ವಿಷಯಕ್ಕೆ ಹೋಗು

ಪುಟ:ಅಜಿತ ಕುಮಾರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಜಿತ ಕುಮಾರ.

ಯಾದ ತಾರಾಪತಿಯ ಬಳಿಗೆ ಹೋಗಿ, 'ಕಲ್ಲ ನ್ನು ಎತ್ತಿಯಾಯಿತು, ಅದರ ಬುಡದಲ್ಲಿದ್ದ ಈ ವಸ್ತುಗಳು ಯಾರವು ?' ಎಂದು ಕೇಳಿ ಇವನ್ನು ತೋರಿಸು. ಆ ಮೇಲಿನ ಸಂಗತಿಯೆಲ್ಲಾ ದೇವರ ಕೈಯಲ್ಲಿದೆ !" ಎಂದು ಹೇಳಿದಳು.

ಆಗ ಅಜಿತನಿಗೆ ಕಣ್ಣೀರು ಬಂತು. "ಹಾಗಾದರೆ, ಅಮ್ಮಾ, ನಾನು ನಿನ್ನನ್ನು ಬಿಟ್ಟು ಹೋಗಬೇಕೇ ?” ಎಂದು ಅಳುತ್ತ ಕೇಳಿದನು.

ಅದಕ್ಕೆ ನೇತ್ರವತಿಯು-“ಮಗು, ನನಗೋಸ್ಕರ ಅಳಬೇಡ, ಕಂಡೆಯಾ ? ಹಣೆಯಲ್ಲಿ ಬರೆದಿರುವುದನ್ನು ಯಾರೂ ತಪ್ಪಿಸಲಾರರು. ಅದರಲ್ಲಿಯೂ ಯಾವಾಗಲೂ ದುಃಖವನ್ನೇ ಅನುಭವಿಸುತ್ತಿದ್ದವರಿಗೆ ಸಂಕಟವೆಂಬುದು ಅಷ್ಟೊಂದು ಕಠಿನವಾಗಿ ಕಾಣಿಸುವುದಿಲ್ಲ. ನನ್ನ ಬಾಲ್ಯವೂ ದುಃಖಮಯವಾದುದು, ಯೌವನವೂ ಅದರಂತೆಯೆ, ಇನ್ನು ವೃದ್ಧಾಪ್ಯವು ಕೂಡ ದುಃಖದಲ್ಲಿಯೇ ಪರಿಣಮಿಸುವುದು! ಅದೂ ನನಗೆ ಗೊತ್ತಿದೆ; ಆ ದುಷ್ಟ ರಾಕ್ಷಸರಾದ ಹಂಸಪುತ್ರರು ನನ್ನನ್ನು ಎತ್ತಿಕೊಂಡು ಹೋಗಿ, ತಮ್ಮ ದಾಸಿಯನ್ನಾಗಿ ಮಾಡಿ, ಸೆರೆಯಲ್ಲಿ ಇಟ್ಟಿರುವಂತೆ ಅನೇಕಾವೃತ್ತಿ ಕನಸು ಕಂಡಿದ್ದೇನೆ. ಕಟ್ಟಕಡೆಗೆ ನನ್ನ ಈ ಮುದ್ದು ಮಗನು ಬಂದು ನನ್ನನ್ನು ಬಿಡಿಸಿಕೊಂಡು ತಂದದ್ದರಿಂದ ಆತನ ಕೀರ್ತಿಯನ್ನು ಕೂಡ ಕೇಳಿ ಆನಂದಪಟ್ಟೆನು. ಈಗ ಅದು ಹಾಗಿರಲಿ ; ನನಗೆ ಎಷ್ಟು ಸಂಕಷ್ಟಗಳು ಒದಗಿದರೂ, ಪೂರ್ವದಂತೆಯೇ ಧೈರ್ಯದಿಂದ ತಾಳಿಕೊಳ್ಳುವೆನು, ನೀನು ನನ್ನ ಯೋಚನೆಯನ್ನು ಬಿಟ್ಟು, ಯವನ ದೇಶಕ್ಕೆ ಹೋಗು” ಎಂದು ಹೇಳಿ, ಮಗನನ್ನು ಮಾತುಗಳಿಂದ ಒಡಂಬಡಿಸಿ, ಮುತ್ತಿಟ್ಟು ಕಳುಹಿಸಿಕೊಟ್ಟು, ವರುಣಾಲಯಕ್ಕೆ ಅಳುತ್ತ ಹಿಂದಿರುಗಿ ಹೋದಳು. ಇತ್ತ ಅಜಿತನು ಅರ ಮನೆಗೆ ಹೋಗಿ, ತನಗೆ ಬೇಕಾದ ಬಟ್ಟೆಗಳನ್ನು ಕಟ್ಟಿಕೊಂಡು, ಯವನ ದೇಶಕ್ಕೆ ಹೊರಟನು. ಅವನ ತಾಯಿ ಅವನನ್ನು ಈ ಸಲ ಕಂಡದ್ದು ಕಡೆಯ ಸಲದ್ದಾಯಿತು.