೆ ಮೊಲಗೞ್ತಲೆಯಂ ಮಾಡೆ ನೇಸೞ್ ಪಟ್ಟತ್ತು ವಿಜಯಂ ಸೋಲ್ತನೆಂದು ಕೌರವಬಲಮಾರ್ದೊಡೆ-
ವಚನ:ಪದವಿಭಾಗ-ಅರ್ಥ:ಅಂತು ಅಮೋಘಾಸ್ತ್ರ ಧನಂಜಯನ ಎಚ್ಚ ಶರಸಂಘಾತದಿಂ ಒಗೆದ ರಣಗೞ್ತಲೆಯೆ (ಹಾಗೆ ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಹೊಡೆದ ಬಾಣಗಳ ಸಮೂಹದಿಂದ ಉಂಟಾದ ಯುದ್ಧಗತ್ತಲೆಯೇ) ಮೊಲಗೞ್ತಲೆಯಂ ಮಾಡೆ (ರಾತ್ರಿಯ ಭ್ರಮೆಯನ್ನು ಮಾಡಲು), ನೇಸೞ್ ಪಟ್ಟತ್ತು (“ಸೂರ್ಯನು ಮುಳುಗಿದನು) ವಿಜಯಂ ಸೋಲ್ತನೆಂದು ಕೌರವಬಲಂ ಆರ್ದೊಡೆ (ಅರ್ಜುನನು ಸೋತನು” ಎಂದು ಕೌರವ ಸೈನ್ಯವು ಕೂಗಿಕೊಂಡಿತು. ಹಾಗೆ ಕೂಗಿಕೊಂಡಾಗ-)-
ವಚನ:ಅರ್ಥ:ಹಾಗೆ ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಹೊಡೆದ ಬಾಣಗಳ ಸಮೂಹದಿಂದ ಉಂಟಾದ ಯುದ್ಧಗತ್ತಲೆಯೇ- ರಾತ್ರಿಯ ಭ್ರಮೆಯನ್ನು ಉಂಟುಮಾಡಲು “ಸೂರ್ಯನು ಮುಳುಗಿದನು-ಅರ್ಜುನನು ಸೋತನು” ಎಂದು ಕೌರವ ಸೈನ್ಯವು ಕೂಗಿಕೊಂಡಿತು.ಹಾಗೆ ಕೂಗಿಕೊಂಡಾಗ-
ಚಂ|| ಜ್ವಳದನಳಾಸ್ತ್ರದಿಂದಮಿಸೆ ಕೞ್ತಲೆ ತೂಳ್ದು ತೆರಳ್ದುದಾಗಳು
ಮ್ಮಳಿಸಿ ಮಹಾರಥರ್ ಪೆಳರೆ ಸೈಂಧವನೆನ್ನಳವಿಂಗಮೆನ್ನ ದೋ|
ರ್ವಳದಳವಿಂಗಮಿಂ ಸೆಡೆದಿರಲ್ ದೊರೆಯಲ್ತೆನಗೆಂದು ಬಂದಸುಂ
ಗೊಳೆ ಪೊಣರ್ದಂ ಸುರರ್ ಪೊಗೞೆ ತನ್ನಳವಂ ಜಗದೇಕಮಲ್ಲನೊಳ್|| ೧೪೯ ||
ಪದ್ಯ-೧೪೯:ಪದವಿಭಾಗ-ಅರ್ಥ:ಜ್ವಳದನಳಾಸ್ತ್ರದಿಂದಂ ಇಸೆ (ಜ್ವಲನ ಅನಲಾಸ್ತ್ರದಿಂದ ಇಸೆ;- ಪ್ರಕಾಶಮಾನವಾದ ಆಗ್ನೇಯಾಸ್ತ್ರವನ್ನು ಪ್ರಯೋಗಿಸಲು) ಕೞ್ತಲೆ ತೂಳ್ದು ತೆರಳ್ದುದು (ಕತ್ತಲೆ ಹರಿದು ಓಡಿಹೋಯಿತು) ಆಗಳು ಉಮ್ಮಳಿಸಿ ಮಹಾರಥರ್ ಪೆಳರೆ (ಆಗ ಮಹಾರಥರು ವ್ಯಥೆಪಟ್ಟು ಹೆದರಿರಲು) ಸೈಂಧವನ ಎನ್ನಳವಿಂಗಂ ಎನ್ನ ದೋರ್ವಳದ ಅಳವಿಂಗಮಿಂ ಸೆಡೆದಿರಲ್ (ಸೈಂಧವನು ತನ್ನ ಶಕ್ತಿಗೂ ತನ್ನ ಬಾಹುಬಲದ ಶಕ್ತಿಗೂ ಇನ್ನು ಭಯದಿಂದ ಕುಗ್ಗಿರುವುದು) ದೊರೆಯಲ್ ತನಗೆಂದು (ಯೋಗ್ಯವಲ್ಲ ತನಗೆ ಎಂದು) ಬಂದು ಅಸುಂಗೊಳೆ (ಬಂದು ಪ್ರಾಣ ತೆಗೆಯುವಂತೆ) ಪೊಣರ್ದಂ (ಹೋರಾಡಿದನು >>. ಅದಕ್ಕೆ-) ಸುರರ್ ಪೊಗೞೆ ತನ್ನ ಅಳವಂ ಜಗದೇಕಮಲ್ಲನೊಳ್ (ತನ್ನ ಪರಾಕ್ರಮವನ್ನು ದೇವತೆಗಳೂ ಹೊಗಳುತ್ತಿರಲು ಜಗದೇಕಮಲ್ಲನಾದ ಅರ್ಜುನನಲ್ಲಿ ಹೋರಾಡಿದನು.)
ಪದ್ಯ-೧೪೯:ಅರ್ಥ: ತಕ್ಷಣವೇ ಅರ್ಜುನನು ಪ್ರಕಾಶಮಾನವಾದ ಆಗ್ನೇಯಾಸ್ತ್ರವನ್ನು ಪ್ರಯೋಗಿಸಲು ಕತ್ತಲೆ ಹರಿದು ಓಡಿಹೋಯಿತು. ಆಗ ಮಹಾರಥರು ವ್ಯಥೆಪಟ್ಟು ಹೆದರಿದರು. ಸೈಂಧವನು ತನ್ನ ಶಕ್ತಿಗೂ ತನ್ನ ಬಾಹುಬಲದ ಶಕ್ತಿಗೂ ಇನ್ನು ಭಯದಿಂದ ನಾನು ಕುಗ್ಗಿರುವುದು ಯೋಗ್ಯವಲ್ಲ ಎಂದು ಹೊರಗೆ ಬಂದು ಪ್ರಾಣ ತೆಗೆಯುವಂತೆ ತನ್ನ ಪರಾಕ್ರಮವನ್ನು ದೇವತೆಗಳೂ ಹೊಗಳುತ್ತಿರಲು ಜಗದೇಕಮಲ್ಲನಾದ ಅರ್ಜುನನಲ್ಲಿ ಹೋರಾಡಿದನು.
ವ|| ಅಂತತಿರಥ ಮಥನನ ರಥಕ್ಕದಿರದಿದಿರಂ ತನ್ನ ರಥಮಂ ಪರಿಯಿಸಿ ಜಯದ್ರಥಂ ಮುಟ್ಟೆವಂದು-
ವಚನ:ಪದವಿಭಾಗ-ಅರ್ಥ:ಅಂತು ಅತಿರಥ ಮಥನನ ರಥಕ್ಕೆ ಇದಿರದೆ ಇದಿರಂ (ಇದಿರಾಗಿ ಹೆದರದೆ) ತನ್ನ ರಥಮಂ ಪರಿಯಿಸಿ ಜಯದ್ರಥಂ ಮುಟ್ಟೆವಂದು (ರಥವನ್ನು ಹಾಯಿಸಿ ಸೈಂಧವನು ಸಮೀಪಕ್ಕೆ ಬಂದು)-
ವಚನ:ಅರ್ಥ:ವ|| ಅತಿರಥ ಮಥನನಾದ ಅರ್ಜುನನ ರಥಕ್ಕೆ ಇದಿರಾಗಿ ಹೆದರದೆ ತನ್ನ ರಥವನ್ನು ಹಾಯಿಸಿ ಸೈಂಧವನು ಸಮೀಪಕ್ಕೆ ಬಂದು-
ಉ|| ನಿನ್ನೆ ಪೊರಳ್ಚಿ ನಿನ್ನ ಮಗನಂ ಸೆರಗಿಲ್ಲದೆ ಕೊಂದನಿಂದುಮಿಂ
ತಿನ್ನೆಗಮಿರ್ಪುದಂ ಭಯದಿನಿರ್ದೆನೆ ನಿನ್ನನೆ ಪಾರುತಿರ್ದೆನೆಂ|
ದುನ್ನತ ಶೌರ್ಯದಿಂದಜಿತನಂ ನರನಂ ಮುನಿದೆಚ್ಚನೇೞುಮೆಂ
ಟುನ್ನಿಶಿತಾಸ್ತ್ರದಿಂದದಟದೇಂ ದೊರೆವೆತ್ತುದೊ ಸಿಂಧುರಾಜನಾ|. ೧೫೦ ||
ಪದ್ಯ-೧೫೦:ಪದವಿಭಾಗ-ಅರ್ಥ:ನಿನ್ನೆ ಪೊರಳ್ಚಿ ನಿನ್ನ ಮಗನಂ ಸೆರಗಿಲ್ಲದೆ (ಭಯವಿಲ್ಲದೆ) ಕೊಂದನು (ಕೊಂದೆನು)(“ನಿನ್ನೆಯ ದಿನ ಭಯವಿಲ್ಲದೆ ನಿನ್ನ ಮಗನಾದ ಅಭಿಮನ್ಯುವನ್ನು ಹೊರಳಿಸಿ ಕೊಂದೆನು.) ಇಂದುಂ ಇಂತು ಇನ್ನೆಗಂ ಇರ್ಪುದಂ ಭಯದಿಂ ಇರ್ದೆನೆ (ಇಂದು ಇಲ್ಲಿಯವರೆಗೆ ಭಯದಿಂದ ಮರೆಯಾಗಿದ್ದೆನೆ?) ನಿನ್ನನೆ ಪಾರುತಿರ್ದೆಂ ಎಂದು ಉನ್ನತ ಶೌರ್ಯದಿಂದ ಅಜಿತನಂ ನರನಂ ಮುನಿದು ಎಚ್ಚನು (ನಿನ್ನನ್ನೇ ನಿರೀಕ್ಷಿಸುತ್ತಿದ್ದೆ” ಎಂದು ಕೋಪದಿಂದಲೂ ಅತಿಶಯವಾದ ಪರಾಕ್ರಮದಿಂದಲೂ -- ಹೊಡೆದನು >>) ಏೞುಮೆಂಟುಂ ನಿಶಿತಾಸ್ತ್ರದಿಂದ (ಏಳೆಂಟು ಬಾಣಗಳಿಂದ ಹೊಡೆದನು.) ಅದಟು ಅದೇಂ ದೊರೆವೆತ್ತುದೊ ಸಿಂಧುರಾಜನಾ (ಸೈಂಧವನ ಪರಾಕ್ರಮವು ಹೆಚ್ಚಿನದಾಯಿತೊ! )
ಪದ್ಯ-೧೫೦:ಅರ್ಥ:“ನಿನ್ನೆಯ ದಿನ ಭಯವಿಲ್ಲದೆ ನಿನ್ನ ಮಗನಾದ ಅಭಿಮನ್ಯುವನ್ನು ಹೊರಳಿಸಿ ಕೊಂದೆ. ಇಂದು ಇಲ್ಲಿಯವರೆಗೆ ಭಯದಿಂದ ಮರೆಯಾಗಿದ್ದೆನೆ? ನಿನ್ನನ್ನೇ ನಿರೀಕ್ಷಿಸುತ್ತಿದ್ದೆ” ಎಂದು ಕೋಪದಿಂದಲೂ ಅತಿಶಯವಾದ ಪರಾಕ್ರಮದಿಂದಲೂ ಕೃಷ್ಣನನ್ನೂ ಅರ್ಜುನನ್ನೂ ಬಹಳಹರಿತವಾದ ಏಳೆಂಟು ಬಾಣಗಳಿಂದ ಹೊಡೆದನು. ಸೈಂಧವನ ಪರಾಕ್ರಮವು ಹೆಚ್ಚಿನದಾಯಿತೊ!
ವ|| ಅಂತೆಚ್ಚು ಕಿಚ್ಚುಂ ಕಿಡಿಯುಮಾಗಿ ಪೆರ್ಚಿದುಮ್ಮಚ್ಚರದಿಂದಚ್ಚರಿಯಾಗಿ ಕಾದೆ
ವಚನ:ಪದವಿಭಾಗ-ಅರ್ಥ:ಅಂತೆಚ್ಚು ಕಿಚ್ಚುಂ ಕಿಡಿಯುಮಾಗಿ ಪೆರ್ಚಿದ ಉಮ್ಮಚ್ಚರದಿಂದ ಅಚ್ಚರಿಯಾಗಿ ಕಾದೆ (ಹೆಚ್ಚಿದ ಮತ್ಸರದಿಂದ ಆಶ್ಚರ್ಯವಾಗವ ಹಾಗೆ ಕಾದಲು-)
ವಚನ:ಅರ್ಥ:ವ|| ಕೋಪಗೊಂಡು ಹೆಚ್ಚಿದ ಮತ್ಸರದಿಂದ ಆಶ್ಚರ್ಯವಾಗವ ಹಾಗೆ ಕಾದಿದನು.ಕಾದಲು-
ಸ್ರ|| ಎಂತಸ್ಮತ್ಪ್ರುತ್ರನಂ ಸಂಗರದೊಳೞಿದೆಯಿನ್ನಂತೆ ನಿಲ್ ಶಕ್ತಿ ಚಾತು
ರ್ದುಂತಂಗಳ್ ನಿನ್ನನಾಂ ಕೊಲ್ವೆಡೆಯೊಳೆಲವೊ ಪೇೞ್ ಕಾವುವೇ ಕಾಯವಣ್ಮೆಂ|
ದಂತಾಂತೆಚ್ಚೆಚ್ಚು ಸೂತ ಧ್ವಜ ಹಯ ರಥ ಸಂಘಾತಮಂ ನುರ್ಗೆ ಲೋಕ
ಕ್ಕಂತಂ ಮಾೞ್ಪಂತಕಂಬೋಲ್ ಗದೆವಿಡಿದುಱದೆಯ್ತರ್ಪನಂ ಕಂಡನಂತಂ|| ೧೫೧ ||151||
ಪದ್ಯ-೧೫೧:ಪದವಿಭಾಗ-ಅರ್ಥ:ಎಂತು ಅಸ್ಮತ್ ಪುತ್ರನಂ ಸಂಗರದೊಳು ಅೞಿದೆಯ್ ಇನ್ನಂತೆ (ನನ್ನ ಮಗನನ್ನು ಹೇಗೆ ಕೊಂದೆಯೋ ಇದು ಹಾಗೆಯೇ) ನಿಲ್ ಶಕ್ತಿ ಚಾತುರ್ದುಂತಂಗಳ್ ನಿನ್ನನು ಆಂ (ನಿಲ್ಲು, ಶಕ್ತಿಯುಕ್ತವಾದ ಚತುರಂಗಸೈನ್ಯಗಳು ನಾನು) ಕೊಲ್ವೆಡೆಯೊಳ್ ಎಲವೊ ಪೇೞ್ ಕಾವುವೇ (ನಿನ್ನನ್ನು ಕೊಲ್ಲುವ ಸಂದರ್ಭದಲ್ಲಿ ರಕ್ಷಿಸುವುದೇ!) ಕಾಯವು ಅಣ್ಮು ಎಂದು (ನಿನ್ನ ಪೌರಷ ಕಾಯುವುದಿಲ್ಲ, - ರಕ್ಷಿಸಲಾರವು ಎಂದು) ಅಂತು ಆಂತು ಎಚ್ಚೆಚ್ಚು (ಮೇಲೆಬಿದ್ದು ಎದುರಿಸಿ ಹೊಡೆದು ಹೊಡೆದು), ಸೂತ ಧ್ವಜ ಹಯ ರಥ ಸಂಘಾತಮಂ (ಸಾರಥಿ, ಬಾವುಟ, ಕುದುರೆ ಮತ್ತು ತೇರಿನ ಸಮೂಹಗಳನ್ನು) ನುರ್ಗೆ (ನುಚ್ಚುನೂರಾಗಿ ಪುಡಿಯಾಗುವಂತೆ) ಲೋಕಕ್ಕೆ ಅಂತಂ ಮಾೞ್ಪ ಅಂತಕಂಬೋಲ್ (ಪ್ರಪಂಚಕ್ಕೆ ಅಂತ್ಯವನ್ನುಂಟುಮಾಡುವ ಯಮನಂತೆ) ಗದೆವಿಡಿದು ಉಱದೆ ಎಯ್ತರ್ಪನಂ ಕಂಡು ಅನಂತಂ (ಗದೆಯನ್ನು ಹಿಡಿದು ವೇಗವಾಗಿ ಬರುತ್ತಿದ್ದುದನ್ನು ಕೃಷ್ಣನು ನೋಡಿ ಅರ್ಜುನನಿಗೆ- ಹೇಳಿದನು-)
ಪದ್ಯ-೧೫೧:ಅರ್ಥ:“ನನ್ನ ಮಗನನ್ನು ಹೇಗೆ ಕೊಂದೆಯೋ ಇದು ಹಾಗೆಯೇ; ನಿಲ್ಲು, ಶಕ್ತಿಯುಕ್ತವಾದ ಚತುರಂಗಸೈನ್ಯಗಳು ನಾನು ನಿನ್ನನ್ನು ಕೊಲ್ಲುವ ಸಂದರ್ಭದಲ್ಲಿ ರಕ್ಷಿಸುವುದೇ! ರಕ್ಷಿಸಲಾರವು. ಸಾಯಿ” ಎಂದು ಪ್ರತಿಭಟಿಸಿ ಸಾರಥಿ, ಬಾವುಟ, ಕುದುರೆ ಮತ್ತು ತೇರಿನ ಸಮೂಹಗಳನ್ನು ನುಚ್ಚುನೂರಾಗಿ ಪುಡಿಯಾಗುವ ಹಾಗೆ ಹೊಡೆದನು. ಸೈಂಧವನು ರೋಷಾವೇಶದಿಂದ ಪ್ರಪಂಚಕ್ಕೆ ಅಂತ್ಯವನ್ನುಂಟುಮಾಡುವ ಯಮನಂತೆ ಗದೆಯನ್ನು ಹಿಡಿದು ವೇಗವಾಗಿ ಬರುತ್ತಿದ್ದುದನ್ನು ಕೃಷ್ಣನು ನೋಡಿ ಅರ್ಜುನನಿಗೆ- ಹೇಳಿದನು-
ಕಂ|| ತುಡು ಪಾಶುಪತಮನೆನೆ ನರ
ನೆಡೆಮಡಗದೆ ತುಡೆ ದಿಶಾಳಿ ನಡುಗಿದುದು ಸುರು|
ಳ್ದುಡುಗಿದುದು ವಿಯತ್ತಳಮೆಳೆ
ಪಿಡುಗಿದುದು ಕಲಂಕಿ ಕದಡಿದುದು ಶಿವನ ಮನಂ|| ೧೫೨ ||
ಪದ್ಯ-೧೫೨:ಪದವಿಭಾಗ-ಅರ್ಥ:ತುಡು ಪಾಶುಪತಮನು ಎನೆ (ಕೃಷ್ಣನು ‘ಪಾಶುಪತಾಸ್ತ್ರವನ್ನು ತೊಡು- ಪ್ರಯೋಗಿಸು’ ಎಂದು ಹೇಳಲು) ನರನು ಎಡೆಮಡಗದೆ (ಎಡೆ ಮಡಗದೆ ಅವಕಾಶಕೊಡದೆ ಕೂಡಲೆ) ತುಡೆ ದಿಶಾಳಿ ನಡುಗಿದುದು (ಅರ್ಜುನನು ಸಾವಕಾಶಮಾಡದೆ ಅದನ್ನು ತೊಡಲು- ಪ್ರಯೋಗಿಸಲು ದಿಕ್ಕುಗಳ ಸಮೂಹವು ನಡುಗಿತು) ಸುರುಳ್ದು ಉಡುಗಿದುದು ವಿಯತ್ತಳಂ (ಆಕಾಶಪ್ರದೇಶವು ಸುರುಳಿಯಾಗಿ ಸುಕ್ಕಿಹೋಯಿತು) ಎಳೆ ಪಿಡುಗಿದುದು (ಭೂಮಿಯು ಒಡೆಯಿತು.) ಕಲಂಕಿ ಕದಡಿದುದು ಶಿವನ ಮನಂ ()
ಪದ್ಯ-೧೫೨:ಅರ್ಥ: ಕೃಷ್ಣನು ‘ಪಾಶುಪತಾಸ್ತ್ರವನ್ನು ಪ್ರಯೋಗಿಸು’ ಎಂದು ಹೇಳಲು, ಅರ್ಜುನನು ಸಾವಕಾಶಮಾಡದೆ ಅದನ್ನು ಪ್ರಯೋಗಿಸಲು ದಿಕ್ಕುಗಳ ಸಮೂಹವು ನಡುಗಿತು. ಆಕಾಶಪ್ರದೇಶವು ಸುರುಳಿಯಾಗಿ ಸುಕ್ಕಿಹೋಯಿತು. ಭೂಮಿಯು ಒಡೆಯಿತು. ಈಶ್ವರನ ಮನಸ್ಸು ಕದಡಿ ಅಲ್ಲಾಡಿಹೋಯಿತು.
ಉ|| ಸುೞಿಯೊಳಗಿರ್ದು ಬೆಟ್ಟು ಪೊಱಪೊಣ್ಮುವಿನಂ ಲವಣಾಂಬುರಾಶಿ ಕು
ಕ್ಕುೞಗುದಿವಲ್ಲಿ ಕೂೞ್ಗುದಿಯೆ ಮೇಗೆ ಸಿಡಿಲ್ದಗುಳಂತೆ ಕೂಡೆ ತ|
ತ್ತೞಗುದಿಯುತ್ತುಮಿರ್ಪ ಕುದಿಯೊಳ್ ಸಿಡಿದಲ್ಲಿಯ ಮುತ್ತುಗಳ್ ಛೞಿಲ್
ಛೞಿಲೆನೆ ಕೊಂಡುವೊರ್ಮೊದಲೆ ರುದ್ರ ಸುರೇಂದ್ರ ವಿಮಾನಪಙ್ಕ್ತಿಯಂ|| ೧೫೩ ||
ಪದ್ಯ-೧೫೩:ಪದವಿಭಾಗ-ಅರ್ಥ:ಸುೞಿಯೊಳಗಿರ್ದು ಬೆಟ್ಟು (ಸಮುದ್ರದ ಸುಳಿಯಲ್ಲಿದ್ದ ಪರ್ವತಗಳು) ಪೊಱಪೊಣ್ಮುವಿನಂ (ಹೊರಹೊಮ್ಮುತ್ತಿರಲು) ಲವಣಾಂಬುರಾಶಿ ಕುಕ್ಕುೞಗುದಿವಲ್ಲಿ ಕೂೞ್ಗುದಿಯೆ(ಕುಕ್ಕುರ ಕುದಿವಲ್ಲಿ, ಕೂಳ್ ಕುದಿಯೆ, ಉಪ್ಪುನೀರಿನ ಸಮುದ್ರವು ಅನ್ನವು ಕುದಿಯುವಂತೆ ಕುದಿಯುವಾಗ) ಮೇಗೆ ಸಿಡಿಲ್ದ ಅಗುಳಂತೆ (ಮೇಲಕ್ಕೆ ಸಿಡಿದ ಅನ್ನದ ಅಗುಳಂತೆ) ಕೂಡೆ ತತ್ತೞಗುದಿಯುತ್ತುಂ ಇರ್ಪ ಕುದಿಯೊಳ್ (ಕೂಡಲೆ ತಳತಳವೆಂದು ಕುದಿಯುತ್ತಿರುವ ಕುದಿತದಲ್ಲಿ) ಸಿಡಿದು ಅಲ್ಲಿಯ ಮುತ್ತುಗಳ್ ಛೞಿಲ್ಛೞಿಲ್ ಎನೆ (ಆ ಸಮುದ್ರದ ಮುತ್ತುಗಳು ಛಿಟಿಲ್ ಛಿಟಿಲ್ ಎಂದು) ಕೊಂಡುವು ಒರ್ಮೊದಲೆ ರುದ್ರ ಸುರೇಂದ್ರ ವಿಮಾನ ಪಙ್ಕ್ತಿಯಂ (ಆಕಾಶಕ್ಕೆ ಹಾರಿ ಶಿವನ ಮತ್ತು ದೇವೇಂದ್ರನ ವಿಮಾನಗಳ ಸಾಲುಗಳನ್ನು ಒಂದೇಸಲ ಆಕ್ರಮಿಸಿದುವು)
ಪದ್ಯ-೧೫೩:ಅರ್ಥ:ಸಮುದ್ರದ ಸುಳಿಯಲ್ಲಿದ್ದ ಪರ್ವತಗಳು ಹೊರಹೊಮ್ಮುತ್ತಿರಲು ಉಪ್ಪುನೀರಿನ ಸಮುದ್ರವು ಅನ್ನವು ಕುದಿಯುವಂತೆ ಕುದಿಯುವಾಗ ಮೇಲಕ್ಕೆ ಸಿಡಿದ ಅನ್ನದ ಅಗುಳಂತೆ ಕೂಡಲೆ ತಳತಳವೆಂದು ಕುದಿಯುತ್ತಿರುವ ಕುದಿತದಲ್ಲಿ ಆ ಸಮುದ್ರದ ಮುತ್ತುಗಳು ಛಿಟಿಲ್ ಛಿಟಿಲ್ ಎಂದು ಆಕಾಶಕ್ಕೆ ಹಾರಿ ಶಿವನ ಮತ್ತು ದೇವೇಂದ್ರನ ವಿಮಾನಗಳ ಸಾಲುಗಳನ್ನು ಒಂದೇಸಲ ಆಕ್ರಮಿಸಿದುವು.
ವ||ಅಂತು ಸಮುದ್ರಕ್ಷೋಭಮುಂ ತ್ರೈಲೋಕ್ಯಕ್ಷೋಭಮುಮೊಡನೊಡನಾಗೆ
ವಚನ:ಪದವಿಭಾಗ-ಅರ್ಥ: ಅಂತು ಸಮುದ್ರಕ್ಷೋಭಮುಂ ತ್ರೈಲೋಕ್ಯಕ್ಷೋಭಮುಂ (ಸಮುದ್ರದ ಕಲಕುವಿಕೆಯೂ, ಮೂರು ಲೋಕಗಳ ಭಯಕಂಪನಾದಿಗಳೂ) ಒಡನೊಡನೆ ಆಗೆ-
ವಚನ:ಅರ್ಥ:ವ|| ಹಾಗೆ ಸಮುದ್ರದ ಕಲಕುವಿಕೆಯೂ, ಮೂರು ಲೋಕಗಳ ಭಯಕಂಪನಾದಿಗಳೂ ಜೊತೆಜೊತೆಯಲ್ಲಿಯೇ ಉಂಟಾಗಲು-.
ಚಂ|| ತೆಗೆನೆರೆದೂಱಿಕೊಂಡಿಸೆ ಶಿರಂ ಪರಿದತ್ತ ವಿಯತ್ತಳಂಬರಂ
ನೆಗೆದೊಡೆ ರಾಹು ಬಾಯ್ದೆರೆದು ನುಂಗಲೆ ಬಂದಪುದೆಂಬ ಶಂಕೆಯಿಂ|
ದಗಿದು ದಿನೇಶನಸ್ತಗಿರಿಯಂ ಮರೆಗೊಂಡನಮೋಘಮೆಂಬ ಮಾ
ತುಗಳ ನೆಗೞ್ತೆಯಂ ಪಡೆದನಾಹವದೊಳ್ ಪರಸೈನ್ಯಭೈರವಂ|| ೧೫೪ ||
ಪದ್ಯ-೧೫೪:ಪದವಿಭಾಗ-ಅರ್ಥ:ತೆಗೆನೆರೆದು ಊಱಿಕೊಂಡು ಇಸೆ (ಬಾಣವನ್ನು ಕಿವಿಯವರೆಗೂ ಸೆಳೆದು ಬಲವಾಗಿ ಅದುಮಿಕೊಂಡು ಹೊಡೆಯಲು) ಶಿರಂ ಪರಿದು (ಸೈಂಧವನ ತಲೆಯು ಕತ್ತರಿಸಿ) ಅತ್ತ ವಿಯತ್ತಳಂಬರಂ ನೆಗೆದೊಡೆ (ಆಕಾಶದ ಕಡೆ ಹಾರಿದಾಗ) ರಾಹು ಬಾಯ್ದೆರೆದು ನುಂಗಲೆ ಬಂದಪುದೆಂಬ ಶಂಕೆಯಿಂದ (ರಾಹುಗ್ರಹವು ಬಾಯಿ ತೆರೆದುಕೊಂಡು ನುಂಗಲು ಬಂದಿದೆಯೋ ಎನ್ನುವ ಭಯದಿಂದ) ಅಗಿದು ದಿನೇಶನು ಅಸ್ತಗಿರಿಯಂ ಮರೆಗೊಂಡನು (ಸೂರ್ಯನು ಹೆದರಿ ಅಸ್ತಪರ್ವತದಲ್ಲಿ ಅಡಗಿದನು.) ಅಮೋಘಮೆಂಬ ಮಾತುಗಳ ನೆಗೞ್ತೆಯಂ ಪಡೆದನು ಆಹವದೊಳ್ (ಆಹವದೊಳ್- ಯುದ್ಧದಲ್ಲಿ ಬೆಲೆಯಿಲ್ಲದ ಶಕ್ತಿಯುಳ್ಳವನು ಎಂಬ ಕೀರ್ತಿಯನ್ನು ಪಡೆದನು) ಪರಸೈನ್ಯಭೈರವಂ (ಅರ್ಜುನನು)
ಪದ್ಯ-೧೫೪:ಅರ್ಥ: ಅರ್ಜುನನು ಬಾಣವನ್ನು ಕಿವಿಯವರೆಗೂ ಸೆಳೆದು ಬಲವಾಗಿ ಅದುಮಿಕೊಂಡು ಹೊಡೆಯಲು, ಸೈಂಧವನ ತಲೆಯು ಕತ್ತರಿಸಿ ಆಕಾಶದ ಕಡೆ ಹಾರಿದಾಗ ರಾಹುಗ್ರಹವು ಬಾಯಿ ತೆರೆದುಕೊಂಡು ನುಂಗಲು ಬಂದಿದೆಯೋ ಎನ್ನುವ ಭಯದಿಂದ ಸೂರ್ಯನು ಹೆದರಿ ಅಸ್ತಪರ್ವತದಲ್ಲಿ ಅಡಗಿದನು/ ಮುಳುಗಿದನು. ಪರಸೈನ್ಯಭರವನಾದ ಅರ್ಜುನನು ಇದರಿಂದ ಯುದ್ಧದಲ್ಲಿ ಬೆಲೆಯಿಲ್ಲದ ಶಕ್ತಿಯುಳ್ಳವನು ಎಂಬ ಕೀರ್ತಿಯನ್ನು ಪಡೆದನು.
ಚಂ|| ಬಿರಿದಲರೋಳಿ ಸಗ್ಗದ ಮದಾಳಿಗಳಂ ಗೆಡಗೊಂಡು ದೇವಸುಂ
ದರಿಯರ ಕೆಯ್ಗಳಿಂದಮುಗೆ ತುಂಬುರು ನಾರದರೊಂದು ಗೇಯದಿಂ|
ಚರಮೆರ್ದೆಯಂ ಪಳಂಚಲೆಯೆ ವೀರಲತಾಂಗಿಯ ಸೋಂಕು ಮೆಯ್ಯೊಳಂ
ಕುರಿಸೆ ನಿರಾಕುಳಂ ಕಳೆದನಾಜಿ ಪರಿಶ್ರಮಮಂ ಗುಣಾರ್ಣವಂ|| ೧೫೫
ಪದ್ಯ-೧೫೫:ಪದವಿಭಾಗ-ಅರ್ಥ:ಬಿರಿದ ಅಲರ ಓಳಿ (ಅರಳಿದ ಪುಷ್ಪಗಳ ಸಾಲು) ಸಗ್ಗದ ಮದಾಳಿಗಳಂ ಗೆಡಗೊಂಡು ( ಸ್ವರ್ಗದ ಮದಾಳಿ- ಮದಿಸಿದ ದುಂಬಿಗಳಿಂದ ಜೊತೆಕೂಡಿ) ದೇವಸುಂದರಿಯರ ಕೆಯ್ಗಳಿಂದಂ ಉಗೆ (ದೇವಸುಂದರಿಯರ ಕೈಗಳಿಂದ ಸುರಿಯುತ್ತಿರಲು) ತುಂಬುರು ನಾರದರ ಒಂದು ಗೇಯದ ಇಂಚರಂ (ತುಂಬುರು ನಾರದರ ಗೀತದ ಒಂದು ಇಂಪಾದ ಸ್ವರವು) ಎರ್ದೆಯಂ ಪಳಂಚಿ ಅಲೆಯೆ ( ಎದೆಯನ್ನು ತಾಗಿ ಅಲೆಯುತ್ತಿರಲು) ವೀರಲತಾಂಗಿಯ ಸೋಂಕು ಮೆಯ್ಯೊಳು ಅಂಕುರಿಸೆ (ವಿಜಯಲಕ್ಷ್ಮಿಯ ಸ್ಪರ್ಶವು ಶರೀರದಲ್ಲಿ ರೋಮಾಂಚನವಾಗುತ್ತಿರಲು) ನಿರಾಕುಳಂ (ಶ್ರಮವಿಲ್ಲದೆಯೇ) ಕಳೆದನು ಆಜಿ ಪರಿಶ್ರಮಮಂ ಗುಣಾರ್ಣವಂ ( ಯುದ್ಧದ ಆಯಾಸವನ್ನು ಶ್ರಮವಿಲ್ಲದೆಯೇ ಕಳೆದನು- ಅರ್ಜುನನು)
ಪದ್ಯ-೧೫೫:ಅರ್ಥ: ಅರಳಿದ ಪುಷ್ಪಗಳ ಸಾಲು, ಸ್ವರ್ಗದ ಮದಿಸಿದ ದುಂಬಿಗಳಿಂದ ಜೊತೆಕೂಡಿ, ದೇವಸುಂದರಿಯರ ಕೈಗಳಿಂದ ಸುರಿಯುತ್ತಿರಲು ಅಂದರೆ ಪುಷ್ವವೃಷ್ಟಿಯಾಗುತ್ತಿರಲು, ತುಂಬುರು ನಾರದರ ಗೀತದ ಒಂದು ಇಂಪಾದ ಸ್ವರವು ಎದೆಯನ್ನು ತಾಗಿ ಅಲೆಯುತ್ತಿರಲು ವಿಜಯಲಕ್ಷ್ಮಿಯ ಸ್ಪರ್ಶವು ಶರೀರದಲ್ಲಿ ರೋಮಾಂಚನವಾಗುತ್ತಿರಲು ಅರ್ಜುನನು ಯುದ್ಧದ ಆಯಾಸವನ್ನು ಶ್ರಮವಿಲ್ಲದೆಯೇ ಕಳೆದನು.
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಏಕಾದಶಾಶ್ವಾಸಂ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹನ್ನೊಂದನೆಯ ಆಶ್ವಾಸ||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ

[ಸಂಪಾದಿಸಿ]
ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ