ಪುಟ:ಅನ್ನಪೂರ್ಣಾ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸುಮಂಗಲೆ ಶಿರಿನ್

೪೯

" ಮಧೂನೆ ? ಮಾಧೂ ಅಲ್ವೆ ? "
"ಉಹುಂ. ಮಧು. ನನ್ನ ಮಧು."
....ಮತ್ತೆ ಅವರು ಭವಿತವ್ಯದ ಮಾತಾಡಿದರು. ಆತ ಪಾಸಾಗಿಯೇ
ಆಗುತ್ತಾನೆ. ಆ ಮೇಲೆ ಕೆಲಸ ಹುಡುಕಬೇಕು. ಯಾರಾದರೂ ಸಹಾಯ
ಮಾಡಿಯೇ ಮಾಡುತ್ತಾರೆ. ಕೆಲಸ ಸಿಗದೇ ಇದ್ದೀತೇ ?
....ಆ ಊರಲ್ಲಿ ನೆಲಸಿದ ಸಿಂಧಿಗಳೆಲ್ಲ ತಮ್ಮ ಮಕ್ಕಳಿಗಾಗಿ ಒಂದು
ಸಣ್ಣ ಶಾಲೆ ಏರ್ಪಡಿಸುವರಂತೆ. ಅಲ್ಲಿ ಉಪಾಧ್ಯಾಯಿನಿಯಾಗುವ ಆಸೆ
ಶಿರಿನ್‌ಗೆ. ಆಕೆ ಕಲಿತವಳಲ್ಲವೆ ಸ್ವಲ್ಪ ?
ಹಾಗೆ ಇಬ್ಬರೂ ಇಷ್ಟಿಷ್ಟು ಸಂಪಾದಿಸಬೇಕು- ಅದಾದಮೇಲೆ
ತಮ್ಮದೇ ಆದೊ೦ದು ಗುಬ್ಬಚ್ಚಿಗೂಡು-ಪುಟ್ಟ ಸಂಸಾರ.
ನಡುವೆ ಮನೆಯ ಹಿರಿಯರು ತಡೆಯಾದರೆ ? ಆಗ ? ಅಂಥ ಆಪತ್ತು
ಬಂದಾಗ ?
ಅಂಥ ಯೋಚನೆಗಳ ನಡುವೆ ಅವರಿಬ್ಬರ ಮನವೂ ತಲ್ಲಣಿಸುತ್ತಿತ್ತು.
ಹಾಗಾಗಲಾರದು-ಎಂದು ಅವರು ಆಶಿಸುತ್ತಿದ್ದರು. ಆದರೆ, ಒಂದುವೇಳೆ
ಹಾಗಾದರೆ ಮುಂದೆ ? ಅಲ್ಲಿಗೆ ಅವರ ವಿಚಾರ ಸರಣಿ ನಿಲ್ಲುತ್ತಿತ್ತು.
....ಮುಂದೆ ? ಹಿರಿಯರನ್ನು ಮೀರಿ ವರ್ತಿಸುವುದು ಸಾಧ್ಯವಾದೀತೆ ?
ಅವರನ್ನು ವಿರೋಧಿಸಿ ನಡೆಯುವುದಕ್ಕಾದೀತೇ ? ಆಗ ದಿಕ್ಕು ತೋಚದೆ
ಹೋಗುತ್ತಿತ್ತು ಅವರಿಬ್ಬರಿಗೂ....
ಅಂತೂ ಆ ದಿನ ಬಂತು. ಮಾಧುವಿನ ಪರೀಕ್ಷೆ ಮುಗಿದು ಬೇಸಿಗೆಯ
ರಜಾ ಆರಂಭವಾದ ಕಾಲ. ಆಗಲೇ ಮಾಧವನ ತಂದೆ ಮಗನ ಮದುವೆಯ
ಮಾತೆತ್ತಿದರು. ಹೆಣ್ಣಿನ ಜತೆಯಲ್ಲಿ ನೌಕರಿಯನ್ನೂ ಕೊಡಿಸುವ ಆಶ್ವಾಸನೆ
ಬಂದಿತ್ತು ! ಮಾಧೂ ಒಲ್ಲೆನೆಂದ.
ತಂದೆ ಗದರಿಸಿದರು.
ತಾಯಿ ಅತ್ತು ಗೋಳಾಡಿದರು.
" ನನಗೆ ಮದುವೆಯೇ ಬೇಡ " ಎಂದ ಅವರ ಹುಡುಗ.
ತಂದೆ ಸಿಟ್ಟಿದ್ದು ಮಗನ ಕೆನ್ನೆಗೆ ಎರಡೇಟು ಬಿಗಿದರು. ಆ ದಿನ ಮಾಧು
ಅನ್ನ ನೀರು ಮುಟ್ಟಲಿಲ್ಲ.