ಪುಟ:ಅರಮನೆ.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೦

ಅರಮನೆ


ಪರಾಂಬರಿಸುತಲಿದ್ದ, ಕುಂತಲ್ಲಿ ಕುಂಡ್ರದವನಾಗಿದ್ದ ನಿಂತಲ್ಲಿ ನಿಂದರದವನಾಗಿದ್ದ,
ಹತ್ತು ಮಂದಿ ಯಿರುವ ಕಡೆ ತಾನಿರುತಲಿದ್ದ, ತಾನಿದ್ದ ಕಡೇಕ ಹತ್ತು
ಮಂದಿಯನ್ನು ಕೂಡಿಸಿಕೊಳ್ಳುತಲಿದ್ದ, ಲಚ್ಚಣವಂತನಾದ ಅವಯ್ಯನು
ಕಂಗಾಲಾಗಿದ್ದು ಯೇಸೋ ವರುಸಗಳ ತರುವಾಯ, ಯಾವ ದಯವದ
ಮುನುಸೋ? ಯೇನು ಕಥಿಯೋ? ಸದರಿ ಗ್ರಾಮದ ರಾಸುಗಳಿಗೆ ಕಾಲುಬಾಯಿ
ರೋಗ ಅಮರಿಕೊಂಡುಬಿಟ್ಟಿತ್ತು. ರಾಸುಗಳಿಗೆ ತಗಲುವ ಹೇಮಾಹ್ಮಿ
ರೋಗಗಳನ್ನು ಕೇವಲ 'ಭೂಮಂತರಗಾಳಿ ಭೂ' ಯಂಬ ಮಾಮೂಲಿ
ಮಂತರ ಮಾತ್ರದಿಂದ ಯೀಲಾಜು ಮಾಡುವಂಥ ಸಿದ್ಧಹಸ್ತಕ್ಕೊಡೆಯನಾದ
ಹಂಪಜ್ಜನಿಗೆ ಅದರ ಹಾರ ಮೀರಿಬಿಟ್ಟಿತ್ತು. ಕಂದೀಲ ಬೆಳಕಿನಗುಂಟ ನಡೆವುತ
ಪ್ರತಿಯೊಂದು ಮನೆಯನ್ನಾತ ಯಡತಾಕುತಲಿದ್ದುದೇನು? ವಂದೊಂದು ರಾಸನು
ಹೆಸರಗುಂಟ ಮಾತಾಡುಸು ತಲಿದ್ದುದೇನು? ಮಮ್ಮಲ ಮರುಗಲಿದ್ದುದೇನು?
ಹಂಪಜ್ಜನಿಗೇ ಹಾರ ಮೀರಿರುವುದೆಂದು ತಿಳಿದ ಮಂದಿ.....
ಹೆಜ್ಜೆ ಹೆಜ್ಜೆಗೆ ಕಣ್ಣ ಕಟೆಯುತಲಿದ್ದ ದಯವಕ್ಕೆಲ್ಲ ಮೊರೆ
ಹೋಗದೆಯಿರಲಿಲ್ಲ. ಮಾಧ್ವ ಪ್ರಸಿದ್ಧ ಆಂಜನೇಯ ಸ್ವಾಮಿಗೆ ಬೆಣ್ಣೆಯಲಂಕಾರ
ಮಾಡಿದರೆಂಬ ಬಗ್ಗೆ, ಪಂಚಕಜ್ಜಾಯ ನಯವೇದ್ಯ ಹಿಡಿದರೆಂಬ ಬಗ್ಗೆ,
ರಾಯದುರ್ಗದ ಸ್ರೀಪತಿ ಜೋಯಿಸರನ್ನು ಕರೆತಂದು ಪಂಚ ಕಲಸಾಭಿಸೇಕ
ಮಾಡಿಸಿದರೆಂಬ ಬಗ್ಗೆ ಹೊತ್ತಿಗೆ ತೆಗೆಸಿ ನೋಡಿಸಿದರೆಂಬ ಬಗ್ಗೆ ಹೇಳುತss
ಹೋದರೆ !... ಮೇನಿದ್ದೀತಪ್ಪಾ... ಮಾಡೋದೆಲ್ಲ ಮಾಡಿದರೂ
ಆಂಜನೇಯಸ್ವಾಮಿ ತಮ್ಮ ರಾಸುಗಳ ಕಡೇಕ ಬಲಗಣ್ಣಿಂದ ನೋಡುತಾ
ಯಿಲ್ಲವಲ್ಲಾ.. ಪ್ರಾಯಶಃ ಸ್ವಾಮಿಯು ಹಂಪಜ್ಜನ ಸರಣಾಗತಿಯನ್ನು
ಬಗಸುತ್ತಿರುಭೌದೆಂದು ಭಾವಿಸಿದವರಾಗಿ ತಮ್ಮ ನಾಯಕನ ಬಳಿಗೆ ಹೋಗಿ
'ದೊರೆಯೇ, ನೀನಾರ ಆ ಮುದೇತನ ಮನುಸು ಬದಲಾವಣೆ ಮಾಡು”
ಯಂದು ಕೇಳಿಕೊಳ್ಳಲಾಗಿ ಅವಯ್ಯನು ಆ ಕೂಡಲೇ ಮುದೇತನನ್ನು ತನ್ನ
ಯೇಳೂವರೆ ಅಂಕಣದ ಅರಮನೆಗೆ ಕರೆಯಿಸಿಕೊಂಡು ಯಜಮಾನss..
ಆಂಜನೇಯಸ್ವಾಮಿಯ ಗುಡಿಯ ಗಂಟೆ ಹೊಡದು, ಕಯ್ನ ಮುಗುದು
ಬೇಡಿಕೊಳ್ಳಲಕ ಬೇಕಪ್ಪಾ.. ಆಗಲಾದರು ಮಾರುತಿ ಕರುಣೆ ತೋರಿಸ್ಯಾನು”
ಯಂದು ಯಿನ್ನಪ ಮಾಡಿಕೊಂಡಿದ್ದಕ್ಕೆ ಮುದೇತನು “ಸಯ್ಯ ಬಿಡು ನಾಯಕss
ನಿಮ್ಮಾಂಜನೇಯಸ್ವಾಮಿಗೆ ಕೋಪಯಿದ್ದರ ನನ ಮ್ಯಾಲ ತೋರಿಸಿಬೇಕಿತ್ತಪ್ಪಾ..?