ಪುಟ:ಅನ್ನಪೂರ್ಣಾ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ಅನ್ನಪೂರ್ಣಾ

ನಗುತ್ತ ತನ್ನ ಹಿಂದೆಯೇ ಬಂದಂತೆ ಭಾಸವಾಗುತ್ತದೆ. ತತ್ತರಿಸುತ್ತ
ಆತ ಅಲ್ಲಿಯೇ ನಿಂತು ಬಿಡುತ್ತಾನೆ....ರೋಟರಿಯ ಕೆಳಗೆ.
****
ಮೇ ದಿನಾಂಕ ಮೂರು. ಬೆಳಗಾಗಿದೆ. ಬೆಳಗಾಗಿರಲೇಬೇಕು ಎಂದು
ಆನಂದ್ ಮುಖವನ್ನು ಅರ್ಧ ಮರೆಮಾಡಿದ್ದ ಮುಸುಕಿನೊಳಗಿಂದಲೇ ಕಣ್ಣು
ತೆರೆಯದೆ ಯೋಚಿಸುತ್ತಿದ್ದಾನೆ. ಎರಡು ವರ್ಷದ ಮಗು ಎದ್ದು ಕುಳಿತು
ಚೀರಾಡುತ್ತಿದೆ. ತಾರಾ ಭುಜ ಕುಲುಕುತ್ತಾ ಎಬ್ಬಿಸುತ್ತಿದ್ದಾಳೆ.
"ಏಳೀಂದ್ರೆ....ಏಳೀಂದ್ರೆ...."
"ಹೂ....ಊಂ...."
ಕಾಲುಗಳು ಸೆಳೆಯುತ್ತಿವೆ. ಕಾರಬೆರಳುಗಳು ನೆಟಿಕೆಗಾಗಿ‌ ಹಾತೊರೆ
ಯುತ್ತಿವೆ. ಕ್ಷೀಣಗೊಂಡ ದೇಹ, " ಇನ್ನಿಷ್ಟು ಇನ್ನಿಷ್ಟು ನಿದ್ದೆ " ಎಂದು
ಕರೆದು ಕೇಳುತ್ತಿದೆ.
ಆದರೊ ಏಳಲೇಬೇಕು.
‌‌‌‌ತಾರಾ ಹೇಳುತ್ತಿದ್ದಾಳೆ: "ಈ ದಿವಸ ಕಾಫೀ ಪುಡೀನೂ ಇಲ್ಲಾಂದ್ರೆ..."
"ಹೂಂ....ಹಾಲೆಲ್ಲಾ ಮಗೂಗೆ ಕುಡಿಸು ತಾರಾ. ಬರೇ ಬಿಸಿ ನೀರು
ನಮ್ಮಿಬ್ಬರಿಗೂ....ಮುಂದೆ ನೋಡೋಣವಂತೆ ಕಾಫೀಪುಡಿ ಸಕ್ಕರೆ ದೊರೆಯುವ
ದಿನ ಬಂದೀತು!"
ದ್ರುಷ್ಟಿ, ಹರಿದು ಚಲಾಪಿಲ್ಲಿಯಾಗಿದ್ದ "ಅಮೆರಿಕನ್ ರಿಪೋರ್ಟರ್"
ನತ್ತಹೋಯಿತು. ಕೈ, ಕಾರ್ಯನಿರತ ಪತ್ರಿಕೋದ್ಯಮಿಗಳ ನಾಯಕ ಚಲಪತಿ
ರಾಯರ ಮುದ್ರಿತಭಾಷಣದತ್ತ ಸಾಗಿತ್ತು.
ಮತ್ತೆ ಆ ಆಸೆ....ಸಂಘಟನೆ, ಹೋರಾಟ, ಯಶಸ್ಸು, ಮಾನವನಾಗಿ
ಬಾಳುವ ಸಾಧ್ಯತೆ....ಕಾಫೀಪುಡಿ, ಸಕ್ಕರೆ, ಹಾಲು ಎಲ್ಲವೂ ಸೇರಿ ಸಿದ್ಧವಾದ
ಕಾಫಿ........