ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ ಹೋಳಕರ್, ೨೭ ಆ ಗ್ರಾಮದಲ್ಲಿ ಒಂದು ಪಾಠಶಾಲೆಯು ಇತ್ತು. ಈ ಪಾಠಶಾಲೆಗೆ ಪಾಪ ಭೀರುವೂ, ಸ್ವಕರ್ಮನಿಷ್ಠನೂ, ಈಶ್ವರಭಕ್ತನೂ ಆದ ಒಬ್ಬ ಬ್ರಾಹ್ಮಣನು ಉಪಾ ಧ್ಯಾಯನಾದನು, ಪೇಷ್ಯಾಸಂಸ್ಥಾನದಿಂದ ತಿಂಗಳಿಗೆ ೫ ರೂಪಾಯಿಗಳೂ, ಶಿಷ್ಯರು ಅಮಾವಾಸ್ಯೆಗೂ, ಪೌರ್ಣಿಮಿಗೂ ಕೊಡುವ ಕೆಲವು ಹಣಕಾಸುಗಳೂ ಈತನ ಜೀವನ ನಿರ್ವಾಹಕ್ಕೆ ಆಧಾರವಾಗಿದ್ದುವು. ಈತನೂ ಆನಂದರಾಯನೂ ಸ್ನೇಹಿತ ರಾಗಿದ್ದರು. ಈ ಬ್ರಾಹ್ಮಣನಿಗೆ ಸಂತಾನವಿಲ್ಲದ ಕಾರಣ ತನ್ನ ಮಿತ್ರನ ಪುತ್ರಿಯಾದ ಅಹಿಯನ್ನು ತನ್ನ ಮಗಳಂತೆಯೇ ಭಾವಿಸಿದ್ದನು. ಅಹಲ್ಯಯು ಈ ಉಪಾ ಧ್ಯಾಯನ ಬಳಿಯಲ್ಲಿ ಬೆಳೆಯುತಲಿದ್ದಳು. ಆತನು ಈಕೆಗೆ ತನ್ನ ಶಿಷ್ಯರೊಡನೆ ಓದುಬರಹವನ್ನೂ ಅನೇಕ ಗ್ರಂಥಗಳಲ್ಲಿರುವ ಸದ್ರೋಧೆಗಳನ್ನೂ ಹೇಳುತಲಿದ್ದನು. ಈತನು ಭಾರತ ಭಾಗವತಾದಿ ಗ್ರಂಥಗಳನ್ನು ಪಠಿಸುವ ಕಾಲದಲ್ಲಿ, ಸೀತೆಯ ವನವಾಸ, ದೌಪದಿಯ ಅಜ್ಞಾತವಾಸ, ದಮಯಂತಿಯ ಕಷ್ಟಗಳು, ಸಾವಿತ್ರಿಯ ವಿಪತ್ತು ಅವರು ಪಾತಿವ್ರತ್ಯವನ್ನು ರಕ್ಷಿಸಿಕೊಂಡದ್ದು ಮೊದಲಾದ ಚರಿತ್ರೆಗಳನ್ನು ಅಹಲೈ ಯು ಪ್ರೇಮದಿಂದ ಕೇಳುತಿದ್ದಳು. ಅಹಲ್ಯಯು ಬಾಲ್ಯದಲ್ಲಿ ಇಂತಹ ಸಾದ್ವಿಮಣಿಗಳ ಕಷ್ಟ ಸಹಿಷ್ಣುತೆಯನ್ನು ಕೇಳಿ ತಿಳಿದು ಕೊಂಡಿದ್ದಳಾದ್ದರಿಂದ ತನ್ನ ಜೀವಿತದಲ್ಲಿ ಸಂಭವಿಸಿದ ಕಷ್ಟ ಪರಂಪರೆಗಳನ್ನು ಧೈರ್ಯದಿಂದ ಸಹಿಸಿ ಕೊಂಡು ತನ್ನ ಕರ್ತವ್ಯವನ್ನು ನೆರವೇರಿಸಲು ಸಮರ್ಥಯಾದಳು. - ಅಹಿಗೆ ಒಂಭತ್ತು ವರ್ಷಗಳ ವಯಸ್ಸಾಗಲು ವರನನ್ನು ಹುಡುಕು ವುದಕ್ಕೆ ಪ್ರಯತ್ನವು ನಡೆಯುತಲಿತ್ತು. ಆನಂದರಾಯನು ಬಡವ ನಾದಕಾರಣ ಅಹಿಗೆ ಒಳ್ಳೆಯ ವರನು ಬೇಗನೆ ಸಿಕ್ಕಲಿಲ್ಲ. ಈ ಸಮಯದಲ್ಲಿ ಬಾಲಾಜೀಬಾಜೀರಾಯನು ಪೂನೆಯಲ್ಲಿ ಪೇಸ್ವಿಯಾಗಿದ್ದನು. ಈತನ ತಮ್ಮನಾದ ರಘುನಾಥರಾಯನು ಮಲ್ಲಾರರಾವ್ ಹೋಳಕರನೆಂಬ ಸರದಾರನನ್ನೂ ಆತನ ಮಗನಾದ ಖಂಡೇರಾಯನನ್ನೂ ಸಂಗಡ ಕರೆದು ಕೊಂಡು ಉತ್ತರ ಹಿಂದೂಸ್ಥಾನಕ್ಕೆ ಯುದ್ದ ನಿಮಿತ್ತವಾಗಿ ಹೋಗಿ ಪುನಃ ಪೂನಾ ಪಟ್ಟಣಕ್ಕೆ ಹೋಗುವಾಗ ನಾಧರತೀ ಗ್ರಾಮದಲ್ಲಿ ಇಳಿದನು. ಆನಂದ ರಾಯನ ಮನೆಯ ಎದುರಾಗಿ ಒಂದು ದೊಡ್ಡ ಹನುಮಂತನ ದೇವಾಲಯ. ಪೇಷ್ಟೆಗಳು ಆ ಗ್ರಾಮಕ್ಕೆ ಬಂದಾಗ ಆ ದೇವಾಲಯದಲ್ಲಿ ಇಳಿದುಕೊಳ್ಳುತಿದ್ದರು. ರಘುನಾಥರಾಯನೂ ಅಲ್ಲೇ ಇಳಿದುಕೊಂಡನು. ಆ ದಿವಸ ಉಪಾಧ್ಯಾಯನು ಶಿಷ್ಯರಿಗೆ ವಿರಾಮವನ್ನು ಕೊಟ್ಟು ತಾನು ರಘುನಾಥರಾಯನ ಬಳಿಗೆ ಹೋಗಿ ಮಾತನಾಡುತಿದ್ದನು. ಗುರುವನ್ನು ಒಂದು ನಿಮಿಷವಾದರೂ ಅಗಲಿರಲಾರದ ಅಹಲೈ ಯು ಗುರುವಿನ ಸವಿಾಪಕ್ಕೆ ಬಂದು ಕುಳಿತುಕೊಂಡಳು. ಅಹಲ್ಯಯು ವಿಶೇಷ ಸೌಂದರ್ಯವತಿಯಲ್ಲ. ಆದರೆ ಆಕೆಯ ಮುಖದಲ್ಲಿ ಸ್ವಾಭಾವಿಕವಾದ ರಾಜಕಳೆಯು ಪ್ರಕಾಶಿಸುತಲಿತ್ತು. ರಘುನಾಥರಾಯನು ಈಕೆಯನ್ನು ನೋಡಿ