ಪುಟ:ಅರಮನೆ.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೪

ಅರಮನೆ

****

ಅತ್ತ ಗುಂತಕಲ್ಲು ಪ್ರಾಂತದೊಳಗ ಮನೋ ನೂಲು ನುಂಗೆಂದರೆ
ಮುನುಸೋಬಯ್ಯ ಹಚ್ಚಡವನ್ನೇ ನುಂಗಿಬಿಡಲೆಂದು.. ವಂದೊಂದು
ಗ್ರಾಮದೊಳಗ ಅವಯ್ಯ ತೆಗೆದ ಗಂಜಿ ಕೇಂದ್ರಗಳೋ ಸಿವನೇ... ಆಸುಪತ್ರೆಗಳೋ
ಸಿವನೇ.. ಸಾಲೆಗಳೋ ಸಿವನೇ.. ಅಂದುಕೊಂಡಂಗ ಮಂದಿ ಯಡತಾಕಲಿಲ್ಲ.
ಯಿದ್ದಕ್ಕಿದ್ದಂತೆ ಪರಂಗಿ ಮಂದಿ ತಮ್ಮ ಕುರುತು ಯೀಟೊಂದು ಕಕ್ಕುಲಾತಿ
ತೋರುತಾರಂದರ.. ಯಾವತ್ತಿಲ್ಲದ ಕಕ್ಕುಲಾತಿ.. ಯಾವತ್ತಿಲ್ಲದ ಪ್ರಜಾಪ್ರೇಮ...
ಯಾವತ್ತಿಲ್ಲದ.. ಮೊದಲೇ ಹಳ್ಳಿಪಳ್ಳಿಗಳ ಸಾದಾಸೀದಾ ಮಂದಿ.. ವಳಾಗೊಂದು
ಹೊರಾಗೊಂದು ಯಿಲ್ಲದ ಜಳಜಳ ಮಂದಿ.. ತಾವು ನಂಬಿದ್ದ ಸಿದ್ದಾಂತಗಳಿಗೆ
ಪ್ರಾಣವನ್ನಾದರೂ ವದಲುವ ಮಂದಿ, ಬಣ್ಣದ ಮಾತುಗಳನ್ನು ವರೆಗೆ ಹಚ್ಚಿ
ನೋಡುವ ಮಂದಿ. ಯಿದರೊಳಗೇನೋ ಮಸಲತ್ತು ಯಿದ್ದಂಗಯ್ತೆ ಯಂದು
ಅನುಮಾನಿಸುವ ಮಂದಿ....
ವಂದೊಂದು ಗಂಜಿಕೇಂದ್ರದೊಳಗ ಗಂಜಿ ಹಳಸಿ ಗಬ್ಬುನಾರ
ತೊಡಗಲು, ವಂದೊಂದು ಆಸುಪತ್ತಿಯೊಳಗ ರೋಗಿಗಳಿಗಾಗಿ ಕಾದೂ ಕಾದ
ಪರಿಣಾಮವಾಗಿ ವಯ್ದರೇ ರೋಗಿಗಳಾದರು.. ವಂದೊಂದು ಸಾಲೆಯೊಳಗ
ವುಪಾದ್ಯಾಯರು ನೊಣ ಹೊಡೆಯುತಾ ಹೊಡೆಯುತಾ ತಾವು ಕಲಿತದ್ದನ್ನು
ಮರೆತುಬಿಟ್ಟು ಸತ ದಡ್ಡರಾದರು..
ಮುನುಸೋಬಯ್ಯ ನೇಮಕ ಮಾಡಿದ ತಂಡ ಪ್ರತಿಯೊಂದು ಮನೆಗೆ
ಯಡತಾಕ ಲಾರಂಭಿಸಿತ್ತು, ಯಡತಾಕಿ ಬಣಬಣ್ಣದ ಮಾತುಗಳನ್ನಾಡಲು
ಪ್ರಯತ್ನಿಸಿದಷ್ಟು ಕವಡೆ ಕಿಮ್ಮತ್ತು ದೊರಕದೆ ಯಿಫಲಗೊಂಡು ಬರಿಗಯ್ಲಿ
ಮರಳಲಾರಂಭಿಸಿತು. ಆ ತಂಡದ ನಿಷ«ವಂತ ಸದಸ್ಯರ ಮ್ಯಾಲ ಕ್ರುದ್ಧ ಪ್ರಜೆಗಳು
ಬಯ್ಗಳ ಮಳೆ ಕರೆದದ್ದುಂಟು.. ಆಕ್ರಮಣ ಮಾಡಿದ್ದುಂಟು, ಪೆಕಪೆಕನೆ
ವದ್ದದ್ದುಂಟು, ಪ್ರಜೆಗಳ ಯೀ ಕ್ರುತ್ಯಗಳಿಂದ ತನ್ನ ಮನಕ ಬಲು ಬ್ಯಾಸರ
ಮಾಡಿಕೊಂಡಂಥವನಾದ ಮುನುಸೋಬಯ್ಯನು, ಧರುಮಗ್ರಂಥವಾದ
ಬಯಬಲ್ಲಿನ ಮ್ಯಾಲ ಅಪಾರ ಸ್ರದ್ಧೆಯನ್ನು ಯಿಟುಕೊಂಡಿದ್ದಂಥವನಾದ
ಮುನಸೋಬಯ್ಯನು ಪ್ರಜೆಗಳ ಮನಸ್ಸಿನೊಳಗೆ ಯೇನಯ್ತೆ ಯಂಬುದನ್ನು
ಪತ್ತೆ ಮಾಡಿಕೊಂಡು ಬರಲೋಸುಗ ಮತ್ತೊಂದು ತಂಡವನ್ನು ರಚಿಸಿದನು.
ಆ ತಂಡದೊಳಗ ಹಗಲು ಯಾಸಗಾರರಿದ್ದರು, ದೊಂಬರರಿದ್ದರು,