ಪುಟ:ಅನ್ನಪೂರ್ಣಾ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬

ಅನ್ನಪೂರ್ಣಾ

"ಹೂಂ" ಎಂದ ಮಾಧು.
ನಾಲ್ಕು ದಿನಗಳಮೇಲೆ ಪ್ರೇಮಾಳ ಚಿಕ್ಕತಂಗಿ ಅವೆರಡೂ ಪುಸ್ತಕ
ತಂದಳು. ಒಂದರೊಳಗೆ ಚೀಟಿ ಇತ್ತು.
"ನಿಮ್ಮನ್ನು ಕೇಳದೆ ಒಯ್ದದ್ದಕ್ಕೆ ಕ್ಷಮೆ ಬೇಡುವೆ. ಬೇಡುವೆ. ಬೇರೇನಾದರೂ
ಕಳಿಸುವಿರಾ?"
ಸಹಿ ಕೂಡಾ ಇರಲಿಲ್ಲ!
ಮಾಧೂ ಆ ಹುಡುಗಿಯ ಮುಂಗುರುಳು ನೇವರಿಸಿದ. ಬೇರೊಂದು
ಪುಸ್ತಕ ತೆಗೆದು, ಅದರೊಳಗೊಂದು ಚೇಟಿಯಿಟ್ಟ.
ಆ ಚೀಟಿ ಬರೆದಾಗ ಎದೆ ಡವಡವನೆ ಹೊಡೆದುಕೊಂಡಿತು:
"ನಿಮ್ಮ ಚೀಟಿ ತಲುಪಿತು. ಪುಸ್ತಕ ಕಳಿಸಿದೀನಿ-ಮಾಧೂ."
ಆ ಮಗುವನ್ನು ಕಳುಹಿಕೊಟ್ಟ ಮೇಲೆ ಮಾಧವ ಕಿಟಕಿಯತ್ತ ನೋಡಿದ.
ಪ್ರೇಮಾ ಅಲ್ಲೇ ನಿಶ್ಚಲಳಾಗಿ ನಿಂತಿದ್ದಳು. ಆ ಕಣ್ಣುಗಳಲ್ಲಿ ತೇವವಾಡುತ್ತಿದ್ದ
ಹಾಗೆ ತೋರುತ್ತಿತ್ತು.
ಪರಸ್ಪರ ನೋಡಬೇಕೆಂಬ ಆಸೆ ಅವರಿಗೆ.ಆದರೆ ಕದ್ದು ನೋಡಬೇಕು.
ಒಬ್ಬರೊಡನೊಬ್ಬರು ಮಾತಾಡಬೇಕೆಂಬ ಬಯಕೆ ಅವರಿಗೆ. ಆದರೆ ಆದಕ್ಕೆ
ಅವಕಾಶವಿಲ್ಲ. ಕನ್ನಡದೇಶದ ಸಮಾಜಪದ್ದತಿ ಅಂಥಾದ್ದು. ಸಾಮಾಜಿಕ
ಸಂಬಂಧಗಳು ಅಂಥವು. ಹುಡುಗ ಹುಡುಗಿಯರು ಜತೆಯಲ್ಲಿ ಹೋದರೆ
ಅದಕ್ಕೆ ಅಪಾರ್ಥ ಕಲ್ಪಿಸುತ್ತಾರೆ. ಸಹಸ್ರ ಕಣ್ಣುಗಳು ತೀಕ್ಷ್ಣನೋಟ
ಬೀರುತ್ತವೆ. ಸಾವಿರ ಕಿವಿಗಳು ನಿವುರಿ ನಿಲ್ಲುತ್ತವೆ.ಹೃದಯವನ್ನು ಹರಿದು
ತಿನ್ನುವ ಹಾಗೆ ಮಾತುಗಳು ಇರಿಯುತ್ತವೆ.
ತಮಗೆ ಅರಿವಿಲ್ಲದಂತೆಯೇ ಒಬ್ಬರನ್ನೊಬ್ಬರು ಪ್ರೀತಿಸಿದರು ಆ ಲೈಲಾ
ಮಜ್ನು . ಪುಸ್ತಕಗಳ ಮೇಲಿನ ಹೊದಿಕೆಯ ರಕ್ಷಯೊಳಗೆ ಅವರ ಒಲುಮೆಯ
ಓಲೆಗಳು ಅತ್ತಿಂದಿತ್ತ ಇತ್ತಿಂದತ್ತ ಪಯಣ ಬೆಳೆಸಿದುವು. ಮನೆಯ ಪುಟ್ಟ
ಮಕ್ಕಳು ಅವರಿಬ್ಬರು ಸಂದೇಶವಾಹಕರಾದರು.
ಗುಡಿಯ ಹಿಂದಿನ ಬೆಟ್ಟದ ಮರೆಯಲ್ಲಿ ಆ ಮೊದಲ ಭೇಟಿ!
ಆತನಾದರೋ ಗೊತ್ತಾಗಿದ್ದುದಕ್ಕಿಂತ ಒಂದು ಗಂಟೆ ಮುಂಚೆಯೆ
ಬಂದು ಹಾದಿ ನೋಡುತ್ತಿದ್ದ.