ಪುಟ:ಅರಮನೆ.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೦೧


ನೋಡುತಾರ ಹಿರೀಕರು.. ಗುಡ್ಡವೇ ಜೀವಧರಿಸಿದಂತಿರುವ ಯೀವಯ್ಯನು
ಅವನಾಗಿರಬೌದೇ? ಅದಕ್ಕುತ್ತರವಾಗಿ ಆಗಂತುಕನು ತನ್ನ ಸೇವಕನ ಕಯ್ಯಲ್ಲಿದ್ದ
ಹತ್ತು ಮಾರುದ್ದದ ಮಂಡಾಸನ್ನು ತಲೆಗೆ ಬಿಗಿದನು.. ಅಲ್ಲೇ ಯಿದ್ದ ಬಂಡಿಯ
ಯೇರುಗೋಲನ್ನು ತನ್ನಂಗಯ್ಯಿ ಮ್ಯಾಲ ವುದ್ದೋಕೆ ನಿಲುವಿಳುವಿ ಮುಂಗಯ್ಯ
ಕಸುವು ಯಷ್ಟಿರಬೌದೆಂದು ಸಾಬೀತು ಮಾಡಿದನು..ಯೀ ವಯಸ್ಸಿನಲ್ಲೇ ಯೀ
ಪಯ್ಕಿ ಯಿರುವ ತಾನು ವಳ್ಳೆ ಹಂಗಾಮಿನಲ್ಲಿ ಯಿನ್ನೆಂಗಿರಬೌದೆಂದು ಸಂದೇಹದ
ಸಸಿಯನ್ನು ನೋಡುತಲಿದ್ದ ಪ್ರತಿಯೊಬ್ಬರ ಯದೆಯೊಳಗೆ ನಾಟಿ ಮಾಡಿದನು.
ನೋಡೋದು ನೋಡಿಯಾದ ಮ್ಯಾಲ ಪಟ್ಟಣಸ್ವಾಮಿಗಳ ಪಯ್ಕಿ
ಮೋರ್ವನಾದ ಜಂಗಾಲಯ್ಯನು “ನೋಡಲಕ ಅಗಾಧವಾಗಿರುವ ನೀನದಾರಪ್ಪ...
ನಿನ್ನ ಸರೀರ ಮುಡುಕೊಂಡಿರುವ ನಾಮಾಂಕಿತವಾವುದಪ್ಪ' ಯಂದು ಕೇಳಿದ್ದಕ
ಅವಯ್ಯನು ಕೆಮ್ಮಲು ತನ್ನ ಹತ್ತಾರು ಮಂದಿ ಮುಂದಕ ಬಂದರು. ಅವರೂ
ಸಹ ವಬ್ಬರಿಗಿಂತ ವಬ್ಬರು ಮಿಗಿಲಾಗಿರುವರು. ಯಿವಯ್ಯನು ಸರುವೇ
ಸಾಮಾನ್ಯ ಮಾನವನಿದ್ದಂಗಿಲ್ಲ, ಸಪ್ತರುಷಿಗಳು ಯೀ ಯಾಸದಲ್ಲಿ ತಾಯಿಯ
ಸೇವಾ ಕಯಿಂಕಾರ್ಯಾರ್ಥವಾಗಿ ಬಂದಿದ್ದಿರಬೌದೇ? ಯಾದಾರ ಸೀಮೆಯ ರಾಜನು
ಯೀ ಯಾಸದಲ್ಲಿ ಮಾರ್ಚಲ ಸಮೇತ ತಾಯಿಯ ಪಾದಕ್ಕೆ ಪೂಜೆ ಸಲ್ಲಿಸಲು
ಬಂದಿದ್ದಿರಬೌದೇ? ಯಿದಕ್ಕೆಲ್ಲ ಪುಟುಗಿ ನೀಡುವಂತೆ ಪಯಿತ್ರವಸ್ತಿಯ ತುಟಿ
ನಡುವೆ ಮಂದಹಾಸ ನಾಜೂಕು ರೀತಿಯಲ್ಲಿ ಕಾಣಿಸಿಕೊಂಡಿರುವುದು.
ಅವನ ಸೇವನಕನನೋರ್ವನು ಅವರ ಯಾವತ್ತು
ಸಂದೇಹಾನುಮಾನಂಗಳನು ಪರಿಹರಿಸಲೋಸುಗ.. “ಕೇಳಿರಪ್ಪಾ ಕೇಳಿರಿ.. ಯೀ
ನಮ್ಮ ನಾಯಕನು ಯಾರಪ್ಪಾಂದರೆ.” ಯಂದು ಸುದೀರ್ಘವಾಗಿ ಸಲ್ಲಿಕೆ ಮಾಡಿದ
ಪ್ರವರಾಖ್ಯಾನದ ಮುಖ್ಯ ಸಾರಾಂಸವು ಆವುದೆಂದರೆ...
“ಕುಂತಲ ಪ್ರಾಂತದ ಫಲಾನ ಯಿಂಥ ಕಡೇಕ ಕ್ಯಾರಟ್ಟಿ ದೇವರಟ್ಟಿ
ದಿಂಡರಟ್ಟಿ ಗೊಂಡರಟ್ಟಿ ಯಂಬ ನಾಕಾರು ಹಟ್ಟಿಗಳು ಯಿರುವವಷ್ಟೆ. ಅವಕ್ಕೆಲ್ಲ
ರಾಜಧಾನಿಯಾಗಿ ಗೊಲ್ಲರಟ್ಟಿ ಯಂಬುದಿರುವುದಷ್ಟೆ. ಅಲ್ಲಿ ಯತ್ತಯ್ಯ ಚಿತ್ತಯ್ಯ
ಝೀರಣ್ಣ, ನಿಂಗಣ್ಣ, ಬೊಮ್ಲಿಂಗರೇ ಮೊದಲಾದ ದ್ಯಾವಾನುದೇವತೆಗಳು
ನೆಲಗೊಂಡಿಹರಷ್ಟೆ. ಆ ದೇವತೆಗಳು ಆಡುಗೊಲ್ಲ, ಕಾಡುಗೊಲ್ಲರ ವಂದು
ರಾಜ್ಯವನ್ನು ಕಟ್ಟಿ ಅದಕ್ಕೆ ಹರೇರಾಯ ಯಂಬಾತನನ್ನು ರಾಜನನ್ನಾಗಿ
ಮಾಡಿದರು. ಆತನೇ ಮುರೇರಾಯ, ಆತನ ಮಗ ಬೆಣ್ಣೆರಾಯ, ಆತನ ಮಗ