ಪುಟ:ಅರಮನೆ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

XX

ರಾಬಿನ್‌ಹುಡ್ ಬೊಬ್ಬಿಲಿನಾಗಿರೆಡ್ಡಿಯ ಕಥೆ ಇತ್ಯಾದಿ ಹತ್ತಾರು ಉಪಕಥೆಗಳು;
ಚೋರ ಶಿಖಾಮಣಿ ಆಕಾಸ ರಾಮಣ್ಣ, ಅವಧೂತ ಸುಡುಗಾಡೆಪ್ಪ ಮುಂತಾದವರ
ಐತಿಹ್ಯಗಳು; ತನ್ನ ದೇಹದೊಳಗೆ ಚಿನ್ನಾಸಾನಿಯನ್ನು ಕುರಿತು ಹೆನ್ರಿಗಿರುವ
ಪ್ರೇಮಭಾವನೆಗಳನ್ನು ಸಾಕ್ಷ್ಯಾತ್ಕರಿಸಿಕೊಂಡಿರುವ ಅಂಜನಿ ಎಂಬ ಕೋತಿ, ಕವಿಯ
ಮೋಹಕ ಸ್ತುತಿಗೆ ಮರುಳಾಗುವ ಸೂರ ಎಂಬ ಕೋಣ, ಇತ್ಯಾದಿ ಹಾಸ್ಯ
ಪ್ರಸಂಗಗಳು; ...ಇವೇ ಮುಂತಾದ ನೂರಾರು ಪಾತ್ರಗಳು-ಘಟನೆಗಳು ಇವೆಲ್ಲವನ್ನೂ
ತನ್ನ ಒಡಲೊಳಗೆ ತುಂಬಿಕೊಳ್ಳುತ್ತದೆ. ಈ ಬಗೆಯ ಕಿಕ್ಕಿರಿದ ಪಾತ್ರ-ಘಟನೆ-ಪ್ರಸಂಗ
ಗಳಿಂದಾಗಿ, ಒಂದು ಕಾಲಘಟ್ಟದ ಗ್ರಾಮೀಣ ಭಾರತವೇ ಈ ಕೃತಿಯಲ್ಲಿ
ಉಸಿರಾಡುತ್ತದೆ ಎಂದರೆ ಅದೇನೂ ಉತ್ತೇಕ್ಷೆಯಲ್ಲ.
ಕೃತಿಯ ಯಶಸ್ಸಿನ ಬಹು ದೊಡ್ಡ ಪಾಲು ಅದರ ಕಥನ ಶೈಲಿಗೆ
ಸೇರಬೇಕು. ಈ ಮೊದಲೇ ಸೂಚಿಸಿದಂತೆ, ಸುಮಾರಾಗಿ ಗೊಂದಲಿಗರ ಕಥನ
ಸಂಪ್ರದಾಯವನ್ನು ಆಧರಿಸಿರುವ (ಮತ್ತು ಎಲ್ಲಾ ಮೌಖಿಕ ಮಹಾಕಾವ್ಯಗಳಲ್ಲಿಯೂ
ಕಂಡುಬರುವ) ಅರಮನೆಯ ಕಥನಶೈಲಿಯ ಗಮನೀಯ ಅಂಶಗಳು ಎರಡು:
ಅದು ಕಾಲ ದೇಶಗಳನ್ನು ನಿರ್ವಹಿಸುವ ರೀತಿ ಮತ್ತು ಅದರ ರೂಪಕಾತ್ಮಕ
ಭಾಷೆ.
ಕಾಲ ದೇಶಗಳ ನಿರ್ವಹಣೆಯೆಂದರೆ, ಈ ಎರಡು ಘಟಕಗಳಲ್ಲಿ ಒಂದನ್ನು
ಸ್ಥಿರವಾಗಿಟ್ಟು ಮತ್ತೊಂದರ ಭಿನ್ನ ವಿನ್ಯಾಸಗಳನ್ನು ದರ್ಶಿಸುವುದು. ಸಾಧಾರಣವಾಗಿ,
ಕುಂವೀ ಅವರಿಗೆ (ಮತ್ತು ಚೌಡಿಕೆಯವರು, ನೀಲಗಾರರು ಇತ್ಯಾದಿ ಧಾರ್ಮಿಕ
ವೃತ್ತಿಗಾಯಕರಿಗೆ) ಪ್ರಿಯವಾದ ತಂತ್ರವೆಂದರೆ ಕಾಲವನ್ನು ಸ್ಥಿರವಾಗಿಟ್ಟು ಅದೇ
ಕಾಲದಲ್ಲಿ ಭಿನ್ನ ಸ್ಥಳಗಳಲ್ಲಿ ನಡೆಯುವ ಭಿನ್ನ ಭಿನ್ನ ಕಾರ್ಯಗಳನ್ನು
ದಾಖಲಿಸುವುದು. ಈ ಹೇಳಿಕೆಯನ್ನು ಸ್ಪಷ್ಟಪಡಿಸಲು ಕೃತಿಯ ಮೊದಲನೆಯ
ವಾಕ್ಯವನ್ನೇ ನೋಡಬಹುದು. ಇಪ್ಪತ್ತೆರಡು ಸಾಲುಗಳಷ್ಟು ದೀರ್ಘವಾಗಿರುವ
...'ಮೋಹಿಸಿಕೊಳ್ಳುತ್ತಿರುವಾಗ್ಗೆ' '...ಮಾಡುತ್ತಿರುವಾಗ್ಗೆ', ಎಂಬಂತಹ ಅಪೂರ್ಣ
ಕಾಲಸೂಚಕ ಕ್ರಿಯಾಪದಗಳ ಉಪಯೋಗದಿಂದ, ಒಂದೇ ಕಾಲದಲ್ಲಿ ಎಂಟು
ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಿದ್ದ ಎಂಟು ಭಿನ್ನ ಕ್ರಿಯೆಗಳನ್ನು ಈ ವಾಕ್ಯವು
ಚಿತ್ರಿಸುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ, ಒಂದು ಸಂದರ್ಭದ ವರ್ಣನೆಯನ್ನು
ಅಪೂರ್ಣವಾಗಿಯೇ ನಿಲ್ಲಿಸಿ, ... ಈ ರೀತಿ ಇಡೀ ಕಥನ ಕ್ರಿಯೆ
ಮುಂದುವರೆಯುತ್ತದೆ. ಇಂತಹ ಕಥನ ತಂತ್ರಕಥಾನಕದ ಬಿಡಿ ಧಾರೆಗಳನ್ನು
ಒಂದೆಡೆ ತರುತ್ತದಲ್ಲದೆ ಪ್ರಸ್ತುತ ವಿಷಯದ ಅನೇಕ ಮಗ್ಗುಲುಗಳನ್ನು ಒಟ್ಟಿಗೇ