ಪುಟ:ಅರಮನೆ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xii

ಮಾರ್ಗಗಳನ್ನು ಶೋಧಿಸಲು ಉದ್ಯುಕ್ತರಾದರು. ಪರಿಣಾಮತಃ ಸಾಂಕೇತಿಕತೆ (Symbolism), ಅನ್ಯ ಕೃತಿ ಸೂಚನೆಗಳು (Allusions), ಅತೀಂದ್ರಿಯವಾದ (transcendentalism) ಅತಿವಾಸ್ತವವಾದ (Surrealisnm) ವಾಸ್ತವ -ಭ್ರಮಾವಾದ (Magic Realism) ಇತ್ಯಾದಿ ಗ್ರಹಿಕೆಯ ಕ್ರಮಗಳು ಮತ್ತು ಕಥನ ತಂತ್ರಗಳು ಪಾಶ್ಚಿಮಾತ್ಯ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದುವು.

ಕನ್ನಡ (ಭಾರತೀಯ) ಸಾಹಿತ್ಯದಲ್ಲಿಯೂ ಇಂತಹುದೇ ಪರಿಸ್ಥಿತಿ ಕಳೆದ ಶತಮಾನದ ಕೊನೆಯ ಭಾಗದಲ್ಲಿ ಕಂಡುಬಂದಿತು. ಇಂದಿರಾಬಾಯಿ ಕಾದಂಬರಿಯಿಂದ ೧೮೯೯ರಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ವಾಸ್ತವತಾವಾದ ನಂತರದ ಐದಾರು ದಶಕಗಳಲ್ಲಿಯೇ ಸಾಹಿತಿಗಳಿಗೆ ಯಾಂತ್ರಿಕವಾಗಿ ಕಾಣಲಾರಂಭಿಸಿತು (ಹಾಗೆ ನೋಡಿದರೆ, ಪ್ರಗತಿಶೀಲ ಲೇಖಕರನ್ನು ಹೊರತುಪಡಿಸಿದರೆ, ನಮೋದಯ-ನವ್ಯ-ನಮ್ಯೋತ್ತರ ಕನ್ನಡ ಲೇಖಕರಲ್ಲಿ ಯಾರೂ ಕಟುವಾಸ್ತವವಾದಿಗಳಾಗಿರಲಿಲ್ಲ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯೇ ಅನೇಕ ಸಂದರ್ಭಗಳಲ್ಲಿ 'ವಾಸ್ತವ'ದ ಗ್ರಹಿಕೆಯನ್ನು ಬದಲಾಯಿಸುತ್ತದೆ; ಕಾದಂಬರಿಯ ಜಗತ್ತಿನಲ್ಲಿ, ಮೇಗರವಳ್ಳಿಯಲ್ಲಾಗುವ ಮತಾಂತರದ ಪ್ರಯತ್ನ ದೂರದ ಸೇಂಟ್ ಲಾರೆನ್ಸ್ ದ್ವೀಪದಲ್ಲಿದ್ದ ಸ್ವಾಮಿ ವಿವೇಕಾನಂದರಿಗೆ ಕೂಡಲೇ ಅರಿವಾಗಿ ಅವರು ಘಟ್ಟಿಯಾಗಿ ನಗುವುದು 'ವಾಸ್ತವವೇ'. ಹೆಚ್ಚಿನ ಕನ್ನಡ ಲೇಖಕರು ಪಶ್ಚಿಮದ ವಾಸ್ತವತಾವಾದವನ್ನು 'ಸುಧಾರಣಾವಾದ'ವನ್ನಾಗಿ ರೂಪಾಂತರಿಸಿದ್ದರು). ಕಳೆದ ಶತಮಾನದ ಉತ್ತರಾರ್ಧದಲ್ಲಿ ಹೊರಬಂದ ಹೆಚ್ಚಿನ ಕೃತಿಗಳು (ನಮ್ಮ ಚರ್ಚೆಯನ್ನು ಕಾದಂಬರಿ ಪ್ರಭೇದಕ್ಕೆ ಸೀಮಿತಗೊಳಿಸುವುದಾದರೆ) ಪ್ರಭುಶಂಕರ ಅವರ ಬೆರಗು, ಕಾಮರೂಪಿ ಅವರ ಕುದುರೆ ಮೊಟ್ಟೆ, ಗಿರಿ ಅವರ ಗತಿ-ಸ್ಥಿತಿ, ತೇಜಸ್ವಿ ಅವರ ಜುಗಾರಿ ಕ್ರಾಸ್, ಚಂದ್ರಶೇಖರ ಕಂಬಾರರ ಚಕೋರಿ, ಇತ್ಯಾದಿ ಕೃತಿಗಳೆಲ್ಲವೂವಾಸ್ತವತಾವಾದದ ಮಿತಿಗಳನ್ನು ಮೀರಲು ಪ್ರಯತ್ನಿಸುವಂತಹವುಗಳೇ. ಈ ದಿಕ್ಕಿನಲ್ಲಿ ೧೯೮೪ರಲ್ಲಿ ಹೊರಬಂದ ದೇವನೂರು ಮಹಾದೇವರ ಕುಸುಮಬಾಲೆ ಒಂದು ಮಹತ್ವದ ಮೈಲಿಗಲ್ಲು; ಸಮಕಾಲೀನತೆಗೆ ಬದ್ಧವಾಗಿದ್ದೂ ಪುರಾಣ-ಐತಿಹ್ಯಗಳು, ಜಾನಪದ ಕಥನ ತಂತ್ರಗಳು, ಇವೆಲ್ಲವನ್ನೂ ಅದ್ಭುತವಾಗಿ ದುಡಿಸಿಕೊಳ್ಳುವ ಕೃತಿ. ಕುಂವೀ ಅವರ ಅರಮನೆ ಇದೇ ದಾರಿಯಲ್ಲಿ ಇನ್ನೂ ಹೆಚ್ಚು ಮಹತ್ವಾಕಾಂಕ್ಷೆಯಿಂದ ಸಾಗುವ ಬೃಹತ್ಕೃತಿ.

ಈವರೆಗೆ ಹನ್ನೊಂದು ಕಾದಂಬರಿಗಳು, ಎಂಟು ಕಥಾ ಸಂಕಲನಗಳು,