ಪುಟ:ಅರಮನೆ.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೦

ಅರಮನೆ


ಕೇಳಿದರು. ಅದಕಿದ್ದು ಅವರು ವಸ್ತಿಯ ಪಾದಂಗಳ ವುಂಗುಟಕ ಹಣೆ ಹಚ್ಚಿ
ತಾಯೇ.. ಲೋಕಗ್ನಾನ, ದಯವಾನುಕೂಲಗ್ನಾನ ವಂಚೂರಿಲ್ಲದ ಸತದಡ್ಡ
ಮಂದಿ ಅದೇವಿ ನಾವು.. ನಾವೇ ಹಳ್ಳದೊಳಗಂಗಾಲ ಯಿಳಿಬಿಟ್ಟವರಲ್ಲ.. ಹರಿವ
ಜಲಧಿಯೊಳಗ ಮಖಮಾರಿ ನೋಡಿಕೊಂಡವರಲ್ಲ. ಮಯ್ಯೊಳಗ ಮಣಮಣ
ಮಯ್ಲಿಗಿ ಯಿಟ್ಟುಕೊಂಡವರಾದ ನಾವು ನೀನು ಹೊಳೆಗೊಂಡುವ ಪರಿಯ
ವರ್ಣನೆ ಮಾಡಲು ಅಸಕ್ಯರದೀವಿ ತಾಯೇ... ನಮ್ಮನ್ನು ಮಾಫ್ ಮಾಡೆವ್ವಾ”
ಯಂದು ಆತುಮ ನಿಯೇದನೆ ಮಾಡಿಕೊಂಡೊಡನೆ ತಡವಾಗಲಿಲ್ಲ ಸಿವನೇ,
ತಲ ತಲಾಕ ನಿಟ್ಟುಸಿರು ಬಿಟ್ಟದ್ದು ತಡವಾಗಲಿಲ್ಲ ಸಿವನೇ.. ಯಾರುಂಟಪ್ಪಾ..
ಜಗದಂಬೆ ಹೊಳೆಗೊಂಡುವ ಮರುಮ ಗೊತ್ತಿರೋರು ಯಂದವರು ವುದ್ಗಾರ
ತೆಗೆದೊಡನೆ ಸಿವನೇ..
ರೆವ್ವಂತ ಗಾಳಿ ಬೀಸಿತು. ತನ್ನೊಳಗಿಂದ ಅರವತ್ತೊರುಷ ಹಳತಾದ
ಬೆವರು ಕಿವುಟುವಾಸನೆ ಯಲ್ಲಿ ಬೇಕ೦ದರಲ್ಲಿ ಚೆಲ್ಲಾಡಿತು.
ನೆಲದೊಡಲೊಳಗಿಂದ ಯಾರೋ ಮೂಡಿ ಬರುತ್ತಾರೆಂಬಂತೆ ದಡ್ದಡ್
ಹೆಜ್ಜೆ ಸಬುಧವು ಕೇಳಿಬಂತು ಅದರೊಟ್ಟಿಗೆ.. ಮುಗುಲೊಳಗ ವುಲ್ಕಾಪಾತ
ಆದಂಗಾತು.. ಸೂರ್ಯಾಮ ಮಂಕಾದಂಗಾದನು. ಅಲ್ಲೆಲ್ಲ... ಯಾರೋ ಅವುಚಿಟ್ಟು
ಕೊಂಡಂಗಾತಯ್ತೆ... ಯಿಲ್ಲೆಲ್ಲ ಯಾರೋ ಹೊರ ಬಂದು ನಿಂತಂಗಾತಯ್ತೆ...
ಯಾರೋ ಮಾನುಭಾವ ವಡಮೂಡುತಾ ಯಿದ್ದಂಗ ಕಾಣಿಸುತಯ್ತಲ್ಲಾ.. ಹ್ಹಾ..
ಅಗಾ..ಹ್ಹಾ..ಯಿಗಾ.. ಯಂದು ಸಭೆಗೆ ಸಭೆಯೇ ತಲೆಯತ್ತಿ ನೋಡುತಯ್ತೆ..
ಅರೇ.. ಗೊರವನಂತೆ ಅಡಿಮುಡಿವರೆಗೆ ಕಂಬಳಿ ವುಡುಗೇನ ಧರಿಸಿ
ಮಯ್ಲಾರಲಿಂಗನ ವರಪುತ್ರನಂಗವನಲ್ಲ... ಕಪನಿ ಮುನೇಶ್ವರ ನಂಗವನಲ್ಲ..
ಅಡ್ಡಗುಡ್ಡರ ಮಲ್ಲನಂಗವನಲ್ಲ.. ಹಾಲ ಹರವಿಯ ಮ್ಯಾಲ ಆಡುತ
ಬಂದಂಗವನಲ್ಲ. ತುಪ್ಪದ ಹರವಿಯ ಮ್ಯಾಲ ತುಳುಕಾಡುತ ಬಂದಂಗವನಲ್ಲ..
ಬೂದಿ ಮುಚ್ಚಿದ ಕೆಂಡದುಂಡೆಯಂಗವನಲ್ಲಾ.. ಆರು ಖಂಡುಗ ಭಂಡಾರವ
ಬಳಕೊಂಡಿರೋ ಮೂಲೋಕದ ಪ್ರಚಂಡನಂಗವನಲ್ಲ......
ಯದ್ದು ನಿಂತು ಯಿಯಿದ ಕೋನಗಳ ದ್ವಾರ ನೋಡುತಾರ ಪಟ್ಟಣ
ಸೋಮಿಗಳು, ಅಡಿಯಿಂದ ಮುಡಿವರೆಗೆ, ಮುಡಿಯಿಂದ ಅಡಿವರೆಗೆ
ನೋಡುತಾರ ದಯವಸ್ತರು, ಗುಂಗುಗುಂಗುರ ಸುತುಕೊಂಡು ಬೆಳೆದ
ಬಯಟಕ್ಕೀಲೆ ಕುರುಚಲಡವಿಯಂಥಾಗಿರುವ ಹಂಡೇವಗಲದ ಮುಖವನ್ನೇ