ಪುಟ:ಅರಮನೆ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುನ್ನುಡಿ

xi


'ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ; ಸಾಹಿತಿಗೆ ಹಿರಿಯ ಸಾಮಾಜಿಕ ಜವಾಬ್ದಾರಿಯಿದೆ. ಸಮಕಾಲೀನ ಸಾಮಾಜಿಕ ವ್ಯವಸ್ಥೆಯಲ್ಲಡಗಿರುವ ಅನ್ಯಾಯ-ಶೋಷಣೆಗಳ ವಿವಿಧ ಮುಖಗಳನ್ನು ಬಯಲಿಗೆಳೆದು, ಆ ಮೂಲಕ ಪ್ರಚಲಿತ ವ್ಯವಸ್ಥೆಯ ಬದಲಾವಣೆಗೆ ಪರೋಕ್ಷವಾಗಿ ಪ್ರಚೋದನೆ ನೀಡುವುದು ಸಾಹಿತಿಯ ಪ್ರಮುಖ ಕರ್ತವ್ಯ' ಈ ಬಗೆಯ ತಾತ್ವಿಕ ನಿಲುವಿನಿಂದ ೧೮ನೆಯ ಶತಮಾನದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮತ್ತು ೧೯ನೆಯ ಶತಮಾನದ ಭಾರತದಲ್ಲಿ 'ವಾಸ್ತವತಾ ವಾದ' (Realism) ಮೂಡಿ ಬಂದಿತು. ವಾಸ್ತವತಾ ವಾದದ ವೈಚಾರಿಕ ತಳಹದಿಯೆಂದರೆ, 'ಕಾರ್ಯ-ಕಾರಣ ಸಂಬಂಧ'ವನ್ನಾಧರಿಸಿದ ತರ್ಕ, ಇಂದ್ರಿಯಗ್ರಾಹ್ಯ ಸತ್ಯವನ್ನು ಮಾತ್ರಒಪ್ಪುವ ವೈಜ್ಞಾನಿಕ ದೃಷ್ಟಿಕೋನ, ಮತ್ತು ವರ್ಣ-ವರ್ಗಭೇದಗಳಿಂದ ಮುಕ್ತವಾದ ಸಮಾಜವನ್ನು ಕಟ್ಟಬಹುದೆಂಬ ಆದರ್ಶವಾದ. ಈ ತಾತ್ವಿಕ ನೆಲೆಯಿಂದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮತ್ತು ಭಾರತದಲ್ಲಿ ಕಳೆದ ನೂರಿನ್ನೂರು ವರ್ಷಗಳ ಅವಧಿಯಲ್ಲಿ ಅನೇಕ ಮಹತ್ವಪೂರ್ಣ ಕಾವ್ಯ-ನಾಟಕ-ಕಾದಂಬರಿಗಳು ಜನ್ಮ ತಳೆದುದು ಇಂದು ಇತಿಹಾಸ.

ಹಾಗೆಯೇ, ಕಳೆದ ಶತಮಾನದ ಆದಿ ಭಾಗದಲ್ಲಿಯೆ ಅನೇಕ ಸಾಹಿತಿಗಳಿಗೆ ವಾಸ್ತವತಾವಾದ ತೀವ್ರಅತೃಪ್ತಿಯನ್ನುಂಟು ಮಾಡಲು ಪ್ರಾರಂಭಿಸಿದುದೂ ಇಂದು ಇತಿಹಾಸ. ಈ ಅತೃಪ್ತಿಗೆ ಕಾರಣ ವಾಸ್ತವತಾವಾದ ಕಟ್ಟಿಕೊಡುವ 'ವಾಸ್ತವ'ದ ಸೀಮಿತ ಚೌಕಟ್ಟು; ಮತ್ತು ಆ ಚೌಕಟ್ಟಿನಿಂದ ಹೊರಗುಳಿಯುವ ಬದುಕಿನ ಅನೇಕ ಹಾಗೂ ಬಹುಮುಖ್ಯ ಸಂಗತಿಗಳು. ಸೂಕ್ಷ್ಮ ಮಾನವ ಸಂಬಂಧಗಳು ಮತ್ತು ಸಂಕೀರ್ಣ ಭಾವನೆಗಳು, ಮಾನವನಿಗೆ ಪ್ರಾಣಿ-ಪಕ್ಷಿ-ಕ್ರಿಮಿ-ಕೀಟಗಳೊಡನೆ ಇರುವ ನಿಕಟ ಸಂಪರ್ಕ ಮತ್ತು ಸಹವಾಸ, ಮುಖ್ಯವಾಗಿ ಜನ್ಮ-ಮರಣಗಳ ರಹಸ್ಯ ಮತ್ತು ಬದುಕಿನಲ್ಲಿ ದೇವರು-ಧರ್ಮ-ಧಾರ್ಮಿಕಾಚರಣೆಗಳು ಇವುಗಳಿಗಿರುವ ಸ್ಥಾನ-ಇವೆಲ್ಲಮೂಕಾರ್ಯ-ಕಾರಣತರ್ಕ ಹಾಗೂ ವೈಜ್ಞಾನಿಕ ವಿಶ್ಲೇಷಣೆಯನ್ನು ಮೀರಿದವುಗಳು. ಆದ್ದರಿಂದ, ವಾಸ್ತವತಾವಾದದ ಮಿತಿಗಳನ್ನು ಮೀರಲು 'ವಾಸ್ತವ'ದ ಗ್ರಹಿಕೆಯನ್ನೇ ಹೆಚ್ಚು ವಿಶಾಲಗೊಳಿಸಲು ಸಾಹಿತಿಗಳು ಅನೇಕ ಸಾಧ್ಯ