ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಅಬಲಾ ಸಚ್ಚರಿತ್ರ ರತ್ನ ಮಾಲೆ. ಅದರ ಮೇಲೆ ಆತನು, “ ನಿನ್ನ ರಾಜ್ಯದ ವಿಷಯದಲ್ಲಿ ಯಾರಾದರೂ ಪಾಪಬುದ್ದಿ ಯನ್ನೆಣಿಸಿದರೆ ಅವರನ್ನು ಅಗತ್ಯವಾಗಿ ದಂಡಿಸು,” ಎಂದು ಹೇಳಿಕಳುಹಿದನು. ಆಮೇಲೆ ಅಹಲ್ಯಾಬಾಯಿಯು ಶತ್ರುಗಳಿಗೆ ಭಯವನ್ನುಂಟುಮಾಡಲೆಣಿಸಿ, ಒಂದು ದೊಡ್ಡ ರಾಜಸಭೆಯನ್ನು ಮಾಡಿ, ಆ ಸಭೆಯಲ್ಲಿ, “ ನಾನು ಅಬಲೆ ಎಂದು ಎಣಿಸ ಬೇಡಿ, ನಾನು ಭುಜದ ಮೇಲೆ ಒಂದು ಬಿದಿರುಕೋಲನ್ನು ಇಟ್ಟು ಕೊಂಡು ಯುದ್ಧಕ್ಕೆ ಹೊರಟರೂ ಶ್ರೀಮಂತರ ರಾಜ್ಯಲಕ್ಷ್ಮಿಗೆ ಹಾನಿಯುಂಟಾಗುವುದು ನಿಶ್ಚಯ. ನಮ್ಮ ಪೂರ್ವಿಕರು ಈ ರಾಜ್ಯವನ್ನು ಅಖಂಡ ಪ್ರತಾಪದಿಂದ ಸಂಪಾ ದಿಸಿದರೇ ಹೊರತು ಆಟಪಾಟಗಳಿಂದ ಪಡೆಯಲಿಲ್ಲ. ಆದುದರಿಂದ ಪ್ರಭುಗಳು ನಮ್ಮಿಂದ ಯೋಗ್ಯವಾದ ಸೇವೆಯನ್ನು ಮಾಡಿಸಿಕೊಳ್ಳಬೇಕು, ಆಶಾತುರರಾದ (ಬ್ರಾಹ್ಮಣರು) ಪೇಷ್ಟೆಗಳು ಧನಾಶೆಯಿಂದ ನಮ್ಮ ರಾಜ್ಯವನ್ನು ತೆಗೆದುಕೊಳ್ಳ ಬೇಕೆಂದು ಎಣಿಸಿದರೆ, ಹಾಗೆ ಆಗಲಾರದು ಎಂದು ಅವರು ದೃಢವಾಗಿ ತಿಳಿಯ ಬೇಕು, ” ಎಂದು ಸಂಭಾಷಿಸಿದಳು, ಆಹಾ! ಅದೆಂತಹ ಕ್ಷಾತ್ರತೇಜಪೂರಿತಗಳಾದ ಮಾತುಗಳು! ಈ ವಾಕ್ಯಗಳು ಸ್ವಲ್ಪ ಕಾಲದಲ್ಲಿ ದೇಶದಲ್ಲೆಲ್ಲಾ ಹರಡಿಕೊಂಡು, ರಘೋಬಾಯವರಿಗೂ ಶ್ರುತವಾಯಿತು, ಆದರೆ ಗಂಗಾಧರನ ಪ್ರೋತ್ಸಾಹದಿಂದ ರಘುನಾಥರಾಯನು ಈ ಮಾತನ್ನು ಗಣನೆಗೆ ತಾರದೆ ಐವತ್ತು ಸಾವಿರ ಸೈನ್ಯ ದೊಡನೆ ಇಂದೂರು ರಾಜ್ಯವನ್ನು ಸವಿಾಪಿಸಿದನು. ಅಹಲ್ಯಾಬಾಯಿಯು ಆತನ ಬರುವಿಕೆಯನ್ನು ಕೇಳಿ, “ ಸ್ತ್ರೀಯೊಡನೆ ಯುದ್ಧ ಮಾಡುವುದು ಧರ್ಮವಲ್ಲ. ನಾನು ಸಹ ನಿಮ್ಮೊಡನೆ ಯುದ್ಧ ಮಾಡುವುದಕ್ಕೆ ದೊಡ್ಡ ಸೇನೆಯನ್ನು ಅಣಿಮಾಡಿಟ್ಟಿರು ವೆನು. ಈ ಯುದ್ದದಲ್ಲಿ ನೀವು ಸೋತುಹೋದರೆ ನಿಮಗೆ ಬಹಳ ಅವಮಾನ ವುಂಟಾಗುವುದು. ಒಂದುವೇಳೆ ನೀವು ಜಯಿಸಿದರೂ ಸ್ತ್ರೀಯನ್ನು ಸೋಲಿಸಿದನು ಎಂದು ಅಪಖ್ಯಾತಿಯು ಉಂಟಾಗುವುದೇ ಹೊರತು ಇನ್ನೇನೂ ಲಾಭವಿಲ್ಲ,” ಎಂದು ವರ್ತಮಾನವನ್ನು ಕಳುಹಿಸಿದಳು. ಅದನ್ನು ಕೇಳಿ ರಘುನಾಥರಾಯನು ನಾಚಿಕೆಪಟ್ಟು, ಒಂದುವೇಳೆ ತನಗೆ ಅಪಜಯವು ಉಂಟಾಗಬಹುದು ಎಂದು ನೆನೆಸಿ “ ಪುತ್ರಮರಣ ದುಃಖಿತೆಯಾದ ಅಹಲ್ಯಾಬಾಯಿಗೆ ದುಃಖೋಪಶಮನವನ್ನು ಮಾಡಲು ಬರುತ್ತಿರುವೆನೇ ಹೊರತು, ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಬರಲಿಲ್ಲ,” ಎಂದು ಪ್ರತ್ಯುತ್ತರವನ್ನು ಕಳುಹಿಸಿ, ಸೇನೆಯನ್ನೆಲ್ಲ ಹಿಂದೆಯೇ ನಿಲ್ಲಿಸಿ, ಪರಿಮಿತಜನರೊಡನೆ ಇಂದೂರನ್ನು ಪ್ರವೇಶಿಸಿ, ಅಹಲ್ಯಾಬಾಯಿಯನ್ನು ಆದರಿಸಿ, ಮರಳಿ ಪುನಹೆಗೆ ಹೊರಟುಹೋದನು. ಹೀಗೆ ಅಹಲ್ಯಾಬಾಯಿಯು ಪತಿ ಯನ್ನೂ ಮಾವಂದಿರನ್ನೂ ಪುತ್ರನನ್ನೂ ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದರೂ, ಸಮಯೋಚಿತವಾದ ದೈರ್ಯವನ್ನು ಅವಲಂಬಿಸಿ, ರಘೋಬ ನಂತಹ ಶೂರನಿಂದ ಯಾವ ಅಪಾಯವೂ ಉಂಟಾಗದಂತೆ ಉಪಾಯವಾಗಿ ತಪ್ಪಿಸಿಕೊಂಡಳು.