ಪುಟ:ಅನ್ನಪೂರ್ಣಾ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ಅನ್ನಪುರ್ಣಾ

ನೋಡಲು ಸುಂದರವಾಗಿದೆ ನಿಮ್ಮ ಊರು. ಬಸವನಗುಡಿಯ,
ಕುಮಾರಾ ಪಾರ್ಕಿನ, ದಂಡಿನ ಬೀದಿಗಳು ಎಷ್ಟೊಂದು ವಿಶಾಲವಾಗಿವೆ ! ಆ
ಮನೆಗಳ ಕಿಟಕಿಗಳು ಎಷ್ಟೊಂದು ಅಗಲ ! ಆ ಕಿಟಕಿಯ ಕಂಬಿಗಳನ್ನು
ಹಿಡಿದು ಕಣ್ಣು ಮುಚ್ಚಾಲೆಯಾಡಬೇಕೆಂಬ ಆಸೆಯಾಗುತ್ತಿದೆ !
ನಾನು ಬದುಕಿ ಬಾಳಿದ್ದ ಹಟ್ಟಯೋ ! ಅಲ್ಲಿ ಕಿಟಕಿಗಳೇ ಇರಲಿಲ್ಲ
ಸ್ವಾಮಿ. ಅದೊಂದು ಪುಟ್ಟ ಗೂಡು. ಬೆಚ್ಚಗಿರಲೆಂದು ನಾನೇ ಕಟ್ಟದ್ದೆ.
ಬೆಚ್ಚಗಿರುವುದು ಸಾಧ್ಯವಾಗಲೇ ಇಲ್ಲ ಸ್ವಾಮಿ. ಎಲ್ಲವೂ ತಣ್ಣಗಾಗಿ
ಹೋಯಿತು.
ನನ್ನ ಕತೆ ಹೇಳಲಾ ? ಗುಮ್ಮ ಬಂತೆಂದು ಹೆದರಿಸಲು ಮಕ್ಕಳಿಗೆ
ಒಮ್ಮೊಮ್ಮೆ ಪ್ರೇತದ ಕತೆ ಹೇಳುತ್ತಾರೆ. ಆದರೆ ಇಲ್ಲಿ ಪ್ರೇತವಾದ ನಾನೇ
ಕತೆ ಹೇಳುತ್ತಿದ್ದೇನೆ !
ಹೆಸರು ಕೇಳ ಬೇಡಿ. ಹೆಸರಿನಲ್ಲೇನಿದೆ ? ಯಾವ ಜನಾಂಗದವ
ನೆಂದೆ? ಕನ್ನಡಿಗನೋ ತೆಲುಗನೋ - ಯಾರಾದರೇನು ಸ್ವಾಮಿ ? ನಮ್ಮ
ಪಾಲಿಗೆ ಎಲ್ಲವೂ ಒಂದೇ - ಎಲ್ಲವೂ ಒಂದೇ....
ಕೋಲಾರ ತಾಲೂಕಿನಲ್ಲಿದೆ ನಮ್ಮ ಹಳ್ಳಿ. ತಾತನಿಗೆ ಸ್ವಂತದೊಂದು
ಚೂರು ಹೊಲವಿತ್ತು. ನಮ್ಮ ಅಪ್ಪನ ಮದುವೆಗೆ ಎಂತ, ಹೊಸ ಒಂದು ಜತೆ
ಹೋರಿ ಕೊಂಡುಕೊಳ್ಳುವದಕ್ಕೆ ಎಂತ, ತಾತ ಸಾಲಮಾಡಿದ. ಸಾಲಕ್ಕಿಂತ
ಹೆಚ್ಚಾಯಿತು ಬಡ್ಡಿ. ಕೊನೆಗೆ ಬಡ್ಡಿಯೂ ಸಂದಾಯವಾಗದ ಸ್ಥಿತಿ ಬಂತು.
ಆದರೆ ಸಾಲ ಕೊಟ್ಟವರು ದಯಾನಂದರು ಸ್ವಾಮಿ.....ತಾತನ ಹೊಲ
ವನ್ನು ತಮ್ಮ ಹೆಸರಲ್ಲೇ ಬರೆಸಿಕೊಂಡರು ಗೇಣಿಯ ಒಕ್ಕಲಾಗಿ ಇರು
ಎಂತ ನಮ್ಮ ತಂದೆಗೆ ವಹಿಸಿಕೊಟ್ಟರು. ಅದರೆ ಅದೇನು ಭೂಮಿಯೋ
ಅದೇನು ಮಣ್ಣೋ - ಬೆಳೆ ಚೆನ್ನಾಗಿ ಅಗಲೇ ಇಲ್ಲ. ತಾತನನ್ನು ತಂದೆ
ಮಣ್ಣು ಮಾಡಿದ. ತಂದೆಯನ್ನು ನಾನು ಮಣ್ಣುಮಾಡಿದೆ. ಅಗ ನಾನಿನ್ನೂ
ಚಿಕ್ಕವನು....ನಮ್ಮ ಧನಿ ಬಂದು ನಯವಾಗಿ ಹೇಳಿದ:
"ಮಗೂ....ನಿನ್ನಪ್ಪ ತೆರಬೇಕಾಗಿದ್ದ ಕಂದಾಯ ಸಂದಾಯವಾಗದೆ
ಬೆಟ್ಟದ ಹಾಗೆ ಬಿದ್ದಿದೆ. ಅದು ತೀರಿಸಲಾಗದ ಬಡವ ನೀನು. ಹೊಲ