ಪುಟ:ಅರಮನೆ.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೧೮೯


ತಮ್ಮ ಅಳಲು ಅಲವತ್ತುಕೊಂಡರು. ಅದನ್ನು ಕೇಳಿ ನಾಗಿರೆಡ್ಡಿಯು ಮಮ್ಮಲನೆ
ಮರುಗದೆಯಿರಲಿಲ್ಲ... ಮಾರನೆ ದಿನವೇ ತನ್ನವರನ್ನು ಮಾರುಯಾಸದಲ್ಲಿ
ಗೊನೇಗೊಂಡಲಕ ಕಳುವಿ ಸಕಲೊಂದು ಮಾಹಿತಿಯನ್ನು ಸಂಗ್ರಹ ಮಾಡದೆ
ಯಿರಲಿಲ್ಲ...
ಗೊನೆಗೊಂಡಲದ ಪಾಲಕನು ತನ್ನ ಹೆಂಡತಿಯ ದೂರದ ಸಂಬಂಧಿ
ಅಂಬುವ ಕಾರಣಕ್ಕೆ ವಂದರ ಮ್ಯಾಲೊಂದರಂತೆ ಯಚ್ಚರಿಕೆಯ ಪತ್ರಗಳನ್ನು
ಬರೆಯದೆ ಯಿರಲಿಲ್ಲ... ನಾಗಿರೆಡ್ಡಿಯಿಂದ ತನಗೆ ಪ್ರಾಣಾಪಾಯ ವುಂಟೆಂದು
ಬಾಲ ಯೀರಾರೆಡ್ಡಿಯು ಕುಂಪಣಿ ಅಧಿಕಾರಿಗೆ ಮರಣ ಕಯಿಫಿಯತ್ತನ್ನು ಸಲ್ಲಿಕೆ
ಮಾಡಿ ವಾರಯ್ದು ದಿವಸ ಆಗಿತ್ತು. “ಬ್ಯಾಡಯ್ಯಾ ಯಾಕೋ ನನಗ ಬಲಗಣ್ಣು
ಹಾರತಯ್ತೆ.. ಯಾಕೋ ನನ್ನ ಬಲದೊಡೆಯು ಬಡಕಂತಯ್ತೆ.. ದುಸೊಪುನಗಳನು
ವಂದರ ಹಿಂದೊಂದರಂತೆ ಕಂಡಿರುವೆನು. ನೀನು ಮಾತ್ರನಾಗನಾಥ ತಾತನೋರ
ಆರಾಧನೆಗೆ ಹೋಗೋದು ಬ್ಯಾಡ'ಯಂದು ಶ್ರೀಮತಿ ಕಮಲಮ್ಮ ತನ್ನ ಗಂಡನನ್ನು
ಪರಿಪರಿಯಿಂದ ಅಲವತ್ತುಕೊಂಡಿದ್ದು ಯಲ್ಲಾರ ನಾಲಗೆ ಮ್ಯಾಲುಂಟು,
ನಾಗನಾಥರು ತಮ್ಮ ಕುಲಗುರು ಆಗಿದ್ದವರು, ಅವರ ಆಸೀರುವಾದದ ಫಲವೇ
ಯಷ್ಟೆಲ್ಲ... ಅವರ ನೂರಾನಾಲ್ಕನೇ ಆರಾಧನಾ ಮಹೋತ್ಸವಕ್ಕೆ ತಾನು ಹೋಗದೆ
ಯಿರಲಕಾದೀತಾ? ಹೆಂಡತಿಗೆ ಧಯರ್ಯ ಹೇಳಿ ಪಾಲಕನು ನಸೀಗ್ಗಿಲೆ ಹೊರಟು
ಮೂರು ಗಾವುದ ದೂರದ ನಾಗಾಪುರವನ್ನು ತಲುಪಿದ್ದನು. ಅಲ್ಲಿ ಜನಮೋ
ಜನ.. ಸುತ್ತಮುತ್ತ ಗಾಂಜಾದ ವಾಸನೆ.. ಸಾಧು ಸಂತಾವಧೂತರ ತುಟಿ ಸಂಧೀಲಿ
ಹೆಂಡದ ನೊರೆ.. ಕಿವಿಗಡಚಿಕ್ಕುವಂಥ ಭಜನೆ ಸದ್ದು, ಆರಾಧನಾ ಮಹೋತ್ಸವವು
ಸಂಜೆ ಹೊತ್ತಿಗೆ ಮುಗುಲು ಮುಟ್ಟಿತ್ತು. ಪರಸ್ಪರ ಖೂನು ಗುರುತು ಹಿಡಿಯದಷ್ಟು
ಮಬ್ಬು ಕವಿದಿತ್ತು. ನಾಗನಾಥ ಅವಧೂತರು ಯಿದ್ದಕ್ಕಿದ್ದಂತೆ ನೂರಾರು ಮಂದಿ
ಭಕುತರ ಮಯ್ಯೊಳಗೆ ಕಾಣಿಸಿಕೊಂಡು ಮೂರು ಗಳಿಗೆ ಕಳೆದಿರಲಿಲ್ಲ. ಸರಣರ
ಗದ್ದುಗೆ ಯದುರು ಕಯ್ನ ಮುಕ್ಕೊಂಡು ಕಣುಮುಚ್ಚಿ ನಿಂತುಕೊಂಡಿದ್ದ ಬಾಲ
ಯೀರಾರೆಡ್ಡಿಯವರ ರುಂಡವನ್ನು ಯಾರೋ ದುರಾತುಮರು ಮಚ್ಚಿನಿಂದ
ಕೊಚ್ಚಿ ಕೆಡವಿಬಿಟ್ಟರೆಂದರೇನು ಸಿವ ಸಿವಾs...
ಮುಂಡಕ್ಕೆ ರುಂಡವನ್ನು ಹೊಲಿದಂಟಿಸಿ ರೆಡ್ಡಿಯ ಕಳೇಬರವನ್ನು
ಸೂತಕವನ್ನು ಬಿತ್ತುತಾs ಬಿತ್ತುತಾs ಗೊನೆಗೊಂಡಲಕ್ಕ ತಂದೊಡನೆ.. ಸಿವ
ಸಿವಾ.. ಹೊಡಿ ಬಡಿ ಕಡೀ ಯಂಬ ಮೂರು ಮುತ್ತಿನಂಥ ಸಬುಧಗಳು