ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮದಾಲಸ, ೪೦೬ ಆಕೆಯ ಮಾತುಗಳಿಗೆ ಸಮ್ಮತಿಸಿ, ಋತುಧ್ವಜನು ಮದಾಲಸೆಯನ್ನು ವಿವಾಹಮಾಡಿಕೊಂಡು, ಪಾತಾಳ ಪುರಿಯಿಂದ ಪತ್ನಿ ಸಹಿತನಾಗಿ ಹೊರಟನು. ಆದರೆ ಮಾರ್ಗದಲ್ಲಿ ದೈತ್ಯರು ಆತನನ್ನು ಸುತ್ತಿಕೊಂಡರು. ಆಗ ಈತನಿಗೂ, ದೈತ್ಯರಿಗೂ ಘೋರಯುದ್ಧವು ನಡೆಯಿತು. ಋತುಧ್ವಜನು ಒಬ್ಬನೇ ಆದರೂ ಅವರೆಲ್ಲರನ್ನೂ ಸಂಹರಿಸಿ, ಭಾರ್ಯಾಸಹಿತನಾಗಿ ರಾಜಧಾನಿಯನ್ನು ಪ್ರವೇಶಿ ಸಿದನು. ಪುತ್ರನನ್ನೂ, ಪುತ್ರವಧುವನ್ನೂ ನೋಡಿ ರಾಜದಂಪತಿಗಳು ಬಹು ಸಂತೋಷಿಸಿ ಆಶೀರ್ವಾದವನ್ನು ಮಾಡಿದರು, ಪ್ರಜೆಗಳು ವಿಶೇಷ ಆನಂದಿತ ರಾದರು. ವಿವಾಹವಾದ ಕೆಲವು ಕಾಲಕ್ಕೆ ಋತುಧ್ವಜನು ತಂದೆಯ ಅನುಜ್ಞೆಯಿಂದ ಋಷಿಗಳ ತಪೋರಕ್ಷಣಾರ್ಥವಾಗಿ ಗೃಹದಿಂದ ಹೊರಟು, ಅನೇಕ ಆಶ್ರಮಗಳಿಗೆ ಹೋಗಿ ಅಲ್ಲಿನ ಮುನಿವರ್ಯರ ಯೋಗಕ್ಷೇಮಂಗಳನ್ನು ವಿಚಾರಿಸಿಕೊಳ್ಳುತ್ತ ಹಾಗೆಯೇ ಒಂದುದಿವಸ ಯಮುನಾತೀರದಲ್ಲಿದ್ದ ಒಂದು ಆಶ್ರಮವನ್ನು ಪ್ರವೇಶಿ ಸಿದನು, ಅಲ್ಲಿ ಪಾತಾಳಕೇತುವಿನ ತಮ್ಮನಾದ ತಾಳಕೇತುವು ತನ್ನ ಮಾಯಾ ಬಲದಿಂದ ಮುನಿರೂಪವನ್ನು ಧರಿಸಿ ವಾಸಮಾಡುತ್ತಿದ್ದನು. ಅವನು ರಾಜ ಕುಮಾರನನ್ನು ನೋಡಿದ ಕೂಡಲೆ, ಆತನು ತನ್ನ ಸೋದರನ ವೈರಿಯಾದ ಋತುಧ್ವಜನು ಎಂದು ತಿಳಿದುಕೊಂಡನು. ಅನಂತರ ಆ ದೈತ್ಯನು ಪೂರ್ವ ವೈರವನ್ನು ತೀರಿಸಿಕೊಳ್ಳುವುದಕ್ಕೆ ಇದೇ ತಕ್ಕ ಸಮಯವು ಎಂದು ಎಣಿಸಿ “ ಯುವರಾಜನೇ ! ನೀನು ಮುನಿಗಳ ತಪೋರಕ್ಷಣೆಯನ್ನು ಮಾಡುವುದಕ್ಕಾಗಿ ಇಲ್ಲಿಗೆ ಬಂದಿರುವೆಯಷ್ಟೆ, ನಾನು ಒಂದು ಯಜ್ಞವನ್ನು ಮಾಡಲು ಸಂಕಲ್ಪಿಸಿ ದೇನೆ. ಆದರೆ ದಕ್ಷಿಣೆಯನ್ನು ಕೊಡುವುದಕ್ಕೆ ನನ್ನಲ್ಲಿ ದ್ರವ್ಯವಿಲ್ಲದ ಕಾರಣ ನನ್ನ ಅಭೀಷ್ಟವು ನೆರವೇರಲಿಲ್ಲ. ನಿನ್ನ ಕಂಠದಲ್ಲಿರುವ ರತ್ನಹಾರವನ್ನು ನನಗೆ ಕೊಟ್ಟರೆ ನನ್ನ ಸಂಕಲ್ಪವು ನೆರವೇರುವುದು.” ಎಂದು ಹೇಳಿದನು. ಈ ವಾಕ್ಯಗಳನ್ನು ಕೇಳಿದ ಕೂಡಲೆ ರಾಜಕುಮಾರನು ತನ್ನ ಕಂಠದಲ್ಲಿದ್ದ ಹಾರವನ್ನು ತೆಗೆದುಕೊಟ್ಟನು.' ತಾಳಕೇತುವು ಹಾರವನ್ನು ತೆಗೆದುಕೊಂಡು “ ಯುವರಾಜನೇ ! ನಾನು ಈಗ ಯಮುನಾನದೀಜಲದಲ್ಲಿ ಮುಣುಗಿ, ವರುಣದೇವನನ್ನು ಆರಾಧಿಸುವೆನು. ನಾನು ಪುನಃ ಬರುವವರೆಗೂ ನನ್ನ ಆಶ್ರಮವನ್ನು ನೀನು ರಕ್ಷಿಸುತ್ತಿರು.” ಎಂದು ನುಡಿದು ಅಲ್ಲಿಂದ ಹೊರಟನು. ಋತುಧ್ವಜನು ಆ ರಾಕ್ಷಸನ ವಾಕ್ಯಗಳನ್ನು ನಂಬಿ ಅಲ್ಲಿಯೇ ಇದ್ದು ಆಶ್ರಮವನ್ನು ಕಾಪಾಡುತ್ತಿದ್ದನು. ತಾಳಕೇತುವು ಋತುಧ್ವಜನ ತಂದೆಯಾದ ಶತ್ರುಜಿತ್ತು ಮಹಾರಾಜನ ಬಳಿಗೆ ಹೋಗಿ, ಆ ಹಾರವನ್ನು ತೋರಿಸಿ “ ದಾನವರು ಯುದ್ದದಲ್ಲಿ ನಿಮ್ಮ ಪುತ್ರನನ್ನು ಸಂಹರಿಸಿದರು ” ಎಂದು ಹೇಳಿದನು. ಈ ಘೋರ ವರ್ತಮಾನವನ್ನು ಕೇಳಿದ