ಪುಟ:ಅರಮನೆ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xiii

ಚಾಪ್ಲಿನ್ ಜೀವನ ಚರಿತ್ರೆ, ಇತ್ಯಾದಿ ಒಟ್ಟು ೩೦ ಕೃತಿಗಳನ್ನು ರಚಿಸಿರುವ "ಕುಂವೀ” ಎಂದೇ ಪ್ರಸಿದ್ಧರಾಗಿರುವ ಕುಂ.ವೀರಭದ್ರಪ್ಪನವರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದುದು ಉಗ್ರವಾಸ್ತವತಾವಾದಿ- ಬಂಡಾಯ ಸಾಹಿತಿಯಾಗಿಯೇ. ಅವರ “ದೇವರ ಹೆಣ”.... “ಎಲುಗನೆಂಬ ಕೊರಚನೂ...” ... 'ಕೆಂಡದ ಮಳೆ ಕರೆವಲ್ಲಿ..." ಇತ್ಯಾದಿ ಕಥೆಗಳು; ಮತ್ತು ಕಪ್ಪು, ಆಸ್ತಿ, ಯಾಪಿಲ್ಲು, ಇತ್ಯಾದಿ ಕಾದಂಬರಿಗಳು ವಾಸ್ತವತಾವಾದವನ್ನೇ ಸಂಪೂರ್ಣವಾಗಿ ಒಪ್ಪಿಕೊಂಡು, ಶೇಣೀಕೃತ ಜಾತ್ರಾಧಾರಿತ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಉಗ್ರವಾಗಿ ಪ್ರತಿಭಟಿಸುತ್ತವೆ, ಆ ವ್ಯವಸ್ಥೆಯನ್ನು ಬದಲಾಯಿಸಲು ಒತ್ತಾಯಿಸುತ್ತವೆ.

ಆದರೆ, ಕ್ರಮೇಣ ಇವರಿಗೂ ವಾಸ್ತವತಾವಾದದ ಇತಿಮಿತಿಗಳು ಗೋಚರಿಸಲಾರಂಭಿಸಿದುವು ಎಂಬುದಕ್ಕೆ ೧೯೯೮ರಲ್ಲಿ ಹೊರಬಂದ ಇವರ ಶಾಮಣ್ಣ ಕಾದಂಬರಿಯೇ ಸಾಕ್ಷಿ. ಈ ಬೃಹತ್ಕಾದಂಬರಿ ಯಲ್ಲಿ ಕುಂವೀ ಉತ್ರ್ಪೇಕ್ಷೆ, ವ್ಯಂಗ್ಯ ವಿಡಂಬನೆ, ಅನ್ಯೋಕ್ತಿ, ಇತ್ಯಾದಿ ಅನೇಕ ಕಥನ ತಂತ್ರಗಳನ್ನು ಉಪಯೋಗಿಸುತ್ತಾ, ಸಮಕಾಲೀನ ಇತಿಹಾಸ ಮತ್ತು ವಾಸ್ತವತೆ ಇವುಗಳನ್ನು ಬೆಸೆಯಲು ಪ್ರಯತ್ನಿಸುತ್ತಾರೆ. ಇವರ ಕೃತಿಯ ನಾಯಕ ಶಾಮಣ್ಣ ಪರಂಪರಾಗತ ಜಾತಿ ವ್ಯವಸ್ಥೆಯ ವಿರುದ್ದ ತನ್ನದೇ ರೀತಿಯಲ್ಲಿ ಬಂಡು ಹೂಡುತ್ತಾನೆ. (ಆದರೆ, ಪ್ರಾಯಃ ಇನ್ನೂ ಇವರಿಗೇ ತಮ್ಮ ಮಾರ್ಗದ ಸ್ಪಷ್ಟ ಕಲ್ಪನೆ ಇಲ್ಲದಿದುದರಿಂದ ಅಥವಾ ಪ್ರಸಿದ್ಧ ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸೆಯ ಸ್ಟೆಫೆನ್‌ವುಲ್ಫ್ ಕಾದಂಬರಿಯನ್ನು ಮಾದರಿಯಾಗಿ ಸ್ವೀಕರಿಸಿದ್ದುದರಿಂದ?) ಕಾದಂಬರಿ ಸಂಪೂರ್ಣವಾಗಿ ಯಶಸ್ವಿಯಾಗುವುದಿಲ್ಲ.

'ಶಾಮಣ್ಣ' ಬರೆಯುವ ಕಾಲದಲ್ಲಿ ಮತ್ತು ಅನಂತರ ಕುಂವೀ ಅವರ ಲಕ್ಷ್ಯವಿದ್ದುದು ವಾಸ್ತವತಾವಾದದ ಮಿತಿಗಳನ್ನು ಮೀರುವುದಕ್ಕಿಂತ ಹೆಚ್ಚಾಗಿ 'ವಾಸ್ತವ' ಎಂಬ ಪರಿಕಲ್ಪನೆಯನ್ನೇ ಹೆಚ್ಚು ವಿಶಾಲವಾಗಿ ಅರ್ಥೈಸುವುದರಲ್ಲಿ; ಅವರು ಶೋಧಿಸುತ್ತಿದ್ದುದು ಚರಿತ್ರೆ, ಐತಿಹ್ಯ, ಸ್ಥಳಪುರಾಣ, ನಂಬಿಕೆಗಳು, ಆಕ್ರಮಣ-ಶೋಷಣೆ-ಪಾಲನೆ ಇತ್ಯಾದಿ ಅಧಿಕಾರಾಧಾರಿತ ಸಂಬಂಧಗಳು, ವಿವಿಧ ಸಾಮಾಜಿಕ ವರ್ಗಗಳ ಬದುಕಿನ ವಿಶಿಷ್ಟ ಗಂಭೀರ ಕ್ಷುದ್ರವಿವರಗಳು ಇವೆಲ್ಲವನ್ನೂ ಒಳಗೊಳ್ಳುವ ಒಂದು ಕಥನ ಪ್ರಕಾರವನ್ನು ಈ ಸಂದರ್ಭದಲ್ಲಿ ಅವರ ಕಣ್ಣಿಗೆ ಬಿದ್ದವುಗಳೆಂದರೆ ಕನ್ನಡದ (ಇತರ ಭಾರತೀಯ ಭಾಷೆಗಳ) ಮೌಖಿಕ ಮಹಾಕಾವ್ಯಗಳು.

ಮಲೆ ಮಾದೇಶ್ವರ, 'ಮಂಟೇಸ್ವಾಮಿ, ಮೈಲಾರಲಿಂಗ, ಪಾಲ್ನಾಟಿ ವೀರುಲ ಕಥಾ, ಇತ್ಯಾದಿ ಮೌಖಿಕ ಮಹಾಕಥನಗಳ ವ್ಯಾಪ್ತಿ ಮತ್ತು ಅವುಗಳು ನಿರ್ವಹಿಸುವ