ಪುಟ:ಅರಮನೆ.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೬

ಅರಮನೆ

ಥಳಥಳ ಅಂತ ಹೊಳೀತಯ್ತೆ ಅಂಬುದನ" ಯಂದು ಮುಂದಕ ಜರುಗಿ
ಕಣ್ಣು ಹಿಗ್ಗಲಿಸಿತು. ಅಂಜುತ್ತ.. ಅಳುಕುತ್ತ ಚಿನ್ನಾಸಾನಿ ಮೆಲುಮೆಲ್ಲಕ ಯಿಣುಕಿ
ನೋಡುತ್ತಾಳೆ, ಮುದುಕಿಯ ಕಣ್ಣುಗಳ ಪಾತಾಳದೊಳಗ ತನ್ನ ಪ್ರತಿಬಿಂಬ
ಅದ್ವಿತೀಯ ಸವುಂದರ್ಯ ರಾಸಿಯಿಂದ ತುಂಬಿ ತುಳುಕಾಡುತ್ತಿರುವುದು.. “ಹೊ
ಹ್ಹೋ ನಾನು ಚಂದದೀನಿ.. ಹ್ಹಾ... ಹ್ಹಾ.. ನಾನು ಚಂದದೀನಿ..” ಯಿನ್ನೇನು
ಆಕೆ ಕೂಗಿ ಪ್ರಪಂಚಕ್ಕೆ ಸಾರಬೇಕೆನ್ನುವಷ್ಟರಲ್ಲಿ ಮುದುಕಿ ತನ್ನಂಗಯ್ಯನ್ನು ಆ
ತರುಣಿಯ ಚೆಂದುಟಿಗಳ ಮ್ಯಾಲಿಟ್ಟು “ಶ್ಶ.. ಯಿದು ತಾಯಕ್ಕಗ ಗೊತ್ತಾದರ
ಯಲ್ಲಾ ಅಯೋಮಯ ಆಗ್ತದss ನೀನು ಚಲುವೆಯಂಬ ಗುಟ್ಟು ನಿನ್ನೊಳಗs
ಯಿರಲಿ.. ಅವಕಾಸಕ್ಕಾಗಿ ಕಾಯೋದು ಲವುಕಿಕದ ಧರುಮ ಅಯ್ತೆ..” ಯಂದು
ಪಿಸುಗುಟ್ಟಿ ಬೊಚ್ಚಬಾಯಿ ತುಂಬ ಮುಸುಮುಸಿ ನಗುತ ಅಲ್ಲಿಂದ ಹೋಯಿತು.
ಹಾಲು ಕುಡಿದಾದ ಮ್ಯಾಲ..
ಚಿನ್ನಾಸಾನಿ.. "ಯಲಯ್ ಕನ್ನಡಿಗಳಿರಾ.. ನನಗs... ನನ್ನ ಪ್ರತಿಬಿಂಬವನ್ನು
ನಕಲಿಮಾಡಿ ತೋರಿಸುತ್ತಿರುವಿರಾ.. ಯಿಗೋ ನಿಮಗೆ ನನ್ನ ಸಾಪ..” ಯಂದು
ಹೇಳುತ್ತಿರುವಷ್ಟರಲ್ಲಿ ಕನ್ನಡಿಯು “ಸಾಪ ಕೊಟ್ಟು ನಮ್ಮನ್ನು ರವುರವ ನರಕಕ್ಕ
ದೂಕಬ್ಯಾಡ. ಯಿದರಾಗ ನಮ್ದು ತಪ್ಪಿಲ್ಲ... ಮಾಫ್ ಮಾಡು” ಯಂದು
ದಯನಾಸ ಪಟ್ಟು ಕೇಳಿಕೊಂಡವು. ಸದ್ಯಕ್ಕೆ ಆಕೆಯ ಕೋಪ
ತಮಣಿಗೊಂಡಿತೆಂಬಲ್ಲಿಗೆ ಸಿವ ಸಂಕರ ಮಾದೇವಾss
ಆ ಕ್ಷಣದಿಂದ ಚಿನ್ನಾಸಾನಿಯ ದಿವ್ಯಸರೀರದಿಂದ ಮಾಸ್ವೇತೆ
ವುತಾರಗೊಂಡದ್ದು ತಡ ಆಗಲಿಲ್ಲ.. ಆ ಜಾಗವನ್ನು ಸ್ರುಂಗಾರ
ನೈಷಧಮುಕಾವ್ಯಕ್ರುತಿಯ ನಾಯಕಿ ವರೂಥಿನಿ ಆಕ್ರಮಿಸಿದ್ದೂ ತಡ ಆಗಲಿಲ್ಲ..
ಆಕೆಯ ಸರೀರದೊಳಗಿನ ನಂದನ ವನ ಯಿಹಾರಿಣಿಯಾದ ವರೂಥಿನಿಯು
ಕಿಲಕಿಲನ ನಗಾಡಲಕ.. ಕಚಗುಳ್ಳಿಯಿಟ್ಟು ನಗಾಡಿಸಲಕ.. ಅಗೋ ಅಲ್ಲಿ ಜಾತುರಿss
ಯಿಗೋ ಯಲ್ಲಿ ಪರಿಶೆss ಯಂದು ಬೊಟ್ಟು ಮಾಡಿ ತೋರಿಸಲಕ ಹತ್ತಿದ್ದು
ತಡ ಆಗಲಿಲ್ಲ.....
ಕೊಂಗನಾಡಿನ ಕಡೇಲಿಂದ ಯೇಳು ಮಂದಿ ಮಾರೆಮ್ಮಗಳೊಂದೇ
ಅಲ್ಲದೆ ದೊಡ್ಡಳ್ಳಿಯಿಂದ ದೊಡ್ಡಮ್ಮ, ಚಿಕ್ಕಳ್ಳಿಯಿಂದ ಚಿಕ್ಕಮ್ಮ ನಡುನಳ್ಳಿಯಿಂದ
ನಡುಲಮ್ಮ ಪಡುವಳ್ಳಿಯಿಂದ ಪಡುಲಮ್ಮ, ಮೂಡಲಳ್ಳಿಯಿಂದ ಮೂಡಲಮ್ಮ.
ತೆಂಕಲಳ್ಳಿಯಿಂದ ತೆಂಕಲಮ್ಮ, ಬಡಗಲಳ್ಳಿಯಿಂದ ಬಡಗಲಮ್ಮ ಮುಂತಾದ