ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ಆಶ್ಚರ್ಯಾನ್ವಿತರಾದರು. ಎಲ್ಲರೂ ರಾಜನನ್ನು ನೋಡುತಲಿದ್ದರು. ಪ್ರತಾ ಪಾದಿತ್ಯನು ತಿರಸ್ಕಾರಭಾವದಿಂದ ಕಂಕಣವನ್ನು ನೋಡಲಿಲ್ಲ. ಸ್ವಲ್ಪ ಹೊತ್ತಿನ ವರೆಗೂ ಸಭೆಯು ನಿಶ್ಯಬ್ದವಾಗಿತ್ತು. ಕೊನೆಗೆ ಒಬ್ಬ ಪುರುಷನು ಎದ್ದು ಮೆಲ್ಲ ಮೆಲ್ಲಗೆ ಹೆಜ್ಜೆಯನ್ನು ಇಡುತ್ತ ಬಂದು ಕಂಕಣವನ್ನು ಎತ್ತಿಕೊಂಡು, ರಾಜನಿಗೆ ಅಭಿಮುಖನಾಗಿ, “ ಈ ಕಂಕಣವು ತಮ್ಮ ಪತ್ನಿಯ ಬಳಿಯಿಂದ ಬಂದಿತು. ರಾಣಿಯವರಿಗೆ ಅಂತಹ ಸಂಕಟವೇನು ಸಂಭವಿಸಿತೋ ನಾನರಿಯೆ, ತಾವೇ ಇದನ್ನೆತ್ತುವಿರೆಂದು ಇದಿರುನೋಡುತಲಿದ್ದೆನು. ತಾವು ತೆಗೆದುಕೊಳ್ಳಲಿಲ್ಲವಾದ ಕಾರಣ, ನಾನು ತೆಗೆದುಕೊಳ್ಳ ಬೇಕಾಯಿತು, ಏಕೆಂದರೆ ಯಾರೂ ಕಂಕಣ ವನ್ನು ತೆಗೆದುಕೊಳ್ಳದಿದ್ದರೆ ಈ ಸಭಾಮಂದಿರದಲ್ಲಿ ಶೂರರೇ ಇಲ್ಲವೆಂದು ಅರ್ಥ ವಾಗುವುದು, ನಾನು ಈ ಕಂಕಣವನ್ನು ಕೈಯಲ್ಲಿ ಹಿಡಿದು ಹೀಗೆ ಪ್ರತಿಜ್ಞೆಯನ್ನು ಮಾಡುತಲಿದೇನೆ. ನನ್ನ ಶರೀರದಲ್ಲಿ ಪ್ರಾಣವಿರುವವರೆಗೂ ರಾಣಿಯವರ ಅಭೀಷ್ಟ ಕಾರ್ಯವನ್ನು ನೆರವೇರಿಸದೆ ಬಿಡೆನು.” ಎಂದು ಉಸುರಿದನು. ಈ ಶೂರ ವರನು ರಾಣಿಯ ಸೋದರನೂ, ಸೇನಾನಾಯಕನೂ ಆಗಿದ್ದನು. ಸೇನಾಧಿಪತಿಯ ಪ್ರತಿಜ್ಞೆಯನ್ನು ಕೇಳಿ ರಾಜನಿಗೆ ಅತ್ಯಾಗ್ರಹವು ಉಂಟಾ ಯಿತು, ಆದರೆ ರಾಜನು ತನ್ನ ಭಾವಮೈದುನನನ್ನು ಏನೂ ಮಾಡಲಾರದೆ ಸುಮ್ಮನಾದನು. ಕಂಕಣವಾಹಕಳಾದ ದಾಸಿಯು ಸೇನಾಧಿಪತಿಯ ವಾಕ್ಯ ಗಳನ್ನು ಕೇಳಿ ಸಂಭ್ರಮದೊಡನೆ, “ ರಾಣಿಯವರ ಅಭೀಷ್ಟವನ್ನು ಕೇಳಿರಿ. ಈ ಕಂಕಣವನ್ನು ತೆಗೆದ ವೀರ ಪುರುಷನು ರಾಜಾಬಸಂತರಾಯನನ್ನೂ, ಆತನ ಕುಟುಂಬವನ್ನೂ ರಕ್ಷಿಸುವುದಕ್ಕೆ ತನ್ನ ಪ್ರಾಣವು ಇರುವವರೆಗೂ ಪ್ರಯತ್ನಿಸ ಬೇಕು.” ಎಂದು ನುಡಿದಳು, “ ಆಕೆಯ ಇಚ್ಛೆಯಂತೆಯೇ ನಡೆಯುವುದು,” ಎಂದು ಹೇಳಿ ಸೇನಾಧಿಪತಿಯು ಸ್ವಸ್ಥಾನದಲ್ಲಿ ಕುಳಿತುಕೊಂಡನು. ಆ ದಿವಸ ಸಭೆಯು ಪೂರ್ತಿಯಾದ ಅನಂತರ ರಾಜನು ರಾಣಿಯಗೃಹಕ್ಕೆ ಬಂದನು. ಪ್ರತಾಪಾದಿತ್ಯನು ಇತರರಿಗೆ ಎಷ್ಟು ಭಯಂಕರನಾಗಿದ್ದರೂ, ಚಾತುರ್ಯವತಿಯಾದ ತನ್ನ ಪತ್ನಿಯ ಬಳಿಯಲ್ಲಿ ಮಾತ್ರ ಪರಮಸಾತ್ವಿಕನಾಗಿ ಇರುತಲಿದನು. ಎಷ್ಟು ದುಷ್ಟರಾದರೂ ಆಕೆಯನ್ನು ನೋಡಿದೊಡನೆಯೇ ಶಿಷ ರಾಗುತಲಿದ್ದರು. ಪ್ರತಾಪಾದಿತ್ಯನು ನಯದಿಂದಲೂ, ಭಯದಿಂದಲೂ ರಾಣಿಯ ಮನಸ್ಸನ್ನು ತಿರುಗಿಸಲು ಪ್ರಯತ್ನಿಸಿದನು. ಬಸಂತರಾಯನು ಮೃತನಾದರೆ ತಮಗೆ ಅನೇಕ ಲಾಭಗಳು ಉಂಟೆಂತಲೂ, ಆತನು ಜೀವಿಸಿದ್ದರೆ ತನಗೆ ಸೌಖ್ಯ ವಿಲ್ಲವೆಂತಲೂ ತಿಳಿಸಿದನು. ಆದರೆ ರಾಣಿಯು ತನ್ನ ನಿಶ್ಚಯವನ್ನು ಬಿಡದೆ, “ ನಿಮಗೆ ಸುಖವು ಉಂಟಾದರೂ, ದುಃಖವು ಉಂಟಾದರೂ ಅಂತಹ ದುಷ್ಕಾರ್ಯ ವನ್ನು ನಿಮ್ಮಿಂದ ಮಾಡಗೊಡೆನು.” ಎಂದು ಸ್ಪಷ್ಟವಾಗಿ ನುಡಿದಳು.