ಪುಟ:ಅರಮನೆ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xvii

ಇಡೀ ಭಾರತವನ್ನು ಸುಲಭವಾಗಿ ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳಲು ಸಾಧ್ಯವಾಯಿತು ಎಂಬುದು. ಅಂದಿದ್ದ ನೂರಾರು ರಾಜ-ಮಹಾರಾಜರ, ಸಾವಿರಾರು ಪಾಳೆಯಗಾರ-ಜಮೀನ್ದಾರರ ಊಳಿಗಮಾನ್ಯ ವ್ಯವಸ್ಥೆ ಎಷ್ಟು ಕ್ರೂರವಾಗಿತ್ತೆಂದರೆ ಭಾರತೀಯ ಜನಸಾಮಾನ್ಯರಿಗೆ ಬ್ರಿಟಿಷ್‌ ಆಡಳಿತ ಆ ಕ್ರೂರ ವ್ಯವಸ್ಥೆಯಿಂದ ಬಿಡುಗಡೆ ಪಡೆಯುವ ಮಾರ್ಗವಾಗಿಯೇ ಕಂಡಿತು ಎಂಬುದನ್ನು ಕೃತಿ ಸೂಕ್ಷ್ಮ ವಿವರಗಳಿಂದ ಸಾದ್ಯಂತವಾಗಿ ದಾಖಲಿಸುತ್ತದೆ: “ಮದ್ಯ ಸೇವನೆ, ಜೂಜು ಲಂಪಟತನಗಳನ್ನಂಟಿಸಿಕೊ೦ಡು ಚಟಗಳ ದಾಸವರೇಣ್ಯರಾಗಿದ್ದ ಪಾಳ್ಲೆಗಾರರು ತಮ್ಮ ಹಣದ ಅಡಚಣೆ ನಿವಾರಿಸಲೋಸುಗ ಪ್ರಜೆಗಳ ಮ್ಯಾಲ ಹೊಸ ಹೊಸ ತೆರಿಗೆಗಳನ್ನು ಹೇರಲಾರಂಭಿಸಿದ್ದರು. ಪಿಳ್ಳೆ ನೋಡಿದರಿಷ್ಟು: ಮದುವೆ ಆದರಿಷ್ಟು; ಸೋಬನ ಪ್ರಸ್ಥವಾದರಿಷ್ಟು: ಮಕ್ಕಳಾದರೆ ಯಿಷ್ಟು ಯಂಬಂಥ ತೆರಿಗೆಗಳನ್ನು ಲೆಕ್ಕ ಹಾಕುತ್ತಾ ಹೋದರೆ...”(ಪುಟ ೭೬)

ಜರುಮಲಿಯ ರಾಜ, ನಿಚ್ಜಾಪುರದ ರಾಜ ಮುಂತಾದವರು ಹೆಚ್ಚಿನ ಆದಾಯಕ್ಕಾಗಿ ಕಳ್ಳಕಾಕರನ್ನೇ ಸಾಕುತ್ತಿದ್ದರು; ಮತ್ತೆ ಕೆಲವರು. ಕಳ್ಳರಿಗೇಕೆ ಪಾಲು ಕೊಡಬೇಕೆಂದು ತಾವೇ ರಾತ್ರಿಯಲ್ಲಿ ಕಳ್ಳರಾಗುತ್ತಿದ್ದರು. ಇನ್ನು ಅವರ ನೈತಿಕತೆಯ ಬಗ್ಗೆ: ಕುದುರೆಡವು ಸಂಸ್ಥಾನದ ಕಾಟನಾಯಕನಿಗೆ ಚಿಕ್ಕ ವಯಸ್ಸಿನಲ್ಲಿಯೇ ಅವನ ಮನೆತನದ ಗೌರವಕ್ಕಾಗಿ ಐದು ಜನರೊಡನೆ ಮದುವೆ; ಮದ್ದಿಕೇರಿ ಸಂಸ್ಥಾನದ ರಾಜಾ ಕದಿರೆನಾಯಕ ಅರಮನೆಯಲ್ಲಿ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿದಾಗ ಅಂತಃಪುರದಲ್ಲಿದ್ದ ನೂರಾರು ಹೆಣ್ಣಾಳುಗಳನ್ನು ಅವರ ವಯಸ್ಸು, ತೂಕ ಇತ್ಯಾದಿಗಳಿಗನುಸಾರವಾಗಿ ಹರಾಜು ಹಾಕಿ ಹಣ ಸಂಗ್ರಹಿಸು ತ್ತಾನೆ; ಸೊಕ್ಕೆ ಮಾರನಾಯಕ ಎಂಬ ಮತ್ತೊಬ್ಬ ತುಂಡು ಪಾಳೆಯಗಾರ ತನ್ನ ಕುಗ್ಗಿದ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿ ಪಡಿಸಲೋಸುಗ ದೇವಿಗೆ ಬಲಿ ಕೊಡಲ್ಪಟ್ಟ ಕೋಣನ ವೃಷಣಗಳನ್ನು ಸದಾ ತನ್ನ ಕೊರಳಲ್ಲಿ ಧರಿಸುತ್ತಾನೆ; ಇಂತಹ ಅನೇಕಾನೇಕ ವಿಷಯಲಂಪಟರನ್ನು ಕೃತಿ ಪರಿಚಯಿಸುತ್ತದೆ.

ಇನ್ನು ಕವಿಗಳ ವಿಷಯಕ್ಕೆ ಬಂದರೆ: ಬೆಳ್ಳಿ ರೂಪಾಯಿಗಳು ಸಿಗುವುದಿದ್ದರೆ ಯಾರನ್ನು ಸ್ತುತಿಸಿದರೇನು ಎಂಬ ನಿಲುವಿನಿಂದ ಸೂರ ಎಂಬ ಕೋಣನನ್ನು ಕಂದ ಪದ್ಯಗಳಲ್ಲಿ, ಮತ್ತೇ ಭವಿಕ್ರೀಡಿತ ಮಹಾ ಸ್ರಗ್ಧರಾ ಇತ್ಯಾದಿ ವೃತ್ತಗಳಲ್ಲಿ ಸ್ತುತಿಸುವ ರಾಮರಾಜು ಭಟ್ರಾಜು; ನಿರ್ಜೀವ ಕಳೇಬರದ ನೀಳನಾಸಿಕ- ಕೇಸಪಾಸಪ್ರಪಂಚಗಳ ಬಗ್ಗೆ ಮಹಾಕಾವ್ಯಮೊ೦ದನ್ನು ರಚಿಸುವ ಅಯ್ಯಾಳೇಶ್ವರ ಮಹಾಕವಿ; ಇಂಗ್ಲೀಷ್‌ ಭಾಷೆ ಕಲಿಯುವವರಿಗೆ ಬಹಿಷ್ಕಾರ ಹಾಕಿ ಹಿಂದೂ